Saturday 29 March 2014

ಕ್ಷಮಿಸಿ, ಈಗ ಯಾವುದೇ 'ಕಣಿ' ಕೇಳುವ ಸ್ಥಿತಿಯಲ್ಲಿ ನಾವಿಲ್ಲ!

"ನಾವು ಮೊದಲು ಭಾರತೀಯರು, ಆಮೇಲೆ ಐ.ಟಿ., ಬಿ.ಟಿ. ಯವರು. ನಾವು ಮೊದಲು ಭಾರತೀಯರು, ಆಮೇಲೆ ಸಾಫ್ಟ್ವೇರ್ ದಿಗ್ಗಜರು." ಇತ್ತೀಚೆಗೆ ನಂದನ್ ನಿಲೇಕಣಿಯವರು ಕೆಲವು ಟಿ.ವಿ ಚಾನೆಲ್‍ಗಳಲ್ಲಿ ಕೊಟ್ಟ ಸಂದರ್ಶನವನ್ನು ನೋಡಿದ ಮೇಲೆ ಈ ಮೇಲಿನ ಮಾತನ್ನು ಶ್ಲೋಕದಂತೆ ದಿನಕ್ಕೆ ಒಂದೆರಡಲ್ಲ, ಸಾವಿರಾರು ಬಾರಿಯಾದರೂ ಪಠಿಸಲೇಬೇಕಾಗಿದೆ.
ಮೊದಲೇ ಇನ್ಫೋಸಿಸ್‍ನಿಂದ ಎಲ್ಲರಿಗೂ ಪರಿಚಿತರಾಗಿದ್ದ ನಿಲೇಕಣಿಯವರು ಭಾರತ ಸರ್ಕಾರಕ್ಕಾಗಿ ಕೈಗೊಂಡ "ಆಧಾರ್" ಎಂಬ, ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿ ತಾಂತ್ರಿಕವಾಗಿ ಯಶಸ್ಸಿನ ಮತ್ತೊಂದು ಮೆಟ್ಟಿಲೇರಿದಾಗ ಐ.ಟಿ ಪ್ರಪಂಚದ ನಮಗೆಲ್ಲರಿಗೂ ವಿಶೇಷ ಅಭಿಮಾನವುಂಟಾಗಿತ್ತು. ಆದರೆ ಈಗ ವರ ಮಾತುಗಳನ್ನು ಕೇಳಿ, ಆ ಯೋಜನೆಯ ಋಣಭಾರದಿಂದ ಅವರು ಷ್ಟು ಕುಗ್ಗಿ ಹೋಗಿದ್ದಾರೆಯೇ ಎಂದು ಆಶ್ಚರ್ಯವಾಗುತ್ತದೆ. ಜೊತೆಜೊತೆಗೇ ಕಳವಳವೂ ಕೂಡ. ತಮ್ಮ ಕಾರ್ಯಕ್ಷಮತೆಗೆ ತಕ್ಕುದಾದ ಅಂಥ ಯೋಜನೆಯನ್ನು ತಮಗೆ ಕೊಡಮಾಡಿದವರಿಗೆ ಧನ್ಯವಾದ ಅರ್ಪಿಸುವುದರಲ್ಲಿ ಅರ್ಥ ಇದೆಯೇ ಹೊರತು, ಎಂದೆಂದಿಗೂ ಆಭಾರಿಯಾಗಿ ಅವರ ಹಿಂಬಾಲಕರಾಗುವಂಥ ಯಾವ ಅಗತ್ಯವಿದೆ ಎಂಬ ಜಿಜ್ಞಾಸೆ ಕಾಡುತ್ತದೆ. ಒಳ್ಳೆಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಒಂದು ಯೋಜನೆಯನ್ನು ನಿಭಾಯಿಸಿದ ಮಾತ್ರಕ್ಕೆ ಆಡಳಿತ ಕ್ಷಮತೆಯೂ ತಾನೇತಾನಾಗಿ ಬಂದುಬಿಡುತ್ತದೆಯೇ? ಹಾಗಿದ್ದ ಪಕ್ಷದಲ್ಲಿ ಆಕ್ಸ್ಫರ್ಡ್ನಿಂದ ಅರ್ಥಶಾಸ್ತ್ರಕ್ಕಾಗಿ ಡಾಕ್ಟರೇಟ್ ಪಡೆದವರ ಕೈಯಲ್ಲೇ ದೇಶದ ಚುಕ್ಕಾಣಿ ಒಂದು ದಶಕಕ್ಕೂ ಮಿಗಿಲಾಗಿ ಇದ್ದಾಗ್ಯೂ ನಮ್ಮ ಜಿ.ಡಿ.ಪಿ. ಶೇಕಡ 5ಕ್ಕಿಂತ ಕಡಿಮೆ ಏಕಾಯಿತು? ಹಣದುಬ್ಬರ ಶೇಕಡ 8ಕ್ಕಿಂತ  ಹೆಚ್ಚೇಕಾಯಿತು? ಅಂಥ ಅರ್ಥಶಾಸ್ತ್ರಜ್ಞರ ಕಣ್ಣು ತಪ್ಪಿಸಿ ಜನಸಾಮಾನ್ಯರ ಕೋಟಿಗಟ್ಟಲೆ ಹಣ ಸೋರಿಹೋಗಿ ಹೇಗೆ ಅವರಿವರ ಜೇಬು ಸೇರಿತು?

ಬಾರಿಬಾರಿಗೂ 'ಆಧಾರ್' ಯೋಜನೆಯನ್ನೇ ಒಂದು ಯಶೋಗಾಥೆಯೆಂಬಂತೆ ಬಿಂಬಿಸುತ್ತಾ ಸಾಗಿರುವ ನಿಲೇಕಣಿಯವರು ಒಂದು ಯೋಜನೆಯ ಅನುಷ್ಠಾನ ಕಾರ್ಯವನ್ನೇ ಅಳತೆಗೋಲಾಗಿ ಪರಿಗಣಿಸುತ್ತಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯೊಡನೆಯೇ ಆಧಾರ್ ಎಂಬ ಅನಾಥ ಶಿಶುವಿನ ಜನನ ಹಾಗೂ ಅದರ ಲಾಲನೆಪಾಲನೆಗಳಾದ ಬಗೆಯತ್ತ ನಾವು ಕೊಂಚ ಗಮನ ಹರಿಸಬೇಕಾಗುತ್ತದೆ.

ಯೋಜನಾ ಆಯೋಗದಡಿ 2009ರ  ಫೆಬ್ರುವರಿಯಲ್ಲಿ ಭಾರತೀಯರಿಗೆಲ್ಲ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಯು.ಐ.ಡಿ.ಎ.ಐ. ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಆಗ ಅದಕ್ಕೆ ಚೇರ್‍ಮೆನ್ ಹುದ್ದೆ ನಿಗದಿ ಮಾಡಿ ಕ್ಯಾಬಿನೆಟ್ ಸಚಿವರ ದರ್ಜೆಯನ್ನೂ ನೀಡಲಾಯಿತು. ಆ ಹುದ್ದೆಗೆ ನಿಯುಕ್ತರಾದವರೇ ನಿಲೇಕಣಿಯವರು. ಅಲ್ಲಿಂದ ಶುರುವಾದ ಆಧಾರ ಯಾತ್ರೆ ಹೊಸದರಲ್ಲಿ ಮಿಂಚು, ಗುಡುಗು, ಸಿಡಿಲಿನಿಂದ ಕೂಡಿ ಆರ್ಭಟಿಸುತ್ತ ಕೊನೆಗೊಮ್ಮೆ ಶಾಂತವಾಗಿ ಸುಮ್ಮನಾಯಿತು. ಕಳೆದ ಸೆಪ್ಟಂಬರ್‍ವರೆಗೂ ಈ ಯೋಜನೆಗೆ ವ್ಯಯವಾಗಿದ್ದು ಸುಮಾರು 3,500 ಕೋಟಿ ರೂ.ಗಳು! ನೋಂದಣಿಯಾದವರು ಸುಮಾರು 50 ಕೋಟಿ ಭಾರತೀಯರು!

ಭರ್ಜರಿಯಾಗಿಯೇ ಪ್ರಾರಂಭವಾದ ಇದರ ಭರಾಟೆಗೆ ಡಿಸೆಂಬರ್ 2011ರಲ್ಲಿ ಮೊದಲ ಪೆಟ್ಟು ಕೊಟ್ಟಿದ್ದು ಸಂಸತ್ತಿನ ಹಣಕಾಸು ಸಮಿತಿ. ಯಾವ ಕಾನೂನಿನ ವ್ಯಾಪ್ತಿ, ಮಿತಿಗೂ ಒಳಪಡದೆ ಅನಾಥವಾಗಿದ್ದ್ದ ಆಧಾರ್ ಕುರಿತ ಬಿಲ್ಅನ್ನು ಅಂಗೀಕರಿಸಲು ನಿರಾಕರಿಸಿ, ಈ ಯೋಜನೆಯಿಂದ ದೇಶದ ಮೇಲಾಗುವ ಒಟ್ಟಾರೆ ಆರ್ಥಿಕ ಪರಿಣಾಮ ಹಾಗೂ ಯೋಜನೆಯ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಯೋಜನಾ ಆಯೋಗಕ್ಕೆ ಸೂಚಿಸಿದಾಗ ಅದ್ಯಾವುದನ್ನೂ ತಾನು ಪರಿಗಣಿಸಿಯೇ ಇಲ್ಲವೆಂದು ಯೋಜನಾ ಆಯೋಗ ಒಪ್ಪಿಕೊಂಡಿತ್ತು! ಅಷ್ಟೇಅಲ್ಲ, ಗಡಿ ದಾಟಿ ಬಂದಿರುವ ಅಕ್ರಮ ವಲಸೆಗಾರರ ಮಾಹಿತಿ ನಿರ್ವಹಣೆ ಬಗ್ಗೆ ಹಾಗೂ ದೇಶದ ಪ್ರಜೆಗಳ ಸಂಪೂರ್ಣ ಮಾಹಿತಿಯನ್ನು ಸರ್ಕಾರೇತರ ಕಂಪೆನಿಗಳ ಕೈಗೊಪ್ಪಿಸಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಬಗ್ಗೆ ತನ್ನ ಕಳವಳವನ್ನು ಹಣಕಾಸು ಸಮಿತಿ ಪ್ರಕಟಿಸಿತ್ತು. ಇದಾದ ವರ್ಷದೊಳಗೇ ಇಂಟಲಿಜೆನ್ಸ್ ಬ್ಯೂರೊ ಹಣ್ಣು, ತರಕಾರಿ, ನಾಯಿ, ಗಿಡಗಳ ಹೆಸರು ಮತ್ತು ಫೋಟೊಗಳಿದ್ದ ಗುರುತಿನ ಚೀಟಿಗಳನ್ನು ಪತ್ತೆ ಮಾಡಿ, ಈ ಯೋಜನೆ ತಾಂತ್ರಿಕವಾಗಿ ದೋಷಮುಕ್ತ ಹಾಗೂ ಪ್ರಶ್ನಾತೀತ ಎಂಬ ನಂಬಿಕೆಯನ್ನು ಬುಡಮೇಲು ಮಾಡಿತು! ಮತ್ತೊಂದು ಹೆಜ್ಜೆ ಮುಂದೆ ಹೋದ ಸರ್ವೋಚ್ಚ ನ್ಯಾಯಾಲಯ, 2013 ಸೆಪ್ಟೆಂಬರ್‍ನಲ್ಲಿ ಇದನ್ನು ಕಡ್ಡಾಯವಲ್ಲವೆಂದು ಸಾರಿ, ಈ ಗುರುತಿನ ಚೀಟಿ ಇರದ ಮಾತ್ರಕ್ಕೆ ಎಲ್.ಪಿ.ಜಿ. ಮುಂತಾದ ಸೇವೆಗಳನ್ನು ನಿರ್ಬಂಧಿಸಕೂಡದು ಎಂದು ಮಧ್ಯಂತರ ತೀರ್ಪಿತ್ತಿತು! ಜೊತೆಗೆ ಇದನ್ನು 'ಅಡ್ರೆಸ್ ಪ್ರೂಫ್' ಎಂದು ಪರಿಗಣಿಸಲು ಸಾಧ್ಯವಿಲ್ಲವೆಂಬ ಅಂಶವನ್ನೂ ಹೊರ ಹಾಕಿತು.
ಪ್ರತಿಬಾರಿ ನಮ್ಮ ಘನಸರ್ಕಾರದ ಗರ್ಭದಿಂದ ಇಂಥ ಯೋಜನೆಗಳು ಹೊರಬಂದಾಗಲೂ ಏಕೆ? ಏನು? ಎಂದು ಪ್ರಶ್ನಿಸದೆ ಬರಿದೇ ಪಾಲಿಸುವ ನಮ್ಮಂಥ 'ಶ್ರೀಸಾಮಾನ್ಯರು' ಈ ಬಾರಿಯೂ ಪ್ರತಿಕ್ರಿಯಿಸಿದ್ದು ಹೀಗೆಯೇ. ಹೇಳಿದ ದಿನದಂದು ಪುಟಗಟ್ಟಲೆ 'ಪ್ರೂಫ್' ಗಳನ್ನು ಹಿಡಿದು ದೊಡ್ಡ ಕ್ಯೂ ಗಳಲ್ಲಿ
ತಾಸುಗಟ್ಟಲೆನಿಂತು, ಬರದಿದ್ದ ನಗುವನ್ನು ಕೆಮರಾ ಮುಂದೆ ಬರಿಸಿಕೊಂಡು, ಪದೇಪದೇ ಬೆರಳೊತ್ತಿದರೂ ದಾಖಲಾಗದ ಬಯೊಮೆಟ್ರಿಕ್ ಅನ್ನು ಶಪಿಸಿ, ಕೊನೆಗೆ ಆಪರೇಟರ್‍ಗಳು ಮುಖ, ವಿಳಾಸಗಳನ್ನು ಕಂಪ್ಯೂಟರ್‍ನಲ್ಲಿ ತೋರಿಸಿದಾಗ ದೊಡ್ಡ ನಿಟ್ಟುಸಿರು, ನೆಮ್ಮದಿಯೊಂದಿಗೆ ಹೊರಬಂದೆವು. ಎಲ್ಲ ಮುಗಿಯಿತೆಂದು ನಾವು ಬಂದೆವು. ಆದರೆ ಅಷ್ಟು ಸಲೀಸಾಗಿ ನಮ್ಮ ಗುರುತಿನ ಸಂಖ್ಯೆಗಳು ಬರಲಿಲ್ಲ!

ತಾತ್ಪರ್ಯವಿಷ್ಟೇ - ಒಂದು ಯೋಜನೆಯ ಫಲಾಫಲಗಳನ್ನು ವಿಶ್ಲೇಷಿಸದೆ ಜನಸಾಮಾನ್ಯರ ಮೇಲೆ ಹೇರುವ ನಮ್ಮ ಘನ ಸರ್ಕಾರದ ಮನಸ್ಥಿತಿಯ ಬಗ್ಗೆ ಹೆಮ್ಮೆ ಪಡುವಂಥದ್ದೇನಿದೆ? ಯಶಸ್ಸಿನ ಮಾತಿರಲಿ, ದೇಶಾದ್ಯಂತ ಪೂರ್ಣವಾಗಿ ಅನುಷ್ಠಾನವೇ ಆಗದಿರುವ ಈ ಯೋಜನೆಯ ಭಾಗವಾದ ಮಾತ್ರಕ್ಕ್ಕೆ ಇದೊಂದು ಸಾಧನೆ ಎಂದು ಸಂಭ್ರಮಿಸುವ ಅಗತ್ಯವೇನಿದೆ? ಬಹಳಷ್ಟು ಜನರ ಬಳಿ ಈಗಾಗಲೇ ಪ್ಯಾನ್‍ಕಾರ್ಡ್, ಪಾಸ್‍ಪೋರ್ಟ್‍ಗಳಿರುವಾಗ ಅದನ್ನೇ ಪರಿಷ್ಕರಿಸಿ ಬಳಸಿಕೊಳ್ಳುವ ಬುದ್ಧಿವಂತಿಕೆ ಮೆರೆಯುವ ಬದಲು ಜನಸಾಮಾನ್ಯರ ತೆರಿಗೆಯ ದುಡ್ಡಿನಲ್ಲಿ ಈ ಹೊಸ ಸಮಾರಾಧನೆ ಬೇಕಿರಲಿಲ್ಲ ಅಲ್ಲವೆ?  ಇಲ್ಲಿಗೆ ಮೀಸಲಿಟ್ಟ ಜನ, ಹಣ, ಹಾಗೂ ಸಮಯದಲ್ಲಿನ ಸ್ವಲ್ಪ ಭಾಗವನ್ನಾದರೂ ಮೀಸಲಿಟ್ಟಿದ್ದರೆ ನಮ್ಮ ಸೈನಿಕರಿಗೆ ಮತದಾನ ಮಾಡುವ ಅವಕಾಶವನ್ನು ಧಾರಾಳಾವಾಗಿ ಕಲ್ಪಿಸಬಹುದಾಗಿತ್ತು! ಯಾರ ಆಜ್ಞೆ ಪಾಲಿಸುತ್ತಿದ್ದೇನೆ ಎಂಬ ಅರಿವೇ ಇಲ್ಲದೆ ಪ್ರಾಣ ಬಿಡುವ ನಮ್ಮ ಯೋಧರೇಕೆ ಈ ಮೂಲಭೂತ ಹಕ್ಕಿನಿಂದ ವಂಚಿತರಾಗಬೇಕು?


ದಿಗಿಲುಗೊಳಿಸುವ ಮತ್ತೊಂದು ಅಂಶವೆಂದರೆ, ಇದೇ ಮಾದರಿಯ ಎನ್.ಐ.ಡಿ. ಜಾರಿಗೊಳಿಸ ಹೊರಟ ಬ್ರಿಟನ್ ಸರ್ಕಾರ ಸುಮಾರು 8 ವರ್ಷಗಳ ಕಾಲ 250 ಮಿಲಿಯನ್ ಪೌಂಡ್‍ಗಳಷ್ಟು ದುಡ್ಡು ವೆಚ್ಚ ಮಾಡಿದ ಮೇಲೆ ಇಡೀ ಯೋಜನೆಯನ್ನೇ ರದ್ದುಗೊಳಿಸಿತು! ಹೆಚ್ಚುತ್ತಲೇ ಹೋದ ಅನುಷ್ಠಾನ ವೆಚ್ಚವನ್ನು ಸರಿತೂಗಿಸಲಾಗದೆ ಅದು ಈ ನಿರ್ಧಾರಕ್ಕೆ ಬರಬೇಕಾಯಿತು. 

ಅಲ್ಲಿಯ ಕಥೆಯೇ ಹಾಗಾದರೆ ನಮ್ಮಲ್ಲಿ ಇನ್ನೆಷ್ಟು ಅಧ್ವಾನವಾಗಬಹುದು ಊಹಿಸಿ. ಈಗ ನಿಲೇಕಣಿಯವರ ಸ್ಥಾನಕ್ಕೆ ಬರುವ ಮತ್ತೊಬ್ಬರು ಇದನ್ನು ಪರಿಷ್ಕರಿಸಹೊರಟರೆ ಅಥವಾ ನಿರ್ವಹಣಾ ವೆಚ್ಚ ಅತಿಯಾಯಿತೆಂದು ಸರ್ಕಾರ ಇದನ್ನು ಇಷ್ಟಕ್ಕೇ ಕೈಬಿಟ್ಟರೆ ಏನು ಸಾಧಿಸಿದ ಹಾಗಾಗುತ್ತದೆ? ಇದುವರೆಗೂ ವ್ಯಯಿಸಿರುವ ಹಣಕ್ಕೆ ಯಾರು ಹೊಣೆ? ಮತ್ತೂ ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ಘನ ಸರ್ಕಾರ ಶುರು ಮಾಡುವ ಬಹು ಕೋಟಿ ಯೋಜನೆಗಳೆಲ್ಲಾ ಕೊನೆಗೆ ಹಗರಣಗಳಾಗೇ ಮುಗಿಯುತ್ತಿವೆ. ಹೀಗಿರುವಾಗ 'ಆಧಾರ್ ಹಗರಣ' ಎಂಬುದೂ ಒಂದಿಲ್ಲೊಂದು ದಿನ ನಮ್ಮೆದುರು ಧುತ್ತೆಂದು ಪ್ರತ್ಯಕ್ಷವಾಗುವುದಿಲ್ಲ ಎಂಬುದಕ್ಕೆ ‘ಆಧಾರ’ವೇನು?

ಎಲ್ಲವನ್ನೂ ಸಮೀಕರಿಸಿ ನೋಡಿದಾಗ ಇವರು ಪದೇಪದೇ ಉದಾಹರಿಸುವ 'ಆಧಾರ್' ಯೋಜನೆ ಓರ್ವ ವ್ಯಕ್ತಿಯನ್ನು ಆಡಳಿತಾತ್ಮಕವಾಗಿ ಅಳೆಯಲು ಸೂಕ್ತ ಮಾಪಕವಲ್ಲ ಎಂಬುದು ವೇದ್ಯವಾಗುವುದಿಲ್ಲವೇ?

ಹಾಗೇ ಮಾತನಾಡುತ್ತಾ ನಿಲೇಕಣಿಯವರು ಈಗಿರುವ ಸಮಸ್ಯೆಗಳಿಗೆಲ್ಲ ಪರ್ಯಾಯವಾಗಿ 'ಸಿಸ್ಟಂ'ಗಳನ್ನು ನಿರ್ಮಾಣ ಮಾಡುತ್ತೇನೆ ಎನ್ನುತ್ತಾರೆ. ಇವರು ಸಿಸ್ಟಂ ನಿರ್ಮಾಣದಲ್ಲಿ ಸಿದ್ಧಹಸ್ತರು ಎಂಬುದು ನಮಗೆಲ್ಲ ಗೊತ್ತಿರುವ ವಿಚಾರವೇ. ಇವರಷ್ಟೇ ಏಕೆ, ಸಿಸ್ಟಂಗಳನ್ನು ನಿರ್ಮಿಸಬಲ್ಲ ಭಾರತದ ಚತುರರ ಒಂದು ಹಿಂಡೇ ಜಗತ್ತಿನಾದ್ಯಂತ ಇದೆ. ಆದರೆ ನಮಗೆ ಈಗ ತುರ್ತಾಗಿ ಬೇಕಾಗಿರುವುದು ತಂತ್ರಜ್ಞಾನ ಆಧಾರಿತ, ವಿದ್ಯುತ್‍ಚಾಲಿತ ಎಲೆಕ್ಟ್ರಾನಿಕ್ ಸಿಸ್ಟಂಗಳಲ್ಲ. ಮಲಗಿರುವ ನಮ್ಮ ಸ್ವಾಭಿಮಾನವನ್ನು ಬಡಿದೆಬ್ಬಿಸಬಲ್ಲ, ದೇಶಭಕ್ತಿಯನ್ನು ಪ್ರೇರೇಪಿಸಬಲ್ಲ, ಒಗ್ಗಟ್ಟು ಮೂಡಿಸಿ ಹೃದಯಗಳನ್ನು ಬೆಸೆಯಬಲ್ಲ ಸಧೃಢ ಮಾನವ ಸಿಸ್ಟಂಗಳು. ಒಂದು ದೇಶದ್ರೋಹಿ ಮನಸಿನ ಪಾಶವೀತನಕ್ಕೆ ಕ್ಷಣಮಾತ್ರದಲ್ಲಿ ಸುಟ್ಟು ಕರಕಾಗಬಲ್ಲ ಕಂಪ್ಯೂಟರ್ ಸಿಸ್ಟಂಗಳು ನಮ್ಮ ಬಳಿ ಬೇಕಾದಷ್ಟಿವೆ. ಆದರೆ ಹಬ್ಬ ಹರಿದಿನಗಳಲ್ಲಿ ಜನನಿಬಿಡ ಜಾಗಗಳಿಗೆ ಹೋದರೂ ಕೈ, ಕಾಲು, ಜೀವಗಳೊಂದಿಗೆ ಕ್ಷೇಮವಾಗಿ ಹಿಂತಿರುಗುತ್ತೇವೆಂಬ ಭರವಸೆ ನೀಡುವ ಜೀವರಕ್ಷಕ  ಮಾನವ ಸಿಸ್ಟಂಗಳು ನಮ್ಮ ಬಳಿಯಿಲ್ಲ. ಇಂಥ ಸಿಸ್ಟಂಗಳನ್ನು ತಯಾರಿಸಬೇಕಾಗಿದೆ ನಿಲೇಕಣಿಯವರೆ. ಇವುಗಳನ್ನು 'ಟೆಕ್ ಪಾರ್ಕ್'ಗಳ ಎ.ಸಿ.ರೂಮಿನಲ್ಲಿ ತಯಾರು ಮಾಡಲಾಗುವುದಿಲ್ಲ. ಪ್ರತಿ ಮನೆಯೂ ಇದನ್ನು ತಯಾರಿಸುವ ಕಾರ್ಖಾನೆಯಾಗಬೇಕು. ಪ್ರತಿ ಹೃದಯದಲ್ಲೂ ಇದಕ್ಕೆ ಬೇಕಾದ ಸಾಫ್ಟ್ ವೇರ್ ಇನ್ಸ್ಟಾಲ್ ಆಗಬೇಕು. ಇಂದು ವಿಶ್ವ ದರ್ಜೆಯ ಕಂಪ್ಯೂಟರ್ ಸಿಸ್ಟಂಗಳನ್ನು ನಿರ್ಮಿಸಬಲ್ಲ, ಅನಾಯಾಸವಾಗಿ ಅದನ್ನು ನಿಯಂತ್ರಿಸಬಲ್ಲ  ಚತುರರು ನೀವಿರಬಹುದು. ಆದರೆ ವಿಶ್ವದ ಮುಂದೆ ಭಾರತೀಯರ ದರ್ಜೆಯನ್ನು ಏರಿಸಬಲ್ಲ, ಮಾನವ ಸಿಸ್ಟಂಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಲ್ಲ ಅನುಭವ, ಜಾಣ್ಮೆ, ಚಾತುರ್ಯ ನಿಮಗಿದೆಯೇ ಹೇಳಿ?

ಅಧಿಕಾರಾವಧಿ ಮುಗಿಯುತ್ತಿದ್ದಂತೆ ಬದಲಾವಣೆ ತರುತ್ತೇವೆ ಎಂದು ಬೊಬ್ಬಿಡುತ್ತಿರುವ ನಮ್ಮ ಘನ ಸರ್ಕಾರ ಅರ್ಥಮಾಡಿಕೊಳ್ಳಬೇಕಾದ ಒಂದು ಮುಖ್ಯ ಅಂಶವಿದೆ. ಬದಲಾವಣೆಯೆಂಬುದು ಒಂದು ಟಿ.ವಿ.ಚಾನೆಲ್ನ ಸಂದರ್ಶನದಲ್ಲಿ ಹೇಳಿದರೆ ಬರುವುದಿಲ್ಲ. ಆಕ್ಸ್ಫರ್ಡ್ ವಿವಿಯಲ್ಲಿ ಓದಿ ಬಂದು ಎಲ್ಲಕ್ಕೂ ಮೌನಕ್ಕೆ ಶರಣಾದರೂ ಬರುವುದಿಲ್ಲ. ಶುಗರ್, ಬಿ.ಪಿ.ಯಂತೆ ವಂಶಪಾರಂಪರ್ಯವಾಗಿಯಂತೂ  ಬರುವುದೇ ಇಲ್ಲ! ಅದೊಂದು ಸಣ್ಣ ಅಲೆಯಾಗಿ ಹುಟ್ಟಿ, ತನ್ನಿರವನ್ನೂ ಸೂಚಿಸದೆ, ಕಾಲಕ್ರಮೇಣ ಎಲ್ಲವನ್ನೂ, ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ನಂಬಿಕೆ, ವಿಶ್ವಾಸ, ಯಶಸ್ಸನ್ನುಗಳಿಸಿಕೊಳ್ಳುವ ದೊಡ್ಡ ಅಲೆಯಾಗಿ ಭೋರ್ಗರೆಯುತ್ತಾ ಬರುತ್ತದೆ.

ಆ ಬದಲಾವಣೆಯ ಅಲೆಯ ನಿರೀಕ್ಷೆಯಲ್ಲಿರುವ ನಮಗೀಗ 'ದೂರದೃಷ್ಟಿ'ಯ ರೋಗ ಬಡಿದಿದೆ ನಿಲೇಕಣಿಯವರೆ. ಹತ್ತಿರದ್ದು ಯಾವುದೂ ಕಾಣುತ್ತಿಲ್ಲ. ನಮ್ಮ ಊರು, ಕೇರಿಗಳಲ್ಲಿ ಯಾರು ಯಾವ ಸಿಸ್ಟಂ ನಿರ್ಮಿಸುವ ಭರವಸೆ ಕೊಡುತ್ತಿದ್ದಾರೆ, ಯಾವ 'ಆಧಾರ'ದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದಾರೆ ಎಂದು ನಾವು ನೋಡುತ್ತಿಲ್ಲ. ಏಕೆಂದರೆ, ‘ಸಾಫ್ಟ್ವೇರ್’ ನವರೇ ಆದ ನಾವು ಅರಿಯಲೇಬೇಕಾದ ಸತ್ಯವೊಂದಿದೆ.  ಮೊದಲು ದೇಶ, ನಂತರ ಬೆಂಗಳೂರು, ಆಮೇಲಷ್ಟೇ ನಮ್ಮ ಎ.ಸಿ. ರೂಮಿ ಸಾಫ್ಟ್ವೇರ್ ಸಿಸ್ಟಂಗಳು. ನಾಳೆ ದೇಶಕ್ಕೇ ಕುತ್ತು ಬಂದರೆ ಬೆಂಗಳೂರು ಹೊರತಾಗುವುದಿಲ್ಲ. ಬೆಂಗಳೂರು ನಲುಗಿದರೆ  ಸಿಸ್ಟಂಗಳು ನಮ್ಮನ್ನುಳಿಸುವುದಿಲ್ಲ! ಆದ್ದರಿಂದ “ನಾವು ಮೊದಲು ಭಾರತೀಯರು, ಆಮೇಲೆ ಐಟಿ, ಬಿಟಿ ಯವರು”. ಸಧೃಢ ದೇಶ, ಸಮರ್ಥ ನಾಯಕತ್ವ ನಮ್ಮ ಮೊದಲ ಆದ್ಯತೆ. ಇಲ್ಲಿ ನೀವು ಯಾರು ಬೇಕಾದರೂ ನಿಲ್ಲಿ, ನಮಗೆ ಬೇಕಾಗಿರುವುದು ದಿಲ್ಲಿ, ದಿಲ್ಲಿ, ದಿಲ್ಲಿ! ನಮ್ಮ ಸದಾಶಯ, ಹಾರೈಕೆಗಳೆಲ್ಲಾ ದಿಲ್ಲಿಯ ಗದ್ದುಗೆ ಹಿಡಿಯುವ ಕ್ಷಮತೆ ಇರುವವರ ಮನೋಬಲ, ಶಕ್ತಿಯನ್ನು ಹೆಚ್ಚಿಸುವುದಕ್ಕೆ ಮಾತ್ರ ಮೀಸಲು!

ಕಂಪ್ಯೂಟರ್ ಸಿಸ್ಟಂಗಳನ್ನು ನಿರ್ಮಿಸಲು ಬರದಿದ್ದರೂ ಸರಿಯೆ, ಗದ್ದುಗೆಯನ್ನೇರಿ, ಈ ದೇಶದ ಹಿತವನ್ನು ಕಾಯ್ದು, ಯಶಸ್ಸಿನ ರೂವಾರಿಯಾಗಿ, ನಿಜವಾದ ಬದಲಾವಣೆಯ ಹರಿಕಾರರಾಗುವವರು ಬೇಕು. ಸಂದರ್ಭಕ್ಕೆ ತಕ್ಕಂತೆ ಅಪ್‍ಡೇಟ್ ಆಗುತ್ತಾ ದೇಶದ ಒಳಹೊಕ್ಕಿರುವ ವೈರಸ್‍ಗಳನ್ನು ನಿವಾರಿಸಬಲ್ಲ ಎದೆಗಾರಿಕೆ ಎಂಬ 'ಆಂಟಿವೈರಸ್' ಇರುವ ಅಪ್ಪಟ ಭಾರತೀಯ ಬೇಕು. ಒಟ್ಟಿನಲ್ಲಿ ಹೇಳುವುದಾದರೆ ಭಾರತಮಾತೆಗೆ 'ನಮೋ' ಎನ್ನುವವರಿಗೇ ನಾವೂ 'ನಮೋ' ಎನ್ನುವುದು. ನಾವು ಬೇರೆಯದೇ ಅಲೆಯಲ್ಲಿ ತೇಲಿಹೋಗುತ್ತಿದ್ದೇವೆ. ಕ್ಷಮಿಸಿ, ಈಗ ಯಾವುದೇ 'ಕಣಿ' ಕೇಳುವ ಸ್ಥಿತಿಯಲ್ಲಿ ನಾವಿಲ್ಲ!
*  *  *