Tuesday, 10 March 2015

ಇಂದಿನ ಮಹಿಳೆಗೆ ಮಹಿಳಾವಾದದ ಟೊಳ್ಳು ಸಮರ್ಥನೆ ಬೇಕಿಲ್ಲ!

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ನೆನೆಯಲಿಕ್ಕೇನೋ ಅಸಂಖ್ಯ ಮಹಿಳಾ ಸಾಧಕಿಯರು ಸಿಗುತ್ತಾರೆ. ಆದರೆ ತಮ್ಮ ಬರಹಗಳಲ್ಲಿ ಮಹಿಳೆಯರನ್ನು ಸದಾ ನೈತಿಕತೆಯ, ಮನಸ್ಸಾಕ್ಷಿಯ ಕುರುಹುಗಳನ್ನಾಗಿ ಬಿಂಬಿಸುತ್ತಲೇ ಬಂದಿರುವ, ಅವರ ಮನಸ್ಥಿತಿಯ ಹಲವು ಆಯಾಮಗಳನ್ನು ಯಥಾವತ್ತಾಗಿ ಚಿತ್ರಿಸಿರುವ ಎಸ್.ಎಲ್ ಭೈರಪ್ಪನವರನ್ನು ಈ ಹೊತ್ತು ನೆನೆಯಲೇಬೇಕೆನಿಸುತ್ತಿದೆ. ಅದರಲ್ಲೂ ಮಹಿಳಾವಾದವೆಂಬ ಮೊರೆತ ಮೇರೆ ಮೀರುತ್ತಿರುವ ಇಂದಿನ ದಿನಗಳಲ್ಲಿ ಈ ನೆನಕೆ ಹೆಚ್ಚು ಪ್ರಸ್ತುತವೂ ಹೌದು.

ಹಲವು ವರ್ಷಗಳ ಹಿಂದಿನ ಘಟನೆ ಇದು. ಆಗಿನ್ನೂ ಭೈರಪ್ಪನವರ ವಂಶವೃಕ್ಷವನ್ನು ಓದಿರಲಿಲ್ಲ. ನಮ್ಮ ನೆರೆಮನೆಯಲ್ಲಿ ಪುಟ್ಟ ಹುಡುಗಿಯೊಬ್ಬಳಿದ್ದಳು. ಅಬ್ಬಬ್ಬಾ ಎಂದರೆ ಏಳರ ಪ್ರಾಯ. ಅಸಾಧ್ಯ ಚೂಟಿ. ಮನೆಯಲ್ಲಿದ್ದುದು ಅಪ್ಪ ಹಾಗೂ ಮಗಳಿಬ್ಬರೇ. ತಂದೆ ತಾವು ಬೆಳಿಗ್ಗೆ ಕೆಲಸಕ್ಕೆ ಹೋಗುವ ಹೊತ್ತಿಗೆ ಇಬ್ಬರಿಗೂ ಹೊಟ್ಟೆಗೆ ಏನನ್ನಾದರೂ ಬೇಯಿಸಿ, ಮಗಳನ್ನು ಅಣಿಮಾಡಿ ಅವಳನ್ನು ಹತ್ತಿರದ ಶಾಲೆಗೆ ಬಿಟ್ಟು ಹೋಗುತ್ತಿದ್ದರು. ಶಾಲೆ ಮುಗಿಸಿ ಬರುತ್ತಿದ್ದ ಮಗು ಸಂಬಂಧಿಯೊಬ್ಬರ ಮನೆಯಲ್ಲಿರುತ್ತಿತ್ತು. ತಂದೆ ಕೆಲಸದಿಂದ ಹಿಂದಿರುಗಿ ಬರುವಾಗ ಅವಳನ್ನು ಕರೆತರುತ್ತಿದ್ದರು. ಆ ಮಗುವಿಗಾಗಿ ಅವರು ಪಡುತ್ತಿದ್ದ ಶ್ರಮ, ವಹಿಸುತ್ತಿದ್ದ ಆಸ್ಥೆ ಮತ್ತು ಆ ಮಗು ಅವರಿಗಾಗಿ ಹಂಬಲಿಸುತ್ತಿದ್ದುದನ್ನು ನೋಡುತ್ತಿದ್ದ ನಮಗೆ, ಮಗಳಿಗೆ ಅಪ್ಪ ಹೆಚ್ಚೋ, ಅಪ್ಪನಿಗೆ ಮಗಳೋ ಎಂಬ ಗೊಂದಲ ಉಂಟಾಗುತ್ತಿತ್ತು. ನಂತರ ತಿಳಿದು ಬಂದದ್ದೇನೆಂದರೆ, ಆ ಹುಡುಗಿಯ ತಾಯಿ ಅದಿನ್ನೂ ಚಿಕ್ಕ ಮಗುವಾಗಿದ್ದಾಗಲೇ ಸಂಸಾರವನ್ನು ತೊರೆದು ತಾವು ಪ್ರೀತಿಸಿದವರೊಂದಿಗೆ ಹೊರಟು ಹೋಗಿದ್ದರಂತೆ! ಆಗ ಆ ವಿಷಯ ಅಷ್ಟಾಗಿ ಕಾಡಿರಲಿಲ್ಲ. ಮುಂದೆ ವಂಶವೃಕ್ಷವನ್ನು ಓದಿದಾಗ ಕಾತ್ಯಾಯಿನಿಯ ಜಾಗವನ್ನು ಆ ಮಗುವಿನ ಅಮ್ಮನೇ ಆಕ್ರಮಿಸಿಕೊಂಡಿದ್ದರು. ಕಣ್ಣ ಮುಂದೆ ಆ ಅಪ್ಪ ಮಗಳ ಚಿತ್ರವೇ ಬಂದು ಅವ್ಯಕ್ತವಾದ ವೇದನೆಯಾಗುತ್ತಿತ್ತು. ಕಾತ್ಯಾಯಿನಿಗೇನೋ ಹೌದು ಎನ್ನಬಹುದಾದ ಒಂದು ಕಾರಣವಿತ್ತು. ಈಕೆಗೇನಿತ್ತು ಎಂಬುದು ಆಗ ಅರ್ಥವಾಗಿರಲಿಲ್ಲ. ಈಗ ಅರ್ಥವಾಗುತ್ತಿದೆ. ಇದೊಂದೇ ಅಲ್ಲ, ಇಂಥ ಹಲವು ಅನರ್ಥಗಳಿಗೆ ಎಡೆ ಮಾಡಿಕೊಡುತ್ತಿರುವ ಚಿಂತನೆಗಳು ಹಾಗೂ ಅವು ಹುಟ್ಟಿಸುತ್ತಿರುವ ಹುಸಿ ಸಮರ್ಥನೆಗಳು ಚೆನ್ನಾಗಿಯೇ ಅರ್ಥವಾಗುತ್ತಿದೆ.




ಇಲ್ಲ. ನಾವು ಸ್ವಘೋಷಿತ ಮಹಿಳಾವಾದಿಗಳಲ್ಲ. ವಿಚಾರವಾದಿ ಹೋರಾಟಗಾರ್ತಿಯರೂ ಅಲ್ಲ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಖಂಡ-ತುಂಡವಾಗಿ ಭೈರಪ್ಪನವರ ಬರಹಗಳನ್ನು ಜರಿಯುವ, ಅವರನ್ನು ವಿಕೃತ ಮನಸ್ಸಿನವರು ಎಂದು ಹೇಳುವಷ್ಟು ವಿಪರೀತಿ ಬುದ್ಧಿಯನ್ನು ದೇವರು ನಮಗೆ ದಯಪಾಲಿಸಿಯೂ ಇಲ್ಲ, ಆ ಸೌಭಾಗ್ಯ ನಮಗೆ ಬೇಡವೂ ಬೇಡ. ಆದರೆ ಸಾಮಾನ್ಯ ಮಹಿಳೆಯರಾಗಿ ಆ ಪಾತ್ರಗಳನ್ನು ಮನಸ್ಸಿನಲ್ಲೇ ಜಗಿದು ನುಂಗುವಾಗ, ಅಷ್ಟು ಹೊತ್ತೂ ಆ ಪಾತ್ರಗಳಾಗಿಯೇ ಜೀವಿಸುವಾಗ ನಮ್ಮ ಮನಸ್ಸುಗಳಿಗಿರುವ ನೈತಿಕತೆಯೆಂಬ ಬೇಲಿ ನಮಗರಿವಿಲ್ಲದಂತೆಯೇ ಮತ್ತಷ್ಟು ಬಿಗಿಯಾಗುತ್ತದೆ. ಮನಸ್ಸಾಕ್ಷಿಯನ್ನು ಮೀರಿ ನಡೆಯಬಾರದೆಂಬ ನಾವು ಹಾಕಿಕೊಂಡಿರುವ ನಿಯಮ ಮನಸ್ಸಿನೊಳಗೇ ಮತ್ತಷ್ಟು ಹೆಪ್ಪುಗಟ್ಟುತ್ತದೆ. ಹಾಗಾದರೆ ವಂಶವೃಕ್ಷ, ಅಂಚು, ಕವಲು ಹಾಗೂ ಯಾನಗಳನ್ನೇ ಉದಾಹರಿಸಿ ಸಿಕ್ಕ ಸಿಕ್ಕ ಮೇಜುಗಳನ್ನು ಕುಟ್ಟುವ, ಮೈಕುಗಳಲ್ಲಿ ಗಂಟಲು ಹರಿದುಕೊಳ್ಳುವ ಮಹಿಳಾವಾದಿಗಳಿಗೆ, ಪ್ರಗತಿಪರರಿಗೆ ಹೀಗೇಕನಿಸುವುದಿಲ್ಲ? ಭೈರಪ್ಪನವರದ್ದು ಮಹಿಳೆಯರ ಕುರಿತಾದ ಕ್ರೌರ್ಯ ಮನಸ್ಥಿತಿ ಎಂದೇಕೆ ಬೊಬ್ಬೆ ಹೊಡೆಯುತ್ತಾರೆ? ಮಹಿಳಾವಾದಿಗಳಿಗೆ ಪ್ರಿಯವಾದ ಆ ನಾಲ್ಕೂ ಕಾದಂಬರಿಗಳ ಮಹಿಳಾ ಪಾತ್ರಗಳನ್ನು ಒಮ್ಮೆ ನಮ್ಮ ಹಾಗೂ ಅವರ ದೃಷ್ಟಿಕೋನಗಳಿಂದ ನೋಡಿಯೇಬಿಡೋಣ.

ವಂಶವೃಕ್ಷದ ಪ್ರಮುಖ ಸ್ತ್ರೀ ಪಾತ್ರವಾದ ಕಾತ್ಯಾಯಿನಿ ವಿಧವೆ. ಐದು ವರ್ಷದ ಮಗುವಿನ ತಾಯಿ. ತನ್ನನ್ನೇ ನಂಬಿದ್ದ ವಯೋವೃದ್ಧ ಅತ್ತೆ ಮಾವಂದಿರನ್ನು, ಮನೆಯ ಜವಾಬ್ದಾರಿಗಳೆಲ್ಲವನ್ನೂ, ಕೊನೆಗೆ ತಾನು ಹೆತ್ತ ಮಗನನ್ನೂ ಬಿಟ್ಟು ಓಡಿ ಹೋಗಿ ಬೇರೊಬ್ಬನನ್ನು ಮದುವೆಯಾಗುತ್ತಾಳೆ. ಮಾವ ಶ್ರೀನಿವಾಸ ಶ್ರೋತ್ರಿಯವರು ಬಲವಾಗಿ ನಂಬಿದ್ದ ವಂಶವೃಕ್ಷವನ್ನು ತಾನು ಹೀಗೆ ತೊರೆದು ಹೋಗಿದ್ದು ಕ್ರಮೇಣ ಅವಳ ಮನಸ್ಸನ್ನು ಕಿತ್ತು ತಿನ್ನುತ್ತದೆ. ಹೊಸ ಗಂಡನಿಗೆ ತಕ್ಕ ಹೆಂಡತಿಯಾಗಲಾರದೆ, ಅವನ ಮಕ್ಕಳನ್ನೂ ಹೆರಲಾಗದೆ ಪಾಪ ಪ್ರಜ್ಞೆಯಿಂದ ನರಳಿ ಸಾಯುತ್ತಾಳೆ. ಇಲ್ಲಿ ವಂಶವೃಕ್ಷವೆಂಬುದು ನೆಪವಷ್ಟೆ. ಎಲ್ಲ ಸಂಬಂಧಗಳಿಗೂ ಯಾವುದೋ ಕರ್ತವ್ಯದ ಸಂಕೋಲೆಯೊಂದಿರುತ್ತದೆ, ಇರಲೇಬೇಕು ಎನಿಸುವುದಿಲ್ಲವಾ? ನಮ್ಮ ಮಹಿಳಾವಾದಿಗಳಾಗಿದ್ದರೆ ಏನು ಮಾಡಿಸುತ್ತಿದ್ದರು ಕಾತ್ಯಾಯಿನಿಯ ಕೈಲಿ? ಮತ್ತೆ ಮೂರು ಮಕ್ಕಳನ್ನು ಹಡೆಸಿ ಶ್ರೋತ್ರಿಯರಿಗೆ ಸಡ್ದು ಹೊಡೆಯುವಂತೆ, ಅವರ ಎದುರೇ ಬದುಕಿ ತೋರಿಸುವಂತೆ ಮಾಡುತ್ತಿದ್ದರಾ? ಇಲ್ಲಿ ಪ್ರಶ್ನೆ ವಿಧವಾ ವಿವಾಹದ್ದಲ್ಲವೇ ಅಲ್ಲ. ಆದರೆ ಸಂದರ್ಭದ ವಿವೇಚನೆಯಿಲ್ಲದೆ ಬರೀ ತನ್ನ ದೈಹಿಕ ಕಾಮನೆಯ ಪೂರ್ತಿಗೋಸ್ಕರ ಮನೆಯನ್ನು, ಮಕ್ಕಳನ್ನು ಬಿಟ್ಟು ಹೊರಟುಬಿಡುವುದು ಮಹಿಳಾವಾದವಾ? ಅದು ಆ ಕ್ಷಣಕ್ಕೆ ಸರಿ ಎನಿಸಬಹುದು. ಆಮೇಲಾದರೂ ಆ ಕೊರಗು ಜೀವನಪರ್ಯಂತ ಕಾಡುವುದಿಲ್ಲವಾ? ಅಂಥವರೆಲ್ಲ ಆದರ್ಶ ಮಹಿಳೆಯರಾಗಿಬಿಟ್ಟರೆ, ಗಂಡನನ್ನು ಕಳೆದುಕೊಂಡ ಮೇಲೂ ಜೀವನಪೂರ್ತಿ ಒಂಟಿಯಾಗಿದ್ದು ಮಕ್ಕಳಿಗೋಸ್ಕರ ಹೆಣಗಿ ಅವರನ್ನು ದಡ ಸೇರಿಸುವ ತಾಯಂದಿರು ಮುಟ್ಠಾಳರಾ? ತಮ್ಮ ಆಸೆ, ಕಾಮನೆಗಳನ್ನು ಹತ್ತಿಕ್ಕಿಕೊಂಡು ಮಕ್ಕಳ ಏಳ್ಗೆಯಲ್ಲಿ ಸಾರ್ಥಕ್ಯ ಕಾಣುವ ವಿಧವೆಯರು ತಪ್ಪು ಮಾದರಿಯಾಗುತ್ತಾರಾ ಈ ಆಧುನಿಕ ಸಮಾಜದಲ್ಲಿ?

ಇನ್ನು ಅಂಚು ಕಾದಂಬರಿಯಲ್ಲಿ ಬರುವ ಡಾ.ಅಮೃತಾಳ ಪಾತ್ರ. ಬಹಳ ಬುದ್ಧಿವಂತೆಯಾಗಿದ್ದರೂ ತನ್ನ ಚಿಕ್ಕಮ್ಮನಿಂದಲೇ ಮೋಸ ಹೋಗುವ ಅಮೃತಾ ಹತಾಶಳಾಗಿ ತನ್ನೆರಡು ಮಕ್ಕಳೊಂದಿಗೆ ಬದುಕುತ್ತಿರುತ್ತಾಳೆ. ಅವಳದ್ದು ತನಗಾದ ಅನ್ಯಾಯವನ್ನು ಅರಗಿಸಿಕೊಂಡು ಬದುಕಲಾರದೆ, ಬದುಕನ್ನು ಕೊನೆಗಾಣಿಸಿಕೊಂಡು ಸಾಯಲಾರದೆ ತೊಳಲಾಡುವ ಮಾನಸಿಕ ಸ್ಥಿತಿ. ಅವಳ ಮನೆಯ ರಿಪೇರಿಯ ಕಾರಣಕ್ಕೆ ಜೊತೆಯಾಗುವ ಆರ್ಕಿಟೆಕ್ಟ್ ಸೋಮಶೇಖರ ಮೊದಮೊದಲು ಅವಳನ್ನು ಅರಿಯಲಾಗದೆ ಹೆಣಗಿ, ಕೊನೆಗೆ ಅರಿತು ಜೊತೆಯಾಗುವ ಪರಿಯಲ್ಲಿ ಏನು ಅಭ್ಯಂತರವಿದೆ ಮಹಿಳಾವಾದಿಗಳಿಗೆ? ಇನ್ನೆಲ್ಲಿ ರಿವಾಲ್ವರಿನಿಂದ ಗುಂಡು ಹೊಡೆದುಕೊಂಡು ಸಾಯುತ್ತಾಳೋ, ಇನ್ನೆಲ್ಲಿ ನಡುರಾತ್ರಿಯಲ್ಲಿ ಚಾಮುಂಡಿ ಬೆಟ್ಟ ಹತ್ತಲು ಹೊರಡುತ್ತಾಳೋ ಎಂದು ಹೊತ್ತಲ್ಲದ ಹೊತ್ತಿನಲ್ಲಿ ಓಡೋಡಿ ಬರುವ ಸೋಮಶೇಖರ, ಅವಳನ್ನು ವಿನಾಶದ ಅಂಚಿನಿಂದ ಹೊರಗೆಳೆದು ತಂದು ಜೊತೆಯಾಗಿ ನಿಲ್ಲುತ್ತಾನಲ್ಲ, ಆ ಪ್ರಕ್ರಿಯೆಯಲ್ಲಿ ಯಾವ ಕ್ರೌರ್ಯವಿದೆ? ಅಥವಾ ಮಹಿಳೆಯೋರ್ವಳು ಇಷ್ಟು ಅಧೀರಳಾಗಬಲ್ಲಳು ಎಂದು ತೋರಿಸಿರುವುದು ಇಡೀ ಸ್ತ್ರೀ ಕುಲಕ್ಕೇ ಅವಮಾನವಾ? ಇಂಥ ಮನೋವ್ಯಥೆಯ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತಲೆಲ್ಲ ಇವೆಯಲ್ಲ, ಕಾಣುವುದಿಲ್ಲವಾ ವಿಚಾರವಾದಿಗಳ ಕಣ್ಣಿಗೆ?

ಕವಲು ಕಾದಂಬರಿಗಂತೂ ಮಹಿಳಾ ವಿಮೋಚನೆಯೇ ವಸ್ತು. ತನ್ನ ಕಂಪೆನಿಯ ಮಾಲೀಕನನ್ನೇ ಉಪಾಯವಾಗಿ ಬಲೆಗೆ ಹಾಕಿಕೊಂಡು ಮದುವೆಯಾಗುವ ಮಂಗಳ, ತನ್ನ ಸ್ವಪ್ರತಿಷ್ಠೆಗೋಸ್ಕರ ಗಂಡನನ್ನು ದೂರ ಮಾಡಿಕೊಳ್ಳುವ ಇಳಾ, ಇಬ್ಬರೂ ಮಹಿಳಾವಾದದ ಅಪರಾವತಾರವೇ ಅಲ್ಲವೇ? ತಮ್ಮ ಉದ್ದೇಶ ಸಾಫಲ್ಯಕ್ಕಾಗಿ ಏನನ್ನಾದರೂ ಮಾಡುವ ಇವರಿಬ್ಬರೂ ಕೊನೆಗೆ ಗೆದ್ದೂ ಸೋತಿರುವುದರಲ್ಲಿ ತಪ್ಪೇನಿದೆ? ವರದಕ್ಷಿಣೆ ಕಿರುಕುಳವೆಂದು ಸುಳ್ಳು ಕೇಸುಗಳನ್ನು ಜಡಿದು ಗಂಡನ ಮನೆಯವರ ಬಾಳನ್ನು ನರಕವಾಗಿಸಿರುವ ಎಷ್ಟು ಹೆಣ್ಣುಮಕ್ಕಳಿಲ್ಲ ನಮ್ಮ ನಡುವೆ? ನೆಮ್ಮದಿಯ ಸಂಸಾರಗಳಲ್ಲಿ ಮುಳ್ಳಾಗಿ ನುಸುಳಿ ಹುಳಿ ಹಿಂಡುವ ಮಹಿಳಾಮಣಿಗಳಿಗೆ ಕೊರತೆಯೇ ನಮ್ಮ ಸಮಾಜದಲ್ಲಿ? ತೀರ ಸಭ್ಯ, ಮೃದು ಹೃದಯಿಗಳಾದ ಗಂಡಂದಿರನ್ನು ತಮ್ಮ ತಂದೆ-ತಾಯಿಯರಿಂದಲೇ ದೂರವಿಟ್ಟು ನೋಯಿಸುವ, ಅವರು ದುಡಿಯುವ ಪ್ರತಿ ಕಿಲುಬು ಕಾಸಿನ ಮೇಲೂ ಹಕ್ಕು ಚಲಾಯಿಸುವ ರಾಕ್ಷಸೀರೂಪಿ ಹೆಂಡತಿಯರೇನು ಕಡಿಮೆಯೇ? ಅಂಥವರಿಗೆಲ್ಲ ಹೋಗಿ ಬುದ್ಧಿ ಹೇಳುತ್ತಾರಾ ಮಹಿಳಾವಾದಿಗಳು? ಮಂಗಳೆಯನ್ನು ತನ್ನ ದೈಹಿಕ ಕಾಮನೆಗಾಗಿ ಬಳಸಿಕೊಳ್ಳುವ ಮೇಡಮ್ ಸರಾಫ್‍, ಪುರುಷರ ಮೇಲಿನ ಅವಲಂಬನೆಯನ್ನು ಇಲ್ಲವಾಗಿಸುವಲ್ಲಿ ಇದು ಅವಶ್ಯಕ ಎನ್ನುತ್ತಾಳೆ. Lesbian Feminism ಎನ್ನುವ, ಸುಮಾರು 70ರ ದಶಕದಿಂದಲೇ ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಮಹಿಳಾ ವಿಮೋಚನೆಯ ಕೊಳಕು ಜಾಡ್ಯದ ಬಗ್ಗೆ ಇಷ್ಟು ನೇರವಾಗಿ ಹೇಳಿರುವ ಭೈರಪ್ಪನವರಿಗೆ ವಿಚಾರವಾದಿಗಳಿಂದ ಒಂದಾದರೂ ಶಹಬ್ಬಾಸ್‍ಗಿರಿ ಬೇಡವೇ?

ಇನ್ನು ಯಾನದಲ್ಲಿ ಬರುವ ಫ್ಲೈಯಿಂಗ್ ಆಫೀಸರ್ ಉತ್ತರಾಳ ಪಾತ್ರ. ಪ್ರಯೋಗದ ಸಲುವಾಗಿ ಅಂತರಿಕ್ಷಯಾನ ಕೈಗೊಂಡು ಸಹೋದ್ಯೋಗಿ 'ಯಾದವ್'ನೊಂದಿಗೆ ಪತ್ನಿಯಂತೆ ಜೀವಿಸಬೇಕು ಎಂಬುದು ಉತ್ತರಾಳಿಗೆ ತಿಳಿದು ಬರುತ್ತದೆ. ಬೇರೆ ಜಾತಿಯವನಾದರೂ ಅವನನ್ನು ದೇವಸ್ಥಾನವೊಂದರಲ್ಲಿ ಮದುವೆಯಾಗಿ, ದೈವ ಹಾಗೂ ಮನಸ್ಸುಗಳೆರಡರ ಸಾಕ್ಷಿಯಾಗಿ ಗಂಡನೆಂದು ಸ್ವೀಕರಿಸಿದ ನಂತರವೇ ಅವಳು ಅವನೊಡನೆ ಅಂತರಿಕ್ಷಕ್ಕೆ ಹಾರುವುದು. ನಂತರ ಅಂಥದ್ದೇ ಮತ್ತೊಂದು ಪಯಣ ನಿಷ್ಕರ್ಷೆಯಾದಾಗ ಗಂಡ ಯಾದವ್ ಅವಳ ಜೊತೆ ಬರಲೊಪ್ಪುವುದಿಲ್ಲ. ಗಂಡನಲ್ಲದ ಮತ್ತೊಬ್ಬ ವಿಜ್ಞಾನಿಯನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ಇಡೀ ಯಾನದ ಮೂಲ ಉದ್ದೇಶಕ್ಕೇ ಧಕ್ಕೆ ತರುವ ಮಟ್ಟಕ್ಕೆ ಹೋಗುತ್ತಾಳಲ್ಲ ಉತ್ತರಾ, ಏನಿದೆ ಅಂಥ ತಪ್ಪು ಅವಳ ಪಾತ್ರದಲ್ಲಿ? ನಮ್ಮ ಮಹಿಳಾವಾದಿಗಳಾಗಿದ್ದರೆ ಉತ್ತರಾಳ ಬಾಯಲ್ಲಿ ಸಲೀಸಾಗಿ, 'ಗಂಡ ಯಾನಕ್ಕೆ ಬರದಿದ್ದುದರಿಂದ ಪತ್ನಿ ಮತ್ತೊಬ್ಬರ ಸನಿಹವನ್ನು ಬಯಸುವುದು ತೀರ ಸಹಜ' ಎಂದು ಹೇಳಿಸಿಬಿಡುತ್ತಿದ್ದರೇನೋ!



ಇವಿಷ್ಟೇ ಅಲ್ಲ. ಗೃಹಭಂಗದ ನಂಜಮ್ಮ, ಸಾರ್ಥದ ಚಂದ್ರಿಕೆ, ದಾಟುವಿನ ಸತ್ಯಭಾಮಾ ಹಾಗೂ ಅದೇ ಕಾದಂಬರಿಯಲ್ಲಿನ ಮಾದಿಗರ ಹೆಣ್ಣಾದ ಮಾತಂಗಿ ಎಲ್ಲರೂ ಗಟ್ಟಿಗರೇ. ತಾವು ನಂಬಿದ ತತ್ವಕ್ಕೆ, ತಮ್ಮ ಮನಸ್ಸಿಗೆ ಎಂದೂ ಮೋಸ ಮಾಡಿಕೊಳ್ಳದೆ ಬದುಕನ್ನು ಜಯಿಸಿದವರೇ. ಸ್ವಲ್ಪ ಯೋಚಿಸಿ ನೋಡಿ, ಗಂಡು ಹಾಗೂ ಹೆಣ್ಣುಮಕ್ಕಳ ನಡುವಿನ ತಾರತಮ್ಯ ಇಂದು ನಿನ್ನೆಯದಲ್ಲ. ಅದು ನಮ್ಮ ಅಜ್ಜಿ, ಮುತ್ತಜ್ಜಿಯರು ಮನೆಯ ಹುಡುಗರಿಗೆ ಬಿಸಿಯಾದ ಅನ್ನ ಬಡಿಸಿ ಹೆಣ್ಣುಮಕ್ಕಳಿಗೆ ತಂಗಳು ಹಾಕುವ ಕಾಲದಿಂದಲೇ ಇತ್ತು. ಅವರಿಗೆ ಮಾತ್ರ ಗಟ್ಟಿ ಮೊಸರು, ನಮಗೆ ಮಾತ್ರ ನೀರು ಮಜ್ಜಿಗೆ ಎಂದು ಗೊಣಗಿಕೊಂಡು ಉಂಡೆದ್ದ ಎಷ್ಟು ಹೆಣ್ಣುಮಕ್ಕಳಿಲ್ಲ ನಮ್ಮ ನಡುವೆ? ಈಗ ಓದು-ಬರಹದ, ಕೆಲಸ-ಕಾರ್ಯದ ಸ್ವಾತಂತ್ರ್ಯ ಸಿಕ್ಕಿದೆಯೆಂದು ಮಹಿಳಾ ವಿಮೋಚನೆಯ ಹೆಸರಿನಲ್ಲಿ ಅತಿರೇಕಕ್ಕೆ ತೊಡಗುವುದು ಹಳೆಯ ಲೆಕ್ಕವನ್ನೆಲ್ಲ ಚುಕ್ತಾ ಮಾಡುವ ಪರಿಯಾ? ನಾಲ್ಕಾರು ಮಂದಿ ಅಕ್ಷರಕುಕ್ಷಿಗಳ ಗುಂಪು ವಿಮೋಚನೆಯ ಹೆಸರಿನಲ್ಲಿ ಬೊಬ್ಬಿರಿದರೆ ಸಿಕ್ಕಿಬಿಡುತ್ತದಾ ವಿಮೋಚನೆ? ಸಾಧ್ಯವಾಗಿಬಿಡುತ್ತದಾ ಸಮಾನತೆ? ಹಾಗಾದರೆ ಮಹಿಳಾವಾದಿಗಳು ಇಷ್ಟೊಂದು ಜಾಗಟೆ ಬಾರಿಸುತ್ತಿದ್ದರೂ ಅತ್ಯಾಚಾರಗಳು ಕಡಿಮೆಯೇಕಾಗಿಲ್ಲ? ತೀರ ಸಣ್ಣ ಸಣ್ಣ ಹಸುಳೆಗಳು ಬಲಿಯಾಗುವುದಾದರೂ ಏಕೆ ನಿಂತಿಲ್ಲ? ಸಣ್ಣ-ದೊಡ್ಡ ಮೈಕುಗಳಲ್ಲಿ ಸಮಾನತೆಯ, ವೈಚಾರಿಕತೆಯ ಕಹಳೆ ಮೊಳಗುತ್ತಿದ್ದರೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಆಸಿಡ್ ದಾಳಿಗಳೇಕೆ ನಿಂತಿಲ್ಲ? ಅದೂ ಹೋಗಲಿ, ಅನೈತಿಕ ಸಂಬಂಧಗಳಿಂದಾಗುತ್ತಿರುವ ಕೊಲೆಗಳು ಇಷ್ಟೊಂದು ಹೆಚ್ಚುತ್ತಿರುವುದೇಕೆ?
ಮಹಿಳಾವಾದದ, ವಿಚಾರವಾದದ ಧ್ವಜ ಹಾರಿಸುವವರನ್ನು, ಅವರ ಆವೇಶವನ್ನು ಕಂಡರೆ ನಿಜಕ್ಕೂ ದಿಗಿಲಾಗುತ್ತದೆ. ಏಕೆಂದರೆ ಅವರು ಪ್ರತಿಪಾದಿಸುವ ಸಮಾನತೆ ವಿದ್ಯೆ, ಉದ್ಯೋಗಾವಕಾಶಗಳನ್ನು ಮೀರಿ ಸಂಬಂಧಗಳ ಬುಡ ಕಡಿಯುವ ಮಟ್ಟಕ್ಕೆ ಬೆಳೆದುಬಿಟ್ಟಿದೆ. ಇಂದು ಲಕ್ಷಾಂತರ ಮಂದಿ ಹೆಣ್ಣುಮಕ್ಕಳು ದುಡಿಯಲು ಹೋಗುತ್ತಿದ್ದಾರೆ. ತನ್ನ ಹೆಂಡತಿ ಹೊರಗೆ ದುಡಿಯುತ್ತಾಳಲ್ಲ ಎಂಬ ಕಕ್ಕುಲತೆಯಿಂದ ಮನೆಕೆಲಸದಲ್ಲಿ, ಮಕ್ಕಳ ಲಾಲನೆ-ಪಾಲನೆಯಲ್ಲಿ ಕೈ ಜೋಡಿಸುತ್ತಿರುವ ಗಂಡಸರೆಷ್ಟಿಲ್ಲ ಹೇಳಿ? ಕೆಲಸದ ನಿಮಿತ್ತ ದೇಶ-ವಿದೇಶಗಳಲ್ಲಿ ಒಂಟಿಯಾಗಿ ಸಂಚರಿಸುವ ಹೆಂಡತಿಯರನ್ನು, 'ನೀನು ಹೋಗಿ ಬಾ, ನಾನು ಮನೆ ಕಡೆ ಸಂಭಾಳಿಸುತ್ತೇನೆ' ಎಂದು ಹುರಿದುಂಬಿಸಿ ಕಳುಹಿಸಿಕೊಡುತ್ತಿರುವ ಎಷ್ಟು ಗಂಡಂದಿರಿಲ್ಲ? ಹಾಗೆ ಹೊರಗೆ ಹೊರಟ ಹೆಂಡತಿಯರು ತನ್ನ ಗಂಡ ತನಗೆ ಬೌದ್ಧಿಕ ಮಟ್ಟದಲ್ಲಿ ತಕ್ಕವನಲ್ಲವೆಂತಲೋ ಅಥವಾ ಅನುರೂಪನಲ್ಲವೆಂತಲೋ ಬೇರೊಬ್ಬನ ತೆಕ್ಕೆಗೆ ಬಿದ್ದರೆ? ಪರವಾಗಿಲ್ಲವಂತೆ! ಅದನ್ನೂ ಸಮರ್ಥಿಸಿಕೊಳ್ಳುತ್ತದೆ ನೋಡಿ ಮಹಿಳಾವಾದ! ಸಮಾನತೆ ಎಂದರೆ ಅದೇ ಅಲ್ಲವೇ ಮತ್ತೆ? ಗಂಡು ಮಾಡಬಹುದಾದರೆ ಹೆಣ್ಣೇಕೆ ಮಾಡಬಾರದು? ಗಂಡು ಸಿಗರೇಟ್ ಸೇದಬಹುದು, ವಿಸ್ಕಿ ಕುಡಿಯಬಹುದು ಎಂದಾದರೆ ಹೆಣ್ಣೇಕೆ ವಂಚಿತಳಾಗಬೇಕು? ಗಂಡು ಸೂಳೆಕೇರಿಗೆ ಹೋಗಬಹುದಾದರೆ ಹೆಣ್ಣೇಕೆ ಪರಪುರುಷರ ಸಂಗ ಮಾಡಬಾರದು? ಒಟ್ಟಿನಲ್ಲಿ ಎಲ್ಲಕ್ಕೂ ಜೈ. ಸಮಾನತೆಯ ಹೆಸರಿನಲ್ಲಿ ಸಾಗುತ್ತಿದೆಯಲ್ಲ ಈ ಓಟ, ಇದರಲ್ಲಿ ಹೆಣ್ಣುಮಕ್ಕಳಿಗೆ ಮುನ್ನುಗ್ಗುವ ಅವಕಾಶಗಳೆಷ್ಟಿವೆಯೋ, ಅಮಲೇರಿ ನೈತಿಕವಾಗಿ ಮುಗ್ಗರಿಸುವ ಅಪಾಯವೂ ಅಷ್ಟೇ ಇದೆ. ಹೀಗೆ ಮುಗ್ಗರಿಸಿ ಬೀಳುವ ಮಂದಿಯೆಲ್ಲ ಗೆದ್ದೆವೆಂಬ ಭ್ರಮೆಯಲ್ಲಿ ಬೀಗುವ ವಿಪರೀತ ಬುದ್ಧಿವಂತರೇ! ಇವರನ್ನು ಅಕ್ಷರಶಃ ಉಪಯೋಗಿಸಿಕೊಳ್ಳುವವರು ಯಾರು ಹೇಳಿ? ಮತ್ತದೇ ಗಂಡಸರು! ಹಾಗಾದರೆ ಎಲ್ಲಿ ಬಂತು ಸಮಾನತೆ?

ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಖಂಡಿತ ಬೇಕು, ಜೊತೆಗೆ ಅದರ ಇತಿ-ಮಿತಿ, ಪರಿಣಾಮಗಳ ವಿವೇಚನೆಯೂ. ವಿಮೋಚನೆಯ, ಸಮಾನತೆಯ ಹೆಸರಿನಲ್ಲಿ ಎಲ್ಲವೂ ಕಲಸುಮೇಲೋಗರವಾಗುತ್ತಿರುವ ಈ ದಿನಗಳಲ್ಲಿ ನೈತಿಕತೆಯ ಒಂದು ಸಣ್ಣ ಪಾಠ ಉತ್ತರಾಳ ರೂಪದಲ್ಲಿ ದೊರಕಿದರೆ ಯಾಕಾಗಬಾರದು? ಮನಸ್ಸಾಕ್ಷಿಯನ್ನು ಮರೆತು ಓಡುವ ಮನಸ್ಸುಗಳಿಗೆ ಮಂಗಳೆಯ ರೂಪದ ಕಡಿವಾಣ ಬೀಳುವುದಾದರೆ ಅದರಲ್ಲಿ ತಪ್ಪೇನಿದೆ? ಭೈರಪ್ಪನವರು ಈ ಸಮಾಜದಿಂದ ಆಯ್ದುಕೊಂಡ, ಸಮಾಜಕ್ಕೆ ಹೋಲುವಂಥ ಪಾತ್ರಗಳನ್ನು ಸೃಷ್ಟಿಸಿದ್ದಾರೆಯೇ ಹೊರತು ಎಲ್ಲರೂ ಅದರಂತೆಯೇ ನಡೆದುಕೊಳ್ಳಲೇಬೇಕೆಂಬ ಪ್ರಮಾಣವನ್ನೇನೂ ಮಾಡಿಸಿಕೊಂಡಿಲ್ಲವಲ್ಲ?


ಸಮಾನತೆಯ ಜೋಕಾಲಿಯಲ್ಲಿ ಜೀಕುವಾಗಲೂ ಕೈಗಳು ನೈತಿಕತೆ ಹಾಗೂ ಮನಸ್ಸಾಕ್ಷಿಗಳನ್ನು ಗಟ್ಟಿಯಾಗಿ ಹಿಡಿದಿರಲೇಬೇಕು. ಇಲ್ಲದಿದ್ದರೆ ಆಯತಪ್ಪಿ ಬೀಳುವವರು ನಾವೇ, ನಷ್ಟವೂ ನಮಗೇ. ಅಲ್ಲವೇ?

ಉಕ್ಕಿನ ಹಕ್ಕಿಗಳ ಕಲರವದ ಹಿಂದೆ….

ಮೊನ್ನೆ ಫೆಬ್ರುವರಿ 18ರಿಂದ 22ರವರೆಗೂ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಬರೀ ಉಕ್ಕಿನ ಹಕ್ಕಿಗಳದ್ದೇ ರಾಜ್ಯಭಾರ. ಒಂದೊಂದರದ್ದೂ ಒಂದೊಂದು ಗಾತ್ರ, ಆಕಾರ, ಬಣ್ಣ ಹಾಗೂ ಕ್ಷಮತೆ! ಕೆಲವು ಭಾರತದ ಮಣ್ಣಿನದ್ದೇ ಆದರೂ ಹೆಚ್ಚಿನವು ವಿದೇಶಗಳಿಂದ ವಲಸೆ ಬಂದವು. ಅವು ಸುಮ್ಮನೆ ನೆಲದ ಮೇಲೆ ನಿಂತರೂ ಚಂದ, ಆಗಸದಲ್ಲಿ ಹಾರಾಡಿದರೂ ಚಂದ. ಒಟ್ಟಿನಲ್ಲಿ ಅವು ಮಾಡಿದ ಮೋಡಿ ಹೇಗಿತ್ತು ಅಂತೀರಿ? ನೆತ್ತಿಯ ಮೇಲಿನ ಸುಡುಬಿಸಿಲನ್ನೂ ಲೆಕ್ಕಿಸದೆ ಅವುಗಳನ್ನು ನೋಡಲು ಹೋದ ಲಕ್ಷಗಟ್ಟಳೆ ಜನ ನಿಬ್ಬೆರಗಾದರು. ನೆಲದ ಮೇಲೆ ತಣ್ಣಗೆ ನಿಂತಿದ್ದ ಕೆಲ ಹಕ್ಕಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಆಗಸದಲ್ಲಿ ರಂಗು ಚೆಲ್ಲಿಕೊಂಡು ಹಾರಾಡಿದವುಗಳನ್ನು ಕಂಡು ಚಿಕ್ಕ ಮಕ್ಕಳಂತೆ ಕೇಕೆ ಹಾಕಿ ನಕ್ಕರು. ಅವುಗಳ ಸದ್ದಿನೊಂದಿಗೆ ತಮ್ಮದೂ ದನಿ ಬೆರೆಸಿ ನಲಿದರು. ಅವುಗಳ ಸಾಹಸವನ್ನು ನೋಡಿ ಕೆಲಕ್ಷಣಗಳ ಮಟ್ಟಿಗೆ ತಮ್ಮಿರವನ್ನೇ ಮರೆತರು. ಹೃದಯದ ಬಡಿತವನ್ನು ಏರುಪೇರಾಗಿಸಿಕೊಂಡು ಬೆರಳನ್ನು ಕಚ್ಚಿ ಸುಮ್ಮನೇ ನಿಂತರು. ಹೌದು. ಇಷ್ಟೆಲ್ಲಾ ಭಾವನೆಗಳ ಸಿಂಚನಕ್ಕೆ ಕಾರಣವಾದದ್ದು ಈ ಬಾರಿಯ 'ಏರೋ ಇಂಡಿಯಾ 2015'.




ಇಡೀ ಏಷ್ಯಾ ಖಂಡಕ್ಕೇ ಕೀರ್ತಿ ತರುತ್ತಿರುವ, ನಮ್ಮ ದೇಶದ ಹೆಮ್ಮೆಯ ಏರ್ ಶೋ ಬರೋಬ್ಬರಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಅಂದಹಾಗೆ, 1996ರಲ್ಲಿ ಶುರುವಾದ ಈ ವೈಮಾನಿಕ ಅಭಿಯಾನಕ್ಕೆ ಈ ವರ್ಷ ದಶಕದ ಆವೃತ್ತಿಯ ಸಂಭ್ರಮ. ಪ್ರತಿ ಬಾರಿಯೂ ನಮ್ಮ ಕರ್ನಾಟಕದ ನಗರಿ ಬೆಂಗಳೂರೇ ಇದರ ಆತಿಥ್ಯವಹಿಸುತ್ತಿರುವುದು ನಮ್ಮ ಹೆಮ್ಮೆಯ ಕಿರೀಟಕ್ಕೆ ಮತ್ತೊಂದು ಗರಿಯೇ ಸರಿ! ಇದೊಂಥರಾ ವಿಮಾನಗಳ ಸಂತೆಯಿದ್ದಂತೆ. ನಮ್ಮ ರೈತರು ತಾವು ಬೆಳೆದದ್ದನ್ನೆಲ್ಲಾ ತಂದು ಸಂತೆಯಲ್ಲಿ ಗುಡ್ಡೆ ಹಾಕಿ ಮಾರುವುದಿಲ್ಲವೇ? ಇದೂ ಹಾಗೆಯೇ. ದೇಶ-ವಿದೇಶಗಳಿಂದ ಆಗಮಿಸುವ ವಿಮಾನ ತಯಾರಿಕಾ ಸಂಸ್ಥೆಗಳು ತಮ್ಮ ದೇಶದ ಅತ್ಯಾಧುನಿಕ ಯುದ್ಧವಿಮಾನಗಳು, ಹೆಲಿಕಾಪ್ಟರ್‍ಗಳು ಹಾಗೂ ಕ್ಷಿಪಣಿಗಳನ್ನು ಪ್ರದರ್ಶಿಸುತ್ತವೆ ಹಾಗೂ ಮಾರಾಟಕ್ಕಿಡುತ್ತವೆ. ಅಷ್ಟೇ ಅಲ್ಲ, ಅವುಗಳ ತಾಂತ್ರಿಕ ಕೌಶಲದ ಬಗ್ಗೆ ಜಂಭವನ್ನೂ ಕೊಚ್ಚಿಕೊಳ್ಳುತ್ತವೆ. ಖರೀದಿಯ ಆಸಕ್ತಿಯುಳ್ಳ ವೈಮಾನಿಕ ಪ್ರಪಂಚದ ದೊಡ್ಡಣ್ಣರುಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಬಾರಿಯಂತೂ ಒಟ್ಟು 750ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದವು. 109 ದೇಶಗಳಿಂದ ಪರಿಣಿತರ ತಂಡಗಳು ಆಗಮಿಸಿದ್ದವು. ಉದ್ಯಮಿಗಳ ಸಂಖ್ಯೆಯಂತೂ ಒಂದೂವರೆ ಲಕ್ಷವನ್ನು ಮೀರಿತ್ತು! ಪ್ರಧಾನಿ ಮೋದಿಯವರೇ ಉದ್ಘಾಟಿಸಿದ ಮೇಲೆ ಕಾರ್ಯಕ್ರಮ ಕಳೆಗಟ್ಟದೆ ಇರುತ್ತದೆಯೇ? ಜೊತೆಗೆ 'ಮೇಕ್ ಇನ್ ಇಂಡಿಯಾ' ಎಂಬ ಘೋಷವಾಕ್ಯ ಬೇರೆ. ಅದಕ್ಕೆ ಕಾರಣವೂ ಇದೆ. ಇಂದು ಭಾರತ ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಆಮದೆಂದರೆ ಖಂಡಿತ ಹೆಗ್ಗಳಿಕೆಯಲ್ಲ. ಅತಿಯಾದ ಆರ್ಥಿಕ ಹೊರೆ. ಆದ್ದರಿಂದಲೇ ಅದನ್ನು ಸ್ವಲ್ಪ ಸ್ವಲ್ಪವಾಗಿಯೇ ತಹಬದಿಗೆ ತಂದು ರಫ್ತಿನಲ್ಲಿ ಮೊದಲಿಗರಾಗಬೇಕೆಂಬುದು ಮೋದಿಯವರ ಕನಸು. ಇಲ್ಲಿಯತನಕ ಏನಾಗುತ್ತಿತ್ತೆಂದರೆ ಬಿಡಿ ಭಾಗಗಳು ವಿದೇಶಗಳಲ್ಲಿ ತಯಾರಾಗಿ ಭಾರತಕ್ಕೆ ಬರುತ್ತಿದ್ದವು. ಇಲ್ಲಿ ಅವುಗಳ ಜೋಡಣೆ ಮಾತ್ರ ನಡೆಯುತ್ತಿದ್ದುದು. ಇನ್ನು ಮುಂದೆ ಬಿಡಿ ಭಾಗಗಳಿಂದ ಹಿಡಿದು ಸಮಸ್ತವನ್ನೂ ಭಾರತದಲ್ಲೇ ತಯಾರಿಸಿ ಜೋಡಿಸೋಣ ಎಂದು ಕರೆ ಕೊಟ್ಟಿದ್ದಾರೆ ಮೋದಿ. ಅವರ ಕರೆಗೆ ಹಲವು ದೇಶಗಳು ಸ್ಪಂದಿಸಿವೆ. ಪರಿಣಾಮವೇನಾಗುತ್ತದೋ ಕಾದು ನೋಡಬೇಕು.

ಉದ್ಯಮವಲಯಕ್ಕೆ ಸಂಬಂಧಿಸಿದ ವ್ಯಾವಹಾರಿಕ ವಿಷಯಗಳೇನೇ ಇರಲಿ, ನಮಗಂತೂ ಪ್ರತಿಬಾರಿಯೂ ಏರ್ ಶೋ ಎಂಬುದು ಸಡಗರದ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ. ಆಕಾಶದಲ್ಲಿ ಸಲೀಸಾಗಿ ಪಲ್ಟಿ ಹೊಡೆಯುವ, ವಿವಿಧ ಚಿತ್ತಾರಗಳನ್ನು ರಚಿಸುವ, ಆಕಾರಗಳನ್ನು ಹೆಣೆಯುವ, ಬೆಚ್ಚಿ ಬೀಳಿಸುವಂಥ ಸಾಹಸಗಳನ್ನು ಪ್ರದರ್ಶಿಸುವ ದೇಶಿ, ವಿದೇಶೀ ವೈಮಾನಿಕ ತಂಡಗಳೊಂದಿಗೆ ನಮಗೆ ಅದೇನೋ ಅನನ್ಯ ಬೆಸುಗೆ. ಉದಾಹರಣೆಗೆ ನಮ್ಮ ಹಿಂದೂಸ್ಥಾನ್ ಏರೋನಾಟಿಕ್ಸ್ ಸಂಸ್ಥೆಯ  ತೇಜಸ್ ಹಾಗೂ ಸೂರ್ಯಕಿರಣದ ತಂಡಗಳನ್ನೇ ತೆಗೆದುಕೊಳ್ಳಿ. 1998 ರಿಂದಲೂ ಅವುಗಳ ಸಾಹಸವನ್ನು ನೋಡುತ್ತಲೇ ಬಂದಿದ್ದೇವೆ. 2005 ರಿಂದ ಈ ಗುಂಪಿಗೆ ಸೇರ್ಪಡೆಗೊಂಡ ಸಾರಂಗ್ ತನ್ನ ಚೊಚ್ಚಲ ಪ್ರದರ್ಶನದಲ್ಲೇ ಎಲ್ಲರ ಮನಸೂರೆಗೊಂಡಿತ್ತು. 2007 ರಲ್ಲಂತೂ ಅಭ್ಯಾಸ ನಡೆಸುತ್ತಿರುವಾಗ ಒಂದು ಸಾರಂಗ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಅದರ ಸಹ ಪೈಲಟ್ ಮರಣ ಹೊಂದಿದ್ದ. ಅದಾಗ್ಯೂ ಆ ತಂಡ ತನ್ನ ಪ್ರದರ್ಶನವನ್ನು ರದ್ದು ಮಾಡಿರಲಿಲ್ಲ . ಇವುಗಳಷ್ಟೇ ಅಲ್ಲದೆ ರಷ್ಯಾ ದೇಶದ ಮಿಗ್ ವಿಮಾನ, ಅಮೆರಿಕದ ಎಫ್-15, ಫ್ರಾನ್ಸ್ ದೇಶದ ಮಿರಾಜ್ ಹಾಗೂ ಫಾಲ್ಕನ್, ಇಂಗ್ಲೆಂಡಿನ ಹಾಕ್ ಹಾಗೂ ಜಾಗ್ವರ್‍ಗಳ ದರ್ಪ ದೌಲತ್ತುಗಳನ್ನು ಒಮ್ಮೆ ನೋಡಿದವರು ಇನ್ನೆಂದಿಗೂ ಮರೆಯಲಾರರು. 2011ರ ಎಂಟನೆಯ ಆವೃತ್ತಿಯಲ್ಲಿ ಸೂರ್ಯಕಿರಣ ತನ್ನ ಕೊನೆಯ ಪ್ರದರ್ಶನ ನೀಡಿತು. ಏಕೆಂದರೆ ಅದಕ್ಕೆ ನಿವೃತ್ತಿ ನೀಡಿ ಆ ಮಾದರಿಯ ಬದಲು ಹಾಕ್ ವಿಮಾನಗಳನ್ನು ಬಳಸಿಕೊಳ್ಳುವ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ ಇಂದಿಗೂ ಜನ ಸೂರ್ಯಕಿರಣ್ ತಂಡದ ಪ್ರದರ್ಶನವನ್ನು ನೆನೆಯುತ್ತಾರೆ. ಈ ಬಾರಿಯ ಪ್ರದರ್ಶನಗಳನ್ನು ನೋಡಿದ ಬಹುತೇಕರಿಗೆ ಅನಿಸಿದ್ದು, 'ಛೆ, ಸೂರ್ಯಕಿರಣ ತಂಡವೂ ಇರಬೇಕಾಗಿತ್ತು' ಎಂದೇ. ಇಂಥ ಸಣ್ಣ ಪುಟ್ಟ ನಿರಾಸೆಗಳೇನೇ ಇದ್ದರೂ ಸುಮಾರು ಮೂರು ಲಕ್ಷ ಮಂದಿ ಈ ಬಾರಿಯ ಏರ್ ಶೋ ವೀಕ್ಷಿಸಿ ಆನಂದತುಂದಿಲರಾಗಿದ್ದಾರೆ.


 ಈ ಬಾರಿ ಭಾಗವಹಿಸಿದ್ದ ಕೆಲ ಮುಖ್ಯ ತಂಡಗಳೆಡೆ ಗಮನ ಹರಿಸೋಣ ಬನ್ನಿ. ಭಾರತೀಯ ವಾಯುಸೇನೆಯ ಹೆಮ್ಮೆಯ 'ಸಾರಂಗ್' ಹೆಲಿಕಾಪ್ಟರ್‍‍ಗಳ ತಂಡ ತನ್ನ ಅಮೋಘ ಪ್ರದರ್ಶನವನ್ನು ಎಂದಿನಂತೆ ಈ ಬಾರಿಯೂ ಮುಂದುವರೆಸಿತು. ಆ ತಂಡದಲ್ಲಿದ್ದ ಒಂದು ವಿಶೇಷವೇನು ಗೊತ್ತೇ? ಮೊತ್ತ ಮೊದಲ ಬಾರಿಗೆ ಇಬ್ಬರು ಮಹಿಳೆಯರು ತಂಡದಲ್ಲಿ ಸ್ಥಾನ ಪಡೆದದ್ದು! ಅದೊಂದೇ ಅಲ್ಲದೆ 'ಧ್ರುವ್' ಹೆಲಿಕಾಪ್ಟರ್‍ಗಳೂ ಮನಸೂರೆಗೊಳ್ಳುವ ಕಸರತ್ತು ನಡೆಸಿದವು. ಇನ್ನು ಇಂಗ್ಲೆಂಡಿನ ಏರೋಸೂಪರ್‍ಬ್ಯಾಟಿಕ್ಸ್ ತಂಡ ಬ್ರೆಟ್ಲಿಂಗ್‍ನ 'ವಿಂಗ್ ವಾಕರ್ಸ್' ಮಾಡಿದ ಮೋಡಿಯನ್ನಂತೂ ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ. ಭೂಮಿಯಿಂದ ನೂರಾರು ಅಡಿ ಎತ್ತರಕ್ಕೆ ಚಿಮ್ಮಿದ ಎರಡು ವಿಮಾನಗಳ ಮೇಲೆ ತಲಾ ಒಬ್ಬೊಬ್ಬರಂತೆ ಹತ್ತಿ ನಿಂತ ಲಲನೆಯರು ಕಸರತ್ತುಗಳನ್ನು ಮಾಡಿದ್ದೇ ಮಾಡಿದ್ದು. ಅದೂ ಏಕಕಾಲದಲ್ಲಿ, ಇಬ್ಬರ ನಡುವೆ  ಅಂಗಾಂಗಗಳ ಚಲನೆಯಲ್ಲಿ ಒಂಚೂರೂ ವ್ಯತ್ಯಾಸವಿಲ್ಲದಂತೆ! ಅವರು ನೀಡಿದ ಕರಾರುವಾಕ್ ಪ್ರದರ್ಶನ ಹೇಗಿತ್ತಪ್ಪಾ ಎಂದರೆ ಎರಡು ಬೊಂಬೆಗಳಿಗೆ ಒಂದೇ ಸಮಯಕ್ಕೆ ಕೀಲಿ ಕೊಟ್ಟು ಆಟವಾಡಲು ಬಿಟ್ಟಂತಿತ್ತು! ಅವರೇನೋ ಲೀಲಾಜಾಲವಾಗಿ ಮಾಡುತ್ತಿದ್ದರು, ಆದರೆ ನೆರೆದಿದ್ದ ಜನಸ್ತೋಮಕ್ಕೆ ತನ್ನ ಆಶ್ಚರ್ಯ, ಆತಂಕ ಹಾಗೂ ಮೆಚ್ಚುಗೆಗಳನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಸ್ವೀಡನ್ನಿನ ಏರೋಬ್ಯಾಟಿಕ್ ತಂಡ 'ಸ್ಕ್ಯಾಂಡಿನೇವಿಯನ್ ಏರ್ ಶೋ' ಭಾರತದ ಧ್ವಜದ ತ್ರಿವರ್ಣದ ರಂಗನ್ನು ಗಾಳಿಯಲ್ಲಿ ಚೆಲ್ಲಾಡಿ ಎಲ್ಲರನ್ನೂ ಪುಳಕಿತರನ್ನಾಗಿಸಿದ್ದೂ ಆಯಿತು. ರಷ್ಯನ್ ಏರೋಬ್ಯಾಟಿಕ್ ತಂಡ ‘ಯಾಕೋಲೆವ್’ ಪ್ರದರ್ಶಿಸಿದ ಮೈನವಿರೇಳಿಸುವ ಸಾಹಸವೂ ಕಡಿಮೆಯದ್ದಾಗಿರಲಿಲ್ಲ. ಇನ್ನೇನು, ಈ ಬಾರಿಯೂ ಎಲ್ಲವೂ ಸುಸೂತ್ರವಾಗಿ ಮುಗಿಯಿತು ಎಂದುಕೊಳ್ಳುತ್ತಿದ್ದಾಗಲೇ ಜೆಕ್ ಗಣರಾಜ್ಯದ ತಂಡ 'ರೆಡ್ ಬುಲ್ಸ್' ಒಂದು ಸಣ್ಣ ಅವಘಡವನ್ನೆದುರಿಸಿತು. ಪ್ರದರ್ಶನ ನೀಡುತ್ತಿರುವಾಗ ಸಮತೋಲನ ಕಳೆದುಕೊಂಡ ಅದರ ಎರಡು ವಿಮಾನಗಳ ರೆಕ್ಕೆಗಳು ಪರಸ್ಪರ ಬಡಿದುಕೊಂಡು ನೋಡುಗರಲ್ಲಿ ಗಾಬರಿ ಮೂಡಿಸಿದರೂ ತಕ್ಷಣವೇ ಸಂಭಾಳಿಸಿಕೊಂಡು ಭೂಮಿಗಿಳಿದಿದ್ದರಿಂದ ಯಾವುದೇ ಪ್ರಾಣಾಪಾಯಗಳಾಗಲಿಲ್ಲ. ಒಟ್ಟಾರೆ, ಪ್ರದರ್ಶಿಸಿದವರ ಹಾಗೂ ನೋಡುಗರ ಮನಃಪಟಲಗಳಲ್ಲಿ ಈ ವರ್ಷದ ‘ಏರ್ ಶೋ’ನ ನೆನಪುಗಳು ಬಹುಕಾಲದವರೆಗೆ ಉಳಿಯಲಿವೆ ಎಂಬುದಂತೂ ಸ್ಪಷ್ಟವಾಗಿತ್ತು


ಹಾಗಾದರೆ ಈ ಕಾರ್ಯಕ್ರಮದ ಮೂಲ ಉದ್ದೇಶವೇನು? ಒಂದೆಡೆ ವಿಮಾನ ತಯಾರಕರನ್ನು ಒಟ್ಟು ಮಾಡಿ ಪ್ರದರ್ಶನ ಏರ್ಪಡಿಸಿ, ಮತ್ತೊಂದೆಡೆ ವೈವಿಧ್ಯಮಯ ಸಾಹಸಗಳಿಂದ ಜನರ ಶಹಬ್ಬಾಸ್‍ಗಿರಿ ಪಡೆದರೆ ಕಾರ್ಯಕ್ರಮ ಸಾರ್ಥಕವಾಗಿದೆ ಎಂದರ್ಥವೇ? ಖಂಡಿತ ಇಲ್ಲ. ಸಾರ್ಥಕ್ಯದ ಹಾದಿ ಬಲು ಕಠಿಣವಿದೆ. ಬಲ ಕಳೆದುಕೊಂಡಿರುವ ನಮ್ಮ ರಕ್ಷಣಾ ವಲಯವನ್ನು ಸದೃಢಗೊಳಿಸಬೇಕಿದೆ. ನಮಗೆ ಶಸ್ತ್ರಾಸ್ತ್ರಗಳ, ಯುದ್ಧವಿಮಾನಗಳ ಅಗತ್ಯವಿದೆಯೆಂದು, ಕಿರಾಣಿ ಅಂಗಡಿಯಿಂದ ಸಾಮಾನು ಕೊಂಡಂತೆ ಜಾಗತಿಕೆ ಮಾರುಕಟ್ಟೆಯಿಂದ ಕೊಂಡುಕೊಳ್ಳುವುದರಲ್ಲಿ ಯಾವ ಜಾಣತನವೂ ಇಲ್ಲ. ಮಿಲಿಯಗಟ್ಟಳೆ ಹಣ ವ್ಯಯಿಸಿ ಸಾಲಗಾರರಾಗಿ ಅವುಗಳನ್ನು ಖರೀದಿಸುವುದಕ್ಕಿಂತ ಅವುಗಳ ತಯಾರಿಕೆಯ ತಂತ್ರಜ್ಞಾನವನ್ನು ಅರಿಯುವುದು ಇಂದಿನ ತುರ್ತು ಅಗತ್ಯ. ಆದ್ದರಿಂದಲೇ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೋದಿ ಸರ್ಕಾರ ಒಂದು ಉತ್ತಮ ಕೆಲಸ ಮಾಡಿದೆ. ಹೆಲಿಕಾಪ್ಟರ್‍ಗಳ ಹಾಗೂ ಜಲಾಂತರ್ಗಾಮಿ ಹಡಗುಗಳ ಖರೀದಿಗಾಗಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಕರೆದಿದ್ದ ಜಾಗತಿಕ ಟೆಂಡರನ್ನು ರದ್ದುಗೊಳಿಸಿದೆ. ಆ ಮೂಲಕ ಅದಕ್ಕೆ ವ್ಯಯವಾಗಲಿದ್ದ ಮಿಲಿಯಗಟ್ಟಳೆ ಡಾಲರುಗಳನ್ನು ಉಳಿಸಿದೆ. ಅದರ ಮುಂದುವರಿದ ಭಾಗವೇ ಏರೋ ಇಂಡಿಯಾದಲ್ಲಿ ಮಾರ್ದನಿಸಿದ 'ಮೇಕ್ ಇನ್ ಇಂಡಿಯಾ' ಎಂಬ ಘೋಷಣೆ. ತಾಂತ್ರಿಕ ಕೌಶಲವನ್ನು ಎರವಲು ಪಡೆದು ಎಲ್ಲವನ್ನೂ ನಮ್ಮಲ್ಲಿಯೇ ತಯಾರಿಸಿದರೆ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವುದೇ ಅಲ್ಲದೆ ರಕ್ಷಣಾ ಸಾಮಗ್ರಿಗಳ ಬರವೂ ನೀಗುತ್ತದೆ. ಆದ್ದರಿಂದಲೇ ಈ ವಿಷಯವನ್ನು ನಿಸ್ಸಂಕೋಚವಾಗಿ ಏರೋ ಇಂಡಿಯಾ ಉದ್ಘಾಟನೆಯಲ್ಲಿ ಹೇಳಿದರು ಮೋದಿ. 'ಭಾರತ ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ವಿಶ್ವದಲ್ಲೇ ಮೊದಲ ರಾಷ್ಟ್ರ ಎಂಬುದು ನಿಮ್ಮ ಕಿವಿಗೆ ಇಂಪಾಗಿರುವ ವಿಷಯ ನಿಜ, ಆದರೆ ಅದು ನಮಗೆ ಪ್ರಿಯವಾದದ್ದಲ್ಲ. ಯಾವುದರಲ್ಲಿ ಇರಬಾರದೋ ಅದರಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ನಮಗೆ ರಕ್ಷಣಾ ಸಾಮಗ್ರಿಗಳನ್ನು ಬರಿದೇ ಮಾರುವ ಬದಲಿಗೆ ತಂತ್ರಜ್ಞಾನದಲ್ಲಿ ಪಾಲುದಾರರಾಗಿ ಬನ್ನಿ' ಎಂದು ವಿದೇಶೀ ತಯಾರಕರನ್ನು ಕುರಿತು ಅವರು ಆಡಿದ ನೇರ ಮಾತುಗಳಲ್ಲಿ ಅವರ ಉದ್ದೇಶ ಸ್ಪಷ್ಟವಾಗಿತ್ತು.

ತಮ್ಮ ಮಾತುಗಳಿಗೆ ಇಂಬು ಕೊಡುವಂತೆ ಈ ವರ್ಷದ ಬಜೆಟ್‍ನಲ್ಲೂ ರಕ್ಷಣಾ ಇಲಾಖೆಯ ಅಭಿವೃದ್ಧಿಗೆ ಹೆಚ್ಚು ಹಣವನ್ನು ಮೀಸಲಿಟ್ಟಿದೆ ಮೋದಿ ಸರ್ಕಾರ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇನ್ನೊಂದು ದಶಕದಲ್ಲಿ ನಾವೂ ಅಮೆರಿಕ, ರಷ್ಯಾಗಳಿಗೆ ಪೈಪೋಟಿ ನೀಡುವುದು ಖಂಡಿತ. ಆ ‘ಅಚ್ಛೇ ದಿನಗಳು’ ಬೇಗ ಬರಲಿ ಎಂದು ಹಾರೈಸೋಣ ಅಲ್ಲವೇ?

Thursday, 19 February 2015

ಈ ಸಮಯ 'ಸಿರಿಸೇನಾ'ಮಯ!

ಅದು 1987ರ ಜುಲೈ 29. ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಶ್ರೀಲಂಕಾದ ಅಂದಿನ ಅಧ್ಯಕ್ಷ ಜೆ.ಆರ್. ಜಯವರ್ಧನೆ ಅಕ್ಕಪಕ್ಕದಲ್ಲಿ ಕುಳಿತು ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕಿದರು.  ಅದಕ್ಕೆ ಎರಡು ದಿನಗಳ ಹಿಂದಷ್ಟೇ ರಾಜೀವ್ ಎಲ್‍ಟಿಟಿಇನ ಮುಖ್ಯಸ್ಥ ಪ್ರಭಾಕರನ್ ಹಾಗೂ ಅವನ ಕುಟುಂಬವನ್ನು ದೆಹಲಿಗೆ ಕರೆಸಿಕೊಂಡಿದ್ದರು. ಅಲ್ಲಿ ಅವನನ್ನು ಭೇಟಿಯಾಗಿ, ಕುಶಲೋಪರಿ ನಡೆಸಿ ಅಶೋಕ ಹೋಟೆಲ್‍ನಲ್ಲಿ ಅವನಿಗೆ ಹಾಗೂ ಕುಟುಂಬಕ್ಕೆ ವಾಸ್ತವ್ಯ ಕಲ್ಪಿಸಿ ಇಲ್ಲಿ ಒಪ್ಪಂದಕ್ಕೆ ಸಹಿ ಮಾಡಲು ಬಂದಿದ್ದರು. ಒಪ್ಪಂದವಾದ ಮರುದಿನವೇ ಭಾರತದ ಶಾಂತಿ ಪಾಲನಾ ಪಡೆ ಲಂಕೆಗೆ ಬಂದಿಳಿಯಿತು. ಅದಾಗಿ ಸರಿಯಾಗಿ ಮೂರು ದಿನಗಳಿಗೆ, ಅಂದರೆ ಆಗಸ್ಟ್ ಎರಡರಂದು ಪ್ರಭಾಕರನ್‍ನನ್ನು ಶೀಲಂಕಾದ ಜಾಫ್ನಾ ಪಟ್ಟಣಕ್ಕೆ ಕ್ಷೇಮವಾಗಿ ವಾಪಸ್ ಕಳುಹಿಸಲಾಯಿತು. ರಾಜೀವ್ ಎಲ್ಲವೂ ಸುಸೂತ್ರವಾಗಿ ಮುಗಿಯಿತೆಂದು ನಿರಾಳವಾದರು. ತಾನು ಭಾರತ ಹಾಗೂ ಶ್ರೀಲಂಕಾದ ಸಂಬಂಧದ ಹೊಸ ಭಾಷ್ಯ ಬರೆದಿದ್ದೇನೆಂದು ಭಾವಿಸಿದ್ದರೇನೋ, ಆದರೆ ಅವರು ಬರೆದದ್ದು ತಮ್ಮದೇ ಸಾವಿನ ಮುನ್ನುಡಿಯಾಗಿತ್ತು!

ಭಾರತ ಹಾಗೂ ಶ್ರೀಲಂಕಾದ ನಡುವಿನ ಈ ಒಪ್ಪಂದಕ್ಕೆ ಕಾರಣವೂ ಇತ್ತು. 1977ರಿಂದ ಹಿಡಿದು 1987ರವರೆಗೂ ಸುಮಾರು ಒಂದು ದಶಕದ ಕಾಲ ಭಾರತ ಶ್ರೀಲಂಕಾದ ತಮಿಳರಿಗೆ ಬೆಂಬಲ ನೀಡುತ್ತಲೇ ಇತ್ತು. ಶ್ರೀಲಂಕಾ ಸರ್ಕಾರದ ವಿರೋಧದ ನಡುವೆಯೂ ತಮಿಳರ ಪ್ರತ್ಯೇಕತೆಯ ಕೂಗನ್ನು ಪೋಷಿಸಿಕೊಂಡೇ ಬಂದಿತ್ತು. ಹಾಗೆ ಜನ ಸಂಘಟನೆಯಿಂದ ಹಿಡಿದು ಶಸ್ತ್ರಾಸ್ತ್ರಗಳವರೆಗಿನ ತರಬೇತಿಯನ್ನು ನೀಡಿ ಹಾಲೆರೆದು ಪೋಷಿಸಿದ ಕೂಸೇ ಎಲ್‍ಟಿಟಿಇ! ಒಂದೆಡೆ ಬಲಿಷ್ಠವಾಗುತ್ತಿದ್ದ ಎಲ್‍ಟಿಟಿಇ, ಮತ್ತೊಂದೆಡೆ ಅದನ್ನು ಶತಾಯ ಗತಾಯ ಹಣಿಯಲೇಬೇಕೆಂದು ಹೆಣಗುತ್ತಿದ್ದ ಶ್ರೀಲಂಕಾ ಸರ್ಕಾರ. ಮಧ್ಯ ಸಿಲುಕಿ ನಲುಗುತ್ತಿದ್ದವರು ಲಂಕೆಯ ಶ್ರೀಸಾಮಾನ್ಯರು! ಕೊನೆಗೊಮ್ಮೆ ಶ್ರೀಲಂಕಾ ಸರ್ಕಾರ ಎಷ್ಟು ರೋಸಿಹೋಯಿತೆಂದರೆ, ಎಲ್‍ಟಿಟಿಇಯ ಕೇಂದ್ರ ಕಾರ್ಯಸ್ಥಾನವಾದ ಜಾಫ್ನಾ ಪಟ್ಟಣಕ್ಕೆ ಲಗ್ಗೆಯಿಟ್ಟಿತು. ಆಗ ರಾಜೀವ್ ಏನು ಮಾಡಿದರು ಗೊತ್ತೇ? ನಮ್ಮ ವಾಯುಸೇನೆಯ ಹೆಲಿಕಾಪ್ಟರ್‍ ಹಾಗೂ ಯುದ್ಧವಿಮಾನಗಳನ್ನು ಬಳಸಿಕೊಂಡು ಎಲ್‍ಟಿಟಿಇ ತಂಡಕ್ಕೆ ಆಕಾಶದಿಂದಲೇ ಆಹಾರ-ನೀರುಗಳನ್ನು ಸರಬರಾಜು ಮಾಡಿದರು! ಶ್ರೀಲಂಕಾ ಸರ್ಕಾರವೇನಾದರೂ ಮಧ್ಯ ಪ್ರವೇಶಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ನಮ್ಮ ದೇಶದಲ್ಲಿದ್ದ ಶ್ರೀಲಂಕಾದ ರಾಯಭಾರಿಗೆ ಧಮಕಿಯನ್ನೂ ಹಾಕಿದರು. ಇನ್ನು ಪೂರ್ಣ ಪ್ರಮಾಣದ ಯುದ್ಧವಾಗುವುದೊಂದೇ ಬಾಕಿಯಿದ್ದದ್ದು. ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡ ಶ್ರೀಲಂಕಾ ಸರ್ಕಾರ ಇದಕ್ಕೊಂದು ಕೊನೆ ಹಾಡಬೇಕೆಂದು ನಿರ್ಧರಿಸಿತು. ಅದರ ಫಲವೇ ಭಾರತ ಶ್ರೀಲಂಕಾ ಒಪ್ಪಂದ. ಅದರ ಪ್ರಕಾರ ನಿರ್ಧಾರವಾಗಿದ್ದು, ಶ್ರೀಲಂಕಾ ಸರ್ಕಾರ ಜಾಫ್ನಾದಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕು, ಎಲ್‍ಟಿಟಿಇ ತನ್ನ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ತಂದೊಪ್ಪಿಸಬೇಕು ಹಾಗೂ ಶಾಂತಿಯನ್ನು ಕಾಪಾಡಲು ಭಾರತ ಸರ್ಕಾರ ತನ್ನ ಶಾಂತಿ ಪಾಲನಾ ಪಡೆಯನ್ನು ಕಳಿಸಬೇಕು ಎಂದು.



ಒಪ್ಪಂದ ನಡೆಯುವ ಮುನ್ನ ತಮ್ಮ ಗುಂಡು ನಿರೋಧಕ ಕವಚವನ್ನೇ ಪ್ರಭಾಕರನ್‍ಗೆ ಪ್ರೀತಿಯಿಂದ ಕೊಟ್ಟು 'ನಿನ್ನ ಬಗ್ಗೆ ಕಾಳಜಿ ವಹಿಸು' ಎಂದಿದ್ದ ರಾಜೀವ್ ಪ್ರಭಾಕರನ್‍ನನ್ನು ಬಲವಾಗಿ ನಂಬಿದ್ದರು. ಒಪ್ಪಂದ ಮುಗಿಯುವಷ್ಟರಲ್ಲಿ ಇನ್ನೆಲ್ಲಿ ಅವನ ಜೀವಕ್ಕೆ ಸಂಚಕಾರ ಬರುತ್ತದೋ ಎಂದು ಅವನನ್ನು, ಅವನ ಕುಟುಂಬವನ್ನು ಜೋಪಾನ ಮಾಡಿದ್ದರು. ಆದರೆ ಪ್ರಭಾಕರನ್ ರಾಜೀವ್‍ರ ಒಪ್ಪಂದಕ್ಕೆ ಕವಡೆ ಕಾಸಿನ ಬೆಲೆಯನ್ನೂ ಕೊಡಲಿಲ್ಲ ನೋಡಿ, ಆಗಲೇ ಅವರಿಗೆ ತಾವೆಂಥ ಹಾವಿಗೆ ಹಾಲೆರೆದಿದ್ದೇವೆ ಎಂಬುದು ಅರಿವಾಗಿದ್ದು. ಅವನ ಹಾಗೂ ಅವನ ತಂಡದ ಉಪಟಳ ದಿನೇ ದಿನೇ ಹೆಚ್ಚುತ್ತಲೇ ಹೋಯಿತು. 1990ರ ಹೊತ್ತಿಗೆ ಭಾರತದ ಶಾಂತಿ ಪಾಲನಾ ಪಡೆಯ ಒಂದು ಸಾವಿರಕ್ಕೂ ಹೆಚ್ಚು ಸೈನಿಕರು ಹತರಾದರು. ಕೊನೆಗೆ ರಾಜೀವ್‍ಗೆ ಉಳಿದದ್ದು ಒಂದೇ ಮಾರ್ಗ, ಎಲ್‍ಟಿಟಿಇಯನ್ನು ಸದೆಬಡಿಯುವುದು. ಅದನ್ನು ಅವರು ಮನಸ್ಸಿನಲ್ಲೇ ನಿರ್ಧರಿಸಿಕೊಂಡು ಸುಮ್ಮನಿರಬಹುದಿತ್ತು. ಆದರೆ ವಿಧಿಯೆಂಬುದೂ ಒಂದಿದೆಯಲ್ಲ, 1990ರ ಆಗಸ್ಟ್ ತಿಂಗಳಿನಲ್ಲಿ ಸಂಡೇ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ 'ನಾನು ಮುಂದಿನ ಚುನಾವಣೆಯಲ್ಲಿ ಪ್ರಧಾನಿಯಾದರೆ ಎಲ್‍ಟಿಟಿಯ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳುತ್ತೇನೆ' ಎಂದು ಮುಲಾಜಿಲ್ಲದೆ ಹೇಳಿಬಿಟ್ಟರು. ಪ್ರಧಾನಿಯಾಗಲು ಬಿಟ್ಟರೆ ತಾನೇ ನಮ್ಮ ತಂಟೆಗೆ ಬರುವುದು ಎಂದುಕೊಂಡ ಪ್ರಭಾಕರನ್ ಮರುವರ್ಷ ಮೇ ತಿಂಗಳಿನಲ್ಲಿ ಬಾಂಬ್ ದಾಳಿಯೊಂದರಲ್ಲಿ ರಾಜೀವ್‍ರ ಕಥೆಯನ್ನೇ ಮುಗಿಸಿಬಿಟ್ಟ! ಅಲ್ಲಿಗೆ ಭಾರತ ಹಾಗೂ ಶ್ರೀಲಂಕಾದ ನಡುವಿನ ಕೊಂಡಿ ಕಳಚಿಬಿತ್ತು. ರಾಮಾಯಣದ ಭಾಷೆಯಲ್ಲಿ ಹೇಳುವುದಾದರೆ, ಲಂಕೆಯ ರಾವಣ ಭಾರತದ ರಾಮನನ್ನು ಸಂಹರಿಸಿಬಿಟ್ಟಿದ್ದ.

ಹೌದು, ಬೇರೆ ದೇಶಗಳ ಜೊತೆ ಸಂಬಂಧವನ್ನು ಬೆಳೆಸಲು ಆರ್ಥಿಕ, ವಾಣಿಜ್ಯ, ಅಭಿವೃದ್ಧಿಯ ಕಾರಣಗಳಿಗಾಗಿ ತಡಕಾಡುತ್ತೇವೆ. ಆದರೆ ಲಂಕೆಯ ವಿಷಯದಲ್ಲಿ ಅವುಗಳ ಅಗತ್ಯವೇ ಇಲ್ಲ. ರಾಮಾಯಣವೆಂಬ ಕಥೆಯನ್ನು, ರಾಮನೆಂಬ ಆದರ್ಶ ಪುರುಷನನ್ನು ದೇವರೆಂದು ನೆನೆದಾಗಲೊಮ್ಮೆ ಲಂಕೆಯೂ ಕಣ್ಮುಂದೆ ಸುಳಿಯಲೇ ಬೇಕು. ಇಂದಿನ ನೇಪಾಳದ ಜನಕಪುರಿಯಲ್ಲಿ ಜನಿಸಿದ ಸೀತೆ, ಅಯೋಧ್ಯೆಯ ರಾಮನನ್ನು ವರಿಸಿ, ನಾಸಿಕ್‍ನ ಹತ್ತಿರವಿರುವ ಪಂಚವಟಿಯಲ್ಲಿದ್ದಳು ಎನ್ನುವವರೆಗೆ ಮಾತ್ರ ಭಾರತದ ಪಾತ್ರ. ನಂತರ ರಾಮಾಯಣವೆಲ್ಲವೂ ಲಂಕಾಮಯವೇ! ಅವಳನ್ನು ಅಪಹರಿಸಿದ ರಾವಣನನ್ನು ಬೆಂಬೆತ್ತಿ ಹೋದ ವಾನರ ಸೇನೆ ನಿರ್ಮಿಸಿದ ರಾಮ ಸೇತುವನ್ನು, ಲಂಕೆಯಲ್ಲಿರುವ ರಾವಣನ ದೇಗುಲ ಅಥವಾ ಸೀತೆಯ ಅಶೋಕವನವನ್ನು ನೋಡುವಾಗ, ರಾಮಾಯಣ ಬರೀ ಕಾಲ್ಪನಿಕ ಕಥೆ ಎಂದು ವಾದಿಸುವವರು ಕೆಲ ಕ್ಷಣಗಳ ಮಟ್ಟಿಗಾದರೂ ಮೂಗರಾಗಲೇಬೇಕು! ಇಂದಿಗೂ ಲಂಕೆಯ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸುಮಾರು ಮೂವತ್ತು ಜಾಗಗಳಿವೆ! ಐತಿಹ್ಯವೇ ಬೆಸೆದಿರುವ ಈ ತಂತುವನ್ನು ನಾವು ಭಾವರಹಿತವಾಗಿ ಕಡಿದುಕೊಂಡಿದ್ದೇಕೆ ಎಂಬುದು ಮಾತ್ರ ಅರ್ಥವಾಗುವುದಿಲ್ಲ.

ಇರಲಿ, 2009ರಲ್ಲಿ ನಾವು ಲೋಕಸಭಾ ಚುನಾವಣೆಯಲ್ಲಿ ಕಳೆದುಹೋಗಿದ್ದಾಗ ಶ್ರೀಲಂಕಾ ಪ್ರಭಾಕರನ್‍ನನ್ನು ಹೊಡೆದುರುಳಿಸಿತು. ಆಗ ಅದು ಭಾರತದ ಸಹಾಯವನ್ನೇನೂ ಬೇಡಲಿಲ್ಲ. ಅದಕ್ಕೂ ಮುಂಚೆ, ಅಂದರೆ 2005ರಲ್ಲಿ ಮಹಿಂದಾ ರಾಜಪಕ್ಷೆ ಶ್ರೀಲಂಕಾದ ಅಧ್ಯಕ್ಷರಾದ ಮೇಲೆ ಅದು ತಾನು ಭಾರತದ ಗೆಳೆಯ ಎಂದು ಹೇಳಿಕೊಂಡರೂ ಸಾಬೀತು ಮಾಡುವ ಪ್ರಯಾಸವನ್ನೇನೂ ಮಾಡಲಿಲ್ಲ. ನಾವೂ ಅಷ್ಟೇ. ಬೇರೆ ದೇಶಗಳ ಜೊತೆ 'ಟೂ' ಬಿಟ್ಟಷ್ಟೇ ಸಲೀಸಾಗಿ ಇದರ ಜೊತೆಗೂ ಬಿಟ್ಟೆವು. ನಾವು ಇಂಚಿಂಚೇ ಹೊರಬಂದೆವಲ್ಲ, ಚೀನಾ ಮೆಲ್ಲನೆ ಒಳಸರಿಯಿತು. ಲಂಕೆಯಲ್ಲಿ ತನ್ನ ಬಂಡವಾಳವನ್ನು ಧಾರಾಳವಾಗಿ ಹೂಡಿತು. ಅದಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನೆಲ್ಲ ತಾನೇ ಸರಬರಾಜು ಮಾಡಿತು. ರಾಜಪಕ್ಷೆಯವರಿಗಂತೂ ಚೀನಾವೇ ಅಪ್ಯಾಯಮಾನವಾಗಿತ್ತು. ಈ ನಂಟು ಬರೀ ಅವೆರಡು ದೇಶಗಳಿಗೆ ಸೀಮಿತವಾಗಿದ್ದಿದ್ದರೆ ಭಾರತ ಕಳವಳಪಡಬೇಕಾಗಿರಲಿಲ್ಲ. ಆದರೆ ಕಳೆದ ವರ್ಷ ಚೀನಾದ ಜಲಾಂತರ್ಗಾಮಿ ಹಡಗುಗಳು ಎರಡು ಬಾರಿ ಲಂಕೆಯ ಬಂದರಿನಲ್ಲಿ ಲಂಗರು ಹಾಕಿ ನಿಂತವಲ್ಲ, ಆಗ ಭಾರತಕ್ಕೆ ತಳಮಳ ಶುರುವಾಯಿತು. ಆಷ್ಟೇ ಅಲ್ಲ, ಸರ್ವಾಧಿಕಾರಿಯಂತೆ ಆಡತೊಡಗಿದ್ದ ರಾಜಪಕ್ಷೆ ಸಂಪುಟದ ತುಂಬೆಲ್ಲ ತಮ್ಮ ಬಂಧು-ಬಾಂಧವರನ್ನೇ ತುಂಬಿಕೊಂಡಿದ್ದರು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಲಂಕೆಯ ಅಧ್ಯಕ್ಷರಾಗಲು ಇದ್ದ ಎರಡು ಅವಧಿಗಳ ಮಿತಿಯನ್ನೂ ಕಿತ್ತು ಹಾಕಿದ್ದರು. ತಮ್ಮ ಎರಡನೆಯ ಅವಧಿ ಮುಗಿದ ನಂತರವೂ ಅಧಿಕಾರದಲ್ಲೇ ಮುಂದುವರೆಯುವುದು ಅವರ ಹುನ್ನಾರವಾಗಿತ್ತು. ಚೀನಾಗೆ ಬೇಕಾಗಿದ್ದಿದ್ದೂ ಅದೇ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ತಾನೇ?



ಆದರೆ ಕಳೆದ ನವೆಂಬರ್‍ನಲ್ಲಿ ಪವಾಡವೊಂದು ನಡೆದು ಹೋಯಿತು. ರಾಜಪಕ್ಷೆಯ ಸಂಪುಟದಲ್ಲೇ ಆರೋಗ್ಯ ಸಚಿವರಾಗಿದ್ದ ಮೈತ್ರಿಪಾಲ ಸಿರಿಸೇನಾ ತಾನು ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಬಿಟ್ಟರು. ಅವರಿಗೆ ರಾವಣ ಬುದ್ಧಿಕೊಟ್ಟನೋ ರಾಮ ಬುದ್ದಿಕೊಟ್ಟನೋ ಅವರೇ ಹೇಳಬೇಕು. ಆದರೆ ಶ್ರೀಲಂಕಾದ ಕೆಲವು ಸುದ್ದಿ ಮಾಧ್ಯಮಗಳ ಪ್ರಕಾರ ಅವರಿಗೆ ಬುದ್ಧಿ ಕೊಟ್ಟದ್ದು ಭಾರತ ಸರ್ಕಾರದ ಗುಪ್ತಚರ ದಳವಂತೆ! ಅಲ್ಲಿಯ ಬೇಹುಗಾರರೊಬ್ಬರು ಸಿರಿಸೇನಾರ ಮನವೊಲಿಸಿದ್ದೂ ಅಲ್ಲದೆ ಅವರ ಪರವಾಗಿ ಹಲವು ಪ್ರಭಾವಿ ಮಾಜಿ ಅಧ್ಯಕ್ಷರು ಹಾಗೂ ಪ್ರಧಾನಮಂತ್ರಿಗಳನ್ನು ಸಂಘಟಿಸಿದರಂತೆ! ಅದರ ಫಲವೇ ಸಿರಿಸೇನಾರಿಗೆ ದಕ್ಕಿದ ವಿಜಯವಂತೆ. ಹಿಂದೊಮ್ಮೆ ಭಾರತ ಲಂಕೆಯ ಅಂತರಂಗಕ್ಕೆ ನೇರವಾಗಿ ಕೈಹಾಕಿ ಕದಡಿತ್ತು. ಈ ಬಾರಿ ಪರೋಕ್ಷವಾಗಿ ಕೈಯ್ಯಾಡಿಸಿ ತನ್ನ ಕಾರ್ಯ ಸಾಧಿಸಿಕೊಂಡಿದೆ ಎಂಬ ಗುಮಾನಿ ಎಲ್ಲರದೂ. ಇಂಥ ವಿಷಯಗಳನ್ನು ಯಾರೂ ನೇರವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಸೂಚ್ಯವಾಗಿ ತಮ್ಮ ನಡವಳಿಕೆಯಿಂದ ಅರ್ಥ ಮಾಡಿಸುತ್ತಾರೆ. ಚುನಾವಣೆಯ ಫಲಿತಾಂಶ ಪ್ರಕಟವಾದ ಕೆಲ ತಾಸುಗಳಲ್ಲೇ ಭಾರತದ ರಾಯಭಾರಿ ವೈ.ಕೆ ಸಿನ್ಹಾ ಸಿರಿಸೇನಾರನ್ನು ಭೇಟಿಯಾಗಿ ಶುಭಕೋರಿದರೆ, ಚೀನಾದ ರಾಯಭಾರಿಗೆ ಅವಕಾಶ ಸಿಕ್ಕಿದ್ದು ಬರೋಬ್ಬರಿ ಆರು ದಿನಗಳ ನಂತರ!

ಮರ್ಮಾಘಾತವಾಗಿರುವುದು ತಾನು ಸೋಲುತ್ತೇನೆ ಎಂದು ಕನಸಿನಲ್ಲೂ ನಿರೀಕ್ಷಿಸದಿದ್ದ ರಾಜಪಕ್ಷೆಗೆ ಮಾತ್ರವಲ್ಲ, ಇಂಥ ಫಲಿತಾಂಶವನ್ನು ನಿರೀಕ್ಷಿಸದಿದ್ದ ಚೀನಾಕ್ಕೂ. ಸಿರಿಸೇನಾ ತಮ್ಮ ಹಿಂದಿನ ಸರ್ಕಾರ ಕೈಗೊಂಡಿದ್ದ ಅನೇಕ ನಡೆಗಳನ್ನು ಪ್ರಶ್ನಿಸಿದ್ದಾರೆ. ಆಂತರಿಕವಾಗಿ ಅವರೇನೇ ಮಾಡಿಕೊಳ್ಳಲಿ, ನಮ್ಮ ಕಾಳಜಿಯಿರುವುದು ಅವರು ಚೀನಾದೊಂದಿಗೆ ವ್ಯವಹರಿಸುವ ಬಗ್ಗೆ. ಅದು ಅರ್ಥವಾಗಿದೆಯೆಂಬಂತೆ ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಭಾರತವನ್ನೇ ಆಯ್ದುಕೊಂಡು ಬಂದಿದ್ದಾರೆ. ಈಗಿನ ಅವರ ಭೇಟಿ ನಮಗೆ ಬಹಳ ಮುಖ್ಯ. ಒಪ್ಪಂದಗಳಿರುವ ಕಾಗದದ ಮೇಲೆ ಬೀಳುವ ಶಾಯಿಯ ಮೊಹರಿಗಿಂತ ಹೃದಯಗಳಲ್ಲಿ ಅಚ್ಚೊತ್ತುವ ನಂಬಿಕೆ, ವಿಶ್ವಾಸಗಳ ಗುರುತು ಸ್ಥಾಯಿಯಾಗಲಿದೆ.

ಭೂಪಟದಲ್ಲಿರುವಂತೆ ಭಾರತದ ನಕ್ಷೆಯನ್ನು ಬರೆಯಿರಿ ಎಂದಾಗ ನಾವು ಬರೆಯುತ್ತಿದ್ದುದು ಹೇಗೆ ಹೇಳಿ? ಉತ್ತರ, ಪೂರ್ವ, ಪಶ್ಚಿಮಗಳನ್ನು ವಕ್ರರೇಖೆಗಳಲ್ಲಿ ಬಿಡಿಸಲು ತಿಣುಕಾಡಿ, ಕ್ಯಾರಟ್‍ಅನ್ನೋ ಮೂಲಂಗಿಯನ್ನೋ ಹೋಲುವಂತೆ ದಕ್ಷಿಣ ಭಾರತವನ್ನು ಸುಲಭವಾಗಿ ಬಿಡಿಸಿ, ಕೆಳಗೆ ಅದರ ಬಲಕ್ಕೆ ಮಚ್ಚೆಯಂತೆ ಎರಡು ಚುಕ್ಕಿಗಳನ್ನಿಟ್ಟು ಅದರ ಕೆಳಗೆ ನೀರಿನ ಹನಿಯ ಆಕಾರದ ಲಂಕೆಯನ್ನು ಬಿಡಿಸುವುದು. ಯಾವುದನ್ನು ಬರೆಯುವುದು ಕಷ್ಟವಾದರೂ ಲಂಕೆ ಸುಲಭವಾಗಿ ಮೂಡುತ್ತಿತ್ತು ಅಲ್ಲವೇ? ಅದರಲ್ಲಿ ತಪ್ಪಾಗುವುದಿಲ್ಲವೆಂಬ ಖಾತ್ರಿಯೂ ಇರುತ್ತಿತ್ತು. ಅದಿಲ್ಲದ ಭಾರತದ ನಕ್ಷೆ ಎಂದಾದರೂ ನಮಗೆ ಪೂರ್ಣವೆನಿಸುತ್ತಿತ್ತೇ? ನಿಜವಾಗಿಯೂ ಭಾರತಕ್ಕಂಟಿದ ಬಾಲಂಗೋಚಿ ಶ್ರೀಲಂಕಾ ಎನಿಸುವುದು ಅದಕ್ಕೇ.
ನಕ್ಷೆಯಲ್ಲಿ ಬೆಸೆದುಕೊಂಡಿರುವುದು ಈಗ ಹೃದಯಗಳಲ್ಲೂ ಮೂಡಬೇಕಾಗಿದೆ. ಎರಡೂ ರಾಷ್ಟ್ರಗಳ ಕ್ಷೇಮದ, ಅಭಿವೃದ್ಧಿಯ ನೆಪದಲ್ಲಾದರೂ ಇದು ಸಾಧ್ಯವಾದೀತಾ? ಕಾದು ನೋಡೋಣ.

Tuesday, 10 February 2015

ಗಂಡೆದೆಯ ಕಾರ್ಯಾಚರಣೆಯನ್ನು ನಡೆಸುವುದು ‘ಬೇಬಿ’ಯಂಥ ತಂಡವೇ!

BABY! ಇದು ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಚಿತ್ರ. ಚಿತ್ರದ ಹೆಸರು ಸೂಚಿಸುವಂತೆ ಇದು ಯಾವ ಮಗುವಿನ ಕಥೆಯೂ ಅಲ್ಲ, ಬದಲಿಗೆ, ಉಗ್ರರನ್ನು ಹಿಡಿಯುವ ಕಮಾಂಡೋಗಳ ತಂಡದ ಹೆಸರು! ಇದು,  ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡ ಇಂಡಿಯನ್ ಮುಜಾಹಿದ್ದೀನ್‍ನ ಉಗ್ರನೊಬ್ಬನನ್ನು ಹಿಡಿಯಲು ಹರಸಾಹಸ ಪಡುವ ಭಾರತೀಯ ಕಮಾಂಡೋಗಳ ಕಥೆ. ಕಾರ್ಯಾಚರಣೆಯೊಂದನ್ನು ಹೆಣೆದು ಯಶಸ್ವಿಗೊಳಿಸಲು ಎಷ್ಟೆಲ್ಲಾ ತಿಣುಕಾಡಬೇಕಾಗುತ್ತದೆ ಎಂಬುದರಿಂದ ಹಿಡಿದು ಉಗ್ರವಾದದ ಹಿಂದಿರುವ ಪಾಕಿಸ್ತಾನದ ಕೈವಾಡದವರೆಗಿನ ಎಲ್ಲವನ್ನೂ ಈ ಚಿತ್ರ ಬಹಳ ಚೆನ್ನಾಗಿ ಬೆತ್ತಲಾಗಿಸುತ್ತದೆ. ಆದ್ದರಿಂದಲೇ ಇದು ಪಾಕಿಸ್ತಾನದಲ್ಲಿ ನಿಷೇಧಿಸಲ್ಪಟ್ಟಿದೆ! ಅದಿರಲಿ, ಮಹತ್ವದ ವಿಷಯವೇನೆಂದರೆ ಈ ಚಿತ್ರದಲ್ಲಿ ಬರುವ ಕಥೆ ಕಾಲ್ಪನಿಕವಾದುದಲ್ಲ. ತಮ್ಮ ಮನೆ-ಮಠ, ಸಂಸಾರ, ಕೊನೆಗೆ ಅಸ್ತಿತ್ವವನ್ನೇ ಒತ್ತೆಯಿಟ್ಟು ಹೋರಾಡುತ್ತಾರಲ್ಲ ಕಮಾಂಡೋಗಳು, ಆ ಪಾತ್ರಗಳನ್ನು ನಮ್ಮಲ್ಲಿ ಹುಚ್ಚು ಆವೇಶ ತುಂಬಲು ಸುಮ್ಮನೆ ಸೃಷ್ಟಿಸಿಲ್ಲ. ನಿಮಗೆ ಗೊತ್ತಿರಲಿ, ಸಿಕ್ಕಿಬೀಳುವ ಪ್ರತಿಯೊಬ್ಬ ಉಗ್ರನ ಹಿಂದೆಯೂ 'ಬೇಬಿ'ಯಂಥ ತಂಡದ ಕೈವಾಡವಿದ್ದೇ ಇರುತ್ತದೆ. ಅಂಥದ್ದೇ ಒಂದು ತಂಡ 2013ರಲ್ಲಿ ರೋಚಕ ಕಾರ್ಯಾಚರಣೆಯೊಂದನ್ನು ನಡೆಸಿತ್ತು. ಪರಿಣಾಮವೇ ಯಾಸಿನ್ ಭಟ್ಕಳ್‍ನ ಬಂಧನ!


ಯಾಸಿನ್ ಭಟ್ಕಳ್‍‍ನ ಜಾತಕ ನಿಮಗೆ ಗೊತ್ತಿದೆಯಲ್ಲವೇ? ಅವನು ಇಂಡಿಯನ್ ಮುಜಾಹಿದ್ದೀನ್ ಎಂಬ ಉಗ್ರ ಸಂಘಟನೆಯ ಮೂಲ ಶಕ್ತಿಯಾಗಿದ್ದುದು ಮಾತ್ರವಲ್ಲ, ತನ್ನ ಮೇಲೆ ಸುಮಾರು ಮೂರೂವರೆ ಕೋಟಿ ರೂಪಾಯಿಗಳ ಇನಾಮು ಹೊಂದಿದ್ದ! ಹನ್ನೆರಡಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಾತಕವೆಸಗಿ, ನೂರಾರು ಜನರ ಸಾವಿಗೆ ಕಾರಣನಾಗಿ, ಇಗೋ ಸೆರೆ ಸಿಕ್ಕ ಎನ್ನುವಷ್ಟರಲ್ಲಿ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುವ ನಿಸ್ಸೀಮನೂ ಆಗಿದ್ದ. ಅಂಥವನನ್ನು ನಮ್ಮ ವಿಶೇಷ ಕಾರ್ಯಾಚರಣೆ ಪಡೆ ಬಂಧಿಸಿದ್ದು ಹೇಗೆ ಎಂಬ ಕುತೂಹಲ ಮೂಡುವುದು ಸಹಜವಲ್ಲವೇ? ಕೆದಕುತ್ತ ಹೋದಾಗ ಉತ್ತರದ ರೂಪದಲ್ಲಿ ಸಿಕ್ಕ, ಓಪನ್ ಎಂಬ ನಿಯತಕಾಲಿಕದ ಲೇಖನದ ಆಯ್ದ ಭಾಗ ನಿಮ್ಮ ಓದಿಗಾಗಿ ಇಲ್ಲಿದೆ.


ಅದು 2013ರ ಆಗಸ್ಟ್ ತಿಂಗಳ 13ನೇ ತಾರೀಖು. ಗುಪ್ತಚರ ದಳದ(IB) ಜಂಟಿ ನಿರ್ದೇಶಕರು ಬಿಹಾರದ ರಾಜಧಾನಿ ಪಾಟ್ನಾದ ತಮ್ಮ ಆಫೀಸಿನಲ್ಲಿ ಒಂದು ಸಭೆ ನಡೆಸುತ್ತಿದ್ದರು. ಏನಾಗಿತ್ತೆಂದರೆ, ಇಶ್ರತ್ ಜಹಾನ್‍ಳ ಎನ್‍ಕೌಂಟರ್ ನಕಲಿಯೆಂದು ಬೊಬ್ಬೆ ಹೊಡೆಯುತ್ತಿದ್ದ ಕೇಂದ್ರೀಯ ತನಿಖಾ ದಳ(CBI), ಆರೋಪವನ್ನೆಲ್ಲ ಗುಪ್ತಚರ ದಳದ ಮೇಲೆ ಹೊರಿಸಿ ಕೈತೊಳೆದುಕೊಂಡು ಬಿಟ್ಟಿತ್ತು. ಆ ವಿಷಯವಾಗಿಯೇ ಜಂಟಿ ನಿರ್ದೇಶಕರು ತಮ್ಮ ಕೈಕೆಳಗಿನ ಅಧಿಕಾರಿಗಳ ಜೊತೆ ಚರ್ಚಿಸುತ್ತಿದ್ದರು. ತಮ್ಮ ಸಿಬ್ಬಂದಿಯ ಕುಗ್ಗಿದ್ದ ಮನೋಬಲವನ್ನು ಹೆಚ್ಚಿಸುವುದರಲ್ಲಿ ಮಗ್ನರಾಗಿದ್ದರು. ಆಗ ಇದ್ದಕ್ಕಿದ್ದಂತೆಯೇ ಆ ಅಧಿಕಾರಿಗಳ ಪೈಕಿ ಒಬ್ಬರ ಫೋನ್ ರಿಂಗಣಿಸಿತು. ಕರೆ ಮಾಡುತ್ತಿರುವವರು ಯಾರೆಂದು ನೋಡಿದೊಡನೆಯೇ ಆತ ರೂಮಿನಿಂದ ಹೊರಗೆ ಓಡಿದರು! ಅತ್ತ ಕಡೆಯವರು ಹೇಳಿದ ವಿಷಯವನ್ನು ಕೇಳಿ ಅವಾಕ್ಕಾದರು. ಅವರಿಗೆ ಕರೆ ಮಾಡಿದ್ದು ಮತ್ತ್ಯಾರೂ ಅಲ್ಲ, ಪಕ್ಕದ ನೇಪಾಳದ ಪೋಖ್ರಾ ಎಂಬ ಊರಿನಲ್ಲಿದ್ದ ಅವರ ರಹಸ್ಯ ಮಾಹಿತಿದಾರ. ಕರೆ ಮಾಡಿದ್ದ ಕಾರಣವೇನು ಗೊತ್ತೇ? ಯಾಸಿನ್ ಭಟ್ಕಳ್‍ನನ್ನು ತಾನು ಈಗಷ್ಟೇ ನೋಡಿದೆ ಎಂದು ಹೇಳಲು! ಅವನ ಪ್ರಕಾರ ಯಾಸಿನ್ ತನ್ನನ್ನು ಡಾಕ್ಟರ್ ಯೂಸುಫ್ ಎಂದು ಪರಿಚಯಿಸಿಕೊಂಡು ತಾನೊಬ್ಬ ಯುನಾನಿ ವೈದ್ಯ ಎಂದು ಹೇಳಿಕೊಳ್ಳುತ್ತಿದ್ದನಂತೆ. ‘ನಾನು ಕಳಿಸಿದ ಫೋಟೋದಲ್ಲಿರುವ ವ್ಯಕ್ತಿಯ ಹಾಗೇ ಕಾಣುತ್ತಾನೆ ಅಲ್ಲವೇ ನೋಡಲು?’ ಎಂದು ಆ ಅಧಿಕಾರಿ ಕೇಳಿದಾಗ ಮಾಹಿತಿದಾರ ಖಡಾಖಂಡಿತವಾಗಿ ಹೇಳಿಬಿಟ್ಟ. 'ಫೋಟೋದಲ್ಲಿರುವಂತೆ ಗಡ್ಡ ಬಿಟ್ಟಿಲ್ಲ, ನುಣ್ಣಗೆ ಬೋಳಿಸಿಕೊಂಡಿದ್ದಾನೆ. ಆದರೆ ಕಣ್ಣುಗಳು ಮಾತ್ರ ಅವೇ. ಸಂಶಯವೇ ಇಲ್ಲ. ತನ್ನ ಹೆಂಡತಿ ದೆಹಲಿಯಲ್ಲಿದ್ದಾಳೆ ಹಾಗೂ ತಂದೆ-ತಾಯಿ ದುಬೈನಲ್ಲಿದ್ದಾರೆ ಎಂದೂ ಹೇಳುತ್ತಾನೆ' ಎಂದು. ಇಷ್ಟು ಕೇಳಿದ್ದೇ, ಅವನಿಗೆ ಧನ್ಯವಾದ ಹೇಳಿ ಮತ್ತೆ ಒಳಗೆ ಓಡಿದರು ಆ ಅಧಿಕಾರಿ.

ವಿಷಯವನ್ನು ತಮ್ಮ ಮೇಲಾಧಿಕಾರಿಗೆ ಹೇಳುತ್ತಿದ್ದಂತೆಯೇ ಅವರು ತಮ್ಮ ಮೇಲಿನವರಿಗೂ ಆಗಲೇ ಸುದ್ದಿ ಮುಟ್ಟಿಸಿದರು. ಅವನೇ ಯಾಸಿನ್ ಎಂಬುದು ಎಲ್ಲರಿಗೂ ಖಾತ್ರಿಯಾಗಿತ್ತು. ಏಕೆಂದರೆ ಯುನಾನಿ ವೈದ್ಯನಾಗಿ ವೇಷ ಮರೆಸಿಕೊಳ್ಳುವುದು ಯಾಸಿನ್‍ನ ಹೆಗ್ಗುರುತಾಗಿತ್ತು. ಅವನ ಹೆಂಡತಿ ಮತ್ತು ತಂದೆ-ತಾಯಿಯರು ಇದ್ದ ಸ್ಥಳದ ಬಗ್ಗೆ ಅವನು ಕೊಟ್ಟಿದ್ದ ಮಾಹಿತಿಯೂ ಸರಿಯಾಗಿಯೇ ಇತ್ತು. ಆದರೂ ದೆಹಲಿಯ ಉನ್ನತಾಧಿಕಾರಿಗಳಿಗೆ ನಂಬಿಕೆ ಬರಲಿಲ್ಲ. ಇಶ್ರತ್‍ಳ ಪ್ರಕರಣದಲ್ಲಿ ಛಡಿಯೇಟು ತಿಂದಿದ್ದವರು ಇದಕ್ಕೆ ಹೇಗೆ ಕೈ ಹಾಕಿಯಾರು? ಆ ಅಧಿಕಾರಿಯೂ ಬಿಡಲಿಲ್ಲ. 'ಸರ್, ಈ ಅವಕಾಶವನ್ನು ಕೈಚೆಲ್ಲುವುದು ಮೂರ್ಖತನವಾದೀತು. ನನ್ನ ಮಾಹಿತಿದಾರ ಹೇಳಿದ್ದನ್ನು ಅಲ್ಲಗಳೆಯುವಂತಿಲ್ಲ, ಹೇಗಾದರೂ ಮಾಡಿ ದೆಹಲಿಯವರನ್ನು ಒಪಿಸಿ' ಎಂದು ದುಂಬಾಲು ಬಿದ್ದರು. ಮತ್ತೊಮ್ಮೆ ದೆಹಲಿಯ ಬಾಗಿಲು ಬಡಿದ ಜಂಟಿ ನಿರ್ದೇಶಕರಿಗೆ ಕೊನೆಗೂ ಹಲವು ಶರತ್ತುಗಳೊಂದಿಗೆ ಒಪ್ಪಿಗೆ ದೊರೆಯಿತು.

ಈ ಕಾರ್ಯಾಚರಣೆ ಎಲ್ಲೂ ಔಪಚಾರಿಕವಾಗಿ ದಾಖಲಾಗುವಂತಿರಲಿಲ್ಲ. ಕಾರ್ಯಾಚರಣೆಗೆ ಹೋಗುವವರು ತಮ್ಮ ಗುರುತಿನ ಚೀಟಿಗಳನ್ನೂ ಕೊಂಡೊಯ್ಯುವಂತಿರಲಿಲ್ಲ. ಜೀವ ಹೋಗಿಬಿಟ್ಟರಂತೂ ಸರಿಯೇ ಸರಿ, ಒಂದೊಮ್ಮೆ ಬದುಕಿ ಯಾರ ಕೈಗಾದರೂ ಸಿಕ್ಕಿ ಜೈಲು ಪಾಲಾದರೆ ತಮ್ಮ ನಿಜ ನಾಮಧೇಯ, ಕೆಲಸ ಇತ್ಯಾದಿಗಳ ಬಗ್ಗೆ ಬಾಯಿ ಬಿಡುವಂತಿರಲಿಲ್ಲ. ಇವರು ಸೋತರೆ, ಜಂಟಿ ನಿರ್ದೇಶಕರ ಕೆಲಸಕ್ಕೂ ಕುತ್ತು ಕಾದಿತ್ತು. ವಿಶೇಷ ಕಾರ್ಯಾಚರಣೆ ಪಡೆಯ ಮುಖ್ಯಸ್ಥರಾಗಿದ್ದ ಆ ಅಧಿಕಾರಿ ಎಲ್ಲದಕ್ಕೂ ಕಣ್ಮುಚ್ಚಿ ಹೂಂ ಎಂದರು. ತಮ್ಮೊಡನೆ ಇನ್ನೂ ನಾಲ್ಕು ಜನರನ್ನು ಸೇರಿಸಿಕೊಂಡು ಐವರ ತಂಡವನ್ನು ಕಟ್ಟಿಕೊಂಡರು. ಜೊತೆಗೆ ಬಿಹಾರ ಹಾಗೂ ನೇಪಾಳದ ಗಡಿಗಳ ಪರಿಚಯವಿದ್ದ ಪೋಲೀಸ್ ಅಧಿಕಾರಿಯೊಬ್ಬರನ್ನು ಜೊತೆಗೆ ಹೊರಡಿಸಿಕೊಂಡರು.

ವಿಶೇಷ ಕಾರ್ಯಾಚರಣೆ ಪಡೆಯೇನೋ ಸಿದ್ಧವಾಯಿತು, ಆದರೆ ಹೋಗಿ ಬರುವ ಖರ್ಚು-ವೆಚ್ಚ? ಒಪ್ಪಿಗೆ ದೊರೆತದ್ದೇ ದೊಡ್ಡ ವಿಷಯ, ಇನ್ನು ಖರ್ಚಿಗೆ ದುಡ್ಡು ಕೇಳಿದರೆ ಕೊಡುತ್ತಾರೆಯೇ ಎಂದು ಅನುಮಾನಿಸಿದ ಅಧಿಕಾರಿ ತಾವೇ ಗೆಳೆಯರ ಬಳಿ 40 ಸಾವಿರ ರೂಪಾಯಿಗಳನ್ನು ಎರವಲು ಪಡೆದರು! ಜೊತೆಗಿದ್ದ ಪೋಲೀಸ್ ಅಧಿಕಾರಿಯೂ 80 ಸಾವಿರ ರೂಪಾಯಿಗಳ ವ್ಯವಸ್ಥೆ ಮಾಡಿದರು. ಅಂದ ಹಾಗೆ, ಕಾರ್ಯಾಚರಣೆಗಿಳಿದಾಗ ತಮ್ಮ ಸಂಬಳದ ಹಣವನ್ನು ಹೀಗೆ ಖರ್ಚು ಮಾಡುವುದು ವಿಶೇಷ ಪಡೆಯ ಅಧಿಕಾರಿಗಳ ಮಾಮೂಲು ಅಭ್ಯಾಸವಂತೆ. ಹಾಗಂತ ಅವರೇನು ಪ್ರತಿ ತಿಂಗಳೂ ಲಕ್ಷಗಟ್ಟಳೆ ಎಣಿಸುವವರಲ್ಲ. ಆದರೆ ಅವರ ಧಮನಿಗಳಲ್ಲಿ ರಕ್ತಕ್ಕಿಂತ ಹೆಚ್ಚಾಗಿ ಹರಿಯುವ ದೇಶಪ್ರೇಮ ಅವರನ್ನು ಬಿಡಬೇಕಲ್ಲ?

ಅಂದು ಆಗಸ್ಟ್ 20ನೇ ತಾರೀಖು. ಆ ತಂಡ ಎರಡು ಜೀಪುಗಳಲ್ಲಿ ನೇಪಾಳದ ಪೋಖ್ರಾಗೆ ಹೊರಟಿತು. ಪೋಲೀಸ್ ಅಧಿಕಾರಿಯನ್ನು ತಮ್ಮ ಜೊತೆ ಸೇರಿಸಿಕೊಂಡಿದ್ದ ವಿಷಯ ಆ ಐವರನ್ನು ಬಿಟ್ಟರೆ ಮತ್ತ್ಯಾರಿಗೂ ಗೊತ್ತಿರಲಿಲ್ಲ. ಪೋಖ್ರಾ ತಲುಪಿದೊಡನೆ ಗುಂಪಿನ ನೇತೃತ್ವ ವಹಿಸಿದ್ದ ಅಧಿಕಾರಿ ಮಾಡಿದ ಮೊತ್ತ ಮೊದಲ ಕೆಲಸ, ಆ ಮಾಹಿತಿದಾರನನ್ನು ಖುದ್ದು ಭೇಟಿಯಾಗಿದ್ದು. ಎಕೆಂದರೆ ಇಲ್ಲಿಯತನಕ ಅವನೊಡನೆ ಮಾತನಾಡಿದ್ದರೇ ವಿನಾ ಅವನನ್ನು ನೋಡಿರಲಿಲ್ಲ. ಅವನು ಸುಳ್ಳು ಮಾಹಿತಿ ನೀಡಿ ಇವರನ್ನು ಸಿಕ್ಕಿಸುವ ಸಾಧ್ಯತೆಯೂ ಬಹಳಷ್ಟಿತ್ತು. ಅವನೊಡನೆ ಮಾತನಾಡಿದ ಮೇಲೇ ಅವರಿಗೆ ನಿರಾಳವಾಗಿದ್ದು. ಇನ್ನು ಮುಂದಿನ ಕೆಲಸ ಯಾಸಿನ್‍ನ ಅಡಗುತಾಣವನ್ನು ಪತ್ತೆ ಮಾಡುವುದು.

ಯಾಸಿನ್‍‍ನನ್ನು ತಲುಪಲು ಅವನಿಗೆ ಆಪ್ತನಾಗಿದ್ದ ಅಬ್ದುಲ್ಲಾ ಎಂಬಾತನ ನೆರವಿನ ಅಗತ್ಯವಿತ್ತು. ಅಬ್ದುಲ್ಲಾನಿಗೆ ಗಾಳ ಹಾಕಲು ಆ ಅಧಿಕಾರಿ ಮತ್ತೆ ಮಾಹಿತಿದಾರನನ್ನೇ ಉಪಯೋಗಿಸಿಕೊಂಡರು. ವೈದ್ಯನ ಬಳಿ ಹೋಗುವವನು ರೋಗಿಯೇ ತಾನೆ? ತನಗೆ ಹುಷಾರಿಲ್ಲವೆಂದೂ, ತಾನು ಯುನಾನಿ ಔಷಧಿಯನ್ನು ಮಾತ್ರ ತೆಗೆದುಕೊಳ್ಳುತ್ತೇನೆಂದೂ ಅವನು ಹೇಳಿದಾಗ ಅಬ್ದುಲ್ಲಾ ಅವನನ್ನು ವೈದ್ಯರ ಬಳಿ ಕರೆದೊಯ್ಯಲು ಒಪ್ಪಿದ. ಇದಕ್ಕಾಗಿಯೇ ಹೊಂಚು ಹಾಕಿ ಕಾದಿದ್ದ ತಂಡ ಅವರಿಬ್ಬರನ್ನು ಹಿಂಬಾಲಿಸಿತು. ಬಾಡಿಗೆ ಮೋಟಾರ್‍ಬೈಕುಗಳ ಮೇಲೆ, ಟೀ ಶರ್ಟ್ ಹಾಗೂ ಬರ್ಮುಡಾಗಳನ್ನು ತೊಟ್ಟು ಹೊರಟ ಇವರನ್ನು ಪೋಲೀಸರು ಎಂದು ದೇವರಾಣೆಗೂ ಹೇಳಲು ಸಾಧ್ಯವಿರಲಿಲ್ಲ. ಕಾರಿನಲ್ಲಿ ಮುಂದೆ ಹೊರಟ ಅಬ್ದುಲ್ಲಾ ಮತ್ತು ಆ ಮಾಹಿತಿದಾರ ಹೋಗಿ ತಲುಪಿದ್ದು ಹೆದ್ದಾರಿಯ ಅಂಚಿನಲ್ಲಿದ್ದ ಮನೆಯೊಂದನ್ನು.

ಆ ಮಾಹಿತಿದಾರನೇನೂ ಸುಮ್ಮನೆ ಹೋಗಿರಲಿಲ್ಲ. ಅವನಿಗೂ ಕೆಲವು ಹೋಂವರ್ಕ್ ಗಳನ್ನು ನೀಡಿ ಕಳಿಸಲಾಗಿತ್ತು. ವೈದ್ಯರ ಧ್ವನಿಯನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ತರುವುದು ಒಂದಾದರೆ, ಅವರ ಹಣೆಯ ಮೇಲೆ ಗಾಯದ ಗುರುತಿದೆಯಾ ಎಂಬುದನ್ನು ಗಮನಿಸುವುದು ಇನ್ನೊಂದು. ಇಷ್ಟೆಲ್ಲ ಮೊದಲ ಭೇಟಿಯಲ್ಲೇ ಸಾಧ್ಯವಾಗುತ್ತದೆಂಬ ಭರವಸೆಯಂತೂ ಇರಲಿಲ್ಲ. ಅಂತೂ ಆಗಸ್ಟ್ 24ರಂದು ವೈದ್ಯರ ಧ್ವನಿಮುದ್ರಣ ಸಿಕ್ಕಿತು. ಅದನ್ನು ಕೇಳಿದೊಡನೆ ಆ ವೈದ್ಯರೇ ಯಾಸಿನ್ ಸಾಹೇಬರು ಎಂಬುದು ಖಾತ್ರಿಯಾಯಿತು. ತಕ್ಷಣವೇ ಜಂಟಿ ನಿರ್ದೇಶಕರಿಗೆ ಫೋನಾಯಿಸಿದರು ಅಧಿಕಾರಿ. 'ನಿಜ ತಾನೆ?' ಎಂಬ ಅವರ ಪ್ರಶ್ನೆಗೆ '200 ಪ್ರತಿಶತ ನಿಜ ಸರ್' ಎಂಬ ಉತ್ತರವನ್ನಿತ್ತರು. ನಿಖರತೆಯ ಪ್ರಾಮುಖ್ಯದ ಅರಿವು ಇಬ್ಬರಿಗೂ ಇತ್ತು. ಬೇರೊಂದು ದೇಶಕ್ಕೆ ಹೋಗಿ, ಬರೀ ಅನುಮಾನದ ಆಧಾರದ ಮೇಲೆ ಯಾರನ್ನೂ ಬಂಧಿಸುವುದು ಸಾಧ್ಯವಿರಲಿಲ್ಲ. ಒಂದು ಪಕ್ಷ ಅವರು ನಿರಪರಾಧಿಯೆಂಬುದು ಸಾಬೀತಾದರೆ ಇವರಿಗೆ ಉಳಿಗಾಲವಿರಲಿಲ್ಲ.

ಯಾಸಿನ್‍ನನ್ನು 'ಎತ್ತಿಹಾಕಿಕೊಂಡು' ಬರಲು ಇವರೇನೋ ತಯಾರಿದ್ದರು, ಅದರೆ ದೆಹಲಿಯವರು ಹೂಂ ಅನ್ನಬೇಕಲ್ಲ? ಬದಲಿಗೆ ನೇಪಾಳ ಸರ್ಕಾರದೊಂದಿಗೆ ತಕ್ಷಣವೇ ಮಾತುಕತೆ ನಡೆಸಿ ಅಲ್ಲಿಯ ಪೋಲೀಸರಿಗೆ ಮಾಹಿತಿ ರವಾನಿಸಿದರು. ಆಗಲೂ ನಮ್ಮ ತಂಡಕ್ಕೆ ಸಿಕ್ಕಿದ್ದು ಬರೀ ಶರತ್ತುಗಳೇ. ನೇಪಾಳದ ಪೋಲೀಸರು ಅವನನ್ನು ಹಿಡಿಯುವ ತನಕ ನಮ್ಮವರು ಮಧ್ಯ ಪ್ರವೇಶಿಸಬಾರದು. ಅವನು ನಿರಪರಾಧಿಯೆಂದು ಸಾಬೀತಾದರೆ ಅವನನ್ನು ಬಿಟ್ಟುಬಿಡಬೇಕು ಇತ್ಯಾದಿ. ಕಾರ್ಯಾಚರಣೆಯನ್ನು ರಾತ್ರಿಯೇ ನಡೆಸಬೇಕು ಎಂಬ ಕಟ್ಟಪ್ಪಣೆ ಬೇರೆ. ಅಂತೂ 28ರ ದಿನಾಂಕ ನಿಗದಿಯಾಯಿತು. ದುರದೃಷ್ಟವೆಂಬಂತೆ ಅಂದು ಸಂಜೆಯಿಂದಲೇ ಧಾರಾಕಾರ ಮಳೆ ಶುರುವಾಯಿತು. ನೇಪಾಳದ ಪೋಲೀಸರು ‘ಇವತ್ತು ಬೇಡ, ಮಳೆಯಿದೆ’ ಎಂದುಬಿಟ್ಟರು. ನಮ್ಮವರ ಹಟದಿಂದ ಅಂತೂ ರಾತ್ರಿ ಎಂಟು ಘಂಟೆಗೆ ಮನೆಯೊಳಗೆ ಹೋದರು. ಅತ್ತ ಅವರು ಹೋದರೆ ಇತ್ತ ಇವರು ಹೊರಗೆ ಚಾತಕ ಪಕ್ಷಿಗಳಂತೆ ಕಾಯುತ್ತ ನಿಂತರು. ಸುಮಾರು ಹತ್ತು ಘಂಟೆಗೆ ನೇಪಾಳದ ಭಾರತೀಯ ದೂತಾವಾಸ ಕಚೇರಿಯಿಂದ ನಮ್ಮ ಪೋಲೀಸರಿಗೆ ಫೋನ್ ಬಂತು. ಮಾತನಾಡಿದ್ದು ಭಾರತೀಯ ಪೋಲೀಸ್ ಅಧಿಕಾರಿಯೇ. 'ಸುಮ್ಮನೆ ನಿರಪರಾಧಿಯನ್ನು ಹಿಡಿದಿದ್ದೀರ. ಅವನೊಬ್ಬ ಸಾಮಾನ್ಯ ಟರ್ಬೈನ್ ಎಂಜಿನಿಯರ್' ಎಂದು ರೇಗಿದರು ಆತ. ಇವರಿಗೂ ರೇಗಿ ಹೋಯಿತು. 'ನೀವು ಐಪಿಎಸ್ ಮಾಡಿರುವುದೇ ನಿಜವಾದರೆ, ಒಬ್ಬ ಯುನಾನಿ ವೈದ್ಯ ತನ್ನನ್ನು ಟರ್ಬೈನ್ ಇಂಜಿನಿಯರ್ ಎಂದು ಹೇಳಿದಾಗಲೇ ನಿಮಗೆ ಅರ್ಥವಾಗಬೇಕು' ಎಂದು ಮಾರುತ್ತರ ನೀಡಿದರು. ಹತ್ತು ನಿಮಿಷಗಳ ನಂತರ ಯಾಸಿನ್‍ನೊಂದಿಗೆ ಹೊರಬಂದರು ಪೋಲೀಸರು. ಕಾದಿದ್ದ ನಮ್ಮವರು ಅವನ ಮೇಲೆರಗುತ್ತಿದ್ದಂತೆಯೇ ಅವನು ತನ್ನ ನಿಜ ಪರಿಚಯವನ್ನು ಹೇಳಿಕೊಂಡ. ಅವನ ಜೊತೆ ಸಿಮಿ ಸಂಘಟನೆಯ ಅಸಾದುಲ್ಲ ಅಖ್ತರ್‍ನೂ ಸೆರೆ ಸಿಕ್ಕ. ಇಬ್ಬರನ್ನೂ ಹಿಡಿದು ಇನ್ನೂ ಸರಿಯಾಗಿ ಗಡಿಯವರೆಗೂ ತಂದಿರಲಿಲ್ಲ, ಅಷ್ಟರಲ್ಲೇ ನಮ್ಮ ಗೃಹ ಸಚಿವಾಲಯ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗಳು ತಾವೇ ಅವನನ್ನು ಹಿಡಿದದ್ದು ಎಂದು ಬೆನ್ನುತಟ್ಟಿಕೊಳ್ಳುವ ಪೈಪೋಟಿಗೆ ಬಿದ್ದಿದ್ದವು!


 ಹೀಗೆ ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಂಡು ಯಾಸಿನ್‍ನನ್ನು ಸೆರೆ ಹಿಡಿದವರಿಗೆ ಸಿಕ್ಕಿದ್ದೇನು ಗೊತ್ತೇ? ಗುಪ್ತಚರ ದಳದ ಜಂಟಿ ನಿರ್ದೇಶಕರಿಗೆ ಒಂದು ಪ್ರಶಸ್ತಿ ಪತ್ರ ಹಾಗೂ ವಿಶೇಷ ಪಡೆಯ ಅಧಿಕಾರಿಗೆ ಒಂದು ಲಕ್ಷ ರೂಪಾಯಿಗಳ ನಗದು! ಮೊದಲು ಆತನಿಗೆ ಮೂರುವರೆ ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದ್ದ ಸುಶೀಲ್ ಶಿಂಧೆಯವರ ಗೃಹ ಸಚಿವಾಲಯ ನಂತರ ಅದನ್ನು ನಾಚಿಕೆಯಿಲ್ಲದೆ ಹಿಂಪಡೆಯಿತು. ಅದು ನೀಡಿದ ಕಾರಣ, ಆತ ಮಾಡಿದ್ದು ತಮ್ಮ ಕರ್ತವ್ಯವನ್ನೇ, ಅದರಲ್ಲೇನೂ ಹೆಚ್ಚುಗಾರಿಕೆಯಿಲ್ಲ ಎಂಬುದು!

ಈಗ ಹೇಳಿ, ಬೆಳಗಿನ ಬಿಸಿಬಿಸಿ ಕಾಫಿ ಹೀರುತ್ತಾ, 'ಆ ಉಗ್ರ ಸೆರೆಸಿಕ್ಕನಂತೆ' ಎಂದು ಪೇಪರಿನಲ್ಲಿ ಓದುವ ನಮಗೆ ಅದೂ ಉಳಿದವುಗಳಂತೆ ಒಂದು ಸುದ್ದಿ ಎನಿಸಿಬಿಡುತ್ತದೆ ಅಲ್ಲವೇ? ಇಂಥ ಸುದ್ದಿಗಳ ರೂವಾರಿಗಳಾಗುವವರ ಗಂಡೆದೆ, ಧೈರ್ಯ, ಸಾಹಸ, ತ್ಯಾಗಗಳು, ನಮ್ಮನ್ನು ಬಹುತೇಕ ತಟ್ಟುವುದೇ ಇಲ್ಲ. ನೀರಜ್ ಪಾಂಡೆಯಂಥ ನಿರ್ದೇಶಕರು ಧೈರ್ಯವಾಗಿ 'ಬೇಬಿ'ಯ ರೂಪದಲ್ಲಿ ಬಿಡಿಸಿ ಹೇಳಿದರೂ ಅದು ನಮ್ಮ ದಪ್ಪ ಚರ್ಮದೊಳಗೆ ಇಳಿಯುವುದಿಲ್ಲ. ಅಲ್ಕಾಳಂಥ ಹೆಣ್ಣುಮಗಳು ಅಪ್ಪನ ಕಳೇಬರದ ಮುಂದೆ ನಿಂತು, 'ನನ್ನನ್ನು ಬಿಟ್ಟು ಹೋದೆಯಲ್ಲ, ಇನ್ಯಾರನ್ನು ಅಪ್ಪಾ ಎನ್ನಲಿ?' ಎಂದು ಅಳುವುದನ್ನು ಬಿಟ್ಟು ಗೂರ್ಖಾ ರೆಜಿಮೆಂಟಿನ ಯುದ್ಧಘೋಷವನ್ನು ಕೂಗುತ್ತಾಳಲ್ಲ ಆಗ ಎಲ್ಲೋ ಕೆಲವೊಮ್ಮೆ ತಟ್ಟುತ್ತದೆ.

ಆದರೆ ನಮ್ಮ ಕಡೆಯಿಂದ ಇಷ್ಟು ಸಂವೇದನೆ ಸಾಕೇ?

                                                                                                                                                                    

Thursday, 5 February 2015

ಒಬಾಮಾ 'ಬರಾಕ್' ಒಪ್ಪಿದ್ದೇಕೆ?

ಅದು 1994ರ ಮೇ ತಿಂಗಳು. ನಮ್ಮ ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್ ಅಮೆರಿಕಕ್ಕೆ ಭೇಟಿಯಿತ್ತಿದ್ದರು. ಕೈಬೀಸಿಕೊಂಡು ಹಾಗೆ ಹೋಗಿ ಹೀಗೆ ಬರುವ ಉದ್ದೇಶ ಅವರದ್ದಾಗಿರಲಿಲ್ಲ. ಆರ್ಥಿಕವಾಗಿ ಭಾರತವನ್ನು ಸಬಲಗೊಳಿಸುವ, ಅದಕ್ಕಾಗಿ ವಿಶ್ವದ ದೊಡ್ಡಣ್ಣ ಅಮೆರಿಕದೊಂದಿಗೆ ಕೈಜೋಡಿಸುವ ದೊಡ್ಡದೊಂದು ಕನಸು ಅವರಿಗಿತ್ತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದವರು ಬಿಲ್ ಕ್ಲಿಂಟನ್. ಅವರು ನರಸಿಂಹರಾವ್‍ರ ದೂರದರ್ಶಿತ್ವವುಳ್ಳ ಆಶೋತ್ತರಗಳಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ ಸಕಾರತ್ಮಕವಾಗಿಯೇ ಸ್ಪಂದಿಸಿದ್ದರು. ಹೀಗೆ, ಭಾರತದ ಪಾಲಿಗೆ ಅವಕಾಶಗಳ ಬಾಗಿಲು ತೆಗೆಯುವುದು ಖಚಿತವಾಗುತ್ತಿದ್ದಂತೆ ನೆಮ್ಮದಿಯಾಗಿ ಹಿಂದಿರುಗಿದ್ದರು ನರಸಿಂಹರಾವ್!

ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ತಮ್ಮ ಭೇಟಿಯನ್ನು ಸಾರ್ಥಕಗೊಳಿಸಿದ ಕ್ಲಿಂಟನ್‍ರಿಗೆ ಹೇಗೆ ಧನ್ಯವಾದ ಅರ್ಪಿಸುವುದು ಎಂಬ ಯೋಚನೆಯಲ್ಲಿ ಬಿದ್ದರು. ಆಗ ಅವರಿಗೆ ನೆನಪಾಗಿದ್ದೇ 1995ರ ಗಣರಾಜ್ಯೋತ್ಸವದ ಸಂದರ್ಭ! ಕ್ಲಿಂಟನ್‍ರನ್ನೇಕೆ ಮುಖ್ಯ ಅತಿಥಿಯಾಗಿ ಕರೆಸಬಾರದು ಎಂಬ ಆಲೋಚನೆ ಬಂದದ್ದೇ ತಡ, ಅದನ್ನು ತಮ್ಮ ವಿದೇಶಾಂಗ ಕಾರ್ಯದರ್ಶಿ ಕೃಷ್ಣನ್ ಶ್ರೀನಿವಾಸನ್‍ರ ಗಮನಕ್ಕೆ ತಂದರು. ಹೀಗೆ ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಲು ಅಮೆರಿಕಕ್ಕೆ ಮೊತ್ತ ಮೊದಲ ಆಹ್ವಾನ ಹೋಗಿದ್ದು 1994ರ ವರ್ಷಾಂತ್ಯದಲ್ಲಿ! ಬಹುಶಃ ನರಸಿಂಹರಾವ್‍ರಿಗಿದ್ದ ಸಂಭ್ರಮ ಕ್ಲಿಂಟನ್‍ರಿಗಿರಲಿಲ್ಲವೇನೋ. ಜೊತೆಗೆ ಸರಿ ಸುಮಾರು ಅದೇ ಸಮಯಕ್ಕೆ (ಜನವರಿ 26ರ ಆಸುಪಾಸು) ಅಮೆರಿಕದ ಅಧ್ಯಕ್ಷರು ತಮ್ಮ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಪರಿಪಾಠ ವರ್ಷಗಳಿಂದ ಚಾಲ್ತಿಯಲ್ಲಿದೆ. ಅದೇ ಕಾರಣವನ್ನು ಮುಂದೊಡ್ಡಿ ನರಸಿಂಹರಾವ್‍ರ ಆಹ್ವಾನವನ್ನು ಕ್ಲಿಂಟನ್ ನಯವಾಗಿ ತಿರಸ್ಕರಿಸಿದರು! ಪುರಸ್ಕರಿಸಲೇಬೇಕಾದ ಅನಿವಾರ್ಯತೆಯನ್ನು ಆಗಿನ ಕಾಲಕ್ಕೆ ಭಾರತ ಒಂದು ದೇಶವಾಗಿ ಇನ್ನೂ ಸೃಷ್ಟಿಸಿರಲಿಲ್ಲ ಎಂಬುದೂ ಅಷ್ಟೇ ಸತ್ಯ ಬಿಡಿ.

ಪಾಪ, ನರಸಿಂಹರಾವ್ ಅಂದು ಅದೆಷ್ಟು ನಿರಾಶರಾದರೋ! ನಿಮಗೆ ಗೊತ್ತಿರಲಿ, ಭಾರತ ಹಾಗೂ ಅಮೆರಿಕದ ಆರ್ಥಿಕ ಸಂಬಂಧಗಳಿಗೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟ ಮೊತ್ತ ಮೊದಲ ಪ್ರಧಾನಿ ನರಸಿಂಹರಾವ್! ಇಂದು ಲಕ್ಷಾಂತರ ಭಾರತೀಯರು ಒಂದು ಕಾಲನ್ನು ಇಲ್ಲಿ, ಮತ್ತೊಂದು ಕಾಲನ್ನು ಅಮೆರಿಕದಲ್ಲಿ ಇಟ್ಟಿರುವುದಕ್ಕೆ, ಪ್ರತಿ ಡಾಲರ್ ಗಳಿಸಿದಾಗಲೂ x ‍‍‍65 ರೂಪಾಯಿ ಎಂದು ಮನಸ್ಸಿನಲ್ಲೇ ಗುಣಾಕಾರ ಹಾಕಿಕೊಳ್ಳುವುದಕ್ಕೂ ಅವರೇ ಕಾರಣ! ಅಂಥ ಬುದ್ಧಿವಂತ ಹಾಗೂ ದೂರದೃಷ್ಟಿಯುಳ್ಳವರಾಗಿದ್ದ ಮಾಜಿ ಪ್ರಧಾನಿಯನ್ನು ಅವರದ್ದೇ ಆದ ಕಾಂಗ್ರೆಸ್ ಪಕ್ಷ ಸ್ಮರಿಸದೇ ಇದ್ದರೂ ಪರವಾಗಿಲ್ಲ, ನಾವುಗಳಂತೂ ಈಗ ಖಂಡಿತ ನೆನೆಯಲೇಬೇಕು.

ಏಕೆಂದರೆ…

ಇಪ್ಪತ್ತು ವರುಷಗಳ ತರುವಾಯ ಇತಿಹಾಸ ಮರುಕಳಿಸಿದೆ! ನರಸಿಂಹರಾವ್‍ರ ಜಾಡನ್ನೇ ಅನುಸರಿಸಿದ ಭಾರತದ ಮತ್ತೋರ್ವ ಪ್ರಧಾನಿ ಅಮೆರಿಕಕ್ಕೆ ಆಹ್ವಾನ ನೀಡಿ, ಅವರು ಅದನ್ನು ಸ್ವೀಕರಿಸಿ ಭಾರತಕ್ಕೆ ಬಂದೂ ಆಗಿದೆ. ಬರಾಕ್ ಒಬಾಮಾರ ಉಪಸ್ಥಿತಿಯಲ್ಲಿ ನಡೆದ ನಿನ್ನೆಯ ಗಣರಾಜ್ಯೋತ್ಸವ ಎಷ್ಟು ಅದ್ಧೂರಿಯಾತ್ತಲ್ಲವೇ? ಎಲ್ಲೆಲ್ಲೂ ಶಿಸ್ತು, ಭಾವೈಕ್ಯತೆ, ದೇಶಪ್ರೇಮಗಳ ರಂಗು ರಂಗಿನ ಸಿಂಚನ. ಹಾಗೇ, ಮರಣೋತ್ತರವಾಗಿ ನೀಡಲಾದ ಅಶೋಕ ಚಕ್ರವನ್ನು ಪಡೆಯಲು ಬಂದ ವೀರಯೋಧರ ಮಡದಿಯರನ್ನು ನೋಡಿದಾಗ ಹೃದಯ ಭಾರವಾಗಿ, ಗಂಟಲ ಸೆರೆಯುಬ್ಬಿ ಬಂದು ಕಣ್ಣಂಚಿನಲ್ಲಿ ನೀರಾಡಿದ್ದರೂ ಆಶ್ಚರ್ಯವಿಲ್ಲ! ಹೆಮ್ಮೆಯಿಂದ ಎದೆಯುಬ್ಬಿಸಿ ಪಥಸಂಚಲನ ಮಾಡಿದ ನಮ್ಮ ಸೇನಾ ತುಕಡಿಗಳ ಸ್ಫೂರ್ತಿ ಇಮ್ಮಡಿಯಾಗಿದ್ದರೆ, ನೋಡಿ ಆನಂದಿಸಿದ ನಮ್ಮ ಅಭಿಮಾನ ನೂರ್ಮಡಿಯಾಗಿತ್ತು. ಹೌದು. ಅಂತಹುದೇ ಸಂತಸ ಒಬಾಮಾರ ಮುಖದ ಮೇಲೂ ಮಿನುಗುತ್ತಿತ್ತು. ಮೋದಿಯವರು ತಮ್ಮನ್ನು ಸ್ವಾಗತಿಸಿದ ಪರಿಯನ್ನು, ತಮ್ಮೊಡನೆ ನಡೆಸಿದ 'ಚಾಯ್ ಪೆ ಚರ್ಚಾ'ಗಳನ್ನು ಮುಕ್ತವಾಗಿ ಶ್ಲಾಘಿಸಿದ ಒಬಾಮಾರಿಗೆ ಭಾರತದ ಈ ಭೇಟಿ ಅವಿಸ್ಮರಣೀಯವಾಗಲಿದೆ!


ಒಬಾಮಾರ ಈ ಭೇಟಿಯಲ್ಲಿ ಎರಡು ಪ್ರಥಮಗಳಿವೆ. ಮೊದಲನೆಯದು, ನಮ್ಮ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಬರುತ್ತಿರುವ ಅಮೆರಿಕದ ಮೊತ್ತಮೊದಲ ಅಧ್ಯಕ್ಷರೆಂಬುದು. ಎರಡನೆಯದು, ತಮ್ಮ ಅಧಿಕಾರಾವಧಿಯಲ್ಲಿ ಭಾರತಕ್ಕೆ ಎರಡನೆಯ ಬಾರಿ ಭೇಟಿ ನೀಡುತ್ತಿರುವ ಮೊತ್ತಮೊದಲ ಅಧ್ಯಕ್ಷರೆಂಬುದು. ಒಬಾಮಾರಿಗೆ ಪ್ರತಿ ವರ್ಷದಂತೆಯೇ ಈ ಬಾರಿಯೂ ತಮ್ಮ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವಿತ್ತು. ಅದನ್ನೇ ನೆಪವಾಗಿಸಿಕೊಂಡು ಮೋದಿಯವರ ಆಹ್ವಾನವನ್ನು ತಿರಸ್ಕರಿಸಬಹುದಾಗಿತ್ತಲ್ಲ? ಅವರು ಹಾಗೆ ಮಾಡಲಿಲ್ಲ. ಆಹ್ವಾನವನ್ನು ಸ್ವೀಕರಿಸಿದವರೇ, ತಮ್ಮ ಭಾಷಣದ ವೇಳಾಪಟ್ಟಿಯನ್ನು ಇದೇ ಜನವರಿ ತಿಂಗಳ 20ಕ್ಕೆ ಬದಲಾಯಿಸಿಕೊಂಡರು. ಅದನ್ನು ಮುಗಿಸಿಕೊಂಡು ಕೊಟ್ಟ ಮಾತಿನಂತೆಯೇ ಇಲ್ಲಿಗೆ ಬಂದಿಳಿದಿದ್ದಾರೆ. ಹಾಗಾದರೆ ಅವರನ್ನು ಇಲ್ಲಿಗೆ ಕರೆತಂದದ್ದು ಏನು? ಮೋದಿಯವರ ವರ್ಚಸ್ಸಾ? ಬದಲಾಗುತ್ತಿರುವ ರಾಜಕೀಯ ವಿದ್ಯಮಾನಗಳಾ? ವಿಶ್ಲೇಷಿಸೋಣ.

ನಮ್ಮ ದೇಶದ ಕಾರ್ಯಕ್ರಮಗಳಿಗೆ ಅನ್ಯ ದೇಶದ ಗಣ್ಯರನ್ನು ಆಹ್ವಾನಿಸುವಾಗ ಎರಡು ಮುಖ್ಯ ಮಾನದಂಡಗಳು ಗಣನೆಗೆ ಬರುತ್ತವೆ. ಒಂದು, ಆ ಗಣ್ಯರ ಬರುವಿಕೆಯಿಂದ ದೇಶದೊಳಗೆ ಕ್ಷೋಭೆಯ ವಾತಾವರಣ ಉಂಟಾಗುತ್ತದಾ ಎಂಬುದು. ಎರಡನೆಯದು, ಆ ದೇಶದೊಂದಿಗೆ ದೀರ್ಘಕಾಲೀನ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಲು ಸಾಧ್ಯವಾ ಎಂಬುದು. ಆದ್ದರಿಂದಲೇ ನಾವು ಜಪಾನಿನ ಪ್ರಧಾನಿ ಶಿಂಜೋ ಅಬೆಯವರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿದ್ದೇವೆಯೇ ಹೊರತು ಚೀನಾ ಅಥವಾ ಪಾಕಿಸ್ತಾನವನ್ನು ಕರೆಯುವ ತಂಟೆಗೆ ಹೋಗಿಲ್ಲ! ಇನ್ನು ಅಮೆರಿಕದ ವಿಷಯದಲ್ಲಿ ಮೊದಲನೆಯ ಅಂಶ ಅನ್ವಯವಾಗುವುದಿಲ್ಲವಾದರೂ ರಾಜತಾಂತ್ರಿಕ ಸಂಬಂಧಗಳು ಮೊದಲಿನಿಂದಲೂ ಒಂದೇ ತೆರನಾಗಿಲ್ಲ.

1994ರಲ್ಲಿ ನರಸಿಂಹರಾವ್ ಆರಂಭಿಸಿದ ಭರ್ಜರಿ ಇನ್ನಿಂಗ್ಸ್ ಮುಂದಿನ ಪ್ರಧಾನಿ ಐ.ಕೆ ಗುಜರಾಲ್‍ರ ಅವಧಿಯಲ್ಲಿ ಸ್ವಲ್ಪ ಮಂಕಾಗಿತ್ತು. ನಂತರ ಅಧಿಕಾರಕ್ಕೇರಿದ ವಾಜಪೇಯಿವರು ನಾಲ್ಕು ಬಾರಿ ಅಮೆರಿಕಕ್ಕೆ ಭೇಟಿ ನೀಡಿ ತಂತ್ರಜ್ಞಾನಕ್ಕೆ ಒತ್ತು ಕೊಟ್ಟರು. ಆದರೆ 1998ರ ಪೋಖ್ರಾನ್ ಅಣು ಪರೀಕ್ಷೆಯಿಂದಾಗಿ ಅಮೆರಿಕ ನಮ್ಮ ಮೇಲೆ ಆರ್ಥಿಕ ದಿಗ್ಬಂಧನ ಹೇರಿಬಿಟ್ಟಿತು. ಆಗ ಇಡೀ ವಿಶ್ವದ ಎಲ್ಲ ರಾಷ್ಟ್ರಗಳೂ ನಮ್ಮನ್ನು ಖಂಡಿಸಿದರೂ ನಮ್ಮ ಜೊತೆ ನಿಂತಿದ್ದು ಇಸ್ರೇಲ್ ಮಾತ್ರ! ಇನ್ನು, ವಾಜಪೇಯಿಯವರ ನಂತರ ಬಂದ ‘ಮೌನ’ಮೋಹನ ಸಿಂಗ್‍ರು ಸುಮಾರು ಎಂಟು ಬಾರಿ ತಮ್ಮ ‘ಪುಷ್ಪಕ ವಿಮಾನ’ದಲ್ಲಿ ಅಮೆರಿಕ ಪ್ರವಾಸ ಮಾಡಿದರೂ ಒಂದೊಂದರದ್ದೂ ಒಂದೊಂದು ಕಥೆ! ಅದನ್ನು ಈಗ ಹೇಳಿ ಪ್ರಯೋಜನವಿಲ್ಲ ಬಿಡಿ. ಒಟ್ಟಾರೆ ಕಳೆದ ದಶಕದಲ್ಲಿ ನಮ್ಮನ್ನು ನಾವು ಬೆನ್ನೆಲುಬೇ ಇಲ್ಲದಂತೆ ಬಿಂಬಿಸಿಕೊಂಡ ರೀತಿಯನ್ನು ನೋಡಿದ ಅಮೆರಿಕ ಏನು ಮಾಡಿತ್ತು ಗೊತ್ತೇ? ಚೀನಾಕ್ಕೆ ನೇರವಾಗೇ 'ದಕ್ಷಿಣ ಏಷ್ಯಾ ಪೂರ್ತಿ ನಿನ್ನದೇ' ಎಂದು ಹೇಳಿಬಿಟ್ಟಿತ್ತು.

ಆ ಮಾತಿಗೇ ಕಾದು ನಿಂತಿದ್ದ ಚೀನಾ ಸರಸರನೆ ತನ್ನ ಕುತಂತ್ರದ ಸರಪಳಿ ಹೆಣೆಯತೊಡಗಿತು. ಭಾರತವನ್ನು ಸುತ್ತುವರೆಯಲು ನೌಕಾನೆಲೆಗಳನ್ನು ಸ್ಥಾಪಿಸಿದ್ದೇ ಅಲ್ಲದೆ ನಮ್ಮ ನೆರೆಯ ಪಾಕಿಸ್ತಾನ, ನೇಪಾಳ ಹಾಗೂ ಇತರೆ ದೇಶಗಳೊಂದಿಗೂ ಸಂಬಂಧವನ್ನು ಬಲಗೊಳಿಸಿಕೊಂಡಿತು. ಚೀನಾ ಬರೀ ಏಷ್ಯಾದಲ್ಲಿ ಪ್ರಬಲವಾಗಲು ಹವಣಿಸಿದ್ದರೆ ಅಮೆರಿಕ ಸುಮ್ಮನಿರುತ್ತಿತ್ತೇನೋ, ಆದರೆ ತನ್ನ ನಂ. 1 ಸ್ಥಾನಕ್ಕೇ ಕುತ್ತು ತರಲು ತಯಾರಾಗಿದ್ದನ್ನು ನೋಡಿ ಅದು ಕೆರಳಿತು. ಮುಖ್ಯವಾಗಿ ದಕ್ಷಿಣ ಚೀನಾ ಸಮುದ್ರವನ್ನು, ಅದರಲ್ಲಿರುವ ತೈಲ ನಿಕ್ಷೇಪವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂಬ ಚೀನಾದ ಹವಣಿಕೆಯನ್ನು ಅದು ನಿಷ್ಫಲಗೊಳಿಸಲೇಬೇಕಿತ್ತು! ಆದ್ದರಿಂದ 2010ರಿಂದಲೇ ಚೀನಾವನ್ನು ಹತ್ತಿಕ್ಕಲು ಶುರುಮಾಡಿತು. ಸಿಂಗಪೂರ್, ವಿಯೆಟ್ನಾಂ, ಫಿಲಿಪ್ಪೀನ್ಸ್ ಹಾಗೂ ಥಾಯ್ಲೆಂಡ್‍ಗಳಿಗೆ ತನ್ನ ಸೇನೆಯನ್ನು ಕಳಿಸಿ ಚೀನಾಕ್ಕೆ ಪರೋಕ್ಷವಾಗಿ ಬೆದರಿಕೆಯೊಡ್ಡಿತು. ಕಳೆದ ವರ್ಷ ಆಯ್ಕೆಯಾದ ಭಾರತದ ಹೊಸ ಪ್ರಧಾನಿಗಳನ್ನು ಅರಿತ ಮೇಲೆ ಅದಕ್ಕೂ ತುಸು ನೆಮ್ಮದಿಯಾಗಿರಬೇಕು. ಪರಿಣಾಮವೇ, ಭಾರತದ ಈ ಭೇಟಿ!

ಹಾಗಾದರೆ ಇದರಲ್ಲಿ ನಮ್ಮ ಲಾಭವೇನೂ ಇಲ್ಲವೇ? ಇದೆ. ಆರ್ಥಿಕ, ವ್ಯಾಪಾರ ವಲಯಗಳಲ್ಲಿ ಬಹಳಷ್ಟು ಒಪ್ಪಂದಗಳು ನಡೆದಿವೆ. ಸೌರಶಕ್ತಿಯ ಬಳಕೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸರಬರಾಜು ಹಾಗೂ ಬೇಹುಗಾರಿಕೆಯ ವಲಯಗಳಲ್ಲೂ ಮಹತ್ತರವಾದ ಮೈಲುಗಲ್ಲುಗಳು ಸೃಷ್ಟಿಯಾಗಿವೆ. ಎಲ್ಲಕ್ಕಿಂತ ಮುಖ್ಯವಾದ ಗೆಲುವು ದಕ್ಕಿರುವುದು ಪರಮಾಣು ಒಪ್ಪಂದದಲ್ಲಿ. 2008ರಲ್ಲಿ ನಡೆದಿದ್ದ ಒಪ್ಪಂದದನ್ವಯ ಅಮೆರಿಕ ಭಾರತಕ್ಕೆ ಅಣು ರಿಯಾಕ್ಟರ್‍ಗಳನ್ನು ಪೂರೈಸಬೇಕಿತ್ತು. ಆದರೆ ನಮ್ಮ ಎರಡು ಶರತ್ತುಗಳನ್ನು ಅದು ಒಪ್ಪಿರಲಿಲ್ಲ. ಮೊದಲನೆಯದು, ಏನಾದರೂ ಅವಗಢವಾದ ಪಕ್ಷದಲ್ಲಿ ಭಾರತಕ್ಕೆ ಅಣು ರಿಯಾಕ್ಟರ್‍ಗಳನ್ನು ಸರಬರಾಜು ಮಾಡುವ ಸಂಸ್ಥೆಯ ಹೊಣೆ ಎಷ್ಟಿರುತ್ತದೆಯೋ ಆ ರಿಯಾಕ್ಟರ್‍ಗಳ ಬಿಡಿ ಭಾಗಗಳನ್ನು ಪೂರೈಸುವವರ ಹೊಣೆಗಾರಿಕೆಯೂ ಅಷ್ಟೇ ಇರುತ್ತದೆ ಎಂಬುದು. ಇದರಿಂದಾಗಿ ಅಮೆರಿಕದ ಮೇಲೆ ಬೀಳುವ ವಿಮೆಯ ಹಣದ ಭಾರ ಅಪಾರ. ಎರಡನೆಯದು, ನಮಗೆ ಸರಬರಾಜಾಗುವ ಅಣು ಇಂಧನ ಅಥವಾ ಇತರೆ ಕಚ್ಚಾ ವಸ್ತುಗಳ ಮೇಲೆ ಅಮೆರಿಕ ಬೇಹುಗಾರಿಕೆ ನಡೆಸುವಂತಿಲ್ಲ ಎಂಬುದು. ಈಗ ಒಬಾಮಾ ಅವುಗಳನ್ನು ಒಪ್ಪಿದ್ದಾರೆ!

ಹಾಗೆಂದು ನಾವು ಅತಿಯಾಗಿ ಸಂಭ್ರಮ ಪಡುವಂತೆಯೂ ಇಲ್ಲ. ಒಂದು ಕೈಯಲ್ಲಿ ಮಗುವನ್ನು ಚಿವುಟಿ, ಮತ್ತೊಂದು ಕೈಯ್ಯಲ್ಲಿ ತೊಟ್ಟಿಲನ್ನು ತೂಗುವುದರಲ್ಲಿ ಅಮೆರಿಕ ನಿಸ್ಸೀಮ! ನಾವು ಎಷ್ಟೆಷ್ಟು ಕೇಳಿಕೊಂಡರೂ ಅದು ಪಾಪಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಸರಬರಾಜನ್ನು ನಿಲ್ಲಿಸುವುದಿಲ್ಲ. ಭಾರತ ಹಾಗೂ ರಷ್ಯಾದ ಮಿತೃತ್ವಕ್ಕೆ ಸಡ್ದು ಹೊಡೆಯಲು 1954ರಲ್ಲಿ ಪಾಪಿಸ್ತಾನದ ಕೈ ಹಿಡಿದ ಅಮೆರಿಕಕ್ಕೆ ಇನ್ನೂ ಅದಕ್ಕೆ ವಿಚ್ಛೇದನ ಕೊಡಲು ಸಾಧ್ಯವಾಗಿಲ್ಲ! ‘ಆಂತರಿಕ ಭಯೋತ್ಪಾದನೆಯ ನಿಗ್ರಹಕ್ಕೆ’ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪಾಕ್ ಭಿಕ್ಷೆ ಬೇಡಿದಾಗಲೆಲ್ಲ ಅದರ ಜೋಳಿಗೆಗೆ ಹೊಸ ಆಯುಧಗಳನ್ನು ಸುರಿಯುತ್ತದೆ. ಅವು ಬಲಿತೆಗೆದುಕೊಳ್ಳುವುದು ಭಾರತೀಯ ಸೈನಿಕರು ಹಾಗೂ ನಾಗರಿಕರನ್ನು ಎಂಬುದು ಗೊತ್ತಿದ್ದೂ! ಹಾಗೇ, ಅಫಘಾನಿಸ್ತಾನದಲ್ಲಿರುವ ತನ್ನ ಪಡೆಯನ್ನೂ ಅದು ಹಿಂಪಡೆದುಕೊಳ್ಳುವುದಿಲ್ಲ. ತಾನಾಯಿತು ತನ್ನ ಪಾಡಾಯಿತು ಎಂದು ಸುಮ್ಮನಿರುವುದು ಅದರ ಜಾಯಮಾನದಲ್ಲೇ ಇಲ್ಲ. ಯಾರ ಮನೆ ಬೇಳೆ ಬೆಂದಿದೆ ಯಾರದ್ದು ಬೆಂದಿಲ್ಲ ಎಂಬ ಮಾಹಿತಿ ಅದಕ್ಕೆ ಬೇಕೇ ಬೇಕು.

ಈ ಮಿತಿಗಳ ನಡುವೆಯೂ ಎರಡೂ ದೇಶಗಳ ಸಂಬಂಧ ಹೊಸದಾಗಿ ಚಿಗುರುತ್ತಿದೆ. ನಮ್ಮ ತಾಳಕ್ಕೆ ತಕ್ಕಂತೆ ಹೇಗೆ ಅಮೆರಿಕ ಕುಣಿಯುವುದಿಲ್ಲವೋ, ಅದರ ತಾಳಕ್ಕೆ ತಕ್ಕಂತೆ ನಾವು ಕುಣಿಯುವ ಅಗತ್ಯವೂ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುತ್ತಿದೆ ಮೋದಿ ಸರ್ಕಾರ. ಇಲ್ಲಿ ಒಂದು ವಿಷಯವನ್ನು ನಾವು ಗಮನಿಸಬೇಕು. ಎಲ್ಲ ದೇಶಗಳ ನೇತಾರರಿಗೂ ಅಂತಿಮವಾಗಿ ಮುಖ್ಯವಾಗುವುದು ತಮ್ಮ ದೇಶದ ಹಿತಾಸಕ್ತಿಯೇ. ಅದಕ್ಕೆ ಧಕ್ಕೆ ತರುವವರನ್ನು ಜಾಣ್ಮೆಯಿಂದ ನಿಭಾಯಿಸುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಇಷ್ಟು ದಶಕಗಳ ಬಳಿಕ ಅಂಥ ಚತುರ ಕಲೆಗಾರಿಕೆಯ ನೇತಾರ ನಮಗೆ ಸಿಕ್ಕಿದ್ದಾರೆ. ಜಿನ್‍ಪಿಂಗ್ ಬಂದು ಹೋದ ಬೆನ್ನಲ್ಲೇ ಒಬಾಮಾ ಬಂದಿದ್ದಾರೆ. ಇನ್ನುಳಿದಿರುವುದು ಸಂದರ್ಭಾನುಸಾರ ನಮ್ಮ ಹಿತಾಸಕ್ತಿಯನ್ನು ಪೋಷಿಸಿಕೊಂಡು ಹೋಗುವುದಷ್ಟೇ!



ನಮ್ಮ ಪ್ರಧಾನಿ ರಾಜನೀತಿಯ ಹದವನ್ನರಿತು ವಿದೇಶಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುತ್ತಿದ್ದಾರೆ. ಇಲ್ಲಿಗೆ ಬರಲು ಒಬಾಮಾರಿಗೆ ಸಾಕಷ್ಟು ರಾಜತಾಂತ್ರಿಕ ಕಾರಣಗಳಿರಬಹುದು. ಆದರೆ ಅವರ ಬಾಯಿಂದಲೇ ‘ಯೂ ಆರ್ ಎ ಮ್ಯಾನ್ ಆಫ್ ಆಕ್ಷನ್’ ಎಂದು ಮುಕ್ತವಾಗಿ ಹೊಗಳಿಸಿಕೊಂಡ ನಮ್ಮ ಪ್ರಭಾವಿ ಪ್ರಧಾನಿಗಳೂ ಒಂದು ಮುಖ್ಯ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ!
ಪರಮಾಣು ಒಪ್ಪಂದದ ಹೆಗ್ಗಳಿಗೆ ತಮಗೇ ಸೇರಬೇಕು ಎಂದು ಕಾಂಗ್ರೆಸ್ ಮಂದಿ ಬಾಯಿಮಾಡುತ್ತಿದ್ದಾರೆ. 2008ರಲ್ಲಿ ಇದೇ ಒಪ್ಪಂದಕ್ಕೆ ಸಹಿ ಮಾಡಬೇಡಿ ಎಂದು ಸೋನಿಯಾ ಹಟ ಹಿಡಿದಿದ್ದನ್ನು, ಬೇಸತ್ತ ಮನಮೋಹನ್ ಸಿಂಗ್ ರಾಜೀನಾಮೆಯ ಧಮಕಿ ನೀಡಿದ್ದನ್ನು ಕಾಂಗ್ರೆಸ್ ಮರೆತಿದೆಯೇ? ಅಂದು ಸೋನಿಯಾರ ವಿರೋಧದ ನಡುವೆಯೂ ನಡೆದ ಒಪ್ಪಂದ ನಂತರ ಅಲ್ಲೇ ಕಾಲು ಮುರಿದುಕೊಂಡು ಕುಳಿತಿತೇಕೆ?

ವಿದೇಶೀ ವಿಶ್ವವಿದ್ಯಾಲಯಗಳ ಪದವಿ, ಬಿರುದುಗಳಿಂದ ಸಾಧಿಸಲಾಗದ್ದನ್ನು ಪ್ರಭಾವಿ ವ್ಯಕ್ತಿತ್ವದಿಂದ ಸಾಧಿಸಬಹುದು! ಅಮ್ಮನ ಸೆರಗಿನಲ್ಲಿ ಅವಿತುಕೊಳ್ಳುವವರಿಂದ ಇಂಥ ಫಲಿತಾಂಶಗಳನ್ನು ನಿರೀಕ್ಷಿಸಲು ಸಾಧ್ಯವೇ? 

Wednesday, 14 January 2015

ಗೆಲುವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೋ ಅಥವಾ ಉಗ್ರವಾದಕ್ಕೋ?

ಇದಪ್ಪಾ ಕೆಚ್ಚೆದೆಯೆಂದರೆ! ಚಾರ್ಲಿ ಹೆಬ್ಡೊ, ತನ್ನ ಈ ವಾರದ ಸಂಚಿಕೆಯ ಮುಖಪುಟದಲ್ಲಿ ಮತ್ತೆ ಪ್ರವಾದಿ ಮೊಹಮ್ಮದರ ಹೊಸದೊಂದು ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ! ಕಂಬನಿ ಮಿಡಿಯುತ್ತಾ, 'ನಾನು ಚಾರ್ಲಿ' ಎಂಬ ಬರಹವನ್ನು ಹೊತ್ತು ನಿಂತಿರುವ ಪ್ರವಾದಿಗಳ ಚಿತ್ರ. ಅದರಲ್ಲಿ ಮೇಲೆ, ‘ಎಲ್ಲವನ್ನೂ ಕ್ಷಮಿಸಲಾಗಿದೆ ಎಂಬ ವ್ಯಂಗ್ಯೋಕ್ತಿ!




ಮೊನ್ನೆ ಜನವರಿ ಏಳರಂದು ಫ್ರಾನ್ಸ್ ದೇಶದ ವಿಡಂಬನಾತ್ಮಕ ವಾರಪತ್ರಿಕೆ 'ಚಾರ್ಲಿ ಹೆಬ್ಡೊ'ದ ಮೇಲೆ ನಡೆದ ದಾಳಿ ಈಗ ಜಗದ್ವ್ಯಾಪಿ ಸುದ್ದಿ. ಅಂದು ಶರೀಫ್ ಕವಾಚಿ, ಸಯೀದ್ ಕವಾಚಿ ಹಾಗೂ ಹಮೀದ್ ಮೌರಾದ್ ಎಂಬ ಮೂವರು ಮುಸ್ಲಿಂ ಉಗ್ರರು ಪ್ಯಾರಿಸ್ ನಗರದಲ್ಲಿರುವ ಚಾರ್ಲಿಯ ಕಚೇರಿಗೆ ಲಗ್ಗೆಯಿಟ್ಟಿದ್ದರು. ಕಚೇರಿಯ ಹೊರಗಿದ್ದ ಓರ್ವ ಮಹಿಳಾ ಸಿಬ್ಬಂದಿಗೆ ಬಂದೂಕು ತೋರಿಸಿ ಬಾಗಿಲು ತೆರೆಯಿಸಿ ಒಳನುಗ್ಗಿದ ಅವರು ನಡೆಸಿದ ಮಾರಣ ಹೋಮಕ್ಕೆ ವಿಶ್ವವೇ ದಂಗಾಗಿತ್ತು. ಸಂಪಾದಕ ಸ್ಟಿಫಾನ್ ಶಾರ್ಬೊನೇರ್ ಹಾಗೂ ನಾಲ್ವರು ಖ್ಯಾತ ವ್ಯಂಗ್ಯಚಿತ್ರಕಾರರೂ ಸೇರಿ ಒಟ್ಟು ಹನ್ನೆರಡು ಜನ ಐದೇ ನಿಮಿಷಗಳಲ್ಲಿ ಹೆಣವಾಗಿದ್ದರು. ಸಂಪಾದಕೀಯ ಸಭೆ ನಡೆಯುತ್ತಿದ್ದುದರಿಂದ ಎಲ್ಲರೂ ಒಂದೇ ಕೋಣೆಯಲ್ಲಿದ್ದುದು ಉಗ್ರರಿಗೆ ವರದಾನವಾಗಿ ಪರಿಣಮಿಸಿತ್ತು.


ಈ ದಾಳಿಯ ಹಾಗೂ ಪತ್ರಿಕೆಯ ಹಿನ್ನೆಲೆಯನ್ನು ಕೆದಕಿದಾಗ ಬಹಳಷ್ಟು ವಿಷಯಗಳು ಬೆಳಕಿಗೆ ಬಂದವು. ಹೌದು. ಚಾರ್ಲಿಯ ಜಾಯಮಾನವೇ ಹಾಗೆ. ಅದು ಯಾವ ಧರ್ಮವನ್ನೂ ಬಿಟ್ಟಿಲ್ಲ. ಫ್ರಾನ್ಸ್ ದೇಶದ ಯಾವ ರಾಜಕಾರಣಿಯನ್ನೂ, ಖ್ಯಾತ ಲೇಖಕನನ್ನೂ ಬಿಟ್ಟಿಲ್ಲ. ಅಕ್ಷರಗಳಿಗೇ ಸಡ್ಡು ಹೊಡೆಯುತ್ತವೆ ಅದರ ವ್ಯಂಗ್ಯಚಿತ್ರಗಳು. ಸದ್ದಿಲ್ಲದೆ ಬೀಳುವ ವಕ್ರರೇಖೆಗಳ ಚಾಟಿಯೇಟನ್ನು ಜೀರ್ಣಿಸಿಕೊಳ್ಳಲು ನಿಜವಾಗಿಯೂ ತಾಕತ್ತು ಬೇಕು. ಆ ಚಿತ್ರಗಳಿಗೆ ಪ್ರವಾದಿಗಳು ಆಹಾರವಾಗತೊಡಗಿದ್ದು ಯಾಕೆ ಎಂಬ ಆಸಕ್ತಿಕರ ವಿಷಯ ಇಲ್ಲಿದೆ ನೋಡಿ. 2005ನೆಯ ಇಸವಿಯಲ್ಲಿ ಯೂರೋಪ್‍ನ ಬಹುತೇಕ ದೇಶಗಳಲ್ಲಿ, ‘ನಮ್ಮನ್ನು ಮಾತ್ರ ಮುಖ್ಯವಾಹಿನಿಗೆ ಸೇರಿಸಿಕೊಳ್ಳದೆ ಪ್ರತ್ಯೇಕವಾಗಿ ಕಾಣಲಾಗುತ್ತಿದೆ, ಕಡೆಗಣಿಸಲಾಗುತ್ತಿದೆ’ ಎಂದು ಮುಸ್ಲಿಂ ಸಮುದಾಯ ವಿಪರೀತವಾಗಿ ಗೋಳಾಡುತ್ತಿತ್ತು. ಸಮಾನ ಹಕ್ಕುಗಳು ಬೇಕೆಂಬ ಅದರ ಬೇಡಿಕೆಯನ್ನು ನೋಡಿದ ಡೆನ್ಮಾರ್ಕ್ ದೇಶದ ಪತ್ರಿಕೆ ಜಿಲ್ಯಾಂಡ್ಸ್ ಪೋಸ್ಟನ್, ಏಕಾಏಕಿ ಪ್ರವಾದಿ ಮೊಹಮ್ಮದರ ಹನ್ನೆರಡು ಚಿತ್ರಗಳನ್ನು ಪ್ರಕಟಿಸಿಬಿಟ್ಟಿತ್ತು! ಅದರ ಸಂಪಾದಕ ಫ್ಲೆಮಿಂಗ್ ರೋಸ್ ಹೇಳಿಯೂ ಬಿಟ್ಟ, 'ಸಮಾನ ಹಕ್ಕುಗಳು ಬೇಕಲ್ಲವೇ ನಿಮಗೆ? ನಮ್ಮ ವ್ಯಂಗ್ಯಚಿತ್ರಕಾರರು ಇಸ್ಲಾಂ ಧರ್ಮವನ್ನೂ ಉಳಿದ ಧರ್ಮಗಳ ಸಾಲಿಗೆ ಸೇರಿಸಿಕೊಂಡಿದ್ದಾರೆ ನೋಡಿ. ಈಗ ಎಲ್ಲರೂ ಸಮಾನರೇ. ನಿಮ್ಮನ್ನೂ ನಮ್ಮ ವಿಡಂಬನೆಯ ಪ್ರಪಂಚದೊಳಕ್ಕೆ ಸೇರಿಸಿಕೊಂಡಿದ್ದೇವೆ' ಎಂದು. ವಿಶೇಷ ಸವಲತ್ತುಗಳನ್ನು ಮಾತ್ರ ಬಯಸಿದ್ದ ಮುಸ್ಲಿಂ ಸಮುದಾಯಕ್ಕೆ ಇದು ಸಹ್ಯವಾಗುವುದು ಸಾಧ್ಯವಿತ್ತೇ? ಉಹೂಂ. ವಿಪರೀತ ಆಕ್ರೋಶ ವ್ಯಕ್ತವಾಯಿತು. ಆಗ ಆ ಪತ್ರಿಕೆಯ ಬೆಂಬಲಕ್ಕೆ ನಿಂತಿದ್ದೇ ಚಾರ್ಲಿ ಹೆಬ್ಡೊ. ಅವೇ ಚಿತ್ರಗಳನ್ನು ತಾನೂ ನಿರ್ಭೀತವಾಗಿ ಪ್ರಕಟಿಸಿತ್ತು.

ಚಾರ್ಲಿ ಅಲ್ಲಿಗೇ ಸುಮ್ಮನಾಗಲಿಲ್ಲ. 2011ರಲ್ಲಿ ಇಸ್ಲಾಂನ ತೀವ್ರವಾದವನ್ನು ಪ್ರಶ್ನಿಸಿ, 'ಶರಿಯಾ ಹೆಬ್ಡೊ' ಎಂಬ ತಲೆಬರಹದಡಿಯಲ್ಲಿ ಮತ್ತೊಮ್ಮೆ ಪ್ರವಾದಿಗಳ ನಗ್ನ ಚಿತ್ರವನ್ನು ಪ್ರಕಟಿಸಿತ್ತು. ಆಗ ಕಚೇರಿಯ ಮೇಲೆ ಅಪರಾತ್ರಿಯಲ್ಲೇ ಬಾಂಬ್ ದಾಳಿ ನಡೆಯಿತು. ಪತ್ರಿಕೆಗೆ ಹಾಗೂ ಸಿಬ್ಬಂದಿಗೆ ಜೀವ ಬೆದರಿಕೆಯ ಕರೆಗಳೂ ಬರಲಾರಂಭಿಸಿದ್ದವು. ಸಂಪಾದಕ ಶಾರ್ಬೊನೇರ್ ಎಳ್ಳಷ್ಟೂ ವಿಚಲಿತನಾಗಿರಲಿಲ್ಲ. 'ಬೇರೆ ಯಾವುದರ ಬಗ್ಗೆ ಬರೆಯಲೂ ನಮಗೆ ಸ್ವಾತಂತ್ರ್ಯವಿದೆ, ಆದರೆ ಈ ತೀವ್ರವಾದಿ ಮುಸ್ಲಿಮರ ವಿಷಯಕ್ಕೆ ಬಂದಾಗ ಮಾತ್ರ ಹೀಗೆ. ನನ್ನದು ಉದ್ಧಟತನವೆನಿಸಬಹುದು ನಿಮಗೆ. ಅದೇನಾಗಿಬಿಡುತ್ತದೋ ಆಗಲಿ. ಎದೆ ಸೆಟೆಸಿ ನಿಂತು ಸಾಯುತ್ತೇನೇ ವಿನಾ ಇವರಿಗೆ ಹೆದರಿ ಮಂಡಿಯೂರಿ ಬದುಕುವುದಿಲ್ಲ’ ಎಂದಿದ್ದ ಪುಣ್ಯಾತ್ಮ! ನುಡಿದಂತೆ ನಡೆದೂ ಬಿಟ್ಟ.

ಘಟನೆಯ ನಂತರ ಜಗತ್ತಿನಾದ್ಯಂತ ವ್ಯಾಪಕ ಖಂಡನೆಯಾಯಿತು, ಆದರೆ ಸೌದಿ, ಇರಾನ್ ಸೇರಿದಂತೆ ಮುಸ್ಲಿಂ ದೇಶಗಳ್ಯಾವುವೂ ತುಟಿ ಪಿಟಕ್ಕೆನ್ನಲಿಲ್ಲ! ಪಾಕಿಸ್ತಾನದ ಪೇಶಾವರದಲ್ಲಂತೂ ಸಂಭ್ರಮಾಚರಣೆಯೂ ನಡೆಯಿತು! ಫ್ರಾನ್ಸ್‌ನ ಪ್ರಜೆಗಳು 'ಜಿ ಸೂಯಿ ಚಾರ್ಲಿ (ನಾನು ಚಾರ್ಲಿ)' ಎಂಬ ಬೋರ್ಡುಗಳನ್ನು ಹೊತ್ತು ನಿಂತರು.  ವಿಶ್ವಾದ್ಯಂತ ವ್ಯಂಗ್ಯಚಿತ್ರಕಾರರು ತಮ್ಮ ಮನೋಜ್ಞ ಚಿತ್ರಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. 'ನನಗೆ ಹೆದರಿಕೆಯಿಲ್ಲ' ಎಂಬ ಬರಹವನ್ನು ಹೊತ್ತ ದೊಡ್ಡ ದೊಡ್ಡ ಪೆನ್ಸಿಲ್‍ಗಳ ಕಟೌಟ್‍ಗಳು ಎಲ್ಲೆಡೆ ರಾರಾಜಿಸಿದವು. ಐರೋಪ್ಯ ದೇಶಗಳ ಗಣ್ಯರೂ ಸೇರಿದಂತೆ  ಲಕ್ಷಾಂತರ ಜನ ಪ್ಯಾರಿಸ್‍ನ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಜನರೇ ಈ ಪರಿ ಬೆಂಬಲಿಸಿದಾಗ ತನ್ನ ಸಹೋದ್ಯೋಗಿಗಳನ್ನು ಕಳೆದುಕೊಂಡ ಪತ್ರಿಕೆ ಸುಮ್ಮನಿದ್ದೀತೇ? ಮುಂದಿನ ಸಂಚಿಕೆ ಅವರಿಗೇ ಮೀಸಲು ಎಂದು ತಕ್ಷಣವೇ ಸಾರಿತ್ತು. ಈಗ ನೋಡಿ, ಯಾರಿಗೂ ಕ್ಯಾರೇ ಅನ್ನದೆ ಮತ್ತೆ ಯಥಾಸ್ಥಿತಿಗೆ ಮರಳಿದೆ. ಅಂದ ಹಾಗೆ, ಈ ಸಂಚಿಕೆಯ ವಿಶೇಷವೇನು ಗೊತ್ತೇ? ಯಾವಾಗಲೂ ಮುದ್ರಿಸುತ್ತಿದ್ದ ಪ್ರತಿಗಳ ಸಂಖ್ಯೆ 60ಸಾವಿರವಾದರೆ ಈ ಬಾರಿಯದ್ದು ಭರ್ತಿ 30ಲಕ್ಷ! ಅದೂ 16 ಬೇರೆಬೇರೆ ಭಾಷೆಗಳ ಆವೃತ್ತಿಗಳು! ಏನಾದರಾಗಲಿ, ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಂಡೇ ಸಿದ್ಧ ಎಂಬ ಹಟ ಅದರದ್ದು.

ಈ ಘಟನೆಯಿಂದಾಗಿ ಹೊಸದೊಂದು ವಿವಾದ ಹುಟ್ಟಿಕೊಂಡಿದೆ – ಅದೇ, 'ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಬಹುದೇ? ಎನ್ನುವುದು. ಜಗತ್ತಿನಾದ್ಯಂತ ಪರ-ವಿರೋಧ ಲೇಖನಗಳು, ಟ್ವೀಟ್‍ಗಳು ಹರಿದಾಡುತ್ತಿವೆ. ಆದರೆ ನಮ್ಮ ದೇಶದಲ್ಲಿ ಇಂಥದ್ದೇ ಘಟನೆ ದಶಕಗಳ ಹಿಂದೆಯೇ ನಡೆದು ಹೋಗಿದೆ. ಒಂದೇ ವ್ಯತ್ಯಾಸವೆಂದರೆ ನಮ್ಮ ದೇಶದ ಚಿತ್ರಕಾರ ಚಿತ್ರಿಸಿದ್ದು ಹಿಂದೂ ದೇವರುಗಳನ್ನು! ಆದ್ದರಿಂದಲೇ ಆತ 95ವರ್ಷಗಳವರೆಗೂ ತುಂಬು ಬದುಕನ್ನು ಅನುಭವಿಸಿ ಸಹಜವಾಗಿ ಸತ್ತರು! ಹೌದು. ಅವರೇ ಎಂ.ಎಫ್ ಹುಸೇನ್.

ಚಾರ್ಲಿಯ ಘಟನೆ ನಡೆದ ದಿನವೇ ನಮ್ಮ ರಾಷ್ಟ್ರೀಯ ಮಾಧ್ಯಮಗಳು ಮುಸ್ಲಿಂ ಚಿಂತಕರನ್ನು, ಬುದ್ಧಿಜೀವಿಗಳನ್ನು ಒಂದೆಡೆ ಸೇರಿಸಿ ಅಭಿಪ್ರಾಯ ಕೇಳಿದವು. ಅದೊಂಥರಾ, ಹಾಗಲಕಾಯಿ ಬೇವಿನಕಾಯಿಯ ಸಾಕ್ಷ್ಯ ಕೇಳಿದ ಹಾಗೆ! ಎಲ್ಲರದ್ದೂ ಒಕ್ಕೊರಲಿನ ದನಿಯೇ. ಪತ್ರಕರ್ತರನ್ನು ಕೊಂದದ್ದು ತಪ್ಪು ಆದರೆ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಅವರು ಹಾನಿಯುಂಟುಮಾಡಬಾರದಿತ್ತು ಎಂಬುದು! ಎಲ್ಲರಿಗಿಂತ ಹೆಚ್ಚಾಗಿ ಹುಬ್ಬುಗಂಟಿಕ್ಕಿಕ್ಕೊಂಡು ಹರಿಹಾಯ್ದವರು ಜಾವೇದ್ ಅಖ್ತರ್ ಸಾಹೇಬರು. ನೆನಪಿಡಿ, ಇದೇ ಜಾವೇದ್ ಅಖ್ತರ್ ಬಿಟ್ಟೂಬಿಡದೆ ಎಂ.ಎಫ್ ಹುಸೇನ್‍ರನ್ನು ಸಮರ್ಥಿಸಿಕೊಂಡಿದ್ದರು. ಚಾರ್ಲಿಯೇನೋ ವಿಡಂಬನೆಗೇ ಮೀಸಲಾದ ಪತ್ರಿಕೆ. ಆದರೆ ಹುಸೇನ್ ವಿಡಂಬನಾತ್ಮಕ ಚಿತ್ರಕಾರರಾಗಿರಲಿಲ್ಲವಲ್ಲ? ಅಂದ ಮೇಲೇಕೆ ತಮ್ಮ ಧರ್ಮದವರಿಗೆಲ್ಲ ಮೈತುಂಬಾ ಬಟ್ಟೆ, ಮುಖದ ತುಂಬಾ ಬುರ್ಖಾ ತೊಡಿಸಿ ಹಿಂದೂ ದೇವರುಗಳನ್ನು ನಗ್ನರಾಗಿ ಚಿತ್ರಿಸುವ ತಾರತಮ್ಯ ಮಾಡಿದ್ದರು? ಅವರನ್ನು ಸಮರ್ಥಿಸುವಾಗ, ಲಕ್ಷ್ಮಿಯನ್ನು ಬೆತ್ತಲಾಗಿ ಗಣೇಶನ ತಲೆಯ ಮೇಲೆ ಕುಳಿತ ಹಾಗೆ ತೋರಿಸುವ, ಸರಸ್ವತಿಯನ್ನು ನಗ್ನಳಾಗಿ ತೋರಿಸುವ ಚಿತ್ರಗಳು ಹಿಂದೂಗಳ ಧಾರ್ಮಿಕ ಭಾವನೆಗೆ ಹಾನಿಯುಂಟುಮಾಡುತ್ತವೆ ಎಂಬುದು ಆ ಪರಿ ಕಥೆ ಕವನಗಳನ್ನು ಬರೆಯುವ ಜಾವೇದ್‍ಗೆ ಅರ್ಥವಾಗಿರಲಿಲ್ಲವಾ? ದೇವರುಗಳನ್ನಷ್ಟೇ ಅಲ್ಲದೆ, ಭಾರತಮಾತೆಯನ್ನೇ ನಗ್ನಳನ್ನಾಗಿಸಿದ್ದು ಭಾರತೀಯರಿಗೆ ನೋವುಂಟುಮಾಡುತ್ತದೆ ಎಂಬ ಪರಿಜ್ಞಾನವೂ ಇರಲಿಲ್ಲವಾ? ಅಷ್ಟಾಗಿಯೂ ಹುಸೇನ್‍ರನ್ನು ಯಾರೂ ಕೊಲ್ಲಲಿಲ್ಲ. ಸುಮಾರು 900ಜನ ವಿವಿಧ ನ್ಯಾಯಾಲಯಗಳಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿದರು ಅಷ್ಟೇ. ಕತಾರ್‍ಗೆ ಓಡಿ ಹೋದ ಹುಸೇನ್ ಕೊನೆತನಕ ಭಾರತಕ್ಕೆ ಬರಬೇಕೆಂಬ ಹಪಾಹಪಿಯಲ್ಲೇ ಸತ್ತರು.

ಇರಲಿ, ಈ ಇಡೀ ಪ್ರಕರಣದಲ್ಲಿ ಉಗ್ರರ ಪರ ವಹಿಸದಿದ್ದವರು ಸಲ್ಮಾನ್ ರಶ್ದಿಯೊಬ್ಬರೇ. ಭಾರತೀಯ ಮೂಲದವರೇ ಆದ ಅವರು 'ಸಟಾನಿಕ್ ವರ್ಸಸ್' ಎಂಬ ಪುಸ್ತಕ ಬರೆದು ಮುಸ್ಲಿಂ ಸಂಪ್ರದಾಯವಾದವನ್ನು ಟೀಕಿಸಿದ ತಪ್ಪಿಗೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹುಸೇನ್‍ಗೆ  ಹಿಂದೂಗಳು ಕೊಟ್ಟ ರಿಯಾಯಿತಿಯನ್ನು ಸಲ್ಮಾನ್‍ಗೆ ಮುಸ್ಲಿಮರೇ ಕೊಡಲಿಲ್ಲ ನೋಡಿ! 1989ರಿಂದಲೂ ಜೀವವನ್ನು ಅಕ್ಷರಶಃ ಕೈಯಲ್ಲಿ ಹಿಡಿದುಕೊಂಡು ಸತ್ತು ಬದುಕುತ್ತಿದ್ದಾರೆ ಆ ಬಡಪಾಯಿ. ಅವರನ್ನು ಕೊಲ್ಲುವಂತೆ ಇರಾನಿನ ಅಯಾತುಲ್ಲಾ ಖೊಮೇನಿ ಹೊರಡಿಸಿರುವ ಫತ್ವಾ ಅವರ ಬದುಕನ್ನೇ ನರಕವಾಗಿಸಿದೆ. ಆದರೂ ಮನುಷ್ಯ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ವಹಿಸುವುದನ್ನು ಬಿಟ್ಟಿಲ್ಲ.

ಈಗ ಹೇಳಿ, ಧಾರ್ಮಿಕ ಭಾವನೆಗಳಿರುವುದು ಮುಸ್ಲಿಮರಿಗೆ ಮಾತ್ರವಾ? ವಿಶ್ವರೂಪಂ ಚಿತ್ರದಿಂದ ತಮ್ಮ ಭಾವನೆಗಳಿಗೆ ನೋವಾಗಿದೆ ಎಂದು ಕಮಲಹಾಸನ್‍ರ ಕೈಲಿ ಕ್ಷಮೆ ಕೇಳಿಸಿದರಲ್ಲ, ಈಗ pk ಚಿತ್ರದಲ್ಲಿ ತೋರಿಸಿರುವ ಅಂಶಗಳಿಂದ ಹಿಂದೂಗಳಿಗೂ ನೋವಾಗಿದೆ. ಅಮೀರ್ ಖಾನ್ ಕ್ಷಮೆಯಾಚಿಸುತ್ತಾರಾ? ಇಲ್ಲ, ಅಗತ್ಯವೇ ಬೀಳುವುದಿಲ್ಲ. ಕಾರ್ನಾಡರಂಥ ಜ್ಞಾನಪೀಠಿಗಳು ಇದಕ್ಕೆ ವೈಚಾರಿಕತೆಯ ಹೊದಿಕೆ ಹೊದೆಸಿಬಿಡುತ್ತಾರಲ್ಲ, ನಾವು ಮುಸುಕಿನಲ್ಲಿ ಗುದ್ದಾಡಬೇಕು ಅಷ್ಟೇ. ನಮ್ಮ ಜನರೇ ನಮ್ಮ ಭಗವದ್ಗೀತೆಯನ್ನು ಹಿಂಸೆಗೆ ಮೂಲ ಎನ್ನುತ್ತಾರೆ, ನಾವು ಸುಮ್ಮನಿರಬೇಕು. ಅಮೀರ್ ಖಾನ್ ತನ್ನ ಚಿತ್ರದಲ್ಲಿ, 'ಯಾರು ಹೆದರುತ್ತಾರೋ ಅವರು ದೇಗುಲಗಳಿಗೆ ಹೋಗುತ್ತಾರೆ' ಎನ್ನುತ್ತಾನೆ. ಅದನ್ನು ಕೇಳಿಯೂ ನಮ್ಮ ರಕ್ತದೊತ್ತಡ 80/120ರಲ್ಲೇ ಇರಬೇಕು. ಸ್ವಲ್ಪ ಕದಲಿದರೂ, ಕನಲಿದರೂ, ದನಿಯೇರಿಸಿದರೂ ನಾವು ಕೋಮುವಾದಿಗಳು, ವೈಚಾರಿಕತೆ ಇರದವರು. ಅನ್ಯಧರ್ಮೀಯರು ಬೇಡವೇ ಬೇಡ, ನಮ್ಮವರೇ ತೋಳೇರಿಸಿಕೊಂಡು ಬಂದುಬಿಡುತ್ತಾರೆ ನಮ್ಮ ಬಾಯಿ ಮುಚ್ಚಿಸಲು. ‘ಯಾರು ಹೆದರುತ್ತಾರೋ ಅವರು ಮಸೀದಿಗಳಿಗೆ ಹೋಗುತ್ತಾರೆ’ ಎಂದೇಕೆ ಹೇಳುವುದಿಲ್ಲ ಅಮೀರ್ ಖಾನ್? ಮರುಕ್ಷಣವೇ ಹೆಣವಾಗಿ ಬಿಡುತ್ತೇನೆ ಎಂಬುದು ಗೊತ್ತಿದೆ ಆತನಿಗೆ. ಹಿಂದೂಗಳ ವಿಷಯದಲ್ಲಿ ಹಾಗಲ್ಲ, ಏನನ್ನು ಬೇಕಾದರೂ ಆಡಿ, ತೋರಿಸಿ, ಅರಗಿಸಿಕೊಳ್ಳಬಹುದಲ್ಲ!

ಈಗ ವಿಶ್ವದೆಲ್ಲೆಡೆ ನಡೆದಿರುವ ಉಗ್ರವಾದದ ಉದ್ದೇಶ ಒಂದೇ - ಮುಸ್ಲಿಂ ಅಧಿಪತ್ಯವನ್ನು ಸ್ಥಾಪಿಸಿ ಶರಿಯಾ ಕಾನೂನನ್ನು ಜಾರಿಗೊಳಿಸುವುದು. ವಿಧಗಳು ಬೇರೆ ಬೇರೆ ಅಷ್ಟೇ. ಚಾರ್ಲಿಯ ಗಲಾಟೆಯಲ್ಲಿ, ನೈಜೀರಿಯಾ ದೇಶದ ಬೋಕೋ ಹರಾಮ್ ಉಗ್ರ ಸಂಘಟನೆ ನಡೆಸುತ್ತಿರುವ ಮಾರಣ ಹೋಮ ಮಸುಕಾಗಿ ಹೋಗಿದೆ. ಆ ಸಂಘಟನೆಯ ನೇತಾರ ಅಬುಬಕರ್-ಅಲ್-ಶೇಕಾವು ನಡೆಸುತ್ತಿರುವ ಅಟ್ಟಹಾಸ ಮೇರೆ ಮೀರುತ್ತಿದೆ. ತೀರ ಇತ್ತೀಚೆಗೆ ಬಾಗಾ ಎಂಬ ಪಟ್ಟಣದಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಜನರನ್ನು ಒಂದೇ ದಿನದಲ್ಲಿ ಕೊಲ್ಲಿಸಿದ್ದಾನೆ. ಸೇನೆಗಿಂತ ಬಲಿಷ್ಠವಾಗಿರುವ ಉಗ್ರರ ದಂಡು ಅಧಿಕಾರಕ್ಕೇರಲು ಸರ್ವ ರೀತಿಯಲ್ಲೂ ಸಜ್ಜಾಗುತ್ತಿದೆ. ಮೊದಲು ಕ್ರೈಸ್ತರ ನಿರ್ನಾಮದ ಪಣ ತೊಟ್ಟಿದ್ದ ಉಗ್ರರು ಈಗ ತಮಗೆ ಪ್ರತಿರೋಧ ತೋರುತ್ತಿರುವವರೆಲ್ಲರನ್ನೂ ತರಿದು ಹಾಕುತ್ತಿದ್ದಾರೆ.

ಒಂದೆಡೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿರುವ ಚಾರ್ಲಿ ಹೆಬ್ಡೊ. ಮತ್ತೊಂದೆಡೆ ಇಡೀ ವಿಶ್ವವನ್ನೇ ತೆಕ್ಕೆಗೆ ತೆಗೆದುಕೊಳ್ಳಬಯಸುತ್ತಿರುವ ಬಹುರೂಪಿ ಉಗ್ರವಾದ. ಚಾರ್ಲಿ ಗೆಲ್ಲಬಾರದು ಎನ್ನುತ್ತಿರುವವರು ಮತ್ತೊಮ್ಮೆ ಯೋಚಿಸುವುದೊಳಿತು. ಉಗ್ರವಾದದ ಗೆಲುವು ಮಾನವೀಯತೆಯ ಸೋಲಲ್ಲವಾ?


ಉಗ್ರರ ನಿಗ್ರಹದಲ್ಲೂ ರಾಜಕೀಯವೇ?

ಅದು 2008ನೆಯ ಇಸವಿಯ ನವೆಂಬರ್ 26. 'ಕುಬೇರ' ಎಂಬ ಹೆಸರಿನ ದೋಣಿ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿತ್ತು. ಅದರಲ್ಲಿದ್ದ ನಾಲ್ವರು ಬೆಸ್ತರು ಮೀನು ಹಿಡಿಯುವುದರಲ್ಲಿ ಮಗ್ನರಾಗಿದ್ದರೆ ಕ್ಯಾಪ್ಟನ್ ಅಮರ್‍ಸಿನ್ಹ ಸೋಲಂಕಿ ದೋಣಿಯನ್ನು ಸಂಭಾಳಿಸುತ್ತಿದ್ದರು. ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ನುಗ್ಗಿ ಬಂದಿತು ಮತ್ತೊಂದು ಅಪರಿಚಿತ ದೋಣಿ. ನೋಡನೋಡುತ್ತಿದ್ದಂತೆಯೇ, ಅದರಲ್ಲಿದ್ದವರು ಈ ದೋಣಿಗೆ ನೆಗೆದು ಮೊದಲು ನಿರ್ದಯವಾಗಿ ಸೋಲಂಕಿಯವರ ಕತ್ತನ್ನು ಕತ್ತರಿಸಿ ಹಾಕಿದರು! ದೋಣಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಮೇಲೆ ಉಳಿದ ಮೀನುಗಾರರಿಗೆ ಏನು ಮಾಡಿದರೋ ಗೊತ್ತಿಲ್ಲ, ಏಕೆಂದರೆ ಅವರ ದೇಹಗಳು ಇಂದಿನವರೆಗೂ ಸಿಕ್ಕಿಲ್ಲ. ನಂತರ ದೋಣಿಯನ್ನು ಸೀದಾ ಮುಂಬಯಿಯ ಕಡಲ ತೀರಕ್ಕೆ ನಡೆಸಿಕೊಂಡು ಬಂದು, ಅಲ್ಲಿಂದ ನಗರದೊಳಗೆ ನುಗ್ಗಿ ಮನಬಂದಂತೆ ಗುಂಡಿನ ಮಳೆಗರೆದರು. ಸಮುದ್ರ ಮಾರ್ಗವಾಗಿ ಬಂದು ಹೀಗೆ ಮಾರಣಹೋಮ ನಡೆಸಿದ್ದು ಮತ್ತ್ಯಾರೂ ಅಲ್ಲ, ಪಾಕ್ ಉಗ್ರ ಅಜ್ಮಲ್ ಕಸಬ್‍ ಮತ್ತು ಅವನ ತಂಡ!

2014ನೆಯ ಇಸವಿಯ ಡಿಸೆಂಬರ್ 31ನೇ ತಾರೀಖು. ಬೆಳಿಗ್ಗೆ 8.30ರ ಸುಮಾರಿಗೆ ಭಾರತದ ಕೋಸ್ಟ್ ಗಾರ್ಡ್‍ಗಳಿಗೆ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಿಂದ (ಎನ್‍ಟಿಆರ್‍ಓ) ವೈರ್‍ಲೆಸ್ ಸಂದೇಶವೊಂದು ಬಂದಿತು. ಅದರ ಪ್ರಕಾರ, ಕರಾಚಿಯ ಹತ್ತಿರವಿರುವ ಕೇತಿ ಬಂದರಿನಿಂದ ಭಾರತದೆಡೆಗೆ ಎರಡು ಅನುಮಾನಾಸ್ಪದ ದೋಣಿಗಳು ಹೊರಟಿದ್ದವು. ತಕ್ಷಣವೇ ಎಚ್ಚೆತ್ತ ಕೋಸ್ಟ್ ಗಾರ್ಡ್ ಸಿಬ್ಬಂದಿ ತಮ್ಮ ಡಾನಿಯರ್ ವಿಮಾನ ಹಾಗೂ ಕಾವಲು ಹಡಗು ರಾಜ್‍ರತನ್‍ಗಳೊಡನೆ ಕಾರ್ಯಾಚರಣೆಗಿಳಿದರು. ಮಧ್ಯಾಹ್ನದ ಹೊತ್ತಿಗೆ ಒಂದು ದೋಣಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯೂ ಆದರು. ಆ ದೋಣಿ ಸುಮ್ಮನೆ ಒಂದೇ ಕಡೆ ಹೊಯ್ದಾಡುತ್ತಾ ಯಾರದೋ ಅಣತಿಗೆ ಕಾಯುತ್ತಾ ನಿಂತಿತ್ತು! ಅಷ್ಟರಲ್ಲಾಗಲೇ ಆ ದೋಣಿಯಲ್ಲಿದ್ದವರಿಗೆ ಬರುತ್ತಿದ್ದ ಕರೆಗಳನ್ನು ಕದ್ದಾಲಿಸತೊಡಗಿತ್ತು ನಮ್ಮ ಗುಪ್ತಚರ ಸಂಸ್ಥೆ. ಅದರ ಪ್ರಕಾರ, 'ಅಲ್ಲಿಯ ಪರಿಸ್ಥಿತಿಯನ್ನು ನೋಡಿಕೊಂಡು ನಿಮ್ಮ ಕೆಲಸ ಶುರು ಮಾಡಿ' ಎಂಬ ಸೂಚನೆ ಸಿಕ್ಕಿತ್ತಂತೆ ದೋಣಿಯಲ್ಲಿದ್ದವರಿಗೆ. ಹಾಗೇ 'ನಿಮ್ಮ ಖಾತೆಗಳಿಗೆ ತಲಾ ಐದು ಲಕ್ಷ ರೂಪಾಯಿಗಳನ್ನು ಹಾಕಲಾಗಿದೆ' ಎಂಬ ಸಂದೇಶವೂ ಬಂದಿತ್ತಂತೆ. ಸಂದೇಶಗಳನ್ನು ಕಳಿಸುತ್ತಿದ್ದವರು ಯಾರೆಂದು ನೋಡಿದರೆ ಪಾಕಿಸ್ತಾನದ ಸೇನೆ ಹಾಗೂ ನೌಕಾನೆಲೆಯ ಸಂಸ್ಥೆಗಳು! ಇವರಿಗೆ ಕರೆ ಮಾಡುತ್ತಿದ್ದ ಪುಣ್ಯಾತ್ಮರು ಥಾಯ್ಲೆಂಡ್ ದೇಶದಲ್ಲೂ ಅದ್ಯಾರಿಗೋ ಪದೇ ಪದೇ ಕರೆ ಮಾಡುತ್ತಿದ್ದರಂತೆ! ನಮ್ಮ ಗುಪ್ತಚರ ಸಂಸ್ಥೆಯನ್ನು ಎಲ್ಲಕ್ಕಿಂತ ಆತಂಕಕ್ಕೀಡುಮಾಡಿದ ವಿಷಯವೆಂದರೆ, ದೋಣಿಯಲ್ಲಿದ್ದವರು, 'ನಮಗೆ ಶಸ್ತ್ರಾಸ್ತ್ರಗಳು ಸಿಕ್ಕಿವೆ' ಎಂಬ ಮರು ಸಂದೇಶವನ್ನು ರವಾನಿಸಿದ್ದು.


ಕೋಸ್ಟ್ ಗಾರ್ಡ್‍ನ ಉಪನಿರ್ದೇಶಕರಾದ ಕೆ.ಆರ್ ನೌಟಿಯಾಲ್ ಹೇಳುವ ಪ್ರಕಾರ, ರಾತ್ರಿ ಸುಮಾರು 10.30ರ ಹೊತ್ತಿಗೆ ಆ ದೋಣಿಯ ಹತ್ತಿರ ತಲುಪಿದೆ ನಮ್ಮ ಕೋಸ್ಟ್ ಗಾರ್ಡ್‍ನ ನೌಕೆ. ಇದನ್ನು ನೋಡುತ್ತಿದ್ದಂತೆ ಆ ದೋಣಿ ಪಾಕಿಸ್ತಾನದೆಡೆಗೆ ಪರಾರಿಯಾಗಲು ಯತ್ನಿಸಿದೆ. ಬೆನ್ನತ್ತಿದ ನಮ್ಮ ನೌಕೆಯ ಕೈಗೆ ಸಿಗದೆ ಸುಮಾರು ಒಂದು ಘಂಟೆಯಷ್ಟು ಕಾಲ ಸತಾಯಿಸಿದೆ. ಕೊನೆಗೊಮ್ಮೆ ನಮ್ಮ ಸಿಬ್ಬಂದಿ ಅವರಿಗೆ ನಿಲ್ಲುವಂತೆ ಸೂಚನೆ ನೀಡಿ ಗಾಳಿಯಲ್ಲಿ ಕೆಲ ಸುತ್ತು ಗುಂಡು ಹಾರಿಸಿದ್ದಾರೆ. ಅದೇನನಿಸಿತೋ ದೋಣಿಯಲ್ಲಿದ್ದ ನಾಲ್ವರಿಗೆ, ಇಡೀ ದೋಣಿಯನ್ನು ಸ್ಫೋಟಿಸಿಬಿಟ್ಟಿದ್ದಾರೆ. ಜನವರಿ 1ನೇ ತಾರೀಖಿನ ಬೆಳಗಿನ ಜಾವ ಧಗಧಗನೆ ಹತ್ತಿ ಉರಿದ ದೋಣಿ ಪೂರ್ಣವಾಗಿ ಸುಟ್ಟು, ಮುಳುಗಿ ಹೋಗಿದೆ. ಅದರಲ್ಲಿದ್ದವರು ಸತ್ತರೋ ಅಥವಾ ನೀರಿಗೆ ಧುಮುಕಿ ಜೀವ ಉಳಿಸಿಕೊಂಡರೋ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಏನಾದರೂ ಅವಶೇಷ ಅಥವಾ ಸುಳಿವು ಸಿಕ್ಕೀತೇನೋ ಎಂದು ಪಟ್ಟು ಬಿಡದೆ ನಮ್ಮ ಕೋಸ್ಟ್ ಗಾರ್ಡ್ ಅಲ್ಲೇ ನಿಂತಿದೆ. ಮೊದಲನೆಯ ದೋಣಿಯದ್ದು ಈ ಕಥೆಯಾದರೆ, ಎರಡನೆಯ ದೋಣಿ ತನ್ನ ಕೆಲಸವನ್ನು ಮುಗಿಸಿ ಹಿಂದಿರುಗುತ್ತಿರುವುದಾಗಿ ಸಂದೇಶವನ್ನು ನೀಡಿತ್ತಂತೆ. ಕೋಸ್ಟ್ ಗಾರ್ಡ್ನ ಮತ್ತೊಂದು ಪಡೆ ಅದರ ಶೋಧ ಕಾರ್ಯದಲ್ಲಿ ನಿರತವಾಗಿದೆ. ಇನ್ನೂ ಯಾವ ಸುಳಿವೂ ಸಿಕ್ಕಿಲ್ಲ. ಇಷ್ಟೆಲ್ಲ ನಡೆದದ್ದು ಪೋರಬಂದರಿನಿಂದ ಸುಮಾರು 365ಕಿಮೀಗಳಷ್ಟು ದೂರವಿರುವ ಅರಬ್ಬೀ ಸಮುದ್ರದ ಒಡಲಿನಲ್ಲಿ.



ಇದೆಲ್ಲ ಮುಗಿದ ಮೇಲೆ, ಕೋಸ್ಟ್ ಗಾರ್ಡ್‍ನ ಕಾರ್ಯಾಚರಣೆಯನ್ನು ಶ್ಲಾಘಿಸಿದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಸಂಭವನೀಯ ಉಗ್ರರ ದಾಳಿಯನ್ನು ಯಶಸ್ವಿಯಾಗಿ ತಡೆದಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲಿಯವರೆಗೂ ಎಲ್ಲ ಸರಿಯಾಗಿಯೇ ಇತ್ತು. ಆದರೆ ಆಮೇಲೆ ಖ್ಯಾತ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನ ಇಡೀ ಕಾರ್ಯಾಚರಣೆಯ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿತು ನೋಡಿ, ನಿದ್ದೆಯಿಂದೆದ್ದು ಕುಳಿತಿತು ಕಾಂಗ್ರೆಸ್! ಆ ಲೇಖನದಲ್ಲಿ, ‘ದೋಣಿಯಲ್ಲಿದ್ದವರು ಉಗ್ರರಲ್ಲ, ಡೀಸೆಲ್ ಅಥವಾ ಮಾದಕ ದ್ರವ್ಯ ಕಳ್ಳಸಾಗಣಿಕೆದಾರರಿರಬಹುದು’ ಎಂಬ ಅಂಶವಿದೆ. ಹಾಗೇ, ಅಷ್ಟು ಸಣ್ಣ ದೋಣಿಯಲ್ಲಿ ಉಗ್ರರು ಬರುವ ಸಾಧ್ಯತೆಯ ಬಗ್ಗೆ, ಆ ದೋಣಿ ಸ್ಫೋಟಗೊಂಡ ರೀತಿಯ ಬಗ್ಗೆಯೂ ಅನುಮಾನಗಳಿವೆ. ಅದ್ಯಾವ ಅಮೃತ ಘಳಿಗೆಯಲ್ಲಿ ಆ ಲೇಖನವನ್ನು ಓದಿದರೋ ಕಾಂಗ್ರೆಸ್‍ನ ವಕ್ತಾರ ಅಜಯ್ ಕುಮಾರ್, ಇಡೀ ಘಟನೆಯೇ ಒಂದು ನಾಟಕ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ದೋಣಿಯಲ್ಲಿದ್ದವರು ಪಾಕ್‍ನ ಉಗ್ರರೇ ಎಂಬುದನ್ನು ಸಾಬೀತುಪಡಿಸಿ ಅವರಿಗೆ ಈಗ್ಗಿಂದೀಗಲೇ ಸಾಕ್ಷ್ಯಗಳನ್ನು ತೋರಿಸಬೇಕಂತೆ! ಅವರೊಬ್ಬರೇ ಅಲ್ಲ, ಕಾಂಗ್ರೆಸ್‍ನ ಎಲ್ಲರದ್ದೂ ಇದೇ ವರಾತವೇ! ಇಲ್ಲೇನು ಅಲ್ಪಸಂಖ್ಯಾತರ ಎನ್‍ಕೌಂಟರ್‍ ನಡೆದಿದೆಯೇ ಇವರ ಮೈಮೇಲೆ ಹೀಗೆ ದೇವರು ಬರುವುದಕ್ಕೆ? ಇನ್ನು ಇವರ ತಾಳಕ್ಕೆ ತಕ್ಕಂತೆ ಕುಣಿಯುವ ಕೆಲ ಟಿವಿ ಮಾಧ್ಯಮಗಳೋ, 'ಅವಸರದಲ್ಲಿ ಅಜ್ಜಿ ಮೈನೆರೆದಂತೆ' ಎಂಬ ಗಾದೆಯ ತದ್ರೂಪು. ಒಂದು ಸಣ್ಣ ವಿಷಯ ಸಿಕ್ಕರೂ ಸಾಕು, ಮೈಕು, ಕ್ಯಾಮೆರಾ ತೂರಿಸಿ ಎಲ್ಲವನ್ನೂ ಅಲ್ಲಿಯೇ ತೋರಿಸಿಬಿಡಬೇಕು!

ಅಂದ ಹಾಗೆ, ಆ ಲೇಖನದಲ್ಲಿರುವ ಅಂಶಗಳಿಗೆ ಎಲ್ಲರದೂ ಸಹಮತವಿಲ್ಲ. ಮೊದಲನೆಯದಾಗಿ ಕಳ್ಳಸಾಗಣೆದಾರರು ಪಾಕಿಸ್ತಾನದಿಂದ ಭಾರತಕ್ಕೆ ಡೀಸಲ್ ಸಾಗಿಸುವುದಿಲ್ಲ. ಏಕೆಂದರೆ ಪಾಕಿಸ್ತಾನದಲ್ಲಿ ಡೀಸಲ್‍ಗೆ ಲೀಟರ್ ಒಂದಕ್ಕೆ 86ರೂಪಾಯಿಗಳಾದರೆ ಭಾರತದಲ್ಲಿ 56ರೂಪಾಯಿಗಳು ಮಾತ್ರ! ಕದ್ದು ತರುವವರು ಅಲ್ಲಿ ಜಾಸ್ತಿ ದುಡ್ಡು ಕೊಟ್ಟು ತಂದು ಇಲ್ಲಿ ಕಡಿಮೆಗೆ ಮಾರುವ ಧರ್ಮಾತ್ಮರೇ? ಡೀಸಲ್ ಹೋಗುವುದು ಏನಿದ್ದರೂ ಭಾರತದಿಂದಲೇ. ಇನ್ನು ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುತ್ತಿತ್ತು ಎಂದುಕೊಳ್ಳೋಣವೆಂದರೆ, ಅವರುಗಳು ಇದೊಂದೇ ಕಾರಣಕ್ಕೆ ದೋಣಿಯನ್ನು ಸ್ಫೋಟಿಸಿಕೊಂಡು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವುದಿಲ್ಲ. ಗಾರ್ಡ್ಗಳ ಕೈಗೆ ಸಿಕ್ಕಿಬೀಳುವ ಸಂದರ್ಭ ಬಂದರೆ ಸೀದಾ ತಮ್ಮ ಸರಕನ್ನು ಸಮುದ್ರಕ್ಕೆ ಎಸೆದು ಬಿಡುತ್ತಾರೆ ಅಥವಾ ಶರಣಾಗುತ್ತಾರೆ. ದೋಣಿಯಲ್ಲಿದ್ದವರು ಅಮಾಯಕರೇ ಆಗಿದ್ದರೆ ಹೀಗೇಕೆ ಮಾಡುತ್ತಿದ್ದರು?

ಪೇಶಾವರದಲ್ಲಿ ನೂರಾರು ಮಕ್ಕಳು ಸತ್ತ ಮೇಲಾದರೂ ಪಾಕಿಸ್ತಾನ ಬದಲಾಗಿದೆಯಾ? ಇಲ್ಲ. ಗಡಿಯಲ್ಲಿ ಒಂದೇ ಸಮನೆ ನಮ್ಮ ಯೋಧರನ್ನು ಕೆಣಕುತ್ತಿದೆ. ತಕ್ಕ ಪ್ರತ್ಯುತ್ತರ ನೀಡುವಲ್ಲಿ ನಮ್ಮವರೂ ನಿರತರಾಗಿದ್ದಾರೆ. ಅದರ ಗ್ರೆನೇಡ್ ದಾಳಿಯಿಂದ ರಕ್ಷಿಸಲು ಸಾವಿರಾರು ಹಳ್ಳಿಗರನ್ನು ಸ್ಥಳಾಂತರಿಸಲಾಗಿದೆ. ಶಾಲೆಗಳು ಮುಚ್ಚಿವೆ. ಗುಜರಾತಿನಲ್ಲಿ ನಡೆಯಲಿರುವ ಹೂಡಿಕೆದಾರರ ಸಭೆಗೆ ಅಮೆರಿಕದ ಜಾನ್ ಕೆರ್ರಿ ಬರುತ್ತಿರುವುದು ಹಾಗೂ ನಮ್ಮ ಗಣರಾಜ್ಯೋತ್ಸವ ಸಮಾರಂಭಕ್ಕೆ ಒಬಾಮಾ ಆಗಮಿಸುತ್ತಿರುವುದು ಪಾಕಿಸ್ತಾನದ ಕಣ್ಣುಗಳನ್ನು ಕೆಂಪಗಾಗಿಸಿದೆ. ಹೇಗಾದರೂ ಸರಿಯೇ, ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯವಾಗಲೇಬೇಕೆಂದು ಅದು ಪಣ ತೊಟ್ಟು ನಿಂತಿದೆ. ಹಾಗಾಗಿ ನಮ್ಮ ಪೂರ್ವ, ದಕ್ಷಿಣ ಹಾಗೂ ಪಶ್ಚಿಮದ ಸಮುದ್ರಗಳಲ್ಲೆಲ್ಲ ಬಂದೋಬಸ್ತ್ ಬಿಗಿಯಾಗಿದೆ. ಯೋಧರು ಮೈಯೆಲ್ಲ ಕಣ್ಣಾಗಿ ಗಡಿಗಳನ್ನು ಕಾಯುತ್ತಿದ್ದಾರೆ. ಇಂಥ ಹೊತ್ತಿನಲ್ಲಿ, ಸಣ್ಣ ಪುಟ್ಟ ಸುಳಿವುಗಳನ್ನೇ ಆಗಲಿ, ಕಡೆಗಣಿಸಲಾದೀತೇ?

ಸಾಕ್ಷ್ಯ ಬೇಕು ಸಾಕ್ಷ್ಯ ಬೇಕು ಎಂದು ಒಂದೇ ಸಮನೆ ಹರಿಹಾಯುತ್ತಿರುವ ಕಾಂಗ್ರೆಸ್ ತಾನು ಸರ್ಕಾರದಲ್ಲಿದ್ದಾಗ ಮಾಡಿದ್ದೇನು? ಕಸಬ್ ನಡೆಸಿದ ಮಾರಣಹೋಮದ ರೂವಾರಿ ಜಾಕಿ-ಉರ್-ರೆಹಮಾನ್-ಲಖ್ವಿಯ ವಿರುದ್ಧ ಬಹಳಷ್ಟು ಸಾಕ್ಷ್ಯಗಳು ಹೇಗೂ ದೊರೆತಿದ್ದವು. ಅವನ್ನೆಲ್ಲ ಇಲ್ಲೇ ಬಹಿರಂಗಪಡಿಸಿ ಎಂದರೂ ಕೇಳದೆ ಜೋಪಾನವಾಗಿ ಗಂಟು ಕಟ್ಟಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿತಲ್ಲ, ಅವೇ ಸಾಕ್ಷ್ಯಗಳು ಲಖ್ವಿಯನ್ನು ಶಿಕ್ಷಿಸಲು ಸಾಲದು ಎಂದು ಅವನನ್ನು ಬಿಡುಗಡೆ ಮಾಡಲು ಹೊರಟಿತ್ತು ಪಾಕಿಸ್ತಾನದ (ಅ)ನ್ಯಾಯಾಲಯ! ಈಗ ಸಾಕ್ಷ್ಯ ಕೇಳುವ ಯಾವ ನೈತಿಕ ಹಕ್ಕಿದೆ ಅದಕ್ಕೆ? ಆಗ ಮುಂಬೈ ದಾಳಿಯನ್ನು ಜಂಟಿಯಾಗಿ ನಡೆಸಿದ್ದೇ ಆರ್‍ಎಸ್‍ಎಸ್, ಇಸ್ರೇಲಿನ ಗುಪ್ತಚರ ಸಂಸ್ಥೆ ಮೊಸಾದ್ ಹಾಗೂ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಎಂಬ ಹೇಳಿಕೆಯನ್ನೂ ಘಂಟಾಘೋಷವಾಗಿ ನೀಡಿಬಿಟ್ಟಿದ್ದರು ದಿಗ್ವಿಜಯ್ ಸಿಂಗ್! ಈಗ ಈ ಪ್ರಯತ್ನದಲ್ಲಿ ಕಾಂಗ್ರೆಸ್‍‍ನ ಕೈವಾಡವಿದೆಯಾ ಹಾಗಾದರೆ?

ತನಿಖೆ ಇನ್ನೂ ನಡೆಯುತ್ತಿದೆ, ಎಲ್ಲ ಮುಗಿಯುತ್ತಿದ್ದಂತೆ ವಿವರಗಳನ್ನು ನೀಡುತ್ತೇವೆ ಎನ್ನುತ್ತಿದೆ ಸರ್ಕಾರ. ದೇಶದ ಭದ್ರತೆಯ ಕುರಿತ ಕಾರ್ಯಾಚರಣೆ ಎಂದ ಮೇಲೆ ಕೆಲವು ರಹಸ್ಯಗಳನ್ನು ಕಾಪಾಡಿಕೊಳ್ಳಲೇಬೇಕಲ್ಲವಾ? ಯಾವುದನ್ನು ವಿರೋಧಿಸಬೇಕು ಯಾವುದನ್ನು ಕೂಡದು ಎಂಬ ಜ್ಞಾನವೇ ಇಲ್ಲದ, ಭದ್ರತೆಯ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‍ ವಿರೋಧ ಪಕ್ಷವೆಂದು ಕರೆಸಿಕೊಳ್ಳಲೂ ನಾಲಾಯಕ್ಕು ಎನಿಸುವುದಿಲ್ಲವಾ? ಒಂದು ಪಕ್ಷ ಈ ದೋಣಿಯೇನಾದರೂ ಉಗ್ರರದ್ದೇ ಆಗಿದ್ದು, ಅವರೆಲ್ಲ ಗುಜರಾತಿನ ಒಳಹೊಕ್ಕಿದ್ದರೆ ಏನು ಗತಿಯಾಗುತ್ತಿತ್ತು ಹೇಳಿ? ಉಗ್ರವಾದವನ್ನು ಹತ್ತಿಕ್ಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಇದೇ ಪಕ್ಷ ಆಗ ರಂಪ ಮಾಡುತ್ತಿರಲಿಲ್ಲವಾ?
ನಿಜವಾಗಿಯೂ ಬೇಸರವಾಗುತ್ತಿರುವುದು ಎರಡು ವಿಷಯಗಳಿಗೆ. ಒಂದು, ನಮ್ಮ ದೇಶದ ಪಕ್ಷ ವೊಂದು ಪಾಕಿಸ್ತಾನವನ್ನು ಕಟಕಟೆಯಲ್ಲಿ ನಿಲ್ಲಿಸುವುದನ್ನು ಬಿಟ್ಟು ಅದರ ಪರವಾಗಿರುವುದಕ್ಕೆ. ಇಂಥವೇ ಇನ್ನೊಂದಷ್ಟು ಘಟನೆಗಳಾಗಿಬಿಟ್ಟರೆ ಕಾಂಗ್ರೆಸ್‍ನ ಮುಖ್ಯ ಕಾರ್ಯಾಲಯವನ್ನು ಪಾಕಿಸ್ತಾನಕ್ಕೇ ವರ್ಗಾಯಿಸಿಬಿಡಬಹುದೇನೋ!

ಎರಡು, ದೇಶವನ್ನು ಕಾಯುತ್ತಿರುವವರ ಬಗ್ಗೆ ಕಿಂಚಿತ್ತೂ ಬೆಲೆ ಇಲ್ಲದೆ ಹೀಗೆ ಕೇವಲವಾಗಿ ಮಾತನಾಡುವುದಕ್ಕೆ. ಅರಬ್ಬೀ ಸಮುದ್ರದಲ್ಲಿ ಒಂದೇ ಸಮನೆ ಕಾರ್ಯಾಚರಣೆಯಲ್ಲಿ ನಿರತವಾಗಿರುವ ಕೋಸ್ಟ್ ಗಾರ್ಡ್ ಗಳನ್ನು, 'ಹೋಗಿ, ಸ್ವಲ್ಪ ವಿಶ್ರಾಂತಿ ಪಡೆದು ಬನ್ನಿ', ಎಂದರೆ, 'ದೇಶದ ಭದ್ರತೆ ಮೊದಲು, ನಿದ್ದೆ, ವಿಶ್ರಾಂತಿ ಆಮೇಲೆ' ಎನ್ನುತ್ತಾರೆ ಉತ್ಸಾಹದಿಂದ. ಯಾಕಾಗಿ ಮಾಡಬೇಕು ಅವರು ಇಷ್ಟೆಲ್ಲ? ಇಂಥ ಹೊಣೆಗೇಡಿ ಮಾತುಗಳಿಗೋಸ್ಕರವಾ? ಪ್ರಾಣ ಹೋಗುತ್ತಿದ್ದರೂ ಕಸಬ್‍ನನ್ನು ಬಿಡದೆ ಹಿಡಿದಿದ್ದ ಪೇದೆ ತುಕಾರಾಂ ಓಂಬ್ಳೆ, ಉಗ್ರರನ್ನು ಸದೆಬಡಿಯುತ್ತಲೇ ಸತ್ತ ಮೇಜರ್ ಸಂದೀಪ್ ಉನ್ನಿಕೃಷ್ಣನ್‍ರ ತ್ಯಾಗಗಳು ಅಷ್ಟೊಂದು ಕೇವಲವಾ?

ಹೃದಯದಲ್ಲಿ ನೈತಿಕತೆ, ದೇಶಪ್ರೇಮಗಳೇ ಇಲ್ಲದೆ ಬಾಯಿಯ ತುಂಬೆಲ್ಲ ಬರೀ ಇಂಗ್ಲೀಷ್ ಪದಗಳನ್ನೇ ತುಂಬಿಕೊಂಡಿರುವವರು ನಡೆಸುತ್ತಿರುವ ಹೊಲಸು ರಾಜಕೀಯಕ್ಕೆ ಧಿಕ್ಕಾರವಿರಲಿ!