Saturday, 22 November 2014

ಆರೇ ತಿಂಗಳಲ್ಲಿ ಅಮರಾವತಿ ಧರೆಗಿಳಿದೀತೇ?

ಈ ಘಟನೆ ಇತ್ತೀಚಿನದು. ಮೋದಿಯವರು ಆಸ್ಟ್ರೇಲಿಯಾ ದೇಶದ ಸಿಡ್ನಿ ನಗರಿಯಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರಲ್ಲ, ಅವತ್ತು ನಡೆದದ್ದು. ಅದನ್ನು ಹೇಳುವ ಮುನ್ನ ಒಂದಷ್ಟು ಪೀಠಿಕೆಯನ್ನೂ ಸೇರಿಸುವ ಅಗತ್ಯವಿದೆ. ಪ್ರತಿ ರಾತ್ರಿ ಒಂಭತ್ತಕ್ಕೆ ನಮ್ಮ ರಾಷ್ಟ್ರೀಯ ಸುದ್ದಿ ವಾಹಿನಿಗಳೆಲ್ಲಾ ಪೈಪೋಟಿಗೆ ಬಿದ್ದು ಚರ್ಚೆ ನಡೆಸುತ್ತವೆ. ನೀವು ಪ್ರಚಲಿತ ವಿದ್ಯಮಾನಗಳಲ್ಲಿ ಆಸಕ್ತಿಯುಳ್ಳವರಾಗಿದ್ದರೆ, ಇದು ನಿಮಗೆ ಈಗಾಗಲೇ ಗೊತ್ತಿರುತ್ತದೆ. ಪ್ರತಿ ಸುದ್ದಿ ವಾಹಿನಿಯನ್ನೂ ಐದು ನಿಮಿಷಗಳ ಕಾಲ ನೋಡಿದರೂ ಸಾಕು, ಅಂದಿನ ಹಗರಣ, ರಾಜಕಾರಣ, ಸುದ್ದಿಗಳ ಹೂರಣವೆಲ್ಲಾ ಸಿಕ್ಕಿಬಿಡುತ್ತದೆ. ಹಾಗೇ ಪುಕ್ಕಟೆ ಮನರಂಜನೆಯೂ! ಎಲ್ಲ ವಾಹಿನಿಗಳಲ್ಲೂ ಓರ್ವ ಸಂಪಾದಕ, ಅವನ ಸುತ್ತ ಏನಿಲ್ಲವೆಂದರೂ ಐದಾರು ಮಂದಿ ವಿಶ್ಲೇಷಕರು. ಎಲ್ಲರೂ ಸೇರಿ ಒಂದು ವಿಷಯದ ಹಗ್ಗವನ್ನು ಜಗ್ಗಾಡಲು ಶುರು ಮಾಡಿಕೊಂಡರೆ ಮುಗಿಯಿತು, ವಾದ-ವಿವಾದಗಳ ಕಾವು ಏರಿ, ಕೆಲವೊಮ್ಮೆ ಕಿವಿಯ ತಮಟೆ ಹರಿದು ಹೋಗುವಷ್ಟು ಜೋರಾದ ಕಿರುಚಾಟ. ಕೆಲವರದ್ದು ಕೀ ಕೊಟ್ಟ ಬೊಂಬೆಗಳಂತೆ ನಿರಂತರ ವಟವಟ. ಒಟ್ಟಿನಲ್ಲಿ ಟಿವಿ ಪರದೆಯ ಮೇಲೆ ನಿತ್ಯ ದೊಂಬರಾಟ!



ಈಗ ಘಟನೆಗೆ ಬರೋಣ. ಇಂಥದ್ದೇ ಒಂದು ಚರ್ಚೆ ನಡೆದಿತ್ತು ಮೋದಿಯವರು ಸಿಡ್ನಿ ತಲುಪಿದ ದಿನ. ಖ್ಯಾತ ವಾಹಿನಿಯೊಂದರ ಸಂಪಾದಕ ಮಹಾಶಯರು ತಮ್ಮ ವಿಶ್ಲೇಷಕರ ತಂಡದಲ್ಲಿ  ಆಸ್ಟ್ರೇಲಿಯಾದವನೊಬ್ಬನನ್ನು ಹಿಡಿದುಕೊಂಡು ಬಂದು ಕೂರಿಸಿಕೊಂಡಿದ್ದರು. ಅಂದು ಅವರು ಚರ್ಚಿಸುತ್ತಿದ್ದ ವಿಷಯ, 'ಮೋದಿಯವರ ಭೇಟಿಯಿಂದ ಆಸ್ಟ್ರೇಲಿಯಾ, ಭಾರತದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಲಿದೆಯಾ' ಎಂಬುದು. ಅವರ ಚರ್ಚೆಯ ಧಾಟಿಯನ್ನು ನೀವು ನೋಡಬೇಕಿತ್ತು. 'ಈಗ ಬರೀ ಹದಿನೈದು ಮಿಲಿಯನ್‍ಗಳಷ್ಟಿರುವ ಹೂಡಿಕೆ ಮೋದಿಯವರು ಹೋದ ಮಾತ್ರಕ್ಕೇ ಅದರ ದುಪ್ಪಟ್ಟಾಗಿಬಿಡಲು ಸಾಧ್ಯವೇ?' ಎಂದು ಇವರು ಅಬ್ಬರಿಸಿ ಕೇಳುವುದಕ್ಕೂ, ಆ ಪುಣ್ಯಾತ್ಮ 'ಸಾಧ್ಯವಿಲ್ಲ. ಮೋದಿಯವರ ಭೇಟಿಯಿಂದಾಗಿ ಹೂಡಿಕೆ ಹೆಚ್ಚಾಗುವುದೇ ಇಲ್ಲ’ ಎನ್ನುವುದಕ್ಕೂ ಸರಿಯಾಗಿ ತಾಳೆಯಾಗುತ್ತಿತ್ತು. 'ನೋಡಿ, ಮೋದಿಯವರಿಂದಾಗಿ ಯಾವ ಪವಾಡವೂ ನಡೆಯುತ್ತಿಲ್ಲ' ಎನ್ನುತ್ತಿದ್ದ ಸಂಪಾದಕರ (ಸೆಕ್ಯುಲರ್ ಎಂದು ಬೇರೆ ಹೇಳಬೇಕೇ?) ಮುಖದ ಮೇಲೆ ವಿಜಯದ ನಗು. ಅಲ್ಲ, ಭರ್ತಿ 28 ವರ್ಷಗಳ ನಂತರ ನಮ್ಮ ದೇಶದ ಪ್ರಧಾನಿಯೊಬ್ಬರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ, ಈ ಭೇಟಿ ಮುಂದಿನ ಹೂಡಿಕೆಗಳಿಗೆ ಮುನ್ನುಡಿಯಾಗಲಿದೆ ಎಂಬ ಸಾಮಾನ್ಯ ಜ್ಞಾನ ನಮಗಿದೆ, ಆ ಸಂಪಾದಕರಿಗೆ ಬೇಡವೇ? ಪರಕೀಯನೊಬ್ಬನನ್ನು ಬಳಸಿಕೊಂಡು ನಮ್ಮ ಪ್ರಧಾನಿಯನ್ನು ಹೀಗಳೆಯುತ್ತಾರಲ್ಲ, ಅವರ ಬಗ್ಗೆ ಮಾತನಾಡಲು ಅವನು ಯಾವ ಊರಿನ ದಾಸಯ್ಯ? ಇಂಥ ಅವಕಾಶಗಳನ್ನು ಸೃಷ್ಟಿಸುವ ಪತ್ರಕರ್ತರ ಮನೋವಿಕೃತಿಗೆ ಏನೆನ್ನಬೇಕು? ಚರ್ಚೆ ಹಾಗಿರಲಿ, ನಮ್ಮವರ ತಿಕ್ಕಲುತನವನ್ನು ಕಂಡು ಆ ವಿದೇಶದವನು ಮನಸ್ಸಿನಲ್ಲೇ ಎಷ್ಟು ಮುಸಿ ಮುಸಿ ನಕ್ಕನೋ ದೇವರೇ ಬಲ್ಲ!

ನಿಜವಾಗಿಯೂ ಹೇಸಿಗೆಯಾಯಿತು. ಆ ಸಂಪಾದಕರು ಯಾರೆಂದುಕೊಂಡಿರಿ? ಅಮೆರಿಕದ ಮ್ಯಾಡಿಸನ್ ಚೌಕದಲ್ಲಿ ಮೋದಿಯವರ ಅಭಿಮಾನಿಯೊಬ್ಬರನ್ನು ಕೆಣಕಿ ಅವರಿಂದ ಒದೆ ತಿಂದು ಬಂದವರು! ಇವರೊಬ್ಬರೇ ಅಲ್ಲ, ಒಂದು ವ್ಯವಸ್ಥಿತ ಜಾಲವೇ ಮೋದಿಯವರ ತಪ್ಪುಗಳ ಷರಾ ಬರೆಯಲು ತುದಿಗಾಲಲ್ಲಿ ನಿಂತಿದೆ. ಆರು ದಶಕಗಳಿಂದ ಇಲ್ಲದಿದ್ದ ಆತುರ ಈಗೇಕೆ? ಆರಿಸಿ ಕಳುಹಿಸಿದ ಜನರು ವಹಿಸಿದರೇ ಇವರಿಗೆ ಮಾಸ್ತರಿಕೆಯ ಉಸಾಬರಿಯನ್ನು? ನೀವೇ ಹೇಳಿ, ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ವ್ಯಕ್ತಿಯೋರ್ವ ಏನೇನು ತಾನೆ ಮಾಡಬಲ್ಲ? ಹೀಗೆ ಪ್ರತಿ ಕೆಲಸದಲ್ಲೂ ತಪ್ಪು ಹುಡುಕುವ ಧೋರಣೆ ಸರಿಯೇ? ಅಧಿಕಾರಕ್ಕೇರಿದ ತಕ್ಷಣ ನಮ್ಮ ಪ್ರಧಾನಿ ನೆರೆ ರಾಷ್ಟ್ರಗಳ ಭೇಟಿಗೆ ಹೊರಟಾಗಲೇ ಗೊಣಗಾಟ ಶುರುವಾಗಿತ್ತು. ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸದೆ ತಕ್ಷಣ ಹೊರಟಿದ್ದು ತಪ್ಪು ಎಂದು. ಆದರೆ ನೆರೆಯವರ ಹೃದಯ ಬೆಚ್ಚಗಾಗುವುದು, ಅವರೊಂದಿಗೆ ಕೈ ಕುಲುಕಿದಾಗ ಮಾತ್ರವೇ ಎಂಬುದು ಕಾಲೆಳೆಯುವ ಮಂದಿಗೆ ಹೇಗೆ ತಾನೆ ಅರ್ಥವಾದೀತು? ಆ ದೇಶಗಳಿಂದ ದೊರೆತ ಅಪೂರ್ವ ಪ್ರತಿಕ್ರಿಯೆಯನ್ನು ನೋಡಿದ ಮೇಲೆ ಸುಮ್ಮನಾದರು!

ನಂತರ ಶುರುವಾಗಿದ್ದು 'ಮೋದಿಯವರು ನಮ್ಮನ್ನು ಹತ್ತಿರಕ್ಕೇ ಬಿಟ್ಟುಕೊಳ್ಳುವುದಿಲ್ಲ' ಎಂಬ, ಮಾಧ್ಯಮದವರ ಬೊಬ್ಬೆ. ಸರಿ, ದೀಪಾವಳಿಯ ಸಂದರ್ಭದಲ್ಲಿ ಇವರಿಗಾಗಿಯೇ ಮೋದಿಯವರು ಒಂದು ಕೂಟವನ್ನು ಏರ್ಪಡಿಸಿದ್ದರು. ‘ಮೋದಿ’ ಎಂಬ ಪದ ಕಿವಿಗೆ ಬಿದ್ದರೆ ಸಾಕು, ಮೈಮೇಲೆ ಉಗ್ರನರಸಿಂಹನನ್ನು ಆವಾಹಿಸಿಕೊಳ್ಳುತ್ತಿದ್ದ ಪ್ರತಾಪಿಗಳು ಅಂದು ಅವರ ಸೌಜನ್ಯ, ಪ್ರೀತಿಯ ಶಾಖಕ್ಕೆ ಬೆಣ್ಣೆಯಂತೆ ಕರಗಿದರು! ಪ್ರತಿಯೊಬ್ಬರನ್ನೂ ನಗುನಗುತ್ತಾ ಆತ್ಮೀಯತೆಯಿಂದ ಮಾತನಾಡಿಸಿದ ಅವರ ಜೊತೆ 'ಸೆಲ್ಫೀ'ಗಳನ್ನು ತೆಗೆಸಿಕೊಳ್ಳಲು ಹಾತೊರೆದದ್ದನ್ನು ನೋಡಿದಾಗ, ಇವರೇನಾ ಆ ಪತ್ರಕರ್ತರು ಎಂದು ನಿಜವಾಗಿಯೂ ಅನುಮಾನವುಂಟಾಯಿತು! 'ನನ್ನ ಮಗನಿಗೆ ತೋರಿಸಬೇಕು' ಎಂದೋ ಅಥವಾ 'ನನ್ನ ಗಂಡನಿಗೆ ಹೇಳಿ ಬಂದಿದ್ದೇನೆ, ಮೋದಿಯವರ ಜೊತೆ ಫೋಟೋ ತೆಗೆಸಿಕೊಂಡು ತೋರಿಸುತ್ತೇನೆ ಅಂತ' ಎಂದೋ ಇವರೆಲ್ಲಾ ಚಿಕ್ಕ ಮಕ್ಕಳಂತೆ ಸಂಭ್ರಮಿಸಿದ್ದನ್ನು ನೋಡಿ ನಾವು ಅವಾಕ್ಕಾದೆವು!



ಮುಂದಿನ ತಪ್ಪು ಸ್ವಚ್ಛ ಭಾರತ ಅಭಿಯಾನಕ್ಕೆ ಗಾಂಧೀಜಿಯನ್ನು ಬಳಸಿಕೊಂಡಿದ್ದು! ಕಾಂಗ್ರೆಸ್ ಸರ್ಕಾರದ ಸ್ವಘೋಷಿತ ಆಸ್ತಿಯಾದ ಅವರನ್ನು ಹಾಗೆಲ್ಲ ಬೇರೆಯವರ ಪಾಲು ಮಾಡಲಾದೀತೇ? ಉಳಿದವರು ಹಾಗಿರಲಿ, ಇಂದಿರೆಯ ಕುಟುಂಬಕ್ಕೆ ಪರಮಾಪ್ತರಾಗಿದ್ದ ಅಮಿತಾಭ್‍ ಬಚ್ಚನ್‍ರಂಥ ಘಟಾನುಘಟಿಯೇ ಪೊರಕೆ ಹಿಡಿದು ಬೀದಿಗಿಳಿದರೆ ಕಾಂಗ್ರೆಸ್‍ಗೆ ತುರಿಕೆಯಾಗದೆ ಇದ್ದೀತೆ? ಸ್ವಚ್ಛತಾ ಅಭಿಯಾನದಲ್ಲಿ ರಾಜಕೀಯ ಸಲ್ಲ ಎಂದು ಹೇಳಿದವರೆಲ್ಲರನ್ನೂ ಕೆಕ್ಕರಿಸಿ ನೋಡಿತು ಅದು. ಸ್ವಚ್ಛತೆಯ ಅಮಲೇರಿಸಿಕೊಂಡು ಕೇರಳದ ಬೀದಿಗಳನ್ನು ಸುತ್ತಿದ ಶಶಿ ತರೂರ್‍ರನ್ನು ಪಕ್ಷದ ವಕ್ತಾರರ ಸ್ಥಾನದಿಂದ ಕೆಳಗಿಳಿಸಲು ಇದೂ ಒಂದು ಕಾರಣವೇ!

ಅಕ್ಟೋಬರ್ 31ರಂದು ಮತ್ತೊಂದು ರಂಪ! ಆ ದಿನ ಇಂದಿರೆಯ ಹತ್ಯೆಯಾದದ್ದು ಎಂಬುದು ಮಾತ್ರ ನಮ್ಮ ಜನಕ್ಕೆ ಗೊತ್ತಿತ್ತು. ಅಂದೇ ಸರ್ದಾರ್ ಪಟೇಲ್‍ರ ಜನ್ಮ ದಿನ ಎಂಬುದು ಬಹುತೇಕರಿಗೆ ಗೊತ್ತಿರಲೇ ಇಲ್ಲ! ಆ ದಿನವನ್ನು ಪಟೇಲರ ಸ್ಮರಣೆಗೆ ಮೀಸಲಾಗಿಟ್ಟಿತು ಮೋದಿ ಸರ್ಕಾರ! ಛೆ, ಎಲ್ಲಾದರೂ ಉಂಟೇ? ದೇಶಕ್ಕಾಗಿ ಹುತಾತ್ಮರಾದವರನ್ನು (ಕಾಂಗ್ರೆಸ್‍ನ ಪ್ರಕಾರ!) ನೆನೆಯದೇ ಇರುವುದು ಅಕ್ಷಮ್ಯ ಅಪರಾಧವಲ್ಲವೇ? ತಮಾಷೆ ನೋಡಿ, ಇಂದಿರೆಯ ವಿಷಯದಲ್ಲಿ ಮಾಡಿದಂತೆ ಇನ್ನೆಲ್ಲಿ ನೆಹರೂ ಜನ್ಮದಿನವನ್ನೂ ಕಡೆಗಣಿಸುತ್ತಾರೋ ಎಂಬ ದಿಗಿಲಿನಲ್ಲಿ ತಾನೇ ತುರಾತುರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿತು ಕಾಂಗ್ರೆಸ್. ಆದರೆ ಕುಳಿತಲ್ಲಿಯೇ ತಣ್ಣಗೆ ನೆಹರೂರನ್ನು ಸ್ಮರಿಸಿಕೊಂಡು ಅದಕ್ಕೆ ಫಜೀತಿ ತಂದಿಟ್ಟರು ಮೋದಿ! ಹೀಗೆ, ಮಹಾರಾಷ್ಟ್ರ, ಹರಿಯಾಣದ ವಿಧಾನಸಭಾ ಚುನಾವಣೆಗಳಿಂದ ಹಿಡಿದು ಗಡಿಯಲ್ಲಿ ಪಾಕ್ ಸೈನಿಕರ ಜೊತೆಗಿನ ಗುಂಡಿನ ಚಕಮಕಿಯವರೆಗೂ ಎಲ್ಲದರಲ್ಲೂ ಮೋದಿಯವರದ್ದೇ ತಪ್ಪು ಎಂದು ಬಿಂಬಿಸುತ್ತಿದ್ದಾರೆ ಈ ಕಾಮಾಲೆ ಕಣ್ಣಿನವರು!

ಆದರೆ ವಾಸ್ತವ ಬೇರೆಯೇ ಇದೆ. ಅಧಿಕಾರ ಹಿಡಿದ ಲಾಗಾಯ್ತು, ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದಾರೆ ನಮ್ಮ ಪ್ರಧಾನಿ. ಆರು ದಶಕಗಳ ಕೊಳೆಯನ್ನು ಝಾಡಿಸಲು ಅವಿರತ ಶ್ರಮಿಸುತ್ತಿದ್ದಾರೆ. ದೇಶದ ಒಳಗಿನ ಹಾಗೂ ಹೊರಗಿನ ಆಗುಹೋಗುಗಳಿಗೆ ತಮ್ಮನ್ನು ಸಮನಾಗಿ ಒಡ್ಡಿಕೊಳ್ಳುತ್ತಿದ್ದಾರೆ. ಇತೀಚೆಗೆ ಆಸ್ಟ್ರೇಲಿಯಾ ದೇಶದ ಬ್ರಿಸ್ಬೇನ್ ನಗರದಲ್ಲಿ ಜಿ20 ರಾಷ್ಟ್ರಗಳ ಶೃಂಗ ಸಭೆ ನಡೆಯಿತಲ್ಲ, ಅಲ್ಲಿ ಮೋದಿಯವರನ್ನು ಕಂಡ ಒಬಾಮಾ 'ಯೂ ಆರ್ ಎ ಮ್ಯಾನ್ ಆಫ್ ಆಕ್ಷನ್' ಎಂದರು. ಇಂಥ ಮಾತುಗಳು ಓರ್ವ ಅಧ್ಯಕ್ಷನ ಬಾಯಿಂದ ಸುಮ್ಮನೇ ಬರುವುದಿಲ್ಲ! 'ಆಕ್ಟ್ ಈಸ್ಟ್' ಹಾಗೂ 'ಮೇಕ್ ಇನ್ ಇಂಡಿಯಾ' ಕರೆಗಳು ಜನಪ್ರಿಯವಾಗುತ್ತಿವೆ. ಮೋದಿಯವರ ವರ್ಚಸ್ಸು ಎಲ್ಲರನ್ನೂ ಸೆಳೆಯುತ್ತಿದೆ. ಹಾಗೆ ಹೊರಗಿನವರಿಗೆ ಕರೆ ಕೊಡುತ್ತಿರುವ ಮೋದಿ ದೇಶದ ಒಳಗೆ ಕೈಕಟ್ಟಿ ಕುಳಿತಿಲ್ಲ. ತುಕ್ಕು ಹಿಡಿದಿರುವ ವ್ಯವಸ್ಥೆಯ ರಿಪೇರಿ ಆರಂಭಿಸಿದ್ದಾರೆ. ಆಯಕಟ್ಟಿನ ಜಾಗಗಳಿಗೆ ಕಾರ್ಯದರ್ಶಿಗಳಾಗಿ ಅನಿಲ್ ಸ್ವರೂಪ್ ಹಾಗೂ ಅರವಿಂದ ಸುಬ್ರಮಣಿಯನ್‍ರಂಥ ಬುದ್ಧಿವಂತರನ್ನು ಆರಿಸಿದ್ದಾರೆ. ಶುದ್ಧಹಸ್ತರೂ, ದಕ್ಷರೂ, ಬುದ್ಧಿವಂತರೂ ಆದ ಮನೋಹರ್ ಪಾರಿಕ್ಕರ್‍, ಸುರೇಶ್ ಪ್ರಭು ಇವರುಗಳಿಗೆ ಕೆಲ ಮುಖ್ಯ ಜವಾಬ್ದಾರಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದವರನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ಸರಿಸಿದ್ದಾರೆ. ಪೆಟ್ರೋಲ್, ಡೀಸಲ್‍ಗಳ ದರ ಕಡಿತದಿಂದ ಹಿಡಿದು ಕಪ್ಪು ಹಣವನ್ನು ತರುವುದರವರೆಗೂ ಎಲ್ಲ ನಿರ್ಧಾರಗಳನ್ನೂ ಜನಪರವಾಗಿ ತೆಗೆದುಕೊಳ್ಳುತ್ತಿದ್ದಾರೆ.

ರಾಜಕೀಯವೆಂದಮೇಲೆ ತಂತ್ರಗಾರಿಕೆ ಇಲ್ಲದಿರುತ್ತದೆಯೇ? ಮಹಾರಾಷ್ಟ್ರದಲ್ಲಿ ಬಹುಮತದ ಸಲುವಾಗಿ ರಾಜಿ ಮಾಡಿಕೊಳ್ಳಬಾರದೆಂಬ ನಿಲುವು ತಳೆಯಿತು ಪಕ್ಷ. ನೆರವಿಗೆ ಬಂದಿದ್ದು ಧ್ವನಿಮತವೆಂಬ ತಂತ್ರಗಾರಿಕೆ. ಮುಂಬರಲಿರುವ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಅಷ್ಟೇ. ಕಾಲೂರಲು ಮೊದಲು ನೆಲೆಯೊಂದು ಸಿಗಲಿ ಎಂದು ಹಲವು ದಿಕ್ಕಿನಲ್ಲಿ ಪ್ರಯತ್ನಗಳು ನಡೆದಿವೆ. ಅವಕಾಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಬಲ್ಲ, ‘ಅಮಿತ್ ಶಾ’ರಂಥ ಚಾಣಕ್ಯರು ಮುಖ್ಯರಾಗುವುದೇ ಇಲ್ಲಿ. ಅತ್ತ ಕಡೆ ತಮಿಳುನಾಡಿನಲ್ಲಿ ರಜನಿ 'ನನಗೆ ರಾಜಕೀಯವೆಂದರೆ ಭಯವೇನೂ ಇಲ್ಲ' ಎಂದು ತಮ್ಮದೇ ರೀತಿಯಲ್ಲಿ ಸಂದೇಶವನ್ನು ರವಾನಿಸುತ್ತಿದ್ದಾರೆ. ಆದರೆ ಒಂದಂತೂ ಸ್ಪಷ್ಟ. ಈ ಎಲ್ಲ ತಂತ್ರಗಾರಿಕೆಗಳೂ ನಡೆದಿರುವುದು ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು!

ರಾಹುಲ್‍ರ ನಿಷ್ಕ್ರಿಯತೆಯಿಂದ ರೋಸಿಹೋಗಿರುವ ಕಾಂಗ್ರೆಸ್‍ ನಾಯಕರು ಪ್ರಿಯಾಂಕ ಬೇಕೆಂದು ರಚ್ಚೆ ಹಿಡಿದಿದ್ದಾರೆ. ಆದರೆ ವಾದ್ರಾನನ್ನು ಸುತ್ತುವರಿದಿರುವ ಅಕ್ರಮ ಅಸ್ತಿಯ ವಿಷವರ್ತುಲ ಪ್ರಿಯಾಂಕಳನ್ನು ಆಪೋಶನ ತೆಗೆದುಕೊಳ್ಳದೆ ಬಿಟ್ಟೀತೇ? ಒಟ್ಟಿನಲ್ಲಿ, ದಿನೇ ದಿನೇ ಹೆಚ್ಚುತ್ತಿರುವ ಮೋದಿಯವರ ಜನಪ್ರಿಯತೆ ಬಹಳಷ್ಟು ಮಂದಿಯ ನಿದ್ದೆಗೆಡಿಸಿದೆ! ಉದಾಹರಣೆಗೆ, ಮೊನ್ನೆ ಸಿಡ್ನಿಯ ಆಲ್‍ಫೋನ್ಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಿದ್ದ ಜನಸ್ತೋಮವನ್ನು ಕಂಡು ಕಂಗಾಲಾದರು ಕಾಂಗ್ರೆಸ್‍ನ ಸಲ್ಮಾನ್ ಖುರ್ಷಿದ್. ಜನರನ್ನು ದುಡ್ಡು ಕೊಟ್ಟು ಕರೆದೊಯ್ಯಲಾಗುತ್ತಿದೆ ಎಂದು ಹುಯಿಲೆಬ್ಬಿಸಿದರು. ಹಾಗೆ ಜನರನ್ನು ಸೇರಿಸಲು ಇದೇನು ಕಾಂಗ್ರೆಸ್ ನಾಯಕರ, ಬರೆದಿದ್ದನ್ನು ಓದುವ ಭಾಷಣ ಕೆಟ್ಟುಹೋಯಿತೆ? ಮತ್ತೊಂದು ಆಸಕ್ತಿಕರ ಬೆಳವಣಿಗೆಯನ್ನೂ ನಿಮಗೆ ಹೇಳಲೇಬೇಕು. ಅರವಿಂದ್ ಕೇಜ್ರಿವಾಲ್ ನೆನಪಿದ್ದಾರೆ ತಾನೆ? ದೆಹಲಿಯ ಮುಖ್ಯಮಂತ್ರಿಯಾಗಿದ್ದೇ ತಡ, ಇನ್ನೇನು ಪ್ರಧಾನಿಯೂ ಆಗಿಬಿಡುತ್ತೇನೆಂಬ ಹುಮ್ಮಸ್ಸಿಗೆ ಬಿದ್ದು ದೆಹಲಿಯನ್ನು ಒದ್ದು ಓಡಿದ್ದರಲ್ಲ? ಆಮೇಲೆ ‘ಕೈಸುಟ್ಟುಕೊಂಡು ತಪ್ಪು ಮಾಡಿಬಿಟ್ಟೆ’ ಎಂದು ಹಪಹಪಿಸಿದ್ದು ಹಳೇ ಸುದ್ದಿ. ಈಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಎಕೆ-49 (49 ದಿನಗಳ ಆಡಳಿತ ನೀಡಿದ್ದಕ್ಕೆ) ಎಂದೇ ಖ್ಯಾತರು! ಬರಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಅವರು ಸಜ್ಜಾಗುತ್ತಿರುವುದು ಹೇಗೆ ಹೇಳಿ? ಮೋದಿಯವರ ಗುಣಗಾನ ಮಾಡುತ್ತಾ! ಹೀಗಾದರೂ ಜನ ತಮ್ಮನ್ನು ನಂಬುತ್ತಾರೇನೋ ಎಂಬ ಆಸೆ ಅವರಿಗೆ ಪಾಪ!

ಇವ್ಯಾವುಗಳ ಪರಿವೆಯೂ ಇಲ್ಲದೆ, ದೇಶ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ ನಮ್ಮ ಪ್ರಧಾನಿ. ಅಭಿವೃದ್ಧಿ, ಸುಖ, ಶಾಂತಿಗಳನ್ನೊಳಗೊಂಡ ಸ್ವರ್ಗವನ್ನು ಧರೆಗಿಳಿಸುವುದು ಸುಲಭದ ಮಾತಲ್ಲ. ಆ ಸಾಹಸ ಎಲ್ಲರ ಕೈಗಳಿಗೆ ಎಟಕುವುದೂ ಇಲ್ಲ. ಅದಕ್ಕೆ ಕಠಿಣವಾದ ಇಚ್ಛಾಶಕ್ತಿ ಹಾಗೂ ಸಮಯ ಎರಡೂ ಬೇಕು. ದೇಶಕ್ಕೋಸ್ಕರ ತನ್ನ ಖಾಸಗಿ ಬದುಕನ್ನೇ ಮುದುರಿ ಮೂಲೆಗೆಸೆದ ಮನುಷ್ಯನ ಇಚ್ಛಾಶಕ್ತಿಯ ಬಗ್ಗೆ ಎರಡು ಮಾತಿಲ್ಲ! ಅದರೆ ಹೆಜ್ಜೆ ಹೆಜ್ಜೆಗೂ ಮುಳ್ಳಾಗದೆ ಆತನಿಗೆ ಬೇಕಾದ ಸಮಯ ಕೊಡಲು ನಾವು ಸಿದ್ಧರಿದ್ದೇವಾ?


Wednesday, 19 November 2014

ಬದುಕೆಂಬ ಉಡುಗೊರೆಯನ್ನು ಕೊಟ್ಟಿದ್ದೇವಾ ನಮ್ಮ ಮಕ್ಕಳಿಗೆ?

ಕಳೆದ ವಾರ ಇಬ್ಬರು ಹುಡುಗರು ಆತ್ಮಹತ್ಯೆ ಮಾಡಿಕೊಂಡರು. ಒಬ್ಬ ಸತ್ತದ್ದು, ತಂದೆ-ತಾಯಿ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ. ಮತ್ತೊಬ್ಬನಿಗಿದ್ದ ಕಾರಣ, ಓದಿಕೋ, ವೃಥಾ ಕಾಲಹರಣ ಮಾಡಬೇಡ ಎಂಬ ಮನೆಯವರ ಉಪದೇಶ! ತೀರ ಕ್ಷುಲ್ಲಕವೆನಿಸುವ ಇಂಥ ಸಬೂಬುಗಳನ್ನು ಮುಂದೊಡ್ಡಿ ಬದುಕನ್ನೇ ಕೊನಗಾಣಿಸಿಕೊಳ್ಳುವ ಮನಸ್ಥಿತಿ ಎಲ್ಲಿಂದ ಬರುತ್ತಿದೆ? 'ತೀರ್ಥ ತೆಗೆದುಕೊಂಡರೆ ಶೀತ, ಮಂಗಳಾರತಿ ತೆಗೆದುಕೊಂಡರೆ ಉಷ್ಣ' ಎನ್ನುವಷ್ಟು ಸೂಕ್ಷ್ಮವಾಗಿ ಏಕೆ ಬೆಳೆಯುತ್ತಿದ್ದಾರೆ ನಮ್ಮ ಮಕ್ಕಳು? ಅಥವಾ ಪಾಲಕರಾಗಿ ನಾವುಗಳೇ ಎಡವುತ್ತಿದ್ದೇವೆಯೇ? ಬದುಕು ಇಷ್ಟು ಕೇವಲವಲ್ಲ ಎಂಬ ಮಹತ್ತರವಾದ ವಿಷಯವನ್ನು ಹೇಳುವಲ್ಲಿ ಸೋಲುತ್ತಿದ್ದೇವೆಯೇ? ಮಕ್ಕಳಿಗೆ ಬದುಕು ಕಟ್ಟಿಕೊಡುವ ವಿಷಯ ಬಂದಾಗಲೆಲ್ಲ, ಇಟಲಿ ದೇಶದ ಚಲನಚಿತ್ರವೊಂದು ನೆನಪಿಗೆ ಬರುತ್ತದೆ. ಅದರ ಇಂಗ್ಲೀಷ್ ಅವತರಣಿಕೆಯೂ ಇದೆ. ಹೆಸರು 'ಲೈಫ್ ಈಸ್ ಬ್ಯೂಟಿಫುಲ್'. ಒಮ್ಮೆಯಾದರೂ ಖಂಡಿತ ನೋಡಿ ಅದನ್ನು.

ಚಿತ್ರದ ಕಥೆ ಎರಡನೆಯ ವಿಶ್ವಯುದ್ಧದ ಕಾಲಘಟ್ಟದಲ್ಲಿ ನಡೆದಿದ್ದು. ಇಟಲಿಯವನೇ ಆದ, ಯಹೂದಿ ಧರ್ಮಕ್ಕೆ ಸೇರಿದ ನಾಯಕ ಗ್ವೀಡೋ ಬಹಳ ಹಾಸ್ಯಪ್ರವೃತ್ತಿಯವನು. ಬದುಕಿನ ಎಲ್ಲ ಕಹಿಗಳಿಗೂ ನಗುವೆಂಬ ಸಿಹಿಯನ್ನು ಸೇರಿಸಿಯೇ ಸ್ವೀಕರಿಸುವುದು ಅವನ ಜಾಯಮಾನ. ಶ್ರೀಮಂತರ ಮನೆಯ ಹುಡುಗಿ 'ಡೋರಾ'ಳನ್ನು ಆಕಸ್ಮಿಕವಾಗಿ ಭೇಟಿಯಾಗಿ, ಪ್ರೀತಿಸಿ, ಅವಳ ಮನವೊಲಿಸಿ ಮದುವೆಯಾಗುತ್ತಾನೆ. ಅವರಿಗೆ ಜೋಶುವಾ ಎಂಬ ಗಂಡು ಮಗು ಹುಟ್ಟುತ್ತದೆ.

ಇಲ್ಲಿಯವರೆಗೂ ಎಲ್ಲ ಮಾಮೂಲಿಯೇ ಎನಿಸುವ ಚಿತ್ರ ಮುಂದೆ ಪಡೆಯುವ ತಿರುವು ವಿಭಿನ್ನ. ಅದು 1945ರ ಆಸುಪಾಸು. ಹಿಟ್ಲರನ ಕ್ರೌರ್ಯದ ಪರಮಾವಧಿಯ ಕಾಲ. ಯಹೂದಿಗಳು ಪಾತಾಳದಲ್ಲಿದ್ದರೂ ಬಿಡದೆ ಹೊರಗೆಳೆದು ಸೆರೆ ಶಿಬಿರಗಳಲ್ಲಿ ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಿದ್ದ ಹಿಟ್ಲರ್. ಆಗ ಮಗು ‘ಜೋಶುವಾ’ನಿಗೆ ಸುಮಾರು ನಾಲ್ಕೈದು ವರ್ಷಗಳಾಗಿದ್ದಿರಬಹುದು. ಅವನ ಹುಟ್ಟುಹಬ್ಬದ ಆಚರಣೆಯಲ್ಲಿ ತಾನೂ ಶಾಮೀಲಾಗಬೇಕೆಂದು ಬಯಸುವ ತನ್ನ ತಾಯಿಯನ್ನು ಕರೆದುಕೊಂಡು ಬರಲು ಹೋಗುತ್ತಾಳೆ ಡೋರಾ. ಅಷ್ಟೇ, ಇಲ್ಲಿ ಹಿಟ್ಲರನ ನಾಜಿ ಸೈನಿಕರು ಮನೆಗೆ ನುಗ್ಗಿ ಗ್ವೀಡೋ ಹಾಗೂ ಜೋಶುವಾರನ್ನು ಎಳೆದುಕೊಂಡು ಹೋಗುತ್ತಾರೆ. ಉಳಿದ ಯಹೂದಿಗಳೊಂದಿಗೆ ಅವರನ್ನೂ ಲಾರಿಯೊಂದಕ್ಕೆ ತುಂಬಿಸಿದಾಗ ಕಸಿವಿಸಿಗೊಳ್ಳುವ ಮಗು, ಎಲ್ಲಿಗೆ ಹೋಗುತ್ತಿದ್ದೇವೆಂದು ಮುಗ್ಧವಾಗಿ ಕೇಳುತ್ತದೆ. 'ಎಲ್ಲಿಯಾದರೂ ಪ್ರವಾಸ ಹೋಗಬೇಕು ಎನ್ನುತ್ತಿದ್ದೆಯಲ್ಲ ಕಂದಾ, ಈಗ ಕರೆದುಕೊಂಡು ಹೋಗುತ್ತಿದ್ದೇನೆ ನೋಡು’ ಎನ್ನುತ್ತಾನೆ ಅಪ್ಪ. ಲಾರಿಯಿಂದ ಇಳಿದು, ಸೆರೆ ಶಿಬಿರಕ್ಕೆ ಕೊಂಡೊಯ್ಯುವ ರೈಲು ಹತ್ತಲು ಸಾಲಾಗಿ ನಿಲ್ಲುತ್ತಾರೆ ಎಲ್ಲರೂ. ಉಳಿದವರೆಲ್ಲ ಜೋಲು ಮೋರೆ ಹಾಕಿಕೊಂಡು ನಡೆದರೆ ಗ್ವೀಡೋನದ್ದು ಮಾತ್ರ ಪುಟಿಯುವ ಉತ್ಸಾಹ! ಮಾಸದ ಮಂದಹಾಸ! ತನ್ನ ಆತಂಕ, ಮುಂದೆ ತಮಗೆ ಕಾದಿರುವ ವಿಪತ್ತು ಮಗುವಿಗೆ ತಿಳಿಯಬಾರದು ಎಂಬ ಒಂದೇ ಕಾರಣಕ್ಕೆ ಸಂತಸದ ಮುಖವಾಡ ಧರಿಸುತ್ತಾನೆ. ಆ ಕ್ಷಣದ ತನ್ನ ನಿರ್ಧಾರದಿಂದ ಮಗನ ಬದುಕಿನ ದಿಕ್ಕನ್ನೇ ಬದಲಾಯಿಸುತ್ತಾನೆ.

 ಅಂಥ ಅಸಹಾಯಕ ಪರಿಸ್ಥಿತಿಯಲ್ಲೂ ಗ್ವೀಡೋ ತೋರುವ ಜಾಣ್ಮೆ ಎಂಥದು ಗೊತ್ತೇ? ನಾವೆಲ್ಲರೂ ಈಗ ಹೋಗುತ್ತಿರುವುದು ಕಣ್ಣಾಮುಚ್ಚಾಲೆ ಆಟ ಆಡಲು ಎಂದು ಮಗುವಿಗೆ ಹೇಳುತ್ತಾನೆ.  ಅನುಮಾನಿಸುತ್ತಲೇ ರೈಲಿನಲ್ಲಿ ಸಾಗುತ್ತದೆ ಮಗು. ಸೆರೆ ಶಿಬಿರ ತಲುಪುತ್ತಿದ್ದಂತೆಯೇ ಒಂದು ಘಟನೆ ನಡೆಯುತ್ತದೆ. ಇಟಲಿಯ ನೂರಾರು ಜನರಿದ್ದ ಇವರ ಕೋಣೆಗೆ ಬರುವ ನಾಜಿ ಅಧಿಕಾರಿಗಳು, 'ಇಲ್ಲಿ ಯಾರಿಗೆ ಜರ್ಮನ್ ಭಾಷೆ ಬರುತ್ತದೋ ಅವರು ಮುಂದೆ ಬನ್ನಿ' ಎನ್ನುತ್ತಾರೆ. ಜರ್ಮನ್ ಭಾಷೆಯ ಗಂಧ ಗಾಳಿಯೂ ಇರದ ಗ್ವೀಡೋ ಮುಲಾಜಿಲ್ಲದೆ ಮುಂದೆ ಹೋಗಿ ನಿಂತುಬಿಡುತ್ತಾನೆ. ಮಗುವಿಗೆ ಹೇಗಾದರೂ ಮಾಡಿ ನಂಬಿಕೆ ಬರಿಸಲೇಬೇಕಲ್ಲ ಇದು ಆಟ ಎಂದು? ಸರಿ, ನಾಜಿ ಸೈನಿಕರು ಮುಖ ಸಿಂಡರಿಸಿಕೊಂಡು ದೊಡ್ಡ ದನಿಯಲ್ಲಿ ಅಬ್ಬರಿಸುತ್ತಾ ಸೂಚನೆಗಳನ್ನು ಕೊಡುತ್ತಿದ್ದರೆ ಇವನು ಅನುವಾದ ಮಾಡುವ ನೆಪದಲ್ಲಿ ಹೇಳುತ್ತಿದ್ದುದು ತಾನು ಕಟ್ಟಿದ್ದ ಕಣ್ಣಾಮುಚ್ಚಾಲೆ ಆಟದ ನಿಯಮಗಳನ್ನು! 'ಇಲ್ಲಿರುವ ಮಕ್ಕಳಿಗೆಲ್ಲಾ ಆಟದ ಸ್ಪರ್ಧೆ ನಡೆಯಲಿದೆ. ಯಾವ ಮಗುವೂ ನಾಜಿ ಕಾವಲುಗಾರರ ಕಣ್ಣಿಗೆ ಬೀಳಬಾರದು. ಹಾಗೆ ಅವಿತು ಕೂರುವ ಮಗುವಿಗೆ ದಿನಕ್ಕಿಷ್ಟು ಎಂದು ಅಂಕಗಳು ಸಿಗುತ್ತವೆ. ಅತ್ತರೆ, ಹಸಿವು ಎಂದರೆ ಅಥವಾ ಅಮ್ಮನನ್ನು ನೋಡಬೇಕು ಎಂದರೆ ಅಂಕಗಳನ್ನು ಕಳೆಯಲಾಗುವುದು. ಯಾವ ಮಗು ಸಾವಿರ ಅಂಕಗಳನ್ನು ಮೊದಲು ಪಡೆಯುತ್ತದೋ ಅದಕ್ಕೆ ಒಂದು ಯುದ್ಧದ ಟ್ಯಾಂಕರ್ ಬಹುಮಾನವಾಗಿ ದೊರೆಯಲಿದೆ' ಎಂದು ಗ್ವೀಡೋ ನಾಜಿಗಳಿಗಿಂತ ಜೋರಾಗಿ ಘರ್ಜಿಸುತ್ತಿದ್ದರೆ ಪುಟ್ಟ ಜೋಶುವಾ ಕಣ್ಣುಗಳನ್ನು ಅಗಲಿಸಿಕೊಂಡು ಕೇಳಿಸಿಕೊಳ್ಳುತ್ತಾನೆ.

ಮುಂದೆ ನಡೆಯುವುದೆಲ್ಲಾ ನಿಯಮ ಪಾಲನೆ. ಅಪ್ಪ ಗಾಣದೆತ್ತಿನಂತೆ ದುಡಿಯಲು ಹೋಗುವುದು. ತನ್ನ ಪಾಲಿನ ಬ್ರೆಡ್ಡು ಬನ್ನುಗಳನ್ನು ತಂದು ಮಗನಿಗೆ ಕೊಟ್ಟು ಅವನಿಗೆ ಹಸಿವು ಕಾಡದಂತೆ ನೋಡಿಕೊಳ್ಳುವುದು. ಮಗು ಕೋಣೆಯಲ್ಲಿ ಅವಿತು ಕೂರುವುದು. 'ಅಪ್ಪಾ ಇವತ್ತಿಗೆ ನಮ್ಮ ಅಂಕಗಳು ಎಷ್ಟಾದವು' ಎಂದು ಮಗು ಕೇಳಿದರೆ, 'ಇನ್ನೂರ ಎಪ್ಪತ್ತೈದರ ಹತ್ತಿರ ಹತ್ತಿರ. ಇನ್ನೇನು ಕೆಲ ದಿನಗಳು ಅಷ್ಟೇ. ನಾವೇ ಗೆದ್ದುಬಿಡುತ್ತೇವೆ ನೋಡುತ್ತಿರು’ ಎಂದು ಹುರುಪು ತುಂಬುವುದು. ಬೇರೆ ಮಕ್ಕಳೊಡನೆ ಮಾತನಾಡಿ ಬಂದ ಮಗು ಬೇಜಾರಿನಿಂದ 'ಇಲ್ಲಿ ಯಾವ ಆಟವನ್ನೂ ಆಡಿಸುತ್ತಿಲ್ಲವಂತೆ. ಅವರಿಗೆಲ್ಲ ಏನೂ ಗೊತ್ತೇ ಇಲ್ಲ' ಎಂದರೆ, 'ಇನ್ನೆಲ್ಲಿ ಅವರನ್ನು ಹಿಂದೆ ಹಾಕಿ ನೀನು ಗೆದ್ದುಬಿಡುತ್ತೀಯೋ ಎಂದು ಹಾಗೆ ಹೇಳುತ್ತಾರೆ ಅಷ್ಟೇ, ಅವರ ಮಾತಿಗೆ ಮರುಳಾಗಬೇಡ’ ಎನ್ನುವುದು.

ಹಿಟ್ಲರನ ಸೆರೆ ಶಿಬಿರದ ಒಂದು ಕ್ರೌರ್ಯದ ಬಗ್ಗೆ ನಿಮಗೆ ಹೇಳಲೇಬೇಕು. ದುಡಿಯಲು ಶಕ್ತರಾಗಿದ್ದ ಗಂಡಸರು ಹಾಗೂ ಹೆಂಗಸರನ್ನು ಮಾತ್ರ ಜೀವಸಹಿತ ಬಿಡುತ್ತಿದ್ದ ಹಿಟ್ಲರ್, ಮಕ್ಕಳು ಹಾಗೂ ಮುದುಕರನ್ನು ಉಳಿಸುತ್ತಿರಲಿಲ್ಲ. ಒಂದು ಕೋಣೆಯೊಳಗೆ ಅವರನ್ನೆಲ್ಲ ಕೂಡಿ ಹಾಕಿ ವಿಷಾನಿಲವನ್ನು ಹಾಯಿಸಿ ಸಾಯಿಸಿಬಿಡುತ್ತಿದ್ದ. ಹೀಗೆ ಉಳಿದೆಲ್ಲಾ ಮಕ್ಕಳು ಸತ್ತರೂ ಜೋಶುವಾ ಮಾತ್ರ ಅಪ್ಪ ಹೇಳಿಕೊಟ್ಟ ಆಟವನ್ನು ಆಡುತ್ತಲೇ ಸಾಗುತ್ತಾನೆ. ಅವನೂ ಮಗುವಲ್ಲವೇ? ನಿಯಮಗಳನ್ನು ಎಷ್ಟೆಂದು ಪಾಲಿಸಿಯಾನು? ಕೊನೆಗೊಂದು ದಿನ ಮನೆಗೆ ಹೋಗೋಣವೆಂದು ರಚ್ಚೆ ಹಿಡಿದಾಗ ತನ್ನ ಗಂಟನ್ನು ಹೊತ್ತುಕೊಂಡು ಹೊರನಡೆದೇ ಬಿಡುತ್ತಾನೆ ಗ್ವೀಡೋ. 'ಮನೆಗೆ ಹೋಗಬೇಕು ತಾನೆ? ನಡಿ. ಇಲ್ಲಿ ಯಾರೂ ನಮ್ಮನ್ನು ಬಲವಂತವಾಗಿ ಕೂಡಿ ಹಾಕಿಲ್ಲ. ಈಗಾಗಲೇ ಸಾವಿರ ಅಂಕಗಳ ಹತ್ತಿರ ಬಂದಿದ್ದೀಯ. ನೀನೇ ಮೊದಲ ಸ್ಥಾನದಲ್ಲಿದ್ದೀಯ. ಆದರೂ ಪರವಾಗಿಲ್ಲ. ಬೇರೆ ಯಾರಾದರೂ ಗೆಲ್ಲಲಿ, ಟ್ಯಾಂಕರ್ ತೆಗೆದುಕೊಂಡು ಹೋಗಲಿ. ನಮಗೇನಂತೆ, ನಡಿ ಹೋಗೋಣ' ಎನ್ನುತ್ತಾನೆ. ಬೆರಗಾದ ಮಗು ಸುಮ್ಮನಾಗುತ್ತದೆ.

ಕಡೆಗೊಂದು ರಾತ್ರಿ ಶಿಬಿರದ ಮೇಲೆ ದಾಳಿ ನಡೆಸುತ್ತದೆ ಅಮೆರಿಕದ ಸೇನೆ. ಒಳಗೆಲ್ಲ ಅಲ್ಲೋಲ ಕಲ್ಲೋಲ ಶುರುವಾಗುತ್ತಿದ್ದಂತೆಯೇ ಅಂಚೆ ಡಬ್ಬಿಯಾಕಾರದ ದೊಡ್ಡ ಪೆಟ್ಟಿಗೆಯಲ್ಲಿ ಮಗನನ್ನು ಕೂರಿಸುವ ಗ್ವೀಡೋ, ಗದ್ದಲ ಮುಗಿಯುವ ತನಕ ಯಾವುದೇ ಕಾರಣಕ್ಕೂ ಆಚೆ ಬರಬೇಡ ಎಂದು ತಾಕೀತು ಮಾಡುತ್ತಾನೆ. ಅದೇ ಶಿಬಿರದಲ್ಲಿದ್ದ ಡೋರಾಳನ್ನೊಮ್ಮೆ ನೋಡುವ ತವಕದಲ್ಲಿ ನಾಜಿ ಸೈನಿಕನ ಕೈಗೆ ಸಿಕ್ಕಿಬೀಳುತ್ತಾನೆ. ನಿಯಮ ಮುರಿದ ಅವನನ್ನು ಗುಂಡು ಹೊಡೆದು ಸಾಯಿಸಲು ಕರೆದೊಯ್ಯುತ್ತಿದ್ದಾಗ ಮಗು ಅವಿತಿದ್ದ ಪೆಟ್ಟಿಗೆಯ ಮುಂದಿನಿಂದ ಹಾದು ಹೋಗಬೇಕಾಗುತ್ತದೆ. ಕಿಂಡಿಯಿಂದ ಮಗ ತನ್ನನ್ನು ನೋಡುತ್ತಿರುತ್ತಾನೆ ಎಂದರಿತ ಅವನು ನಗುನಗುತ್ತಾ ಪಥಸಂಚಲನ ಮಾಡಿಕೊಂಡು ಹೋಗುತ್ತಾನಲ್ಲ. ಆ ದೃಶ್ಯವನ್ನು ನೋಡುವಾಗ ನಿಮ್ಮ ಹೃದಯ ಕಲಕದಿದ್ದರೆ ಕೇಳಿ! ನಂತರ ಕೆಲ ಕ್ಷಣಗಳಲ್ಲೇ ಗುಂಡೇಟಿನಿಂದ ಸತ್ತುಹೋಗುತ್ತಾನೆ. ಮರುದಿನ ಬೆಳಿಗ್ಗೆ ಎಲ್ಲ ಸದ್ದೂ ಅಡಗಿದ ಮೇಲೆ ಹೊರಬರುವ ‘ಜೋಶುವಾ’ನ ಮುಂದೆ ದೊಡ್ಡದೊಂದು ಟ್ಯಾಂಕರ್ ಬಂದು ನಿಲ್ಲುತ್ತದೆ! ತನ್ನ ಬಹುಮಾನವನ್ನು ನೋಡಿ ಹಿಗ್ಗುತ್ತಾನೆ ಅವನು. ಅಸಲಿಗೆ, ಅಲ್ಲಿ ಕಾಕತಾಳೀಯವಾಗಿ ಪ್ರತ್ಯಕ್ಷವಾಗುವ ಟ್ಯಾಂಕರ್ ಅಮೆರಿಕದ ಸೇನೆಯದ್ದಾಗಿರುತ್ತದೆ! ಗೆದ್ದ ಖುಷಿಯಲ್ಲಿ ಮಗು ಅಮ್ಮನನ್ನು ಸೇರುವಲ್ಲಿಗೆ ಚಿತ್ರ ಮುಗಿಯುತ್ತದೆ. ವಿಶೇಷವೆಂದರೆ, ಇಡೀ ಚಿತ್ರವನ್ನು ಜೋಶುವಾ ದೊಡ್ಡವನಾದ ಮೇಲೆ ಹೇಳುತ್ತಿರುವ ಕಥೆಯಂತೆ ಚಿತ್ರಿಸಲಾಗಿದೆ. ಕೊನೆಯಲ್ಲಿ ಭಾವುಕನಾಗಿ, ಈ ಬದುಕು ನನ್ನ ತಂದೆ ನನಗೆ ಕೊಟ್ಟ ಉಡುಗೊರೆ ಎನ್ನುತ್ತಾನೆ ಅವನು. ಮತ್ತೊಂದು ವಿಶೇಷವೆಂದರೆ, ಈ ಚಿತ್ರವನ್ನು ನಿರ್ದೇಶಿಸಿ, ಗ್ವೀಡೋನ ಪಾತ್ರದಲ್ಲಿ ಅಭಿನಯಿಸಿದ ರಾಬರ್ಟೊ ಬೆನಿಗ್ನಿಯವರ ತಂದೆ ಮೂರು ವರ್ಷಗಳ ಕಾಲ ಹಿಟ್ಲರನ ಸೆರೆ ಶಿಬಿರದಲ್ಲಿದ್ದರು! ಅವರ ಅನುಭವವೇ ಮಗನಿಗೆ ಈ ಚಿತ್ರವನ್ನು ಮಾಡಲು ಸ್ಫೂರ್ತಿಯಾಗಿದ್ದಂತೆ!

ಈಗ ಹೇಳಿ, ಗ್ವೀಡೋನಂತೆ, ಈ ಬದುಕೇ ಒಂದು ಸುಂದರವಾದ ಉಡುಗೊರೆ ಎಂದು ನಮ್ಮಲ್ಲೆಷ್ಟು ಮಂದಿ ಮನವರಿಕೆ ಮಾಡಿ ಕೊಟ್ಟಿದ್ದೇವೆ ನಮ್ಮ ಮಕ್ಕಳಿಗೆ? ಹಣದಿಂದ ಹುಟ್ಟುವ ಸರಕು ಮಾತ್ರವಲ್ಲ, ಅನುಭವದಿಂದ ದಕ್ಕುವುದೂ ಉಡುಗೊರೆಯೇ ಎಂಬುದನ್ನು ಹೇಳಿದ್ದೇವೆಯೇ? ನಮ್ಮ ಮಕ್ಕಳಿಗೆ ಏನು ಮಾಡಿದರೂ, ಎಷ್ಟು ಮಾಡಿದರೂ ನಮಗೆ ತೃಪ್ತಿಯೇ ಇರುವುದಿಲ್ಲ. ಎಲ್ಲ ತಂದೆ-ತಾಯಿಯರದ್ದೂ ಒಂದೇ ಘೋಷವಾಕ್ಯ. 'ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡುವುದು ಬೇಡ'. ಒಪ್ಪೋಣ. ಕಷ್ಟ ತೋರಿಸುವ ಸಲುವಾಗಿ ಅವರನ್ನು ಜೀತಕ್ಕೆ ಸೇರಿಸುವುದೇನೂ ಬೇಡ, ಆದರೆ ಬದುಕಿನಲ್ಲಿ ಬರಬಹುದಾದ ಕಾರ್ಪಣ್ಯಗಳಿಗೆ ಅವರನ್ನು ತಯಾರು ಮಾಡದಿದ್ದರೆ ಹೇಗೆ? ಅವರು ಕೇಳಿದ್ದನ್ನೆಲ್ಲ ಆ ಕ್ಷಣವೇ ತಂದು ಸುರುವಿಬಿಡುವ ಹುಮ್ಮಸ್ಸಿನಲ್ಲಿ ಅವರ ನಿರೀಕ್ಷೆಯನ್ನು ಯಾವ ಮಟ್ಟಕ್ಕೆ ಬೆಳೆಸುತ್ತೇವೆಂದರೆ, ಅಪ್ಪಿತಪ್ಪಿ ‘ಆಗುವುದಿಲ್ಲ’ ಎಂದರೆ ಅವರು ಸ್ವೀಕರಿಸಲು ಸಿದ್ಧರಿರುವುದಿಲ್ಲ! ನಮ್ಮ ಸಣ್ಣ ಸಣ್ಣ 'ಇಲ್ಲ', 'ಈಗ ಆಗುವುದಿಲ್ಲ’ ಎಂಬಂಥ ಉತ್ತರಗಳು ಅವರಿಗೆ ರೂಢಿಯಾಗದಿದ್ದರೆ ಮುಂದೆ ಬದುಕಿನ ಹಲವು ಮಜಲುಗಳಲ್ಲಿ ಬರಬಹುದಾದ ದೊಡ್ಡ 'ಇಲ್ಲ'ಗಳನ್ನು ಹೇಗೆ ಎದುರಿಸಿಯಾರು? ಹೀಗೆ ಚಿಕ್ಕ-ಪುಟ್ಟದ್ದಕ್ಕೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವಂತಿದ್ದರೆ ನಾವು ಸತ್ತು ಯಾವುದೋ ಕಾಲವಾಗಿರುತ್ತಿತ್ತು ಅಲ್ಲವೇ? ನಮ್ಮಲ್ಲಿ ಬಹುತೇಕರು ಸರಿಯಾದ ಒಂದು ಜೊತೆ ಚಪ್ಪಲಿಯನ್ನು ಕೊಂಡದ್ದು ಯಾವಾಗ? ಒಳ್ಳೆಯ ಸೈಕಲ್ ಅಥವಾ ದ್ವಿಚಕ್ರವಾಹನದ ಮುಖ ನೋಡಿದ್ದು ಯಾವಾಗ? ಹಾಗಾದರೆ ನಮ್ಮಲ್ಲಿ ಆ ಗಟ್ಟಿತನ ಬಂದದ್ದು ಹೇಗೆ? ಯೋಚಿಸಿ ನೋಡಿ. ನಾವು ಮಕ್ಕಳಿಗೆ ಪ್ರೀತಿಯ ಸಿಹಿಯನ್ನೇ ಉಣಿಸಿ ಹೆಚ್ಚಿಸುತ್ತಿರುವುದು ಅವರ ದೇಹದ ತೂಕವನ್ನು ಮಾತ್ರ. ನಮ್ಮ ನೋವುಗಳ ಕಹಿಯನ್ನೇ ಉಣಿಸದಿದ್ದರೆ ಅವರ ಮನಸ್ಸಿನ ತೂಕ ಹೆಚ್ಚುವುದು ಹೇಗೆ?


ಮಕ್ಕಳ ಜೀವನ ಪರ್ಯಂತ ಜೊತೆಗಿದ್ದು ಅವರನ್ನು ಕಾಪಾಡಲಾರೆವು ನಾವು. ಹಾಗಿರುವಾಗ,  ಬದುಕನ್ನು ಎದುರಿಸುವ ರೀತಿಯನ್ನು ಕಲಿಸುವುದು ಅವಶ್ಯವಲ್ಲವೇ? 'ಎಂಥ ಸಂದರ್ಭವೇ ಬರಲಿ, ನಾನು ಜಯಿಸಬಲ್ಲೆ’ ಎಂಬ ಸ್ಥೈರ್ಯ, ಮನೋಬಲಗಳನ್ನು ತುಂಬುವುದಕ್ಕಿಂತ ದೊಡ್ಡ ಉಡುಗೊರೆ ಯಾವುದಿರಲು ಸಾಧ್ಯ? ಗ್ವೀಡೋ ಮಾಡಿದ್ದೂ ಅದನ್ನೇ! 

Saturday, 8 November 2014

ಕರಗುತ್ತಿರುವ ಕನ್ನಡಾಭಿಮಾನಕ್ಕೆ ಐಟಿ ಹೊಣೆಯೇ?

ನಮ್ಮ ಶಾಲೆಯಲ್ಲಿ ನಡೆದ ಘಟನೆ ಇದು. 'ನೀನು ನಿನ್ನ ಅಪ್ಪನ ಎಷ್ಟನೆಯ ಮಗ?', ಈ ಪ್ರಶ್ನೆಯನ್ನು ಹಿಂದಿ ಅಥವಾ ಇಂಗ್ಲೀಷಿನಲ್ಲಿ ಕೇಳಬಲ್ಲಿರಾ ಎಂದು ತರಗತಿಯಲ್ಲಿ ಸವಾಲೆಸೆದರು ನಮ್ಮ ಕನ್ನಡ ಮೇಡಂ. ಓಹೋ, ಅದೇನು ಮಹಾ ಎಂದು ಶುರು ಮಾಡಿದೆವು ನಾವು. ಆದರೆ ಅದು ಅಸಾಧ್ಯ ಎಂದು ಗೊತ್ತಾಗಿದ್ದು ನಂತರವೇ. ತಿರುಗಿಸಿ-ಮುರುಗಿಸಿ, ನಿಮ್ಮಪ್ಪನಿಗೆ ಎಷ್ಟು ಮಕ್ಕಳು ಎಂದು ಕೇಳಿದೆವು. ನೀ ಹಿರಿಯನಾ, ಕಿರಿಯನಾ ಅಥವಾ ಮಧ್ಯದವನಾ ಎಂದೂ ಕೇಳಿದೆವು. ಆದರೆ ಕಲಿತ ಬುದ್ಧಿಯನ್ನೆಲ್ಲ ಖರ್ಚು ಮಾಡಿದರೂ ನಿಖರವಾಗಿ ನೀನು ಎಷ್ಟನೆಯವನು ಎಂಬುದನ್ನು ಮಾತ್ರ ಕೇಳಲಾಗಲೇ ಇಲ್ಲ. ನಮ್ಮ ಮೇಡಂ ಆ ಪ್ರಶ್ನೆ ಕೇಳುವುದಕ್ಕೂ ಒಂದು ಕಾರಣವಿತ್ತು. ಆಗ ನಮ್ಮ ಶಾಲೆಗೆ ಹೆಚ್ಚಾಗಿ ಬರುತ್ತಿದ್ದುದು ಭಾರತೀಯ ವಾಯುಸೇನೆಯ ಅಧಿಕಾರಿಗಳ ಮಕ್ಕಳು. ಅವರದ್ದೋ ಕರ್ಣಾನಂದಕರವಾದ ಹಿಂದಿ ಭಾಷೆ. ಅವರು ಮಾತಿಗೆ ತೊಡಗಿದರೆ ಬೆರಗಿನಿಂದ ಬಾಯಿಬಿಟ್ಟುಕೊಂಡು ಕೇಳುವುದಷ್ಟೇ ನಮ್ಮ ಕೆಲಸ. ಅವರಂತೆಯೇ ಮಾತನಾಡುವ ತವಕ ಬೇರೆ! ಸರಿ, ಅವರನ್ನು ದುಂಬಾಲು ಬಿದ್ದು ಹಿಂದಿ ಕಲಿಯಲು ತೊಡಗಿದೆವು. ಕ್ರಮೇಣ ಯಾವ ಪರಿಯ ವ್ಯಾಮೋಹ ಆವರಿಸಿಕೊಂಡಿತೆಂದರೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುತ್ತಿದ್ದ, ಪ್ರಥಮ, ಮಧ್ಯಮ, ರಾಷ್ಟ್ರಭಾಷಾ ಮುಂತಾದ ಪರೀಕ್ಷೆಗಳಿಗೆಲ್ಲ ನಾವು ಹಾಜರ್! ಒಟ್ಟಿನಲ್ಲಿ, ಅವರೊಡನೆ ಮಾತಾಡಿ ಅವರ ಕೈಲೇ ಸೈ ಎನ್ನಿಸಿಕೊಳ್ಳುವ ಹಟ. ಬೆಳಿಗ್ಗೆ ಹಲ್ಲುಜ್ಜುವಾಗಿನಿಂದ ಶುರುವಾಗುತ್ತಿದ್ದ ಹಿಂದಿ ಜಪ, ರಾತ್ರಿ 'ರಾಮಂಸ್ಕಂದಂ ಹನುಮಂತಂ' ಶ್ಲೋಕದ ನಂತರವೂ ಮುಂದುವರೆಯುತ್ತಿತ್ತು.  ಈ ಭರದಲ್ಲಿ ಕನ್ನಡದ ಕಡೆಗಿನ ಗಮನ ಸೊನ್ನೆಯಾಯಿತು. ಸನ್ನೆ ಸಿಕ್ಕಿತು ನೋಡಿ ನಮ್ಮ ಮೇಡಂಗೆ, ನಮಗೆ ಪಾಠ ಕಲಿಸುವ ಸಲುವಾಗಿ, ಬೇಕೆಂದೇ ಈ ಪ್ರಶ್ನೆ ಕೇಳಿದರು. ನಾವು ಬೆಪ್ಪಾಗಿ ನಿಂತಾಗ ಅವರು ಹೇಳಿದ್ದು ಒಂದೇ ಮಾತು. 'ಎಲ್ಲ ಭಾಷೆಗಳೂ ಸುಂದರವೇ. ಆದರೆ ಕನ್ನಡ ಲಿಪಿಯ ಶ್ರೀಮಂತಿಕೆ, ವ್ಯಾಪ್ತಿ ಹಾಗೂ ಲಾಲಿತ್ಯ ಬೇರೆ ಯಾವ ಭಾಷೆಗೂ ಇಲ್ಲ. ಮೊದಲು ಇದನ್ನು ಪ್ರೀತಿಸಿ, ಆಸ್ವಾದಿಸಿ ನಂತರ ಉಳಿದವುಗಳನ್ನು ಕಲಿಯಿರಿ' ಎಂದು. ಅಷ್ಟೇ, ಚದುರಿ ಹೋದ ಗೋವುಗಳು ಗೊಲ್ಲ ಕರೆದೊಡನೆ ದಾರಿಗೆ ಬರುತ್ತವಲ್ಲ, ಹಾಗೆ ಬಂದೆವು ನಾವೂ ಕನ್ನಡದೆಡೆಗೆ!

ಹಿಂದಿಯ ಓದು ನಂತರವೂ ಮುಂದುವರೆಯಿತು. ಮುನ್ಷಿ ಪ್ರೇಮಚಂದರ ಮನಕಲಕುವ ಕಾದಂಬರಿಗಳನ್ನು ಓದಿದರೂ, ಹರಿವಂಶರಾಯ್ ಬಚ್ಚನ್‍ರ ಕವಿತೆಗಳನ್ನು ಮೆಲುಕುಹಾಕಿದರೂ, ಸಂತ ಕಬೀರರ, 'ದೋಹೆ'ಎಂಬ ರಸವತ್ತಾದ ನೀತಿಪಾಠಗಳನ್ನು ಮನನ ಮಾಡಿಕೊಂಡರೂ ಕನ್ನಡ ನಮ್ಮ ಹೃದಯದ ‘ಆಪ್ತತೆ’ಯ ಕಕ್ಷೆಯಿಂದ ಜಾರಿಹೋಗಲಿಲ್ಲ! ಮುಂದೆ ಸಂದರ್ಭಾನುಸಾರ ಹೊಸ ಭಾಷೆಗಳನ್ನು ಕಲಿತಷ್ಟೂ ಕನ್ನಡವೇ ಆದ್ಯತೆಯಾಗಬೇಕೆಂಬ ಹುಚ್ಚೂ ಬಲಿಯಿತು! ಇಂಥವೇ ಅನುಭವಗಳು ನಿಮ್ಮಲ್ಲಿ ಬಹಳಷ್ಟು ಮಂದಿಗೆ ಆಗಿರಬೇಕು. ಆದಾಗ್ಯೂ ಇಂದು ಯಾವ ಪರಿಸ್ಥಿತಿ ತಂದಿಟ್ಟಕೊಂಡಿದ್ದೇವೆ ನೋಡಿ. ನಾಚಿಕೆಯಾಗಬೇಕು ನಮಗೆ.

ನವೆಂಬರ್ ತಿಂಗಳು ಬಂದರೆ ಮಾತ್ರ ಕನ್ನಡಾಂಬೆ ನೆನಪಾಗುತ್ತಾಳೆ. ಅದರಲ್ಲೂ, ಕರ್ನಾಟಕ ರಕ್ಷಣಾ ವೇದಿಕೆಯವರು ಆಡುವುದನ್ನು ನೋಡಿದರೆ ಸಾಕು, ಅವಳು ಅವರಿಗೆ ಮಾತ್ರ ಹೆತ್ತತಾಯಿ, ನಮಗೆಲ್ಲ ಮಲತಾಯಿಯೇನೋ ಎನಿಸಿಬಿಡುತ್ತದೆ! ಹೇಗೆ ಈ ಉದಾಸೀನದಿಂದ ಹೊರಬರುವುದು? ನಮ್ಮ ಭಾಷೆಯನ್ನು ಪ್ರೀತಿಸುವ ಅಗತ್ಯದ ಅರಿವು ಮೂಡಿಸುವುದು ಹೇಗೆ? ಬೆಂಗಳೂರಿನ ಕೆಲ ಬಡಾವಣೆಗಳಿಗೆ, ರಸ್ತೆಗಳಿಗೆ ಹೋದರೆ ಕರ್ನಾಟಕ ಎಂದು ದೇವರಾಣೆಗೂ ಅನಿಸುವುದಿಲ್ಲ. ಬರೀ ತಮಿಳು, ತೆಲುಗು, ಹಿಂದಿ, ಉರ್ದುಗಳ ದರ್ಬಾರು! ಮಾಲ್‍ಗಳಲ್ಲಿ ಹೋಗಿ ನಿಂತರೆ ಯಾರ ಬಾಯಿಂದಲೂ ಅಪ್ಪಿತಪ್ಪಿಯೂ ಕನ್ನಡದ ನಾಲ್ಕು ಅಕ್ಷರಗಳು ಉದುರುವುದಿಲ್ಲ. ಶಾಲೆ, ಕಾಲೇಜುಗಳಂತೂ ಇಂಗ್ಲೀಷ್‍ಮಯ! ಬೆಂಗಳೂರು ಅಕ್ಷರಶಃ ಕಲಸುಮೇಲೋಗರವಾಗಿದೆ. ಕನ್ನಡಿಗರೆಲ್ಲ ಕಳೆದುಹೋಗುತ್ತಿದ್ದಾರೆ. ಏಕೆ ಹೀಗೆ ಎಂದು ಯಾರನ್ನಾದರೂ ಕೇಳಿ ನೋಡಿ, ಅವರದ್ದು ಒಂದೇ ಉತ್ತರ. 'ಈ ಹಾಳಾದ್ದು ಐಟಿ, ಬಿಟಿ ಬಂದಾಗಿನಿಂದ ಬೆಂಗಳೂರು ಎಕ್ಕುಟ್ಟಿ ಹೋಗಿದೆ. ಮೊದಲು ಚೆನ್ನಾಗಿತ್ತು' ಎಂಬುದು. ಬೆಂಗಳೂರು ಹಾಳಾಗಿದೆಯೆಂದರೆ ಕಾರಣ ಈ ಉದ್ಯಮಗಳು ಮಾತ್ರವೇ? ಇರಲಾರದು.

1985ರಲ್ಲಿ ಅಮೆರಿಕದ 'ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್' ತನ್ನ ಶಾಖೆ ತೆರೆಯಲು ಬೆಂಗಳೂರನ್ನು ಮೊತ್ತಮೊದಲಿಗೆ ಆರಿಸಿಕೊಂಡಿತು ನೋಡಿ, ಆಗಿನಿಂದಲೇ ಬೆಂಗಳೂರು ಇಂಥ ಒಂದು ಬದಲಾವಣೆಗೆ ತಯಾರಾಗಬೇಕಿತ್ತು. ಹಾಗಾಗಲಿಲ್ಲ. ನಂತರ ಒಂದಾದಮೇಲೊಂದರಂತೆ ಐಟಿ ಕಂಪೆನಿಗಳು ಹುಟ್ಟಿಕೊಂಡವು. ಊಹೂಂ, ನಮ್ಮ ವ್ಯವಸ್ಥೆ, ಮಾನಸಿಕತೆ ಒಂದಿಂಚೂ ಅಲುಗಾಡಲಿಲ್ಲ. ವಿಪ್ರೋ, ಇನ್ಫೋಸಿಸ್‍ನಂಥ ದಿಗ್ಗಜರಿಗೆ ಮಣೆ ಹಾಕುವ ಹೆಮ್ಮೆಯೂ ಬೆಂಗಳೂರಿನದಾಯಿತು. ಸಾವಿರಾರು ಕೆಲಸಗಳು ಹುಟ್ಟಿಕೊಂಡಂತೆಯೇ ವಲಸಿಗರೂ ಬರತೊಡಗಿದರು. ಮೊದಲು ನೆರೆಯ ತಮಿಳುನಾಡು ಹಾಗೂ ಆಂಧ್ರವರೇ ಹೆಚ್ಚಿದ್ದರೂ ಈಗ ಬಹುತೇಕ ಎಲ್ಲ ರಾಜ್ಯಗಳವರೂ ಇದ್ದಾರೆ. ಆಗೆಲ್ಲ ಬರೀ ಕೆಲಸಕ್ಕೆಂದು ವಲಸೆ ಬರುತ್ತಿದ್ದರಲ್ಲವೇ? ಈಗ ತಾಂತ್ರಿಕ ಶಿಕ್ಷಣ ಪಡೆಯುವ ಹಂತದಲ್ಲೇ ಲಗ್ಗೆ ಹಾಕುತ್ತಿದ್ದಾರೆ. ಕಾಮೆಡ್-ಕೆ ಎಂಬ ಅಗ್ನಿಪರೀಕ್ಷೆಯನ್ನು ದಾಟಿ, ಇಲ್ಲಿಯ ಕಾಲೇಜೊಂದರಲ್ಲಿ ಸೀಟು ಗಿಟ್ಟಿಸಿಕೊಂಡು ಬಿಟ್ಟರೆ ಮುಗಿಯಿತು, ಬೆಂಗಳೂರು ಕೈಗೆ ಹತ್ತಿದಂತೆಯೇ. ಮುಂದೆ ಕೆಲಸವೂ ಇಲ್ಲೇ ಆಗಿ ಅಪಾರ್ಟ್‍ಮೆಂಟ್‍ವೊಂದನ್ನು ಕೊಂಡರೆ ಬದುಕು ಸಾರ್ಥಕವಾದಂತೆ! ಬೆಂಗಳೂರೇ ಏಕೆ? ಏಕೆಂದರೆ ಇದು ಭಾರತದ ಸಿಲಿಕಾನ್ ವ್ಯಾಲಿ. ಹೇರಳ ಅವಕಾಶಗಳ ಆಗರ. ಎರಡು ಸಾವಿರಕ್ಕೂ ಹೆಚ್ಚಿನ ಐಟಿ, ಬಿಟಿ ಕಂಪೆನಿಗಳ ತವರೂರು. ನೆರೆಯಲ್ಲಿ ಚೆನ್ನೈ ಹಾಗೂ ಹೈದರಾಬಾದ್‍ಗಳಿದ್ದರೂ ವಲಸಿಗರ ಪ್ರಾಶಸ್ತ್ಯ ಇದಕ್ಕೇ ಏಕೆ? ಕಾರಣ, ವೈಪರೀತ್ಯವಿಲ್ಲದ ಇಲ್ಲಿಯ ಹವಾಗುಣ ಹಾಗೂ ಎಲ್ಲರನ್ನೂ ಸಹಿಸಲು ತಯಾರಿರುವ ಸ್ನೇಹಪರ ಜನ!

ಇಂದು ಲಕ್ಷಗಟ್ಟಳೆ ಸಂಖ್ಯೆಯಲ್ಲಿ ವಾಸವಿರುವ ವಲಸಿಗರನ್ನು, ಕನ್ನಡಾಂಬೆ ಸೊಲ್ಲೆತ್ತದೆ ಸಹಿಸುತ್ತಿದ್ದಾಳೆ. ನಮ್ಮದಲ್ಲದ ಅಪಾರ್ಟ್‍ಮೆಂಟ್ ಸಂಸೃತಿಗೆ ನಾವು ವಿಧಿಯಿಲ್ಲದೇ ಮೊರೆಹೋಗುತ್ತಿರುವುದನ್ನು ನೋಡುತ್ತಿದ್ದಾಳೆ. ನಾವು ಕನ್ನಡದ ಬೆಲೆಯನ್ನು ಕಳೆಯುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದ್ದಾಳೆ. ಅವಳೇನು ಮಾಡಿಯಾಳು, ನಾವು ಅಭಿಮಾನಹೀನರಾಗಿರುವಾಗ? ಕನ್ನಡ ಡಿಂಡಿಮವನ್ನು ಬಾರಿಸುವ ಬದಲು ಕನ್ನಡವನ್ನೇ ಬಾರಿಸುತ್ತಿದ್ದೇವೆ ಮುಲಾಜಿಲ್ಲದೆ! ವ್ಯವಹಾರಕ್ಕೆ ಬೇಕಾದ ಇಂಗ್ಲಿಷನ್ನು ಎಲ್ಲಿಡಬೇಕೋ ಅಲ್ಲಿಡದೆ ಬದುಕಿನ ತುಂಬಾ ಹರವಿಕೊಂಡಿದ್ದೇವೆ. ಮಕ್ಕಳ ಮೇಲೂ ಹೇರುತ್ತಿದ್ದೇವೆ. ಅವರಿಗೆ ಕನ್ನಡ ಸ್ಪಷ್ಟವಾಗಿ ಬರದಿದ್ದರೂ ಪರವಾಗಿಲ್ಲ, ನಿರರ್ಗಳವಾದ ಇಂಗ್ಲೀಷ್ ಕಡ್ದಾಯವಾಗಿ ಬರಲೇಬೇಕು! ನಾವು ಕರ್ನಾಟಕಲ್ಲಿರುವ ಅನ್ಯಭಾಷಿಗರೊಂದಿಗೆ ಅವರ ಭಾಷೆಯಲ್ಲೇ ಮಾತನಾಡಬೇಕು. ನೀವೇ ನೋಡಿ, ಕಛೇರಿಗಳಲ್ಲಿ ನಾಲ್ಕು ಜನ ತಮಿಳರು ಒಂದೆಡೆ ಸೇರಿದಾಗ, ಅವರ ಬಾಯಲ್ಲಿ ತಮಿಳು ಬಿಟ್ಟು ಬೇರೆ ಭಾಷೆ ಬಂದರೆ ತಮಿಳಮ್ಮನ ಮೇಲಾಣೆ! ನಮ್ಮದು ಮಾತ್ರ ಹಾಗಲ್ಲ. ನಾಲ್ಕು ಜನ ಕನ್ನಡಿಗರು ಸೇರಿದರೂ ಸಂಭಾಷಿಸಲು ಇಂಗ್ಲೀಷೇ ಬೇಕು. ಕನ್ನಡ ಮಾತನಾಡಲು ಅದೇನೋ ಕೀಳರಿಮೆ. ಒಣ ಜಂಭ. ನಾವೇ ಮಾತನಾಡದಿದ್ದ ಮೇಲೆ ಹೊರಗಿನವರಿಗೆ ಕಲಿಸುವುದು ಹೇಗೆ? ಕನ್ನಡ ಬರುತ್ತದಾ ಎಂದು ಕೇಳಿದರೆ 'ಕನ್ನಡ್ ಗೋತಿಲ್ಲಾ' ಎನ್ನುತ್ತಾರೆ. ಕಲಿಸಲು ಮುಂದಾಗುತ್ತೇವೆನ್ನಿ, ಅವರೇನನ್ನುತ್ತಾರೆ ಗೊತ್ತೇ? 'ಭಾರತೀಯರಿಗೆ ಯಾವ ರಾಜ್ಯದಲ್ಲಿ ಹೇಗೆ ಬೇಕಾದರೂ ಬದುಕುವ ಮೂಲಭೂತ ಹಕ್ಕಿದೆ, ನೀವು ಬಲವಂತಪಡಿಸುವ ಹಾಗಿಲ್ಲ. ನಾವು ಕನ್ನಡ ಕಲಿಯಬೇಕಾಗಿಯೇ ಇಲ್ಲ' ಎನ್ನುತ್ತಾರೆ! ಇದೇ ಜನ ಪಕ್ಕದ ತಮಿಳುನಾಡಿಗೆ ಹೋಗುತ್ತಾರಲ್ಲ, ಆಗ ಮೈಮನಸ್ಸಿನ ಎಲ್ಲ ಮೂಲೆಗಳ ಭೂತವನ್ನೂ ಬಿಡಿಸುತ್ತಾರೆ ಅಮ್ಮನ ಅಭಿಮಾನಿಗಳು! ಉತ್ತರಭಾರತದ ಹೋಟೆಲುಗಳು ಸಿಗದೆ ಸರವಣ ಭವನದ ಅನ್ನವನ್ನು ಬಲವಂತವಾಗಿ ಗಂಟಲಲ್ಲಿ ತುರುಕಿಕೊಳ್ಳುಬೇಕಾಗಿ ಬರುತ್ತದಲ್ಲ, ಆಗ ಅರಿವಾಗುತ್ತದೆ ಬೆಂಗಳೂರಿಗರ ಹೃದಯ ವೈಶಾಲ್ಯ!

ಉತ್ರ್ಪೇಕ್ಷೆಯಲ್ಲ, ಅಲ್ಲಿಯ ಜನರ ಒರಟುತನಕ್ಕೆ ಬಲಿಯಾಗಿ ಕಣ್ಣಲ್ಲಿ ನೀರುಹಾಕಿಕೊಂಡಿರುವ ಹಲವರ ಉದಾಹರಣೆಗಳನ್ನು ನಾವು ನೋಡಿದ್ದೇವೆ. ನಮಗೆ ಆ ಮಟ್ಟದ ದುರಭಿಮಾನ ಖಂಡಿತ ಸಲ್ಲ, ಆದರೆ ನಮ್ಮ ಭಾಷೆಯ ಬಗ್ಗೆ ಸ್ವೀಕೃತಿಯ ಮನೋಭಾವವನ್ನು ಬೆಳೆಸಬೇಡವೇ? ದೇಶದೆಲ್ಲೆಡೆಯಿರುವ ಮುಸ್ಲಿಮರು ಆಯಾ ರಾಜ್ಯಗಳ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಎಷ್ಟರಮಟ್ಟಿಗೆಂದರೆ, ಅವರ ಮಾತಿನ ಶೈಲಿಯಿಂದ ಧರ್ಮದ ಗುರುತು ಹಿಡಿಯಲು ಆಗುವುದೇ ಇಲ್ಲ. ಕರ್ನಾಟಕದ ಮುಸ್ಲಿಮರಿಗೆ ಮಾತ್ರ ಕನ್ನಡದ ಮೇಲೆ ಮುನಿಸು. ಉರ್ದುವೇ ಅವರಿಗೆ ಸೊಗಸು! ಮತ್ತೊಂದು ದೊಡ್ಡ ಕೊರತೆ ಒಗ್ಗಟ್ಟಿನದು. ಒಂದು ಕಛೇರಿಯಲ್ಲಿ ಓರ್ವ ಮಲೆಯಾಳಿ ಆಯ್ಕೆಯಾದ ಎಂದಿಟ್ಟುಕೊಳ್ಳಿ, ತನ್ನವರನ್ನೆಲ್ಲ ಅಲ್ಲಿಗೆ ಶತಾಯ-ಗತಾಯ ತಂದು ಸೇರಿಸುತ್ತಾನೆ. ಆಯಕಟ್ಟಿನ ಜಾಗ ಹಿಡಿದರಂತೂ ಮುಗಿಯಿತು. ತನ್ನ ಕೈಕೆಳಗೆ ತನ್ನವರನ್ನೇ ಪೇರಿಸುತ್ತಾನೆ. ನಾವು ಅದರಲ್ಲಿಯೂ ಎಡವುತ್ತೇವೆ. ಬಯಲುಸೀಮೆ, ಕರಾವಳಿ ಎಂದು ಮುಖ ನೋಡಿ ಮಣೆ ಹಾಕುವ ನಮ್ಮ ತಾರತಮ್ಯ ಮುಗಿಯುವುದೇ ಇಲ್ಲ. ನಾವು ಮನಸ್ಸು ಮಾಡುವ ಹೊತ್ತಿಗೆ ಮತ್ತ್ಯಾರೋ ತನ್ನ ಭಾಷೆಯವನಿಗೆ ಕೆಲಸ ಕೊಡಿಸಿರುತ್ತಾನೆ! ಇನ್ನೊಂದು ವಿಷಯವೆಂದರೆ ಈ ಅನ್ಯಭಾಷಿಗರು ತಮ್ಮ ಗುಂಪಿನಲ್ಲಿ ಯಾರನ್ನೂ ಬಿಟ್ಟುಕೊಡುವುದಿಲ್ಲ. ಒಬ್ಬನಲ್ಲಿ ಏನಾದರೂ ನ್ಯೂನತೆಯಿತ್ತೆಂದಿಟ್ಟುಕೊಳ್ಳಿ, ಉಳಿದವರು ಹೆಗಲಿಗೆ ನಿಲ್ಲುತ್ತಾರೆ. ಆತ್ಮವಿಶ್ವಾಸದ ಪ್ರತಿರೂಪವಾದ ಉತ್ತರಭಾರತದವರಂತೂ ಒಂದು ಕೈ ಹೆಚ್ಚೇ. 'ಗಣಪತಿಯನ್ನು ಮಾಡುತ್ತೀಯಾ' ಎಂದು ಕೇಳಿದರೆ, 'ಓಹೋ ಧಾರಾಳವಾಗಿ. ಜೊತೆಗೆ ಅವರಪ್ಪನನ್ನೂ ಮಾಡುತ್ತೇನೆ ಎಂಬಂಥ ನಿಲುವು'! ಇಂಥವರೊಡನೆ ಸೆಣೆಸಾಡುವಾಗ ಎಷ್ಟೋ ಸಲ ನಮ್ಮವರ ಮನೋಬಲ ಕುಗ್ಗುವುದೂ ಇದೆ.

ಹಾಗೆಂದು ಐಟಿ ಉದ್ಯಮ ಬರೀ ವಲಸಿಗರದೇ ಸೊತ್ತಾಗಿಲ್ಲ. ನಮ್ಮ ಮಧ್ಯಮ ವರ್ಗದ ಕನ್ನಡಿಗರು ಇಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುವುದರಲ್ಲಿ ಇದರ ಪಾಲೇ ಹೆಚ್ಚಿನದು. ಮೀಸಲಾತಿಯ ಕಾಟವಿಲ್ಲದೆ ಬುದ್ಧಿವಂತಿಕೆಯೇ ಆಧಾರವಾಗಿರುವ ಇದರಿಂದ ಎಷ್ಟು ಹುಡುಗರು ತಮ್ಮ ಅಪ್ಪಂದಿರ ಅಡುಗೆ ಕೆಲಸ, ಲೆಕ್ಕ ಬರೆವ ಕೆಲಸಗಳನ್ನು ಬಿಡಿಸಿಲ್ಲ? ಎಷ್ಟು ಅಮ್ಮಂದಿರು ಹೊಲಿಗೆ ಯಂತ್ರಗಳನ್ನು ಪಕ್ಕಕ್ಕಿಟ್ಟು ಸಂತಸಪಟ್ಟಿಲ್ಲ? ದೇಶ ವಿದೇಶಗಳನ್ನು ಸುತ್ತಿ ಬರುವ, ಅಲ್ಲೇ ನೆಲೆಸುವ ಎಷ್ಟು ಕನಸುಗಳು ಸಾಕಾರಗೊಂಡಿಲ್ಲ? ಈ ಉದ್ಯಮದಿಂದ ಪರೋಕ್ಷವಾಗಿ ಎಷ್ಟು ಕೆಲಸಗಳು ಹುಟ್ಟಿಕೊಂಡಿಲ್ಲ? ನಮ್ಮ ಬೆಂಗಳೂರು, ಐಟಿ ಉದ್ಯಮದಲ್ಲಿ ವಿಶ್ವದ ಕಣ್ಮಣಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಅದರಿಂದಾಗುವ ಆನುಕೂಲಗಳು ಮಾತ್ರ ಬೇಕು, ಅನಾನುಕೂಲಗಳನ್ನು ಸಂಭಾಳಿಸಲಾರೆವೆಂಬುದು ಹೇಡಿತನವಲ್ಲವೆ? ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಕಾಳಜಿ ನಮ್ಮೆಲ್ಲರಿಗಿರಬೇಕು. ಲಿಪಿಗಳ ರಾಣಿ ಎಂದು ಆಚಾರ್ಯ ವಿನೋಭಾ ಭಾವೆಯವರಿಂದ ಕರೆಸಿಕೊಂಡಿದ್ದಾಳೆ ನಮ್ಮ ಕನ್ನಡಾಂಬೆ. ದೇವನಾಗರಿ ಲಿಪಿಯಲ್ಲಿ ಬರೆವ ಹಿಂದಿ, ರೋಮನ್ ಲಿಪಿಯಲ್ಲಿ ಬರೆವ ಇಂಗ್ಲೀಷುಗಳು ತನ್ನದೇ ಲಿಪಿ ಹೊಂದಿರುವ ಕನ್ನಡಕ್ಕೆ ಯಾವ ಹೋಲಿಕೆ? ಈಗ್ಗೆ ನೂರು ವರ್ಷಗಳ ಹಿಂದೆಯೇ ಕನ್ನಡದ ಶಬ್ದಕೋಶವನ್ನು ರಚಿಸಿದ್ದ ಜರ್ಮನಿಯ ಫರ್ಡಿನೆಂಡ್ ಕಿಟಲ್. ಆ ಪರದೇಸಿಗಿದ್ದ ಕನ್ನಡ ಪ್ರೇಮಕ್ಕಿಂತ ನಮ್ಮದು ಕಡೆಯೇ?
ಬಳಕೆಯಲ್ಲಿಡದೆ ಬಿಟ್ಟರೆ ಹಳಸುವುದು ಸಂಬಂಧ ಹಾಗೂ ಭಾಷೆಗಳು ಮಾತ್ರವಂತೆ. ಸಂಬಂಧಗಳಿಗೇನೋ ರಕ್ತದ ಹಂಗಿದೆ. ಹೇಗಾದರೂ ಬೆಸೆದುಕೊಳ್ಳುತ್ತವೆ. ಭಾಷೆ ಉಳಿಯುವ ಬಗೆ?

ಎದ್ದೇಳಿ ಸಿದ್ಧರಾಮಯ್ಯನವರೇ, ನಮ್ಮ ಮಾನ, ಪ್ರಾಣಗಳ 'ರಕ್ಷಣೆ ಭಾಗ್ಯ' ಕರುಣಿಸಿ!


ನಿಮಗೆ ಹೀಗೊಂದು ಪತ್ರ ಬರೆಯಲೇಬೇಕಾಗಿದೆ. ನಮ್ಮ ತಲ್ಲಣಗಳನ್ನು ವಿವರಿಸಿ ಬಹಳಷ್ಟು ಪ್ರಶ್ನೆಗಳನ್ನು ಕೇಳಲೇಬೇಕಾಗಿದೆ. ಗಮನವಿಟ್ಟು ಕೇಳಿ ಸಿದ್ಧರಾಮಯ್ಯನವರೇ, ನೀವು ದಯಪಾಲಿಸಿರುವ ಶಾದಿ ಭಾಗ್ಯ, ಅನ್ನ ಭಾಗ್ಯ ಹಾಗೂ ಕ್ಷೀರ ಭಾಗ್ಯಗಳು ನಮಗೆ ಅನ್ವಯಿಸುವುದಿಲ್ಲ. ಏಕೆಂದರೆ ನಾವು ನಿಮ್ಮ ನೆಚ್ಚಿನ ಹಿಂದುಳಿದ ವರ್ಗದವರಲ್ಲ. ನಿಮಗೆ ಬಹಳ ಬೇಕಾಗಿರುವ ಅಲ್ಪಸಂಖ್ಯಾತರೂ ಅಲ್ಲ. ಯಾವುದೇ ಮೀಸಲಾತಿಯಿಲ್ಲದ, ಬಹುಸಂಖ್ಯಾತ ವರ್ಗದ ಸಾಮಾನ್ಯ ಹೆಣ್ಣುಮಕ್ಕಳು ನಾವು. ನಮ್ಮ ಮನೆಗಳಲ್ಲೂ ಪುಟ್ಟ ಕಂದಮ್ಮಗಳಿದ್ದಾರೆ. ಶಾಲೆ, ಕಾಲೇಜಿಗೆ ಹೋಗುವ ಬಾಲೆಯರಿದ್ದಾರೆ. ನಿಮ್ಮ ನೆಚ್ಚಿನ ಇತರೆ ಜಾತಿಯ, ಧರ್ಮದ ಹೆಣ್ಣುಮಕ್ಕಳಿಗಿರುವಂತೆ ನಮಗೂ ಮಾನ, ಪ್ರಾಣಗಳಿವೆ. ಅವುಗಳಿಗೆ ಕುತ್ತು ಬಂದಾಗ, ಜಾತಿ-ಧರ್ಮಗಳ ಮುಖ ನೋಡದೆ ನಮ್ಮನ್ನು ರಕ್ಷಿಸುತ್ತೀರ ಎಂದು ಆಶಿಸುವುದು ತಪ್ಪೇ? ನಮಗೆ ಅನ್ಯಾಯವಾದ ಪಕ್ಷದಲ್ಲಿ, ನ್ಯಾಯ ಕೊಡಿಸುತ್ತೀರೆಂದು ಅಪೇಕ್ಷಿಸುವುದು ತಪ್ಪೇ? ತಪ್ಪು ಎನ್ನುವುದಾದರೆ ದಯಮಾಡಿ ಹೇಳಿಬಿಡಿ. ಏಕೆಂದರೆ, ನಂದಿತಾ ಪೂಜಾರಿಯ ಸಾವಿನ ವಿಷಯದಲ್ಲಿ ನಿಮ್ಮ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನಮ್ಮಲ್ಲಿ ಹಲವು ಅನುಮಾನಗಳನ್ನು ಹುಟ್ಟಿಸುತ್ತಿದೆ.

ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ನಂದಿತಾಳನ್ನು ತೀರ್ಥಹಳ್ಳಿಯ ತುಂಗಾ ಕಾಲೇಜಿನ ಪಕ್ಕದಲ್ಲಿರುವ ಆನಂದಗಿರಿ ಗುಡ್ಡಕ್ಕೆ ಎಳೆದೊಯ್ದು ಕಿರುಕುಳ ನೀಡಿತ್ತು ಮುಸ್ಲಿಮ್ ಹುಡುಗರ ಗುಂಪು. ಘಟನೆ ಅಕ್ಟೋಬರ್ 29ರಂದೇ ನಡೆದಿದ್ದರೂ ಆರೋಪಿಗಳನ್ನು ಇನ್ನೂ ಏಕೆ ಬಂಧಿಸಿಲ್ಲ? ಅವರು ಕುಡಿಸಿದ್ದ ವಿಷಕ್ಕೋ, ಮತ್ತು ಬರಿಸುವ ಔಷಧಿಗೋ ಬಲಿಯಾಗಿ ಪ್ರಾಣ ಬಿಟ್ಟಿತಲ್ಲ ಆ ಮಗು, ಸಾಯುವ ಮುನ್ನ ಎಲ್ಲರ ವಿವರವನ್ನೂ ಹೇಳಿತ್ತು. ಅದನ್ನು ಏಕೆ ಪರಿಗಣಿಸಿಲ್ಲ? ಅವಳ ತಂದೆ-ತಾಯಿ ಕೊಟ್ಟ ದೂರಿಗೆ ಏಕೆ ಬೆಲೆಯಿಲ್ಲ? ಆರೋಪಿಗಳಲ್ಲಿ ಒಬ್ಬನಾದ ಇಮ್ರಾನ್‍ನ ಭಾವಚಿತ್ರ ನಮಗೇ ಸಿಕ್ಕಿದೆ, ನಿಮ್ಮ ಪೋಲೀಸರಿಗೆ ಮಾತ್ರ ಅವರನ್ನು ಪತ್ತೆ ಹಚ್ಚುವುದು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವು ನಂಬಬೇಕೇ? ಮುಸ್ಲಿಮರೆಂದ ಮಾತ್ರಕ್ಕೆ ಅವರ ಎಲ್ಲ ದುಷ್ಕೃತ್ಯಗಳನ್ನೂ ಮನ್ನಿಸುವ ನಿಮ್ಮದೆಂಥ ಪಕ್ಷಪಾತಿ ಸರ್ಕಾರ ಮುಖ್ಯಮಂತ್ರಿಗಳೇ? ಅವರ ಎಲ್ಲ ಅಪರಾಧಗಳನ್ನೂ ವೋಟ್‍ಬ್ಯಾಂಕ್ ರಾಜಕಾರಣದ ತಕ್ಕಡಿಯಲ್ಲಿಟ್ಟು ಏಕೆ ಅಳೆಯುತ್ತೀರಿ? ಅಲ್ಪಸಂಖ್ಯಾತರ ಓಲೈಕೆಯ ನಿಮ್ಮ ಚಟಕ್ಕೆ ನಮ್ಮ ಹೆಣ್ಣುಮಕ್ಕಳನ್ನೇಕೆ ಬಲಿಕೊಡುತ್ತೀರಿ? ನಿಮ್ಮ ಈ ಧೋರಣೆಯಿಂದಾಗಿ ಆ ಹೆಣ್ಣು ಮಗುವಿನ ಚಾರಿತ್ರ್ಯದ ಬಗ್ಗೆ ಇಲ್ಲದ ಕಥೆಗಳು ಹುಟ್ಟಿಕೊಳ್ಳುತ್ತಿವೆ. ಅವಳ ಶಾಲೆಯ ಮೇಷ್ಟರು ಹೇಳುವ ಸತ್ಯವನ್ನು ಕೇಳಿ. ಎಂಟನೆಯ ತರಗತಿಯವಳಾದರೂ ಅವಳ ಪ್ರೌಢಿಮೆ ಐದನೆಯ ತರಗತಿಯ ಮಗುವಿನಷ್ಟೇ ಎನ್ನುತ್ತಾರೆ ಅವರು. ಭಾವಚಿತ್ರದಲ್ಲಿನ ಅವಳ ಮುಗ್ಧತೆ ಮುಖಕ್ಕೆ ರಾಚುವುದಿಲ್ಲವೇ?

ಅದಿರಲಿ, ಅವಳು ಸತ್ತ ಎರಡು ದಿನಗಳ ನಂತರ ಡೆತ್ ನೋಟ್ ಎಲ್ಲಿಂದ ಹುಟ್ಟಿಕೊಂಡಿತು? ಅಪ್ಪ-ಅಮ್ಮಂದಿರಿಗೆ ಬರೆಯುವ ಕೊನೆಯ ಪತ್ರದಲ್ಲಿ 'ನನ್ನ ಹೆಸರು ನಂದಿತ' ಎಂದು ಯಾರಾದರೂ ಹೆಸರು ಕುಲ ಗೋತ್ರಗಳ ಪರಿಚಯ ಮಾಡಿಕೊಳ್ಳುತ್ತಾರೆಯೇ? ಅದು ಅವಳ ಕೈಬರಹವೇ ಅಲ್ಲ ಎಂದು ಅಲವತ್ತುಕೊಳ್ಳುತ್ತಿರುವ ಅವಳ ಶಾಲೆಯ ಮಾಸ್ತರರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನಿಮ್ಮ ತನಿಖಾಧಿಕಾರಿಗಳು ಸಿದ್ಧರೇ? ಇಲ್ಲಿ ಇಷ್ಟೆಲ್ಲ ನಡೆದಾಗಲೂ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರರು ಇತ್ತ ತಲೆಯನ್ನೂ ಹಾಕಲಿಲ್ಲ. ನಂದಿತಾಳ ತಂದೆ-ತಾಯಿಯರನ್ನು ಭೇಟಿಯಾಗಿ ನಾಲ್ಕು ಸಾಂತ್ವನದ ಮಾತುಗಳನ್ನಾಡಲಿಲ್ಲ. ಅವರು ಬಂದಿದ್ದು ನಂದಿತಾಳ ಹೆಣವನ್ನು ನೋಡಲು ಮಾತ್ರ. ಘಂಟೆಗೊಮ್ಮೆ ಇಂಟೆಲಿಜೆನ್ಸ್ ವರದಿ ಬರುತ್ತಿತ್ತಲ್ಲ, ಅದನ್ನಾಧರಿಸಿ ಸರಿಯಾದ ಸಮಯಕ್ಕೆ ಬಂದು ಹೆಣ ನೋಡಿಕೊಂಡು ಹೋಗಿ ದೊಡ್ದ ಉಪಕಾರ ಮಾಡಿದರು! ಪರಿಚಯದವರು ಕಾರಣ ಕೇಳಿದ್ದಕ್ಕೆ, ‘ನಾನು ಮೊದಲೇ ಬಂದಿದ್ದರೆ ಅವಳು ಬದುಕಿ ಬರುತ್ತಿದ್ದಳೇ?’ ಎಂದರಂತೆ! ಹಾಗಾದರೆ ಅವರು ಹೆಣ ನೋಡಲು ಬರುವ ಅಗತ್ಯವಾದರೂ ಏನಿತ್ತು? ಆಮೇಲಾದರೂ ಹೆಣ ಎದ್ದು ಕುಳಿತಿತೇ ಅಥವಾ ಅವರೊಡನೆ ಮಾತನಾಡಿತೇ? ಏಕಿಂಥ ಮನಸ್ಥಿತಿ ನಿಮ್ಮ ಸಚಿವರದ್ದು? ಜಾತಿ ರಾಜಕಾರಣ ಎಂದು ಉಳಿದವರನ್ನು ದೂರುವ ಅವರು ಮಾನವೀಯ ಅಂತಃಕರಣವನ್ನೂ ಮರೆತರೇಕೆ? ರಾಜ್ಯೋತ್ಸವದ ನಿಮಿತ್ತ ನಡೆವ ಧ್ವಜಾರೋಹಣ ಹಾಗೂ ಇತರೆ ಕಾರ್ಯಕ್ರಮಗಳು ಓರ್ವ ಅಮಾಯಕಳ ಸಾವಿಗಿಂತ ಹೆಚ್ಚೇ?

ಇಷ್ಟೆಲ್ಲಾ ಅವಾಂತರಗಳ ನಡುವೆಯೂ ಜಗ್ಗದೆ ನಿಂತಿದ್ದವರು ಶಿವಮೊಗ್ಗದ ಎಸ್‍ಪಿ ಕೌಶಲೇಂದ್ರ ಕುಮಾರ್. ನಿಷ್ಥಾವಂತ ಅಧಿಕಾರಿಯಾದ ಅವರಿಗೆ ಪ್ರಕರಣವನ್ನು ಭೇಧಿಸುವ ಸಂಪೂರ್ಣ ಸ್ವ್ಯಾತಂತ್ರ್ಯವನ್ನು ನೀವೇಕೆ ನೀಡಲಿಲ್ಲ? ಅವರ ಜೊತೆ ಸೇರಿ ಕಾರ್ಯನಿರ್ವಹಿಸಲು ಹೆಚ್ಚುವರಿಯಾಗಿ ಹಾವೇರಿ ಜಿಲ್ಲೆಯ ಎಸ್‍ಪಿಯವರನ್ನು ಬೇಕೆಂದೇ ನೇಮಿಸಿದ್ದು ಏಕೆ? ಸ್ಥಳೀಯ ಮುಸ್ಲಿಮರ ನೇತೃತ್ವದಲ್ಲಿರುವ ನ್ಯಾಷನಲ್ ಎಂಟರ್‍ಪ್ರೈಸಸ್‍, ತನ್ನ ಧರ್ಮದವರು ಎಸಗುವ ಅಪರಾಧಗಳಿಗೆ ಕುಮ್ಮಕ್ಕು ಕೊಡುತ್ತದೆ ಎಂಬ ಆಪಾದನೆ ಇದೆಯಲ್ಲ, ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿಲ್ಲವೇಕೆ? ಒಟ್ಟಾರೆ ಗೋಜಲಾಗಿರುವ ಈ ಸೂಕ್ಷ್ಮ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವ ಜರೂರತ್ತೇನಿತ್ತು? ಪಾರದರ್ಶಕತೆಯ ಸಲುವಾಗಿ, ನಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳುವ ಸಲುವಾಗಿ ಸಿಬಿಐಗೆ ಒಪ್ಪಿಸಬಹುದಿತ್ತಲ್ಲವೇ?

ಮತ್ತೊಂದು ವಿಷಯ ಗಮನಿಸಿದಿರಾ? ನೀವೆಲ್ಲ ಕೈಬಿಟ್ಟರೂ ಅಲ್ಲಿಯ ಜನ ನಂದಿತಾಳ ಕುಟುಂಬದ ಕೈ ಬಿಡಲಿಲ್ಲ. ಶಾಂತಿಯುತವಾಗಿ ಮೆರವಣಿಗೆ ನಡೆಸಿದರು. ಅಗತ್ಯವೆನಿಸಿದಾಗ ರಸ್ತೆಗಿಳಿದು ಪ್ರತಿಭಟಿಸಿದರು. ಅವರನ್ನೇಕೆ ಎಳೆದಾಡಿ ಹೊಡೆಸಿಬಿಟ್ಟಿರಿ ಮೈಮೇಲೆ ಬಾಸುಂಡೆ ಬರುವ ಹಾಗೆ? 47 ಜನರನ್ನು ಬಳ್ಳಾರಿಯ ಜೈಲಿನಲ್ಲಿ ಕೂಡಿಹಾಕಿದ್ದೀರಲ್ಲ, ನಿಜವಾಗಿಯೂ ಜೈಲಿನಲ್ಲಿರಬೇಕಾಗಿದ್ದವರು ಎಲ್ಲಿದ್ದಾರೆ ಎಂಬುದು ನಿಮಗೆ ಬೇಡವೇ? ಅಥವಾ ಇಂಥ ಘಟನೆಗಳಲ್ಲಿ ಒಬ್ಬರು ಮತ್ತೊಬ್ಬರ ಬೆಂಬಲಕ್ಕೆ ನಿಲ್ಲಬಾರದು ಎಂಬುದು ನಿಮ್ಮ ದುರಾಲೋಚನೆಯೇ? ಹೇಗೆ ನೋಡಿದರೂ ನೀವು ಮಾಡುತ್ತಿರುವುದಕ್ಕೆ ಯಾವ ಸಮರ್ಥನೆಯೂ ದೊರಕುತ್ತಿಲ್ಲ. ಫೇಸ್‍ಬುಕ್ಕಿನಲ್ಲಿ ಕಾಮೆಂಟ್ ಹಾಕಿದ ಮಾತ್ರಕ್ಕೆ ವಿ.ಆರ್ ಭಟ್‍ರನ್ನು ಜೈಲಿಗೆ ತಳ್ಳಿದಿರಿ. ಯಾರೋ ದೂರಿದರೆಂದು ರಾಘವೇಶ್ವರ ಭಾರತಿಯವರನ್ನು ವಿಚಾರಣೆಗೆ ಒಳಪಡಿಸಲು ಹಿಂದೆ ಮುಂದೆ ನೋಡಲಿಲ್ಲ ನೀವು. ನಿಮ್ಮ ನ್ಯಾಯ ಪರತೆ ಬಹುಸಂಖ್ಯಾತರನ್ನು ಶಿಕ್ಷಿಸಲು ಮಾತ್ರ ಮೀಸಲೇ?

ಮತ್ತೊಂದಷ್ಟು ನಿಷ್ಠುರ ಸತ್ಯಗಳನ್ನೂ ಹೇಳಿಬಿಡುತ್ತೇವೆ ಕೇಳಿ. ನೀವು ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದಾಗ, ಮೂಢನಂಬಿಕೆಯ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದಾಗಲೇ ನಿಮ್ಮ ರಾಜ'ಕಾರಣ'ಗಳು ಬಯಲಾಗಿದ್ದವು. ಆದರೆ ಈಗ ಅದಕ್ಕಿಂತ ಹೆಚ್ಚಾಗಿ ನಮ್ಮನ್ನು ದಂಗು ಬಡಿಸುತ್ತಿರುವುದು ನಿಮ್ಮ ಅಧಿಕಾರಾವಧಿಯಲ್ಲಿ ಪೋಲೀಸ್ ಇಲಾಖೆಗೆ ಬಂದೊದಗಿರುವ ದುಸ್ಥಿತಿ. ಎಡಿಜಿಪಿ ರವೀಂದ್ರನಾಥ್ ಯಾರದೋ ಫೋಟೋ ಕ್ಲಿಕ್ಕಿಸಿದ ಆಪಾದನೆಗೆ ಒಳಗಾಗಿ, ಅಳುತ್ತಾ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟರಲ್ಲ ಆಗೇಕೆ ನಿಮ್ಮ ಸಚಿವರನ್ನು ಕಳಿಸಿ ಸಾರ್ವಜನಿಕವಾಗಿ ಅನುನಯಿಸಿದಿರಿ ಅವರನ್ನು? ದಲಿತರೆಂಬುದೇ ಎಲ್ಲಕ್ಕೂ ಸಮರ್ಥನೆಯೇ? ನಿಷ್ಠಾವಂತ ಕಮೀಷನರ್ ರಾಘವೇಂದ್ರ ಔರಾದ್‍ಕರ್‍ಗೆ ಆಗಬಹುದಾದ ಮುಜುಗರದ ಪರಿವೆ ಇರಲಿಲ್ಲವೆ ನಿಮಗೆ? ಅಥವಾ ಪ್ರಾಮಾಣಿಕತೆ, ನಿಷ್ಠೆ, ಕಾರ್ಯದಕ್ಷತೆಗಿಂತಲೂ ಜಾತಿಯೇ ಮುಖ್ಯ ಎಂಬುದು ನಮ್ಮ ಸಂವಿಧಾನದಲ್ಲಿ ಎಲ್ಲಾದರೂ ನಮೂದಾಗಿದೆಯೇ? ಪೋಲೀಸರ ಒಳಜಗಳಗಳು ಹೀಗೆ ಹಾದಿರಂಪವಾದರೆ ಸಾಮಾನ್ಯ ಜನರ ಸ್ಥೈರ್ಯ, ನಂಬಿಕೆಗಳು ಕುಗ್ಗುತ್ತವೆ ಎಂಬುದು ನಿಮಗೆ ತಿಳಿಯದ ವಿಷಯವೇ? ಅಷ್ಟೇ ಅಲ್ಲ, ನಿಮ್ಮ ಪಕ್ಷದ ಶಾಸಕ ವಿಜಯಾನಂದ ಕಾಶಪ್ಪನವರ್ ಬಾರ್ ಒಂದರಲ್ಲಿ ಇಬ್ಬರು ಪೋಲೀಸ್ ಪೇದೆಗಳನ್ನು ವಿನಾಕಾರಣ ಚಚ್ಚಿದರಲ್ಲ, ಅದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರಕ್ಕೀಡಾದ ಯುವತಿಯ ವಿಷಯ ನೆನಪಿರಬೇಕಲ್ಲ ನಿಮಗೆ? ಅತ್ಯಾಚಾರಿಯ ಅಪ್ಪ ರಾಜ್ಯದ ಬಿಎಸ್‍ಪಿ ಪಕ್ಷದ ಸ್ಥಳೀಯ ಮುಖಂಡ ಎಂಬ ಕಾರಣಕ್ಕೆ ಸರಿಯಾಗಿ ತನಿಖೆ ನಡೆಸಲಾಗದ ಪರಿಸ್ಥಿತಿ ಬಂದೊದಗಿತ್ತು ಠಾಣೆಯ ಎಸ್‍ಐಗೆ! ಇನ್ನು ಇತ್ತೀಚೆಗೆ ಶಾಲೆಗಳಲ್ಲಿ ಪುಟ್ಟ ಮಕ್ಕಳ ಮೇಲೆ ನಡೆಯುತ್ತಿರುವ ಸರಣಿ ಅತ್ಯಾಚಾರಗಳ ಬಗ್ಗೆ ನಿಮಗೆ ಗೊತ್ತಿಲ್ಲದ್ದು ಏನಿದೆ? ಅಪರಾಧಿಗಳ ಭಂಡತನ ಈ ಮಟ್ಟಿಗೆ ಹೆಚ್ಚಿರುವುದಕ್ಕೆ, ಪೋಲೀಸರ ಮನೋಬಲ ಕುಗ್ಗಿರುವುದೇ ಕಾರಣವಲ್ಲವೇ? ಒಂದಿಡೀ ವ್ಯವಸ್ಥೆಯ ಜುಟ್ಟನ್ನು ಕೈಲಿ ಹಿಡಿದು ಬುಗುರಿಯಂತೆ ಆಡಿಸಿದರೆ ಅವರೇನು ಮಾಡಿಯಾರು ಪಾಪ? ಇದು ಹೀಗೇ ಮುಂದುವರೆದು, ಅರಾಜಕತೆಯಲ್ಲಿ ನಮ್ಮ ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಉತ್ತರಪ್ರದೇಶಗಳನ್ನೂ ಮೀರಿಸಲಿ ಎಂಬುದು ನಿಮ್ಮ ಉದ್ದೇಶವೇ? ಉದ್ಯಾನ ನಗರಿ ಅಧ್ವಾನ ನಗರಿಯಾಗಬೇಕೇ? ನಿಮ್ಮ ವಿಳಂಬ ನೀತಿಯಿಂದಾಗಿ ಉದ್ಯಮಿಗಳು ಇಲ್ಲಿಂದ ಬಿಡಾರ ಎತ್ತುತ್ತಿದ್ದಾರೆ. ಅವಕಾಶಗಳನ್ನು ಏಕೆ ಕೈ ಚೆಲ್ಲುತ್ತಿದ್ದೀರಿ?

ಇಷ್ಟೆಲ್ಲಾ ಸಮಸ್ಯೆಗಳ ಜೊತೆಗೆ ನಿಮಗೆ ನಿದ್ದೆಯ ಕಾಟ ಬೇರೆ! ನಮಗೆ ಒಂದು ಸಣ್ಣ ಹೊಣೆ ಹೆಗಲೇರಿದರೂ ರಾತ್ರಿ ಹೊತ್ತಿನಲ್ಲೇ ಕಣ್ತುಂಬ ನಿದ್ದೆ ಬರುವುದಿಲ್ಲ. ಹಾಗಿರುವಾಗ, ಇಡೀ ರಾಜ್ಯದ ಹೊಣೆ ಹೊತ್ತ ನೀವು ಹಾಡಹಗಲೇ ಅದು ಹೇಗೆ ಕುಳಿತಲ್ಲಿಯೇ ನಿದ್ದೆಗೆ ಜಾರಿಬಿಡುತ್ತೀರಿ? ಎಲ್ಲ ಸಭೆ ಸಮಾರಂಭಗಳಲ್ಲಿಯೂ ಪೊಗದಸ್ತು ನಿದ್ದೆ ಜೊತೆಗೆ ಜೋರು ಗೊರಕೆ! ಇದೊಂದು ರೋಗವಾದರೆ ಗುಣಪಡಿಸಿಕೊಳ್ಳಬಾರದೇ? ಒಂದೆಡೆ ಸದನದಲ್ಲಿ ಅತ್ಯಾಚರದಂಥ ಗಂಭೀರ ವಿಷಯಗಳ ಚರ್ಚೆಯಾಗುತ್ತಿದ್ದರೆ ಮತ್ತೊಂದೆಡೆ ನಿಮ್ಮ ಗಡದ್ದು ನಿದ್ದೆ! ನೀವೇ ಲಘುವಾಗಿ ತೆಗೆದುಕೊಂಡರೆ ಗೃಹ ಸಚಿವ ಜಾರ್ಜ್ ಎಷ್ಟು ಬೆಲೆ ಕೊಟ್ಟಾರು? ಮಾಧ್ಯಮಗಳು ಟಿಆರ್‍ಪಿ ಹೆಚ್ಚಿಸಿಕೊಳ್ಳಲು ಮಾಡುತ್ತಿರುವ ಪ್ರಸಾರ ಇದು ಎನ್ನದೆ ಬಿಟ್ಟಾರೆಯೇ? ವಾಸ್ತವವಾಗಿಯೂ ಟಿಆರ್‍ಪಿ ಹೆಚ್ಚುತ್ತಿದೆಯೋ ಇಲ್ಲವೋ ಗೊತ್ತಿಲ್ಲ, ನಮ್ಮ ಬಿಪಿಯಂತೂ ಏರುತ್ತಿದೆ!

ನಿಮ್ಮಲ್ಲಿ ಒಂದೇ ಒಂದು ಮನವಿ. ಕತ್ತನ್ನು ಹಾಗೇ ಸ್ವಲ್ಪ ಮೇಲೆತ್ತಿ ನಿಮ್ಮ ಕಛೇರಿಯಲ್ಲಿರುವ, ಪ್ರಧಾನಿಯವರ ಚಿತ್ರಪಟವನ್ನೊಮ್ಮೆ ನೋಡಿ. ಅದೇನು ಲವಲವಿಕೆ ಅವರಲ್ಲಿ, ಅದೇನು ಆಸಕ್ತಿ ಕೆಲಸ ಕಾರ್ಯಗಳಲ್ಲಿ! ಅವರ ಕಾರ್ಯಾಲಯದ ವೈಖರಿಯೇ ಬದಲಾಗಿ ಹೋಗಿದೆ ಈ ಕೆಲ ತಿಂಗಳುಗಳಲ್ಲಿ! ಅವರಲ್ಲಿ ನಿಮಗೆ ಎಂದಾದರೂ ಜಡತ್ವ, ತೂಕಡಿಕೆಗಳು ಕಂಡಿವೆಯೇ? ಜನರೊಂದಿಗೆ ಸ್ಪಂದಿಸುತ್ತಾ, ಸಮಸ್ಯೆಗಳನ್ನು ಚರ್ಚಿಸುತ್ತಾ ಹೊಸ ಹೊಸ ಪರಿಹಾರಗಳನ್ನು ಸೂಚಿಸುತ್ತಾ ಬೆಸೆದುಕೊಳ್ಳುವ ಪರಿ ನಿಮ್ಮಲ್ಲಿ ಅಸೂಯೆ ಮೂಡಿಸಿಲ್ಲವೇ? ಒಳ್ಳೆಯದನ್ನು ಅನುಕರಿಸಲು ಯಾರಾದರೇನು? ಅಧೋಗತಿಗಿಳಿಯುತ್ತಿರುವ ಕರ್ನಾಟಕದ ಅಭಿವೃದ್ಧಿಗೆ ನೀವೇಕೆ ಹೊಸ ಮಾದರಿ ರಚಿಸಬಾರದು?

ಮತ್ತೆ ನಂದಿತಾ ವಿಷಯಕ್ಕೆ ಬರೋಣ. ನ್ಯಾಷನಲ್ ಎಂಟರಪ್ರೈಸಸ್‍ನ ಒಡೆಯರಲ್ಲಿ ಒಬ್ಬರಾದ ಅಬ್ದುಲ್ ಕಲಾಂ ಸ್ಥಳೀಯ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. 'ನಾನು ಮತ್ತು ಕೃಷ್ಣಪ್ಪ(ನಂದಿತಾಳ ಅಪ್ಪ) ಒಟ್ಟೊಟ್ಟಿಗೇ ಆಡಿ ಬೆಳೆದವರು. ನಂದಿತಾ ಸತ್ತರೂ ಒಂದೇ ನನ್ನ ಮಗಳು ಸತ್ತರೂ ಒಂದೇ' ಎಂದು. ಇಲ್ಲ ಅಬ್ದುಲ್‍ರವರೇ, ಎರಡೂ ಬಿಲ್‍ಕುಲ್ ಬೇರೆ ಬೇರೆ. ಬೆಲೆ ಇರುವುದು ನಿಮ್ಮ ಮಗಳ ಮಾನ, ಪ್ರಾಣಕ್ಕೆ ಮಾತ್ರ. ಸತ್ತಿರುವ ನಂದಿತಾಳಿಗಲ್ಲ.

ಇನ್ನಾದರೂ ಏಳಿ ಸಿದ್ಧರಾಮಯ್ಯನವರೇ, ನಿಮ್ಮ ತಲೆಯ ತುಂಬ ಕವಿದಿರುವ ಈ ಓಲೈಕೆಯ ಮಂಪರನ್ನು ಒಮ್ಮೆ ಝಾಡಿಸಿಬಿಡಿ. ಮುಂದೆ ಇಂಥವೇ ಸಾವಿರಾರು ಉದಾಹರಣೆಗಳು ಹುಟ್ಟಲು ಅನುವು ಮಾಡಿಕೊಡಬೇಡಿ. ನಾಡಿನ ತುಂಬೆಲ್ಲಾ ನೂರಾರು 'ನಂದಿತಾ'ಗಳಿದ್ದಾರೆ. ಅವರಿಗೆ ಬೇರಾವ ಭಾಗ್ಯಗಳು ದೊರಕದಿದ್ದರೂ ಪರವಾಗಿಲ್ಲ, ಕಡೇ ಪಕ್ಷ ರಕ್ಷಣೆಯ ಭಾಗ್ಯವನ್ನು ಕರುಣಿಸಬೇಕಾದ ಹೊಣೆ ನಿಮ್ಮದೇ ಅಲ್ಲವೇ?

Thursday, 30 October 2014

ಗೋಹತ್ಯೆ ನಡೆಸುವುದಕ್ಕೆ ಧರ್ಮದ ಸೋಗೇಕೆ?



ಈ ಘಟನೆ ಬಹಳ ಹಿಂದೆ ನಡೆದದ್ದು. ಚೋಳ ವಂಶದ ರಾಜ ಮನು, ಧರ್ಮರಾಜನೆಂದೇ ಪ್ರಖ್ಯಾತನಾಗಿದ್ದ. ನ್ಯಾಯ ಬೇಡಿ ಬಂದವರನ್ನು ಎಂದಿಗೂ ನಿರಾಸೆಗೊಳಿಸುತ್ತಿರಲಿಲ್ಲ. ಅವನು ತನ್ನ ಆಸ್ಥಾನದಲ್ಲಿ ಒಂದು ದೊಡ್ಡ ಗಂಟೆಯನ್ನು ನೇತುಹಾಕಿದ್ದ. ನ್ಯಾಯ ಬೇಕಾದವರು ಆ ಗಂಟೆಯನ್ನು ಬಾರಿಸಿದರೆ ಸಾಕು, ಅವರ ಅಹವಾಲು ಕೇಳಿ ತಕ್ಕ ಸಮಾಧಾನವನ್ನು ಕೊಟ್ಟು ಕಳಿಸುತ್ತಿದ್ದ. ಒಮ್ಮೆ  ಅವನ ಆಸ್ಥಾನದ ಗಂಟೆ ಜೋರಾಗಿ ಹೊಡೆದುಕೊಂಡಿತಂತೆ. ಯಾರೆಂದು ಬಂದು ನೋಡಿದರೆ ಒಂದು ಗೋವು! ಇದೇಕೆ ಬಂದು ನಿಂತಿದೆ ಎಂದು ವಿಚಾರಿಸಲಾಗಿ, ಆ ಗೋವಿನ ಕರು ರಾಜಕುಮಾರನ ರಥಕ್ಕೆ ಸಿಕ್ಕಿ ಸತ್ತು ಹೋಗಿತ್ತಂತೆ. ನ್ಯಾಯ ಬೇಡಿ ಬಂದ ಗೋವಿನ ಸಲುವಾಗಿ ರಾಜ ಏನು ಮಾಡಿದನಂತೆ ಗೊತ್ತೇ? ಆ ಕರುವಿಗೆ ಆದಂತೆಯೇ ತನ್ನ ಮಗನನ್ನೂ ರಥದಡಿಯಲ್ಲಿ ಮಲಗಿಸಿ ಕೊಲ್ಲಿಸಿದನಂತೆ! ಎಂಥ ಪೆದ್ದನಲ್ಲವೇ ರಾಜ? ಯಃಕಶ್ಚಿತ್ ಒಂದು ಗೋವಿಗೂ ನ್ಯಾಯ ಕೊಡಿಸುವುದೇ? ಅದು ಆ ಕಾಲದ ಮಾತಾಯಿತು ಬಿಡಿ.

ಈಗ ಕಾಲ ಬದಲಾಗಿದೆ. ನ್ಯಾಯ ಕೊಡಿಸುವುದು ಹಾಗಿರಲಿ, ಗೋವನ್ನು ಉಳಿಸಿ ಎನ್ನುವವರನ್ನೇ ತರಿದು ಹಾಕಲಾಗುತ್ತಿದೆ. ಕಳೆದ ಅಕ್ಟೋಬರ್ ಒಂದರಂದು ಗಂಗೊಂಡನಹಳ್ಳಿಯಲ್ಲಿ ಮಹೇಂದ್ರ ಮನೋತ್‍ ಹಲ್ಲೆಗೀಡಾದ ಘಟನೆ ನಿಮಗೆ ತಿಳಿದಿರಬೇಕಲ್ಲವೇ? ಗೋಹತ್ಯೆಯನ್ನು ತಡೆಯಲು ಶ್ರಮಿಸುತ್ತಿರುವವರ ಹತ್ಯೆಗೆ ಮುಂದಾಗುತ್ತಿರುವ ಜನರದ್ದು ಎಂಥ ಸಂಸ್ಕಾರ? ಈ ಪರಿಯ ಅಜ್ಞಾನ, ತಿಕ್ಕಲುತನ ಆವರಿಸಿಕೊಂಡಿದ್ದು ಹೇಗೆ, ತಿಳಿಯೋಣ ಬನ್ನಿ. ಹಿಂದೂ ಧರ್ಮದಲ್ಲಿ ಗೋವಿಗೆ ಮೊದಲಿನಿಂದಲೂ ಪ್ರಾಮುಖ್ಯ, ಪೂಜನೀಯ ಸ್ಥಾನ ಇದ್ದೇ ಇತ್ತು. 16ನೇ ಶತಮಾನದಲ್ಲಿ ಶುರುವಾಯಿತಲ್ಲ ಮುಸ್ಲಿಮರ ದಾಳಿ, ಆಗ ಪರಿಸ್ಥಿತಿ ಬದಲಾಗತೊಡಗಿತು. ಬರೀ ಒಂಟೆ, ಮೇಕೆ, ಕುರಿಗಳಿದ್ದ ನಾಡಿನಿಂದ ಬಂದ ಮುಸ್ಲಿಮರು ಗೋವುಗಳನ್ನು ಮೊದಲಿಗೆ ಕಂಡಿದ್ದೇ ಭಾರತದಲ್ಲಿ! ಮೊಘಲರ ಆಳ್ವಿಕೆ ಶುರುವಾದ ಹೊಸದರಲ್ಲಿ, ಹಿಂದೂಗಳಿಗೆ ನೋವುಂಟಾಗುತ್ತದೆ ಎಂಬ ಕಾರಣಕ್ಕೆ ಗೋಹತ್ಯೆಗೆ ಸಮ್ಮತಿಯಿರಲಿಲ್ಲ. ಆದರೆ ನಂತರ ಬಂದನಲ್ಲ ಔರಂಗಜೇಬ್, ಇದನ್ನೇ ಮುಖ್ಯ ಕಸುಬನ್ನಾಗಿಸಿಕೊಂಡುಬಿಟ್ಟ. ದೇಗುಲಗಳನ್ನೆಲ್ಲ ಮಸೀದಿಗಳನ್ನಾಗಿ ಪರಿವರ್ತಿಸುವುದು, ಅದು ಮಸೀದಿಯಾದುದಕ್ಕೆ ಸಾಕ್ಷಿಯಾಗಿ ಒಂದು ಗೋವನ್ನು ಕಡಿಯುವುದು! ಈ ಬರ್ಬರ ಕೃತ್ಯದ ಅಭ್ಯಾಸ ಯಾವ ಮಟ್ಟಕ್ಕೆ ಹೋಯಿತೆಂದರೆ ಮುಸ್ಲಿಮರು ತಮ್ಮ ಹಬ್ಬಗಳಿಗೂ ಗೋವುಗಳ ಬಲಿಯನ್ನೇ ನೀಡತೊಡಗಿದರು. ಜೊತೆಗೆ ಮತ್ತೂ ಒಂದು ತಂತ್ರಗಾರಿಕೆ ನಡೆದಿತ್ತು. ಬಲವಂತದಿಂದ ಮತಾಂತರಗೊಂಡ ಹಿಂದೂಗಳಿಗೆ ಗೋಮಾಂಸ ತಿನ್ನಿಸಿಬಿಡುವುದು. ಒಮ್ಮೆ ತಿಂದುಬಿಟ್ಟರೆ ಮುಗಿಯಿತು. ಧರ್ಮಭ್ರಷ್ಟರಾದೆವೆಂಬ ಅಪರಾಧೀ ಭಾವದಿಂದ ಕುಗ್ಗಿ ಹೋಗುತ್ತಿದ್ದ ಹಿಂದೂಗಳು ಮತ್ತೆ ತಮ್ಮ ಧರ್ಮಕ್ಕೆ ಮರಳುವುದು ಸಾಧ್ಯವೇ ಇರಲಿಲ್ಲ. ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸುವ ಕನಸು ಕಾಣುತ್ತಿದ್ದವರಿಗೆ ಇಷ್ಟೇ ತಾನೆ ಬೇಕಿದ್ದಿದ್ದು?

ಗೋಹತ್ಯೆಗೆ ಹೈದರಾಲಿ ತಕ್ಕಮಟ್ಟಿಗೆ ಕಡಿವಾಣ ಹಾಕಿದ್ದನಾದರೂ ಬ್ರಿಟಿಷರು ಬಂದ ನಂತರ ಇದು ಮತ್ತೆ ಗರಿಗೆದರಿತು. ಅಷ್ಟೇ ಅಲ್ಲ, ಅವರ ಅಚ್ಚುಮೆಚ್ಚಿನ ಆಹಾರವೂ ಆಯಿತು. ಆಂಗ್ಲ ಭಾಷೆಯಲ್ಲಿ ಬೀಫ್ ಎಂದು ಕರೆಯಲ್ಪಡುವ ಗೋಮಾಂಸವನ್ನು ಚಪ್ಪರಿಸಿ ತಿನ್ನಲು ಬ್ರಿಟಿಷರು ಮೊತ್ತ ಮೊದಲ ಕಸಾಯಿಖಾನೆಯನ್ನು ಕಲ್ಕತ್ತಾದಲ್ಲಿ ಕಟ್ಟಿಸಿದರು. ಅದರ ಹಿಂದೆಯೇ ನೂರಾರು ಕಸಾಯಿಖಾನೆಗಳು ಹುಟ್ಟಿಕೊಂಡವು. ಮುಂದೆ ಸ್ವಾತಂತ್ರ್ಯ ಸಿಕ್ಕ ಮೇಲೆ, ತಿಲಕ್, ಮಾಳವೀಯ ಮುಂತಾದವರು ಪ್ರತಿಭಟಿಸಿದರೂ ಉಪಯೋಗವಾಗಲಿಲ್ಲ. ಉಳಿದವರದ್ದು ಬಿಡಿ, ಮಹಾತ್ಮ ಗಾಂಧಿಯ ಹೋರಾಟಕ್ಕೂ ಕಾಂಗ್ರೆಸ್ ಕ್ಯಾರೇ ಎನ್ನಲಿಲ್ಲ. ಶಾಸ್ತ್ರಕ್ಕೆಂಬಂತೆ ಅನುಚ್ಛೇದ 48ರ ರಚನೆಯಾಯಿತಾದರೂ ಅದು ಗೋಹತ್ಯೆಯನ್ನು ನಿರ್ಬಂಧಿಸಲಿಲ್ಲ. ಜೊತೆಗೆ, ರಾಜ್ಯಗಳಿಗೆಲ್ಲ ಗೋಹತ್ಯೆಯ ಕುರಿತ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನೂ ದಯಪಾಲಿಸಿತು. ಪರಿಣಾಮವೇನಾಗಿದೆ ಗೊತ್ತೇ?



ಇಂದು ಕೇರಳ ಹಾಗೂ ಪಶ್ಚಿಮಬಂಗಾಳ ಗೋಹತ್ಯೆಗೆ ಅಧಿಕೃತವಾಗಿ ಒಪ್ಪಿಗೆ ನೀಡಿವೆ. ಉಳಿದ ರಾಜ್ಯಗಳಲ್ಲಿ ಇದು ಅನಧಿಕೃತವಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ, ಯಡಿಯೂರಪ್ಪನವರ ಸರ್ಕಾರ ಇದ್ದಾಗ ಗೋ ಹತ್ಯೆಗೆ ನಿಷೇಧವಿತ್ತು. ಸಿದ್ಧರಾಮಯ್ಯನವರು ಕುರ್ಚಿ ಏರಿದ ತಕ್ಷಣ ಮಾಡಿದ ಮೊದಲ ಕೆಲಸವೇ ನಿಷೇಧವನ್ನು ಹಿಂಪಡೆದದ್ದು! ಅಲ್ಲವೇ ಮತ್ತೆ, ಕಾಂಗ್ರೆಸ್‍ನ ರಾಜಕೀಯ ಎಂದಮೇಲೆ ಅಲ್ಪಸಂಖ್ಯಾತರ ಓಲೈಕೆ ಇರದಿದ್ದರೆ ಹೇಗೆ? ಈಗ ದೇಶದೆಲ್ಲೆಡೆ ಕದ್ದು ಮುಚ್ಚಿ, ಅಪರಾತ್ರಿಯಲ್ಲಿ ಗೋವುಗಳನ್ನು ಸಾಗಿಸಿ ಕಟುಕರ ಕೈಗೆ ಒಪ್ಪಿಸಲಾಗುತ್ತಿದೆ. ಕಳ್ಳಸಾಗಣೆ ದೇಶದೊಳಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಗೋವುಗಳ ಹಿಂಡು ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶವನ್ನೂ ತಲುಪುತ್ತಿವೆ. ಯಾವ ಪ್ರಮಾಣದಲ್ಲೆಂದರೆ, ಆ ದೇಶ ತಾನು ಉಂಡು ಉಳಿದದ್ದನ್ನು ರಫ್ತು ಮಾಡುವಷ್ಟು! ದಿಲ್ಲಿಯೊಂದರಲ್ಲೇ 11ಸಾವಿರಕ್ಕೂ ಹೆಚ್ಚು ಅನಧಿಕೃತ ಕಸಾಯಿಖಾನೆಗಳಿವೆ ಎಂದರೆ ಇನ್ನು ಉಳಿದ ನಗರಗಳಲ್ಲಿ ಎಷ್ಟಿರಬಹುದು? ನಿಮಗೆ ಗೊತ್ತಿದೆಯೋ ಇಲ್ಲವೋ, ಈ ಕಸಾಯಿಖಾನೆಗಳನ್ನು ಹೆಚ್ಚಾಗಿ ತಲುಪುತ್ತಿರುವವು ಹಾಲು ಕರೆಯುವ ಮತ್ತು ಗಬ್ಬ(ಗರ್ಭಿಣಿ)ವಾದ ಹಸುಗಳೇ. ಅವುಗಳಿಗೆ ಯಾವ ಸ್ಥಿತಿ ಬರುತ್ತದೆ ನೋಡಿ. ಒಂದು ಲಾರಿಯಲ್ಲಿ ನಾಲ್ಕು ಹಸುಗಳನ್ನು ಮಾತ್ರ ಕರೆದೊಯ್ಯಬೇಕೆಂಬುದು ನಿಯಮ. ಆದರೆ ನಲವತ್ತಕ್ಕೂ ಹೆಚ್ಚು ಹಸು, ಕರುಗಳನ್ನು ತುಂಬುತ್ತಾರೆ. ನಿಲ್ಲಲಾಗದೆ ಕೂರಲಾಗದೆ ಚಡಪಡಿಸುವ ಅವುಗಳು ಒಂದನ್ನೊಂದು ತಿವಿದುಕೊಂಡು ಅಲ್ಲೇ ಗಾಯಗೊಳ್ಳುತ್ತವೆ. ಹಲವು ಉಸಿರುಗಟ್ಟಿ ಸತ್ತೂ ಹೋಗುತ್ತವೆ. ಅಪ್ಪಿ ತಪ್ಪಿ ಗಾಯವಾಗದೆ ಉಳಿದವು ಎಂದಿಟ್ಟುಕೊಳ್ಳಿ, ಇಳಿಸುವಾಗ ಲಾರಿಯಿಂದ ಕೆಳಗೆ ರಭಸವಾಗಿ ತಳ್ಳುತ್ತಾರಲ್ಲ, ಆಗ ಕಾಲಿನ ಮೂಳೆಗಳು ಮುರಿದುಹೋಗುತ್ತವೆ. ಅಮೇಲೆ ಅವುಗಳಿಗೆ ಸಿಗುವ ರಾಜಾತಿಥ್ಯವನ್ನು ಹೇಗೆ ವರ್ಣಿಸುವುದು? ಹೇಳಿದ ಹಾಗೆ ಕೇಳುವುದಿಲ್ಲವೆಂದು ಅವುಗಳ ಕಾಲು ಕಟ್ಟಿ, ಬಾಲ ಮುರಿದು, ಕಣ್ಣಿಗೆ ಹಸಿಮೆಣಸನ್ನೋ ತಂಬಾಕನ್ನೋ ತುರುಕುತ್ತಾರೆ. ಅವುಗಳೇನೋ ಅಮ್ಮಾ ಎಂದು ಚೀರುತ್ತವೆ. ಕಟುಕರಿಗೆ ಕೇಳಬೇಕಲ್ಲ? ಹಸುಗಳ ಹಣೆಗೆ ಸುತ್ತಿಗೆಯಿಂದ ಹೊಡೆದು ಅಥವಾ ವಿದ್ಯುತ್ ಶಾಕ್ ಕೊಟ್ಟು ಮೂರ್ಛೆ ಹೋಗುವಂತೆ ಮಾಡುತ್ತಾರೆ. ನಂತರ ಅವುಗಳ ಕತ್ತನ್ನು ಚರಚರನೆ ಕೊಯ್ದು, ರಕ್ತವನ್ನು ಬಸಿಯುತ್ತಾರೆ. ಎಷ್ಟೋ ವೇಳೆ ಅವುಗಳ ಚರ್ಮ ಸುಲಿಯುವಾಗ ಜೀವವೇ ಹೋಗಿರುವುದಿಲ್ಲ. ಇದಕ್ಕಿಂತ ಯಮಯಾತನೆ ಬೇಕೇ? ಗೋವುಗಳ ಪ್ರಾಣ ತೆಗೆಯುವ ಮತ್ತೂ ಒಂದು ವಿಧಕ್ಕೆ ಮುಸ್ಲಿಮರಲ್ಲಿ ಬಹಳ ಬೇಡಿಕೆಯಿದೆ. ಅದೇ ಹಲಾಲ್! ಹರಿತವಾದ ಆಯುಧದಿಂದ ಗೋವಿನ ಕತ್ತನ್ನು (ಒಳಗಿರುವ ಧಮನಿಯನ್ನು) ಕೆಳಗಿನಿಂದ ಮೇಲೆ ಸೀಳುತ್ತಾರೆ. ಆಗ ಅಶುದ್ಧ ರಕ್ತ ಬಸಿದು ಹೋಗುತ್ತದೆ. ರಕ್ತ ಪೂರ್ತಿ ಹೋಗುವವರೆಗೂ ವಿಲವಿಲನೆ ಒದ್ದಾಡುವ ಗೋವು ನಂತರ ಸಾಯುತ್ತದೆ! ಹೀಗೆ ಶುದ್ಧ ಮಾಡಲ್ಪಟ್ಟ ಗೋವಿನ ಮಾಂಸ ಪವಿತ್ರವಂತೆ! ಯಾವ ಪ್ರಾಣಿಯ ಹಾಲು, ಮೊಸರು, ಬೆಣ್ಣೆಗಳನ್ನುಂಡು ಬೆಳೆಯುತ್ತಾರೋ ಅದರ ರಕ್ತವನ್ನೇ ಬಸಿಯುವುದು ಮಾನವೀಯತೆಯ ಅಳತೆಗೋಲಲ್ಲಿ ಪವಿತ್ರವೇ?

ಗೋಮಾಂಸಕ್ಕಾಗಿ ಮುಗಿಬೀಳುತ್ತಿರುವ ಭಾರತೀಯ ಹಾಗೂ ವಿದೇಶೀ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಣಾಮ, ಇಂದು ಭಾರತ ಗೋಮಾಂಸದ ಭಕ್ಷಣೆ ಹಾಗೂ ರಫ್ತಿನಲ್ಲಿ ಅಗ್ರಸ್ಥಾನಕ್ಕೇರುತ್ತಿದೆ. ಆಯಾ ದೇಶದ ಬೇಡಿಕೆಗನುಗುಣವಾಗಿ ಗೋಹತ್ಯೆ ನಡೆಯುತ್ತಿದೆ. ಉದಾಹರಣೆಗೆ, ಅರಬ್ ದೇಶಗಳ ಮುಸ್ಲಿಮರಿಗೆ ಹಾಲು ಕರೆಯುವ ಹಸುವಿನ ಮಾಂಸ ಮಾತ್ರವೇ ಬೇಕು. ಆದ್ದರಿಂದ ಹಸುವನ್ನು ಕಡಿಯುವ ಮೊದಲು ಅದರ ಹಾಲು ಕರೆದು ಆ ವೀಡಿಯೋವನ್ನು ಚಿತ್ರೀಕರಿಸಲಾಗುತ್ತದೆ. ನಂತರ ಅದನ್ನು ಮಾಂಸದೊಡನೆ ಇಟ್ಟು ಕಳಿಸಲಾಗುತ್ತದೆ. ತಿನ್ನುವವನಿಗೆ ಖಾತರಿಯಾಗಬೇಕಲ್ಲ ಅದರ ಕೆಚ್ಚಲಲ್ಲಿ ಹಾಲಿತ್ತು ಎಂಬುದು! ಅಷ್ಟೇ ಅಲ್ಲ, ಕೆಲವೊಮ್ಮೆ ಕೆಚ್ಚಲನ್ನೂ ಹಾಗೇ ಇಟ್ಟು ಕಳಿಸಲಾಗುತ್ತದೆ. ಎಂಥ ಲಜ್ಜೆಗೇಡಿತನ ಇದು?

ಏಕೆ ಹೆಚ್ಚುತ್ತಿದೆ ಈ ಪೈಶಾಚಿಕತೆ? ಧರ್ಮವಂತೂ ಖಂಡಿತ ಕಾರಣವಲ್ಲ. ಗೋಮಾಂಸವನ್ನು ತಿನ್ನಲೇಬೇಕೆಂದು ಯಾವ ಧರ್ಮದಲ್ಲೂ ಹೇಳಿಲ್ಲ. ಹಾಗಿದ್ದ ಮೇಲೆ ಈ ನೆಪವೇಕೆ? ಧರ್ಮದ ಸೋಗು ಹಾಕುವ ಮಂದಿ ತಮ್ಮ ಧರ್ಮದಲ್ಲಿ ಹೇಳಿರುವುದೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆಯೇ? ಇಲ್ಲಿ ಮುಸ್ಲಿಮರು ತಿಳಿಯಲೇಬೇಕಾದ ಕೆಲ ವಿಷಯಗಳಿವೆ. ಹಿಂದೂಗಳು ಗೋವಿನ ಉಳಿವಿಗಾಗಿ ಹಂಬಲಿಸುತ್ತಿರುವುದು ಮೂಢನಂಬಿಕೆಗಳಿಂದಾಗಿ ಅಲ್ಲ, ವೈಜ್ಞಾನಿಕ ಕಾರಣಗಳಿಂದಾಗಿ. ಉದಾಹರಣೆಗೆ, ನಮಗೆ 72ಸಾವಿರ ನಾಡಿಗಳಿವೆಯಲ್ಲ, ಹಾಗೆಯೇ ಗೋವುಗಳಿಗೂ ನಾಡಿಗಳಿವೆ. ಅದರಲ್ಲೂ ಬೆನ್ನಿನ ಮೇಲೆ ಡುಬ್ಬವಿರುತ್ತದೆ ನೋಡಿ, ಬಹಳ ಚಮತ್ಕಾರಿ ಅದರ ಹಿಂದಿರುವ ನಾಡಿ! ಗೋ ಎಂಬ ಪದದ ಮೂಲಾರ್ಥವೇ ಸೂರ್ಯ ರಶ್ಮಿ ಎಂಬುದು. ಸೂರ್ಯನ ಶಕ್ತಿಯನ್ನು ನಾಡಿಗಳ ಮುಖೇನ ತಮ್ಮಲ್ಲಿ ಪ್ರವಹಿಸಿಕೊಳ್ಳುತ್ತವೆ ಗೋವುಗಳು. ಆ ಶಕ್ತಿ ಅವುಗಳ ದೇಹದ ವಿಶಿಷ್ಟ ರಚನೆಯೊಡನೆ ಬೆರೆಯುವುದರಿಂದಲೇ ಔಷಧೀಯ ಗುಣಗಳು ಹೊಮ್ಮುವುದು. ಆದ್ದರಿಂದಲೇ ಮಲ, ಮೂತ್ರಗಳೆಲ್ಲವೂ ಕಲ್ಮಶರಹಿತ. ಅಷ್ಟೇ ಏಕೆ, ಅವುಗಳ ಬೆವರುಗ್ರಂಥಿಗಳಿಂದ ವಸರುವ ದ್ರವ ವಾತಾವರಣದ ವಿಷಕಾರಿ ಅಂಶವನ್ನು ಸಾಯಿಸುತ್ತದೆ. ಹಾಗಾಗಿಯೇ ಹಿಂದಿನ ಕಾಲದಲ್ಲಿ ಗೋ ಉತ್ಪತ್ತಿಯಿಲ್ಲದೆ ಯಾವ ಯಜ್ಞ-ಯಾಗಾದಿಗಳೂ, ದಾನ-ಧರ್ಮಗಳೂ ಪೂರೈಸುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾದ ಅಂಶ, ಈ ಎಲ್ಲ ವೈಶಿಷ್ಟ್ಯಗಳೂ ಭಾರತೀಯ ತಳಿಗಳಲ್ಲಿ ಮಾತ್ರ ಲಭ್ಯ ಎಂಬುದು!

ಗೋವಿನ ಉತ್ಪನ್ನಗಳು ಬಹೋಪಯೋಗಿ ಎಂಬುದು ನಮಗೆ ಗೊತ್ತೇ ಇದೆ. ಗೊತ್ತಿರದ ವಿಷಯಗಳೂ ಬಹಳಷ್ಟಿವೆ. ಗೋಮಯ, ವಿಕಿರಣ ಹಾಗೂ ಶಾಖವನ್ನು ತಡೆಗಟ್ಟಬಲ್ಲುದಂತೆ! ಗೋಮೂತ್ರ, ಗೋಮಯ, ಹಾಲು, ಮೊಸರು ಹಾಗೂ ತುಪ್ಪಗಳ ಸಂಗಮವಾದ ಪಂಚಗವ್ಯಕ್ಕೆ ಔಷಧೀಯ ಗುಣಗಳಿರುವುದು ಈಗಾಗಲೇ ರುಜುವಾತಾಗಿದೆ. ಗೋವಿನ ಬೆವರಿನ ವಾಸನೆ ನಮ್ಮ ಮಾನಸಿಕ ಸ್ಥಿಮಿತವನ್ನು ಕಾಪಾಡುತ್ತದೆ ಎನ್ನುತ್ತಾರೆ ಅಮೆರಿಕದ ಸಂಶೋಧಕರು! ನಮ್ಮ ಗೋವುಗಳ ಮಹಿಮೆ 1960ರಷ್ಟು ಹಿಂದೆಯೇ ಬ್ರೆಜಿಲ್‍ಗೆ ತಿಳಿದಿತ್ತು. ಆಗಲೇ ಅದು ಗೀರ, ಕಾಂಕರೇಜ ಹಾಗೂ ಒಂಗೋಳೆ ತಳಿಗಳನ್ನು ಆಮದು ಮಾಡಿಕೊಂಡಿತ್ತು. ಇಂದಿಗೂ ಅಗತ್ಯ ಬಿದ್ದಾಗಲೆಲ್ಲ ಭ್ರೂಣಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದ್ದರಿಂದ ಭಾರತೀಯ ತಳಿಗಳೆಲ್ಲಾ ಅಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಅಲ್ಲಿಂದಲೇ ವಿದೇಶಗಳಿಗೆ ರಫ್ತಾಗುತ್ತಿವೆ! ಹೈನುಗಾರಿಕೆ ಸಮೃದ್ಧವಾಗಿ ನಡೆಯುತ್ತಿದೆ. ನಾವೇನು ಮಾಡುತ್ತಿದ್ದೇವೆ? ಹಿತ್ತಲ ಗಿಡ ಮದ್ದಲ್ಲ ನೋಡಿ, ಅಳಿದುಳಿದ ತಳಿಗಳನ್ನೆಲ್ಲಾ ಕಡಿದು ಹಾಕುತ್ತಿದ್ದೇವೆ. ಸಂಕಟವಾಗುವುದಿಲ್ಲವೇ? ಇಂದು ಕೃಷ್ಣನ ಮಥುರೆಯಲ್ಲಿ ಕರುಗಳೇ ಉಳಿದಿಲ್ಲ. ಬಿಹಾರ ಉತ್ತರಪ್ರದೇಶಗಳಲ್ಲಿ ಹಳ್ಳಿಗರು ಹಸುಗಳನ್ನು ಸಾಕುತ್ತಲೇ ಇಲ್ಲ. ಗೋಶಾಲೆಗಳೆಲ್ಲ ಬಿಕೋ ಎನ್ನುತ್ತಿವೆ. ಹೀಗೇ ಆದರೆ ಮುಂದೆ ಕೊಬ್ಬಿದ ಮೈಯ ವಿದೇಶೀ ಜರ್ಸಿ ಹಸುಗಳೇ ಗತಿ!

ಗೋವು ಅಮೂಲ್ಯವಾದ, ರಾಷ್ಟ್ರೀಯ ಸಂಪತ್ತು ಎಂಬುದು ನಮಗೆ ಅರಿವಾಗುವುದು ಯಾವಾಗ? ಅದರಲ್ಲಿ ಅಡಕವಾಗಿರುವ, ನಮ್ಮ ಪ್ರಗತಿಗೆ ಪೂರಕವಾದ ವೈಜ್ಞಾನಿಕ ಅಂಶಗಳ ಸಂಶೋಧನೆಗೆ ಒತ್ತು ಸಿಗುವಂತೆ ಮಾಡುವುದು ಹೇಗೆ?  ಮುಂದೊಂದು ದಿನ ಮೃಗಾಲಯದಲ್ಲಿ ಗೋವುಗಳನ್ನು ನೋಡಬೇಕಾಗಿ ಬರುವುದು ಎಲ್ಲರಿಗೂ ಸಮ್ಮತವೇ? ಅಲ್ಪ ಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂದು ಗೋಹತ್ಯೆ ಕೈಬಿಡಲು ಎಷ್ಟು ದಿನ ಹಿಂದೇಟು ಹಾಕುವುದು? ಗೋವನ್ನು ಉಳಿಸಿಕೊಂಡರೆ ಹಿಂದೂ ಧರ್ಮೀಯರೊಡನೆ ಸೌಹಾರ್ದ ಹೆಚ್ಚುವುದೇ ಅಲ್ಲದೆ ಅದರ ಪ್ರಯೋಜನಗಳನ್ನು ಅವರೂ ಪಡೆಯಲಿದ್ದಾರೆ ಎಂದು ಮನವರಿಕೆ ಮಾಡಿಕೊಡುವುದು ಇಂದಿನ ಅಗತ್ಯವಲ್ಲವೇ? ಒಂದು ವಿಷಯ ನೆನಪಿಡಿ. ಹೀಗೆ ಹಟಕೆ ಬಿದ್ದು ತಿಂದು ಮುಗಿಸಿದರೆ ಗೋವುಗಳಿಗೆ ಯಾವ ಪರ್ಯಾಯವೂ ಇಲ್ಲ. ಓಲೈಕೆ ಮಾಡುವ ರಾಜಕಾರಣಿಗಳು ಬೆಳಗಾಗೆದ್ದರೆ ಹಾಲು ಕೊಡುವುದಿಲ್ಲ. ಕಲಬೆರಕೆ ಹಾಲನ್ನು ಕುಡಿದು ರೋಗ ಬರಿಸಿಕೊಳ್ಳುವ ದರಿದ್ರ ನಮಗೇನೂ ಬಂದಿಲ್ಲ.

ಯಾವ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಪುಣ್ಯಕೋಟಿಯ ಕಥೆಯನ್ನು ಕೇಳಿದೊಡನೆ ಕಣ್ಣಲ್ಲಿ ನೀರು ತಂದುಕೊಳ್ಳುವ ಹಿಂದೂಗಳಿಗೆ, ಗೋಹತ್ಯೆಯ ಮೂಲಕ ಈ ಪರಿಯ ಹಿಂಸೆಯನ್ನು ನೀಡಲೇಬೇಕೇ? ಧಾರ್ಮಿಕ ಕಾರಣ ಒತ್ತಟ್ಟಿಗಿರಲಿ, ಇದು ವೈಜ್ಞಾನಿಕವಾಗಿ ನಮಗೆ ಸಿಕ್ಕಿರುವ ಉತ್ಕೃಷ್ಟವಾದ ಉಡುಗೊರೆ ಎನ್ನುವ ಕಾರಣಕ್ಕಾದರೂ ಹತ್ಯೆ ನಿಂತೀತೇ? ಅಥವಾ ಅಸಹಾಯಕ ಗೋವುಗಳ ಜಾಗದಲ್ಲಿ, ಹಾಲೂಡಿಸಿದ ತಾಯಂದಿರನ್ನು ಕಲ್ಪಿಸಿಕೊಂಡರೆ ಗೋಮಾಂಸದ ಚಪಲ ಕೊನೆಯಾದೀತೇ?

Monday, 20 October 2014

ಹದಗೆಟ್ಟಿದೆ ಬಂಗಾಳ, ದೀದಿಗೆ ದಾದಾಗಿರಿಯೇ ಬಂಡವಾಳ!

ಇದೇ ತಿಂಗಳ ಅಕ್ಟೋಬರ್ 2ನೇ ತಾರೀಖು. ಪಶ್ಚಿಮ ಬಂಗಾಳ ಎಂದಿನಂತೆ ದುರ್ಗಾ ಪೂಜೆಯ ಸಡಗರದಲ್ಲಿ ಮುಳುಗಿತ್ತು. ಅಂದು ಗಾಂಧಿ ಜಯಂತಿ ಬೇರೆ. ಸರಿಸುಮಾರು ಮಧ್ಯಾಹ್ನದ ಹೊತ್ತಿಗೆ, ಕಲ್ಕತ್ತಾದಿಂದ 100ಕಿ.ಮೀ ದೂರ ಇರುವ ಬರ್ದ್ವಾನ್ ನಗರದ ಮನೆಯೊಂದರಲ್ಲಿ ದೊಡ್ಡ ಸ್ಫೋಟವಾಯಿತು. ಕುಕ್ಕರ್ ಅಥವಾ ಗ್ಯಾಸ್ ಸಿಲಿಂಡರ್ ಸಿಡಿದಿರಬೇಕು ಎಂದುಕೊಂಡರು ಅಕ್ಕಪಕ್ಕದ ಜನ. ಆದರೆ ಸ್ಥಳೀಯ ಪೋಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ನೋಡಿದಾಗ ವಾಸ್ತವ ಬೇರೆಯೇ ಆಗಿತ್ತು. ರಿವಾಲ್ವರ್ ಹಿಡಿದ ಹೆಂಗಸರಿಬ್ಬರು ಮನೆಯೊಳಗೆ ಯಾರನ್ನೂ ಸೇರಿಸಲೇ ಇಲ್ಲ. ಬಲವಂತವಾಗಿ ನುಗ್ಗಲು ಪ್ರಯತ್ನಿಸಿದರೆ ಮನೆಯನ್ನೇ ಸ್ಫೋಟಿಸಿಬಿಡುತ್ತೇವೆ ಎಂದು ಹೆದರಿಸಿದರು. ಹಾಗೆ ಪೋಲೀಸರು ಒಳಬರದಂತೆ ಒಂದು ಘಂಟೆಯ ಕಾಲದವರೆಗೂ ತಡೆದು ಆ ಹೆಂಗಸರು ಮಾಡಿದ್ದೇನು ಗೊತ್ತೇ? ಮನೆಯಲ್ಲಿದ್ದ ದಾಖಲೆಗಳನ್ನು ಸಾಧ್ಯವಾದಷ್ಟೂ ಸುಟ್ಟು ಹಾಕಿದ್ದು. ಕೊನೆಗೊಮ್ಮೆ ಪೋಲೀಸರು ಒಳನುಗ್ಗಿದಾಗ ಅವರಿಗೆ ಕಂಡಿದ್ದು ಸ್ಫೋಟದಿಂದ ಹೆಣವಾಗಿ ಬಿದ್ದಿದ್ದ ಶಕೀಲ್ ಅಹ್ಮದ್, ಸಾವಿನ ದವಡೆಯಲ್ಲಿದ್ದ ಶೋಭನ್ ಮಂಡಲ್ ಹಾಗೂ ಗಾಯಗೊಂಡಿದ್ದ ಅಬ್ದುಲ್ ಹಕೀಮ್ ಎಂಬ ಉಗ್ರರು. ಜೊತೆಗೆ ಅಳಿದುಳಿದ ಸಾಕ್ಷ್ಯಗಳು. ಅದರಲ್ಲಿ ಮುಖ್ಯವಾದದ್ದು ಸುಮಾರು 55 ಬಾಂಬ್‍ಗಳು, 40ಕೆಜಿಯಷ್ಟು ಸ್ಫೋಟಕ, ಹಲವು ಸಿಮ್ ಕಾರ್ಡ್‍ಗಳು, ನಕಲಿ ಗುರುತಿನ ಪತ್ರಗಳು ಹಾಗೂ ಅಲ್-ಕೈದಾಗೆ ಸಂಬಂಧಿಸಿದ ಭಿತ್ತಿ ಪತ್ರಗಳು, ವೀಡಿಯೋಗಳು! ಪೋಲೀಸರನ್ನು ತಡೆದ ಆ ವೀರ ವನಿತೆಯರ ಹೆಸರು ರೂಮಿ ಮತ್ತು ಅಲಿಮಾ ಹಾಗೂ ಆ ಮನೆಯಲ್ಲಿ ನಡೆಯುತ್ತಿದ್ದ ಘನಕಾರ್ಯ ಬಾಂಬ್‍ಗಳ ತಯಾರಿಕೆ! ದೀಪಾವಳಿಯ ಪ್ರಯುಕ್ತ ನಮಗೆ ರಕ್ತದೋಕುಳಿಯ ಉಡುಗೊರೆ ನೀಡಲು ಸಜ್ಜಾಗುತ್ತಿತ್ತು ಆ ತಂಡ. ಅದರೆ ಅವರ ಅದೃಷ್ಟ ಕೆಟ್ಟು ಒಂದು ಬಾಂಬ್ ಅಲ್ಲೇ ಸ್ಫೋಟಿಸಿಬಿಟ್ಟಿತ್ತು.


ಇದು ಘಟನೆಯ ಒಂದು ಮುಖ. ಮತ್ತೊಂದು ಮುಖವನ್ನು ನೋಡೋಣ ಬನ್ನಿ. ಬಾಂಬ್ ತಯಾರಾಗುತ್ತಿತ್ತಲ್ಲ, ಆ ಮನೆಯನ್ನು, 18 ಸಾವಿರ ರೂಪಾಯಿಗಳಿಗೆ ಉಗ್ರರಿಗೆ ಬಾಡಿಗೆಗೆ ನೀಡಿದ್ದಾತ ನೂರುಲ್ ಹಸನ್ ಚೌಧುರಿ. ಅವನು ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡ. ಅಷ್ಟೇ ಅಲ್ಲ, ಆ ಮನೆ ಟಿಎಂಸಿ ಪಕ್ಷದ ಕಛೇರಿಯಾಗಿಯೂ ಬಳಕೆಯಾಗುತ್ತಿತ್ತು ಎಂಬ ಸತ್ಯ ಈಗ ಬಯಲಾಗಿದೆ. ಘಟನೆ ನಡೆದ ಮೇಲೆ ಅಲ್ಲಿದ್ದ ಬಾಂಬ್‍ಗಳನ್ನು ವಶಪಡಿಸಿಕೊಂಡ ಪೋಲೀಸರು ತುರಾತುರಿಯಲ್ಲಿ ಅವುಗಳನ್ನು ನಾಶಪಡಿಸಿಬಿಟ್ಟರು. ಅವರು ಹಾಗೆ ಮಾಡಲು ಕಾರಣವೇ ಇರಲಿಲ್ಲ. ಏಕೆಂದರೆ ದೇಶದ ಭದ್ರತೆಯ ವಿಚಾರವಾದ ಇದು ರಾಷ್ಟ್ರೀಯ ತನಿಖಾ ದಳದ ಗಮನಕ್ಕೆ ಬರಲೇ ಬೇಕಿತ್ತು. ಆದರೆ ಕೇಂದ್ರಕ್ಕೆ ತಿಳಿಸದೇ ಸಾಕ್ಷ್ಯಗಳನ್ನು ಹಾಳುಮಾಡಲು ಅಣತಿ ಇತ್ತವರು ಬೇರಾರೂ ಅಲ್ಲ, ಸ್ವತಃ ಬಂಗಾಳದ ಮುಖ್ಯಮಂತ್ರಿ ಮಮತಾ ದೀದಿ! ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆಬರುತ್ತಿರುವ ಸಾವಿರಾರು ಮುಸ್ಲಿಮರನ್ನು ಓಲೈಸುತ್ತಿರುವ ದೀದಿಗೆ ಈ ಘಟನೆಯನ್ನು ಮುಚ್ಚಿಡುವ ತವಕ. ಏಕೆಂದರೆ ಇದರಲ್ಲಿ ಮೃತಪಟ್ಟ ಶಕೀಲ್ ಹೀಗೇ ವಲಸೆ ಬಂದವನು. ಬಾಂಗ್ಲಾದೇಶದಲ್ಲಿರುವ ಉಗ್ರವಾದಿ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್‍ನ ಸದಸ್ಯ! ಇಂಥ ನೂರಾರು ವಲಸಿಗರು ಬಂಗಾಳವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಧಿಕಾರದ ಅಮಲೇರಿಸಿಕೊಂಡಿರುವ ದೀದಿಯ ಕಣ್ಣಿಗೆ ಅಲ್ಪಸಂಖ್ಯಾತರ ಮತಗಳನ್ನು ಬಿಟ್ಟು ಬೇರೇನೂ ಕಾಣುತ್ತಿಲ್ಲ. ಅವರ ಹಟ ಯಾವ ಮಟ್ಟಕ್ಕೆ ಹೋಗಿದೆಯೆಂದರೆ ಈ ಸ್ಫೋಟದ ತನಿಖೆಯನ್ನು ಕೇಂದ್ರಕ್ಕೆ ವಹಿಸಿಕೊಡಲು ಅವರು ಸುತರಾಂ ಸಿದ್ಧರಿಲ್ಲ.

ನಿಮಗೆ ಗೊತ್ತಿರಲಿ, ದಿನವೊಂದಕ್ಕೆ ಸಾವಿರಾರು ಬಾಂಗ್ಲಾದೇಶೀ ಮುಸ್ಲಿಮರು ವಲಸೆ ಬರುತ್ತಿದ್ದಾರೆ. ಯಾವ ಅಧಿಕೃತ ದಾಖಲೆಗಳೂ ಇಲ್ಲದ ಅವರಿಗೆ ನಕಲಿ ದಾಖಲೆಗಳನ್ನು ಎಗ್ಗಿಲ್ಲದೇ ಸರಬರಾಜು ಮಾಡಲಾಗುತ್ತಿದೆ. ಅವರ ಹಿನ್ನೆಲೆಯ ಕುರಿತ ಯಾವ ವಿಚಾರಣೆ ಅಥವಾ ಪರಿಶೀಲನೆಯೂ ನಡೆಯುತ್ತಿಲ್ಲ. ಪರಿಣಾಮ, ಬಂಗಾಳದಲ್ಲಿ ಮುಸ್ಲಿಮರ ಜನಸಂಖ್ಯೆ ಮಿತಿ ಮೀರುತ್ತಿದೆ. ಮತ್ತೊಂದೆಡೆ ದೇಶದ್ರೋಹಿ ಚಟುವಟಿಕೆಗಳೂ ಹೆಚ್ಚುತ್ತಿವೆ. ನುಸುಳಿ ಬರುತ್ತಿರುವ ಉಗ್ರರು ಬುರ್ಖಾ ತಯಾರಿಸುವುದಾಗಿ ಹೇಳಿ ಮನೆಗಳನ್ನು ಬಾಡಿಗೆಗೆ ಪಡೆದು ಬಾಂಬ್ ತಯಾರಿಗೆ ತೊಡಗುತ್ತಾರೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಬಂಗಾಳವನ್ನು ಪ್ರತ್ಯೇಕಿಸುವ ಬೇಡಿಕೆ ಇಡದೆ ಇರುತ್ತಾರೆಯೇ? ಇದನ್ನೆಲ್ಲ ದೀದಿ ಏಕೆ ಮಟ್ಟ ಹಾಕುತ್ತಿಲ್ಲ? ಇಸ್ಲಾಂನ ಇತಿಹಾಸದ ವಿಷಯದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದದ್ದು ಹೀಗೆ ಓಲೈಕೆ ಮಾಡಲೆಂದೇ? ಹೋಗಲಿ, ಪರಿಸ್ಥಿತಿಯ ಸೂಕ್ಷ್ಮತೆ ಅವರಿಗೆ ಅರ್ಥವಾಗಿಲ್ಲ ಎಂದುಕೊಳ್ಳೋಣವೆಂದರೆ ಅದೂ ಸಾಧ್ಯವಿಲ್ಲ. ಏಕೆಂದರೆ 2006ರಲ್ಲಿ ಸಾಕ್ಷಾತ್ ಇದೇ ದೀದಿ ಸಂಸತ್ತಿನಲ್ಲಿ ಕೆಂಡಾಮಂಡಲವಾಗಿ ತಮ್ಮ ರಾಜೀನಾಮೆ ಪತ್ರವನ್ನು ಡೆಪ್ಯೂಟಿ ಸ್ಪೀಕರ್‍ರ ಮುಖದ ಮೇಲೆಸೆದಿದ್ದರು. ಆಗ ಬಾಂಗ್ಲಾದೇಶದ ಅಕ್ರಮ ವಲಸಿಗರು ಬಂಗಾಳಕ್ಕೆ ನುಸುಳುತ್ತಿರುವುದನ್ನು ಪ್ರತಿಭಟಿಸಿ ಸದನವನ್ನು ಮುಂದೂಡಲು ಅನುಮತಿ ಕೇಳಿದ್ದರು. ಅನುಮತಿ ನಿರಾಕರಿಸಿದ ಸ್ಪೀಕರ್ ಸೋಮನಾಥ ಚಾಟರ್ಜಿ ಅವರ ಮೇಲೆ ಸಿಟ್ಟಾಗಿ ಮೈಮೇಲೆ ದೇವರು ಬಂದಂತೆ ವರ್ತಿಸಿದ್ದರು! ಅಂದು ಅಕ್ರಮ ವಲಸೆಯನ್ನು ವಿರೋಧಿಸಿದ್ದ ದೀದಿ ಇಂದು ಅದರ ಪರವಾಗಿ ಯುದ್ಧಕ್ಕೆ ನಿಲ್ಲುತ್ತಾರೆ. ‘ಒಬ್ಬ ವಲಸಿಗನನ್ನು ಯಾರಾದರೂ ಮುಟ್ಟಿ ನೋಡಿ, ನಾನು ದಿಲ್ಲಿಗೆ ಮುತ್ತಿಗೆ ಹಾಕುತ್ತೇನೆ’ ಎಂದು ಘರ್ಜಿಸುತ್ತಾರೆ. ಹಾಗೆ ಮಾಡಬೇಕಾದ್ದೇ. ಎಷ್ಟೇ ಆದರೂ ವಿಧಾನಸಭೆಯ, ಲೋಕಸಭೆಯ ಎಲ್ಲ ಚುನಾವಣೆಗಳನ್ನೂ ಗೆಲ್ಲಿಸುತ್ತಿರುವವರು ಈ ಮುಸ್ಲಿಂ 'ಮತ'ಬಾಂಧವರೇ ಅಲ್ಲವೇ?

ಓಲೈಕೆಗೂ ಮಿತಿ ಇರಬೇಕು. ರಾಜ್ಯದಲ್ಲಿ 30ಸಾವಿರಕ್ಕೂ ಹೆಚ್ಚಿನ ಇಮಾಮರಿಗೆ ಭತ್ಯೆ ಕೊಟ್ಟಿದ್ದೇನು, ಹೆಣ್ಣುಮಕ್ಕಳಿಗೆ ಸೈಕಲ್ ಕೊಡಿಸಿದ್ದೇನು. ಕೊಡಿಸಬಾರದು ಎಂದಲ್ಲ, ಆದರೆ ಯಾವುದೇ ಕೊಡುಗೆ ಅಪಾತ್ರ ದಾನವಾಗಬಾರದು. ಅರ್ಹರೋ ಅಲ್ಲವೋ, ಉಗ್ರರೋ ಅಲ್ಲವೋ ಎಂಬುದನ್ನೂ ನೋಡದೆ ಹೀಗೆ ಕೊಟ್ಟು ಕೆಡಿಸುವುದು ಎಷ್ಟು ಸಮಂಜಸ? ಹೋಗಲಿ, ಸೈಕಲ್‍ಗಳನ್ನು ಕೊಡಿಸುವಾಗ, ಪ್ರತಿಭಾ ಪುರಸ್ಕಾರಗಳನ್ನು ಕೊಡುವಾಗ ಇವರಿಗೆ ಹಿಂದುಳಿದ ಹಿಂದೂಗಳು ಕಣ್ಣಿಗೆ ಕಾಣುತ್ತಾರೆಯೇ? ಇಲ್ಲ. ಬಡಪಾಯಿಗಳು ಅಲ್ಪ ಸಂಖ್ಯಾತರಲ್ಲವಲ್ಲ! ಆದ್ದರಿಂದಲೇ ಬಾಂಗ್ಲಾದೇಶದಿಂದ ಬರುವ ಹಿಂದೂ ಹಾಗೂ ಬೌದ್ಧ ವಲಸಿಗರಿಗೆ ಇವರ ರಾಜಾಶ್ರಯ ದೊರಕುವುದೇ ಇಲ್ಲ. ಅಲ್ಪ ಸಂಖ್ಯಾತರ ಕುರಿತ ನಿರ್ಣಯಗಳನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡಿರುವ ದೀದಿ, ಗೋಮಾಂಸ ಭಕ್ಷಣೆ ಮೂಲಭೂತ ಹಕ್ಕಾಗಬೇಕು ಎಂದು ಸಂಸತ್ತಿನಲ್ಲಿ ಈ ಹಿಂದೆಯೇ ಹೇಳಿಬಿಟ್ಟಿದ್ದಾರೆ. ಬಂಗಾಳದಲ್ಲಿ 34 ವರ್ಷಗಳ ಕಮ್ಯೂನಿಸ್ಟ್ ಆಡಳಿತಕ್ಕೆ ಕೊನೆ ಹಾಡಿ ತನ್ನನ್ನು ಅಧಿಕಾರಕ್ಕೆ ತಂದ ಮುಸ್ಲಿಂ ಲಾಬಿಯ ಋಣಸಂದಾಯವನ್ನು ತಮ್ಮ ಶಕ್ತ್ಯಾನುಸಾರ ಮಾಡುತ್ತಿದ್ದಾರೆ! ಯಾವ ಹಿನ್ನೆಲೆಯನ್ನೂ ವಿಚಾರಿಸದೆ 22 ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರಿಗೆ ಸಾಲ ನೀಡುತ್ತಿರುವುದು, ಅಲ್ಪಸಂಖ್ಯಾತರಿಗೆ ಮೀಸಲಿರುವ ಹಣದ ಪ್ರಮಾಣವನ್ನು 1000 ಕೋಟಿ ದಾಟಿಸಿರುವುದು ಹಾಗೂ ಸಾವಿರಾರು ಮದರಸಾಗಳನ್ನು ತೆರೆಯಲು ಒಪ್ಪಿಗೆ ನೀಡಿರುವುದೂ ಋಣಸಂದಾಯದ ಕೆಲ ವಿಧಾನಗಳೇ.

ದೀದಿಯ ಅತಿರೇಕ ಇಲ್ಲಿಗೇ ಮುಗಿಯುವುದಿಲ್ಲ. ಶಾರದಾ ಚಿಟ್ ಫಂಡ್ ಹಗರಣದ ಬಗ್ಗೆ ನೀವು ಕೇಳಿರಬೇಕು. ಅದರಲ್ಲಿ ಬಂಗಾಳದ ಲಕ್ಷಾಂತರ ಮಧ್ಯಮ, ಕೆಳ-ಮಧ್ಯಮ ವರ್ಗದ ಜನ ತಮ್ಮ ಹಣವನ್ನು ಹೂಡಿದ್ದರು. ಕೋಟಿಗಟ್ಟಳೆ ಹಣಕ್ಕೆ ಮೇಲ್ವಿಚಾರಕರಾಗಿ ಸಂಸದ ಸುದೀಪ್ತೋ ಸೇನ್‍ರನ್ನು ನೇಮಿಸಲಾಯಿತು. ಜವಾಬ್ದಾರಿಯಿಲ್ಲದೆ ಜನರ ಹಣವನ್ನು ಕಂಡ ಕಂಡಲ್ಲಿ ಹೂಡಿದ ಪರಿಣಾಮ ಸಂಸ್ಥೆ ದಿವಾಳಿಯೆದ್ದಿತು. ದೀದಿಯನ್ನು ವಿಚಾರಿಸಿದಾಗ 'ಹೋದದ್ದು ಹೋಯಿತು ಬಿಡಿ' ಎಂದು ಬಿಟ್ಟರು ಸಲೀಸಾಗಿ. ತಾವೇ ಒಂದು ತನಿಖಾ ತಂಡವನ್ನು ರಚಿಸಿ ವಿಚಾರಣೆಗೆ ಆದೇಶಿಸಿದರೇ ಹೊರತು ಸಿ.ಬಿ.ಐಯನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಆದರೆ ಹೂಡಿಕೆದಾರರು ಬಿಡಬೇಕಲ್ಲ? ಸರ್ವೋಚ್ಚ ನ್ಯಾಯಾಲಯದ ಬಾಗಿಲು ಬಡಿದು ಪ್ರಕರಣವನ್ನು ಸಿ.ಬಿ.ಐಗೆ ಒಪಿಸಿದ್ದಾರೆ. ಸುದೀಪ್ತೋರನ್ನು ಒಳಗೆ ಹಾಕಿದ ಮೇಲೆ ಹುಳುಕುಗಳು ಹೊರ ಬರುತ್ತಿವೆ. ತೃಣಮೂಲ ಪಕ್ಷದ ಹಲವರು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಉಳಿದವರದ್ದು ಬಿಡಿ, ಈ ಅವ್ಯವಹಾರದ ಕಳಂಕ ದೀದಿಯನ್ನೂ ಸುತ್ತಿಕೊಳ್ಳುವ ಲಕ್ಷಣಗಳಿವೆ. ದೀದಿಗೆ ಚಿತ್ರಕಲೆಯ ಹವ್ಯಾಸವಿದೆ. ಕಳೆದ ವರ್ಷ ಅವರ ಪೇಂಟಿಂಗ್ ಒಂದನ್ನು ಬರೋಬ್ಬರಿ 1.8ಕೋಟಿ ರೂಗಳಿಗೆ ಕೊಂಡಿದ್ದರು ಸುದೀಪ್ತೋ ಸೇನ್. ಹವ್ಯಾಸಿ ಚಿತ್ರಕಲೆಗೆ ಇಷ್ಟೊಂದು ಬೆಲೆಯೇ ಎಂದು ಅಚ್ಚರಿಪಟ್ಟಿದ್ದೆವು ನಾವು. ಆ ದುಡ್ಡು ಶಾರದಾ ಫಂಡ್‍ನದೇ ಎಂದು ಈಗ ಬಾಯಿ ಬಿಡುತ್ತಿದ್ದಾರೆ ಸುದೀಪ್ತೋ. ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡಲು ಇವರೇ ಆಗಬೇಕೇ? ಮೋದಿಯವರು ಚುನಾವಣೆಯ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೇ ಸಿಟ್ಟಾಗಿದ್ದರು ದೀದಿ, ಈಗ ಸಿ.ಬಿ.ಐನ ಕೆಂಗಣ್ಣನ್ನು ಹೇಗೆ ಎದುರಿಸುತ್ತಾರೋ. ಇದಕ್ಕಿಂತ ಆಘಾತಕಾರಿಯಾದ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಉಗ್ರ ಸಂಘಟನೆಗಳಿಗೆ ಶಾರದಾ ಫಂಡ್‍ನದೇ ದುಡ್ಡು ಸರಬರಾಜಾಗಿದೆಯಂತೆ. ಸುದೀಪ್ತೋ ಸೇನ್‍ರ ನೆರವಿನೊಂದಿಗೆ ಕೋಟಿಗಟ್ಟಳೆ ಹಣವನ್ನು ಹೊತ್ತ ಆಂಬುಲೆನ್ಸ್ ಗಳು ರಾತ್ರೋರಾತ್ರಿ ಬಂಗಾಳದ ಗಡಿಯನ್ನು ದಾಟಿದವು ಎಂಬ ಅಂಶವನ್ನು ಸಿ.ಬಿ.ಐ ಹೊರಹಾಕಿದೆ. ಹಾಗೆ ಹಣವನ್ನು ದಾಟಿಸಿದವನು ಇಸ್ಲಾಮಿಕ್ ಉಗ್ರ ಸಂಘಟನೆ ಸಿಮಿಯ ಮುಖಂಡ ಇಮ್ರಾನ್‍. ಇದೇ ಇಮ್ರಾನ್‍ನನ್ನೇ ದೀದಿ ತಲೆಯ ಮೇಲೆ ಕೂರಿಸಿಕೊಂಡು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದ್ದು! 2001ರಲ್ಲೇ ಸಿಮಿಯ ಮೇಲೆ ನಿರ್ಬಂಧ ಹೇರಿರುವುದು ಗೊತ್ತಿದ್ದೂ ಆವನನ್ನು ಆರಿಸುವ ಅಗತ್ಯವೇನಿತ್ತು? ದೇಶದ್ರೋಹಿಗಳನ್ನು ಅಧಿಕಾರ ಕೇಂದ್ರದಲ್ಲಿ ಕೂಡಿಸುವುದೂ ಅಲ್ಲದೇ, ನಮ್ಮದೇ ಜನರ ದುಡ್ಡನ್ನು ಉಗ್ರವಾದಿ ಚಟುವಟಿಕೆಗಳಿಗೆ ಬಳಸುವುದನ್ನು ಹೇಗೆ ಸಮರ್ಥಿಸಿಕೊಳ್ಳಲಾದೀತು?

ಅರ್ಧ ಬೆಂದ ಆಹಾರ ವಿಷಕ್ಕೆ ಸಮಾನವಂತೆ. ಹಾಗೆಯೇ ರಾಜಕಾರಣಿಗಳ ಅಪಕ್ವ ಚಿಂತನೆಗಳು ಕಾರ್ಯರೂಪಕ್ಕಿಳಿಯುವುದು ದೇಶದ ಸ್ವಾಸ್ಥ್ಯಕ್ಕೆ ಮಾರಕ. ಅತಿಯಾದ ಓಲೈಕೆ, ಮಿತಿಮೀರಿದ ದ್ವೇಷಸಾಧನೆಗಳು ಸಮಾಜದ ಸಮತೋಲನವನ್ನು ಹಾಳುಗೆಡವುತ್ತವೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾಯಾವತಿ, ಜಯಲಲಿತಾ ಹಾಗೂ ಮಮತಾಗಳೆಂಬ ತ್ರಿಮೂರ್ತಿಗಳು ಆಡುತ್ತಿದ್ದ ರೀತಿ ನೆನಪಿದೆಯಲ್ಲವೇ? ಅಧಿಕಾರಕ್ಕೇರಲು ತಮ್ಮ ಬೆಂಬಲ ಬೇಕೇ ಬೇಕಾಗುತ್ತದೆಂಬ ದುರಹಂಕಾರದಿಂದ ಬೀಗುತ್ತಿದ್ದ ಅವರನ್ನು ಹಿಡಿಯಲು ಸಾಧ್ಯವಿತ್ತೇ? ಮಾಯಾವತಿಯ ಸೊಲ್ಲು ಸೋತ ಮೇಲೆ ಅಡಗಿತು. ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದ ಜಯಲಲಿತಾ ಜೈಲ್‍ಲಲಿತಾ ಆಗಿದ್ದಾಯಿತು. ಇನ್ನುಳಿದಿರುವುದು ದೀದಿಯ ಸರದಿ. ‘ಅಮ್ಮ’ಳನ್ನೇ ಬಿಡದ ಕಾನೂನು ದೀದಿಯನ್ನು ಬಿಟ್ಟೀತೇ? ಮೇರೆ ಮೀರುತ್ತಿರುವ ಆಕೆಯ ನಿರಂಕುಶ ಪ್ರಭುತ್ವಕ್ಕೂ ಕಡಿವಾಣ ಬೀಳಬೇಕಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅಲ್ಲವೇ?

Wednesday, 8 October 2014

ಪ್ರಮಾಣ ಪತ್ರ ಬೇಡ, ಧೋರಣೆ ಬದಲಾದರೆ ಸಾಕು!



ಇತ್ತೀಚೆಗೆ ಸಾದಿಯಾರವರು ತಮ್ಮ ಅಂಕಣದಲ್ಲಿ, 'ಮುಸ್ಲಿಮರು ದೇಶಪ್ರೇಮಕ್ಕೆ ಪ್ರಮಾಣಪತ್ರ ಇಟ್ಟುಕೊಂಡಿರಬೇಕೇ?' ಎಂಬ ಸಮಯೋಚಿತ ಪ್ರಶ್ನೆಯನ್ನು ಕೇಳಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸುವ ಮುನ್ನ, ನಮ್ಮ ಪ್ರಶ್ನೆಗಳನ್ನು ಅವರ ಮುಂದಿಡುವ ಮುನ್ನ ಒಂದು ಘಟನೆಯನ್ನು ಹೇಳಬೇಕು. ಕೆಲ ದಿನಗಳ ಹಿಂದೆ, ಹಿಂದೂ ಮುಸ್ಲಿಂ ಸಂವಾದವೊಂದರಲ್ಲಿ ಭಾಗವಹಿಸುವ ಅವಕಾಶ ದೊರೆತಿತ್ತು. ಅದನ್ನು ಏರ್ಪಡಿಸಿದ್ದು ಮೆಟಾ-ಕಲ್ಚರ್ ಎಂಬ ಸಂಸ್ಥೆ. ಯಾವ ರಾಜಕೀಯ ವ್ಯಕ್ತಿ ಅಥವಾ ಪಕ್ಷಗಳೊಂದಿಗೂ ಗುರುತಿಸಿಕೊಳ್ಳದ ಆ ಸಂಸ್ಥೆಯ ಮುಖ್ಯ ಉದ್ದೇಶ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣೆಯಲ್ಲಿ ಸಹಕರಿಸುವುದು. ಈ ಬಾರಿ ಅದು ಆಯ್ದುಕೊಂಡಿದ್ದು ಹಿಂದೂ-ಮುಸ್ಲಿಮರ ವಿಷಯವನ್ನು. ಅದನ್ನು ಪ್ರಾಯೋಜಿಸಿದ್ದು ದೆಹಲಿಯಲ್ಲಿರುವ ಹಾಲೆಂಡ್‍ನ ದೂತಾವಾಸ ಕಛೇರಿ. ಅಲ್ಲಿ ಬೆರಳೆಣಿಕೆಯಷ್ಟು ಹಿಂದೂಗಳನ್ನು ಆಯ್ದು, ಅಷ್ಟೇ ಮುಸ್ಲಿಮರನ್ನೂ ಆಯ್ದು ಇಬ್ಬರಿಗೂ ಪರಸ್ಪರರೊಡನೆ ಮಾತನಾಡುವ ಅವಕಾಶ ಮಾಡಿಕೊಡಲಾಗುತ್ತದೆ. ಮೊದಲ ಸುತ್ತಿನ ಮಾತುಕತೆ ನಡೆಯುವುದು ಗುಂಪಿನಲ್ಲೇ. ನಂತರ ಓರ್ವ ಹಿಂದೂವಿಗೆ ಓರ್ವ ಮುಸ್ಲಿಂ ಅನ್ನು ಜತೆಗಾರರನ್ನಾಗಿ ಮಾಡಿ ಸಂವಾದಕ್ಕೆ ಕಾಲಾವಕಾಶ ನೀಡಲಾಗುತ್ತದೆ. ಅದು ಚರ್ಚೆ ಖಂಡಿತ ಅಲ್ಲ. ಆದ್ದರಿಂದಲೇ, ನಾವು ಮಾತನಾಡುವಾಗ ಇರುವಷ್ಟೇ ಉತ್ಸಾಹ ಎದುರಿನವರ ಮಾತನ್ನು ಕೇಳುವಾಗಲೂ ಇರಬೇಕು. ಒಬ್ಬರು ಮತ್ತೊಬ್ಬರನ್ನು ಯಾವ ಪ್ರಶ್ನೆಯನ್ನಾದರೂ ಕೇಳಬಹುದು. ಧರ್ಮ, ಆಚಾರ-ವಿಚಾರ, ಉಡುಗೆ-ತೊಡುಗೆಗಳಿಗೆ ಸಂಬಂಧಿಸಿದ ಎಷ್ಟೇ ಸೂಕ್ಷ್ಮ ವಿಷಯವನ್ನಾದರೂ ನಿರ್ಭಿಡೆಯಿಂದ ಮಾತಿಗೆ ಎಳೆದು ತರಬಹುದು. ಏಕೆಂದರೆ, ಕೇಳಿದ ಪ್ರಶ್ನೆಗಳನ್ನು ತಿರುಚುವುದಕ್ಕೆ, ಇಲ್ಲದ ಅರ್ಥ ಕಲ್ಪಿಸುವುದಕ್ಕೆ ಅಲ್ಲಿ ಅರ್ಣಬ್ ಗೋಸ್ವಾಮಿ, ಬರ್ಖಾ ದತ್‍ರಂಥ ಬುದ್ಧಿಗೇಡಿಗಳಿರುವುದಿಲ್ಲ. ಪರಸ್ಪರರ ಭಿನ್ನಾಭಿಪ್ರಾಯಗಳನ್ನು ಅರಿತು ನಿವಾರಿಸಿಕೊಂಡು ಸಾಮರಸ್ಯ ಕಂಡುಕೊಳ್ಳುವ ನಿಟ್ಟಿನ ಪ್ರಯತ್ನವದು ಅಷ್ಟೇ. ಅಲ್ಲಿಗೆ ಬಂದಿದ್ದ ಮುಸ್ಲಿಮರಲ್ಲಿ ಬಹುತೇಕರು ವಿದೇಶಗಳಲ್ಲಿ ಓದಿದವರು. ನಮ್ಮ ಮಾತುಗಳನ್ನು ಕೇಳುವ ತಾಳ್ಮೆ ಹಾಗೂ ಅರ್ಥಮಾಡಿಕೊಳ್ಳುವ ಮನಸ್ಥಿತಿ ಇದ್ದವರು.

ನಾವು ಅವರನ್ನು ಕೇಳಿದ ಕೆಲ ಪ್ರಶ್ನೆಗಳು ಹೀಗಿದ್ದವು: 'ಗಾಜಾ ಪಟ್ಟಿಯ ಮೇಲಿನ ಇಸ್ರೇಲ್ ಆಕ್ರಮಣವನ್ನು ಪ್ರತಿಭಟಿಸಲು ಬೆಂಗಳೂರೊಂದರಲ್ಲೇ ಸುಮಾರು ಐದು ಸಾವಿರ ಮಂದಿ ಸೇರಿದ್ದಿರಲ್ಲ, ದಶಕಗಳಿಂದ ನಮ್ಮ ಮೇಲೆ ನಿರಂತರವಾಗಿ ನಡೆದಿರುವ ಪಾಕಿಸ್ತಾನದ ಉಗ್ರರ ಹಾವಳಿಯನ್ನು ಪ್ರತಿಭಟಿಸಲು ಇಲ್ಲಿಯವರೆಗೆ ಎಷ್ಟು ಬಾರಿ, ಎಷ್ಟು ಸಂಖ್ಯೆಯಲ್ಲಿ ಸೇರಿದ್ದೀರಿ? ಈ ಆರು ದಶಕಗಳಲ್ಲಿ ಒಮ್ಮೆಯಾದರೂ ಭಾರತ ಸರ್ಕಾರಕ್ಕೆ, 'ನಾವೆಂದಿಗೂ ನಿಮ್ಮ ಪರ' ಎಂದು ಘಂಟಾಘೋಷವಾಗಿ ಹೇಳಿದ್ದೀರಾ? ‘ಈ ದೇಶದ ತಂಟೆಗೆ ಬಂದರೆ ಹುಷಾರ್' ಎಂದು ಪಾಕ್ ಉಗ್ರರಿಗೆ ಖಡಕ್ಕಾದ ಸಂದೇಶವನ್ನು ಒಮ್ಮೆಯಾದರೂ ರವಾನಿಸಿದ್ದೀರಾ? ನಿಮ್ಮ ಧರ್ಮಕ್ಕೇ ಸೇರಿದ ಅವರ ಅಟ್ಟಹಾಸಕ್ಕೆ ಬಲಿಯಾಗಿರುವ ಹಿಂದೂಗಳ, ಭಾರತೀಯರ ಕ್ಷಮೆಯಾಚಿಸಿದ್ದೀರಾ? ನಿಮ್ಮ ಹಾಗೇ ಪೇಟ ಧರಿಸಿ ಗಡ್ಡ ಬಿಡುವ ಸಿಖ್ಖರನ್ನು ಕಂಡರೆ ಆಗದ ಭಯ ನಿಮ್ಮನ್ನು ಕಂಡರೆ ಆಗುತ್ತದಲ್ಲ. ನಿಮಗೆ ಅದರ ಅರಿವಿದೆಯೇ? ಪ್ರತಿ ಭಯೋತ್ಪಾದಕನೂ ಮದರಸಾದಿಂದ ಬಂದವನೇ ಆಗಿರುತ್ತಾನಲ್ಲ ಏಕೆ? ವಿದೇಶಗಳಲ್ಲಿ ಓದಿಕೊಂಡು ಬಂದ ನೀವು ಕೆಳವರ್ಗದ ಮುಸ್ಲಿಮರ ಶಿಕ್ಷಣ, ಜೀವನಮಟ್ಟದ ಕುರಿತು ಎಂದಾದರೂ ಯೋಚಿಸಿದ್ದೀರಾ? ಯಾವುದು ದೊಡ್ಡದು ನಿಮಗೆ, ದೇಶವೋ ಧರ್ಮವೋ?' ಈ ಪ್ರಶ್ನೆಗಳಿಗೆ ನಿಂತ ನಿಲುವಿನಲ್ಲೇ ಸಮಂಜಸ ಉತ್ತರಗಳು ದೊರಕಲಿಲ್ಲ. ಆದರೆ ನಮ್ಮ ಪ್ರಾಮಾಣಿಕ ಕಳಕಳಿ ಅವರಲ್ಲಿ ಕೆಲವರಿಗಂತೂ ಅರ್ಥವಾಯಿತು. ಅಂತಲೇ ಅವರು ಆರ್‍ಎಸ್‍ಎಸ್‍ ಆಯೋಜಿಸಿದ್ದ 'ಸಮರ್ಥ ಭಾರತ' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಿಸ್ವಾರ್ಥ ಸ್ವಯಂಸೇವೆಯ ಇತಿಹಾಸ ಹಾಗೂ ಪರಿಕಲ್ಪನೆಗಳನ್ನು ನೋಡಿ ಅಚ್ಚರಿಪಟ್ಟು, ಅಭಿನಂದಿಸಿ ಹಿಂದಿರುಗಿದರು.

ಈಗ ಅವೇ ಪ್ರಶ್ನೆಗಳು ಸಾದಿಯಾರಿಗೂ ಅನ್ವಯಿಸುತ್ತವೆ. ಭಾರತೀಯ ಮುಸ್ಲಿಮರು ಪಾಕಿಸ್ತಾನವನ್ನೇ ಬೆಂಬಲಿಸುತ್ತಾರೆ ಎಂಬ ಭಾವನೆ ನಮ್ಮಲ್ಲಿ ಮೊಳೆಯಲು ಆಸ್ಪದ ಏಕೆ ಕೊಟ್ಟಿರಿ? ಒಂದು ಕ್ರಿಕೆಟ್ ಆಟದ ಫಲಿತಾಂಶದಿಂದ ನಿಮಗೆ ಅಷ್ಟು ನೋವಾಗಿದೆ ಎನ್ನುವುದಾದರೆ, ದಶಕಗಳಿಂದ ಮುಸ್ಲಿಂ ಉಗ್ರವಾದಕ್ಕೆ ಬಲಿಯಾಗಿ ಜೀವಗಳನ್ನೇ ಕಳೆದುಕೊಳ್ಳುತ್ತಿರುವ ನಮಗೆಷ್ಟು ನೋವಾಗಿರಬಹುದು ಅರಿವಿದೆಯೇ? ಅಷ್ಟಾಗಿಯೂ ದೇಶದ ಅತ್ಯುನ್ನತ ಹುದ್ದೆಗೆ ರಾಷ್ಟ್ರಪತಿಯಾಗಿ ಅಬ್ದುಲ್ ಕಲಾಂರನ್ನು ಆರಿಸಿದಾಗ ನಾವು ಸಂಭ್ರಮಿಸಲಿಲ್ಲವೇ? ಬದಲಿಗೆ ನಿಮ್ಮಿಂದ ನಮಗೆಷ್ಟು ಬೆಂಬಲ ಸಿಕ್ಕಿದೆ?
ಇತ್ತೀಚಿನ ಆಘಾತಕಾರಿ ಬೆಳವಣಿಗೆಯನ್ನೇ ನೋಡಿ. ಪಾಕಿಸ್ತಾನ ಪ್ರಾಯೋಜಿತ ಕೈದತ್-ಅಲ್-ಜಿಹಾದ್ ಭಾರತಕ್ಕೆ ಬರಲಿದೆ ಎಂದು ಅಲ್-ಕೈದಾ ಸಂಘಟನೆಯ ಮುಖ್ಯಸ್ಥ ಅಯಮಾನ್-ಅಲ್-ಜವಾಹಿರಿ ಅಧಿಕೃತವಾಗಿ ಘೋಷಿಸಿದ್ದಾನೆ. ಇಂಥ ಹೇಳಿಕೆಗಳು ಬಂದ ತಕ್ಷಣ ನೀವೇಕೆ ಖಂಡಿಸುವುದಿಲ್ಲ? ಈ ಹಿಂದೆ ಹೈದರಾಬಾದಿನ ಸಂಸದ ಅಸಾದುದ್ದೀನ್ ಒವೈಸಿ 'ಒಂದು ಪಕ್ಷ ಭಾರತ ಹಾಗೂ ಪಾಕ್ ಯುದ್ಧವಾದರೆ ಭಾರತದ ಮುಸ್ಲಿಮರೆಲ್ಲ ಬೆಂಬಲಿಸುವುದು ಪಾಕಿಸ್ತಾನವನ್ನೇ' ಎಂದು ಹೇಳಿದ್ದಾಗಲೂ ನೀವೇಕೆ ಮೌನವಾಗಿದ್ದಿರಿ? ಈ ಮೌನದ ಅರ್ಥ ಸಮ್ಮತಿಯೆಂದೇ? ಹಾಗಿದ್ದರೆ ಭಾರತದಲ್ಲಿದ್ದು ಬೆಂಬಲಿಸುವ ಬದಲು ಪಾಕಿಸ್ತಾನಕ್ಕೇ ಹೋಗಿಬಿಡಿ ಎಂದರೆ ಎಲ್ಲರೂ ಅಲ್ಲಿಗೆ ಹೋಗಲು ಸಿದ್ಧರೇ? ಹುಚ್ಚು ನೆರೆ ಉಕ್ಕಿ ಹರಿದ ಜಮ್ಮು-ಕಾಶ್ಮೀರದಲ್ಲಿ ಲಕ್ಷಾಂತರ ಮುಸ್ಲಿಮರನ್ನು ಜೀವದ ಹಂಗು ತೊರೆದು ರಕ್ಷಿಸಿದ ಭಾರತೀಯ ಸೇನೆಯನ್ನು ಎಷ್ಟು ಜನ ಮುಕ್ತವಾಗಿ ಶ್ಲಾಘಿಸಿದ್ದೀರಿ? ಅದು ಬರಿದೇ ಅವರ ಕರ್ತವ್ಯ ಎಂದರೆ ಈ ದೇಶದ ಸಲುವಾಗಿ ನಿಮ್ಮ ಕರ್ತವ್ಯಗಳೇನೂ ಇಲ್ಲವೇ?


ಕಾಶ್ಮೀರವೆಂದೊಡನೆ ಮುಟ್ಟಿದರೆ-ಮುನಿಯಂತಾಡಲು ಮುಸ್ಲಿಮರಿಗೆ ಯಾವ ಕಾರಣವೂ ಇಲ್ಲ. ಏಕೆಂದರೆ, 1947ರ ಅಕ್ಟೋಬರ್ 26ರಂದು ಮಹಾರಾಜ ಹರಿಸಿಂಗ್‍ರ ಆಳ್ವಿಕೆಯಲ್ಲಿದ್ದ ಜಮ್ಮು-ಕಾಶ್ಮೀರ ರಾಜ್ಯ ಅವರ ಇಚ್ಛೆಗನುಗುಣವಾಗಿ, ಸಾಂವಿಧಾನಿಕವಾಗಿ, ಕಾನೂನುಬದ್ಧವಾಗಿ ಭಾರತದೊಂದಿಗೆ ವಿಲೀನಗೊಂಡಿತು. ಆಗ ಯಾವ ಪ್ರತ್ಯೇಕತಾವಾದದ ಕೂಗೂ ಇರಲಿಲ್ಲ. ತಕ್ಷಣವೇ ತನ್ನ ಜನರನ್ನು ಛೂಬಿಟ್ಟು ಗಲಾಟೆ ಎಬ್ಬಿಸಿತು ‘ಪಾಪಿ’ಸ್ತಾನ. ಈಗಲೂ ಅಷ್ಟೇ. ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಶೇಕಡಾ 85ರಷ್ಟು ವಿಸ್ತೀರ್ಣವಿರುವುದು ಜಮ್ಮು ಹಾಗೂ ಲಡಾಖ್‍ಗಳದ್ದೇ. ಕಾಶ್ಮೀರದ ವ್ಯಾಪ್ತಿ ಶೇಕಡಾ 15 ಮಾತ್ರ! ಜಮ್ಮುವಿನಲ್ಲಿರುವವರಲ್ಲಿ ಶೇಕಡಾ 70ರಷ್ಟು ಹಿಂದೂಗಳೇ. ಲಡಾಖಿನಲ್ಲಿರುವವರು ಬೌದ್ಧರು ಹಾಗೂ ಶಿಯಾ ಮುಸ್ಲಿಮರು. ಇಲ್ಲಿಯವರೆಗೂ ಅವರುಗಳು ಒಂದೇ ಒಂದು ಬಾರಿಯೂ ಪ್ರತ್ಯೇಕತಾವಾದಕ್ಕೆ ಬೆಂಬಲ ಸೂಚಿಸಿಲ್ಲ. ಅಫ್ಜಲ್ ಗುರುವನ್ನು ನೇಣಿಗೇರಿಸಿದಾಗಲೂ ಅಲ್ಲಿ ಒಂದೂ ಬಂದ್ ಅಥವಾ ಪ್ರತಿಭಟನೆ ನಡೆದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಜಮ್ಮು-ಕಾಶ್ಮೀರ ನಮ್ಮೊಡನೆ ಬೆಸೆದುಕೊಂಡಿರುವುದೇ ಆ ಜನರ ನಿಷ್ಠೆಯಿಂದಾಗಿ! ಕಿರಿಕಿರಿಯೇನಿದ್ದರೂ ಗಾತ್ರದಲ್ಲಿ ಕಿರಿದಾದ ಕಾಶ್ಮೀರದ್ದೇ. ಸುನ್ನಿ ಮುಸ್ಲಿಮರ ಪ್ರಾಬಲ್ಯ ಇರುವ ಇಲ್ಲಿ ಮಾತ್ರವೇ ಗದ್ದಲ, ಹೋರಾಟ. ಒಟ್ಟಾರೆ ರಾಜ್ಯದ 22 ಜಿಲ್ಲೆಗಳಲ್ಲಿ 17 ಜಿಲ್ಲೆಗಳು ಸದಾ ಶಾಂತ. ಇನ್ನೈದು ಜಿಲ್ಲೆಗಳ ಪ್ರತಿಭಟನೆ, ಹಿಂಸಾಚಾರ ಸಂಪೂರ್ಣವಾಗಿ ಪಾಕ್ ಪ್ರೇರಿತ! ಇಲ್ಲಿ ಮತ್ತೊಂದು ವಿಷಯ ಹೇಳಲೇಬೇಕು. ಅನುಚ್ಛೇದ (article) 370ರ ಬಗ್ಗೆ ನಮಗೆ ಇರುವುದೂ ತಪ್ಪು ತಿಳುವಳಿಕೆಯೇ. ಸ್ವಾತಂತ್ರ್ಯಪೂರ್ವದಲ್ಲಿ ಭಾರತ ಎರಡು ರೀತಿಯ ಆಳ್ವಿಕೆಯಲ್ಲಿ ಹಂಚಿಹೋಗಿತ್ತು. ಒಂದು ಬ್ರಿಟಿಷರದ್ದಾದರೆ ಮತ್ತೊಂದು ಸ್ವತಂತ್ರ ರಾಜರದ್ದು. ಸ್ವಾತಂತ್ರ್ಯದ ಬಳಿಕ ಆ ರಾಜರ ಆಳ್ವಿಕೆಯಲ್ಲಿದ್ದ ರಾಜ್ಯಗಳನ್ನೆಲ್ಲ ನಮ್ಮ ಸಂವಿಧಾನದೊಂದಿಗೆ ವಿಲೀನಗೊಳಿಸಲಾಯಿತು. ಮೈಸೂರು, ಕೊಚ್ಚಿನ್ ಮುಂತಾದ ರಾಜ್ಯಗಳು ಸುಲಭವಾಗಿ ಭಾರತದ ತೆಕ್ಕೆ ಸೇರಿದವು. ಆದರೆ ಪಾಕಿಸ್ತಾನ ಹುಟ್ಟುಹಾಕಿದ್ದ ಗಲಭೆಯಿಂದಾಗಿ ಜಮ್ಮು-ಕಾಶ್ಮೀರದ ವಿಲೀನ ಗೊಂದಲಮಯವಾಯಿತು. ಆದ್ದರಿಂದ ತಾತ್ಕಾಲಿಕವಾಗಿ 370ಯನ್ನು ಜಾರಿಗೆ ತರಲಾಯಿತು. ಮೂಲತಃ ಯಾವ ವಿಶೇಷ ಸವಲತ್ತುಗಳನ್ನೂ ಅದು ಒಳಗೊಂಡಿರಲಿಲ್ಲ. ಅವುಗಳನ್ನು ಬರಿದೇ ಬಾಯಿ ಮಾತಿನಲ್ಲಿ ದಯಪಾಲಿಸಿದವರು ‘I am the last Englishman to rule in India’ ಎಂದು ನಾಚಿಕೆಯಿಲ್ಲದೆ ಹೇಳಿಕೊಂಡಿದ್ದ ಹೊಣೆಗೇಡಿ ನೆಹರೂ! ಅಂದಿನಿಂದಲೂ ಆ ಗೊಂದಲ, ಸವಲತ್ತುಗಳು ಹಾಗೇ ಮುಂದುವರೆಯುತ್ತಾ ಬಂದಿವೆ.

ಈಗ ಹೇಳಿ, ಕಾನೂನುಬದ್ಧವಾಗಿ ಕಾಶ್ಮೀರದ ವಿಷಯದಲ್ಲಿ ಯಾವ ಸಮಸ್ಯೆಯಿದೆ? ಹಾಗಿದ್ದಿದ್ದರೆ ಸಂಯುಕ್ತ ರಾಷ್ಟ್ರಗಳ ಒಕ್ಕೂಟ ಪಾಕಿಸ್ತಾನಕ್ಕೆ ಛೀಮಾರಿ ಹಾಕಿ ಏಕೆ ಕಳಿಸುತ್ತಿತ್ತು? ಅಲ್ಪಸಂಖ್ಯಾತರು ಎಂಬ ಹಣೆಪಟ್ಟಿ ಹಚ್ಚಿ ಓಲೈಕೆ ರಾಜಕಾರಣ ಮಾಡುತ್ತಿರುವವರೇ ಇಂದಿನ ನಿಜವಾದ ಸಮಸ್ಯೆ ಎನಿಸುವುದಿಲ್ಲವೇ? ಅನುಚ್ಛೇದ 370ಯನ್ನು ತಪ್ಪಾಗಿ ಬಿಂಬಿಸುತ್ತಿರುವ ಮಾಧ್ಯಮಗಳು, ಆಗಿಯೇ ಇಲ್ಲದ ಅನ್ಯಾಯವನ್ನು ಸರಿಪಡಿಸಲು ಹೋರಾಟದ ಸೋಗು ಹಾಕುತ್ತಿರುವ ಸೆಕ್ಯುಲರ್ ಮಂದಿಗಿಂತ ದೊಡ್ಡ ಸಮಸ್ಯೆ ಯಾವುದಿದೆ? ಇದೆಲ್ಲ ಮುಸ್ಲಿಮರಿಗೆ ಅರ್ಥವಾಗುತ್ತಲೇ ಇಲ್ಲವೆಂದರೆ ಹೇಗೆ ನಂಬುವುದು?
ಸಾದಿಯಾರವರಿಗೆ ಮತ್ತೂ ಒಂದು ಮುಖ್ಯವಾದ ಪ್ರಶ್ನೆಯಿದೆ. 'ನಮ್ಮ ದೇಗುಲಗಳ ಅರ್ಚಕರು ಹಾಗೂ ಧರ್ಮಗುರುಗಳದ್ದು ತುಂಬಾ ಸೀಮಿತ ಪಾತ್ರ. ಧರ್ಮವನ್ನು ನಮ್ಮ ಮೇಲೆ ಹೇರುವ ಸ್ವಾತಂತ್ರ್ಯವನ್ನು ನಾವು ಅವರಿಗೆ ಯಾವತ್ತೂ ಕೊಟ್ಟಿಲ್ಲ. ಹಾಗೆಯೇ, ನಮ್ಮ ಸಾಮಾಜಿಕ ಬದ್ಧತೆಗಳಿಗೆ, ಧರ್ಮವನ್ನೇ ನೆಪಮಾಡಿಕೊಂಡು ಅವರು ಯಾವತ್ತೂ ಅಡ್ಡಗಾಲು ಹಾಕಿಯೂ ಇಲ್ಲ. ನಿಮ್ಮ ಧರ್ಮಗುರುಗಳಿಗೆ ಮಾತ್ರ ಏಕೆ ಇಡೀ ಸಮುದಾಯದ ಸಾಮಾಜಿಕ ಚಿಂತನೆ, ವಿಚಾರಗಳ ಮೇಲೆಲ್ಲ ಅಷ್ಟೊಂದು ಹಿಡಿತ? ನೀವೇ ನೋಡಿ. ಮುಸ್ಲಿಮರಲ್ಲಿ ಧರ್ಮಗುರುಗಳಿಗೆ ಹೊರತಾಗಿರುವ ಬಲಿಷ್ಠ ಸಾಮಾಜಿಕ ನಾಯಕತ್ವವಿಲ್ಲ. ಆ ಪೊರೆ ಕಳಚಿ ಹೊರಬಂದರಷ್ಟೇ ಅವರಿಗೆ ಶಿಕ್ಷಣ, ಸ್ವಾಸ್ಥ್ಯ, ರಾಷ್ಟ್ರೀಯತೆ, ಸೌಹಾರ್ದ, ಬದುಕಿನ ಗುಣಮಟ್ಟ, ಸಮಾಜದ ಆಗು-ಹೋಗುಗಳ ಬಗೆಗಿನ ಅರಿವು ಮೂಡಲು ಸಾಧ್ಯ. ಧರ್ಮವೆಂಬುದು ಬದುಕಿನ ನಡಿಗೆಯನ್ನು ಸುಗಮಗೊಳಿಸುವ ದಾರಿದೀಪವಾಗಬೇಕೇ ಹೊರತು, ನಡೆಯುವವನ ಕಣ್ಣಿಗೇ ಬಟ್ಟೆ ಕಟ್ಟಿ ಅವನನ್ನು ತನ್ನ ಹೆಗಲ ಮೇಲೆ ಹೊತ್ತೊಯ್ಯಬಾರದು.

ಭಾರತದ ಸಮಗ್ರತೆಯ ಅಗತ್ಯ ಹಿಂದೂಗಳಿಗೆಷ್ಟಿದೆಯೋ, ಮುಸ್ಲಿಮರಿಗೂ ಅಷ್ಟೇ ಇದೆ. ಇಲ್ಲಿ ಸಿಗುವ ಸ್ಥಾನ-ಮಾನ ಅವರಿಗೆ ಬೇರೆಲ್ಲಿಯೂ ಸಿಗುವುದಿಲ್ಲ. ವಾಸ್ತವವನ್ನು ಅರಿತು ಅದಕ್ಕೆ ಸ್ಪಂದಿಸುವ ಪ್ರಯತ್ನವಾಗಬೇಕು ಅಷ್ಟೇ. ಕಡೇಪಕ್ಷ ಸಾದಿಯಾರಂಥ ಸುಶಿಕ್ಷಿತ ಮುಸ್ಲಿಮರಾದರೂ ಬದಲಾವಣೆಯ ಪ್ರಕ್ರಿಯೆಗೆ ನಾಂದಿ ಹಾಡುತ್ತಾರೆ ಎಂದು ಆಶಿಸೋಣವೇ?