Monday, 27 June 2016

ಇಂದಿರಾ ಆಗುವುದು ಅಂದುಕೊಂಡಷ್ಟು ಸುಲಭವಲ್ಲ!

ಯುಪಿಎ ಆಡಳಿತಾವಧಿಯ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. 2G, ಕಲ್ಲಿದ್ದಲು, ನ್ಯಾಷನಲ್ ಹೆರಾಲ್ಡ್ ಹಗರಣಗಳ ಪಟ್ಟಿಗೆ ಹೊಸದೊಂದು ಸೇರ್ಪಡೆಯಾಗಿದೆ. ಅದೇ, ಬಹುಕೋಟಿ ಮೌಲ್ಯದ ಹೆಲಿಕಾಪ್ಟರ್ ಹಗರಣ! ಪ್ರಕರಣವನ್ನು ಸ್ಥೂಲವಾಗಿ ಹೇಳಬೇಕೆಂದರೆ, 2000ರಲ್ಲಿ ಭಾರತ ಸರ್ಕಾರ ತನ್ನ ವಿವಿಐಪಿಗಳ ಓಡಾಟಕ್ಕೋಸ್ಕರ ಹೊಸ ಹೆಲಿಕಾಪ್ಟರ್ಗಳನ್ನು ಕೊಳ್ಳಲು ಬಯಸಿತ್ತು. ಹೆಲಿಕಾಪ್ಟರ್ ತಯಾರಿಕಾ ಕಂಪೆನಿಗಳ ಟೆಂಡರ್ ಕರೆದು ಎಲ್ಲ ತಾಂತ್ರಿಕ ಅಗತ್ಯಗಳನ್ನೂ ಪರಿಶೀಲಿಸಿದ ಮೇಲೆ, 2007ರಲ್ಲಿ ಇಟಲಿಯ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪೆನಿಯಿಂದ ಖರೀದಿಸುವುದು ನಿಕ್ಕಿಯಾಯಿತು. ಆಗ ಅಧಿಕಾರದಲ್ಲಿದ್ದಿದ್ದು ಯುಪಿಎ ಸರ್ಕಾರ. 2012ರಲ್ಲಿ ನಾಲ್ಕು ಹೆಲಿಕಾಪ್ಟರ್ಗಳು ಭಾರತಕ್ಕೆ ಬಂದೂ ಬಿಟ್ಟವು. ಆದರೆ 2013ರಲ್ಲಿ ಇಟಲಿ ಸರ್ಕಾರಕ್ಕೆ, ಪ್ರಕರಣದಲ್ಲೆಲ್ಲೋ ನಡೆದಿರಬಹುದಾದ ಭ್ರಷ್ಟಾಚಾರದ ವಾಸನೆ ಮೂಗಿಗೆ ಬಡಿಯಿತು. ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪೆನಿ, ಭಾರತದ ಟೆಂಡರ್ ಪಡೆಯುವ ಸಲುವಾಗಿ ಅಡ್ಡದಾರಿ ಹಿಡಿದಿತ್ತು ಎಂಬ ಅದರ ಗುಮಾನಿ ದಿನದಿನಕ್ಕೂ ಬಲವಾಗುತ್ತಲೇ ಹೋಯಿತು. ಕೊನೆಗೊಂದು ದಿನ ಅದು, ಅಗಸ್ಟಾ ವೆಸ್ಟ್ ಲ್ಯಾಂಡ್ ಮಾತೃ ಕಂಪೆನಿ ಫಿನ್ ಮೆಕಾನಿಕಾದ ಸಿಇಓರನ್ನು ಬಂದಿಸಿತು. ತಕ್ಷಣವೇ ಎಚ್ಚೆತ್ತ ಯುಪಿಎ ಸರ್ಕಾರ, ಹೆಲಿಕಾಪ್ಟರ್ ಒಪ್ಪಂದಕ್ಕೆ ಮಂಗಳ ಹಾಡಿ, ತಾನು ಕೊಟ್ಟಿದ್ದ ಮುಂಗಡ ಹಣವನ್ನೆಲ್ಲ ವಾಪಸ್ ಪಡೆಯಿತು.

ಆದರೆ ಇಟಲಿ ಸರ್ಕಾರ ತನಿಖೆಯನ್ನು ಕೈಬಿಡಲಿಲ್ಲ. ಭಾರತಕ್ಕೆ ಹೆಲಿಕಾಪ್ಟರ್ಗಳನ್ನು ಮಾರುವ ಒಪ್ಪಂದವನ್ನು ಕುದುರಿಸಿದ ಮಧ್ಯವರ್ತಿಗಳ ಜಾಡು ಹಿಡಿದು ಹೊರಟಿತು. ಆಗ ಬೆಳಕಿಗೆ ಬಂದಿದ್ದು, ರಾಲ್ಫ್ ಹಶ್ಕೆ, ಕಾರ್ಲೋಸ್ ಗೆರೋಸಾ ಹಾಗೂ ಕ್ರಿಸ್ಟಿಯನ್ ಮಿಚೆಲ್ ಎಂಬ ದಲ್ಲಾಳಿಗಳು ನೂರಾರು ಕೋಟಿ ರೂಪಾಯಿ ಲಂಚವನ್ನು ಕೆಲ ಭಾರತೀಯ ರಾಜಕಾರಣಿಗಳಿಗೆ ನೀಡಿದ್ದಾರೆನ್ನಲಾದ ಸತ್ಯ. ವಿಷಯ ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಕ್ರಿಸ್ಟಿಯನ್ ಮಿಶೆಲ್ ತನ್ನ ಕೈಯ್ಯಾರೆ ಬರೆದಿರುವ, ' ಒಪ್ಪಂದದ ಹಿಂದಿರುವ ಶಕ್ತಿಯೇ ಸೋನಿಯಾ ಗಾಂಧಿ. ಆಕೆಗೆ ಹತ್ತಿರವಿರುವವರನ್ನು ಗುರಿಯಾಗಿಟ್ಟುಕೊಂಡು ಮಾತುಕತೆ ಮುಂದುವರೆಸಿ.' ಎಂಬರ್ಥದ ಪತ್ರ ಇಟಲಿಯ ನ್ಯಾಯಾಲಯದ ಕೈಗೆ ಸಿಕ್ಕಿತು. ಜೊತೆಗೇ, ಸೋನಿಯಾರ ರಾಜಕೀಯ ಸಲಹೆಗಾರ ಅಹಮದ್ ಪಟೇಲ್, ಭಾರತೀಯ ವಾಯು ಸೇನೆಯ ಅಂದಿನ ಮುಖ್ಯಸ್ಥ ಎಸ್.ಪಿ ತ್ಯಾಗಿ, ಅಂದಿನ ರಕ್ಷಣಾ ಸಚಿವ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಆಸ್ಕರ್ ಫರ್ನಾಂಡಿಸ್‍‍ ಇವರೆಲ್ಲರೂ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುತ್ತದೆ ನ್ಯಾಯಾಲಯ. 225 ಪುಟಗಳ ಅದರ ತೀರ್ಪಿನಲ್ಲಿ, 17 ಪುಟಗಳು ಎಸ್ಪಿ ತ್ಯಾಗಿಯವರಿಗೇ ಮೀಸಲಾಗಿವೆ. ತೀರ್ಪಿನಲ್ಲಿ ಉಲ್ಲೇಖಿಸಲಾಗಿರುವ 'ಸಿನೋರಾ ಗಾಂಧಿ' (ಶ್ರೀಮತಿ ಎನ್ನುವುದಕ್ಕೆ ಇಟಾಲಿಯನ್ನಲ್ಲಿ ಸಿನೋರಾ ಎನ್ನುತ್ತಾರೆ) ಎಂದರೆ ಸೋನಿಯಾರೇ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಅಂದಿನ ಭದ್ರತಾ ಸಲಹೆಗಾರ ಎಂ.ಕೆ ನಾರಾಯಣನ್ ಹೆಸರೂ ತೀರ್ಪಿನಲ್ಲಿ ಉಲ್ಲೇಖವಾಗಿದೆ. ಆದ್ದರಿಂದಲೇ ಭಾರತದೆಲ್ಲೆಡೆ ಈಗ ಕೋಲಾಹಲ. ಸುಬ್ರಮಣಿಯನ್ ಸ್ವಾಮಿ ರಾಜ್ಯಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸುತ್ತಿದ್ದ ಹಾಗೇ ಕಾಂಗ್ರೆಸ್ಸಿಗರೆಲ್ಲರೂ 'ಹೋ' ಎಂದು ಅರಚಿ ಬಾವಿಗಿಳಿದಿದ್ದರು. ಹಮೀದ್ ಅನ್ಸಾರಿಯವರು ಮಧ್ಯ ಪ್ರವೇಶಿಸದಿದ್ದರೆ ಜಟಾಪಟಿಯಾಗೇಬಿಡುತ್ತಿತ್ತೋ ಏನೋ!

ಕಾಂಗ್ರೆಸ್ಸಿಗರ ಪ್ರತಿಕ್ರಿಯೆಗಳೇನೇ ಇರಲಿ, ಭ್ರಷ್ಟಾಚಾರ ನಡೆದಿರುವುದಂತೂ ಸತ್ಯ ಎಂದು ಇಟಲಿಯ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಸುಲಭದಲ್ಲಿ ಯಾವ ಸ್ಪಷ್ಟೀಕರಣವನ್ನೂ ನೀಡದ ಅಹಮದ್ ಪಟೇಲ್ ಸಹ, ಅರ್ನಬ್ ಗೋಸ್ವಾಮಿಯ ಮುಂದೆ ನಿಂತು ಮೂಗು ಉಜ್ಜಿದ್ದಾರೆ. ನಿಜವಾಗಿಯೂ ನಡೆದಿದ್ದೇನು, ಯಾರ್ಯಾರು ದೋಷಿಗಳು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಇವೆಲ್ಲವುಗಳ ನಡುವೆಯೂ ನಮ್ಮ ಗಮನ ಸೆಳೆಯುವುದು ಸೋನಿಯಾರ ಭಂಡ ಧೈರ್ಯ. 'ನಾನು ಯಾರಿಗೂ ಹೆದರುವುದಿಲ್ಲ.' ಎಂದು ಮೊಂಡು ಮುಖ ಮಾಡಿ ಹೇಳಿದ್ದಾರೆ ಆಕೆ. ನ್ಯಾಷನಲ್ ಹೆರಾಲ್ಡ್ ಪ್ರಕರಣ ಬೆಳಕಿಗೆ ಬಂದಾಗಲೂ ಅಷ್ಟೇ. 'ನಾನು ಇಂದಿರಾ ಗಾಂಧಿಯ ಸೊಸೆ, ನಾನು ಯಾರಿಗೂ ಹೆದರಬೇಕಾಗಿಲ್ಲ.' ಎಂದು ಖದರಿನಿಂದ ಉತ್ತರಿಸಿದ್ದರು. ಪದೇಪದೇ ತಮ್ಮ ಅತ್ತೆಯಿಂದ ಸ್ಫೂರ್ತಿ ಪಡೆಯುವ ಪ್ರಯತ್ನದಲ್ಲಿದ್ದಾರೆಯೇ ಸೋನಿಯಾ? ಹೆದರಿಕೆಯನ್ನು ಹತ್ತಿಕ್ಕಿಕೊಳ್ಳಲು ಇಂದಿರಾರರನ್ನು ಎಳೆದು ತರುತ್ತಿದ್ದಾರೆಯೇ? ಅಥವಾ ತನ್ನ ಅತ್ತೆ ಎಂಥ ಗಟ್ಟಿಗಿತ್ತಿಯಾಗಿದ್ದರು ಎನ್ನುವುದನ್ನು ನಮಗೆ ನೆನಪಿಸುತ್ತಿದ್ದಾರೆಯೇ? ಇತಿಹಾಸ ಬಲ್ಲವರೆಲ್ಲರಿಗೂ ಇಂದಿರಾರ ಛಾತಿ ಗೊತ್ತಿದೆ.

ತುರ್ತು ಪರಿಸ್ಥಿತಿಯನ್ನು ಅಸಾಂವಿಧಾನಿಕವಾಗಿ ಹೇರಿ ಅದನ್ನೂ ಜೀರ್ಣಿಸಿಕೊಂಡ ಸರ್ವಾಧಿಕಾರಿ ಆಕೆ! ಸಂವಿಧಾನವವನ್ನು ರಚಿಸಿದಾಗಲೇ ಅಂಬೇಡ್ಕರ್ ಒಂದು ಮಾತು ಹೇಳಿದ್ದರು. 'ಸಂವಿಧಾನ ಎಷ್ಟೇ ಚೆನ್ನಾಗಿದ್ದರೂ ಅದನ್ನು ಆಚರಣೆಗೆ ತರುವವರು ಸರಿಯಾಗಿರದಿದ್ದರೆ ಅದೂ ಕೆಡುವುದು ಖಂಡಿತ.' ಎಂದು. ಅದನ್ನು ಅಕ್ಷರಶಃ ನಿಜ ಮಾಡಿ ತೋರಿಸಿಬಿಟ್ಟರು ಇಂದಿರಾಗಾಂಧಿ.

1975ರ ಜೂನ್ 12ರಂದು ಅಲಹಾಬಾದ್‍ನ ಉಚ್ಚ ನ್ಯಾಯಾಲಯ ಇಂದಿರಾಗಾಂಧಿಗೆ ವಿರುದ್ಧವಾಗಿ ತೀರ್ಪು ನೀಡಿದ್ದು, ಆಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಗೊತ್ತಿರದ ವಿಚಾರವೊಂದಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆಗಸ್ಟ್ 11ರಂದು ನಿಗದಿಯಾಗಿತ್ತು. ಅಷ್ಟರಲ್ಲೇ ಇಂದಿರಾ ಗಾಂಧಿ ಏನು ಮಾಡಿದರು ಗೊತ್ತೇ? ಸಂವಿಧಾನಕ್ಕೆ 39ನೇ ತಿದ್ದುಪಡಿಯನ್ನು ತಂದರು! ನ್ಯಾಯಾಲಯಗಳು ಪ್ರಧಾನ ಮಂತ್ರಿಯ ವಿರುದ್ಧ ಚುನಾವಣಾ ಅವ್ಯವಹಾರಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಬಾರದು ಎಂಬುದೇ ಆ ತಿದ್ದುಪಡಿಯ ಸಾರ! ಆ ತಿದ್ದುಪಡಿ ಆತುರಾತುರವಾಗಿ ಆಗಸ್ಟ್ ಏಳನೆಯ ತಾರೀಖಿನಂದು ಲೋಕಸಭೆಯ ಹೊಸ್ತಿಲನ್ನು ದಾಟಿತು! ಮರುದಿನ ಯಾವುದೇ ತಕರಾರಿಲ್ಲದೆ ರಾಜ್ಯಸಭೆಯ ಗಡಿಯನ್ನೂ ದಾಟಿದಾಗ ಆಗಸ್ಟ್ ಒಂಭತ್ತರಂದು ಹದಿನೇಳು ರಾಜ್ಯಗಳ ವಿಧಾನಸಭಾ ಸದಸ್ಯರನ್ನು ಕರೆಸಿ ಅವ ಒಪ್ಪಿಗೆಯನ್ನು ತೆಗೆದುಕೊಳ್ಳಲಾಯಿತು! ಆಗಸ್ಟ್ ಹತ್ತು ಭಾನುವಾರ! ಸನ್ಮಾನ್ಯ ರಾಷ್ಟ್ರಪತಿಗಳು ಆತುರಾತುರವಾಗಿ ಅಂದೇ ತಮ್ಮ ಅಂಕಿತವನ್ನೂ ಹಾಕಿ, ಸಂಬಂಧಪಟ್ಟ ನಾಗರಿಕ ಸೇವಾ ಅಧಿಕಾರಿಗಳು ವಿಧೇಯರಾಗಿ ತಮ್ಮ ಕಚೇರಿಗಳನ್ನು ತೆರೆದು ಅಧಿಸೂಚನೆಯನ್ನೂ ಹೊರಡಿಸಿಬಿಟ್ಟರು! ಮರುಬೆಳಿಗ್ಗೆ ಇಂದಿರಾ ಗಾಂಧಿಯ ಪರ ವಕೀಲರು, ನ್ಯಾಯಾಧೀಶರಿಗೆ ಸಂವಿಧಾನದ ಹೊಸ ತಿದ್ದುಪಡಿಯ ಬಗ್ಗೆ ಹೇಳುತ್ತಿದ್ದರೆ ನ್ಯಾಯಾಧೀಶರು ಸುಸ್ತು! ಹೀಗೆ ರಾತ್ರೋರಾತ್ರಿ ತಿದ್ದುಪಡಿ ತಂದು ಪ್ರಧಾನಿಯನ್ನು ಕಾನೂನಿಗಿಂತ ಮೇಲೆ ಕೂಡಿಸಿ, ಅನುಚ್ಛೇದ 14(ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು) ಅನ್ನೇ ಉಲ್ಲಂಘಿಸಿದ್ದರು!



'ಎಕ್ ಶೇರ್‍ನಿ, ಸೌ ಲಂಗೂರ್, ಚಿಕ್‍ಮಗಳೂರ್ ಭಾಯ್ ಚಿಕ್‍ಮಗಳೂರ್.' ಈ ಘೋಷಣೆ 1978ರಲ್ಲಿ ಬಹಳ ಜನಪ್ರಿಯವಾಗಿತ್ತು. ಓರ್ವ ಸಿಂಹಿಣಿಗೆ ನೂರು ಕೋತಿಗಳು ಯಾವ ಲೆಕ್ಕ ಎಂಬುದನ್ನು ಹಿಂದಿಯಲ್ಲಿ ಪ್ರಾಸಬದ್ಧವಾಗಿ ಹೇಳಿರುವ ಪರಿ ಅದು. 1977 ಲೋಕಸಭಾ ಚುನಾವಣೆಯಲ್ಲಿ ಇಂದಿರಾ ರಾಯ್ ಬರೇಲಿಯಲ್ಲಿ ಹೀನಾಯವಾಗಿ ಸೋತಿದ್ದರು. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಉಪಾಯವಾಗಿ ಚಿಕ್ಕಮಗಳೂರನ್ನೇ ಆರಿಸಿಕೊಂಡಿದ್ದರು! ತುರ್ತುಪರಿಸ್ಥಿತಿಯ ನಂತರ ಅಧಿಕಾರಕ್ಕೆ ಬಂದ ಜನತಾ ಪಕ್ಷ ಒಂದರ ಮೇಲೊಂದರಂತೆ ಅನಗತ್ಯ ತಪ್ಪುಗಳನ್ನು ಎಸಗಿತು. ಶಾಹ್ ನಿಯೋಗ ತುರ್ತು ಪರಿಸ್ಥಿತಿಯ ಸಂದರ್ಭದ ದೌರ್ಜನ್ಯಗಳನ್ನೆಲ್ಲ ಪರಿಶೀಲಿಸುತ್ತಿದೆ ಎನ್ನುವುದು ಗೊತ್ತಿದ್ದರೂ ಚೌಧರಿ ಚರಣ್ ಸಿಂಗ್ ಇಂದಿರಾ ಗಾಂಧಿಯನ್ನು ಹಣಿಯುವ ಆತುರಕ್ಕೆ ಬಿದ್ದರು. ಆಕೆಯ ವಿರುದ್ಧ ಅನವಶ್ಯಕವಾಗಿ ಕೇಸುಗಳನ್ನು ಜಡಿದರು. ಮಧು ಲಿಮಯೆ ಹಾಗೂ ರಾಜ್‍ ನಾರಾಯಣ್ ಭಾರತೀಯ ಜನಸಂಘದ ವಿರುದ್ಧ ತೋಳೇರಿಸಿ ಯುದ್ಧಕ್ಕೆ ನಿಂತರು. ಮೊರಾರ್ಜಿ ದೇಸಾಯಿ ಹಾಗೂ ಜಗಜೀವನರಾಮ್‍ರಿಗೆ ಉಳಿದವರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತೇ ಆಗಲಿಲ್ಲ! ಎಲ್ಲೆಲ್ಲೂ ಗೊಂದಲ! ಹಲವಾರು ಅಧಿಕಾರ ಕೇಂದ್ರಗಳು. ಮುಂದಿನ ಪರಿಣಾಮವೇನಾಗಬಹುದು ಎನ್ನುವುದನ್ನೂ ಯೋಚಿಸದೆ ಇಂದಿರಾ ಗಾಂಧಿಯನ್ನು ಲೋಕಸಭೆಯಿಂದಲೂ ಕಿತ್ತೊಗೆಯಲಾಯಿತು! ಅದನ್ನೆಲ್ಲ ಬಹಳ ಚೆನ್ನಾಗಿ ತಮ್ಮ ಅನುಕೂಲಕ್ಕೆ ಬಳಸಿಕೊಂಡರು ಇಂದಿರಾ. ಉಪಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದು ಬಂದರು. ಆಮೇಲಂತೂ ಚರಣ್ ಸಿಂಗ್‍ರ ಆದೇಶದಂತೆ ಇಂದಿರಾ ಬಂಧಿಯಾದಾಗ ಜನತೆಗೆ ಆಕೆಯ ಮೇಲೆ ಕರುಣೆ ಉಕ್ಕುಕ್ಕಿ ಹರಿಯಿತು! ಆರು ದಿನಗಳ ಕಾಲ ಜೈಲಿನಲ್ಲಿದ್ದ ಇಂದಿರಾ ಅಲ್ಲೇ ಚರಣ್ ಸಿಂಗ್‍ರ ಮನವೊಲಿಸಿ, ಮೊರಾರ್ಜಿ ಸರ್ಕಾರವನ್ನು ಉರುಳಿಸಿದರು. ಎರಡೇ ವರ್ಷಗಳೊಳಗೆ ಮತ್ತೆ ಅಧಿಕಾರಕ್ಕೆ ಬಂದರು!

ಇಂದಿರಾ ಗಾಂಧಿ ತಿಹಾರ್ ಜೈಲಿನಲ್ಲಿ ಬಂದಿಯಾಗಿದ್ದಾಗ ದೇಶದಲ್ಲಿ ಎಷ್ಟೆಲ್ಲ ರಾದ್ಧಾಂತ ನಡೆಯಿತು ನೋಡಿ. ಇಂಡಿಯನ್ ಏರ್‍ಲೈನ್ಸ್ ನ ಒಂದು ವಿಮಾನವನ್ನು ಅಪಹರಿಸುವ ಪ್ರಯತ್ನ ನಡೆದಿತ್ತು. ಉತ್ತರಪ್ರದೇಶದಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು, ದೇವೇಂದ್ರ ಹಾಗೂ ಭೋಲಾ ಪಾಂಡೆ ಎಂಬಿಬ್ಬರು ಆಟದ ಪಿಸ್ತೂಲುಗಳನ್ನು ತೋರಿಸಿ, ವಾರಣಾಸಿಗೆ ಕೊಂಡೊಯ್ಯುವಂತೆ ಹೆದರಿಸಿದ್ದರು! ಇಂದಿರಾ ಗಾಂಧಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂಬುದೇ ಅವರ ಆಗ್ರಹವಾಗಿತ್ತು! ನಿಂತನಿಲುವಿನಲ್ಲೇ ರೋಷಾವೇಶದ ಭಾಷಣ ಬಿಗಿದು ವಿಮಾನದಲ್ಲಿದ್ದ ಹಲವು ಪ್ರಯಾಣಿಕರ ಚಪ್ಪಾಳೆಯನ್ನೂ ಗಿಟ್ಟಿಸಿದ್ದರು! ಕೆಲ ಘಂಟೆಗಳ ನಂತರ ಅವರು ಪೋಲೀಸರ ಮುಂದೆ ಶರಣಾದಾಗ, ಇನ್ನೆಲ್ಲಿ ದಂಗೆಯಾಗಿಬಿಡುತ್ತದೋ ಎಂದು ಹೆದರಿದ ಮೊರಾರ್ಜಿ ದೇಸಾಯಿ ಸರ್ಕಾರ ಅವರ ಕೂದಲನ್ನೂ ಕೊಂಕಿಸದೆ ಬಿಟ್ಟುಬಿಟ್ಟಿತ್ತು! ಆಮೇಲೆ ಅವರಿಬ್ಬರೂ 1980ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಟಿಕೇಟು ಪಡೆದು ಶಾಸಕರಾಗಿದ್ದು ಬೇರೆ ಮಾತು! ಇದು ಕೇವಲ ಒಂದು ಘಟನೆಯಷ್ಟೇ. ಇದಲ್ಲದೆ ನೂರಾರು ದಂಗೆಗಳಾಗಿದ್ದವು. ಹಲವರು ಸತ್ತು, ಸಾವಿರಾರು ಮಂದಿ ಜೈಲು ಸೇರಿದ್ದರು. ಜೈಲಿನ ಹೊರಗೆ ಕೂತ ಆಕೆಯ ಬೆಂಬಲಿಗರು, ‘ಇಂದಿರಾಗಾಂಧಿ ಜಿಂದಾಬಾದ್.’ ಎಂಬ ಘೋಷಣೆಯನ್ನು ಕೂಗಿದ್ದರು. ತಾತ್ಪರ್ಯವಿಷ್ಟೇ. ಮಾಡಿದ್ದೆಲ್ಲವನ್ನೂ ಅರಗಿಸಿಕೊಳ್ಳುವ ತಾಕತ್ತು ಇಂದಿರಾರಿಗಿತ್ತು.

ಅವುಗಳನ್ನೇ ಉದಾಹರಣೆಯಾಗಿಟ್ಟುಕೊಂಡು ಸೋನಿಯಾ ಈಗಲೂ ಧೈರ್ಯ ತಂದುಕೊಳ್ಳುತ್ತಿದ್ದಾರೋ ಏನೋ! ಆಕೆಯ ಒಂದೊಂದು ಮಾತು-ಕೃತಿಯನ್ನೂ ಅಳೆದು ನೋಡುವ ಜನರಿದ್ದಾರೆ ಎನ್ನುವುದನ್ನು ಆಕೆ ಮರೆತಂತಿದೆ. ಇಶ್ರತ್ ಜಹಾನ್ ವಿಷಯದಲ್ಲಿ ಸುಳ್ಳು ಅಫಿಡೆವಿಟ್ಗಳನ್ನು ಮಾಡಿಸಿದ, ಗೋಧ್ರಾ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯದ ಮುಖ್ಯಮಂತ್ರಿಯೊಬ್ಬರನ್ನು ಇನ್ನಿಲ್ಲದಂತೆ ಅವಮಾನಿಸಿದ, ಅಂಬೆಗಾಲಿಡಲು ಬರದ ಮಗನನ್ನು ಮ್ಯಾರಥಾನ್ಗೆ ನೂಕಿರುವ ಸೋನಿಯಾ ಒಂದು ವಿಷಯವನ್ನು ಮರೆಯುತ್ತಿದ್ದಾರೆ. ಇಂದಿನ ರಾಜಕೀಯ ಪರಿಸ್ಥಿತಿ ಹಾಗೂ ಜನರ ಮನಸ್ಥಿತಿ ಎರಡೂ ಬದಲಾಗಿದೆ.

ಅವರೆಷ್ಟೇ ಪಲ್ಟಿ ಹೊಡೆದರೂ ಇಂದಿರಾ ಆಗುವುದಕ್ಕೆ ಸಾಧ್ಯವೇ ಇಲ್ಲ!

ಗ್ಯಾಲರಿಯಲ್ಲಿನ ದೇವರು ಗುಡಿಗೆ ಮರಳುತ್ತಿವೆ!

ಪ್ರಕರಣ 1: ಚೋಳ ವಂಶಕ್ಕೆ ಸೇರಿದ ನಟರಾಜನ ಕಂಚಿನ ವಿಗ್ರಹ. ತಮಿಳುನಾಡಿನ ಬೃಹದೇಶ್ವರ ದೇವಾಲಯದ್ದು. 2006 ನವೆಂಬರ್ ಸುಮಾರಿಗೆ ದೇವಸ್ಥಾನದಿಂದ ಕಳುವಾಯಿತು. ಅಲ್ಲಿಂದ ನೇರವಾಗಿ ಅಮೆರಿಕದ ‘Art of Past Gallery’ ಸೇರಿತು. ಅಲ್ಲಿ ಅದಕ್ಕೆ ನಕಲಿ ವಾರಸುದಾರರು ಹುಟ್ಟಿಕೊಂಡರು. ಅವರುಗಳ ಹೆಸರು ರಾಜ್ ಮೆಹಗೋಬ್ ಮತ್ತು ಆಕೆಯ ಪತಿ ಅಬ್ದುಲ್ಲಾ. ವಿಗ್ರಹವನ್ನು ತಾವೇ ವಾಷಿಂಗ್ಟನ್ನಿನಲ್ಲಿ ಖರೀದಿಸಿದ್ದು ಎನ್ನಲು ಸೂಕ್ತ ಪುರಾವೆಗಳನ್ನು ಸೃಷ್ಟಿಸಿದರು ದಂಪತಿ. ಇದೆಲ್ಲದಕ್ಕೂ ನೆರವಾಗಿದ್ದು ಗ್ಯಾಲರಿಯ ಮಾಲೀಕ ಸುಭಾಷ್ ಕಪೂರ್ ಹಾಗೂ ಅವನ ಮ್ಯಾನೇಜರ್ ಆರೋನ್ ಫ್ರೀಡ್ಮ್ಯಾನ್. ಅಲ್ಲಿ ವಿಗ್ರಹವನ್ನು ಹರಾಜಿಗಿಟ್ಟಾಗ, ಕ್ಯಾನ್ಬೆರಾದಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಆಸ್ಟ್ರೇಲಿಯ ಅದನ್ನು ಖರೀದಿಸಿತು. ಎಷ್ಟಕ್ಕೆ ಗೊತ್ತೇ? ಭರ್ತಿ 50 ಮಿಲಿಯನ್ ಅಮೆರಿಕನ್ ಡಾಲರ್ಗಳಿಗೆ! ಆಸ್ಟ್ರೇಲಿಯಾ ಸೇರಿದ ವಿಗ್ರಹ ಅಲ್ಲಿ ತಣ್ಣಗೆ ಕೂತು ಎಲ್ಲರನ್ನೂ ಸೆಳೆಯುತ್ತಿತ್ತು. ಇತ್ತ 2008 ಆಗಸ್ಟ್ 18ರಂದು ಕಳುವಿನ ಪ್ರಕರಣ ದಾಖಲಾಯಿತು. ಕಳುವಿನ ಬಗ್ಗೆ ಮಾಹಿತಿಯಿದ್ದ ಕೆಲ ಅನಿವಾಸಿ ಭಾರತೀಯರು ಅಕಸ್ಮಾತ್ತಾಗಿ ಎಂಬಂತೆ ಆಸ್ಟ್ರೇಲಿಯಾದ ಗ್ಯಾಲರಿಗೆ ಭೇಟಿ ಕೊಟ್ಟರು. ಇದು ಅದೇ ವಿಗ್ರಹವಿರಬಹುದಾ ಎಂಬ ಅನುಮಾನ ಹುಟ್ಟಿ, ತಕ್ಷಣ ಅವರು ವಿಗ್ರಹದ ಮೂಲವನ್ನು ಬೆನ್ನತ್ತಿದರು. ಪಾಂಡಿಚೇರಿಯ ಫ್ರೆಂಚ್ ಇನ್ಸ್ಟಿಟ್ಯೂಟ್ ಇಂಥ ಪುರಾತನ ವಿಗ್ರಹಗಳ ಚಿತ್ರ ಸಂಗ್ರಹವನ್ನು ಇಟ್ಟುಕೊಂಡಿದೆ ಎಂಬ ವಿಷಯ ಗೊತ್ತಾಗಿ ಅಲ್ಲಿ ತಡಕಾಡಿದಾಗ ವಿಗ್ರಹದ ಚಿತ್ರ ಸಿಕ್ಕೇಬಿಟ್ಟಿತು. ಒಂದೆರಡಲ್ಲ, ಹಲವಾರು ಭಂಗಿಗಳದ್ದು! ಸರಿ, ಅದನ್ನು ತರಿಸಿಕೊಂಡ ಭಾರತೀಯರು ಮತ್ತೊಮ್ಮೆ ವಿಗ್ರಹದತ್ತ ನಡೆದರು. ಎರಡನ್ನೂ ಕೂಲಂಕಷವಾಗಿ ಪರೀಕ್ಷಿಸಿ, ಅದು ಕಳುವಾದ ವಿಗ್ರಹವೇ ಎಂಬುದನ್ನು ಖಚಿತಪಡಿಸಿಕೊಂಡರು.
ಮುಂದಿನದ್ದೇ ಸಾಹಸ. ಇದು ಕದ್ದ ಮಾಲು ಎಂಬುದು ಆಸ್ಟ್ರೇಲಿಯಾಕ್ಕೆ ಗೊತ್ತಿಲ್ಲ. ಅದನ್ನು ನೇರವಾಗಿ ಅವರಿಗೆ ಹೇಳುವ ಹಾಗೂ ಇಲ್ಲ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿದರು ಭಾರತೀಯರು. ವಿಷಯವನ್ನು ಸಾಕ್ಷ್ಯಗಳ ಸಮೇತ ಪ್ರಸ್ತುತಪಡಿಸಲಾಯಿತು. ವಿಷಯ ಗೊತ್ತಾಗುತ್ತಿದ್ದ ಹಾಗೇ ಎಚ್ಚೆತ್ತ ಸರ್ಕಾರ ಆಸ್ಟ್ರೇಲಿಯಾಕ್ಕೆ ಇದೆಲ್ಲವನ್ನೂ ಬಿಡಿಸಿ ಹೇಳಿತು. ತಕ್ಷಣ ವಿಗ್ರಹವನ್ನು ಗ್ಯಾಲರಿಯಿಂದ ಹೊರ ತೆಗೆಯಿತು ಆಸ್ಟ್ರೇಲಿಯಾ. ಅಷ್ಟೇ ಅಲ್ಲ, ಅದರ ಪ್ರಧಾನಿ, ಟೋನಿ ಅಬಾಟ್, 2014 ಸೆಪ್ಟೆಂಬರ್ನಲ್ಲಿ ಮೋದಿಯವರನ್ನು ಭೇಟಿಯಾದಾಗ ಅವರ ಮೂಲಕ ಅದನ್ನು ಹಿಂದಿರುಗಿಸಿಯೂ ಬಿಟ್ಟಿತು! ತಾನು ಕೊಟ್ಟ ದುಡ್ಡನ್ನು ಮರಳಿ ಪಡೆಯುವ ಸಲುವಾಗಿ ಸುಭಾಷ್ ಕಪೂರ್‍, ಅವನ ಆರ್ಟ್ ಗ್ಯಾಲರಿ ಹಾಗೂ ಮ್ಯಾನೇಜರ್ ಆರೋನ್ ಫ್ರೀಡ್ಮಾನ್ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿತು.


ಪ್ರಕರಣ 2: ತಮಿಳುನಾಡಿನ ದೇವಾಲಯವೊಂದರಿಂದ, ಕಲ್ಲಿನ ಅರ್ಧನಾರೀಶ್ವರನ ವಿಗ್ರಹದ ಕಳುವು. ಕಳ್ಳತನ ಅರಿವಿಗೆ ಬರಬಾರದೆಂದು ನಕಲಿ ವಿಗ್ರಹದ ಸ್ಥಾಪನೆ. ದೆಹಲಿಯ ಉತ್ತಮ್ ಸಿಂಗ್ ಅಂಡ್ ಸನ್ಸ್ ಆರ್ಟ್ ಗ್ಯಾಲರಿಯ ನೆರವಿನಿಂದ ವಿಗ್ರಹದ ವಾರಸುದಾರಿಕೆ ಮತ್ತೆ ಮೆಹಗೋಬ್ ಹಾಗೂ ಆಕೆಯ ಗಂಡನ ಮಡಿಲಿಗೆ! ಸಲ ವಿಗ್ರಹ ಹಾರಿದ್ದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಮ್ಯೂಸಿಯಂ ಒಂದಕ್ಕೆ. ಹರಾಜಿನ ಬೆಲೆ ಮೂರು ಮಿಲಿಯನ್ ಅಮೆರಿಕನ್ ಡಾಲರ್ಗಳು! ಅದನ್ನು ವಾಪಸ್ ತರುವ ಮತ್ತೊಂದು ಪ್ರಯತ್ನ ಅನಿವಾಸಿ ಭಾರತೀಯರಿಂದ.
ಇವೆರಡೇ ಅಲ್ಲ, ಇಂಥ ಹಲವಾರು ಪ್ರಕರಣಗಳನ್ನು ಬೆಳಕಿಗೆ ತರುತ್ತಿದ್ದಾರೆ ಆಗ್ನೇಯ ಏಷ್ಯಾದ ದೇಶಗಳಲ್ಲಿ (ಸಿಂಗಪೂರ್, ಮಲೇಷಿಯಾ, ಥಾಯ್ಲೆಂಡ್, ವಿಯೆಟ್ನಾಂ, ಕಾಂಬೋಡಿಯಾ ಮುಂತಾದವು) ನೆಲೆಸಿರುವ ಕೆಲ ಭಾರತೀಯರು. ಮಧ್ಯಪ್ರದೇಶದ ದೇವಾಲಯವೊಂದರ ಮರಳುಗಲ್ಲಿನ ಯಕ್ಷಿ, ತಮಿಳುನಾಡಿನ ದೇವಾಲಯದ ಕಂಚಿನ ಗಣೇಶ, ಚೋಳ ವಂಶದ ಕಂಚಿನ ಉಮಾಪರಮೇಶ್ವರಿಯ ವಿಗ್ರಹಗಳೆಲ್ಲ ವಿದೇಶೀ ಗ್ಯಾಲರಿಗಳಿಂದ ಹೊರಬರುತ್ತಿವೆ ಎಂದರೆ ಅದರ ಶ್ರೇಯಸ್ಸೆಲ್ಲ ಸಲ್ಲಬೇಕಾಗಿರುವುದು ಅವರಿಗೇ. ‘The India Pride Project’ ಎಂಬ ಹೆಸರಿನಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ಏಕೈಕ ಉದ್ದೇಶ, ಕಳುವಾದ ವಿಗ್ರಹಗಳನ್ನು, ಮೂಲಕ ನಮ್ಮ ಸಂಸ್ಕೃತಿಯ ಹೆಗ್ಗುರುತನ್ನು ಅದರ ಸ್ವಸ್ಥಾನಕ್ಕೆ ಸೇರಿಸುವುದು. ಕೆಲಸಕ್ಕೆ ಬೇಕಾದ ತನಿಖೆ, ನಿಖರತೆ, ಗೌಪ್ಯತೆಗಳು ಬಹಳ. ಇದು ಕೇಳಲು ಎಷ್ಟು ರೋಚಕವೆನಿಸುತ್ತದೋ ಅಷ್ಟೇ ಅಪಾಯಕಾರಿ ಕೂಡ. ಏಕೆಂದರೆ ಡಾಲರ್ಗಳಲ್ಲಿ ಸಂಪಾದಿಸುವ, ವಿಗ್ರಹಗಳ ಕಳ್ಳತನದ ಮಾಫಿಯಾ ಉಳಿದ ಮಾಫಿಯಾಗಳಿಗಿಂತ ಒಂದು ಕೈ ಹೆಚ್ಚೇ! ಆದ್ದರಿಂದಲೇ ತನಿಖಾ ಗುಂಪಿನ ಬಹುತೇಕ ಸದಸ್ಯರು ಅನಾಮಿಕರು! ವಿವಿಧ ದೇಶಗಳಲ್ಲಿ ಹಂಚಿ ಹೋಗಿದ್ದರೂ ತಮ್ಮದೇ ನೆಟವರ್ಕ್ ಸ್ಥಾಪಿಸಿಕೊಂಡು ತೆರೆಮರೆಯಲ್ಲಿ ಅಹರ್ನಿಶಿ ದುಡಿಯುತ್ತಿದ್ದಾರೆ. ಹೊಟ್ಟೆಪಾಡಿಗೆ ಬೇರೆ ಬೇರೆ ಉದ್ಯೋಗಗಳನ್ನು ಮಾಡುತ್ತಿದ್ದರೂ ಉದ್ದೇಶದ ಸಲುವಾಗಿ ಒಗ್ಗೂಡಿ ತಮ್ಮ ಶ್ರಮ, ಸಮಯ ಹಾಗೂ ಹಣವನ್ನು ಮೀಸಲಿಟ್ಟಿದ್ದಾರೆ. ಈಗ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಲೂ ಇದೆ. ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಕಾಶ್ಮೀರದಿಂದ ಕಳುವಾಗಿದ್ದ ದುರ್ಗೆಯ ಮೂರ್ತಿಯನ್ನು ನಮಗೆ ಹಿಂದಿರುಗಿಸಿದ್ದು, ಕೆನಡಾ ಹಾಗೂ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳು ಮೋದಿಯವರನ್ನು ಭೇಟಿಯಾಗಲು ಬರುವಾಗ ಒಂದು ಕೈಯಲ್ಲಿ ವಿಗ್ರಹಗಳನ್ನು ಹಿಡಿದು ಬರುತ್ತಿರುವುದೇ ಇದಕ್ಕೆ ಸಾಕ್ಷಿ!
ಇಷ್ಟೂ ದಿನ ನೇಪಥ್ಯದಲ್ಲೇ ಇದ್ದು ಕಾರ್ಯ ನಿರ್ವಹಿಸುತ್ತಿದ್ದ ‘The India Pride Project’ ಅನುರಾಗ್ ಸಕ್ಸೇನಾ, ವಿಗ್ರಹ ಕಳ್ಳರ ಇಡೀ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ವಿವರಿಸುತ್ತಾರೆ. ಮೊತ್ತಮೊದಲಿಗೆ, ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರು, ಕೆಲ ಆರ್ಟ್ ಗ್ಯಾಲರಿಗಳ ಮುಖ್ಯಸ್ಥರೆಲ್ಲ ಭಾರತದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ಯಾವ ವಿಗ್ರಹಗಳನ್ನು ಕಳುವು ಮಾಡಬೇಕು ಎನ್ನುವುದನ್ನು ಪಟ್ಟಿ ಮಾಡಿಕೊಳ್ಳುತ್ತಾರಂತೆ. ಅವರು ಹೋದ ಮೇಲೆ, ಇಲ್ಲಿಯ ಕಳ್ಳರು ಅವುಗಳನ್ನು ಉಪಾಯವಾಗಿ ಕದ್ದು ಹಾಂಗ್ಕಾಂಗ್ಗೆ ತಲುಪಿಸುತ್ತಾರಂತೆ. ನಕಲಿ ವಾರಸುದಾರಿಕೆಯ ಖೋಟಾ ಕಾಗದ-ಪತ್ರಗಳೆಲ್ಲ ತಯಾರಾಗುವುದೇ ಅಲ್ಲಿ. ಅಲ್ಲಿಂದ ವಿಗ್ರಹಗಳು ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಹಾಗೂ ಪಶ್ಚಿಮ ಯೂರೋಪಿನ ದೇಶಗಳ ಆರ್ಟ್ ಗ್ಯಾಲರಿಗಳಿಗೆ ರಫ್ತಾಗುತ್ತವೆ. ಅಲ್ಲಿ ನಡೆಯುವ ಹರಾಜಿನಲ್ಲಿ ಲಕ್ಷಾಂತರ ಡಾಲರ್ಗಳನ್ನು ಸುರಿದು ಆಯಾ ದೇಶಗಳ ಕಲಾಪ್ರಿಯರು ಅವುಗಳನ್ನು ಖರೀದಿಸುತ್ತಾರೆ!


ಹಾಗೆ ನೋಡಿದರೆ ವಿಗ್ರಹ ಕಳ್ಳರ ಪೈಕಿ ಸುಭಾಷ್ ಕಪೂರ್ ಒಂದು ಸಣ್ಣ ಹುಳು ಅಷ್ಟೇ. ತನ್ನ ಕಳ್ಳತನ ಬೆಳಕಿಗೆ ಬರುತ್ತಿದ್ದ ಹಾಗೇ ಅಮೆರಿಕದಿಂದ ಹಾರಿದ ಅವನು ಫ್ರಾಂಕ್ಫರ್ಟಿನಲ್ಲಿ ಪೋಲೀಸರ ಕೈಗೆ ಸಿಕ್ಕಿಬಿದ್ದ. 2012ರಿಂದ ಚೆನ್ನೈನ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಅವನಿಗಿಂತ ಮೊದಲೇ ದೊಡ್ಡ ಪ್ರಮಾಣದಲ್ಲಿ ಕೆಲಸಕ್ಕೆ ಕೈ ಹಾಕಿದ್ದವನು ವಾಮನ ನಾರಾಯಣ ಘಿಯಾ. ಅವನು ಅನಾಮತ್ತು 20,000 ವಿಗ್ರಹಗಳನ್ನು ಕದ್ದಿದ್ದ ಭೂಪ! ಇಂಥವರು ಇನ್ನೂ ಅದೆಷ್ಟು ಮಂದಿ ಇದ್ದಾರೋ? ಈಗಂತೂ ವಿಗ್ರಹಗಳ ಕಳುವು ಹಾಗೂ ಮಾರಾಟ ದೊಡ್ಡ ಧಂಧೆಯಾಗಿಬಿಟ್ಟಿದೆ. ಅದರ ವಹಿವಾಟಿನ ಮೌಲ್ಯ ವಾರ್ಷಿಕ 40ಸಾವಿರ ಕೋಟಿರೂಗಳು! ಯುನೆಸ್ಕೋ ಹೇಳುವ ಪ್ರಕಾರ, 1989ರವರೆಗೂ ಭಾರತದಿಂದ ಕಳುವಾಗಿರುವ ವಿಗ್ರಹ ಹಾಗೂ ಸಾಂಸ್ಕೃತಿಕ ಪರಿಕರಗಳು ಸುಮಾರು 50,000ವಂತೆ! 2010 ಹಾಗೂ 2012 ನಡುವೆಯೇ 4408 ವಸ್ತುಗಳು ಕಳುವಾಗಿವೆ ಎನ್ನುತ್ತದೆ ಎನ್ಸಿಆರ್ಬಿ.
ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ತಮ್ಮ ದೇಶದ ಗ್ಯಾಲರಿಯಲ್ಲಿರುವ ವಿಗ್ರಹ ಕಳುವಿನದ್ದು ಎಂದು ಗೊತ್ತಾದ ತಕ್ಷಣ ಅಲ್ಲಿಯವರೇ ಅವುಗಳನ್ನು ಇಟ್ಟುಕೊಳ್ಳುವುದಿಲ್ಲ. ಉದಾಹರಣೆಗೆ, ಅಮೆರಿಕದ ಟೊಲೆಡೋ ಮ್ಯೂಸಿಯಂನ ನಿರ್ದೇಶಕ ಬ್ರಯಾನ್ ಕೆನಡಿ ತಾವೇ ಭಾರತೀಯ ರಾಯಭಾರಿ ಕಚೇರಿಗೆ ಖುದ್ದಾಗಿ ಪತ್ರ ಬರೆದಿದ್ದರು! ತಾವು ಸುಭಾಷ್ನಿಂದ ಖರೀದಿಸಿದ್ದ ಕಂಚಿನ ಗಣೇಶ ಕದ್ದು ತಂದಿರುವುದು ಎಂಬ ಅನುಮಾನವಿರುವುದರಿಂದ ಅದನ್ನು ದಯವಿಟ್ಟು ಪರಿಶೀಲಿಸಿ ಎಂದು ಮನವಿ ಮಾಡಿಕೊಂಡಿದ್ದರು!
ನಿಮಗೆ ಗೊತ್ತಿರಲಿ, ಇಟಲಿ, ಕ್ಯಾಂಬೋಡಿಯಾ ಹಾಗೂ ಗ್ರೀಸ್ ದೇಶಗಳಲ್ಲಿ ಪಾರಂಪರಿಕ ವಸ್ತುಗಳ ರಕ್ಷಣೆಗೆಂದೇ 'ಹೆರಿಟೇಜ್ ಪೋಲೀಸ್' ಅಥವಾ 'ಆರ್ಟ್ ಸ್ಕ್ವಾಡ್' ಎಂಬ ವಿಭಾಗಗಳಿವೆ. ಅವುಗಳು ವರೆಗೂ ಲಕ್ಷಾಂತರ ಐತಿಹಾಸಿಕ ಸ್ಮಾರಕಗಳನ್ನು ತಮ್ಮ ದೇಶಗಳಿಗೆ ಮರಳಿ ತಂದಿವೆ. ಅವುಗಳದ್ದು ಹೋಗಲಿ, ಕಮ್ಯೂನಿಸ್ಟ್ ಚೀನಾ ಸಹ, 'ಸ್ಟೇಟ್ ಬ್ಯೂರೋ ಆಫ್ ಕಲ್ಚರಲ್ ರೆಲಿಕ್ಸ್' ಎಂಬ ಅಂಗವನ್ನು ಹೊಂದಿದೆ! ಸಾವಿರಾರು ವರ್ಷಗಳ ಶ್ರೀಮಂತ ಪರಂಪರೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ನಾವು ಅದಕ್ಕಿಂತಲೂ ಕೇಡು! ಪುರಾತತ್ವ ಇಲಾಖೆಯನ್ನು ಬಿಟ್ಟರೆ, ಇಂಥ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಎಂದೇ ಮೀಸಲಾಗಿರುವ ಒಂದೇ ಒಂದು ವಿಭಾಗವೂ ನಮ್ಮಲ್ಲಿಲ್ಲ!
ಅಮೆರಿಕವನ್ನೇ ನೋಡಿ. ನೂರು ವರ್ಷದ ಹಿಂದಿನ ಒಂದು ಮಾಸಲು ಕಲ್ಲುಬೆಂಚು ಸಿಕ್ಕಿದರೂ ಸಾಕು, ಕಣ್ಣು-ಬಾಯಿ ಬಿಟ್ಟುಕೊಂಡು ನೋಡುತ್ತಾರೆ. ಅದರ ಸುತ್ತ ನೂರಾರು ಕಥೆ ಕಟ್ಟಿ, ಅದನ್ನೊಂದು ಪ್ರವಾಸಿ ತಾಣ ಮಾಡಿ, ಅದರ ಫೋಟೋ, ಕೀ-ಚೈನುಗಳನ್ನು ಹರಿಯಬಿಡುತ್ತಾರೆ. ಅದನ್ನು ನೋಡದೆ ಸತ್ತರೆ ಇನ್ನೆಂಥ ದೊಡ್ಡ ನಷ್ಟವಾಗಿಬಿಡುತ್ತದೋ ಎನ್ನುವ ಭಯ, ಕುತೂಹಲಗಳನ್ನು ಹುಟ್ಟಿಸುತ್ತಾರೆ! ಆದರೆ ನಮ್ಮಲ್ಲಿ ಶತಶತಮಾನಗಳಿಂದ ಉಳಿದುಕೊಂಡು ಬಂದಿರುವ ಪರಂಪರೆಗೆ ಕಿಮ್ಮತ್ತೇ ಇಲ್ಲ.

ಮೊದಲೆಲ್ಲ ಮುಸ್ಲಿಂ ದಾಳಿಕೋರರು ನಮ್ಮ ದೇವರುಗಳನ್ನು ವಿರೂಪಗೊಳಿಸಿ, ಅವುಗಳನ್ನು ತಮ್ಮ ಮಸೀದಿಯ ಮೆಟ್ಟಿಲುಗಳಾಗಿ ಉಪಯೋಗಿಸುತ್ತಿದ್ದುದು ನಮ್ಮ ಸಂಸ್ಕೃತಿಯ ಕಗ್ಗೊಲೆ ಮಾಡುವುದಕ್ಕೆ. ಅದೇ ಕಗ್ಗೊಲೆ ಈಗ ಬೇರೊಂದು ರೂಪ ಪಡೆದಿದೆ ಅಷ್ಟೇ. ತಡೆಯುವ ಅನಿವಾರ್ಯ ಈಗಲೂ ಇದೆ. ‘India Pride Project’ ಜೊತೆ ಕೈಜೋಡಿಸಿ ಅದನ್ನು ಸಾಧ್ಯವಾಗಿಸಬಹುದು. ಅನಿವಾಸಿ ಭಾರತೀಯರಿಗಿರುವ ಅಪಾರ ಕಾಳಜಿಯಲ್ಲಿ ನಮ್ಮ ಪಾಲನ್ನೂ ಸೇರಿಸಬಹುದು. ಏಕೆಂದರೆ ಡಾಲರುಗಳ ಲೆಕ್ಕದಲ್ಲಿ ಹರಾಜಾಗುತ್ತಿರುವುದು ದೇವರ ವಿಗ್ರಹಗಳು ಮಾತ್ರವಲ್ಲ, ನಮ್ಮ ಸಂಸ್ಕೃತಿ, ಪರಂಪರೆ, ಹೆಮ್ಮೆಗಳೂ

‘ಲಾಲ್ ಸಲಾಂ’ನ ಅಂತರಂಗ ಬಿಚ್ಚಿಡುವ ಬುದ್ಧ!

ಛತ್ತೀಸ್ಗಢದ ಬಸ್ತರ್ ಜಿಲ್ಲೆಯ ಒಂದು ಕಾಡು. ಮಧ್ಯದೊಳಗೊಂದು ಪುಟ್ಟ ಗುಡಿಸಲು. ಅಲ್ಲಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಒಂದು ನಿರ್ಗತಿಕ ಕುಟುಂಬ. ಗಂಡ - ಹೆಂಡತಿ, ಇಬ್ಬರು ಮಕ್ಕಳ ಸಂಸಾರ. ಹಾಸಿಹೊದ್ದುಕೊಳ್ಳುವಷ್ಟು ಬಡತನ. ಸೌದೆ ಒಡೆದು ಮಾರಿ ಜೀವನ ನಿರ್ವಹಿಸಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲದ ಅಮಾಯಕರು. ಅಲ್ಲಿಗೆ ರಾಜಕಾರಣಿಯೊಬ್ಬನ ಆಗಮನವಾಗುತ್ತದೆ. ಅವನನ್ನು ನೋಡುತ್ತಿದ್ದ ಹಾಗೇ ಮನೆಯ ಹೆಂಗಸರ ಮುಖಗಳಲ್ಲಿ ಭಯ. ‘ಸಲ್ವಾ ಜುದಂಸಂಘಟನೆಯನ್ನು ಬೆಂಬಲಿಸು ಎಂದು ಅವನು ಮನೆಯ ಯಜಮಾನನ ಮೇಲೆ ಜೋರು ಮಾಡುತ್ತಾನೆ. ಪ್ರಾಣಭಯದಿಂದ ತತ್ತರಿಸುವ ಬಡ ಗಂಡಸು ಬೇಡಬೇಡವೆಂದರೂ ಬಲವಂತವಾಗಿ ಕಾಗದದ ಮೇಲೆ ಅವನ ಹೆಬ್ಬೆರಳನ್ನು ಒತ್ತಿಸಿಕೊಂಡು ಹೋಗುತ್ತಾನೆ. ಅವನು ಹೋದ ಸ್ವಲ್ಪ ಹೊತ್ತಿಗೇ ನಕ್ಸಲರು ಮನೆಗೆ ಲಗ್ಗೆಯಿಡುತ್ತಾರೆ. ‘ಸಲ್ವಾ ಜುದಂಗೆ ಸೇರಿ ನಮ್ಮನ್ನು ವಿರೋಧಿಸುವಷ್ಟು ಧೈರ್ಯ ಹುಟ್ಟಿಕೊಂಡಿತೇನೋ ನಿನ್ನಲ್ಲಿ?’ ಎಂದು ಅವನಿಗೆ ಚಿತ್ರಹಿಂಸೆ ನೀಡುತ್ತಾರೆ. ಪ್ರಾಣ ಹೋಗುವ ಹಾಗೆ ಅವನನ್ನು ಬಡಿಯುತ್ತಾರೆ. ಓಡಿ ಹೋಗಲು ಪ್ರಯತ್ನಿಸುವ ಅವನ ಮಗನನ್ನೂ ಹೊಡೆದು ನೆಲಕ್ಕುರುಳಿಸುತ್ತಾರೆ.
ಇದು ಚಿತ್ರವೊಂದರ ಆರಂಭಿಕ ಸನ್ನಿವೇಶ. ಚಿತ್ರದ ಹೆಸರು, ‘Buddha In A Traffic Jam’. ಹೆಸರು, ಕೇಳಲು ಸ್ವಲ್ಪ ವಿಚಿತ್ರವೆನಿಸುತ್ತದೆ. ತಕ್ಷಣಕ್ಕೆ ಏನೂ ಅರ್ಥವಾಗುವುದೂ ಇಲ್ಲ. ಆದರೆ ಚಿತ್ರವನ್ನು ನೋಡಿದ ಮೇಲೆ ಕೆಲ ಕ್ಷಣ ಮಾತೇ ಹೊರಡುವುದಿಲ್ಲ. ಬಾಲಿವುಡ್ ಚಿತ್ರ ಎರಡು ವರ್ಷಗಳ ಹಿಂದೆ, ಅಂದರೆ 2014ರಲ್ಲಿ ತಯಾರಾಯಿತು. ಅದೇ ವರ್ಷ ಮುಂಬಯಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ, ವರ್ಷದ ಐದು  ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂಬ ಖ್ಯಾತಿ ಪಡೆಯಿತು. ಚಿತ್ರದಲ್ಲಿ ಅಭಿನಯಿಸಿರುವ ಪಲ್ಲವಿ ಜೋಷಿ ಅತ್ಯುತ್ತಮ ಅಭಿನೇತ್ರಿಯಾಗಿ ಆಯ್ಕೆಯಾದರು. ಚಿತ್ರ, ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೂ ನಾಮನಿರ್ದೇಶಿತವಾಯಿತು. ವಿದೇಶಗಳಲ್ಲಂತೂ ಹೋದಲ್ಲೆಲ್ಲ ಜಯಭೇರಿ. ಸ್ಪೇನಿನ ಮ್ಯಾಡ್ರಿಡ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶೀ ಚಿತ್ರವೆಂಬ ಹೆಗ್ಗಳಿಕೆ. ಚಿತ್ರದ ಇನ್ನೋರ್ವ ಅಭಿನೇತ್ರಿ ಮಾಹಿ ಗಿಲ್‍’ ಗೂ ಪ್ರಶಸ್ತಿ. ಜಕಾರ್ತಾ ಚಿತ್ರೋತ್ಸವದಲ್ಲೂ ಅತ್ಯುತ್ತಮ ನಿರ್ದೇಶನಕ್ಕೆ ಪ್ರಶಸ್ತಿ. ಒಟ್ಟಿನಲ್ಲಿ ಚಿತ್ರ ಇಲ್ಲಿಯತನಕ ಗೆದ್ದಿರುವ ರಾಷ್ಟ್ರೀಯ, ಅಂತಾರಾಷ್ತ್ರೀಯ ಪ್ರಶಸ್ತಿಗಳು ಸುಮಾರು 30! ಆದರೆ
ಇದಿನ್ನೂ ಬಿಡುಗಡೆಯ ಭಾಗ್ಯವನ್ನೇ ಕಂಡಿಲ್ಲ! ಕಾರಣ, ವಿತರಕರೇ ಸಿಗದೆ ಕಳೆದೆರಡು ವರ್ಷಗಳಿಂದಲೂ ಪರದಾಡುತ್ತಿದ್ದರು ನಿರ್ಮಾಪಕ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಕಳೆದ ವರ್ಷ, ಅಸಹಿಷ್ಣುತೆಯ ನೆಪದಲ್ಲಿ ಸಾಹಿತ್ಯ ಕ್ಷೇತ್ರದ ಕೆಲವು ಖ್ಯಾತನಾಮರು ಅವಾರ್ಡ್ ವಾಪಸಿಶುರು ಮಾಡಿದಾಗ ಅದನ್ನು ಪ್ರತಿಭಟಿಸುವ ಸಲುವಾಗಿ ಅನುಪಮ್ ಖೇರ್ ರಸ್ತೆಗಿಳಿದಿದ್ದು ನಿಮಗೆ ನೆನಪಿರಬಹುದು. ಆಗ ಅವರಿಗೆ ಹೆಗಲು ಕೊಟ್ಟವರೇ ವಿವೇಕ್ ಅಗ್ನಿಹೋತ್ರಿ. ದೂರದರ್ಶನದ ಖ್ಯಾತ ಧಾರಾವಾಹಿಗಳಾದ ಮೃಗನಯನಿ, ಭಾರತ್ ಏಕ್ ಖೋಜ್ಗಳಲ್ಲಿ ಮನೋಜ್ಞ ಅಭಿನಯ ನೀಡಿ ಮನೆ ಮಾತಾಗಿದ್ದ ಪಲ್ಲವಿ ಜೋಷಿಯ ಪತಿ ಈತ. ದೇಶೀಯ ಕಥೆ, ಇಲ್ಲಿನ ಸಮಸ್ಯೆಗಳನ್ನು ಯಥಾವತ್ತು ಬಿಂಬಿಸುವ ಪ್ರಯತ್ನದಲ್ಲಿ ನಿರತರಾಗಿರುವಾತ. ಬಾರಿ ಅವರು ಆಯ್ದುಕೊಂಡಿದ್ದು ನಕ್ಸಲರ ಕಥೆಯನ್ನು. ಅದೇ ಅವರು ಮಾಡಿದ ತಪ್ಪು!


ಕಳೆದ ವಾರ ಸ್ವರಾಜ್ಯ ಮಾಸಪತ್ರಿಕೆ, ಬರಹಗಾರರಿಗೋಸ್ಕರ ಬೆಂಗಳೂರಿನಲ್ಲಿ ಕಾರ್ಯಾಗಾರವೊಂದನ್ನು ಆಯೋಜಿಸಿತ್ತು. ಖ್ಯಾತ ಪತ್ರಕರ್ತ ಹಾಗೂ ಸಂಪಾದಕರಾಗಿದ್ದ ಎಂ.ಜೆ ಅಕ್ಬರ್ ಹಾಗೂ ಇನ್ನೂ ಕೆಲವು ಬರಹಗಾರರನ್ನು ಆಮಂತ್ರಿಸಿ ಅವರೊಂದಿಗೆ ಒಡನಾಡುವ ಅವಕಾಶ ಮಾಡಿಕೊಟ್ಟಿತ್ತು. ಹಾಗೆ ಆಮಂತ್ರಿಸಿದ್ದವರಲ್ಲಿ ವಿವೇಕ್ ಅಗ್ನಿಹೋತ್ರಿಯೂ ಒಬ್ಬರು. ವಿವೇಕ್ ತಾವೊಬ್ಬರೇ ಬರಲಿಲ್ಲ. ಇನ್ನೂ ಬಿಡುಗಡೆಯಾಗದ ತಮ್ಮ ಚಿತ್ರವನ್ನೂ ಜೊತೆಯಲ್ಲೇ ಕರೆದುಕೊಂಡು ಬಂದರು. Pen-Driveನಲ್ಲಿ ಕೂಡಿಸಿಕೊಂಡು! ಮೊದಲ ದಿನದ ಕಾರ್ಯಾಗಾರದ ಕೊನೆಯಲ್ಲಿ ಚಿತ್ರದ ಪ್ರದರ್ಶನ. ಭರ್ತಿ 115 ನಿಮಿಷಗಳು ನಗ್ನ ಸತ್ಯದ ಅನಾವರಣ!
ನಕ್ಸಲರ ಕ್ರಾಂತಿ, ಬುಡಕಟ್ಟು ಜನಾಂಗಗಳನ್ನು ಅದು ಶೋಷಿಸುತ್ತಿರುವ ಪರಿ, ಅದರ ಹಿಂದಿರುವ ರಾಜಕೀಯ ಷಡ್ಯಂತ್ರ, ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರಾಂತಿಯ ಅಮಲು ಹತ್ತಿಸುತ್ತಿರುವ ಕಮ್ಯೂನಿಸ್ಟ್ ಪ್ರೊಫೆಸರುಗಳ ಕಥೆಯನ್ನು ಎಷ್ಟು ನೇರವಾಗಿ ಹೇಳಬಹುದೋ ಅಷ್ಟೂ ನೇರವಾಗಿ ಹೇಳಿಬಿಟ್ಟಿದ್ದಾರೆ ವಿವೇಕ್! ‘ಲಾಲ್ ಸಲಾಮ್ಎಂಬ ರಕ್ತಸಿಕ್ತ ಕೂಗಿಗೆ ಧ್ವನಿಯಾಗಿರುವ ಮಂದಿಯನ್ನು ತೋರಿಸಿರುವ ಪರಿಯನ್ನಂತೂ ಮೆಚ್ಚಲೇಬೇಕು. ಇವತ್ತು ಜೆಎನ್ಯುನಲ್ಲಿ ಅಷ್ಟು ಮುಕ್ತವಾಗಿ ನಡೆಯುತ್ತಿರುವ ಕ್ರಾಂತಿ ಎರಡು ವರ್ಷದ ಹಿಂದೆಯೇ ವಿವೇಕ್ ಕಣ್ಣಿಗೆ ಬಿದ್ದಿದ್ದು ಕಾಕತಾಳೀಯವೇನೋ ಎಂದು ಮೊದಲು ಅನಿಸಿತ್ತು. ಆದರೆ ಚಿತ್ರದಲ್ಲಿ ಬರುವ ಪ್ರೊಫೆಸರರು ಆಡಿರುವ ಮಾತುಗಳು ಕಾಲ್ಪನಿಕವಲ್ಲ, ಅದು ತಮ್ಮ ಪ್ರೊಫೆಸರರು ಆಡಿದ್ದೇ ಎಂದು ವಿವೇಕ್ ಹೇಳಿದಾಗ ಎಲ್ಲರೂ ದಂಗಾದರು.
ವಿವೇಕ್ ಬಾಲಿವುಡ್ ಇನ್ನಷ್ಟು ರಹಸ್ಯಗಳನ್ನು ಬಿಚ್ಚಿಟ್ಟರು. ದುಡ್ಡಿನ, ಅಧಿಕಾರದ ರಾಜಕೀಯ ಯಾವ ಪರಿ ಬಾಲಿವುಡ್ಡನ್ನು ಆವರಿಸಿಕೊಂಡಿದೆ ಎಂಬುದನ್ನು ವಿವರಿಸಿದರು. ಸೆಕ್ಸ್ ರಾಜಕೀಯದ ವಿಷಯವನ್ನು ಹೊರಗೆಲ್ಲೂ ಚರ್ಚಿಸಬಾರದು ಎನ್ನುವುದು ಬಾಲಿವುಡ್ನವರು ಹಾಕಿಕೊಂಡಿರುವ ಅಘೋಷಿತ ನಿಯಮವಂತೆ! ಹಾಗಾಗಿ ಅದರ ಬಗ್ಗೆ ಹೆಚ್ಚು ಹೇಳಲಿಲ್ಲ. ಆದರೆ ಖಾನ್ಗಳ ಕಪಿಮುಷ್ಠಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಸಿನಿಮಾ ಉದ್ಯಮ ನೈಜ ಕಥೆಗಾರರ ಕೊರತೆ ಎದುರಿಸುತ್ತಿರುವುದನ್ನು, ಉಳಿದವರನ್ನೆಲ್ಲ ತುಳಿದು ಒಂದು ವರ್ಗ ಮಾತ್ರ ಮೇಲೇರುತ್ತಿರುವುದನ್ನು ಅವರು ಉದಾಹರಣೆಗಳ ಸಮೇತ ವಿವರಿಸಿದಾಗ ಕೇಳುಗರೆಲ್ಲರಿಗೂ ಸಂಕಟವಾಗಿದ್ದು ಸುಳ್ಳಲ್ಲ.
ಇರಲಿ, ತಮ್ಮ ಚಿತ್ರದ ಚಿತ್ರೀಕರಣ ಮುಗಿದ ಮೇಲೆ ಅವರು ಪಟ್ಟ ಪಾಡೂ ಕಡಿಮೆಯೇನಲ್ಲ. ಚಿತ್ರ ನೋಡುವವರೆಲ್ಲರೂ ಮೆಚ್ಚಿಗೆ ಸೂಚಿಸುವವರೇ. ಆದರೆ ವಿತರಣೆಯ ರಿಸ್ಕ್ ತೆಗೆದುಕೊಳ್ಳಲು ಯಾರೊಬ್ಬರೂ ಸಿದ್ಧರಾಗಲೇ ಇಲ್ಲ. ಕೊನೆಗೆ ಅವರ ಕೈಹಿಡಿದವರು ರಾಜಶ್ರೀ ಪೋಡಕ್ಷನ್ಸ್ ಸೂರಜ್ ಬರ್ಜಾತ್ಯಾರ ತಂದೆ ರಾಜ್ಕಮಲ್ ಬರ್ಜಾತ್ಯಾ! ತಮ್ಮ ಬ್ಯಾನರಿನ ಚಿತ್ರಗಳ ಹಾಗೆ ಇದು ತುಂಬಿದ ಮನೆಯ, ಅಕ್ಕರೆಯ ಮಗ-ಸೊಸೆಯರ, ಮುದ್ದಿನ ಹೆಣ್ಣುಮಕ್ಕಳಿರುವ ಚಿತ್ರವಲ್ಲ! ಹಾಡು, ಹಬ್ಬ-ಹುಣ್ಣಿಮೆಗಳಿಗಂತೂ ಇಲ್ಲಿ ಜಾಗವೇ ಇಲ್ಲ. ಹಾಗಾಗಿ ನೇರವಾಗಿ ಅವರ ಬ್ಯಾನರ್ನಡಿ ಬಿಡುಗಡೆ ಮಾಡಲಿಕ್ಕಾಗದಿದ್ದರೂ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯೂ ಅಷ್ಟೇ. ಅದು ಪಾಲಿಸುವ ನಿಯಮಗಳನುಸಾರ ನ್ಯಾಯವಾಗಿ 170 ಕಟ್ಗಳನ್ನು ಮಾಡಬೇಕಾಗಿತ್ತಂತೆ! ಆದರೆ, ಜನಕ್ಕೆ ಮೋಸವಾಗಬಾರದು ಎಂಬ ಕಾರಣಕ್ಕೆ ಒಂದೇ ಒಂದು ಕಟ್ ಅನ್ನೂ ಮಾಡಿಲ್ಲವಂತೆ!


ಅಂತೂ ಚಿತ್ರ ಮೇ ತಿಂಗಳ 13ರಂದು ತೆರೆ ಕಾಣುತ್ತಿದೆ! ಅದು ಹೇಗೆ ಬಿಡುಗಡೆ ಮಾಡುತ್ತೀಯೋ ನೋಡೇ ಬಿಡುತ್ತೇವೆ ಎಂಬ ಬೆದರಿಕೆಯ ಸಂದೇಶಗಳು ವಿವೇಕ್ಗೆ ಬರುತ್ತಿವೆ. ಆದರೂ ಅವರು ಧೃತಿಗೆಟ್ಟಿಲ್ಲ. ಬೇರೊಂದು ಸಾಹಸಕ್ಕೂ ಕೈಹಾಕಿದ್ದಾರೆ. ಚಿತ್ರ ಬಿಡುಗಡೆಯಾಗುವ ಮೊದಲೇ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಅದನ್ನು ಪ್ರದರ್ಶಿಸಿದ್ದಾರೆ. ಮೊದಲು ಅವರು ಪ್ರಯತ್ನಿಸಿದ್ದು ಕ್ರಾಂತಿಯೇ ಉಸಿರಾಗಿರುವ ಜೆಎನ್ಯುನಲ್ಲಿ. ಆದರೆ ಸಿನಿಮಾ ವಿಭಾಗದ ಡೀನ್, ಸಮ್ಮತಿ ನೀಡಲಿಲ್ಲವಂತೆ! ಸೂಕ್ಷ್ಮ ವಾತಾವರಣದ ಅಲ್ಲಿಯ ಶಾಂತಿ ಕದಡಿಹೋದೀತೇನೋ ಎಂಬ ಭಯದಿಂದ. ಆದರೆ ವಿದ್ಯಾರ್ಥಿಗಳು ಬಿಡಬೇಕಲ್ಲ! ನಾಲ್ಕೂವರೆ ಸಾವಿರ ವಿದ್ಯಾರ್ಥಿಗಳು ಬಯಲು ಚಿತ್ರಮಂದಿರದ ನೆಲದ ಮೇಲೆ, ಮೆಟ್ಟಿಲುಗಳ ಮೇಲೆ, ಸಿಕ್ಕಸಿಕ್ಕಲ್ಲೆಲ್ಲ ಹತ್ತಿಕೂತು, ಮಂತ್ರಮುಗ್ಧರಾಗಿ ನೋಡಿ, ಚಿತ್ರ ಮುಗಿದ ಮೇಲೆ ಎದ್ದು ಕಿವಿಗಡಚಿಕ್ಕುವ ಹಾಗೆ ಚಪ್ಪಾಳೆ ಬಾರಿಸಿದ್ದು ದೊಡ್ಡ ಸುದ್ದಿಯಾಯಿತು! ಅಷ್ಟೇ ಅಲ್ಲ, ಗುಜರಾತಿನ ಗಾಂಧಿನಗರದ ಐಐಟಿ ವಿದ್ಯಾರ್ಥಿಗಳ ಸಲುವಾಗಿಯೂ ಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲೂ ಅದೇ ಪ್ರತಿಕ್ರಿಯೆ. ಬಾಂಬೆಯ ಐಐಟಿ ವಿದ್ಯಾರ್ಥಿಗಳೂ ಅದನ್ನು ನೋಡಿ ಮೆಚ್ಚಿದರು. ಕಾಲೇಜು ವಿದ್ಯಾರ್ಥಿಗಳ ಅಪಾರ ಬೆಂಬಲವೇ ಸದ್ಯಕ್ಕೆ ವಿವೇಕ್ಗೆ ಆಧಾರ. ಇದೇ ವಾರ, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ನಲ್ಲೂ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. ಥಿಯೇಟರ್ನಲ್ಲಿ ಬಿಡುಗಡೆಯಾಗುವ ಮೊದಲೇ ಇಷ್ಟೊಂದು ಪ್ರದರ್ಶನಗಳನ್ನು ಏರ್ಪಡಿಸಿ ಯುವಜನತೆಯನ್ನು ತಲುಪಿರುವುದು ಒಂದು ಸಾಧನೆಯೇ ಸರಿ. ಆದರೂ ಅವರಲ್ಲಿ ಒಂದು ದಿಗಿಲಿದ್ದೇ ಇದೆ. ಬಿಡುಗಡೆಯಾದ ಮೇಲೂ ಚಿತ್ರವನ್ನು ಚಿತ್ರಮಂದಿರದಲ್ಲಿ ಉಳಿಯಗೊಡುತ್ತಾರೋ ಇಲ್ಲವೋ ಎನ್ನುವುದು! ಬಿಡುಗಡೆಯಾಗುವುದಂತೂ ಗೊತ್ತು. ಆಮೇಲಿನ ಅದರ ಉಳಿವಿನ ಬಗ್ಗೆ ಏನೇನೂ ಖಚಿತತೆಯಿಲ್ಲ. ಅದು ಹಾಗೆ ಬಂದು ಹೀಗೆ ಹೋಗಿಬಿಡುವಷ್ಟರಲ್ಲಿ ನೀವೊಮ್ಮೆ ನೋಡಿಬಿಡಿ.
ಇನ್ನೊಂದು ವಿಷಯವನ್ನೂ ಹೇಳಿದರು ವಿವೇಕ್. ಮಲ್ಟಿಪ್ಲೆಕ್ಸಿನ ಚಿತ್ರಮಂದಿರಗಳ ಮಾಲೀಕರ ಹತ್ತಿರ ಮಾತಾಡುವಾಗ, ಟಿಕೀಟಿನ ಹಣದಲ್ಲಿ ಕಡಿತ ಮಾಡಿದರೂ ತಮಗೆ ಅಭ್ಯಂತರವಿಲ್ಲ ಎಂದರಂತೆ. ದುಡ್ಡು ಮಾಡುವ ಉದ್ದೇಶವಿರುವವರು ಇಂಥ ಚಿತ್ರಗಳನ್ನು ಮಾಡುವುದು ಸಾಧ್ಯವೂ ಇಲ್ಲ. ಇರಲಿ, ಅದಕ್ಕೆ ಮಾಲೀಕರುಗಳು ಹೇಳಿಬಿಟ್ಟರಂತೆ - 'ಸರ್, ನಿಮ್ಮ ಟಿಕೇಟಿನ ದುಡ್ಡನ್ನು ಎಷ್ಟು ಬೇಕಾದರೂ ಕಡಿಮೆ ಮಾಡುತ್ತೇವೆ, ಆದರೆ ನಾವು ಮಾರುವ ಪಾಪ್ಕಾರ್ನ್ ದುಡ್ಡನ್ನು ಒಂದು ರೂಪಾಯಿಯಷ್ಟೂ ಕಡಿಮೆ ಮಾಡುವುದಿಲ್ಲ!' ಎಂದು. ಆಮೇಲೆ ಮಾತು ಮಾಲ್ ಸಂಸ್ಕೃತಿಯತ್ತ ಹೊರಳಿತು. ಅದನ್ನು ಈಗ ಹೇಳಿದರೆ ವಿಷಯಾಂತರವಾಗುತ್ತದೆ.
ಸಲ್ವಾ ಜುದಂನ ಬಗ್ಗೆ ಒಂದಷ್ಟು ಮಾಹಿತಿ. ಅದು ಬುಡಕಟ್ಟು ಜನಾಂಗದವರದ್ದೇ ಪಡೆ. ಛತ್ತೀಸ್ಗಢ ಸರ್ಕಾರದ ಬೆಂಬಲದಿಂದ, ನಕ್ಸಲರನ್ನು ಮಟ್ಟ ಹಾಕುವ ಸಲುವಾಗಿ ಹುಟ್ಟಿಕೊಂಡಿದ್ದು. ಅದಕ್ಕೆ ತರಬೇತಿ, ಶಸ್ತ್ರಾಸ್ತ್ರಗಳೆಲ್ಲ ದೊರಕುತ್ತಿದ್ದುದು ಸರ್ಕಾರದಿಂದಲೇ. 2011ರಲ್ಲಿ ಸರ್ವೋಚ್ಚ ನ್ಯಾಯಾಲಯ ಅದನ್ನು ನಿಷೇಧಿಸುವವರೆಗೂ ಬಹಳ ಸಕ್ರಿಯವಾಗಿತ್ತು. ಅದರ ಸಂಸ್ಥಾಪಕ ಮಹೇಂದ್ರ ಕರ್ಮ 2013ರಲ್ಲಿ ನಕ್ಸಲರಿಂದಲೇ ಬರ್ಬರವಾಗಿ ಹತ್ಯೆಯಾದರು.
ಸಿದ್ಧಾರ್ಥನಿಗೆ ಜ್ಞಾನೋದಯವಾಗಿ ಬುದ್ಧನಾದ. ಲಾಲ್ ಸಲಾಂ ಎಂದು ಅರಚುವ 'ಬುದ್ಧು'ಗಳಿಗೆ ಜ್ಞಾನೋದಯವಾಗುವುದೇ ಇಲ್ಲವೇನೋ! ಒಟ್ಟಿನಲ್ಲಿ, ‘Buddha In A Traffic Jam’ is a must watch!

Thursday, 24 March 2016

ನಿಮ್ಮ ವಂಶವೃಕ್ಷವನ್ನೊಮ್ಮೆ ಜಾಲಾಡಿಕೊಳ್ಳಿ ಒವೈಸಿ!

ಮತ್ತೊಮ್ಮೆ ಆರ್ಭಟಿಸಿದ್ದಾರೆ ಅಸಾದುದ್ದೀನ್ ಒವೈಸಿ! 'ನಾನು ಭಾರತ್ ಮಾತಾ ಕಿ ಜೈ ಎನ್ನುವುದಿಲ್ಲ. ನನ್ನ ಕುತ್ತಿಗೆಗೆ ಚಾಕು ಹಾಕಿದರೂ ಸರಿ, ಹೇಳುವುದಿಲ್ಲ. ಹೇಳಲೇಬೇಕೆಂದು ಯಾವ ಸಂವಿಧಾನದಲ್ಲೂ ಬರೆದಿಲ್ಲ. ಯಾರೇನು ಬೇಕೋ ಮಾಡಿಕೊಳ್ಳಿ' ಎಂಬ ಅವರ ಪೊಗರಿನ ಮಾತನ್ನು ಕೇಳುತ್ತಿದ್ದರೆ ಅವರ ಮೌಢ್ಯಕ್ಕೆ ಮರುಗಬೇಕೋ, ದುರಹಂಕಾರವನ್ನು ಅಲಕ್ಷ್ಯ ಮಾಡಬೇಕೋ ತಿಳಿಯುತ್ತಿಲ್ಲ! ಚಾಕು ಹಾಕುವುದು, ರುಂಡ ತರಿಯುವುದು ಅವರ ಸಂಸ್ಕೃತಿ! ನಮ್ಮದಲ್ಲ! ಅಂಥ ಹೀನ ಮನಸ್ಥಿತಿ ನಮ್ಮದಾಗಿದ್ದಿದ್ದರೆ ಇವತ್ತು ಒವೈಸಿ ಮುಸ್ಲಿಮನಾಗಿರುತ್ತಿರಲಿಲ್ಲ! ಹಿಂದೂವಾಗೇ ಉಳಿದಿರುತ್ತಿದ್ದರು! ಅವರಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯ ಮುಸ್ಲಿಮನೂ ತನ್ನ ಮೂಲವನ್ನು ಹುಡುಕುತ್ತಾ ಹೊರಟರೆ ಕಾಲಿಗೆ ತೊಡರಿಕೊಳ್ಳುವುದು ಹಿಂದುತ್ವದ ಬೇರು ಮಾತ್ರವೇ! ಏಕೆಂದರೆ ಏಳನೆಯ ಶತಮಾನದಲ್ಲಿ ಅಲ್ಲೆಲ್ಲೋ ಅರಬ್ ದೇಶದಲ್ಲಿ ಹುಟ್ಟಿಕೊಂಡ ಇಸ್ಲಾಂಗೂ ನಮ್ಮ ದೇಶಕ್ಕೂ ನೂಲಿನೆಳೆಯ ಸಂಬಂಧವೂ ಇಲ್ಲ. ಮುಸ್ಲಿಮರು ಈ ದೇಶದ ಭಾಗವಾಗಿದ್ದು ವಲಸೆಯ ಮೂಲಕ. ಅದಕ್ಕಿಂತ ಹೆಚ್ಚಾಗಿ ಬಲವಂತದ, ಹಿಂಸಾಚಾರದ ಮತಾಂತರದ ಮೂಲಕ. ಇತಿಹಾಸವನ್ನೊಮ್ಮೆ ಕೆದಕಿ ನೋಡಿದರೆ ಸಾಕು, ಸತ್ಯಗಳೆಲ್ಲ ತೆರೆದುಕೊಳ್ಳುತ್ತವೆ.




ಇಸವಿ 636. ಮೊತ್ತಮೊದಲ ಸಲ ಅರಬ್ ದೇಶದ ಮುಸ್ಲಿಮರು ಭಾರತದ ಕಡಲತೀರಗಳನ್ನು ಹೊಕ್ಕರು. ಅವರನ್ನು ಛೂ ಬಿಟ್ಟಿದ್ದು ಅರಬ್‍ನಲ್ಲಿ ಆಗ ಮುಸ್ಲಿಮರ ಮುಖಂಡನಾಗಿದ್ದ ಓಮರ್. ಸಣ್ಣ ಸಂಖ್ಯೆಯಲ್ಲಿ ದೇಶದೊಳಗೆ ಜಮಾಯಿಸಿದ ಅವರೆಲ್ಲ ವಲಸಿಗರಾಗಿದ್ದರಿಂದ ನಮ್ಮ ಮೇಲೆ ಅಂಥ ಪರಿಣಾಮವಾಗಲಿಲ್ಲ. ಆದರೆ ಇಸವಿ 968ರಲ್ಲಿ ಗುಜರಾತಿನ ಕರಾವಳಿ ಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿ ಅಲ್ಲಲ್ಲಿ ಮಸೀದಿಗಳೂ ತಲೆಯೆತ್ತಿದವು. ವಲಸಿಗರು ನಿಧಾನವಾಗಿ ಉಳಿದವರನ್ನೂ ಮತಾಂತರಗೊಳಿಸತೊಡಗಿದರು. 1000ನೇ ಇಸವಿಯಲ್ಲಿ ಮೊಹಮ್ಮದ್ ಘಜ್ನಿ ನಮ್ಮ ಮೇಲೆ ಮೊತ್ತಮೊದಲ ಬಾರಿ ದಂಡೆತ್ತಿ ಬಂದಾಗ ಪೂರ್ಣ ಪ್ರಮಾಣದ ಮತಾಂತರ ಶುರುವಾಯಿತು. ನಮ್ಮ ರಾಜ, ಸೈನಿಕ, ಪ್ರಜೆಯೆನ್ನದೆ ಎಲ್ಲರ ಮೇಲೂ ಬಲಪ್ರಯೋಗ ನಡೆಯಿತು. ನಮ್ಮ ಪ್ರತಿರೋಧದ ನಡುವೆಯೂ ಪದೇ ಪದೇ ಆಕ್ರಮಣ ಮಾಡುವುದನ್ನೇ ಚಟವನ್ನಾಗಿಸಿಕೊಂಡ ಘಜ್ನಿ ಒಂದೆರಡಲ್ಲ, ಬರೋಬ್ಬರಿ ಹದಿನೇಳು ಬಾರಿ ದಂಡೆತ್ತಿ ಬಂದ! ಸಾವಿರಾರು ಹಿಂದೂಗಳನ್ನು ಕೊಂದು, ಅಸಂಖ್ಯ ಮಂದಿಯ ಮತಾಂತರ ಮಾಡಿದ. ಮಾನಕ್ಕೆ ಅಂಜಿದ ಎಷ್ಟೋ ಹೆಣ್ಣುಮಕ್ಕಳು ಬೆಂಕಿಗೆ ಹಾರಿದರು. ಕೆರೆ ಬಾವಿಗಳಿಗೆ ಆಹುತಿಯಾದರು!

ಅವನ ನಂತರ, 1190ರಲ್ಲಿ ಬಂದವನು ಮೊಹಮ್ಮದ್ ಘೋರಿ. ಆಮೇಲೆ ಕುತುಬುದ್ದೀನ್ ಐಬಕ್. ನಳಂದ, ವಿಕ್ರಮಶಿಲ ಹಾಗೂ ಉದ್ದಂಡಪುರದ ಶಿಕ್ಷಣ ಕೇಂದ್ರಗಳು ಧ್ವಂಸಗೊಂಡಿದ್ದು. ಬೌದ್ಧಧರ್ಮ ನೆಲೆ ಕಳೆದುಕೊಂಡು ದಿಕ್ಕಾಪಾಲಾಗಿದ್ದು ಅವನ ಕಾಲದಲ್ಲೇ. ಹದಿಮೂರನೇ ಶತಮಾನದ ಹೊತ್ತಿಗೆ ಮತಾಂತರ ಎಷ್ಟರಮಟ್ಟಿಗೆ ವ್ಯಾಪಿಸಿಕೊಂಡುಬಿಟ್ಟಿತ್ತೆಂದರೆ ಮುಸ್ಲಿಮರ ಸಂಖ್ಯೆ ಸಾವಿರದ ಮೆಟ್ಟಿಲನ್ನು ದಾಟಿ ಲಕ್ಷವನ್ನು ಮುಟ್ಟಿತ್ತು!

ಆಮೇಲೂ ದಾಳಿಕೋರರು, ವ್ಯಾಪಾರಿಗಳು ಬರುತ್ತಲೇ ಇದ್ದರು. ಮಂಗೋಲರು, ಅಫ್ಘಾನರು, ಪರ್ಶಿಯನ್ನರು, ಅರಬ್ಬರು, ಟರ್ಕಿಯವರು ಬಂದು ಇಲ್ಲೇ ವಾಸಿಸತೊಡಗಿದರು. ಅಲ್ಲಾವುದ್ದೀನ್ ಖಿಲ್ಜಿ, ಮೊಹಮ್ಮದ್-ಬಿನ್-ತುಘಲಕ್, ತೈಮೂರ್ ಇವರುಗಳು ದಂಡೆತ್ತಿ ಬಂದು ತಮ್ಮ ಕೈಲಾದಷ್ಟು ಮಾನ-ಪ್ರಾಣಗಳ ಹಾನಿ ನಡೆಸಿ ಹೋದರು! ಅಂತೂ ಹದಿನೈದನೆಯ ಶತಮಾನದ ಹೊತ್ತಿಗೆ ಮುಸ್ಲಿಮರ ಜನಸಂಖ್ಯೆ ಮೂವತ್ತು ಲಕ್ಷ ದಾಟಿತ್ತು! ಆಮೇಲೆ ಶುರುವಾಗಿದ್ದೇ ಬಾಬರ್ ಹುಟ್ಟುಹಾಕಿದ ಮೊಘಲರ ಸಾಮ್ರಾಜ್ಯ. ಪಾಣಿಪತ್‍ನ ಎರಡನೇ ಕದನದಲ್ಲಿ ಸೆರೆಸಿಕ್ಕ ನತದೃಷ್ಟ ಹೇಮುವಿನ ಕತ್ತನ್ನು 14ರ ಹರೆಯದ ಅಕ್ಬರ್ ಕತ್ತರಿಸಿದ ನೋಡಿ, ಅವತ್ತಿನಿಂದಲೇ ಅವನು ಘಾಜಿ (ಕಾಫಿರನನ್ನು ಕೊಂದ ವೀರ) ಎಂಬ ಪಟ್ಟ ಗಿಟ್ಟಿಸಿಕೊಂಡ. ಆ ಹುಮ್ಮಸ್ಸು ಮುಂದೆ ಲಕ್ಷಾಂತರ ಹಿಂದೂಗಳ ಮಾರಣಹೋಮಕ್ಕೆ, ಮತಾಂತರಕ್ಕೆ ನಾಂದಿಯಾಯಿತು.

ಔರಂಗ್‍ಜೇಬ್ ಸತ್ತ ಮೇಲೆ ಇವರ ಹಾವಳಿ ಕಡಿಮೆಯಾಯಿತಲ್ಲ ಎಂದುಕೊಳ್ಳುವ ಹೊತ್ತಿಗೆ ನಾದಿರ್ ಶಾಹ್ ಹಾಗೂ ಅಹಮದ್ ಶಾಹ್ ಅಬ್ದಾಲಿ ಬಂದರು. ಕೊನೆಗೆ ಟಿಪ್ಪು ಲಗ್ಗೆಯಿಟ್ಟ. ಇದೆಲ್ಲ ಮುಗಿಯುವ ಹೊತ್ತಿಗೆ ಬ್ರಿಟಿಷರ ಆಗಮನ! ನಿರಂತರವಾಗಿ ಎಷ್ಟೊಂದು ದಾಳಿಗಳು! ಅದೆಷ್ಟು ಕ್ರೌರ್ಯ! ಆಮೇಲೆ ಸ್ವಾತಂತ್ರ್ಯ ಸಂಗ್ರಾಮ ಶುರುವಾದಾಗಲೂ ಗಲಭೆ ತಪ್ಪಲಿಲ್ಲ. ಕತ್ತಿಯ ಒರೆಯಿಂದ ಹೊಮ್ಮಿದ ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗಳನ್ನು ಹಿಂದೂ ದರ್ಮದ ಜೊತೆಗೆ ಒಂದೇ ತಕ್ಕಡಿಯಲ್ಲಿಟ್ಟು ತೂಗಿ, ಸರ್ವಧರ್ಮ ಸಮಭಾವ ಎಂಬ ಮಂತ್ರ ಜಪಿಸಿಬಿಟ್ಟರು ಗಾಂಧಿ! ನಾವು ಆ ಜಪದಲ್ಲಿ ಮೈಮರೆತಾಗಲೇ ಅತ್ತ ಮಲಾಬಾರ್‍ನ ದಂಗೆ ಸಾವಿರಾರು ಹಿಂದೂಗಳ ಪ್ರಾಣ ತೆಗೆಯಿತು. ನೂರಾರು ಹೆಣ್ಣುಮಕ್ಕಳ ಶವ ಮತ್ತೆ ಬಾವಿಗಳಲ್ಲಿ ತೇಲಾಡಿತು! ನಂತರ 1946ರಲ್ಲಿ ನಡೆದಿದ್ದು The Great Calcutta Killing! ಕಲ್ಕತ್ತಾದ ಅಂದಿನ ಮೇಯರ್ ಮೊಹಮ್ಮದ್ ಉಸ್ಮಾನ್ ಕೊಟ್ಟ ಜಿಹಾದ್‍ನ ಕರೆಗೆ  ಓಗೊಟ್ಟ ಮುಸ್ಲಿಮರಿಂದ ಮತ್ತಷ್ಟು ಮಾರಣಹೋಮ. ಅದರ ಮುಂದುವರೆದ ಭಾಗವಾಗಿ ಅದೇ ವರ್ಷ ಶುರುವಾದ ನೋವಾಖಲಿ ದಂಗೆ! ಆ ಕ್ರೌರ್ಯ ಯಾವ ಮಟ್ಟದ್ದು ಗೊತ್ತೇ? ಸಾವಿರಾರು ಹೆಣ್ಣುಮಕ್ಕಳು ಮುಜಾಹಿದ್‍ಗಳ ಕಪಿಮುಷ್ಠಿಯಲ್ಲಿ ಸಿಲುಕಿದರು. ತಕ್ಕ ಮಟ್ಟಿನ ಪ್ರತಿರೋಧ ತೋರಿದ ಬಾಬೂ ರಾಜೇಂದ್ರಲಾಲ್ ರಾಯ್ ಎಂಬ ನ್ಯಾಯವಾದಿಯ ತಲೆಯನ್ನು ಕತ್ತರಿಸಿ, ಆ ದಂಗೆಗೆ ಕಾರಣನಾಗಿದ್ದ ಶಾಸಕ ಗುಲಾಮ್ ಸರ್ವಾರ್‍ನ ಮುಂದೆ ಹಾಜರುಪಡಿಸಲಾಗಿತ್ತು! ರಾಜೇನ್‍ಬಾಬೂರ ಇಬ್ಬರು ಹದಿವಯಸ್ಸಿನ ಹೆಣ್ಣುಮಕ್ಕಳು ಆ ಶಾಸಕನ ಬಂಟರ ಸೇವೆಗೆ ಮೀಸಲಾದರು!
ಬುಲಂದ್‍ಶಹರ್‍ನಲ್ಲಿ 1990ರಲ್ಲಿ ನಡೆದ ದಂಗೆ, ಲಕ್ಷಾಂತರ ಕಾಶ್ಮೀರಿ ಪಂಡಿತರನ್ನು ಕೊಂದು ಉಳಿದವರನ್ನು ನಿರ್ಗತಿಕರನ್ನಾಗಿಸಿದ ಜಿಹಾದ್‍ನ ಕೂಗು, ಬಾಬ್ರಿ ಮಸೀದಿಯ ಧ್ವಂಸದ ನಂತರ 1992ರಲ್ಲಿ ಇಸ್ಲಾಮಿಕ್ ಬಾಂಗ್ಲಾದೇಶದಲ್ಲಿ ನಡೆದ ದಂಗೆಗಳೆಲ್ಲ ನಮ್ಮ ಮನಸ್ಸುಗಳಲ್ಲಿ ತೀರಾ ಹಸಿರಾಗೇ ಇವೆ. ಇತ್ತೀಚೆಗಂತೂ, ಪಾಕಿಸ್ತಾನದ ಪ್ರೇರಣೆಯಿಂದ ನಡೆಯುತ್ತಿರುವ ಭಯೋತ್ಪಾದನೆ, ಲವ್‍ಜಿಹಾದ್‍ ರೂಪದ ಮತಾಂತರಗಳ ಬಗ್ಗೆಯೂ ನಮಗೆ ಗೊತ್ತಿದೆ.  ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಕ್ರೌರ್ಯ, ಮತಾಂತರಗಳೇ ಭಾರತದಲ್ಲಿ ಮುಸ್ಲಿಮರ ಹುಟ್ಟಿಗೆ ಕಾರಣ ಎನ್ನುವುದು ಇದರಿಂದ ಸ್ಪಷ್ಟವಾಗುವುದಿಲ್ಲವೇ? ಇದರಲ್ಲಿ ಹೆಮ್ಮೆ ಪಡುವಂಥದ್ದೇನಿದೆ?



ಭಂಡ ಹೇಳಿಕೆಗಳನ್ನು ನೀಡಿ ಜನರನ್ನು ಎತ್ತಿಕಟ್ಟುವುದೇ ಪೌರುಷದ ಸಂಕೇತವೆಂದು ಭಾವಿಸಿಕೊಂಡಿದ್ದಾರೆ ಒವೈಸಿ ಸಹೋದರರು! ಅಸಾದುದ್ದೀನರ ತಮ್ಮ ಅಕ್ಬರುದ್ದೀನ್ ಒವೈಸಿಯ ಕೆಲವು ಭಾಷಣಗಳ ತುಣುಕುಗಳು ಹೀಗಿವೆ ನೋಡಿ:
ಏಪ್ರಿಲ್ 2012 - 'ಅಯೋಧೆಯಲ್ಲಿ ಶ್ರೀರಾಮ ಹುಟ್ಟಿದ ಎನ್ನುತ್ತಾರೆ. ಆದರೆ ಕೌಸಲ್ಯೆಯ ತವರು ಹರಿಯಾಣದಲ್ಲಿರುವ ಕೌಶಲ್ಯಾಪುರ. ಹೆಣ್ಣುಮಕ್ಕಳು ಚೊಚ್ಚಲ ಹೆರಿಗೆಗೆ ತಾಯಿಯ ಮನೆಗೆ ಹೋಗುವುದು ನಮ್ಮಲ್ಲಿ ನಡೆದುಬಂದಿರುವ ಪ್ರತೀತಿ. ಹಾಗಾದರೆ ಎಲ್ಲೆಲ್ಲಿಗೆ ಹೋಗಿದ್ದಳಪ್ಪಾ ಕೌಸಲ್ಯಾ? ಕೊನೆಗೆ ಅವಳು ಶ್ರೀರಾಮನನ್ನು ಹಡೆದಿದ್ದಾದರೂ ಎಲ್ಲಿ?' ಎಂದು ಆತ ಗಹಗಹಿಸಿ ನಕ್ಕು ಕೇಳಿದಾಗ ಸಭಿಕರಿಂದ ಜೋರು ಚಪ್ಪಾಳೆ. ನಗು, ಕೇಕೆಗಳ ಮಾರ್ದನಿ!

ನವೆಂಬರ್ 2012 - 'ನಾವು ಮುಸ್ಲಿಮರು 25 ಕೋಟಿಯಿದ್ದೇವೆ. ಅವರು ಹಿಂದೂಗಳು 100 ಕೋಟಿಯಿದ್ದಾರೆ. ನಮಗಿಂತ ಅಷ್ಟು ಪಟ್ಟು ಹೆಚ್ಚಿದ್ದಾರೆ ತಾನೇ? ಪೋಲೀಸರನ್ನು ಹದಿನೈದೇ ನಿಮಿಷಗಳ ಕಾಲಾವಧಿಗೆ ಎಲ್ಲಾದರೂ ಕಳಿಸಿಬಿಡಲಿ ಸಾಕು. ಆಮೇಲೆ ತೋರಿಸುತ್ತೇವೆ ಇಬ್ಬರಲ್ಲಿ ಯಾರು ಬಲಶಾಲಿಗಳು ಅಂತ.' ಆತ ಉದ್ಧಟತನದಿಂದ ಎದೆಯುಬ್ಬಿಸಿಕೊಂಡು ಹೇಳುವಾಗ ಸಭಿಕರಿಂದ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ! ಅಕ್ಬರುದ್ದೀನ್ ಒವೈಸಿ ಜಿಂದಾಬಾದ್ ಎಂಬ ಕಿವಿಗಡಚಿಕ್ಕುವ ಕೂಗು! ಹಿಂದೂಗಳು ಷಂಡರು ಅಂದ. ಅಷ್ಟೂ ಮಂದಿ ಗಂಡಸರು ಸೇರಿ ಒಂದು ಮಗುವನ್ನು ಹುಟ್ಟಿಸಲಾರದ ನಪುಂಸಕರು ಅಂದ. ಎಲ್ಲರೊಡನೆ ತಾನೂ ಕೇಕೆ ಹಾಕಿ ನಕ್ಕ.

ಇವಿಷ್ಟೇ ಅಲ್ಲ, ಹಿಂದೂ ಹಬ್ಬಗಳ ಲೇವಡಿ, ದೇವ-ದೇವತೆಯರ ಬಗ್ಗೆ ವ್ಯಂಗ್ಯವಾಡುವುದು ಆತನ ಪ್ರತಿ ಭಾಷಣದಲ್ಲೂ ಮಾಮೂಲು. 'ಗುಜರಾತಿನ ಮೋದಿ ದೇಶದ ಪ್ರಧಾನಿಯಾಗಿಬಿಡುತ್ತಾನಂತೆ. ಹೇಗೆ ಆಗುತ್ತಾನೆ? ನಾವೂ ನೋಡೇಬಿಡೋಣ' ಎಂದು ಆಗಲೇ ಅವರ ವಿರುದ್ಧ ತೊಡೆತಟ್ಟಿ ನಿಂತಿದ್ದ ಈ ಭೂಪ. ಇವನ ಪ್ರಕಾರ ಅಜ್ಮಲ್ ಕಸಬ್‍, ಇಶ್ರತ್ ಜಹಾನ್ ಎಲ್ಲರೂ ಮುಗ್ಧ ಕಂದಮ್ಮಗಳೇ. ಸ್ವಾತಂತ್ರ್ಯಾನಂತರ ಲಕ್ಷಾಂತರ ಮುಸ್ಲಿಮರ ಸಾವಿಗೆ ಕಾರಣವಾಗಿರುವ ಹಿಂದೂಗಳು ಮಾತ್ರ ಕಾಫಿರರು! ಅವನು ಹೇಳುವುದಕ್ಕೆಲ್ಲ ತಾಳ ಹಾಕುವ ಅಣ್ಣ ಅಸಾದುದ್ದೀನ್ ಒವೈಸಿ. ಇದು ಕೆಲ ವರ್ಷಗಳಿಂದ ಅನೂಚಾನವಾಗಿ ನಡೆಯುತ್ತಲೇ ಬಂದಿದೆ.

ಆದರೆ ಇದನ್ನು ನೋಡಿದಾಗಲೆಲ್ಲ ನಮ್ಮಲ್ಲಿ ಹಲವಾರು ಪ್ರಶ್ನೆಗಳೇಳುತ್ತವೆ. ಇವರ ಮಾತುಗಳು ಉಳಿದ ಮುಸ್ಲಿಮರಿಗೂ ಸಮ್ಮತವಾ? ಅಲ್ಲದಿದ್ದರೆ ಅವರೇಕೆ ಖಂಡಿಸದೆ ಸುಮ್ಮನಿರುತ್ತಾರೆ? ಇದು ಅಂತಲೇ ಅಲ್ಲ. ಆರ್‍ಎಸ್‍ಎಸ್‍ನ ಅಥವಾ ಬೇರೆ ಯಾವುದೇ ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಯಾದಾಗಲೆಲ್ಲ ಯಾಕೆ ಒಬ್ಬ ಮುಸ್ಲಿಮನೂ ಖೇದ ವ್ಯಕ್ತಪಡಿಸುವುದಿಲ್ಲ? ‘ನಾವು ಉಳಿದ ಭಾರತೀಯರೊಂದಿಗಿದ್ದೇವೆ.’ ಎಂಬ ಒಂದೇ ಒಂದು ಒಗ್ಗಟ್ಟಿನ ಮಾತೇಕೆ ಯಾರ ಬಾಯಿಂದಲೂ ಹೊರಡುವುದಿಲ್ಲ? ‘ಪಾತಕಿಗಳನ್ನು ಹಿಡಿಯಲು ನೆರವಾಗುತ್ತೇವೆ.’ ಎಂದು ಮುಂದಾಳುಗಳಾಗಿ ಏಕೆ ಬರುವುದಿಲ್ಲ?

ಎರಡು ಮುಖ್ಯವಾದ ವಿಷಯಗಳನ್ನಿಲ್ಲಿ ಹೇಳಲೇಬೇಕು. ಒಂದು - ಇಸ್ಲಾಂನ, ಕ್ರಿಶ್ಚಿಯನ್ನರ ದಾಳಿಗೆ ಬಲಿಯಾಗಿ ಜಗತ್ತಿನ ಸುಮಾರು 45 ಪುರಾತನ ನಾಗರಿಕತೆಗಳು (ಗ್ರೀಸ್, ಇರಾನ್, ಇಜಿಪ್ಟ್, ಬ್ಯಾಬಿಲೋನಿಯನ್, ರೋಮ್‍ಗಳೂ ಸೇರಿ) ಈಗಾಗಲೇ ಹೇಳಹೆಸರಿಲ್ಲದಂತೆ ನಶಿಸಿ ಹೋಗಿವೆ. ಉಳಿದಿರುವುದು ನಮ್ಮದು ಮಾತ್ರ! ಈ ಮಾತನ್ನು ಹೇಳಿರುವುದು ಆರ್‍ಎಸ್‍ಎಸ್‍ನ ಖಾಕಿ ಚಡ್ಡಿಯ ಬಲಪಂಥೀಯರಲ್ಲ, ಯುನೆಸ್ಕೋದ ಸಂಶೋಧಕರು!


ಎರಡು - ಇಸ್ಲಾಂ ಎಂಬ ವೃಕ್ಷದ ಬೇರುಗಳಿರುವುದು ಪರದೇಶದಲ್ಲಿ. ಇಲ್ಲಿ ಚಾಚಿಕೊಂಡಿರುವುದು ಅದರ ಟೊಂಗೆಗಳು ಮಾತ್ರ. ಸಹಸ್ರಾರು ವರ್ಷಗಳಿಂದ ಈ ಭೂಮಿಯ ಒಡಲಾಳದಲ್ಲಿ ಹುದುಗಿರುವುದು ನಮ್ಮ ಸನಾತನ ಧರ್ಮದ ಬೇರು! ಮೇರೆ ಮೀರುತ್ತಿರುವ ಒವೈಸಿ ಸಹೋದರರ ಮಾತು-ಕೃತಿಗಳ ಅಬ್ಬರಕ್ಕೆ ನಾಳೆ ಚಂಡಮಾರುತವೆದ್ದರೆ ಲಟಲಟನೆ ಮುರಿದು ಬೀಳುವುದು ಯಾವುದು?

ಕಮ್ಯೂನಿಸ್ಟ್ ನೆಹರೂ ಬರೆದು ಹೋದ ಕರಾಳ ಅಧ್ಯಾಯ!

ಕಳೆದ ವಾರ ಎನ್‍ಡಿಟಿವಿ ತನ್ನ ಅಂಗಳದಲ್ಲಿ 'ಜೆ‍ಎನ್‍ಯು'ದ ವಿದ್ಯಾರ್ಥಿಗಳನ್ನು ಮಾತಿಗೆ ಕೂಡಿಸಿಕೊಂಡಿತ್ತು. ಅಲ್ಲಿದ್ದ ಗುಂಪು, ತಾವೇಕೆ ಅಫ್ಜಲ್‍ನನ್ನು ಬೆಂಬಲಿಸುತ್ತೇವೆ ಎಂಬ ವಿತಂಡವಾದವನ್ನು ಮಂಡಿಸುತ್ತಿತ್ತು. ಚರ್ಚೆ ಮುಗಿಯುವ ಹೊತ್ತಿಗೆ ಹುಡುಗಿಯೊಬ್ಬಳು ಹತಾಶಳಾಗಿ ಹೇಳಿದಳು - 'ಎಂ. ಎಫ್ ಹುಸೇನ್‍ರಂಥ ಮಹಾನ್ ಕಲಾವಿದನನ್ನು ಹೊರಗಟ್ಟಿದ ನತದೃಷ್ಟ ದೇಶ ನಮ್ಮದು. ಛೇ!' ಅವಳು ಬಿಟ್ಟ ದೊಡ್ಡ ನಿಟ್ಟುಸಿರಿಗೆ ಅರೆಕ್ಷಣ ಮೌನ ಮಡುಗಟ್ಟಿತು. ಅಲ್ಲಿದ್ದ ವಿರೋಧಿ ಗುಂಪಿನಲ್ಲಿ ಯಾರಾದರೂ ಒಬ್ಬರು ಅವಳನ್ನು ಒಂದೇ ಒಂದು ಪ್ರಶ್ನೆ ಕೇಳಿದ್ದರೆ ಸಾಕಿತ್ತು - 'ನಿನ್ನ ಅಮ್ಮ ನಗ್ನರಾಗಿರುವ ಚಿತ್ರವನ್ನು ಎಂ.ಎಫ್ ಹುಸೇನ್ ಬರೆದಿದ್ದರೆ ಆಗಲೂ ನೀನು ಇದೇ ಮಾತನ್ನು ಹೇಳುತ್ತಿದ್ದೆಯಾ?' ಎಂದು. ದೇಶದ ಬಗ್ಗೆ ಕಿಂಚಿತ್ತೂ ಪೂಜ್ಯ ಭಾವನೆ ಇರದ ಈ ಜಾಡ್ಯ ಹೊಸದಲ್ಲ. 'ನಮ್ಮ ತಾಯಿ ಭಾರತಿ' ಎನ್ನುವ ಪಾಠವನ್ನು ಎಷ್ಟೋ ಜನ ಕಲಿತಿಲ್ಲವೆಂದರೆ ಅದಕ್ಕೆ ಕಾರಣವೂ ಇಲ್ಲದಿಲ್ಲ. ದಶಕಗಳಿಂದ 'ಜೆ‍ಎನ್‍ಯು'ದಂಥ ವಿಶ್ವವಿದ್ಯಾಲಯಗಳಲ್ಲಿ ಕಮ್ಯೂನಿಸಂ ಎಂಬ ಅಫೀಮಿನ ಅಮಲನ್ನು ತಲೆಗೇರಿಸಿಕೊಂಡು ಬೆಳೆದ ಪೀಳಿಗೆಗಳೇ ಇವೆ. ಅವುಗಳ ಗಡ್ಡ-ಮೀಸೆ ಬೆಳ್ಳಗಾಗಿ, ಜುಬ್ಬ ಹರಿದು, ಚಪ್ಪಲಿ ಸವೆದು, ಕಣ್ಣಿಗೆ ಕನ್ನಡಕ ಬಂದಿದ್ದರೂ ಇಂದಿನ ಹೊಸ ಪೀಳಿಗೆಯ ದಾರಿ ತಪ್ಪಿಸುವ ಉಮೇದು ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಹಾಗಾದರೆ ಯಾರು ಇದಕ್ಕೆಲ್ಲ ಮೂಲ ಕಾರಣ? ವಿದೇಶೀಯನಾ? ಮತಾಂಧನಾ? ದೇಶದ ಮೇಲೆ ದಂಡೆತ್ತಿ ಬಂದ ದಾಳಿಕೋರನಾ? ಅಲ್ಲವೇ ಅಲ್ಲ. ಅಪ್ಪಟ ದೇಶೀ ತಳಿಯೇ ಆದ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ! ಕಮ್ಯೂನಿಸಂ ಎಂಬ ಕ್ರಿಮಿಯನ್ನು ತಲೆಯೊಳಗೆ ಬಿಟ್ಟುಕೊಂಡ ನೆಹರೂ ಹಂತಹಂತವಾಗಿ ಅದನ್ನು ಹೇಗೆ ದೇಶದ ನರನಾಡಿಗಳಲ್ಲಿ, ಮುಖ್ಯವಾಗಿ ದಿಲ್ಲಿಯೆಂಬ ಮಸ್ತಿಷ್ಕದೊಳಗೆ ಹರಿಯಬಿಟ್ಟರು ಎನ್ನುವ ಸತ್ಯ ಇತಿಹಾಸದ ಪುಟಗಳನ್ನು ಬಗೆದು ನೋಡಿದಾಗ ಸ್ವಷ್ಟವಾಗಿ ಕಾಣುತ್ತದೆ.

1924-25. ಭಾರತದಲ್ಲಿ ಎಡಪಂಥೀಯ ವಿಚಾರಧಾರೆಯನ್ನು ಹುಟ್ಟುಹಾಕುವ ಸಲುವಾಗಿ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ಕಮ್ಯೂನಿಸ್ಟರ ಕೇಂದ್ರವೊಂದು ಹುಟ್ಟಿಕೊಂಡಿತ್ತು. ಅದರ ರೂವಾರಿ ಸೋವಿಯತ್ ಒಕ್ಕೂಟ. ಆಗ ಕಾಮ್ರೇಡ್ ಎಮ್.ಎನ್. ರಾಯ್‍ರ ಪತ್ನಿ ಐಲೀನ್, ನೆಹರೂರನ್ನು ಸಂಪರ್ಕಿಸಿದರು. ಪುರೋಹಿತರು ಬೊಟ್ಟು ಮಾಡಿದೆಡೆ ನೋಡಿ ಹಾಡಹಗಲಲ್ಲೂ ಅರುಂಧತಿ ನಕ್ಷತ್ರ ಕಂಡಿತೆಂದು ಬೀಗುವ ಮದುಮಕ್ಕಳ ಹಾಗೆ ಬೀಗಿದರು ನೆಹರೂ! ಥೈ ಅಂತ ಸಜ್ಜಾಗಿ 1925ರಲ್ಲಿ ಯೂರೋಪ್ ಪ್ರವಾಸಕ್ಕೆ ಹೊರಟರು. ನೆವವಿದ್ದಿದ್ದು ಹೆಂಡತಿಯ ಅನಾರೋಗ್ಯದ ಚಿಕಿತ್ಸೆ ಎಂಬುದು! ಅಲ್ಲಿಂದ, 1927ರ ನವೆಂಬರ್‍ನಲ್ಲಿ ಸೋವಿಯತ್ ತಲುಪಿದರು. ಏನಿಲ್ಲವೆಂದರೂ ಎಪ್ಪತ್ತು   ಲಕ್ಷ ಜನರನ್ನು ಕೊಂದಿದ್ದ ಲೆನಿನ್‍ನ ಸಮಾಧಿಯ ಮುಂದೆ ನಿಂತು ಕೃತಾರ್ಥರಾಗಿ ಕಣ್ಣೀರು ಸುರಿಸಿದರು! ಪ್ರವಾಸ ಮುಗಿಸಿ ಭಾರತಕ್ಕೆ ಮರಳುವ ಹೊತ್ತಿಗೆ ನೆಹರೂ ನಮ್ಮವರಾಗಿರಲಿಲ್ಲ. ಕಮ್ಯೂನಿಸ್ಟ್ ಸಿದ್ಧಾಂತದ ಕೈಗೊಂಬೆಯಾಗಿದ್ದರು. ಆಗ ಸೂತ್ರಧಾರಿಯಾಗಿದ್ದವನು ಮಹಾಕ್ರೂರಿ ಸ್ಟಾಲಿನ್! 
ಅಲ್ಲಿಂದ ಹಿಂದಿರುಗಿದ ನೆಹರೂ ಮಾಡಿದ ಮೊದಲ ಕೆಲಸ, ಸೋವಿಯತ್ ರಷ್ಯಾ ಎಂಬ ಪುಸ್ತಕವನ್ನು ಬರೆದಿದ್ದು. ಅಷ್ಟಕ್ಕೇ ಸುಮ್ಮನಾಗದೆ, ಕಾಂಗ್ರೆಸ್‍ನ ಪ್ರತಿಯೊಂದು ಅಧಿವೇಶನದಲ್ಲೂ ಸೋವಿಯತ್‍ನ ಪರ ಅಧಿಸೂಚನೆಗಳ ಷರಾ ಹೊರಡಿಸಿದರು. ಒಂದೇ ಘೋಷಣೆ ಅವರದ್ದು. 'ಸೋವಿಯತ್ ಹಾಗೂ ಭಾರತ ಹಲವಾರು ವಿಚಾರಗಳಲ್ಲಿ ಸಾಮ್ಯ ಹೊಂದಿರುವುದರಿಂದ ಎರಡೂ ದೇಶಗಳು ಅತ್ಯಂತ ಮಧುರವಾದ ಬಾಂಧವ್ಯ ಹೊಂದುವುದು ಸಾಧ್ಯ' ಎನ್ನುವುದು. ಇದೇ ಸೋವಿಯತ್ 1919-20 ರಲ್ಲಿ ಪಂಜಾಬ್‍ನ ಪಠಾಣರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿ ದಂಗೆಯೆಬ್ಬಿಸಲು ಕುಮ್ಮಕ್ಕು ನೀಡಿದ್ದ ವಿಷಯ ನೆಹರೂರಿಗೆ ನೆನಪಾಗಲೇ ಇಲ್ಲ ಪಾಪ! ಅವರಿಗಿದ್ದ ಮತ್ತೊಂದು ದೊಡ್ಡ ಭ್ರಮೆ, ನಮ್ಮನ್ನಾಳುತ್ತಿದ್ದ ಸಾಮ್ರಾಜ್ಯಶಾಹಿ ಇಂಗ್ಲೆಂಡ್ ಕಾಲು ಕೆರೆದುಕೊಂಡು ಸೋವಿಯತ್‍ನ ಜೊತೆ ಯುದ್ಧಕ್ಕೆ ಹೋಗಿ ಅದನ್ನು ಸೋಲಿಸಿಬಿಡುತ್ತದೆ ಎನ್ನುವುದು. ಹಾಗೊಂದು ಪಕ್ಷ ಇಂಗ್ಲೆಂಡ್ ಯುದ್ಧಕ್ಕಿಳಿದರೆ ಭಾರತೀಯರು ಸುತರಾಂ ಬೆಂಬಲಿಸಬಾರದು ಎಂಬ ಅವರ ಮನದಿಂಗಿತ ಮತ್ತೊಂದು ಅಧಿಸೂಚನೆಯ ರೂಪದಲ್ಲಿ ಹೊರಬಿತ್ತು.

1935 - World Peace Congress ಎಂಬ ಕಮ್ಯೂನಿಸ್ಟರ ಒಕ್ಕೂಟವನ್ನು ಸೃಷ್ಟಿಸಿತು ಸೋವಿಯತ್. ಉದ್ದೇಶ, Popular Front ನ ಹೆಸರಿನಲ್ಲಿ ದಂಗೆಕೋರರ ಸೇನೆ ಕಟ್ಟಿ, ರಕ್ತಪಾತ ಮಾಡಿಯಾದರೂ ವಿವಿಧ ದೇಶಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವುದು. ತಕ್ಷಣ ನೆಹರೂ ಎರಡು ಮುಖ್ಯ ಕೆಲಸಗಳನ್ನು ಮಾಡಿದರು. ಒಂದು – ಆ ಒಕ್ಕೂಟಕ್ಕೆ ಭಾರತದ ಪ್ರತಿನಿಧಿಯಾಗಿ ಕೃಷ್ಣ ಮೆನನ್‍ರನ್ನು ನೇಮಿಸಿದ್ದು! ಎರಡು - ವಿದೇಶಾಂಗ ವ್ಯವಹಾರಗಳ ಇಲಾಖೆಯನ್ನು ಪ್ರಾರಂಭಿಸಿ ಅದರ ಉಸ್ತುವಾರಿಯನ್ನು ಅಹಮದ್ ಮತ್ತು ಅಶ್ರಫ್ ಎಂಬಿಬ್ಬರು ಕಾಮ್ರೇಡ್‍ಗಳಿಗೆ ವಹಿಸಿಕೊಟ್ಟಿದ್ದು!
1939- ಭಾರತದ ಪಾಲಿಗೆ ಮಹತ್ವಪೂರ್ಣ ವರ್ಷ. ನೆಹರೂ ನಿಜವಾಗಿಯೂ ದೇಶಭಕ್ತರಾಗಿದ್ದಿದ್ದರೆ ನಮಗೆ ಆ ವರ್ಷವೇ ಸ್ವಾತಂತ್ರ್ಯ ಸಿಕ್ಕಿಬಿಡುತ್ತಿತ್ತು. ಏಕೆಂದರೆ ಆಗಲೇ ಕಾಂಗ್ರೆಸ್ ಅತ್ಯಂತ ಪ್ರಬಲವಾಗಿದ್ದಿದ್ದು. ಸೋವಿಯತ್, ಇಂಗ್ಲೆಂಡನ್ನು ಆಪೋಶನ ತೆಗೆದುಕೊಳ್ಳಲು ಕಮ್ಯೂನಿಸ್ಟ್ ಚಳವಳಿಯನ್ನು ಹುಟ್ಟು ಹಾಕಿದ್ದೂ ಅದೇ ವರ್ಷದಲ್ಲೇ. ಭಾರತವೂ ಇಂಗ್ಲೆಂಡಿನ ಮೇಲೆ ಒತ್ತಡ ಹೇರಬಹುದಿತ್ತು. ಆಗಿನ್ನೂ ಮುಸ್ಲಿಂ ಲೀಗ್ ಬಲಿತಿರಲಿಲ್ಲ. ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷವೂ ಬೇರೂರಿರಲಿಲ್ಲ. ಅದು ಅರ್ಥವಾಗಿದ್ದರಿಂದಲೇ ‘Britain’s Difficulty is India’s Opportunity’ ಅಂತ ನೇತಾಜಿ ಗುಡುಗಿದ್ದು! ಕೈಗೆ ಬಂದಿರುವ ಅದ್ಭುತವಾದ ಅವಕಾಶವನ್ನು ಬಳಸಿಕೊಳ್ಳುವ ತುಡಿತ ಅವರದ್ದು. ಆದರೆ ನೆಹರೂ ಗುಮ್ಮನಂತೆ ಕುಳಿತುಬಿಟ್ಟಿದ್ದರು! ಸ್ಟಾಲಿನ್‍ನ ಆಜ್ಞೆಗೋಸ್ಕರ ಕಾಯುತ್ತಿದ್ದರು! ರೋಸಿ ಹೋದ ನೇತಾಜಿಯನ್ನು ಕಾಂಗ್ರೆಸ್‍ನಿಂದ ಹೊರಹಾಕಲಾಯಿತು!
1947 - ಎರಡನೆಯ ವಿಶ್ವಯುದ್ಧದಲ್ಲಿ ಹೈರಾಣಾಗಿದ್ದ ಇಂಗ್ಲೆಂಡ್‍ಗೆ ಸುಭಾಷ್‍ರ ಸೇನೆಯೊಡನೆ ಬಡಿದಾಡುವಷ್ಟು ತ್ರಾಣವಿರಲಿಲ್ಲ. ಭಾರತದಿಂದ ಗಂಟು ಮೂಟೆ ಕಟ್ಟಲು ಸಜ್ಜಾಯಿತು. ಸ್ಟಾಲಿನ್ ನೆಹರೂರನ್ನು ಗಮನಿಸತೊಡಗಿದ. ರಾಷ್ಟ್ರವಾದಿಗಳ ಗುಂಪಿನಲ್ಲಿದ್ದ ನೆಹರೂರಿಗೆ ಕಮ್ಯೂನಿಸ್ಟ್ ಸಿದ್ಧಾಂತಗಳನ್ನು ಆಚರಣೆಗೆ ತರುವುದು ಕಷ್ಟವಾಯಿತು.
1948 - ಸಿಟ್ಟಾದ ಸ್ಟಾಲಿನ್ ಸಿಪಿಐನ ಭಾರತೀಯ ಕಾಮ್ರೇಡ್‍ಗಳನ್ನು ದೇಶದ ಮೇಲೆ ಛೂಬಿಟ್ಟ! ಕಮ್ಯೂನಿಸ್ಟ್ ವೀರರು ಕ್ರೌರ್ಯಕ್ಕಿಳಿದರು! ಅಂದು ಪಟೇಲರು ಅವರನ್ನು ಮಟ್ಟ ಹಾಕಿರದಿದ್ದರೆ ದೇಶಕ್ಕೆ ದೇಶವೇ ಹತ್ತಿ ಉರಿದು ಹೋಗುತ್ತಿತ್ತು! ನೆಹರೂ ಮಾಡಿದ ಘನಂದಾರಿ ಕೆಲಸ ಒಂದೇ. ಕೂತು ಕಣ್ಣೀರು ಹಾಕಿದ್ದು! ದೇಶದಲ್ಲಿ ದಂಗೆಯಾಗುತ್ತಿದೆ ಎಂಬ ಕಾರಣಕ್ಕಲ್ಲ, ಸ್ಟಾಲಿನ್ ತಮ್ಮ ನಿಷ್ಠೆಯನ್ನು ನಂಬದೆ ತಮ್ಮನ್ನು ಅನುಮಾನಿಸಿಬಿಟ್ಟನಲ್ಲ ಎಂಬ ಕಾರಣಕ್ಕೆ! ರೋಸಿಹೋದ ಬಂಗಾಳವಂತೂ ಕಮ್ಯೂನಿಸ್ಟ್ ಪಕ್ಷವನ್ನು ನಿಷೇಧಿಸಿತು. ಆಗ ಅಸಹಾಯಕತೆಯಿಂದ ಕುಗ್ಗಿ ಹೋದ ನೆಹರೂ ಏನು ಮಾಡಿದರು ಗೊತ್ತೇ? ಮಾಸ್ಕೋದಲ್ಲಿ ಭಾರತೀಯ ರಾಯಭಾರಿಯಾಗಿದ್ದ ಸಹೋದರಿ ವಿಜಯಲಕ್ಷಿ ಪಂಡಿತರಿಗೆ ಆತುರಾತುರವಾಗಿ ತಂತಿಯ ಮೂಲಕ ಸಂದೇಶ ಕಳಿಸಿದರು – ‘ಪಶ್ಚಿಮ ಬಂಗಾಳ ಹೇರಿರುವ ನಿಷೇಧಕ್ಕೆ ಭಾರತ ಸರ್ಕಾರದ ಒಪ್ಪಿಗೆಯಿಲ್ಲ, ದೇಶದ ಬೇರಾವುದೇ ಭಾಗದಲ್ಲೂ ಸಿಪಿಐ ನಿಷೇಧಿಸಲ್ಪಡುವುದಿಲ್ಲ' ಎಂದು. ಪಾಪ, ಸ್ಟಾಲಿನ್‍ನ ನಿಷ್ಠರ ಪಟ್ಟಿಯಲ್ಲಿ ಇವರೇ ಮೊದಲಿಗರಾಗಿರಲು ಹಾತೊರೆಯುತ್ತಿದ್ದರಲ್ಲ?
1950 - ಪಟೇಲ್‍ರು ಇಲ್ಲವಾದರು. ನೆಹರೂರನ್ನು ಪ್ರಶ್ನಿಸಬಲ್ಲ ಛಾತಿಯಿದ್ದ ಅವರನ್ನು ಕಳೆದುಕೊಂಡಿದ್ದು ಈ ದೇಶದ ದುರಾದೃಷ್ಟ!  
ಆಮೇಲೆ, ನೆಹರೂ ಆಡಿದ್ದೇ ಆಟವಾಗಿ ಹೋಯಿತು! ಥೇಟ್ ಅಪ್ಪನನ್ನೇ ಅನುಕರಿಸಿದ ಇಂದಿರಾ ಗಾಂಧಿ ಮಾಸ್ಕೋದ ಬಂಟರನ್ನೆಲ್ಲ ಗುಡ್ಡೆಹಾಕಿಕೊಂಡರು. ಜೆ‍ಎನ್‍ಯು ವಿಶ್ವವಿದ್ಯಾಲಯವನ್ನು ಕಟ್ಟಿ ಕಮ್ಯೂನಿಸ್ಟ್ ಪ್ರೊಫೆಸರ್‍ಗಳನ್ನೇ ಸಾಕಿಕೊಂಡರು. ಇವರಿಗೆಂದೇ ಪತ್ರಿಕೋದ್ಯಮ, ಶೈಕ್ಷಣಿಕ ಹಾಗೂ ಆಡಳಿತ ವಲಯಗಳಲ್ಲಿ ಹುದ್ದೆಗಳು ಹುಟ್ಟಿಕೊಂಡವು. ಇವರದೇ ಗುಂಪಿನವರನ್ನು ಏಕಾಏಕಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಧೀಶರನ್ನಾಗಿ ನೇಮಿಸಲೂ ಇಂದಿರಾ ಹಿಂಜರಿಯಲಿಲ್ಲ. ನಿಧಾನವಾಗಿ ಈ ಮಾಫಿಯಾ ಬೆಳೆಯತೊಡಗಿತು. ಅಧಿಕಾರ ಕೇಂದ್ರಗಳನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿಯಿತು. ಸಮಾಜವಾದದ ಮೂಲ ಸಿದ್ಧಾಂತವನ್ನು ಅನುಷ್ಠಾನಗೊಳಿಸಲಾಗದಿದ್ದರೇನಂತೆ, ಭಾರತೀಯತೆಗೆ ವಿರುದ್ಧವಾದದ್ದೆಲ್ಲವನ್ನೂ ಪೋಷಿಸತೊಡಗಿತು. ನಕ್ಸಲರು, ಇಸ್ಲಾಂ ಮೂಲಭೂತವಾದಿಗಳೆಲ್ಲ ಪ್ರಿಯರಾಗತೊಡಗಿದರು. ಇವರು ಹೇಳುವ ವಿಶ್ವಶಾಂತಿ, ಸೌಹಾರ್ದಗಳಿಗೆಲ್ಲ ರಕ್ತಪಾತವೇ ತಳಹದಿ. ಆದ್ದರಿಂದಲೇ ರಾಷ್ಟ್ರೀಯ ವಿಚಾರಗಳು ಬಂದಾಗಲೆಲ್ಲ ಜೆ‍ಎನ್‍ಯುದ ಆವರಣದಲ್ಲಿ ಕ್ರಾಂತಿಯ ಕಹಳೆ ಮೊಳಗುತ್ತದೆ. ಯಾಕೂಬ್ ಮೆಮನ್ ಸತ್ತರೆ ಇವರ ಆತ್ಮಗಳು ನರಳುತ್ತವೆ. ಭಾರತದ ಸಮಗ್ರತೆಯ ಕಟ್ಟಾ ದ್ವೇಷಿಗಳು ಈ ಮಂದಿ!
ಸಿಟ್ಟು ಬರುವುದು ಇವರ್ಯಾರ ಮೇಲೂ ಅಲ್ಲ. ಈ ಕೊಳಕು ಪೀಳಿಗೆಗೆ ನಾಂದಿ ಹಾಡಿ ಹೋದ ಲಜ್ಜೆಗೇಡಿ ನೆಹರೂ ಮೇಲೆ. ಭರ್ತಿ ಹದಿನೆಂಟು ವರ್ಷ ಈ ದೇಶದ ಪ್ರಧಾನಿಯಾಗಿದ್ದವರು ನೆಹರೂ. ಸ್ಟಾಲಿನ್‍ನ ಕರೆಗೆ ಚಾತಕ ಪಕ್ಷಿಯಂತೆ ಕಾಯುತ್ತಾ, ಎಡ್ವಿನಾ ಮೌಂಟ್‍ಬ್ಯಾಟನ್ ಕರೆದಾಗಲೆಲ್ಲ ಅವಳ ಹಾಸಿಗೆ ಹತ್ತುತ್ತಾ ತಾವೆಂಥ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದರ ಪರಿವೆಯೇ ಇಲ್ಲದವರಂತೆ ವರ್ತಿಸಿದರು! ಭಾರತದಲ್ಲಿ ಕಮ್ಯೂನಿಸ್ಟ್ ಸಿದ್ಧಾಂತವನ್ನು ಹರಡಲು 1926ರಲ್ಲಿ ಬಂದ ಮೊತ್ತಮೊದಲ ವಿದೇಶೀಯ (Comintern) ಫಿಲಿಪ್ ಸ್ಪ್ರಾಟ್ ಕೂಡ ನೆಹರೂರ ಕಮ್ಯೂನಿಸ್ಟ್ ನಿಷ್ಠೆಯನ್ನು ನೋಡಿ ದಂಗಾಗಿದ್ದ! ಸಮಾಜವಾದದ ಗೆದ್ದಲು ಅವರ ಮನಸ್ಸನ್ನು ಯಾವ ಪರಿ ತಿಂದು ಹಾಕಿತ್ತು ಎನ್ನುವುದು ಅರ್ಥವಾಗಲು ಒಂದೇ ಒಂದು ಉದಾಹರಣೆ ಸಾಕು. 1953ರಲ್ಲಿ ಸ್ಟಾಲಿನ್ ಸತ್ತಾಗ, ಹೆತ್ತ ತಂದೆಯನ್ನು ಕಳೆದುಕೊಂಡು ಅನಾಥರಾದ ಹಾಗೆ ಒದ್ದಾಡಿ, ಸಂಸತ್ತಿನಲ್ಲಿ ಅವನನ್ನು 'ಮಾರ್ಶಲ್ ಸ್ಟಾಲಿನ್' ಎಂದು ಸಂಬೋಧಿಸಿದ್ದರು! ಆದರೆ 1948ರಲ್ಲಿ ಗಾಂಧಿ ಸತ್ತಿದ್ದಾಗ ವಿಶ್ವದ ಎಲ್ಲ ನಾಯಕರೂ ಸಂತಾಪ ವ್ಯಕ್ತಪಡಿಸಿದ್ದರೂ ಸ್ಟಾಲಿನ್ ತುಟಿಪಿಟಕ್ಕೆಂದಿರಲಿಲ್ಲ!


ನಮ್ಮ ದೇಶಕ್ಕೆ ಅನ್ವಯವೇ ಆಗದ ಸಮಾಜವಾದ, ಸೆಕ್ಯುಲರ್‍ವಾದಗಳ ಕೆಟ್ಟ ಅಧ್ಯಾಯ ಬರೆದು ಹೋಗಿದ್ದಾರೆ ನೆಹರೂ. ಪರಿಣಾಮವಾಗಿ, ದೇಶದ ಅನ್ನವನ್ನೇ ಉಂಡು ದೇಶದ ವಿರುದ್ಧವೇ ಧಿಕ್ಕಾರ ಕೂಗುತ್ತಿರುವವರ ದಾರ್ಷ್ಟ್ಯ ಮೇರೆ ಮೀರುತ್ತಿದೆ. ಸತ್ಯ ಏನು ಎನ್ನುವುದು ಗೊತ್ತೇ ಇಲ್ಲದಿದ್ದವರಿಗೆ ಹೇಳಿ ಅರ್ಥಮಾಡಿಸಬಹುದು. ಗೊತ್ತಿದ್ದೂ ಎಡಬಿಡಂಗಿಗಳ ಹಾಗೆ ಆಡುವವರಿಗೆ ಮೂಗುದಾರ ಹಾಕುವ ಪರಿ ಹೇಗೆ?