Wednesday, 24 September 2014

ಯಾರನ್ನು ಪೆಂಗರನ್ನಾಗಿಸಹೊರಟಿದ್ದಾರೆ ಜಿನ್‍ಪಿಂಗ್?



ಅಂತೂ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ ಬಂದಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ಚೀನಾದ ಒಟ್ಟಾರೆ ಅಧ್ಯಕ್ಷರಲ್ಲಿ ಇವರು ಮೂರನೆಯವರು. 1996ರಲ್ಲಿ ಜಿಯಾಂಗ್ ಜೆಮಿನ್ ಬಂದಿದ್ದರು. ನಂತರ 2006ರಲ್ಲಿ ಬಂದಿದ್ದು ಹು ಜಿಂಟಾವೋ. ಈಗ ಜಿನ್‍ಪಿಂಗ್‍ರ ಸರದಿ. ಕಮ್ಯೂನಿಸ್ಟ್ ಪಕ್ಷದ ನೇತಾರ, ಚೀನೀ ಸೇನೆಯ ಪರಮೋಚ್ಛ ಅಧಿಕಾರಿ ಹಾಗೂ ಆ ದೇಶದ ಅಧ್ಯಕ್ಷರೂ ಆಗಿರುವುದು ಅವರ ವೈಶಿಷ್ಟ್ಯ. ತಮ್ಮ ದೇಶಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳ ಮೇಲೂ ನೇರ ಹಿಡಿತ ಹೊಂದಿರುವ ಶಕ್ತಿ ಕೇಂದ್ರ ಆತ. ಎಲ್ಲ ಸರಿ, ಆದರೆ ಭಾರತಕ್ಕೆ ಭೇಟಿ ನೀಡುವುದರ ಹಿಂದಿನ ಅವರ ಉದ್ದೇಶವೇನಿರಬಹುದು ಎಂಬ ಕುತೂಹಲ ನಮ್ಮನ್ನು ಕಾಡುತ್ತದಲ್ಲವೇ? ಇಂದು ಆರ್ಥಿಕವಾಗಿ ಸಬಲವಾಗಿರುವ ದೇಶಗಳ ಪಟ್ಟಿಯಲ್ಲಿ ಚೀನಾದ್ದು ಎರಡನೆಯ ಸ್ಥಾನ. ನಮ್ಮೊಡನೆ ಸಾಮರಸ್ಯ ಬಿಡಿ, ತೋರಿಕೆಯ ಸೌಹಾರ್ದದ ಹಂಗೂ ಅದಕ್ಕೆ ಬೇಕಾಗಿಲ್ಲ. ಹಾಗಿರುವಾಗ, ತಾನಾಗಿಯೇ ಜೇಬಿನಲ್ಲಿ 100 ಬಿಲಿಯನ್ ಡಾಲರ್‍ಗಳನ್ನಿಟ್ಟುಕೊಂಡು ಬಂದು ವ್ಯಾಪಾರವೃದ್ಧಿಯ ಹೆಸರಿನಲ್ಲಿ ಭಾರತದ ಬಾಗಿಲು ಬಡಿಯುವ ಕರ್ಮ ಅದಕ್ಕೇನಿದೆ ಎನಿಸುತ್ತದೆ ಅಲ್ಲವೇ? ಹೌದು. ವಿಶ್ವದಲ್ಲೇ ಅತ್ಯಂತ ದೊಡ್ಡ ಸೇನಾಬಲವಿರುವ ಚೀನಾದೊಳಗೂ ಸಮಸ್ಯೆಗಳಿವೆ. ಭಾರತದಲ್ಲಿ ಹೂಡಿಕೆ ಮಾಡುವ ಹುನ್ನಾರಕ್ಕೂ ಕಾರಣಗಳಿವೆ. ಅವುಗಳನ್ನು ವಿಶ್ಲೇಷಿಸೋಣ ಬನ್ನಿ.

ಕಳೆದ ಕೆಲ ದಶಕಗಳಿಂದ ಚೀನಾದ ಕಮ್ಯುನಿಸ್ಟ್ ಸರ್ಕಾರ ತನ್ನ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ. ನಮ್ಮ ಪ್ರಧಾನಿಗಳ ನಿವಾಸ ನಂ.7, ರೇಸ್‍ಕೋರ್ಸ್ ರಸ್ತೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಆದರೆ ಚೀನಾದ ಅಧ್ಯಕ್ಷರಾಗಲೀ, ಪಾಲಿಟ್ ಬ್ಯೂರೋದ ಇತರೆ ಏಳು ಸದಸ್ಯರಾಗಲೀ ಎಲ್ಲಿ ವಾಸ ಮಾಡುತ್ತಾರೆ ಎಂಬುದು ಇವತ್ತಿಗೂ ನಿಗೂಢ! ಅವರಿಗಾಗಿ ಮೀಸಲಾಗಿರುವ ಮನೆಗಳಲ್ಲಿ ಅವರು ಇರುವುದೇ ಇಲ್ಲ. ಪಾರದರ್ಶಕತೆಯೇ ಇಲ್ಲದ ಆಡಳಿತ ನೀಡುವ ಮಂದಿಗೆ ಜನರ ನಡುವೆ ವಾಸಿಸುವ ಧೈರ್ಯ ಹೇಗೆ ತಾನೆ ಬಂದೀತು ಅಲ್ಲವೇ? ಮತ್ತೊಂದು ಮುಖ್ಯ ವಿಷಯವೂ ಇದೆ. 1976ರಲ್ಲಿ ಚೀನಾದ ಜನಸಂಖ್ಯೆ ಸುಮಾರು 940 ಮಿಲಿಯನ್ (1 ಮಿಲಿಯನ್ = 10 ಲಕ್ಷ) ಮುಟ್ಟಿತ್ತು. ಜನಸಂಖ್ಯಾ ಸ್ಫೋಟವನ್ನು ತಡೆಯಲು ಅದು ಕೈಗೊಂಡ ನಿರ್ಣಯ ಯಾವುದು ಹೇಳಿ? ದಂಪತಿಗಳೆಲ್ಲ ಒಂದೇ ಮಗುವನ್ನು ಹೊಂದಬೇಕೆಂಬ ಕಡ್ಡಾಯ ನಿಯಮವನ್ನು ಹೇರಿದ್ದು! ಮೊದಲ ಮಗು ಅಂಗವಿಕಲವಾಗಿದ್ದರೆ, ಮಾನಸಿಕವಾಗಿ ಅಸ್ವಸ್ಥವಾಗಿದ್ದರೆ ಅಥವಾ ಹೆಣ್ಣಾಗಿದ್ದರೆ ಎರಡನೆಯದಕ್ಕೆ ಅನುಮತಿ ಸಿಗುತ್ತಿತ್ತು. ಕೆಲ ನಗರಗಳಲ್ಲಿ ದಂಡ ಕಟ್ಟಿ (ಸುಮಾರು 18000 ಅಮೆರಿಕನ್ ಡಾಲರ್‍ನಷ್ಟು!) ಎರಡನೆಯ ಮಗುವನ್ನು ಹೊಂದುವ ಅವಕಾಶವಿತ್ತಾದರೂ ಅದು ಎಲ್ಲರಿಗೂ ಸಾಧ್ಯವಾಗುತ್ತಿರಲಿಲ್ಲ. ಕದ್ದು ಬಸಿರಾದವರನ್ನು ಸರ್ಕಾರಿ ಅಧಿಕಾರಿಗಳು ಮುಲಾಜಿಲ್ಲದೆ ಎಳೆದುಕೊಂಡು ಹೋಗುತ್ತಿದ್ದರು. ಕೈಕಾಲು ಕಟ್ಟಿ ಹೊಟ್ಟೆಯಲ್ಲೇ ಮಗುವನ್ನು ಸಾಯಿಸುವ ವಿಷಪೂರಿತ ಚುಚ್ಚುಮದ್ದುಗಳನ್ನು ಡಾಕ್ಟರ್‍ಗಳ ಕೈಲಿ ಕೊಡಿಸುತ್ತಿದ್ದರು. ಹೀಗೆ 1979ರಿಂದ 2013ರ ವರೆಗೂ ಸುಮಾರು 330ಮಿಲಿಯನ್ ಭ್ರೂಣಗಳನ್ನು ಹತ್ಯೆಮಾಡಲಾಗಿದೆ. 400ಮಿಲಿಯನ್‍ಗೂ ಹೆಚ್ಚು ಗರ್ಭನಿರೋಧಕಗಳನ್ನು ಯುವತಿಯರ ಗರ್ಭಕೋಶಗಳೊಳಗೆ ಬಲವಂತವಾಗಿ ಹೂತಿಡಲಾಗಿದೆ! ಈ ನಿಯಮ ಸಡಿಲಾಗಿದ್ದು ಕಳೆದ ನವೆಂಬರ್‍ನಲ್ಲಿ. ಈಗ, ಗಂಡಹೆಂಡಿರಲ್ಲಿ ಒಬ್ಬರಾದರೂ ತನ್ನ ತಂದೆ-ತಾಯಿಯರ ಒಂದೇ ಮಗುವಾಗಿದ್ದ ಪಕ್ಷದಲ್ಲಿ ಅವರು ಎರಡು ಮಕ್ಕಳನ್ನು ಹೊಂದಬಹುದು!

ಅದರ ಸರ್ವಾಧಿಕಾರಿ ಧೋರಣೆ ಇಲ್ಲಿಗೇ ನಿಲ್ಲುವುದಿಲ್ಲ. ಜಿದ್ದಿಗೆ ಬಿದ್ದು ಉತ್ಪಾದನಾ ಘಟಕಗಳನ್ನು, ಕಾರ್ಖಾನೆಗಳನ್ನು ತೆರೆದಿರುವ ಚೀನಾ ಸರ್ಕಾರ ಭೂಮಿಯ ಸ್ವಾಧೀನವನ್ನು ತಾನೇ ಇಟ್ಟುಕೊಳ್ಳುತ್ತದೆ. ಉದ್ಯಮಿಗಳ ಪಾಲೇನಿದ್ದರೂ ಬರುವ ಲಾಭಕ್ಕೆ ಸೀಮಿತ. ಕೀಲಿ ಕೊಟ್ಟ ಗೊಂಬೆಗಳ ಹಾಗೆ ದುಡಿಯುವ ಚೀನೀಯರು ಯಂತ್ರಗಳಿಗಿಂತ ಕಡೆಯಾಗಿಬಿಟ್ಟಿದ್ದಾರೆ. ನಗುವೆಂಬುದೇ ತುಟ್ಟಿ. ಇನ್ನು ವಾತಾವರಣದ ಪಾಡೋ ದೇವರಿಗೇ ಪ್ರೀತಿ! ಹವೆ ಎಷ್ಟು ಕಲುಷಿತವಾಗಿದೆಯೆಂದರೆ ಕತ್ತೆತ್ತಿ ನೋಡಿದಾಗ ನೀಲಾಕಾಶ ಕಂಡರೆ ಆ ಬ್ರಹ್ಮನ ಮೇಲಾಣೆ! ಬರುವ ಆದಾಯದಲ್ಲಿ ಶೇಕಡಾ 10ರಷ್ಟು, ಗಾಳಿ, ನೀರುಗಳ ಶುದ್ಧೀಕರಣಕ್ಕೇ ವ್ಯಯವಾಗುತ್ತದೆ! ಇವೆಲ್ಲದರಿಂದ ರೋಸಿಹೋಗಿರುವ ಜನ ಮುಷ್ಕರಗಳಿಗೆ ಇಳಿಯುತ್ತಿದ್ದಾರೆ. ಕಳೆದ ವರ್ಷವೊಂದರಲ್ಲೇ ಸುಮಾರು 2ಲಕ್ಷ 35ಸಾವಿರದಷ್ಟು ಮುಷ್ಕರಗಳು ನಡೆದಿವೆ! ನೆಮ್ಮದಿಯ ಸಲುವಾಗಿ ಜನ ತಂಡೋಪತಂಡವಾಗಿ ಯೋಗ ಕೇಂದ್ರಗಳಿಗೆ ಲಗ್ಗೆಯಿಡುತ್ತಿದ್ದಾರೆ!

ಇವು ಆಂತರಿಕ ವಿಷಯಗಳಾದವು. ಇನ್ನು ಆರ್ಥಿಕ ವಲಯ ಹೇಗಿದೆ ನೋಡೋಣ ಬನ್ನಿ. ಯಾವುದೇ ದೇಶದ ಆರ್ಥಿಕ ಸಾಮರ್ಥ್ಯದ ಅಳತೆಗೋಲಾಗುವುದು ಅದರ ನಿವ್ವಳ ದೇಶೀಯ ಉತ್ಪನ್ನ(GDP). ತಾನು ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿದ್ದೇನೆ ಎಂದು ಪ್ರತಿಪಾದಿಸುತ್ತಿರುವ ಚೀನಾದ GDP ಕ್ರಮೇಣ ಕುಸಿಯುತ್ತಿದೆ. ಶೇಕಡಾ 10ರಷ್ಟಿದ್ದ ಬೆಳವಣಿಗೆ ಈಗ ಶೇಕಡಾ 7.2ಕ್ಕೆ ಬಂದು ನಿಂತಿದೆ. ಉತ್ಪಾದನಾ ವೆಚ್ಚವೊ ಶೇಕಡಾ 300ರಷ್ಟು ಹೆಚ್ಚಿದೆ. ಒಮ್ಮೆ ಹಾಳಾದರೆ ಮತ್ತೆ ರಿಪೇರಿ ಮಾಡಲಾಗದ ಕಳಪೆ ಗುಣಮಟ್ಟ ಎಂಬ ಹಣೆಪಟ್ಟಿ ಬೇರೆ. ತನ್ನ ಉತ್ಪನ್ನಗಳ ಶೇಕಡಾ 39ರಷ್ಟನ್ನು ಮಾತ್ರ ತಾನು ಬಳಸುವ ಚೀನಾ ಉಳಿದದ್ದನ್ನೆಲ್ಲಾ ರಫ್ತು ಮಾಡುತ್ತದೆ. ಒಟ್ಟಿನಲ್ಲಿ ಅದರ ಆರ್ಥಿಕತೆ ಅವಲಂಬಿತವಾಗಿರುವುದೇ ರಫ್ತಿನ ಮೇಲೆ. ಒಂದೊಮ್ಮೆ ಆರ್ಥಿಕ ಬಿಕ್ಕಟ್ಟು ಉಂಟಾಯಿತೆಂದುಕೊಳ್ಳಿ, ಹೊಡೆತ ತಪ್ಪಿದ್ದಲ್ಲ. ಉದಾಹರಣೆಗೆ, 2008ರಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದಾಗ ಚೀನಾದ ನೂರಾರು ಕಾರ್ಖಾನೆಗಳು ಮುಚ್ಚಿದವು. ಬರೋಬ್ಬರಿ 28 ಮಿಲಿಯನ್ ಜನರು ನಿರುದ್ಯೋಗಿಗಳಾದರು!

ಅಷ್ಟೇ ಅಲ್ಲ, ಮಂಗಳಗ್ರಹವನ್ನು ತಲುಪುವ ಯತ್ನದಲ್ಲೂ ವಿಫಲವಾಗಿರುವ ಚೀನಾ ತಂತ್ರಜ್ಞಾನದ ವಿಷಯದಲ್ಲಿ ನಮ್ಮ ಮುಂದೆ ಕೈಕಟ್ಟಿ ನಿಲ್ಲಲೇಬೇಕಿದೆ! ಇನ್ನು ಕ್ಷಿಪಣಿಗಳ, ಯುದ್ಧನೌಕೆಗಳ ವಿಷಯದಲ್ಲಿ ಅದಿನ್ನೂ ಅಂಬೆಗಾಲಿಡುತ್ತಿದೆ. ಹೀಗೆ ತನ್ನದೇ ವಿಷವರ್ತುಲದಲ್ಲಿ ಸಿಕ್ಕಿಕೊಂಡಿರುವ ಅದರ ದೊಡ್ಡ ತಲೆನೋವಾಗಿರುವುದು ಭಾರತದ ವಿದೇಶಾಂಗ ನೀತಿ. ವಿಯೆಟ್ನಾಂ‍ದೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿರುವ ಭಾರತ, ದಕ್ಷಿಣ ಚೀನಾ ಸಮುದ್ರದಲ್ಲಿ ತೈಲ ನಿಕ್ಷೇಪದ ಶೋಧನೆಗಿಳಿಯುವುದನ್ನು ಚೀನಾ ಸಹಿಸುತ್ತಿಲ್ಲ. ಈಗಾಗಲೇ ಐದು ಬಿಲಿಯನ್ ಡಾಲರ್‍ಗಳಷ್ಟು ಹಣವನ್ನು ಹೂಡಿರುವ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಯನ್ನು(ONGC) ಅಲ್ಲಿಂದ ಜಾಗ ಖಾಲಿಮಾಡುವಂತೆ ಒತ್ತಾಯಿಸುತ್ತಿದೆ. ಜಪಾನಿನೊಂದಿಗೆ ವಹಿವಾಟು ನಡೆಸುವ ಭಾರತದ ಧೋರಣೆ ಅದಕ್ಕೆ ಕಣ್ಣುರಿ ತರಿಸುತ್ತದೆ. ನೇಪಾಳ, ಭೂತಾನದ ಭೇಟಿಗಳು ಇರುಸುಮುರುಸು ಉಂಟುಮಾಡುತ್ತವೆ. ಇವೆಲ್ಲಕ್ಕಿಂತ ದೊಡ್ಡ ಪೆಟ್ಟು ಕೊಡುತ್ತಿರುವುದು ದೊಡ್ಡಣ್ಣ ಅಮೆರಿಕ. 2010ರಲ್ಲೇ, ಚೀನಾದ ವಿಸ್ತಾರವಾದಕ್ಕೊಂದು ಇತಿಶ್ರೀ ಹಾಡಬೇಕೆಂದು ನಿರ್ಧರಿಸಿದ ಒಬಾಮಾ ಅಮೆರಿಕ ನೌಕಾದಳದ ಶೇಕಡಾ 60ರಷ್ಟು ಯುದ್ಧ ಪರಿಕರಗಳನ್ನು ಏಷ್ಯಾಕ್ಕೆ ವರ್ಗಾಯಿಸಿದರು. ಫಿಲಿಪ್ಪೈನ್ಸ್, ಸಿಂಗಾಪುರ ಹಾಗೂ ಥಾಯ್ಲೆಂಡ್‍ಗಳೊಡನೆ ಸಂಪರ್ಕ ಬೆಳೆಸಿದರು. ಇನ್ನೂ ಮುಂದುವರೆದು, ವಿಯೆಟ್ನಾಂ‍ನೊಂದಿಗೆ ಪರಮಾಣು ಒಪ್ಪಂದವನ್ನೂ ಮಾಡಿಕೊಂಡರು.

ತನ್ನ ಆಂತರಿಕ ಅಭದ್ರತೆಗಳಷ್ಟೇ ಅಲ್ಲದೆ, ಅಮೆರಿಕದ ರಾಜತಾಂತ್ರಿಕ ನಡೆ ಹಾಗೂ ಭಾರತದ ಪ್ರಭಾವಿ ವಿದೇಶಾಂಗ ನೀತಿಗಳು ಚೀನಾದ ಪಾಲಿಗೆ ನುಂಗಲಾರದ ತುತ್ತಾಗಿವೆ. ಆದ್ದರಿಂದಲೇ ಅದು ಭಾರತದತ್ತ ಮುಖಮಾಡಿದೆ. ಎಲ್ಲ ರಾಷ್ಟ್ರಗಳೂ ಕೈ ಜೋಡಿಸುತ್ತಿವೆ ಎಂಬ ಸಂಕಟ ಒಂದೆಡೆ. ದಿನೇ ದಿನೇ ಬಲಿಷ್ಠವಾಗುತ್ತಿರುವ ಭಾರತ ಮತ್ತೊಂದೆಡೆ. ನೀವೇ ಯೋಚಿಸಿ, ಕಳೆದ 14ವರ್ಷಗಳಲ್ಲಿ ಬರೀ 400 ಮಿಲಿಯನ್‍ಗಳನ್ನು ಭಾರತದಲ್ಲಿ ಹೂಡಿರುವ ಚೀನಾ ಈಗ ಇದ್ದಕ್ಕಿದ್ದಂತೆ 100 ಬಿಲಿಯನ್‍ಗಳನ್ನು ಹೂಡುತ್ತದೆ ಎಂದರೆ ನಂಬುವುದಾದರೂ ಹೇಗೆ? ನಿಮಗೆ ಗೊತ್ತಿರಲಿ, ಚೀನಾ ತನ್ನ ಮಾರುಕಟ್ಟೆಯನ್ನು ಭಾರತಕ್ಕೆ ಮುಕ್ತವಾಗಿ ಎಂದೂ ತೆರೆದಿಲ್ಲ. ಈಗಲೂ ಅಷ್ಟೇ, ತನ್ನ ಉತ್ಪಾದನೆಗಳನ್ನು ಇಲ್ಲಿ ತಂದು ಸುರಿಯಲು ಹವಣಿಸುತ್ತಿದೆ. ತನ್ನ 23ಕ್ಕೂ ಹೆಚ್ಚು ಮಾಧ್ಯಮ ವರದಿಗಾರರನ್ನು ಭಾರತದಲ್ಲೇ ಇರಿಸಿರುವ ಚೀನಾಗೆ ಇಲ್ಲಿನ ಪ್ರತಿ ಘಟನೆಯೂ ತಪ್ಪದೆ ವರದಿಯಾಗುತ್ತದೆ! ಅಲ್ಲಿನ ಸುದ್ದಿ ನಮಗೆ ತಿಳಿಯುವುದು ಮಾತ್ರ ವಿದೇಶೀ ಸುದ್ಧಿ ಸಂಸ್ಥೆಗಳಿಂದಲೇ!

ವ್ಯಾಪಾರವೃದ್ಧಿಯ ನೆಪ ಮಾಡಿಕೊಂಡು ಭಾರತಕ್ಕೆ ಜಿನ್‍ಪಿಂಗ್‍ ಬಂದದ್ದು ಹೌದಾದರೂ ಅವರ ಧೋರಣೆಯಲ್ಲಿ ಯಾವ ಬದಲಾವಣೆಯಿದೆ? ಅಲ್ಲಿ ಅವರು ಹೊರಡುತ್ತಿದ್ದಂತೆಯೇ, ಇಲ್ಲಿ ದಕ್ಷಿಣ ಲಡಾಖ್‍ನ ಗಡಿಯಲ್ಲಿರುವ ಹಳ್ಳಿ ಚುಮಾರ್‍ನಲ್ಲಿ ಚೀನೀಯರು ಬಂದು ಜಮಾಯಿಸಿದರು! ಅವರನ್ನು ಓಡಿಸಲು ಭಾರತೀಯ ಸೇನೆ ಹಾಗೂ ಟಿಬೆಟ್ ಗಡಿಯ ಪೋಲೀಸರು ಹೋಗಬೇಕಾಯಿತು! ಇದು ಮೊದಲ ಬಾರಿಯೇನಲ್ಲ. 2013ರ ಮೇ ತಿಂಗಳಲ್ಲಿ ಅಂದಿನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಸಲ್ಮಾನ್ ಖುರ್ಶಿದ್ ಚೀನಾಗೆ ಹೊರಡುವ ತಯಾರಿಯಲ್ಲಿದ್ದಾಗಲೇ ಚೀನೀಯರು ಲಡಾಖ್‍ನೊಳಗೆ ನುಗ್ಗಿ ಬಂದಿದ್ದರು. ಅದೂ ಸುಮಾರು 19ಕಿಮೀಗಳಷ್ಟು ಒಳಗೆ! ಗಡಿ ವಿಷಯದಲ್ಲಿ ಚೀನಾ ಪದೇಪದೇ ತಕರಾರು ತೆಗೆಯುವುದೇಕೆ? ಲಡಾಖ್‍ನ ಅಕ್ಸಾಯ್ ಚಿನ್‍ ಹೆಸರಿನಲ್ಲಿ ಸುಮಾರು 52ಸಾವಿರ ಚದರಕಿಮೀ ಜಾಗವನ್ನು ಕಬಳಿಸಿದೆಯಲ್ಲ, ಅದನ್ನು ಭಾರತಕ್ಕೆ ಮರಳಿಸುತ್ತದೆಯೇ? 2005ರಿಂದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದೇ ಸರ್ಕಾರಿ ದಾಖಲೆಗಳಲ್ಲಿ ನಮೂದಿಸಿ ನಕ್ಷೆಗಳಲ್ಲಿ ಬರೆದಿಟ್ಟುಕೊಂಡಿದೆಯಲ್ಲ, ಅದನ್ನು ಅಳಿಸಿಹಾಕುತ್ತದೆಯೇ? ಕಾಲಕಾಲಕ್ಕೆ ತಾನೇ ಖುದ್ದಾಗಿ ಹೋಗಿ ಪಾಕಿಸ್ತಾನಕ್ಕೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಒದಗಿಸಿ ಬರುತ್ತದಲ್ಲ, ಅದನ್ನು ನಿಲ್ಲಿಸುತ್ತದೆಯೇ? ತಾನಾಗಿಯೇ ಒಂದು ಮದ್ದು ಗುಂಡನ್ನೂ ತಯಾರಿಸಿಕೊಳ್ಳುವ ಯೋಗ್ಯತೆಯಿಲ್ಲದ ಪಾಕಿಸ್ತಾನವನ್ನು ಇಂದು ಅಣು ಶಕ್ತಿಯುಳ್ಳ ರಾಷ್ಟ್ರವನ್ನಾಗಿ ಮಾಡುತ್ತಿದೆ ಚೀನಾ! ಬದಲಿಗೆ ಅದಕ್ಕೆ ದಕ್ಕುತ್ತಿರುವುದು ಪಾಕ್ ಆಕ್ರಮಿತ ಪ್ರದೇಶಗಳಲ್ಲಿರುವ ಚಿನ್ನದ, ಕಬ್ಬಿಣದ ಅದಿರುಗಳನ್ನು ಕೊಳ್ಳೆ ಹೊಡೆಯುವ ಸುಯೋಗ. ಜೊತೆಗೆ, ಪಾಕಿಸ್ತಾನ ಭಾರತವನ್ನು ನಿರಂತರವಾಗಿ ಪೀಡಿಸುತ್ತಲೇ ಇರುತ್ತದೆಂಬ ನೆಮ್ಮದಿ ಬೇರೆ! ಚೀನಾಕ್ಕೆ ನಮ್ಮಿಂದ ಬಹಳ ಅಪೇಕ್ಷೆಗಳಿವೆ. ಟಿಬೆಟಿಯನ್ನರ ಧರ್ಮಗುರು ದಲೈಲಾಮಾರನ್ನು ನಾವು ಚೀನಾದ ಸುಪರ್ದಿಗೆ ಒಪ್ಪಿಸಬೇಕು. ಅಪ್ಪಿತಪ್ಪಿಯೂ ಜಪಾನ್, ಅಮೆರಿಕ ಹಾಗೂ ವಿಯೆಟ್ನಾಂಗಳೊಡನೆ ಯಾವ ಬಾಂಧವ್ಯವನ್ನೂ ಇಟ್ಟುಕೊಳ್ಳಬಾರದು. ಹಿಂದೂ ಮಹಾಸಾಗರದಲ್ಲಿ, ಕಡಲುಗಳ್ಳರನ್ನು ಹಿಡಿಯುವ ನೆಪದಲ್ಲಿ ನಡೆಯುವ ಚೀನಾದ ನೌಕಾದಳದ ಅಭ್ಯಾಸವನ್ನು ನೋಡಿಯೂ ನೋಡದಂತಿರಬೇಕು!

ನಮಗೆ ಅಭಿವೃದ್ಧಿಯ ಕನವರಿಕೆಯಿದೆ ನಿಜ. ಆದರೆ ಅದು ದೇಶದ ಹಿತಾಸಕ್ತಿ, ಭದ್ರತೆಗಳಿಗಿಂತ ಹೆಚ್ಚಲ್ಲ. ಆದ್ದರಿಂದಲೇ  ಜಿನ್‍ಪಿಂಗ್ ಭಾರತಕ್ಕೆ ಹೊರಡುವ ಮುನ್ನವೇ ಸರ್ಕಾರದ ಪರವಾಗಿ ಸಚಿವೆ ಸುಷ್ಮಾ ಸ್ವರಾಜ್ ಗುಡುಗಿದ್ದು 'ಗಡಿಗೆ ಸಂಬಂಧಿಸಿದ ಯಾವ ವಿಷಯದಲ್ಲೂ ಭಾರತ ಯಾವ ಕಾರಣಕ್ಕೂ ರಾಜಿಮಾಡಿಕೊಳ್ಳುವುದಿಲ್ಲ' ಎಂದು. ಇಂಥ ದಿಟ್ಟ ಘೋಷಣೆ ನಮಗೆ ಮೊದಲ ಅನುಭವ. ಚೀನಾಕ್ಕೂ. ಏನಾಗುತ್ತದೋ ಕಾದು ನೋಡೋಣ! 

Sunday, 14 September 2014

ಸಮಂತಾ ಎಂಬ ಬಾಲೆ ಶಾಂತಿ ದೂತಳಾದಾಗ




ನಿಮಗೆಲ್ಲ ಎರಡನೆಯ ವಿಶ್ವಯುದ್ಧದ ಬಗ್ಗೆ ತಿಳಿದಿರಬಹುದು. ಅದು ಮುಗಿದದ್ದು 1945ರಲ್ಲಿ. ಅದರಲ್ಲಿ ನಾಜಿ ಜರ್ಮನಿಯನ್ನು ಸೋಲಿಸಲು, ವಿಶ್ವದ ಎರಡು ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಾಗಿದ್ದ ಸೋವಿಯತ್ ಒಕ್ಕೂಟ ಹಾಗೂ ಅಮೆರಿಕ ಕೈಜೋಡಿಸಿದ್ದವು. ಹಾಗೆ ಜರ್ಮನಿಯನ್ನು ಸೋಲಿಸಿದ ನಂತರ ಸೈದ್ಧಾಂತಿಕ, ಆರ್ಥಿಕ ಹಾಗೂ ರಾಜನೈತಿಕ ಭಿನ್ನಾಭಿಪ್ರಾಯಗಳನ್ನು ನೆಪವಾಗಿಟ್ಟುಕೊಂಡು ದೂರ ಆಗಿಬಿಟ್ಟವು. ತನ್ನ ಮಿತ್ರರಾದ ನೇಟೋ ರಾಷ್ಟ್ರಗಳೊಂದಿಗೆ ಅಮೆರಿಕ ಪಶ್ಚಿಮಕ್ಕೆ ಮುಖ ಹೊರಳಿಸಿ ಕುಳಿತರೆ, ತಾನೇನು ಕಡಿಮೆ ಎಂಬಂತೆ ಸೋವಿಯತ್ ಒಕ್ಕೂಟ ಪೂರ್ವಕ್ಕೆ ತಿರುಗಿ ಕುಳಿತಿತ್ತು. ತಾನೇ ಪ್ರಬಲ ಎಂದು ನಿರೂಪಿಸುವ ಹಪಾಹಪಿ ಎರಡಕ್ಕೂ! ಈ ಎರಡೂ ರಾಷ್ಟ್ರಗಳ ಮುನಿಸಿನಿಂದ ಶುರುವಾದದ್ದೇ ಶೀತಲ ಸಮರ. 1947ರಿಂದ ಹಿಡಿದು 1991ರ ವರೆಗೂ, ಅಂದರೆ ಸುಮಾರು 44 ವರ್ಷಗಳ ಕಾಲ ಇದೇ ವಾತಾವರಣವಿತ್ತು. ಈ ರಾಷ್ಟ್ರಗಳು ಅದೆಷ್ಟರ ಮಟ್ಟಿಗೆ ಶಸ್ತ್ರಾಸ್ತ್ರಗಳನ್ನು (ಅಣ್ವಸ್ತ್ರಗಳ ಸಹಿತ) ಸಜ್ಜು ಮಾಡಿಕೊಂಡು ಕುಳಿತಿದ್ದವೆಂದರೆ ಯಾವ ಕ್ಷಣ ಮೂರನೆಯ ವಿಶ್ವಯುದ್ಧ ಶುರುವಾಗಿಬಿಡುವುದೋ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು. ಯುದ್ಧದ ಸಿದ್ಧತೆ ಯಾವ ಮಟ್ಟದ್ದಾಗಿತ್ತೆಂದರೆ, ಕ್ಷಿಪಣಿಗಳನ್ನು ಬಿಡಿ, ಭೂಮಿಯ ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳಿಂದ ಅಸ್ತ್ರಗಳನ್ನು ಪ್ರಯೋಗಿಸಿ ತಮಗೆ ಬೇಕಾದ ದೇಶಗಳನ್ನು ಧ್ವಂಸ ಮಾಡುವ ನಿಟ್ಟಿನಲ್ಲಿ ಸಂಶೋಧನೆಗಳು ಎರಡೂ ಕಡೆ ಭರದಿಂದ ನಡೆಯುತ್ತಿದ್ದವು!

ಪರಿಸ್ಥಿತಿ ಹೀಗಿದ್ದಾಗ, 1982ರ ನವೆಂಬರ್ 12ರಂದು ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದವರೇ ಯೂರಿ ಆಂಡ್ರೋಪೋವ್. ಅವರು ನಿಯುಕ್ತರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳಲ್ಲಿ ಭಾರೀ ಸಂಚಲನ ಉಂಟಾಯಿತು. ಏಕೆಂದರೆ ಯೂರಿ ಬಹಳ ನಿರ್ದಯಿ ಹಾಗೂ ಕ್ರೂರಿ ಎಂದೇ ಖ್ಯಾತರಾಗಿದ್ದರು. ಹಿಂದೆ ಅವರು ಸೋವಿಯತ್‍ನ ರಾಯಭಾರಿಯಾಗಿ ಹಂಗೇರಿಯಲ್ಲಿದ್ದಾಗ, ಅಲ್ಲಿನ ದಂಗೆಯನ್ನು ಹತ್ತಿಕ್ಕಲು ಸೇನೆಯ ಸಹಾಯ ಪಡೆದ ಹಾಗೂ ಕೆಲ ನೇತಾರರನ್ನು ಕೊಲ್ಲಿಸಿದ ಅಪವಾದ ಹೊತ್ತಿದ್ದರು. ಅಂಥವರು ಶೀತಲ ಸಮರದಂಥ ಸೂಕ್ಷ್ಮ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟದ ಮುಂದಾಳತ್ವ ವಹಿಸಿಕೊಂಡಾಗ ಸಹಜವಾಗಿಯೇ ಅಮೆರಿಕ ಕೋಲಾಹಲವೆಬ್ಬಿಸಿತು. ತನ್ನ ದೇಶದಲ್ಲೆಲ್ಲ ಈ ಸುದ್ದಿಯನ್ನು ಬಿತ್ತರಿಸಿತು. ಹಾಗೆ ಟೈಮ್ ನಿಯತಕಾಲಿಕೆಯ ಮುಖಪುಟದಲ್ಲಿ, ಕನ್ನಡಕ ಧರಿಸಿದ, ಬಿಗಿದ ಮೊಗದ ‘ಯೂರಿ’ಯ ಚಿತ್ರ ಪ್ರಕಟವಾದಾಗ ಅಮೆರಿಕದವರ ಮುಖದ ಮೇಲೆ ಮಂದಹಾಸ ಮೂಡಲು ಯಾವ ಕಾರಣವೂ ಇರಲಿಲ್ಲ.

ಕಣ್ಣುಗಳಲ್ಲಿ ತಣ್ಣಗಿನ ಕ್ರೌರ್ಯವನ್ನು ತುಂಬಿಕೊಂಡಂತಿದ್ದ ‘ಯೂರಿ’ಯ ಚಿತ್ರವನ್ನು ಕಂಡು ಎಲ್ಲರೂ ಭಯಪಡುತ್ತಿದ್ದಾಗಲೇ ಹತ್ತು ವರ್ಷದ ಪುಟ್ಟ ಬಾಲೆಯೊಬ್ಬಳು ತನ್ನ ತಾಯಿಯನ್ನು ಮುಗ್ಧವಾಗಿ ಕೇಳಿದಳು 'ಎಲ್ಲರಿಗೂ ಅವರನ್ನು ಕಂಡರೆ ಅಷ್ಟೊಂದು ಭಯವೆಂದಮೇಲೆ, ಅವರು ಯುದ್ಧ ಶುರು ಮಾಡುತ್ತಾರೋ ಇಲ್ಲವೋ ಎಂದು ಅವರನ್ನೇ ಏಕೆ ನೇರವಾಗಿ ಕೇಳಬಾರದು ಅಮ್ಮಾ?' ಎಂದು. 'ನೀನೇ ಏಕೆ ಅವರಿಗೆ ಪತ್ರ ಬರೆದು ಕೇಳಬಾರದು?' ಎಂದಳು ತಾಯಿ ತಮಾಷೆಯಾಗಿ. ಮಗಳ ಪ್ರಶ್ನೆಯನ್ನು ಅಲ್ಲಿಗೆ ಮರೆತೂ ಬಿಟ್ಟಳು. ಆದರೆ ಅಮ್ಮನ ಮಾತನ್ನು ಹಗುರವಾಗಿ ತೆಗೆದುಕೊಳ್ಳಲಿಲ್ಲ ಆ ಪುಟ್ಟ ಹುಡುಗಿ. ‘ಯೂರಿ’ಗೆ ಪತ್ರವೊಂದನ್ನು ಬರೆದೇ ಬಿಟ್ಟಳು. ಅದರ ಒಕ್ಕಣೆ ಹೀಗಿತ್ತು. 'ನಾನು ಹತ್ತು ವರ್ಷದ ಹುಡುಗಿ ಸಮಂತಾ ಸ್ಮಿತ್. ನಿಮ್ಮ ಹೊಸ ಪದವಿಗೆ ನನ್ನ ಅಭಿನಂದನೆ. ಅಮೆರಿಕ ಹಾಗೂ ಸೋವಿಯತ್ ರಾಷ್ಟ್ರಗಳು ಅಣ್ವಸ್ತ್ರ ಯುದ್ಧ ನಡೆಸುತ್ತವೆಯೇ ಎಂಬುದು ನನ್ನನ್ನು ಬಹಳ ಯೋಚನೆಗೀಡುಮಾಡುತ್ತಿದೆ. ನೀವು ಯುದ್ಧದ ಪರವಾಗಿದ್ದೀರಾ? ಇಲ್ಲವೆಂದರೆ ಯುದ್ಧ ನಡೆಯದಂತೆ ಹೇಗೆ ತಡೆಯುತ್ತೀರಿ ಎಂದು ಹೇಳಬಲ್ಲಿರಾ? ನೀವೇಕೆ ಈ ಪ್ರಪಂಚವನ್ನು ಅಥವಾ ಅಮೆರಿಕವನ್ನು ಗೆಲ್ಲ ಬಯಸುತ್ತೀರಿ? ದೇವರು ಪ್ರಪಂಚವನ್ನು ಸೃಷ್ಟಿಸಿರುವುದು ನಾವೆಲ್ಲ ಒಂದಾಗಿ ಕೂಡಿ ನೆಮ್ಮದಿಯಿಂದ ಬಾಳಲು. ಜಗಳವಾಡಲು ಅಲ್ಲ.'


ಹಾಗೆ ನಿರ್ಭೀತಳಾಗಿ ಪತ್ರವನ್ನು ಬರೆದ ಸಮಂತಾ ಹುಟ್ಟಿದ್ದು 1972ರ ಜೂನ್ 29ರಂದು. ಕೆನಡಾ-ಅಮೆರಿಕದ ಗಡಿಯಲ್ಲಿದ್ದ ಹ್ಯೂಲ್ಟನ್ ಎಂಬ ಸಣ್ಣ ಪಟ್ಟಣದಲ್ಲಿ. ನಂತರ ತಂದೆ-ತಾಯಿಯರೊಡನೆ ಮ್ಯಾಂಚೆಸ್ಟರ್‍ಗೆ ವಾಸ್ತವ್ಯ ಬದಲಾಯಿಸಿದ ಅವಳು ಅಲ್ಲಿನ ಎಲಿಮೆಂಟರಿ ಶಾಲೆಯಲ್ಲಿ ಕಲಿಯುತ್ತಿದ್ದಳು. ಸಾಹಿತ್ಯದ ಅಧ್ಯಾಪಕರಾಗಿದ್ದ ತಂದೆ ಹಾಗೂ ಸಮಾಜ ಸೇವಕಿಯಾಗಿದ್ದ ತಾಯಿಯಿಂದ ಅವಳಿಗೆ ಸಾಕಷ್ಟು ತಿಳುವಳಿಕೆ, ಲೋಕಜ್ಞಾನಗಳು ಲಭಿಸಿದ್ದವು. ಯುದ್ಧದ ಕಾರ್ಮೋಡ ಕವಿದಿದ್ದ ಆ ದಿನಗಳಲ್ಲಿ, ಅಣ್ವಸ್ತ್ರ ಯುದ್ಧವಾದರೆ ಆಗುವ ದುಷ್ಪರಿಣಾಮವನ್ನು ಶಾಲೆಯಲ್ಲಿ ತನ್ನ ಟೀಚರ್‍ಗಳಿಂದ ಕೇಳಿ ತಿಳಿದಿದ್ದಳು. ಆದ್ದರಿಂದಲೇ ತನ್ನ ವಯಸ್ಸಿಗೂ ಮೀರಿದ ದೂರದೃಷ್ಟಿ, ಕಳಕಳಿಯಿಂದ ‘ಯೂರಿ’ಗೆ ಪತ್ರವನ್ನು ಬರೆದಿದ್ದಳು! ಅವಳ ಬಹಿರಂಗ ಪತ್ರ ಸೋವಿಯತ್ ಒಕ್ಕೂಟದ ಪತ್ರಿಕೆ 'ಪ್ರವ್ಡಾ'ದಲ್ಲಿ ಪ್ರಕಟವೂ ಆಯಿತು. ಆದರೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಹಾಗೆಂದು ಸುಮ್ಮನಾಗಲಿಲ್ಲ ಸಮಂತಾ. ಅಮೆರಿಕದಲ್ಲಿದ್ದ ಸೋವಿಯತ್‍ನ ರಾಯಭಾರಿಯನ್ನು ಪತ್ರ ಮುಖೇನ ಸಂಪರ್ಕಿಸಿದಳು. ತನ್ನ ಪತ್ರಕ್ಕೆ ಯೂರಿ ಉತ್ತರಿಸುವ ಇರಾದೆ ಹೊಂದಿದ್ದಾರಾ ಎಂದು ವಿಚಾರಿಸಿದಳು. ಅವಳ ಶ್ರಮ ವ್ಯರ್ಥವಾಗಲಿಲ್ಲ. 1983ರ ಏಪ್ರಿಲ್ 26ರಂದು ಯೂರಿ ಆಂಡ್ರೋಪೋವ್‍ರ ಉತ್ತರ ಬಂದೇ ಬಿಟ್ಟಿತು. ತುಂಬಾ ನೇರವಾಗಿ, ಪ್ರಾಮಾಣಿಕವಾಗಿ ಹಾಗೂ ವಿಶದವಾಗಿ ಉತ್ತರಿಸಿದ್ದರು ಯೂರಿ. ಅವರ ಪತ್ರದ ಒಕ್ಕಣೆ ಹೀಗಿತ್ತು. 'ನೀನು ಅಷ್ಟೊಂದು ಧೈರ್ಯ ಹಾಗೂ ಪ್ರಾಮಾಣಿಕತೆಯಿಂದ ಬರೆದ ಪತ್ರ ನನ್ನ ಕೈ ತಲುಪಿತು. ನಿನ್ನ ಪ್ರಶ್ನೆಗೆ ನೇರವಾಗಿ ಉತ್ತರಿಸುತ್ತೇನೆ ಕೇಳು. ಸೋವಿಯತ್ ಯಾವ ಯುದ್ಧವನ್ನೂ ಬಯಸುವುದಿಲ್ಲ. ಜರ್ಮನಿಯ ಅಟ್ಟಹಾಸಕ್ಕೆ ಬಲಿಯಾಗಿ ಮನೆ-ಮಠ, ಜೀವಗಳನ್ನು ಕಳೆದುಕೊಂಡಿರುವ ನಮ್ಮ ದೇಶದ ಯಾವ ಪ್ರಜೆಗೂ ಮತ್ತೊಂದು ಯುದ್ಧ ಬೇಕಿಲ್ಲ. ನಾವು ಜರ್ಮನಿಯನ್ನು ಸೋಲಿಸಿದ್ದೇ ನಿನ್ನ ದೇಶವಾದ ಅಮೆರಿಕದ ಸಹಾಯದಿಂದ. ಆದ್ದರಿಂದ ನಾವು ಅಮೆರಿಕ ಮಾತ್ರವಲ್ಲ, ಉಳಿದ ಎಲ್ಲಾ ದೇಶಗಳೊಂದಿಗೂ ಶಾಂತಿಯುತವಾಗಿ ಬಾಳ್ವೆ ಮಾಡಬೇಕೆಂದಿದ್ದೇವೆ. ಇಂದು ನಮ್ಮೆರಡೂ ದೇಶಗಳ ಬಳಿ ಮಾರಕವಾದ ಅಣ್ವಸ್ತ್ರಗಳಿವೆ. ಅದಕ್ಕೆ ಕ್ಷಣವೊಂದರಲ್ಲೇ ಲಕ್ಷಗಟ್ಟಳೆ ಜನರ ಪ್ರಾಣ ತೆಗೆಯಬಲ್ಲ ಶಕ್ತಿಯಿದೆ. ಆದರೆ ನಾವು ಅದನ್ನು ಯಾವುದೇ ಕಾರಣಕ್ಕೂ ಮೊದಲು ಉಪಯೋಗಿಸುವುದಿಲ್ಲ. ಅಷ್ಟೇ ಅಲ್ಲ, ಅಣ್ವಸ್ತ್ರ ಇರುವ ರಾಷ್ಟ್ರಗಳೆಲ್ಲ ಅವುಗಳನ್ನು ನಾಶಮಾಡಬೇಕು ಹಾಗೂ ಮತ್ತೆ ಅದನ್ನು ತಯಾರು ಮಾಡಬಾರದು ಎಂದು ನಾವು ಬಯಸುತ್ತೇವೆ. ನಮ್ಮ ದೇಶದ ಯಾವ ರೈತ, ವೈದ್ಯ, ಸಾಹಿತಿ, ಸಂಶೋಧಕ, ಹಿರಿಯ ಅಥವಾ ಕಿರಿಯನಿಗೂ ಯುದ್ಧ ಮಾಡುವ ಇಚ್ಛೆಯಿಲ್ಲ. ನಾವು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಮಾಡಬೇಕು, ಪುಸ್ತಕಗಳನ್ನು ಬರೆಯಬೇಕು, ನಿನ್ನ ಹಾಗೂ ನಿನ್ನಂಥ ಉಳಿದ ಮಕ್ಕಳ ಸಲುವಾಗಿ ಶಾಂತಿ ಕಾಪಾಡಬೇಕು. ಒಂದು ಕೆಲಸ ಮಾಡು. ಈ ಬೇಸಿಗೆಯಲ್ಲಿ ನಮ್ಮ ದೇಶಕ್ಕೆ ಬಾ. ಇಲ್ಲಿಯ ಜನರೊಂದಿಗೆ, ಮಕ್ಕಳೊಂದಿಗೆ ಒಡನಾಡು. ಇಲ್ಲಿಯ ವಾತಾವರಣ, ಜನರ ಮನಸ್ಥಿತಿ ನಿನಗೇ ತಿಳಿಯುತ್ತದೆ. ನಿನ್ನ ಪುಟ್ಟ ಬದುಕಿಗೆ ಮುಂದೆ ಒಳ್ಳೆಯದಾಗಲಿ'.

‘ಯೂರಿ’ಯ ಉತ್ತರ ಲಕ್ಷಾಂತರ ಅಮೆರಿಕನ್ನರ ಮನದ ಬೇಗುದಿಯನ್ನು ಕ್ಷಣದಲ್ಲಿ ಪರಿಹರಿಸಿತ್ತು. ಇಷ್ಟು ಸುಲಭವಾಗಿ ವಾತಾವರಣವನ್ನು ತಿಳಿಗೊಳಿಸಿದ ಸಮಂತಾ ರಾತ್ರೋರಾತ್ರಿ ಖ್ಯಾತಳಾಗಿಬಿಟ್ಟಳು. ಯೂರಿಯ ಆಹ್ವಾನವನ್ನು ಒಪ್ಪಿಕೊಂಡು, ತಂದೆ-ತಾಯಿಯರೊಡಗೂಡಿ ಅದೇ ವರ್ಷದ ಜುಲೈ ಏಳರಂದು ಸೋವಿಯತ್ ಒಕ್ಕೂಟದ ಮಾಸ್ಕೋ ನಗರಕ್ಕೆ ತೆರಳಿದಳು. ಅಲ್ಲಿನ ಜನರೂ ತಮ್ಮಂತೆಯೇ ಎಂದು ಅವಳಿಗೆ ತಿಳಿದು ಬಂದಿದ್ದೇ ಆಗ. ಎರಡು ವಾರಗಳ ಅವಳ ಸೋವಿಯತ್ ಭೇಟಿಯಲ್ಲಿ ಹಲವಾರು ಜಾಗಗಳಿಗೆ ಹೋಗಿ, ಜನರೊಡನೆ ಕಲೆತು ಬಂದಳು. ಪತ್ರಿಕಾಗೋಷ್ಠಿಗಳಲ್ಲಿ ಸೋವಿಯತ್ ಜನರ ಸಹೃದಯತೆಯನ್ನು ಹೊಗಳಿದಳು. ಅದೆಲ್ಲಕ್ಕೂ ಕಾರಣರಾದ ಯೂರಿಯನ್ನು ಭೇಟಿಯಾಗಲು ಮಾತ್ರ ಸಾಧ್ಯವಾಗಲಿಲ್ಲ. ಅವರ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಅವರು ದೂರವಾಣಿಯಲ್ಲಷ್ಟೇ ಮಾತಿಗೆ ಸಿಕ್ಕರು.

ಅಮೆರಿಕಕ್ಕೆ ಹಿಂತಿರುಗಿದ ಸಮಂತಾಳಿಗೆ ದೊರೆತದ್ದು ಭವ್ಯ ಸ್ವಾಗತ. ಅವಳು ಹೇಳಿದ ವೃತ್ತಾಂತವನ್ನು ಕೇಳಿದ ಅಮೆರಿಕನ್ನರ ಮನಸ್ಸಿನಲ್ಲಿ ಸೋವಿಯತ್ ಜನರ ಬಗ್ಗೆ ಇದ್ದ ಭ್ರಮೆ ದೂರವಾಯಿತು. ತನ್ನ ಅನುಭವವನ್ನು 'ಜರ್ನಿ ಟು ದಿ ಸೋವಿಯತ್ ಯೂನಿಯನ್' ಎಂಬ ಪುಸ್ತಕದಲ್ಲಿಯೂ ದಾಖಲಿಸಿದಳು. ಎರಡು ದೇಶಗಳ ನಡುವೆ ಬಾಂಧವ್ಯ ಬೆಸೆದ ಸಮಂತಾ ಅವಳಿಗರಿವಿಲ್ಲದಂತೆಯೇ ಶಾಂತಿ ದೂತಳಾಗಿಬಿಟ್ಟಿದ್ದಳು. ಅಮೆರಿಕ ಮತ್ತು ಸೋವಿಯತ್ ಪ್ರತಿ ವರ್ಷ ಹೀಗೇ ಮಕ್ಕಳನ್ನು ಕೆಲದಿನಗಳ ಮಟ್ಟಿಗೆ ಆಹ್ವಾನಿಸಬೇಕೆಂಬ ಅವಳ ಸಲಹೆಗೆ ಎರಡೂ ಸರ್ಕಾರಗಳೂ ಒಪ್ಪಿದವು. ತಮ್ಮ ಮಕ್ಕಳನ್ನು ಕಳಿಸುವ ದೇಶಕ್ಕೆ ಬಾಂಬ್ ಹಾಕುವ ಮನಸ್ಸು ಬರಲಾರದು ಎಂದು ಯೋಚಿಸುವಷ್ಟು ದೂರಕ್ಕೆ ಅವಳ ಬುದ್ಧಿ ಬೆಳೆದಿತ್ತು! ಅದರಂತೆ ಸೋವಿಯತ್‍ನ, ಹನ್ನೊಂದರ ಬಾಲೆ 'ಕಾತ್ಯಾ' ಅಮೆರಿಕಕ್ಕೆ ಬಂದು ಹೋದದ್ದೂ ಆಯಿತು. ಅಮೆರಿಕದ ಹಲವು ಟಿ.ವಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ ಸಮಂತಾ ಎಲ್ಲರ ಕಣ್ಮಣಿಯಾಗಿದ್ದಳು.

ಆದರೆ ವಿಧಿಯೆಂಬುದೂ ಒಂದಿದೆಯಲ್ಲ..!

ಅದು 1985ನೇ ಇಸವಿಯ ಆಗಸ್ಟ್ ತಿಂಗಳ 25 ನೇ ತಾರೀಖು. ಟಿ.ವಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ರಾತ್ರಿ ಹತ್ತು ಗಂಟೆಯ ಸುಮಾರಿಗೆ ತಂದೆಯೊಡನೆ ವಿಮಾನದಲ್ಲಿ ಬರುತ್ತಿದ್ದಳು ಸಮಂತಾ. ಹತೋಟಿ ಕಳೆದುಕೊಂಡ ವಿಮಾನ ಮರಗಳಿಗೆ ಅಪ್ಪಳಿಸಿ ಅಪಘಾತಕ್ಕೀಡಾಗಿ ಪೂರ್ತಿ ನುಜ್ಜುಗುಜ್ಜಾಯಿತು. ಸಮಂತಾ ಹಾಗೂ ಅವಳ ತಂದೆ ಸೇರಿದಂತೆ ವಿಮಾನದಲ್ಲಿದ್ದ ಎಂಟೂ ಜನ ಸತ್ತುಹೋದರು. ಶಾಂತಿ ಮೂಡಿಸುವ ಹೊಸ ಪ್ರಕ್ರಿಯೆ ಶುರು ಮಾಡಿದ ಎರಡೇ ವರ್ಷಗಳಲ್ಲಿ ಸಮಂತಾ ಇಲ್ಲವಾದಳು. ಅಮೆರಿಕದ ವ್ಯಥೆ ಹಾಗಿರಲಿ, ಸೋವಿಯತ್ ಅವಳ ನೆನಪಿನಲ್ಲಿ ಸ್ಮಾರಕಗಳನ್ನು ಕಟ್ಟಿಸಿತು. ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿತು.

ದೇಶ-ದೇಶಗಳ ನಡುವಿನ ಗಲಭೆ, ಕಲಹ, ಅಶಾಂತಿಗಳು ಮುಗಿಯದ ಈ ಹೊತ್ತಿನಲ್ಲಿ ಸಮಂತಾ ನೆನಪಾಗುತ್ತಾಳೆ. ಚಿಕ್ಕ ಮಕ್ಕಳನ್ನು ಶಾಂತಿಯ ರಾಯಭಾರಿಗಳನ್ನಾಗಿಸುವುದು ಅವಳು ಕಂಡಿದ್ದ ಕನಸು. ಅದೇ ಮಕ್ಕಳು ಮತಾಂಧರ ಧರ್ಮಯುದ್ಧದ ದಾಳಗಳಾಗಿ ಮುಲಾಜಿಲ್ಲದೇ ಬಲಿಯಾಗುತ್ತಿರುವುದು ಇಂದಿನ ಕಹಿ ನನಸು. ಶಾಂತಿ ಎಂಬ ಕನಸೊಂದನ್ನು ಗಡಿಗಳಾಚೆಗೆ ಸಾಗಿಸಬಲ್ಲ ಸರಕು ತಾವಾಗಬಹುದೆಂಬ ಅರಿವೂ ಇಲ್ಲದೆ ಕಮರಿ ಹೋಗುತ್ತಿರುವ ಎಳೆಯ ಜೀವಗಳಿಗೆ ಲೆಕ್ಕವೇ ಇಲ್ಲ. ಎಂಥ ವಿಪರ್ಯಾಸ ಅಲ್ಲವೇ?

ಮೋದಿ ಅಬೆಯನ್ನು ಅಪ್ಪಿದರೆ ಚೀನಾ ಏಕೆ ಹಬೆಯಾಡಬೇಕು?


2013ರ ಮೇ ತಿಂಗಳು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಜಪಾನ್‍ಗೆ ಭೇಟಿ ನೀಡಿದ್ದರು. ಆಗ ನಡೆದಿದ್ದ ಮಾತುಕತೆಯಲ್ಲಿ ಜಪಾನ್ ಭಾರತಕ್ಕೆ ಪೂರಕವಾದ ಹಲವು ನಿರ್ಣಯಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿತ್ತು. ಅದರಲ್ಲಿ ಮುಖ್ಯವಾದದ್ದು, 2ನೇ ವಿಶ್ವಯುದ್ಧದ ನಂತರ ಜಪಾನ್ ಭಾರತದ ಮೇಲೆ ಹೇರಿದ್ದ ಶಸ್ತ್ರಾಸ್ತ್ರಗಳ ಪೂರೈಕೆಯ ನಿಷೇಧವನ್ನು ಹಿಂಪಡೆಯುವುದು. ಅದರ ಫಲವಾಗಿ ಭಾರತಕ್ಕೆ, ಜಪಾನಿನ ಹಾರುವ ದೋಣಿ ಎಂದೇ ಖ್ಯಾತವಾದ ವಿಮಾನ ‘ಶಿನ್‍‍ಮಯ್ವಾ ಯುಎಸ್-2’ ಲಭಿಸಲಿತ್ತು. ನೆಲ ಹಾಗೂ ಜಲದ ಮೇಲೆ ಅತ್ಯಂತ ಕಡಿಮೆ ಅವಧಿಯಲ್ಲಿ ಟೇಕ್‍ ಆಫ್ ಮತ್ತು ಲ್ಯಾಂಡಿಂಗ್ ಮಾಡಬಲ್ಲ ಆಂಫಿಬಿಯಸ್ ವಿಮಾನವಾದ ಇದು ಭಾರತದ ನೆಲ-ಜಲ ಸಂರಕ್ಷಣಾ ಕಾರ್ಯಾಚರಣೆಗಳಿಗೆ ವರವಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇರಲಿಲ್ಲ. ಇದರ ಜೊತೆಗೇ ಚರ್ಚೆಯಾದ ಮತ್ತೊಂದು ವಿಷಯ ಭಾರತ ಹಾಗೂ ಜಪಾನಿನ ನೌಕಾದಳದ ಜಂಟಿ ತರಬೇತಿ. ಈ ಮಾತುಕತೆಗಳು ನಡೆದಿದ್ದವು ಅಷ್ಟೇ. ಇನ್ನೂ ಯಾವ ಅಧಿಕೃತ ಮೊಹರೂ ಬಿದ್ದಿರಲಿಲ್ಲ. ಪ್ರಧಾನಿಗಳಿಬ್ಬರೂ ಇದನ್ನೆಲ್ಲ ಅನುಮೋದಿಸಿ ಯಾವ ಒಪ್ಪಂದಕ್ಕೂ ಸಹಿ ಮಾಡಿರಲೂ ಇಲ್ಲ. ಅಷ್ಟರಲ್ಲೇ ಭುಸುಗುಟ್ಟಿತ್ತು ಚೀನಾ! ಕಮ್ಯೂನಿಸ್ಟ್ ವಾದದ ವಿಷವನ್ನುಗುಳಲು ವೇದಿಕೆಯಾಗಿ ಬಳಕೆಯಾಗುವ ತನ್ನ ಪತ್ರಿಕೆ 'ಪೀಪಲ್ಸ್ ಡೈಲಿ'ಯಲ್ಲಿ, 'ದೆಹಲಿಯ ಜಾಣತನವಿರುವುದು ಬೀಜಿಂಗ್‍ನೊಂದಿಗಿನ ತನ್ನ ವೈಮನಸ್ಯವನ್ನು ಶಾಂತವಾಗಿ ಪರಿಹರಿಸಿಕೊಳ್ಳುವುದರಲ್ಲಿ, ಕುಮ್ಮಕ್ಕು ಕೊಡುವ ಬೇರೆ ದೇಶಗಳೊಡನೆ ಕೈಜೋಡಿಸುವುದರಲ್ಲಲ್ಲ' ಎಂದು ತನ್ನ ಸಿಟ್ಟನ್ನು ಹೊರಹಾಕಿತ್ತು. ಜಪಾನಿನ ಪ್ರಧಾನಿ ಶಿಂಝೋ ಅಬೆ ಭಾರತ, ಆಸ್ಟ್ರೇಲಿಯ ಹಾಗೂ ಅಮೆರಿಕಗಳ ಕಡೆ ಸ್ನೇಹ ಹಸ್ತ ಚಾಚಿದ್ದಕ್ಕೆ ಅವರನ್ನು ಚಿಲ್ಲರೆ ಕಳ್ಳಕಾಕರು ಎಂದು ಜರೆಯಲೂ ಅದು ಹಿಂದೆಮುಂದೆ ನೋಡಲಿಲ್ಲ.

ಮತ್ತೊಂದು ಘಟನೆ ಇತ್ತೀಚೆಗೆ ನಡೆದದ್ದು. ಅಮೆರಿಕದ ವಾಷಿಂಗ್ಟನ್‍ನಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಸಭೆಯೊಂದು ಆಯೋಜಿಸಲ್ಪಟ್ಟಿತ್ತು. ಚಹಾ ವಿರಾಮದ ನಂತರ ನಡೆದ ಕುಶಲೋಪರಿಯ ವೇಳೆ ಚೀನಾದ ಪ್ರತಿನಿಧಿ ಭಾರತದ ಬಗ್ಗೆ ಆಡಿದ ಮಾತು ಕೇಳಿ ಅಲ್ಲಿದ್ದ ಎಲ್ಲರಿಗೂ ಮುಜುಗರವಾಯಿತು. ಆತ ಹೇಳಿದ್ದೇನು ಗೊತ್ತೇ? 'ಅಶಿಸ್ತಿನಿಂದ ಕೂಡಿರುವ ಭಾರತದಂಥ ದೊಡ್ಡ ದೇಶ, ಇನ್ನೂ ಕುಷ್ಠರೋಗಿಗಳನ್ನು ಹೊಂದಿರುವ ಕೊಳಕು ದೇಶ ಅದು ಹೇಗೆ ಇಷ್ಟು ಬೇಗ ಪ್ರಗತಿ ಸಾಧಿಸುತ್ತಿದೆ ಎಂಬುದೇ ನಮ್ಮ ಪಾಲಿಗೆ ದೊಡ್ಡ ಆಶ್ಚರ್ಯ' ಎಂದು. ಹೌದು. ಚೀನಾ ನಮ್ಮನ್ನು ಕೀಳಾಗಿ ಕಾಣುತ್ತದೆ. ತುಂಬಾ ಆಳವಾಗಿ ದ್ವೇಷಿಸುತ್ತದೆ. ನಮ್ಮೊಂದಿಗಿನ ಅದರ ಸ್ಪರ್ಧೆ ಬರೀ ಆರ್ಥಿಕತೆ ಅಥವಾ ಗಡಿ ತಗಾದೆಗಳಿಗೆ ಮಾತ್ರ ಸೀಮಿತವಾದುದಲ್ಲ. ನಮ್ಮನ್ನು ಒಂದು ಪರಂಪರೆ ಅಥವಾ ನಾಗರಿಕತೆ ಎಂದು ಅದು ಪರಿಗಣಿಸಿಯೇ ಇಲ್ಲ. ಸಾವಿರಾರು ವರ್ಷಗಳ ನಮ್ಮ ಅಸ್ತಿತ್ವಕ್ಕೆ ಅದು ಕವಡೆ ಕಾಸಿನ ಕಿಮ್ಮತ್ತೂ ಕೊಡುವುದಿಲ್ಲ. ಇಂದಿಗೂ ಅದು ನಮ್ಮನ್ನು ನೋಡುತ್ತಿರುವುದು 1962ರ ಯುದ್ಧದ ಕನ್ನಡಕ ಹಾಕಿಕೊಂಡೇ! ಅಂದು ಹೀನಾಯವಾಗಿ ಸೋತ ನಾವು ಅದರ ಕಣ್ಣಿಗೆ ಹೇಗೆ ಕಂಡೆವೋ ಇಂದೂ ಹಾಗೇ ಕಾಣಬೇಕು. ಇಲ್ಲದಿದ್ದರೆ ಅದಕ್ಕೆ ಸಹ್ಯವಾಗುವುದಿಲ್ಲ. ನಾವು ಬದಲಾಗುತ್ತಿದ್ದೇವೆಂಬ ಸತ್ಯವನ್ನು ಜೀರ್ಣಿಸಿಕೊಳ್ಳುವುದು ಹಾಗಿರಲಿ, ಮೇಲ್ನೋಟಕ್ಕೆ ಒಪ್ಪಿಕೊಳ್ಳುವುದಕ್ಕೂ ಅದು ತಯಾರಿಲ್ಲ.

ಅದರ ಮಲತಾಯಿ ಧೋರಣೆ ಹೇಗಿದೆ ನೋಡಿ. 14 ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತಿದೆ. ಎಲ್ಲರೊಡನೆಯೂ ಒಂದಿಲ್ಲೊಂದು ತಕರಾರೇ ಆದರೂ ಕಳೆದ ಮೂವತ್ತು ವರ್ಷಗಳಿಂದ ಒಂದೊಂದೇ ಕಲಹವನ್ನು ಪರಿಹರಿಸಿಕೊಳ್ಳಲ್ಲು ಪ್ರಯತ್ನಿಸುತ್ತಿದೆ. ಭಾರತವೊಂದನ್ನು ಬಿಟ್ಟು! ರಷ್ಯಾ ಸೇರಿದಂತೆ ಉಳಿದೆಲ್ಲಾ ದೇಶಗಳಿಗೂ ರಿಯಾಯಿತಿ ಸಿಕ್ಕಿದ್ದರೂ ಭಾರತದ ಮೇಲೆ ಮಾತ್ರ ನಿರಂತರ ದಂಡ ಪ್ರಯೋಗ! ಅದೂ ಹಾಗಿರಲಿ, ಟಿಬೆಟ್‍ನ ಭಾಗದಲ್ಲಿ ತನ್ನ ಅಣ್ವಸ್ತ್ರಗಳ ಶೇಖರಣೆಯ ಶೇಕಡಾ 30ರಷ್ಟನ್ನು ಎದುರಿಗೇ ಕಾಣುವಂತೆ ಪೇರಿಸಿಟ್ಟಿರುವ ಚೀನಾ, 'ತಾನು ಮೊದಲು ಅಣ್ವಸ್ತ್ರವನ್ನು ಉಪಯೋಗಿಸುವುದಿಲ್ಲ' ಎಂದು ಅಧಿಕೃತವಾಗಿ ಭಾಷೆ ಕೊಟ್ಟಿರುವ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಭಾರತದ ಹೆಸರು ಮಾತ್ರ ಇಲ್ಲ! ಕಾರಣವೇನಿರಬಹುದು ಹೇಳಿ? ಎಲ್ಲ ಪಶ್ಚಿಮ ರಾಷ್ಟ್ರಗಳೂ ತನಗೆ ಸಲಾಮು ಹೊಡೆಯಬೇಕೆಂದು ಬಯಸುವ ಚೀನಾ ಅದಕ್ಕಾಗಿ ತನ್ನನ್ನು ತಾನೇ ಹಲವು ವರ್ಷಗಳಿಂದ ಅಣಿಗೊಳಿಸಿಕೊಳ್ಳುತ್ತಾ ಬಂದಿದೆ. ಇಡೀ ಏಷ್ಯಾ ಖಂಡದ ಅನಭಿಷಿಕ್ತ ದೊರೆಯಾಗುವ ಕನಸು ಕಂಡಿದೆ. ಆದರೆ 1990ರ ನಂತರದ ಬೆಳವಣಿಗೆಗಳಿಂದ ಅದರ ದೊಡ್ಡ ಪ್ರತಿಸ್ಪರ್ಧಿಯಾಗಿ, ತಲೆನೋವಾಗಿ ಕಾಡುತ್ತಿರುವುದು ಭಾರತ. ಗಾತ್ರ, ಸಾಮರ್ಥ್ಯಗಳಲ್ಲಿ ಯಾವುದಕ್ಕೂ ಕಡಿಮೆಯಿಲ್ಲದ ನಮ್ಮ ದೇಶ ಆಂತರಿಕ ಕಲಹಗಳಲ್ಲಿ ಮುಳುಗಿದ್ದರೆ ಚೀನಾಕ್ಕೆ ಸಂತೋಷ, ಸಮಾಧಾನ. ಪರಮಾಣು ಪರೀಕ್ಷೆಯ ನೆಪದಲ್ಲಿ ಅಮೆರಿಕ ನಮಗೆ ದಿಗ್ಬಂಧನ ಹಾಕುವುದನ್ನು ಚೀನಾ ಮುಕ್ತವಾಗಿ ಸ್ವಾಗತಿಸುತ್ತದೆ. ಅದೇ ಅಮೆರಿಕ ನಮ್ಮನ್ನು ಅಣು ಶಕ್ತಿಯುಳ್ಳ ರಾಷ್ಟ್ರ ಎಂದು ಗುರುತಿಸಿ ಒಪ್ಪಿಕೊಂಡಾಗ ಅದನ್ನು ತೀವ್ರವಾಗಿ ಖಂಡಿಸುತ್ತದೆ. ಭಾರತದಂಥ, ಪ್ರಜಾಪ್ರಭುತ್ವವುಳ್ಳ ರಾಷ್ಟ್ರ ಇತರೆ ದೇಶಗಳೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ದಿನೇ ದಿನೇ ಸುಧಾರಿಸಿಕೊಳ್ಳುತ್ತಿರುವುದು ಅದರ ಪಾಲಿನ ನುಂಗಲಾರದ ತುತ್ತಾಗಿದೆ. ಮೋದಿಯವರು ಪ್ರಧಾನಿಯಾದ ಮೇಲಂತೂ, ಭಾರತ ಇನ್ನೆಲ್ಲಿ ತನ್ನನ್ನು ಮೀರಿ ಬೆಳೆದುಬಿಡುವುದೋ ಎಂಬ ಅಭದ್ರತೆ ಅದನ್ನು ಕಾಡುತ್ತಿದೆ.

ಇದೇ ಫೆಬ್ರುವರಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗಲೇ ಮೋದಿಯವರು ಚೀನಾದ ವಿಸ್ತಾರವಾದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 21ನೇ ಶತಮಾನ ಭಾರತದ್ದಾಗಲಿದೆ ಎಂದೂ ಹೇಳಿದ್ದರು. ಆಗಲೇ ಚೀನಾಗೆ ಇರಿಸುಮುರುಸಾಗಿತ್ತು. ಅದೇ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾದ ಮೇಲಂತೂ ಚೀನಾ ಪೂರ್ತಿ ‘ಸಾವಧಾನ’ ಭಂಗಿಯಲ್ಲಿ ನಿಂತಿತು. ಮೋದಿಯವರನ್ನು ಬಿಟ್ಟೂ ಬಿಡದೆ ಹಿಂಬಾಲಿಸಿತು. ಅವರು ಭೂತಾನ್ ದೇಶಕ್ಕೆ ಮೊದಲು ಭೇಟಿ ನೀಡಿದ್ದು, ನಂತರ ನೇಪಾಳಕ್ಕೆ ಹೋದದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದೇ ಅಲ್ಲದೆ, ನೇಪಾಳದ ಅಸೆಂಬ್ಲಿಯಲ್ಲಿ ಅವರು 'ನಾವು ನಿಮ್ಮ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸುವುದಿಲ್ಲ, ಆದರೆ ನೀವು ಆಯ್ದುಕೊಳ್ಳುವ ಮಾರ್ಗಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ' ಎಂದು ಹೇಳಿದ ಮಾತುಗಳನ್ನು ಜಾಣತನದ್ದು ಎಂದು ವಿಶ್ಲೇಷಿಸಿತು. ಆದರೆ ಇದೇ ಚೀನಾ, ಮೋದಿಯವರ ಜಪಾನಿನ ಭೇಟಿಯ ಬಗ್ಗೆ ತಿಳಿದುಬರುತ್ತಿದ್ದಂತೆ ಚಡಪಡಿಸಿತ್ತು. ಏಕೆಂದರೆ, ಇತ್ತೀಚೆಗೆ ಜಪಾನ್ ಜೊತೆಗಿನ ಅದರ ಯಾವ ಸಂಬಂಧಗಳೂ ಸೌಹಾರ್ದಯುತವಾಗಿಲ್ಲ. ಅದರಲ್ಲೂ ಜಪಾನ್ ತನ್ನ ಭದ್ರತೆಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಮೇಲಂತೂ ಚೀನಾಗೆ ಇನ್ನಷ್ಟು ದೂರವಾಗಿದೆ. ಪರಿಸ್ಥಿತಿ ಹೀಗಿರುವಾಗ ಭಾರತ ಹಾಗೂ ಜಪಾನ್ ಕೈ ಜೋಡಿಸುವುದನ್ನು ಅದು ಸಹಿಸೀತೇ? ಜಪಾನ್ನ ಸಹಯೋಗದೊಂದಿಗೆ ಭಾರತ ಬಲಾಢ್ಯವಾಗಲು ಬಿಟ್ಟೀತೇ? ಭಾರತದ ನೆರವಿನೊಂದಿಗೆ ಜಪಾನ್ ತನ್ನ ಭದ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವುದನ್ನು ಒಪ್ಪೀತೇ? ತನಗದು ಸಮ್ಮತವಲ್ಲ ಎಂಬ ನಿಲುವನ್ನು ತಕ್ಷಣವೇ ಸರ್ಕಾರದ ಪರವಾಗಿ ಅಲ್ಲಿನ ಬುದ್ಧಿಜೀವಿಯೊಬ್ಬರು 'ಗ್ಲೋಬಲ್ ಟೈಮ್ಸ್'ಎಂಬ ಪತ್ರಿಕೆಗೆ ಬರೆದ ತಮ್ಮ ಲೇಖನ(ಬೆದರಿಕೆ ಪತ್ರ?)ದಲ್ಲಿ ಹೊರಹಾಕಿದ್ದರು.ಮೋದಿಯವರೇನಾದರೂ ಮೊತ್ತ ಮೊದಲ ಭೇಟಿಗೆ ಜಪಾನನ್ನು ಆಯ್ದುಕೊಂಡರೆ ಚೀನಾದೊಂದಿಗಿನ ಭಾರತದ ಸಂಬಂಧ ಹಳಸಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ನಂತರ ಅವರು ದೂರಿದ್ದು ಜಪಾನಿನ ಪ್ರಧಾನಿ ಅಬೆಯವರನ್ನು. ಭಾರತ ಹಾಗೂ ಚೀನಾದ ಸ್ನೇಹವನ್ನು ಅಬೆ ಒಡೆಯುತ್ತಿದ್ದಾರೆ ಎಂದು ಬೊಬ್ಬೆ ಹಾಕಿದ ಮೇಲೆ ಬಂದದ್ದು ನಮ್ಮ ಸರದಿ. ಮೋದಿ ಸರ್ಕಾರಕ್ಕೆ ಜಪಾನ್ ಜೊತೆಗಿನ ಬಾಂಧವ್ಯಕ್ಕಿಂತ ಚೀನಾ ಜೊತೆಗಿನ ಸೌಹಾರ್ದವೇ ಮುಖ್ಯವಾಗಬೇಕು ಎಂದು ಉಪದೇಶಿಸಿದ್ದರು. ಚೀನಾಕ್ಕೆ ಹಿತವಲ್ಲದ ಒಪ್ಪಂದಗಳನ್ನು ಜಪಾನಿನ ಜೊತೆ ಮಾಡಿಕೊಂಡರೆ ಇದೇ ತಿಂಗಳ ಮೂರನೆಯ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಚೀನಾದ ಅಧ್ಯಕ್ಷ ಜಿನ್‍ಪಿಂಗ್‍ರನ್ನು ಮೋದಿ ಹೇಗೆ ಬರಮಾಡಿಕೊಳ್ಳುತ್ತಾರೆ ಎಂದೂ ಪ್ರಶ್ನಿಸಿದ್ದರು.




ಇಷ್ಟೆಲ್ಲದರ ನಡುವೆಯೂ ಮೋದಿ ಜಪಾನಿನ ಪ್ರವಾಸ ಕೈಗೊಂಡಿದ್ದಾರೆ. ಅಚ್ಚುಕಟ್ಟಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವಾರು ಒಪ್ಪಂದಗಳಿಗೆ ಸಹಿ ಮಾಡಲಿದ್ದಾರೆ. ಯುದ್ಧಕ್ಕೆ ಬೇಕಾಗುವ ಪರಿಕರಗಳಿಂದ ಹಿಡಿದು, ಆಂಫಿಬಿಯಸ್ ವಿಮಾನದವರೆಗೂ ಎಲ್ಲವೂ ಲಭ್ಯವಾಗಲಿದೆ. ಜಪಾನಿನ ತಂತ್ರಜ್ಞಾನ ಕೌಶಲದ ಲಾಭ ಇನ್ನು ಮುಂದೆ ನಮಗೂ ದೊರೆಯಲಿದೆ. ಬುಲೆಟ್ ಟ್ರೇನಿನ ಕನಸು ನನಸಾಗಲಿದೆ. ಸಾವಿರ ದೇವಾಲಯಗಳ ನಗರವೆಂದೇ ಖ್ಯಾತವಾದ ಕ್ಯೋಟೊ ಮಾದರಿಯಲ್ಲೇ ವಾರಣಾಸಿ ಹೊಸದಾಗಿ ಮೈದಳೆಯಲಿದೆ. ಒಂದು ನೂರು 'ಸ್ಮಾರ್ಟ್ ಸಿಟಿ'ಗಳ ರೂಪುರೇಷೆಯಲ್ಲಿ ಜಪಾನಿನ ಕೈವಾಡವೂ ಕಾಣಲಿದೆ. ಜಪಾನಿನ ಹೂಡಿಕೆದಾರರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ. 'ರೇರ್ ಅರ್ಥ್ಸ್' ಎಂಬ ಅಪರೂಪದ ಖನಿಜ ಸಂಪತ್ತನ್ನು ಸದ್ವಿನಿಯೋಗಿಸಿಕೊಳ್ಳುವ ಅವಕಾಶ ಎರಡೂ ದೇಶಗಳಿಗೆ ಸಿಗಲಿದೆ. ವಿದ್ಯಾರ್ಥಿಗಳ ವಿನಿಮಯದಂಥ ವಿಶೇಷ ಕಾರ್ಯಕ್ರಮಗಳೂ ತಯಾರಾಗಲಿವೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮೋದಿಯವರು ಜಪಾನಿನ ನೆಲದ ಮೇಲೆ ನಿಂತೇ ಚೀನಾದ ಕಿವಿ ಹಿಂಡಿದ್ದಾರೆ. 'ಇನ್ನೂ 18ನೇ ಶತಮಾನದ ಚಿಂತನೆಗಳನ್ನೇ ಹೊಂದಿರುವವರು ಇತರರ ಭೂಮಿ ಸ್ವಾಧೀನದಲ್ಲಿ, ಸಮುದ್ರ ಗಡಿಯ ಆಕ್ರಮಣದಲ್ಲಿ ಕಾಲೆಳೆಯುತ್ತಾರೆ' ಎಂದು ನೇರವಾಗಿಯೇ ಆರೋಪಿಸಿದ್ದಾರೆ. ಬೇರೆ ಯಾರಾದರೂ ಈ ಮಾತುಗಳನ್ನಾಡಿದ್ದರೆ ಚೀನಾ ಹೇಗೆ ಪ್ರತಿಕ್ರಿಯಿಸುತ್ತಿತ್ತೋ. ಆದರೆ ಈಗ ಕೇಳಿಯೂ ಕೇಳದಂತೆ ಸುಮ್ಮನಿದೆ! 'ಅವರು ಯಾರನ್ನು ಉದ್ದೇಶಿಸಿ ಹೇಳುತ್ತಿದ್ದಾರೆಂಬುದೇ ನಮಗೆ ಗೊತ್ತಿಲ್ಲ' ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ ಕ್ವಿನ್ ಗ್ಯಾಂಗ್ ತಮ್ಮ 'ಜಾಣಪೆದ್ದು'ತನವನ್ನು ಪ್ರದರ್ಶಿಸುತ್ತಿದ್ದಾರೆ. ಯುದ್ಧ ಹಾಗೂ ಅಣ್ವಸ್ತ್ರಗಳ ಹೆಸರಿನಲ್ಲಿ ಎಲ್ಲರನ್ನೂ ಬೆದರಿಸುವ ಕಮ್ಯೂನಿಸ್ಟ್ ಚೀನಾಗೆ ಬಲಿಷ್ಠ ಪ್ರಜಾಪ್ರಭುತ್ವಗಳಾದ ಜಪಾನ್ ಹಾಗೂ ಭಾರತದ ಮಿತೃತ್ವ ಬಿಸಿತುಪ್ಪವಾಗಿ ಪರಿಣಮಿಸಿದೆ. ಅದರ ನಿಜವಾದ ಪ್ರತಿಕ್ರಿಯೆ ಹಾಗೂ ಮುಂದಿನ ನಡೆ ತಿಳಿದುಬರಲು ನಾವು ಜಿನ್‍ಪಿಂಗ್‍ರ ಭಾರತದ ಭೇಟಿಯವರೆಗೂ ಕಾಯಬೇಕು. ಏನೇ ಆಗಲಿ, ಒಂದಂತೂ ಖಾತರಿ. ಮೊದಲಿನಂತೆ ಘರ್ಜಿಸುವುದನ್ನು ಬಿಟ್ಟು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ಅನಿವಾರ್ಯವಂತೂ ಚೀನಾಗೆ ತಪ್ಪಿದ್ದಲ್ಲ.

ಬಹುಶಃ ಪಾಶ್ಚಾತ್ಯ ರಾಷ್ಟ್ರಗಳಿಗೆ ತಿಳಿದಿರುವುದು ಚಹಾ ಮಾರುವವನೊಬ್ಬ ಭಾರತದ ಪ್ರಧಾನಿಯಾದ ಎಂಬುದಷ್ಟೇ. ಆದರೆ ಚೀನಾಕ್ಕೆ ಅದಕ್ಕಿಂತ ಹೆಚ್ಚೇ ಅರ್ಥವಾಗಿದೆ. ಆದ್ದರಿಂದಲೇ ಚೀನಾದ ಬುದ್ಧಿಜೀವಿ ತಮ್ಮ ಲೇಖನದಲ್ಲಿ ಹೀಗೆ ಹೇಳಿದ್ದಾರೆ. 'ಮೋದಿಯವರೊಬ್ಬ ಅಪ್ಪಟ ಉದ್ಯಮಿ ಹಾಗೂ ರಾಜಕಾರಣಿ. ತಮ್ಮ ದೇಶದ ಹಿತವನ್ನು ಕಾಯಲು ಏನು ಮತ್ತು ಹೇಗೆ ಮಾಡಬೇಕೆಂಬುದನ್ನು ಅವರು ಚೆನ್ನಾಗಿ ಬಲ್ಲರು' ಎಂದು.
ಅಚ್ಛೇ ದಿನಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ! ಅಲ್ಲವೇ?


Tuesday, 26 August 2014

ಸಾವಿನಲ್ಲಿ ‘ಸಂಸ್ಕಾರ’ ಕಂಡ ಮೂರ್ತಿಯವರಲ್ಲಿ 'ವಂಶವೃಕ್ಷ' ಅಡಕವಾಗಿತ್ತೇ?



ಇತ್ತೀಚೆಗೆ ಭೈರಪ್ಪನವರ 'ಯಾನ' ಬಿಡುಗಡೆಯಾಯಿತಷ್ಟೇ. ಅವರ ಕಾದಂಬರಿಗಳನ್ನು ನಿಯಮಿತವಾಗಿ ಓದುವ ಒಂದು ವರ್ಗವಂತೂ ಇದ್ದೇ ಇದೆ. ಟೀಕಿಸುವ ಸಲುವಾಗಿಯೇ ಓದುವ ಪ್ರಗತಿಪರರ ಮತ್ತೊಂದು ವರ್ಗವೂ ಇದೆ. ಈ ಕಾದಂಬರಿಯ ವಿಷಯ ಹಿಂದುತ್ವ ಅಥವಾ ಧಾರ್ಮಿಕತೆಗೆ ಸಂಬಂಧ ಪಡದಿದ್ದುದು ಪ್ರಗತಿಪರರಿಗೆ ನಿರಾಸೆ ಮೂಡಿಸಿತೇನೋ. ಅಂಥಾ ದೊಡ್ದ ಮಟ್ಟದ ಚರ್ಚೆ, ಟೀಕೆಗಳಾಗಲಿಲ್ಲ. ಆದರೆ ಫೇಸ್‍ಬುಕ್ನಲ್ಲಿ, ಬೋಧಿವೃಕ್ಷದ ನೆರಳಿನಲ್ಲಿರುವವರೊಬ್ಬರು 'ಭೈರಪ್ಪನವರು ಚಿಂತನೆಯಲ್ಲಿ ಕೆಲ ವರ್ಷಗಳ ಹಿಂದೆ ಎಲ್ಲಿದ್ದರೋ ಈಗಲೂ ಅಲ್ಲೇ ನಿಂತು ಬಿಟ್ಟಿದ್ದಾರೆ' ಎಂಬರ್ಥದ ಕಾಮೆಂಟನ್ನು ಹಾಕಿಕೊಂಡಿದ್ದರು. ಅದು ಅವರ ಅಭಿಪ್ರಾಯ ಬಿಡಿ. ನಮ್ಮ ಅಭ್ಯಂತರವೇನೂ ಇಲ್ಲ. ಏಕೆಂದರೆ, ಬೋಧಿವೃಕ್ಷದ ಟೊಂಗೆಯ ಮೇಲೆ ನಿಂತು ನೋಡುವವರಿಗೆ ಕಾಣುವಷ್ಟು ಪ್ರಪಂಚ 60ಕ್ಕೂ ಹೆಚ್ಚು ದೇಶಗಳನ್ನು ಸುತ್ತಿರುವ ಭೈರಪ್ಪನವರಿಗೆ ಕಾಣದೇ ಇರಬಹುದು. ಆದ್ದರಿಂದಲೇ ಅವರು ಅಧ್ಯಯನದ ಸಲುವಾಗಿ ಆ ಪರಿ ದೇಶ ಸುತ್ತಿ, ಕೋಶ ಓದುತ್ತಾ ತಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳುತ್ತಿರಬಹುದು. ಆದರೆ ಆ ಕಾಮೆಂಟಿಗೆ ಪ್ರತಿಕ್ರಿಯಿಸಿದ್ದ ರವಿ ಬೆಳಗೆರೆ ಇದೊಂದು ದೊಡ್ಡ ರಾಷ್ಟ್ರೀಯ ವಿಪತ್ತು ಎಂಬಂತೆ 'But what to do with these illegitimate sons of Bhairappa?’ ಎಂದು ಕೇಳಿದ್ದರು. ಬಹಳ ನೋವಾಗಿತ್ತು ಆ ಪದಪುಂಜವನ್ನು ನೋಡಿ. Illegitimate ಎಂಬ ಪದಕ್ಕೆ ಅಪ್ರಾಮಾಣಿಕ, ಅಕ್ರಮ, ಕ್ರಿಮಿನಲ್ ಎಂಬೆಲ್ಲ ಅರ್ಥಗಳು ಬರುತ್ತವೆ. ಹಾಗಾದರೆ ಯಾವ ಅರ್ಥದಲ್ಲಿ ಜರೆದಿದ್ದರು ಭೈರಪ್ಪನವರ ಓದುಗರನ್ನು (ಒಂದರ್ಥದಲ್ಲಿ ಅವರ ಮಕ್ಕಳನ್ನೂ) ಅವರು? ಭೈರಪ್ಪನವರ ಯಾವ ಅಕ್ರಮ, ಅಪ್ರಾಮಾಣಿಕ ಅಥವಾ ಕ್ರಿಮಿನಲ್ ಮಕ್ಕಳು ಅವರ ತಲೆಯ ಮೇಲೆ ಹತ್ತಿ ಕುಳಿತಿದ್ದರು?But what to do’ ಎಂದು ಕೇಳಿಕೊಳ್ಳಬೇಕಾದಂಥ ಸಮಸ್ಯೆಗಳನ್ನೇನು ಸೃಷ್ಟಿಸಿದ್ದರು?

ಮೊನ್ನೆಯಷ್ಟೇ ಮುಗಿದ ಅನಂತ ಮೂರ್ತಿಯವರ ಅಂತಿಮ 'ಸಂಸ್ಕಾರ' ರವಿ ಬೆಳಗೆರೆಯ ಮಾತುಗಳನ್ನು ನೆನಪಿಸಿತು. ಇಲ್ಲಿ, ಸತ್ತಿರುವವರ ಚರಿತ್ರೆಯನ್ನು ಕೆದಕುವುದು ಅಥವಾ ಅವರ ಬಗ್ಗೆ ಕಟು ನುಡಿಗಳನ್ನಾಡುವುದು ಉದ್ದೇಶವಲ್ಲ. ಹಾಗೆ ಮಾಡಲು ನಮ್ಮ ‘ಸಂಸ್ಕಾರ’ ನಮಗೆ ಅನುಮತಿಯನ್ನೂ ನೀಡುವುದಿಲ್ಲ. ಆದರೆ ಹಿರಿಯ, ಜನಪ್ರಿಯ, ಸಾಮಾಜಿಕ ಕಳಕಳಿಯುಳ್ಳ ಸಾಹಿತಿಯೊಬ್ಬರು ತಾವು ಬದುಕಿನುದ್ದಕ್ಕೂ ಪ್ರತಿಪಾದಿಸಿಕೊಂಡು ಬಂದುದನ್ನು ಸಾವಿನಲ್ಲಿ ಹೀಗೆ ಸಲೀಸಾಗಿ, ಸಾರಾಸಗಟಾಗಿ ತಿರಸ್ಕರಿಸಿದುದನ್ನು ಸುಮ್ಮನೆ ಬಿಡಲಾಗುವುದಿಲ್ಲ. ಇದನ್ನೂ 'ಅವರ ಒಂದು ವಿಚಾರಧಾರೆ' ಎಂಬ ನೆಲೆಗಟ್ಟಿನಲ್ಲಿ ವಿಮರ್ಶಿಸಲೇಬೇಕಾಗುತ್ತದೆ. ಆದ್ದರಿಂದ ಇದಕ್ಕೆ,'ಸತ್ತವರ ಬಗ್ಗೆ ಮಾನವೀಯತೆ ಇಲ್ಲದೆ ಆಡುತ್ತಿರುವ ಮಾತು' ಎಂಬ ಅರ್ಥ ಕೊಡಬಾರದಾಗಿ ಓದುಗರಲ್ಲಿ ಮನವಿ.



ಎಲ್ಲ ವೇದಿಕೆಗಳಲ್ಲೂ ಆಧುನಿಕ ವಿಚಾರಧಾರೆಯ, ಪ್ರಗತಿಪರತೆಯ ಪರವಾಗಿ ಚರ್ಚೆಗಿಳಿಯುತ್ತಿದ್ದ, ವಾದ-ವಿವಾದಗಳಿಗೆ ಈಡಾದರೂ ಬೇಸರಿಸದೆ ತಮ್ಮ ನಿಲುವನ್ನು ಉಡದಂತೆ ಗಟ್ಟಿಯಾಗಿ ಕಚ್ಚಿ ಹಿಡಿಯುತ್ತಿದ್ದ ಮೂರ್ತಿಯವರು ಕೊನೆಯಲ್ಲಿ ಹೀಗೇಕೆ ಮಾಡಿದರು? ಪರವೋ ವಿರೋಧವೋ, ಒಟ್ಟಿನಲ್ಲಿ ಅವರನ್ನು ಗಮನಿಸುತ್ತಲೇ ಇದ್ದ ನಮ್ಮ ಮುಂದೆ ಈಗಿರುವುದು ಬರೀ ಪ್ರಶ್ನೆಗಳ ಕಂತೆ. ಬದುಕಿನುದ್ದಕ್ಕೂ ಸಂಸ್ಕಾರಕ್ಕೆ ಧಿಕ್ಕಾರ ಹಾಕುತ್ತಾ ಬಂದಿದ್ದ ಅವರ ಮನದಾಳದಲ್ಲಿ ‘ಸಂಸ್ಕಾರ’ದ ಕುರಿತ ಪ್ರೀತಿ ಮೊದಲಿನಿಂದಲೂ ಇತ್ತೇ? ಅಥವಾ ಬಾಹ್ಯದಲ್ಲಿ ವಿರೋಧಿಸುತ್ತಾ ಹೋದಷ್ಟೂ ಅದು ಅಂತರಂಗದಲ್ಲಿ ಗಟ್ಟಿಯಾಗತೊಡಗಿತ್ತೇ? ವಿರೋಧಿಸಿದ್ದರಿಂದ ಸಿಗುತ್ತಿದ್ದ ಜನಪ್ರಿಯತೆ ಅವರ ಆಂತರ್ಯವನ್ನು ಮೆಟ್ಟಿ ನಿಲ್ಲುತ್ತಿತ್ತೇ? ಉತ್ತರ ಕೊಡಬಹುದಾಗಿದ್ದ ಸಂದರ್ಭದಲ್ಲಿ ಅವರು ಇಂಥ ಯಾವ ಪ್ರಶ್ನೆಗಳಿಗೂ ಆಸ್ಪದವನ್ನೇ ಕೊಡಲಿಲ್ಲ!

ಈ ಕೆಲಸವನ್ನು ಯಾರೋ ರಾಜಕಾರಣಿ ಮಾಡಿದ್ದರೆ ನಾವೂ ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಅವರ ಮಾತುಗಳ ಅಥವಾ ಕ್ರಿಯೆಗಳ ಮೂಲಕ ನಾವು ಸಮಾಜವನ್ನು, ನಮ್ಮ ಬದುಕನ್ನು ನೋಡುವುದಿಲ್ಲ. ರೂಪಿಸಿಕೊಳ್ಳುವುದೂ ಇಲ್ಲ. ಆದರೆ ಸಾಹಿತಿಗಳದ್ದು ಹಾಗಲ್ಲ. ಅವರ ಬರಹ, ಚಿಂತನೆ ಎಲ್ಲದರ ನೇರ ಪರಿಣಾಮವೂ ನಮ್ಮ ಮೇಲೆಯೇ. ಅವರು ಸೃಷ್ಟಿಸಿದ ಪಾತ್ರಗಳಲ್ಲಿ ನಮ್ಮನ್ನು ಹುಡುಕಿಕೊಳ್ಳುವ, ಅವರ ಆಲೋಚನೆಗಳನ್ನು ನಮ್ಮದರ ಜೊತೆ ತಾಳೆ ಹಾಕಿ ನೋಡುವ, ಸಾಮ್ಯ ಕಂಡು ಬಂದರೆ ಸಂಭ್ರಮಿಸುವ ನಾವು ನಮಗರಿವಿಲ್ಲದಂತೆಯೇ ಅವರೊಡನೆ ಬೆಸೆದುಕೊಂಡುಬಿಡುತ್ತೇವೆ. ಅವರೊಡನೆ ಅವರ ಆಲೋಚನೆ, ಬರಹಗಳ ಮೂಲಕ ಪಯಣಿಸುವಾಗ ಅವರು ಹೀಗೆ ಅನಿರೀಕ್ಷಿತ ತಿರುವು ತೆಗೆದುಕೊಂಡುಬಿಟ್ಟರೆ ನಮ್ಮ ಮುಂದಿನ ಪಯಣ ಹೇಗೆ? ತಮ್ಮ ಧೋರಣೆಯಿಂದ ಚಿಂತಕರ ಒಂದಿಡೀ ವರ್ಗವನ್ನೇ ಹುಟ್ಟು ಹಾಕಿ ತಮ್ಮೊಂದಿಗೆ ಬೆಳೆಸಿದ ಮೂರ್ತಿಯವರು ಕೊನೆಗೆ ಮಾಡಿದ್ದು ನಂಬಿಕೆ ದ್ರೋಹವಲ್ಲವೇ? ಅವರಿಂದ ಪ್ರೇರಿತರಾದ ಮಂದಿ ಈಗ ಯಾವ ತತ್ವಕ್ಕೆ ಜೋತುಬೀಳಬೇಕು? ಜನಿವಾರವನ್ನು ಧರಿಸದೇ ಬಿಸುಟವರನ್ನು, ಮಧ್ಯರಾತ್ರಿ ವಿಗ್ರಹಗಳ ಮೇಲೆ ಮೂತ್ರ ಮಾಡಿ ಬಂದವರನ್ನು ಈಗ ಪಾಪ ಪ್ರಜ್ಞೆ ಕಾಡುವುದಿಲ್ಲವೇ? ಅವರೆಲ್ಲ ತಮ್ಮ ತಮ್ಮ ಆಚರಣೆ, ಸಂಸ್ಕಾರಗಳಿಗೆ ಮರಳಬೇಕೇ? ಎಂಥ ಗೊಂದಲವನ್ನು ಸೃಷ್ಟಿಸಿದ್ದಾರೆ ನೋಡಿ ಜ್ಞಾನಪೀಠದ ಗದ್ದುಗೆಯೇರಿದ್ದವರು!

ಸಾವಿನಲ್ಲೂ ತಮ್ಮ ವಿಚಾರವಾದಕ್ಕೆ ಅಂಟಿಕೊಂಡವರ ಉದಾಹರಣೆಗಳು ನಮ್ಮ ನಡುವೆಯೇ ಇದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ನಿಮಗೆ ನೆನಪಿರಬಹುದು. ಪಕ್ಕಾ ಮಾರ್ಕ್ಸ್ ವಾದಿಯಾದ ಅವರು ತಮ್ಮ ಸಾವಿನ ನಂತರ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ದಾನ ಮಾಡಿಬಿಡುವಂತೆ ಕೋರಿದ್ದರು. ನಮ್ಮ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರೂ ಅಷ್ಟೆ. ತಮ್ಮ ಲಿಂಗಾಯಿತ ಸಮುದಾಯದ ಶಾಸ್ತ್ರಗಳ ಪ್ರಕಾರ ಸಂಸ್ಕಾರ ಮಾಡಿಸಿಕೊಳ್ಳಲೇ ಇಲ್ಲ! ಬಹುಶಃ ಬದುಕಿನುದ್ದಕ್ಕೂ ತಮ್ಮ ಮನಸ್ಸಿಗೆ ಪ್ರಾಮಾಣಿಕವಾಗಿ ನಡೆದುಕೊಂಡವರಿಗೆ ಸಾವಿನಲ್ಲಿ ಏನನ್ನೂ ನಿರೂಪಿಸುವ ಅಗತ್ಯ ಬೀಳುವುದಿಲ್ಲವೇನೋ.

ರವಿ ಬೆಳಗೆರೆಯ ಮಾತು ನೆನಪಾಗುವುದೇ ಅದಕ್ಕೆ. ಈಗ ಹೇಳಿ, ನಿಜವಾದ ಅರ್ಥದಲ್ಲಿ ಯಾರು ಅಪ್ರಾಮಾಣಿಕರು? ಭೈರಪ್ಪನವರ ವಿಷಯದಲ್ಲಿ ಕೇಳಿದ ಪ್ರಶ್ನೆಯನ್ನೇ ಆವರು ಮೂರ್ತಿಯವರ ವಿಷಯದಲ್ಲೂ ಕೇಳುತ್ತಾರಾ?  ಮಾತನ್ನೇ ಆಡದೆ, ತಮ್ಮ ಕೃತಿಗಳ ಮೂಲಕವೇ ತಮ್ಮ ಸಂಸ್ಕಾರವನ್ನು ಪ್ರತಿಪಾದಿಸಿಕೊಂಡು ಬಂದಿರುವ ಭೈರಪ್ಪನವರಿಗೆ ಅಥವಾ ಅವರ ಓದುಗ ಸಂತತಿಗೆ illegitimate ಎಂಬ ಪದ ಹೇಗೆ ಅನ್ವಯವಾಗಲು ಸಾಧ್ಯ? ಪ್ರತಿ ಕಾದಂಬರಿಯಲ್ಲೂ ತಮ್ಮ ಧಾರ್ಮಿಕ, ವೈಚಾರಿಕ ನೆಲೆಗೆ ಸಾಕಷ್ಟು ಸಾಕ್ಷ್ಯ, ಸರಕುಗಳನ್ನೂ ಒದಗಿಸುವ ಭೈರಪ್ಪನವರು ತಮ್ಮ ಓದುಗ ವರ್ಗವನ್ನು ಯಾವಾಗ ಗೊಂದಲದಲ್ಲಿ ಕೆಡವಿದ್ದಾರೆ? ಇಬ್ಬಗೆ ನೀತಿಯನ್ನು ಎಲ್ಲಿ, ಎಷ್ಟು ಬಾರಿ ಪ್ರದರ್ಶಿಸಿದ್ದಾರೆ? ಅವರ ಅಥವಾ ಅವರ ಓದುಗ ಸಂತತಿಯಿಂದ ಎಷ್ಟು ಸಮಸ್ಯೆಗಳು ಉದ್ಭವವಾಗಿವೆ?

ಬದುಕಿನ ಎಲ್ಲ ಸ್ತರಗಳಲ್ಲೂ, ವೇದಿಕೆಗಳಲ್ಲೂ ಭೈರಪ್ಪನವರನ್ನು ಕಟುವಾಗಿ ವಿರೋಧಿಸಿದ ಮೂರ್ತಿಯವರು ಸಾವಿನಲ್ಲಿ ಮಾತ್ರ ಅವರನ್ನೇ ಸಂಪೂರ್ಣವಾಗಿ ಅನುಮೋದಿಸಿಬಿಟ್ಟರು ಎನಿಸುವುದಿಲ್ಲವೇ? ಈ ವಾಸ್ತವದ ಮುಂದೆ ಅವರ ಬರಹಗಳೆಲ್ಲ ಅರ್ಥ ಕಳೆದುಕೊಳ್ಳುವುದಿಲ್ಲವೇ? ತಮ್ಮ 'ಸಂಸ್ಕಾರ'ವನ್ನು ಬದಿಗಿಟ್ಟು ಭೈರಪ್ಪನವರ 'ವಂಶ ವೃಕ್ಷ'ವನ್ನು ಅಪ್ಪಿದರು ಎಂಬ ಸಂಶಯ ಕಾಡತೊಡಗುವುದಿಲ್ಲವೇ? ವಂಶ-ವೃಕ್ಷ ಕಾದಂಬರಿಯಲ್ಲಿ, ಅಪ್ಪಟ ಬ್ರಾಹ್ಮಣ ಶ್ರೋತ್ರಿಯರ ಮನೆ ಸೊಸೆ ಕಾತ್ಯಾಯಿನಿ ಎಳವೆಯಲ್ಲೇ ವಿಧವೆಯಾಗುತ್ತಾಳೆ. ಅಕ್ಕರೆ ತೋರುವ ಅತ್ತೆ ಮಾವ, ಗಂಡನ ದ್ಯೋತಕವಾದ ಮಗ ಇದ್ದರೂ ಬೇರೊಬ್ಬನನ್ನು ಪ್ರೀತಿಸಿ ಧರ್ಮಸಂಕಟಕ್ಕೆ ಸಿಲುಕುತ್ತಾಳೆ. ಕೊನೆಗೆ, ತಾನು ಹೆತ್ತ ಮಗನನ್ನು ಅತ್ತೆ ಮಾವನಿಗೊಪ್ಪಿಸಿ, ಪ್ರೀತಿಸಿದವನನ್ನು ಮದುವೆಯಾಗುತ್ತಾಳೆ. ಆದರೆ ತಮ್ಮ ವಂಶದ ಬಗ್ಗೆ ಅಪಾರ ಅಭಿಮಾನವಿದ್ದ ಶ್ರೋತ್ರಿಯರಿಗೆ ಮೋಸ ಮಾಡಿದೆನೆಂಬ ಪಾಪ ಪ್ರಜ್ಞೆ ಅವಳನ್ನು ಕಿತ್ತು ತಿನ್ನುತ್ತದೆ. ಹೊಸ ಗಂಡನಿಗೆ ತಕ್ಕ ಮಡದಿಯೂ ಆಗಲಾರದೆ ಅವನಿಗಾಗಿ ಒಂದು ಮಗುವನ್ನೂ ಹೆರಲಾರದೆ ಕೊನೆಯವರೆಗೂ ಕೊರಗಿ ಸಾಯುತ್ತಾಳೆ. ಬಂಡಾಯವನ್ನೇ ಉಸಿರಾಗಿಸಿಕೊಂಡ ಮೂರ್ತಿಯವರಲ್ಲಿಯೂ ಓರ್ವ ಕಾತ್ಯಾಯಿನಿ ಇದ್ದಳೇ? ತಾವು ಧಿಕ್ಕರಿಸಿದ ಸಂಸ್ಕಾರಕ್ಕೆ ಕೊನೆಗಾಲದಲ್ಲಾದರೂ ಕಟ್ಟು ಬೀಳುವಂತೆ ಅವಳೇ ಇವರನ್ನು ಪ್ರೇರೇಪಿಸಿದಳೇ? ಈ ವೈರುಧ್ಯ ನಮ್ಮ ನಂಬಿಕೆಯ ಬುಡವನ್ನೇ ಅಲುಗಾಡಿಸಿದೆ. ನಮ್ಮನ್ನು ಸಂದಿಗ್ಧದಲ್ಲಿ ಸಿಲುಕಿಸಿದೆ. ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡಬೇಕು ಎಂಬುದು ನಮಗೆ ಗೊತ್ತು. ಬದುಕಿರುವಾಗ ಆಡಿದ ಮಾತು, ಮಾಡಿದ ಕಾರ್ಯಗಳು ನಂಬಿಕೆಗೆ ಅರ್ಹವಲ್ಲ ಎನ್ನುವುದಾದರೆ ಪ್ರಮಾಣಿಸಿ ನೋಡಲು ಸಾವೇ ಮಾನದಂಡವೇ?

Illegitimate ಎಂದು ಯಾರು ಎಷ್ಟೇ ಟೀಕಿಸಲಿ, ಭೈರಪ್ಪನವರು ಮೊದಲು ಎಲ್ಲಿ ಇದ್ದರೋ ಈಗಲೂ ಅಲ್ಲೇ ನಿಂತುಬಿಟ್ಟಿದ್ದಾರೆ ಎಂದು ಹೇಳಲಿ ನಮಗೆ ಅಡ್ಡಿಯಿಲ್ಲ. ಎಲ್ಲೂ ಸಲ್ಲದೆ ಕೊನೆಗೊಮ್ಮೆ ನಮ್ಮನ್ನು ಅನಾಥರನ್ನಾಗಿ, ಅಧೀರರನ್ನಾಗಿ ಮಾಡಿ ಹೋಗುವ ಸಿದ್ಧಾಂತಗಳಿಗಿಂತ ಒಂದೇ ನೆಲೆಯಲ್ಲಿ ಗಟ್ಟಿಯಾಗಿ ಬೇರೂರಿ ನಿಲ್ಲುವ ಭೈರಪ್ಪನವರ ವಿಚಾರಧಾರೆಗಳ ಅಗತ್ಯ ಎಂದಿಗಿಂತಲೂ ಈಗ ಹೆಚ್ಚಿದೆ ಎನಿಸುವುದಿಲ್ಲವೇ? ಬೇರುಗಳೇ ಇಲ್ಲದ ಆಲೋಚನೆಗಳನ್ನು ಓದುಗರ ಮನಸ್ಸಿನಲ್ಲಿ ಚಿಗುರಿಸಿ ಉಪಯೋಗವೇನು? ನಮಗೆ ಬೇರುಗಳು ಬೇಕು. ಅದು ನೀಡುವ ಆಧಾರ, ಧೈರ್ಯ ಬೇಕು. ಚಿಗುರು ಮೊಳೆಯಲೆಷ್ಟು ಹೊತ್ತು?

ಈಗ ಭೈರಪ್ಪನವರ ಬರಹಗಳನ್ನೆಲ್ಲ ಮತ್ತೊಮ್ಮೆ ಹೊಸದಾಗಿ ಓದಬೇಕೆನಿಸುತ್ತಿದೆ! 

Tuesday, 19 August 2014

ಸಾಕು ಮಾಡೋಣ ನಿರೀಕ್ಷೆ, ಪಡೆಯೋಣ ಕಾಯಕ ದೀಕ್ಷೆ

ಇದು ಬಹಳ ಹಿಂದಿನ ಕಥೆ. ಅನೇಕ ವರ್ಷಗಳ ಹಿಂದೆ ಒಂದು ಊರಿನಲ್ಲಿ ಓರ್ವ ಶ್ರೀಮಂತ ವ್ಯಾಪಾರಿ ಇದ್ದ. ಅವನದ್ದು ಅಪಾರವಾದ ದೈವಭಕ್ತಿ. ಶುಭ್ರ ಸ್ಫಟಿಕದಂಥ ಕಲ್ಮಶರಹಿತ ಮನಸ್ಸು. ವ್ಯಾಪಾರದಲ್ಲೆಷ್ಟು ಚತುರನೋ ಒಳ್ಳೆಯತನದಲ್ಲೂ ಅಷ್ಟೇ ಮುಂದು. ಒಬ್ಬರನ್ನೂ ನೋಯಿಸದ ಜೀವ. ಬಂದ ಲಾಭದಲ್ಲಿ ತನಗಿಷ್ಟು ಇಟ್ಟುಕೊಂಡು ಉಳಿದದ್ದನ್ನು ದೇವರ ಹೆಸರಿನಲ್ಲಿ ಬಡ-ಬಗ್ಗರಿಗೆ ದಾನ ಮಾಡಿಬಿಡುತ್ತಿದ್ದ. ಅವನ ಒಳ್ಳೆಯತನ ಕಂಡ ದೇವರು ಒಮ್ಮೆ ಕನಸಿನಲ್ಲಿ ಕಾಣಿಸಿಕೊಂಡು, 'ವತ್ಸಾ, ನಿನಗೆ ಏನೇ ತೊಂದರೆ ಬಂದರೂ ನನ್ನನ್ನು ಒಮ್ಮೆ ಸ್ಮರಿಸಿಕೋ. ನಾನು ಬಂದು ನಿನ್ನ ಕಷ್ಟವನ್ನು ಪರಿಹರಿಸುತ್ತೇನೆ' ಎಂದ. ದೇವರೇ ಅಭಯವಿತ್ತಮೇಲೆ ಇನ್ನು ಭಯವೆಲ್ಲಿಯದು ಎಂದು ಭಾವಿಸಿದ ವ್ಯಾಪಾರಿ ದೂರದ ಊರುಗಳಿಗೆ ವ್ಯಾಪಾರಕ್ಕೆ ಹೋಗಲಾರಂಭಿಸಿದ. ಹೀಗೇ ಒಮ್ಮೆ ಹಡಗಿನಲ್ಲಿ ಸರಕನ್ನು ಹೇರಿಕೊಂಡು ಹೋಗುತ್ತಿದ್ದಾಗ, ಕಂಡು ಕೇಳರಿಯದ ಭಯಂಕರ ಚಂಡಮಾರುತ ಸಮುದ್ರಕ್ಕೆ ಅಪ್ಪಳಿಸಿತು. ಆ ಆರ್ಭಟಕ್ಕೆ ಸಿಕ್ಕ ಹಡಗು ಹೊಯ್ದಾಡಿತು. ನಿಧಾನವಾಗಿ ಮುಳುಗತೊಡಗಿತು. ವ್ಯಾಪಾರಿಗೆ ತಕ್ಷಣ ದೇವರ ನೆನಪಾಯಿತು. 'ದೇವರೇ ನಾನು ಪ್ರಾಣಾಪಾಯದಲ್ಲಿ ಸಿಲುಕಿದ್ದೇನೆ. ನನ್ನನ್ನು ಕಾಪಾಡು ಬಾ' ಎಂದು ಮೊರೆಯಿಟ್ಟ. ದೇವರ ನಿರೀಕ್ಷೆಯಲ್ಲಿ ಆಕಾಶ ನೋಡುತ್ತಾ ಕುಳಿತುಬಿಟ್ಟ. ಆಗ, ಅವನ ಹಡಗಿಗಿಂತ ದೊಡ್ಡದಾದ ಹಾಗೂ ವೇಗವಾಗಿ ಹೋಗಬಲ್ಲ ಹಡಗೊಂದು ಪಕ್ಕದಲ್ಲಿ ಬಂದಿತು. ಅದರ ವ್ಯಾಪಾರಿ ಅವನನ್ನು ಕೂಗಿ ಕರೆದ. 'ನಿನ್ನ ಹಡಗು ಮುಳುಗುತ್ತಿದೆ, ನನ್ನದಕ್ಕೆ ಬಾ, ಜೀವ ಉಳಿಸಿಕೋ' ಎಂದ. ದೇವರಿಗಾಗಿ ಕಾಯುತ್ತಾ ಕುಳಿತಿದ್ದನಲ್ಲ? ಹಾಗಾಗಿ ವ್ಯಾಪಾರಿ ತಿರುಗಿಯೂ ನೋಡಲಿಲ್ಲ. ಇನ್ನೂ ಎರಡು ಹಡಗುಗಳು ತಾವಾಗಿಯೇ ಅವನ ಸಹಾಯಕ್ಕೆ ಬಂದವು. ವ್ಯಾಪಾರಿ ಕದಲಲೇ ಇಲ್ಲ. ಕೊನೆಗೊಮ್ಮೆ ಅವನ ಹಡಗು ಪೂರ್ತಿ ಮುಳುಗಿತು. ವ್ಯಾಪಾರಿ ಸತ್ತೇ ಹೋದ. ತುಂಬಾ ಪುಣ್ಯಕಾರ್ಯಗಳನ್ನು ಮಾಡಿದ್ದರಿಂದ ಸೀದಾ ಸ್ವರ್ಗಕ್ಕೇ ಪ್ರವೇಶ ಸಿಕ್ಕಿತು. ದೇವರನ್ನು ಕಾಣುತ್ತಿದ್ದಂತೆ ಅವನ ದುಃಖದ ಕಟ್ಟೆಯೊಡೆಯಿತು. 'ಬಂದು ಕಾಪಾಡುತ್ತೀ ಎಂದು ಮಾತು ಕೊಟ್ಟಿದ್ದೆಯಲ್ಲ ಭಗವಂತಾ, ನೀನು ಹೀಗೆ ಮೋಸ ಮಾಡಬಹುದೇ?' ಎಂದು ಕಣ್ಣೀರು ತುಂಬಿಕೊಂಡು ಕೇಳಿದ. 'ಬಂದೆನಲ್ಲ ವತ್ಸಾ ನಾನು, ಒಂದಲ್ಲ, ಮೂರು ಬಾರಿ ಬಂದೆ. ಮೂರು ಹಡಗುಗಳ ರೂಪದಲ್ಲಿ ನಿನ್ನ ಜೀವ ಉಳಿಸಲು ಬಂದೆ. ನಿರಾಕರಿಸಿ ಕಳಿಸಿದ್ದು ನೀನೇ ಅಲ್ಲವೇ, ನೆನಪು ಮಾಡಿಕೋ. ನಾನಂತೂ ಮಾತಿಗೆ ತಪ್ಪಲಿಲ್ಲ' ಎಂದ ದೇವರು. ಆಗ ವ್ಯಾಪಾರಿಗೆ ತನ್ನ ಅವಿವೇಕದ ಅರಿವಾಯಿತು. ಆದರೇನು, ಕಾಲ ಮಿಂಚಿ ಹೋಗಿತ್ತು!




ಕೆಂಪು ಕೋಟೆಯಲ್ಲಿ, ಕೆಂಪು ಪೇಟ ಸುತ್ತಿಕೊಂಡು, ಸ್ವಾತಂತ್ರ್ಯೋತ್ಸವದ ತಮ್ಮ ಚೊಚ್ಚಲ ಭಾಷಣವನ್ನು ಮಾಡುತ್ತಿದ್ದ ನೂತನ ಪ್ರಧಾನಿ ಮೋದಿಯವರನ್ನು ನೋಡಿದ ತಕ್ಷಣ ಯಾಕೋ ಈ ಕಥೆ ನೆನಪಾಯಿತು. ಈಗ್ಗೆ ಕೆಲ ತಿಂಗಳುಗಳ ಹಿಂದಿನವರೆಗೂ ಯಾರಾದರೂ ನಮ್ಮನ್ನು, ಈ ದೇಶದ ಭವಿಷ್ಯದ ಬಗ್ಗೆ ನಿಮಗೇನನಿಸುತ್ತದೆ ಎಂದು ಕೇಳಿದಾಗಲೆಲ್ಲ ಸಿಗುತ್ತಿದ್ದ ಉತ್ತರ ಒಂದೇ. 'ಈ ದೇಶದ ಹಣೆಬರಹವೇ ಇಷ್ಟು, ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ' ಎಂಬುದು! ಯಾವುದೂ ಬದಲಾಗುವುದಿಲ್ಲ, ಇನ್ನು ಇಷ್ಟೇ ಅಥವಾ ಇದಕ್ಕಿಂತ ಅಧ್ವಾನ ಎಂಬ ಮನಸ್ಥಿತಿಯಲ್ಲಿದ್ದವರಿಗೆ ಮೋದಿ ಎಂಬ ಬದಲಾವಣೆಯ ಪರ್ವವನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಲು, ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ. ಯಾವುದೋ ಮಾಯೆ, ನೋಡನೋಡುತ್ತಿದ್ದಂತೆಯೇ ಅದೆಲ್ಲಿಂದಲೋ ನಮಗಾಗಿ ಧುತ್ತೆಂದು ಒಳ್ಳೆಯ ದಿನಗಳನ್ನು ಹಾಗೂ ಬದಲಾವಣೆಗಳನ್ನು ತಂದು ಕೊಟ್ಟೀತೆಂದು ಕಾದುಕುಳಿತಿರುವ ನಾವೆಲ್ಲ ದೇವರ ನಿರೀಕ್ಷೆಯಲ್ಲಿ ಕುಳಿತ ವ್ಯಾಪಾರಿಯ ಪ್ರತಿರೂಪಗಳಂತಾಗಿ ಬಿಟ್ಟಿದ್ದೇವೆ ಅಲ್ಲವೇ? ಹೌದು. ಅಧಿಕಾರಕ್ಕೇರಿದ ಎರಡೇ ತಿಂಗಳುಗಳಲ್ಲಿ ನಮ್ಮ ಈ ಮನಸ್ಥಿತಿಯನ್ನು ಬಹಳ ಚೆನ್ನಾಗಿ ಅರಿತಿದ್ದಾರೆ ಮೋದಿ. ಆದ್ದರಿಂದಲೇ ತಮ್ಮ ಭಾಷಣದಲ್ಲಿ ನಮಗೆ ಬಹಳಷ್ಟು ಸಂದೇಶಗಳನ್ನು ರವಾನಿಸಿದ್ದಾರೆ.

ಈಗಾಗಲೇ ಮೋದಿಯವರ ಚುನಾವಣಾ ಪ್ರಚಾರ ಸಂದರ್ಭದ ಭಾಷಣಗಳನ್ನು ಕೇಳಿರುವ ನಮಗೆ, ಅವರು ಕೆಂಪು ಕೋಟೆಯಲ್ಲಿ ನಿಂತು ಚೀಟಿ ಓದುವುದಿಲ್ಲ ಎಂಬ ಖಾತ್ರಿಯಂತೂ ಖಂಡಿತ ಇತ್ತು. ಆದರೆ ಅವರ ಮಾತಿನ ಚಾಟಿಯೇಟು ನಮ್ಮನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿಯೂ ಇರಲಿದೆ ಎಂಬ ನಿರೀಕ್ಷೆ ಇರಲೇ ಇಲ್ಲ. ತಮ್ಮನ್ನು ಪ್ರಧಾನ ಸೇವಕ ಎಂದು ಕರೆದುಕೊಂಡ ಮೋದಿ, ಈ ಹಿಂದಿನ ಪ್ರಧಾನಿಗಳು ಮಾಡುತ್ತಿದ್ದಂತೆ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸುವ ಗೋಜಿಗೇ ಹೋಗಲಿಲ್ಲ. ಕಡು ಬಡವರಿಗೂ ಬ್ಯಾಂಕ್ ಖಾತೆಗಳನ್ನು ದೊರಕಿಸಿಕೊಡುವ ಜನ-ಧನ ಯೋಜನೆಯೊಂದನ್ನೇ ಅವರು ಪ್ರಸ್ತಾಪಿಸಿದ್ದು. ಉಳಿದಂತೆ, ಎಲ್ಲರೂ ಒಟ್ಟಾಗಿ ಸೇರಿ ಕಾಣಬೇಕಿರುವ ದೊಡ್ಡ ದೊಡ್ಡ ಕನಸುಗಳ, ಹೊರಬೇಕಿರುವ ಜವಾಬ್ದಾರಿಯ ಬಗ್ಗೆಯೇ ಮಾತು. ನಮ್ಮದೋ, ಉತ್ತಮ ಸರ್ಕಾರವನ್ನು ಆರಿಸಿಕಳಿಸಿದ್ದಾಯಿತಲ್ಲ, ಇನ್ನು ನಮ್ಮ ಪಾತ್ರ ಮುಗಿಯಿತು ಎಂಬ ನಿಶ್ಚಲ ಸ್ಥಿತಿ. ಅವರದ್ದು, ‘ಪ್ರತಿ ಭಾರತೀಯನೂ ಒಂದು ಹೆಜ್ಜೆ ಮುಂದಿಟ್ಟರೆ, ದೇಶ ನೂರಿಪ್ಪತ್ತೈದುಕೋಟಿ ಹೆಜ್ಜೆಗಳಷ್ಟು ಮುಂದುವರಿಯಲಿದೆ’ ಎಂದು ನಮ್ಮನ್ನು ಚಲನೆಗೆ ದೂಡುವ ಪ್ರಯತ್ನ! ಜನಮಾನಸವನ್ನು ತಲುಪಿದ ಇಂಥ ಅರ್ಥವತ್ತಾದ ಸಂವಾದ ಚರಿತ್ರೆಯಲ್ಲಿ ಇದೇ ಮೊದಲು! ಕ್ಷೀಣಿಸುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ, ಶೌಚಾಲಯವಿರದ ಶಾಲೆಗಳ ದುಃಸ್ಥಿತಿ, ತುರ್ತಾಗಿ ಮೂಡಲೇಬೇಕಾಗಿರುವ ಸ್ವಚ್ಛತೆಯ ಬಗೆಗಿನ ಅರಿವು, ಇವುಗಳ ಕುರಿತು ಮನೆಯ ಹಿರಿಯಣ್ಣನಂತೆ ಮಾತನಾಡುವ ಪ್ರಧಾನಿಯನ್ನು ಈ ಮೊದಲು ಕಂಡಿದ್ದಿರಾ? ಯುವಕರಿಗೆ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಪ್ರೇರೇಪಣೆಯಾದರೆ ಸಂಸದರಿಗೆ ಆದರ್ಶ ಗ್ರಾಮಗಳನ್ನು ರಚಿಸುವ ಹೊಣೆ. ಎಲೆಕ್ಟ್ರಾನಿಕ್ ಉಪಕರಣಗಳ ಆಮದು ನಿಂತು ಭಾರತ ಸ್ವಾವಲಂಬಿಯಾಗಲಿ ಎಂಬ ಹಪಹಪಿ ಒಂದೆಡೆಯಾದರೆ ವಿದೇಶೀಯರಿಗೆ ' ಕಮ್, ಮೇಕ್ ಇನ್ ಇಂಡಿಯಾ(ಬನ್ನಿ, ಭಾರತದಲ್ಲೇ ತಯಾರಿಸಿ)' ಎಂಬ ಮುಕ್ತ ಆಹ್ವಾನ ಮತ್ತೊಂದೆಡೆ.

'ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಆಗುಹೋಗುಗಳಿಗೆಲ್ಲ ಮುಝೆ ಕ್ಯಾ(ನನಗೇನು ಆಗಬೇಕಾಗಿರುವುದು) ಹಾಗೂ ಮೇರಾ ಕ್ಯಾ(ನನ್ನದೇನು ಹೋಗಬೇಕಾಗಿರುವುದು) ಎಂದೇ ಸ್ಪಂದಿಸಿ ಅಭ್ಯಾಸವಿರುವ ನಾವು ಇನ್ನುಮೇಲಾದರೂ ಅದನ್ನು ಬಿಡಬೇಕಾಗಿದೆ' ಎಂದಾಗ ನಮಗೆಲ್ಲ 'ಕುಂಬಳಕಾಯಿ ಕಳ್ಳ ಎಂದೊಡನೆ ಹೆಗಲುಮುಟ್ಟಿ ನೋಡಿಕೊಂಡಂತಾಗಿದ್ದು' ಸುಳ್ಳಲ್ಲ ಅಲ್ಲವೇ? ಇಲ್ಲಿ ಇನ್ನೊಂದು ವಿಷಯವನ್ನೂ ಹೇಳಬೇಕು. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು ಹೆಚ್ಚಿರುವ ಹಿನ್ನೆಲೆಯಲ್ಲಿ, ಮೋದಿಯವರು ತಮ್ಮ ಭಾಷಣದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡಬೇಕು ಎಂದು ಹಲವರು ಅಹವಾಲುಗಳನ್ನು ಸಲ್ಲಿಸಿದ್ದರು. ಇಡೀ ದೇಶವೇ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿರುವ ಈ ಹೊತ್ತಿನಲ್ಲಿ ಮೋದಿಯವರು ಏನು ಹೇಳುವರೋ ಎಂಬ ಕುತೂಹಲ ಎಲ್ಲರಿಗೂ ಇತ್ತು. ಶಿಕ್ಷೆ ಮಿಗಿಲೋ ಅಥವಾ ಲೈಂಗಿಕ ಶಿಕ್ಷಣ ಮಿಗಿಲೋ ಎಂಬ ಚರ್ಚೆ ಶುರುವಾಗಿ, ಕಾವು ಏರಿ, ಇನ್ನೇನು ಲೈಂಗಿಕ ಶಿಕ್ಷಣದ ಹೊಸ ವಿಶ್ವವಿದ್ಯಾಲಯವನ್ನು ಹುಟ್ಟುಹಾಕುವುದೊಂದೇ ಬಾಕಿ ಎನ್ನುವ ಹಂತದಲ್ಲಿರುವಾಗ ಎಷ್ಟು ಸರಳ ನೇರ ಪರಿಹಾರ ಸೂಚಿಸಿಬಿಟ್ಟರು ನೋಡಿ. 'ಹೆಣ್ಣು ಮಕ್ಕಳನ್ನು ಎಲ್ಲಿಗೆ ಹೋಗುತ್ತೀರಿ ಎಷ್ಟು ಹೊತ್ತಿಗೆ ಬರುತ್ತೀರಿ ಎಂದೆಲ್ಲ ಕೇಳುವ ತಂದೆ-ತಾಯಿಯರು ಗಂಡು ಮಕ್ಕಳನ್ನೂ ಎಂದಾದರೂ ಹೀಗೇ ವಿಚಾರಿಸಿದ್ದೀರಾ?, ನಿರ್ಬಂಧಿಸಿದ್ದೀರಾ?' ಎಂದು ಕೇಳಿದರು. ಪಾಲಕರು ನೈತಿಕ ಹೊಣೆ ಹೊತ್ತರೆ ತಮ್ಮ ಮಕ್ಕಳು ಅತ್ಯಾಚಾರಿಗಳು, ಉಗ್ರಗಾಮಿಗಳು, ನಕ್ಸಲರು ಆಗುವುದನ್ನು ತಡೆಯಬಹುದೆಂದು ಸ್ಪಷ್ಟವಾಗಿ ಹೇಳಿ ಸಮಾಜದ ಸ್ವಾಸ್ಥ್ಯದ ಜವಾಬ್ದಾರಿಯಲ್ಲಿ ನಮ್ಮ ಮಹತ್ತರ ಪಾಲಿರುವುದರ ಅರಿವು ಮೂಡಿಸಿದರು.

ಗರೀಬೀ ಹಟಾವೋ ಎಂದುಬಿಟ್ಟ ಮಾತ್ರಕ್ಕೆ ಬಡತನ ಬಾಲಮುದುರಿಕೊಂಡು ಓಡಿ ಹೋಗುವುದಿಲ್ಲ. ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಮಾತ್ರ ಅದರ ನಿರ್ಮೂಲನೆ ಸಾಧ್ಯ.ನಮಗಿಂತ ಒಂದೇ ಒಂದು ದಿನ ಮುಂಚಿತವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಪಾಕಿಸ್ತಾನದಲ್ಲಿ ಆಗಸ್ಟ್ 14ರಂದು ಪರಿಸ್ಥಿತಿ ಹೇಗಿತ್ತು ಗೊತ್ತೆ? ಅಂದು ದೇಶದೆಲ್ಲೆಡೆ ಸ್ವಾತಂತ್ರ್ಯದ ಸಂಭ್ರಮವನ್ನೂ ಮೀರಿಸುವ ರಾಷ್ಟ್ರೀಯ ಬಿಕ್ಕಟ್ಟು! ಒಂದು ಕಡೆ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದಲ್ಲಿ, ಆಡಳಿತ ಪಕ್ಷವನ್ನು ವಿರೋಧಿಸಿ ನಡೆದ 'ಸ್ವಾತಂತ್ರ್ಯದ ಮೆರವಣಿಗೆ'ಯಾದರೆ ಮತ್ತೊಂದು ಕಡೆ ತಾಹಿರ್-ಉಲ್-ಕದ್ರಿ ಎಂಬ ಮುಸ್ಲಿಂ ಧರ್ಮಗುರುವಿನ ಅನುಯಾಯಿಗಳ ಪ್ರತಿಭಟನೆ. ಪ್ರಧಾನಿ ನವಾಜ್ ಶರೀಫರ ರಾಜೀನಾಮೆಗೆ ಇಬ್ಬರದೂ ಒತ್ತಾಯ. ಕಳೆದ ವರ್ಷ ಚುನಾಯಿತರಾದ ಅವರು ಗದ್ದುಗೆಯೇರಿದ್ದು ಅಕ್ರಮವಾಗಿ ಎಂಬ ಅಪವಾದ. ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಲುವಾಗಿ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿಗೆ ಹೋಗುವ ಎಲ್ಲ ಹಾದಿಗಳೂ ಅಕ್ಷರಶಃ ಬಂದ್! ಎಂಥ ಆಡಳಿತ ಬೇಕು ಎಂಬುದೇ ಸ್ಪಷ್ಟವಿಲ್ಲದ ಜನತೆ. ಉತ್ತಮ ಆಯ್ಕೆಗಳಿಗೂ ಕೊರತೆ! ಹಾಗೊಮ್ಮೆ, ಹೀಗೊಮ್ಮೆ ಹೊಯ್ದಾಡುವ ಅವರ ಮನಸ್ಸು. ಯಾವ ಕ್ಷಣದಲ್ಲಾದರೂ ಪ್ರಧಾನಿಯ ಮೇಲೆರಗಿ ಆಡಳಿತವನ್ನು ಕಿತ್ತುಕೊಂಡು ಮತ್ತೆ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳಲು ಕಾಯುತ್ತಿರುವ ಸೇನೆ. ಗೆದ್ದಲು ಹುಳುವಿನಂತೆ, ಒಳಗಿನಿಂದಲೇ ದೇಶವನ್ನು ತಿಂದುಹಾಕುತ್ತಿರುವ ತಾಲಿಬಾನ್. ಸೇನೆಯ ಆಡಳಿತವನ್ನು ವಿರೋಧಿಸುವ ಪ್ರಧಾನಿಯ ನೆತ್ತಿಯ ಮೇಲೆ ಸದಾ ಭಯದ ತೂಗುಕತ್ತಿ. ಹೆದರಿದ ಗುಬ್ಬಚ್ಚಿಯಂತೆ ಅವರಾಡುವ ಮಾತುಗಳು. ಯಾರು ಹಡೆಯಬೇಕು ಅಭಿವೃದ್ಧಿಯ ಕನಸುಗಳನ್ನು? ಯಾರು ತೆರೆಯಬೇಕು ಅವಕಾಶಗಳ ಬಾಗಿಲನ್ನು?

ಎಷ್ಟು ವ್ಯತ್ಯಾಸವಿದೆಯಲ್ಲವೇ ಎರಡೂ ದೇಶಗಳ ನಡುವೆ? ಅವುಗಳ ನೇತಾರರ ನಡುವೆ? ಬರೀ ನಮ್ಮ ದೇಶವನ್ನಷ್ಟೇ ಅಲ್ಲ, ಸಾರ್ಕ್ ದೇಶಗಳನ್ನೆಲ್ಲ ಒಟ್ಟಾಗಿ ಕೈಹಿಡಿದು ನಡೆಸುವ ಕನಸು ಕಾಣುತ್ತಿರುವ, ಅಭಿವೃದ್ಧಿಯ ಹೊಸ ಮಜಲುಗಳನ್ನು ಸೃಷ್ಟಿಸುವ ಹುಮ್ಮಸ್ಸಿನಲ್ಲಿರುವ ನಮ್ಮ ಪ್ರಧಾನಿಯ ಧ್ಯೇಯೋದ್ದೇಶವನ್ನು ನಾವು ಮನಗಾಣುವುದು ಯಾವಾಗ? ಅವರೊಂದಿಗೆ ಹೆಗಲುಸೇರಿಸಿ ಕನಸುಗಳನ್ನೆಲ್ಲ ನನಸುಮಾಡಿಕೊಂಡು ಬೀಗುವುದು ಯಾವಾಗ? ನಮ್ಮ ಭಾರತವನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಲು ಇದಕ್ಕಿಂತ ಸುಸಂದರ್ಭ ಬೇಕೇ? ಈಗ ಕೈಗೆಟುಕುವಂತಿರುವ ಅವಕಾಶಗಳನ್ನು ನಮ್ಮ ಎಂದಿನ ಉದಾಸೀನ ಧೋರಣೆಯಿಂದಾಗಿ ಕಳೆದುಕೊಂಡು, ಕೊನೆಗೆ, ದೇವರ ನಿರೀಕ್ಷೆಯಲ್ಲಿ ಕುಳಿತ ವ್ಯಾಪಾರಿಯ ಕಥೆ ನಮ್ಮದಾಗಬಾರದಲ್ಲವೇ?

ನೆನಪಿರಲಿ, God helps only those who help themselves! 

Saturday, 16 August 2014

ಭಾರತ ಪ್ಯಾಲೆಸ್ತೀನನ್ನು ಬೆಂಬಲಿಸಿದ್ದೇಕೆ ಗೊತ್ತೆ?

ಕೆಲ ದಿನಗಳ ಹಿಂದೆ ಬಿಜೆಪಿಯ ರಾಜ್ಯಸಭಾ ಸಂಸದ ತರುಣ್ ವಿಜಯ್‍ರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ಮೋದಿಯವರ ಸಲಹಾಕಾರರ ತಂಡದ ಸದಸ್ಯರೂ ಆಗಿರುವ ಅವರಿಂದ ಸಹಜವಾಗಿಯೇ ಸರ್ಕಾರದ ಆಡಳಿತ ಯಂತ್ರ ಹೇಗೆ ಕಾರ್ಯ‍ನಿರ್ವಹಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ತವಕವಿತ್ತು. ಜೊತೆಜೊತೆಗೇ ಮನಸ್ಸನ್ನು ತುಂಬಿಕೊಂಡಿದ್ದ ನೂರೆಂಟು ಪ್ರಶ್ನೆಗಳು. ಕಾಶ್ಮೀರವನ್ನು ನಮ್ಮೊಂದಿಗೆ ವಿಲೀನಗೊಳಿಸುವ ಸೆಕ್ಷನ್ 370 ಅನುಷ್ಠಾನವಾಗುತ್ತದಾ? ಜಿಹಾದ್‍ನ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಕೊನೆಯಾಗುವ ಬಗೆ ಹೇಗೆ? ಮತಾಂತರಿಗಳನ್ನು ಮಟ್ಟಹಾಕುವ ಯಾವ ಸೂತ್ರ ಸಿದ್ಧವಾಗುತ್ತಿದೆ? ನಮ್ಮ ಗಡಿಯಲ್ಲಿ ಘಳಿಗೆಗೊಮ್ಮೆ ಗುಲ್ಲೆಬ್ಬಿಸುತ್ತಿರುವ ಪಾಕಿಸ್ತಾನವನ್ನು ಶಾಶ್ವತವಾಗಿ ಸುಮ್ಮನಾಗಿಸುವುದು ಹೇಗೆ? ಚೀನಾದ ವಿಷಯದಲ್ಲಿ ನಮ್ಮ ಧೋರಣೆ ಏನು ಇತ್ಯಾದಿ. ಆದರೆ ಹೆಚ್ಚು ಚರ್ಚಿತವಾದದ್ದು ಬದಲಾಗುತ್ತಿರುವ ಭಾರತದ ರಾಜತಾಂತ್ರಿಕ ನಡೆ-ನುಡಿ ರೀತಿ-ನೀತಿಗಳು. ಅದರಲ್ಲೂ ತೀರಾ ಇತ್ತೀಚೆಗೆ ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಇಸ್ರೇಲ್‍ನ ನಿಲುವನ್ನು ವಿರೋಧಿಸಿ ಮತ ಹಾಕಿತಲ್ಲ ಮೋದಿ ಸರ್ಕಾರ, ಆ ವಿಷಯ ಬಹಳ ಗಂಭೀರ ಚರ್ಚೆಗೆ ಒಳಪಟ್ಟಿತು. ಆ ಒಂದು ಉದಾಹರಣೆಯನ್ನು ಗಣನೆಗೆ ತೆಗೆದುಕೊಂಡರೆ ಸಾಕು, ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ಅಗತ್ಯ ಎಷ್ಟಿದೆ ಎಂಬುದು ವೇದ್ಯವಾಗುತ್ತದೆ. ಸರ್ಕಾರದ ನಿರ್ಧಾರಗಳನ್ನು ಶುದ್ಧ ಅವಿವೇಕತನ ಎಂದು ಆತುರದಲ್ಲಿ ಹಳಿಯುವ ಮೊದಲು ನಾವು ಮೈಗೂಡಿಸಿಕೊಳ್ಳಬೇಕಾದ ತಾಳ್ಮೆ, ವಿವೇಚನೆಯ ಬಗ್ಗೆಯೂ ಅರಿವು ಮೂಡುತ್ತದೆ. ಬನ್ನಿ, ಸ್ವಲ್ಪ ವಿಶದವಾಗಿ ಅರಿಯೋಣ ಈ ವಿಷಯವನ್ನು.


ಕಳೆದ ಒಂದು ತಿಂಗಳಿನಿಂದ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‍ಗಳ ನಡುವೆ ನಡೆದಿರುವ ಘನಘೋರ ಕಾಳಗವನ್ನು ಜಗತ್ತಿಡೀ ಗಮನಿಸುತ್ತಿದೆ. ಇಸ್ರೇಲ್‍ನ ಗಡಿಯಾದ ಗಾಜಾ ಪಟ್ಟಿಯಲ್ಲಿ ಬೀಡು ಬಿಟ್ಟಿರುವ, ಆಡಳಿತಾರೂಢ ಹಮಾಸ್‍ನ ಉಗ್ರರು ಇಸ್ರೇಲ್‍ನ ಮೇಲೆ ರಾಕೆಟ್‍ಗಳ ದಾಳಿ ನಡೆಸುತ್ತಿದ್ದಾರೆ. ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ಪ್ಯಾಲೆಸ್ತೀನ್‍‍ನ ಬಹಳಷ್ಟು ಅಮಾಯಕ ನಾಗರಿಕರು, ಮಕ್ಕಳು ಸಾಯುತ್ತಿದ್ದಾರೆ ಎಂದು ಹಮಾಸ್ ಎಲ್ಲರೆದುರು ಬೊಬ್ಬೆ ಹೊಡೆಯುತ್ತಿದೆ. ಆದ್ದರಿಂದಲೇ ಇಸ್ರೇಲ್‍ನ ದಾಳಿಯನ್ನು ಕುರಿತು ತನಿಖೆಯಾಗಬೇಕು ಎಂಬ ನಿರ್ಧಾರವನ್ನು ವಿಶ್ವ ಸಂಸ್ಥೆಯ 47 ರಾಷ್ಟ್ರಗಳ ಒಕ್ಕೂಟ ಒಮ್ಮತದಿಂದ ತೆಗೆದುಕೊಂಡಿತು. ಪರ-ವಿರೋಧವಾಗಿ ನಡೆದ ಮತದಾನದಲ್ಲಿ 29 ದೇಶಗಳು ತನಿಖೆಯ ಪರವಾಗಿ ಮತ ಹಾಕಿದರೆ 17 ದೇಶಗಳು ನಿರ್ಲಿಪ್ತವಾಗಿದ್ದವು. ತನಿಖೆಯನ್ನು ವಿರೋಧಿಸಿ ಮತ ಹಾಕಿದ ಏಕೈಕ ದೇಶ, ದೊಡ್ಡಣ್ಣ ಅಮೆರಿಕ! ಭಾರತ, ರಷ್ಯ ಚೀನಾ ಬ್ರೆಜಿಲ್ ಸೇರಿದಂತೆ ಇತರೆ ರಾಷ್ಟ್ರಗಳೊಡಗೂಡಿ ಇಸ್ರೇಲ್‍ಗೆ ವಿರುದ್ಧವಾಗಿ ಮತ ಹಾಕಿದೊಡನೆ ಎಷ್ಟೆಲ್ಲ ಖಂಡಿಸಿಬಿಟ್ಟೆವಲ್ಲ ನಾವು ಸರ್ಕಾರವನ್ನು. ನಮ್ಮಂಥ ಜನಸಾಮಾನ್ಯರು ಅನುಮಾನಿಸುವುದೇನೋ ಸರಿ, ಆದರೆ ಮೋದಿಯವರ ಕಟ್ಟಾ ಬೆಂಬಲಿಗರೆಲ್ಲ ಸಿಟ್ಟಾಗಿಬಿಟ್ಟರು. ಅಂಥ ಜೀವದ ಗೆಳೆಯ ಇಸ್ರೇಲ್‍ಅನ್ನು ವಿರೋಧಿಸಿ ಮತ ಹಾಕುವ ಬದಲು ನಿರ್ಲಿಪ್ತವಾಗಿರಬಹುದಿತ್ತಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಜ, ಹಮಾಸ್ನ ದಾಳಿಗೆ ನಿರಂತರವಾಗಿ ಒಳಗಾಗುತ್ತಲೇ ಬಂದಿರುವ ಇಸ್ರೇಲ್‍ಗೆ ನಮ್ಮ ಬೆಂಬಲದ ಅಗತ್ಯವಿದೆ. ಏಕೆಂದರೆ ನಾವಿಬ್ಬರೂ ಸಮಾನ ದುಃಖಿಗಳು. ಹಿಂದೂಗಳಿಗೆ ಭಾರತ ಹೇಗೋ ಯಹೂದಿಗಳಿಗೆ ಇಸ್ರೇಲ್ ಹಾಗೇ. ಈ ವಿಶಾಲ ಪ್ರಪಂಚದಲ್ಲಿ, ನಿರುಮ್ಮಳವಾಗಿ ವಾಸಿಸಲು ಅವರಿಗೆ ತಮ್ಮ ತಾಯ್ನಾಡೂ ಸುರಕ್ಷಿತ ಸ್ಥಳವಲ್ಲ. ಅದಕ್ಕೂ ಪ್ರತಿಕ್ಷಣ ಬಡಿದಾಡಬೇಕು. ನೆಮ್ಮದಿ ಎಂಬುದು ಇಲ್ಲವೇ ಇಲ್ಲ. ನಾವು ಪಾಕಿಸ್ತಾನ, ಬಾಂಗ್ಲಾದೇಶಗಳ ಕಿರುಕುಳದಿಂದಾಗಿ ಅನುಭವಿಸುತ್ತಿರುವ ಯಾತನೆಯ ನೂರು ಪಟ್ಟು ಇಸ್ರೇಲ್ ಪ್ರತಿನಿತ್ಯ ಅನುಭವಿಸುತ್ತಿದೆ. ಹಿಟ್ಲರನ ಸರ್ವಾಧಿಕಾರ 60ಲಕ್ಷ ಯಹೂದಿಗಳನ್ನು ಬಲಿತೆಗೆದುಕೊಂಡ ಮೇಲೆ ಅಳಿದುಳಿದ ಯಹೂದಿಗಳು ವಿಶ್ವದೆಲ್ಲೆಡೆಯಿಂದ ಬಂದು ಸೇರಿಕೊಂಡಿದ್ದು ಇಸ್ರೇಲನ್ನೇ. ಅಲ್ಲಿದ್ದ ಅರಬ್ ಮುಸ್ಲಿಮರನ್ನು ಬೇರೆ ಯಾವ ಮುಸ್ಲಿಂ ರಾಷ್ಟ್ರಗಳೂ ಸೇರಿಸಿಕೊಳ್ಳದೆ ಹೋದುದರಿಂದ ಅವರುಗಳು ಗಾಜಾಪಟ್ಟಿಯನ್ನು ಆಕ್ರಮಿಸಿ ಕುಳಿತರು. ಎಲ್ಲ ಕಡೆಗಳಲ್ಲಿ ಮಾಡುವಂತೆ ಇಲ್ಲಿಯೂ ಸ್ವತಂತ್ರ ರಾಷ್ಟ್ರದ ಬೇಡಿಕೆ ಇಟ್ಟರು. ಎಂದಿನಂತೆ ಅವರ ಸಹಾಯಕ್ಕೆ 'ಮುಸ್ಲಿಂ ಭ್ರಾತೃತ್ವ'ದ ಹೆಸರಿನಲ್ಲಿ ಇತರೆ ಮುಸ್ಲಿಂ ರಾಷ್ಟ್ರಗಳು ಧಾವಿಸಿಯೇ ಬಿಟ್ಟವು. ಹಾಗೆ ಹಮಾಸ್ ಎಂಬ ಹೆಸರಿನಲ್ಲಿ ಅಂದು ಶುರುವಾದ ಉಗ್ರರ ಉಪಟಳ ಇಂದಿಗೂ ಇಸ್ರೇಲ್‍‍ಅನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಪ್ರತಿ ಬಾರಿಯೂ ಏಟು ತಿಂದು ಸೋತು ಹಿಂದಿರುಗಿದರೂ ಮತ್ತೆ ಮತ್ತೆ ದಾಳಿ ಮಾಡುತ್ತಲೇ ಇದೆ.

ಈ ಬಾರಿಯ ಯುದ್ಧ ಶುರುವಾಗಿದ್ದು ಕಳೆದ ಜುಲೈ 8ರಂದು. ಇಸ್ರೇಲ್‍ನ ಮೂವರು ಯುವಕರನ್ನು ಹಮಾಸ್‍ನ ಉಗ್ರರು ಅಪಹರಿಸಿ ಹತ್ಯೆ ಮಾಡಿದರು ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯ. ಈ ಕಾರಣಕ್ಕೆ ಇಸ್ರೇಲ್ ಯುದ್ಧಕ್ಕೆ ಇಳಿಯಿತಾದರೂ ಕಾರಣ ಇದೊಂದೇ ಆಗಿರಲಿಲ್ಲ. ಇಸ್ರೇಲ್‍ಅನ್ನು ನೇರವಾಗಿ ವೈಮಾನಿಕ ಅಥವಾ ರಾಕೆಟ್‍ಗಳ ದಾಳಿಯಿಂದ ಸೋಲಿಸಲು ಸಾಧ್ಯವಿಲ್ಲ ಎಂದು ಅರಿತಿತ್ತು ಹಮಾಸ್. ಆದ್ದರಿಂದಲೇ ಈ ಬಾರಿ ಸುಮಾರು 36 ಸುರಂಗಗಳನ್ನು ಕೊರೆದು ಅದರ ಮೂಲಕ ರಹಸ್ಯವಾಗಿ ಇಸ್ರೇಲ್‍‍ಅನ್ನು ತಲುಪಿ ಒಮ್ಮೆಗೇ ಅದರ ಮೇಲೆ ದಾಳಿ ಮಾಡುವ ಇರಾದೆ ಹೊಂದಿತ್ತು. ಪ್ರತಿ ಸುರಂಗ ಕೊರೆಯುವುದಕ್ಕೂ ಏನಿಲ್ಲವೆಂದರೂ ಸುಮಾರು 10ಲಕ್ಷ ರೂಪಾಯಿಗಳಷ್ಟು (ಅಲ್ಲಿನ ಕರೆನ್ಸಿಯಲ್ಲಿ) ಖರ್ಚಾಗಿರಬಹುದು! ಊಟಕ್ಕೂ ಗತಿಯಿಲ್ಲದ ಪ್ಯಾಲೆಸ್ತೀನ್‍ನಲ್ಲಿ ಇಂಥ ಮನೆಹಾಳು ಕೆಲಸಗಳಿಗೆ ಕೋಟ್ಯಂತರ ರೂಪಾಯಿ ಹರಿದುಬರುತ್ತಿರಬೇಕಾದರೆ ಅದ್ಯಾವ ಪರಿಯ ಧರ್ಮಾಂಧತೆ ಆವರಿಸಿಕೊಂಡಿರಬೇಕು ಯೋಚಿಸಿ! ಸುಳಿವು ಸಿಕ್ಕ ಇಸ್ರೇಲ್ ಸುಮ್ಮನೆ ಕೂರುವಂತಿರಲಿಲ್ಲ. ಜುಲೈ 17ರಂದು ತನ್ನ ಸೇನೆಯನ್ನು, ಈ ಎಲ್ಲ ಸುರಂಗಗಳನ್ನು ನಿರ್ನಾಮಗೊಳಿಸಲು ಕಳಿಸಿತು. ಒಂದೊಂದೇ ಸುರಂಗವನ್ನು ಶೋಧಿಸಿ, ಉಗ್ರರನ್ನು ಸದೆಬಡಿದು ಇಡೀ ಸುರಂಗವನ್ನು ನೆಲಸಮಗೊಳಿಸುತ್ತಾ ಸಾಗಿತು. ಆದ್ದರಿಂದಲೇ ತನ್ನ ಕೆಲಸ ಪೂರ್ತಿ ಮುಗಿಯುವವರೆಗೂ ಯಾವ ಕಾರಣಕ್ಕೂ ಗಾಜಾ ಪಟ್ಟಿಯಿಂದ ತನ್ನ ಸೇನೆಯನ್ನು ಹಿಂಪಡೆಯಲಿಲ್ಲ. ಯುದ್ಧ ಇಷ್ಟು ದೀರ್ಘಕಾಲ ನಡೆದದ್ದಕ್ಕೂ ಇದೇ ಕಾರಣ.

10ಸಾವಿರದಷ್ಟು ರಾಕೆಟ್‍ಗಳ ದಾಸ್ತಾನನ್ನು ಇಟ್ಟುಕೊಂಡಿದ್ದ ಹಮಾಸ್ ಇಸ್ರೇಲ್‍ನ ಮೇಲೆ ದಿನವೊಂದಕ್ಕೆ ನೂರಾರು ರಾಕೆಟ್‍ಗಳನ್ನು ಮನಬಂದಂತೆ ಹಾರಿಸುತ್ತಿತ್ತು. ಆದರೂ ಇಸ್ರೇಲ್‍ನಲ್ಲಿ ಸಾವು-ನೋವುಗಳು ಹೆಚ್ಚಾಗಿ ಸಂಭವಿಸಲಿಲ್ಲ. ಏಕೆಂದರೆ ಹಾಗೆ ರಾಕೆಟ್ ಹಾರಿ ಬಂದಾಗ ಸೈರನ್ ಮೊಳಗಿ ಇಸ್ರೇಲ್‍ನ ಜನ ತಮ್ಮ ರಕ್ಷಣೆಗಾಗಿಯೇ ನಿರ್ಮಿಸಲಾಗಿದ್ದ ಕಬ್ಬಿಣದ ಗೂಡುಗಳಲ್ಲಿ ಅಡಗಿಕೊಳ್ಳುತ್ತಿದ್ದರು. ತಾನು ಪ್ರತಿದಾಳಿ ಮಾಡುವ ಮೊದಲು ಇಸ್ರೇಲ್ ಪ್ಯಾಲೆಸ್ತೀನ್‍ನ ನಾಗರಿಕರಿಗೆ ಅಡಗಿಕೊಳ್ಳುವ ಸೂಚನೆ ಕೊಡುತ್ತಿತ್ತು. ಅಷ್ಟಾದರೂ ಅಮಾಯಕ ಜನರು ಸಾಯುತ್ತಿದ್ದಾರೆ ಎಂದು ಬೊಬ್ಬಿರಿಯುವುದನ್ನು ಹಮಾಸ್ ಬಿಡಲಿಲ್ಲ. ಏಕೆಂದರೆ ಹಮಾಸ್‍ನ ಹೇಡಿಗಳು ರಕ್ಷಣೆಗಾಗಿ ಅಡಗುತ್ತಿದ್ದುದೇ ಹೆಂಗಸರು, ಮಕ್ಕಳ ಹಿಂದೆ! ಅವರೆಲ್ಲರೂ ಅಮಾಯಕರೇ ಎಂಬುದೂ ನಿಜವಲ್ಲ. ಜನಸಂಖ್ಯಾ ಜಿಹಾದ್ಆನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ ಹಮಾಸ್‍! ಹುಟ್ಟುವ ನಾಲ್ಕು ಮಕ್ಕಳಲ್ಲಿ ಒಂದು ಜಿಹಾದ್‍ಗಾಗಿಯೇ ಮೀಸಲು. ಇಂಥವರನ್ನು ಬಲಿಕೊಟ್ಟು ವಿಶ್ವದೆದುರು ಕಣ್ಣೀರಿಟ್ಟು ಆನುಕಂಪ ಗಿಟ್ಟಿಸುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ.

ಇಷ್ಟೆಲ್ಲಾ ಆಗುತ್ತಿರಬೇಕಾದರೆ ನಾವು ನ್ಯಾಯವಾಗಿ ಇಸ್ರೇಲ್‍ಅನ್ನೇ ಬೆಂಬಲಿಸಬೇಕಿತ್ತಲ್ಲವೇ? ಅಲ್ಲೇ ಇರುವುದು ನೋಡಿ ಸ್ವಾರಸ್ಯ. ನಾವು ಅದರ ವಿರೋಧವಾಗಿ ಮತ ಚಲಾಯಿಸಿದ ತಕ್ಷಣವೇ ಇಸ್ರೇಲ್‍ ನಮ್ಮ ನಿರ್ಧಾರವನ್ನು ಸ್ವಾಗತಿಸಿತು! ಇದರಿಂದ ನಮ್ಮ ಮಿತೃತ್ವಕ್ಕೆ ಯಾವ ಧಕ್ಕೆಯೂ ಉಂಟಾಗುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿತು. ಕಾರಣವಿಷ್ಟೇ. ಪ್ಯಾಲೆಸ್ತೀನ್ ಎಂದರೆ ಹಮಾಸ್ ಮಾತ್ರವಲ್ಲ. ಒಂದು ಭಾಗವನ್ನು ಹಮಾಸ್ ಆಳುತ್ತಿದ್ದರೆ ಮತ್ತೊಂದನ್ನು ಫತೆಹ್ ಎಂಬ ಶಾಂತಿಪ್ರಿಯರು ಆಳುತ್ತಿದ್ದಾರೆ. ಅವರಿಗೆ ಯುದ್ಧ, ರಕ್ತಪಾತ ಬೇಕಿಲ್ಲ. ಇಷ್ಟು ದಿನ ಹಮಾಸ್‍ಅನ್ನು ಬೆಂಬಲಿಸುತ್ತಿದ್ದ ಈಜಿಪ್ತ್, ಕತಾರ್ ಮತ್ತು ಟರ್ಕಿಗಳಿಗೆ ಈಗ ಜ್ಞಾನೋದಯವಾಗಿದೆ. ಹೀಗೇ ಮುಂದುವರೆದರೆ ಪ್ಯಾಲೆಸ್ತೀನ್‍ನ ಸ್ಥಿತಿ ಇನ್ನೂ ಶೋಚನೀಯವಾಗಿಬಿಡುತ್ತದೆ ಎಂದು ಅವರಿಗೆ ಮನದಟ್ಟಾಗಿದೆ. ಆದ್ದರಿಂದಲೇ ಫತೆಹ್ ಹಾಗೂ ಹಮಾಸ್‍‍ಗೆ ಹೊಂದಿಕೊಂಡು ಒಟ್ಟಾಗಿ ಆಡಳಿತ ನಡೆಸುವಂತೆ ಸೂಚಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದಿಂದಲೂ ಒತ್ತಡ ಹೇರಿಸುತ್ತಿದ್ದಾರೆ.ನಾವು ಬ್ರಿಕ್ಸ್ (BRICS) ರಾಷ್ಟ್ರಗಳೆಲ್ಲ ಸೇರಿ ಸಹಿಮಾಡಿದ ಘೋಷಣೆಯಲ್ಲೂ ಈ ಸಾಲುಗಳು ಸ್ಪಷ್ಟವಾಗಿ ನಮೂದಾಗಿವೆ. ಪ್ಯಾಲೆಸ್ತೀನ್‍ನಲ್ಲಿ ಶಾಂತಿಪ್ರಿಯರ ಆಡಳಿತ ಶುರುವಾದರೆ ಲಾಭವಾಗುವುದು ಇಸ್ರೇಲ್‍ಗೇ. ಅದಕ್ಕೂ ಒಂದು ದೀರ್ಘಾವಧಿ ವಿರಾಮದ ಅಗತ್ಯವಿದೆ. ನೀವು ನಂಬುವುದಿಲ್ಲ, ಈ ಸಂಘರ್ಷ ಯುದ್ಧಗಳಿಂದಾಗಿ ಇಸ್ರೇಲಿಗಳಿಗೆ ಮಕ್ಕಳನ್ನು ಮಾಡಿಕೊಳ್ಳಲೂ ಪುರುಸೊತ್ತು ಸಿಗುತ್ತಿಲ್ಲ. ಮಕ್ಕಳ ಜನನದ ಪ್ರಮಾಣ ದಿನೇ ದಿನೇ ಕುಸಿಯುತ್ತಿದೆ. ಇದು ಒಂದು ಕಾರಣವಾದರೆ ಮತ್ತೂ ಒಂದು ಕಾರಣವಿದೆ. ಇಂದು ಜಗತ್ತಿನ ಯಾವ ಎರಡು ಮುಸ್ಲಿಂ ರಾಷ್ಟ್ರಗಳೂ ಸ್ನೇಹದಿಂದಿಲ್ಲ. ಒಂದೇ ರಾಷ್ಟ್ರಕ್ಕೆ ಸೇರಿದ ಪಂಗಡಗಳಲ್ಲೇ ಒಮ್ಮತವಿಲ್ಲ. ಅವರವರೇ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ. ಇಂಥ ಸನ್ನಿವೇಶದಿಂದ ರೋಸಿಹೋಗಿರುವ ಬಹಳಷ್ಟು ರಾಷ್ಟ್ರಗಳಿಗೆ ಬದಲಾವಣೆ ಬೇಕಾಗಿದೆ. ತನ್ನ ಮೇಲೆ ನಂಬಿಕೆಯಿಟ್ಟು ಬೆಂಬಲಿಸಿರುವ ಭಾರತವನ್ನು ನಾಳೆ ಪ್ಯಾಲೆಸ್ತೀನ್ ಕಾಶ್ಮೀರದ ವಿಷಯದಲ್ಲಿ ಬೆಂಬಲಿಸಲೇ ಬೇಕಾಗುತ್ತದೆ. ಪಾಕಿಸ್ತಾನವೆಂಬ ಪೀಡೆಯನ್ನು ಮತ್ತಷ್ಟು ಕಾರ್ಗಿಲ್‍ಗಳ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬ ನಿಯಮವೇನೂ ಇಲ್ಲವಲ್ಲ? ನೆರವು ಅನಪೇಕ್ಷಿತ ರೂಪದಲ್ಲಿ ಬಂದರೆ ಯಾಕಾಗಬಾರದು? ಇಲ್ಲಿ ಮತ್ತೊಂದು ಸೋಜಿಗವೂ ಇದೆ. ಅಷ್ಟೂ ರಾಷ್ಟ್ರಗಳ ಪೈಕಿ ಇಸ್ರೇಲ್‍‍ನ ಪರವಾಗಿ ನಿಂತದ್ದು ಅಮೆರಿಕ ಒಂದೇ. ಒಂದೆಡೆ ಇಸ್ರೇಲ್ ನೂರಾರು ನಾಗರಿಕರನ್ನು ಕೊಲ್ಲುವುದು ತಪ್ಪು ಎಂದು ಬುದ್ಧಿ ಹೇಳುವ ಅಮೆರಿಕ ಮತ್ತೊಂದೆಡೆ ಅದಕ್ಕೆ ಯುದ್ಧ ಸಾಮಗ್ರಿಗಳನ್ನು ತುಂಬಾ ನಿಯತ್ತಾಗಿ ಸರಬರಾಜು ಮಾಡುತ್ತದೆ! ಯಾವ ಕಾರಣಕ್ಕೂ ಇಸ್ರೇಲ್ ಸೋಲಲು ಅಮೆರಿಕ ಬಿಡುವುದಿಲ್ಲ!

ಕಾರ್ಗಿಲ್ ಯುದ್ಧ ಹಾಗೂ ಪೋಖ್ರಾನ್‍ನ ಪರೀಕ್ಷೆಯ ನಂತರ ಜಗತ್ತು ನಮ್ಮನ್ನು ನೋಡುವ ರೀತಿ ಬದಲಾಗಿದೆ. ಮೊದಲೆಲ್ಲ ನಮ್ಮ ಪ್ರಧಾನಿ ಅಮೆರಿಕಕ್ಕೆ ಹೋದರೆ ನ್ಯೂಯಾರ್ಕ್ ಟೈಮ್ಸ್ ಅಥವಾ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳಲ್ಲಿ ಒಂದು ಸಾಲೂ ಪ್ರಕಟವಾಗುತ್ತಿರಲಿಲ್ಲ. ಇಂದು ಮೋದಿಯವರ ಪ್ರಮಾಣ ವಚನ ಸ್ವೀಕಾರದ ವಿಷಯ ಅಚ್ಚಾಗದ ಪತ್ರಿಕೆಯೇ ಇಲ್ಲ. ನಮ್ಮ ಸರ್ಕಾರಕ್ಕೆ  ದೇಶದೊಳಗಿನ ಸಮಸ್ಯೆಗಳನ್ನು ನಿವಾರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಸರಿಯಾದ ಛಾಪು ಮೂಡಿಸುವುದು. ದೇಶದ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಣಯಗಳ ರೀತಿ,ಆಳ,ಆಂತರ್ಯಗಳು ನಮಗೆ ತಕ್ಷಣಕ್ಕೆ ಅರ್ಥವಾಗದೇ ಇರಬಹುದು. ಹಾಗೆಂದು ನಾವೇ ವಿರೋಧ ಪಕ್ಷದವರಿಗಿಂತ ಹೆಚ್ಚಾಗಿ ಹಾರಾಡಿಬಿಟ್ಟರೆ ಯಾರು ಬೆಂಬಲಿಸಬೇಕು?

ಕೊನೆಯದಾಗಿ ತರುಣ್ ಒಂದು ಮಾತು ಹೇಳಿದರು. 'ಇಷ್ಟು ವರ್ಷಗಳ ನಂತರ ಓರ್ವ ನಿಸ್ವಾರ್ಥ ಸ್ವಯಂಸೇವಕನನ್ನು ಭಾರತಮಾತೆ ತನ್ನ ಸೇವೆಗೆ ಆರಿಸಿಕೊಂಡಿದ್ದಾಳೆ ಎಂದ ಮೇಲೆ ಇದರಲ್ಲೇನೋ ಮರ್ಮವಿರಲೇಬೇಕಲ್ಲವೇ?' ಎಂದು. ನಿಜ, ಭಾರತದ ಭಾಗ್ಯವನ್ನು ವಿಧಾತ ಸರಿಯಾಗಿಯೇ ಬರೆದಿರಬೇಕು. ನಂಬಿಕೆಯಿಟ್ಟು ಕಾದು ನೋಡೋಣ. ಅಲ್ಲವೇ? 

Friday, 8 August 2014

ಧಾರಾವಾಹಿಗಳ ಲೋಕದಲ್ಲೇಕೆ ಕೃತಕತೆಯ ಕೇಕೆ?

ಭವ್ಯವಾದ ಮನೆಯ ಕೋಣೆಯೊಂದರಲ್ಲಿ ಕಥಾನಾಯಕ ತನ್ನ ಅಪ್ಪ ಹಾಗೂ ಅಮ್ಮನೊಂದಿಗೆ ಕುಳಿತಿರುತ್ತಾನೆ. ಗೃಹಿಣಿಯಾದ ಅಮ್ಮ ಸೀರೆಗೆ ಹೊಂದುವಂಥ ಬಳೆ, ಲಿಪ್‍ಸ್ಟಿಕ್ ಹಾಗೂ ಹಣೆಬೊಟ್ಟುಗಳನ್ನು ಧರಿಸಿ ಮಿರಿಮಿರಿ ಮಿಂಚುತ್ತಾ ಕುಳಿತಿದ್ದರೆ, ನಿವೃತ್ತನಾದ ಅಪ್ಪ ಟ್ರಿಮ್ ಆಗಿ ಕುಳಿತ ‘ಸಫಾರಿ’ಧಾರಿ! ಸ್ವಲ್ಪ ಹೊತ್ತಿನ ಮೌನದ ನಂತರ, "ಅಪ್ಪಾ, ನಿಮಗೆ ಹೇಗೆ ಹೇಳುವುದು ಎಂದೇ ತಿಳಿಯುತ್ತಿಲ್ಲ. ನಮಗೆ ಸಿಗಬೇಕಾಗಿದ್ದ ಟೆಂಡರ್ ನಮ್ಮ ಪ್ರತಿಸ್ಪರ್ಧಿ ಕಂಪೆನಿಗೆ ಸಿಕ್ಕಿಬಿಟ್ಟಿದೆ. ಯಾರೋ ನಮ್ಮವರೇ ನಮಗೆ ಮೋಸ ಮಾಡಿದ್ದಾರೆ." ಎನ್ನುತ್ತಾನೆ ಮಗ. ವಿಷಯ ಕೇಳಿದ ತಕ್ಷಣ ತಂದೆ-ತಾಯಿ ಒಟ್ಟಿಗೆ ಬೆಚ್ಚಿಬೀಳುವುದಿಲ್ಲ. ಅಥವಾ ಹಾಗೆ ತೋರಿಸುವುದಿಲ್ಲ. ಒಬ್ಬೊಬ್ಬರಾಗಿ ಕಣ್ಣುಗಳನ್ನು ಅಗಲಿಸುತ್ತಾರೆ. ಹಾಗೆ ಅಗಲಿಸಿದಾಗ, ನಾಯಕನ ತಾಯಿಯ ಕಣ್ಣಿಗೆ ಹಚ್ಚಿದ ಲೈನರ್, ಮಸ್ಕರಾ, ಕಾಡಿಗೆಗಳೆಲ್ಲ ಸ್ಪಷ್ಟವಾಗಿ ಗೋಚರಿಸುತ್ತವೆ. ಅದನ್ನು ನೋಡಿಯೇ, ಅವರಿಗೆ ಶಾಕ್ ಆಗಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇಬ್ಬರನ್ನೂ ಹೀಗೆ ಸರದಿಯಲ್ಲಿ ಕೆಲಕ್ಷಣಗಳ ಮಟ್ಟಿಗೆ ತೋರಿಸುವಾಗ, ಹಿನ್ನೆಲೆಯಲ್ಲಿ, ಆಕಾಶವೇ ಕಳಚಿ ಬಿದ್ದಿತೇನೋ ಎನಿಸುವಂಥ ಕರ್ಣ-ಕಠೋರ ಸಂಗೀತ ಹೊಮ್ಮುತ್ತದೆ. ಅದರ ನಂತರದ ದೃಶ್ಯ, ಪಕ್ಕದ ಕೋಣೆಯಲ್ಲಿ ನಿಂತು, ಅವರ ಮಾತುಗಳನ್ನು ಕೇಳಿಸಿಕೊಂಡು ಮುಗುಳ್ನಗುತ್ತಿರುವ ಖಳನಾಯಕಿ ಸೊಸೆಯದ್ದು. ಅವಳಿಗೇ ಬೇರೆ ಹಿನ್ನೆಲೆ ಸಂಗೀತ! ಮೋಸದ ರೂವಾರಿ ಅವಳೇ ಎಂಬುದು ಅವಳ ಸೇಡು ತುಂಬಿದ ನಗೆಯನ್ನು, ಇರಿಯುವ ನೋಟವನ್ನು ನೋಡಿದ ಕೂಡಲೇ ಗೊತ್ತಾಗಿಹೋಗುತ್ತದೆ.

ಇದು ಇಂದಿನ ಯಾವುದೇ ಭಾಷೆಯ ಮೆಗಾ-ಧಾರಾವಾಹಿಗಳಲ್ಲಿ ಕಾಣಬರುವ ಸಾಮಾನ್ಯ ಸನ್ನಿವೇಶಗಳಲ್ಲಿ ಒಂದು. ಮತ್ತೊಂದು ಸನ್ನಿವೇಶ ನೋಡಿ. ಕಥಾನಾಯಕಿ ಹಣ್ಣು-ಕಾಯಿಯ ಬುಟ್ಟಿ ಹಿಡಿದು ದೇವಸ್ಥಾನಕ್ಕೆ ಹೊರಡುತ್ತಾಳೆ. ಸೋಮವಾರದ ಸಂಚಿಕೆಯಲ್ಲಿ ಅವಳು ಆಟೋ ಹತ್ತಿದರೆ ದೇವಸ್ಥಾನ ತಲುಪುವುದು ಗುರುವಾರ ಅಥವಾ ಶುಕ್ರವಾರದ ಸಂಚಿಕೆಯಲ್ಲಿಯೇ. ಏಕೆಂದರೆ ಮಾರ್ಗ ಮಧ್ಯದಲ್ಲಿ ಅವಳಿಗೆ, ಬಹಳ ದಿನಗಳಿಂದ ಕಾಣೆಯಾಗಿದ್ದ ಖಳನಾಯಕ ಕಣ್ಣಿಗೆ ಬೀಳುತ್ತಾನೆ. ರಸ್ತೆ ಬದಿಯಲ್ಲಿ ನಿಂತು ಫೋನ್‍ನಲ್ಲಿ ಮಾತನಾಡುತ್ತಿದ್ದವನನ್ನು ಅವಳು ಗಮನಿಸಿ, ಆಟೋ ನಿಲ್ಲಿಸುತ್ತಾಳೆ. ಅವನೇನಾ ಎಂದು ಖಚಿತಪಡಿಸಿಕೊಳ್ಳಲು ಮೆಲ್ಲಗೆ ಅವನ ಬಳಿ ಹೋಗುತ್ತಾಳೆ. ಅವಳನ್ನು ನೋಡಿ ಓಡುವ ಅವನು, ಅವನನ್ನು ಹಿಂಬಾಲಿಸಿ ಓಡುವ ಅವಳು, ಅವಳನ್ನೇ ಕಾಯುತ್ತಾ ನಿಲ್ಲುವ ಆಟೋದವನು! ಒಟ್ಟಿನಲ್ಲಿ ಖಳನಾಯಕನನ್ನು ಹಿಡಿಯಲಾಗದೆ ಉಸ್ಸಪ್ಪಾ ಎಂದು ಮರಳಿ ಆಟೋದವನ ಬಳಿ ಬಂದು, 'ನಡಿಯಪ್ಪಾ ದೇವಸ್ಥಾನಕ್ಕೆ' ಎಂದು ಹೇಳುವ ಹೊತ್ತಿಗೆ ಗುರುವಾರ ಬಂದೇ ಬಿಟ್ಟಿರುತ್ತದೆ! ದೇವಸ್ಥಾನದ ಒಳಗಿರುವ ಆ ದೇವರಾಣೆಗೂ ಇಲ್ಲಿ ಕಥೆಯೆಂಬುದು ಗೌಣ. ಪ್ರಾಮುಖ್ಯವೇನಿದ್ದರೂ ನಾಟಕೀಯತೆ, ಅಸಹಜತೆಯನ್ನು ಮೆರೆಸುವ ಪಾತ್ರ ಹಾಗೂ ಘಟನೆಗಳಿಗೆ ಮಾತ್ರ. ಸಂಬಂಧಗಳ ಗಾಢತೆಯನ್ನು ಕಲಕಿ, ಅರ್ಥವನ್ನು ತಿರುಚಿ, ಬೆಲೆಯನ್ನೇ ಬರಿದುಮಾಡಿಬಿಡುವ ಈ ಧಾರಾವಾಹಿಗಳದ್ದು ಎಂಥಾ ಲೋಕ? ಇಲ್ಲಿ ಒಬ್ಬನ ಹೆಂಡತಿಯಾಗಿ ಮಗುವನ್ನು ಹೆತ್ತವಳು ಸಲೀಸಾಗಿ ಮತ್ತೊಬ್ಬನ ಹೆಂಡತಿಯಾಗಬಲ್ಲಳು. ದ್ವೇಷ ಸಾಧಿಸಲೆಂದೇ ಒಂದು ಮನೆಗೆ ಸೊಸೆಯ ರೂಪದ ಹೆಮ್ಮಾರಿಯಾಗಿ ಬರಬಲ್ಲಳು. ವಂಶವನ್ನೇ ನಿರ್ವಂಶ ಮಾಡುವ ಹಟ ಹಿಡಿದು ಗೆಲ್ಲಬಲ್ಲಳು. ಎಲ್ಲ ವ್ಯೂಹ, ತಂತ್ರಗಾರಿಕೆಗಳೂ ಇಲ್ಲಿ ಲಭ್ಯ. ಕುಡಿಯುವ ಹಾಲಿನಲ್ಲಿ ವಿಷ ಬೆರೆಸುವುದರಿಂದ ಹಿಡಿದು ಗರ್ಭಿಣಿಯನ್ನು ಹೊತ್ತೊಯ್ಯುವುದೂ ಇಲ್ಲಿ ಸಾಧ್ಯ. 'ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳೂ ಕೇವಲ ಕಾಲ್ಪನಿಕ' ಎಂಬ ಒಂದು ಸಾಲು ಹಾಕಿಬಿಟ್ಟರೆ ಕಲ್ಪನೆಯ ಕುದುರೆ ಹುಚ್ಚೆದ್ದು ಓಡುವುದಕ್ಕೆ ರಹದಾರಿ ಸಿಕ್ಕಿದಂತೆಯೇ! ನಂಟುಗಳನ್ನು ಬಿಂಬಿಸುವಲ್ಲಿ ಸ್ವಲ್ಪವಾದರೂ ನೈಜತೆ ಬೇಡವೇ? ಪಾತ್ರಗಳಿಗೊಂದು ತೂಕವಿರಬಾರದೇ? ಗಮನಿಸಿ ನೋಡಿ, ಮನೆಯಲ್ಲಿರಲಿ ಅಥವಾ ಆಸ್ಪತ್ರೆಯ ಹಾಸಿಗೆಯಲ್ಲಿರಲಿ, ಸ್ತ್ರೀ ಪಾತ್ರಗಳ ಸಿಂಗಾರದಲ್ಲಿ ಒಂಚೂರೂ ವ್ಯತ್ಯಾಸವಿರುವುದಿಲ್ಲ. ಸಂದರ್ಭ ಯಾವುದೇ ಇರಲಿ, ಕಾಲೇಜು ಹುಡುಗಿಯರಿಂದ ಹಿಡಿದು, ಮೂವರು ಸೊಸೆಯಂದಿರಿರುವ ಅತ್ತೆಯವರೆಗೂ ಎಲ್ಲರ ಮುಖಗಳ ಮೇಲೂ ಮುಕ್ಕಾಲು ಕೇಜಿ ಮೇಕಪ್ ಇರಲೇಬೇಕು. ಅದು ಹೋಗಲಿ, ರಾತ್ರಿ ನಿದ್ರಿಸುತ್ತಿರುವಾಗಲೂ ತಲೆಯ ಒಂದು ಕೂದಲೂ ಅತ್ತಿತ್ತ ಅಲುಗುವುದಿಲ್ಲ. ಸೀರೆಯ ನೆರಿಗೆ ಸರಿಯುವುದಿಲ್ಲ. ಸೆರಗು ಸುಕ್ಕುಗಟ್ಟುವುದಿಲ್ಲ. ಸಣ್ಣ ತಲೆ ನೋವು ಬಂದರೆ ಅಥವಾ ಒಂದು ಇಡೀ ದಿನ ಅಡುಗೆಮನೆಯಲ್ಲಿ ಕಳೆದರೆ ಅಬ್ಬೆಪಾರಿಗಳಂತೆ ಕಾಣುವವರು ನಾವು ನೀವು ಮಾತ್ರ. ಅವರಿಗೆ ಅದು ಅನ್ವಯಿಸುವುದೇ ಇಲ್ಲ.

ಮೊದಲು ಹೀಗಿರಲಿಲ್ಲ ಧಾರಾವಾಹಿಗಳು. ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿ ಹೊಸ ದಾಖಲೆಯನ್ನೇ ಬರೆದ ರಾಮಾಯಣವಾಗಲೀ, ಮಹಾಭಾರತವಾಗಲೀ ಎಷ್ಟು ನೈಜವಾಗಿದ್ದವು! ಕೌಟುಂಬಿಕ ಧಾರಾವಾಹಿಗಳಾದ ನುಕ್ಕಡ್, ಬುನಿಯಾದ್‍ಗಳನ್ನು ಮರೆಯುವುದು ಸಾಧ್ಯವೇ? ಮಕ್ಕಳ ಸಲುವಾಗಿ ಪ್ರಸಾರವಾಗುತ್ತಿದ್ದ ಏಕ್,ದೋ,ತೀನ್,ಚಾರ್ ಹಾಗೂ ವಿಕ್ರಮ್ ಔರ್ ಬೇತಾಲ್‍ನ ಕಥೆಗಳೂ ಅಷ್ಟೇ ಸ್ವಾರಸ್ಯಕರವಾಗಿರುತ್ತಿದ್ದವು. ಪ್ರೇಮ ಕಥೆ ಚಂದ್ರಕಾಂತ, ಪತ್ತೇದಾರಿ ಬ್ಯೋಮಕೇಶ್ ಬಕ್ಷಿ, ಒಂದೇ ಎರಡೇ ವೈವಿಧ್ಯಗಳು? ಚಾಣಕ್ಯನ ನೀತಿಪಾಠ ಒಂದೆಡೆಯಾದರೆ, ಚಿತ್ರಹಾರದ ಹಾಡುಗಳ ಸರಮಾಲೆ ಮತ್ತೊಂದೆಡೆ. ನಮ್ಮ ಭಾನುವಾರ ಶುರುವಾಗುತ್ತಿದ್ದುದೇ ಬೆಳಗಿನ ರಂಗೋಲಿಯಿಂದ. ಇದ್ದದ್ದು ಒಂದೇ ವಾಹಿನಿಯಾದರೂ ಎಲ್ಲ ವಯೋಮಾನದವರ ಅಭಿರುಚಿಗೆ ತಕ್ಕಂತೆ ಇರುತ್ತಿದ್ದವು ಧಾರಾವಾಹಿಗಳು, ಕಾರ್ಯಕ್ರಮಗಳು. ಸಣ್ಣ ಕಥೆಗಳ ಹಂದರವಿದ್ದ, 'ಮಾಲ್ಗುಡಿ ಡೇಸ್'ನ ಉದಾಹರಣೆಯನ್ನೇ ನೋಡಿ. ಒಟ್ಟು 39 ಕಂತುಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿ ನಮ್ಮ ಕರ್ನಾಟಕದ ಕಲಾವಿದರದ್ದೇ ಎಂಬುದೊಂದು ಹೆಮ್ಮೆ. ಪ್ರತಿಭೆಯ ಖನಿಯಾಗಿದ್ದ ಶಂಕರ್‍ನಾಗ್‍ರ ಸಾರಥ್ಯದಲ್ಲಿ, ಮಾಸ್ಟರ್ ಮಂಜುನಾಥ್, ಅನಂತ್‍ನಾಗ್, ಬಿ.ಜಯಶ್ರೀ ಮುಂತಾದವರ ಹೃದಯಸ್ಪರ್ಶಿ ಅಭಿನಯದೊಂದಿಗೆ ಮೂಡಿ ಬಂದ ಈ ಧಾರಾವಾಹಿಗೆ ಇಡೀ ದೇಶ ಮನಸೋತಿತ್ತು. ಹಾಗೆಯೇ, ನಮ್ಮ ದೇಶದ ಸಾಂಸ್ಕೃತಿಕತೆಯ ಸ್ವಾದವನ್ನು ಉಣಬಡಿಸುತ್ತಿದ್ದ ಸುರಭಿ ಎಂಬ ರಸಗವಳವೂ ನೆನಪಿರಬೇಕು ನಿಮಗೆ. ಕಾರ್ಯಕ್ರಮದ ನಿರೂಪಕರಾದ ಸಿದ್ಧಾರ್ಥ ಕಾಕ್ ಹಾಗೂ ರೇಣುಕಾ ಶಹಾನೆ ನಗುನಗುತ್ತಾ 'ನಮಶ್ಕಾರ್'ಎನ್ನುವುದನ್ನೇ ಕಾಯುತ್ತಿತ್ತು ದೇಶದ ಜನತೆ. ಕಾರ್ಯಕ್ರಮದ ಪ್ರಶ್ನೋತ್ತರ ವಿಭಾಗದಲ್ಲಿ, ಪ್ರಯೋಗಾರ್ಥವಾಗಿ, ಮೊತ್ತಮೊದಲ ಬಾರಿಗೆ ಜನರನ್ನು ಉದ್ದೇಶಿಸಿ ಪ್ರಶ್ನೆಗಳನ್ನು ಕೇಳಿ, ಪೋಸ್ಟ್ ಕಾರ್ಡ್ ನಲ್ಲಿ ಉತ್ತರ ಬರೆದು ಕಳುಹಿಸುವಂತೆ ಕೋರಲಾಯಿತು. ಯಾವ ಮಟ್ಟದ ಪ್ರತಿಕ್ರಿಯೆ ಹರಿದು ಬರತೊಡಗಿತ್ತೆಂದರೆ, ಸುಲಭವಾಗಿ ಗುರುತಿಸುವ ಸಲುವಾಗಿ ಅಂಚೆ ಇಲಾಖೆ 'ಕಾಂಪಿಟೇಶನ್ ಪೋಸ್ಟ್ ಕಾರ್ಡ್' ಎಂಬ ಹೊಸ ಕಾರ್ಡನ್ನೇ ಪರಿಚಯಿಸಬೇಕಾಯಿತು! ಇವಿಷ್ಟೇ ಅಲ್ಲದೆ, ಫೌಜಿ, ಸರ್ಕಸ್,  ಕರಮ್‍ಚಂದ್ ಮುಂತಾದ ಅನೇಕ ಧಾರಾವಾಹಿಗಳು ತಮ್ಮ ವಿಭಿನ್ನತೆಯಿಂದಾಗಿ ಮನಸೆಳೆದಿದ್ದವು. ಆದ್ದರಿಂದಲೇ ಅವು ಇಂದಿಗೂ ನಮ್ಮ ಮನಃಪಟಲದಿಂದ ಮಾಸಿಲ್ಲ. ಮಾಸುವುದೂ ಇಲ್ಲ
ದೂರದರ್ಶನದ ಅಧಿಪತ್ಯ ಕೊನೆಯಾಗಿ ಖಾಸಗಿ ವಾಹಿನಿಗಳು ಶುರುವಾಗುತ್ತಿದ್ದಂತೆಯೇ ಬದಲಾಯಿತು ನೋಡಿ ಹವೆ. ಇಸವಿ 2000ರಲ್ಲಿ ಸ್ಮೃತಿ ಇರಾನಿ 'ಕ್ಯೋಂಕಿ ಸಾಸ್ ಭೀ ಕಭೀ ಬಹು ಥೀ' ಎಂಬ ಧಾರಾವಾಹಿಯ ಶೀರ್ಷಿಕೆ ಗೀತೆಯಲ್ಲಿ ಮನೆಯ ಎರಡೂ ಬಾಗಿಲುಗಳನ್ನು ದೊಡ್ದದಾಗಿ ತೆರೆದದ್ದೇ ಬಂತು, ಮನೆತನದ, ಪೀಳಿಗೆಗಳ ಕುರಿತ ಧಾರಾವಾಹಿಗಳು ಸಾಲಾಗಿ ನಮ್ಮ ಮನೆಗಳಿಗೆ ದಾಳಿ ಇಟ್ಟವು. ಈ ಎಲ್ಲ ಬದಲಾವಣೆಗಳಿಂದ ಕನ್ನಡವೂ ಹೊರತಾಗಲಿಲ್ಲ. ನಮ್ಮಲ್ಲಿ ಮೂಡಿ ಬಂದ ವಿಭಿನ್ನವಾದ ಧಾರಾವಾಹಿಗಳ ಪಟ್ಟಿ ಸಣ್ಣದೇ. ದೂರದರ್ಶನದಲ್ಲಿ ಪ್ರಸಾರವಾದ, ಟಿ.ಎನ್.ಸೀತಾರಾಂ ಅವರ ಮಾಯಾಮೃಗ ಎಷ್ಟು ಸರಳತೆ ಹಾಗೂ ಹೊಸತನಗಳಿಂದ ಕೂಡಿತ್ತೆಂದರೆ ನಾವೆಲ್ಲ ಅದರ ಮೋಡಿಗೆ ಬಲಿಯಾಗಿದ್ದೆವು. ನಂತರ ಬಂದ ‘ಮನ್ವಂತರ’ ಹಾಗೂ ‘ಮುಕ್ತ’ ಧಾರಾವಾಹಿಗಳಲ್ಲಿ ನ್ಯಾಯಾಲಯದ ಕಲಾಪಗಳು ನಮ್ಮ ಮನಸೂರೆಗೊಂಡದ್ದೂ ಆಯಿತು, ಆ ಏಕತಾನತೆ ಕೊಂಚ ಮಟ್ಟಿಗೆ ಬೇಸರ ಹಿಡಿಸಿದ್ದೂ ಆಯಿತು. ಉತ್ತರ ಕರ್ನಾಟಕದ ಸೊಬಗನ್ನು ತೆರೆದಿಟ್ಟ ಮೂಡಲ ಮನೆ, ಎಸ್.ಎಲ್ ಭೈರಪ್ಪನವರ ಕೃತಿಯನ್ನಾಧರಿಸಿದ ಗೃಹಭಂಗ ಹಾಗೂ ಶುದ್ಧ ಹಾಸ್ಯದಿಂದ ಎಲ್ಲರಿಗೂ ಪ್ರಿಯವಾದ ಕೆಲವು ಧಾರಾವಾಹಿಗಳನ್ನು ಬಿಟ್ಟರೆ ವಿಶಿಷ್ಟ ಎನಿಸಿದ, ನಮ್ಮನ್ನು ಹಿಡಿದಿಟ್ಟ ಧಾರಾವಾಹಿಗಳು ಬೆರಳೆಣಿಕೆಯಷ್ಟೇ. ನಂತರ ಶುರುವಾಗಿದ್ದು ಕೌಟುಂಬಿಕ ಧಾರಾವಾಹಿಗಳ ಭರಾಟೆ.

ಈಗ ಅವುಗಳ ಪರ್ವ ಕಾಲ. ಏಕೆಂದರೆ ಅವುಗಳನ್ನು ಬಿಟ್ಟರೆ ಮನರಂಜನೆಗೆ ಬೇರೆ ಮಾರ್ಗವೇ ಇಲ್ಲ. ರಾಮಾಯಣ, ಮಹಾಭಾರತಗಳ ಹೊಸ ಆವೃತ್ತಿಗಳು ಬರುತ್ತಲೇ ಇವೆಯಾದರೂ ಹಳೆಯದಕ್ಕೆ ಅವು ಸಾಟಿಯಲ್ಲ. ಇನ್ನುಳಿದವು ರಿಯಾಲಿಟಿ ಶೋಗಳು. ಹಾಡು, ಕುಣಿತ, ಪ್ರತಿಭಾ ಪ್ರದರ್ಶನ, ಎಲ್ಲದರಲ್ಲೂ ಜಿದ್ದಾಜಿದ್ದಿನ ಹಣಾಹಣಿ. ಇಷ್ಟು ಸಾಲದು ಎಂಬಂತೆ ಈ ಪಟ್ಟಿಗೆ ಬಿಗ್ ಬಾಸ್ ಎಂಬ ಹೊಸ ಸೇರ್ಪಡೆ ಬೇರೆ. ಪ್ರಾಣಿಗಳಿಗೆ ಮೃಗಾಲಯ ಹೇಗೋ ಮನುಷ್ಯರಿಗೆ ಬಿಗ್ ಬಾಸ್‍ನ ಮನೆಯೂ ಹಾಗೇ. ಒಂದಷ್ಟು ಜನರನ್ನು ಒಳಗೆ ಕೂಡಿಟ್ಟು, ಅವರನ್ನು ಕೆಣಕಿ, ಭಾವನೆಗಳನ್ನು ಅತಿರೇಕಕ್ಕೆ ಕೊಂಡೊಯ್ದು ಮಜಾ ನೋಡುವುದು. ಅವರ ಕಿತ್ತಾಟವನ್ನು ಜಗತ್ತಿಗೆಲ್ಲ ಬಿತ್ತರಿಸುವುದು. ಮನರಂಜನೆಯ ಹೆಸರಿನಲ್ಲಿ ನಡೆಯುತ್ತಿರುವ ಇದು ತಿಕ್ಕಲುತನವಲ್ಲದೇ ಮತ್ತೇನು?

ನಿಜವಾಗಿಯೂ ದಿಗಿಲಾಗುತ್ತದೆ ಇಂದಿನ ಬಹುತೇಕ ಧಾರಾವಾಹಿಗಳನ್ನು ನೋಡಿದಾಗ. ಕಥೆ ಇರಲೇಬೇಕೆಂಬುದು ಕಡ್ಡಾಯವಲ್ಲ. ನಟ-ನಟಿಯರಿಗೆ ಅಭಿನಯದ ಗಂಧ-ಗಾಳಿ ಇರಬೇಕೆಂಬ ನಿಯಮವೂ ಇಲ್ಲ. ನೋಡುಗರಿಗೆ ಮಾದರಿಯಾಗಬಲ್ಲ ಅಂಶಗಳು ಹುಡುಕಿದರೂ ಸಿಗುವುದಿಲ್ಲ. ಹಾಗಾದರೆ ಯಾವ ಪುರುಷಾರ್ಥಕ್ಕೆ ಹೀಗೆ ಡಜನ್‍ಗಟ್ಟಳೆ ಸಂಖ್ಯೆಯಲ್ಲಿ ಪ್ರಸಾರವಾಗುತ್ತಿವೆ? ಅವುಗಳಿಂದ ನಾವು ಖಂಡಿತ ಭಗವದ್ಗೀತೆಯ ಸಾರಾಮೃತವನ್ನು ಅಪೇಕ್ಷಿಸುವುದಿಲ್ಲ. ಆದರೆ ಒಂದು ಸಣ್ಣ ಸಂದೇಶ, ಚಿಂತನೆ ಅಥವಾ ಕಲಿಕೆಯನ್ನು ಕೊಡಲಾರದಷ್ಟು ಸಾಂಸ್ಕೃತಿಕ ಬಡತನ ವಕ್ಕರಿಸಿದೆಯೇ? ಬದುಕೆಂದರೆ ಬರೀ ಅಸೂಯೆ, ಪ್ರತೀಕಾರ ಹಾಗೂ ಅಕ್ರಮ ಸಂಬಂಧಗಳೇ? ವಸ್ತ್ರ, ಆಭೂಷಣ, ಮಾತು, ನಡತೆ, ವ್ಯವಹಾರ ಎಲ್ಲವೂ ಬರೀ ತೋರಿಕೆ. ಎಲ್ಲೆಲ್ಲೂ ಗುಟ್ಟು, ಸೇಡು, ಗುಂಪುಗಾರಿಕೆ. ನೈಜ ಬದುಕಿಗೂ ಧಾರಾವಾಹಿಗಳಿಗೂ ಸಾಮ್ಯವೇ ಇಲ್ಲ. ಟಿ.ಆರ್.ಪಿ ಎಂಬ ಬಕಾಸುರನ ಹಸಿವಿಗೆ ನಮ್ಮ ಸೂಕ್ಷ್ಮ ಸಂವೇದನೆ, ಮೌಲ್ಯಗಳೇ ಆಹಾರವಾಗಬೇಕೇ? ಇಂಥ ಧಾರಾವಾಹಿಗಳನ್ನು, ಚಟ ಹತ್ತಿಸಿಕೊಂಡು ನೋಡುವ ಹಲವು ಮನೆಗಳಲ್ಲಿ ನಿತ್ಯ ರಣರಂಪ. ಟಿ.ವಿಯ ರಿಮೋಟ್‍ಗಾಗಿ ಗುದ್ದಾಟ! ಹಿರಿಯರಿಗೇನೋ ಹೊತ್ತು ಕಳೆಯುವ ಸಾಧನ, ಆದರೆ ಮಕ್ಕಳ ಮೇಲಾಗುವ ಪರಿಣಾಮ?


ಕಥೆ ಹೇಳುವ ಕಲೆಗಾರಿಕೆಯೇ ಇಲ್ಲದವರು ಹೇರುತ್ತಿರುವುದನ್ನು ಒಲ್ಲೆ ಎನ್ನಲಾಗದಷ್ಟು ದುರ್ಬಲರು ನಾವಾಗಿದ್ದೇವೆ. ಅಂದಮೇಲೆ, ತಪ್ಪು ನಮ್ಮಲ್ಲೇ ಇರಬೇಕು. ಅಲ್ಲವೇ?