Sunday, 30 November 2014

ಜರ್ಮನ್ ಬೇಡವೆಂದು ಸ್ಮೃತಿ ಇರಾನಿ ಹೇಳಿದ್ದೇಕೆ?

ಮಾನವಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಕೆಲ ದಿನಗಳ ಹಿಂದೆ ಒಂದು ಫರ್ಮಾನು ಹೊರಡಿಸಿದರು. ಅದರ ಒಕ್ಕಣೆ ಇಷ್ಟೇ. 'ಈಗ ಕೇಂದ್ರೀಯ ವಿದ್ಯಾಲಯಗಳು ತ್ರಿಭಾಷಾ ಸೂತ್ರದಡಿಯಲ್ಲಿ ಸೇರಿಸಿಕೊಂಡಿರುವ ಜರ್ಮನ್ ಭಾಷೆಯನ್ನು ತಕ್ಷಣವೇ ಕೈಬಿಡಬೇಕು. ಬದಲಿಗೆ ಸಂಸ್ಕೃತವನ್ನು ಸೇರಿಸಿಕೊಳ್ಳಬಹುದು. ಈ ನಿಯಮ ಅನ್ವಯವಾಗುವುದು ಆರರಿಂದ ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ'. ಅವರು ಇಷ್ಟು ಹೇಳಿದ್ದೇ ತಡ ಎಲ್ಲೆಡೆಯಿಂದ ಆಪಾದನೆಗಳ ಸುರಿಮಳೆ ಶುರು! ಇದು ಕೇಸರೀಕರಣ, ಹಿಂದುತ್ವ, ಆರ್‍ಎಸ್‍ಎಸ್ನ ಕೈವಾಡ ಎಂದು ಹೂಂಕರಿಸಿದವರೇ ಎಲ್ಲರೂ. ಮೊದಲೇ ಸ್ಮೃತಿ ಈ ಜಾಗದಲ್ಲಿ ಕುಳಿತಿರುವುದು ಬಹಳ ಮಂದಿಗೆ ಸಹ್ಯವಾಗುತ್ತಿಲ್ಲ. ಮಾಡೆಲ್ ಆಗಿ, ನಟಿಯಾಗಿ, ಕಡೇಪಕ್ಷ ಹೇಳಿಕೊಳ್ಳಬಹುದಾದಂಥ ವಿದ್ಯಾರ್ಹತೆಯೂ ಇಲ್ಲದ ಅವರು ಈ ಹುದ್ದೆಗೆ ಹೇಗೆ ಶೋಭೆ ತಂದಾರು ಎಂಬುದೇ ಬಹುತೇಕರ ಪ್ರಶ್ನೆ. ಅದು ಸಮಂಜಸವೂ ಹೌದು. ಆದರೆ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪಡೆದು ಬಂದು ಆಯಕಟ್ಟಿನ ಜಾಗಗಳಲ್ಲಿ ಕುಳಿತವರ ಉದಾಹರಣೆಗಳನ್ನು ನಾವು ನೋಡಿಲ್ಲವೇ? ಅವರೇನು ಕಡಿದು ಕಟ್ಟೆ ಹಾಕಿರುವುದು? ಮೇಲಾಗಿ, ಹುದ್ದೆಗೆ ಬೇಕಾದ ಕಾರ್ಯಕ್ಷಮತೆ ಇಲ್ಲವೆಂಬುದು ಸಾಬೀತಾದ ಮೇಲೂ ಅಂಥವರಿಗೆ ಸಲಾಮು ಹೊಡೆಯಲು ಇದು ದಾಕ್ಷಿಣ್ಯಕ್ಕೆ ಬಿದ್ದು ನಡೆಸುತ್ತಿರುವವರ ಸರ್ಕಾರವಲ್ಲ. ಇರಲಿ, ಈಗ ವಿಷಯಾಂತರವಾಗುವುದು ಬೇಡ. ಸ್ಮೃತಿ ಹಾಗೆ ಹೇಳಿದ್ದರ ಹಿಂದಿರುವ ವಾಸ್ತವವನ್ನು ನೋಡೋಣ.





ಕಳೆದ ಅಕ್ಟೋಬರ್‍ 27ರಂದು ಕೇಂದ್ರೀಯ ವಿದ್ಯಾಲಯ ಸಂಘಟನೆಯ ನಿರ್ದೇಶಕರುಗಳು ಹಾಗೂ ಸ್ಮೃತಿಯವರ ನಡುವೆ ಸಭೆಯೊಂದು ನಡೆದಿತ್ತು. ಅದರಲ್ಲಿ ಬೆಳಕಿಗೆ ಬಂತು ನೋಡಿ ಶಿಕ್ಷಣ ನೀತಿಯನ್ನು ಉಲ್ಲಂಘಿಸಿ, 2011ರಲ್ಲೇ ನಡೆದಿದ್ದ ಒಂದು ಒಪ್ಪಂದ! ಆ ಒಪ್ಪಂದದ ಬಗ್ಗೆ ಹೇಳುವ ಮೊದಲು ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಹೇಳಲೇಬೇಕು.




1968ರಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿದೆ ನೀತಿ ಇದು. ಇದರ ಪ್ರಕಾರ, ಎಲ್ಲ ಶಾಲೆಗಳಲ್ಲೂ ತ್ರಿಭಾಷಾ ಸೂತ್ರ ಅನ್ವಯವಾಗಬೇಕು. ಒಂದು ಭಾಷೆ ಇಂಗ್ಲೀಷ್ ಆಗಿದ್ದು, ಮತ್ತೆರಡು ಕಡ್ದಾಯವಾಗಿ ಭಾರತೀಯ ಭಾಷೆಗಳೇ ಆಗಿರಬೇಕು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೊದಲ ಭಾಷೆ ಇಂಗ್ಲೀಷ್, ಎರಡನೆಯದು ಹಿಂದಿ ಹಾಗೂ ಮೂರನೆಯದು ಸಂಸ್ಕೃತ ಅಥವಾ ಆಯಾ ರಾಜ್ಯಕ್ಕೆ ಸೇರಿದ ಭಾಷೆ.

ವಿಷಯ ಸರಳವಾಗಿಯೇ ಇದೆಯಲ್ಲವೇ? ಇನ್ನು ಆ ಒಪ್ಪಂದಕ್ಕೆ ಬರೋಣ. ಅದು ನಡೆದದ್ದು ಕೇಂದ್ರೀಯ ವಿದ್ಯಾಲಯ ಸಂಘಟನೆ ಹಾಗೂ ಜರ್ಮನ್ ಭಾಷೆಯನ್ನು ಕಲಿಸುವ ಸಂಸ್ಥೆಯೊಂದರ ನಡುವೆ. ಅದರಲ್ಲಿ, ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೂರನೆಯ ಭಾಷೆಯಾಗಿ ಜರ್ಮನ್‍ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯನೀಡಲಾಗಿತ್ತು! ಜರ್ಮನ್ ಭಾಷೆಯನ್ನು ಕಲಿಸುವ ಹೊಣೆಯನ್ನು ಆ ಸಂಸ್ಥೆಯೇ ಹೊತ್ತು, ಅದಕ್ಕೆಂದೇ 700 ಶಿಕ್ಷಕರನ್ನೂ ಒದಗಿಸಿತ್ತು! ಕೇಂದ್ರೀಯ ವಿದ್ಯಾಲಯ ಸಂಘಟನೆಯ ಪರವಾಗಿ, ಮಾನವಸಂಪನ್ಮೂಲ ಖಾತೆಯ ಅಂದಿನ ರಾಜ್ಯ ಸಚಿವರಾಗಿದ್ದ ಇ.ಅಹಮದ್ ಸಹಿ ಮಾಡಿದ್ದರೆ, ಜರ್ಮನಿಯ ತರಬೇತಿ ಸಂಸ್ಥೆಯ ಪರವಾಗಿ ಅಲ್ಲಿನ ಸಚಿವರೊಬ್ಬರ ಸಹಿಯಿತ್ತು! ಈ ವಿಷಯ ಸ್ಮೃತಿಯವರ ಗಮನಕ್ಕೆ ಬಂದುದಾದರೂ ಏಕೆ? ಒಪ್ಪಂದದ ನವೀಕರಣವಾಗಬೇಕಿದ್ದರಿಂದ! ತಕ್ಷಣ ಇದನ್ನು ರದ್ದು ಗೊಳಿಸಿದ ಅವರು ತಕ್ಕ ಸ್ಪಷ್ಟೀಕರಣವನ್ನೂ ನೀಡಿದರು. ಅಷ್ಟೇ ಅಲ್ಲ, ನಮ್ಮ ಶಿಕ್ಷಣ ನೀತಿಯನ್ನು ಉಲ್ಲಂಘಿಸಿದ್ದೇಕೆ ಎಂಬುದರ ತನಿಖೆಯನ್ನೂ ಶುರು ಮಾಡಿಸಿದರು.

ಇದು ನಿಜವಾಗಿಯೂ ಗಂಭೀರವಾದ ವಿಷಯವಲ್ಲವೇ? ತ್ರಿಭಾಷಾ ಸೂತ್ರ ಕೇಂದ್ರೀಯ ವಿದ್ಯಾಲಯಗಳಿಗೂ ಅನ್ವಯವಾಗಲೇಬೇಕು. ಅಂದ ಮೇಲೆ ಅದನ್ನು ಮೀರುವ ಅನುಮತಿ ದೊರಕಿದ್ದು ಹೇಗೆ? ಯಾರಿಂದ? ಈ ವಿಷಯ ಅಂದಿನ ಪ್ರಧಾನಿ ಮನಮೋಹನ್‍ ಸಿಂಗ್‍ರಿಗೆ ಗೊತ್ತಿರಲಿಲ್ಲವೇ? ಖಂಡಿತ ಗೊತ್ತಿತ್ತು. ಏಕೆಂದರೆ ಕಳೆದ ವರ್ಷ ಏಪ್ರಿಲ್‍ನಲ್ಲಿ ಅವರು ಜರ್ಮನಿಯ ಪ್ರವಾಸ ಕೈಗೊಂಡಾಗ ಇದೇ ಕೇಂದ್ರೀಯ ವಿದ್ಯಾಲಯದ ಕೆಲ ಪ್ರತಿಭಾವಂತ ಮಕ್ಕಳನ್ನು (ಜರ್ಮನ್ ಕಲಿಯುತ್ತಿದ್ದ) ತಮ್ಮೊಡನೆ ಕರೆದೊಯ್ದಿದ್ದರು!

ಇಷ್ಟೆಲ್ಲಾ ನಡೆದಿರುವುದು ಯಾರ ಗಮನಕ್ಕೂ ಬರಲೇ ಇಲ್ಲ. ಸ್ಮೃತಿಯ ಮಾತುಗಳನ್ನು ಕೇಳುವ ವ್ಯವಧಾನವೂ ಯಾರಿಗೂ ಇರಲಿಲ್ಲ. 'ಎತ್ತು ಈಯಿತು' ಎಂದರೆ 'ಕೊಟ್ಟಿಗೆ ಕಟ್ಟು' ಎಂಬಂಥ ಮನಸ್ಥಿತಿಯ ಟಿವಿ ಮಾಧ್ಯಮದವರ ದಯೆಯಿಂದ ಸುದ್ದಿಗೆ ರೆಕ್ಕೆ ಪುಕ್ಕಗಳು ಬಂದಾಗಿತ್ತು! ಈಗ ಹೇಳಿ, ಸ್ಮೃತಿ ಮಾಡಿದ್ದರಲ್ಲಿ ತಪ್ಪೇನಿದೆ? ಸಾಂವಿಧಾನಿಕವಾಗಿ ಅಂಗೀಕರಿಸಲ್ಪಟ್ಟ 125 ಭಾಷೆಗಳು ಹಾಗೂ 1600 ಆಡುಭಾಷೆಗಳಿರುವ ನಮಗೆ ಭಾಷೆಯ ಅರೆಯೇ? ಹಾಗೆಂದು ಜರ್ಮನ್ ಭಾಷೆಯ ಮೇಲೆ ನಿಷೇಧವನ್ನೇನೂ ಹೇರಿಲ್ಲ. ಹವ್ಯಾಸಿ ಅಥವಾ ಹೆಚ್ಚುವರಿ ಭಾಷೆಯಾಗಿ ಅದರ ಕಲಿಕೆಯನ್ನೂ ಮುಂದುವರೆಸಬಹುದಾಗಿದೆ. ಆದರೂ ಜರ್ಮನ್ ಸರ್ಕಾರ ಎಷ್ಟು ತಲೆ ಕೆಡಿಸಿಕೊಂಡಿದೆಯೆಂದರೆ, ವಿಷಯ ತಿಳಿಯುತ್ತಿದ್ದಂತೆಯೇ, ಜರ್ಮನಿಯ ರಾಯಭಾರಿ ಮೈಕಲ್ ಸ್ಟೀನರ್ ಸಂಸ್ಕೃತ ಶಿಕ್ಷಕ ಸಂಘಕ್ಕೆ ಓಡಿ ಹೋದರು. ಈ ನಿರ್ಣಯವನ್ನು ಬದಲಾಯಿಸುವಂತೆ ಕೋರಿದರು. ಅಷ್ಟೇ ಅಲ್ಲ, ಜಿ20 ಶೃಂಗ ಸಭೆಯಲ್ಲೂ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮೋದಿಯವರನ್ನು ಈ ವಿಷಯ ಕುರಿತು ಪರಿಶೀಲಿಸುವಂತೆ ಮನವಿ ಮಾಡಿಕೊಂಡರು! ಎಷ್ಟು ಅಭಿಮಾನ ನೋಡಿ ತಮ್ಮ ಭಾಷೆಯ ಮೇಲೆ ಅವರಿಗೆ.

ನಿಮಗೆ ಗೊತ್ತಿರಲಿ, ಇಂದು ಭಾರತದಲ್ಲಿ ಜರ್ಮನ್ ಮಾತ್ರವಲ್ಲ, ಫ್ರೆಂಚ್ ಹಾಗೂ ಸ್ಪೇನ್ ದೇಶಗಳ ಭಾಷೆಗಳನ್ನೂ ಕಲಿಸಲಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಚೀನಾದ ಅಧ್ಯಕ್ಷ ಜಿನ್‍ಪಿಂಗ್ ಪತ್ನೀ ಸಮೇತರಾಗಿ ಬಂದಿದ್ದು ನಿಮಗೆ ನೆನಪಿರಬಹುದು. ಆಗ ಅವರ ಪತ್ನಿ ಭೇಟಿಕೊಟ್ಟಿದ್ದು ದೆಹಲಿಯ ಟಾಗೋರ್ ಅಂತಾರಾಷ್ಟ್ರೀಯ ಶಾಲೆಗೆ! ಅಲ್ಲಿ ಅವರನ್ನು ರಂಜಿಸಿದ್ದು ಮ್ಯಾಂಡರಿನ್ (ಚೈನೀ ಭಾಷೆ) ಕಲಿಯುತ್ತಿದ್ದ ಮಕ್ಕಳು! ಇದು ಒಳ್ಳೆಯ ಬೆಳವಣಿಗೆ ಸರಿಯೇ. ಆದರೆ ಮೊದಲು ನಮ್ಮ ಭಾಷೆಗಳ ಬೆಲೆಯನ್ನು, ಮಹತ್ವವನ್ನು ಅರಿಯಬೇಕಿದೆ.

ಇಂದು ಸ್ಮೃತಿಯವರ ನಿರ್ಧಾರದ ಫಲವಾಗಿ 500 ಕೇಂದ್ರೀಯ ವಿದ್ಯಾಲಯಗಳ, ಅದರಲ್ಲಿ ಕಲಿಯುತ್ತಿರುವ ಸುಮಾರು 70ಸಾವಿರ ವಿದ್ಯಾರ್ಥಿಗಳ ಬಾಳು ಅಂಧಕಾರಮಯವಾಗಲಿದೆ ಎಂದು ಬೊಬ್ಬೆ ಹಾಕುತ್ತಿದ್ದಾರಲ್ಲ ಕೆಲಮಂದಿ, ಅದು ನಿಜವೇ? ಇಲ್ಲಿ ಕೇಂದ್ರೀಯ ವಿದ್ಯಾಲಯಗಳ ಬಗ್ಗೆಯೂ ಕೊಂಚ ಹೇಳಬೇಕು. ಕೇಂದ್ರ ಸರ್ಕಾರದ ಸೇವೆಯಲ್ಲಿರುವ, ಅದರಲ್ಲಿಯೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವವರ ಮಕ್ಕಳ ಸಲುವಾಗಿ 1963ರಲ್ಲಿ ಅಸ್ತಿತ್ವಕ್ಕೆ ಬಂತು ಕೇಂದ್ರೀಯ ವಿದ್ಯಾಲಯ. ಪದೇ ಪದೇ ಎತ್ತಂಗಡಿಯಾಗಿ ದೇಶದ ಯಾವುದೇ ಭಾಗಕ್ಕೆ ಹೋದರೂ, ಕೇಂದ್ರ ಸರ್ಕಾರಿ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಏಕರೂಪ ಪಠ್ಯಕ್ರಮವನ್ನು ಜಾರಿಗೊಳಿಸಲಾಯಿತು. ಈಗ ಅವುಗಳ ಸಂಖ್ಯೆ ಒಂದು ಸಾವಿರದಷ್ಟಿದೆ! ತ್ರಿಭಾಷಾ ಸೂತ್ರವನ್ನು ಅಳವಡಿಸಿನೋಡಿದರೆ ಇಲ್ಲಿಯ ಮಕ್ಕಳಿಗೆ ಮೂರನೆಯ ಭಾಷೆಯಾಗಿ ಪ್ರಾದೇಶಿಕ ಭಾಷೆಯನ್ನು ಪಠ್ಯಕ್ರಮದಲ್ಲಿ ಸೇರಿಸುವುದರ ಔಚಿತ್ಯವೇ ಕಾಣುವುದಿಲ್ಲ. ಒಂದು ರಾಜ್ಯದಲ್ಲಿ ಇಂತಿಷ್ಟೇ ವರ್ಷ ಇದ್ದೇ ಇರುತ್ತಾರೆಂಬ ಖಾತ್ರಿಯೇ ಇಲ್ಲವಲ್ಲ! ಆದ್ದರಿಂದಲೇ ಇವರಿಗೆ ಮೂರನೆಯ ಭಾಷೆಯಾಗಿ ಸಂಸ್ಕೃತವೇ ಕಡ್ಡಾಯವಾಯಿತು. 2011ರ ತನಕ ಹೀಗೇ ನಡೆದುಕೊಂಡು ಬಂದಿತ್ತು. ಈಗ ಮತ್ತೆ ಅದೇ ಪರಿಪಾಠ ಮುಂದುವರೆಯಬೇಕಿದೆ. ಅವರ ಸಂಕಟಕ್ಕೆ ಕಾರಣವೂ ಅದೇ. ಸಂಸ್ಕೃತವನ್ನು ಬಲವಂತವಾಗಿ ಹೇರಿ ಸ್ವಾತಂತ್ರ್ಯ ಹರಣಮಾಡುತ್ತಿದ್ದಾರೆ ಎನ್ನುತ್ತಿರುವ ಈ ಮಂದಿಗೆ ಒಂದು ವಿಷಯ ಗೊತ್ತಾಗಬೇಕು. ಇಂದು ಸಂಸ್ಕೃತದ ಕುರಿತು ಅಧ್ಯಯನ ನಡೆಸುತ್ತಿರುವ ವಿದೇಶಗಳ ಪೈಕಿ ಮುಂಚೂಣಿಯಲ್ಲಿರುವುದು ಜರ್ಮನಿಯೇ! ಇಲ್ಲಿ ಪ್ರಶ್ನೆ ಸಂಸ್ಕೃತದ್ದು ಮಾತ್ರವಲ್ಲ, ದೇಶೀಯ ವಿದ್ಯೆಗಳನ್ನೆಲ್ಲ ಕೇವಲವಾಗಿ ಕಾಣುವ ನಮ್ಮ ಮನಸ್ಥಿತಿಯದ್ದು. ‘ಸಂವಿಧಾನದಲ್ಲಿ ಅಶ್ಲೀಲ ಎಂದು ಹೇಳಿಲ್ಲ’ ಎನ್ನುತ್ತಾ ನಾವು ಸಾರ್ವಜನಿಕವಾಗಿ ಚುಂಬಿಸುವ 'ಕಿಸ್ ಆಫ್ ಲವ್'ಗೆ ತೆರೆದುಕೊಳ್ಳುತ್ತಿದ್ದೇವೆ, ಅಲ್ಲಿ ಈಗಾಗಲೇ ನಮ್ಮ ಯೋಗಾಸನ, ಧ್ಯಾನ, ಪ್ರಾಣಾಯಾಮಗಳು ಚೀನಾ ಹಾಗೂ ಅಮೆರಿಕವನ್ನು ಸಂಪೂರ್ಣವಾಗಿ ವ್ಯಾಪಿಸಿಕೊಂಡಿದೆ.

ಇಲ್ಲಿ ಒಂದು ಮುಖ್ಯವಾದ ವಿಷಯವನ್ನು ಹೇಳಲೇಬೇಕು, ತ್ರಿಭಾಷಾ ಸೂತ್ರವನ್ನು ಜಾರಿಗೆ ತಂದಿದ್ದೇ ಸಮಗ್ರತೆ ಹಾಗೂ ಭಾವೈಕ್ಯತೆಗಳನ್ನು ಮೂಡಿಸುವ ಸಲುವಾಗಿ. ಸ್ವಾತಂತ್ರ್ಯ ಬರುವುದು ಖಚಿತವಾಗುತ್ತಿದ್ದಂತೆ ನಮ್ಮನ್ನು ಹರಿದು ತಿಂದಿದ್ದು ಎರಡು ಮುಖ್ಯವಾದ ಸಮಸ್ಯೆಗಳು. ಒಂದು ಧರ್ಮವಾದರೆ ಮತ್ತೊಂದು ಭಾಷೆ! ಸ್ವಾತಂತ್ರ್ಯಾನಂತರ ಯಾವ ಭಾಷೆಯನ್ನು ಅಧಿಕೃತವಾಗಿ ರಾಷ್ಟ್ರಭಾಷೆ ಎಂದು ಪರಿಗಣಿಸಬೇಕು ಎಂಬ ವಿಷಯಕ್ಕೆ ಎಷ್ಟು ದೊಡ್ಡ ಜಗಳ ನಡೆಯಿತು ಗೊತ್ತೇ? ಹಿಂದಿಯನ್ನು ಆಯ್ಕೆಮಾಡೋಣವೆಂದರೆ ದಕ್ಷಿಣ ಭಾರತದವರಿಂದ ತೀವ್ರ ವಿರೋಧ. ಇಂಗ್ಲೀಷ್ ವ್ಯಾವಹಾರಿಕವಾಗಿ ಚೆನ್ನಿದ್ದರೂ ಅದು ನಮ್ಮದಲ್ಲವಲ್ಲ! ಕೊನೆಗೆ ಯಾವ ನಿರ್ಣಯಕ್ಕೆ ಬರಲಾಯಿತೆಂದರೆ, 1950ರ ಜನವರಿ 26ರಿಂದ 15 ವರ್ಷಗಳ ಕಾಲ, ಮೊದಲ ಅಧಿಕೃತ ಭಾಷೆಯಾಗಿ ಹಿಂದಿ, ಎರಡನೆಯದಾಗಿ ಇಂಗ್ಲೀಷ್ ಇರಬೇಕೆಂದು ತೀರ್ಮಾನವಾಯಿತು. ಸರ್ಕಾರದ ಲೆಕ್ಕಾಚಾರವೇನಿತ್ತೆಂದರೆ, ಹದಿನೈದು ವರ್ಷಗಳಲ್ಲಿ ಹಿಂದಿ ಎಲ್ಲರಲ್ಲೂ ಭಾವೈಕ್ಯತೆಯನ್ನು ಮೂಡಿಸುವಂತಾದರೆ 1965ರಲ್ಲಿ ಅದನ್ನೇ ಅಧಿಕೃತ ಭಾಷೆಯೆಂದು ಸ್ವೀಕರಿಸುವುದು. ಆದರೆ ಹಾಗಾಗಲಿಲ್ಲ. 1965ರ ಜನವರಿ 25ರಂದು ಮದ್ರಾಸಿನಲ್ಲಿ (ಇಂದಿನ ತಮಿಳುನಾಡು) ಜೋರು ಪ್ರತಿಭಟನೆ ಶುರುವಾಯಿತು. ವಿದ್ಯಾರ್ಥಿಗಳು ಹಾಗೂ ಡಿಎಂಕೆ ಪಕ್ಷ ಸೇರಿ ಹಮ್ಮಿಕೊಂಡ ಈ ಪ್ರತಿಭಟನೆ ಎರಡು ತಿಂಗಳಾದರೂ ನಿಲ್ಲಲಿಲ್ಲ. ನೂರಾರು ಸಾವುನೋವುಗಳಾಗಿ ರಕ್ತದೋಕುಳಿ ಹರಿಯಿತು. ಕೊನೆಗೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯಿತೆಂದರೆ, ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಅರೆಸೇನಾ ಪಡೆಗಳ ನೆರವಿನಿಂದ ಪ್ರತಿಭಟನೆಯನ್ನು ಹತ್ತಿಕ್ಕಬೇಕಾಯಿತು! ಪರಿಣಾಮವಾಗಿ ಅಂದು ಅಧಿಕಾರಕ್ಕೇರಿದ ಡಿಎಂಕೆ ಪ್ರಾದೇಶಿಕತೆಯ ಹೊಸ ಭಾಷ್ಯವನ್ನೇ ಬರೆಯಿತು. ಅಂದು ತಮಿಳರ ಮನಸ್ಸಿಗೆ ಹಿಡಿದ 'ಹಿಂದಿ ಅಥವಾ ಬೇರೆ ಭಾಷೆಯನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಬಾರದು' ಎಂಬ ಜಿಡ್ಡು ಇಂದೂ ಯಾವ ಸೀಗೇಕಾಯಿ ಹಾಕಿ ತಿಕ್ಕಿದರೂ ಹೋಗುತ್ತಿಲ್ಲ!

ಸಂಸ್ಕೃತದ ವಿಷಯದಲ್ಲಿ ಈ ಮನಸ್ಥಿತಿ ಬರದಿದ್ದರೆ ಸಾಕು. ನಮ್ಮ ಭಾಷೆಗಳು ಗೌಣವಲ್ಲ ಎಂಬುದನ್ನು ನಾವೇ ಒಪ್ಪಿಕೊಳ್ಳದಿದ್ದರೆ ಮಕ್ಕಳು ಎಲ್ಲಿಂದ ಕಲಿತಾರು? ಬೇರೆ ಭಾಷೆಗಳನ್ನು ಆಯಾ ಸಂದರ್ಭಾನುಸಾರ ಕಲಿಯುವ ಸ್ವಾತಂತ್ರ್ಯಹೇಗೂ ಇದ್ದೇ ಇರುತ್ತದಲ್ಲ?

ಸ್ಮೃತಿ ಒಂದು ಸಣ್ಣ ಇರುವೆ ಗೂಡಿಗೆ ಹಾಕಿರುವುದಕ್ಕೇ ಇಷ್ಟು ಕೋಲಾಹಲವಾಗುತ್ತಿದೆಯಲ್ಲ, ಇನ್ನು ದೊಡ್ಡ ದೊಡ್ಡ ಹುತ್ತಗಳಿಗೆ ಕೈ ಹಾಕಿದಾಗ ಏನಾದೀತೋ? ಕಾದು ನೋಡೋಣ! 

Saturday, 22 November 2014

ಆರೇ ತಿಂಗಳಲ್ಲಿ ಅಮರಾವತಿ ಧರೆಗಿಳಿದೀತೇ?

ಈ ಘಟನೆ ಇತ್ತೀಚಿನದು. ಮೋದಿಯವರು ಆಸ್ಟ್ರೇಲಿಯಾ ದೇಶದ ಸಿಡ್ನಿ ನಗರಿಯಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರಲ್ಲ, ಅವತ್ತು ನಡೆದದ್ದು. ಅದನ್ನು ಹೇಳುವ ಮುನ್ನ ಒಂದಷ್ಟು ಪೀಠಿಕೆಯನ್ನೂ ಸೇರಿಸುವ ಅಗತ್ಯವಿದೆ. ಪ್ರತಿ ರಾತ್ರಿ ಒಂಭತ್ತಕ್ಕೆ ನಮ್ಮ ರಾಷ್ಟ್ರೀಯ ಸುದ್ದಿ ವಾಹಿನಿಗಳೆಲ್ಲಾ ಪೈಪೋಟಿಗೆ ಬಿದ್ದು ಚರ್ಚೆ ನಡೆಸುತ್ತವೆ. ನೀವು ಪ್ರಚಲಿತ ವಿದ್ಯಮಾನಗಳಲ್ಲಿ ಆಸಕ್ತಿಯುಳ್ಳವರಾಗಿದ್ದರೆ, ಇದು ನಿಮಗೆ ಈಗಾಗಲೇ ಗೊತ್ತಿರುತ್ತದೆ. ಪ್ರತಿ ಸುದ್ದಿ ವಾಹಿನಿಯನ್ನೂ ಐದು ನಿಮಿಷಗಳ ಕಾಲ ನೋಡಿದರೂ ಸಾಕು, ಅಂದಿನ ಹಗರಣ, ರಾಜಕಾರಣ, ಸುದ್ದಿಗಳ ಹೂರಣವೆಲ್ಲಾ ಸಿಕ್ಕಿಬಿಡುತ್ತದೆ. ಹಾಗೇ ಪುಕ್ಕಟೆ ಮನರಂಜನೆಯೂ! ಎಲ್ಲ ವಾಹಿನಿಗಳಲ್ಲೂ ಓರ್ವ ಸಂಪಾದಕ, ಅವನ ಸುತ್ತ ಏನಿಲ್ಲವೆಂದರೂ ಐದಾರು ಮಂದಿ ವಿಶ್ಲೇಷಕರು. ಎಲ್ಲರೂ ಸೇರಿ ಒಂದು ವಿಷಯದ ಹಗ್ಗವನ್ನು ಜಗ್ಗಾಡಲು ಶುರು ಮಾಡಿಕೊಂಡರೆ ಮುಗಿಯಿತು, ವಾದ-ವಿವಾದಗಳ ಕಾವು ಏರಿ, ಕೆಲವೊಮ್ಮೆ ಕಿವಿಯ ತಮಟೆ ಹರಿದು ಹೋಗುವಷ್ಟು ಜೋರಾದ ಕಿರುಚಾಟ. ಕೆಲವರದ್ದು ಕೀ ಕೊಟ್ಟ ಬೊಂಬೆಗಳಂತೆ ನಿರಂತರ ವಟವಟ. ಒಟ್ಟಿನಲ್ಲಿ ಟಿವಿ ಪರದೆಯ ಮೇಲೆ ನಿತ್ಯ ದೊಂಬರಾಟ!



ಈಗ ಘಟನೆಗೆ ಬರೋಣ. ಇಂಥದ್ದೇ ಒಂದು ಚರ್ಚೆ ನಡೆದಿತ್ತು ಮೋದಿಯವರು ಸಿಡ್ನಿ ತಲುಪಿದ ದಿನ. ಖ್ಯಾತ ವಾಹಿನಿಯೊಂದರ ಸಂಪಾದಕ ಮಹಾಶಯರು ತಮ್ಮ ವಿಶ್ಲೇಷಕರ ತಂಡದಲ್ಲಿ  ಆಸ್ಟ್ರೇಲಿಯಾದವನೊಬ್ಬನನ್ನು ಹಿಡಿದುಕೊಂಡು ಬಂದು ಕೂರಿಸಿಕೊಂಡಿದ್ದರು. ಅಂದು ಅವರು ಚರ್ಚಿಸುತ್ತಿದ್ದ ವಿಷಯ, 'ಮೋದಿಯವರ ಭೇಟಿಯಿಂದ ಆಸ್ಟ್ರೇಲಿಯಾ, ಭಾರತದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಲಿದೆಯಾ' ಎಂಬುದು. ಅವರ ಚರ್ಚೆಯ ಧಾಟಿಯನ್ನು ನೀವು ನೋಡಬೇಕಿತ್ತು. 'ಈಗ ಬರೀ ಹದಿನೈದು ಮಿಲಿಯನ್‍ಗಳಷ್ಟಿರುವ ಹೂಡಿಕೆ ಮೋದಿಯವರು ಹೋದ ಮಾತ್ರಕ್ಕೇ ಅದರ ದುಪ್ಪಟ್ಟಾಗಿಬಿಡಲು ಸಾಧ್ಯವೇ?' ಎಂದು ಇವರು ಅಬ್ಬರಿಸಿ ಕೇಳುವುದಕ್ಕೂ, ಆ ಪುಣ್ಯಾತ್ಮ 'ಸಾಧ್ಯವಿಲ್ಲ. ಮೋದಿಯವರ ಭೇಟಿಯಿಂದಾಗಿ ಹೂಡಿಕೆ ಹೆಚ್ಚಾಗುವುದೇ ಇಲ್ಲ’ ಎನ್ನುವುದಕ್ಕೂ ಸರಿಯಾಗಿ ತಾಳೆಯಾಗುತ್ತಿತ್ತು. 'ನೋಡಿ, ಮೋದಿಯವರಿಂದಾಗಿ ಯಾವ ಪವಾಡವೂ ನಡೆಯುತ್ತಿಲ್ಲ' ಎನ್ನುತ್ತಿದ್ದ ಸಂಪಾದಕರ (ಸೆಕ್ಯುಲರ್ ಎಂದು ಬೇರೆ ಹೇಳಬೇಕೇ?) ಮುಖದ ಮೇಲೆ ವಿಜಯದ ನಗು. ಅಲ್ಲ, ಭರ್ತಿ 28 ವರ್ಷಗಳ ನಂತರ ನಮ್ಮ ದೇಶದ ಪ್ರಧಾನಿಯೊಬ್ಬರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ, ಈ ಭೇಟಿ ಮುಂದಿನ ಹೂಡಿಕೆಗಳಿಗೆ ಮುನ್ನುಡಿಯಾಗಲಿದೆ ಎಂಬ ಸಾಮಾನ್ಯ ಜ್ಞಾನ ನಮಗಿದೆ, ಆ ಸಂಪಾದಕರಿಗೆ ಬೇಡವೇ? ಪರಕೀಯನೊಬ್ಬನನ್ನು ಬಳಸಿಕೊಂಡು ನಮ್ಮ ಪ್ರಧಾನಿಯನ್ನು ಹೀಗಳೆಯುತ್ತಾರಲ್ಲ, ಅವರ ಬಗ್ಗೆ ಮಾತನಾಡಲು ಅವನು ಯಾವ ಊರಿನ ದಾಸಯ್ಯ? ಇಂಥ ಅವಕಾಶಗಳನ್ನು ಸೃಷ್ಟಿಸುವ ಪತ್ರಕರ್ತರ ಮನೋವಿಕೃತಿಗೆ ಏನೆನ್ನಬೇಕು? ಚರ್ಚೆ ಹಾಗಿರಲಿ, ನಮ್ಮವರ ತಿಕ್ಕಲುತನವನ್ನು ಕಂಡು ಆ ವಿದೇಶದವನು ಮನಸ್ಸಿನಲ್ಲೇ ಎಷ್ಟು ಮುಸಿ ಮುಸಿ ನಕ್ಕನೋ ದೇವರೇ ಬಲ್ಲ!

ನಿಜವಾಗಿಯೂ ಹೇಸಿಗೆಯಾಯಿತು. ಆ ಸಂಪಾದಕರು ಯಾರೆಂದುಕೊಂಡಿರಿ? ಅಮೆರಿಕದ ಮ್ಯಾಡಿಸನ್ ಚೌಕದಲ್ಲಿ ಮೋದಿಯವರ ಅಭಿಮಾನಿಯೊಬ್ಬರನ್ನು ಕೆಣಕಿ ಅವರಿಂದ ಒದೆ ತಿಂದು ಬಂದವರು! ಇವರೊಬ್ಬರೇ ಅಲ್ಲ, ಒಂದು ವ್ಯವಸ್ಥಿತ ಜಾಲವೇ ಮೋದಿಯವರ ತಪ್ಪುಗಳ ಷರಾ ಬರೆಯಲು ತುದಿಗಾಲಲ್ಲಿ ನಿಂತಿದೆ. ಆರು ದಶಕಗಳಿಂದ ಇಲ್ಲದಿದ್ದ ಆತುರ ಈಗೇಕೆ? ಆರಿಸಿ ಕಳುಹಿಸಿದ ಜನರು ವಹಿಸಿದರೇ ಇವರಿಗೆ ಮಾಸ್ತರಿಕೆಯ ಉಸಾಬರಿಯನ್ನು? ನೀವೇ ಹೇಳಿ, ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ವ್ಯಕ್ತಿಯೋರ್ವ ಏನೇನು ತಾನೆ ಮಾಡಬಲ್ಲ? ಹೀಗೆ ಪ್ರತಿ ಕೆಲಸದಲ್ಲೂ ತಪ್ಪು ಹುಡುಕುವ ಧೋರಣೆ ಸರಿಯೇ? ಅಧಿಕಾರಕ್ಕೇರಿದ ತಕ್ಷಣ ನಮ್ಮ ಪ್ರಧಾನಿ ನೆರೆ ರಾಷ್ಟ್ರಗಳ ಭೇಟಿಗೆ ಹೊರಟಾಗಲೇ ಗೊಣಗಾಟ ಶುರುವಾಗಿತ್ತು. ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸದೆ ತಕ್ಷಣ ಹೊರಟಿದ್ದು ತಪ್ಪು ಎಂದು. ಆದರೆ ನೆರೆಯವರ ಹೃದಯ ಬೆಚ್ಚಗಾಗುವುದು, ಅವರೊಂದಿಗೆ ಕೈ ಕುಲುಕಿದಾಗ ಮಾತ್ರವೇ ಎಂಬುದು ಕಾಲೆಳೆಯುವ ಮಂದಿಗೆ ಹೇಗೆ ತಾನೆ ಅರ್ಥವಾದೀತು? ಆ ದೇಶಗಳಿಂದ ದೊರೆತ ಅಪೂರ್ವ ಪ್ರತಿಕ್ರಿಯೆಯನ್ನು ನೋಡಿದ ಮೇಲೆ ಸುಮ್ಮನಾದರು!

ನಂತರ ಶುರುವಾಗಿದ್ದು 'ಮೋದಿಯವರು ನಮ್ಮನ್ನು ಹತ್ತಿರಕ್ಕೇ ಬಿಟ್ಟುಕೊಳ್ಳುವುದಿಲ್ಲ' ಎಂಬ, ಮಾಧ್ಯಮದವರ ಬೊಬ್ಬೆ. ಸರಿ, ದೀಪಾವಳಿಯ ಸಂದರ್ಭದಲ್ಲಿ ಇವರಿಗಾಗಿಯೇ ಮೋದಿಯವರು ಒಂದು ಕೂಟವನ್ನು ಏರ್ಪಡಿಸಿದ್ದರು. ‘ಮೋದಿ’ ಎಂಬ ಪದ ಕಿವಿಗೆ ಬಿದ್ದರೆ ಸಾಕು, ಮೈಮೇಲೆ ಉಗ್ರನರಸಿಂಹನನ್ನು ಆವಾಹಿಸಿಕೊಳ್ಳುತ್ತಿದ್ದ ಪ್ರತಾಪಿಗಳು ಅಂದು ಅವರ ಸೌಜನ್ಯ, ಪ್ರೀತಿಯ ಶಾಖಕ್ಕೆ ಬೆಣ್ಣೆಯಂತೆ ಕರಗಿದರು! ಪ್ರತಿಯೊಬ್ಬರನ್ನೂ ನಗುನಗುತ್ತಾ ಆತ್ಮೀಯತೆಯಿಂದ ಮಾತನಾಡಿಸಿದ ಅವರ ಜೊತೆ 'ಸೆಲ್ಫೀ'ಗಳನ್ನು ತೆಗೆಸಿಕೊಳ್ಳಲು ಹಾತೊರೆದದ್ದನ್ನು ನೋಡಿದಾಗ, ಇವರೇನಾ ಆ ಪತ್ರಕರ್ತರು ಎಂದು ನಿಜವಾಗಿಯೂ ಅನುಮಾನವುಂಟಾಯಿತು! 'ನನ್ನ ಮಗನಿಗೆ ತೋರಿಸಬೇಕು' ಎಂದೋ ಅಥವಾ 'ನನ್ನ ಗಂಡನಿಗೆ ಹೇಳಿ ಬಂದಿದ್ದೇನೆ, ಮೋದಿಯವರ ಜೊತೆ ಫೋಟೋ ತೆಗೆಸಿಕೊಂಡು ತೋರಿಸುತ್ತೇನೆ ಅಂತ' ಎಂದೋ ಇವರೆಲ್ಲಾ ಚಿಕ್ಕ ಮಕ್ಕಳಂತೆ ಸಂಭ್ರಮಿಸಿದ್ದನ್ನು ನೋಡಿ ನಾವು ಅವಾಕ್ಕಾದೆವು!



ಮುಂದಿನ ತಪ್ಪು ಸ್ವಚ್ಛ ಭಾರತ ಅಭಿಯಾನಕ್ಕೆ ಗಾಂಧೀಜಿಯನ್ನು ಬಳಸಿಕೊಂಡಿದ್ದು! ಕಾಂಗ್ರೆಸ್ ಸರ್ಕಾರದ ಸ್ವಘೋಷಿತ ಆಸ್ತಿಯಾದ ಅವರನ್ನು ಹಾಗೆಲ್ಲ ಬೇರೆಯವರ ಪಾಲು ಮಾಡಲಾದೀತೇ? ಉಳಿದವರು ಹಾಗಿರಲಿ, ಇಂದಿರೆಯ ಕುಟುಂಬಕ್ಕೆ ಪರಮಾಪ್ತರಾಗಿದ್ದ ಅಮಿತಾಭ್‍ ಬಚ್ಚನ್‍ರಂಥ ಘಟಾನುಘಟಿಯೇ ಪೊರಕೆ ಹಿಡಿದು ಬೀದಿಗಿಳಿದರೆ ಕಾಂಗ್ರೆಸ್‍ಗೆ ತುರಿಕೆಯಾಗದೆ ಇದ್ದೀತೆ? ಸ್ವಚ್ಛತಾ ಅಭಿಯಾನದಲ್ಲಿ ರಾಜಕೀಯ ಸಲ್ಲ ಎಂದು ಹೇಳಿದವರೆಲ್ಲರನ್ನೂ ಕೆಕ್ಕರಿಸಿ ನೋಡಿತು ಅದು. ಸ್ವಚ್ಛತೆಯ ಅಮಲೇರಿಸಿಕೊಂಡು ಕೇರಳದ ಬೀದಿಗಳನ್ನು ಸುತ್ತಿದ ಶಶಿ ತರೂರ್‍ರನ್ನು ಪಕ್ಷದ ವಕ್ತಾರರ ಸ್ಥಾನದಿಂದ ಕೆಳಗಿಳಿಸಲು ಇದೂ ಒಂದು ಕಾರಣವೇ!

ಅಕ್ಟೋಬರ್ 31ರಂದು ಮತ್ತೊಂದು ರಂಪ! ಆ ದಿನ ಇಂದಿರೆಯ ಹತ್ಯೆಯಾದದ್ದು ಎಂಬುದು ಮಾತ್ರ ನಮ್ಮ ಜನಕ್ಕೆ ಗೊತ್ತಿತ್ತು. ಅಂದೇ ಸರ್ದಾರ್ ಪಟೇಲ್‍ರ ಜನ್ಮ ದಿನ ಎಂಬುದು ಬಹುತೇಕರಿಗೆ ಗೊತ್ತಿರಲೇ ಇಲ್ಲ! ಆ ದಿನವನ್ನು ಪಟೇಲರ ಸ್ಮರಣೆಗೆ ಮೀಸಲಾಗಿಟ್ಟಿತು ಮೋದಿ ಸರ್ಕಾರ! ಛೆ, ಎಲ್ಲಾದರೂ ಉಂಟೇ? ದೇಶಕ್ಕಾಗಿ ಹುತಾತ್ಮರಾದವರನ್ನು (ಕಾಂಗ್ರೆಸ್‍ನ ಪ್ರಕಾರ!) ನೆನೆಯದೇ ಇರುವುದು ಅಕ್ಷಮ್ಯ ಅಪರಾಧವಲ್ಲವೇ? ತಮಾಷೆ ನೋಡಿ, ಇಂದಿರೆಯ ವಿಷಯದಲ್ಲಿ ಮಾಡಿದಂತೆ ಇನ್ನೆಲ್ಲಿ ನೆಹರೂ ಜನ್ಮದಿನವನ್ನೂ ಕಡೆಗಣಿಸುತ್ತಾರೋ ಎಂಬ ದಿಗಿಲಿನಲ್ಲಿ ತಾನೇ ತುರಾತುರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿತು ಕಾಂಗ್ರೆಸ್. ಆದರೆ ಕುಳಿತಲ್ಲಿಯೇ ತಣ್ಣಗೆ ನೆಹರೂರನ್ನು ಸ್ಮರಿಸಿಕೊಂಡು ಅದಕ್ಕೆ ಫಜೀತಿ ತಂದಿಟ್ಟರು ಮೋದಿ! ಹೀಗೆ, ಮಹಾರಾಷ್ಟ್ರ, ಹರಿಯಾಣದ ವಿಧಾನಸಭಾ ಚುನಾವಣೆಗಳಿಂದ ಹಿಡಿದು ಗಡಿಯಲ್ಲಿ ಪಾಕ್ ಸೈನಿಕರ ಜೊತೆಗಿನ ಗುಂಡಿನ ಚಕಮಕಿಯವರೆಗೂ ಎಲ್ಲದರಲ್ಲೂ ಮೋದಿಯವರದ್ದೇ ತಪ್ಪು ಎಂದು ಬಿಂಬಿಸುತ್ತಿದ್ದಾರೆ ಈ ಕಾಮಾಲೆ ಕಣ್ಣಿನವರು!

ಆದರೆ ವಾಸ್ತವ ಬೇರೆಯೇ ಇದೆ. ಅಧಿಕಾರ ಹಿಡಿದ ಲಾಗಾಯ್ತು, ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದಾರೆ ನಮ್ಮ ಪ್ರಧಾನಿ. ಆರು ದಶಕಗಳ ಕೊಳೆಯನ್ನು ಝಾಡಿಸಲು ಅವಿರತ ಶ್ರಮಿಸುತ್ತಿದ್ದಾರೆ. ದೇಶದ ಒಳಗಿನ ಹಾಗೂ ಹೊರಗಿನ ಆಗುಹೋಗುಗಳಿಗೆ ತಮ್ಮನ್ನು ಸಮನಾಗಿ ಒಡ್ಡಿಕೊಳ್ಳುತ್ತಿದ್ದಾರೆ. ಇತೀಚೆಗೆ ಆಸ್ಟ್ರೇಲಿಯಾ ದೇಶದ ಬ್ರಿಸ್ಬೇನ್ ನಗರದಲ್ಲಿ ಜಿ20 ರಾಷ್ಟ್ರಗಳ ಶೃಂಗ ಸಭೆ ನಡೆಯಿತಲ್ಲ, ಅಲ್ಲಿ ಮೋದಿಯವರನ್ನು ಕಂಡ ಒಬಾಮಾ 'ಯೂ ಆರ್ ಎ ಮ್ಯಾನ್ ಆಫ್ ಆಕ್ಷನ್' ಎಂದರು. ಇಂಥ ಮಾತುಗಳು ಓರ್ವ ಅಧ್ಯಕ್ಷನ ಬಾಯಿಂದ ಸುಮ್ಮನೇ ಬರುವುದಿಲ್ಲ! 'ಆಕ್ಟ್ ಈಸ್ಟ್' ಹಾಗೂ 'ಮೇಕ್ ಇನ್ ಇಂಡಿಯಾ' ಕರೆಗಳು ಜನಪ್ರಿಯವಾಗುತ್ತಿವೆ. ಮೋದಿಯವರ ವರ್ಚಸ್ಸು ಎಲ್ಲರನ್ನೂ ಸೆಳೆಯುತ್ತಿದೆ. ಹಾಗೆ ಹೊರಗಿನವರಿಗೆ ಕರೆ ಕೊಡುತ್ತಿರುವ ಮೋದಿ ದೇಶದ ಒಳಗೆ ಕೈಕಟ್ಟಿ ಕುಳಿತಿಲ್ಲ. ತುಕ್ಕು ಹಿಡಿದಿರುವ ವ್ಯವಸ್ಥೆಯ ರಿಪೇರಿ ಆರಂಭಿಸಿದ್ದಾರೆ. ಆಯಕಟ್ಟಿನ ಜಾಗಗಳಿಗೆ ಕಾರ್ಯದರ್ಶಿಗಳಾಗಿ ಅನಿಲ್ ಸ್ವರೂಪ್ ಹಾಗೂ ಅರವಿಂದ ಸುಬ್ರಮಣಿಯನ್‍ರಂಥ ಬುದ್ಧಿವಂತರನ್ನು ಆರಿಸಿದ್ದಾರೆ. ಶುದ್ಧಹಸ್ತರೂ, ದಕ್ಷರೂ, ಬುದ್ಧಿವಂತರೂ ಆದ ಮನೋಹರ್ ಪಾರಿಕ್ಕರ್‍, ಸುರೇಶ್ ಪ್ರಭು ಇವರುಗಳಿಗೆ ಕೆಲ ಮುಖ್ಯ ಜವಾಬ್ದಾರಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದವರನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ಸರಿಸಿದ್ದಾರೆ. ಪೆಟ್ರೋಲ್, ಡೀಸಲ್‍ಗಳ ದರ ಕಡಿತದಿಂದ ಹಿಡಿದು ಕಪ್ಪು ಹಣವನ್ನು ತರುವುದರವರೆಗೂ ಎಲ್ಲ ನಿರ್ಧಾರಗಳನ್ನೂ ಜನಪರವಾಗಿ ತೆಗೆದುಕೊಳ್ಳುತ್ತಿದ್ದಾರೆ.

ರಾಜಕೀಯವೆಂದಮೇಲೆ ತಂತ್ರಗಾರಿಕೆ ಇಲ್ಲದಿರುತ್ತದೆಯೇ? ಮಹಾರಾಷ್ಟ್ರದಲ್ಲಿ ಬಹುಮತದ ಸಲುವಾಗಿ ರಾಜಿ ಮಾಡಿಕೊಳ್ಳಬಾರದೆಂಬ ನಿಲುವು ತಳೆಯಿತು ಪಕ್ಷ. ನೆರವಿಗೆ ಬಂದಿದ್ದು ಧ್ವನಿಮತವೆಂಬ ತಂತ್ರಗಾರಿಕೆ. ಮುಂಬರಲಿರುವ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಅಷ್ಟೇ. ಕಾಲೂರಲು ಮೊದಲು ನೆಲೆಯೊಂದು ಸಿಗಲಿ ಎಂದು ಹಲವು ದಿಕ್ಕಿನಲ್ಲಿ ಪ್ರಯತ್ನಗಳು ನಡೆದಿವೆ. ಅವಕಾಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಬಲ್ಲ, ‘ಅಮಿತ್ ಶಾ’ರಂಥ ಚಾಣಕ್ಯರು ಮುಖ್ಯರಾಗುವುದೇ ಇಲ್ಲಿ. ಅತ್ತ ಕಡೆ ತಮಿಳುನಾಡಿನಲ್ಲಿ ರಜನಿ 'ನನಗೆ ರಾಜಕೀಯವೆಂದರೆ ಭಯವೇನೂ ಇಲ್ಲ' ಎಂದು ತಮ್ಮದೇ ರೀತಿಯಲ್ಲಿ ಸಂದೇಶವನ್ನು ರವಾನಿಸುತ್ತಿದ್ದಾರೆ. ಆದರೆ ಒಂದಂತೂ ಸ್ಪಷ್ಟ. ಈ ಎಲ್ಲ ತಂತ್ರಗಾರಿಕೆಗಳೂ ನಡೆದಿರುವುದು ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು!

ರಾಹುಲ್‍ರ ನಿಷ್ಕ್ರಿಯತೆಯಿಂದ ರೋಸಿಹೋಗಿರುವ ಕಾಂಗ್ರೆಸ್‍ ನಾಯಕರು ಪ್ರಿಯಾಂಕ ಬೇಕೆಂದು ರಚ್ಚೆ ಹಿಡಿದಿದ್ದಾರೆ. ಆದರೆ ವಾದ್ರಾನನ್ನು ಸುತ್ತುವರಿದಿರುವ ಅಕ್ರಮ ಅಸ್ತಿಯ ವಿಷವರ್ತುಲ ಪ್ರಿಯಾಂಕಳನ್ನು ಆಪೋಶನ ತೆಗೆದುಕೊಳ್ಳದೆ ಬಿಟ್ಟೀತೇ? ಒಟ್ಟಿನಲ್ಲಿ, ದಿನೇ ದಿನೇ ಹೆಚ್ಚುತ್ತಿರುವ ಮೋದಿಯವರ ಜನಪ್ರಿಯತೆ ಬಹಳಷ್ಟು ಮಂದಿಯ ನಿದ್ದೆಗೆಡಿಸಿದೆ! ಉದಾಹರಣೆಗೆ, ಮೊನ್ನೆ ಸಿಡ್ನಿಯ ಆಲ್‍ಫೋನ್ಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಿದ್ದ ಜನಸ್ತೋಮವನ್ನು ಕಂಡು ಕಂಗಾಲಾದರು ಕಾಂಗ್ರೆಸ್‍ನ ಸಲ್ಮಾನ್ ಖುರ್ಷಿದ್. ಜನರನ್ನು ದುಡ್ಡು ಕೊಟ್ಟು ಕರೆದೊಯ್ಯಲಾಗುತ್ತಿದೆ ಎಂದು ಹುಯಿಲೆಬ್ಬಿಸಿದರು. ಹಾಗೆ ಜನರನ್ನು ಸೇರಿಸಲು ಇದೇನು ಕಾಂಗ್ರೆಸ್ ನಾಯಕರ, ಬರೆದಿದ್ದನ್ನು ಓದುವ ಭಾಷಣ ಕೆಟ್ಟುಹೋಯಿತೆ? ಮತ್ತೊಂದು ಆಸಕ್ತಿಕರ ಬೆಳವಣಿಗೆಯನ್ನೂ ನಿಮಗೆ ಹೇಳಲೇಬೇಕು. ಅರವಿಂದ್ ಕೇಜ್ರಿವಾಲ್ ನೆನಪಿದ್ದಾರೆ ತಾನೆ? ದೆಹಲಿಯ ಮುಖ್ಯಮಂತ್ರಿಯಾಗಿದ್ದೇ ತಡ, ಇನ್ನೇನು ಪ್ರಧಾನಿಯೂ ಆಗಿಬಿಡುತ್ತೇನೆಂಬ ಹುಮ್ಮಸ್ಸಿಗೆ ಬಿದ್ದು ದೆಹಲಿಯನ್ನು ಒದ್ದು ಓಡಿದ್ದರಲ್ಲ? ಆಮೇಲೆ ‘ಕೈಸುಟ್ಟುಕೊಂಡು ತಪ್ಪು ಮಾಡಿಬಿಟ್ಟೆ’ ಎಂದು ಹಪಹಪಿಸಿದ್ದು ಹಳೇ ಸುದ್ದಿ. ಈಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಎಕೆ-49 (49 ದಿನಗಳ ಆಡಳಿತ ನೀಡಿದ್ದಕ್ಕೆ) ಎಂದೇ ಖ್ಯಾತರು! ಬರಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಅವರು ಸಜ್ಜಾಗುತ್ತಿರುವುದು ಹೇಗೆ ಹೇಳಿ? ಮೋದಿಯವರ ಗುಣಗಾನ ಮಾಡುತ್ತಾ! ಹೀಗಾದರೂ ಜನ ತಮ್ಮನ್ನು ನಂಬುತ್ತಾರೇನೋ ಎಂಬ ಆಸೆ ಅವರಿಗೆ ಪಾಪ!

ಇವ್ಯಾವುಗಳ ಪರಿವೆಯೂ ಇಲ್ಲದೆ, ದೇಶ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ ನಮ್ಮ ಪ್ರಧಾನಿ. ಅಭಿವೃದ್ಧಿ, ಸುಖ, ಶಾಂತಿಗಳನ್ನೊಳಗೊಂಡ ಸ್ವರ್ಗವನ್ನು ಧರೆಗಿಳಿಸುವುದು ಸುಲಭದ ಮಾತಲ್ಲ. ಆ ಸಾಹಸ ಎಲ್ಲರ ಕೈಗಳಿಗೆ ಎಟಕುವುದೂ ಇಲ್ಲ. ಅದಕ್ಕೆ ಕಠಿಣವಾದ ಇಚ್ಛಾಶಕ್ತಿ ಹಾಗೂ ಸಮಯ ಎರಡೂ ಬೇಕು. ದೇಶಕ್ಕೋಸ್ಕರ ತನ್ನ ಖಾಸಗಿ ಬದುಕನ್ನೇ ಮುದುರಿ ಮೂಲೆಗೆಸೆದ ಮನುಷ್ಯನ ಇಚ್ಛಾಶಕ್ತಿಯ ಬಗ್ಗೆ ಎರಡು ಮಾತಿಲ್ಲ! ಅದರೆ ಹೆಜ್ಜೆ ಹೆಜ್ಜೆಗೂ ಮುಳ್ಳಾಗದೆ ಆತನಿಗೆ ಬೇಕಾದ ಸಮಯ ಕೊಡಲು ನಾವು ಸಿದ್ಧರಿದ್ದೇವಾ?


Wednesday, 19 November 2014

ಬದುಕೆಂಬ ಉಡುಗೊರೆಯನ್ನು ಕೊಟ್ಟಿದ್ದೇವಾ ನಮ್ಮ ಮಕ್ಕಳಿಗೆ?

ಕಳೆದ ವಾರ ಇಬ್ಬರು ಹುಡುಗರು ಆತ್ಮಹತ್ಯೆ ಮಾಡಿಕೊಂಡರು. ಒಬ್ಬ ಸತ್ತದ್ದು, ತಂದೆ-ತಾಯಿ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ. ಮತ್ತೊಬ್ಬನಿಗಿದ್ದ ಕಾರಣ, ಓದಿಕೋ, ವೃಥಾ ಕಾಲಹರಣ ಮಾಡಬೇಡ ಎಂಬ ಮನೆಯವರ ಉಪದೇಶ! ತೀರ ಕ್ಷುಲ್ಲಕವೆನಿಸುವ ಇಂಥ ಸಬೂಬುಗಳನ್ನು ಮುಂದೊಡ್ಡಿ ಬದುಕನ್ನೇ ಕೊನಗಾಣಿಸಿಕೊಳ್ಳುವ ಮನಸ್ಥಿತಿ ಎಲ್ಲಿಂದ ಬರುತ್ತಿದೆ? 'ತೀರ್ಥ ತೆಗೆದುಕೊಂಡರೆ ಶೀತ, ಮಂಗಳಾರತಿ ತೆಗೆದುಕೊಂಡರೆ ಉಷ್ಣ' ಎನ್ನುವಷ್ಟು ಸೂಕ್ಷ್ಮವಾಗಿ ಏಕೆ ಬೆಳೆಯುತ್ತಿದ್ದಾರೆ ನಮ್ಮ ಮಕ್ಕಳು? ಅಥವಾ ಪಾಲಕರಾಗಿ ನಾವುಗಳೇ ಎಡವುತ್ತಿದ್ದೇವೆಯೇ? ಬದುಕು ಇಷ್ಟು ಕೇವಲವಲ್ಲ ಎಂಬ ಮಹತ್ತರವಾದ ವಿಷಯವನ್ನು ಹೇಳುವಲ್ಲಿ ಸೋಲುತ್ತಿದ್ದೇವೆಯೇ? ಮಕ್ಕಳಿಗೆ ಬದುಕು ಕಟ್ಟಿಕೊಡುವ ವಿಷಯ ಬಂದಾಗಲೆಲ್ಲ, ಇಟಲಿ ದೇಶದ ಚಲನಚಿತ್ರವೊಂದು ನೆನಪಿಗೆ ಬರುತ್ತದೆ. ಅದರ ಇಂಗ್ಲೀಷ್ ಅವತರಣಿಕೆಯೂ ಇದೆ. ಹೆಸರು 'ಲೈಫ್ ಈಸ್ ಬ್ಯೂಟಿಫುಲ್'. ಒಮ್ಮೆಯಾದರೂ ಖಂಡಿತ ನೋಡಿ ಅದನ್ನು.

ಚಿತ್ರದ ಕಥೆ ಎರಡನೆಯ ವಿಶ್ವಯುದ್ಧದ ಕಾಲಘಟ್ಟದಲ್ಲಿ ನಡೆದಿದ್ದು. ಇಟಲಿಯವನೇ ಆದ, ಯಹೂದಿ ಧರ್ಮಕ್ಕೆ ಸೇರಿದ ನಾಯಕ ಗ್ವೀಡೋ ಬಹಳ ಹಾಸ್ಯಪ್ರವೃತ್ತಿಯವನು. ಬದುಕಿನ ಎಲ್ಲ ಕಹಿಗಳಿಗೂ ನಗುವೆಂಬ ಸಿಹಿಯನ್ನು ಸೇರಿಸಿಯೇ ಸ್ವೀಕರಿಸುವುದು ಅವನ ಜಾಯಮಾನ. ಶ್ರೀಮಂತರ ಮನೆಯ ಹುಡುಗಿ 'ಡೋರಾ'ಳನ್ನು ಆಕಸ್ಮಿಕವಾಗಿ ಭೇಟಿಯಾಗಿ, ಪ್ರೀತಿಸಿ, ಅವಳ ಮನವೊಲಿಸಿ ಮದುವೆಯಾಗುತ್ತಾನೆ. ಅವರಿಗೆ ಜೋಶುವಾ ಎಂಬ ಗಂಡು ಮಗು ಹುಟ್ಟುತ್ತದೆ.

ಇಲ್ಲಿಯವರೆಗೂ ಎಲ್ಲ ಮಾಮೂಲಿಯೇ ಎನಿಸುವ ಚಿತ್ರ ಮುಂದೆ ಪಡೆಯುವ ತಿರುವು ವಿಭಿನ್ನ. ಅದು 1945ರ ಆಸುಪಾಸು. ಹಿಟ್ಲರನ ಕ್ರೌರ್ಯದ ಪರಮಾವಧಿಯ ಕಾಲ. ಯಹೂದಿಗಳು ಪಾತಾಳದಲ್ಲಿದ್ದರೂ ಬಿಡದೆ ಹೊರಗೆಳೆದು ಸೆರೆ ಶಿಬಿರಗಳಲ್ಲಿ ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಿದ್ದ ಹಿಟ್ಲರ್. ಆಗ ಮಗು ‘ಜೋಶುವಾ’ನಿಗೆ ಸುಮಾರು ನಾಲ್ಕೈದು ವರ್ಷಗಳಾಗಿದ್ದಿರಬಹುದು. ಅವನ ಹುಟ್ಟುಹಬ್ಬದ ಆಚರಣೆಯಲ್ಲಿ ತಾನೂ ಶಾಮೀಲಾಗಬೇಕೆಂದು ಬಯಸುವ ತನ್ನ ತಾಯಿಯನ್ನು ಕರೆದುಕೊಂಡು ಬರಲು ಹೋಗುತ್ತಾಳೆ ಡೋರಾ. ಅಷ್ಟೇ, ಇಲ್ಲಿ ಹಿಟ್ಲರನ ನಾಜಿ ಸೈನಿಕರು ಮನೆಗೆ ನುಗ್ಗಿ ಗ್ವೀಡೋ ಹಾಗೂ ಜೋಶುವಾರನ್ನು ಎಳೆದುಕೊಂಡು ಹೋಗುತ್ತಾರೆ. ಉಳಿದ ಯಹೂದಿಗಳೊಂದಿಗೆ ಅವರನ್ನೂ ಲಾರಿಯೊಂದಕ್ಕೆ ತುಂಬಿಸಿದಾಗ ಕಸಿವಿಸಿಗೊಳ್ಳುವ ಮಗು, ಎಲ್ಲಿಗೆ ಹೋಗುತ್ತಿದ್ದೇವೆಂದು ಮುಗ್ಧವಾಗಿ ಕೇಳುತ್ತದೆ. 'ಎಲ್ಲಿಯಾದರೂ ಪ್ರವಾಸ ಹೋಗಬೇಕು ಎನ್ನುತ್ತಿದ್ದೆಯಲ್ಲ ಕಂದಾ, ಈಗ ಕರೆದುಕೊಂಡು ಹೋಗುತ್ತಿದ್ದೇನೆ ನೋಡು’ ಎನ್ನುತ್ತಾನೆ ಅಪ್ಪ. ಲಾರಿಯಿಂದ ಇಳಿದು, ಸೆರೆ ಶಿಬಿರಕ್ಕೆ ಕೊಂಡೊಯ್ಯುವ ರೈಲು ಹತ್ತಲು ಸಾಲಾಗಿ ನಿಲ್ಲುತ್ತಾರೆ ಎಲ್ಲರೂ. ಉಳಿದವರೆಲ್ಲ ಜೋಲು ಮೋರೆ ಹಾಕಿಕೊಂಡು ನಡೆದರೆ ಗ್ವೀಡೋನದ್ದು ಮಾತ್ರ ಪುಟಿಯುವ ಉತ್ಸಾಹ! ಮಾಸದ ಮಂದಹಾಸ! ತನ್ನ ಆತಂಕ, ಮುಂದೆ ತಮಗೆ ಕಾದಿರುವ ವಿಪತ್ತು ಮಗುವಿಗೆ ತಿಳಿಯಬಾರದು ಎಂಬ ಒಂದೇ ಕಾರಣಕ್ಕೆ ಸಂತಸದ ಮುಖವಾಡ ಧರಿಸುತ್ತಾನೆ. ಆ ಕ್ಷಣದ ತನ್ನ ನಿರ್ಧಾರದಿಂದ ಮಗನ ಬದುಕಿನ ದಿಕ್ಕನ್ನೇ ಬದಲಾಯಿಸುತ್ತಾನೆ.

 ಅಂಥ ಅಸಹಾಯಕ ಪರಿಸ್ಥಿತಿಯಲ್ಲೂ ಗ್ವೀಡೋ ತೋರುವ ಜಾಣ್ಮೆ ಎಂಥದು ಗೊತ್ತೇ? ನಾವೆಲ್ಲರೂ ಈಗ ಹೋಗುತ್ತಿರುವುದು ಕಣ್ಣಾಮುಚ್ಚಾಲೆ ಆಟ ಆಡಲು ಎಂದು ಮಗುವಿಗೆ ಹೇಳುತ್ತಾನೆ.  ಅನುಮಾನಿಸುತ್ತಲೇ ರೈಲಿನಲ್ಲಿ ಸಾಗುತ್ತದೆ ಮಗು. ಸೆರೆ ಶಿಬಿರ ತಲುಪುತ್ತಿದ್ದಂತೆಯೇ ಒಂದು ಘಟನೆ ನಡೆಯುತ್ತದೆ. ಇಟಲಿಯ ನೂರಾರು ಜನರಿದ್ದ ಇವರ ಕೋಣೆಗೆ ಬರುವ ನಾಜಿ ಅಧಿಕಾರಿಗಳು, 'ಇಲ್ಲಿ ಯಾರಿಗೆ ಜರ್ಮನ್ ಭಾಷೆ ಬರುತ್ತದೋ ಅವರು ಮುಂದೆ ಬನ್ನಿ' ಎನ್ನುತ್ತಾರೆ. ಜರ್ಮನ್ ಭಾಷೆಯ ಗಂಧ ಗಾಳಿಯೂ ಇರದ ಗ್ವೀಡೋ ಮುಲಾಜಿಲ್ಲದೆ ಮುಂದೆ ಹೋಗಿ ನಿಂತುಬಿಡುತ್ತಾನೆ. ಮಗುವಿಗೆ ಹೇಗಾದರೂ ಮಾಡಿ ನಂಬಿಕೆ ಬರಿಸಲೇಬೇಕಲ್ಲ ಇದು ಆಟ ಎಂದು? ಸರಿ, ನಾಜಿ ಸೈನಿಕರು ಮುಖ ಸಿಂಡರಿಸಿಕೊಂಡು ದೊಡ್ಡ ದನಿಯಲ್ಲಿ ಅಬ್ಬರಿಸುತ್ತಾ ಸೂಚನೆಗಳನ್ನು ಕೊಡುತ್ತಿದ್ದರೆ ಇವನು ಅನುವಾದ ಮಾಡುವ ನೆಪದಲ್ಲಿ ಹೇಳುತ್ತಿದ್ದುದು ತಾನು ಕಟ್ಟಿದ್ದ ಕಣ್ಣಾಮುಚ್ಚಾಲೆ ಆಟದ ನಿಯಮಗಳನ್ನು! 'ಇಲ್ಲಿರುವ ಮಕ್ಕಳಿಗೆಲ್ಲಾ ಆಟದ ಸ್ಪರ್ಧೆ ನಡೆಯಲಿದೆ. ಯಾವ ಮಗುವೂ ನಾಜಿ ಕಾವಲುಗಾರರ ಕಣ್ಣಿಗೆ ಬೀಳಬಾರದು. ಹಾಗೆ ಅವಿತು ಕೂರುವ ಮಗುವಿಗೆ ದಿನಕ್ಕಿಷ್ಟು ಎಂದು ಅಂಕಗಳು ಸಿಗುತ್ತವೆ. ಅತ್ತರೆ, ಹಸಿವು ಎಂದರೆ ಅಥವಾ ಅಮ್ಮನನ್ನು ನೋಡಬೇಕು ಎಂದರೆ ಅಂಕಗಳನ್ನು ಕಳೆಯಲಾಗುವುದು. ಯಾವ ಮಗು ಸಾವಿರ ಅಂಕಗಳನ್ನು ಮೊದಲು ಪಡೆಯುತ್ತದೋ ಅದಕ್ಕೆ ಒಂದು ಯುದ್ಧದ ಟ್ಯಾಂಕರ್ ಬಹುಮಾನವಾಗಿ ದೊರೆಯಲಿದೆ' ಎಂದು ಗ್ವೀಡೋ ನಾಜಿಗಳಿಗಿಂತ ಜೋರಾಗಿ ಘರ್ಜಿಸುತ್ತಿದ್ದರೆ ಪುಟ್ಟ ಜೋಶುವಾ ಕಣ್ಣುಗಳನ್ನು ಅಗಲಿಸಿಕೊಂಡು ಕೇಳಿಸಿಕೊಳ್ಳುತ್ತಾನೆ.

ಮುಂದೆ ನಡೆಯುವುದೆಲ್ಲಾ ನಿಯಮ ಪಾಲನೆ. ಅಪ್ಪ ಗಾಣದೆತ್ತಿನಂತೆ ದುಡಿಯಲು ಹೋಗುವುದು. ತನ್ನ ಪಾಲಿನ ಬ್ರೆಡ್ಡು ಬನ್ನುಗಳನ್ನು ತಂದು ಮಗನಿಗೆ ಕೊಟ್ಟು ಅವನಿಗೆ ಹಸಿವು ಕಾಡದಂತೆ ನೋಡಿಕೊಳ್ಳುವುದು. ಮಗು ಕೋಣೆಯಲ್ಲಿ ಅವಿತು ಕೂರುವುದು. 'ಅಪ್ಪಾ ಇವತ್ತಿಗೆ ನಮ್ಮ ಅಂಕಗಳು ಎಷ್ಟಾದವು' ಎಂದು ಮಗು ಕೇಳಿದರೆ, 'ಇನ್ನೂರ ಎಪ್ಪತ್ತೈದರ ಹತ್ತಿರ ಹತ್ತಿರ. ಇನ್ನೇನು ಕೆಲ ದಿನಗಳು ಅಷ್ಟೇ. ನಾವೇ ಗೆದ್ದುಬಿಡುತ್ತೇವೆ ನೋಡುತ್ತಿರು’ ಎಂದು ಹುರುಪು ತುಂಬುವುದು. ಬೇರೆ ಮಕ್ಕಳೊಡನೆ ಮಾತನಾಡಿ ಬಂದ ಮಗು ಬೇಜಾರಿನಿಂದ 'ಇಲ್ಲಿ ಯಾವ ಆಟವನ್ನೂ ಆಡಿಸುತ್ತಿಲ್ಲವಂತೆ. ಅವರಿಗೆಲ್ಲ ಏನೂ ಗೊತ್ತೇ ಇಲ್ಲ' ಎಂದರೆ, 'ಇನ್ನೆಲ್ಲಿ ಅವರನ್ನು ಹಿಂದೆ ಹಾಕಿ ನೀನು ಗೆದ್ದುಬಿಡುತ್ತೀಯೋ ಎಂದು ಹಾಗೆ ಹೇಳುತ್ತಾರೆ ಅಷ್ಟೇ, ಅವರ ಮಾತಿಗೆ ಮರುಳಾಗಬೇಡ’ ಎನ್ನುವುದು.

ಹಿಟ್ಲರನ ಸೆರೆ ಶಿಬಿರದ ಒಂದು ಕ್ರೌರ್ಯದ ಬಗ್ಗೆ ನಿಮಗೆ ಹೇಳಲೇಬೇಕು. ದುಡಿಯಲು ಶಕ್ತರಾಗಿದ್ದ ಗಂಡಸರು ಹಾಗೂ ಹೆಂಗಸರನ್ನು ಮಾತ್ರ ಜೀವಸಹಿತ ಬಿಡುತ್ತಿದ್ದ ಹಿಟ್ಲರ್, ಮಕ್ಕಳು ಹಾಗೂ ಮುದುಕರನ್ನು ಉಳಿಸುತ್ತಿರಲಿಲ್ಲ. ಒಂದು ಕೋಣೆಯೊಳಗೆ ಅವರನ್ನೆಲ್ಲ ಕೂಡಿ ಹಾಕಿ ವಿಷಾನಿಲವನ್ನು ಹಾಯಿಸಿ ಸಾಯಿಸಿಬಿಡುತ್ತಿದ್ದ. ಹೀಗೆ ಉಳಿದೆಲ್ಲಾ ಮಕ್ಕಳು ಸತ್ತರೂ ಜೋಶುವಾ ಮಾತ್ರ ಅಪ್ಪ ಹೇಳಿಕೊಟ್ಟ ಆಟವನ್ನು ಆಡುತ್ತಲೇ ಸಾಗುತ್ತಾನೆ. ಅವನೂ ಮಗುವಲ್ಲವೇ? ನಿಯಮಗಳನ್ನು ಎಷ್ಟೆಂದು ಪಾಲಿಸಿಯಾನು? ಕೊನೆಗೊಂದು ದಿನ ಮನೆಗೆ ಹೋಗೋಣವೆಂದು ರಚ್ಚೆ ಹಿಡಿದಾಗ ತನ್ನ ಗಂಟನ್ನು ಹೊತ್ತುಕೊಂಡು ಹೊರನಡೆದೇ ಬಿಡುತ್ತಾನೆ ಗ್ವೀಡೋ. 'ಮನೆಗೆ ಹೋಗಬೇಕು ತಾನೆ? ನಡಿ. ಇಲ್ಲಿ ಯಾರೂ ನಮ್ಮನ್ನು ಬಲವಂತವಾಗಿ ಕೂಡಿ ಹಾಕಿಲ್ಲ. ಈಗಾಗಲೇ ಸಾವಿರ ಅಂಕಗಳ ಹತ್ತಿರ ಬಂದಿದ್ದೀಯ. ನೀನೇ ಮೊದಲ ಸ್ಥಾನದಲ್ಲಿದ್ದೀಯ. ಆದರೂ ಪರವಾಗಿಲ್ಲ. ಬೇರೆ ಯಾರಾದರೂ ಗೆಲ್ಲಲಿ, ಟ್ಯಾಂಕರ್ ತೆಗೆದುಕೊಂಡು ಹೋಗಲಿ. ನಮಗೇನಂತೆ, ನಡಿ ಹೋಗೋಣ' ಎನ್ನುತ್ತಾನೆ. ಬೆರಗಾದ ಮಗು ಸುಮ್ಮನಾಗುತ್ತದೆ.

ಕಡೆಗೊಂದು ರಾತ್ರಿ ಶಿಬಿರದ ಮೇಲೆ ದಾಳಿ ನಡೆಸುತ್ತದೆ ಅಮೆರಿಕದ ಸೇನೆ. ಒಳಗೆಲ್ಲ ಅಲ್ಲೋಲ ಕಲ್ಲೋಲ ಶುರುವಾಗುತ್ತಿದ್ದಂತೆಯೇ ಅಂಚೆ ಡಬ್ಬಿಯಾಕಾರದ ದೊಡ್ಡ ಪೆಟ್ಟಿಗೆಯಲ್ಲಿ ಮಗನನ್ನು ಕೂರಿಸುವ ಗ್ವೀಡೋ, ಗದ್ದಲ ಮುಗಿಯುವ ತನಕ ಯಾವುದೇ ಕಾರಣಕ್ಕೂ ಆಚೆ ಬರಬೇಡ ಎಂದು ತಾಕೀತು ಮಾಡುತ್ತಾನೆ. ಅದೇ ಶಿಬಿರದಲ್ಲಿದ್ದ ಡೋರಾಳನ್ನೊಮ್ಮೆ ನೋಡುವ ತವಕದಲ್ಲಿ ನಾಜಿ ಸೈನಿಕನ ಕೈಗೆ ಸಿಕ್ಕಿಬೀಳುತ್ತಾನೆ. ನಿಯಮ ಮುರಿದ ಅವನನ್ನು ಗುಂಡು ಹೊಡೆದು ಸಾಯಿಸಲು ಕರೆದೊಯ್ಯುತ್ತಿದ್ದಾಗ ಮಗು ಅವಿತಿದ್ದ ಪೆಟ್ಟಿಗೆಯ ಮುಂದಿನಿಂದ ಹಾದು ಹೋಗಬೇಕಾಗುತ್ತದೆ. ಕಿಂಡಿಯಿಂದ ಮಗ ತನ್ನನ್ನು ನೋಡುತ್ತಿರುತ್ತಾನೆ ಎಂದರಿತ ಅವನು ನಗುನಗುತ್ತಾ ಪಥಸಂಚಲನ ಮಾಡಿಕೊಂಡು ಹೋಗುತ್ತಾನಲ್ಲ. ಆ ದೃಶ್ಯವನ್ನು ನೋಡುವಾಗ ನಿಮ್ಮ ಹೃದಯ ಕಲಕದಿದ್ದರೆ ಕೇಳಿ! ನಂತರ ಕೆಲ ಕ್ಷಣಗಳಲ್ಲೇ ಗುಂಡೇಟಿನಿಂದ ಸತ್ತುಹೋಗುತ್ತಾನೆ. ಮರುದಿನ ಬೆಳಿಗ್ಗೆ ಎಲ್ಲ ಸದ್ದೂ ಅಡಗಿದ ಮೇಲೆ ಹೊರಬರುವ ‘ಜೋಶುವಾ’ನ ಮುಂದೆ ದೊಡ್ಡದೊಂದು ಟ್ಯಾಂಕರ್ ಬಂದು ನಿಲ್ಲುತ್ತದೆ! ತನ್ನ ಬಹುಮಾನವನ್ನು ನೋಡಿ ಹಿಗ್ಗುತ್ತಾನೆ ಅವನು. ಅಸಲಿಗೆ, ಅಲ್ಲಿ ಕಾಕತಾಳೀಯವಾಗಿ ಪ್ರತ್ಯಕ್ಷವಾಗುವ ಟ್ಯಾಂಕರ್ ಅಮೆರಿಕದ ಸೇನೆಯದ್ದಾಗಿರುತ್ತದೆ! ಗೆದ್ದ ಖುಷಿಯಲ್ಲಿ ಮಗು ಅಮ್ಮನನ್ನು ಸೇರುವಲ್ಲಿಗೆ ಚಿತ್ರ ಮುಗಿಯುತ್ತದೆ. ವಿಶೇಷವೆಂದರೆ, ಇಡೀ ಚಿತ್ರವನ್ನು ಜೋಶುವಾ ದೊಡ್ಡವನಾದ ಮೇಲೆ ಹೇಳುತ್ತಿರುವ ಕಥೆಯಂತೆ ಚಿತ್ರಿಸಲಾಗಿದೆ. ಕೊನೆಯಲ್ಲಿ ಭಾವುಕನಾಗಿ, ಈ ಬದುಕು ನನ್ನ ತಂದೆ ನನಗೆ ಕೊಟ್ಟ ಉಡುಗೊರೆ ಎನ್ನುತ್ತಾನೆ ಅವನು. ಮತ್ತೊಂದು ವಿಶೇಷವೆಂದರೆ, ಈ ಚಿತ್ರವನ್ನು ನಿರ್ದೇಶಿಸಿ, ಗ್ವೀಡೋನ ಪಾತ್ರದಲ್ಲಿ ಅಭಿನಯಿಸಿದ ರಾಬರ್ಟೊ ಬೆನಿಗ್ನಿಯವರ ತಂದೆ ಮೂರು ವರ್ಷಗಳ ಕಾಲ ಹಿಟ್ಲರನ ಸೆರೆ ಶಿಬಿರದಲ್ಲಿದ್ದರು! ಅವರ ಅನುಭವವೇ ಮಗನಿಗೆ ಈ ಚಿತ್ರವನ್ನು ಮಾಡಲು ಸ್ಫೂರ್ತಿಯಾಗಿದ್ದಂತೆ!

ಈಗ ಹೇಳಿ, ಗ್ವೀಡೋನಂತೆ, ಈ ಬದುಕೇ ಒಂದು ಸುಂದರವಾದ ಉಡುಗೊರೆ ಎಂದು ನಮ್ಮಲ್ಲೆಷ್ಟು ಮಂದಿ ಮನವರಿಕೆ ಮಾಡಿ ಕೊಟ್ಟಿದ್ದೇವೆ ನಮ್ಮ ಮಕ್ಕಳಿಗೆ? ಹಣದಿಂದ ಹುಟ್ಟುವ ಸರಕು ಮಾತ್ರವಲ್ಲ, ಅನುಭವದಿಂದ ದಕ್ಕುವುದೂ ಉಡುಗೊರೆಯೇ ಎಂಬುದನ್ನು ಹೇಳಿದ್ದೇವೆಯೇ? ನಮ್ಮ ಮಕ್ಕಳಿಗೆ ಏನು ಮಾಡಿದರೂ, ಎಷ್ಟು ಮಾಡಿದರೂ ನಮಗೆ ತೃಪ್ತಿಯೇ ಇರುವುದಿಲ್ಲ. ಎಲ್ಲ ತಂದೆ-ತಾಯಿಯರದ್ದೂ ಒಂದೇ ಘೋಷವಾಕ್ಯ. 'ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡುವುದು ಬೇಡ'. ಒಪ್ಪೋಣ. ಕಷ್ಟ ತೋರಿಸುವ ಸಲುವಾಗಿ ಅವರನ್ನು ಜೀತಕ್ಕೆ ಸೇರಿಸುವುದೇನೂ ಬೇಡ, ಆದರೆ ಬದುಕಿನಲ್ಲಿ ಬರಬಹುದಾದ ಕಾರ್ಪಣ್ಯಗಳಿಗೆ ಅವರನ್ನು ತಯಾರು ಮಾಡದಿದ್ದರೆ ಹೇಗೆ? ಅವರು ಕೇಳಿದ್ದನ್ನೆಲ್ಲ ಆ ಕ್ಷಣವೇ ತಂದು ಸುರುವಿಬಿಡುವ ಹುಮ್ಮಸ್ಸಿನಲ್ಲಿ ಅವರ ನಿರೀಕ್ಷೆಯನ್ನು ಯಾವ ಮಟ್ಟಕ್ಕೆ ಬೆಳೆಸುತ್ತೇವೆಂದರೆ, ಅಪ್ಪಿತಪ್ಪಿ ‘ಆಗುವುದಿಲ್ಲ’ ಎಂದರೆ ಅವರು ಸ್ವೀಕರಿಸಲು ಸಿದ್ಧರಿರುವುದಿಲ್ಲ! ನಮ್ಮ ಸಣ್ಣ ಸಣ್ಣ 'ಇಲ್ಲ', 'ಈಗ ಆಗುವುದಿಲ್ಲ’ ಎಂಬಂಥ ಉತ್ತರಗಳು ಅವರಿಗೆ ರೂಢಿಯಾಗದಿದ್ದರೆ ಮುಂದೆ ಬದುಕಿನ ಹಲವು ಮಜಲುಗಳಲ್ಲಿ ಬರಬಹುದಾದ ದೊಡ್ಡ 'ಇಲ್ಲ'ಗಳನ್ನು ಹೇಗೆ ಎದುರಿಸಿಯಾರು? ಹೀಗೆ ಚಿಕ್ಕ-ಪುಟ್ಟದ್ದಕ್ಕೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವಂತಿದ್ದರೆ ನಾವು ಸತ್ತು ಯಾವುದೋ ಕಾಲವಾಗಿರುತ್ತಿತ್ತು ಅಲ್ಲವೇ? ನಮ್ಮಲ್ಲಿ ಬಹುತೇಕರು ಸರಿಯಾದ ಒಂದು ಜೊತೆ ಚಪ್ಪಲಿಯನ್ನು ಕೊಂಡದ್ದು ಯಾವಾಗ? ಒಳ್ಳೆಯ ಸೈಕಲ್ ಅಥವಾ ದ್ವಿಚಕ್ರವಾಹನದ ಮುಖ ನೋಡಿದ್ದು ಯಾವಾಗ? ಹಾಗಾದರೆ ನಮ್ಮಲ್ಲಿ ಆ ಗಟ್ಟಿತನ ಬಂದದ್ದು ಹೇಗೆ? ಯೋಚಿಸಿ ನೋಡಿ. ನಾವು ಮಕ್ಕಳಿಗೆ ಪ್ರೀತಿಯ ಸಿಹಿಯನ್ನೇ ಉಣಿಸಿ ಹೆಚ್ಚಿಸುತ್ತಿರುವುದು ಅವರ ದೇಹದ ತೂಕವನ್ನು ಮಾತ್ರ. ನಮ್ಮ ನೋವುಗಳ ಕಹಿಯನ್ನೇ ಉಣಿಸದಿದ್ದರೆ ಅವರ ಮನಸ್ಸಿನ ತೂಕ ಹೆಚ್ಚುವುದು ಹೇಗೆ?


ಮಕ್ಕಳ ಜೀವನ ಪರ್ಯಂತ ಜೊತೆಗಿದ್ದು ಅವರನ್ನು ಕಾಪಾಡಲಾರೆವು ನಾವು. ಹಾಗಿರುವಾಗ,  ಬದುಕನ್ನು ಎದುರಿಸುವ ರೀತಿಯನ್ನು ಕಲಿಸುವುದು ಅವಶ್ಯವಲ್ಲವೇ? 'ಎಂಥ ಸಂದರ್ಭವೇ ಬರಲಿ, ನಾನು ಜಯಿಸಬಲ್ಲೆ’ ಎಂಬ ಸ್ಥೈರ್ಯ, ಮನೋಬಲಗಳನ್ನು ತುಂಬುವುದಕ್ಕಿಂತ ದೊಡ್ಡ ಉಡುಗೊರೆ ಯಾವುದಿರಲು ಸಾಧ್ಯ? ಗ್ವೀಡೋ ಮಾಡಿದ್ದೂ ಅದನ್ನೇ! 

Saturday, 8 November 2014

ಕರಗುತ್ತಿರುವ ಕನ್ನಡಾಭಿಮಾನಕ್ಕೆ ಐಟಿ ಹೊಣೆಯೇ?

ನಮ್ಮ ಶಾಲೆಯಲ್ಲಿ ನಡೆದ ಘಟನೆ ಇದು. 'ನೀನು ನಿನ್ನ ಅಪ್ಪನ ಎಷ್ಟನೆಯ ಮಗ?', ಈ ಪ್ರಶ್ನೆಯನ್ನು ಹಿಂದಿ ಅಥವಾ ಇಂಗ್ಲೀಷಿನಲ್ಲಿ ಕೇಳಬಲ್ಲಿರಾ ಎಂದು ತರಗತಿಯಲ್ಲಿ ಸವಾಲೆಸೆದರು ನಮ್ಮ ಕನ್ನಡ ಮೇಡಂ. ಓಹೋ, ಅದೇನು ಮಹಾ ಎಂದು ಶುರು ಮಾಡಿದೆವು ನಾವು. ಆದರೆ ಅದು ಅಸಾಧ್ಯ ಎಂದು ಗೊತ್ತಾಗಿದ್ದು ನಂತರವೇ. ತಿರುಗಿಸಿ-ಮುರುಗಿಸಿ, ನಿಮ್ಮಪ್ಪನಿಗೆ ಎಷ್ಟು ಮಕ್ಕಳು ಎಂದು ಕೇಳಿದೆವು. ನೀ ಹಿರಿಯನಾ, ಕಿರಿಯನಾ ಅಥವಾ ಮಧ್ಯದವನಾ ಎಂದೂ ಕೇಳಿದೆವು. ಆದರೆ ಕಲಿತ ಬುದ್ಧಿಯನ್ನೆಲ್ಲ ಖರ್ಚು ಮಾಡಿದರೂ ನಿಖರವಾಗಿ ನೀನು ಎಷ್ಟನೆಯವನು ಎಂಬುದನ್ನು ಮಾತ್ರ ಕೇಳಲಾಗಲೇ ಇಲ್ಲ. ನಮ್ಮ ಮೇಡಂ ಆ ಪ್ರಶ್ನೆ ಕೇಳುವುದಕ್ಕೂ ಒಂದು ಕಾರಣವಿತ್ತು. ಆಗ ನಮ್ಮ ಶಾಲೆಗೆ ಹೆಚ್ಚಾಗಿ ಬರುತ್ತಿದ್ದುದು ಭಾರತೀಯ ವಾಯುಸೇನೆಯ ಅಧಿಕಾರಿಗಳ ಮಕ್ಕಳು. ಅವರದ್ದೋ ಕರ್ಣಾನಂದಕರವಾದ ಹಿಂದಿ ಭಾಷೆ. ಅವರು ಮಾತಿಗೆ ತೊಡಗಿದರೆ ಬೆರಗಿನಿಂದ ಬಾಯಿಬಿಟ್ಟುಕೊಂಡು ಕೇಳುವುದಷ್ಟೇ ನಮ್ಮ ಕೆಲಸ. ಅವರಂತೆಯೇ ಮಾತನಾಡುವ ತವಕ ಬೇರೆ! ಸರಿ, ಅವರನ್ನು ದುಂಬಾಲು ಬಿದ್ದು ಹಿಂದಿ ಕಲಿಯಲು ತೊಡಗಿದೆವು. ಕ್ರಮೇಣ ಯಾವ ಪರಿಯ ವ್ಯಾಮೋಹ ಆವರಿಸಿಕೊಂಡಿತೆಂದರೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುತ್ತಿದ್ದ, ಪ್ರಥಮ, ಮಧ್ಯಮ, ರಾಷ್ಟ್ರಭಾಷಾ ಮುಂತಾದ ಪರೀಕ್ಷೆಗಳಿಗೆಲ್ಲ ನಾವು ಹಾಜರ್! ಒಟ್ಟಿನಲ್ಲಿ, ಅವರೊಡನೆ ಮಾತಾಡಿ ಅವರ ಕೈಲೇ ಸೈ ಎನ್ನಿಸಿಕೊಳ್ಳುವ ಹಟ. ಬೆಳಿಗ್ಗೆ ಹಲ್ಲುಜ್ಜುವಾಗಿನಿಂದ ಶುರುವಾಗುತ್ತಿದ್ದ ಹಿಂದಿ ಜಪ, ರಾತ್ರಿ 'ರಾಮಂಸ್ಕಂದಂ ಹನುಮಂತಂ' ಶ್ಲೋಕದ ನಂತರವೂ ಮುಂದುವರೆಯುತ್ತಿತ್ತು.  ಈ ಭರದಲ್ಲಿ ಕನ್ನಡದ ಕಡೆಗಿನ ಗಮನ ಸೊನ್ನೆಯಾಯಿತು. ಸನ್ನೆ ಸಿಕ್ಕಿತು ನೋಡಿ ನಮ್ಮ ಮೇಡಂಗೆ, ನಮಗೆ ಪಾಠ ಕಲಿಸುವ ಸಲುವಾಗಿ, ಬೇಕೆಂದೇ ಈ ಪ್ರಶ್ನೆ ಕೇಳಿದರು. ನಾವು ಬೆಪ್ಪಾಗಿ ನಿಂತಾಗ ಅವರು ಹೇಳಿದ್ದು ಒಂದೇ ಮಾತು. 'ಎಲ್ಲ ಭಾಷೆಗಳೂ ಸುಂದರವೇ. ಆದರೆ ಕನ್ನಡ ಲಿಪಿಯ ಶ್ರೀಮಂತಿಕೆ, ವ್ಯಾಪ್ತಿ ಹಾಗೂ ಲಾಲಿತ್ಯ ಬೇರೆ ಯಾವ ಭಾಷೆಗೂ ಇಲ್ಲ. ಮೊದಲು ಇದನ್ನು ಪ್ರೀತಿಸಿ, ಆಸ್ವಾದಿಸಿ ನಂತರ ಉಳಿದವುಗಳನ್ನು ಕಲಿಯಿರಿ' ಎಂದು. ಅಷ್ಟೇ, ಚದುರಿ ಹೋದ ಗೋವುಗಳು ಗೊಲ್ಲ ಕರೆದೊಡನೆ ದಾರಿಗೆ ಬರುತ್ತವಲ್ಲ, ಹಾಗೆ ಬಂದೆವು ನಾವೂ ಕನ್ನಡದೆಡೆಗೆ!

ಹಿಂದಿಯ ಓದು ನಂತರವೂ ಮುಂದುವರೆಯಿತು. ಮುನ್ಷಿ ಪ್ರೇಮಚಂದರ ಮನಕಲಕುವ ಕಾದಂಬರಿಗಳನ್ನು ಓದಿದರೂ, ಹರಿವಂಶರಾಯ್ ಬಚ್ಚನ್‍ರ ಕವಿತೆಗಳನ್ನು ಮೆಲುಕುಹಾಕಿದರೂ, ಸಂತ ಕಬೀರರ, 'ದೋಹೆ'ಎಂಬ ರಸವತ್ತಾದ ನೀತಿಪಾಠಗಳನ್ನು ಮನನ ಮಾಡಿಕೊಂಡರೂ ಕನ್ನಡ ನಮ್ಮ ಹೃದಯದ ‘ಆಪ್ತತೆ’ಯ ಕಕ್ಷೆಯಿಂದ ಜಾರಿಹೋಗಲಿಲ್ಲ! ಮುಂದೆ ಸಂದರ್ಭಾನುಸಾರ ಹೊಸ ಭಾಷೆಗಳನ್ನು ಕಲಿತಷ್ಟೂ ಕನ್ನಡವೇ ಆದ್ಯತೆಯಾಗಬೇಕೆಂಬ ಹುಚ್ಚೂ ಬಲಿಯಿತು! ಇಂಥವೇ ಅನುಭವಗಳು ನಿಮ್ಮಲ್ಲಿ ಬಹಳಷ್ಟು ಮಂದಿಗೆ ಆಗಿರಬೇಕು. ಆದಾಗ್ಯೂ ಇಂದು ಯಾವ ಪರಿಸ್ಥಿತಿ ತಂದಿಟ್ಟಕೊಂಡಿದ್ದೇವೆ ನೋಡಿ. ನಾಚಿಕೆಯಾಗಬೇಕು ನಮಗೆ.

ನವೆಂಬರ್ ತಿಂಗಳು ಬಂದರೆ ಮಾತ್ರ ಕನ್ನಡಾಂಬೆ ನೆನಪಾಗುತ್ತಾಳೆ. ಅದರಲ್ಲೂ, ಕರ್ನಾಟಕ ರಕ್ಷಣಾ ವೇದಿಕೆಯವರು ಆಡುವುದನ್ನು ನೋಡಿದರೆ ಸಾಕು, ಅವಳು ಅವರಿಗೆ ಮಾತ್ರ ಹೆತ್ತತಾಯಿ, ನಮಗೆಲ್ಲ ಮಲತಾಯಿಯೇನೋ ಎನಿಸಿಬಿಡುತ್ತದೆ! ಹೇಗೆ ಈ ಉದಾಸೀನದಿಂದ ಹೊರಬರುವುದು? ನಮ್ಮ ಭಾಷೆಯನ್ನು ಪ್ರೀತಿಸುವ ಅಗತ್ಯದ ಅರಿವು ಮೂಡಿಸುವುದು ಹೇಗೆ? ಬೆಂಗಳೂರಿನ ಕೆಲ ಬಡಾವಣೆಗಳಿಗೆ, ರಸ್ತೆಗಳಿಗೆ ಹೋದರೆ ಕರ್ನಾಟಕ ಎಂದು ದೇವರಾಣೆಗೂ ಅನಿಸುವುದಿಲ್ಲ. ಬರೀ ತಮಿಳು, ತೆಲುಗು, ಹಿಂದಿ, ಉರ್ದುಗಳ ದರ್ಬಾರು! ಮಾಲ್‍ಗಳಲ್ಲಿ ಹೋಗಿ ನಿಂತರೆ ಯಾರ ಬಾಯಿಂದಲೂ ಅಪ್ಪಿತಪ್ಪಿಯೂ ಕನ್ನಡದ ನಾಲ್ಕು ಅಕ್ಷರಗಳು ಉದುರುವುದಿಲ್ಲ. ಶಾಲೆ, ಕಾಲೇಜುಗಳಂತೂ ಇಂಗ್ಲೀಷ್‍ಮಯ! ಬೆಂಗಳೂರು ಅಕ್ಷರಶಃ ಕಲಸುಮೇಲೋಗರವಾಗಿದೆ. ಕನ್ನಡಿಗರೆಲ್ಲ ಕಳೆದುಹೋಗುತ್ತಿದ್ದಾರೆ. ಏಕೆ ಹೀಗೆ ಎಂದು ಯಾರನ್ನಾದರೂ ಕೇಳಿ ನೋಡಿ, ಅವರದ್ದು ಒಂದೇ ಉತ್ತರ. 'ಈ ಹಾಳಾದ್ದು ಐಟಿ, ಬಿಟಿ ಬಂದಾಗಿನಿಂದ ಬೆಂಗಳೂರು ಎಕ್ಕುಟ್ಟಿ ಹೋಗಿದೆ. ಮೊದಲು ಚೆನ್ನಾಗಿತ್ತು' ಎಂಬುದು. ಬೆಂಗಳೂರು ಹಾಳಾಗಿದೆಯೆಂದರೆ ಕಾರಣ ಈ ಉದ್ಯಮಗಳು ಮಾತ್ರವೇ? ಇರಲಾರದು.

1985ರಲ್ಲಿ ಅಮೆರಿಕದ 'ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್' ತನ್ನ ಶಾಖೆ ತೆರೆಯಲು ಬೆಂಗಳೂರನ್ನು ಮೊತ್ತಮೊದಲಿಗೆ ಆರಿಸಿಕೊಂಡಿತು ನೋಡಿ, ಆಗಿನಿಂದಲೇ ಬೆಂಗಳೂರು ಇಂಥ ಒಂದು ಬದಲಾವಣೆಗೆ ತಯಾರಾಗಬೇಕಿತ್ತು. ಹಾಗಾಗಲಿಲ್ಲ. ನಂತರ ಒಂದಾದಮೇಲೊಂದರಂತೆ ಐಟಿ ಕಂಪೆನಿಗಳು ಹುಟ್ಟಿಕೊಂಡವು. ಊಹೂಂ, ನಮ್ಮ ವ್ಯವಸ್ಥೆ, ಮಾನಸಿಕತೆ ಒಂದಿಂಚೂ ಅಲುಗಾಡಲಿಲ್ಲ. ವಿಪ್ರೋ, ಇನ್ಫೋಸಿಸ್‍ನಂಥ ದಿಗ್ಗಜರಿಗೆ ಮಣೆ ಹಾಕುವ ಹೆಮ್ಮೆಯೂ ಬೆಂಗಳೂರಿನದಾಯಿತು. ಸಾವಿರಾರು ಕೆಲಸಗಳು ಹುಟ್ಟಿಕೊಂಡಂತೆಯೇ ವಲಸಿಗರೂ ಬರತೊಡಗಿದರು. ಮೊದಲು ನೆರೆಯ ತಮಿಳುನಾಡು ಹಾಗೂ ಆಂಧ್ರವರೇ ಹೆಚ್ಚಿದ್ದರೂ ಈಗ ಬಹುತೇಕ ಎಲ್ಲ ರಾಜ್ಯಗಳವರೂ ಇದ್ದಾರೆ. ಆಗೆಲ್ಲ ಬರೀ ಕೆಲಸಕ್ಕೆಂದು ವಲಸೆ ಬರುತ್ತಿದ್ದರಲ್ಲವೇ? ಈಗ ತಾಂತ್ರಿಕ ಶಿಕ್ಷಣ ಪಡೆಯುವ ಹಂತದಲ್ಲೇ ಲಗ್ಗೆ ಹಾಕುತ್ತಿದ್ದಾರೆ. ಕಾಮೆಡ್-ಕೆ ಎಂಬ ಅಗ್ನಿಪರೀಕ್ಷೆಯನ್ನು ದಾಟಿ, ಇಲ್ಲಿಯ ಕಾಲೇಜೊಂದರಲ್ಲಿ ಸೀಟು ಗಿಟ್ಟಿಸಿಕೊಂಡು ಬಿಟ್ಟರೆ ಮುಗಿಯಿತು, ಬೆಂಗಳೂರು ಕೈಗೆ ಹತ್ತಿದಂತೆಯೇ. ಮುಂದೆ ಕೆಲಸವೂ ಇಲ್ಲೇ ಆಗಿ ಅಪಾರ್ಟ್‍ಮೆಂಟ್‍ವೊಂದನ್ನು ಕೊಂಡರೆ ಬದುಕು ಸಾರ್ಥಕವಾದಂತೆ! ಬೆಂಗಳೂರೇ ಏಕೆ? ಏಕೆಂದರೆ ಇದು ಭಾರತದ ಸಿಲಿಕಾನ್ ವ್ಯಾಲಿ. ಹೇರಳ ಅವಕಾಶಗಳ ಆಗರ. ಎರಡು ಸಾವಿರಕ್ಕೂ ಹೆಚ್ಚಿನ ಐಟಿ, ಬಿಟಿ ಕಂಪೆನಿಗಳ ತವರೂರು. ನೆರೆಯಲ್ಲಿ ಚೆನ್ನೈ ಹಾಗೂ ಹೈದರಾಬಾದ್‍ಗಳಿದ್ದರೂ ವಲಸಿಗರ ಪ್ರಾಶಸ್ತ್ಯ ಇದಕ್ಕೇ ಏಕೆ? ಕಾರಣ, ವೈಪರೀತ್ಯವಿಲ್ಲದ ಇಲ್ಲಿಯ ಹವಾಗುಣ ಹಾಗೂ ಎಲ್ಲರನ್ನೂ ಸಹಿಸಲು ತಯಾರಿರುವ ಸ್ನೇಹಪರ ಜನ!

ಇಂದು ಲಕ್ಷಗಟ್ಟಳೆ ಸಂಖ್ಯೆಯಲ್ಲಿ ವಾಸವಿರುವ ವಲಸಿಗರನ್ನು, ಕನ್ನಡಾಂಬೆ ಸೊಲ್ಲೆತ್ತದೆ ಸಹಿಸುತ್ತಿದ್ದಾಳೆ. ನಮ್ಮದಲ್ಲದ ಅಪಾರ್ಟ್‍ಮೆಂಟ್ ಸಂಸೃತಿಗೆ ನಾವು ವಿಧಿಯಿಲ್ಲದೇ ಮೊರೆಹೋಗುತ್ತಿರುವುದನ್ನು ನೋಡುತ್ತಿದ್ದಾಳೆ. ನಾವು ಕನ್ನಡದ ಬೆಲೆಯನ್ನು ಕಳೆಯುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದ್ದಾಳೆ. ಅವಳೇನು ಮಾಡಿಯಾಳು, ನಾವು ಅಭಿಮಾನಹೀನರಾಗಿರುವಾಗ? ಕನ್ನಡ ಡಿಂಡಿಮವನ್ನು ಬಾರಿಸುವ ಬದಲು ಕನ್ನಡವನ್ನೇ ಬಾರಿಸುತ್ತಿದ್ದೇವೆ ಮುಲಾಜಿಲ್ಲದೆ! ವ್ಯವಹಾರಕ್ಕೆ ಬೇಕಾದ ಇಂಗ್ಲಿಷನ್ನು ಎಲ್ಲಿಡಬೇಕೋ ಅಲ್ಲಿಡದೆ ಬದುಕಿನ ತುಂಬಾ ಹರವಿಕೊಂಡಿದ್ದೇವೆ. ಮಕ್ಕಳ ಮೇಲೂ ಹೇರುತ್ತಿದ್ದೇವೆ. ಅವರಿಗೆ ಕನ್ನಡ ಸ್ಪಷ್ಟವಾಗಿ ಬರದಿದ್ದರೂ ಪರವಾಗಿಲ್ಲ, ನಿರರ್ಗಳವಾದ ಇಂಗ್ಲೀಷ್ ಕಡ್ದಾಯವಾಗಿ ಬರಲೇಬೇಕು! ನಾವು ಕರ್ನಾಟಕಲ್ಲಿರುವ ಅನ್ಯಭಾಷಿಗರೊಂದಿಗೆ ಅವರ ಭಾಷೆಯಲ್ಲೇ ಮಾತನಾಡಬೇಕು. ನೀವೇ ನೋಡಿ, ಕಛೇರಿಗಳಲ್ಲಿ ನಾಲ್ಕು ಜನ ತಮಿಳರು ಒಂದೆಡೆ ಸೇರಿದಾಗ, ಅವರ ಬಾಯಲ್ಲಿ ತಮಿಳು ಬಿಟ್ಟು ಬೇರೆ ಭಾಷೆ ಬಂದರೆ ತಮಿಳಮ್ಮನ ಮೇಲಾಣೆ! ನಮ್ಮದು ಮಾತ್ರ ಹಾಗಲ್ಲ. ನಾಲ್ಕು ಜನ ಕನ್ನಡಿಗರು ಸೇರಿದರೂ ಸಂಭಾಷಿಸಲು ಇಂಗ್ಲೀಷೇ ಬೇಕು. ಕನ್ನಡ ಮಾತನಾಡಲು ಅದೇನೋ ಕೀಳರಿಮೆ. ಒಣ ಜಂಭ. ನಾವೇ ಮಾತನಾಡದಿದ್ದ ಮೇಲೆ ಹೊರಗಿನವರಿಗೆ ಕಲಿಸುವುದು ಹೇಗೆ? ಕನ್ನಡ ಬರುತ್ತದಾ ಎಂದು ಕೇಳಿದರೆ 'ಕನ್ನಡ್ ಗೋತಿಲ್ಲಾ' ಎನ್ನುತ್ತಾರೆ. ಕಲಿಸಲು ಮುಂದಾಗುತ್ತೇವೆನ್ನಿ, ಅವರೇನನ್ನುತ್ತಾರೆ ಗೊತ್ತೇ? 'ಭಾರತೀಯರಿಗೆ ಯಾವ ರಾಜ್ಯದಲ್ಲಿ ಹೇಗೆ ಬೇಕಾದರೂ ಬದುಕುವ ಮೂಲಭೂತ ಹಕ್ಕಿದೆ, ನೀವು ಬಲವಂತಪಡಿಸುವ ಹಾಗಿಲ್ಲ. ನಾವು ಕನ್ನಡ ಕಲಿಯಬೇಕಾಗಿಯೇ ಇಲ್ಲ' ಎನ್ನುತ್ತಾರೆ! ಇದೇ ಜನ ಪಕ್ಕದ ತಮಿಳುನಾಡಿಗೆ ಹೋಗುತ್ತಾರಲ್ಲ, ಆಗ ಮೈಮನಸ್ಸಿನ ಎಲ್ಲ ಮೂಲೆಗಳ ಭೂತವನ್ನೂ ಬಿಡಿಸುತ್ತಾರೆ ಅಮ್ಮನ ಅಭಿಮಾನಿಗಳು! ಉತ್ತರಭಾರತದ ಹೋಟೆಲುಗಳು ಸಿಗದೆ ಸರವಣ ಭವನದ ಅನ್ನವನ್ನು ಬಲವಂತವಾಗಿ ಗಂಟಲಲ್ಲಿ ತುರುಕಿಕೊಳ್ಳುಬೇಕಾಗಿ ಬರುತ್ತದಲ್ಲ, ಆಗ ಅರಿವಾಗುತ್ತದೆ ಬೆಂಗಳೂರಿಗರ ಹೃದಯ ವೈಶಾಲ್ಯ!

ಉತ್ರ್ಪೇಕ್ಷೆಯಲ್ಲ, ಅಲ್ಲಿಯ ಜನರ ಒರಟುತನಕ್ಕೆ ಬಲಿಯಾಗಿ ಕಣ್ಣಲ್ಲಿ ನೀರುಹಾಕಿಕೊಂಡಿರುವ ಹಲವರ ಉದಾಹರಣೆಗಳನ್ನು ನಾವು ನೋಡಿದ್ದೇವೆ. ನಮಗೆ ಆ ಮಟ್ಟದ ದುರಭಿಮಾನ ಖಂಡಿತ ಸಲ್ಲ, ಆದರೆ ನಮ್ಮ ಭಾಷೆಯ ಬಗ್ಗೆ ಸ್ವೀಕೃತಿಯ ಮನೋಭಾವವನ್ನು ಬೆಳೆಸಬೇಡವೇ? ದೇಶದೆಲ್ಲೆಡೆಯಿರುವ ಮುಸ್ಲಿಮರು ಆಯಾ ರಾಜ್ಯಗಳ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಎಷ್ಟರಮಟ್ಟಿಗೆಂದರೆ, ಅವರ ಮಾತಿನ ಶೈಲಿಯಿಂದ ಧರ್ಮದ ಗುರುತು ಹಿಡಿಯಲು ಆಗುವುದೇ ಇಲ್ಲ. ಕರ್ನಾಟಕದ ಮುಸ್ಲಿಮರಿಗೆ ಮಾತ್ರ ಕನ್ನಡದ ಮೇಲೆ ಮುನಿಸು. ಉರ್ದುವೇ ಅವರಿಗೆ ಸೊಗಸು! ಮತ್ತೊಂದು ದೊಡ್ಡ ಕೊರತೆ ಒಗ್ಗಟ್ಟಿನದು. ಒಂದು ಕಛೇರಿಯಲ್ಲಿ ಓರ್ವ ಮಲೆಯಾಳಿ ಆಯ್ಕೆಯಾದ ಎಂದಿಟ್ಟುಕೊಳ್ಳಿ, ತನ್ನವರನ್ನೆಲ್ಲ ಅಲ್ಲಿಗೆ ಶತಾಯ-ಗತಾಯ ತಂದು ಸೇರಿಸುತ್ತಾನೆ. ಆಯಕಟ್ಟಿನ ಜಾಗ ಹಿಡಿದರಂತೂ ಮುಗಿಯಿತು. ತನ್ನ ಕೈಕೆಳಗೆ ತನ್ನವರನ್ನೇ ಪೇರಿಸುತ್ತಾನೆ. ನಾವು ಅದರಲ್ಲಿಯೂ ಎಡವುತ್ತೇವೆ. ಬಯಲುಸೀಮೆ, ಕರಾವಳಿ ಎಂದು ಮುಖ ನೋಡಿ ಮಣೆ ಹಾಕುವ ನಮ್ಮ ತಾರತಮ್ಯ ಮುಗಿಯುವುದೇ ಇಲ್ಲ. ನಾವು ಮನಸ್ಸು ಮಾಡುವ ಹೊತ್ತಿಗೆ ಮತ್ತ್ಯಾರೋ ತನ್ನ ಭಾಷೆಯವನಿಗೆ ಕೆಲಸ ಕೊಡಿಸಿರುತ್ತಾನೆ! ಇನ್ನೊಂದು ವಿಷಯವೆಂದರೆ ಈ ಅನ್ಯಭಾಷಿಗರು ತಮ್ಮ ಗುಂಪಿನಲ್ಲಿ ಯಾರನ್ನೂ ಬಿಟ್ಟುಕೊಡುವುದಿಲ್ಲ. ಒಬ್ಬನಲ್ಲಿ ಏನಾದರೂ ನ್ಯೂನತೆಯಿತ್ತೆಂದಿಟ್ಟುಕೊಳ್ಳಿ, ಉಳಿದವರು ಹೆಗಲಿಗೆ ನಿಲ್ಲುತ್ತಾರೆ. ಆತ್ಮವಿಶ್ವಾಸದ ಪ್ರತಿರೂಪವಾದ ಉತ್ತರಭಾರತದವರಂತೂ ಒಂದು ಕೈ ಹೆಚ್ಚೇ. 'ಗಣಪತಿಯನ್ನು ಮಾಡುತ್ತೀಯಾ' ಎಂದು ಕೇಳಿದರೆ, 'ಓಹೋ ಧಾರಾಳವಾಗಿ. ಜೊತೆಗೆ ಅವರಪ್ಪನನ್ನೂ ಮಾಡುತ್ತೇನೆ ಎಂಬಂಥ ನಿಲುವು'! ಇಂಥವರೊಡನೆ ಸೆಣೆಸಾಡುವಾಗ ಎಷ್ಟೋ ಸಲ ನಮ್ಮವರ ಮನೋಬಲ ಕುಗ್ಗುವುದೂ ಇದೆ.

ಹಾಗೆಂದು ಐಟಿ ಉದ್ಯಮ ಬರೀ ವಲಸಿಗರದೇ ಸೊತ್ತಾಗಿಲ್ಲ. ನಮ್ಮ ಮಧ್ಯಮ ವರ್ಗದ ಕನ್ನಡಿಗರು ಇಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುವುದರಲ್ಲಿ ಇದರ ಪಾಲೇ ಹೆಚ್ಚಿನದು. ಮೀಸಲಾತಿಯ ಕಾಟವಿಲ್ಲದೆ ಬುದ್ಧಿವಂತಿಕೆಯೇ ಆಧಾರವಾಗಿರುವ ಇದರಿಂದ ಎಷ್ಟು ಹುಡುಗರು ತಮ್ಮ ಅಪ್ಪಂದಿರ ಅಡುಗೆ ಕೆಲಸ, ಲೆಕ್ಕ ಬರೆವ ಕೆಲಸಗಳನ್ನು ಬಿಡಿಸಿಲ್ಲ? ಎಷ್ಟು ಅಮ್ಮಂದಿರು ಹೊಲಿಗೆ ಯಂತ್ರಗಳನ್ನು ಪಕ್ಕಕ್ಕಿಟ್ಟು ಸಂತಸಪಟ್ಟಿಲ್ಲ? ದೇಶ ವಿದೇಶಗಳನ್ನು ಸುತ್ತಿ ಬರುವ, ಅಲ್ಲೇ ನೆಲೆಸುವ ಎಷ್ಟು ಕನಸುಗಳು ಸಾಕಾರಗೊಂಡಿಲ್ಲ? ಈ ಉದ್ಯಮದಿಂದ ಪರೋಕ್ಷವಾಗಿ ಎಷ್ಟು ಕೆಲಸಗಳು ಹುಟ್ಟಿಕೊಂಡಿಲ್ಲ? ನಮ್ಮ ಬೆಂಗಳೂರು, ಐಟಿ ಉದ್ಯಮದಲ್ಲಿ ವಿಶ್ವದ ಕಣ್ಮಣಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಅದರಿಂದಾಗುವ ಆನುಕೂಲಗಳು ಮಾತ್ರ ಬೇಕು, ಅನಾನುಕೂಲಗಳನ್ನು ಸಂಭಾಳಿಸಲಾರೆವೆಂಬುದು ಹೇಡಿತನವಲ್ಲವೆ? ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಕಾಳಜಿ ನಮ್ಮೆಲ್ಲರಿಗಿರಬೇಕು. ಲಿಪಿಗಳ ರಾಣಿ ಎಂದು ಆಚಾರ್ಯ ವಿನೋಭಾ ಭಾವೆಯವರಿಂದ ಕರೆಸಿಕೊಂಡಿದ್ದಾಳೆ ನಮ್ಮ ಕನ್ನಡಾಂಬೆ. ದೇವನಾಗರಿ ಲಿಪಿಯಲ್ಲಿ ಬರೆವ ಹಿಂದಿ, ರೋಮನ್ ಲಿಪಿಯಲ್ಲಿ ಬರೆವ ಇಂಗ್ಲೀಷುಗಳು ತನ್ನದೇ ಲಿಪಿ ಹೊಂದಿರುವ ಕನ್ನಡಕ್ಕೆ ಯಾವ ಹೋಲಿಕೆ? ಈಗ್ಗೆ ನೂರು ವರ್ಷಗಳ ಹಿಂದೆಯೇ ಕನ್ನಡದ ಶಬ್ದಕೋಶವನ್ನು ರಚಿಸಿದ್ದ ಜರ್ಮನಿಯ ಫರ್ಡಿನೆಂಡ್ ಕಿಟಲ್. ಆ ಪರದೇಸಿಗಿದ್ದ ಕನ್ನಡ ಪ್ರೇಮಕ್ಕಿಂತ ನಮ್ಮದು ಕಡೆಯೇ?
ಬಳಕೆಯಲ್ಲಿಡದೆ ಬಿಟ್ಟರೆ ಹಳಸುವುದು ಸಂಬಂಧ ಹಾಗೂ ಭಾಷೆಗಳು ಮಾತ್ರವಂತೆ. ಸಂಬಂಧಗಳಿಗೇನೋ ರಕ್ತದ ಹಂಗಿದೆ. ಹೇಗಾದರೂ ಬೆಸೆದುಕೊಳ್ಳುತ್ತವೆ. ಭಾಷೆ ಉಳಿಯುವ ಬಗೆ?

ಎದ್ದೇಳಿ ಸಿದ್ಧರಾಮಯ್ಯನವರೇ, ನಮ್ಮ ಮಾನ, ಪ್ರಾಣಗಳ 'ರಕ್ಷಣೆ ಭಾಗ್ಯ' ಕರುಣಿಸಿ!


ನಿಮಗೆ ಹೀಗೊಂದು ಪತ್ರ ಬರೆಯಲೇಬೇಕಾಗಿದೆ. ನಮ್ಮ ತಲ್ಲಣಗಳನ್ನು ವಿವರಿಸಿ ಬಹಳಷ್ಟು ಪ್ರಶ್ನೆಗಳನ್ನು ಕೇಳಲೇಬೇಕಾಗಿದೆ. ಗಮನವಿಟ್ಟು ಕೇಳಿ ಸಿದ್ಧರಾಮಯ್ಯನವರೇ, ನೀವು ದಯಪಾಲಿಸಿರುವ ಶಾದಿ ಭಾಗ್ಯ, ಅನ್ನ ಭಾಗ್ಯ ಹಾಗೂ ಕ್ಷೀರ ಭಾಗ್ಯಗಳು ನಮಗೆ ಅನ್ವಯಿಸುವುದಿಲ್ಲ. ಏಕೆಂದರೆ ನಾವು ನಿಮ್ಮ ನೆಚ್ಚಿನ ಹಿಂದುಳಿದ ವರ್ಗದವರಲ್ಲ. ನಿಮಗೆ ಬಹಳ ಬೇಕಾಗಿರುವ ಅಲ್ಪಸಂಖ್ಯಾತರೂ ಅಲ್ಲ. ಯಾವುದೇ ಮೀಸಲಾತಿಯಿಲ್ಲದ, ಬಹುಸಂಖ್ಯಾತ ವರ್ಗದ ಸಾಮಾನ್ಯ ಹೆಣ್ಣುಮಕ್ಕಳು ನಾವು. ನಮ್ಮ ಮನೆಗಳಲ್ಲೂ ಪುಟ್ಟ ಕಂದಮ್ಮಗಳಿದ್ದಾರೆ. ಶಾಲೆ, ಕಾಲೇಜಿಗೆ ಹೋಗುವ ಬಾಲೆಯರಿದ್ದಾರೆ. ನಿಮ್ಮ ನೆಚ್ಚಿನ ಇತರೆ ಜಾತಿಯ, ಧರ್ಮದ ಹೆಣ್ಣುಮಕ್ಕಳಿಗಿರುವಂತೆ ನಮಗೂ ಮಾನ, ಪ್ರಾಣಗಳಿವೆ. ಅವುಗಳಿಗೆ ಕುತ್ತು ಬಂದಾಗ, ಜಾತಿ-ಧರ್ಮಗಳ ಮುಖ ನೋಡದೆ ನಮ್ಮನ್ನು ರಕ್ಷಿಸುತ್ತೀರ ಎಂದು ಆಶಿಸುವುದು ತಪ್ಪೇ? ನಮಗೆ ಅನ್ಯಾಯವಾದ ಪಕ್ಷದಲ್ಲಿ, ನ್ಯಾಯ ಕೊಡಿಸುತ್ತೀರೆಂದು ಅಪೇಕ್ಷಿಸುವುದು ತಪ್ಪೇ? ತಪ್ಪು ಎನ್ನುವುದಾದರೆ ದಯಮಾಡಿ ಹೇಳಿಬಿಡಿ. ಏಕೆಂದರೆ, ನಂದಿತಾ ಪೂಜಾರಿಯ ಸಾವಿನ ವಿಷಯದಲ್ಲಿ ನಿಮ್ಮ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನಮ್ಮಲ್ಲಿ ಹಲವು ಅನುಮಾನಗಳನ್ನು ಹುಟ್ಟಿಸುತ್ತಿದೆ.

ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ನಂದಿತಾಳನ್ನು ತೀರ್ಥಹಳ್ಳಿಯ ತುಂಗಾ ಕಾಲೇಜಿನ ಪಕ್ಕದಲ್ಲಿರುವ ಆನಂದಗಿರಿ ಗುಡ್ಡಕ್ಕೆ ಎಳೆದೊಯ್ದು ಕಿರುಕುಳ ನೀಡಿತ್ತು ಮುಸ್ಲಿಮ್ ಹುಡುಗರ ಗುಂಪು. ಘಟನೆ ಅಕ್ಟೋಬರ್ 29ರಂದೇ ನಡೆದಿದ್ದರೂ ಆರೋಪಿಗಳನ್ನು ಇನ್ನೂ ಏಕೆ ಬಂಧಿಸಿಲ್ಲ? ಅವರು ಕುಡಿಸಿದ್ದ ವಿಷಕ್ಕೋ, ಮತ್ತು ಬರಿಸುವ ಔಷಧಿಗೋ ಬಲಿಯಾಗಿ ಪ್ರಾಣ ಬಿಟ್ಟಿತಲ್ಲ ಆ ಮಗು, ಸಾಯುವ ಮುನ್ನ ಎಲ್ಲರ ವಿವರವನ್ನೂ ಹೇಳಿತ್ತು. ಅದನ್ನು ಏಕೆ ಪರಿಗಣಿಸಿಲ್ಲ? ಅವಳ ತಂದೆ-ತಾಯಿ ಕೊಟ್ಟ ದೂರಿಗೆ ಏಕೆ ಬೆಲೆಯಿಲ್ಲ? ಆರೋಪಿಗಳಲ್ಲಿ ಒಬ್ಬನಾದ ಇಮ್ರಾನ್‍ನ ಭಾವಚಿತ್ರ ನಮಗೇ ಸಿಕ್ಕಿದೆ, ನಿಮ್ಮ ಪೋಲೀಸರಿಗೆ ಮಾತ್ರ ಅವರನ್ನು ಪತ್ತೆ ಹಚ್ಚುವುದು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವು ನಂಬಬೇಕೇ? ಮುಸ್ಲಿಮರೆಂದ ಮಾತ್ರಕ್ಕೆ ಅವರ ಎಲ್ಲ ದುಷ್ಕೃತ್ಯಗಳನ್ನೂ ಮನ್ನಿಸುವ ನಿಮ್ಮದೆಂಥ ಪಕ್ಷಪಾತಿ ಸರ್ಕಾರ ಮುಖ್ಯಮಂತ್ರಿಗಳೇ? ಅವರ ಎಲ್ಲ ಅಪರಾಧಗಳನ್ನೂ ವೋಟ್‍ಬ್ಯಾಂಕ್ ರಾಜಕಾರಣದ ತಕ್ಕಡಿಯಲ್ಲಿಟ್ಟು ಏಕೆ ಅಳೆಯುತ್ತೀರಿ? ಅಲ್ಪಸಂಖ್ಯಾತರ ಓಲೈಕೆಯ ನಿಮ್ಮ ಚಟಕ್ಕೆ ನಮ್ಮ ಹೆಣ್ಣುಮಕ್ಕಳನ್ನೇಕೆ ಬಲಿಕೊಡುತ್ತೀರಿ? ನಿಮ್ಮ ಈ ಧೋರಣೆಯಿಂದಾಗಿ ಆ ಹೆಣ್ಣು ಮಗುವಿನ ಚಾರಿತ್ರ್ಯದ ಬಗ್ಗೆ ಇಲ್ಲದ ಕಥೆಗಳು ಹುಟ್ಟಿಕೊಳ್ಳುತ್ತಿವೆ. ಅವಳ ಶಾಲೆಯ ಮೇಷ್ಟರು ಹೇಳುವ ಸತ್ಯವನ್ನು ಕೇಳಿ. ಎಂಟನೆಯ ತರಗತಿಯವಳಾದರೂ ಅವಳ ಪ್ರೌಢಿಮೆ ಐದನೆಯ ತರಗತಿಯ ಮಗುವಿನಷ್ಟೇ ಎನ್ನುತ್ತಾರೆ ಅವರು. ಭಾವಚಿತ್ರದಲ್ಲಿನ ಅವಳ ಮುಗ್ಧತೆ ಮುಖಕ್ಕೆ ರಾಚುವುದಿಲ್ಲವೇ?

ಅದಿರಲಿ, ಅವಳು ಸತ್ತ ಎರಡು ದಿನಗಳ ನಂತರ ಡೆತ್ ನೋಟ್ ಎಲ್ಲಿಂದ ಹುಟ್ಟಿಕೊಂಡಿತು? ಅಪ್ಪ-ಅಮ್ಮಂದಿರಿಗೆ ಬರೆಯುವ ಕೊನೆಯ ಪತ್ರದಲ್ಲಿ 'ನನ್ನ ಹೆಸರು ನಂದಿತ' ಎಂದು ಯಾರಾದರೂ ಹೆಸರು ಕುಲ ಗೋತ್ರಗಳ ಪರಿಚಯ ಮಾಡಿಕೊಳ್ಳುತ್ತಾರೆಯೇ? ಅದು ಅವಳ ಕೈಬರಹವೇ ಅಲ್ಲ ಎಂದು ಅಲವತ್ತುಕೊಳ್ಳುತ್ತಿರುವ ಅವಳ ಶಾಲೆಯ ಮಾಸ್ತರರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನಿಮ್ಮ ತನಿಖಾಧಿಕಾರಿಗಳು ಸಿದ್ಧರೇ? ಇಲ್ಲಿ ಇಷ್ಟೆಲ್ಲ ನಡೆದಾಗಲೂ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರರು ಇತ್ತ ತಲೆಯನ್ನೂ ಹಾಕಲಿಲ್ಲ. ನಂದಿತಾಳ ತಂದೆ-ತಾಯಿಯರನ್ನು ಭೇಟಿಯಾಗಿ ನಾಲ್ಕು ಸಾಂತ್ವನದ ಮಾತುಗಳನ್ನಾಡಲಿಲ್ಲ. ಅವರು ಬಂದಿದ್ದು ನಂದಿತಾಳ ಹೆಣವನ್ನು ನೋಡಲು ಮಾತ್ರ. ಘಂಟೆಗೊಮ್ಮೆ ಇಂಟೆಲಿಜೆನ್ಸ್ ವರದಿ ಬರುತ್ತಿತ್ತಲ್ಲ, ಅದನ್ನಾಧರಿಸಿ ಸರಿಯಾದ ಸಮಯಕ್ಕೆ ಬಂದು ಹೆಣ ನೋಡಿಕೊಂಡು ಹೋಗಿ ದೊಡ್ದ ಉಪಕಾರ ಮಾಡಿದರು! ಪರಿಚಯದವರು ಕಾರಣ ಕೇಳಿದ್ದಕ್ಕೆ, ‘ನಾನು ಮೊದಲೇ ಬಂದಿದ್ದರೆ ಅವಳು ಬದುಕಿ ಬರುತ್ತಿದ್ದಳೇ?’ ಎಂದರಂತೆ! ಹಾಗಾದರೆ ಅವರು ಹೆಣ ನೋಡಲು ಬರುವ ಅಗತ್ಯವಾದರೂ ಏನಿತ್ತು? ಆಮೇಲಾದರೂ ಹೆಣ ಎದ್ದು ಕುಳಿತಿತೇ ಅಥವಾ ಅವರೊಡನೆ ಮಾತನಾಡಿತೇ? ಏಕಿಂಥ ಮನಸ್ಥಿತಿ ನಿಮ್ಮ ಸಚಿವರದ್ದು? ಜಾತಿ ರಾಜಕಾರಣ ಎಂದು ಉಳಿದವರನ್ನು ದೂರುವ ಅವರು ಮಾನವೀಯ ಅಂತಃಕರಣವನ್ನೂ ಮರೆತರೇಕೆ? ರಾಜ್ಯೋತ್ಸವದ ನಿಮಿತ್ತ ನಡೆವ ಧ್ವಜಾರೋಹಣ ಹಾಗೂ ಇತರೆ ಕಾರ್ಯಕ್ರಮಗಳು ಓರ್ವ ಅಮಾಯಕಳ ಸಾವಿಗಿಂತ ಹೆಚ್ಚೇ?

ಇಷ್ಟೆಲ್ಲಾ ಅವಾಂತರಗಳ ನಡುವೆಯೂ ಜಗ್ಗದೆ ನಿಂತಿದ್ದವರು ಶಿವಮೊಗ್ಗದ ಎಸ್‍ಪಿ ಕೌಶಲೇಂದ್ರ ಕುಮಾರ್. ನಿಷ್ಥಾವಂತ ಅಧಿಕಾರಿಯಾದ ಅವರಿಗೆ ಪ್ರಕರಣವನ್ನು ಭೇಧಿಸುವ ಸಂಪೂರ್ಣ ಸ್ವ್ಯಾತಂತ್ರ್ಯವನ್ನು ನೀವೇಕೆ ನೀಡಲಿಲ್ಲ? ಅವರ ಜೊತೆ ಸೇರಿ ಕಾರ್ಯನಿರ್ವಹಿಸಲು ಹೆಚ್ಚುವರಿಯಾಗಿ ಹಾವೇರಿ ಜಿಲ್ಲೆಯ ಎಸ್‍ಪಿಯವರನ್ನು ಬೇಕೆಂದೇ ನೇಮಿಸಿದ್ದು ಏಕೆ? ಸ್ಥಳೀಯ ಮುಸ್ಲಿಮರ ನೇತೃತ್ವದಲ್ಲಿರುವ ನ್ಯಾಷನಲ್ ಎಂಟರ್‍ಪ್ರೈಸಸ್‍, ತನ್ನ ಧರ್ಮದವರು ಎಸಗುವ ಅಪರಾಧಗಳಿಗೆ ಕುಮ್ಮಕ್ಕು ಕೊಡುತ್ತದೆ ಎಂಬ ಆಪಾದನೆ ಇದೆಯಲ್ಲ, ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿಲ್ಲವೇಕೆ? ಒಟ್ಟಾರೆ ಗೋಜಲಾಗಿರುವ ಈ ಸೂಕ್ಷ್ಮ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವ ಜರೂರತ್ತೇನಿತ್ತು? ಪಾರದರ್ಶಕತೆಯ ಸಲುವಾಗಿ, ನಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳುವ ಸಲುವಾಗಿ ಸಿಬಿಐಗೆ ಒಪ್ಪಿಸಬಹುದಿತ್ತಲ್ಲವೇ?

ಮತ್ತೊಂದು ವಿಷಯ ಗಮನಿಸಿದಿರಾ? ನೀವೆಲ್ಲ ಕೈಬಿಟ್ಟರೂ ಅಲ್ಲಿಯ ಜನ ನಂದಿತಾಳ ಕುಟುಂಬದ ಕೈ ಬಿಡಲಿಲ್ಲ. ಶಾಂತಿಯುತವಾಗಿ ಮೆರವಣಿಗೆ ನಡೆಸಿದರು. ಅಗತ್ಯವೆನಿಸಿದಾಗ ರಸ್ತೆಗಿಳಿದು ಪ್ರತಿಭಟಿಸಿದರು. ಅವರನ್ನೇಕೆ ಎಳೆದಾಡಿ ಹೊಡೆಸಿಬಿಟ್ಟಿರಿ ಮೈಮೇಲೆ ಬಾಸುಂಡೆ ಬರುವ ಹಾಗೆ? 47 ಜನರನ್ನು ಬಳ್ಳಾರಿಯ ಜೈಲಿನಲ್ಲಿ ಕೂಡಿಹಾಕಿದ್ದೀರಲ್ಲ, ನಿಜವಾಗಿಯೂ ಜೈಲಿನಲ್ಲಿರಬೇಕಾಗಿದ್ದವರು ಎಲ್ಲಿದ್ದಾರೆ ಎಂಬುದು ನಿಮಗೆ ಬೇಡವೇ? ಅಥವಾ ಇಂಥ ಘಟನೆಗಳಲ್ಲಿ ಒಬ್ಬರು ಮತ್ತೊಬ್ಬರ ಬೆಂಬಲಕ್ಕೆ ನಿಲ್ಲಬಾರದು ಎಂಬುದು ನಿಮ್ಮ ದುರಾಲೋಚನೆಯೇ? ಹೇಗೆ ನೋಡಿದರೂ ನೀವು ಮಾಡುತ್ತಿರುವುದಕ್ಕೆ ಯಾವ ಸಮರ್ಥನೆಯೂ ದೊರಕುತ್ತಿಲ್ಲ. ಫೇಸ್‍ಬುಕ್ಕಿನಲ್ಲಿ ಕಾಮೆಂಟ್ ಹಾಕಿದ ಮಾತ್ರಕ್ಕೆ ವಿ.ಆರ್ ಭಟ್‍ರನ್ನು ಜೈಲಿಗೆ ತಳ್ಳಿದಿರಿ. ಯಾರೋ ದೂರಿದರೆಂದು ರಾಘವೇಶ್ವರ ಭಾರತಿಯವರನ್ನು ವಿಚಾರಣೆಗೆ ಒಳಪಡಿಸಲು ಹಿಂದೆ ಮುಂದೆ ನೋಡಲಿಲ್ಲ ನೀವು. ನಿಮ್ಮ ನ್ಯಾಯ ಪರತೆ ಬಹುಸಂಖ್ಯಾತರನ್ನು ಶಿಕ್ಷಿಸಲು ಮಾತ್ರ ಮೀಸಲೇ?

ಮತ್ತೊಂದಷ್ಟು ನಿಷ್ಠುರ ಸತ್ಯಗಳನ್ನೂ ಹೇಳಿಬಿಡುತ್ತೇವೆ ಕೇಳಿ. ನೀವು ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದಾಗ, ಮೂಢನಂಬಿಕೆಯ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದಾಗಲೇ ನಿಮ್ಮ ರಾಜ'ಕಾರಣ'ಗಳು ಬಯಲಾಗಿದ್ದವು. ಆದರೆ ಈಗ ಅದಕ್ಕಿಂತ ಹೆಚ್ಚಾಗಿ ನಮ್ಮನ್ನು ದಂಗು ಬಡಿಸುತ್ತಿರುವುದು ನಿಮ್ಮ ಅಧಿಕಾರಾವಧಿಯಲ್ಲಿ ಪೋಲೀಸ್ ಇಲಾಖೆಗೆ ಬಂದೊದಗಿರುವ ದುಸ್ಥಿತಿ. ಎಡಿಜಿಪಿ ರವೀಂದ್ರನಾಥ್ ಯಾರದೋ ಫೋಟೋ ಕ್ಲಿಕ್ಕಿಸಿದ ಆಪಾದನೆಗೆ ಒಳಗಾಗಿ, ಅಳುತ್ತಾ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟರಲ್ಲ ಆಗೇಕೆ ನಿಮ್ಮ ಸಚಿವರನ್ನು ಕಳಿಸಿ ಸಾರ್ವಜನಿಕವಾಗಿ ಅನುನಯಿಸಿದಿರಿ ಅವರನ್ನು? ದಲಿತರೆಂಬುದೇ ಎಲ್ಲಕ್ಕೂ ಸಮರ್ಥನೆಯೇ? ನಿಷ್ಠಾವಂತ ಕಮೀಷನರ್ ರಾಘವೇಂದ್ರ ಔರಾದ್‍ಕರ್‍ಗೆ ಆಗಬಹುದಾದ ಮುಜುಗರದ ಪರಿವೆ ಇರಲಿಲ್ಲವೆ ನಿಮಗೆ? ಅಥವಾ ಪ್ರಾಮಾಣಿಕತೆ, ನಿಷ್ಠೆ, ಕಾರ್ಯದಕ್ಷತೆಗಿಂತಲೂ ಜಾತಿಯೇ ಮುಖ್ಯ ಎಂಬುದು ನಮ್ಮ ಸಂವಿಧಾನದಲ್ಲಿ ಎಲ್ಲಾದರೂ ನಮೂದಾಗಿದೆಯೇ? ಪೋಲೀಸರ ಒಳಜಗಳಗಳು ಹೀಗೆ ಹಾದಿರಂಪವಾದರೆ ಸಾಮಾನ್ಯ ಜನರ ಸ್ಥೈರ್ಯ, ನಂಬಿಕೆಗಳು ಕುಗ್ಗುತ್ತವೆ ಎಂಬುದು ನಿಮಗೆ ತಿಳಿಯದ ವಿಷಯವೇ? ಅಷ್ಟೇ ಅಲ್ಲ, ನಿಮ್ಮ ಪಕ್ಷದ ಶಾಸಕ ವಿಜಯಾನಂದ ಕಾಶಪ್ಪನವರ್ ಬಾರ್ ಒಂದರಲ್ಲಿ ಇಬ್ಬರು ಪೋಲೀಸ್ ಪೇದೆಗಳನ್ನು ವಿನಾಕಾರಣ ಚಚ್ಚಿದರಲ್ಲ, ಅದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರಕ್ಕೀಡಾದ ಯುವತಿಯ ವಿಷಯ ನೆನಪಿರಬೇಕಲ್ಲ ನಿಮಗೆ? ಅತ್ಯಾಚಾರಿಯ ಅಪ್ಪ ರಾಜ್ಯದ ಬಿಎಸ್‍ಪಿ ಪಕ್ಷದ ಸ್ಥಳೀಯ ಮುಖಂಡ ಎಂಬ ಕಾರಣಕ್ಕೆ ಸರಿಯಾಗಿ ತನಿಖೆ ನಡೆಸಲಾಗದ ಪರಿಸ್ಥಿತಿ ಬಂದೊದಗಿತ್ತು ಠಾಣೆಯ ಎಸ್‍ಐಗೆ! ಇನ್ನು ಇತ್ತೀಚೆಗೆ ಶಾಲೆಗಳಲ್ಲಿ ಪುಟ್ಟ ಮಕ್ಕಳ ಮೇಲೆ ನಡೆಯುತ್ತಿರುವ ಸರಣಿ ಅತ್ಯಾಚಾರಗಳ ಬಗ್ಗೆ ನಿಮಗೆ ಗೊತ್ತಿಲ್ಲದ್ದು ಏನಿದೆ? ಅಪರಾಧಿಗಳ ಭಂಡತನ ಈ ಮಟ್ಟಿಗೆ ಹೆಚ್ಚಿರುವುದಕ್ಕೆ, ಪೋಲೀಸರ ಮನೋಬಲ ಕುಗ್ಗಿರುವುದೇ ಕಾರಣವಲ್ಲವೇ? ಒಂದಿಡೀ ವ್ಯವಸ್ಥೆಯ ಜುಟ್ಟನ್ನು ಕೈಲಿ ಹಿಡಿದು ಬುಗುರಿಯಂತೆ ಆಡಿಸಿದರೆ ಅವರೇನು ಮಾಡಿಯಾರು ಪಾಪ? ಇದು ಹೀಗೇ ಮುಂದುವರೆದು, ಅರಾಜಕತೆಯಲ್ಲಿ ನಮ್ಮ ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಉತ್ತರಪ್ರದೇಶಗಳನ್ನೂ ಮೀರಿಸಲಿ ಎಂಬುದು ನಿಮ್ಮ ಉದ್ದೇಶವೇ? ಉದ್ಯಾನ ನಗರಿ ಅಧ್ವಾನ ನಗರಿಯಾಗಬೇಕೇ? ನಿಮ್ಮ ವಿಳಂಬ ನೀತಿಯಿಂದಾಗಿ ಉದ್ಯಮಿಗಳು ಇಲ್ಲಿಂದ ಬಿಡಾರ ಎತ್ತುತ್ತಿದ್ದಾರೆ. ಅವಕಾಶಗಳನ್ನು ಏಕೆ ಕೈ ಚೆಲ್ಲುತ್ತಿದ್ದೀರಿ?

ಇಷ್ಟೆಲ್ಲಾ ಸಮಸ್ಯೆಗಳ ಜೊತೆಗೆ ನಿಮಗೆ ನಿದ್ದೆಯ ಕಾಟ ಬೇರೆ! ನಮಗೆ ಒಂದು ಸಣ್ಣ ಹೊಣೆ ಹೆಗಲೇರಿದರೂ ರಾತ್ರಿ ಹೊತ್ತಿನಲ್ಲೇ ಕಣ್ತುಂಬ ನಿದ್ದೆ ಬರುವುದಿಲ್ಲ. ಹಾಗಿರುವಾಗ, ಇಡೀ ರಾಜ್ಯದ ಹೊಣೆ ಹೊತ್ತ ನೀವು ಹಾಡಹಗಲೇ ಅದು ಹೇಗೆ ಕುಳಿತಲ್ಲಿಯೇ ನಿದ್ದೆಗೆ ಜಾರಿಬಿಡುತ್ತೀರಿ? ಎಲ್ಲ ಸಭೆ ಸಮಾರಂಭಗಳಲ್ಲಿಯೂ ಪೊಗದಸ್ತು ನಿದ್ದೆ ಜೊತೆಗೆ ಜೋರು ಗೊರಕೆ! ಇದೊಂದು ರೋಗವಾದರೆ ಗುಣಪಡಿಸಿಕೊಳ್ಳಬಾರದೇ? ಒಂದೆಡೆ ಸದನದಲ್ಲಿ ಅತ್ಯಾಚರದಂಥ ಗಂಭೀರ ವಿಷಯಗಳ ಚರ್ಚೆಯಾಗುತ್ತಿದ್ದರೆ ಮತ್ತೊಂದೆಡೆ ನಿಮ್ಮ ಗಡದ್ದು ನಿದ್ದೆ! ನೀವೇ ಲಘುವಾಗಿ ತೆಗೆದುಕೊಂಡರೆ ಗೃಹ ಸಚಿವ ಜಾರ್ಜ್ ಎಷ್ಟು ಬೆಲೆ ಕೊಟ್ಟಾರು? ಮಾಧ್ಯಮಗಳು ಟಿಆರ್‍ಪಿ ಹೆಚ್ಚಿಸಿಕೊಳ್ಳಲು ಮಾಡುತ್ತಿರುವ ಪ್ರಸಾರ ಇದು ಎನ್ನದೆ ಬಿಟ್ಟಾರೆಯೇ? ವಾಸ್ತವವಾಗಿಯೂ ಟಿಆರ್‍ಪಿ ಹೆಚ್ಚುತ್ತಿದೆಯೋ ಇಲ್ಲವೋ ಗೊತ್ತಿಲ್ಲ, ನಮ್ಮ ಬಿಪಿಯಂತೂ ಏರುತ್ತಿದೆ!

ನಿಮ್ಮಲ್ಲಿ ಒಂದೇ ಒಂದು ಮನವಿ. ಕತ್ತನ್ನು ಹಾಗೇ ಸ್ವಲ್ಪ ಮೇಲೆತ್ತಿ ನಿಮ್ಮ ಕಛೇರಿಯಲ್ಲಿರುವ, ಪ್ರಧಾನಿಯವರ ಚಿತ್ರಪಟವನ್ನೊಮ್ಮೆ ನೋಡಿ. ಅದೇನು ಲವಲವಿಕೆ ಅವರಲ್ಲಿ, ಅದೇನು ಆಸಕ್ತಿ ಕೆಲಸ ಕಾರ್ಯಗಳಲ್ಲಿ! ಅವರ ಕಾರ್ಯಾಲಯದ ವೈಖರಿಯೇ ಬದಲಾಗಿ ಹೋಗಿದೆ ಈ ಕೆಲ ತಿಂಗಳುಗಳಲ್ಲಿ! ಅವರಲ್ಲಿ ನಿಮಗೆ ಎಂದಾದರೂ ಜಡತ್ವ, ತೂಕಡಿಕೆಗಳು ಕಂಡಿವೆಯೇ? ಜನರೊಂದಿಗೆ ಸ್ಪಂದಿಸುತ್ತಾ, ಸಮಸ್ಯೆಗಳನ್ನು ಚರ್ಚಿಸುತ್ತಾ ಹೊಸ ಹೊಸ ಪರಿಹಾರಗಳನ್ನು ಸೂಚಿಸುತ್ತಾ ಬೆಸೆದುಕೊಳ್ಳುವ ಪರಿ ನಿಮ್ಮಲ್ಲಿ ಅಸೂಯೆ ಮೂಡಿಸಿಲ್ಲವೇ? ಒಳ್ಳೆಯದನ್ನು ಅನುಕರಿಸಲು ಯಾರಾದರೇನು? ಅಧೋಗತಿಗಿಳಿಯುತ್ತಿರುವ ಕರ್ನಾಟಕದ ಅಭಿವೃದ್ಧಿಗೆ ನೀವೇಕೆ ಹೊಸ ಮಾದರಿ ರಚಿಸಬಾರದು?

ಮತ್ತೆ ನಂದಿತಾ ವಿಷಯಕ್ಕೆ ಬರೋಣ. ನ್ಯಾಷನಲ್ ಎಂಟರಪ್ರೈಸಸ್‍ನ ಒಡೆಯರಲ್ಲಿ ಒಬ್ಬರಾದ ಅಬ್ದುಲ್ ಕಲಾಂ ಸ್ಥಳೀಯ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. 'ನಾನು ಮತ್ತು ಕೃಷ್ಣಪ್ಪ(ನಂದಿತಾಳ ಅಪ್ಪ) ಒಟ್ಟೊಟ್ಟಿಗೇ ಆಡಿ ಬೆಳೆದವರು. ನಂದಿತಾ ಸತ್ತರೂ ಒಂದೇ ನನ್ನ ಮಗಳು ಸತ್ತರೂ ಒಂದೇ' ಎಂದು. ಇಲ್ಲ ಅಬ್ದುಲ್‍ರವರೇ, ಎರಡೂ ಬಿಲ್‍ಕುಲ್ ಬೇರೆ ಬೇರೆ. ಬೆಲೆ ಇರುವುದು ನಿಮ್ಮ ಮಗಳ ಮಾನ, ಪ್ರಾಣಕ್ಕೆ ಮಾತ್ರ. ಸತ್ತಿರುವ ನಂದಿತಾಳಿಗಲ್ಲ.

ಇನ್ನಾದರೂ ಏಳಿ ಸಿದ್ಧರಾಮಯ್ಯನವರೇ, ನಿಮ್ಮ ತಲೆಯ ತುಂಬ ಕವಿದಿರುವ ಈ ಓಲೈಕೆಯ ಮಂಪರನ್ನು ಒಮ್ಮೆ ಝಾಡಿಸಿಬಿಡಿ. ಮುಂದೆ ಇಂಥವೇ ಸಾವಿರಾರು ಉದಾಹರಣೆಗಳು ಹುಟ್ಟಲು ಅನುವು ಮಾಡಿಕೊಡಬೇಡಿ. ನಾಡಿನ ತುಂಬೆಲ್ಲಾ ನೂರಾರು 'ನಂದಿತಾ'ಗಳಿದ್ದಾರೆ. ಅವರಿಗೆ ಬೇರಾವ ಭಾಗ್ಯಗಳು ದೊರಕದಿದ್ದರೂ ಪರವಾಗಿಲ್ಲ, ಕಡೇ ಪಕ್ಷ ರಕ್ಷಣೆಯ ಭಾಗ್ಯವನ್ನು ಕರುಣಿಸಬೇಕಾದ ಹೊಣೆ ನಿಮ್ಮದೇ ಅಲ್ಲವೇ?