Sunday, 27 July 2014

ಸ್ಮರಣೆಯೊಂದೇ ಸಾಲದು, ಹೊಣೆ ಅರಿಯುವ ಸಮಯವಿದು

“ಪ್ರೀತಿಯ ಅಪ್ಪ, ಅಮ್ಮ ಹಾಗೂ ಅಜ್ಜಿ,
ಈ ಪತ್ರ ನಿಮ್ಮ ಕೈ ಸೇರುವ ಹೊತ್ತಿಗೆ ನಾನು ನಿಮ್ಮನ್ನು ಸ್ವರ್ಗದಿಂದಲೇ ನೋಡುತ್ತಿರುತ್ತೇನೆ. ಏನೇನೂ ಖೇದವಿಲ್ಲ. ಮತ್ತೆ ಮನುಷ್ಯನಾಗಿ ಹುಟ್ಟಿದರೆ ಭಾರತೀಯ ಸೇನೆಯನ್ನು ಸೇರಿ ದೇಶಕ್ಕೋಸ್ಕರ ಹೋರಾಡುತ್ತೇನೆ. ಸಾಧ್ಯವಾದರೆ ಒಂದು ಸಲ ಬಂದು ನಿಮ್ಮ ನಾಳೆಗಳಿಗೋಸ್ಕರ ನಾವು ಹೋರಾಡಿದ ಜಾಗವೆಂಥದು ಎಂಬುದನ್ನು ನೋಡಿ. ನನ್ನ ದೇಹದ ಯಾವ್ಯಾವ ಅಂಗಗಳನ್ನು ದಾನ ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡಿಬಿಡಿ. ಅನಾಥಾಶ್ರಮಕ್ಕೆ ದುಡ್ದು ಕೊಡುವುದನ್ನು ಹಾಗೂ 'ರುಕ್ಸಾನಾ'ಳಿಗೆ ತಿಂಗಳಿಗೆ ಐವತ್ತು ರೂಪಾಯಿಗಳನ್ನು ಕಳಿಸುವುದನ್ನು ಮಾತ್ರ ಮರೆಯಬೇಡಿ. ನನ್ನಿಂದ ಯಾವುದೇ ತಪ್ಪಾಗಿದ್ದರೂ ಕ್ಷಮಿಸಿ. ನಾನಿಲ್ಲವೆಂದು ದುಃಖಿಸುವ ಬದಲು ಹೆಮ್ಮೆ ಪಡಿ. ಸರಿ, ನಾನೀಗ ಹೊರಟೆ, ಎಲ್ಲರಿಗೂ ಒಳ್ಳೆಯದಾಗಲಿ. ಭರಪೂರ ಅನುಭವಿಸಿ ನೀವೆಲ್ಲರೂ ಈ ಬದುಕನ್ನು.
ನಿಮ್ಮ ರಾಬಿನ್”

ಮೇಲಿನ ಪತ್ರವನ್ನು ಓದುತ್ತಿದ್ದಂತೆಯೇ ಥಟ್ಟನೆ ನಿಮಗೆ ಇದು ಯೋಧನೊಬ್ಬ ಬರೆದದ್ದು ಎನಿಸುತ್ತದಲ್ಲವೇ? ಹೌದು. ಕಾರ್ಗಿಲ್ ಯುದ್ಧದಲ್ಲಿ ತನ್ನ ತುಕಡಿಯನ್ನು ಮುನ್ನಡೆಸುತ್ತಿದ್ದ 22ರ ಹರೆಯದ ಕ್ಯಾಪ್ಟನ್ ವಿಜಯಂತ್ ಥಾಪರ್ ಯುದ್ಧಕ್ಕೆ ಹೊರಡುವ ಕೊನೆ ಘಳಿಗೆಯಲ್ಲಿ ತನ್ನ ಡೇರೆಯಿಂದ ಬರೆದದ್ದು. ತಾನು ಹಿಂತಿರುಗದಿದ್ದರೆ ಮನೆಯವರಿಗೆ ಇದನ್ನು ತಲುಪಿಸಿ ಎಂದು ಇಟ್ಟು ಹೋದದ್ದು. ಮನೆಯವರ ಪಾಲಿಗೆ ಪ್ರೀತಿಯ 'ರಾಬಿನ್' ಆಗಿದ್ದ ವಿಜಯಂತ್ ಹಿಂತಿರುಗಿ ಬರಲಿಲ್ಲ ಎಂದು ಬೇರೆ ಹೇಳಬೇಕಿಲ್ಲ ತಾನೆ? 1998ರ ಡಿಸೆಂಬರ್‍ನಲ್ಲಿ ಡೆಹರಾಡೂನ್‍ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ ವಿಜಯಂತ್ ಮೊದಲು ಕಳುಹಿಸಲ್ಪಟ್ಟಿದ್ದೇ ಉಗ್ರರ ಬೀಡಾಗಿದ್ದ, ಕಾಶ್ಮೀರದ ಕುಪ್ವಾರ ಎಂಬ ಜಾಗಕ್ಕೆ. ಜೀವವನ್ನೂ ಲೆಕ್ಕಿಸದೆ ಕಾದಾಡಿ ಉಗ್ರರನ್ನು ಹತ್ತಿಕ್ಕಿದ ವಿಜಯಂತ್‍ಗೆ ಅಲ್ಲಿ ಸಿಕ್ಕಿದವಳು ಆರು ವರ್ಷದ ಪುಟಾಣಿ ರುಕ್ಸಾನಾ. ಕಾದಾಟವೊಂದರಲ್ಲಿ ಕಣ್ಣೆದುರೇ ತನ್ನ ಅಪ್ಪ ಹತನಾಗಿದ್ದನ್ನು ನೋಡಿ ಘಾಸಿಗೊಂಡಿದ್ದ ಆ ಮಗುವನ್ನು ಅಕ್ಕರೆಯಿಂದ ಜೋಪಾನ ಮಾಡಿದ ವಿಜಯಂತ್, ತಾನು ಅಲ್ಲಿಂದ ಹಿಂದಿರುಗಿದ ಮೇಲೂ ಆ ಮಗುವಿಗೆ ಪ್ರತಿ ತಿಂಗಳೂ 50 ರೂಪಾಯಿಗಳನ್ನು ಕಳಿಸುತ್ತಿದ್ದ. ಸಾಯುವ ಮುನ್ನ ಬರೆದ ಪತ್ರದಲ್ಲಿ ತನ್ನ ತಂದೆ-ತಾಯಿಯರಿಗೂ ಅದನ್ನೇ ನೆನಪಿಸಿದ್ದ! ಆರು ವರ್ಷದ ಕಂದಮ್ಮನನ್ನು ಶಾಲೆಯಲ್ಲಿ ಅತ್ಯಾಚಾರ ಮಾಡುವವರ ಮುಂದೆ ವಿಜಯಂತ್ ಎಷ್ಟು ಎತ್ತರಕ್ಕೆ ಕಾಣುತ್ತಾನಲ್ಲವೇ? ಬಿಡಿ. ಮುಖ್ಯ ವಿಷಯಕ್ಕೆ ಬರೋಣ.1999ರ ಜೂನ್ ತಿಂಗಳ ಮೊದಲನೇ ವಾರ. ಜಮ್ಮು-ಕಾಶ್ಮೀರದಲ್ಲಿರುವ ಶ್ರೀನಗರದಿಂದ 205ಕಿಮೀ ದೂರವಿರುವ ಕಾರ್ಗಿಲ್ ಎಂಬ ಪಟ್ಟಣದ ನೆತ್ತಿಯ ಬೆಟ್ಟಗಳನ್ನೆಲ್ಲ, ಹೇನು-ಸೀರುಗಳಂತೆ ಕಚ್ಚಿ ಹಿಡಿದಿದ್ದರು ಪಾಕಿಸ್ತಾನದ ಸೈನಿಕರು. ಅವರನ್ನು ಹೆಕ್ಕಿ ತೆಗೆದು, ಅವುಗಳನ್ನು ಮತ್ತೆ ಕೈವಶಮಾಡಿಕೊಳ್ಳಲು ಕಟಿಬದ್ಧವಾಗಿ ನಿಂತಿತ್ತು ಭಾರತೀಯ ಸೇನೆ. ಅಂಥ ಅತಿ ದುರ್ಗಮವಾದ ಬೆಟ್ಟಗಳಲ್ಲೊಂದು, ಟೊಲೋಲಿಂಗ್. ಅದನ್ನು ವಶಪಡಿಸಿಕೊಳ್ಳಲು ಅಲ್ಲಿಯವರೆಗೆ ನಡೆಸಿದ್ದ ಎಲ್ಲ ಯತ್ನಗಳೂ ವಿಫಲವಾಗಿದ್ದವು. ತನ್ನ ಕಮಾಂಡರ್ ಮೇಜರ್ ಪದ್ಮಪಾಣಿ ಆಚಾರ್ಯರೊಂದಿಗೆ ಅಲ್ಲಿಗೆ ಧಾವಿಸಿದ ವಿಜಯಂತ್, ತನ್ನ ತುಕಡಿಯೊಂದಿಗೆ ಸೇರಿ, ಪಾಕ್ ಸೈನಿಕರನ್ನು ಹೊಸಕಿಹಾಕಿದ. ಕಾರ್ಗಿಲ್ ಯುದ್ಧದ ಒಂದು ಮುಖ್ಯ ತಿರುವಾಗಿದ್ದೇ ವಿಜಯಂತ್ ದೊರಕಿಸಿಕೊಟ್ಟ ಟೊಲೋಲಿಂಗ್ ಗೆಲುವು! ಈ ಯಶಸ್ಸಿನ ಗುಂಗಿನಲ್ಲಿದ್ದ ವಿಜಯಂತ್ನ ತಂಡಕ್ಕೆ ಸವಾಲಾಗಿದ್ದದ್ದು ನೋಲ್ ಎಂಬ ಮತ್ತೊಂದು ಬೆಟ್ಟ. ಟೊಲೋಲಿಂಗ್ ಮತ್ತು ಟೈಗರ್ ಹಿಲ್‍ಗಳ ಮಧ್ಯೆ ಇರುವ ಇದರ ಎತ್ತರ 15೦೦೦ ಅಡಿ. ಇಲ್ಲಿಯ ಉಷ್ಣಾಂಶ -15 ಡಿಗ್ರಿ! ದುರದೃಷ್ಟವೆಂದರೆ ಕೆಳಗಿನಿಂದ ಹತ್ತುವವರಿಗೆ ರಕ್ಷಣೆಯಾಗಬಲ್ಲ ಯಾವ ನೈಸರ್ಗಿಕ ತಡೆಗೋಡೆಯೂ ಈ ಬೆಟ್ಟದಲ್ಲಿಲ್ಲ. ಆದ್ದರಿಂದಲೇ, ಇದನ್ನು ಹತ್ತಿ ಹೋಗಿ, ಸೂಕ್ತ ತಯಾರಿಯೊಂದಿಗೆ ಆಯಕಟ್ಟಿನ ಜಾಗಗಳಲ್ಲಿ ಅಡಗಿ ಕುಳಿತಿದ್ದ ಪಾಕ್ ಸೈನಿಕರನ್ನು ಸದೆಬಡಿಯುವ ಸಾಧ್ಯತೆ ಬಹಳ ಕಡಿಮೆ ಇತ್ತು. ಹಾಗೆಂದು ಶತ್ರುವನ್ನು ಸಹಿಸಿಕೊಂಡು ಕೈಕಟ್ಟಿ ಕುಳಿತುಕೊಳ್ಳುವ ಹಾಗೂ ಇರಲಿಲ್ಲ.

ಅಂದು 1999ರ ಜೂನ್ ತಿಂಗಳ 28ನೇ ತಾರೀಖು. ಅಂದಿಗೆ ವಿಜಯಂತ್ ಸೇನೆಯನ್ನು ಸೇರಿ ಆರು ತಿಂಗಳಾಗಿತ್ತಷ್ಟೆ. ಅಂದು ರಾತ್ರಿ  ಬೆಟ್ಟವನ್ನು ಹತ್ತಿಯೇ ತೀರುವುದೆಂದು ನಿರ್ಧಾರವಾಯಿತು. ಒಮ್ಮೆ ಹತ್ತತೊಡಗಿದರೆ ಹಿಂತಿರುಗುವುದು ಸುಲಭವಲ್ಲವೆಂಬುದು ಎಲ್ಲರಿಗೂ ಗೊತ್ತಿತ್ತು. ಆದ್ದರಿಂದಲೇ ಹೊರಡುವ ಮುನ್ನ ಪತ್ರ ಬರೆದಿಟ್ಟ ವಿಜಯಂತ್. ಬೆಟ್ಟ ಹತ್ತುತ್ತಿದ್ದಂತೆ ಶುರುವಾಯಿತು ನೋಡಿ ಗುಂಡಿನ ದಾಳಿ. ಇಡೀ ತುಕಡಿ ಚೆಲ್ಲಾಪಿಲ್ಲಿಯಾಯಿತು. ಹಂಚಿ ಹೋದ ಸೈನಿಕರು ಹೋರಾಡುತ್ತಲೇ, ಇಂಚಿಂಚೇ ಮೇಲೆ ಸಾಗಿದರು. ಕಡೆಗೊಂದು ಸಲ ಎಲ್ಲರೂ ಒಟ್ಟುಗೂಡಿದಾಗ ಆಘಾತ ಕಾದಿತ್ತು. ಮೇಜರ್ ಆಚಾರ್ಯ ಹೆಣವಾಗಿದ್ದರು! ಕುದ್ದು ಹೋದ ವಿಜಯಂತ್ ಶತ್ರುವನ್ನು ಕೊಂದೇ ತೀರುವ ಹಟಕ್ಕೆ ಬಿದ್ದ. ತೀರಾ ಸನಿಹಕ್ಕೆ ಹೋಗಿ ಕೆಚ್ಚಿನಿಂದ ಕಾದಾಟಕ್ಕೆ ನಿಂತ. ಮಾಡು ಇಲ್ಲವೇ ಮಡಿ ಎಂಬುದು ಅಕ್ಷರಶಃ ಅನಿವಾರ್ಯವಾಗಿತ್ತು. ಒಂದೂವರೆ ಘಂಟೆಗಳ ಘೋರ ಕದನದ ಕೊನೆಯಲ್ಲಿ ವಿಜಯಂತ್‍ನ ತಲೆಗೆ ಬಡಿದ ಗುಂಡುಗಳು ಅವನ ಜೀವ ತೆಗೆದರೆ, ನೋಲ್ ನಮ್ಮದಾಗಿತ್ತು! ಹೆಣವಾಗಿ ಬಂದ ವಿಜಯಂತ್‍ನನ್ನು ಕಳುಹಿಸಿಕೊಡಲು ಅವನ ಊರು ನೋಯ್ಡಾದಲ್ಲಿ ನೆರೆದಿದ್ದವರು ಒಂದು ಲಕ್ಷ ಜನ! 22ರ ಹರೆಯದ ಮೊಮ್ಮಗನ ಶೌರ್ಯ‍ಕ್ಕೆ ಪ್ರತಿಫಲವಾಗಿ ಸಿಕ್ಕ ವೀರ ಚಕ್ರವನ್ನು ಸ್ವೀಕರಿಸಿದ್ದು 82ರ ಹರೆಯದ ಅವನ ಪ್ರೀತಿಯ ಅಜ್ಜಿ. ಅವನೇನೋ ಗಟ್ಟಿಗ ಸರಿ, ಆ ಮುದುಕಿಯ ಗುಂಡಿಗೆ ಇನ್ನೆಂಥದ್ದಿರಬೇಕಲ್ಲವೇ?

ಇಂಥ ನೂರಾರು ವಿಜಯಂತ್‍‍ರನ್ನು ಬಲಿಕೊಟ್ಟು ಗೆದ್ದೆವು ಕಾರ್ಗಿಲ್ ಕದನವನ್ನು. ನಮ್ಮ ಗೆಲುವಿಗೆ ಈಗ ಸರಿಯಾಗಿ 15 ವರ್ಷಗಳಾಗುತ್ತವೆ! ಬಹಳಷ್ಟಿರಬೇಕು ನಮ್ಮಲ್ಲಿ ಅಭಿಮಾನ ಮತ್ತು ಹರ್ಷ. ಆದರೆ ವಿಜಯದ ದಿವಸ ಎಂದು ಸಂಭ್ರಮಿಸುವುದರಲ್ಲೂ ರಾಜಕೀಯ ಸಂಘರ್ಷ. ಕಾಂಗ್ರೆಸ್ ಸರ್ಕಾರ ಒಂದು ವರ್ಷವೂ ವಿಜಯ ದಿವಸವನ್ನು ಆಚರಿಸಲೇ ಇಲ್ಲ. ಅವರಿಗೇಕೋ ಅಸಹನೆ. ಇದೊಂದು ಯುದ್ಧವೇ ಅಲ್ಲ ಎಂಬ ಧೋರಣೆ. ಹಾಗಾದರೆ, ಭಾರತೀಯ ಸೇನೆ ಬಡಿದಾಡಿದ್ದು ವಾಜಪೇಯಿಯವರ ದಾಯಾದಿಗಳ ಜೊತೆಯೇ?

ಅಂದು ಬಾಲ ಮುದುರಿಕೊಂಡು ಹೋದ ಪಾಕಿಸ್ತಾನ ಮತ್ತೆ ನೇರ ಕದನಕ್ಕಿಳಿದಿಲ್ಲ. ಆದರೆ ತೆರೆಮರೆಯಲ್ಲೇ ಉಗ್ರರನ್ನು ತಯಾರು ಮಾಡಿ, ವಿಶ್ವದೆಲ್ಲೆಡೆ ಮೊಳಗುತ್ತಿರುವ ಜಿಹಾದ್‍ನ ಕೂಗಿಗೆ ವೇದಿಕೆಯಾಗಿ, ತಾನು ಎಂದಿಗೂ ಭಾರತದ ಶತ್ರುವೇ ಎಂದು ಸಾರಿ ಸಾರಿ ಹೇಳುತ್ತಿದೆ. ಕಳವಳಪಡಬೇಕಾದ್ದೇ. ಆದರೆ ಪಾಕಿಸ್ತಾನವನ್ನೂ ಮೀರಿಸುವ ಬುದ್ಧಿವಂತ, ಭಯಾನಕ ಶತ್ರು ವೊಂದಿದೆ. ಅದೇ ಚೀನಾ!
ಈಗಾಗಲೇ ನಮ್ಮನ್ನು ಸುಲಭವಾಗಿ ಸುತ್ತುವರಿಯಬಲ್ಲ ಭೂ, ವಾಯು ಹಾಗೂ ಜಲಮಾರ್ಗಗಳನ್ನು ಕಂಡುಕೊಂಡಿರುವ ಚೀನಾ ನಮ್ಮನ್ನು ಹತೋಟಿಯಲ್ಲಿಡುವ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. 2010ರ ಆಗಸ್ಟ್ 6ರಂದು ಹಿಮಾಲಯದ ಲೇಹ್‍ನಲ್ಲಿ ಸಂಭವಿಸಿದ ಮೇಘ-ಸ್ಫೋಟ ನೆನಪಿದೆಯೇ ನಿಮಗೆ? ಅತ್ಯಂತ ಕಡಿಮೆ ಮಳೆಯಾಗುವ ಆ ಪ್ರದೇಶದಲ್ಲಿ ಅವತ್ತು ಬೆಳಗಿನ ಜಾವ 1.30ಯಿಂದ 2.30ರವರೆಗೂ ಸುಮಾರು 250ಮಿಮೀನಷ್ಟು ಧಾರಾಕಾರ ಮಳೆ ಸುರಿದು ಪ್ರವಾಹ ಉಕ್ಕಿತು. 250ಕ್ಕೂ ಹೆಚ್ಚು ಜನ ಕೊಚ್ಚಿಕೊಂಡು ಹೋದರು. ಅದರ ಹತ್ತಿರವೇ ಇದ್ದ ವಾಯುನೆಲೆಯಲ್ಲಿ ಆಗಿದ್ದು ಬರೀ 12.8ಮಿಮೀನಷ್ಟು ಸಾಧಾರಣ ಮಳೆ. ಹಾಗಾದರೆ ಲೇಹ್‍ನಲ್ಲಿ ಮಾತ್ರ ದಿಢೀರನೆ ಅಷ್ಟೊಂದು ಮಳೆ ಏಕಾಯಿತು ಎಂದು ಪತ್ತೆಮಾಡಲು ಹೊರಟ ನಮ್ಮವರಿಗೆ ಗೋಚರಿಸಿದ ಸಾಧ್ಯತೆ - ಇದು ಚೀನಾ ಸೃಷ್ಟಿಸಿದ ಕೃತಕ ಮೇಘ-ಸ್ಫೋಟದಿಂದ ಎಂಬುದು! ಆ ಪ್ರದೇಶಗಳಲ್ಲಿ, ಹವಾಮಾನವನ್ನು ಕುರಿತ ಹಲವಾರು ಪ್ರಯೋಗಗಳನ್ನು ಸತತವಾಗಿ ನಡೆಸುತ್ತಿದೆ ಚೀನಾ. ವ್ಯತಿರಿಕ್ತ ಪರಿಣಾಮವಾಗುತ್ತಿರುವುದು ಮಾತ್ರ ನಮ್ಮ ಮೇಲೆ! ಅಷ್ಟೇ ಅಲ್ಲ. ನಮ್ಮ ಬ್ರಹ್ಮಪುತ್ರ (ಚೀನಾದಲ್ಲಿ ಸಾಂಗ್‍ ಪೋ ಎಂದು ಕರೆಯಲಾಗುತ್ತದೆ) ನದಿಗೆ ನೂರಾರು ಅಣೆಕಟ್ಟುಗಳನ್ನು ಕಟ್ಟುವ ಹುನ್ನಾರದಲ್ಲಿದೆ ಚೀನಾ. ಸದ್ಯಕ್ಕೆ 60 ಅಣೆಕಟ್ಟುಗಳಿಗೆ ಒಪ್ಪಿಗೆ ಸಿಕ್ಕಿದ್ದು ರೂಪು-ರೇಷೆಗಳು ಭರದಿಂದ ಸಿದ್ಧವಾಗುತ್ತಿವೆ. ಇದು ಎಷ್ಟು ಅಪಾಯಕಾರಿ ಗೊತ್ತೆ? ಭೂ-ಕುಸಿತ ಹೆಚ್ಚಿರುವ ಹಿಮಾಲಯದ ಈ ಪ್ರದೇಶಗಳಲ್ಲಿ ಅಪ್ಪಿ-ತಪ್ಪಿ ಒಮ್ಮೆ ಭೂಕಂಪನವಾಗಿ ಅಣೆಕಟ್ಟುಗಳು ಬಿರುಕು ಬಿಟ್ಟರೆ, ಭಾರತ, ಟಿಬೆಟ್ ಹಾಗೂ ಬಾಂಗ್ಲಾದೇಶಗಳ ಬಹಳಷ್ಟು ಭಾಗಗಳು ಕೊಚ್ಚಿ ಹೋಗಲಿವೆ. ಕಳೆದ ಜುಲೈನಲ್ಲಿ ಕೇದಾರದಲ್ಲಾದ ಪ್ರವಾಹದಿಂದ ಉಂಟಾಯಿತಲ್ಲ ಹಾನಿ, ಅದರ ಹತ್ತರಷ್ಟು, ಒಮ್ಮೆಗೇ ಆಗಲಿದೆ. ಭೂಕಂಪನದ ಹೆಸರಿನಲ್ಲಿ ತಾನೇ ಒಂದು ಅಣೆಕಟ್ಟಿಗೆ ಡೈನಮೈಟ್ ಇಡುವುದಕ್ಕೂ ಹೇಸುವುದಿಲ್ಲ ಚೀನಾ. ನಮಗೆ ಗೊತ್ತಿಲ್ಲವೇ ಅದರ ಯೋಗ್ಯತೆ? 

ಇಂಥ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡಿರುವ ನಾವು, ನಾಳೆ ಯುದ್ಧವಾದರೆ ಎದುರಿಸಲು ಎಷ್ಟರಮಟ್ಟಿಗೆ ತಯಾರಿದ್ದೇವೆ? ಕೇಳಿದರೆ ಗಾಬರಿಯಾಗುತ್ತದೆ. ನಮ್ಮ ಬಳಿಯಿರುವ ಅಸ್ತ್ರಗಳು ನಮ್ಮ ಯೋಧರ ದೇಶಪ್ರೇಮ, ಕೆಚ್ಚುಗಳು ಮಾತ್ರ. ಯಾವ ಅತ್ಯಾಧುನಿಕ ಉಪಕರಣಗಳೂ ಇಲ್ಲ. ಸಾಕಷ್ಟು ಮದ್ದು ಗುಂಡುಗಳಿಲ್ಲ. 50ರ ದಶಕದಲ್ಲಿ ಕೊಂಡ ಹೆಲಿಕಾಪ್ಟರ್‍ಗಳು, ಜಲಾಂತರ್ಗಾಮಿ ನೌಕೆಗಳು ಈಗ ಮಕಾಡೆ ಮಲಗುತ್ತಿವೆ. ಹಾಗಾಗಿಯೇ 2012ರ ಮಾರ್ಚ್‍ನಲ್ಲಿ, ಅಂದಿನ ಸೇನಾಮುಖ್ಯಸ್ಥರಾಗಿದ್ದ ಜನರಲ್ ವಿ.ಕೆ.ಸಿಂಗ್ ‘ಮೌನ’ಮೋಹನರಿಗೆ ಪತ್ರ ಬರೆದು ಸೇನೆಯ ದುಃಸ್ಥಿತಿಯ ಬಗ್ಗೆ ಅಲವತ್ತುಕೊಂಡಿದ್ದರು. ಆದ್ದರಿಂದಲೇ, ಪ್ರಧಾನಿಯಾದ ನಂತರ ಕಛೇರಿಯ ಹೊಸ್ತಿಲನ್ನು ಮೊತ್ತ ಮೊದಲ ಬಾರಿ ದಾಟಿದ ಮೋದಿಯವರು ಸೀದಾ ಹೋಗಿದ್ದು ರಕ್ಷಣಾ ಪಡೆಯ ಮುಖ್ಯಸ್ಥರನ್ನು ಭೇಟಿಯಾಗಲು. ಈ ಬಾರಿಯ ಬಜೆಟ್‍ನಲ್ಲಿ ರಕ್ಷಣಾ ಖಾತೆಗೆ ವಿದೇಶೀ ನೇರ ಬಂಡವಾಳ ಹೂಡಿಕೆಯನ್ನು ಶೇಕಡ 49ಕ್ಕೆ ಏರಿಸಿದ್ದೂ ಇದೇ ಕಾರಣಕ್ಕೆ.

ಪರಿಸ್ಥಿತಿ ಹೀಗಿರುವಾಗ, ಹುತಾತ್ಮರಾದ ಯೋಧರ ನೆನಪಿನಲ್ಲಿ ವರ್ಷಕ್ಕೊಮ್ಮೆ ಕಣ್ಣೀರಿಟ್ಟುಬಿಟ್ಟರೆ ನಮ್ಮ ಕರ್ತವ್ಯ ಮುಗಿದುಬಿಡುತ್ತದೆಯೇ? ಇಸ್ರೇಲ್‍ನಂಥ ಪುಟ್ಟ ದೇಶದಲ್ಲಿರುವವರು ಕೇವಲ 81ಲಕ್ಷ ಮಂದಿ. ದೇಶದ ರಕ್ಷಣೆಯ ಹೊಣೆಯನ್ನು ಬರೀ ಯೋಧರಿಗೆ ಮೀಸಲಾಗಿಡದ ಅವರು 18 ವರ್ಷದವರಾಗುತ್ತಿದ್ದಂತೆಯೇ ಸೇನೆಗೆ ಸೇರ್ಪಡೆಗೊಳ್ಳುತ್ತಾರೆ. ಹೆಣ್ಣು-ಗಂಡೆಂಬ ಭೇದವಿಲ್ಲದೆ ತಲಾ ಮೂರು ವರ್ಷಗಳನ್ನು ದೇಶಸೇವೆಗೆ ಮೀಸಲಿಡುತ್ತಾರೆ. ಸೇವೆಯಿಂದ ಹೊರಬಿದ್ದ ಮೇಲೂ ಗಂಡಸರು ಯುದ್ಧದ ಸಂದರ್ಭದಲ್ಲಿ ಸದಾ ಲಭ್ಯರಿರುತ್ತಾರೆ. ಇಸ್ರೇಲ್‍ನ ಮಾದರಿಯಲ್ಲೇ ನಾವೂ ಸೇನೆಯ ತರಬೇತಿ ಪಡೆಯಬಹುದಲ್ಲವೇ? ಎಲ್ಲ ಹೊಸ ವಿಚಾರಗಳಿಗೂ ಸರ್ಕಾರವೇ ನಾಂದಿ ಹಾಡಬೇಕಿಲ್ಲ. ನಿಯಮದ ರೂಪದಲ್ಲಿ ಕಡ್ಡಾಯಗೊಳಿಸಲೇಬೇಕಾದ ಅಗತ್ಯವೂ ಇಲ್ಲ. ಸ್ವಪ್ರೇರಣೆಯಿಂದ, ಕೆಲವು ಉದಾಹರಣೆಗಳನ್ನು ನಾವೂ ಹುಟ್ಟುಹಾಕಬಹುದು. ಹೆತ್ತವರ ಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸುತ್ತೇವೆ. ದೇಶದ ಋಣವನ್ನು?

'ಅಚ್ಛೇ' ದಿನಗಳ ಬರುವಿಕೆಯಲ್ಲಿ ಸ್ವಚ್ಛತೆಯದೂ ಪಾಲಿದೆ!

ಮೊನ್ನೆಯಷ್ಟೇ ಬ್ರೆಜಿಲ್‍ನಲ್ಲಿ ಮುಗಿಯಿತಲ್ಲ ವಿಶ್ವಕಪ್ ಫುಟ್‍ಬಾಲ್ ಪಂದ್ಯಾವಳಿ, ಅದರಲ್ಲಿ ಜಪಾನಿನ ಅಭಿಮಾನಿಗಳು ದೊಡ್ಡ ಸುದ್ದಿಯಾದರು. ಅತಿಥೇಯರಿಗಷ್ಟೇ ಅಲ್ಲ, ತಮ್ಮ ತಮ್ಮ ತಂಡಗಳನ್ನು ಬೆಂಬಲಿಸಲು ದೇಶ-ವಿದೇಶಗಳಿಂದ ಹರಿದು ಬಂದಿದ್ದ ಲಕ್ಷಾಂತರ ಅಭಿಮಾನಿಗಳಿಗೂ ಮಾದರಿಯಾದರು. ನಿಜ, ಅವರು ಕಪ್ ಗೆಲ್ಲಲಿಲ್ಲ. ಅದರ ಸನಿಹಕ್ಕೂ ಸುಳಿಯಲಿಲ್ಲ. ಆದರೆ ಸ್ವಚ್ಛತೆಯ ಬಗ್ಗೆ ತಮಗಿರುವ ಅತೀವ ಕಾಳಜಿಯನ್ನು ಮೆರೆದು ಎಲ್ಲರ ಕಣ್ಮಣಿಗಳಾದರು! ತಮ್ಮ ನೆಚ್ಚಿನ ಜಪಾನ್ ತಂಡ ಭಾಗವಹಿಸಿದ್ದ ಪ್ರತಿಯೊಂದು ಪಂದ್ಯವನ್ನೂ ವೀಕ್ಷಿಸಿದ ನಂತರ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿಯೇ ಅವರು ಹೊರಡುತ್ತಿದ್ದುದು. ಪ್ರೇಕ್ಷಕರು ಎಲ್ಲೆಂದರಲ್ಲಿ ಬಿಸಾಡಿದ್ದ ಖಾಲಿ ಕವರ್‍ಗಳು, ಕುಡಿದು ಎಸೆದಿದ್ದ ಬೀರ್ ಬಾಟಲಿಗಳನ್ನೆಲ್ಲ ಹೆಕ್ಕಿ ಒಂದು ಚೀಲಕ್ಕೆ ತುಂಬಿಸಿಕೊಳ್ಳುತ್ತಾ ಶಿಸ್ತಾಗಿ ಒಂದೆಡೆಯಿಂದ ಅವರು ಬರುತ್ತಿದ್ದರೆ ಉಳಿದವರು ಅವಾಕ್ಕಾಗಿ ನೋಡುತ್ತಾ ನಿಲ್ಲುತ್ತಿದ್ದರು. ಜಪಾನೀಯರೇ ಹಾಗೆ. ಉದ್ದಿಮೆದಾರರಾಗಿರಲಿ, ಸಾಮಾನ್ಯ ಉದ್ಯೋಗಿಗಳಾಗಿರಲಿ, ಅವರ ಮೊದಲ ಆದ್ಯತೆ ಸ್ವಚ್ಛತೆ! ಅವರು ಹಾಕಿಕೊಂಡಿರುವ ನಿಯಮ ಅತ್ಯಂತ ಸರಳ ಹಾಗೂ ಅಷ್ಟೇ ಕಠಿಣ. ಯಾವುದೇ ಜಾಗಕ್ಕೆ ಹೋದರೂ, ಅವರು ಹೋದಾಗ ಆ ಜಾಗ ಎಷ್ಟು ಸ್ವಚ್ಛವಾಗಿರುತ್ತದೋ, ಅಲ್ಲಿಂದ ಹಿಂತಿರುಗುವಾಗ ಅದಕ್ಕಿಂತ ತುಸು ಹೆಚ್ಚೇ ಸ್ವಚ್ಛವಾಗಿಟ್ಟು ಬರಬೇಕು. ಈ ನಿಯಮದ ಪಾಲನೆ ತಮ್ಮ ಮನೆ ಅಥವಾ ದೇಶಕ್ಕೆ ಮಾತ್ರ ಮೀಸಲಾಗಿರಬೇಕೆಂಬ ಸ್ವಾರ್ಥದ ಲೇಪವಿಲ್ಲ. ಆದ್ದರಿಂದಲೇ ಎಲ್ಲಿಗೆ ಹೋದರೂ ಅವರದ್ದು ಒಂದೇ ರೀತಿಯ ಅಚ್ಚುಕಟ್ಟು!ಈ ವಿಷಯ ಈಗೇಕೆ ಪ್ರಸ್ತುತವಾಗುತ್ತದೆಂದರೆ, ‘ಅಚ್ಛೇ’ ದಿನಗಳ ನಿರೀಕ್ಷೆಯಲ್ಲಿರುವ ನಾವು ಜಪಾನೀಯರಿಂದ ಕಲಿಯಲೇಬೇಕಾದ ಪಾಠವೊಂದಿದೆ.
ಮೊದಲಿಗೆ, ಮೋದಿಯವರು ಕಟ್ಟಿ ಕೊಟ್ಟ ‘ಅಚ್ಛೇ’ ದಿನಗಳೆಂಬ ಕನಸಿನ ಸೌಧದ ನಿರ್ಮಾಣ ಯಾವ ಹಂತದಲ್ಲಿದೆ ನೋಡೋಣ ಬನ್ನಿ. ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಲಾಗಾಯ್ತು, ಮೋದಿಯವರು ದಿನದ 18 ತಾಸು ಕೆಲಸದಲ್ಲಿ ನಿರತರಾಗಿಬಿಟ್ಟಿದ್ದಾರೆ. ಯಾವ ಹೇಳಿಕೆಗಳೂ ಇಲ್ಲ, ಪ್ರತಿಕ್ರಿಯೆಗಳೂ ಇಲ್ಲ. ತೀರಾ ಅನಿವಾರ್ಯ ಎಂಬಂಥ ಸಂದರ್ಭಗಳಲ್ಲಿ ಮಾಡುತ್ತಿರುವ ಚಿಕ್ಕ-ಚೊಕ್ಕ ಸಮಯೋಚಿತ ಭಾಷಣಗಳನ್ನು ಬಿಟ್ಟರೆ ಅವರ ಇರುವಿನ ಸುಳಿವೇ ಇಲ್ಲ. ಚುನಾವಣಾ ಪ್ರಚಾರದ ಸಮಯದಲ್ಲಿ ನೂರಾರು ಸಭೆಗಳನ್ನುದ್ದೇಶಿಸಿ ಗಂಟೆಗಟ್ಟಲೆ ಭಾಷಣ ಮಾಡುತ್ತಿದ್ದ ವ್ಯಕ್ತಿ ಇವರೇನಾ ಎಂದು ಆಶ್ಚರ್ಯ ಪಡುವ ಸರದಿ ನಮ್ಮದಾಗಿದೆ. ತಮಗೆ ಅಂಟಿಸಿದ್ದ ಗೋಧ್ರಾ ನರಮೇಧದ ಕಳಂಕವನ್ನು ತಿಕ್ಕಿ ತೊಳೆಯಲು ಟೊಂಕ ಕಟ್ಟಿ ನಿಂತಿದ್ದ ವ್ಯಕ್ತಿ, ಕುಟುಂಬ ರಾಜಕಾರಣ ಮಾಡುತ್ತಿದ್ದವರನ್ನು ಮುಲಾಜಿಲ್ಲದೆ ಹಂಗಿಸುತ್ತಿದ್ದ ವ್ಯಕ್ತಿ ಈಗ ಶಾಂತರಾಗಿದ್ದಾರೆ. ಯಾವ ಉದ್ದೇಶಪೂರ್ತಿಗಾಗಿ ಗದ್ದುಗೆಯೇರಿದ್ದಾರೋ, ಅದನ್ನು ಸಫಲಗೊಳಿಸುವುದಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಬಾಹ್ಯವಾಗಿ ಮೌನಿಯಾಗಿದ್ದೇ, ಆಂತರ್ಯದಲ್ಲಿ ತಮ್ಮ ಕೈಂಕರ್ಯವನ್ನು ತಪಸ್ಸಿನಂತೆ ಆಚರಿಸುತ್ತಿದ್ದಾರೆ. ಪರಿಣಾಮ, ಅಧಿಕಾರದ ಚುಕ್ಕಾಣಿ ಹಿಡಿದು ತಿಂಗಳೆರಡು ಕಳೆಯುವಷ್ಟರಲ್ಲೇ ಬದಲಾವಣೆಯ ಗಾಳಿ ಬೀಸುತ್ತಿದೆ.

ಅಷ್ಟರಲ್ಲಾಗಲೇ ಒಂದು ವರ್ಗದವರು ವರಾತ ಶುರು ಮಾಡಿದ್ದಾರೆ. ಮೋದಿಯವರು ಹೇಳಿದ ಅಚ್ಛೇ ದಿನಗಳು ಎಲ್ಲಿವೆ? ಏಕೆ ಇಷ್ಟು ತಡವಾದರೂ ಯಾವ ಪವಾಡವೂ ಕಾಣುತ್ತಿಲ್ಲ ಎಂದು ದುರ್ಬೀನು ಹಿಡಿದು ಹುಡುಕಾಟ ನಡೆಸಿದ್ದಾರೆ. ದುರ್ಬೀನುಧಾರಿಗಳೇ ಕೇಳಿ, ಆಗುತ್ತಿರುವ ಬದಲಾವಣೆಗಳನ್ನು ಕಾಣಲು ಬರಿಗಣ್ಣೇ ಸಾಕು. ಏಕೆಂದರೆ ಅದಕ್ಕೆ ಬೇಕಾಗಿರುವುದು ದುರ್ಬೀನಲ್ಲ, ಪೂರ್ವಾಗ್ರಹಗಳಿಂದ ಮುಕ್ತವಾದ, ಹೊಸತನವನ್ನು ಸ್ವೀಕರಿಸಬಲ್ಲ ಮನಸು. ಕ್ಯಾಬಿನೆಟ್ ಸಚಿವರ ಕೈಕೆಳಗಿದ್ದ ಮಂತ್ರಿಗಳ ಸಮಿತಿಯನ್ನು ವಿಸರ್ಜಿಸಿ ಸಚಿವರನ್ನೇ ನೇರವಾಗಿ ಹೊಣೆಗಾರರನ್ನಾಗಿಸಿದ್ದು, ಸಾರ್ಕ್ ದೇಶಗಳೊಡನೆ ಬಾಂಧವ್ಯದ ಹೊಸ ಭಾಷ್ಯ ಬರೆದದ್ದು, ಪಾಕಿಸ್ತಾನದ ಪ್ರಧಾನಿಯನ್ನು ನಮ್ಮ ದೇಶಕ್ಕೆ ಆಹ್ವಾನಿಸಿದ್ದು, ನಮ್ಮ ದೇಶದ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಅಮೆರಿಕೆಗೆ ಎಚ್ಚರಿಕೆ ಕೊಟ್ಟಿದ್ದು, ಚೊಚ್ಚಲ ವಿದೇಶ ಪ್ರವಾಸಕ್ಕೆ ಭೂತಾನ್ ದೇಶವನ್ನು ಆಯ್ದುಕೊಂಡಿದ್ದು - ಇವೆಲ್ಲಾ ಅಚ್ಛೇ ದಿನಗಳ ಮುನ್ಸೂಚನೆಗಳೇ.
ಇವೆಲ್ಲ ತೀರ ರಾಜತಾಂತ್ರಿಕ ಉದಾಹರಣೆಗಳಾದವು. ಸಾಮಾನ್ಯ ಜನರಿಗೆ ಅನ್ವಯವಾಗುವಂಥ ಉದಾಹರಣೆಯೊಂದು ಬೇಕೇ? ಇಲ್ಲಿದೆ ನೋಡಿ. ಐಸಿಸ್ ಉಗ್ರರಿಂದ ಬಿಡುಗಡೆಗೊಂಡು ಬಂದ ಕೇರಳದ ನರ್ಸ್‍ಗಳು 'ಉಗ್ರರು ನಮ್ಮನ್ನು ಸಹೋದರಿಯರಂತೆ ನೋಡಿಕೊಂಡರು. ನೀರು ಬಿಸ್ಕೆಟ್ ನೀಡಿದರು' ಎಂದು ಎರಡೂ ಕೈಯೆತ್ತಿ ಮುಗಿಯುತ್ತಿದ್ದಾರೆ. ಅಸಲಿಗೆ ಇವರಿಗೆ ನೀರು ಬಿಸ್ಕೆಟ್ ನೀಡಿದವರು ಐಸಿಸ್ ಉಗ್ರರಲ್ಲವೇ ಅಲ್ಲ. ಉಗ್ರರ ವೇಷದಲ್ಲಿದ್ದ ಭಾರತೀಯ ಕಮಾಂಡೋಗಳು! ಈ ವಿಷಯ ನರ್ಸ್‍ಗಳಿಗೂ ತಿಳಿದಿರಲಿಲ್ಲ. ಉಗ್ರರೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಿ, ಅವರ ಮೇಲೆ ಒತ್ತಡ ಹೇರಲು ಗಲ್ಫ್ ಕಡಲ ತೀರದತ್ತ ನಮ್ಮ ಯುದ್ಧನೌಕೆಯನ್ನು ಮುಖಮಾಡಿ ನಿಲ್ಲಿಸಿ, ಒತ್ತಡಕ್ಕೆ ಮಣಿದ ಉಗ್ರರಿಗೆ ಬೇಕಾದ ಔಷಧಗಳನ್ನು ಮಧ್ಯವರ್ತಿಗಳ ಮೂಲಕ ಪೂರೈಸಿ, ಬದಲಿಗೆ ನಮ್ಮ ನರ್ಸ್‍ಗಳನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬಂದ ತಂತ್ರಗಾರಿಕೆಯ ಶ್ರೇಯ ಸಲ್ಲುವುದು ಯಾರಿಗೆ ಎಂದುಕೊಂಡಿದ್ದೀರಿ? ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೊವೆಲ್‍ರಿಗೆ!

ದೇಶದ ಸುರಕ್ಷೆ, ಮಹಾನ್ ತಂತ್ರಗಾರಿಕೆಯ ಚಾಣಾಕ್ಷ ಬೇಹುಗಾರ ಅಜಿತ್ ದೊವೆಲ್ರ ಕೈಲಿರುವುದು ಖಂಡಿತ ನಮ್ಮ ಪಾಲಿನ ‘ಅಚ್ಛೇ’ ದಿನಗಳೇ. ಅಲ್ಲವೇ?
ಅಚ್ಛೇ ದಿನಗಳ ಮತ್ತೊಂದು ದೃಷ್ಟಾಂತ ನಮ್ಮೆದುರು ಬಂದದ್ದು ಬಜೆಟ್‍ನ ರೂಪದಲ್ಲಿ. ಈ ಬಾರಿ ಮಂಡಿಸಲ್ಪಟ್ಟ ರೈಲ್ವೆ ಬಜೆಟ್‍ಅನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಎರ್ರಾಬಿರ್ರಿಯಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದು, ಹೊಸ ರೈಲುಗಳನ್ನು ಬಿಟ್ಟು ನಮ್ಮನ್ನು ಹಳಿ ತಪ್ಪಿಸುವ ಬದಲು, ಚಾಲ್ತಿಯಲ್ಲಿರುವ ಮಾರ್ಗಗಳನ್ನು ನವೀಕರಿಸಲು ಅನುದಾನವನ್ನು ಘೋಷಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾದ ಪ್ರಾಶಸ್ತ್ಯ ಸಿಕ್ಕಿರುವುದು ಯಾವುದಕ್ಕೆ ಹೇಳಿ? ನೈರ್ಮಲ್ಯಕ್ಕೆ! ಹೌದು. ನಮಗೆ ಈಗ ತುರ್ತಾಗಿ ಬೇಕಾಗಿರುವುದೇ ಅದು. ಮೇಲೆ ಹೇಳಿದ ಜಪಾನೀಯರ ಪಾಠ ನಮಗೆ ಅಳವಡಿಕೆಯಾಗುವುದು ಇಲ್ಲೇ ನೋಡಿ. ರೈಲ್ವೆ ಸಚಿವರಾದ ಸದಾನಂದಗೌಡರು ಸ್ವಚ್ಛತೆಗೆ ಮೀಸಲಿಟ್ಟಿರುವ ಹಣ ಕಳೆದ ಸಲಕ್ಕಿಂತ ಶೇಕಡ 40ರಷ್ಟು ಹೆಚ್ಚು. ಶುದ್ಧವಾದ ಕುಡಿಯುವ ನೀರು ಹಾಗೂ ಸ್ವಚ್ಛ ಶೌಚಾಲಯಗಳ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ಅವರದು. ಪ್ರಮುಖವಾದ 50 ನಿಲ್ದಾಣಗಳಲ್ಲಿ ಪ್ಲಾಟ್‍ಫಾರ್ಮ್ ಹಾಗೂ ರೈಲುಗಳ ಶುಚಿತ್ವದ ಉಸ್ತುವಾರಿಯನ್ನು ಹೊರಗುತ್ತಿಗೆ ನೀಡುವ ಅವರ ನಿರ್ಧಾರವೂ ಶ್ಲಾಘನೀಯವೇ. ಇದೆಲ್ಲದರ ಸಮರ್ಪಕ ಅನುಷ್ಠಾನದ ಮೇಲ್ವಿಚಾರಣೆಗೋಸ್ಕರ ಸಿಸಿಟಿವಿಯ ಅಳವಡಿಕೆ ಬೇರೆ! ಅವರೇನೋ ತಮ್ಮ ಭರವಸೆಗಳನ್ನು ಈಡೇರಿಸಿಬಿಡುತ್ತಾರೆ, ಆದರೆ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಭರವಸೆಯನ್ನು ನಾವೂ ಅವರಿಗೆ ಕೊಡಬಲ್ಲೆವೆ?

ಇನ್ನೂ ಒಂದು ಮುಖ್ಯವಾದ ಅಂಶವಿದೆ. ಈಗ ಕೆಲವೇ ರೈಲುಗಳಿಗೆ ಮೀಸಲಾಗಿರುವ ಬಯೋ-ಶೌಚಾಲಯದ ಸೌಲಭ್ಯ ಇನ್ನು ಮುಂದೆ ಎಲ್ಲ ರೈಲುಗಳಿಗೂ ಸಿಗಲಿದೆ. ಬಯೋ-ಶೌಚಾಲಯ ಎರಡು ರೀತಿಯಲ್ಲಿ ಲಾಭದಾಯಕ. ಮೊದಲನೆಯದಾಗಿ, ಮಲ-ಮೂತ್ರಗಳಿಂದಾಗಿ ಹಳಿಗಳ ಮೇಲಾಗುತ್ತಿರುವ ಸಾಮೂಹಿಕ ಅತ್ಯಾಚಾರ ನಿಲ್ಲುತ್ತದೆ. ಈಗಿನ ನಮ್ಮ ವಿಸರ್ಜನಾ ಪ್ರಕ್ರಿಯೆಯ ಕೃಪೆಯಿಂದ ಹಳಿಗಳು ಎಷ್ಟರ ಮಟ್ಟಿಗೆ ಸೀದು ತುಕ್ಕು ಹಿಡಿಯುತ್ತಿವೆಯೆಂದರೆ, ವಾರ್ಷಿಕ 350 ಕೋಟಿ ಬರೀ ಈ ತುಕ್ಕು ಹೋಗಲಾಡಿಸಲು ಖರ್ಚಾಗುತ್ತಿದೆ! ಎರಡನೆಯದಾಗಿ, ಇದು ತ್ಯಾಜ್ಯವನ್ನು ಸಂಸ್ಕರಿಸಿ, ಅದನ್ನು ನೀರು ಹಾಗೂ ಅನಿಲವನ್ನಾಗಿ ಪರಿವರ್ತಿಸುತ್ತದೆ.
ಹಣಕಾಸಿನ ಆಯ-ವ್ಯಯದ ಬಜೆಟ್‍ನಲ್ಲೂ ಮೋದಿ ಸರ್ಕಾರ ನೈರ್ಮಲಕ್ಕೆ ಹೆಚ್ಚು ಒತ್ತು ನೀಡಿದೆ. 'ಮೊದಲು ಶೌಚಾಲಯ ನಂತರ ದೇವಾಲಯ' ಎಂಬ ನಂಬಿಕೆಯ ಮೋದಿಯವರು 2019ರ ಹೊತ್ತಿಗೆ ಪ್ರತಿ ಮನೆಯಲ್ಲೂ ಸ್ವಚ್ಛತೆಯನ್ನು ಕಾಣುವ ಗುರಿ ಇರಿಸಿಕೊಂಡಿದ್ದಾರೆ. ನಮಾಮಿ ಗಂಗೆ ಹೆಸರಿನಲ್ಲಿ ಗಂಗಾ ನದಿಯ ಶುದ್ಧೀಕರಣಕ್ಕೆ 2037ಕೋಟಿಯನ್ನು ಮೀಸಲಿಟ್ಟಿದ್ದಾರೆ. ನದಿ ಪಾತ್ರಗಳ ಹಾಗೂ ಘಾಟ್‍ಗಳ ಅಭಿವೃದ್ಧಿಗೆ ಪ್ರತ್ಯೇಕವಾಗಿ 100ಕೋಟಿಯನ್ನು ಮೀಸಲಿಟ್ಟಿದ್ದಾರೆ. ದೇಶದ ಅಭಿವೃದ್ಧಿ ಶುರುವಾಗುವುದೇ ಸ್ವಚ್ಛತೆಯಿಂದ. ಅದರಲ್ಲೂ ಭಾರತದಂಥ ಕ್ಲಿಷ್ಟ ಪ್ರಜಾಪ್ರಭುತ್ವಕ್ಕೆ ಸರ್ವತೋಮುಖ ಅಭಿವೃದ್ಧಿಯೆಂಬುದು ಇಲ್ಲಿಯವರೆಗೂ ಮರೀಚಿಕೆಯಾಗಿತ್ತು. ಆದರೆ ಈಗ ಶುರುವಾಗಿರುವುದು ನಿಜವಾದ ಅರ್ಥದಲ್ಲಿ ಸುವರ್ಣ ಯುಗ ಎಂಬುದಕ್ಕೆ ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲರಿಗೋಸ್ಕರ ಹೆಣೆಯಲ್ಪಟ್ಟ ಅರ್ಥಪೂರ್ಣ ಬಜೆಟ್‍ಗಿಂತ ಬೇರೆ ಸಾಕ್ಷಿ ಬೇಕೇ? ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಹಾಗೂ ಪ್ರವಾಸೋದ್ಯಮವನ್ನು ಪರಿಣಾಮಕಾರಿಯಾಗಿಸುವ ದೊಡ್ದ ಮಟ್ಟದ ಕನಸುಗಳನ್ನು ಕಾಣುತ್ತಿದ್ದಾರೆ ನಮ್ಮ ನೇತಾರರು. ಅಂತಲೇ ನೈರ್ಮಲ್ಯಕ್ಕೆ ಒತ್ತು ನೀಡುತ್ತಿದ್ದಾರೆ. ಹಲವು ಕೋಟಿ ರುಪಾಯಿಗಳನ್ನು ಅದಕ್ಕೆಂದೇ ಮೀಸಲಿಡುತ್ತಿದ್ದಾರೆ. ನಾವೂ ನೀವೂ ಕೈಜೋಡಿಸದಿದ್ದರೆ ಕನಸುಗಳು ಹೇಗೆ ನನಸಾದಾವು? ನಮ್ಮ ರಾಷ್ಟ್ರ ಜಾಗತಿಕ ಮಟ್ಟದಲ್ಲಿ ಹೇಗೆ ಗುರುತಿಸಿಕೊಂಡೀತು?

ಎಲ್ಲವೂ ಅಂದುಕೊಂಡಂತೆಯೇ ಆದರೆ ಸ್ವಚ್ಛ ಭಾರತ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ. ಆದರೆ ಹಾಗಾಗಲು ನಾವು ಬಿಡಬೇಕಲ್ಲ? ನಮ್ಮ ಮನೆಯ ಕಸವನ್ನು ಪಕ್ಕದ ಖಾಲಿ ಸೈಟಿನಲ್ಲಿ ಎಸೆದು ಬರುವ ಜಾಯಮಾನದವರು ನಾವು. ಒಂದು ಚಿತ್ರಮಂದಿರಕ್ಕೆ ಹೋದರೂ ಅಷ್ಟೆ. ಚಿತ್ರನೋಡುವುದರಲ್ಲಿ ತಲ್ಲೀನರಾಗಿ, ತಿನಿಸುಗಳನ್ನು ಎಲ್ಲೆಂದರಲ್ಲಿ ಸುರುವಿ, ಕೊನೆಗೊಮ್ಮೆ ಎದ್ದು ನಿಂತು ಮೈ ಝಾಡಿಸಿಕೊಂಡುಬಿಟ್ಟರೆ ಮುಗಿಯಿತು. ನಾವು ಸ್ವಚ್ಛರಾದಂತೆ! ಹೇಗೂ ದುಡ್ಡು ಕೊಟ್ಟಿರುತ್ತೇವಲ್ಲ, ಚಿತ್ರಮಂದಿರದವರು ಶುಚಿ ಮಾಡಿಕೊಳ್ಳುತ್ತಾರೆ. ಮಾಡದಿದ್ದರೂ ಏನಂತೆ, ನಮ್ಮ ಕೆಲಸ ಹೇಗೂ ಮುಗಿದಿರುತ್ತದೆ. ಅಲ್ಲವೇ? ರಸ್ತೆ, ಪಾರ್ಕು, ಆಟದ ಮೈದಾನ, ಫ್ಲೈ-ಓವರ್‍ಗಳನ್ನೇ ನಾವು ಬಿಡುವುದಿಲ್ಲ ಎಂದ ಮೇಲೆ ಇನ್ನು ರೈಲು, ಬಸ್ಸುಗಳು ಯಾರಪ್ಪನ ಮನೆಯ ಗಂಟು ಎಂದು ತಲೆಕೆಡಿಸಿಕೊಳ್ಳಬೇಕು?
‘ಹೇಗೂ ನಿಚ್ಚಳ ಬಹುಮತ ಕೊಟ್ಟು ಗೆಲ್ಲಿಸಿದ್ದಾಗಿದೆ, ಇಂದಲ್ಲಾ ನಾಳೆ ಅಚ್ಛೇ ದಿನಗಳನ್ನು ತಂದೇ ತೀರುವ ಹೊಣೆ ಸರ್ಕಾರದ್ದು, ನಮ್ಮದೇನಿದೆ ಪಾತ್ರ?’ ಎಂದು ಎಲ್ಲ ಭಾರವನ್ನೂ ಆಡಳಿತ ಯಂತ್ರದ ಮೇಲೆ ಹಾಕಿ ನಿರುಮ್ಮಳವಾಗಿರುವ ಧೋರಣೆ ಬದಲಾಗಬೇಕಿದೆ. ದೆಹಲಿಯಲ್ಲಿ ಜನ್ಮತಾಳುವ ಪ್ರತಿ ಯೋಜನೆ, ಪ್ರತಿ ಕನಸನ್ನೂ ನಮ್ಮ ಸ್ಪಂದನದ ಮೂಲಕ ಪೋಷಿಸಬೇಕಿದೆ. 'ಅಚ್ಛೇ ದಿನ್' ಎಂಬ ಕನಸುಗಳ ಮೂಟೆಯಲ್ಲಿ ಸ್ವಚ್ಛತೆ ಎಂಬುದು ಒಂದು ಸಣ್ಣ ಸರಕು ಮಾತ್ರ. ಇಡೀ ದೇಶದ ಧೂಳು ಝಾಡಿಸುತ್ತೇನೆಂದು ಪೊರಕೆ ಹಿಡಿದು ಹೊರಡುವುದು ಬೇಡ, ಕಡೇ ಪಕ್ಷ ನಮ್ಮ ಮನೆ, ಬೀದಿ, ನಗರಗಳ ಸ್ವಚ್ಛತೆಯ ಜವಾಬ್ದಾರಿ ಹೊತ್ತರೆ, ಅಚ್ಛೇ ದಿನಗಳಿಗೆ ಹತ್ತಿರವಾದಂತೆಯೇ ಅಲ್ಲವೇ?
ಬಿಡಿ, ಇನ್ನೆಲ್ಲಿ ಬದಲಾಗಬೇಕಾದೀತೋ ಎಂದು ನಾವೀಗ ನಮ್ಮ ಮನಸ್ಸಾಕ್ಷಿ ಎಂಬ ಕರೆಗಂಟೆಯ ಸ್ವಿಚ್‍ ಅನ್ನೇ ಆರಿಸಿಕೊಂಡು ಕೂತಿದ್ದೇವೆ! 

Friday, 11 July 2014

ಅತ್ಯಾಚಾರಕ್ಕೆ ಪರವಾನಗಿ ಕೊಟ್ಟರೆ ಬೋಕೊ ಹರಾಮ್ ಹುಟ್ಟೀತು ಜೋಕೆ!

ಮೊತ್ತಮೊದಲನೆಯದಾಗಿ ಒಂದು ಸಿಹಿ ಸುದ್ದಿ. ಐಎನ್‍ಎಸ್ ವಿಕ್ರಾಂತ್‍ನ ಉಳಿವಿಗಾಗಿ ನಡೆಸಿದ ಹೋರಾಟ ಫಲ ನೀಡಿದೆ! ರಕ್ಷಣಾ ಸಚಿವಾಲಯ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದಿದ್ದು, ನೌಕೆಯ ಹಾಲಿ ಸ್ಥಿತಿ-ಗತಿ, ಅದರ ಪುನಶ್ಚೇತನಕ್ಕೆ ತಗಲುವ ವೆಚ್ಚ ಹಾಗೂ ಅದನ್ನು ಸ್ಮಾರಕವಾಗಿಸಲು ಬೇಕಾಗುವ ಹಣಕಾಸು ಮತ್ತಿತರ ಅಂಶಗಳ ಕುರಿತು ಮಾಹಿತಿಯನ್ನು ಕೇಳಿದೆ. ಅಷ್ಟೇ ಅಲ್ಲ, ನಿತಿನ್ ಗಡ್ಕರಿಯವರ ಆಸಕ್ತಿಯಿಂದಾಗಿ, ಪ್ರಧಾನಿಗಳ ಕಾರ್ಯಾಲಯವೂ ಇದರಲ್ಲಿ ವಿಶೇಷ ಆಸ್ಥೆ ತಾಳಿದೆ! ನಾವು ಕಲೆತು ಕೈಜೋಡಿಸಿದರೆ ಎಲ್ಲವೂ ಸಾಧ್ಯ ಎಂಬುದಕ್ಕೊಂದು ತಾಜಾ ನಿದರ್ಶನ…

ಕೆಲ ದಿನಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‍ನ ಸಂಸದ ತಪಸ್ ಪಾಲ್ ಆಡಿರುವ ಮಾತುಗಳನ್ನು ಕೇಳಿದ್ದೀರಾ? ತಮ್ಮ ಪಕ್ಷದ ಕಾರ್ಯಕರ್ತರಿಗೆ ವಿರೋಧ ಪಕ್ಷದ(ಕಮ್ಯುನಿಸ್ಟ್) ಯಾರಾದರೂ ತೊಂದರೆ ಮಾಡಿದಲ್ಲಿ ಅವರನ್ನು ಗುಂಡಿಟ್ಟು ಕೊಲ್ಲುವುದೇ ಅಲ್ಲದೇ ತಮ್ಮ ಹುಡುಗರನ್ನು ಛೂ ಬಿಟ್ಟು ಅವರ ಮನೆಯ ಹೆಂಗಸರ ಮೇಲೆ ಅತ್ಯಾಚಾರವನ್ನೂ ಮಾಡಿಸುವುದಾಗಿ ಎದೆ ತಟ್ಟಿ ಹೇಳಿಕೊಂಡಿದ್ದಾರೆ. ಇವರು ಶುರುಮಾಡಬೇಕೆಂದಿರುವ ಅತ್ಯಾಚಾರ ಅಭಿಯಾನ(?) ಯಾವ ಪಲ್ಸ್ ಪೋಲಿಯೋ ಅಥವಾ ಸಾಕ್ಷರತಾ ಆಂದೋಲನಕ್ಕೂ ಕಡಿಮೆಯಿಲ್ಲ ಎಂದುಕೊಂಡುಬಿಟ್ಟಿದ್ದಾರೇನೋ! ಇದನ್ನು ಕೇಳಿದ ಮಮತಾ ದೀದಿ ಕ್ಷಮೆಯಾಚಿಸುವಂತೆ ಅವರನ್ನು ಗದರಿಸಿ ಅವಸವಸರವಾಗಿ ಕ್ಷಮಿಸಿಯೂ ಬಿಟ್ಟಿದ್ದಾರೆ. ದೀದಿಗೆ ಸಿಟ್ಟು ಬಂದಿರುವುದು ಯಾರ ಮೇಲೆ ಗೊತ್ತೇ? ತಪಸ್ ಮೇಲಂತೂ ಖಂಡಿತ ಅಲ್ಲ. ಇದನ್ನೆಲ್ಲ ಮೊಬೈಲ್‍ನಲ್ಲಿ ಚಿತ್ರಿಸಿಕೊಂಡು ಯಥಾವತ್ತಾಗಿ ಮಾಧ್ಯಮದವರಿಗೆ ನೀಡಿದ ಅಯೋಗ್ಯನ ಮೇಲೆ. ನಾದಿಯಾ ಜಿಲ್ಲೆಯ ನಕಾಶಿಪಾರಾ ಪೋಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್‍ಗೆ ಶತಾಯ ಗತಾಯ ಆ ಅಯೋಗ್ಯನನ್ನು ಪತ್ತೆ ಹಚ್ಚುವಂತೆ ಆದೇಶಿಸಲಾಗಿದೆ. ಇನ್ನು ಅವನು ಹೇಗೆ ತಪ್ಪಿಸಿಕೊಳ್ಳುತ್ತಾನೋ ದೇವರೇ ಬಲ್ಲ. ಅವನದು ಹಾಗಿರಲಿ, ಅವನ ಹೆಂಡತಿ ಹಾಗೂ ಹೆಣ್ಣು ಮಕ್ಕಳ(ಇದ್ದರೆ) ಗತಿ?

ಈ ವಿಷಯದ ಕುರಿತು ತಮ್ಮನ್ನು ಪ್ರಶ್ನಿಸುತ್ತಿರುವ ಮಾಧ್ಯಮಗಳ ಮೇಲೆ ಎಂದಿನಂತೆ ಹರಿಹಾಯುತ್ತಿರುವ ದೀದಿ, ಇಂಥ ಹೇಳಿಕೆ ಕೊಟ್ಟ ಮಾತ್ರಕ್ಕೆ ತಪಸ್‍ನನ್ನು ಕೊಂದು ಬಿಡಲಾ ಎಂದು ವ್ಯಂಗ್ಯವಾಗಿ ಕೇಳುತ್ತಿದ್ದಾರೆ. ಸ್ತ್ರೀಯರ ಮೇಲಿನ ದೌರ್ಜನ್ಯದಲ್ಲಿ ಪಶ್ಚಿಮ ಬಂಗಾಳದ್ದೇ ಮೊದಲ Rank ಯಾಕೆ ಎಂದು ಕೇಳಿದೊಡನೆ ಉರಿದು ಬೀಳುವ ದೀದಿಗೆ ಏಷ್ಯಾದ ಅತಿದೊಡ್ಡ ಕೆಂಪುದೀಪ ಪ್ರದೇಶವಾದ ಸೋನಾಗಾಚಿ ಇರುವುದು ಕಲ್ಕತ್ತದಲ್ಲಿ ಎಂಬುದು ಮರೆತು ಹೋಗಿದೆಯೇ? ಅತ್ಯಾಚಾರಕ್ಕೆ ಬಲಿಯಾಗಿ ಸಮಾಜದಿಂದ ಪರಿತ್ಯಕ್ತರಾಗಿ ಅಲ್ಲಿಗೆ ಹೋಗಿ ಸೇರುತ್ತಿರುವವರನ್ನು ಇವರ ಮುಂದೆ ತಂದು ಸಾಲಾಗಿ ನಿಲ್ಲಿಸೋಣವೇ? ಅಥವಾ ವೇಶ್ಯಾವಾಟಿಕೆಯ ಸಲುವಾಗಿ ಆಮದಾಗುತ್ತಿರುವ ವಿದೇಶಿ ಹೆಣ್ಣುಮಕ್ಕಳ ಸಂಖ್ಯೆ ಇಡೀ ದೇಶಕ್ಕೆ ಹೋಲಿಸಿದರೆ ಕಲ್ಕತ್ತಾದಲ್ಲೇ ಅತಿ ಹೆಚ್ಚು ಎಂಬುದನ್ನು ಅಂಕಿ-ಅಂಶಗಳ ಸಮೇತ ನಿರೂಪಿಸೋಣವೇ?

ಪಶ್ಚಿಮ ಬಂಗಾಳದ್ದು ಈ ಕಥೆಯಾದರೆ ಉತ್ತರ ಪ್ರದೇಶದ್ದಂತೂ ಕೇಳುವುದೇ ಬೇಡ. ಒಂದಕ್ಕೆ ಇನ್ನೊಂದು ಉಚಿತ ಎಂಬಂತೆ, ಅತ್ಯಾಚಾರ ಮಾಡಿಸಿಕೊಂಡರೆ ಮರಕ್ಕೆ ನೇತುಹಾಕಿಸಿಕೊಳ್ಳುವ ದಯಾಮರಣ ಫ್ರೀ! ಅಖಿಲೇಶ್ ಯಾದವ್‍ರ ರಾಜ್ಯಭಾರದಲ್ಲಿ ಉತ್ತರಪ್ರದೇಶ ಹೆಂಗಸರಿಗೆ ಹಾಗೂ ಮಕ್ಕಳಿಗೆ ಅತ್ಯಂತ ಅಸುರಕ್ಷಿತ ರಾಜ್ಯ ಎಂಬ ಕುಖ್ಯಾತಿ ಗಳಿಸಿದೆ. ಇರಬೇಕಾದ್ದೇ. 20ಕೋಟಿ ಜನಸಂಖ್ಯೆಯ ರಾಜ್ಯವನ್ನು ಬರೀ 1.8ಲಕ್ಷ ಪೋಲೀಸರ ಕೈಗಿತ್ತರೆ ಇನ್ನೇನಾಗಲು ಸಾಧ್ಯ? ಅಪ್ಪನ ಆಳ್ವಿಕೆಯ ಕಾಲದಲ್ಲಿದ್ದ ದಾಖಲೆ ಅತಿಹೆಚ್ಚು ಕೊಲೆಗಳದ್ದು. ದಾಖಲಾಗಿದ್ದ ಕೊಲೆಗಳ ಸಂಖ್ಯೆ 6126! ಮಗನ ಸಾಧನೆ ಅತ್ಯಾಚಾರದಲ್ಲಿನ ಹೆಚ್ಚಳ. ಅದೂ ಶೇಕಡ 50ರಷ್ಟು. ಕಳೆದ ವರ್ಷವೊಂದರಲ್ಲೇ ದಾಖಲಾದ ಅತ್ಯಾಚಾರಗಳ ಸಂಖ್ಯೆ 3050! ಸರಿಯೆ. ಕಂತೆಗೆ ತಕ್ಕ ಬೊಂತೆ.

ಇನ್ನು ದೆಹಲಿ. ದೇಶವೊಂದರದೇ ಅಲ್ಲ, ಅತ್ಯಾಚಾರಗಳ ರಾಜಧಾನಿಯೂ ಹೌದು. ನಿರ್ಭಯಾಳ ಹಂತಕರಿಗೆ ಗಲ್ಲು ಶಿಕ್ಷೆಯಾಗಿದ್ದರೂ ಪರಿಸ್ಥಿತಿ ಹತೋಟಿಗೆ ಬಂದಿಲ್ಲ. ನಮ್ಮ ನ್ಯಾಯಾಂಗವೇ ತಲೆ ತಗ್ಗಿಸುವಷ್ಟರ ಮಟ್ಟಿಗೆ ಸಾಗಿದೆ ಅತ್ಯಾಚಾರಿಗಳ ಭರಾಟೆ. ಮತ್ತೊಂದು ರೀತಿಯ ಕಳವಳಕಾರಿ ಬೆಳವಣಿಗೆ ನೆರೆಯ ಕೇರಳದಲ್ಲಿ ನಡೆದಿದೆ. ದಿನವೊಂದಕ್ಕೆ ಸುಮಾರು 200 ಹೆಣ್ಣುಮಕ್ಕಳು, ಅದರಲ್ಲೂ ಹಿಂದೂಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಿದ್ದಾರೆ. ಹೀಗೆ ಕಾಣೆಯಾಗುವವರಲ್ಲಿ ಹತ್ತರಿಂದ ಹದಿನಾರು ವರ್ಷದೊಳಗಿನವರೇ ಹೆಚ್ಚು! ಇವರೆಲ್ಲ ಕೊನೆಗೆ ತಲುಪುವುದು ಸೂಳೆಗೇರಿಗಳನ್ನೇ!

ಪ್ರತಿಯೊಂದು ಅತ್ಯಾಚಾರ ಬೆಳಕಿಗೆ ಬಂದಾಗಲೂ, ಮಾಧ್ಯಮಗಳು ಇದಕ್ಕೆ ಅನಾವಶ್ಯಕ ಪ್ರಾಶಸ್ತ್ಯ ನೀಡುತ್ತಿವೆ ಎಂದು ಬೊಬ್ಬೆ ಹಾಕುವ ರಾಜಕಾರಣಿಗಳಿಗೆ, ಈ ಹೊತ್ತಿನ ಆವಶ್ಯಕತೆ ಹೆಣ್ಣುಮಕ್ಕಳ ಸುರಕ್ಷತೆ ಎಂಬುದು ಏಕೆ ಮನದಟ್ಟಾಗುತ್ತಿಲ್ಲ? ಪಕ್ಷ, ಧರ್ಮ, ಜನಾಂಗ ಅಥವಾ ದೇಶಕ್ಕೆ ಸಂಬಂಧಪಟ್ಟ ವ್ಯಾಜ್ಯಗಳೆಲ್ಲ ಹೆಣ್ಣುಮಕ್ಕಳ ಅಪಹರಣ ಹಾಗೂ ಅತ್ಯಾಚಾರಗಳಲ್ಲೇ ಪರ್ಯವಸಾನವಾಗುತ್ತಿರುವುದೇಕೆ? ವಿಕೃತ ಮನಸುಗಳ ಎಲ್ಲ ಕಾಯಿಲೆಗಳಿಗೂ ಪರಸ್ತ್ರೀ ಶೋಷಣೆಯೇ ಮದ್ದೇ? ತಪಸ್‍ರಂಥ ಸಂಸದರು ಯಾರನ್ನೋ ಶಿಕ್ಷಿಸಲೋಸುಗ ಹೆಣ್ಣುಕುಲದ ಶೀಲಹರಣದ ಕಂಕಣ ತೊಟ್ಟು ನಮಗೆ ಬೋಕೊ ಹರಾಮ್‍ಅನ್ನು ನೆನಪಿಸುತ್ತಿದ್ದಾರೆ.

ಎಷ್ಟು ಭಯಾನಕ ಈ ಬೋಕೊ ಹರಾಮ್ ಎಂಬ ಹೆಣ್ಣುಬಾಕ, ಕ್ರೂರ, ಮುಸ್ಲಿಂ ಮೂಲಭೂತವಾದಿ ಸಂಘಟನೆ ಗೊತ್ತಿದೆಯೇ ನಿಮಗೆ?

ಇದೇ ವರ್ಷದ ಏಪ್ರಿಲ್ ತಿಂಗಳ 16ನೇ ತಾರೀಖಿನ ಮಧ್ಯರಾತ್ರಿ. ನೈಜೀರಿಯಾ ದೇಶದ ಚಿಬೋಕ್‍ ಎಂಬಲ್ಲಿನ, ಹೆಣ್ಣುಮಕ್ಕಳ ಒಂದು ವಸತಿ ಶಾಲೆ. 395 ಹೆಣ್ಣುಮಕ್ಕಳು ಮಲಗಿ ನಿದ್ದೆಹೋಗಿದ್ದರು. ಮೋಟಾರ್ ಬೈಕ್ ಹಾಗೂ ಟ್ರಕ್ಕುಗಳಲ್ಲಿ ಬಂದ ನೂರಾರು ಶಸ್ತ್ರಧಾರಿಗಳು ಆ ಹೆಣ್ಣುಮಕ್ಕಳನ್ನು ಹೊತ್ತೊಯ್ಯಲು ಪ್ರಯತ್ನಿಸಿದರು. ಸುಮಾರು ನೂರು ಹುಡುಗಿಯರು ತಪ್ಪಿಸಿಕೊಂಡು ಓಡಿದರೆ, ಉಳಿದವರು ಅಪಹರಣಕಾರರ ಕೈಗೆ ಸಿಕ್ಕಿಬಿಟ್ಟರು. ಹುಡುಗಿಯರನ್ನು ಹೊತ್ತೊಯ್ಯುವ ಮುನ್ನ ಅಪಹರಣಕಾರರು ಸುಮ್ಮನೆ ಹೋಗಲಿಲ್ಲ. ಶಾಲೆಯಲ್ಲಿದ್ದ ಆಹಾರ ಸಾಮಗ್ರಿಯ ದಾಸ್ತಾನಿಗೆ ಹಾಗೂ ಕಟ್ಟಡಕ್ಕೆ ಬೆಂಕಿ ಹಚ್ಚಿದರು! ಹಾಗೆ ಅವೇಳೆಯಲ್ಲಿ ಬಂದು ಅನಾಮತ್ತಾಗಿ ಹೆಣ್ಣುಮಕ್ಕಳನ್ನು ಅಪಹರಿಸಿದವರು ಬೇರಾರೂ ಅಲ್ಲ, ಉತ್ತರ ನೈಜೀರಿಯಾ ತುಂಬೆಲ್ಲಾ ಅಕ್ಷರಶಃ ಅಶಾಂತಿಯನ್ನು ಬಿತ್ತಿರುವ ಬೋಕೊ ಹರಾಮ್ ಎಂಬ ಮುಸ್ಲಿಂ ಮೂಲಭೂತವಾದಿ ಸಂಘಟನೆಯ ಉಗ್ರಗಾಮಿಗಳು.

ಬೋಕೊ ಹರಾಮ್ ಎಂಬುದರ ಅರ್ಥವೇ 'ಆಂಗ್ಲರ ಶೈಲಿಯ ಶಿಕ್ಷಣ ಪಡೆಯುವುದು ಮಹಾಪರಾಧ' ಎಂದು! ಕುರಾನ್ ಓದುವುದನ್ನು ಬಿಟ್ಟು ಎ,ಬಿ,ಸಿ,ಡಿ ಕಲಿಯುವವರನ್ನು ಹಿಡಿದು ಶಿಕ್ಷಿಸುವುದೇ ಈ ಸಂಘಟನೆಯ ಗುರಿಯೆಂದ ಮೇಲೆ ವಸತಿ ಶಾಲೆಯಲ್ಲಿದ್ದು ಕಲಿಯುತ್ತಿದ್ದ ಹುಡುಗಿಯರನ್ನು ಬಿಟ್ಟಾರೆಯೇ? ನೈಜೀರಿಯಾದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಕ್ರೈಸ್ತ ಮತದವರನ್ನು ಹೊಸಕಿ ಹಾಕುವುದು ಹಾಗೂ ಇಸ್ಲಾಂ ಧರ್ಮವನ್ನು ಷರಿಯಾ ಕಾನೂನಿನ ಪ್ರಕಾರ ಪಾಲಿಸದ ಮುಸ್ಲಿಮರನ್ನು ಮುಲಾಜಿಲ್ಲದೆ ಹಿಡಿದು ಕೊಲ್ಲುವುದೇ ಈ ಉಗ್ರಗಾಮಿಗಳ ಉದ್ದೇಶ! ನೈಜೀರಿಯಾವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸಲು ಅಂದು ಒಸಾಮ-ಬಿನ್-ಲಾಡೆನ್‍ನಿಂದ ಅಪಾರ ಹಣ, ಜನ ಬೆಂಬಲ ಪಡೆದು ಚಿಗುರೊಡೆದ ಈ ಸಂಘಟನೆ ಇಂದು ಬಲಿಷ್ಠವಾಗಿ ಬೇರು ಬಿಟ್ಟಿದೆ.

ಇಷ್ಟು ವರ್ಷಗಳಿಂದ ಸಾವಿರಾರು ಜನರನ್ನು ಕೊಲ್ಲುತ್ತಲೇ ಬಂದಿರುವ ಇದು ಈ ವರ್ಷದಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚಿನ ನಾಗರಿಕರನ್ನು ಕೊಂದು ಹಾಕಿದೆ. ಬಾಂಬ್ ದಾಳಿಗಳಿಗೆ, ರಕ್ತಪಾತಕ್ಕೆ ನಾವೆಲ್ಲ ಈಗೀಗ ಒಗ್ಗಿ ಹೋಗಿದ್ದೇವೆ ಅನಿಸುತ್ತದೆ. ಆದರೆ, ವಿಶ್ವದ ಗಮನವನ್ನು ತನ್ನೆಡೆ ಸೆಳೆಯಲು ಹೆಣ್ಣುಮಕ್ಕಳ ಅಪಹರಣಕ್ಕಿಳಿದಿರುವುದು ಮಾತ್ರ ನಿಜಕ್ಕೂ ಆತಂಕ ಮೂಡಿಸುತ್ತಿದೆ.  ಅಂದು ಅಪಹೃತರಾದ ಮಕ್ಕಳು ಇಂದಿನವರೆಗೂ ಪತ್ತೆಯಾಗಿಲ್ಲ. ನೈಜೀರಿಯಾದ ಅಧ್ಯಕ್ಷರ ಹೆಸರು 'ಗುಡ್‍ಲಕ್ ಜೊನಾಥನ್' ಆದರೂ ಅವರನ್ನು ನೆಚ್ಚಿಕೊಳ್ಳಲಾಗದೆ ಜನ ತಮ್ಮ ಬ್ಯಾಡ್‍ಲಕ್‍ಅನ್ನು ಹಳಿದುಕೊಳ್ಳುತ್ತಿದ್ದಾರೆ. ಏಕೆಂದರೆ ತೈಲಭರಿತವಾದ ಈ ರಾಷ್ಟ್ರದಲ್ಲಿ ಅಭಿವೃದ್ಧಿಯನ್ನು ಬದಿಗೊತ್ತಿ ಭ್ರಷ್ಟಾಚಾರದ ಭಾಷ್ಯ ಬರೆದ ಜೊನಾಥನ್ ಅವರಿಂದಲೇ ಇಂದು ಬೋಕೊ ಹರಾಮ್ ಈ ಮಟ್ಟಕ್ಕೆ ಬೆಳೆದಿರುವುದು ಎಂಬ ಅಭಿಪ್ರಾಯ ಎಲ್ಲರಿಗೂ ಇದೆ.  ಆದ್ದರಿಂದ ನಿರ್ವೀರ್ಯವಾಗಿರುವ ಸರ್ಕಾರವನ್ನು ನೆಚ್ಚಿಕೊಳ್ಳದೇ ತಂದೆ-ತಾಯಿಯರೇ ತಮ್ಮ ಬೈಕುಗಳನ್ನು ದಟ್ಟಡವಿಯ ಸಂದು-ಗೊಂದುಗಳಲ್ಲಿ ನುಗ್ಗಿಸಿಕೊಂಡು ಹೋಗುತ್ತಿದ್ದಾರೆ. ಬೋಕೊ ಹರಾಮ್‍ನ ರಾಕ್ಷಸರು ಕಾಡಿನ ಯಾವ ಮೂಲೆಯಲ್ಲಿ ತಮ್ಮ ಕಂದಮ್ಮಗಳನ್ನು ಕೂಡಿಹಾಕಿರಬಹುದು ಎಂದು ಹಗಲು-ರಾತ್ರಿಗಳ ಪರಿವೆಯಿಲ್ಲದೆ ಹುಡುಕಾಡುತ್ತಿದ್ದಾರೆ. ಹೀಗೆ ಕಾಡಿನ ಗರ್ಭ ಹೊಕ್ಕಿರುವ ಅವರುಗಳಿಗೆ ತಾವು ಜೀವಂತವಾಗಿ ಹೊರಬರುತ್ತೇವೆಂಬ ಖಾತ್ರಿಯಿಲ್ಲ. ಅದು ಅವರಿಗೆ ಮುಖ್ಯವೂ ಅಲ್ಲ ಬಿಡಿ.

ಈ ಪಾಶವೀತನದ ಕಾರಣಕರ್ತ ಬೋಕೊ ಹರಾಮ್ನ ನಾಯಕ ಅಬುಬಕರ್ ಶೇಕಾವು ಒಂದು ವೀಡಿಯೊ ಬಿಡುಗಡೆ ಮಾಡಿದ್ದಾನೆ. ಅದರಲ್ಲಿ, 'ಅಂಗ್ಲರ ಪದ್ಧತಿಯ ಶಾಲೆಯಲ್ಲಿ ಕಲಿಯುತ್ತಿದ್ದ ನಿಮ್ಮ ಮಕ್ಕಳನ್ನು ಹೊತ್ತೊಯ್ದಿರುವವನು ನಾನೇ. ಅವರನ್ನು ಮಾರುವಂತೆ ಅಲ್ಲಾಹುವಿನಿಂದ ಆಜ್ಞೆಯಾಗಿದೆ. ಆದ್ದರಿಂದ ಮಾರಿಬಿಡುತ್ತೇನೆ' ಎಂದು ಗಹಗಹಿಸುತ್ತಿದ್ದಾನೆ. ಇಷ್ಟು ಹೊತ್ತಿಗೆ ಶೇಕಾವುನ ತಂಡದವರು ಆ ಹುಡುಗಿಯರ ಮೇಲೆರಗಿ ತಮ್ಮ ತೃಷೆ ತೀರಿಸಿಕೊಳ್ಳದಿರುತ್ತಾರೆಯೇ? ನಾಳೆ ಮಾರಾಟವಾಗಿ ಯಾರದೋ ಜೀತದಾಳಾಗಿ ಕೊನೆಗೊಮ್ಮೆ ಮೈತುಂಬ ರೋಗ-ರುಜಿನ ಹೊತ್ತು ಬೀದಿಗೆ ಬರುವುದಕ್ಕಿಂತ ಹೆಚ್ಚಿನ ನರಕ ಬೇರೇನಿರಲು ಸಾಧ್ಯ? ಆದ್ದರಿಂದಲೇ, ಹೆತ್ತವರು ಕಂಗಾಲಾಗಿದ್ದಾರೆ. 'ನಮ್ಮ ಹೆಣ್ಣುಮಕ್ಕಳನ್ನು ಕರೆತನ್ನಿ' ಎಂದು ಕಣ್ಣೀರಿಡುತ್ತ ವಿಶ್ವಸಂಸ್ಥೆಯ ಮೆಟ್ಟಿಲೇರಿದ್ದಾರೆ. ಅಮೆರಿಕ, ಬ್ರಿಟನ್ ಹಾಗೂ ಇಸ್ರೇಲ್‍ಗಳ ಮಿಲಿಟರಿ ಪಡೆಗಳು ಅಲ್ಲೇ ಬೀಡುಬಿಟ್ಟಿದ್ದರೂ ಯಾರೂ ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗುತ್ತಿಲ್ಲ. ಏಕೆಂದರೆ ಎರಡು ವರ್ಷಗಳ ಕೆಳಗೆ ಹೀಗೇ ಒತ್ತೆಯಾಳುಗಳಾಗಿದ್ದ ಬ್ರಿಟನ್ ಹಾಗೂ ಇಟಲಿಯ ನೌಕರರನ್ನು ಬಿಡಿಸುವ ಸಲುವಾಗಿ ಕೈಗೊಂಡ ಕಾರ್ಯಾಚರಣೆಯ ಸುಳಿವು ಸಿಕ್ಕಿ ಒತ್ತೆಯಾಳುಗಳನ್ನು ಕೊಲ್ಲಲಾಗಿತ್ತು.

ಒಟ್ಟನಲ್ಲಿ ಎಲ್ಲವೂ ಅತಂತ್ರ. ಈ ಘಟನೆಯ ನಂತರವೂ ಸುಮಾರು 90 ಮಕ್ಕಳು ಕಾಣೆಯಾಗಿದ್ದಾರೆ. ಅವರಲ್ಲಿ ಮೂರು ವರ್ಷದ ಹಸುಳೆಗಳೂ ಇದ್ದಾರೆಂದರೆ ಎಷ್ಟು ಮರುಕವಾಗುತ್ತದಲ್ಲವೆ? ಮೊದಲೇ ಅನಕ್ಷರಸ್ಥ ಹೆಣ್ಣುಮಕ್ಕಳ ದೇಶ. ನಾಲ್ಕರಲ್ಲಿ ಮೂರು ಹುಡುಗಿಯರಿಗೆ ಓದು-ಬರಹ ಬಾರದು. ತೀರಾ ಎಳವೆಯಲ್ಲೇ ಮದುವೆಯಾಗಿಬಿಡುತ್ತದೆ. ಗಂಡನಿಗೆ ಹೊಸ ಹೆಂಡತಿಯರು ಬರುತ್ತಿದ್ದಂತೆ ವಿಚ್ಛೇದನವೂ ಆಗಿಬಿಡುವುದರಿಂದ ಇತ್ತ ಗಂಡನೂ ಇರದ ಅತ್ತ ಕಡುಬಡವನಾದ ತಂದೆಯೂ ಮನೆಗೆ ಸೇರಿಸದ ಅನಾಥ ಬದುಕು. ಹೊಟ್ಟೆ ಪಾಡಿಗೆ ದೇಹ ಮಾರಿಕೊಂಡು ಬೀದಿ ಬದಿಯಲ್ಲೇ ಬದುಕುತ್ತಿರುವ ಇಂಥ ಸಾವಿರಾರು ಹೆಣ್ಣುಮಕ್ಕಳಿಗೆ ಯಾರು, ಎಷ್ಟೆಂದು ಆಶ್ರಯ ಕೊಟ್ಟಾರು ಹೇಳಿ?

ಬೋಕೊ ಹರಾಮ್‍ನ ಉದಾಹರಣೆ ಕೇಳಿ ಜಿಗುಪ್ಸೆಯಾಗುತ್ತದೆ. ಅತ್ಯಾಚಾರ ಮಾಡಿಸುತ್ತೇನೆ ಎಂದು ಘಂಟಾಘೋಷವಾಗಿ ಹೇಳುವ ರಾಜಕಾರಣಿಗಳನ್ನು ಕಂಡಾಗ ಕೆಂಡದಂಥ ಕೋಪ ಬರಬಾರದೇ? ತಾನೂ ಓರ್ವ ಹೆಣ್ಣಾಗಿ, ಹೀಗೆ ಹೇಳುವ ತನ್ನ ಪಕ್ಷದವರ ಹೆಡೆ ಮುರಿ ಕಟ್ಟದೆ ಪರೋಕ್ಷವಾಗಿ ಪರವಾನಗಿ ನೀಡುವ ಮುಖ್ಯಮಂತ್ರಿಯನ್ನು ನಡುಬೀದಿಯಲ್ಲಿ ನಿಲ್ಲಿಸಿ ಪ್ರಶ್ನಿಸಬಾರದೇ? ಕವಚ-ಕುಂಡಲಗಳೊಡನೆ ಹುಟ್ಟಿದವನು ಕರ್ಣನೊಬ್ಬನೇ ಅಲ್ಲ. ನೈತಿಕತೆಯೆಂಬ ರಕ್ಷಾಕವಚ ನಮ್ಮ ಬಳಿಯೂ ಇದೆ. ಮನಸನ್ನು ತಡವಿ ನೋಡಿಕೊಳ್ಳಬೇಕಷ್ಟೇ. ಇಲ್ಲದಿದ್ದರೆ ಇಲ್ಲೂ ಒಂದು ಬೋಕೊ ಹರಾಮ್‍ ಹುಟ್ಟಿಕೊಳ್ಳುವ ದಿನ ದೂರವಿಲ್ಲ. ಅಲ್ಲವೇ? 

Wednesday, 2 July 2014

ವೈರುದ್ಧ್ಯದ ನಡುವೆಯೂ ಒಗ್ಗಟ್ಟಾಗಿರುವುದು ಸಾಧ್ಯ!

ಸ್ನೇಹ, ಸಂಬಂಧ ಹಾಗೂ ಉದ್ಯೋಗಗಳಲ್ಲಿ ಒಂದೇ ಒಂದು ಸಣ್ಣ ತಪ್ಪು ಮಾಡಿ ನೋಡೋಣ. ಕಥೆ ಮುಗಿಯಿತು ಅಂತಲೇ ಲೆಕ್ಕ. ಅಲ್ಲಿಯವರೆಗಿನ ನಿಮ್ಮ ಒಳ್ಳೆಯತನಗಳೆಲ್ಲಾ ಅಳಿಸಿಹೋಗುತ್ತವೆ. ಆ ಕ್ಷಣದಿಂದ ನೀವು ಆಜನ್ಮ ವೈರಿಯಾಗಿಬಿಡುತ್ತೀರ. ಮತ್ತೆ ಅದೇ ಹಳೆಯ ನಂಬಿಕೆ ವಿಶ್ವಾಸ ಗಳಿಸಿಕೊಳ್ಳಲು ಭಗೀರಥ ಪ್ರಯತ್ನವೂ ಸಾಲುವುದಿಲ್ಲ. 'ಈ ಕೆಲಸ ಇವತ್ತು ಮಾಡಲಾಗುತ್ತಿಲ್ಲ ಬಾಸ್, ನಾಳೆ ಮಾಡ್ತೇನೆ' ಅಂತ ಸೀದಾ ಮುಖದ ಮೇಲೆ ಹೇಳಿ ನೋಡಿ. ಅಷ್ಟೆ! ಅಲ್ಲಿಯವರೆಗೂ ಹಗಲು ರಾತ್ರಿ ತೇಯ್ದು ಮೂಡಿಸಿದ್ದ ಒಳ್ಳೆಯ ಅಭಿಪ್ರಾಯದ ಗತಿ ಗೋವಿಂದ! ಮೇಲಧಿಕಾರಿಯ ಒಳಗಿನ ‘ಅಹಂ’ ಎಂಬ ಕಾಳ ಸರ್ಪ ಭುಸುಗುಡುತ್ತಾ ಹೆಡೆಯೆತ್ತಿಬಿಡುತ್ತದೆ. 'ನಂಗೇ ಆಗಲ್ಲ ಅಂತೀಯಾ, ಗೊತ್ತಿದೆ ಬಿಡು ನಿನ್ನ ಕೆರಿಯರ್‍ನ ಹೇಗೆ ಮರ್ಡರ್ ಮಾಡ್ಬೇಕು ಅಂತ' ಎಂದು ಆ ಕ್ಷಣವೇ ಮನಸಲ್ಲಿ ಮಚ್ಚು ಲಾಂಗು ಮಸೆಯತೊಡಗುತ್ತಾನೆ. ಗೆಳೆಯನ ಯಾವುದಾದರೂ ಕೆಲಸವನ್ನು ಕಟುವಾಗಿ ವಿರೋಧಿಸಿ ನೋಡಿ. ಇದ್ದಕ್ಕಿದ್ದಂತೆ ಅವನು ನಿಮ್ಮನ್ನು ಎಲ್ಲದರಲ್ಲೂ ಮರೆಯತೊಡಗುತ್ತಾನೆ. ಅಷ್ಟು ದಿನ ಹೆಗಲು ಕೊಟ್ಟದ್ದು ಅರ್ಥಹೀನವಾಗಿಬಿಡುತ್ತದೆ. ಇನ್ನು ಸಂಬಂಧಿಕರಲ್ಲಂತೂ ಮುಗಿದೇ ಹೋಯಿತು. ನಯ-ನಾಜೂಕಿನ ಮಾತುಗಾರಿಕೆ ಬಿಟ್ಟು ಬೇಕಂತಲೇ ಸ್ವಲ್ಪ ಒರಟಾಗಿ ಪ್ರತಿಕ್ರಿಯಿಸಿ ಬಿಡಿ, ನಿಮಗೆ ಜಂಭ ಅಥವಾ ದೊಡ್ಡಸ್ತಿಕೆ ಬಂದಿರುವುದರ ಬಗ್ಗೆ ಇಡೀ ಕುಟುಂಬ ವರ್ಗಕ್ಕೆ ಸುತ್ತೋಲೆ ಹೊರಡಿಸಿಬಿಡುತ್ತಾರೆ.ಹೇಳಿದ್ದನ್ನೆಲ್ಲ ಕೇಳುತ್ತಾ, ಸರಿಯೆಂದು ತಲೆಯಾಡಿಸುತ್ತಾ ಇರುವವರೆಗೆ ಮಾತ್ರ ಸಂಬಂಧಗಳಿಗೆ ಉಳಿಗಾಲ, ಬೆಲೆ. ವಿರೋಧಿಸಿದರೆ ಅಥವಾ ಇತರರ ದೃಷ್ಟಿಯಲ್ಲಿ ತಪ್ಪು ಎನಿಸುವಂಥ ಕೆಲಸ ಮಾಡಿಬಿಟ್ಟರೆ ಮನಸಿಗೆ ಮೈಲಿಗೆ ಹಿಡಿದುಬಿಡುತ್ತದೆ. ಆ ತಪ್ಪನ್ನು ಒತ್ತಟ್ಟಿಗಿಟ್ಟು, ವ್ಯಕ್ತಿಯನ್ನು ಮೊದಲಿನಂತೆಯೇ ಪ್ರೀತಿಸುವ, ವ್ಯವಹರಿಸುವ ಕ್ರಿಯೆ ಕೊಡಲಿ ಪೆಟ್ಟು ತಿನ್ನುತ್ತದೆ. ವಿಷಯಾಧಾರಿತ ವೈರುದ್ಧ್ಯವನ್ನಿಟ್ಟುಕೊಂಡೂ ಒಬ್ಬರನ್ನು ಪ್ರೀತಿಸುವುದು ಅಷ್ಟೊಂದು ಕಷ್ಟವೇ? ನಿಜ, ನಮಗದು ತುಂಬಾ ಕಷ್ಟ. ಆಚರಣೆಗೆ ತರಲು ತಿಣುಕಾಡಿಬಿಡುತ್ತೇವೆ. ಆದರೆ ದಕ್ಷಿಣ ಅಮೆರಿಕದ ಎರಡು ದೇಶಗಳು 19ನೇ ಶತಮಾನದಿಂದಲೇ ಪರಸ್ಪರರನ್ನು ವಿರೋಧಿಸುತ್ತಾ ಅಷ್ಟೇ ತೀವ್ರವಾಗಿ ಪ್ರೀತಿಸುತ್ತಾ ಬಂದಿವೆ. ಇದೆಲ್ಲ ಏಕೆ ನೆನಪಾಗುತ್ತಿದೆಯೆಂದರೆ ಆ ದೇಶಗಳು ಈಗ ನಡೆಯುತ್ತಿರುವ ಫುಟ್‍ಬಾಲ್‍ನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಅವೇ ಅರ್ಜೆಂಟಿನಾ ಮತ್ತು ಬ್ರೆಜಿಲ್!


ಹೆಸರೊಂದೇ ಸಾಕು, ಫುಟ್‍ಬಾಲ್‍ನಲ್ಲಿನ ಕಡು ವೈರ ಕಣ್ಮುಂದೆ ಬರಲು. ಇವುಗಳ ಹಣಾಹಣಿ 'ದಕ್ಷಿಣ ಅಮೆರಿಕನ್ನರ ಕದನ' ಎಂದೇ ಖ್ಯಾತ. ಜಿದ್ದಾಜಿದ್ದು ಯಾವ ಮಟ್ಟದ್ದೆಂದರೆ ಆಡಿರುವ 95 ಪಂದ್ಯಗಳಲ್ಲಿ ಅರ್ಜೆಂಟಿನಾ ಗೆದ್ದಿರುವುದು 36ರಲ್ಲಾದರೆ ಬ್ರೆಜಿಲ್ ಗೆದ್ದಿರುವುದು 35ರಲ್ಲಿ. ಬ್ರೆಜಿಲ್ ಐದು ವಿಶ್ವಕಪ್‍ಗಳನ್ನು ಗೆದ್ದಿದ್ದರೆ ಅರ್ಜೆಂಟಿನಾ ಗೆದ್ದಿರುವುದು ಎರಡೇ. ಅರ್ಜೆಂಟಿನಾಗೆ ಸಾಲಾಗಿ ಎರಡು ಒಲಿಂಪಿಕ್‍ ಚಿನ್ನ ದಕ್ಕಿದ್ದರೆ ಬ್ರೆಜಿಲ್‍ನ ಗಳಿಕೆ ಶೂನ್ಯ. ಅದೇನೇ ಇದ್ದರೂ ಫುಟ್‍ಬಾಲ್ ಪ್ರಪಂಚದ ಅಗ್ರ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಇವುಗಳ ಹೆಸರು ಮಾತ್ರ ಇರಲೇಬೇಕು.

ದಕ್ಷಿಣ ಅಮೆರಿಕದ ರಾಷ್ಟ್ರಗಳ ಪೈಕಿ ಮೊತ್ತ ಮೊದಲು ಫುಟ್‍ಬಾಲ್‍ ಆಡತೊಡಗಿದ್ದು ಅರ್ಜೆಂಟಿನಾ ಮತ್ತು ಉರುಗ್ವೆ. ತಡವಾಗಿ ಕಣಕ್ಕಿಳಿದ ಬ್ರೆಜಿಲ್ ನಿಧಾನವಾಗಿ ಬಲಾಢ್ಯವಾಗತೊಡಗಿದಂತೆ ಹೊತ್ತಿತು ನೋಡಿ ಅದರ ಹಾಗೂ ಅರ್ಜೆಂಟಿನಾ ನಡುವಿನ ದ್ವೇಷದ ಕಿಡಿ. ಅದೇನು ಪೈಪೋಟಿ, ಅದೆಷ್ಟು ರೋಷ, ಕೆಚ್ಚು ಆಟಕ್ಕಿಳಿದರೆ!1937ರ ಪಂದ್ಯದಲ್ಲಿ ಎರಡು ಗೋಲು ಹೊಡೆದ ಅರ್ಜೆಂಟಿನಾ ಆಟಗಾರರು ಬ್ರೆಜಿಲ್‍ನ ಕರಿಯ ಆಟಗಾರರನ್ನು ಕೋತಿಗಳೆಂದು ಯಾವ ಪರಿ ಅಣಕಿಸಿದರೆಂದರೆ ಅವರು ಸಿಟ್ಟಿಗೆದ್ದು ಮೈದಾನದಿಂದಲೇ ಹೊರನಡೆದರು. ಮತ್ತೆ 1939ರ ರೋಕಾ ಕಪ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾದಾಗ ಮೊದಲ ಪಂದ್ಯದಲ್ಲಿ ಅರ್ಜೆಂಟಿನಾ 5-1ರ ಅಂತರದಿಂದ ಗೆದ್ದಿತು. ಎರಡನೆಯ ಪಂದ್ಯದ ಸ್ಕೋರ್ 2-2 ಇದ್ದಾಗ ಬ್ರೆಜಿಲ್‍ನ ಪರವಾಗಿ ಪೆನಾಲ್ಟಿ ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಅರ್ಜೆಂಟಿನಾ ಆಟಗಾರ ಅರ್ಕಾಡಿಯೊ ಲೋಪೆಜ್ ರೆಫರಿಯನ್ನು ಕೆಟ್ಟದಾಗಿ ನಿಂದಿಸಿದ. ಪೋಲೀಸರು ಬಂದು ಲೋಪೆಜ್‍ನನ್ನು ಹೊರಗಟ್ಟಿದ್ದೇ ತಡ ಸಿಟ್ಟಾದ ಅರ್ಜೆಂಟಿನಾ ತಾನೇನು ಕಡಿಮೆ ಎಂದು ಮೈದಾನದಿಂದ ಹೊರನಡೆಯಿತು. ಎದುರಾಳಿ ತಂಡದ ಗೋಲ್‍ಕೀಪರ್ ಇಲ್ಲದೆಯೇ ಗೋಲ್ ಹೊಡೆದ ಬ್ರೆಜಿಲ್, ಪಂದ್ಯ ಗೆದ್ದದ್ದೂ ಆಯಿತು! ಇಷ್ಟಾದರೂ ಎರಡೂ ತಂಡಗಳು ಆಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಮತ್ತೆ 1945ರಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್‍ನ ಆಟಗಾರನೊಬ್ಬ ಅರ್ಜೆಂಟಿನಾದವನ ಕಾಲು ಮುರಿದ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು 1946ರಲ್ಲಿ ಅದೇ ಘಟನೆ ಮರುಕಳಿಸಿದಾಗ. ಬ್ರೆಜಿಲ್‍ನ ರೋಜಾ ಪಿಂಟೋ ಅರ್ಜೆಂಟಿನಾದ ನಾಯಕ ಜೋಸ್‍ನ ಮಂಡಿಯ ಕೆಳಗಿನ ಮೂಳೆ ಮುರಿದು ಹೋಗುವಂಥ ಪೆಟ್ಟನ್ನು ಕೊಟ್ಟಾಗ ರೊಚ್ಚಿಗೆದ್ದ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿ, ಎಲ್ಲವೂ ಅಲ್ಲೋಲಕಲ್ಲೋಲವಾಗಿ ಸ್ವಲ್ಪ ಹೊತ್ತು ಆಟವನ್ನೇ ನಿಲ್ಲಿಸಬೇಕಾಯಿತು. ಮತ್ತೆ ಮುಂದುವರೆದ ಆಟ ಮುಕ್ತಾಯಗೊಂಡಾಗ ಅರ್ಜೆಂಟಿನಾ 2-0 ಅಂತರದಲ್ಲಿ ಗೆದ್ದಿತು. ಆದರೆ ನಾಯಕ ಜೋಸ್ ಮತ್ತೆಂದೂ ಆಡಲಾಗದಷ್ಟು ಪೆಟ್ಟು ತಿಂದಿದ್ದ. ಈ ಘಟನೆಯಿಂದಾಗಿ ಮುಂದಿನ ಹತ್ತು ವರ್ಷಗಳವರೆಗೂ ಯಾವೊಂದು ತಂಡವೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲೇ ಇಲ್ಲ!ಹಾಗೂ ಹೀಗೂ ಮತ್ತೆ 1978ರ ನಂತರ ಶುರುವಾದ ಪಂದ್ಯಗಳಲ್ಲಿ ಅರ್ಜೆಂಟಿನಾದ ಸಲುವಾಗಿ ಪೆರು ದೇಶ ಬೇಕೆಂತಲೇ ಸೋತ, ಡೀಗೋ ಮಾರಡೋನಾ ಬ್ರೆಜಿಲ್‍ನವನಿಗೆ ಒದೆ ಕೊಟ್ಟ ಘಟನೆಗಳು ನಡೆದವು. ಇವರಿಬ್ಬರ ಆಟದ ಖದರು ಎಷ್ಟೆಂದರೆ ಒಂದಷ್ಟು ಮಂದಿ ಮೈದಾನದಲ್ಲಿ ಬಡಿದಾಡಿಕೊಳ್ಳಲೇ ಬೇಕು ಹಾಗೂ ಅಲ್ಲಿ ಪೋಲೀಸ್ ಮತ್ತು ಆಂಬುಲೆನ್ಸ್ ಇರಲೇಬೇಕು! ಇಲ್ಲದಿದ್ದರೆ ಆಡುವವರಿಗೂ ನೆಮ್ಮದಿ ಇಲ್ಲ, ನೋಡುವವರಿಗೂ ತೃಪ್ತಿ ಇಲ್ಲ! ಇದ್ದುದರಲ್ಲೇ ಗಲಾಟೆಯಿಲ್ಲದೆ ನಡೆದದ್ದು ಬೀಜಿಂಗ್‍ನ ಒಲಿಂಪಿಕ್ ಪಂದ್ಯ. ಬ್ರೆಜಿಲ್ ಸೋತರೂ ಯಾರ ಮೈಮೂಳೆಗಳೂ ಪುಡಿಯಾಗಲಿಲ್ಲ ಸದ್ಯ!

ಮೈದಾನದಲ್ಲೇ ಈ ಪರಿ ಕಿತ್ತಾಡಿಕೊಳ್ಳುವ ದೇಶಗಳು ಉಳಿದ ವಿಷಯಗಳಿಗೂ ರಂಪ ಮಾಡಿಕೊಂಡು ಪದೇ ಪದೇ ವಿಶ್ವ ಸಂಸ್ಥೆಯ ಬಾಗಿಲು ಬಡಿಯಬೇಕಿತ್ತಲ್ಲವೇ? ಅಲ್ಲೇ ಇರುವುದು ನೋಡಿ ಸ್ವಾರಸ್ಯ ಮತ್ತು ವೈವಿಧ್ಯ. ಉಳಿದೆಲ್ಲಾ ವಿಷಯಗಳಲ್ಲೂ ಈ ರಾಷ್ಟ್ರಗಳದ್ದು ಗಳಸ್ಯ-ಕಂಠಸ್ಯ. ಒಟ್ಟಿಗೇ ಸ್ವಾತಂತ್ರ್ಯ ಪಡೆದ ಇವೆರಡೂ ಗಡಿ ವಿಷಯಕ್ಕೆ ಕಿತ್ತಾಡಿದ ಇತಿಹಾಸವೇ ಇಲ್ಲ. ಹೋಗಲಿ ಒಂದೇ ಒಂದು ಸಣ್ಣ ಜಗಳ? ಇಲ್ಲ. ನಡೆದದ್ದು ಒಂದೇ ಯುದ್ಧ, ಪರಗ್ವೇ ದೇಶದ ಮೇಲೆ ಇವುಗಳು ಒಟ್ಟಾಗಿ ಮಾಡಿದ್ದು, ಅದೂ 1865ರಷ್ಟು ಹಿಂದೆ. 1945ರಲ್ಲಿ ನೀರಿನ ಹಂಚಿಕೆ ವಿಷಯಕ್ಕೆ ಕೈ-ಕೈ ಮಿಲಾಯಿಸುವ ಚಂದದ ಅವಕಾಶ ಒದಗಿ ಬಂದಿತ್ತು. ಅದನ್ನೂ ಆಗಗೊಡದೆ ತಮ್ಮಲ್ಲೇ ರಾಜತಾಂತ್ರಿಕವಾಗಿ ಬಗೆಹರಿಸಿಕೊಂಡವು. ಆಗ ಎರಡೂ ದೇಶಗಳಲ್ಲಿ ಇದ್ದದ್ದು ಮಿಲಿಟರಿ ಆಡಳಿತ ಬೇರೆ. ಒಂದಾದರೂ ಹನಿ ನೆತ್ತರು ಹರಿಯಬೇಕಿತ್ತಲ್ಲವೇ?. ಹಾಗಾಗಲಿಲ್ಲ. ನಂತರ 1982ರಲ್ಲಿ ಅರ್ಜೆಂಟಿನಾ ಫಾಕ್‍ಲ್ಯಾಂಡ್ ದ್ವೀಪಸಮೂಹಗಳ ಮೇಲೆ ಯುದ್ಧಕ್ಕೆ ಹೋದಾಗ, ಬ್ರಿಟನ್ನಿನ ಯುದ್ಧ ವಿಮಾನ ಹಾಗೂ ಅದರಲ್ಲಿದ್ದ ಸೈನಿಕರನ್ನು ಬಂದಿಯಾಗಿಟ್ಟುಕೊಂಡಾಗಲೆಲ್ಲ ಬ್ರೆಜಿಲ್ ಅದರ ಬೆನ್ನಿಗಿತ್ತು. ಯುದ್ಧದಲ್ಲಿ ಸೋತು ವಿಶ್ವಸಂಸ್ಥೆಯೊಂದಿಗೆ ಮುಖ ಮುರಿದುಕೊಂಡ ಅರ್ಜೆಂಟಿನಾಗೆ ನಷ್ಟವಾದರೂ ಆಗಬೇಕಿತ್ತು ತಾನೆ? ಬ್ರೆಜಿಲ್ ಬಿಡಲಿಲ್ಲ. ತಾನೇ ಅದರ ಪರವಾಗಿ ವಾದ ಮಂಡಿಸುತ್ತಿತ್ತು. ಮಿಲಿಟರಿ ಆಡಳಿತ ಕೊನೆಯಾಗಿ ಎರಡೂ ದೇಶಗಳಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದದ್ದೇ ತಡ, ಬೆಸುಗೆ ಇನ್ನಷ್ಟು ಗಟ್ಟಿಯಾಯಿತು.

ಈಗಂತೂ ಅಣ್ವಸ್ತ್ರಗಳು ಎರಡೂ ರಾಷ್ಟ್ರಗಳ ಬಳಿ ಇವೆ. ಆದರೆ ಪರಸ್ಪರರ ವಿರುದ್ಧ ಪ್ರಯೋಗಿಸುವುದಿಲ್ಲವೆಂಬ ಪ್ರತಿಜ್ಞೆ ಮಾಡಿಕೊಂಡಿವೆ. ತಮ್ಮ ವಾಯುಪಡೆ ಹಾಗೂ ನೌಕಾಪಡೆಗಳ ಯುದ್ಧವಿಮಾನಗಳನ್ನು ಹಂಚಿಕೊಳ್ಳುತ್ತವೆ. ಸೈನ್ಯಕ್ಕೆ ಬೇಕಾದ ವಾಹನಗಳ ತಯಾರಿಕೆಯಲ್ಲಿಯೂ ಸಮಾನ ಪಾಲುದಾರಿಕೆ. ಎಲ್ಲೂ ಒಂದನ್ನೊಂದು ಶಂಕಿಸುವ, ಬೆನ್ನಿಗೆ ಚೂರಿ ಹಾಕುವ ಪ್ರಶ್ನೆಯೇ ಇಲ್ಲ. 2003ರಿಂದೀಚೆಗೆ ಮಾಡಿಕೊಂಡಿರುವ ಕೃಷಿ, ಆರ್ಥಿಕ ಹಾಗೂ ವಿದೇಶಾಂಗ ವಲಯಗಳಿಗೆ ಸಂಬಂಧಿಸಿದ ಒಪ್ಪಂದಗಳೆಲ್ಲ ಎರಡೂ ದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ. ಇವುಗಳ ಆಂತರಿಕ ಹಣಕಾಸು ವಿನಿಮಯ ವ್ಯವಹಾರಗಳಲ್ಲಿ ಅಮೆರಿಕದ ಡಾಲರ್‍ಗೂ ಪ್ರವೇಶವಿಲ್ಲ! ಬಾಹ್ಯಾಕಾಶಕ್ಕೆ ಸಂಬಂಧಿಸಿದ ಎಲ್ಲ ಪ್ರಯೋಗಗಳೂ ಜಂಟಿಯೇ. ರಾಕೆಟ್ ಉಡಾಯಿಸುವುದೂ ಒಟ್ಟಾಗಿಯೇ. ಇಂದಿಗೂ ಬ್ರೆಜಿಲ್ ಫಾಕ್‍ಲ್ಯಾಂಡ್‍ಗೆ ಸೇರಿದ ಬ್ರಿಟನ್ನಿನ ಹಡಗುಗಳನ್ನು ತನ್ನ ಬಂದರಿಗೆ ಬಿಟ್ಟುಕೊಳ್ಳುತ್ತಿಲ್ಲ. ಹೀಗಿರಬೇಕು ಬೇಷರತ್ ಬೆಂಬಲ ಎಂದರೆ!

ಎಲ್ಲಕ್ಕಿಂತ ಸೋಜಿಗವೇನು ಗೊತ್ತೆ? ಬ್ರೆಜಿಲ್‍ನ ಅಧ್ಯಕ್ಷೆ ಡಿಲ್ಮಾ ರೂಸೆಫ್ ಹಾಗೂ ಅರ್ಜೆಂಟಿನಾ ಅಧ್ಯಕ್ಷೆ ಕ್ರಿಸ್ಟೀನಾ ಫರ್ನಾಂಡಿಸ್ ಇಬ್ಬರೂ ಮಹಿಳಾಮಣಿಗಳು. ಎರಡು ಜಡೆ ಸೇರಿದ ಕಡೆ ಜಗಳವಿರಲೇಬೇಕೆಂದು ಹೇಳಿದವರು ಯಾರು? ಅವಕಾಶ ಸಿಕ್ಕಾಗಲೆಲ್ಲ ಇಬ್ಬರೂ ಪರಸ್ಪರರ ದೇಶಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಇಷ್ಟೆಲ್ಲ ಸೌಹಾರ್ದವಿದ್ದರೂ ಫುಟ್‍ಬಾಲ್ ವಿಷಯದಲ್ಲಿ ಒಬ್ಬರಾದರೂ ತಗ್ಗಿ-ಬಗ್ಗಿ ನಡೆಯುತ್ತಾರೆಯೇ? ಉಹೂಂ. ವಿಶ್ವಕಪ್ ಪಂದ್ಯ ಶುರುವಾಗುವ ಮುನ್ನಿನ ಅಭ್ಯಾಸ ಪಂದ್ಯಗಳು ನಡೆಯುತ್ತವಲ್ಲ, ಅಲ್ಲಿ ಅರ್ಜೆಂಟಿನಾದ ಪಂದ್ಯವನ್ನು ವೀಕ್ಷಿಸಲು ಸುಮಾರು 5000ಮಂದಿ ಸೇರಿದ್ದರು. ಅವರಲ್ಲಿ ಬಹುತೇಕರು ಬ್ರೆಜಿಲ್‍ನವರು. ಅರ್ಜೆಂಟಿನಾ ಮೈದಾನಕ್ಕಿಳಿಯುತ್ತಿದ್ದಂತೆ ಶಿಳ್ಳೆ ಹಾಕಿ, ಕೂಗಿ, ಅಣಕಿಸಿ ಹುಯಿಲೆಬ್ಬಿಸಿದರು. ಅರ್ಜೆಂಟಿನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಸುಮ್ಮನೆ ನಕ್ಕು ಎಲ್ಲರೆಡೆ ಕೈ ಬೀಸಿ ಆಟ ಶುರುವಿಟ್ಟುಕೊಂಡ. ಅರ್ಜೆಂಟಿನಾದ ಚೊಚ್ಚಲ ಪಂದ್ಯವಿದ್ದದ್ದು ಬೋಸ್ನಿಯಾ-ಹರ್ಜೆಗೋವಿನಾ ತಂಡದೊಂದಿಗೆ. ಅದಕ್ಕೂ ದಾಳಿಯಿಟ್ಟ ಬ್ರೆಜಿಲ್‍ನ ಅಭಿಮಾನಿಗಳು ಬೆರಳೆಣಿಕೆಯಷ್ಟಿದ್ದ ಬೋಸ್ನಿಯಾ ಅಭಿಮಾನಿಗಳಿಗಿಂತ ಹೆಚ್ಚಾಗಿ ಅವರ ಪರ ಕಿರುಚಾಡಿ ಅರ್ಜೆಂಟಿನಾವನ್ನು ಕಿಚಾಯಿಸಿದರು. ಬ್ರೆಜಿಲ್‍ನ ಪಂದ್ಯವೇ ಅಲ್ಲದಿದ್ದ ಮೇಲೆ ಅವರಿಗೆ ಬರುವ ಅಗತ್ಯವೇನಿತ್ತು ಹೇಳಿ? ಮೆಸ್ಸಿ ಮೇಲಿನ ಪ್ರೀತಿ. 'ನಮಗೆ ಅರ್ಜೆಂಟಿನಾ ಕಂಡರಾಗದು, ಆದರೆ ಮೆಸ್ಸಿ ಎಂದರೆ ಅಪಾರವಾದ ಗೌರವ ಹಾಗೂ ಅಭಿಮಾನವಿದೆ' ಎಂದು ಬಾಯಿಬಿಟ್ಟು ಹೇಳುವ ಅವರು ‘ಅರ್ಜೆಂಟಿನಾವನ್ನು ಪ್ರೋತ್ಸಾಹಿಸಲು ಬರುವುದಿಲ್ಲ, ಅದರ ಆಟ ನೋಡಲು ಬರುತ್ತೇವೆ’ ಎನ್ನುತ್ತಾರೆ.ಅವರೆಲ್ಲರ ಬಯಕೆ ಅರ್ಜೆಂಟಿನಾ ಹಾಗೂ ಬ್ರೆಜಿಲ್ ಫೈನಲ್‍ಗೆ ಬರಬೇಕೆಂಬುದು. ಹಾಗಾಗಿಬಿಟ್ಟರೆ ಅದಕ್ಕಿಂತ ರೋಚಕ ಪಂದ್ಯ ಮತ್ತೊಂದು ಸಿಗಲಿಕ್ಕಿಲ್ಲ. ಈ ಆಟ ಹೀಗೇ ಮುಂದುವರೆಯುತ್ತಾ ಹೋಗುತ್ತದೆ. ಇಲ್ಲೊಬ್ಬ ಪೀಲೆ ಹುಟ್ಟಿದರೆ ಅಲ್ಲೊಬ್ಬ ಮಾರಡೋನ ಹುಟ್ಟುತ್ತಾನೆ. ಅಲ್ಲೊಬ್ಬ ಮೆಸ್ಸಿ ಹುಟ್ಟಿದರೆ ಇಲ್ಲೊಬ್ಬ ನೇಮಾರ್ ಹುಟ್ಟುತ್ತಾನೆ. ಮೈದಾನದಲ್ಲಿ ಹದ್ದು ಮೀರಿ ವರ್ತಿಸುವ ಇವರು ತಮ್ಮ ದೇಶಗಳ ಸರಹದ್ದನ್ನು ಒಟ್ಟಾಗಿಯೇ ಕಾಯುತ್ತಾರೆ. ಕಾಲ್ಚೆಂಡನ್ನು ಮನಬಂದಂತೆ ಒದ್ದರೂ ತಮ್ಮ ನೆರೆಯ ದೇಶದವರ ರುಂಡಗಳನ್ನು ಅಪ್ಪಿತಪ್ಪಿಯೂ ಚೆಂಡಾಡುವುದಿಲ್ಲ. ಸಿಟ್ಟು ಆಕ್ರೋಶಗಳೆಲ್ಲ ಮೈದಾನದಲ್ಲಿ ಸ್ಫೋಟಿಸುತ್ತವೆಯೆ ಹೊರತು ಬಾಂಬ್‍ಗಳಾಗಿ ಜೀವಗಳ ಬಲಿ ಪಡೆಯುವುದಿಲ್ಲ.

ಒಗ್ಗಟ್ಟು ಮತ್ತು ಸಾಮರಸ್ಯಗಳ ಪಾಠವನ್ನೂ ನಾವು ಎ,ಬಿ,ಸಿ,ಡಿಯಿಂದಲೇ ಪ್ರಾರಂಭಿಸಬಹುದು; ಇಲ್ಲಿ ಎ ಎಂದರೆ ಅರ್ಜೆಂಟಿನಾ, ಬಿ ಅಂದರೆ ಬ್ರೆಜಿಲ್! 

ಬದಲಾದ ಜಿಹಾದ್ನ ಪರಿಭಾಷೆ; ಶಾಂತಿ ಆಗುವುದೇ ಮರೀಚಿಕೆ?

ಕಳೆದ ಮಾರ್ಚ್ 25ರಂದು ಸಿರಿಯಾ ದೇಶದ ಇದ್ಲಿಬ್ ಪಟ್ಟಣದ ಒಂದು ಸೈಬರ್ ಕೆಫೆಗೆ ಅಬು-ಸುಮಯ್ಯಾಹ್-ಅಲ್-ಬ್ರಿಟಾನಿ ಎಂಬ ಜಿಹಾದಿ ನಡೆದು ಬಂದ. ಅವತ್ತು ಇಂಟರ್‌ನೆಟ್‌ನಲ್ಲಿ ಸ್ಕೈಪ್ ಮೂಲಕ ಅವನ ಸಂದರ್ಶನವಿತ್ತು. ನಡೆಸುತ್ತಿದ್ದವನು ಅಮೆರಿಕದ ಜೋನಾಥನ್ ಲೀ ಕ್ರೋನ್ ಎಂಬ ಯುವ ಪತ್ರಕರ್ತ. 'ಐಎಸ್‍ಐಎಸ್‍ಶೋ’ ಎಂಬುದು ಕಾರ್ಯಕ್ರಮದ ಹೆಸರು. ಶೋ ಎಂದೊಡನೆ ನಮಗೆ ನೆನಪಾಗುವುದು ನಮ್ಮ ಚಾನೆಲ್‍ಗಳಲ್ಲಿ ಪ್ರಸಾರವಾಗುವ ಹಾಡು, ಕುಣಿತ, ಸಾಹಸದ ರಿಯಾಲಿಟಿ ಶೋಗಳು ಮಾತ್ರ ಅಲ್ಲವೇ? ಆದರೆ ಅದಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಅದನ್ನು ನೋಡಿದರೆ ನಕ್ಕು ಹಗುರಾಗುತ್ತೇವೆ, ಇದನ್ನು ಕೇಳಿದೊಡನೆ ಹುಬ್ಬು ಗಂಟಿಕ್ಕುತ್ತೇವೆ. ಸಿರಿಯಾದಲ್ಲಿ ಶುರುವಾಗಿ ಕಾಡ್ಗಿಚ್ಚಿನಂತೆ ಇರಾಕ್‍ನವರೆಗೂ ಹಬ್ಬಿರುವ ಐಸಿಸ್ (ಅಥವಾ ಐಎಸ್‍ಐಎಸ್‍ - ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ) ಎಂಬ ಜಿಹಾದಿ ಗುಂಪಿನ ಸದಸ್ಯನೊಬ್ಬನನ್ನು ಅಂದು ಜನರೆದುರು ತೆರೆದಿಡುವ ಪ್ರಯತ್ನ ಮಾಡುತ್ತಿದ್ದ ಜೋನಾಥನ್. ಫಲವಾಗಿ ಅಬು-ಸುಮಯ್ಯಾಹ್‍ನನ್ನು ಮಾತಿಗೆಳೆದು ತಂದಿದ್ದ. ಅಕ್ಕ-ಪಕ್ಕದಲ್ಲೇ ನಡೆಯುತ್ತಿದ್ದ  ಬಾಂಬ್ ದಾಳಿಗಳ ಕಿವಿಗಡಚಿಕ್ಕುವ ಸದ್ದಿನ ನಡುವೆ ಅಬು ತಣ್ಣಗೆ ಮಾತಿಗಿಳಿದ. ಮೂಲತಃ ಬ್ರಿಟನ್ನಿನವನಾದ ಅವನು ಐಸಿಸ್ ಸೇರಿ ವರ್ಷವಾಗಿತ್ತಷ್ಟೆ. ಬ್ರಿಟನ್‍ಗೆ ಹಿಂತಿರುಗುವ ಇರಾದೆ ಇದೆಯಾ ಎಂದು ಜೋನಾಥನ್ ಕೇಳಿದ್ದಕ್ಕೆ, ನನ್ನ ಪಾಸ್‍ಪೋರ್ಟ್ ಎಲ್ಲಿ ಹಾಕಿದ್ದೇನೆ ಎನ್ನುವುದೇ ನನಗೆ ನೆನಪಿಲ್ಲ, ಅದಿನ್ನು ಬೇಕಾಗಿಯೂ ಇಲ್ಲ ಎಂದ. ಹೇಗೆ ಬಿಟ್ಟು ಬಂದೆ ನಿನ್ನ ದೇಶವನ್ನು ಅಷ್ಟು ಸಲೀಸಾಗಿ ಎಂಬ ಪ್ರಶ್ನೆಗೆ ನಕ್ಕು, ಇಸ್ಲಾಂ ಅನ್ನು ಉಳಿಸುವ ಕರ್ತವ್ಯದ ಮುಂದೆ ದೇಶ ಭಾಷೆಗಳ ಅಸ್ತಿತ್ವವೇ ಇಲ್ಲ ಎಂದ. ಹೋಗಲಿ ನಿನ್ನವರು ಅಂತ ಯಾರೂ ಇರಲಿಲ್ಲವಾ ನಿನ್ನ ದೇಶದಲ್ಲಿ ಎಂದು ಕೇಳಿದ್ದಕ್ಕೆ, ಇದ್ದರು, ಹೆಂಡತಿ ಹಾಗೂ ಮೂವರು ಮಕ್ಕಳು ಎನ್ನಬೇಕೇ! ಒಂದು ಕ್ಷಣ ನಿರುತ್ತರನಾದ ಜೋನಾಥನ್. ಮುಂದುವರಿದು ಅಬು ಹೇಳಿದ ಮಾತುಗಳನ್ನು ಕೇಳಿ: ‘ಅಮೆರಿಕ ಹಾಗೂ ಬ್ರಿಟನ್ ಸರ್ಕಾರಗಳ ಮುಸ್ಲಿಂ ವಿರೋಧಿ ನೀತಿಯನ್ನು ನೋಡಿ ರೋಸಿ ಹೋಗಿ ಯಾರಿಗೂ ಹೇಳದೆ ಕೇಳದೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಬಂದೆ. ಇಲ್ಲಿಯತನಕ ಮನೆಯವರೊಡನೆ ಒಂದು ಮಾತೂ ಆಡಿಲ್ಲ.  ಬಹುಶಃ ಅವರಿಗೆ ನಾನಿಲ್ಲಿದ್ದೇನೆಂಬುದು ಗೊತ್ತೂ ಇಲ್ಲ. ನನ್ನಿಂದೇನಾದರೂ ತಪ್ಪಾಗಿದ್ದರೆ ಅವರು ನನ್ನನ್ನು ಕ್ಷಮಿಸಲಿ. ರಕ್ತ ಸಂಬಂಧ ಎಲ್ಲೂ ಹೋಗುವುದಿಲ್ಲ. ನನಗೆ ಅವರ ನೆನಪಾಗುತ್ತದೆ. ಆದರೆ ಇಸ್ಲಾಂಗೋಸ್ಕರ ನನ್ನ ಮಕ್ಕಳನ್ನು ಒಂದು ಬಾರಿ ಏನು, ನೂರು ಬಾರಿಯಾದರೂ ಬಲಿಕೊಡಬಲ್ಲೆ. ಅಲ್ಲಾಹುವಿಗೋಸ್ಕರ ಮಾಡುತ್ತಿದ್ದೇನೆ. ಈ ಪ್ರಪಂಚದಲ್ಲಿ ಮತ್ತೆ ನೋಡುವುದಾಗದಿದ್ದರೆ ಸ್ವರ್ಗದಲ್ಲಿ ಅವರನ್ನು ಖಂಡಿತ ಸೇರುತ್ತೇನೆ’! ಕೈಯಲ್ಲಿದ್ದ ಕಲಾಷ್ನಿಕೋವ್ ಬಂದೂಕನ್ನು ಸವರುತ್ತ ಅಬು ಸರಾಗವಾಗಿ ಮಾತನಾಡುತ್ತಲೇ ಇದ್ದ!ಇದು ಒಬ್ಬ ಅಬುವಿನ ಮನಸ್ಥಿತಿ ಮಾತ್ರವಲ್ಲ. ಇಂದು ಐಸಿಸ್‍ನ ಪ್ರತಿ ಜಿಹಾದಿಯ ತಲೆಯೊಳಗೂ ಸುನ್ನಿ ಮುಸ್ಲಿಂ ನೇತೃತ್ವದ ಒಂದು ಪ್ರತ್ಯೇಕ ಇಸ್ಲಾಂ ರಾಷ್ಟ್ರ ನಿರ್ಮಾಣದ ಭೂತ ಹೊಕ್ಕಿದೆ.

ಈ ಭೂತದ ಬಸಿರನ್ನು ಹೊತ್ತು ಹೆತ್ತವನು ಸುನ್ನಿ ಪಂಗಡದ ಅಬು-ಮುಸಬ್-ಅಲ್-ಜರ್ಕಾವಿ!

ನಮ್ಮ ದೇಶದ ಬಲಭುಜಕ್ಕಿರುವ ಪಾಕಿಸ್ತಾನದಿಂದಾಚೆಗೆ ಹರಡಿಕೊಂಡಿರುವ ಅಫ್‍ಘಾನಿಸ್ತಾನ,ಇರಾನ್,ಇರಾಕ್,ಸಿರಿಯ ಹಾಗೂ ಟರ್ಕಿಗಳಲ್ಲಿ ನಡೆಯುತ್ತ ಬಂದಿರುವ ಶಿಯಾ-ಸುನ್ನಿ ಕಾಳಗಕ್ಕೆ 1400 ವರ್ಷಗಳ ಇತಿಹಾಸವಿದೆ. ಸಿರಿಯಾ ಹಾಗೂ ಟರ್ಕಿಗಳಲ್ಲಿ ಶೇಕಡ 75ರಷ್ಟಿರುವ ಸುನ್ನಿಗಳು ಇರಾಕ್ ಹಾಗೂ ಇರಾನ್‍ನಲ್ಲಿರುವುದು ಕ್ರಮವಾಗಿ ಶೇಕಡ 20 ಮತ್ತು 9ರಷ್ಟು ಮಾತ್ರ. ಇವೆರಡರ ಜೊತೆ ಕುರ್ದ್ ಎಂಬ ಅಲ್ಪಸಂಖ್ಯಾತರ ವರ್ಗವೂ ವಾಸವಾಗಿದೆ. ಆದರೆ ಅದೆಂದೂ ಬರಿದೇ ಇಸ್ಲಾಂ ಧರ್ಮಕ್ಕೆ ಮೀಸಲಾಗಿಲ್ಲ. ಅವರಲ್ಲಿ ಯಹೂದಿಗಳು, ಜೊರಾಷ್ಟ್ರಿಯನ್ನರು ಮುಂತಾದವರಿದ್ದಾರೆ. ಶಿಯಾ-ಸುನ್ನಿ ಕಾಳಗಕ್ಕೆ ಸಾಕ್ಷಿಯಾಗುವುದು ಹಾಗೂ ಬಲಿಯಾಗುವುದು ಬಿಟ್ಟು ಅವರಿಗೆ ಗತ್ಯಂತರವಿಲ್ಲ.

2003ರಲ್ಲಿ ಅಮೆರಿಕ ಇರಾಕ್‍ನ ಮೇಲೆ ದಾಳಿ ನಡೆಸಿ ಸುನ್ನಿ ಪಂಗಡದ ಸದ್ದಾಂನನ್ನು ಪದಚ್ಯುತಗೊಳಿಸಿದಾಗ ಜೋರ್ಡನ್‍ನಿಂದ ಬಂದು ಬಾಗ್ದಾದ್‍ ಸೇರಿಕೊಂಡವನೇ ಈ ಜರ್ಕಾವಿ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಎಂಬ ಸಂಘಟನೆಯಡಿ ಜನರನ್ನು ಸೇರಿಸಿ ಹಲವಾರು ಆತ್ಮಹತ್ಯಾ ಹಾಗೂ ಕಾರ್ ಬಾಂಬ್ ದಾಳಿಗಳನ್ನು ಆಯೋಜಿಸಿದ. ಡಜನ್‍ಗಟ್ಟಲೆ ಶಿಯಾಗಳನ್ನು ಕೊಂದು ಅವರ ಮಸೀದಿಗಳನ್ನು ಕೆಡವಿದ. ಅಮೆರಿಕದವರನ್ನು ಅಪಹರಿಸಿ ಅವರ ತಲೆ ಕಡಿದು ಅದರ ವೀಡಿಯೋ ಮಾಡಿ ಕುಖ್ಯಾತನಾದ. ಅಷ್ಟು ಹೊತ್ತಿಗಾಗಲೇ ಅಮೆರಿಕದ ಅವಳಿ ಕಟ್ಟಡಗಳನ್ನು ಕೆಡವಿ ಜಿಹಾದಿಗಳ ಹೀರೋ ಆಗಿದ್ದ ಅಲ್-ಕೈದಾ ನಾಯಕ ಒಸಾಮಾ ಅವನ ಶೌರ್ಯ ಕಂಡು ಅವನತ್ತ ಸ್ನೇಹ ಹಸ್ತ ಚಾಚಿದರೂ ಕ್ಯಾರೇ ಅನ್ನಲಿಲ್ಲ ಜರ್ಕಾವಿ. ಇರಾಕ್‍ನಲ್ಲಿದ್ದ ಸಂಯುಕ್ತ ರಾಷ್ಟ್ರಗಳ ಕಛೇರಿಯನ್ನು ಉಡಾಯಿಸಿ ಅದರ ಮುಖ್ಯಸ್ಥ ‘ಮೆಲ್ಲೋ’ರನ್ನು ಕೊಂದಾಗ ಮಾತ್ರ ಅಮೆರಿಕ ಕೆರಳಿ ಕೆಂಡವಾಯಿತು. 2006ರ ಜೂನ್ 7ರಂದು ಅವನಿದ್ದ ಡೇರೆಯ ಮೇಲೆ ಬಾಂಬ್‍ಗಳ ಮಳೆಗರೆಯಿತು. ಅಲ್ಲೇ ಹೆಣವಾಗಿ ಹೋದ ಜರ್ಕಾವಿ. ನಂತರ  ಸುಮಾರು ಮೂರು ವರ್ಷಗಳ ಕಾಲ ಅವನ ಸಂಘಟನೆ ಮಂಕಾಗಿ ಹೋಯಿತು. ಇನ್ನೇನು ಸುನ್ನಿಗಳ ಅಟ್ಟಹಾಸಕ್ಕೆ ತೆರೆ ಬಿತ್ತು ಎಂದುಕೊಳುತ್ತಿರುವಾಗಲೇ..

2010ರಲ್ಲಿ ಅಬು-ಬಕರ್-ಅಲ್-ಬಾಗ್ದಾದಿ ಎಂಬ ಮಹಾ ಕ್ರೂರಿ ಈ ಸಂಘಟನೆಯ ಚುಕ್ಕಾಣಿ ಹಿಡಿದ!

ಆಗಿನ್ನೂ ಅಮೆರಿಕದ ಪಡೆಗಳು ಇರಾಕ್‍ನಲ್ಲೇ ಇದ್ದವಾದರೂ ನೆರೆಯ ಸಿರಿಯಾದಲ್ಲಿ ಅಧ್ಯಕ್ಷ ಬಶರ್-ಅಲ್-ಅಸ್ಸದ್‍ನ ಅರಾಜಕತೆ ಮೇರೆ ಮೀರಿತ್ತು. ಶಿಯಾ ಪಂಗಡದ ಅವನ ವಿರುದ್ಧದ ದಂಗೆ ಉಗ್ರ ಸ್ವರೂಪ ಪಡೆಯತೊಡಗಿತ್ತು. ಅದೇ ತಕ್ಕ ಸಮಯವೆಂದು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ ಬಾಗ್ದಾದಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ನ ಜೊತೆಗೆ ಸಿರಿಯಾವನ್ನೂ ಸೇರಿಸಿ ಐಎಸ್‍ಐಎಸ್‍ ಎಂಬ ಹೆಸರನ್ನಿಟ್ಟ. ಹೆಸರನ್ನಷ್ಟೇ ಬದಲಾಯಿಸಲಿಲ್ಲ ಬಾಗ್ದಾದಿ. ಜಿಹಾದಿಗಳ ಯುದ್ಧನೀತಿಯನ್ನೂ ತಿರುಚಿದ. ಬರೀ ಬಾಂಬ್ ಹಾಗೂ ಆತ್ಮಹತ್ಯಾ ದಾಳಿಗೆ ಸೀಮಿತವಾಗಿದ್ದವರಿಗೆ ಕತ್ತಿ ಹಿರಿದು ಕಾಲಾಳುಗಳಂತೆ ಕಾದಾಡುವುದನ್ನು ಕಲಿಸಿದ. ಅವರಲ್ಲೊಂದು ಪೈಶಾಚಿಕತೆ ಬಿತ್ತಿದ. ಅಂದಿನಿಂದ ಶುರುವಾಯಿತು ನೋಡಿ ಶಿಯಾಗಳ ಮಾರಣಹೋಮ! ಬಾಗ್ದಾದಿಯ ಕನಸೇನು ಗೊತ್ತೇ? ಸುನ್ನಿ ಆಡಳಿತದ ಇಸ್ಲಾಂ ರಾಷ್ಟ್ರ ಸ್ಥಾಪಿಸುವುದು! ಅದಕ್ಕಾಗಿ ಒಂದೆಡೆ ಸಿರಿಯಾದಲ್ಲಿ ರಕ್ತದೋಕುಳಿಯಾಡುತ್ತಾ ಮತ್ತೊಂದೆಡೆ ಇರಾಕ್‍ಗೂ ದಾಳಿಯಿಟ್ಟಿದ್ದಾನೆ. ಅವನು ತಯಾರು ಮಾಡಿರುವ ಕಟುಕರ ಪಡೆ ಹೇಗಿರಬಹುದು ಹೇಳಿ? ಉಹೂಂ, ನೀವು ಊಹಿಸಲಾರಿರಿ. ತಾವು ಕಡಿದ ರುಂಡಗಳನ್ನು ರಾಶಿ ಹಾಕಿ ಅವುಗಳನ್ನು ಟ್ರೋಫಿಗಳು ಎನ್ನುತ್ತ ಅದರ ಜೊತೆ ಫೋಟೋ ತೆಗೆಸಿಕೊಂಡು ಅಂತರ್ಜಾಲದ ತಾಣಗಳಲ್ಲಿ ಪ್ರದರ್ಶಿಸುತ್ತಾರೆ! ನಾವು ಬ್ಯಾಗ್‍ನಲ್ಲಿ ಬಟ್ಟೆಗಳನ್ನು ತುಂಬುವಷ್ಟೇ ಸಲೀಸಾಗಿ ರುಂಡಗಳನ್ನು ತುಂಬಿ ರಕ್ತಸಿಕ್ತ ಕೈಗಳಲ್ಲಿ ಅದನ್ನು ಹಿಡಿದು ನಿಂತು ಕೆಮರಾಗೆ ಪೋಸ್ ಕೊಡುತ್ತಾರೆ. ಕೇಳಿಯೇ ನಮಗೆ ವಾಕರಿಕೆ ಬರುತ್ತದಲ್ಲವೇ? ಕೈಯ್ಯಾರೆ ಮಾಡಿದ ಅವರು ಕೇಕೆ ಹಾಕುತ್ತಾರೆ! ಬಾಗ್ದಾದಿಯ ಇಂಥ ಕ್ರೌರ್ಯ, ನಿರ್ದಯತೆ ಹಾಗೂ ಸಂಘಟನಾ ಚಾತುರ್ಯಗಳಿಂದಾಗಿಯೇ ಟೈಮ್ಸ್ ನಿಯತಕಾಲಿಕೆ ಅವನನ್ನು ಪ್ರಸ್ತುತ ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಮನುಷ್ಯ ಎಂದು ಕರೆದಿದೆ. ಅಷ್ಟೇ ಅಲ್ಲ, ಜಿಹಾದಿ ವಲಯದಲ್ಲಿ ಅವನು ಗುರುತಿಸಲ್ಪಡುವುದು ಹೇಗೆ ಹೇಳಿ? ಹೊಸ ಬಿನ್ ಲಾಡೆನ್ ಎಂದು! ಒಸಾಮಾನನ್ನು ಅಮೆರಿಕ ಅಟ್ಟಾಡಿಸಿ ಕೊಂದಮೇಲೆ ಅಲ್-ಕೈದಾ ನಾಯಕನಾಗಿರುವ ಅಯ್‍ಮಾನ್-ಅಲ್-ಜವಾಹಿರಿ ಬಾಗ್ದಾದಿಯ ಮುಂದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾನೆ. ಅವನ ಗುಂಪಿನವರೂ ಬಾಗ್ದಾದಿಯ ಮೃಗೀಯತೆಗೆ ತಲೆಬಾಗಿದ್ದಾರೆ.

ಬಾಗ್ದಾದಿಯ ಮತ್ತೊಂದು ತಂತ್ರ ಜಿಹಾದಿನ ಜಾಗತೀಕರಣ. ನೀವು ನಂಬಲಿಕ್ಕಿಲ್ಲ. 13 ಸಾವಿರಕ್ಕೂ ಹೆಚ್ಚಿನ ಸಂಖ್ಯೆ‍ಯಲ್ಲಿರುವ ಜಿಹಾದಿಗಳ ಪೈಕಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನವರು ವಿದೇಶೀಯರು. ಸೋಫನ್ ಗ್ರೂಪ್ ಎಂಬ ಇಂಟೆಲಿಜೆನ್ಸ್ ಸಂಸ್ಥೆಯ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಷ್ಯಾ ಒಂದರಿಂದಲೇ ಸುಮಾರು 800 ಜನ ಐಸಿಸ್ ಸೇರಿದ್ದಾರೆ. ಫ್ರಾನ್ಸ್ ನಿಂದ 700, ಬ್ರಿಟನ್‍ನಿಂದ 400, ಆಸ್ಟ್ರೇಲಿಯಾ ಹಾಗೂ ಬೆಲ್ಜಿಯಂಗಳಿಂದ ತಲಾ 250 ಮತ್ತು ಇನ್ನೂ ಹಲವು ಮುಸ್ಲಿಮೇತರ ರಾಷ್ಟ್ರಗಳಿಂದ ಐಸಿಸ್ ಸೇರಿರುವವರ ಒಟ್ಟು ಸಂಖ್ಯೆ ಮೂರುಸಾವಿರವನ್ನು ಸಲೀಸಾಗಿ ದಾಟುತ್ತದೆ! ಹಾಗಂತ ಎಲ್ಲರೂ ಹುಟ್ಟಾ ಮುಸಲ್ಮಾನರೇನಲ್ಲ. ಇದಕ್ಕೋಸ್ಕರ ಮತಾಂತರಗೊಂಡವರೂ ಇದ್ದಾರೆ! ಸಾವಿರಗಟ್ಟಲೆ ಜನ ಹೀಗೆ ತಮ್ಮ ದೇಶ, ಧರ್ಮ, ಸಂಬಂಧಗಳನ್ನು ಧೂಳು ಕೊಡವಿದಷ್ಟೇ ಸಲೀಸಾಗಿ ಕೊಡವಿಕೊಂಡು ಬರುತ್ತಿರಬೇಕಾದರೆ ಬಾಗ್ದಾದಿ ಹುಟ್ಟು ಹಾಕಿರುವ ಸಮೂಹ ಸನ್ನಿ ಯಾವ ಮಟ್ಟದ್ದಿರಬೇಕು?

ಇವರು ನಡೆಸುತ್ತಿರುವ ಇರಾಕ್‍ನ ಮೇಲಿನ ದಾಳಿ ಎಷ್ಟು ವ್ಯವಸ್ಥಿತವಾಗಿದೆ ಎಂಬುದಕ್ಕೆ ಮೊಸುಲ್ ಪಟ್ಟಣದ ಉದಾಹರಣೆ ನೋಡಿ. ಜಿಹಾದಿಗಳು ಮೊಸುಲ್‍ಗೆ ಕಾಲಿಟ್ಟ ತಕ್ಷಣ ಐದು ಲಕ್ಷದಷ್ಟು ಶಿಯಾಗಳು ಅಲ್ಲಿಂದ ಓಡಿದರು. ಕೈಗೆ ಸಿಕ್ಕವರನ್ನೆಲ್ಲಾ ಟ್ರಕ್ಕುಗಳಿಗೆ ತುಂಬಿಸಿಕೊಂಡು ಬಂದು ಸಾಮೂಹಿಕವಾಗಿ ಗುಂಡಿಟ್ಟು ಕೊಂದು ಆ ಚಿತ್ರಗಳನ್ನು ಅಂತರ್ಜಾಲದಲ್ಲಿ ಹರಿಬಿಡಲಾಯಿತು. ನಂತರ ಮೊಸುಲ್‍ನ ಸೆಂಟ್ರಲ್ ಬ್ಯಾಂಕ್‍ಗೆ ಲಗ್ಗೆಯಿಟ್ಟ ಜಿಹಾದಿಗಳು ಸುಮಾರು 425 ಮಿಲಿಯನ್ ಅಮೆರಿಕನ್ ಡಾಲರ್‍ಗಳನ್ನು ಹೊತ್ತೊಯ್ದರು. ಈಗ ಅವರ ಬಳಿಯಿರುವ ದುಡ್ಡೆಷ್ಟು ಗೊತ್ತೇ? ಮಾರ್ಶಲ್ ಐಲ್ಯಾಂಡ್‍ನಂಥ ಸಣ್ಣ ದೇಶದ ಒಟ್ಟು ಸಂಪನ್ಮೂಲಕ್ಕಿಂತಲೂ ಹೆಚ್ಚು! 425 ಮಿಲಿಯನ್ ಡಾಲರ್‍ಗಳನ್ನು ಅವರು 60 ಸಾವಿರ ಜಿಹಾದಿಗಳಿಗೆ ಪ್ರತಿ ತಿಂಗಳು ತಲಾ 6೦೦ ಡಾಲರ್‍ನಂತೆ  ಕೊಟ್ಟು ಒಂದು ವರ್ಷ ಸಾಕಬಲ್ಲರು! ಒಂದೆಡೆ ಪಟ್ಟಣಗಳನ್ನು ದೋಚುತ್ತಾ ಮತ್ತೊಂದೆಡೆ ತಮ್ಮವರನ್ನೇ ಅಮಾನವೀಯವಾಗಿ ಸಾಯಿಸುತ್ತಾ ಸಾಗಿದೆ ಜಿಹಾದಿಗಳ ಮೆರವಣಿಗೆ!ಇಷ್ಟು ವರ್ಷ ಸ್ವಾರ್ಥದ ಮಧ್ಯಸ್ಥಿಕೆ ಮಾಡಿ ಈಗ ಪರಿಸ್ಥಿತಿ ಕೈಮೀರಿರುವುದರಿಂದ ಅಮೆರಿಕ ಉಭ-ಶುಭ ಎನ್ನುತ್ತಿಲ್ಲ. ದೊಡ್ಡಣ್ಣನೇ ಸುಮ್ಮನಿರುವಾಗ ತಮಗೇಕೆ ಇಲ್ಲದ ಉಸಾಬರಿ ಎಂದು ಉಳಿದವರೂ ತುಟಿ ಹೊಲಿದುಕೊಂಡಿದ್ದಾರೆ. ಹೀಗೆ ಸುಮ್ಮನಿರಲು ಕಾರಣವೂ ಇದೆ. ಇಂದು ಹಸಿದ ತೋಳಗಳಂತೆ ಶಿಯಾಗಳ ಮೇಲೆರಗಿರುವ ಐಸಿಸ್‍ ನಾಳೆ ಬೇಟೆಯಾಡಲು ಬರುವುದು ಮುಸ್ಲಿಮೇತರ ರಾಷ್ಟ್ರಗಳನ್ನೇ. ಆದ್ದರಿಂದಲೇ ಬ್ರಿಟನ್ ಹಾಗೂ ಅಮೆರಿಕದ ಇಂಟಲಿಜೆನ್ಸ್ ಸಂಸ್ಥೆಗಳು ತಮ್ಮ ದೇಶದಿಂದ ಹೋಗಿ ಜಿಹಾದ್ ಸೇರಿರುವವರ ಬಯೋಡೇಟಾಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಿವೆ. ಹಾಗೇ ತಮ್ಮ ಕೋಟೆ ಬಾಗಿಲುಗಳನ್ನೂ ಭದ್ರಪಡಿಸಿಕೊಳ್ಳುತ್ತಿವೆ. ಇನ್ನು ನಮ್ಮ ದೇಶ. ಅರ್ಧರಾತ್ರಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರಿಗೆ ಗುಂಡು ತಗುಲಿದರೆ ಹುಯಿಲೆಬ್ಬಿಸುವ ಮುಸ್ಲಿಂ ಪರ ಸಂಘಟನೆಗಳು ಈಗ ಬುರ್ಖಾ ಹೊದ್ದು ಕುಳಿತಿವೆ. ಮುಲ್ಲಾಗಳೆಲ್ಲ ‘ಮ್ಯೂಟ್’ ಆಗಿಬಿಟ್ಟಿದ್ದಾರೆ. ಸೆಕ್ಯುಲರಿಸಂ ಹೆಸರಿನಲ್ಲಿ ಮಸೀದಿಗಳಿಗೆ ಹೋಗಿ ಟೋಪಿ ಹಾಕಿಸಿಕೊಂಡು ಬಂದಿರುವ ರಾಜಕಾರಣಿಗಳದ್ದಂತೂ ಚಕಾರವೇ ಇಲ್ಲ.

ಹೋಗಲಿ, ಜಿಹಾದಿಗಳು ಅಲ್ಲಿ ಬಡಿದಾಡಿಕೊಂಡರೆ ನಮಗೇನಂತೆ ಎಂದು ಸುಮ್ಮನಿರುವುದು ಸಾಧ್ಯವಾ? ಇಲ್ಲವೇ ಇಲ್ಲ. ಇರಾಕನ್ನೇ ನೆಪವಾಗಿಟ್ಟುಕೊಂಡು ಪಾಕಿಸ್ತಾನದ ಅಲ್-ಕೈದಾ ಮುಖಂಡ ಮೌಲಾನಾ ಆಸಿಂ ಉಮರ್ ಕಾಶ್ಮೀರದ ಹುಣ್ಣನ್ನು ಮತ್ತೆ ಕೆರೆದಿದ್ದಾನೆ. ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರೆಲ್ಲ ಒಟ್ಟಾಗಿ ಕಾಶ್ಮೀರದ ವಿಮೋಚನೆಗೆ ಹೋರಾಡಲು ಸ್ಫೂರ್ತಿಯಾಗಲಿ ಎಂದು ಒಂದು ವೀಡಿಯೋ ಕೂಡ ತಯಾರಿಸಿದ್ದಾನೆ! ಒಂದೋ ನೀನಿರಬೇಕು ಇಲ್ಲಾ ನಾನು ಎಂಬ ಧೋರಣೆಯ ಪಾಕಿಸ್ತಾನ ಒಂದೆಡೆ. ನೀನು ಒಂದು ಹೆಜ್ಜೆಯಿಡು ನಾನು ಹತ್ತು ಹೆಜ್ಜೆಯಿಟ್ಟು ತೋರಿಸುತ್ತೇನೆ ಎಂದು ತೊಡೆ ತಟ್ಟಿ ನಿಂತಿರುವ ಚೀನಾ ಮತ್ತೊಂದೆಡೆ. ಇಗೋ ನೋಡು, ಜಾಗತೀಕರಣಗೊಂಡು ಹೊಸ ರೂಪದಲ್ಲಿ ಬಂದಿದ್ದೇನೆ ಎನ್ನುತ್ತಿರುವ ಜಿಹಾದ್ ಮಗದೊಂದೆಡೆ.

ಇಂದಿನ ಪರಿಸ್ಥಿತಿ ಎಂದಿಗಿಂತಲೂ ತುಸು ಹೆಚ್ಚೇ ಗಂಭೀರವಾಗಿದೆ ಎನಿಸುತ್ತಿಲ್ಲವೇ?