Wednesday, 2 July 2014

ವೈರುದ್ಧ್ಯದ ನಡುವೆಯೂ ಒಗ್ಗಟ್ಟಾಗಿರುವುದು ಸಾಧ್ಯ!

ಸ್ನೇಹ, ಸಂಬಂಧ ಹಾಗೂ ಉದ್ಯೋಗಗಳಲ್ಲಿ ಒಂದೇ ಒಂದು ಸಣ್ಣ ತಪ್ಪು ಮಾಡಿ ನೋಡೋಣ. ಕಥೆ ಮುಗಿಯಿತು ಅಂತಲೇ ಲೆಕ್ಕ. ಅಲ್ಲಿಯವರೆಗಿನ ನಿಮ್ಮ ಒಳ್ಳೆಯತನಗಳೆಲ್ಲಾ ಅಳಿಸಿಹೋಗುತ್ತವೆ. ಆ ಕ್ಷಣದಿಂದ ನೀವು ಆಜನ್ಮ ವೈರಿಯಾಗಿಬಿಡುತ್ತೀರ. ಮತ್ತೆ ಅದೇ ಹಳೆಯ ನಂಬಿಕೆ ವಿಶ್ವಾಸ ಗಳಿಸಿಕೊಳ್ಳಲು ಭಗೀರಥ ಪ್ರಯತ್ನವೂ ಸಾಲುವುದಿಲ್ಲ. 'ಈ ಕೆಲಸ ಇವತ್ತು ಮಾಡಲಾಗುತ್ತಿಲ್ಲ ಬಾಸ್, ನಾಳೆ ಮಾಡ್ತೇನೆ' ಅಂತ ಸೀದಾ ಮುಖದ ಮೇಲೆ ಹೇಳಿ ನೋಡಿ. ಅಷ್ಟೆ! ಅಲ್ಲಿಯವರೆಗೂ ಹಗಲು ರಾತ್ರಿ ತೇಯ್ದು ಮೂಡಿಸಿದ್ದ ಒಳ್ಳೆಯ ಅಭಿಪ್ರಾಯದ ಗತಿ ಗೋವಿಂದ! ಮೇಲಧಿಕಾರಿಯ ಒಳಗಿನ ‘ಅಹಂ’ ಎಂಬ ಕಾಳ ಸರ್ಪ ಭುಸುಗುಡುತ್ತಾ ಹೆಡೆಯೆತ್ತಿಬಿಡುತ್ತದೆ. 'ನಂಗೇ ಆಗಲ್ಲ ಅಂತೀಯಾ, ಗೊತ್ತಿದೆ ಬಿಡು ನಿನ್ನ ಕೆರಿಯರ್‍ನ ಹೇಗೆ ಮರ್ಡರ್ ಮಾಡ್ಬೇಕು ಅಂತ' ಎಂದು ಆ ಕ್ಷಣವೇ ಮನಸಲ್ಲಿ ಮಚ್ಚು ಲಾಂಗು ಮಸೆಯತೊಡಗುತ್ತಾನೆ. ಗೆಳೆಯನ ಯಾವುದಾದರೂ ಕೆಲಸವನ್ನು ಕಟುವಾಗಿ ವಿರೋಧಿಸಿ ನೋಡಿ. ಇದ್ದಕ್ಕಿದ್ದಂತೆ ಅವನು ನಿಮ್ಮನ್ನು ಎಲ್ಲದರಲ್ಲೂ ಮರೆಯತೊಡಗುತ್ತಾನೆ. ಅಷ್ಟು ದಿನ ಹೆಗಲು ಕೊಟ್ಟದ್ದು ಅರ್ಥಹೀನವಾಗಿಬಿಡುತ್ತದೆ. ಇನ್ನು ಸಂಬಂಧಿಕರಲ್ಲಂತೂ ಮುಗಿದೇ ಹೋಯಿತು. ನಯ-ನಾಜೂಕಿನ ಮಾತುಗಾರಿಕೆ ಬಿಟ್ಟು ಬೇಕಂತಲೇ ಸ್ವಲ್ಪ ಒರಟಾಗಿ ಪ್ರತಿಕ್ರಿಯಿಸಿ ಬಿಡಿ, ನಿಮಗೆ ಜಂಭ ಅಥವಾ ದೊಡ್ಡಸ್ತಿಕೆ ಬಂದಿರುವುದರ ಬಗ್ಗೆ ಇಡೀ ಕುಟುಂಬ ವರ್ಗಕ್ಕೆ ಸುತ್ತೋಲೆ ಹೊರಡಿಸಿಬಿಡುತ್ತಾರೆ.



ಹೇಳಿದ್ದನ್ನೆಲ್ಲ ಕೇಳುತ್ತಾ, ಸರಿಯೆಂದು ತಲೆಯಾಡಿಸುತ್ತಾ ಇರುವವರೆಗೆ ಮಾತ್ರ ಸಂಬಂಧಗಳಿಗೆ ಉಳಿಗಾಲ, ಬೆಲೆ. ವಿರೋಧಿಸಿದರೆ ಅಥವಾ ಇತರರ ದೃಷ್ಟಿಯಲ್ಲಿ ತಪ್ಪು ಎನಿಸುವಂಥ ಕೆಲಸ ಮಾಡಿಬಿಟ್ಟರೆ ಮನಸಿಗೆ ಮೈಲಿಗೆ ಹಿಡಿದುಬಿಡುತ್ತದೆ. ಆ ತಪ್ಪನ್ನು ಒತ್ತಟ್ಟಿಗಿಟ್ಟು, ವ್ಯಕ್ತಿಯನ್ನು ಮೊದಲಿನಂತೆಯೇ ಪ್ರೀತಿಸುವ, ವ್ಯವಹರಿಸುವ ಕ್ರಿಯೆ ಕೊಡಲಿ ಪೆಟ್ಟು ತಿನ್ನುತ್ತದೆ. ವಿಷಯಾಧಾರಿತ ವೈರುದ್ಧ್ಯವನ್ನಿಟ್ಟುಕೊಂಡೂ ಒಬ್ಬರನ್ನು ಪ್ರೀತಿಸುವುದು ಅಷ್ಟೊಂದು ಕಷ್ಟವೇ? ನಿಜ, ನಮಗದು ತುಂಬಾ ಕಷ್ಟ. ಆಚರಣೆಗೆ ತರಲು ತಿಣುಕಾಡಿಬಿಡುತ್ತೇವೆ. ಆದರೆ ದಕ್ಷಿಣ ಅಮೆರಿಕದ ಎರಡು ದೇಶಗಳು 19ನೇ ಶತಮಾನದಿಂದಲೇ ಪರಸ್ಪರರನ್ನು ವಿರೋಧಿಸುತ್ತಾ ಅಷ್ಟೇ ತೀವ್ರವಾಗಿ ಪ್ರೀತಿಸುತ್ತಾ ಬಂದಿವೆ. ಇದೆಲ್ಲ ಏಕೆ ನೆನಪಾಗುತ್ತಿದೆಯೆಂದರೆ ಆ ದೇಶಗಳು ಈಗ ನಡೆಯುತ್ತಿರುವ ಫುಟ್‍ಬಾಲ್‍ನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಅವೇ ಅರ್ಜೆಂಟಿನಾ ಮತ್ತು ಬ್ರೆಜಿಲ್!


ಹೆಸರೊಂದೇ ಸಾಕು, ಫುಟ್‍ಬಾಲ್‍ನಲ್ಲಿನ ಕಡು ವೈರ ಕಣ್ಮುಂದೆ ಬರಲು. ಇವುಗಳ ಹಣಾಹಣಿ 'ದಕ್ಷಿಣ ಅಮೆರಿಕನ್ನರ ಕದನ' ಎಂದೇ ಖ್ಯಾತ. ಜಿದ್ದಾಜಿದ್ದು ಯಾವ ಮಟ್ಟದ್ದೆಂದರೆ ಆಡಿರುವ 95 ಪಂದ್ಯಗಳಲ್ಲಿ ಅರ್ಜೆಂಟಿನಾ ಗೆದ್ದಿರುವುದು 36ರಲ್ಲಾದರೆ ಬ್ರೆಜಿಲ್ ಗೆದ್ದಿರುವುದು 35ರಲ್ಲಿ. ಬ್ರೆಜಿಲ್ ಐದು ವಿಶ್ವಕಪ್‍ಗಳನ್ನು ಗೆದ್ದಿದ್ದರೆ ಅರ್ಜೆಂಟಿನಾ ಗೆದ್ದಿರುವುದು ಎರಡೇ. ಅರ್ಜೆಂಟಿನಾಗೆ ಸಾಲಾಗಿ ಎರಡು ಒಲಿಂಪಿಕ್‍ ಚಿನ್ನ ದಕ್ಕಿದ್ದರೆ ಬ್ರೆಜಿಲ್‍ನ ಗಳಿಕೆ ಶೂನ್ಯ. ಅದೇನೇ ಇದ್ದರೂ ಫುಟ್‍ಬಾಲ್ ಪ್ರಪಂಚದ ಅಗ್ರ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಇವುಗಳ ಹೆಸರು ಮಾತ್ರ ಇರಲೇಬೇಕು.

ದಕ್ಷಿಣ ಅಮೆರಿಕದ ರಾಷ್ಟ್ರಗಳ ಪೈಕಿ ಮೊತ್ತ ಮೊದಲು ಫುಟ್‍ಬಾಲ್‍ ಆಡತೊಡಗಿದ್ದು ಅರ್ಜೆಂಟಿನಾ ಮತ್ತು ಉರುಗ್ವೆ. ತಡವಾಗಿ ಕಣಕ್ಕಿಳಿದ ಬ್ರೆಜಿಲ್ ನಿಧಾನವಾಗಿ ಬಲಾಢ್ಯವಾಗತೊಡಗಿದಂತೆ ಹೊತ್ತಿತು ನೋಡಿ ಅದರ ಹಾಗೂ ಅರ್ಜೆಂಟಿನಾ ನಡುವಿನ ದ್ವೇಷದ ಕಿಡಿ. ಅದೇನು ಪೈಪೋಟಿ, ಅದೆಷ್ಟು ರೋಷ, ಕೆಚ್ಚು ಆಟಕ್ಕಿಳಿದರೆ!1937ರ ಪಂದ್ಯದಲ್ಲಿ ಎರಡು ಗೋಲು ಹೊಡೆದ ಅರ್ಜೆಂಟಿನಾ ಆಟಗಾರರು ಬ್ರೆಜಿಲ್‍ನ ಕರಿಯ ಆಟಗಾರರನ್ನು ಕೋತಿಗಳೆಂದು ಯಾವ ಪರಿ ಅಣಕಿಸಿದರೆಂದರೆ ಅವರು ಸಿಟ್ಟಿಗೆದ್ದು ಮೈದಾನದಿಂದಲೇ ಹೊರನಡೆದರು. ಮತ್ತೆ 1939ರ ರೋಕಾ ಕಪ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾದಾಗ ಮೊದಲ ಪಂದ್ಯದಲ್ಲಿ ಅರ್ಜೆಂಟಿನಾ 5-1ರ ಅಂತರದಿಂದ ಗೆದ್ದಿತು. ಎರಡನೆಯ ಪಂದ್ಯದ ಸ್ಕೋರ್ 2-2 ಇದ್ದಾಗ ಬ್ರೆಜಿಲ್‍ನ ಪರವಾಗಿ ಪೆನಾಲ್ಟಿ ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಅರ್ಜೆಂಟಿನಾ ಆಟಗಾರ ಅರ್ಕಾಡಿಯೊ ಲೋಪೆಜ್ ರೆಫರಿಯನ್ನು ಕೆಟ್ಟದಾಗಿ ನಿಂದಿಸಿದ. ಪೋಲೀಸರು ಬಂದು ಲೋಪೆಜ್‍ನನ್ನು ಹೊರಗಟ್ಟಿದ್ದೇ ತಡ ಸಿಟ್ಟಾದ ಅರ್ಜೆಂಟಿನಾ ತಾನೇನು ಕಡಿಮೆ ಎಂದು ಮೈದಾನದಿಂದ ಹೊರನಡೆಯಿತು. ಎದುರಾಳಿ ತಂಡದ ಗೋಲ್‍ಕೀಪರ್ ಇಲ್ಲದೆಯೇ ಗೋಲ್ ಹೊಡೆದ ಬ್ರೆಜಿಲ್, ಪಂದ್ಯ ಗೆದ್ದದ್ದೂ ಆಯಿತು! ಇಷ್ಟಾದರೂ ಎರಡೂ ತಂಡಗಳು ಆಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಮತ್ತೆ 1945ರಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್‍ನ ಆಟಗಾರನೊಬ್ಬ ಅರ್ಜೆಂಟಿನಾದವನ ಕಾಲು ಮುರಿದ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು 1946ರಲ್ಲಿ ಅದೇ ಘಟನೆ ಮರುಕಳಿಸಿದಾಗ. ಬ್ರೆಜಿಲ್‍ನ ರೋಜಾ ಪಿಂಟೋ ಅರ್ಜೆಂಟಿನಾದ ನಾಯಕ ಜೋಸ್‍ನ ಮಂಡಿಯ ಕೆಳಗಿನ ಮೂಳೆ ಮುರಿದು ಹೋಗುವಂಥ ಪೆಟ್ಟನ್ನು ಕೊಟ್ಟಾಗ ರೊಚ್ಚಿಗೆದ್ದ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿ, ಎಲ್ಲವೂ ಅಲ್ಲೋಲಕಲ್ಲೋಲವಾಗಿ ಸ್ವಲ್ಪ ಹೊತ್ತು ಆಟವನ್ನೇ ನಿಲ್ಲಿಸಬೇಕಾಯಿತು. ಮತ್ತೆ ಮುಂದುವರೆದ ಆಟ ಮುಕ್ತಾಯಗೊಂಡಾಗ ಅರ್ಜೆಂಟಿನಾ 2-0 ಅಂತರದಲ್ಲಿ ಗೆದ್ದಿತು. ಆದರೆ ನಾಯಕ ಜೋಸ್ ಮತ್ತೆಂದೂ ಆಡಲಾಗದಷ್ಟು ಪೆಟ್ಟು ತಿಂದಿದ್ದ. ಈ ಘಟನೆಯಿಂದಾಗಿ ಮುಂದಿನ ಹತ್ತು ವರ್ಷಗಳವರೆಗೂ ಯಾವೊಂದು ತಂಡವೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲೇ ಇಲ್ಲ!



ಹಾಗೂ ಹೀಗೂ ಮತ್ತೆ 1978ರ ನಂತರ ಶುರುವಾದ ಪಂದ್ಯಗಳಲ್ಲಿ ಅರ್ಜೆಂಟಿನಾದ ಸಲುವಾಗಿ ಪೆರು ದೇಶ ಬೇಕೆಂತಲೇ ಸೋತ, ಡೀಗೋ ಮಾರಡೋನಾ ಬ್ರೆಜಿಲ್‍ನವನಿಗೆ ಒದೆ ಕೊಟ್ಟ ಘಟನೆಗಳು ನಡೆದವು. ಇವರಿಬ್ಬರ ಆಟದ ಖದರು ಎಷ್ಟೆಂದರೆ ಒಂದಷ್ಟು ಮಂದಿ ಮೈದಾನದಲ್ಲಿ ಬಡಿದಾಡಿಕೊಳ್ಳಲೇ ಬೇಕು ಹಾಗೂ ಅಲ್ಲಿ ಪೋಲೀಸ್ ಮತ್ತು ಆಂಬುಲೆನ್ಸ್ ಇರಲೇಬೇಕು! ಇಲ್ಲದಿದ್ದರೆ ಆಡುವವರಿಗೂ ನೆಮ್ಮದಿ ಇಲ್ಲ, ನೋಡುವವರಿಗೂ ತೃಪ್ತಿ ಇಲ್ಲ! ಇದ್ದುದರಲ್ಲೇ ಗಲಾಟೆಯಿಲ್ಲದೆ ನಡೆದದ್ದು ಬೀಜಿಂಗ್‍ನ ಒಲಿಂಪಿಕ್ ಪಂದ್ಯ. ಬ್ರೆಜಿಲ್ ಸೋತರೂ ಯಾರ ಮೈಮೂಳೆಗಳೂ ಪುಡಿಯಾಗಲಿಲ್ಲ ಸದ್ಯ!

ಮೈದಾನದಲ್ಲೇ ಈ ಪರಿ ಕಿತ್ತಾಡಿಕೊಳ್ಳುವ ದೇಶಗಳು ಉಳಿದ ವಿಷಯಗಳಿಗೂ ರಂಪ ಮಾಡಿಕೊಂಡು ಪದೇ ಪದೇ ವಿಶ್ವ ಸಂಸ್ಥೆಯ ಬಾಗಿಲು ಬಡಿಯಬೇಕಿತ್ತಲ್ಲವೇ? ಅಲ್ಲೇ ಇರುವುದು ನೋಡಿ ಸ್ವಾರಸ್ಯ ಮತ್ತು ವೈವಿಧ್ಯ. ಉಳಿದೆಲ್ಲಾ ವಿಷಯಗಳಲ್ಲೂ ಈ ರಾಷ್ಟ್ರಗಳದ್ದು ಗಳಸ್ಯ-ಕಂಠಸ್ಯ. ಒಟ್ಟಿಗೇ ಸ್ವಾತಂತ್ರ್ಯ ಪಡೆದ ಇವೆರಡೂ ಗಡಿ ವಿಷಯಕ್ಕೆ ಕಿತ್ತಾಡಿದ ಇತಿಹಾಸವೇ ಇಲ್ಲ. ಹೋಗಲಿ ಒಂದೇ ಒಂದು ಸಣ್ಣ ಜಗಳ? ಇಲ್ಲ. ನಡೆದದ್ದು ಒಂದೇ ಯುದ್ಧ, ಪರಗ್ವೇ ದೇಶದ ಮೇಲೆ ಇವುಗಳು ಒಟ್ಟಾಗಿ ಮಾಡಿದ್ದು, ಅದೂ 1865ರಷ್ಟು ಹಿಂದೆ. 1945ರಲ್ಲಿ ನೀರಿನ ಹಂಚಿಕೆ ವಿಷಯಕ್ಕೆ ಕೈ-ಕೈ ಮಿಲಾಯಿಸುವ ಚಂದದ ಅವಕಾಶ ಒದಗಿ ಬಂದಿತ್ತು. ಅದನ್ನೂ ಆಗಗೊಡದೆ ತಮ್ಮಲ್ಲೇ ರಾಜತಾಂತ್ರಿಕವಾಗಿ ಬಗೆಹರಿಸಿಕೊಂಡವು. ಆಗ ಎರಡೂ ದೇಶಗಳಲ್ಲಿ ಇದ್ದದ್ದು ಮಿಲಿಟರಿ ಆಡಳಿತ ಬೇರೆ. ಒಂದಾದರೂ ಹನಿ ನೆತ್ತರು ಹರಿಯಬೇಕಿತ್ತಲ್ಲವೇ?. ಹಾಗಾಗಲಿಲ್ಲ. ನಂತರ 1982ರಲ್ಲಿ ಅರ್ಜೆಂಟಿನಾ ಫಾಕ್‍ಲ್ಯಾಂಡ್ ದ್ವೀಪಸಮೂಹಗಳ ಮೇಲೆ ಯುದ್ಧಕ್ಕೆ ಹೋದಾಗ, ಬ್ರಿಟನ್ನಿನ ಯುದ್ಧ ವಿಮಾನ ಹಾಗೂ ಅದರಲ್ಲಿದ್ದ ಸೈನಿಕರನ್ನು ಬಂದಿಯಾಗಿಟ್ಟುಕೊಂಡಾಗಲೆಲ್ಲ ಬ್ರೆಜಿಲ್ ಅದರ ಬೆನ್ನಿಗಿತ್ತು. ಯುದ್ಧದಲ್ಲಿ ಸೋತು ವಿಶ್ವಸಂಸ್ಥೆಯೊಂದಿಗೆ ಮುಖ ಮುರಿದುಕೊಂಡ ಅರ್ಜೆಂಟಿನಾಗೆ ನಷ್ಟವಾದರೂ ಆಗಬೇಕಿತ್ತು ತಾನೆ? ಬ್ರೆಜಿಲ್ ಬಿಡಲಿಲ್ಲ. ತಾನೇ ಅದರ ಪರವಾಗಿ ವಾದ ಮಂಡಿಸುತ್ತಿತ್ತು. ಮಿಲಿಟರಿ ಆಡಳಿತ ಕೊನೆಯಾಗಿ ಎರಡೂ ದೇಶಗಳಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದದ್ದೇ ತಡ, ಬೆಸುಗೆ ಇನ್ನಷ್ಟು ಗಟ್ಟಿಯಾಯಿತು.

ಈಗಂತೂ ಅಣ್ವಸ್ತ್ರಗಳು ಎರಡೂ ರಾಷ್ಟ್ರಗಳ ಬಳಿ ಇವೆ. ಆದರೆ ಪರಸ್ಪರರ ವಿರುದ್ಧ ಪ್ರಯೋಗಿಸುವುದಿಲ್ಲವೆಂಬ ಪ್ರತಿಜ್ಞೆ ಮಾಡಿಕೊಂಡಿವೆ. ತಮ್ಮ ವಾಯುಪಡೆ ಹಾಗೂ ನೌಕಾಪಡೆಗಳ ಯುದ್ಧವಿಮಾನಗಳನ್ನು ಹಂಚಿಕೊಳ್ಳುತ್ತವೆ. ಸೈನ್ಯಕ್ಕೆ ಬೇಕಾದ ವಾಹನಗಳ ತಯಾರಿಕೆಯಲ್ಲಿಯೂ ಸಮಾನ ಪಾಲುದಾರಿಕೆ. ಎಲ್ಲೂ ಒಂದನ್ನೊಂದು ಶಂಕಿಸುವ, ಬೆನ್ನಿಗೆ ಚೂರಿ ಹಾಕುವ ಪ್ರಶ್ನೆಯೇ ಇಲ್ಲ. 2003ರಿಂದೀಚೆಗೆ ಮಾಡಿಕೊಂಡಿರುವ ಕೃಷಿ, ಆರ್ಥಿಕ ಹಾಗೂ ವಿದೇಶಾಂಗ ವಲಯಗಳಿಗೆ ಸಂಬಂಧಿಸಿದ ಒಪ್ಪಂದಗಳೆಲ್ಲ ಎರಡೂ ದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ. ಇವುಗಳ ಆಂತರಿಕ ಹಣಕಾಸು ವಿನಿಮಯ ವ್ಯವಹಾರಗಳಲ್ಲಿ ಅಮೆರಿಕದ ಡಾಲರ್‍ಗೂ ಪ್ರವೇಶವಿಲ್ಲ! ಬಾಹ್ಯಾಕಾಶಕ್ಕೆ ಸಂಬಂಧಿಸಿದ ಎಲ್ಲ ಪ್ರಯೋಗಗಳೂ ಜಂಟಿಯೇ. ರಾಕೆಟ್ ಉಡಾಯಿಸುವುದೂ ಒಟ್ಟಾಗಿಯೇ. ಇಂದಿಗೂ ಬ್ರೆಜಿಲ್ ಫಾಕ್‍ಲ್ಯಾಂಡ್‍ಗೆ ಸೇರಿದ ಬ್ರಿಟನ್ನಿನ ಹಡಗುಗಳನ್ನು ತನ್ನ ಬಂದರಿಗೆ ಬಿಟ್ಟುಕೊಳ್ಳುತ್ತಿಲ್ಲ. ಹೀಗಿರಬೇಕು ಬೇಷರತ್ ಬೆಂಬಲ ಎಂದರೆ!

ಎಲ್ಲಕ್ಕಿಂತ ಸೋಜಿಗವೇನು ಗೊತ್ತೆ? ಬ್ರೆಜಿಲ್‍ನ ಅಧ್ಯಕ್ಷೆ ಡಿಲ್ಮಾ ರೂಸೆಫ್ ಹಾಗೂ ಅರ್ಜೆಂಟಿನಾ ಅಧ್ಯಕ್ಷೆ ಕ್ರಿಸ್ಟೀನಾ ಫರ್ನಾಂಡಿಸ್ ಇಬ್ಬರೂ ಮಹಿಳಾಮಣಿಗಳು. ಎರಡು ಜಡೆ ಸೇರಿದ ಕಡೆ ಜಗಳವಿರಲೇಬೇಕೆಂದು ಹೇಳಿದವರು ಯಾರು? ಅವಕಾಶ ಸಿಕ್ಕಾಗಲೆಲ್ಲ ಇಬ್ಬರೂ ಪರಸ್ಪರರ ದೇಶಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಇಷ್ಟೆಲ್ಲ ಸೌಹಾರ್ದವಿದ್ದರೂ ಫುಟ್‍ಬಾಲ್ ವಿಷಯದಲ್ಲಿ ಒಬ್ಬರಾದರೂ ತಗ್ಗಿ-ಬಗ್ಗಿ ನಡೆಯುತ್ತಾರೆಯೇ? ಉಹೂಂ. ವಿಶ್ವಕಪ್ ಪಂದ್ಯ ಶುರುವಾಗುವ ಮುನ್ನಿನ ಅಭ್ಯಾಸ ಪಂದ್ಯಗಳು ನಡೆಯುತ್ತವಲ್ಲ, ಅಲ್ಲಿ ಅರ್ಜೆಂಟಿನಾದ ಪಂದ್ಯವನ್ನು ವೀಕ್ಷಿಸಲು ಸುಮಾರು 5000ಮಂದಿ ಸೇರಿದ್ದರು. ಅವರಲ್ಲಿ ಬಹುತೇಕರು ಬ್ರೆಜಿಲ್‍ನವರು. ಅರ್ಜೆಂಟಿನಾ ಮೈದಾನಕ್ಕಿಳಿಯುತ್ತಿದ್ದಂತೆ ಶಿಳ್ಳೆ ಹಾಕಿ, ಕೂಗಿ, ಅಣಕಿಸಿ ಹುಯಿಲೆಬ್ಬಿಸಿದರು. ಅರ್ಜೆಂಟಿನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಸುಮ್ಮನೆ ನಕ್ಕು ಎಲ್ಲರೆಡೆ ಕೈ ಬೀಸಿ ಆಟ ಶುರುವಿಟ್ಟುಕೊಂಡ. ಅರ್ಜೆಂಟಿನಾದ ಚೊಚ್ಚಲ ಪಂದ್ಯವಿದ್ದದ್ದು ಬೋಸ್ನಿಯಾ-ಹರ್ಜೆಗೋವಿನಾ ತಂಡದೊಂದಿಗೆ. ಅದಕ್ಕೂ ದಾಳಿಯಿಟ್ಟ ಬ್ರೆಜಿಲ್‍ನ ಅಭಿಮಾನಿಗಳು ಬೆರಳೆಣಿಕೆಯಷ್ಟಿದ್ದ ಬೋಸ್ನಿಯಾ ಅಭಿಮಾನಿಗಳಿಗಿಂತ ಹೆಚ್ಚಾಗಿ ಅವರ ಪರ ಕಿರುಚಾಡಿ ಅರ್ಜೆಂಟಿನಾವನ್ನು ಕಿಚಾಯಿಸಿದರು. ಬ್ರೆಜಿಲ್‍ನ ಪಂದ್ಯವೇ ಅಲ್ಲದಿದ್ದ ಮೇಲೆ ಅವರಿಗೆ ಬರುವ ಅಗತ್ಯವೇನಿತ್ತು ಹೇಳಿ? ಮೆಸ್ಸಿ ಮೇಲಿನ ಪ್ರೀತಿ. 'ನಮಗೆ ಅರ್ಜೆಂಟಿನಾ ಕಂಡರಾಗದು, ಆದರೆ ಮೆಸ್ಸಿ ಎಂದರೆ ಅಪಾರವಾದ ಗೌರವ ಹಾಗೂ ಅಭಿಮಾನವಿದೆ' ಎಂದು ಬಾಯಿಬಿಟ್ಟು ಹೇಳುವ ಅವರು ‘ಅರ್ಜೆಂಟಿನಾವನ್ನು ಪ್ರೋತ್ಸಾಹಿಸಲು ಬರುವುದಿಲ್ಲ, ಅದರ ಆಟ ನೋಡಲು ಬರುತ್ತೇವೆ’ ಎನ್ನುತ್ತಾರೆ.



ಅವರೆಲ್ಲರ ಬಯಕೆ ಅರ್ಜೆಂಟಿನಾ ಹಾಗೂ ಬ್ರೆಜಿಲ್ ಫೈನಲ್‍ಗೆ ಬರಬೇಕೆಂಬುದು. ಹಾಗಾಗಿಬಿಟ್ಟರೆ ಅದಕ್ಕಿಂತ ರೋಚಕ ಪಂದ್ಯ ಮತ್ತೊಂದು ಸಿಗಲಿಕ್ಕಿಲ್ಲ. ಈ ಆಟ ಹೀಗೇ ಮುಂದುವರೆಯುತ್ತಾ ಹೋಗುತ್ತದೆ. ಇಲ್ಲೊಬ್ಬ ಪೀಲೆ ಹುಟ್ಟಿದರೆ ಅಲ್ಲೊಬ್ಬ ಮಾರಡೋನ ಹುಟ್ಟುತ್ತಾನೆ. ಅಲ್ಲೊಬ್ಬ ಮೆಸ್ಸಿ ಹುಟ್ಟಿದರೆ ಇಲ್ಲೊಬ್ಬ ನೇಮಾರ್ ಹುಟ್ಟುತ್ತಾನೆ. ಮೈದಾನದಲ್ಲಿ ಹದ್ದು ಮೀರಿ ವರ್ತಿಸುವ ಇವರು ತಮ್ಮ ದೇಶಗಳ ಸರಹದ್ದನ್ನು ಒಟ್ಟಾಗಿಯೇ ಕಾಯುತ್ತಾರೆ. ಕಾಲ್ಚೆಂಡನ್ನು ಮನಬಂದಂತೆ ಒದ್ದರೂ ತಮ್ಮ ನೆರೆಯ ದೇಶದವರ ರುಂಡಗಳನ್ನು ಅಪ್ಪಿತಪ್ಪಿಯೂ ಚೆಂಡಾಡುವುದಿಲ್ಲ. ಸಿಟ್ಟು ಆಕ್ರೋಶಗಳೆಲ್ಲ ಮೈದಾನದಲ್ಲಿ ಸ್ಫೋಟಿಸುತ್ತವೆಯೆ ಹೊರತು ಬಾಂಬ್‍ಗಳಾಗಿ ಜೀವಗಳ ಬಲಿ ಪಡೆಯುವುದಿಲ್ಲ.

ಒಗ್ಗಟ್ಟು ಮತ್ತು ಸಾಮರಸ್ಯಗಳ ಪಾಠವನ್ನೂ ನಾವು ಎ,ಬಿ,ಸಿ,ಡಿಯಿಂದಲೇ ಪ್ರಾರಂಭಿಸಬಹುದು; ಇಲ್ಲಿ ಎ ಎಂದರೆ ಅರ್ಜೆಂಟಿನಾ, ಬಿ ಅಂದರೆ ಬ್ರೆಜಿಲ್! 

ಬದಲಾದ ಜಿಹಾದ್ನ ಪರಿಭಾಷೆ; ಶಾಂತಿ ಆಗುವುದೇ ಮರೀಚಿಕೆ?

ಕಳೆದ ಮಾರ್ಚ್ 25ರಂದು ಸಿರಿಯಾ ದೇಶದ ಇದ್ಲಿಬ್ ಪಟ್ಟಣದ ಒಂದು ಸೈಬರ್ ಕೆಫೆಗೆ ಅಬು-ಸುಮಯ್ಯಾಹ್-ಅಲ್-ಬ್ರಿಟಾನಿ ಎಂಬ ಜಿಹಾದಿ ನಡೆದು ಬಂದ. ಅವತ್ತು ಇಂಟರ್‌ನೆಟ್‌ನಲ್ಲಿ ಸ್ಕೈಪ್ ಮೂಲಕ ಅವನ ಸಂದರ್ಶನವಿತ್ತು. ನಡೆಸುತ್ತಿದ್ದವನು ಅಮೆರಿಕದ ಜೋನಾಥನ್ ಲೀ ಕ್ರೋನ್ ಎಂಬ ಯುವ ಪತ್ರಕರ್ತ. 'ಐಎಸ್‍ಐಎಸ್‍ಶೋ’ ಎಂಬುದು ಕಾರ್ಯಕ್ರಮದ ಹೆಸರು. ಶೋ ಎಂದೊಡನೆ ನಮಗೆ ನೆನಪಾಗುವುದು ನಮ್ಮ ಚಾನೆಲ್‍ಗಳಲ್ಲಿ ಪ್ರಸಾರವಾಗುವ ಹಾಡು, ಕುಣಿತ, ಸಾಹಸದ ರಿಯಾಲಿಟಿ ಶೋಗಳು ಮಾತ್ರ ಅಲ್ಲವೇ? ಆದರೆ ಅದಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಅದನ್ನು ನೋಡಿದರೆ ನಕ್ಕು ಹಗುರಾಗುತ್ತೇವೆ, ಇದನ್ನು ಕೇಳಿದೊಡನೆ ಹುಬ್ಬು ಗಂಟಿಕ್ಕುತ್ತೇವೆ. ಸಿರಿಯಾದಲ್ಲಿ ಶುರುವಾಗಿ ಕಾಡ್ಗಿಚ್ಚಿನಂತೆ ಇರಾಕ್‍ನವರೆಗೂ ಹಬ್ಬಿರುವ ಐಸಿಸ್ (ಅಥವಾ ಐಎಸ್‍ಐಎಸ್‍ - ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ) ಎಂಬ ಜಿಹಾದಿ ಗುಂಪಿನ ಸದಸ್ಯನೊಬ್ಬನನ್ನು ಅಂದು ಜನರೆದುರು ತೆರೆದಿಡುವ ಪ್ರಯತ್ನ ಮಾಡುತ್ತಿದ್ದ ಜೋನಾಥನ್. ಫಲವಾಗಿ ಅಬು-ಸುಮಯ್ಯಾಹ್‍ನನ್ನು ಮಾತಿಗೆಳೆದು ತಂದಿದ್ದ. ಅಕ್ಕ-ಪಕ್ಕದಲ್ಲೇ ನಡೆಯುತ್ತಿದ್ದ  ಬಾಂಬ್ ದಾಳಿಗಳ ಕಿವಿಗಡಚಿಕ್ಕುವ ಸದ್ದಿನ ನಡುವೆ ಅಬು ತಣ್ಣಗೆ ಮಾತಿಗಿಳಿದ. ಮೂಲತಃ ಬ್ರಿಟನ್ನಿನವನಾದ ಅವನು ಐಸಿಸ್ ಸೇರಿ ವರ್ಷವಾಗಿತ್ತಷ್ಟೆ. ಬ್ರಿಟನ್‍ಗೆ ಹಿಂತಿರುಗುವ ಇರಾದೆ ಇದೆಯಾ ಎಂದು ಜೋನಾಥನ್ ಕೇಳಿದ್ದಕ್ಕೆ, ನನ್ನ ಪಾಸ್‍ಪೋರ್ಟ್ ಎಲ್ಲಿ ಹಾಕಿದ್ದೇನೆ ಎನ್ನುವುದೇ ನನಗೆ ನೆನಪಿಲ್ಲ, ಅದಿನ್ನು ಬೇಕಾಗಿಯೂ ಇಲ್ಲ ಎಂದ. ಹೇಗೆ ಬಿಟ್ಟು ಬಂದೆ ನಿನ್ನ ದೇಶವನ್ನು ಅಷ್ಟು ಸಲೀಸಾಗಿ ಎಂಬ ಪ್ರಶ್ನೆಗೆ ನಕ್ಕು, ಇಸ್ಲಾಂ ಅನ್ನು ಉಳಿಸುವ ಕರ್ತವ್ಯದ ಮುಂದೆ ದೇಶ ಭಾಷೆಗಳ ಅಸ್ತಿತ್ವವೇ ಇಲ್ಲ ಎಂದ. ಹೋಗಲಿ ನಿನ್ನವರು ಅಂತ ಯಾರೂ ಇರಲಿಲ್ಲವಾ ನಿನ್ನ ದೇಶದಲ್ಲಿ ಎಂದು ಕೇಳಿದ್ದಕ್ಕೆ, ಇದ್ದರು, ಹೆಂಡತಿ ಹಾಗೂ ಮೂವರು ಮಕ್ಕಳು ಎನ್ನಬೇಕೇ! ಒಂದು ಕ್ಷಣ ನಿರುತ್ತರನಾದ ಜೋನಾಥನ್. ಮುಂದುವರಿದು ಅಬು ಹೇಳಿದ ಮಾತುಗಳನ್ನು ಕೇಳಿ: ‘ಅಮೆರಿಕ ಹಾಗೂ ಬ್ರಿಟನ್ ಸರ್ಕಾರಗಳ ಮುಸ್ಲಿಂ ವಿರೋಧಿ ನೀತಿಯನ್ನು ನೋಡಿ ರೋಸಿ ಹೋಗಿ ಯಾರಿಗೂ ಹೇಳದೆ ಕೇಳದೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಬಂದೆ. ಇಲ್ಲಿಯತನಕ ಮನೆಯವರೊಡನೆ ಒಂದು ಮಾತೂ ಆಡಿಲ್ಲ.  ಬಹುಶಃ ಅವರಿಗೆ ನಾನಿಲ್ಲಿದ್ದೇನೆಂಬುದು ಗೊತ್ತೂ ಇಲ್ಲ. ನನ್ನಿಂದೇನಾದರೂ ತಪ್ಪಾಗಿದ್ದರೆ ಅವರು ನನ್ನನ್ನು ಕ್ಷಮಿಸಲಿ. ರಕ್ತ ಸಂಬಂಧ ಎಲ್ಲೂ ಹೋಗುವುದಿಲ್ಲ. ನನಗೆ ಅವರ ನೆನಪಾಗುತ್ತದೆ. ಆದರೆ ಇಸ್ಲಾಂಗೋಸ್ಕರ ನನ್ನ ಮಕ್ಕಳನ್ನು ಒಂದು ಬಾರಿ ಏನು, ನೂರು ಬಾರಿಯಾದರೂ ಬಲಿಕೊಡಬಲ್ಲೆ. ಅಲ್ಲಾಹುವಿಗೋಸ್ಕರ ಮಾಡುತ್ತಿದ್ದೇನೆ. ಈ ಪ್ರಪಂಚದಲ್ಲಿ ಮತ್ತೆ ನೋಡುವುದಾಗದಿದ್ದರೆ ಸ್ವರ್ಗದಲ್ಲಿ ಅವರನ್ನು ಖಂಡಿತ ಸೇರುತ್ತೇನೆ’! ಕೈಯಲ್ಲಿದ್ದ ಕಲಾಷ್ನಿಕೋವ್ ಬಂದೂಕನ್ನು ಸವರುತ್ತ ಅಬು ಸರಾಗವಾಗಿ ಮಾತನಾಡುತ್ತಲೇ ಇದ್ದ!



ಇದು ಒಬ್ಬ ಅಬುವಿನ ಮನಸ್ಥಿತಿ ಮಾತ್ರವಲ್ಲ. ಇಂದು ಐಸಿಸ್‍ನ ಪ್ರತಿ ಜಿಹಾದಿಯ ತಲೆಯೊಳಗೂ ಸುನ್ನಿ ಮುಸ್ಲಿಂ ನೇತೃತ್ವದ ಒಂದು ಪ್ರತ್ಯೇಕ ಇಸ್ಲಾಂ ರಾಷ್ಟ್ರ ನಿರ್ಮಾಣದ ಭೂತ ಹೊಕ್ಕಿದೆ.

ಈ ಭೂತದ ಬಸಿರನ್ನು ಹೊತ್ತು ಹೆತ್ತವನು ಸುನ್ನಿ ಪಂಗಡದ ಅಬು-ಮುಸಬ್-ಅಲ್-ಜರ್ಕಾವಿ!

ನಮ್ಮ ದೇಶದ ಬಲಭುಜಕ್ಕಿರುವ ಪಾಕಿಸ್ತಾನದಿಂದಾಚೆಗೆ ಹರಡಿಕೊಂಡಿರುವ ಅಫ್‍ಘಾನಿಸ್ತಾನ,ಇರಾನ್,ಇರಾಕ್,ಸಿರಿಯ ಹಾಗೂ ಟರ್ಕಿಗಳಲ್ಲಿ ನಡೆಯುತ್ತ ಬಂದಿರುವ ಶಿಯಾ-ಸುನ್ನಿ ಕಾಳಗಕ್ಕೆ 1400 ವರ್ಷಗಳ ಇತಿಹಾಸವಿದೆ. ಸಿರಿಯಾ ಹಾಗೂ ಟರ್ಕಿಗಳಲ್ಲಿ ಶೇಕಡ 75ರಷ್ಟಿರುವ ಸುನ್ನಿಗಳು ಇರಾಕ್ ಹಾಗೂ ಇರಾನ್‍ನಲ್ಲಿರುವುದು ಕ್ರಮವಾಗಿ ಶೇಕಡ 20 ಮತ್ತು 9ರಷ್ಟು ಮಾತ್ರ. ಇವೆರಡರ ಜೊತೆ ಕುರ್ದ್ ಎಂಬ ಅಲ್ಪಸಂಖ್ಯಾತರ ವರ್ಗವೂ ವಾಸವಾಗಿದೆ. ಆದರೆ ಅದೆಂದೂ ಬರಿದೇ ಇಸ್ಲಾಂ ಧರ್ಮಕ್ಕೆ ಮೀಸಲಾಗಿಲ್ಲ. ಅವರಲ್ಲಿ ಯಹೂದಿಗಳು, ಜೊರಾಷ್ಟ್ರಿಯನ್ನರು ಮುಂತಾದವರಿದ್ದಾರೆ. ಶಿಯಾ-ಸುನ್ನಿ ಕಾಳಗಕ್ಕೆ ಸಾಕ್ಷಿಯಾಗುವುದು ಹಾಗೂ ಬಲಿಯಾಗುವುದು ಬಿಟ್ಟು ಅವರಿಗೆ ಗತ್ಯಂತರವಿಲ್ಲ.

2003ರಲ್ಲಿ ಅಮೆರಿಕ ಇರಾಕ್‍ನ ಮೇಲೆ ದಾಳಿ ನಡೆಸಿ ಸುನ್ನಿ ಪಂಗಡದ ಸದ್ದಾಂನನ್ನು ಪದಚ್ಯುತಗೊಳಿಸಿದಾಗ ಜೋರ್ಡನ್‍ನಿಂದ ಬಂದು ಬಾಗ್ದಾದ್‍ ಸೇರಿಕೊಂಡವನೇ ಈ ಜರ್ಕಾವಿ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಎಂಬ ಸಂಘಟನೆಯಡಿ ಜನರನ್ನು ಸೇರಿಸಿ ಹಲವಾರು ಆತ್ಮಹತ್ಯಾ ಹಾಗೂ ಕಾರ್ ಬಾಂಬ್ ದಾಳಿಗಳನ್ನು ಆಯೋಜಿಸಿದ. ಡಜನ್‍ಗಟ್ಟಲೆ ಶಿಯಾಗಳನ್ನು ಕೊಂದು ಅವರ ಮಸೀದಿಗಳನ್ನು ಕೆಡವಿದ. ಅಮೆರಿಕದವರನ್ನು ಅಪಹರಿಸಿ ಅವರ ತಲೆ ಕಡಿದು ಅದರ ವೀಡಿಯೋ ಮಾಡಿ ಕುಖ್ಯಾತನಾದ. ಅಷ್ಟು ಹೊತ್ತಿಗಾಗಲೇ ಅಮೆರಿಕದ ಅವಳಿ ಕಟ್ಟಡಗಳನ್ನು ಕೆಡವಿ ಜಿಹಾದಿಗಳ ಹೀರೋ ಆಗಿದ್ದ ಅಲ್-ಕೈದಾ ನಾಯಕ ಒಸಾಮಾ ಅವನ ಶೌರ್ಯ ಕಂಡು ಅವನತ್ತ ಸ್ನೇಹ ಹಸ್ತ ಚಾಚಿದರೂ ಕ್ಯಾರೇ ಅನ್ನಲಿಲ್ಲ ಜರ್ಕಾವಿ. ಇರಾಕ್‍ನಲ್ಲಿದ್ದ ಸಂಯುಕ್ತ ರಾಷ್ಟ್ರಗಳ ಕಛೇರಿಯನ್ನು ಉಡಾಯಿಸಿ ಅದರ ಮುಖ್ಯಸ್ಥ ‘ಮೆಲ್ಲೋ’ರನ್ನು ಕೊಂದಾಗ ಮಾತ್ರ ಅಮೆರಿಕ ಕೆರಳಿ ಕೆಂಡವಾಯಿತು. 2006ರ ಜೂನ್ 7ರಂದು ಅವನಿದ್ದ ಡೇರೆಯ ಮೇಲೆ ಬಾಂಬ್‍ಗಳ ಮಳೆಗರೆಯಿತು. ಅಲ್ಲೇ ಹೆಣವಾಗಿ ಹೋದ ಜರ್ಕಾವಿ. ನಂತರ  ಸುಮಾರು ಮೂರು ವರ್ಷಗಳ ಕಾಲ ಅವನ ಸಂಘಟನೆ ಮಂಕಾಗಿ ಹೋಯಿತು. ಇನ್ನೇನು ಸುನ್ನಿಗಳ ಅಟ್ಟಹಾಸಕ್ಕೆ ತೆರೆ ಬಿತ್ತು ಎಂದುಕೊಳುತ್ತಿರುವಾಗಲೇ..

2010ರಲ್ಲಿ ಅಬು-ಬಕರ್-ಅಲ್-ಬಾಗ್ದಾದಿ ಎಂಬ ಮಹಾ ಕ್ರೂರಿ ಈ ಸಂಘಟನೆಯ ಚುಕ್ಕಾಣಿ ಹಿಡಿದ!

ಆಗಿನ್ನೂ ಅಮೆರಿಕದ ಪಡೆಗಳು ಇರಾಕ್‍ನಲ್ಲೇ ಇದ್ದವಾದರೂ ನೆರೆಯ ಸಿರಿಯಾದಲ್ಲಿ ಅಧ್ಯಕ್ಷ ಬಶರ್-ಅಲ್-ಅಸ್ಸದ್‍ನ ಅರಾಜಕತೆ ಮೇರೆ ಮೀರಿತ್ತು. ಶಿಯಾ ಪಂಗಡದ ಅವನ ವಿರುದ್ಧದ ದಂಗೆ ಉಗ್ರ ಸ್ವರೂಪ ಪಡೆಯತೊಡಗಿತ್ತು. ಅದೇ ತಕ್ಕ ಸಮಯವೆಂದು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ ಬಾಗ್ದಾದಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ನ ಜೊತೆಗೆ ಸಿರಿಯಾವನ್ನೂ ಸೇರಿಸಿ ಐಎಸ್‍ಐಎಸ್‍ ಎಂಬ ಹೆಸರನ್ನಿಟ್ಟ. ಹೆಸರನ್ನಷ್ಟೇ ಬದಲಾಯಿಸಲಿಲ್ಲ ಬಾಗ್ದಾದಿ. ಜಿಹಾದಿಗಳ ಯುದ್ಧನೀತಿಯನ್ನೂ ತಿರುಚಿದ. ಬರೀ ಬಾಂಬ್ ಹಾಗೂ ಆತ್ಮಹತ್ಯಾ ದಾಳಿಗೆ ಸೀಮಿತವಾಗಿದ್ದವರಿಗೆ ಕತ್ತಿ ಹಿರಿದು ಕಾಲಾಳುಗಳಂತೆ ಕಾದಾಡುವುದನ್ನು ಕಲಿಸಿದ. ಅವರಲ್ಲೊಂದು ಪೈಶಾಚಿಕತೆ ಬಿತ್ತಿದ. ಅಂದಿನಿಂದ ಶುರುವಾಯಿತು ನೋಡಿ ಶಿಯಾಗಳ ಮಾರಣಹೋಮ! ಬಾಗ್ದಾದಿಯ ಕನಸೇನು ಗೊತ್ತೇ? ಸುನ್ನಿ ಆಡಳಿತದ ಇಸ್ಲಾಂ ರಾಷ್ಟ್ರ ಸ್ಥಾಪಿಸುವುದು! ಅದಕ್ಕಾಗಿ ಒಂದೆಡೆ ಸಿರಿಯಾದಲ್ಲಿ ರಕ್ತದೋಕುಳಿಯಾಡುತ್ತಾ ಮತ್ತೊಂದೆಡೆ ಇರಾಕ್‍ಗೂ ದಾಳಿಯಿಟ್ಟಿದ್ದಾನೆ. ಅವನು ತಯಾರು ಮಾಡಿರುವ ಕಟುಕರ ಪಡೆ ಹೇಗಿರಬಹುದು ಹೇಳಿ? ಉಹೂಂ, ನೀವು ಊಹಿಸಲಾರಿರಿ. ತಾವು ಕಡಿದ ರುಂಡಗಳನ್ನು ರಾಶಿ ಹಾಕಿ ಅವುಗಳನ್ನು ಟ್ರೋಫಿಗಳು ಎನ್ನುತ್ತ ಅದರ ಜೊತೆ ಫೋಟೋ ತೆಗೆಸಿಕೊಂಡು ಅಂತರ್ಜಾಲದ ತಾಣಗಳಲ್ಲಿ ಪ್ರದರ್ಶಿಸುತ್ತಾರೆ! ನಾವು ಬ್ಯಾಗ್‍ನಲ್ಲಿ ಬಟ್ಟೆಗಳನ್ನು ತುಂಬುವಷ್ಟೇ ಸಲೀಸಾಗಿ ರುಂಡಗಳನ್ನು ತುಂಬಿ ರಕ್ತಸಿಕ್ತ ಕೈಗಳಲ್ಲಿ ಅದನ್ನು ಹಿಡಿದು ನಿಂತು ಕೆಮರಾಗೆ ಪೋಸ್ ಕೊಡುತ್ತಾರೆ. ಕೇಳಿಯೇ ನಮಗೆ ವಾಕರಿಕೆ ಬರುತ್ತದಲ್ಲವೇ? ಕೈಯ್ಯಾರೆ ಮಾಡಿದ ಅವರು ಕೇಕೆ ಹಾಕುತ್ತಾರೆ! ಬಾಗ್ದಾದಿಯ ಇಂಥ ಕ್ರೌರ್ಯ, ನಿರ್ದಯತೆ ಹಾಗೂ ಸಂಘಟನಾ ಚಾತುರ್ಯಗಳಿಂದಾಗಿಯೇ ಟೈಮ್ಸ್ ನಿಯತಕಾಲಿಕೆ ಅವನನ್ನು ಪ್ರಸ್ತುತ ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಮನುಷ್ಯ ಎಂದು ಕರೆದಿದೆ. ಅಷ್ಟೇ ಅಲ್ಲ, ಜಿಹಾದಿ ವಲಯದಲ್ಲಿ ಅವನು ಗುರುತಿಸಲ್ಪಡುವುದು ಹೇಗೆ ಹೇಳಿ? ಹೊಸ ಬಿನ್ ಲಾಡೆನ್ ಎಂದು! ಒಸಾಮಾನನ್ನು ಅಮೆರಿಕ ಅಟ್ಟಾಡಿಸಿ ಕೊಂದಮೇಲೆ ಅಲ್-ಕೈದಾ ನಾಯಕನಾಗಿರುವ ಅಯ್‍ಮಾನ್-ಅಲ್-ಜವಾಹಿರಿ ಬಾಗ್ದಾದಿಯ ಮುಂದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾನೆ. ಅವನ ಗುಂಪಿನವರೂ ಬಾಗ್ದಾದಿಯ ಮೃಗೀಯತೆಗೆ ತಲೆಬಾಗಿದ್ದಾರೆ.

ಬಾಗ್ದಾದಿಯ ಮತ್ತೊಂದು ತಂತ್ರ ಜಿಹಾದಿನ ಜಾಗತೀಕರಣ. ನೀವು ನಂಬಲಿಕ್ಕಿಲ್ಲ. 13 ಸಾವಿರಕ್ಕೂ ಹೆಚ್ಚಿನ ಸಂಖ್ಯೆ‍ಯಲ್ಲಿರುವ ಜಿಹಾದಿಗಳ ಪೈಕಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನವರು ವಿದೇಶೀಯರು. ಸೋಫನ್ ಗ್ರೂಪ್ ಎಂಬ ಇಂಟೆಲಿಜೆನ್ಸ್ ಸಂಸ್ಥೆಯ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಷ್ಯಾ ಒಂದರಿಂದಲೇ ಸುಮಾರು 800 ಜನ ಐಸಿಸ್ ಸೇರಿದ್ದಾರೆ. ಫ್ರಾನ್ಸ್ ನಿಂದ 700, ಬ್ರಿಟನ್‍ನಿಂದ 400, ಆಸ್ಟ್ರೇಲಿಯಾ ಹಾಗೂ ಬೆಲ್ಜಿಯಂಗಳಿಂದ ತಲಾ 250 ಮತ್ತು ಇನ್ನೂ ಹಲವು ಮುಸ್ಲಿಮೇತರ ರಾಷ್ಟ್ರಗಳಿಂದ ಐಸಿಸ್ ಸೇರಿರುವವರ ಒಟ್ಟು ಸಂಖ್ಯೆ ಮೂರುಸಾವಿರವನ್ನು ಸಲೀಸಾಗಿ ದಾಟುತ್ತದೆ! ಹಾಗಂತ ಎಲ್ಲರೂ ಹುಟ್ಟಾ ಮುಸಲ್ಮಾನರೇನಲ್ಲ. ಇದಕ್ಕೋಸ್ಕರ ಮತಾಂತರಗೊಂಡವರೂ ಇದ್ದಾರೆ! ಸಾವಿರಗಟ್ಟಲೆ ಜನ ಹೀಗೆ ತಮ್ಮ ದೇಶ, ಧರ್ಮ, ಸಂಬಂಧಗಳನ್ನು ಧೂಳು ಕೊಡವಿದಷ್ಟೇ ಸಲೀಸಾಗಿ ಕೊಡವಿಕೊಂಡು ಬರುತ್ತಿರಬೇಕಾದರೆ ಬಾಗ್ದಾದಿ ಹುಟ್ಟು ಹಾಕಿರುವ ಸಮೂಹ ಸನ್ನಿ ಯಾವ ಮಟ್ಟದ್ದಿರಬೇಕು?

ಇವರು ನಡೆಸುತ್ತಿರುವ ಇರಾಕ್‍ನ ಮೇಲಿನ ದಾಳಿ ಎಷ್ಟು ವ್ಯವಸ್ಥಿತವಾಗಿದೆ ಎಂಬುದಕ್ಕೆ ಮೊಸುಲ್ ಪಟ್ಟಣದ ಉದಾಹರಣೆ ನೋಡಿ. ಜಿಹಾದಿಗಳು ಮೊಸುಲ್‍ಗೆ ಕಾಲಿಟ್ಟ ತಕ್ಷಣ ಐದು ಲಕ್ಷದಷ್ಟು ಶಿಯಾಗಳು ಅಲ್ಲಿಂದ ಓಡಿದರು. ಕೈಗೆ ಸಿಕ್ಕವರನ್ನೆಲ್ಲಾ ಟ್ರಕ್ಕುಗಳಿಗೆ ತುಂಬಿಸಿಕೊಂಡು ಬಂದು ಸಾಮೂಹಿಕವಾಗಿ ಗುಂಡಿಟ್ಟು ಕೊಂದು ಆ ಚಿತ್ರಗಳನ್ನು ಅಂತರ್ಜಾಲದಲ್ಲಿ ಹರಿಬಿಡಲಾಯಿತು. ನಂತರ ಮೊಸುಲ್‍ನ ಸೆಂಟ್ರಲ್ ಬ್ಯಾಂಕ್‍ಗೆ ಲಗ್ಗೆಯಿಟ್ಟ ಜಿಹಾದಿಗಳು ಸುಮಾರು 425 ಮಿಲಿಯನ್ ಅಮೆರಿಕನ್ ಡಾಲರ್‍ಗಳನ್ನು ಹೊತ್ತೊಯ್ದರು. ಈಗ ಅವರ ಬಳಿಯಿರುವ ದುಡ್ಡೆಷ್ಟು ಗೊತ್ತೇ? ಮಾರ್ಶಲ್ ಐಲ್ಯಾಂಡ್‍ನಂಥ ಸಣ್ಣ ದೇಶದ ಒಟ್ಟು ಸಂಪನ್ಮೂಲಕ್ಕಿಂತಲೂ ಹೆಚ್ಚು! 425 ಮಿಲಿಯನ್ ಡಾಲರ್‍ಗಳನ್ನು ಅವರು 60 ಸಾವಿರ ಜಿಹಾದಿಗಳಿಗೆ ಪ್ರತಿ ತಿಂಗಳು ತಲಾ 6೦೦ ಡಾಲರ್‍ನಂತೆ  ಕೊಟ್ಟು ಒಂದು ವರ್ಷ ಸಾಕಬಲ್ಲರು! ಒಂದೆಡೆ ಪಟ್ಟಣಗಳನ್ನು ದೋಚುತ್ತಾ ಮತ್ತೊಂದೆಡೆ ತಮ್ಮವರನ್ನೇ ಅಮಾನವೀಯವಾಗಿ ಸಾಯಿಸುತ್ತಾ ಸಾಗಿದೆ ಜಿಹಾದಿಗಳ ಮೆರವಣಿಗೆ!



ಇಷ್ಟು ವರ್ಷ ಸ್ವಾರ್ಥದ ಮಧ್ಯಸ್ಥಿಕೆ ಮಾಡಿ ಈಗ ಪರಿಸ್ಥಿತಿ ಕೈಮೀರಿರುವುದರಿಂದ ಅಮೆರಿಕ ಉಭ-ಶುಭ ಎನ್ನುತ್ತಿಲ್ಲ. ದೊಡ್ಡಣ್ಣನೇ ಸುಮ್ಮನಿರುವಾಗ ತಮಗೇಕೆ ಇಲ್ಲದ ಉಸಾಬರಿ ಎಂದು ಉಳಿದವರೂ ತುಟಿ ಹೊಲಿದುಕೊಂಡಿದ್ದಾರೆ. ಹೀಗೆ ಸುಮ್ಮನಿರಲು ಕಾರಣವೂ ಇದೆ. ಇಂದು ಹಸಿದ ತೋಳಗಳಂತೆ ಶಿಯಾಗಳ ಮೇಲೆರಗಿರುವ ಐಸಿಸ್‍ ನಾಳೆ ಬೇಟೆಯಾಡಲು ಬರುವುದು ಮುಸ್ಲಿಮೇತರ ರಾಷ್ಟ್ರಗಳನ್ನೇ. ಆದ್ದರಿಂದಲೇ ಬ್ರಿಟನ್ ಹಾಗೂ ಅಮೆರಿಕದ ಇಂಟಲಿಜೆನ್ಸ್ ಸಂಸ್ಥೆಗಳು ತಮ್ಮ ದೇಶದಿಂದ ಹೋಗಿ ಜಿಹಾದ್ ಸೇರಿರುವವರ ಬಯೋಡೇಟಾಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಿವೆ. ಹಾಗೇ ತಮ್ಮ ಕೋಟೆ ಬಾಗಿಲುಗಳನ್ನೂ ಭದ್ರಪಡಿಸಿಕೊಳ್ಳುತ್ತಿವೆ. ಇನ್ನು ನಮ್ಮ ದೇಶ. ಅರ್ಧರಾತ್ರಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರಿಗೆ ಗುಂಡು ತಗುಲಿದರೆ ಹುಯಿಲೆಬ್ಬಿಸುವ ಮುಸ್ಲಿಂ ಪರ ಸಂಘಟನೆಗಳು ಈಗ ಬುರ್ಖಾ ಹೊದ್ದು ಕುಳಿತಿವೆ. ಮುಲ್ಲಾಗಳೆಲ್ಲ ‘ಮ್ಯೂಟ್’ ಆಗಿಬಿಟ್ಟಿದ್ದಾರೆ. ಸೆಕ್ಯುಲರಿಸಂ ಹೆಸರಿನಲ್ಲಿ ಮಸೀದಿಗಳಿಗೆ ಹೋಗಿ ಟೋಪಿ ಹಾಕಿಸಿಕೊಂಡು ಬಂದಿರುವ ರಾಜಕಾರಣಿಗಳದ್ದಂತೂ ಚಕಾರವೇ ಇಲ್ಲ.

ಹೋಗಲಿ, ಜಿಹಾದಿಗಳು ಅಲ್ಲಿ ಬಡಿದಾಡಿಕೊಂಡರೆ ನಮಗೇನಂತೆ ಎಂದು ಸುಮ್ಮನಿರುವುದು ಸಾಧ್ಯವಾ? ಇಲ್ಲವೇ ಇಲ್ಲ. ಇರಾಕನ್ನೇ ನೆಪವಾಗಿಟ್ಟುಕೊಂಡು ಪಾಕಿಸ್ತಾನದ ಅಲ್-ಕೈದಾ ಮುಖಂಡ ಮೌಲಾನಾ ಆಸಿಂ ಉಮರ್ ಕಾಶ್ಮೀರದ ಹುಣ್ಣನ್ನು ಮತ್ತೆ ಕೆರೆದಿದ್ದಾನೆ. ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರೆಲ್ಲ ಒಟ್ಟಾಗಿ ಕಾಶ್ಮೀರದ ವಿಮೋಚನೆಗೆ ಹೋರಾಡಲು ಸ್ಫೂರ್ತಿಯಾಗಲಿ ಎಂದು ಒಂದು ವೀಡಿಯೋ ಕೂಡ ತಯಾರಿಸಿದ್ದಾನೆ! ಒಂದೋ ನೀನಿರಬೇಕು ಇಲ್ಲಾ ನಾನು ಎಂಬ ಧೋರಣೆಯ ಪಾಕಿಸ್ತಾನ ಒಂದೆಡೆ. ನೀನು ಒಂದು ಹೆಜ್ಜೆಯಿಡು ನಾನು ಹತ್ತು ಹೆಜ್ಜೆಯಿಟ್ಟು ತೋರಿಸುತ್ತೇನೆ ಎಂದು ತೊಡೆ ತಟ್ಟಿ ನಿಂತಿರುವ ಚೀನಾ ಮತ್ತೊಂದೆಡೆ. ಇಗೋ ನೋಡು, ಜಾಗತೀಕರಣಗೊಂಡು ಹೊಸ ರೂಪದಲ್ಲಿ ಬಂದಿದ್ದೇನೆ ಎನ್ನುತ್ತಿರುವ ಜಿಹಾದ್ ಮಗದೊಂದೆಡೆ.

ಇಂದಿನ ಪರಿಸ್ಥಿತಿ ಎಂದಿಗಿಂತಲೂ ತುಸು ಹೆಚ್ಚೇ ಗಂಭೀರವಾಗಿದೆ ಎನಿಸುತ್ತಿಲ್ಲವೇ?

Tuesday, 24 June 2014

ಸ್ಮಾರಕವಾಗಲಿ ಈ ನೌಕೆ, ಸ್ವಾಭಿಮಾನವ ಮುರಿಯಬೇಕೇಕೆ?

ಈಗ್ಗೆ ಕೆಲ ದಿನಗಳ ಹಿಂದೆ ಆನಂದ್ ಖಾರ್ಡೆ ಎಂಬುವರ ಅಹವಾಲೊಂದು ಮಿಂಚಂಚೆಯಲ್ಲಿ ಹರಿದಾಡುತ್ತಿತ್ತು. ಅಹವಾಲಿನ ಉದ್ದೇಶವೇನು ಗೊತ್ತೇ? ನಮ್ಮ ದೇಶದ ಹೆಮ್ಮೆಯ ಯುದ್ಧನೌಕೆ ಐಎನ್‍ಎಸ್ ವಿಕ್ರಾಂತ್‍ ಗುಜರಿಗೆ ಹೋಗದಂತೆ ತಡೆದು ಅದನ್ನು ಒಂದು ಸ್ಮಾರಕವನ್ನಾಗಿ ಪರಿವರ್ತಿಸುವುದು! ಸಾಧ್ಯವಾದಷ್ಟೂ ಜನರಿಗೆ ಈ ಅಹವಾಲು ತಲುಪಿಸಿ, ಅವರ ಹಸ್ತಾಕ್ಷರಗಳನ್ನು ಸಂಗ್ರಹಿಸಿ ಯುದ್ಧನೌಕೆಯನ್ನು ಈಗಿರುವಂತೆಯೆ ಉಳಿಸಿಕೊಳ್ಳುವ ಅಭಿಯಾನ ಅದಾಗಿತ್ತು. ಅಂದು ನಾವು ವ್ಯಕ್ತಪಡಿಸಿದ ಬೆಂಬಲ ಈಗ ಫಲ ಕೊಟ್ಟಿದೆ. ಸರ್ವೋಚ್ಚ ನ್ಯಾಯಾಲಯ ಐಎನ್‍ಎಸ್ ವಿಕ್ರಾಂತ್‍‍ ಕುರಿತ ತೀರ್ಪನ್ನು ತಡೆ ಹಿಡಿದಿದೆ. ಭಾರತೀಯ ನೌಕಾದಳದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಯುದ್ಧವೊಂದರಲ್ಲಿ ನಿರ್ಣಾಯಕ ಪಾತ್ರ ವಹಿಸಿ ಗೆಲುವು ತಂದುಕೊಟ್ಟ ಐಎನ್‍ಎಸ್ ವಿಕ್ರಾಂತ್‍ನ ಬದುಕಲ್ಲಿ ಬಹಳಷ್ಟು ನಡೆದು ಹೋಗಿದೆ. ಒಮ್ಮೆ ಅದರ ಜಾತಕ ನೋಡಿಬಿಡೋಣ ಬನ್ನಿ.



ಎಚ್‍ಎಮ್‍ಎಸ್ ಹರ್ಕ್ಯುಲಿಸ್ ಎಂಬ ಜನ್ಮನಾಮದೊಂದಿಗೆ 1943ರ ನವೆಂಬರ್ 12ರಂದು ಬ್ರಿಟನ್ನಿನಲ್ಲಿ ಅಸ್ತಿತ್ವಕ್ಕೆ ಬಂದ ಈ ಯುದ್ಧನೌಕೆ ಎರಡನೆಯ ಮಹಾಯುದ್ಧದ ಕಾರಣದಿಂದ ನಿರೀಕ್ಷಿತ ವೇಗದಲ್ಲಿ ಪೂರ್ಣಗೊಳ್ಳಲಿಲ್ಲ. ನಂತರ ಭಾರತ ಇದನ್ನು 1957ರಲ್ಲಿ ವಿಕ್ರಾಂತ್ ಎಂಬ ಹೆಸರಿನಲ್ಲಿ ದತ್ತು ಪಡೆಯಿತು. ಆಗ ಭಾರತೀಯ ಹೈ ಕಮಿಷನರ್ ಆಗಿದ್ದ ವಿಜಯಲಕ್ಷ್ಮಿ ಪಂಡಿತ್ ಅವರು ಇದನ್ನು ಸೇನೆಗೆ ಹಸ್ತಾಂತರಿಸಿದ್ದು 1961ರ ಮಾರ್ಚ್ ನಾಲ್ಕರಂದಾದರೆ ಇದು ಅಧಿಕೃತವಾಗಿ ನೌಕಾದಳಕ್ಕೆ ಸೇರ್ಪಡೆಗೊಂಡಿದ್ದು 1961ರ ನವೆಂಬರ್ ಮೂರರಂದು. ಮರು ವರ್ಷವೇ ನಡೆದ ಭಾರತ-ಚೀನಾದ ಘನಘೋರ ಕದನ ಕಂಡು ನಮ್ಮ ಅಂದಿನ ಪುಕ್ಕಲು ಪ್ರಧಾನಿ ಎಷ್ಟು ವಿಚಲಿತರಾಗಿದ್ದರೆಂದರೆ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನೆಲ್ಲ ವಾಪಸ್ ಕರೆಸಿಕೊಂಡುಬಿಟ್ಟರು. ಪರಿಣಾಮ, ಚೀನ ನಮ್ಮನ್ನು ತರಿದು ಹಾಕಿತು. ಮತ್ತೆ 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧವಾದಾಗಲೂ ನಮ್ಮ ನೌಕಾಪಡೆಗೆ ಸುಮ್ಮನಿರುವಂತೆ ಆದೇಶಿಸಲಾಯಿತು. ಬಂದರಿನಲ್ಲಿ ಲಂಗರು ಹಾಕಿಸಿಕೊಂಡು ಕುಳಿತ ವಿಕ್ರಾಂತ್ ಇದನ್ನೆಲ್ಲ ಸುಮ್ಮನೆ ನೋಡುತ್ತಿತ್ತು! ಆದರೆ 1971ರಲ್ಲಿ ಮತ್ತೆ ಪಾಕಿಸ್ತಾನ ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಾಗ ಮೊತ್ತ ಮೊದಲ ಬಾರಿಗೆ ಸರಿಯಾದ ರಣತಂತ್ರ ರೂಪಿಸುವ ಅಗತ್ಯವನ್ನು ನಮ್ಮ ನಾಯಕರು ಮನಗಂಡರು. ಸ್ಪಷ್ಟ ರೂಪು-ರೇಷೆಯೊಂದಿಗೆ ಕಣಕ್ಕಿಳಿಯುವಂತೆ ಸೂಚಿಸಿದ ಇಂದಿರಾ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನಗಳನ್ನು ಜಲಮಾರ್ಗದಲ್ಲಿ ಕಟ್ಟಿಹಾಕುವಂತೆ ನೌಕಾಪಡೆಗೆ ಸೂಚಿಸಿದರು.

ಆಗ ಕ್ಯಾಪ್ಟನ್ ಸ್ವರಾಜ್ ಪ್ರಕಾಶ್‍ರ ನೇತೃತ್ವದಲ್ಲಿ ಹೊರಟಿತು ನೋಡಿ ಐಎನ್ಎಸ್ ವಿಕ್ರಾಂತ್!

ಅಂದಿನ ಕಾಲಕ್ಕೆ ಭಾರತದ ಬಳಿಯಿದ್ದ ಅತ್ಯುನ್ನತ ಹಾಗೂ ಅತಿದೊಡ್ಡ ಯುದ್ಧನೌಕೆ ಇದೊಂದೆ! ಎಲ್ಲವೂ ಸರಿಯಾಗಿದ್ದಿದ್ದರೆ, ನೇರವಾಗಿ ಕರಾಚಿಯನ್ನೇ ಮುತ್ತಿಬಿಡುವ ಇರಾದೆಯಿತ್ತು ನಮ್ಮ ಸೇನೆಗೆ. ಆದರೆ ತಾಂತ್ರಿಕ ದೋಷದಿಂದಾಗಿ ಒಂದು ಬಾಯ್ಲರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ವಿಕ್ರಾಂತ್‍ ರಿಪೇರಿಗೆ ಬಂದಿತ್ತು. ಯುದ್ಧಕ್ಕೆ ಸನ್ನದ್ಧವಾಗಲು ಅದಕ್ಕೆ ಒಂದು ವರ್ಷವಾದರೂ ಹಿಡಿಯುವುದೆಂದು ಅಂದಾಜಿಸಲಾಗಿತ್ತು. ತುರ್ತು ಪರಿಸ್ಥಿತಿ ಬಂದೊದಗಿದ್ದರಿಂದ ಅವಸರದ ತೇಪೆ ಹಚ್ಚಲಾಯಿತಾದರೂ ಹೊಡೆತ ಬಿದ್ದದ್ದು ಅದರ ಕ್ಷಿಪ್ರಗತಿಯ ಚಲನೆಗೆ! ಆದರೂ ಯುದ್ಧ ಶುರುವಾದ ದಿನ, ಅಂದರೆ ಡಿಸೆಂಬರ್ ನಾಲ್ಕರಂದು, ಪೂರ್ವ ಪಾಕಿಸ್ತಾನದ ಬಂದರುಗಳನ್ನು ಧ್ವಂಸಮಾಡುವ ಗುರಿಯೊಂದಿಗೆ ಅಂಡಮಾನ್-ನಿಕೋಬಾರ್ ದ್ವೀಪಸಮೂಹಗಳ ಬಂದರಿನಿಂದ ಮುನ್ನಡೆಯಿತು ವಿಕ್ರಾಂತ್.

ಪಾಕಿಸ್ತಾನಕ್ಕೆ ಮೊದಲಿನಿಂದಲೂ ವಿಕ್ರಾಂತ್‍ನ ಮೇಲೊಂದು ಕಣ್ಣಿದ್ದೇ ಇತ್ತು. 1965ರ ಯುದ್ಧದಲ್ಲೇ ತಾನು ಅದನ್ನು ಮುಳುಗಿಸಿಬಿಟ್ಟಿದ್ದೇನೆಂದು ಎಲ್ಲೆಡೆ ಡಂಗುರ ಸಾರಿಕೊಂಡು ಬಂದಿದ್ದ ಪಾಕಿಸ್ತಾನ ತನ್ನ ಮಾತನ್ನು ಈಗಲಾದರೂ ನಿಜ ಮಾಡಿಕೊಳ್ಳುವ ಹವಣಿಕೆಯಲ್ಲಿ ಜಲಾಂತರ್ಗಾಮಿ ಯುದ್ಧನೌಕೆ ಪಿಎನ್‍ಎಸ್ ಘಾಜಿಯನ್ನು ಸದ್ದಿಲ್ಲದೆ ವಿಕ್ರಾಂತ್‍ನೆಡೆಗೆ ತೇಲಿಬಿಟ್ಟಿತು. ಪಾಪ, ಅದರ ಕನಸು ನನಸಾಗಲೇ ಇಲ್ಲ. ವಿಶಾಖಪಟ್ಟಣವನ್ನೂ ತಲುಪುವ ಮೊದಲೇ ನಮ್ಮ ಇನ್ನೊಂದು ಯುದ್ಧ ನೌಕೆ ಐಎನ್‍ಎಸ್ ರಜಪೂತ್ನ ದಾಳಿಯಿಂದ ಸಮುದ್ರ ತಳದಲ್ಲೇ ತುಂಡಾಯಿತು ಘಾಜಿ. ಮುನ್ನಡೆದ ವಿಕ್ರಾಂತ್ ಚಿತ್ತಗಾಂಗ್‍ಗೆ ಹತ್ತಿರವಾಗುತ್ತಿದ್ದಂತೆ ಅದರ ಮೇಲೆ ರೆಕ್ಕೆ ಹರಡಿ ಕುಳಿತ ವಾಯುಸೇನೆಯ ಎಂಟು ಸೀ ಹಾಕ್  ವಿಮಾನಗಳು ಆಕಾಶಕ್ಕೆ ಚಿಮ್ಮಿದವು. ಮೊದಲ ಬಲಿ ಕಾಕ್ಸ್ ಬಜಾರ್ ಬಂದರು. ನಂತರ ಧೂಳಿಪಟವಾಗಿದ್ದು ಖುಲ್ನ. ನೋಡನೋಡುತ್ತಿದ್ದಂತೆ ಚಿತ್ತಗಾಂಗ್ ಬಂದರೂ ಪೂರ್ಣ ಧ್ವಂಸ! ಆರು ದಿನಗಳ ಅವಿರತ ಹೋರಾಟದ ಫಲವಾಗಿ ಪೂರ್ವ ಪಾಕಿಸ್ತಾನದ ಹಡಗು ಯುದ್ಧನೌಕೆಗಳೆಲ್ಲ ಹೇಳ ಹೆಸರಿಲ್ಲದಂತಾದವು. ಮತ್ತೊಂದೆಡೆ ಕರಾಚಿಯನ್ನು ಗುರಿಯಾಗಿಸಿ ಹೊರಟ ಪಶ್ಚಿಮ ನೌಕಾ ನೆಲೆಯ ಕ್ಷಿಪಣಿ ದೋಣಿಗಳು ನಿರೀಕ್ಷಿಸಿದ್ದಂತೆಯೇ ಅದನ್ನೂ ಕೈವಶ ಮಾಡಿಕೊಂಡವು. ಎಡ-ಬಲಗಳೆರಡೂ ಕಟ್ಟಿ ಹಾಕಲ್ಪಟ್ಟ ಪಾಕಿಸ್ತಾನದ ಜಲಮಾರ್ಗ ಪೂರ್ಣವಾಗಿ ಭಾರತದ ಕೈವಶವಾಯಿತು. ಪಾಕಿಸ್ತಾನ ಒಂದು ಹಡಗನ್ನೂ ನೀರಿಗಿಳಿಸಲಾಗಲಿಲ್ಲ. ಯಾವ ಮಿತ್ರರೂ ಅದರ ಸಹಾಯಕ್ಕೆ ಧಾವಿಸುವುದೂ ಆಗಲಿಲ್ಲ. ಕೆಲವೇ ದಿನಗಳಲ್ಲಿ ಸುಮಾರು 90 ಸಾವಿರ ಯೋಧರ ಶರಣಾಗತಿಯೊಂದಿಗೆ ಸೋಲೊಪ್ಪಿಕೊಂಡಿತು. ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯ ಯುದ್ಧಗಳಲ್ಲೊಂದು ಎಂದು ಪರಿಗಣಿಸುವ ಇದು ನಡೆದದ್ದು ಒಟ್ಟು 13 ದಿನಗಳು ಮಾತ್ರ. ಶತ್ರುವನ್ನು ಸದೆಬಡಿಯುವಲ್ಲಿ ಮಹತ್ವದ ಪಾತ್ರ ವಹಿಸಿದ ವಿಕ್ರಾಂತ್ ತನ್ನ ತಂಡಕ್ಕೆ ಗಳಿಸಿಕೊಟ್ಟ ಕೀರ್ತಿ ಎಷ್ಟು ಗೊತ್ತೇ? 2 ಮಹಾವೀರ ಹಾಗೂ 12 ವೀರ ಚಕ್ರಗಳು! ಪರಿಣಾಮ, ಸೇನಾಧಿಕಾರಿಗಳ ಹಾಗೂ ಜನರ ಕಣ್ಮಣಿಯಾಗಿಬಿಟ್ಟಿತು. ಆಗಬೇಕಾದ್ದೇ. ಕುಳಿತು ಓದುವ ನಮಗೇ ಇಷ್ಟು ರೋಮಾಂಚನವಾಗಬೇಕಾದರೆ ದಿನಗಟ್ಟಲೆ ಅದರೊಂದಿಗೇ ಒಡನಾಡಿದ , ಅಭೂತಪೂರ್ವ ವಿಜಯವೊಂದರ ರೂವಾರಿಯಾದ ಅದರ ಬಗ್ಗೆ ನಮ್ಮ ಸೇನಾಧಿಕಾರಿಗಳಿಗೆ ವಿಶೇಷ ಮಮತೆ ಇರಬೇಕಾದ್ದು ಸಹಜವೇ ಅಲ್ಲವೇ?

ಯುದ್ಧದ ನಂತರವೂ ನೂರಾರು ಯೋಧರ ತರಬೇತಿಗೆ ಬಳಕೆಯಾದ ವಿಕ್ರಾಂತ್ 1997ರಲ್ಲಿ ಅಧಿಕೃತವಾಗಿ ಸೇನೆಯಿಂದ ನಿವೃತ್ತವಾಯಿತು. ಅದರ ಪ್ರಸಿದ್ಧಿ ಹಾಗೂ ಅದರೊಡನೆ ಬೆಸೆದುಕೊಂಡಿದ್ದ ಬಂಧದಿಂದಾಗಿ ಸೇನಾಧಿಕಾರಿಗಳು ಹಾಗೂ ಜನಸ್ತೋಮ ವಿಜಯದ ಸ್ಮರಣಾರ್ಥ ಅದನ್ನೊಂದು ಸ್ಮಾರಕವನ್ನಾಗಿ ಮಾರ್ಪಡಿಸುವ ಬೇಡಿಕೆಯನ್ನಿಟ್ಟವು. ಇಷ್ಟು ಹೊತ್ತಿಗೆ ಮುಂಬಯಿಯ ಪಶ್ಚಿಮ ನೌಕಾ ವಲಯ ಸೇರಿದ್ದ ವಿಕ್ರಾಂತ್‍ನ ಕುರಿತ ನಿರ್ಣಯ ಸಹಜವಾಗಿಯೇ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ನಾರಾಯಣ ರಾಣೆಯವರ ಹೆಗಲೇರಿತು. ತಾರಮ್ಮಯ್ಯ ಎಂದು ಕೈಯಾಡಿಸಿಬಿಟ್ಟರು ರಾಣೆ. ಮತ್ತ್ಯಾರ ಬೆನ್ನು ಬೀಳುವುದು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ಕಾರ್ಗಿಲ್ ಕದನ ಶುರುವಾಯಿತು. ಆ ಅಧ್ಯಾಯ ಮುಗಿಯುವ ಹೊತ್ತಿಗೆ ಬಾಳಾ ಠಾಕ್ರೆಯವರು ಆಸಕ್ತಿ ತೋರಿಸಿದರೂ ಸ್ಮಾರಕದ ಕನಸು 2001ರಲ್ಲಿ  ನನಸಾಗಿದ್ದು ತಾತ್ಕಾಲಿಕವಾಗಿ ಮಾತ್ರ. ಆಗ ವಿಕ್ರಾಂತ್ ಜನರ ವೀಕ್ಷಣೆಗೆ ಮುಕ್ತವಾಗಿ ಲಭ್ಯವಾಯಿತು. ವಿಪರ್ಯಾಸ ನೋಡಿ. ಜನರಿಂದ ಉತ್ತಮ ಪ್ರತಿಕ್ರಿಯೆಯೇನೋ ದೊರೆಯಿತು ಆದರೆ ಉದ್ಯಮ ವರ್ಗದ ಕುಳಗಳ್ಯಾರೂ ಇತ್ತ ತಿರುಗಿಯೂ ನೋಡಲಿಲ್ಲ. ಸೂಕ್ತ ಪ್ರಾಯೋಜಕರಿಲ್ಲದೆ ಹಣಕಾಸಿನ ನೆರವಿಲ್ಲದೆ ಸೊರಗತೊಡಗಿತು ವಿಕ್ರಾಂತ್‍ನ ದೈತ್ಯ ಶರೀರ. 2010ರ ಹೊತ್ತಿಗೆ ಪರಿಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ಸ್ಮಾರಕವನ್ನು ಮುಚ್ಚಲಾಯಿತು. ಕೊನೆಗೆ 2013ರಲ್ಲಿ ನಿರ್ವಹಣಾ ವೆಚ್ಚ ಸಾಲದೆ, ಅನ್ಯ ಮಾರ್ಗವಿಲ್ಲದೆ ಹರಾಜಿನ ಹೊಸ್ತಿಲಿಗೆ ಬಂದು ನಿಂತಿತು ವಿಕ್ರಾಂತ್‍!

ಇದನ್ನು ನಮ್ಮ ಅಖಂಡತೆಯ, ಸ್ವಾಭಿಮಾನದ ಪ್ರತೀಕವೆಂದು ಭಾವಿಸಿದ್ದ, ಮುಂಬೈನ ಕಿರಣ್ ಪೈಗಾಣ್‍ಕರ್ ಎಂಬ ಶ್ರೀಸಾಮಾನ್ಯರೊಬ್ಬರು ಸಮಿತಿಯೊಂದನ್ನು ರಚಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದರು. ಇದರಿಂದ ಪ್ರಯೋಜನವೇನಾದರೂ ಆಯಿತಾ? ಇಲ್ಲ. ಸರ್ಕಾರ ಹಾಗೂ ನೌಕಾದಳ ಎರಡೂ ದುಡ್ಡಿಲ್ಲವೆಂದು ಕೈಚೆಲ್ಲಿದ್ದರಿಂದ ವಿಧಿಯಿಲ್ಲದೆ 2014ರ ಜನವರಿಯಲ್ಲಿ ಮುಂಬೈ ನ್ಯಾಯಾಲಯ ಹರಾಜಿನ ತೀರ್ಮಾನಕ್ಕೆ ಸಮ್ಮತಿಯ ಅಂತಿಮ ಮುದ್ರೆಯನ್ನೊತ್ತಿತು.

ಅಂತರ್ಜಾಲದಲ್ಲಿ ನಡೆದ ಹರಾಜಿನಲ್ಲಿ ವಿಕ್ರಾಂತ್ ಹರಾಜಾಗಿದ್ದು 63.2 ಕೋಟಿ ರುಪಾಯಿಗಳಿಗೆ! ಕೊಂಡದ್ದು ಭಾವನಗರದಲ್ಲಿರುವ ಅಲಾಂಗ್ ಶಿಪ್ ಬ್ರೇಕರ್ಸ್ ಎಂಬ ಸಂಸ್ಥೆ. ಗೋವುಗಳು ಕಸಾಯಿಖಾನೆಗೆ ಹೋದರೆ ಆಗುವ ಕಥೆಯೇ ವಿಕ್ರಾಂತ್ ಅಲಾಂಗ್‍ಗೆ ಹೋದರೆ ಆಗುತ್ತಿತ್ತು. ಸ್ಮಾರಕವಾಗಿ ನಿಲ್ಲಬೇಕಾದ ಯುದ್ಧನೌಕೆ ಒಂದೊಂದೇ ಭಾಗವನ್ನು ಮುರಿಸಿಕೊಂಡು ಕಳಚಿ ಬೀಳುವುದನ್ನು ಸಹಿಸದ ಆನಂದ್ ಖಾರ್ಡೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಿ ಜನರ ಸಹಿ ಸಂಗ್ರಹಣೆ ಶುರು ಮಾಡಿದರು. ಆಗ ನಡೆಯಿತು ನೋಡಿ ಪವಾಡ! ಜನರ ಒತ್ತಡಕ್ಕೆ ಮಣಿದ ಸರ್ವೋಚ್ಚ ನ್ಯಾಯಾಲಯ ಮೇ 5ರ ತನ್ನ ತೀರ್ಪಿನಲ್ಲಿ ವಿಕ್ರಾಂತ್‍‍ನನ್ನು ಶಿಪ್ ಬ್ರೇಕರ್ಸ್ ಸಂಸ್ಥೆಗೆ ಹಸ್ತಾಂತರಿಸದಿರಲು ನಿರ್ಧರಿಸಿತು. ಏಕೆಂದರೆ ವಿಕ್ರಾಂತ್‍ನ ಪರವಾಗಿ ಸುಮಾರು 12,000ಕ್ಕೂ ಹೆಚ್ಚಿನ ಮಂದಿ ನಿಂತಿದ್ದರು. ಹಾಗೆ ನೋಡಿದರೆ 125 ಕೋಟಿಯ ಮುಂದೆ ಜುಜುಬಿ 12 ಸಾವಿರ ಯಾವ ಲೆಕ್ಕ ಅಲ್ಲವೇ? ಸಮಾಧಾನವೆಂದರೆ ಅಂತಿಮ ತೀರ್ಪು ಹೊರಬರಲಿರುವುದು ಜುಲೈನಲ್ಲಿ. ಈಗ ಖಾರ್ಡೆ ಮತ್ತವರ ತಂಡ ಮತ್ತೆ ಕಾರ್ಯೋನ್ಮುಖವಾಗಿದೆ. ಹೇಗಾದರೂ ಮಾಡಿ ಅಗತ್ಯವಿರುವ ಹಣಕಾಸಿನ ಬೆಂಬಲ ಗಿಟ್ಟಿಸಲೇಬೇಕೆಂಬ ಹಟಕ್ಕೆ ಬಿದ್ದಿದೆ.

ಇದೆಲ್ಲದರ ನಡುವೆ ಮೊನ್ನೆಯಷ್ಟೇ ಮೋದಿಯವರು ವಿಕ್ರಮಾದಿತ್ಯನನ್ನು ದೇಶಕ್ಕೆ ಅರ್ಪಿಸಿದ್ದಾರೆ. ವಿಕ್ರಾಂತನಿಗೆ ಹೋಲಿಸಿದರೆ ವಿಕ್ರಮಾದಿತ್ಯ ಅತೀವ ಬಲಶಾಲಿ. 45,000 ಟನ್ ತೂಕದ ಇದು ಮಿಗ್-29ಕೆ ಸೇರಿದಂತೆ 34 ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲುದು. ಅತ್ಯಂತ ಸುಸಜ್ಜಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ. ಇದರ ಸಾಮರ್ಥ್ಯ ಬೇರೆ ರಾಷ್ಟ್ರಗಳ ಜಂಘಾಬಲವನ್ನು ಎಷ್ಟು ಉಡುಗಿಸಿದೆಯೆಂದರೆ, ಕಳೆದ ನವೆಂಬರ್‍ನಲ್ಲಿ ರಷ್ಯಾದಲ್ಲಿ ಪರೀಕ್ಷೆಗೊಳಪಟ್ಟಿದ್ದಾಗ ನೇಟೊ ರಾಷ್ಟ್ರಗಳ ವಿಮಾನವೊಂದು ಸದ್ದಿಲ್ಲದೆ ಬಂದು ಇದರ ನೆತ್ತಿಯ ಮೇಲೆ ಹಾರಾಡಿತ್ತು. ತಕ್ಷಣವೇ ಬೆನ್ನು ಹತ್ತಿದ ರಷ್ಯಾದ ಮಿಗ್ 29ಕೆ ವಿಮಾನದ ಕೈಗೆ ಸಿಗದೆ ಹಾಗೇ ಪರಾರಿಯೂ ಆಯಿತು! ನಿಜ, ಒಂದಿಲ್ಲೊಂದು ಕಾರಣ ಕೊಟ್ಟು ಚೀನಾ ನಮ್ಮನ್ನು ಸುತ್ತುವರಿದಿರುವ ಈ ಹೊತ್ತಿನಲ್ಲಿ ನಮಗೆ ವಿಕ್ರಮಾದಿತ್ಯನ ಅಗತ್ಯ ಬಹಳವಿದೆ. ಇಂಥ ನೌಕೆ ನಮ್ಮದಾಗಿರುವ ಹೆಮ್ಮೆಯೂ ಇದೆ. ಹಾಗೇ ವಿಕ್ರಾಂತನನ್ನು ಉಳಿಸಿಕೊಳ್ಳುವ ಅಗತ್ಯವೂ ಇದೆ. ಐತಿಹ್ಯವಿರಲಿ ಬಿಡಲಿ, ತೀರಾ ಮಾಮೂಲಿ ಎನಿಸುವಂಥದ್ದನ್ನೆಲ್ಲ ಸ್ಮಾರಕದ ನೆಪದಲ್ಲಿ ಜೋಪಾನ ಮಾಡುವ, ಅತಿಯಾದ ಪ್ರಚಾರದಿಂದ ಪ್ರವಾಸಿಗಳನ್ನು ಸೆಳೆಯುವ ಪಾಶ್ಚಾತ್ಯ ರಾಷ್ಟ್ರಗಳನ್ನು ನಾವು ಈ ವಿಷಯದಲ್ಲಿ ಅನುಕರಿಸಲೇಬೇಕಿದೆ.

ನಮ್ಮ ಕಾರು, ಬೈಕು, ಮನೆಗಳನ್ನು ಅಸಾಧ್ಯ ಪ್ರೀತಿಸುತ್ತೇವೆ. ಸಾಕಿದ ನಾಯಿ ಬೆಕ್ಕುಗಳು ಸತ್ತರೆ ವರ್ಷಗಟ್ಟಲೆ ಅಳುತ್ತೇವೆ. ಹೆಮ್ಮೆಯ ಪ್ರತೀಕವಾದ ವಿಕ್ರಾಂತ್‍ನನ್ನು ತಬ್ಬಲಿಯಂತೆ ಗುಜರಿ ಅಂಗಡಿಗೆ ಕಳಿಸಿಬಿಡೋಣವೇ? ತಾಯಿ ಭಾರತಿಗೆ ನಾವಿಷ್ಟು ಜನ ಭಾರವಲ್ಲ. ಅವಳನ್ನು ರಕ್ಷಿಸಿದ, 20,000 ಟನ್ ತೂಕದ ವಿಕ್ರಾಂತ್ ನಮಗೆ ಭಾರವೇ? ನಾನು ನನ್ನದು ಎಂಬ ಸ್ವಾರ್ಥದ ಪರಿಧಿಯಲ್ಲಿ ಸೇರಿಸಿಕೊಂಡಾಗ ಮಾತ್ರ ವಿಕ್ರಾಂತ್ ಉಳಿಯಬಲ್ಲ. ನಿರ್ಧಾರ ನಮಗೇ ಬಿಟ್ಟದ್ದು!

Wednesday, 11 June 2014

ಹದಿಮೂರರ ಪೋರಿಯೂ ನಮಗೆ ಬದುಕು ಕಲಿಸಬಲ್ಲಳು!

ಹದಿಮೂರು ವರ್ಷದ ಚುರುಕು ಹುಡುಗಿಯೊಬ್ಬಳು ಸತತವಾಗಿ ಎರಡು ವರ್ಷಗಳ ಕಾಲ ಹೊರಪ್ರಪಂಚದ ಸಂಪರ್ಕ ಕಡಿದುಕೊಂಡು ತನ್ನ ಕುಟುಂಬದೊಂದಿಗೆ ಅಜ್ಞಾತವಾಸದಲ್ಲಿರಬೇಕಾಗಿ ಬಂದರೆ ಏನಾಗಬಹುದು? ಹಣೆಬರಹವನ್ನು ಹಳಿಯುತ್ತ ದಿನದೂಡಬಹುದು. ತನಗೆ ಈ ದುರ್ಗತಿಯನ್ನು ತಂದಿತ್ತ ದೇವರನ್ನು ಶಪಿಸುತ್ತ ಕಣ್ಣೀರಿಡಬಹುದು ಅಥವಾ ಸುಮ್ಮನೆ ಕೊರಗಿ ಖಿನ್ನತೆಗೊಳಗಾಗಬಹುದು. ಅದೆಲ್ಲ ಬಿಟ್ಟು ತನ್ನ ನೋವು ಸಂಕಟ ತೊಳಲಾಟಗಳನ್ನು, ಆ ದಿನಗಳ ಚಿತ್ರಣವನ್ನು ತನ್ನ ಡೈರಿಯಲ್ಲಿ ಯಥಾವತ್ತಾಗಿ ದಾಖಲಿಸಿಟ್ಟು ಸಾವಿನ ನಂತರವೂ ಸ್ಮರಣೀಯಳಾಗಬಹುದೇ? ವ್ಯತಿರಿಕ್ತ ಪರಿಸ್ಥಿತಿಯನ್ನು ಎಳೆ‍ಎಳೆ‍ಯಾಗಿ ಬಿಡಿಸಿಟ್ಟು, ಸಣ್ಣ-ಪುಟ್ಟದ್ದಕ್ಕೆಲ್ಲ ಧೃತಿಗೆಡುವವರಿಗೆ ಸ್ಫೂರ್ತಿಯಾಗಿ ವಿಶ್ವಕ್ಕೇ ಮಾನವೀಯತೆಯ ಪಾಠ ಕಲಿಸುವ ಗುರುವಾಗಬಹುದೇ? ಹೌದು ಎನ್ನುತ್ತದೆ ಇತಿಹಾಸ. ತನ್ನ ಪುಟ್ಟ ಬದುಕನ್ನು ಡೈರಿಯ ಪುಟಗಳಲ್ಲಿ ಸ್ಫುಟವಾಗಿ ಬರೆದಿಟ್ಟು, ಸತ್ತ ಮೇಲೂ ತನ್ನ ಬರಹದಿಂದಲೇ ಬದುಕಿರುವ ಈ ಬಾಲೆಯ ಹೆಸರು 'ಆನ್ ಫ್ರ್ಯಾಂಕ್'.

ಆನ್ ಹುಟ್ಟಿದ್ದು 1929ನೇ ಇಸವಿಯ ಜೂನ್ 12ರಂದು, ಜರ್ಮನಿಯ ಫ್ರಾಂಕ್‍ಫರ್ಟ್ ಎಂಬಲ್ಲಿ. ಅಪ್ಪ ಓಟ್ಟೊ ಫ್ರ್ಯಾಂಕ್, ಅಮ್ಮ ಎಡಿತ್ ಹಾಗೂ ಅಕ್ಕ ಮಾರ್ಗೋಟ್‍ರನ್ನೊಳಗೊಂಡ ಸಣ್ಣ ಯಹೂದಿ ಕುಟುಂಬ ಇವರದ್ದು. ಅಪ್ಪ ಪುಸ್ತಕ ಪ್ರಿಯನಾದ್ದರಿಂದ ಮನೆಯಲ್ಲೇ ದೊಡ್ಡ ಗ್ರಂಥಾಲಯವಿತ್ತು. ಮಕ್ಕಳಿಗೂ ಪುಸ್ತಕಗಳನ್ನು ಓದಲು ಬಹಳ ಉತ್ತೇಜನವಿತ್ತು. 'ಆನ್‍'ಗೆ  ನಾಲ್ಕು ವರ್ಷಗಳಾಗುವವರೆಗೂ ಎಲ್ಲ ಮಾಮೂಲಾಗಿಯೇ ಇತ್ತು. ಆದರೆ 1933ರ ಮಾರ್ಚ್ 13ರಂದು ನಡೆದ ಚುನಾವಣೆಯಲ್ಲಿ ಹಿಟ್ಲರ್‍ನ ನಾಜಿ ಪಕ್ಷ ಗೆದ್ದೊಡನೆ ಯಹೂದಿಗಳಲ್ಲಿ ಸಣ್ಣ ಸಂಚಲನ ಶುರುವಾಯಿತು. ಚಾನ್ಸೆಲರ್ ಆಗಿ ನಿಯುಕ್ತನಾದ ಹಿಟ್ಲರ್ ನಿರೀಕ್ಷಿಸಿದ್ದಂತೆಯೇ ದೌರ್ಜನ್ಯಕ್ಕಿಳಿದ. ಅವನು ಮಾಡಿದ ಮೊತ್ತ ಮೊದಲ ಕೆಲಸ Concentration Camp ಎಂದು ಕರೆಯಲ್ಪಡುತ್ತಿದ್ದ ಸಮರ ಶಿಬಿರ(ಯುದ್ಧದ ಸೆರೆಯಾಳುಗಳನ್ನು ಕೂಡಿಡುವ ಶಿಬಿರ)ಗಳನ್ನು ಶುರುಮಾಡಿ ಒಂದು ವರ್ಷದಲ್ಲೇ ಸುಮಾರು 45 ಸಾವಿರ ಜನರನ್ನು ಅಲ್ಲಿಗೆ ದೂಡಿದ್ದು. ಆಗ ಜರ್ಮನಿಯನ್ನು ತೊರೆದ ಸುಮಾರು 3 ಲಕ್ಷ ಯಹೂದಿ ಕುಟುಂಬಗಳಲ್ಲಿ 'ಆನ್‍'ಳ ಕುಟುಂಬವೂ ಸೇರಿತ್ತು.

ಹೀಗೆ ಜರ್ಮನಿ ಬಿಟ್ಟು ಆಶ್ರಯ ಹುಡುಕಿಕೊಂಡು ಹೊರಟ ಈ ಕುಟುಂಬ ನೆಲೆ ಕಂಡುಕೊಂಡದ್ದು ಹಾಲೆಂಡ್‍ನಲ್ಲಿ. ಐದಾರು ವರ್ಷಗಳು ನೆಮ್ಮದಿಯಾಗಿ ಉರುಳಿದ್ದವೇನೋ, 1940ರ ಮೇ ತಿಂಗಳಿನಲ್ಲಿ ಹಾಲೆಂಡ್‍ನ ಮೇಲೆ ದಾಳಿ ನಡೆಸಿದ ಹಿಟ್ಲರ್‍ನ ಸೈನ್ಯ ಅದನ್ನು ಸುಲಭವಾಗಿ ವಶಪಡಿಸಿಕೊಂಡಿತು. ದುರುಳ ಹಿಟ್ಲರ್‍ನ ಯಹೂದಿ ವಿರೋಧಿ ಚಟುವಟಿಕೆಗಳು ಇಲ್ಲಿಯೂ ಗರಿಗೆದರಿದವು. ಯಹೂದಿಗಳೆಲ್ಲ ಹೆಸರು ನೋಂದಣಿ ಮಾಡಿಸುವುದು ಕಡ್ಡಾಯವಾಯಿತು. ಅಪ್ಪ ಓಟ್ಟೊ ತನ್ನ ಉದ್ಯಮವನ್ನು ಗೆಳೆಯರ ಹೆಸರಿಗೆ ಹಸ್ತಾಂತರಿಸಿದರೆ, ಓದಿನಲ್ಲಿ ಮುಂದಿದ್ದ ಅಕ್ಕ-ತಂಗಿಯರು ತಾವು ಹೋಗುತ್ತಿದ್ದ ಪ್ರತಿಷ್ಠಿತ ಶಾಲೆಗಳನ್ನು ಬಿಟ್ಟು ಯಹೂದಿಯರಿಗೆ ಮೀಸಲಿದ್ದ ಶಾಲೆ ಸೇರಬೇಕಾಯಿತು. ಅಕ್ಕ ಮಾರ್ಗೋಟ್ ತುಂಬಾ ಮೆದು ಸ್ವಭಾವದ ಅಂತರ್ಮುಖಿಯಾಗಿದ್ದರೆ ತಂಗಿ ಆನ್ ವಾಚಾಳಿ ಹಾಗೂ ನಿರ್ಭೀತ ವ್ಯಕ್ತಿತ್ವದವಳಾಗಿದ್ದಳು. ಹಿಟ್ಲರ್‍ನ ಸೇನೆ ಹೇರಿದ್ದ ನೂರೆಂಟು ನಿರ್ಬಂಧಗಳ ನಡುವೆಯೂ ಬದುಕು ಹೇಗೋ ಸಾಗುತ್ತಿತ್ತು. 1943ನೇ ಇಸವಿಯ ಜೂನ್ 12 'ಆನ್‍'ಳ 13ನೆಯ ಹುಟ್ಟುಹಬ್ಬ. ಅಂದು ತಾನು ಬಹಳ ದಿನಗಳಿಂದ ಬಯಸಿದ್ದ ಕೆಂಪು-ಬಿಳಿ ಚೌಕಗಳಿದ್ದ ಆಟೋಗ್ರಾಫ್ ಪುಸ್ತಕವೊಂದನ್ನು ಉಡುಗೊರೆಯಾಗಿ ಪಡೆದಳು. ಅದನ್ನು ಡೈರಿಯಂತೆ ಬಳಸುವ ನಿಶ್ಚಯ ಮಾಡಿ ಪ್ರತಿದಿನ ನಡೆಯುತ್ತಿದ್ದ ಘಟನೆಗಳನ್ನು ದಾಖಲಿಸತೊಡಗಿದಳು. 

ಜುಲೈ 1943ರ ಒಂದು ದುರ್ದಿನ - ಅಕ್ಕ ಮಾರ್ಗೋಟ್‍ಳಿಗೆ ಸಮರ ಶಿಬಿರವೊಂದನ್ನು ಸೇರುವ ನಿರ್ದೇಶನ ಬಂದಿತ್ತು. ಕ್ರೌರ್ಯದ ಪರಾಕಾಷ್ಠೆಯಾಗಿದ್ದ ಈ ಶಿಬಿರಗಳು ಯಹೂದಿಗಳನ್ನು ಜೀತದಾಳುಗಳಾಗಿ ದುಡಿಸಿಕೊಂಡು, ಉಪವಾಸ ಕೆಡವಿ, ದೈಹಿಕವಾಗಿ ಮಾನಸಿಕವಾಗಿ ಚಿತ್ರಹಿಂಸೆ ನೀಡಿ, ಕೆಲವೊಮ್ಮೆ ವಿಷಯುಕ್ತ ಅನಿಲ ತುಂಬಿದ ಕೊಠಡಿಗೆ ತಳ್ಳಿ ಕೊಲ್ಲಲ್ಲೆಂದೇ ನಿರ್ಮಿತವಾಗಿದ್ದವು. ಲ್ಲಿಗೆ ಹೋಗಿ ಸೇರುವುದೆಂದರೆ ಸಾವಿನ ಮನೆಯ ಕದ ತಟ್ಟುವುದೆಂದೇ ಅರಿವಿದ್ದ ಕುಟುಂಬಕ್ಕೆ ಭೂಗತವಾಗದೇ ಬೇರೆ ವಿಧಿಯಿರಲಿಲ್ಲ. ಕೆಲ ಸಹೋದ್ಯೋಗಿಗಳ ನೆರವಿನಿಂದ ಅಡಗುದಾಣವೊಂದನ್ನು ಪತ್ತೆಹಚ್ಚಿದ ಓಟ್ಟೋ ಜುಲೈ ಆರರ ಬೆಳಿಗ್ಗೆ ಮನೆಯವರೊಂದಿಗೆ ಹೊರಟ. ನಾಜಿ ಅಧಿಕಾರಿಗಳ ದಾರಿ ತಪ್ಪಿಸಲು ತಾನು ಸ್ವಿಟ್ಜರ್‍ಲ್ಯಾಂಡ್‍ಗೆ ಹೋಗುತ್ತಿರುವುದಾಗಿ ಚೀಟಿ ಬರೆದಿಟ್ಟ. ಯಹೂದಿಗಳು ಸಾರ್ವಜನಿಕ ವಾಹನಗಳನ್ನು ಬಳಸುವುದು ನಿಷಿದ್ಧವಾಗಿದ್ದರಿಂದ ಎಲ್ಲರೂ ಮೈಲುಗಟ್ಟಲೆ ನಡೆದು ಅಡಗುದಾಣ ತಲುಪಿದರು.

ಹಾಗೆ ಕದ್ದು ಮುಚ್ಚಿ ಬದುಕುವುದೂ ಒಂದು ದೊಡ್ಡ ಸವಾಲೇ ಆಗಿತ್ತು. ಹೊರಗೆ ಅಡ್ಡಾಡುವುದಿರಲಿ, ಕಿಟಕಿ ತೆರೆಯುವ ಹಾಗೂ ಇರಲಿಲ್ಲ. ಸಿಕ್ಕಿಹಾಕಿಕೊಂಡರೆ ಇವರ ಜೀವದ ಜೊತೆಗೆ ಇವರಿಗೆ ಆಶ್ರಯ ನೀಡಿದ್ದ ಓಟ್ಟೋನ ಸಹೋದ್ಯೋಗಿಗಳ ಜೀವಕ್ಕೂ ಅಪಾಯವಿತ್ತು. ಊಟ ತಿಂಡಿಗಳ ವಿಷಯದಲ್ಲೂ ಅಷ್ಟೆ. 'ಗೆಸ್ಟಾಪೊ'(ನಾಜಿ ಅಧಿಕಾರಿ)ಗಳು ಪ್ರತಿ ಮನೆಯನ್ನೂ ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆಂದರೆ ಪ್ರತಿ ತಿಂಗಳು ಕೊಂಡುಕೊಳ್ಳುವ ರೇಷನ್‍ನಲ್ಲಿ ಅನಗತ್ಯ ಹೆಚ್ಚಳವಾದರೆ ನಿಂತ ನಿಲುವಲ್ಲೇ ಮನೆಯಲ್ಲಿ ಎಷ್ಟು ಮಂದಿ ಇದ್ದಾರೆಂಬ ತಪಾಸಣೆಗಿಳಿದುಬಿಡುತ್ತಿದ್ದರು. ಶಂಕೆಗೆ ಸ್ವಲ್ಪವೂ ಆಸ್ಪದ ಕೊಡುವ ಹಾಗಿರಲಿಲ್ಲ. ಆದ್ದರಿಂದ ಅವರು ಮಾಡುವ ಅಡುಗೆಯಲ್ಲೇ ಮಿಗಿಸಿಕೊಟ್ಟದ್ದನ್ನು ಇವರು ಹಂಚಿಕೊಂಡು ತಿನ್ನಬೇಕಿತ್ತು. ಸಾಲದ್ದಕ್ಕೆ ಈ ಗುಂಪಿಗೆ ಇವರ ಹಾಗೇ ಇನ್ನೂ ನಾಲ್ಕು ಜನ ಬಂದು ಸೇರಿದ್ದರು. ಇರಲು ಸರಿಯಾದ ಜಾಗವಿರದೆ, ಹೊಟ್ಟೆ ತುಂಬ ಆಹಾರವಿರದೆ, ಯಾರ ಕಿವಿಗಾದರೂ ಬಿದ್ದರೆ ಎಂಬ ಭೀತಿಯಲ್ಲಿ ಜೋರಾಗಿ ಮಾತನ್ನೂ ಆಡದೆ ಪ್ರತಿ ಕ್ಷಣವನ್ನೂ ಹೆದರುತ್ತಲೇ ಕಳೆಯಬೇಕಾದ ಅನಿವಾರ್ಯತೆ ಬಂದೊದಗಿತ್ತು.

ಇಂಥ ಸನ್ನಿವೇಶದಲ್ಲಿ ಆನ್ ತನ್ನ ಡೈರಿಯೊಡನೆ ಮಾತಿಗಿಳಿದಳು. ತನ್ನ ಒಂಟಿತನ, ಹತಾಶೆ, ಮನೆಯವರೆಲ್ಲರ ಅಸಹಾಯಕತೆ, ಸಂಬಂಧಗಳ ಪರಿಭಾಷೆಗಳೆಲ್ಲ ಅಕ್ಷರಗಳಾಗಿ ಮೂಡಿದವು. ಮಾತುಮಾತಿಗೂ ವ್ಯಗ್ರಳಾಗುತ್ತಿದ್ದ ಅಮ್ಮನನ್ನು ಮೊದಮೊದಲು ತೆಗಳಿದ ಆನ್ ಕೊನೆಗೆ ಅವಳನ್ನು ತೆಗಳಿದ್ದಕ್ಕೆ ತನ್ನ ಮೇಲೇ ಅಸಹ್ಯಪಟ್ಟುಕೊಂಡಳು. ಮನೆಯವರೆಲ್ಲರಲ್ಲೂ ಹಿಂದೆಂದೂ ಇರದ ಸೌಹಾರ್ದ ಸಾಮರಸ್ಯ ಮೂಡಿರುವುದನ್ನು ಗುರುತಿಸಿದಳು. ಕಳೆದು ಹೋಗುತ್ತಿದ್ದ ತನ್ನ ಮಾನಸಿಕ ಸಮತೋಲನ, ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಹೆಣಗುತ್ತಿದ್ದ ರೀತಿಗಳನ್ನೂ ದಾಖಲಿಸಿದಳು. ತನ್ನ ಕುಟುಂಬಕ್ಕೆ ಆಶ್ರಯ ಕೊಟ್ಟಿದ್ದವರು ಬಂದು ಹೇಳುತ್ತಿದ್ದ ನಾಜಿಗಳ ದೌರ್ಜನ್ಯದ ಘಟನೆಗಳನ್ನು ಯಥಾವತ್ತಾಗಿ ಬರೆಯುತೊಡಗಿದಳು.

ತಾನು ಬರೆಯುತ್ತಿರುವ ಡೈರಿ ತನ್ನ ಓದಿಗೆ ಮಾತ್ರ ಸೀಮಿತ ಎಂದು ಮೊದಲು ಭಾವಿಸಿದ್ದ ಅವಳಿಗೆ 1944ರ ಮಾರ್ಚ್ 28ರಂದು ಹಾಲೆಂಡ್‍ನ ಸಚಿವ ಗೆರಿಟ್ ರೇಡಿಯೋದಲ್ಲಿ ಮಾಡಿದ ಭಾಷಣ ಬೇರೆಯ ದಿಕ್ಕನ್ನೇ ತೋರಿಸಿತು. ಅಂದು ಮಾತನಾಡಿದ ಗೆರಿಟ್, 'ಇತಿಹಾಸವನ್ನು ಬರೀ ಸರ್ಕಾರಿ ಕಾಗದ ಪತ್ರಗಳಿಂದ ಬರೆಯಲಾಗುವುದಿಲ್ಲ. ಇಂದು ನಾವು ಅನುಭವಿಸುತ್ತಿರುವುದೆಲ್ಲ ಮುಂದಿನ ಪೀಳಿಗೆಗೆ ಲಭ್ಯವಾಗಬೇಕಾದರೆ ಇದನ್ನು ಸಾಮಾನ್ಯ ಜನರು ಪತ್ರಗಳಲ್ಲಿ, ಡೈರಿಗಳಲ್ಲಿ ದಾಖಲಿಸಿಡಬೇಕು. ಈ ಎಲ್ಲ ಮಾಹಿತಿಯನ್ನೂ ಒಟ್ಟಾಗಿ ಕಲೆ ಹಾಕಿದಾಗ ಮಾತ್ರ ನಮ್ಮ ಹೋರಾಟದ ನಿಜ ಸ್ವರೂಪದ ಚಿತ್ರಣ ಸಿಗುವುದು' ಎಂದರು. ಇದನ್ನು ಕೇಳಿದ ಆನ್ ತನ್ನ ಡೈರಿಯನ್ನು ತನಗೆ ಮಾತ್ರ ಮೀಸಲಿಟ್ಟುಕೊಳ್ಳುವ ವಿಚಾರವನ್ನು ಕೈಬಿಟ್ಟು ಯುದ್ಧಸಂಬಂಧಿ ವಿವರಗಳಿಗೆ ಹೆಚ್ಚು ಮಹತ್ವ ಕೊಟ್ಟಳು. ಹಲವೆಡೆ ಬರೆದದ್ದನ್ನು ತಿದ್ದಿ ಮತ್ತೆ ಬರೆದಳು. ತನ್ನ ಡೈರಿಯ ಪುಟಗಳೆಲ್ಲ ತುಂಬಿದ ಮೇಲೆ ಮತ್ತೆರಡು ನೋಟ್‍ಪುಸ್ತಕಗಳನ್ನೂ ತುಂಬಿಸಿದಳು. ಮುನ್ನೂರಕ್ಕೂ ಮಿಕ್ಕಿ ಬಿಡಿ ಹಾಳೆಗಳಲ್ಲೂ ಬರೆದಳು. ನಾಲ್ಕು ಗೋಡೆಗಳ ಮಧ್ಯೆ ಬಂದಿಯಾದ 14 ವರ್ಷದ ಪೋರಿ ಅಂಥ ಸ್ಥಿತಿಯಲ್ಲಿ ಮತ್ತೇನು ಮಾಡಿಯಾಳು?

1944ರ ಜೂನ್ 6ರಂದು ಬ್ರಿಟನ್ ಸೇನೆ ಜರ್ಮನಿಯ ಸೇನೆಯನ್ನು ಧೊಳೀಪಟ ಮಾಡಿದ್ದನ್ನು ಸಂತಸದಿಂದ ಬರೆದ ಅವಳು ಜುಲೈ 15ರಂದು ಬರೆದದ್ದು ಹೀಗೆ: 'ನನ್ನ ಜೀವನವನ್ನು ಈ ಸಾವು ನೋವುಗಳ ಬುನಾದಿಯ ಮೇಲೆ ಕಟ್ಟಲು ಸಾಧ್ಯವೇ ಇಲ್ಲ. ನಿಧಾನವಾಗಿ ಇಡೀ ಪ್ರಪಂಚ ಪಾಳುಭೂಮಿಯಾಗುತ್ತಿದೆ ಎನಿಸುತ್ತಿದೆ. ನಾವೆಲ್ಲರೂ ನಿರ್ನಾಮವಾಗಿಬಿಡುತ್ತೇವೆ ಎನಿಸುತ್ತಿದೆ. ಆದರೂ ಕೆಲವೊಮ್ಮೆ ಮತ್ತೆ ಎಲ್ಲವೂ ಸರಿ ಹೋಗಲಿದೆ, ಕ್ರೌರ್ಯ ಕಳೆದು ಶಾಂತಿ ನೆಲೆಸಲಿದೆ ಎನಿಸುತ್ತದೆ. ಅಲ್ಲಿಯವರೆಗೂ ನಾನು ಗಟ್ಟಿಯಾಗಿರಬೇಕು. ಬಹುಶಃ ಆ ದಿನವನ್ನೂ ನಾನು ಕಾಣುತ್ತೇನೆ'

ದುರದೃಷ್ಟವಶಾತ್ ಆನ್ ಆ ದಿನವನ್ನು ಕಾಣಲೇ ಇಲ್ಲ. ಯಾರೋ ಅನಾಮಧೇಯರು ಕೊಟ್ಟ ಮಾಹಿತಿಯ ಮೇರೆಗೆ 1944ರ ಆಗಸ್ಟ್ ನಾಲ್ಕರಂದು ಇವರ ಅಡಗುದಾಣದ ಮೇಲೆ ದಾಳಿ ಮಾಡಿದ ಜರ್ಮನ್ ಪೋಲೀಸರು ಎಲ್ಲರನ್ನೂ ಬಂಧಿಸಿ ಯುದ್ಧ ಶಿಬಿರಗಳಿಗೆ ಕರೆದೊಯ್ದರು. ಅಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಗಂಡಸರಿಂದ ಬೇರ್ಪಡಿಸಲಾಯಿತು. 15 ವರ್ಷದೊಳಗಿದ್ದ ಮಕ್ಕಳನ್ನೆಲ್ಲ ಸೀದಾ ವಿಷಾನಿಲ ಕೊಟ್ಟು ಸಾಯಿಸುವ ಕೊಠಡಿಗಳಿಗೆ ರವಾನಿಸಲಾಯಿತು. ಆಗಷ್ಟೇ 15 ತುಂಬಿದ್ದ ಆನ್ ಬಚಾವಾದಳು. ನಂತರದ ದಿನಗಳಲ್ಲಿ ಅಮ್ಮ ಎಡಿತ್ ತನ್ನ ಪಾಲಿನ ಊಟವನ್ನೂ ಮಕ್ಕಳಿಗೇ ಕೊಟ್ಟು ತಾನು ಹಸಿವಿನಿಂದ ಸತ್ತಳು. ಅಕ್ಕ ಮಾರ್ಗೊಟ್ ನಿಶ್ಯಕ್ತಿಯಿಂದ ಸತ್ತರೆ, ಬದುಕುವ ತೀವ್ರ ತುಡಿತವಿದ್ದ ಆನ್ ಸಾಂಕ್ರಾಮಿಕ ರೋಗ 'ಟೈಫಸ್'ಗೆ ಕೊನೆಗೂ ಬಲಿಯಾದಳು. ಇದಾದ ಕೆಲವೇ ವಾರಗಳಲ್ಲಿ ಯುದ್ಧ ಮುಗಿದು ಬ್ರಿಟನ್ ಪಡೆಗಳು ಎಲ್ಲ ಕೈದಿಗಳನ್ನೂ ಬಿಡುಗಡೆಗೊಳಿಸಿದವು. ಹಾಲೆಂಡ್‍ನಿಂದ ಬಂದಿಗಳಾಗಿ ತೆರಳಿದ್ದ ಒಂದು ಲಕ್ಷಕ್ಕೂ ಹೆಚ್ಚು ಯಹೂದಿಗಳಲ್ಲಿ ಉಳಿದವರು ಐದು ಸಾವಿರ ಮಾತ್ರ! ಅದರಲ್ಲಿ ಓಟ್ಟೊ ಫ್ರ್ಯಾಂಕ್‍ನೂ ಒಬ್ಬ. ತಮ್ಮ ಅಡಗುದಾಣಕ್ಕೆ ಹಿಂದಿರುಗಿದ ಅವನು ಮಗಳ ಡೈರಿಯನ್ನು ಮತ್ತು ಸಿಕ್ಕಷ್ಟು ಹಾಳೆಗಳನ್ನು ಒಟ್ಟುಗೂಡಿಸಿ ಅದನ್ನು ಪ್ರಕಟಿಸುವಲ್ಲಿ ಶ್ರಮವಹಿಸಿದ. ಪರಿಣಾಮವೇ - 'ಆನ್ ಫ್ರ್ಯಾಂಕ್: ದ ಡೈರಿ ಆಫ್ ಎ ಯಂಗ್ ಗರ್ಲ್' ಎಂಬ ತಲೆಬರಹದ ಇಂಗ್ಲಿಷ್ ಪುಸ್ತಕ. 



ಮುಂದೆ ಆ ಪುಸ್ತಕ ಹಾಗೂ ಆನ್ ಬಹಳ ಜನಪ್ರಿಯರಾದರು. ಅವಳ ಚಿಂತನಾಶೀಲತೆ, ಜೀವನ ಪ್ರೀತಿ ಹಾಗೂ ವಯಸ್ಸಿಗೆ ಮೀರಿದ ಪ್ರಬುದ್ಧ ಬರವಣಿಗೆ ಜನಸಾಮಾನ್ಯರಿಗಷ್ಟೇ ಅಲ್ಲದೆ ವಿಶ್ವದ ಅನೇಕ ಕವಿಗಳು,ನಾಟಕಕಾರರು ಹಾಗೂ ಜನನಾಯಕರಿಗೆ ಸ್ಫೂರ್ತಿದಾಯಕವೆನಿಸಿದವು. 'ಆನ್'ಳ ಹೆಸರಿನಲ್ಲಿ ಸ್ಥಾಪಿಸಿದ ಸಂಸ್ಥೆಯಿಂದ 1994ರಲ್ಲಿ ಪ್ರಶಸ್ತಿ ಸ್ವೀಕರಿಸುತ್ತಾ ಮಾತನಾಡಿದ ನೆಲ್ಸನ್ ಮಂಡೇಲಾ ತಾವು ಸೆರೆಮನೆಯಲ್ಲಿದ್ದಾಗ ಅವಳ ಪುಸ್ತಕದಿಂದ ಬಹಳ ಪ್ರಭಾವಿತರಾಗಿದ್ದನ್ನು ಸ್ಮರಿಸಿದರು.

ಸರಿಯಾಗಿ ಶಾಲೆಯನ್ನೇ ಮುಗಿಸದಿದ್ದ ಆನ್ ಮತ್ತೆ ಮತ್ತೆ ನೆನಪಾಗುತ್ತಾಳೆ. ಜೂನ್ 12 ಬಂದಾಗ ಮಾತ್ರವಲ್ಲ. ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ವಿದ್ಯಾರ್ಹತೆ ಇಲ್ಲವೆಂಬ ಪುಕಾರು ಎದ್ದಾಗ. ಪರೀಕ್ಷೆಗಳಲ್ಲಿ ಫೇಲಾದ ವಿದ್ಯಾರ್ಥಿಗಳು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಂಡಾಗ. ಖ್ಯಾತ ವಿಶ್ವವಿದ್ಯಾಲಯಗಳ ಪದವೀಧರರು ಧರ್ಮದ ಹೆಸರಿನಲ್ಲಿ ಭಯೋತ್ಪಾದಕರಾದಾಗ. ಸಿಕ್ಕಾಪಟ್ಟೆ ಓದಿಕೊಂಡ ಬುದ್ಧಿವಂತರು ಬುದ್ಧಿಗೇಡಿಗಳ ಹಾಗೆ ವರ್ತಿಸಿದಾಗ ಕೂಡ.

ಕಲಿಯುವ ಸಂಕಲ್ಪ ಮೂಡಬೇಕು - ಉದಾಹರಣೆಗಳಿಗೇನು, ಬೇಕಾದಷ್ಟು ಸಿಗುತ್ತವೆ!

Wednesday, 4 June 2014

ಬುದ್ಧಿಜೀವಿಗಳೇ, ಕಾದು ನೋಡುವುದಲ್ಲದೆ ನಿಮಗೆ ಅನ್ಯ ಮಾರ್ಗವಿಲ್ಲ!

Action and reaction are equal and opposite. ಕ್ರಿಯೆ ಮತ್ತು ಪ್ರತಿಕ್ರಿಯೆಗಳು ವಿರುದ್ಧ ದಿಕ್ಕಿನಲ್ಲಿದ್ದರೂ ಸಮಬಲದಿಂದಿರುತ್ತವೆ. ಇದು ನ್ಯೂಟನ್ನ ಮೂರನೆಯ ನಿಯಮ. ಸುಮಾರು ಮೂರು ಶತಕಗಳಿಗೂ ಹಿಂದೆ, ಅಂದರೆ ಕ್ರಿ.ಶ. 1687ರಲ್ಲಿ ನ್ಯೂಟನ್ ಜಗತ್ತಿಗೆ ಸಾಬೀತುಪಡಿಸಿದ್ದು. ಈಗ 2014ರಲ್ಲಿ ನಾವು ಭಾರತೀಯರು ಈ ನಿಯಮದ ಸತ್ಯಾಸತ್ಯತೆಯನ್ನು ಮತ್ತೆ ಸಾಬೀತುಪಡಿಸಿದ್ದೇವೆ! ಇಲ್ಲಿ ಕ್ರಿಯೆ - ಚುನಾವಣಾ ಪೂರ್ವದಲ್ಲಿ ಇಡೀ ದೇಶದಲ್ಲಿ ಒಂದು ವ್ಯವಸ್ಥಿತ ಜಾಲವು ಮೋದಿಯವರ ಕುರಿತ ಭಯವನ್ನು ಹುಟ್ಟುಹಾಕಿದ್ದು. ಪ್ರತಿಕ್ರಿಯೆ - ಜನಸಾಮಾನ್ಯರು ಆ ಭಯದ ಹುಟ್ಟಡಗಿಸಿ ಮೋದಿಯವರಿಗೆ ಐತಿಹಾಸಿಕ ವಿಜಯ ದೊರಕಿಸಿಕೊಟ್ಟಿದ್ದು. ಒಂದು ವಿಶೇಷವೆಂದರೆ ಪ್ರತಿಕ್ರಿಯೆಯು ಕ್ರಿಯೆಗಿಂತ ಬಹಳ ಪಟ್ಟು ಹೆಚ್ಚಿದೆ, ತೀಕ್ಷ್ಣವಾಗಿದೆ ಹಾಗೂ ಮುಟ್ಟಿ ನೋಡಿಕೊಳ್ಳುವ ಹಾಗಿದೆ! ಈಗ ನ್ಯೂಟನ್ ಬದುಕಿದ್ದರೆ ಬಹಳ ಖುಷಿಪಡುತ್ತಿದ್ದ!

ಹೀಗೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿತ್ತು. ಏಕೆಂದರೆ ಈ ಕ್ರಿಯೆಯನ್ನು ಹುಟ್ಟುಹಾಕಿದವರು ಅಂತಿಂಥವರಲ್ಲ, ಮೂರು ವರ್ಗಗಳಾಗಿ ವಿಂಗಡಿಸಬಹುದಾದ ಘಟಾನುಘಟಿಗಳು. ಒಂದು ವರ್ಗ ರಾಜಕಾರಣಿಗಳದ್ದಾದರೆ ಮತ್ತೊಂದು ಸುದ್ದಿ ಮಾಧ್ಯಮಗಳದ್ದು. ಮೂರನೆಯ ಹಾಗೂ ಅತ್ಯಂತ ಕುಲೀನ(?) ವರ್ಗ ಪ್ರಗತಿಪರರು ಹಾಗೂ ಬುದ್ಧಿಜೀವಿಗಳದ್ದು. ರಾಜಕಾರಣಿಗಳು ಸಿದ್ಧಾಂತ ಭೇದ ಮರೆತು ಒಂದಾದರು. ಮೋದಿಯವರನ್ನು ರಾಕ್ಷಸನೆಂದು ಬಿಂಬಿಸಿ ತಮ್ಮ ಕ್ರಿಯೆಗೆ ಮೊದಲಿಟ್ಟುಕೊಂಡರು. ಇನ್ನು ಸುದ್ದಿ ಮಾಧ್ಯಮದವರು ಹಿಂದೆ ಬೀಳುತ್ತಾರೆಯೇ? ಅಪಸ್ಮಾರ ಇರುವವರಿಗಿಂತ ಹೆಚ್ಚಾಗಿ ದೇಹ ಮನಸಿನ ಸ್ಥಿಮಿತ ಕಳೆದುಕೊಂಡು ಆ ಕ್ರಿಯೆಗೆ ಶಕ್ತಿ ಹಾಗೂ ವೇಗ ತುಂಬಿದರು. ಯಾವ ರಾಷ್ಟ್ರೀಯ ಚಾನೆಲ್ ನೋಡಿದರೂ ಮೋದಿ ಎಂಬ ನರಹಂತಕನ ಗೋಧ್ರಾ ಕಥೆಯೇ. ಇನ್ನುಳಿದವರು ಪ್ರಗತಿಪರರು ಹಾಗೂ ಬುದ್ಧಿಜೀವಿಗಳು. ಇದೊಂಥರಾ ವಿಚಿತ್ರ ತಳಿ. ತಮಗೆ ತಲೆಯಿಂದ ಕಾಲಿನವರೆಗೂ ರಕ್ತ ಮಾಂಸಗಳ ಬದಲು ಬುದ್ಧಿಯೇ ತುಂಬಿಕೊಂಡಿದೆಯೆಂಬ ಭ್ರಾಂತಿಯ ಜನ. ಉಳಿದವರು ಕೇವಲವೆಂಬ ಉದ್ಧಟತನ. ಜೊತೆಗೆ ಇವರ ಆವುಟವನ್ನು ಎಲ್ಲರೂ ಸಹಿಸ ಲೇಬೇಕೆಂಬ ತಿಕ್ಕಲುತನ. ಇವರೂ ಗುಂಪುಕಟ್ಟಿಕೊಂಡು ತಮ್ಮ ಕೈಲಾದಷ್ಟು ‘ಭಯೋತ್ಪಾದನೆ'(ಭಯ+ಉತ್ಪಾದನೆ) ಮಾಡಿದರು.

ಈಗ ಇವರೆಲ್ಲರಿಗೂ ತಕ್ಕ ಪ್ರತಿಕ್ರಿಯೆ ನೀಡಿದ್ದೇವೆ ನೋಡಿ, ಬಾಲ ಮುದುರಿಕೊಂಡು ಸುಮ್ಮನಾಗಿದ್ದಾರೆ. ರಾಜಕಾರಣಿಗಳು ಪರಸ್ಪರ ದೋಷಾರೋಪಣೆಯ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ರಾಜ್‍ದೀಪ್ ಸರ್‍ದೇಸಾಯಿ, ಬರ್ಖಾ ದತ್ ಹಾಗೂ ಅರ್ಣಬ್ ಗೋಸ್ವಾಮಿಯರು ಇಂಗು ತಿಂದ ಮಂಗನ ಮುಖ ಮಾಡಿಕೊಂಡು ವಿಧಿಯಿಲ್ಲದೆ ಮೋದಿ ಸರ್ಕಾರದ ಮೊದಲ ದಿಟ್ಟ ಹೆಜ್ಜೆಗಳ ಸಮಾಚಾರ ಬಿತ್ತರಿಸುತ್ತಿದ್ದಾರೆ. ಕಡೇಪಕ್ಷ ಇವರು ಜನರಿಂದ ಓಡಿಹೋಗುತ್ತಿಲ್ಲ. ತಮ್ಮ ಲೆಕ್ಕಾಚಾರ ತಪ್ಪಾದುದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಈ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ದಂಡಿದೆಯಲ್ಲ, ಇವರ ಪಾಡು ಯಾರಿಗೂ ಬೇಡ. ಅತ್ತ ತಪ್ಪನ್ನು ಒಪ್ಪಿಕೊಳ್ಳಲಾಗದೆ, ಇತ್ತ ಸತ್ಯವನ್ನು ಅಲ್ಲಗಳೆಯಲೂ ಆಗದೆ ಕಾದ ಹೆಂಚಿನ ಮೇಲೆ ಕುಳಿತಂತೆ ಚಡಪಡಿಸುತ್ತಿದ್ದಾರೆ.

ಉದಾಹರಣೆಗೆ ಪ್ರಗತಿಪರರ ಧೀಮಂತ ನಾಯಕಿ 'ಸುಜಾನ ಅರುಂಧತಿ ರಾಯ್' ಫಲಿತಾಂಶ ಸಿಕ್ಕೊಡನೆ ಮಾಡಿದ ಮೊದಲ ಕೆಲಸವೇನು ಹೇಳಿ? ಪಾಕಿಸ್ತಾನದ 'ಡಾನ್' ಪತ್ರಿಕೆಯ ಬಳಿ ಹೋಗಿ 'ನಮಗೆ ಹೀಗೊಂದು ಸಂಪೂರ್ಣ ಬಹುಮತದ ಸರ್ಕಾರ ಸಿಕ್ಕಿಬಿಟ್ಟಿದೆ ಮತ್ತು ವಿರೋಧ ಪಕ್ಷದ ಅಸ್ತಿತ್ವವೇ ಇಲ್ಲ' ಎಂದು ಅಲವತ್ತುಕೊಂಡಿದ್ದು! ಇದೇ ಅರುಂಧತಿ ಕೆಲ ತಿಂಗಳುಗಳ ಹಿಂದೆ ವೆಂಡಿ ಡೋನಿಗರ್‍ಳ ಕೊಳಕು ಪುಸ್ತಕ 'ದಿ ಹಿಂದೂಸ್: ಆನ್ ಆಲ್ಟರ್‍ನೇಟಿವ್ ಹಿಸ್ಟರಿ'ಯನ್ನು ಪೆಂಗ್ವಿನ್ ಪಬ್ಲಿಕೇಷನ್ಸ್ ಭಾರತದಲ್ಲಿ ಹಿಂಪಡೆದಾಗ ರಾದ್ಧಾಂತ ಮಾಡಿಬಿಟ್ಟಿದ್ದಳು. ಪೆಂಗ್ವಿನ್‍ಗೆ ಪತ್ರ ಬರೆದಿದ್ದ ಈಕೆ "ಇನ್ನೂ ಚುನಾವಣೆಗೆ ಕೆಲ ತಿಂಗಳುಗಳು ಮಾತ್ರವೇ ಉಳಿದಿವೆ. ಫ್ಯಾಸಿಸ್ಟ್ ಗಳು ಇನ್ನೂ ಪ್ರಚಾರ ಮಾಡುತ್ತಿದ್ದಾರೆ ಹೊರತು ಅಧಿಕಾರಕ್ಕೆ ಬಂದಿಲ್ಲ. ನೀವು ಇಷ್ಟು ಬೇಗ ಸೋತುಹೋದಿರೇ? ನಾವು ಬರೀ ಹಿಂದುತ್ವಕ್ಕೆ ಪೂರಕವಾದ ಪುಸ್ತಕಗಳನ್ನೇ ಪ್ರಕಟಿಸಬೇಕೇ?’ ಎಂದು ಕೇಳಿದ್ದಳು.

ಕ್ರಿಶ್ಚಿಯನ್ ಅಮ್ಮ ಹಾಗೂ ಹಿಂದು ಅಪ್ಪನ ಈ ಮಿಶ್ರತಳಿಗೆ ಭಾರತವೆಂದರೆ, ವಿಶೇಷವಾಗಿ ಹಿಂದೂಗಳೆಂದರೆ ವಿಪರೀತ ಅಲರ್ಜಿ! ಅದೂ ಯಾವ ಮಟ್ಟದ್ದೆಂದರೆ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕೆಂಬ ಕೂಗಿಗೆ ಈಕೆಯದ್ದು ಮೊದಲಿನಿಂದಲೂ ಮುಕ್ತ ಬೆಂಬಲ. 2008ರ ಆಗಸ್ಟ್ 18 ರಂದು ಶ್ರೀನಗರದಲ್ಲಿ ನಡೆದ ಪ್ರತ್ಯೇಕತಾವಾದಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದಳು. ಈಕೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕೊಡುತ್ತಿರುವ ತಪ್ಪು ಸಂದೇಶವನ್ನು ಆಗಿನ ಕಾಂಗ್ರೆಸ್ ಧುರೀಣರಾಗಿದ್ದ ಸತ್ಯ ಪ್ರಕಾಶ ಮಾಳವೀಯರು ತೀವ್ರವಾಗಿ ಖಂಡಿಸಿದ್ದರು. ಅಷ್ಟಕ್ಕೂ ಈಕೆಗೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಪುಸ್ತಕವನ್ನು ಕ್ಯಾಕರಿಸಿ ಉಗಿದವರಲ್ಲಿ ಮೊದಲಿಗರು ಈಕೆಯ ರಾಜ್ಯ (ಕೇರಳ)ದ ಮುಖ್ಯಮಂತ್ರಿಯಾಗಿದ್ದ ಇ.ಕೆ.ನಯನಾರ್‍ರವರು. ಬೂಕರ್ ಪ್ರಶಸ್ತಿ ಸಮಿತಿಯ ಸದಸ್ಯರಾದ ಕಾರ್ಮೆನ್ ಕ್ಯಾಲಿಲ್‍ರವರೂ ಇದನ್ನು ಅತ್ಯಂತ ಕೆಟ್ಟ ಪುಸ್ತಕ ಎಂದು ಕರೆದಿದ್ದರು. ನಕ್ಸಲರನ್ನು ಬೆಂಬಲಿಸಿದ್ದು, ಸಂಸತ್ತಿನ ಮೇಲೆ ದಾಳಿ ನಡೆಸಿದ ಮಹಮ್ಮದ್ ಅಫ್ಜಲ್‍ನನ್ನು ಯುದ್ಧಕೈದಿ ಎಂದು ವಹಿಸಿಕೊಂಡಿದ್ದು ಈಕೆಯ ಮಹತ್ಸಾಧನೆಗಳಲ್ಲಿ ಕೆಲವು. 2008ರ ಮುಂಬೈ ದಾಳಿಯನ್ನು ಗೋಧ್ರಾ ಘಟನೆಯ ಪರಿಣಾಮ ಎಂದು ಸಾರಿದ ಈಕೆಯ ಪ್ರಕಾರ ಕಾಶ್ಮೀರಿ ಉಗ್ರಗಾಮಿಗಳು, ಪ್ರತ್ಯೇಕತಾವಾದಿಗಳು ಮಾಡುವುದೆಲ್ಲ ಸರಿ.

ಇಂಥ ಹಿನ್ನೆಲೆಯವಳ ಸಾರಥ್ಯದಲ್ಲಿ ಸಲ್ಮಾನ್ ರಶ್ದಿ, ಜಯತಿ ಘೋಷ್, ದೀಪಾ ಮೆಹ್ತಾ ಮುಂತಾದವರೆಲ್ಲ ನೂರಾರು ಊರುಗಳನ್ನು ಸುತ್ತಿ ಮನೆ-ಮನೆ ಬಾಗಿಲು ಬಡಿದಿದ್ದರು. 'ಮಾಧ್ಯಮಗಳು ನಿಮಗೆ ಹೇಳದ ಗುಜರಾತಿನ ಸುದ್ದಿ' ಎಂಬ ಭಿತ್ತಿಪತ್ರಗಳನ್ನು ಎಲ್ಲರಿಗೂ ಹಂಚಿ ಎಲ್ಲರಲ್ಲೂ ಸಾಕಷ್ಟು ಭಯ ಹುಟ್ಟಿಸುವ ಪ್ರಯತ್ನ ಮಾಡಿದ್ದರು. ಈಕೆಯ ಓರಗೆಯವಳೇ ಆದ ತೀಸ್ತಾ ಸೇತಲ್ವಾಡ್ ಮತ್ತೊಂದು ರೀತಿಯಲ್ಲಿ ಮಿಶ್ರತಳಿ. ಮುಂಬಯಿಯಲ್ಲಿ ಅಮೆರಿಕದ ಫೋರ್ಡ್ ಫೌಂಡೇಷನ್‍ನಿಂದ ಪ್ರಾಯೋಜಿತ CIP ಎಂಬ NGO ನಡೆಸುತ್ತಿರುವಾಕೆ. ಗೋಧ್ರಾ ಹತ್ಯಾಕಾಂಡದಲ್ಲಿ ಸುಳ್ಳು ಸಾಕ್ಷಿಗಳನ್ನು ಹುಟ್ಟುಹಾಕಿ, ಅವರು ನೋಡದ್ದನ್ನೆಲ್ಲಾ ಹೇಳಿಸಿ ಕೊನೆಗೆ ಸಿಕ್ಕಿಹಾಕಿಕೊಂಡು ಛೀಮಾರಿ ಹಾಕಿಸಿಕೊಂಡ ಈಕೆಯ ಬಗ್ಗೆ ಬರೆಯಲು ಕುಳಿತರೆ ಒಂದು ಬೃಹತ್ ಗ್ರಂಥಕ್ಕಾಗುವಷ್ಟು ಕೊಳಕು, ಮೋಸದ ಸರಕು ಸಿಗುತ್ತದೆ. ಗೋಧ್ರಾ ಗಲಭೆಯ ಸಂತ್ರಸ್ತರ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ, ಅದನ್ನು ನುಂಗಿ ನೀರು ಕುಡಿದ ಪ್ರಕರಣಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಈಕೆಯ ಹಿಂಬಾಲಕರ ದಂಡಿನಲ್ಲಿ ಜಾವೇದ್ ಅಖ್ತರ್, ರಾಹುಲ್ ಬೋಸ್ ಹಾಗೂ ವಿಜಯ್ ತೆಂಡೂಲ್ಕರ್ ಪ್ರಮುಖರು.

ಇಂಥ ಬುದ್ಧಿ ಜೀವಿಗಳ ಪಟಾಲಂ ಎಲ್ಲ ಸೇರಿ ನಮ್ಮೆಲ್ಲರನ್ನೂ ಭಯಪಡಿಸಲು ಪ್ರಯತ್ನಿಸಿತ್ತು. ತಮ್ಮ ಬಳಿಯಿದ್ದ(?) ಬುದ್ಧಿಯನ್ನು ಖರ್ಚು ಮಾಡಿ ಮುಗಿದಾಗ ಅಮೆರಿಕ ಹಾಗೂ ಪಾಕಿಸ್ತಾನಗಳಿಂದ ಎರವಲು ಪಡೆದು ಶತಾಯ ಗತಾಯ ನಮ್ಮನ್ನು ಹೆದರಿಸಿಯೇ ತೀರುವುದೆಂಬ ಪಣ ತೊಟ್ಟಿತ್ತು. ಈಗ ನಾವು ಸರಿಯಾದ ಏಟು ಹಾಕಿದ ಮೇಲೆ ಇತ್ತ ಸುಳಿದಿಲ್ಲ. ಸದ್ಯಕ್ಕೆ ಕುಂಯ್‍ಗುಟ್ಟುತ್ತಾ ದುಃಖ ದುಮ್ಮಾನಗಳನ್ನೆಲ್ಲಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಿದೆ. ಮೋದಿಯವರು ಒಮ್ಮೆ ಗುಟುರು ಹಾಕಿದೊಡನೆ ಅದೂ ಸಂಪೂರ್ಣ ನಿಂತುಹೋಗಲಿದೆ!

ಇದು ರಾಷ್ಟ್ರಮಟ್ಟದ ವಿಷಯವಾಯಿತು. ಇನ್ನು ನಮ್ಮ ರಾಜ್ಯದ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ಸ್ಥಿತಿ ನೋಡಿ. ಚುನಾವಣೆಯ ಅಬ್ಬರ ಶುರುವಾದಾಗ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕೆ. ಮರುಳಸಿದ್ದಪ್ಪ ಸೇರಿದಂತೆ ಎಂಟು ಜನ ಚಿಂತಕರು 'ಸಮಕಾಲೀನ ವಿಚಾರ ವೇದಿಕೆ' ಎಂಬ ಚಾವಡಿ ಕಟ್ಟಿದರು. ನಿರೀಕ್ಷಿಸಿದಂತೆ ಅವ್ಯಾಹತವಾಗಿ ಮೋದಿ ದೂಷಣೆ ನಡೆಯಿತು. ಫಲಿತಾಂಶದ ನಂತರ ಅನಂತಮೂರ್ತಿಯವರನ್ನು ಸುವರ್ಣ ವಾಹಿನಿ ಎಳೆದು ತಂದಾಗ ಅರಳು-ಮರುಳು ಎಂಬಂತೆ ನಟಿಸಿಬಿಟ್ಟರು. ಇವರ ಯೌವ್ವನ ಮರುಕಳಿಸುವುದು ಬೈರಪ್ಪನವರನ್ನು ಖಂಡಿಸುವಾಗ ಮತ್ತು ಮೋದಿಯವರನ್ನು ನಿಂದಿಸುವಾಗ ಮಾತ್ರ. ಉಳಿದಂತೆ ಇವರು ಏನೂ ಅರ್ಥವಾಗದ, ಕೈಲಾಗದ ಅಸಹಾಯಕ ವೃದ್ಧರಾಗಿ ಕುಳಿತುಬಿಡುತ್ತಾರೆ. ಇನ್ನು ಚುನಾವಣಾ ಪ್ರಚಾರ ನಿಮಿತ್ತ ರೋಹಿಣಿ ನಿಲೇಕಣಿಯವರೊಂದಿಗೆ ಬಸವನಗುಡಿಯ ಬೀದಿ ಬೀದಿ ಸುತ್ತಿದ್ದ ಕಾರ್ನಾಡರಂತೂ ಪತ್ತೆಯೇ ಇಲ್ಲ. ಮೋದಿ ವಿರುದ್ಧ ಪ್ರಚಾರಕ್ಕೆಂದು ಕಾಶಿಗೆ ಹೋಗಿದ್ದವರು ಅಲ್ಲೇನಾದರೂ ಬಿಟ್ಟು ಬಂದರೋ ಅಥವಾ ತಾವೇ ಅಲ್ಲಿ ಉಳಿದು ಬಿಟ್ಟರೋ ಗೊತ್ತಿಲ್ಲ. ಗೋವಿಂದರಾವ್, ಮರುಳಸಿದ್ಧಪ್ಪ ಮುಂತಾದವರು ದುರ್ಬೀನು ಹಿಡಿದು ಹುಡುಕಿದರೂ ಕಣ್ಣಿಗೆ ಬೀಳುತ್ತಿಲ್ಲ.

ಇದೆಲ್ಲದರ ನಡುವೆ ತಮ್ಮ ಚಿಪ್ಪಿನಿಂದ ಹೊರಬಂದಿರುವ ಅಗ್ನಿ ಶ್ರೀಧರ್ ರೈಲೊಂದನ್ನು ಬಿಡಲು ಹೋಗಿ ಸಂಪೂರ್ಣ ಹಳಿ ತಪ್ಪಿಸಿದ್ದಾರೆ. ಇದೇ ಶ್ರೀಧರ್ 2013ರ ಏಪ್ರಿಲ್ 28ರಂದು ಆನಂದ್‍ರಾವ್ ವೃತ್ತದಲ್ಲಿ 'ಹಿಟ್ಲರ್ ಮೋದಿ, ಹಿಂತಿರುಗಿ ಹೋಗು, ಹಿಂತಿರುಗಿ ಹೋಗು' ಎಂದು ಗಂಟಲು ಹರಿಯುವಂತೆ ಅರಚಿದ್ದರು. ಮೋದಿಯವರ ಭೇಟಿಯ ಹಿನ್ನೆಲೆಯಲ್ಲಿ ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ಯ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮೋದಿಯವರ ಬಗ್ಗೆ ಇವರಲ್ಲಿ ಹೊತ್ತಿ ಉರಿಯುತ್ತಿದ್ದ ರೋಷಾಗ್ನಿ, ದ್ವೇಷಾಗ್ನಿಗಳು ಈಗ ಇದ್ದಕ್ಕಿದ್ದಂತೆ  ಆರಿ ಹೋಗಿವೆಯೆಂದು ನಾವು ನಂಬಿ ಬಿಡುತ್ತೇವೆಯೇ? ದಾದಾಗಿರಿಯ ದಿನಗಳ ಶ್ರೀಧರ್‍ರವರೇ ಇಲ್ಲಿ ಕೇಳಿ, ನೀವೆಷ್ಟೇ ನಾಜೂಕಾಗಿ ಲೇಖನ ಬರೆದರೂ ನಾವು ಎಂದಿಗೂ, ಯಾವ ಕಾರಣಕ್ಕೂ ನಿಮ್ಮ ರೈಲು ಹತ್ತುವುದಿಲ್ಲ.



ಇವರಷ್ಟೇ ನೈಪುಣ್ಯದಿಂದ ಟಿ.ಎನ್.ಸೀತಾರಾಂರವರೂ ಕಥೆ ಹೆಣೆದಿದ್ದಾರೆ. ಮೋದಿ ಪ್ರಧಾನಿಯಾಗಿ ಬಿಟ್ಟರೆ ಏನೇನೋ ಆಗಿ ಹೋಗುತ್ತದೆಂಬ ಭಯವಿತ್ತು ಎನ್ನುತ್ತಾರಲ್ಲ ಹೊಸದಾಗಿ ಆಗುವಂಥದ್ದೇನು ಉಳಿಸಿದ್ದಾರೆ ನೆಹರು ಕುಟುಂಬದವರು? ಅಷ್ಟಕ್ಕೂ ಇವರ ಧಾರಾವಾಹಿಗಳಲ್ಲಿ ಬರುವ ಹೆಣ್ಣು ಮಕ್ಕಳಲ್ಲಿರುವ ಗಟ್ಟಿತನ, ದಿಟ್ಟತನ, ಎದೆಗುಂದದಿರುವಿಕೆ ನಿಜಜೀವನದಲ್ಲಿ ಓರ್ವ ಗಂಡಸಿಗಿದ್ದರೆ ಇವರೇಕೆ ಭಯಪಡಬೇಕು? ಸೀತಾರಾಂರವರೇ, ಹಿಂದುವಾಗಿರುವುದೇ ಅಪರಾಧ ಎಂಬ ತೀರ್ಮಾನಕ್ಕೆ ಬಂದು ಅದರ ಮೂಲೋತ್ಪಾಟನೆಗೆ ಟೊಂಕಕಟ್ಟಿ ನಿಂತವರನ್ನೆಲ್ಲ ಕಂಡಾಗ ಆಗದಿದ್ದ ಭಯ ಈಗೇಕೆ? ನಿಮ್ಮ ಧಾರಾವಾಹಿಗಳಲ್ಲಿ ಬಳಕೆಯಾಗುವ ಸ್ವಚ್ಛ ಭಾಷೆ, ಶುದ್ಧ ಚಾರಿತ್ರ್ಯ, ನಡವಳಿಕೆಗಳೆಲ್ಲ ಯಾವ ಸಂಸ್ಕೃತಿಯ ಪ್ರತಿಫಲನ ಹೇಳಿ?

ಎಲ್ಲ ಬುದ್ಧಿಜೀವಿಗಳೂ ಪ್ರಗತಿಪರರೂ ಸೋತು ಸುಣ್ಣವಾಗಿದ್ದಾರೆ. ನಮ್ಮ ಪ್ರತಿಕ್ರಿಯೆಗೆ ತರಗೆಲೆಗಳಂತೆ ಹಾರಿ ಹೋಗಿದ್ದಾರೆ. ಜನಾದೇಶವಾದ್ದರಿಂದ ನೇರವಾಗಿ ಸಿಟ್ಟು, ಅತೃಪ್ತಿ ವ್ಯಕ್ತಪಡಿಸುವ ಹಾಗಿಲ್ಲ. ಆದ್ದರಿಂದ ಲೇಖನಗಳಲ್ಲಿ, ಫೇಸ್‍ಬುಕ್‍ ಗೋಡೆಗಳಲ್ಲಿ ಇವರು ಆಯ್ದುಕೊಂಡಿರುವ ಮಾರ್ಗ 'ಸುಮ್ಮನಿದ್ದು ಮೋದಿಯವರನ್ನು ಗಮನಿಸುವುದು'. ಜೊತೆಗೆ, ‘ಪ್ರತಿಪಕ್ಷವಿಲ್ಲದ್ದರಿಂದ ಆಡಳಿತ ಪಕ್ಷ ಅಂಕೆ ಮೀರಿ  ವರ್ತಿಸುವಂತಿಲ್ಲ’ ಎಂಬ ಹಿತೋಪದೇಶ ನೀಡುವುದು. ನಿಜ, ಇವರು ಗಮನಿಸಲು ಶುರು ಮಾಡಿರುವುದು ಈಗ. ನಾವು ಒಂದು ದಶಕದಿಂದಲೇ ಗಮನಿಸಿದ್ದೇವಲ್ಲ, ಹಾಗಾಗಿ ನಮ್ಮಲ್ಲಿ ಭಯವಲ್ಲ, ನಂಬಿಕೆಯಿದೆ. ಸಾರ್ಥಕ್ಯವಿದೆ.

ಇಷ್ಟು ದಿನಗಳ ನಮ್ಮ ಭಯಕ್ಕೆ ನಾವು ಉತ್ತರ ಕಂಡುಕೊಂಡಿದ್ದೇವೆ. ನಿಮ್ಮ ಭಯಕ್ಕೂ ಉತ್ತರ ಖಂಡಿತ ಸಿಗಲಿದೆ. ಅಲ್ಲಿಯತನಕ ಯಾವ ಸೋಗಲಾಡಿತನದ ವೇಷಗಳನ್ನೂ ಹಾಕದೆ ಶಾಂತಚಿತ್ತದಿಂದ ಕಾದು ನೋಡಿ! Just Wait and Watch! 

Tuesday, 3 June 2014

ಫಿಕ್ಸಿಂಗ್, ಬೆಟ್ಟಿಂಗ್‍ಗಳ ಆರ್ಭಟದಲ್ಲಿ ಆಟವಾಗಿ ಉಳಿಯದ ಕ್ರಿಕೆಟ್

2012ರ ಜೂನ್ 21ರಂದು ಗೋವಾದಲ್ಲಿ ಇಬ್ಬರು ಹದಿನೆಂಟು ವರ್ಷದೊಳಗಿನ ಯುವಕರು 65 ವರ್ಷದ ತಮ್ಮ ಅಜ್ಜಿಯನ್ನು ದಾರುಣವಾಗಿ ಹತ್ಯೆ ಮಾಡಿದ್ದರು. ಆಕೆಯ ಮೈಮೇಲಿದ್ದ ಆಭರಣ ಹಾಗೂ ನಾಲ್ಕು ಲಕ್ಷ ರೂಪಾಯಿಗಳಷ್ಟು ಹಣವನ್ನು ದೋಚಲಾಗಿತ್ತು. ಹತ್ಯೆಯ ಉದ್ದೇಶ - IPL ಬೆಟ್ಟಿಂಗ್‍ಗೆ ಬೇಕಾಗಿದ್ದ ಹಣ ಹೊಂದಿಸುವುದು. 2013ರ ಮೇ 15ರಂದು ಮುಂಬಯಿಯಲ್ಲಿ ಜಿತೇಂದ್ರ ರಾಂಕಾ ಎಂಬ ವಜ್ರದ ವ್ಯಾಪಾರಿಯ 13 ವರ್ಷದ ಮಗ ಆದಿತ್ಯ ರಾಂಕಾ ಅಪಹರಣವಾಗಿದ್ದ. ಅಪಹರಣಕಾರರು 30ಲಕ್ಷ ರೂಗಳ ಬೇಡಿಕೆಯಿಟ್ಟಿದ್ದರು. ತಂದೆ ಜಿತೇಂದ್ರ ಪೋಲೀಸರ ನೆರವಿಗಾಗಿ ಕೈ ಚಾಚುತ್ತಿದ್ದಂತೆ ಮಗ ಆದಿತ್ಯ ಕೊಲೆಯಾಗಿ ಹೋಗಿದ್ದ. ಕೈಯ ನರಗಳನ್ನು ಕತ್ತರಿಸಿ ಅವನನ್ನು ಸಜೀವವಾಗಿ ದಹಿಸಲಾಗಿತ್ತು. ತನಿಖೆ ನಡೆದು ಕೊಲೆಗಾರ ಹಿಮಾಂಶು ಸೆರೆಯಾಗುತ್ತಿದ್ದಂತೆ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಏಕೆಂದರೆ, ಹಿಮಾಂಶು ಮೃತ ಆದಿತ್ಯನ ಹತ್ತಿರದ ಸಂಬಂಧಿಯಷ್ಟೇ ಆಗಿರದೆ MBA ಪದವೀಧರನೂ ಆಗಿದ್ದ. IPL ಬೆಟ್ಟಿಂಗ್‍ನಲ್ಲಿ ಕಳೆದುಕೊಂಡಿದ್ದ 10ಲಕ್ಷ ರೂಗಳನ್ನು ಹೇಗಾದರೂ ವಾಪಸ್ ಪಡೆಯುವ ಹುನ್ನಾರದಲ್ಲಿ ತನ್ನ ಸೋದರ ಸಂಬಂಧಿಯ ಅಪಹರಣಕ್ಕೆ ಕೈ ಹಾಕಿದ್ದ. ದುಡ್ಡು ಸಿಗುವುದಿಲ್ಲವೆಂಬುದು ಖಾತ್ರಿಯಾದೊಡನೆ ಅವನನ್ನು ಅಮಾನುಷವಾಗಿ ಕೊಂದುಹಾಕಿದ್ದ! ತೀರಾ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡರು. ಕಾರಣ ಮತ್ತದೇ. IPL ಬೆಟ್ಟಿಂಗ್‍ನಲ್ಲಿ ಹಣ ಕಳೆದುಕೊಂಡದ್ದು. ಇವೆಲ್ಲಾ ದಾಖಲಾದ ಪ್ರಕರಣಗಳು. ದಾಖಲಾಗದವು ಇನ್ನೆಷ್ಟೋ.

ಒಮ್ಮೆ ಬೆನ್ನೇರಿದರೆ ಮತ್ತೆ ಬಿಡದ ಈ ‘ಬೆಟ್ಟಿಂಗ್‍ಭೂತ’ದ ವ್ಯಾಪ್ತಿ ಭಯಾನಕ. ಜನಪ್ರಿಯ ಚುನಾವಣೆಗಳಿರಲಿ, ಆಟಗಳಿರಲಿ, ಸೋಲು ಗೆಲುವಿನ ಸಾಧ್ಯತೆಯಿರುವೆಡೆಯೆಲ್ಲಾ ಬುಕ್ಕಿಗಳು (ಬೆಟ್ಟಿಂಗ್ ನಡೆಸುವ ಏಜೆಂಟ್‍ಗಳು) ಹಾಗೂ ಪಂಟರ್‍ಗಳ (ಹಣ ಹೂಡುವ ಜನಸಾಮಾನ್ಯರು) ತೆರೆ ಮರೆಯ ಬೆಟ್ಟಿಂಗ್ ಪ್ರಪಂಚ ಅಸ್ತಿತ್ವಕ್ಕೆ ಬಂದು ಬಿಡುತ್ತದೆ. ಉದಾಹರಣೆಗೆ ಈ ಬಾರಿಯ ಲೋಕಸಭಾ ಚುನಾವಣೆ. ಅಂದಾಜು 70,000ಕೋಟಿ ರೂಗಳ ಬೆಟ್ಟಿಂಗ್ ವಹಿವಾಟು ನಡೆದದ್ದು, ಮೋದಿಯವರೇ ಪ್ರಧಾನಿಯಾಗುತ್ತಾರೆ ಎನ್ನುವ ಬೆಟ್‍ಗೆ ಪ್ರತಿ ಒಂದು ರೂಪಾಯಿಗೆ 42 ಪೈಸೆಯ ಲಾಭ ನಿಗದಿಯಾಗಿದ್ದು ನಮ್ಮಲ್ಲಿ ಬಹುಪಾಲು ಜನರಿಗೆ ಗೊತ್ತಿರಲಿಕ್ಕಿಲ್ಲ! ಚುನಾವಣೆಯದೇ ಈ ಕಥೆಯಾದರೆ ಇನ್ನು ನಮ್ಮ ದೇಶದ ಜೀವನಾಡಿಯಾಗಿರುವ ಕ್ರಿಕೆಟ್‍ನ ಬಗ್ಗೆ ಹೇಳುವಂತೆಯೇ ಇಲ್ಲ. ಸಾಮಾನ್ಯವಾಗಿ ವರ್ಲ್ಡ್ ಕಪ್, ಭಾರತ-ಪಾಕಿಸ್ತಾನ ಹಾಗೂ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ನಡೆಯುವ ಆಶಸ್ ಸರಣಿಯಪಂದ್ಯಗಳು ಬೆಟ್ಟಿಂಗ್ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿರುತ್ತಿದ್ದವು. ಆದರೆ IPL ಪಂದ್ಯಗಳು ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಂತೆ ಬೆಟ್ಟಿಂಗ್‍ನ ಎಲ್ಲಾ ದಾಖಲೆಗಳನ್ನೂ ಮುರಿದಿವೆ. ಇವು ಬೆಟ್ಟಿಂಗ್‍ನ ಕಪಿಮುಷ್ಟಿಗೆ ಸಿಲುಕದೆ ಗತ್ಯಂತರವಿರಲಿಲ್ಲ ಎಂಬುದೇನೋ ಸರಿ, ಆದರೆ ಅಷ್ಟಕ್ಕೇ ಸೀಮಿತವಾಗಿರದೆ 'ಫಿಕ್ಸಿಂಗ್'ಗೂ ಮಗ್ಗುಲು ಬದಲಾಯಿಸಿರುವುದು ಬಹು ದೊಡ್ಡ ದುರಂತ.

ಬೆಟ್ಟಿಂಗ್‍ನ ಬಗ್ಗೆ ಅಲ್ಪ ಸ್ವಲ್ಪ ಅರಿವಿದ್ದ ನಮಗೆ ಆಟಗಾರರೂ ಶಾಮೀಲಾಗುವ 'ಫಿಕ್ಸಿಂಗ್' ಬಗೆಗಿನ ಸತ್ಯ ಮೊದಲ ಬಾರಿ ತಿಳಿದದ್ದು 2000ನೇ ಇಸವಿಯ ಏಪ್ರಿಲ್ ಏಳರಂದು. ಎಲ್ಲರ 'ರೋಲ್ ಮಾಡೆಲ್' ಆಗಿ ಖ್ಯಾತನಾಗಿದ್ದ ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೋನಿಯೆ ಭಾರತದ ಬುಕ್ಕಿ ಸಂಜಯ್ ಚಾವ್ಲಾನೊಡನೆ ಸಂಪರ್ಕ ಹೊಂದಿದ್ದು ದೃಢಪಟ್ಟಾಗ ಅವನ ಮೇಲಷ್ಟೇ ಅಲ್ಲ, ಇಡೀ ಕ್ರಿಕೆಟ್ನ ಮೇಲಿನ ನಂಬಿಕೆಯೇ ಬುಡಮೇಲಾಗಿತ್ತು. ಅವನೊಡನೆ ಭಾರತದ ಅಜರುದ್ದೀನ್, ಅಜಯ್ ಜಡೇಜ ಹಾಗೂ ಮನೋಜ್ ಪ್ರಭಾಕರ್‍ ಅವರುಗಳ ಮೇಲೂ ನಿಷೇಧ ಹೇರಲ್ಪಟ್ಟಾಗ ಮೋಸಹೋದ ಭಾವದಿಂದಾಗಿ  ಕ್ರಿಕೆಟ್ ಜೊತೆಗಿನ ನಮ್ಮ ನಂಟೂ ಉರಿದು ಬೂದಿಯಾಗಿಹೋಗಿತ್ತು.

ಆದರೆ ಮರುಹುಟ್ಟು ಪಡೆದ ಕ್ರಿಕೆಟ್ ಎಂಬ ಫೀನಿಕ್ಸ್ ಪಕ್ಷಿ ದಿನದಿನಕ್ಕೆ ಗರಿಗೆದರಿ ನಿಂತು IPL ಎಂಬ ಮರಿಯನ್ನೂ ಹಾಕಿತು. 2008ರಲ್ಲಿ ಶುರುವಾದ ಮೊದಲ ಆವೃತ್ತಿಯ ಅಪಾರ ಯಶಸ್ಸಿನ ನಂತರ ಪ್ರತಿ ವರ್ಷ ನಿರಂತರವಾಗಿ ನಡೆಯುತ್ತಾ ಸಾಗಿದ ಇದಾದರೂ 'ಫಿಕ್ಸಿಂಗ್'ನ ಶಾಪದಿಂದ ಮುಕ್ತವಾಗಿದೆ ಎಂದುಕೊಳ್ಳುತ್ತಿದ್ದಾಗಲೇ 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಶಾಂತಕುಮಾರನ್ ಶ್ರೀಶಾಂತ್, ಅಜಿತ್ ಚಾಂಡಿಲ ಹಾಗೂ ಅಂಕಿತ್ ಚವಾಣ್ ಸಿಕ್ಕಿಬಿದ್ದರು. ಇವರ ಜೊತೆ ಹದಿನಾಲ್ಕು ಬುಕ್ಕಿಗಳೂ ಬಲೆಗೆ ಬಿದ್ದರು. ತೀರಾ ಆಘಾತವಾಗಿದ್ದು ಆರೋಪಿಗಳಲ್ಲಿ BCCIನ ಅಧ್ಯಕ್ಷ ಶ್ರೀನಿವಾಸನ್‍ರ ಅಳಿಯ, ಚೆನ್ನೈ ಸೂಪರ್ ಕಿಂಗ್ಸ್ನ ಮಾಲೀಕ ಗುರುನಾಥ್ ಮೇಯಪ್ಪನ್‍ರೂ ‘ಮೇಯಲು’ ನಿಂತಿದ್ದಾರೆಂಬುದು ತಿಳಿದುಬಂದಾಗ. ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿ, 2013ರ ಅಕ್ಟೋಬರ್‍ನಲ್ಲಿ ಜಸ್ಟಿಸ್ ಮುಕುಲ್ ಮುದ್ಗಲ್‍ರನ್ನೊಳಗೊಂಡ ಏಕ ಸದಸ್ಯ ಪೀಠ ರಚಿಸಿ ತನಿಖೆಯನ್ನು ಅವರಿಗೊಪ್ಪಿಸಿತು. ಘಟನೆ ನಡೆದು ವರ್ಷವಾಗುತ್ತಾ ಬಂದರೂ BCCIನ ತಮ್ಮ ಕುರ್ಚಿ ಬಿಡದ ಶ್ರೀನಿವಾಸನ್‍ರಿಗೆ ಸುಪ್ರೀಂ ಕೋರ್ಟ್  ಕಳೆದ ಮಾರ್ಚ್‍ನಲ್ಲಿ 'ನಿಮ್ಮ ಅಧಿಕಾರ ಲಾಲಸೆ ನೋಡಿದರೆ ವಾಕರಿಕೆ ಬರುತ್ತದೆ' ಎಂದು ಛೀಮಾರಿ ಹಾಕಿ ಕೆಳಗಿಳಿಯುವಂತೆ ಸೂಚಿಸಿತು. ಈ ಅವಾಂತರಗಳಿಂದಾಗಿ 2013ರ ಆವೃತ್ತಿ ಸಪ್ಪೆಯಾಗಿಯೇ ಮುಗಿಯಿತು.

ಆದರೆ ಸಮಸ್ಯೆ ಸುಲಭದಲ್ಲಿ ಮುಗಿದುಹೋಗುವಷ್ಟು ಸರಳವಾಗಿಲ್ಲ. ನಮ್ಮ ದೇಶದಲ್ಲಿ ಲಾಟರಿ ಮತ್ತು 'ಕುದುರೆ ಬಾಲ'ದ ಬೆಟ್ಟಿಂಗ್ ಬಿಟ್ಟರೆ ಮತ್ತ್ಯಾವ ಜೂಜಿಗೂ ಕಾನೂನಿನ ಮಾನ್ಯತೆ ಇಲ್ಲ. ಆದ್ದರಿಂದ  IPL ಸೇರಿದಂತೆ ಉಳಿದೆಲ್ಲ ಬೆಟ್ಟಿಂಗ್‍ಗಳೂ ಕದ್ದುಮುಚ್ಚಿ ನಡೆಯುವುದು ಫೋನ್‍ ಅಥವಾ ಅಂತರ್ಜಾಲದ ವೆಬ್‍ಸೈಟ್‍ಗಳ ಮೂಲಕವೇ. ಹೀಗೆ ನಡೆವ ವಹಿವಾಟಿನ ವಾರ್ಷಿಕ ಮೊತ್ತ ಸುಮಾರು 30 ಬಿಲಿಯನ್ ಡಾಲರ್‍ಗಳು. IPLನ ಮೊದಲನೇ ಆವೃತ್ತಿಯಲ್ಲಿ ಅಂದಾಜು 6000ಕೋಟಿಯಷ್ಟಿದ್ದ ಬೆಟ್ಟಿಂಗ್ನ ಮೊತ್ತ ಕಳೆದ ವರ್ಷ 4೦,೦೦೦ಕೋಟಿ ಮುಟ್ಟಿತ್ತು! ಬುಕ್ಕಿಗಳೇ ಹೇಳುವಂತೆ ಪ್ರತಿ ಬೆಟ್‍‍ಗೂ ನಿಗದಿಯಾಗುವ ಕನಿಷ್ಠ ದರ 1೦೦೦ರೂಗಳು. ಗರಿಷ್ಠಕ್ಕೆ ಮಿತಿಯೆಂಬುದಿಲ್ಲ. ಪಂಟರ್‍ಗಳ ಶಕ್ತ್ಯಾನುಸಾರ ಕೋಟಿಗಟ್ಟಲೆ ಹಣ ಪಣಕ್ಕಿಡಲ್ಪಡುತ್ತದೆ. ಪೂರ್ತಿ ವ್ಯವಹಾರ ನಡೆಯುವುದೇ ನಂಬಿಕೆಯ ಮೇಲೆ. ಸಿಕ್ಕಿಬೀಳಬಾರದೆಂಬ ಉದ್ದೇಶದಿಂದ ಬುಕ್ಕಿಯೊಬ್ಬ ಕಡೇಪಕ್ಷ 15 ಮೊಬೈಲ್‍ ಫೋನ್‍ಗಳನ್ನು ಹೊಂದಿರುತ್ತಾನೆ. ಹೀಗೆ ಪ್ರತಿ ಬುಕ್ಕಿಯೂ ಸಲೀಸಾಗಿ 100ಕೋಟಿ ರೂಗಳ ವ್ಯವಹಾರ ನಿಭಾಯಿಸಬಲ್ಲ. ಇಂಥ ಸಾವಿರಾರು ಬುಕ್ಕಿಗಳಿಂದಾಗಿ ಪ್ರತಿಯೊಂದು ಆಟವೂ 15,೦೦೦ಕೋಟಿ ರೂಗಳಿಂದ  20,೦೦೦ಕೋಟಿ ರೂಗಳಷ್ಟು ಹಣವನ್ನೊಳಗೊಂಡಿರುತ್ತದೆ. ಭಾರತದ ಬೆಟ್ಟಿಂಗ್‍ನ ರಾಜಧಾನಿ ಹೈದರಾಬಾದ್‍ನಲ್ಲಿ ಒಟ್ಟಾರೆ ಬೆಟ್ಟಿಂಗ್‍ನ ಶೇಕಡ 2೦ರಷ್ಟು ನಡೆಯುತ್ತದೆ. ನಂತರದ ಸ್ಥಾನ ಮೆಟ್ರೋ ನಗರಗಳದ್ದು, ಗುಜರಾತ್ ಹಾಗೂ ರಾಜಸ್ಥಾನದ್ದು. ಎಲ್ಲಕ್ಕಿಂತ ಆಶ್ಚರ್ಯಕರವಾದ ಸಂಗತಿಯೆಂದರೆ ಇದು ಸಂಪೂರ್ಣವಾಗಿ ನಿಯಂತ್ರಿಸಲ್ಪಡುತ್ತಿರುವುದು ಪೋರ್ಚುಗಲ್‍ನ ರಾಜಧಾನಿ ಲಿಸ್ಬನ್‍ನಿಂದ! ಅಲ್ಲಿ ಕ್ರೀಡಾ ಬೆಟ್ಟಿಂಗ್‍ಗೆ ಕಾನೂನಿನ ಮಾನ್ಯತೆಯಿರುವುದರಿಂದ ಭಾರತದ ಬುಕ್ಕಿಗಳೆಲ್ಲ ತಮ್ಮ ಹಣಕಾಸಿನ ವಹಿವಾಟು ನಡೆಸುವುದು ಅಲ್ಲಿಂದಲೇ. ಮುಂದೆ ಈ ಕೋಟ್ಯಾಧೀಶ ಬುಕ್ಕಿಗಳು ಹುಡುಕುವುದು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬಲ್ಲ ಸೂಕ್ತ ಆಟಗಾರರನ್ನು. ಅವರಿಗೆ ಹಣದ ಆಮಿಷ ತೋರಿಸಿ ಆಟವನ್ನು 'ಫಿಕ್ಸ್' ಮಾಡಿಸುತ್ತಾರೆ. ಕೆಲವೊಮ್ಮೆ 'ಫಿಕ್ಸಿಂಗ್' ಆರರಿಂದ ಎಂಟು ಓವರ್‍ಗಳಿಗೆ ಸೀಮಿತವಾದರೆ ಮತ್ತೆ ಕೆಲವೊಮ್ಮೆ ಇಡೀ ಆಟ 'ಫಿಕ್ಸ್' ಆಗಿರುತ್ತದೆ.

ಒಂದಾನೊಂದು ಕಾಲದಲ್ಲಿ 'ಜೆಂಟ್‍ಲ್‍ಮ್ಯಾನ್ಸ್ ಗೇಮ್' ಆಗಿದ್ದ ಕ್ರಿಕೆಟ್ ಈಗ ಅಕ್ಷರಶಃ ಹಣ ಮಾಡುವ ದಂಧೆಯಾಗಿ ಹೋಗಿದೆ. ಆದರೆ ಇದನ್ನು ಅತಿಯಾಗಿ ಮೋಹಿಸುವ ನಮಗೆ ಇಂಥ ಅಪ್ರಿಯ ಸತ್ಯಗಳು ಬೇಕಿಲ್ಲ. ಯಾವ ನಮೂನೆಯ ಕ್ರಿಕೆಟ್ ಪ್ರೇಮಿಗಳಿದ್ದಾರೆಂದರೆ, ಕ್ರಿಕೆಟ್ ನೋಡಲೇಬೇಕೆಂದು ಮನಸಿಗೆ ಬಂದುಬಿಟ್ಟರೆ ಭಾರತವಲ್ಲದಿದ್ದರೂ ಸರಿ, ಬೇರೆ ದೇಶಗಳ ಆಟ ನೋಡುತ್ತಾರೆ. ಅದೂ ಇಲ್ಲದಿದ್ದರೆ ಮಹಿಳೆಯರ ಕ್ರಿಕೆಟ್ ಆಸ್ವಾದಿಸುತ್ತಾರೆ. ಅದೂ ಸಿಗದಿದ್ದರೆ ಅಂಧರ ಕ್ರಿಕೆಟ್ ಆದರೂ ಸೈ! ಒಟ್ಟಿನಲ್ಲಿ ಕ್ರಿಕೆಟ್ ಪ್ರವಹಿಸುತ್ತಿರಲೇಬೇಕು ಮನೆ-ಮನಗಳಲ್ಲಿ! ಇಂಥ ಮನಸ್ಥಿತಿಯಿರುವುದರಿಂದಲೇ ಮತ್ತೆ ಈ ಬಾರಿಯೂ IPL ಎಂದಿನಂತೆ ವಿಜೃಂಭಿಸಿದೆ. ನಮ್ಮ ನೆಚ್ಚಿನ ಕ್ರೀಡೆಯೆಂದು ಇದೊಂದನ್ನೇ ವೈಭವೀಕರಿಸಿಬಿಟ್ಟರೆ ಉಳಿದವುಗಳ ಪಾಡೇನಾಗಬೇಕು? ವಿಶ್ವದ ಫುಟ್ಬಾಲ್ ಲೀಗ್‍ಗಳ ಪ್ರೇರಣೆಯಿಂದಲೇ ಭಾರತದ ಕ್ರಿಕೆಟ್ ಲೀಗ್ ಶುರುವಾಗಿದ್ದು ನಿಜ. ಅವರುಗಳು ಹುಚ್ಚೆದ್ದು ಫುಟ್ಬಾಲ್ ನೋಡುವುದು, ಬೆಟ್ ಕಟ್ಟುವುದು ಎಲ್ಲವೂ ನಿಜ, ಆದರೆ ಅವರು ಬೇರೆ ಕ್ರೀಡೆಗಳನ್ನೂ ಅಷ್ಟೇ ಪ್ರೀತಿಸಿ ಪ್ರೋತ್ಸಾಹಿಸುತ್ತಾರೆ. ಫುಟ್ಬಾಲ್ ಟ್ರೋಫಿಗಳನ್ನು ಗೆದ್ದಷ್ಟೇ ಲೀಲಾಜಾಲವಾಗಿ ಒಲಿಂಪಿಕ್ಸ್ ಪದಕಗಳನ್ನೂ ಗೆಲ್ಲುತ್ತಾರೆ. ಅದೇ ಭಾರತದ ಸಾಧನೆ ನೋಡಿ. ಇಲ್ಲಿಯವರೆಗೂ ನಾವು ಒಂಬತ್ತು ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರೂ ಒಂದೂ ಪದಕ ಗೆಲ್ಲಲಾಗಿಲ್ಲ.  23 ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರೂ ಗೆದ್ದಿರುವುದು 26 ಪದಕಗಳನ್ನು ಮಾತ್ರ. ಅದರಲ್ಲಿ ಹನ್ನೊಂದು ಪದಕಗಳು ಹಾಕಿಯೊಂದರಿಂದಲೇ ಲಭಿಸಿದಂಥವು. ಅಥ್ಲೆಟಿಕ್ಸ್ಲ್ಲಂತೂ ಎಂಥ ದುಸ್ಥಿತಿಯಿದೆಯೆಂದರೆ ಬಂದಿರುವ ಎರಡೂ ಪದಕಗಳೂ 1900ರ ಮೊತ್ತಮೊದಲ ಒಲಿಂಪಿಕ್ಸ್ನಲ್ಲಿ ನಾರ್ಮನ್ ಪ್ರಿಚರ್ಡ್‍ 200ಮೀ ಓಟ ಹಾಗೂ ಹರ್ಡಲ್ಸ್‌ನಲ್ಲಿ ದೊರಕಿಸಿಕೊಟ್ಟದ್ದು! ನಾವಿನ್ನೂ 1960ರ, ಮಿಲ್ಖಾ ಸಿಂಗ್‍ರ ಒಲಿಂಪಿಕ್ಸ್ ಓಟವನ್ನೇ ಕಥೆಯಾಗಿಟ್ಟುಕೊಂಡು 'ಭಾಗ್ ಮಿಲ್ಖಾ ಭಾಗ್' ಸಿನಿಮಾ ಮಾಡಿ ಸಂಭ್ರಮಿಸುತ್ತಿದ್ದೇವೆ!

ಇನ್ನೂ ಅನೇಕ ಮೇರಿಕೋಮ್, ಸೈನಾ ನೆಹ್ವಾಲ್ ಹಾಗೂ ಮಿಲ್ಖಾ ಸಿಂಗ್‍ರನ್ನು ತಯಾರಿಸುವುದಿದೆ. ಬೇಸಿಗೆ ಶಿಬಿರಗಳಿಗೆ ಮಾತ್ರ ಸೀಮಿತವಾಗಿರುವ ಈಜು ಹಾಗೂ ಸ್ಕೇಟಿಂಗ್‍ಗಳನ್ನು ಅದರಾಚೆಗೂ ವಿಸ್ತರಿಸಬೇಕಾಗಿದೆ. ಕಳೆದ ವರ್ಷದಿಂದ ಭಾರತದ ಹಾಕಿ ಲೀಗ್ ಪಂದ್ಯಗಳು ಶುರುವಾಗಿವೆ. ಈ ವರ್ಷದ ಮಾರ್ಚ್‌ನಲ್ಲಿ ಆನಂದ್ ಮಹೀಂದ್ರ ಹಾಗೂ ಚಾರು ಶರ್ಮ ಸೇರಿ ಭಾರತದ ಕಬಡ್ಡಿ ಲೀಗ್ ಶುರು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಳುಗಳು ಭಾಗವಹಿಸಲಿರುವ ಈ ಪಂದ್ಯಗಳಿಗೆ ನಮ್ಮ ಪ್ರೋತ್ಸಾಹದ ಅವಶ್ಯಕತೆ ಬಹಳ ಇದೆ.

ಕೋಟಿಗಟ್ಟಲೆಗೆ ಹರಾಜಾಗುವ, ಬ್ರ್ಯಾಂಡ್‍ಗಳ ರಾಯಭಾರಿಗಳಾಗಿ ಇನ್ನಷ್ಟು ಕೋಟಿ ಗಳಿಸುವ, ಮತ್ತಷ್ಟು ಕೋಟಿಗಳ ದುರಾಸೆಗೆ ಬಿದ್ದು 'ಫಿಕ್ಸಿಂಗ್'ಗೆ ಇಳಿದಿರುವ ನಮ್ಮ ಕ್ರಿಕೆಟಿಗರುಗಳಿಗೆ ನಮ್ಮ ಮುನಿಸು ತಟ್ಟುವುದು ಹೇಗೆ? ಕೆಲವೊಮ್ಮೆ ಕೈಯ ಗಡಿಯಾರ ತಿರುಗಿಸಿ, ಕೆಲವೊಮ್ಮೆ ಕತ್ತಿನ ಲಾಕೆಟ್ ಸರಿ ಮಾಡಿಕೊಂಡು ಮತ್ತೆ ಕೆಲವೊಮ್ಮೆ ಪ್ಯಾಂಟ್ ಜೇಬಿನಲ್ಲಿ ಟವಲ್ಲು ಸಿಕ್ಕಿಸಿಕೊಂಡು 'ಸ್ಪಾಟ್ ಫಿಕ್ಸಿಂಗ್'ನ ಕರಾರಿನಂತೆ ತಮ್ಮ ಬುಕ್ಕಿಗಳಿಗೆ ಸಿಗ್ನಲ್ ಕೊಡುತ್ತಿರುವ ಇವರು ‘ಕ್ರಿಕೆಟ್ ಇನ್ನು ಬರೀ ಆಟವಾಗಿ ಉಳಿದಿಲ್ಲ’ ಎಂದು ನಮಗೂ ಸಿಗ್ನಲ್ ಕೊಡುತ್ತಿರುವುದು ನಮಗೇಕೆ ಅರ್ಥವಾಗುತ್ತಿಲ್ಲ? ಪರದೆಯ ಮೇಲಿನ ಆಟಕ್ಕೆ ಕೇಕೆ ಹಾಕುವ ನಾವು ಪರದೆಯ ಹಿಂದಿನ ಪದರಗಳನ್ನು ಕೆದಕಲು ಏಕೆ ಮುಂದಾಗುತ್ತಿಲ್ಲ?

ಇಂದು BCCI ವಿಶ್ವದ ಶ್ರೀಮಂತ ಕ್ರೀಡಾ ಪ್ರಾಧಿಕಾರವಾಗಿರಬಹುದು, ಆದರೆ ಭಾರತದ ಕ್ರಿಕೆಟ್ ಪ್ರೇಮಿ ಬಡವಾಗಿದ್ದಾನೆ. ಆತ್ಮಸಾಕ್ಷಿಯ ವಿಚಾರದಲ್ಲಂತೂ ಖಂಡಿತ ಹೌದು!