Tuesday, 24 June 2014

ಸ್ಮಾರಕವಾಗಲಿ ಈ ನೌಕೆ, ಸ್ವಾಭಿಮಾನವ ಮುರಿಯಬೇಕೇಕೆ?

ಈಗ್ಗೆ ಕೆಲ ದಿನಗಳ ಹಿಂದೆ ಆನಂದ್ ಖಾರ್ಡೆ ಎಂಬುವರ ಅಹವಾಲೊಂದು ಮಿಂಚಂಚೆಯಲ್ಲಿ ಹರಿದಾಡುತ್ತಿತ್ತು. ಅಹವಾಲಿನ ಉದ್ದೇಶವೇನು ಗೊತ್ತೇ? ನಮ್ಮ ದೇಶದ ಹೆಮ್ಮೆಯ ಯುದ್ಧನೌಕೆ ಐಎನ್‍ಎಸ್ ವಿಕ್ರಾಂತ್‍ ಗುಜರಿಗೆ ಹೋಗದಂತೆ ತಡೆದು ಅದನ್ನು ಒಂದು ಸ್ಮಾರಕವನ್ನಾಗಿ ಪರಿವರ್ತಿಸುವುದು! ಸಾಧ್ಯವಾದಷ್ಟೂ ಜನರಿಗೆ ಈ ಅಹವಾಲು ತಲುಪಿಸಿ, ಅವರ ಹಸ್ತಾಕ್ಷರಗಳನ್ನು ಸಂಗ್ರಹಿಸಿ ಯುದ್ಧನೌಕೆಯನ್ನು ಈಗಿರುವಂತೆಯೆ ಉಳಿಸಿಕೊಳ್ಳುವ ಅಭಿಯಾನ ಅದಾಗಿತ್ತು. ಅಂದು ನಾವು ವ್ಯಕ್ತಪಡಿಸಿದ ಬೆಂಬಲ ಈಗ ಫಲ ಕೊಟ್ಟಿದೆ. ಸರ್ವೋಚ್ಚ ನ್ಯಾಯಾಲಯ ಐಎನ್‍ಎಸ್ ವಿಕ್ರಾಂತ್‍‍ ಕುರಿತ ತೀರ್ಪನ್ನು ತಡೆ ಹಿಡಿದಿದೆ. ಭಾರತೀಯ ನೌಕಾದಳದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಯುದ್ಧವೊಂದರಲ್ಲಿ ನಿರ್ಣಾಯಕ ಪಾತ್ರ ವಹಿಸಿ ಗೆಲುವು ತಂದುಕೊಟ್ಟ ಐಎನ್‍ಎಸ್ ವಿಕ್ರಾಂತ್‍ನ ಬದುಕಲ್ಲಿ ಬಹಳಷ್ಟು ನಡೆದು ಹೋಗಿದೆ. ಒಮ್ಮೆ ಅದರ ಜಾತಕ ನೋಡಿಬಿಡೋಣ ಬನ್ನಿ.ಎಚ್‍ಎಮ್‍ಎಸ್ ಹರ್ಕ್ಯುಲಿಸ್ ಎಂಬ ಜನ್ಮನಾಮದೊಂದಿಗೆ 1943ರ ನವೆಂಬರ್ 12ರಂದು ಬ್ರಿಟನ್ನಿನಲ್ಲಿ ಅಸ್ತಿತ್ವಕ್ಕೆ ಬಂದ ಈ ಯುದ್ಧನೌಕೆ ಎರಡನೆಯ ಮಹಾಯುದ್ಧದ ಕಾರಣದಿಂದ ನಿರೀಕ್ಷಿತ ವೇಗದಲ್ಲಿ ಪೂರ್ಣಗೊಳ್ಳಲಿಲ್ಲ. ನಂತರ ಭಾರತ ಇದನ್ನು 1957ರಲ್ಲಿ ವಿಕ್ರಾಂತ್ ಎಂಬ ಹೆಸರಿನಲ್ಲಿ ದತ್ತು ಪಡೆಯಿತು. ಆಗ ಭಾರತೀಯ ಹೈ ಕಮಿಷನರ್ ಆಗಿದ್ದ ವಿಜಯಲಕ್ಷ್ಮಿ ಪಂಡಿತ್ ಅವರು ಇದನ್ನು ಸೇನೆಗೆ ಹಸ್ತಾಂತರಿಸಿದ್ದು 1961ರ ಮಾರ್ಚ್ ನಾಲ್ಕರಂದಾದರೆ ಇದು ಅಧಿಕೃತವಾಗಿ ನೌಕಾದಳಕ್ಕೆ ಸೇರ್ಪಡೆಗೊಂಡಿದ್ದು 1961ರ ನವೆಂಬರ್ ಮೂರರಂದು. ಮರು ವರ್ಷವೇ ನಡೆದ ಭಾರತ-ಚೀನಾದ ಘನಘೋರ ಕದನ ಕಂಡು ನಮ್ಮ ಅಂದಿನ ಪುಕ್ಕಲು ಪ್ರಧಾನಿ ಎಷ್ಟು ವಿಚಲಿತರಾಗಿದ್ದರೆಂದರೆ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನೆಲ್ಲ ವಾಪಸ್ ಕರೆಸಿಕೊಂಡುಬಿಟ್ಟರು. ಪರಿಣಾಮ, ಚೀನ ನಮ್ಮನ್ನು ತರಿದು ಹಾಕಿತು. ಮತ್ತೆ 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧವಾದಾಗಲೂ ನಮ್ಮ ನೌಕಾಪಡೆಗೆ ಸುಮ್ಮನಿರುವಂತೆ ಆದೇಶಿಸಲಾಯಿತು. ಬಂದರಿನಲ್ಲಿ ಲಂಗರು ಹಾಕಿಸಿಕೊಂಡು ಕುಳಿತ ವಿಕ್ರಾಂತ್ ಇದನ್ನೆಲ್ಲ ಸುಮ್ಮನೆ ನೋಡುತ್ತಿತ್ತು! ಆದರೆ 1971ರಲ್ಲಿ ಮತ್ತೆ ಪಾಕಿಸ್ತಾನ ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಾಗ ಮೊತ್ತ ಮೊದಲ ಬಾರಿಗೆ ಸರಿಯಾದ ರಣತಂತ್ರ ರೂಪಿಸುವ ಅಗತ್ಯವನ್ನು ನಮ್ಮ ನಾಯಕರು ಮನಗಂಡರು. ಸ್ಪಷ್ಟ ರೂಪು-ರೇಷೆಯೊಂದಿಗೆ ಕಣಕ್ಕಿಳಿಯುವಂತೆ ಸೂಚಿಸಿದ ಇಂದಿರಾ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನಗಳನ್ನು ಜಲಮಾರ್ಗದಲ್ಲಿ ಕಟ್ಟಿಹಾಕುವಂತೆ ನೌಕಾಪಡೆಗೆ ಸೂಚಿಸಿದರು.

ಆಗ ಕ್ಯಾಪ್ಟನ್ ಸ್ವರಾಜ್ ಪ್ರಕಾಶ್‍ರ ನೇತೃತ್ವದಲ್ಲಿ ಹೊರಟಿತು ನೋಡಿ ಐಎನ್ಎಸ್ ವಿಕ್ರಾಂತ್!

ಅಂದಿನ ಕಾಲಕ್ಕೆ ಭಾರತದ ಬಳಿಯಿದ್ದ ಅತ್ಯುನ್ನತ ಹಾಗೂ ಅತಿದೊಡ್ಡ ಯುದ್ಧನೌಕೆ ಇದೊಂದೆ! ಎಲ್ಲವೂ ಸರಿಯಾಗಿದ್ದಿದ್ದರೆ, ನೇರವಾಗಿ ಕರಾಚಿಯನ್ನೇ ಮುತ್ತಿಬಿಡುವ ಇರಾದೆಯಿತ್ತು ನಮ್ಮ ಸೇನೆಗೆ. ಆದರೆ ತಾಂತ್ರಿಕ ದೋಷದಿಂದಾಗಿ ಒಂದು ಬಾಯ್ಲರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ವಿಕ್ರಾಂತ್‍ ರಿಪೇರಿಗೆ ಬಂದಿತ್ತು. ಯುದ್ಧಕ್ಕೆ ಸನ್ನದ್ಧವಾಗಲು ಅದಕ್ಕೆ ಒಂದು ವರ್ಷವಾದರೂ ಹಿಡಿಯುವುದೆಂದು ಅಂದಾಜಿಸಲಾಗಿತ್ತು. ತುರ್ತು ಪರಿಸ್ಥಿತಿ ಬಂದೊದಗಿದ್ದರಿಂದ ಅವಸರದ ತೇಪೆ ಹಚ್ಚಲಾಯಿತಾದರೂ ಹೊಡೆತ ಬಿದ್ದದ್ದು ಅದರ ಕ್ಷಿಪ್ರಗತಿಯ ಚಲನೆಗೆ! ಆದರೂ ಯುದ್ಧ ಶುರುವಾದ ದಿನ, ಅಂದರೆ ಡಿಸೆಂಬರ್ ನಾಲ್ಕರಂದು, ಪೂರ್ವ ಪಾಕಿಸ್ತಾನದ ಬಂದರುಗಳನ್ನು ಧ್ವಂಸಮಾಡುವ ಗುರಿಯೊಂದಿಗೆ ಅಂಡಮಾನ್-ನಿಕೋಬಾರ್ ದ್ವೀಪಸಮೂಹಗಳ ಬಂದರಿನಿಂದ ಮುನ್ನಡೆಯಿತು ವಿಕ್ರಾಂತ್.

ಪಾಕಿಸ್ತಾನಕ್ಕೆ ಮೊದಲಿನಿಂದಲೂ ವಿಕ್ರಾಂತ್‍ನ ಮೇಲೊಂದು ಕಣ್ಣಿದ್ದೇ ಇತ್ತು. 1965ರ ಯುದ್ಧದಲ್ಲೇ ತಾನು ಅದನ್ನು ಮುಳುಗಿಸಿಬಿಟ್ಟಿದ್ದೇನೆಂದು ಎಲ್ಲೆಡೆ ಡಂಗುರ ಸಾರಿಕೊಂಡು ಬಂದಿದ್ದ ಪಾಕಿಸ್ತಾನ ತನ್ನ ಮಾತನ್ನು ಈಗಲಾದರೂ ನಿಜ ಮಾಡಿಕೊಳ್ಳುವ ಹವಣಿಕೆಯಲ್ಲಿ ಜಲಾಂತರ್ಗಾಮಿ ಯುದ್ಧನೌಕೆ ಪಿಎನ್‍ಎಸ್ ಘಾಜಿಯನ್ನು ಸದ್ದಿಲ್ಲದೆ ವಿಕ್ರಾಂತ್‍ನೆಡೆಗೆ ತೇಲಿಬಿಟ್ಟಿತು. ಪಾಪ, ಅದರ ಕನಸು ನನಸಾಗಲೇ ಇಲ್ಲ. ವಿಶಾಖಪಟ್ಟಣವನ್ನೂ ತಲುಪುವ ಮೊದಲೇ ನಮ್ಮ ಇನ್ನೊಂದು ಯುದ್ಧ ನೌಕೆ ಐಎನ್‍ಎಸ್ ರಜಪೂತ್ನ ದಾಳಿಯಿಂದ ಸಮುದ್ರ ತಳದಲ್ಲೇ ತುಂಡಾಯಿತು ಘಾಜಿ. ಮುನ್ನಡೆದ ವಿಕ್ರಾಂತ್ ಚಿತ್ತಗಾಂಗ್‍ಗೆ ಹತ್ತಿರವಾಗುತ್ತಿದ್ದಂತೆ ಅದರ ಮೇಲೆ ರೆಕ್ಕೆ ಹರಡಿ ಕುಳಿತ ವಾಯುಸೇನೆಯ ಎಂಟು ಸೀ ಹಾಕ್  ವಿಮಾನಗಳು ಆಕಾಶಕ್ಕೆ ಚಿಮ್ಮಿದವು. ಮೊದಲ ಬಲಿ ಕಾಕ್ಸ್ ಬಜಾರ್ ಬಂದರು. ನಂತರ ಧೂಳಿಪಟವಾಗಿದ್ದು ಖುಲ್ನ. ನೋಡನೋಡುತ್ತಿದ್ದಂತೆ ಚಿತ್ತಗಾಂಗ್ ಬಂದರೂ ಪೂರ್ಣ ಧ್ವಂಸ! ಆರು ದಿನಗಳ ಅವಿರತ ಹೋರಾಟದ ಫಲವಾಗಿ ಪೂರ್ವ ಪಾಕಿಸ್ತಾನದ ಹಡಗು ಯುದ್ಧನೌಕೆಗಳೆಲ್ಲ ಹೇಳ ಹೆಸರಿಲ್ಲದಂತಾದವು. ಮತ್ತೊಂದೆಡೆ ಕರಾಚಿಯನ್ನು ಗುರಿಯಾಗಿಸಿ ಹೊರಟ ಪಶ್ಚಿಮ ನೌಕಾ ನೆಲೆಯ ಕ್ಷಿಪಣಿ ದೋಣಿಗಳು ನಿರೀಕ್ಷಿಸಿದ್ದಂತೆಯೇ ಅದನ್ನೂ ಕೈವಶ ಮಾಡಿಕೊಂಡವು. ಎಡ-ಬಲಗಳೆರಡೂ ಕಟ್ಟಿ ಹಾಕಲ್ಪಟ್ಟ ಪಾಕಿಸ್ತಾನದ ಜಲಮಾರ್ಗ ಪೂರ್ಣವಾಗಿ ಭಾರತದ ಕೈವಶವಾಯಿತು. ಪಾಕಿಸ್ತಾನ ಒಂದು ಹಡಗನ್ನೂ ನೀರಿಗಿಳಿಸಲಾಗಲಿಲ್ಲ. ಯಾವ ಮಿತ್ರರೂ ಅದರ ಸಹಾಯಕ್ಕೆ ಧಾವಿಸುವುದೂ ಆಗಲಿಲ್ಲ. ಕೆಲವೇ ದಿನಗಳಲ್ಲಿ ಸುಮಾರು 90 ಸಾವಿರ ಯೋಧರ ಶರಣಾಗತಿಯೊಂದಿಗೆ ಸೋಲೊಪ್ಪಿಕೊಂಡಿತು. ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯ ಯುದ್ಧಗಳಲ್ಲೊಂದು ಎಂದು ಪರಿಗಣಿಸುವ ಇದು ನಡೆದದ್ದು ಒಟ್ಟು 13 ದಿನಗಳು ಮಾತ್ರ. ಶತ್ರುವನ್ನು ಸದೆಬಡಿಯುವಲ್ಲಿ ಮಹತ್ವದ ಪಾತ್ರ ವಹಿಸಿದ ವಿಕ್ರಾಂತ್ ತನ್ನ ತಂಡಕ್ಕೆ ಗಳಿಸಿಕೊಟ್ಟ ಕೀರ್ತಿ ಎಷ್ಟು ಗೊತ್ತೇ? 2 ಮಹಾವೀರ ಹಾಗೂ 12 ವೀರ ಚಕ್ರಗಳು! ಪರಿಣಾಮ, ಸೇನಾಧಿಕಾರಿಗಳ ಹಾಗೂ ಜನರ ಕಣ್ಮಣಿಯಾಗಿಬಿಟ್ಟಿತು. ಆಗಬೇಕಾದ್ದೇ. ಕುಳಿತು ಓದುವ ನಮಗೇ ಇಷ್ಟು ರೋಮಾಂಚನವಾಗಬೇಕಾದರೆ ದಿನಗಟ್ಟಲೆ ಅದರೊಂದಿಗೇ ಒಡನಾಡಿದ , ಅಭೂತಪೂರ್ವ ವಿಜಯವೊಂದರ ರೂವಾರಿಯಾದ ಅದರ ಬಗ್ಗೆ ನಮ್ಮ ಸೇನಾಧಿಕಾರಿಗಳಿಗೆ ವಿಶೇಷ ಮಮತೆ ಇರಬೇಕಾದ್ದು ಸಹಜವೇ ಅಲ್ಲವೇ?

ಯುದ್ಧದ ನಂತರವೂ ನೂರಾರು ಯೋಧರ ತರಬೇತಿಗೆ ಬಳಕೆಯಾದ ವಿಕ್ರಾಂತ್ 1997ರಲ್ಲಿ ಅಧಿಕೃತವಾಗಿ ಸೇನೆಯಿಂದ ನಿವೃತ್ತವಾಯಿತು. ಅದರ ಪ್ರಸಿದ್ಧಿ ಹಾಗೂ ಅದರೊಡನೆ ಬೆಸೆದುಕೊಂಡಿದ್ದ ಬಂಧದಿಂದಾಗಿ ಸೇನಾಧಿಕಾರಿಗಳು ಹಾಗೂ ಜನಸ್ತೋಮ ವಿಜಯದ ಸ್ಮರಣಾರ್ಥ ಅದನ್ನೊಂದು ಸ್ಮಾರಕವನ್ನಾಗಿ ಮಾರ್ಪಡಿಸುವ ಬೇಡಿಕೆಯನ್ನಿಟ್ಟವು. ಇಷ್ಟು ಹೊತ್ತಿಗೆ ಮುಂಬಯಿಯ ಪಶ್ಚಿಮ ನೌಕಾ ವಲಯ ಸೇರಿದ್ದ ವಿಕ್ರಾಂತ್‍ನ ಕುರಿತ ನಿರ್ಣಯ ಸಹಜವಾಗಿಯೇ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ನಾರಾಯಣ ರಾಣೆಯವರ ಹೆಗಲೇರಿತು. ತಾರಮ್ಮಯ್ಯ ಎಂದು ಕೈಯಾಡಿಸಿಬಿಟ್ಟರು ರಾಣೆ. ಮತ್ತ್ಯಾರ ಬೆನ್ನು ಬೀಳುವುದು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ಕಾರ್ಗಿಲ್ ಕದನ ಶುರುವಾಯಿತು. ಆ ಅಧ್ಯಾಯ ಮುಗಿಯುವ ಹೊತ್ತಿಗೆ ಬಾಳಾ ಠಾಕ್ರೆಯವರು ಆಸಕ್ತಿ ತೋರಿಸಿದರೂ ಸ್ಮಾರಕದ ಕನಸು 2001ರಲ್ಲಿ  ನನಸಾಗಿದ್ದು ತಾತ್ಕಾಲಿಕವಾಗಿ ಮಾತ್ರ. ಆಗ ವಿಕ್ರಾಂತ್ ಜನರ ವೀಕ್ಷಣೆಗೆ ಮುಕ್ತವಾಗಿ ಲಭ್ಯವಾಯಿತು. ವಿಪರ್ಯಾಸ ನೋಡಿ. ಜನರಿಂದ ಉತ್ತಮ ಪ್ರತಿಕ್ರಿಯೆಯೇನೋ ದೊರೆಯಿತು ಆದರೆ ಉದ್ಯಮ ವರ್ಗದ ಕುಳಗಳ್ಯಾರೂ ಇತ್ತ ತಿರುಗಿಯೂ ನೋಡಲಿಲ್ಲ. ಸೂಕ್ತ ಪ್ರಾಯೋಜಕರಿಲ್ಲದೆ ಹಣಕಾಸಿನ ನೆರವಿಲ್ಲದೆ ಸೊರಗತೊಡಗಿತು ವಿಕ್ರಾಂತ್‍ನ ದೈತ್ಯ ಶರೀರ. 2010ರ ಹೊತ್ತಿಗೆ ಪರಿಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ಸ್ಮಾರಕವನ್ನು ಮುಚ್ಚಲಾಯಿತು. ಕೊನೆಗೆ 2013ರಲ್ಲಿ ನಿರ್ವಹಣಾ ವೆಚ್ಚ ಸಾಲದೆ, ಅನ್ಯ ಮಾರ್ಗವಿಲ್ಲದೆ ಹರಾಜಿನ ಹೊಸ್ತಿಲಿಗೆ ಬಂದು ನಿಂತಿತು ವಿಕ್ರಾಂತ್‍!

ಇದನ್ನು ನಮ್ಮ ಅಖಂಡತೆಯ, ಸ್ವಾಭಿಮಾನದ ಪ್ರತೀಕವೆಂದು ಭಾವಿಸಿದ್ದ, ಮುಂಬೈನ ಕಿರಣ್ ಪೈಗಾಣ್‍ಕರ್ ಎಂಬ ಶ್ರೀಸಾಮಾನ್ಯರೊಬ್ಬರು ಸಮಿತಿಯೊಂದನ್ನು ರಚಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದರು. ಇದರಿಂದ ಪ್ರಯೋಜನವೇನಾದರೂ ಆಯಿತಾ? ಇಲ್ಲ. ಸರ್ಕಾರ ಹಾಗೂ ನೌಕಾದಳ ಎರಡೂ ದುಡ್ಡಿಲ್ಲವೆಂದು ಕೈಚೆಲ್ಲಿದ್ದರಿಂದ ವಿಧಿಯಿಲ್ಲದೆ 2014ರ ಜನವರಿಯಲ್ಲಿ ಮುಂಬೈ ನ್ಯಾಯಾಲಯ ಹರಾಜಿನ ತೀರ್ಮಾನಕ್ಕೆ ಸಮ್ಮತಿಯ ಅಂತಿಮ ಮುದ್ರೆಯನ್ನೊತ್ತಿತು.

ಅಂತರ್ಜಾಲದಲ್ಲಿ ನಡೆದ ಹರಾಜಿನಲ್ಲಿ ವಿಕ್ರಾಂತ್ ಹರಾಜಾಗಿದ್ದು 63.2 ಕೋಟಿ ರುಪಾಯಿಗಳಿಗೆ! ಕೊಂಡದ್ದು ಭಾವನಗರದಲ್ಲಿರುವ ಅಲಾಂಗ್ ಶಿಪ್ ಬ್ರೇಕರ್ಸ್ ಎಂಬ ಸಂಸ್ಥೆ. ಗೋವುಗಳು ಕಸಾಯಿಖಾನೆಗೆ ಹೋದರೆ ಆಗುವ ಕಥೆಯೇ ವಿಕ್ರಾಂತ್ ಅಲಾಂಗ್‍ಗೆ ಹೋದರೆ ಆಗುತ್ತಿತ್ತು. ಸ್ಮಾರಕವಾಗಿ ನಿಲ್ಲಬೇಕಾದ ಯುದ್ಧನೌಕೆ ಒಂದೊಂದೇ ಭಾಗವನ್ನು ಮುರಿಸಿಕೊಂಡು ಕಳಚಿ ಬೀಳುವುದನ್ನು ಸಹಿಸದ ಆನಂದ್ ಖಾರ್ಡೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಿ ಜನರ ಸಹಿ ಸಂಗ್ರಹಣೆ ಶುರು ಮಾಡಿದರು. ಆಗ ನಡೆಯಿತು ನೋಡಿ ಪವಾಡ! ಜನರ ಒತ್ತಡಕ್ಕೆ ಮಣಿದ ಸರ್ವೋಚ್ಚ ನ್ಯಾಯಾಲಯ ಮೇ 5ರ ತನ್ನ ತೀರ್ಪಿನಲ್ಲಿ ವಿಕ್ರಾಂತ್‍‍ನನ್ನು ಶಿಪ್ ಬ್ರೇಕರ್ಸ್ ಸಂಸ್ಥೆಗೆ ಹಸ್ತಾಂತರಿಸದಿರಲು ನಿರ್ಧರಿಸಿತು. ಏಕೆಂದರೆ ವಿಕ್ರಾಂತ್‍ನ ಪರವಾಗಿ ಸುಮಾರು 12,000ಕ್ಕೂ ಹೆಚ್ಚಿನ ಮಂದಿ ನಿಂತಿದ್ದರು. ಹಾಗೆ ನೋಡಿದರೆ 125 ಕೋಟಿಯ ಮುಂದೆ ಜುಜುಬಿ 12 ಸಾವಿರ ಯಾವ ಲೆಕ್ಕ ಅಲ್ಲವೇ? ಸಮಾಧಾನವೆಂದರೆ ಅಂತಿಮ ತೀರ್ಪು ಹೊರಬರಲಿರುವುದು ಜುಲೈನಲ್ಲಿ. ಈಗ ಖಾರ್ಡೆ ಮತ್ತವರ ತಂಡ ಮತ್ತೆ ಕಾರ್ಯೋನ್ಮುಖವಾಗಿದೆ. ಹೇಗಾದರೂ ಮಾಡಿ ಅಗತ್ಯವಿರುವ ಹಣಕಾಸಿನ ಬೆಂಬಲ ಗಿಟ್ಟಿಸಲೇಬೇಕೆಂಬ ಹಟಕ್ಕೆ ಬಿದ್ದಿದೆ.

ಇದೆಲ್ಲದರ ನಡುವೆ ಮೊನ್ನೆಯಷ್ಟೇ ಮೋದಿಯವರು ವಿಕ್ರಮಾದಿತ್ಯನನ್ನು ದೇಶಕ್ಕೆ ಅರ್ಪಿಸಿದ್ದಾರೆ. ವಿಕ್ರಾಂತನಿಗೆ ಹೋಲಿಸಿದರೆ ವಿಕ್ರಮಾದಿತ್ಯ ಅತೀವ ಬಲಶಾಲಿ. 45,000 ಟನ್ ತೂಕದ ಇದು ಮಿಗ್-29ಕೆ ಸೇರಿದಂತೆ 34 ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲುದು. ಅತ್ಯಂತ ಸುಸಜ್ಜಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ. ಇದರ ಸಾಮರ್ಥ್ಯ ಬೇರೆ ರಾಷ್ಟ್ರಗಳ ಜಂಘಾಬಲವನ್ನು ಎಷ್ಟು ಉಡುಗಿಸಿದೆಯೆಂದರೆ, ಕಳೆದ ನವೆಂಬರ್‍ನಲ್ಲಿ ರಷ್ಯಾದಲ್ಲಿ ಪರೀಕ್ಷೆಗೊಳಪಟ್ಟಿದ್ದಾಗ ನೇಟೊ ರಾಷ್ಟ್ರಗಳ ವಿಮಾನವೊಂದು ಸದ್ದಿಲ್ಲದೆ ಬಂದು ಇದರ ನೆತ್ತಿಯ ಮೇಲೆ ಹಾರಾಡಿತ್ತು. ತಕ್ಷಣವೇ ಬೆನ್ನು ಹತ್ತಿದ ರಷ್ಯಾದ ಮಿಗ್ 29ಕೆ ವಿಮಾನದ ಕೈಗೆ ಸಿಗದೆ ಹಾಗೇ ಪರಾರಿಯೂ ಆಯಿತು! ನಿಜ, ಒಂದಿಲ್ಲೊಂದು ಕಾರಣ ಕೊಟ್ಟು ಚೀನಾ ನಮ್ಮನ್ನು ಸುತ್ತುವರಿದಿರುವ ಈ ಹೊತ್ತಿನಲ್ಲಿ ನಮಗೆ ವಿಕ್ರಮಾದಿತ್ಯನ ಅಗತ್ಯ ಬಹಳವಿದೆ. ಇಂಥ ನೌಕೆ ನಮ್ಮದಾಗಿರುವ ಹೆಮ್ಮೆಯೂ ಇದೆ. ಹಾಗೇ ವಿಕ್ರಾಂತನನ್ನು ಉಳಿಸಿಕೊಳ್ಳುವ ಅಗತ್ಯವೂ ಇದೆ. ಐತಿಹ್ಯವಿರಲಿ ಬಿಡಲಿ, ತೀರಾ ಮಾಮೂಲಿ ಎನಿಸುವಂಥದ್ದನ್ನೆಲ್ಲ ಸ್ಮಾರಕದ ನೆಪದಲ್ಲಿ ಜೋಪಾನ ಮಾಡುವ, ಅತಿಯಾದ ಪ್ರಚಾರದಿಂದ ಪ್ರವಾಸಿಗಳನ್ನು ಸೆಳೆಯುವ ಪಾಶ್ಚಾತ್ಯ ರಾಷ್ಟ್ರಗಳನ್ನು ನಾವು ಈ ವಿಷಯದಲ್ಲಿ ಅನುಕರಿಸಲೇಬೇಕಿದೆ.

ನಮ್ಮ ಕಾರು, ಬೈಕು, ಮನೆಗಳನ್ನು ಅಸಾಧ್ಯ ಪ್ರೀತಿಸುತ್ತೇವೆ. ಸಾಕಿದ ನಾಯಿ ಬೆಕ್ಕುಗಳು ಸತ್ತರೆ ವರ್ಷಗಟ್ಟಲೆ ಅಳುತ್ತೇವೆ. ಹೆಮ್ಮೆಯ ಪ್ರತೀಕವಾದ ವಿಕ್ರಾಂತ್‍ನನ್ನು ತಬ್ಬಲಿಯಂತೆ ಗುಜರಿ ಅಂಗಡಿಗೆ ಕಳಿಸಿಬಿಡೋಣವೇ? ತಾಯಿ ಭಾರತಿಗೆ ನಾವಿಷ್ಟು ಜನ ಭಾರವಲ್ಲ. ಅವಳನ್ನು ರಕ್ಷಿಸಿದ, 20,000 ಟನ್ ತೂಕದ ವಿಕ್ರಾಂತ್ ನಮಗೆ ಭಾರವೇ? ನಾನು ನನ್ನದು ಎಂಬ ಸ್ವಾರ್ಥದ ಪರಿಧಿಯಲ್ಲಿ ಸೇರಿಸಿಕೊಂಡಾಗ ಮಾತ್ರ ವಿಕ್ರಾಂತ್ ಉಳಿಯಬಲ್ಲ. ನಿರ್ಧಾರ ನಮಗೇ ಬಿಟ್ಟದ್ದು!

Wednesday, 11 June 2014

ಹದಿಮೂರರ ಪೋರಿಯೂ ನಮಗೆ ಬದುಕು ಕಲಿಸಬಲ್ಲಳು!

ಹದಿಮೂರು ವರ್ಷದ ಚುರುಕು ಹುಡುಗಿಯೊಬ್ಬಳು ಸತತವಾಗಿ ಎರಡು ವರ್ಷಗಳ ಕಾಲ ಹೊರಪ್ರಪಂಚದ ಸಂಪರ್ಕ ಕಡಿದುಕೊಂಡು ತನ್ನ ಕುಟುಂಬದೊಂದಿಗೆ ಅಜ್ಞಾತವಾಸದಲ್ಲಿರಬೇಕಾಗಿ ಬಂದರೆ ಏನಾಗಬಹುದು? ಹಣೆಬರಹವನ್ನು ಹಳಿಯುತ್ತ ದಿನದೂಡಬಹುದು. ತನಗೆ ಈ ದುರ್ಗತಿಯನ್ನು ತಂದಿತ್ತ ದೇವರನ್ನು ಶಪಿಸುತ್ತ ಕಣ್ಣೀರಿಡಬಹುದು ಅಥವಾ ಸುಮ್ಮನೆ ಕೊರಗಿ ಖಿನ್ನತೆಗೊಳಗಾಗಬಹುದು. ಅದೆಲ್ಲ ಬಿಟ್ಟು ತನ್ನ ನೋವು ಸಂಕಟ ತೊಳಲಾಟಗಳನ್ನು, ಆ ದಿನಗಳ ಚಿತ್ರಣವನ್ನು ತನ್ನ ಡೈರಿಯಲ್ಲಿ ಯಥಾವತ್ತಾಗಿ ದಾಖಲಿಸಿಟ್ಟು ಸಾವಿನ ನಂತರವೂ ಸ್ಮರಣೀಯಳಾಗಬಹುದೇ? ವ್ಯತಿರಿಕ್ತ ಪರಿಸ್ಥಿತಿಯನ್ನು ಎಳೆ‍ಎಳೆ‍ಯಾಗಿ ಬಿಡಿಸಿಟ್ಟು, ಸಣ್ಣ-ಪುಟ್ಟದ್ದಕ್ಕೆಲ್ಲ ಧೃತಿಗೆಡುವವರಿಗೆ ಸ್ಫೂರ್ತಿಯಾಗಿ ವಿಶ್ವಕ್ಕೇ ಮಾನವೀಯತೆಯ ಪಾಠ ಕಲಿಸುವ ಗುರುವಾಗಬಹುದೇ? ಹೌದು ಎನ್ನುತ್ತದೆ ಇತಿಹಾಸ. ತನ್ನ ಪುಟ್ಟ ಬದುಕನ್ನು ಡೈರಿಯ ಪುಟಗಳಲ್ಲಿ ಸ್ಫುಟವಾಗಿ ಬರೆದಿಟ್ಟು, ಸತ್ತ ಮೇಲೂ ತನ್ನ ಬರಹದಿಂದಲೇ ಬದುಕಿರುವ ಈ ಬಾಲೆಯ ಹೆಸರು 'ಆನ್ ಫ್ರ್ಯಾಂಕ್'.

ಆನ್ ಹುಟ್ಟಿದ್ದು 1929ನೇ ಇಸವಿಯ ಜೂನ್ 12ರಂದು, ಜರ್ಮನಿಯ ಫ್ರಾಂಕ್‍ಫರ್ಟ್ ಎಂಬಲ್ಲಿ. ಅಪ್ಪ ಓಟ್ಟೊ ಫ್ರ್ಯಾಂಕ್, ಅಮ್ಮ ಎಡಿತ್ ಹಾಗೂ ಅಕ್ಕ ಮಾರ್ಗೋಟ್‍ರನ್ನೊಳಗೊಂಡ ಸಣ್ಣ ಯಹೂದಿ ಕುಟುಂಬ ಇವರದ್ದು. ಅಪ್ಪ ಪುಸ್ತಕ ಪ್ರಿಯನಾದ್ದರಿಂದ ಮನೆಯಲ್ಲೇ ದೊಡ್ಡ ಗ್ರಂಥಾಲಯವಿತ್ತು. ಮಕ್ಕಳಿಗೂ ಪುಸ್ತಕಗಳನ್ನು ಓದಲು ಬಹಳ ಉತ್ತೇಜನವಿತ್ತು. 'ಆನ್‍'ಗೆ  ನಾಲ್ಕು ವರ್ಷಗಳಾಗುವವರೆಗೂ ಎಲ್ಲ ಮಾಮೂಲಾಗಿಯೇ ಇತ್ತು. ಆದರೆ 1933ರ ಮಾರ್ಚ್ 13ರಂದು ನಡೆದ ಚುನಾವಣೆಯಲ್ಲಿ ಹಿಟ್ಲರ್‍ನ ನಾಜಿ ಪಕ್ಷ ಗೆದ್ದೊಡನೆ ಯಹೂದಿಗಳಲ್ಲಿ ಸಣ್ಣ ಸಂಚಲನ ಶುರುವಾಯಿತು. ಚಾನ್ಸೆಲರ್ ಆಗಿ ನಿಯುಕ್ತನಾದ ಹಿಟ್ಲರ್ ನಿರೀಕ್ಷಿಸಿದ್ದಂತೆಯೇ ದೌರ್ಜನ್ಯಕ್ಕಿಳಿದ. ಅವನು ಮಾಡಿದ ಮೊತ್ತ ಮೊದಲ ಕೆಲಸ Concentration Camp ಎಂದು ಕರೆಯಲ್ಪಡುತ್ತಿದ್ದ ಸಮರ ಶಿಬಿರ(ಯುದ್ಧದ ಸೆರೆಯಾಳುಗಳನ್ನು ಕೂಡಿಡುವ ಶಿಬಿರ)ಗಳನ್ನು ಶುರುಮಾಡಿ ಒಂದು ವರ್ಷದಲ್ಲೇ ಸುಮಾರು 45 ಸಾವಿರ ಜನರನ್ನು ಅಲ್ಲಿಗೆ ದೂಡಿದ್ದು. ಆಗ ಜರ್ಮನಿಯನ್ನು ತೊರೆದ ಸುಮಾರು 3 ಲಕ್ಷ ಯಹೂದಿ ಕುಟುಂಬಗಳಲ್ಲಿ 'ಆನ್‍'ಳ ಕುಟುಂಬವೂ ಸೇರಿತ್ತು.

ಹೀಗೆ ಜರ್ಮನಿ ಬಿಟ್ಟು ಆಶ್ರಯ ಹುಡುಕಿಕೊಂಡು ಹೊರಟ ಈ ಕುಟುಂಬ ನೆಲೆ ಕಂಡುಕೊಂಡದ್ದು ಹಾಲೆಂಡ್‍ನಲ್ಲಿ. ಐದಾರು ವರ್ಷಗಳು ನೆಮ್ಮದಿಯಾಗಿ ಉರುಳಿದ್ದವೇನೋ, 1940ರ ಮೇ ತಿಂಗಳಿನಲ್ಲಿ ಹಾಲೆಂಡ್‍ನ ಮೇಲೆ ದಾಳಿ ನಡೆಸಿದ ಹಿಟ್ಲರ್‍ನ ಸೈನ್ಯ ಅದನ್ನು ಸುಲಭವಾಗಿ ವಶಪಡಿಸಿಕೊಂಡಿತು. ದುರುಳ ಹಿಟ್ಲರ್‍ನ ಯಹೂದಿ ವಿರೋಧಿ ಚಟುವಟಿಕೆಗಳು ಇಲ್ಲಿಯೂ ಗರಿಗೆದರಿದವು. ಯಹೂದಿಗಳೆಲ್ಲ ಹೆಸರು ನೋಂದಣಿ ಮಾಡಿಸುವುದು ಕಡ್ಡಾಯವಾಯಿತು. ಅಪ್ಪ ಓಟ್ಟೊ ತನ್ನ ಉದ್ಯಮವನ್ನು ಗೆಳೆಯರ ಹೆಸರಿಗೆ ಹಸ್ತಾಂತರಿಸಿದರೆ, ಓದಿನಲ್ಲಿ ಮುಂದಿದ್ದ ಅಕ್ಕ-ತಂಗಿಯರು ತಾವು ಹೋಗುತ್ತಿದ್ದ ಪ್ರತಿಷ್ಠಿತ ಶಾಲೆಗಳನ್ನು ಬಿಟ್ಟು ಯಹೂದಿಯರಿಗೆ ಮೀಸಲಿದ್ದ ಶಾಲೆ ಸೇರಬೇಕಾಯಿತು. ಅಕ್ಕ ಮಾರ್ಗೋಟ್ ತುಂಬಾ ಮೆದು ಸ್ವಭಾವದ ಅಂತರ್ಮುಖಿಯಾಗಿದ್ದರೆ ತಂಗಿ ಆನ್ ವಾಚಾಳಿ ಹಾಗೂ ನಿರ್ಭೀತ ವ್ಯಕ್ತಿತ್ವದವಳಾಗಿದ್ದಳು. ಹಿಟ್ಲರ್‍ನ ಸೇನೆ ಹೇರಿದ್ದ ನೂರೆಂಟು ನಿರ್ಬಂಧಗಳ ನಡುವೆಯೂ ಬದುಕು ಹೇಗೋ ಸಾಗುತ್ತಿತ್ತು. 1943ನೇ ಇಸವಿಯ ಜೂನ್ 12 'ಆನ್‍'ಳ 13ನೆಯ ಹುಟ್ಟುಹಬ್ಬ. ಅಂದು ತಾನು ಬಹಳ ದಿನಗಳಿಂದ ಬಯಸಿದ್ದ ಕೆಂಪು-ಬಿಳಿ ಚೌಕಗಳಿದ್ದ ಆಟೋಗ್ರಾಫ್ ಪುಸ್ತಕವೊಂದನ್ನು ಉಡುಗೊರೆಯಾಗಿ ಪಡೆದಳು. ಅದನ್ನು ಡೈರಿಯಂತೆ ಬಳಸುವ ನಿಶ್ಚಯ ಮಾಡಿ ಪ್ರತಿದಿನ ನಡೆಯುತ್ತಿದ್ದ ಘಟನೆಗಳನ್ನು ದಾಖಲಿಸತೊಡಗಿದಳು. 

ಜುಲೈ 1943ರ ಒಂದು ದುರ್ದಿನ - ಅಕ್ಕ ಮಾರ್ಗೋಟ್‍ಳಿಗೆ ಸಮರ ಶಿಬಿರವೊಂದನ್ನು ಸೇರುವ ನಿರ್ದೇಶನ ಬಂದಿತ್ತು. ಕ್ರೌರ್ಯದ ಪರಾಕಾಷ್ಠೆಯಾಗಿದ್ದ ಈ ಶಿಬಿರಗಳು ಯಹೂದಿಗಳನ್ನು ಜೀತದಾಳುಗಳಾಗಿ ದುಡಿಸಿಕೊಂಡು, ಉಪವಾಸ ಕೆಡವಿ, ದೈಹಿಕವಾಗಿ ಮಾನಸಿಕವಾಗಿ ಚಿತ್ರಹಿಂಸೆ ನೀಡಿ, ಕೆಲವೊಮ್ಮೆ ವಿಷಯುಕ್ತ ಅನಿಲ ತುಂಬಿದ ಕೊಠಡಿಗೆ ತಳ್ಳಿ ಕೊಲ್ಲಲ್ಲೆಂದೇ ನಿರ್ಮಿತವಾಗಿದ್ದವು. ಲ್ಲಿಗೆ ಹೋಗಿ ಸೇರುವುದೆಂದರೆ ಸಾವಿನ ಮನೆಯ ಕದ ತಟ್ಟುವುದೆಂದೇ ಅರಿವಿದ್ದ ಕುಟುಂಬಕ್ಕೆ ಭೂಗತವಾಗದೇ ಬೇರೆ ವಿಧಿಯಿರಲಿಲ್ಲ. ಕೆಲ ಸಹೋದ್ಯೋಗಿಗಳ ನೆರವಿನಿಂದ ಅಡಗುದಾಣವೊಂದನ್ನು ಪತ್ತೆಹಚ್ಚಿದ ಓಟ್ಟೋ ಜುಲೈ ಆರರ ಬೆಳಿಗ್ಗೆ ಮನೆಯವರೊಂದಿಗೆ ಹೊರಟ. ನಾಜಿ ಅಧಿಕಾರಿಗಳ ದಾರಿ ತಪ್ಪಿಸಲು ತಾನು ಸ್ವಿಟ್ಜರ್‍ಲ್ಯಾಂಡ್‍ಗೆ ಹೋಗುತ್ತಿರುವುದಾಗಿ ಚೀಟಿ ಬರೆದಿಟ್ಟ. ಯಹೂದಿಗಳು ಸಾರ್ವಜನಿಕ ವಾಹನಗಳನ್ನು ಬಳಸುವುದು ನಿಷಿದ್ಧವಾಗಿದ್ದರಿಂದ ಎಲ್ಲರೂ ಮೈಲುಗಟ್ಟಲೆ ನಡೆದು ಅಡಗುದಾಣ ತಲುಪಿದರು.

ಹಾಗೆ ಕದ್ದು ಮುಚ್ಚಿ ಬದುಕುವುದೂ ಒಂದು ದೊಡ್ಡ ಸವಾಲೇ ಆಗಿತ್ತು. ಹೊರಗೆ ಅಡ್ಡಾಡುವುದಿರಲಿ, ಕಿಟಕಿ ತೆರೆಯುವ ಹಾಗೂ ಇರಲಿಲ್ಲ. ಸಿಕ್ಕಿಹಾಕಿಕೊಂಡರೆ ಇವರ ಜೀವದ ಜೊತೆಗೆ ಇವರಿಗೆ ಆಶ್ರಯ ನೀಡಿದ್ದ ಓಟ್ಟೋನ ಸಹೋದ್ಯೋಗಿಗಳ ಜೀವಕ್ಕೂ ಅಪಾಯವಿತ್ತು. ಊಟ ತಿಂಡಿಗಳ ವಿಷಯದಲ್ಲೂ ಅಷ್ಟೆ. 'ಗೆಸ್ಟಾಪೊ'(ನಾಜಿ ಅಧಿಕಾರಿ)ಗಳು ಪ್ರತಿ ಮನೆಯನ್ನೂ ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆಂದರೆ ಪ್ರತಿ ತಿಂಗಳು ಕೊಂಡುಕೊಳ್ಳುವ ರೇಷನ್‍ನಲ್ಲಿ ಅನಗತ್ಯ ಹೆಚ್ಚಳವಾದರೆ ನಿಂತ ನಿಲುವಲ್ಲೇ ಮನೆಯಲ್ಲಿ ಎಷ್ಟು ಮಂದಿ ಇದ್ದಾರೆಂಬ ತಪಾಸಣೆಗಿಳಿದುಬಿಡುತ್ತಿದ್ದರು. ಶಂಕೆಗೆ ಸ್ವಲ್ಪವೂ ಆಸ್ಪದ ಕೊಡುವ ಹಾಗಿರಲಿಲ್ಲ. ಆದ್ದರಿಂದ ಅವರು ಮಾಡುವ ಅಡುಗೆಯಲ್ಲೇ ಮಿಗಿಸಿಕೊಟ್ಟದ್ದನ್ನು ಇವರು ಹಂಚಿಕೊಂಡು ತಿನ್ನಬೇಕಿತ್ತು. ಸಾಲದ್ದಕ್ಕೆ ಈ ಗುಂಪಿಗೆ ಇವರ ಹಾಗೇ ಇನ್ನೂ ನಾಲ್ಕು ಜನ ಬಂದು ಸೇರಿದ್ದರು. ಇರಲು ಸರಿಯಾದ ಜಾಗವಿರದೆ, ಹೊಟ್ಟೆ ತುಂಬ ಆಹಾರವಿರದೆ, ಯಾರ ಕಿವಿಗಾದರೂ ಬಿದ್ದರೆ ಎಂಬ ಭೀತಿಯಲ್ಲಿ ಜೋರಾಗಿ ಮಾತನ್ನೂ ಆಡದೆ ಪ್ರತಿ ಕ್ಷಣವನ್ನೂ ಹೆದರುತ್ತಲೇ ಕಳೆಯಬೇಕಾದ ಅನಿವಾರ್ಯತೆ ಬಂದೊದಗಿತ್ತು.

ಇಂಥ ಸನ್ನಿವೇಶದಲ್ಲಿ ಆನ್ ತನ್ನ ಡೈರಿಯೊಡನೆ ಮಾತಿಗಿಳಿದಳು. ತನ್ನ ಒಂಟಿತನ, ಹತಾಶೆ, ಮನೆಯವರೆಲ್ಲರ ಅಸಹಾಯಕತೆ, ಸಂಬಂಧಗಳ ಪರಿಭಾಷೆಗಳೆಲ್ಲ ಅಕ್ಷರಗಳಾಗಿ ಮೂಡಿದವು. ಮಾತುಮಾತಿಗೂ ವ್ಯಗ್ರಳಾಗುತ್ತಿದ್ದ ಅಮ್ಮನನ್ನು ಮೊದಮೊದಲು ತೆಗಳಿದ ಆನ್ ಕೊನೆಗೆ ಅವಳನ್ನು ತೆಗಳಿದ್ದಕ್ಕೆ ತನ್ನ ಮೇಲೇ ಅಸಹ್ಯಪಟ್ಟುಕೊಂಡಳು. ಮನೆಯವರೆಲ್ಲರಲ್ಲೂ ಹಿಂದೆಂದೂ ಇರದ ಸೌಹಾರ್ದ ಸಾಮರಸ್ಯ ಮೂಡಿರುವುದನ್ನು ಗುರುತಿಸಿದಳು. ಕಳೆದು ಹೋಗುತ್ತಿದ್ದ ತನ್ನ ಮಾನಸಿಕ ಸಮತೋಲನ, ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಹೆಣಗುತ್ತಿದ್ದ ರೀತಿಗಳನ್ನೂ ದಾಖಲಿಸಿದಳು. ತನ್ನ ಕುಟುಂಬಕ್ಕೆ ಆಶ್ರಯ ಕೊಟ್ಟಿದ್ದವರು ಬಂದು ಹೇಳುತ್ತಿದ್ದ ನಾಜಿಗಳ ದೌರ್ಜನ್ಯದ ಘಟನೆಗಳನ್ನು ಯಥಾವತ್ತಾಗಿ ಬರೆಯುತೊಡಗಿದಳು.

ತಾನು ಬರೆಯುತ್ತಿರುವ ಡೈರಿ ತನ್ನ ಓದಿಗೆ ಮಾತ್ರ ಸೀಮಿತ ಎಂದು ಮೊದಲು ಭಾವಿಸಿದ್ದ ಅವಳಿಗೆ 1944ರ ಮಾರ್ಚ್ 28ರಂದು ಹಾಲೆಂಡ್‍ನ ಸಚಿವ ಗೆರಿಟ್ ರೇಡಿಯೋದಲ್ಲಿ ಮಾಡಿದ ಭಾಷಣ ಬೇರೆಯ ದಿಕ್ಕನ್ನೇ ತೋರಿಸಿತು. ಅಂದು ಮಾತನಾಡಿದ ಗೆರಿಟ್, 'ಇತಿಹಾಸವನ್ನು ಬರೀ ಸರ್ಕಾರಿ ಕಾಗದ ಪತ್ರಗಳಿಂದ ಬರೆಯಲಾಗುವುದಿಲ್ಲ. ಇಂದು ನಾವು ಅನುಭವಿಸುತ್ತಿರುವುದೆಲ್ಲ ಮುಂದಿನ ಪೀಳಿಗೆಗೆ ಲಭ್ಯವಾಗಬೇಕಾದರೆ ಇದನ್ನು ಸಾಮಾನ್ಯ ಜನರು ಪತ್ರಗಳಲ್ಲಿ, ಡೈರಿಗಳಲ್ಲಿ ದಾಖಲಿಸಿಡಬೇಕು. ಈ ಎಲ್ಲ ಮಾಹಿತಿಯನ್ನೂ ಒಟ್ಟಾಗಿ ಕಲೆ ಹಾಕಿದಾಗ ಮಾತ್ರ ನಮ್ಮ ಹೋರಾಟದ ನಿಜ ಸ್ವರೂಪದ ಚಿತ್ರಣ ಸಿಗುವುದು' ಎಂದರು. ಇದನ್ನು ಕೇಳಿದ ಆನ್ ತನ್ನ ಡೈರಿಯನ್ನು ತನಗೆ ಮಾತ್ರ ಮೀಸಲಿಟ್ಟುಕೊಳ್ಳುವ ವಿಚಾರವನ್ನು ಕೈಬಿಟ್ಟು ಯುದ್ಧಸಂಬಂಧಿ ವಿವರಗಳಿಗೆ ಹೆಚ್ಚು ಮಹತ್ವ ಕೊಟ್ಟಳು. ಹಲವೆಡೆ ಬರೆದದ್ದನ್ನು ತಿದ್ದಿ ಮತ್ತೆ ಬರೆದಳು. ತನ್ನ ಡೈರಿಯ ಪುಟಗಳೆಲ್ಲ ತುಂಬಿದ ಮೇಲೆ ಮತ್ತೆರಡು ನೋಟ್‍ಪುಸ್ತಕಗಳನ್ನೂ ತುಂಬಿಸಿದಳು. ಮುನ್ನೂರಕ್ಕೂ ಮಿಕ್ಕಿ ಬಿಡಿ ಹಾಳೆಗಳಲ್ಲೂ ಬರೆದಳು. ನಾಲ್ಕು ಗೋಡೆಗಳ ಮಧ್ಯೆ ಬಂದಿಯಾದ 14 ವರ್ಷದ ಪೋರಿ ಅಂಥ ಸ್ಥಿತಿಯಲ್ಲಿ ಮತ್ತೇನು ಮಾಡಿಯಾಳು?

1944ರ ಜೂನ್ 6ರಂದು ಬ್ರಿಟನ್ ಸೇನೆ ಜರ್ಮನಿಯ ಸೇನೆಯನ್ನು ಧೊಳೀಪಟ ಮಾಡಿದ್ದನ್ನು ಸಂತಸದಿಂದ ಬರೆದ ಅವಳು ಜುಲೈ 15ರಂದು ಬರೆದದ್ದು ಹೀಗೆ: 'ನನ್ನ ಜೀವನವನ್ನು ಈ ಸಾವು ನೋವುಗಳ ಬುನಾದಿಯ ಮೇಲೆ ಕಟ್ಟಲು ಸಾಧ್ಯವೇ ಇಲ್ಲ. ನಿಧಾನವಾಗಿ ಇಡೀ ಪ್ರಪಂಚ ಪಾಳುಭೂಮಿಯಾಗುತ್ತಿದೆ ಎನಿಸುತ್ತಿದೆ. ನಾವೆಲ್ಲರೂ ನಿರ್ನಾಮವಾಗಿಬಿಡುತ್ತೇವೆ ಎನಿಸುತ್ತಿದೆ. ಆದರೂ ಕೆಲವೊಮ್ಮೆ ಮತ್ತೆ ಎಲ್ಲವೂ ಸರಿ ಹೋಗಲಿದೆ, ಕ್ರೌರ್ಯ ಕಳೆದು ಶಾಂತಿ ನೆಲೆಸಲಿದೆ ಎನಿಸುತ್ತದೆ. ಅಲ್ಲಿಯವರೆಗೂ ನಾನು ಗಟ್ಟಿಯಾಗಿರಬೇಕು. ಬಹುಶಃ ಆ ದಿನವನ್ನೂ ನಾನು ಕಾಣುತ್ತೇನೆ'

ದುರದೃಷ್ಟವಶಾತ್ ಆನ್ ಆ ದಿನವನ್ನು ಕಾಣಲೇ ಇಲ್ಲ. ಯಾರೋ ಅನಾಮಧೇಯರು ಕೊಟ್ಟ ಮಾಹಿತಿಯ ಮೇರೆಗೆ 1944ರ ಆಗಸ್ಟ್ ನಾಲ್ಕರಂದು ಇವರ ಅಡಗುದಾಣದ ಮೇಲೆ ದಾಳಿ ಮಾಡಿದ ಜರ್ಮನ್ ಪೋಲೀಸರು ಎಲ್ಲರನ್ನೂ ಬಂಧಿಸಿ ಯುದ್ಧ ಶಿಬಿರಗಳಿಗೆ ಕರೆದೊಯ್ದರು. ಅಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಗಂಡಸರಿಂದ ಬೇರ್ಪಡಿಸಲಾಯಿತು. 15 ವರ್ಷದೊಳಗಿದ್ದ ಮಕ್ಕಳನ್ನೆಲ್ಲ ಸೀದಾ ವಿಷಾನಿಲ ಕೊಟ್ಟು ಸಾಯಿಸುವ ಕೊಠಡಿಗಳಿಗೆ ರವಾನಿಸಲಾಯಿತು. ಆಗಷ್ಟೇ 15 ತುಂಬಿದ್ದ ಆನ್ ಬಚಾವಾದಳು. ನಂತರದ ದಿನಗಳಲ್ಲಿ ಅಮ್ಮ ಎಡಿತ್ ತನ್ನ ಪಾಲಿನ ಊಟವನ್ನೂ ಮಕ್ಕಳಿಗೇ ಕೊಟ್ಟು ತಾನು ಹಸಿವಿನಿಂದ ಸತ್ತಳು. ಅಕ್ಕ ಮಾರ್ಗೊಟ್ ನಿಶ್ಯಕ್ತಿಯಿಂದ ಸತ್ತರೆ, ಬದುಕುವ ತೀವ್ರ ತುಡಿತವಿದ್ದ ಆನ್ ಸಾಂಕ್ರಾಮಿಕ ರೋಗ 'ಟೈಫಸ್'ಗೆ ಕೊನೆಗೂ ಬಲಿಯಾದಳು. ಇದಾದ ಕೆಲವೇ ವಾರಗಳಲ್ಲಿ ಯುದ್ಧ ಮುಗಿದು ಬ್ರಿಟನ್ ಪಡೆಗಳು ಎಲ್ಲ ಕೈದಿಗಳನ್ನೂ ಬಿಡುಗಡೆಗೊಳಿಸಿದವು. ಹಾಲೆಂಡ್‍ನಿಂದ ಬಂದಿಗಳಾಗಿ ತೆರಳಿದ್ದ ಒಂದು ಲಕ್ಷಕ್ಕೂ ಹೆಚ್ಚು ಯಹೂದಿಗಳಲ್ಲಿ ಉಳಿದವರು ಐದು ಸಾವಿರ ಮಾತ್ರ! ಅದರಲ್ಲಿ ಓಟ್ಟೊ ಫ್ರ್ಯಾಂಕ್‍ನೂ ಒಬ್ಬ. ತಮ್ಮ ಅಡಗುದಾಣಕ್ಕೆ ಹಿಂದಿರುಗಿದ ಅವನು ಮಗಳ ಡೈರಿಯನ್ನು ಮತ್ತು ಸಿಕ್ಕಷ್ಟು ಹಾಳೆಗಳನ್ನು ಒಟ್ಟುಗೂಡಿಸಿ ಅದನ್ನು ಪ್ರಕಟಿಸುವಲ್ಲಿ ಶ್ರಮವಹಿಸಿದ. ಪರಿಣಾಮವೇ - 'ಆನ್ ಫ್ರ್ಯಾಂಕ್: ದ ಡೈರಿ ಆಫ್ ಎ ಯಂಗ್ ಗರ್ಲ್' ಎಂಬ ತಲೆಬರಹದ ಇಂಗ್ಲಿಷ್ ಪುಸ್ತಕ. ಮುಂದೆ ಆ ಪುಸ್ತಕ ಹಾಗೂ ಆನ್ ಬಹಳ ಜನಪ್ರಿಯರಾದರು. ಅವಳ ಚಿಂತನಾಶೀಲತೆ, ಜೀವನ ಪ್ರೀತಿ ಹಾಗೂ ವಯಸ್ಸಿಗೆ ಮೀರಿದ ಪ್ರಬುದ್ಧ ಬರವಣಿಗೆ ಜನಸಾಮಾನ್ಯರಿಗಷ್ಟೇ ಅಲ್ಲದೆ ವಿಶ್ವದ ಅನೇಕ ಕವಿಗಳು,ನಾಟಕಕಾರರು ಹಾಗೂ ಜನನಾಯಕರಿಗೆ ಸ್ಫೂರ್ತಿದಾಯಕವೆನಿಸಿದವು. 'ಆನ್'ಳ ಹೆಸರಿನಲ್ಲಿ ಸ್ಥಾಪಿಸಿದ ಸಂಸ್ಥೆಯಿಂದ 1994ರಲ್ಲಿ ಪ್ರಶಸ್ತಿ ಸ್ವೀಕರಿಸುತ್ತಾ ಮಾತನಾಡಿದ ನೆಲ್ಸನ್ ಮಂಡೇಲಾ ತಾವು ಸೆರೆಮನೆಯಲ್ಲಿದ್ದಾಗ ಅವಳ ಪುಸ್ತಕದಿಂದ ಬಹಳ ಪ್ರಭಾವಿತರಾಗಿದ್ದನ್ನು ಸ್ಮರಿಸಿದರು.

ಸರಿಯಾಗಿ ಶಾಲೆಯನ್ನೇ ಮುಗಿಸದಿದ್ದ ಆನ್ ಮತ್ತೆ ಮತ್ತೆ ನೆನಪಾಗುತ್ತಾಳೆ. ಜೂನ್ 12 ಬಂದಾಗ ಮಾತ್ರವಲ್ಲ. ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ವಿದ್ಯಾರ್ಹತೆ ಇಲ್ಲವೆಂಬ ಪುಕಾರು ಎದ್ದಾಗ. ಪರೀಕ್ಷೆಗಳಲ್ಲಿ ಫೇಲಾದ ವಿದ್ಯಾರ್ಥಿಗಳು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಂಡಾಗ. ಖ್ಯಾತ ವಿಶ್ವವಿದ್ಯಾಲಯಗಳ ಪದವೀಧರರು ಧರ್ಮದ ಹೆಸರಿನಲ್ಲಿ ಭಯೋತ್ಪಾದಕರಾದಾಗ. ಸಿಕ್ಕಾಪಟ್ಟೆ ಓದಿಕೊಂಡ ಬುದ್ಧಿವಂತರು ಬುದ್ಧಿಗೇಡಿಗಳ ಹಾಗೆ ವರ್ತಿಸಿದಾಗ ಕೂಡ.

ಕಲಿಯುವ ಸಂಕಲ್ಪ ಮೂಡಬೇಕು - ಉದಾಹರಣೆಗಳಿಗೇನು, ಬೇಕಾದಷ್ಟು ಸಿಗುತ್ತವೆ!

Wednesday, 4 June 2014

ಬುದ್ಧಿಜೀವಿಗಳೇ, ಕಾದು ನೋಡುವುದಲ್ಲದೆ ನಿಮಗೆ ಅನ್ಯ ಮಾರ್ಗವಿಲ್ಲ!

Action and reaction are equal and opposite. ಕ್ರಿಯೆ ಮತ್ತು ಪ್ರತಿಕ್ರಿಯೆಗಳು ವಿರುದ್ಧ ದಿಕ್ಕಿನಲ್ಲಿದ್ದರೂ ಸಮಬಲದಿಂದಿರುತ್ತವೆ. ಇದು ನ್ಯೂಟನ್ನ ಮೂರನೆಯ ನಿಯಮ. ಸುಮಾರು ಮೂರು ಶತಕಗಳಿಗೂ ಹಿಂದೆ, ಅಂದರೆ ಕ್ರಿ.ಶ. 1687ರಲ್ಲಿ ನ್ಯೂಟನ್ ಜಗತ್ತಿಗೆ ಸಾಬೀತುಪಡಿಸಿದ್ದು. ಈಗ 2014ರಲ್ಲಿ ನಾವು ಭಾರತೀಯರು ಈ ನಿಯಮದ ಸತ್ಯಾಸತ್ಯತೆಯನ್ನು ಮತ್ತೆ ಸಾಬೀತುಪಡಿಸಿದ್ದೇವೆ! ಇಲ್ಲಿ ಕ್ರಿಯೆ - ಚುನಾವಣಾ ಪೂರ್ವದಲ್ಲಿ ಇಡೀ ದೇಶದಲ್ಲಿ ಒಂದು ವ್ಯವಸ್ಥಿತ ಜಾಲವು ಮೋದಿಯವರ ಕುರಿತ ಭಯವನ್ನು ಹುಟ್ಟುಹಾಕಿದ್ದು. ಪ್ರತಿಕ್ರಿಯೆ - ಜನಸಾಮಾನ್ಯರು ಆ ಭಯದ ಹುಟ್ಟಡಗಿಸಿ ಮೋದಿಯವರಿಗೆ ಐತಿಹಾಸಿಕ ವಿಜಯ ದೊರಕಿಸಿಕೊಟ್ಟಿದ್ದು. ಒಂದು ವಿಶೇಷವೆಂದರೆ ಪ್ರತಿಕ್ರಿಯೆಯು ಕ್ರಿಯೆಗಿಂತ ಬಹಳ ಪಟ್ಟು ಹೆಚ್ಚಿದೆ, ತೀಕ್ಷ್ಣವಾಗಿದೆ ಹಾಗೂ ಮುಟ್ಟಿ ನೋಡಿಕೊಳ್ಳುವ ಹಾಗಿದೆ! ಈಗ ನ್ಯೂಟನ್ ಬದುಕಿದ್ದರೆ ಬಹಳ ಖುಷಿಪಡುತ್ತಿದ್ದ!

ಹೀಗೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿತ್ತು. ಏಕೆಂದರೆ ಈ ಕ್ರಿಯೆಯನ್ನು ಹುಟ್ಟುಹಾಕಿದವರು ಅಂತಿಂಥವರಲ್ಲ, ಮೂರು ವರ್ಗಗಳಾಗಿ ವಿಂಗಡಿಸಬಹುದಾದ ಘಟಾನುಘಟಿಗಳು. ಒಂದು ವರ್ಗ ರಾಜಕಾರಣಿಗಳದ್ದಾದರೆ ಮತ್ತೊಂದು ಸುದ್ದಿ ಮಾಧ್ಯಮಗಳದ್ದು. ಮೂರನೆಯ ಹಾಗೂ ಅತ್ಯಂತ ಕುಲೀನ(?) ವರ್ಗ ಪ್ರಗತಿಪರರು ಹಾಗೂ ಬುದ್ಧಿಜೀವಿಗಳದ್ದು. ರಾಜಕಾರಣಿಗಳು ಸಿದ್ಧಾಂತ ಭೇದ ಮರೆತು ಒಂದಾದರು. ಮೋದಿಯವರನ್ನು ರಾಕ್ಷಸನೆಂದು ಬಿಂಬಿಸಿ ತಮ್ಮ ಕ್ರಿಯೆಗೆ ಮೊದಲಿಟ್ಟುಕೊಂಡರು. ಇನ್ನು ಸುದ್ದಿ ಮಾಧ್ಯಮದವರು ಹಿಂದೆ ಬೀಳುತ್ತಾರೆಯೇ? ಅಪಸ್ಮಾರ ಇರುವವರಿಗಿಂತ ಹೆಚ್ಚಾಗಿ ದೇಹ ಮನಸಿನ ಸ್ಥಿಮಿತ ಕಳೆದುಕೊಂಡು ಆ ಕ್ರಿಯೆಗೆ ಶಕ್ತಿ ಹಾಗೂ ವೇಗ ತುಂಬಿದರು. ಯಾವ ರಾಷ್ಟ್ರೀಯ ಚಾನೆಲ್ ನೋಡಿದರೂ ಮೋದಿ ಎಂಬ ನರಹಂತಕನ ಗೋಧ್ರಾ ಕಥೆಯೇ. ಇನ್ನುಳಿದವರು ಪ್ರಗತಿಪರರು ಹಾಗೂ ಬುದ್ಧಿಜೀವಿಗಳು. ಇದೊಂಥರಾ ವಿಚಿತ್ರ ತಳಿ. ತಮಗೆ ತಲೆಯಿಂದ ಕಾಲಿನವರೆಗೂ ರಕ್ತ ಮಾಂಸಗಳ ಬದಲು ಬುದ್ಧಿಯೇ ತುಂಬಿಕೊಂಡಿದೆಯೆಂಬ ಭ್ರಾಂತಿಯ ಜನ. ಉಳಿದವರು ಕೇವಲವೆಂಬ ಉದ್ಧಟತನ. ಜೊತೆಗೆ ಇವರ ಆವುಟವನ್ನು ಎಲ್ಲರೂ ಸಹಿಸ ಲೇಬೇಕೆಂಬ ತಿಕ್ಕಲುತನ. ಇವರೂ ಗುಂಪುಕಟ್ಟಿಕೊಂಡು ತಮ್ಮ ಕೈಲಾದಷ್ಟು ‘ಭಯೋತ್ಪಾದನೆ'(ಭಯ+ಉತ್ಪಾದನೆ) ಮಾಡಿದರು.

ಈಗ ಇವರೆಲ್ಲರಿಗೂ ತಕ್ಕ ಪ್ರತಿಕ್ರಿಯೆ ನೀಡಿದ್ದೇವೆ ನೋಡಿ, ಬಾಲ ಮುದುರಿಕೊಂಡು ಸುಮ್ಮನಾಗಿದ್ದಾರೆ. ರಾಜಕಾರಣಿಗಳು ಪರಸ್ಪರ ದೋಷಾರೋಪಣೆಯ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ರಾಜ್‍ದೀಪ್ ಸರ್‍ದೇಸಾಯಿ, ಬರ್ಖಾ ದತ್ ಹಾಗೂ ಅರ್ಣಬ್ ಗೋಸ್ವಾಮಿಯರು ಇಂಗು ತಿಂದ ಮಂಗನ ಮುಖ ಮಾಡಿಕೊಂಡು ವಿಧಿಯಿಲ್ಲದೆ ಮೋದಿ ಸರ್ಕಾರದ ಮೊದಲ ದಿಟ್ಟ ಹೆಜ್ಜೆಗಳ ಸಮಾಚಾರ ಬಿತ್ತರಿಸುತ್ತಿದ್ದಾರೆ. ಕಡೇಪಕ್ಷ ಇವರು ಜನರಿಂದ ಓಡಿಹೋಗುತ್ತಿಲ್ಲ. ತಮ್ಮ ಲೆಕ್ಕಾಚಾರ ತಪ್ಪಾದುದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಈ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ದಂಡಿದೆಯಲ್ಲ, ಇವರ ಪಾಡು ಯಾರಿಗೂ ಬೇಡ. ಅತ್ತ ತಪ್ಪನ್ನು ಒಪ್ಪಿಕೊಳ್ಳಲಾಗದೆ, ಇತ್ತ ಸತ್ಯವನ್ನು ಅಲ್ಲಗಳೆಯಲೂ ಆಗದೆ ಕಾದ ಹೆಂಚಿನ ಮೇಲೆ ಕುಳಿತಂತೆ ಚಡಪಡಿಸುತ್ತಿದ್ದಾರೆ.

ಉದಾಹರಣೆಗೆ ಪ್ರಗತಿಪರರ ಧೀಮಂತ ನಾಯಕಿ 'ಸುಜಾನ ಅರುಂಧತಿ ರಾಯ್' ಫಲಿತಾಂಶ ಸಿಕ್ಕೊಡನೆ ಮಾಡಿದ ಮೊದಲ ಕೆಲಸವೇನು ಹೇಳಿ? ಪಾಕಿಸ್ತಾನದ 'ಡಾನ್' ಪತ್ರಿಕೆಯ ಬಳಿ ಹೋಗಿ 'ನಮಗೆ ಹೀಗೊಂದು ಸಂಪೂರ್ಣ ಬಹುಮತದ ಸರ್ಕಾರ ಸಿಕ್ಕಿಬಿಟ್ಟಿದೆ ಮತ್ತು ವಿರೋಧ ಪಕ್ಷದ ಅಸ್ತಿತ್ವವೇ ಇಲ್ಲ' ಎಂದು ಅಲವತ್ತುಕೊಂಡಿದ್ದು! ಇದೇ ಅರುಂಧತಿ ಕೆಲ ತಿಂಗಳುಗಳ ಹಿಂದೆ ವೆಂಡಿ ಡೋನಿಗರ್‍ಳ ಕೊಳಕು ಪುಸ್ತಕ 'ದಿ ಹಿಂದೂಸ್: ಆನ್ ಆಲ್ಟರ್‍ನೇಟಿವ್ ಹಿಸ್ಟರಿ'ಯನ್ನು ಪೆಂಗ್ವಿನ್ ಪಬ್ಲಿಕೇಷನ್ಸ್ ಭಾರತದಲ್ಲಿ ಹಿಂಪಡೆದಾಗ ರಾದ್ಧಾಂತ ಮಾಡಿಬಿಟ್ಟಿದ್ದಳು. ಪೆಂಗ್ವಿನ್‍ಗೆ ಪತ್ರ ಬರೆದಿದ್ದ ಈಕೆ "ಇನ್ನೂ ಚುನಾವಣೆಗೆ ಕೆಲ ತಿಂಗಳುಗಳು ಮಾತ್ರವೇ ಉಳಿದಿವೆ. ಫ್ಯಾಸಿಸ್ಟ್ ಗಳು ಇನ್ನೂ ಪ್ರಚಾರ ಮಾಡುತ್ತಿದ್ದಾರೆ ಹೊರತು ಅಧಿಕಾರಕ್ಕೆ ಬಂದಿಲ್ಲ. ನೀವು ಇಷ್ಟು ಬೇಗ ಸೋತುಹೋದಿರೇ? ನಾವು ಬರೀ ಹಿಂದುತ್ವಕ್ಕೆ ಪೂರಕವಾದ ಪುಸ್ತಕಗಳನ್ನೇ ಪ್ರಕಟಿಸಬೇಕೇ?’ ಎಂದು ಕೇಳಿದ್ದಳು.

ಕ್ರಿಶ್ಚಿಯನ್ ಅಮ್ಮ ಹಾಗೂ ಹಿಂದು ಅಪ್ಪನ ಈ ಮಿಶ್ರತಳಿಗೆ ಭಾರತವೆಂದರೆ, ವಿಶೇಷವಾಗಿ ಹಿಂದೂಗಳೆಂದರೆ ವಿಪರೀತ ಅಲರ್ಜಿ! ಅದೂ ಯಾವ ಮಟ್ಟದ್ದೆಂದರೆ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕೆಂಬ ಕೂಗಿಗೆ ಈಕೆಯದ್ದು ಮೊದಲಿನಿಂದಲೂ ಮುಕ್ತ ಬೆಂಬಲ. 2008ರ ಆಗಸ್ಟ್ 18 ರಂದು ಶ್ರೀನಗರದಲ್ಲಿ ನಡೆದ ಪ್ರತ್ಯೇಕತಾವಾದಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದಳು. ಈಕೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕೊಡುತ್ತಿರುವ ತಪ್ಪು ಸಂದೇಶವನ್ನು ಆಗಿನ ಕಾಂಗ್ರೆಸ್ ಧುರೀಣರಾಗಿದ್ದ ಸತ್ಯ ಪ್ರಕಾಶ ಮಾಳವೀಯರು ತೀವ್ರವಾಗಿ ಖಂಡಿಸಿದ್ದರು. ಅಷ್ಟಕ್ಕೂ ಈಕೆಗೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಪುಸ್ತಕವನ್ನು ಕ್ಯಾಕರಿಸಿ ಉಗಿದವರಲ್ಲಿ ಮೊದಲಿಗರು ಈಕೆಯ ರಾಜ್ಯ (ಕೇರಳ)ದ ಮುಖ್ಯಮಂತ್ರಿಯಾಗಿದ್ದ ಇ.ಕೆ.ನಯನಾರ್‍ರವರು. ಬೂಕರ್ ಪ್ರಶಸ್ತಿ ಸಮಿತಿಯ ಸದಸ್ಯರಾದ ಕಾರ್ಮೆನ್ ಕ್ಯಾಲಿಲ್‍ರವರೂ ಇದನ್ನು ಅತ್ಯಂತ ಕೆಟ್ಟ ಪುಸ್ತಕ ಎಂದು ಕರೆದಿದ್ದರು. ನಕ್ಸಲರನ್ನು ಬೆಂಬಲಿಸಿದ್ದು, ಸಂಸತ್ತಿನ ಮೇಲೆ ದಾಳಿ ನಡೆಸಿದ ಮಹಮ್ಮದ್ ಅಫ್ಜಲ್‍ನನ್ನು ಯುದ್ಧಕೈದಿ ಎಂದು ವಹಿಸಿಕೊಂಡಿದ್ದು ಈಕೆಯ ಮಹತ್ಸಾಧನೆಗಳಲ್ಲಿ ಕೆಲವು. 2008ರ ಮುಂಬೈ ದಾಳಿಯನ್ನು ಗೋಧ್ರಾ ಘಟನೆಯ ಪರಿಣಾಮ ಎಂದು ಸಾರಿದ ಈಕೆಯ ಪ್ರಕಾರ ಕಾಶ್ಮೀರಿ ಉಗ್ರಗಾಮಿಗಳು, ಪ್ರತ್ಯೇಕತಾವಾದಿಗಳು ಮಾಡುವುದೆಲ್ಲ ಸರಿ.

ಇಂಥ ಹಿನ್ನೆಲೆಯವಳ ಸಾರಥ್ಯದಲ್ಲಿ ಸಲ್ಮಾನ್ ರಶ್ದಿ, ಜಯತಿ ಘೋಷ್, ದೀಪಾ ಮೆಹ್ತಾ ಮುಂತಾದವರೆಲ್ಲ ನೂರಾರು ಊರುಗಳನ್ನು ಸುತ್ತಿ ಮನೆ-ಮನೆ ಬಾಗಿಲು ಬಡಿದಿದ್ದರು. 'ಮಾಧ್ಯಮಗಳು ನಿಮಗೆ ಹೇಳದ ಗುಜರಾತಿನ ಸುದ್ದಿ' ಎಂಬ ಭಿತ್ತಿಪತ್ರಗಳನ್ನು ಎಲ್ಲರಿಗೂ ಹಂಚಿ ಎಲ್ಲರಲ್ಲೂ ಸಾಕಷ್ಟು ಭಯ ಹುಟ್ಟಿಸುವ ಪ್ರಯತ್ನ ಮಾಡಿದ್ದರು. ಈಕೆಯ ಓರಗೆಯವಳೇ ಆದ ತೀಸ್ತಾ ಸೇತಲ್ವಾಡ್ ಮತ್ತೊಂದು ರೀತಿಯಲ್ಲಿ ಮಿಶ್ರತಳಿ. ಮುಂಬಯಿಯಲ್ಲಿ ಅಮೆರಿಕದ ಫೋರ್ಡ್ ಫೌಂಡೇಷನ್‍ನಿಂದ ಪ್ರಾಯೋಜಿತ CIP ಎಂಬ NGO ನಡೆಸುತ್ತಿರುವಾಕೆ. ಗೋಧ್ರಾ ಹತ್ಯಾಕಾಂಡದಲ್ಲಿ ಸುಳ್ಳು ಸಾಕ್ಷಿಗಳನ್ನು ಹುಟ್ಟುಹಾಕಿ, ಅವರು ನೋಡದ್ದನ್ನೆಲ್ಲಾ ಹೇಳಿಸಿ ಕೊನೆಗೆ ಸಿಕ್ಕಿಹಾಕಿಕೊಂಡು ಛೀಮಾರಿ ಹಾಕಿಸಿಕೊಂಡ ಈಕೆಯ ಬಗ್ಗೆ ಬರೆಯಲು ಕುಳಿತರೆ ಒಂದು ಬೃಹತ್ ಗ್ರಂಥಕ್ಕಾಗುವಷ್ಟು ಕೊಳಕು, ಮೋಸದ ಸರಕು ಸಿಗುತ್ತದೆ. ಗೋಧ್ರಾ ಗಲಭೆಯ ಸಂತ್ರಸ್ತರ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ, ಅದನ್ನು ನುಂಗಿ ನೀರು ಕುಡಿದ ಪ್ರಕರಣಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಈಕೆಯ ಹಿಂಬಾಲಕರ ದಂಡಿನಲ್ಲಿ ಜಾವೇದ್ ಅಖ್ತರ್, ರಾಹುಲ್ ಬೋಸ್ ಹಾಗೂ ವಿಜಯ್ ತೆಂಡೂಲ್ಕರ್ ಪ್ರಮುಖರು.

ಇಂಥ ಬುದ್ಧಿ ಜೀವಿಗಳ ಪಟಾಲಂ ಎಲ್ಲ ಸೇರಿ ನಮ್ಮೆಲ್ಲರನ್ನೂ ಭಯಪಡಿಸಲು ಪ್ರಯತ್ನಿಸಿತ್ತು. ತಮ್ಮ ಬಳಿಯಿದ್ದ(?) ಬುದ್ಧಿಯನ್ನು ಖರ್ಚು ಮಾಡಿ ಮುಗಿದಾಗ ಅಮೆರಿಕ ಹಾಗೂ ಪಾಕಿಸ್ತಾನಗಳಿಂದ ಎರವಲು ಪಡೆದು ಶತಾಯ ಗತಾಯ ನಮ್ಮನ್ನು ಹೆದರಿಸಿಯೇ ತೀರುವುದೆಂಬ ಪಣ ತೊಟ್ಟಿತ್ತು. ಈಗ ನಾವು ಸರಿಯಾದ ಏಟು ಹಾಕಿದ ಮೇಲೆ ಇತ್ತ ಸುಳಿದಿಲ್ಲ. ಸದ್ಯಕ್ಕೆ ಕುಂಯ್‍ಗುಟ್ಟುತ್ತಾ ದುಃಖ ದುಮ್ಮಾನಗಳನ್ನೆಲ್ಲಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಿದೆ. ಮೋದಿಯವರು ಒಮ್ಮೆ ಗುಟುರು ಹಾಕಿದೊಡನೆ ಅದೂ ಸಂಪೂರ್ಣ ನಿಂತುಹೋಗಲಿದೆ!

ಇದು ರಾಷ್ಟ್ರಮಟ್ಟದ ವಿಷಯವಾಯಿತು. ಇನ್ನು ನಮ್ಮ ರಾಜ್ಯದ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ಸ್ಥಿತಿ ನೋಡಿ. ಚುನಾವಣೆಯ ಅಬ್ಬರ ಶುರುವಾದಾಗ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕೆ. ಮರುಳಸಿದ್ದಪ್ಪ ಸೇರಿದಂತೆ ಎಂಟು ಜನ ಚಿಂತಕರು 'ಸಮಕಾಲೀನ ವಿಚಾರ ವೇದಿಕೆ' ಎಂಬ ಚಾವಡಿ ಕಟ್ಟಿದರು. ನಿರೀಕ್ಷಿಸಿದಂತೆ ಅವ್ಯಾಹತವಾಗಿ ಮೋದಿ ದೂಷಣೆ ನಡೆಯಿತು. ಫಲಿತಾಂಶದ ನಂತರ ಅನಂತಮೂರ್ತಿಯವರನ್ನು ಸುವರ್ಣ ವಾಹಿನಿ ಎಳೆದು ತಂದಾಗ ಅರಳು-ಮರುಳು ಎಂಬಂತೆ ನಟಿಸಿಬಿಟ್ಟರು. ಇವರ ಯೌವ್ವನ ಮರುಕಳಿಸುವುದು ಬೈರಪ್ಪನವರನ್ನು ಖಂಡಿಸುವಾಗ ಮತ್ತು ಮೋದಿಯವರನ್ನು ನಿಂದಿಸುವಾಗ ಮಾತ್ರ. ಉಳಿದಂತೆ ಇವರು ಏನೂ ಅರ್ಥವಾಗದ, ಕೈಲಾಗದ ಅಸಹಾಯಕ ವೃದ್ಧರಾಗಿ ಕುಳಿತುಬಿಡುತ್ತಾರೆ. ಇನ್ನು ಚುನಾವಣಾ ಪ್ರಚಾರ ನಿಮಿತ್ತ ರೋಹಿಣಿ ನಿಲೇಕಣಿಯವರೊಂದಿಗೆ ಬಸವನಗುಡಿಯ ಬೀದಿ ಬೀದಿ ಸುತ್ತಿದ್ದ ಕಾರ್ನಾಡರಂತೂ ಪತ್ತೆಯೇ ಇಲ್ಲ. ಮೋದಿ ವಿರುದ್ಧ ಪ್ರಚಾರಕ್ಕೆಂದು ಕಾಶಿಗೆ ಹೋಗಿದ್ದವರು ಅಲ್ಲೇನಾದರೂ ಬಿಟ್ಟು ಬಂದರೋ ಅಥವಾ ತಾವೇ ಅಲ್ಲಿ ಉಳಿದು ಬಿಟ್ಟರೋ ಗೊತ್ತಿಲ್ಲ. ಗೋವಿಂದರಾವ್, ಮರುಳಸಿದ್ಧಪ್ಪ ಮುಂತಾದವರು ದುರ್ಬೀನು ಹಿಡಿದು ಹುಡುಕಿದರೂ ಕಣ್ಣಿಗೆ ಬೀಳುತ್ತಿಲ್ಲ.

ಇದೆಲ್ಲದರ ನಡುವೆ ತಮ್ಮ ಚಿಪ್ಪಿನಿಂದ ಹೊರಬಂದಿರುವ ಅಗ್ನಿ ಶ್ರೀಧರ್ ರೈಲೊಂದನ್ನು ಬಿಡಲು ಹೋಗಿ ಸಂಪೂರ್ಣ ಹಳಿ ತಪ್ಪಿಸಿದ್ದಾರೆ. ಇದೇ ಶ್ರೀಧರ್ 2013ರ ಏಪ್ರಿಲ್ 28ರಂದು ಆನಂದ್‍ರಾವ್ ವೃತ್ತದಲ್ಲಿ 'ಹಿಟ್ಲರ್ ಮೋದಿ, ಹಿಂತಿರುಗಿ ಹೋಗು, ಹಿಂತಿರುಗಿ ಹೋಗು' ಎಂದು ಗಂಟಲು ಹರಿಯುವಂತೆ ಅರಚಿದ್ದರು. ಮೋದಿಯವರ ಭೇಟಿಯ ಹಿನ್ನೆಲೆಯಲ್ಲಿ ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ಯ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮೋದಿಯವರ ಬಗ್ಗೆ ಇವರಲ್ಲಿ ಹೊತ್ತಿ ಉರಿಯುತ್ತಿದ್ದ ರೋಷಾಗ್ನಿ, ದ್ವೇಷಾಗ್ನಿಗಳು ಈಗ ಇದ್ದಕ್ಕಿದ್ದಂತೆ  ಆರಿ ಹೋಗಿವೆಯೆಂದು ನಾವು ನಂಬಿ ಬಿಡುತ್ತೇವೆಯೇ? ದಾದಾಗಿರಿಯ ದಿನಗಳ ಶ್ರೀಧರ್‍ರವರೇ ಇಲ್ಲಿ ಕೇಳಿ, ನೀವೆಷ್ಟೇ ನಾಜೂಕಾಗಿ ಲೇಖನ ಬರೆದರೂ ನಾವು ಎಂದಿಗೂ, ಯಾವ ಕಾರಣಕ್ಕೂ ನಿಮ್ಮ ರೈಲು ಹತ್ತುವುದಿಲ್ಲ.ಇವರಷ್ಟೇ ನೈಪುಣ್ಯದಿಂದ ಟಿ.ಎನ್.ಸೀತಾರಾಂರವರೂ ಕಥೆ ಹೆಣೆದಿದ್ದಾರೆ. ಮೋದಿ ಪ್ರಧಾನಿಯಾಗಿ ಬಿಟ್ಟರೆ ಏನೇನೋ ಆಗಿ ಹೋಗುತ್ತದೆಂಬ ಭಯವಿತ್ತು ಎನ್ನುತ್ತಾರಲ್ಲ ಹೊಸದಾಗಿ ಆಗುವಂಥದ್ದೇನು ಉಳಿಸಿದ್ದಾರೆ ನೆಹರು ಕುಟುಂಬದವರು? ಅಷ್ಟಕ್ಕೂ ಇವರ ಧಾರಾವಾಹಿಗಳಲ್ಲಿ ಬರುವ ಹೆಣ್ಣು ಮಕ್ಕಳಲ್ಲಿರುವ ಗಟ್ಟಿತನ, ದಿಟ್ಟತನ, ಎದೆಗುಂದದಿರುವಿಕೆ ನಿಜಜೀವನದಲ್ಲಿ ಓರ್ವ ಗಂಡಸಿಗಿದ್ದರೆ ಇವರೇಕೆ ಭಯಪಡಬೇಕು? ಸೀತಾರಾಂರವರೇ, ಹಿಂದುವಾಗಿರುವುದೇ ಅಪರಾಧ ಎಂಬ ತೀರ್ಮಾನಕ್ಕೆ ಬಂದು ಅದರ ಮೂಲೋತ್ಪಾಟನೆಗೆ ಟೊಂಕಕಟ್ಟಿ ನಿಂತವರನ್ನೆಲ್ಲ ಕಂಡಾಗ ಆಗದಿದ್ದ ಭಯ ಈಗೇಕೆ? ನಿಮ್ಮ ಧಾರಾವಾಹಿಗಳಲ್ಲಿ ಬಳಕೆಯಾಗುವ ಸ್ವಚ್ಛ ಭಾಷೆ, ಶುದ್ಧ ಚಾರಿತ್ರ್ಯ, ನಡವಳಿಕೆಗಳೆಲ್ಲ ಯಾವ ಸಂಸ್ಕೃತಿಯ ಪ್ರತಿಫಲನ ಹೇಳಿ?

ಎಲ್ಲ ಬುದ್ಧಿಜೀವಿಗಳೂ ಪ್ರಗತಿಪರರೂ ಸೋತು ಸುಣ್ಣವಾಗಿದ್ದಾರೆ. ನಮ್ಮ ಪ್ರತಿಕ್ರಿಯೆಗೆ ತರಗೆಲೆಗಳಂತೆ ಹಾರಿ ಹೋಗಿದ್ದಾರೆ. ಜನಾದೇಶವಾದ್ದರಿಂದ ನೇರವಾಗಿ ಸಿಟ್ಟು, ಅತೃಪ್ತಿ ವ್ಯಕ್ತಪಡಿಸುವ ಹಾಗಿಲ್ಲ. ಆದ್ದರಿಂದ ಲೇಖನಗಳಲ್ಲಿ, ಫೇಸ್‍ಬುಕ್‍ ಗೋಡೆಗಳಲ್ಲಿ ಇವರು ಆಯ್ದುಕೊಂಡಿರುವ ಮಾರ್ಗ 'ಸುಮ್ಮನಿದ್ದು ಮೋದಿಯವರನ್ನು ಗಮನಿಸುವುದು'. ಜೊತೆಗೆ, ‘ಪ್ರತಿಪಕ್ಷವಿಲ್ಲದ್ದರಿಂದ ಆಡಳಿತ ಪಕ್ಷ ಅಂಕೆ ಮೀರಿ  ವರ್ತಿಸುವಂತಿಲ್ಲ’ ಎಂಬ ಹಿತೋಪದೇಶ ನೀಡುವುದು. ನಿಜ, ಇವರು ಗಮನಿಸಲು ಶುರು ಮಾಡಿರುವುದು ಈಗ. ನಾವು ಒಂದು ದಶಕದಿಂದಲೇ ಗಮನಿಸಿದ್ದೇವಲ್ಲ, ಹಾಗಾಗಿ ನಮ್ಮಲ್ಲಿ ಭಯವಲ್ಲ, ನಂಬಿಕೆಯಿದೆ. ಸಾರ್ಥಕ್ಯವಿದೆ.

ಇಷ್ಟು ದಿನಗಳ ನಮ್ಮ ಭಯಕ್ಕೆ ನಾವು ಉತ್ತರ ಕಂಡುಕೊಂಡಿದ್ದೇವೆ. ನಿಮ್ಮ ಭಯಕ್ಕೂ ಉತ್ತರ ಖಂಡಿತ ಸಿಗಲಿದೆ. ಅಲ್ಲಿಯತನಕ ಯಾವ ಸೋಗಲಾಡಿತನದ ವೇಷಗಳನ್ನೂ ಹಾಕದೆ ಶಾಂತಚಿತ್ತದಿಂದ ಕಾದು ನೋಡಿ! Just Wait and Watch! 

Tuesday, 3 June 2014

ಫಿಕ್ಸಿಂಗ್, ಬೆಟ್ಟಿಂಗ್‍ಗಳ ಆರ್ಭಟದಲ್ಲಿ ಆಟವಾಗಿ ಉಳಿಯದ ಕ್ರಿಕೆಟ್

2012ರ ಜೂನ್ 21ರಂದು ಗೋವಾದಲ್ಲಿ ಇಬ್ಬರು ಹದಿನೆಂಟು ವರ್ಷದೊಳಗಿನ ಯುವಕರು 65 ವರ್ಷದ ತಮ್ಮ ಅಜ್ಜಿಯನ್ನು ದಾರುಣವಾಗಿ ಹತ್ಯೆ ಮಾಡಿದ್ದರು. ಆಕೆಯ ಮೈಮೇಲಿದ್ದ ಆಭರಣ ಹಾಗೂ ನಾಲ್ಕು ಲಕ್ಷ ರೂಪಾಯಿಗಳಷ್ಟು ಹಣವನ್ನು ದೋಚಲಾಗಿತ್ತು. ಹತ್ಯೆಯ ಉದ್ದೇಶ - IPL ಬೆಟ್ಟಿಂಗ್‍ಗೆ ಬೇಕಾಗಿದ್ದ ಹಣ ಹೊಂದಿಸುವುದು. 2013ರ ಮೇ 15ರಂದು ಮುಂಬಯಿಯಲ್ಲಿ ಜಿತೇಂದ್ರ ರಾಂಕಾ ಎಂಬ ವಜ್ರದ ವ್ಯಾಪಾರಿಯ 13 ವರ್ಷದ ಮಗ ಆದಿತ್ಯ ರಾಂಕಾ ಅಪಹರಣವಾಗಿದ್ದ. ಅಪಹರಣಕಾರರು 30ಲಕ್ಷ ರೂಗಳ ಬೇಡಿಕೆಯಿಟ್ಟಿದ್ದರು. ತಂದೆ ಜಿತೇಂದ್ರ ಪೋಲೀಸರ ನೆರವಿಗಾಗಿ ಕೈ ಚಾಚುತ್ತಿದ್ದಂತೆ ಮಗ ಆದಿತ್ಯ ಕೊಲೆಯಾಗಿ ಹೋಗಿದ್ದ. ಕೈಯ ನರಗಳನ್ನು ಕತ್ತರಿಸಿ ಅವನನ್ನು ಸಜೀವವಾಗಿ ದಹಿಸಲಾಗಿತ್ತು. ತನಿಖೆ ನಡೆದು ಕೊಲೆಗಾರ ಹಿಮಾಂಶು ಸೆರೆಯಾಗುತ್ತಿದ್ದಂತೆ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಏಕೆಂದರೆ, ಹಿಮಾಂಶು ಮೃತ ಆದಿತ್ಯನ ಹತ್ತಿರದ ಸಂಬಂಧಿಯಷ್ಟೇ ಆಗಿರದೆ MBA ಪದವೀಧರನೂ ಆಗಿದ್ದ. IPL ಬೆಟ್ಟಿಂಗ್‍ನಲ್ಲಿ ಕಳೆದುಕೊಂಡಿದ್ದ 10ಲಕ್ಷ ರೂಗಳನ್ನು ಹೇಗಾದರೂ ವಾಪಸ್ ಪಡೆಯುವ ಹುನ್ನಾರದಲ್ಲಿ ತನ್ನ ಸೋದರ ಸಂಬಂಧಿಯ ಅಪಹರಣಕ್ಕೆ ಕೈ ಹಾಕಿದ್ದ. ದುಡ್ಡು ಸಿಗುವುದಿಲ್ಲವೆಂಬುದು ಖಾತ್ರಿಯಾದೊಡನೆ ಅವನನ್ನು ಅಮಾನುಷವಾಗಿ ಕೊಂದುಹಾಕಿದ್ದ! ತೀರಾ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡರು. ಕಾರಣ ಮತ್ತದೇ. IPL ಬೆಟ್ಟಿಂಗ್‍ನಲ್ಲಿ ಹಣ ಕಳೆದುಕೊಂಡದ್ದು. ಇವೆಲ್ಲಾ ದಾಖಲಾದ ಪ್ರಕರಣಗಳು. ದಾಖಲಾಗದವು ಇನ್ನೆಷ್ಟೋ.

ಒಮ್ಮೆ ಬೆನ್ನೇರಿದರೆ ಮತ್ತೆ ಬಿಡದ ಈ ‘ಬೆಟ್ಟಿಂಗ್‍ಭೂತ’ದ ವ್ಯಾಪ್ತಿ ಭಯಾನಕ. ಜನಪ್ರಿಯ ಚುನಾವಣೆಗಳಿರಲಿ, ಆಟಗಳಿರಲಿ, ಸೋಲು ಗೆಲುವಿನ ಸಾಧ್ಯತೆಯಿರುವೆಡೆಯೆಲ್ಲಾ ಬುಕ್ಕಿಗಳು (ಬೆಟ್ಟಿಂಗ್ ನಡೆಸುವ ಏಜೆಂಟ್‍ಗಳು) ಹಾಗೂ ಪಂಟರ್‍ಗಳ (ಹಣ ಹೂಡುವ ಜನಸಾಮಾನ್ಯರು) ತೆರೆ ಮರೆಯ ಬೆಟ್ಟಿಂಗ್ ಪ್ರಪಂಚ ಅಸ್ತಿತ್ವಕ್ಕೆ ಬಂದು ಬಿಡುತ್ತದೆ. ಉದಾಹರಣೆಗೆ ಈ ಬಾರಿಯ ಲೋಕಸಭಾ ಚುನಾವಣೆ. ಅಂದಾಜು 70,000ಕೋಟಿ ರೂಗಳ ಬೆಟ್ಟಿಂಗ್ ವಹಿವಾಟು ನಡೆದದ್ದು, ಮೋದಿಯವರೇ ಪ್ರಧಾನಿಯಾಗುತ್ತಾರೆ ಎನ್ನುವ ಬೆಟ್‍ಗೆ ಪ್ರತಿ ಒಂದು ರೂಪಾಯಿಗೆ 42 ಪೈಸೆಯ ಲಾಭ ನಿಗದಿಯಾಗಿದ್ದು ನಮ್ಮಲ್ಲಿ ಬಹುಪಾಲು ಜನರಿಗೆ ಗೊತ್ತಿರಲಿಕ್ಕಿಲ್ಲ! ಚುನಾವಣೆಯದೇ ಈ ಕಥೆಯಾದರೆ ಇನ್ನು ನಮ್ಮ ದೇಶದ ಜೀವನಾಡಿಯಾಗಿರುವ ಕ್ರಿಕೆಟ್‍ನ ಬಗ್ಗೆ ಹೇಳುವಂತೆಯೇ ಇಲ್ಲ. ಸಾಮಾನ್ಯವಾಗಿ ವರ್ಲ್ಡ್ ಕಪ್, ಭಾರತ-ಪಾಕಿಸ್ತಾನ ಹಾಗೂ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ನಡೆಯುವ ಆಶಸ್ ಸರಣಿಯಪಂದ್ಯಗಳು ಬೆಟ್ಟಿಂಗ್ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿರುತ್ತಿದ್ದವು. ಆದರೆ IPL ಪಂದ್ಯಗಳು ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಂತೆ ಬೆಟ್ಟಿಂಗ್‍ನ ಎಲ್ಲಾ ದಾಖಲೆಗಳನ್ನೂ ಮುರಿದಿವೆ. ಇವು ಬೆಟ್ಟಿಂಗ್‍ನ ಕಪಿಮುಷ್ಟಿಗೆ ಸಿಲುಕದೆ ಗತ್ಯಂತರವಿರಲಿಲ್ಲ ಎಂಬುದೇನೋ ಸರಿ, ಆದರೆ ಅಷ್ಟಕ್ಕೇ ಸೀಮಿತವಾಗಿರದೆ 'ಫಿಕ್ಸಿಂಗ್'ಗೂ ಮಗ್ಗುಲು ಬದಲಾಯಿಸಿರುವುದು ಬಹು ದೊಡ್ಡ ದುರಂತ.

ಬೆಟ್ಟಿಂಗ್‍ನ ಬಗ್ಗೆ ಅಲ್ಪ ಸ್ವಲ್ಪ ಅರಿವಿದ್ದ ನಮಗೆ ಆಟಗಾರರೂ ಶಾಮೀಲಾಗುವ 'ಫಿಕ್ಸಿಂಗ್' ಬಗೆಗಿನ ಸತ್ಯ ಮೊದಲ ಬಾರಿ ತಿಳಿದದ್ದು 2000ನೇ ಇಸವಿಯ ಏಪ್ರಿಲ್ ಏಳರಂದು. ಎಲ್ಲರ 'ರೋಲ್ ಮಾಡೆಲ್' ಆಗಿ ಖ್ಯಾತನಾಗಿದ್ದ ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೋನಿಯೆ ಭಾರತದ ಬುಕ್ಕಿ ಸಂಜಯ್ ಚಾವ್ಲಾನೊಡನೆ ಸಂಪರ್ಕ ಹೊಂದಿದ್ದು ದೃಢಪಟ್ಟಾಗ ಅವನ ಮೇಲಷ್ಟೇ ಅಲ್ಲ, ಇಡೀ ಕ್ರಿಕೆಟ್ನ ಮೇಲಿನ ನಂಬಿಕೆಯೇ ಬುಡಮೇಲಾಗಿತ್ತು. ಅವನೊಡನೆ ಭಾರತದ ಅಜರುದ್ದೀನ್, ಅಜಯ್ ಜಡೇಜ ಹಾಗೂ ಮನೋಜ್ ಪ್ರಭಾಕರ್‍ ಅವರುಗಳ ಮೇಲೂ ನಿಷೇಧ ಹೇರಲ್ಪಟ್ಟಾಗ ಮೋಸಹೋದ ಭಾವದಿಂದಾಗಿ  ಕ್ರಿಕೆಟ್ ಜೊತೆಗಿನ ನಮ್ಮ ನಂಟೂ ಉರಿದು ಬೂದಿಯಾಗಿಹೋಗಿತ್ತು.

ಆದರೆ ಮರುಹುಟ್ಟು ಪಡೆದ ಕ್ರಿಕೆಟ್ ಎಂಬ ಫೀನಿಕ್ಸ್ ಪಕ್ಷಿ ದಿನದಿನಕ್ಕೆ ಗರಿಗೆದರಿ ನಿಂತು IPL ಎಂಬ ಮರಿಯನ್ನೂ ಹಾಕಿತು. 2008ರಲ್ಲಿ ಶುರುವಾದ ಮೊದಲ ಆವೃತ್ತಿಯ ಅಪಾರ ಯಶಸ್ಸಿನ ನಂತರ ಪ್ರತಿ ವರ್ಷ ನಿರಂತರವಾಗಿ ನಡೆಯುತ್ತಾ ಸಾಗಿದ ಇದಾದರೂ 'ಫಿಕ್ಸಿಂಗ್'ನ ಶಾಪದಿಂದ ಮುಕ್ತವಾಗಿದೆ ಎಂದುಕೊಳ್ಳುತ್ತಿದ್ದಾಗಲೇ 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಶಾಂತಕುಮಾರನ್ ಶ್ರೀಶಾಂತ್, ಅಜಿತ್ ಚಾಂಡಿಲ ಹಾಗೂ ಅಂಕಿತ್ ಚವಾಣ್ ಸಿಕ್ಕಿಬಿದ್ದರು. ಇವರ ಜೊತೆ ಹದಿನಾಲ್ಕು ಬುಕ್ಕಿಗಳೂ ಬಲೆಗೆ ಬಿದ್ದರು. ತೀರಾ ಆಘಾತವಾಗಿದ್ದು ಆರೋಪಿಗಳಲ್ಲಿ BCCIನ ಅಧ್ಯಕ್ಷ ಶ್ರೀನಿವಾಸನ್‍ರ ಅಳಿಯ, ಚೆನ್ನೈ ಸೂಪರ್ ಕಿಂಗ್ಸ್ನ ಮಾಲೀಕ ಗುರುನಾಥ್ ಮೇಯಪ್ಪನ್‍ರೂ ‘ಮೇಯಲು’ ನಿಂತಿದ್ದಾರೆಂಬುದು ತಿಳಿದುಬಂದಾಗ. ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿ, 2013ರ ಅಕ್ಟೋಬರ್‍ನಲ್ಲಿ ಜಸ್ಟಿಸ್ ಮುಕುಲ್ ಮುದ್ಗಲ್‍ರನ್ನೊಳಗೊಂಡ ಏಕ ಸದಸ್ಯ ಪೀಠ ರಚಿಸಿ ತನಿಖೆಯನ್ನು ಅವರಿಗೊಪ್ಪಿಸಿತು. ಘಟನೆ ನಡೆದು ವರ್ಷವಾಗುತ್ತಾ ಬಂದರೂ BCCIನ ತಮ್ಮ ಕುರ್ಚಿ ಬಿಡದ ಶ್ರೀನಿವಾಸನ್‍ರಿಗೆ ಸುಪ್ರೀಂ ಕೋರ್ಟ್  ಕಳೆದ ಮಾರ್ಚ್‍ನಲ್ಲಿ 'ನಿಮ್ಮ ಅಧಿಕಾರ ಲಾಲಸೆ ನೋಡಿದರೆ ವಾಕರಿಕೆ ಬರುತ್ತದೆ' ಎಂದು ಛೀಮಾರಿ ಹಾಕಿ ಕೆಳಗಿಳಿಯುವಂತೆ ಸೂಚಿಸಿತು. ಈ ಅವಾಂತರಗಳಿಂದಾಗಿ 2013ರ ಆವೃತ್ತಿ ಸಪ್ಪೆಯಾಗಿಯೇ ಮುಗಿಯಿತು.

ಆದರೆ ಸಮಸ್ಯೆ ಸುಲಭದಲ್ಲಿ ಮುಗಿದುಹೋಗುವಷ್ಟು ಸರಳವಾಗಿಲ್ಲ. ನಮ್ಮ ದೇಶದಲ್ಲಿ ಲಾಟರಿ ಮತ್ತು 'ಕುದುರೆ ಬಾಲ'ದ ಬೆಟ್ಟಿಂಗ್ ಬಿಟ್ಟರೆ ಮತ್ತ್ಯಾವ ಜೂಜಿಗೂ ಕಾನೂನಿನ ಮಾನ್ಯತೆ ಇಲ್ಲ. ಆದ್ದರಿಂದ  IPL ಸೇರಿದಂತೆ ಉಳಿದೆಲ್ಲ ಬೆಟ್ಟಿಂಗ್‍ಗಳೂ ಕದ್ದುಮುಚ್ಚಿ ನಡೆಯುವುದು ಫೋನ್‍ ಅಥವಾ ಅಂತರ್ಜಾಲದ ವೆಬ್‍ಸೈಟ್‍ಗಳ ಮೂಲಕವೇ. ಹೀಗೆ ನಡೆವ ವಹಿವಾಟಿನ ವಾರ್ಷಿಕ ಮೊತ್ತ ಸುಮಾರು 30 ಬಿಲಿಯನ್ ಡಾಲರ್‍ಗಳು. IPLನ ಮೊದಲನೇ ಆವೃತ್ತಿಯಲ್ಲಿ ಅಂದಾಜು 6000ಕೋಟಿಯಷ್ಟಿದ್ದ ಬೆಟ್ಟಿಂಗ್ನ ಮೊತ್ತ ಕಳೆದ ವರ್ಷ 4೦,೦೦೦ಕೋಟಿ ಮುಟ್ಟಿತ್ತು! ಬುಕ್ಕಿಗಳೇ ಹೇಳುವಂತೆ ಪ್ರತಿ ಬೆಟ್‍‍ಗೂ ನಿಗದಿಯಾಗುವ ಕನಿಷ್ಠ ದರ 1೦೦೦ರೂಗಳು. ಗರಿಷ್ಠಕ್ಕೆ ಮಿತಿಯೆಂಬುದಿಲ್ಲ. ಪಂಟರ್‍ಗಳ ಶಕ್ತ್ಯಾನುಸಾರ ಕೋಟಿಗಟ್ಟಲೆ ಹಣ ಪಣಕ್ಕಿಡಲ್ಪಡುತ್ತದೆ. ಪೂರ್ತಿ ವ್ಯವಹಾರ ನಡೆಯುವುದೇ ನಂಬಿಕೆಯ ಮೇಲೆ. ಸಿಕ್ಕಿಬೀಳಬಾರದೆಂಬ ಉದ್ದೇಶದಿಂದ ಬುಕ್ಕಿಯೊಬ್ಬ ಕಡೇಪಕ್ಷ 15 ಮೊಬೈಲ್‍ ಫೋನ್‍ಗಳನ್ನು ಹೊಂದಿರುತ್ತಾನೆ. ಹೀಗೆ ಪ್ರತಿ ಬುಕ್ಕಿಯೂ ಸಲೀಸಾಗಿ 100ಕೋಟಿ ರೂಗಳ ವ್ಯವಹಾರ ನಿಭಾಯಿಸಬಲ್ಲ. ಇಂಥ ಸಾವಿರಾರು ಬುಕ್ಕಿಗಳಿಂದಾಗಿ ಪ್ರತಿಯೊಂದು ಆಟವೂ 15,೦೦೦ಕೋಟಿ ರೂಗಳಿಂದ  20,೦೦೦ಕೋಟಿ ರೂಗಳಷ್ಟು ಹಣವನ್ನೊಳಗೊಂಡಿರುತ್ತದೆ. ಭಾರತದ ಬೆಟ್ಟಿಂಗ್‍ನ ರಾಜಧಾನಿ ಹೈದರಾಬಾದ್‍ನಲ್ಲಿ ಒಟ್ಟಾರೆ ಬೆಟ್ಟಿಂಗ್‍ನ ಶೇಕಡ 2೦ರಷ್ಟು ನಡೆಯುತ್ತದೆ. ನಂತರದ ಸ್ಥಾನ ಮೆಟ್ರೋ ನಗರಗಳದ್ದು, ಗುಜರಾತ್ ಹಾಗೂ ರಾಜಸ್ಥಾನದ್ದು. ಎಲ್ಲಕ್ಕಿಂತ ಆಶ್ಚರ್ಯಕರವಾದ ಸಂಗತಿಯೆಂದರೆ ಇದು ಸಂಪೂರ್ಣವಾಗಿ ನಿಯಂತ್ರಿಸಲ್ಪಡುತ್ತಿರುವುದು ಪೋರ್ಚುಗಲ್‍ನ ರಾಜಧಾನಿ ಲಿಸ್ಬನ್‍ನಿಂದ! ಅಲ್ಲಿ ಕ್ರೀಡಾ ಬೆಟ್ಟಿಂಗ್‍ಗೆ ಕಾನೂನಿನ ಮಾನ್ಯತೆಯಿರುವುದರಿಂದ ಭಾರತದ ಬುಕ್ಕಿಗಳೆಲ್ಲ ತಮ್ಮ ಹಣಕಾಸಿನ ವಹಿವಾಟು ನಡೆಸುವುದು ಅಲ್ಲಿಂದಲೇ. ಮುಂದೆ ಈ ಕೋಟ್ಯಾಧೀಶ ಬುಕ್ಕಿಗಳು ಹುಡುಕುವುದು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬಲ್ಲ ಸೂಕ್ತ ಆಟಗಾರರನ್ನು. ಅವರಿಗೆ ಹಣದ ಆಮಿಷ ತೋರಿಸಿ ಆಟವನ್ನು 'ಫಿಕ್ಸ್' ಮಾಡಿಸುತ್ತಾರೆ. ಕೆಲವೊಮ್ಮೆ 'ಫಿಕ್ಸಿಂಗ್' ಆರರಿಂದ ಎಂಟು ಓವರ್‍ಗಳಿಗೆ ಸೀಮಿತವಾದರೆ ಮತ್ತೆ ಕೆಲವೊಮ್ಮೆ ಇಡೀ ಆಟ 'ಫಿಕ್ಸ್' ಆಗಿರುತ್ತದೆ.

ಒಂದಾನೊಂದು ಕಾಲದಲ್ಲಿ 'ಜೆಂಟ್‍ಲ್‍ಮ್ಯಾನ್ಸ್ ಗೇಮ್' ಆಗಿದ್ದ ಕ್ರಿಕೆಟ್ ಈಗ ಅಕ್ಷರಶಃ ಹಣ ಮಾಡುವ ದಂಧೆಯಾಗಿ ಹೋಗಿದೆ. ಆದರೆ ಇದನ್ನು ಅತಿಯಾಗಿ ಮೋಹಿಸುವ ನಮಗೆ ಇಂಥ ಅಪ್ರಿಯ ಸತ್ಯಗಳು ಬೇಕಿಲ್ಲ. ಯಾವ ನಮೂನೆಯ ಕ್ರಿಕೆಟ್ ಪ್ರೇಮಿಗಳಿದ್ದಾರೆಂದರೆ, ಕ್ರಿಕೆಟ್ ನೋಡಲೇಬೇಕೆಂದು ಮನಸಿಗೆ ಬಂದುಬಿಟ್ಟರೆ ಭಾರತವಲ್ಲದಿದ್ದರೂ ಸರಿ, ಬೇರೆ ದೇಶಗಳ ಆಟ ನೋಡುತ್ತಾರೆ. ಅದೂ ಇಲ್ಲದಿದ್ದರೆ ಮಹಿಳೆಯರ ಕ್ರಿಕೆಟ್ ಆಸ್ವಾದಿಸುತ್ತಾರೆ. ಅದೂ ಸಿಗದಿದ್ದರೆ ಅಂಧರ ಕ್ರಿಕೆಟ್ ಆದರೂ ಸೈ! ಒಟ್ಟಿನಲ್ಲಿ ಕ್ರಿಕೆಟ್ ಪ್ರವಹಿಸುತ್ತಿರಲೇಬೇಕು ಮನೆ-ಮನಗಳಲ್ಲಿ! ಇಂಥ ಮನಸ್ಥಿತಿಯಿರುವುದರಿಂದಲೇ ಮತ್ತೆ ಈ ಬಾರಿಯೂ IPL ಎಂದಿನಂತೆ ವಿಜೃಂಭಿಸಿದೆ. ನಮ್ಮ ನೆಚ್ಚಿನ ಕ್ರೀಡೆಯೆಂದು ಇದೊಂದನ್ನೇ ವೈಭವೀಕರಿಸಿಬಿಟ್ಟರೆ ಉಳಿದವುಗಳ ಪಾಡೇನಾಗಬೇಕು? ವಿಶ್ವದ ಫುಟ್ಬಾಲ್ ಲೀಗ್‍ಗಳ ಪ್ರೇರಣೆಯಿಂದಲೇ ಭಾರತದ ಕ್ರಿಕೆಟ್ ಲೀಗ್ ಶುರುವಾಗಿದ್ದು ನಿಜ. ಅವರುಗಳು ಹುಚ್ಚೆದ್ದು ಫುಟ್ಬಾಲ್ ನೋಡುವುದು, ಬೆಟ್ ಕಟ್ಟುವುದು ಎಲ್ಲವೂ ನಿಜ, ಆದರೆ ಅವರು ಬೇರೆ ಕ್ರೀಡೆಗಳನ್ನೂ ಅಷ್ಟೇ ಪ್ರೀತಿಸಿ ಪ್ರೋತ್ಸಾಹಿಸುತ್ತಾರೆ. ಫುಟ್ಬಾಲ್ ಟ್ರೋಫಿಗಳನ್ನು ಗೆದ್ದಷ್ಟೇ ಲೀಲಾಜಾಲವಾಗಿ ಒಲಿಂಪಿಕ್ಸ್ ಪದಕಗಳನ್ನೂ ಗೆಲ್ಲುತ್ತಾರೆ. ಅದೇ ಭಾರತದ ಸಾಧನೆ ನೋಡಿ. ಇಲ್ಲಿಯವರೆಗೂ ನಾವು ಒಂಬತ್ತು ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರೂ ಒಂದೂ ಪದಕ ಗೆಲ್ಲಲಾಗಿಲ್ಲ.  23 ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರೂ ಗೆದ್ದಿರುವುದು 26 ಪದಕಗಳನ್ನು ಮಾತ್ರ. ಅದರಲ್ಲಿ ಹನ್ನೊಂದು ಪದಕಗಳು ಹಾಕಿಯೊಂದರಿಂದಲೇ ಲಭಿಸಿದಂಥವು. ಅಥ್ಲೆಟಿಕ್ಸ್ಲ್ಲಂತೂ ಎಂಥ ದುಸ್ಥಿತಿಯಿದೆಯೆಂದರೆ ಬಂದಿರುವ ಎರಡೂ ಪದಕಗಳೂ 1900ರ ಮೊತ್ತಮೊದಲ ಒಲಿಂಪಿಕ್ಸ್ನಲ್ಲಿ ನಾರ್ಮನ್ ಪ್ರಿಚರ್ಡ್‍ 200ಮೀ ಓಟ ಹಾಗೂ ಹರ್ಡಲ್ಸ್‌ನಲ್ಲಿ ದೊರಕಿಸಿಕೊಟ್ಟದ್ದು! ನಾವಿನ್ನೂ 1960ರ, ಮಿಲ್ಖಾ ಸಿಂಗ್‍ರ ಒಲಿಂಪಿಕ್ಸ್ ಓಟವನ್ನೇ ಕಥೆಯಾಗಿಟ್ಟುಕೊಂಡು 'ಭಾಗ್ ಮಿಲ್ಖಾ ಭಾಗ್' ಸಿನಿಮಾ ಮಾಡಿ ಸಂಭ್ರಮಿಸುತ್ತಿದ್ದೇವೆ!

ಇನ್ನೂ ಅನೇಕ ಮೇರಿಕೋಮ್, ಸೈನಾ ನೆಹ್ವಾಲ್ ಹಾಗೂ ಮಿಲ್ಖಾ ಸಿಂಗ್‍ರನ್ನು ತಯಾರಿಸುವುದಿದೆ. ಬೇಸಿಗೆ ಶಿಬಿರಗಳಿಗೆ ಮಾತ್ರ ಸೀಮಿತವಾಗಿರುವ ಈಜು ಹಾಗೂ ಸ್ಕೇಟಿಂಗ್‍ಗಳನ್ನು ಅದರಾಚೆಗೂ ವಿಸ್ತರಿಸಬೇಕಾಗಿದೆ. ಕಳೆದ ವರ್ಷದಿಂದ ಭಾರತದ ಹಾಕಿ ಲೀಗ್ ಪಂದ್ಯಗಳು ಶುರುವಾಗಿವೆ. ಈ ವರ್ಷದ ಮಾರ್ಚ್‌ನಲ್ಲಿ ಆನಂದ್ ಮಹೀಂದ್ರ ಹಾಗೂ ಚಾರು ಶರ್ಮ ಸೇರಿ ಭಾರತದ ಕಬಡ್ಡಿ ಲೀಗ್ ಶುರು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಳುಗಳು ಭಾಗವಹಿಸಲಿರುವ ಈ ಪಂದ್ಯಗಳಿಗೆ ನಮ್ಮ ಪ್ರೋತ್ಸಾಹದ ಅವಶ್ಯಕತೆ ಬಹಳ ಇದೆ.

ಕೋಟಿಗಟ್ಟಲೆಗೆ ಹರಾಜಾಗುವ, ಬ್ರ್ಯಾಂಡ್‍ಗಳ ರಾಯಭಾರಿಗಳಾಗಿ ಇನ್ನಷ್ಟು ಕೋಟಿ ಗಳಿಸುವ, ಮತ್ತಷ್ಟು ಕೋಟಿಗಳ ದುರಾಸೆಗೆ ಬಿದ್ದು 'ಫಿಕ್ಸಿಂಗ್'ಗೆ ಇಳಿದಿರುವ ನಮ್ಮ ಕ್ರಿಕೆಟಿಗರುಗಳಿಗೆ ನಮ್ಮ ಮುನಿಸು ತಟ್ಟುವುದು ಹೇಗೆ? ಕೆಲವೊಮ್ಮೆ ಕೈಯ ಗಡಿಯಾರ ತಿರುಗಿಸಿ, ಕೆಲವೊಮ್ಮೆ ಕತ್ತಿನ ಲಾಕೆಟ್ ಸರಿ ಮಾಡಿಕೊಂಡು ಮತ್ತೆ ಕೆಲವೊಮ್ಮೆ ಪ್ಯಾಂಟ್ ಜೇಬಿನಲ್ಲಿ ಟವಲ್ಲು ಸಿಕ್ಕಿಸಿಕೊಂಡು 'ಸ್ಪಾಟ್ ಫಿಕ್ಸಿಂಗ್'ನ ಕರಾರಿನಂತೆ ತಮ್ಮ ಬುಕ್ಕಿಗಳಿಗೆ ಸಿಗ್ನಲ್ ಕೊಡುತ್ತಿರುವ ಇವರು ‘ಕ್ರಿಕೆಟ್ ಇನ್ನು ಬರೀ ಆಟವಾಗಿ ಉಳಿದಿಲ್ಲ’ ಎಂದು ನಮಗೂ ಸಿಗ್ನಲ್ ಕೊಡುತ್ತಿರುವುದು ನಮಗೇಕೆ ಅರ್ಥವಾಗುತ್ತಿಲ್ಲ? ಪರದೆಯ ಮೇಲಿನ ಆಟಕ್ಕೆ ಕೇಕೆ ಹಾಕುವ ನಾವು ಪರದೆಯ ಹಿಂದಿನ ಪದರಗಳನ್ನು ಕೆದಕಲು ಏಕೆ ಮುಂದಾಗುತ್ತಿಲ್ಲ?

ಇಂದು BCCI ವಿಶ್ವದ ಶ್ರೀಮಂತ ಕ್ರೀಡಾ ಪ್ರಾಧಿಕಾರವಾಗಿರಬಹುದು, ಆದರೆ ಭಾರತದ ಕ್ರಿಕೆಟ್ ಪ್ರೇಮಿ ಬಡವಾಗಿದ್ದಾನೆ. ಆತ್ಮಸಾಕ್ಷಿಯ ವಿಚಾರದಲ್ಲಂತೂ ಖಂಡಿತ ಹೌದು!