Tuesday, 27 May 2014

ಅಪ್ಪಳಿಸಿರಲು ಮೋದಿ ಅಲೆ, ಅಪಪ್ರಚಾರಕರಿಗಿಲ್ಲ ನೆಲೆ

ಇತಿಹಾಸ ಸೃಷ್ಟಿಸುವ ಇಂಥದ್ದೊಂದು ದಿನಕ್ಕೆ ನಾವು ಸಾಕ್ಷಿಯಾಗುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ. ಯಾವ ಅಶರೀರವಾಣಿಯೂ ಮೊಳಗಿರಲಿಲ್ಲ. ಯಾರ ಕನಸಿನಲ್ಲಿಯೂ ದೇವರು ಪ್ರತ್ಯಕ್ಷನಾಗಿ ಹೇಳಿರಲಿಲ್ಲ. ಮಾಧ್ಯಮಗಳಲ್ಲಿ ಜಾತಕ ನೋಡಿ ಘಂಟಾಘೋಷವಾಗಿ ಜೋತಿಷ್ಯ ಹೇಳುವವರೂ ಇದರ ಸುಳಿವನ್ನು ನೀಡಿರಲಿಲ್ಲ. ನೂರಿಪ್ಪತ್ತೈದು ಕೋಟಿ ಭಾರತೀಯರು ಸೇರಿ ಬರೆದ ಜಾತಕವನ್ನು ಅವರು ತಾನೆ ಹೇಗೆ ಓದಿಯಾರು ಪಾಪ! ಮತ ಎಣಿಕೆ ಶುರುವಾಗುವ ಮುನ್ನವೇ ಚಡಪಡಿಸುತ್ತಾ, ಶುರುವಾಗುತ್ತಿದ್ದಂತೆ ಉಸಿರು ಬಿಗಿ ಹಿಡಿದು ಬದಲಾಗುತ್ತಿದ್ದ ಅಂಕಿ- ಅಂಶಗಳನ್ನು ನೋಡುತ್ತಿದ್ದ ನಮಗೆ ಬೆಳಗಿನ ಸರಿ ಸುಮಾರು ಹತ್ತು ಘಂಟೆಯಷ್ಟು ಹೊತ್ತಿಗೇ ನಮೋ ಅಲೆ ಎನ್.ಡಿ.ಎ ಮೈತ್ರಿಕೂಟವನ್ನು ಮುನ್ನಡೆಯಲ್ಲಿ 272ರ ಅಂಚಿಗೆ ತಲುಪಿಸಿದ್ದನ್ನು ನೋಡುತ್ತಿದ್ದಂತೆಯೇ ಆದದ್ದು ಪರಮಾನಂದ! ನಂತರ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಹೊರಬಿದ್ದಾಗ ಕಂಡದ್ದು ಪವಾಡ! ಸಂಖ್ಯಾಶಾಸ್ತ್ರಜ್ಞರ, ರಾಜಕೀಯ ವಿಶ್ಲೇಷಕರ ಮಟ್ಟಿಗೆ ಇದು ಹಲವು ಹೊಸ ದಾಖಲೆಗಳ ಅಭೂತಪೂರ್ವ ಫಲಿತಾಂಶವಾದರೆ ನಮ್ಮ ಪಾಲಿಗೆ ವಿಜಯೋತ್ಸವ, ಮನೆ-ಮನೆಯ ಹಬ್ಬ. ಅದಕ್ಕೆ ಕಾರಣವೂ ಇಲ್ಲದಿಲ್ಲ.

ಭಾರತದ ಇಲ್ಲಿಯವರೆಗಿನ ಚುನಾವಣಾ ಇತಿಹಾಸದ ಪುಟ ತಿರುವಿದರೆ ಈ ಮಾದರಿಯ, ವಿಕಾಸವಾದ ಹಾಗೂ ವ್ಯಕ್ತಿ ಆಧಾರಿತ ಚುನಾವಣೆ ನಡೆದದ್ದು ಕಾಣಸಿಗುವುದಿಲ್ಲ. ತನ್ನ ಲಾಭಕ್ಕಾಗಿ ಕಾಂಗ್ರೆಸ್ ಎಂಬ ಸ್ವಾತಂತ್ರ್ಯ ಚಳವಳಿಯನ್ನೇ ರಾಜಕೀಯ ಪಕ್ಷವಾಗಿ ರೂಪಾಂತರಿಸಿದ ನೆಹರೂ ಆ ನಾಮಬಲದ ಮೇಲೇ 1962ರ ಮೂರನೆಯ ಲೋಕಸಭಾ ಚುನಾವಣೆಯನ್ನೂ ಗೆದ್ದರು. 1967ರ ಸಾಧಾರಣ ಚುನಾವಣಾ ಫಲಿತಾಂಶದ ನಂತರ ಇಂದಿರಾಗಾಂಧಿ 1971ರಲ್ಲಿ 'ಗರೀಬಿ ಹಟಾವೋ' ಎಂಬ ಕೂಗನ್ನು ಹುಟ್ಟುಹಾಕಿ ಅದನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ನಂತರ ಅವರು ಹೇರಿದ ತುರ್ತು ಪರಿಸ್ಥಿತಿಯ ಫಲವಾಗಿ 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದು, ಒಗ್ಗಟ್ಟಿಲ್ಲದೆ, ಒಳಜಗಳಗಳಿಂದ ಅಷ್ಟೇ ಬೇಗ ಕಳಚಿಬಿದ್ದು ಭಾರತೀಯರಲ್ಲಿ ಕಾಂಗ್ರೆಸ್ ಬಿಟ್ಟರೆ ಮತ್ತ್ಯಾರೂ ಸುಭದ್ರ ಆಡಳಿತ ನೀಡುವುದು ಸಾಧ್ಯವಿಲ್ಲ ಎಂಬ ಭಾವನೆಯನ್ನು ಹುಟ್ಟು ಹಾಕಿತು. ಪರಿಣಾಮವಾಗಿ 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ 1984ರಲ್ಲಿ ಇಂದಿರೆಯ ಹತ್ಯೆಯ ನಂತರ 533 ಸ್ಥಾನಗಳ ಸಂಸತ್ತಿನಲ್ಲಿ 414 ಸ್ಥಾನಗಳನ್ನು ಕಬಳಿಸಿ ಅಸಾಧಾರಣ ಜಯ ದಾಖಲಿಸಿತು. ಅದೇ ಕೊನೆ. ಆಮೇಲೆ ನಡೆದ ಯಾವ ಚುನಾವಣೆಗಳಲ್ಲೂ ಯಾವೊಂದು ಪಕ್ಷವೂ ಸ್ಪಷ್ಟ ಬಹುಮತದ ಮುಖವನ್ನೇ ನೋಡಲಿಲ್ಲ. ಭವಿಷ್ಯವೆಲ್ಲಾ 'ಸಮ್ಮಿಶ್ರ ಸರ್ಕಾರ'ಮಯವಾಗಲಿದೆಯೆಂಬ ಭಾವನೆ ದಟ್ಟವಾಗಿದ್ದ ಈ ಹೊತ್ತಿನಲ್ಲಿ ಇಂಥದ್ದೊಂದು ಫಲಿತಾಂಶ ಬಂದಿದೆ.

ಇದನ್ನು ರಾಜಕೀಯ ವಿಶ್ಲೇಷಕರೆಲ್ಲ 1984ರ ಚುನಾವಣಾ ಫಲಿತಾಂಶಕ್ಕೆ ಹೋಲಿಸುತ್ತಿದ್ದಾರೆ. ಹೋಲಿಕೆ ಹೇಗೆ ಸಾಧ್ಯ ಹೇಳಿ? ಹಾಲಿ ಪ್ರಧಾನಿಯ ಸಾವಿನ ಪರಿಣಾಮವಾಗಿ ಸಿಕ್ಕ ಅನುಕಂಪದ ಅಲೆಯ ಅನಾಯಾಸ ಗೆಲುವನ್ನು ಕಠಿಣ ಪರಿಶ್ರಮ, ಯೋಚನೆ, ಯೋಜನೆ ಮತ್ತು ಅನುಷ್ಠಾನಗಳಿಂದ ಗಳಿಸಿಕೊಂಡ ಗೆಲುವಿಗೆ ಏಕೆ ಹೋಲಿಸಬೇಕು? ಸೂತಕದ ಛಾಯೆಯ ಆ ಗೆಲುವಿಗೂ ಇಡೀ ದೇಶವೇ ಕಳೆಗಟ್ಟಿರುವ ಈ ಗೆಲುವಿಗೂ ಎಲ್ಲಿಗೆಲ್ಲಿಯ ಸಾಮ್ಯ? ಹೇಗೆ ನೋಡಿದರೂ ಸಂದರ್ಭಕ್ಕೆ ಅಡಿಯಾಳಾಗದೇ ಸಂದರ್ಭವನ್ನೇ ತನಗೆ ಪೂರಕವಾಗಿ ಬದಲಾಯಿಸಿಕೊಂಡ ನಮೋ ತಂಡದ ಗೆಲುವೇ ಹೆಚ್ಚಿನದು ಎನಿಸುವುದಿಲ್ಲವೇ?. ಭಾರತೀಯ ಜನತಾ ಪಕ್ಷವೊಂದೇ 282 ಸ್ಥಾನಗಳನ್ನು ಗಳಿಸಿಕೊಂಡಿದೆ. ಮಿತ್ರಪಕ್ಷಗಳನ್ನೂ ಸೇರಿಸಿದರೆ ಒಟ್ಟು336. ಐದು ರಾಜ್ಯಗಳಲ್ಲಿ ಪೂರ್ಣ ಅಧಿಪತ್ಯ ಮೆರೆದು ಇನ್ನು ಕೆಲವೆಡೆ ಮೊತ್ತಮೊದಲ ಗೆಲುವು ದಾಖಲಿಸಿದೆ. ಮೂರು ದಶಕಗಳ ನಂತರ ಏಕಪಕ್ಷದ ಸಧೃಡ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.ಇಷ್ಟೇ ಆಗಿದ್ದರೆ ವಿಶೇಷ ಎನಿಸುತ್ತಿರಲಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಶೇಕಡ ಹತ್ತರಷ್ಟಾದರೂ (54) ಸ್ಥಾನಗಳಿಸಬೇಕಾಗಿದ್ದ ಕಾಂಗ್ರೆಸ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅತ್ಯಂತ ಹೀನಾಯವಾಗಿ ಸೋತು ಬರಿದೇ 44 ಸ್ಥಾನಗಳನ್ನು ಗಳಿಸಿ ಎಲ್ಲಿಯೂ ಸಲ್ಲದಾಗಿದೆ.ಆದ್ದರಿಂದ ಅದಕ್ಕೆ ಇನ್ನು ಮೇಲೆ ಸಿ.ಬಿ.ಐ, ಲೋಕಪಾಲ ಹಾಗೂ ಮಾನವ ಹಕ್ಕು ಆಯೋಗಕ್ಕೆ ಸಂಬಂಧಿಸಿದ ನೇಮಕಾತಿ ನಿರ್ಧಾರಗಳಲ್ಲಿ ತನ್ನ ಅಭಿಪ್ರಾಯಗಳನ್ನು ತಿಳಿಸುವ ಯಾವುದೇ ಹಕ್ಕಿರುವುದಿಲ್ಲ. ಅಷ್ಟೇ ಅಲ್ಲ, ಸ್ಪೀಕರ್ ಸಾಹೇಬರು ಮನಸು ಮಾಡಿ ಇದಕ್ಕೆ ವಿರೋಧ ಪಕ್ಷವೆಂಬ ಹಣೆಪಟ್ಟಿ ಅಂಟಿಸಿದರೆ ಉಂಟು ಇಲ್ಲದಿದ್ದರೆ ಆದೂ ಇಲ್ಲ. ಅಮೇಥಿಯಲ್ಲಿ ಸ್ಪರ್ಧಿಸಿದ್ದ ಸ್ಮೃತಿ ಇರಾನಿಯನ್ನು ಕುರಿತು 'ಸ್ಮೃತಿ ಯಾರು?' ಎಂದು ಪ್ರಿಯಾಂಕ ಗಾಂಧಿ ಕುಹಕದಿಂದ ಕೇಳಿದ್ದರು. ಮುಂದೊಂದು ದಿನ 'ಪ್ರಿಯಾಂಕ ಯಾರು?' ಎಂದು ಕೇಳಬೇಕಾಗಿ ಬಂದರೂ ಆಶ್ಚರ್ಯವೇನಿಲ್ಲ!

ಕುಟುಂಬ ರಾಜಕಾರಣ ಧೂಳೀಪಟವಾಗಿಹೋಗಿದೆ. ಏಳು ರಾಜ್ಯಗಳಲ್ಲಿ ಖಾತೆಯನ್ನೇ ತೆರೆಯದ ಕಾಂಗ್ರೆಸ್, ಯಾವ ರಾಜ್ಯದಲ್ಲೂ ಎರಡಂಕಿಯ ಗೆರೆ ದಾಟಿಲ್ಲ. ರಾಹುಲ್ ಅಮೇಥಿಯಲ್ಲಿ ಪಡೆದಿರುವ ಜಯವೂ ಪ್ರಯಾಸದ್ದೇ. ಸ್ಪೀಕರ್ ಮೀರಾ ಕುಮಾರ್ ದಯನೀಯವಾಗಿ ಸೋತಿದ್ದಾರೆ. 28 ಕ್ಯಾಬಿನೆಟ್ ಸಚಿವರ ಪೈಕಿ ಹಣಕಾಸು, ರಕ್ಷಣಾ ಹಾಗೂ ಕೃಷಿ ಸಚಿವರ ಸಹಿತ 12 ಸಚಿವರು ಸ್ಪರ್ಧಿಸಲೇ ಇಲ್ಲ. ಸ್ಪರ್ಧಿಸಿದ 16 ಸಚಿವರಲ್ಲಿ ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್, ಸುಶೀಲ್ ಕುಮಾರ್ ಶಿಂದೆ ಸೇರಿದಂತೆ 13 ಸಚಿವರು ಸೋತಿದ್ದಾರೆ. ರಾಜ್ಯ ಸಚಿವರ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಸ್ಪರ್ಧಿಸಿದ 9 ಸಚಿವರ ಪೈಕಿ ಸಚಿನ್ ಪೈಲಟ್, ಜಿತೇಂದ್ರ ಸಿಂಗ್ ಸೇರಿದಂತೆ 6 ಸಚಿವರು ಸೋತಿದ್ದಾರೆ.

ಬರೀ ಗಾಂಧಿಯದ್ದಲ್ಲ, ಲಾಲೂ ಕುಟುಂಬ ರಾಜಕಾರಣವೂ ಒಪ್ಪಿಗೆಯಲ್ಲ ಎಂದು ಮತದಾರ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾನೆ. ಲಾಲೂ ಪ್ರಸಾದರ ಹೆಂಡತಿ ರಾಬ್ರಿ ಹಾಗೂ ಪುತ್ರಿ ಮಿಸಾ ಭಾರತಿ ಸೋತಿದ್ದಾರೆ. ನಿತೀಶ್ ಕುಮಾರ್ ಹೇಳ ಹೆಸರಿಲ್ಲದಂತಾಗಿದ್ದಾರೆ. ಮಾಯಾವತಿಯವರ ಆನೆ ಕಾಣದಂತೆ ಮಾಯವಾಗಿದೆ. ಮುಲಾಯಂಸಿಂಗ್‍ರ ಕುಟುಂಬ ಉಳಿದುಕೊಂಡಿರುವುದು ಬಿಟ್ಟರೆ ಉತ್ತರಪ್ರದೇಶ ಕೇಸರಿಮಯವಾಗಿದೆ. ದೆಹಲಿಯ ಸರ್ಕಾರವನ್ನು ಎಡಗಾಲಲ್ಲಿ ಒದ್ದು ವಾರಣಾಸಿಗೆ ಓಡಿದ್ದ ಕೇಜ್ರಿವಾಲರನ್ನು ದೆಹಲಿಯ ಜನ ಕತ್ತು ಹಿಡಿದು ಹೊರ ದಬ್ಬಿದ್ದಾರೆ. ಪಂಜಾಬನ್ನು ಗುಡಿಸಲು ನಾಲ್ಕು ಪೊರಕೆಗಳು ಸಿಕ್ಕಿರುವುದು ಬಿಟ್ಟರೆ ಆಪ್‍ನ ಬುಟ್ಟಿ ಪೂರ್ತಿ ಖಾಲಿ! ಕರ್ನಾಟಕದಲ್ಲಿ ದೇವೇಗೌಡರ ಜೊತೆ ತೆನೆಯ ಭಾರ ಹೊರಲು ಸಿಕ್ಕಿರುವುದು ಇನ್ನೊಂದೇ ತಲೆ. ಕಾಂಗ್ರೆಸ್‍ನ ಫಲಿತಾಂಶವೂ ನಿರೀಕ್ಷೆಗಿಂತ ಕೆಳಮಟ್ಟದ್ದೇ. ಇದ್ದುದರಲ್ಲಿ ತಮಿಳುನಾಡಿನ 'ಅಮ್ಮ' ಹಾಗೊ ಪಶ್ಚಿಮ ಬಂಗಾಳದ 'ದೀದಿ'ಯರೇ ಗಟ್ಟಿ. ಆದರೆ ಅವರ ಬಾಹ್ಯ, ಆಂತರಿಕ, ಷರತ್ತು, ಬೇಷರತ್ತಿನ ಬೆಂಬಲಗಳ ಅಗತ್ಯ ಲವಲೇಷದಷ್ಟೂ ಇಲ್ಲ!

ಅತ್ತೆಗೊಂದು ಕಾಲ..ಸೊಸೆಗೊಂದು ಕಾಲ!

2012ರ ವಿಧಾನಸಭೆ ಚುನಾವಣೆಯಲ್ಲಿ ಗುಜರಾತನ್ನು ಸತತ ಮೂರನೆಯ ಬಾರಿ ಗೆಲ್ಲಿಸಿದ ಮೇಲೆ ಜನತೆಯನ್ನುದ್ದೇಶಿಸಿ. "ನನ್ನನ್ನು ದಿಲ್ಲಿಯ ನಾಯಕರು ಕರೆದಿದ್ದಾರೆ. ಒಂದು ದಿನದ ಮಟ್ಟಿಗೆ ದಿಲ್ಲಿಗೆ ಹೋಗಿ ಬರಲು ಅಪ್ಪಣೆ ಕೊಡಿ" ಎಂದಿದ್ದರು ಮೋದಿ. ಅದಕ್ಕುತ್ತರವಾಗಿ ಗುಜರಾತಿನ ಜನತೆ 'ಮೋದಿ ಭಯ್ಯಾ, ಹಮ್ ಆಪ್ಕೆ ಪೀಛೇ ಹೈ, ಆಪ್ ಆಗೇ ಬಢೋ (ನಾವು ನಿಮ್ಮ ಹಿಂದಿದ್ದೇವೆ, ನೀವು ಮುಂದಿನ ಹೆಜ್ಜೆಯಿಡಿ)" ಎಂದು ಒಕ್ಕೊರಲಿನಿಂದ ಕೂಗಿತ್ತು. ಗುಜರಾತಿನ ವಿಧಾನಸಭೆಯ ಚುನಾವಣೆಯೊಂದಕ್ಕೇ 190ಕ್ಕೂ ಮಿಕ್ಕಿ ಸಭೆಗಳನ್ನು ನಡೆಸಿದ, ಹಾಲೋಗ್ರಾಫಿಕ್ ತ್ರೀಡೈಮನ್‍ಷನಲ್ (3D) ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಪ್ರತಿ ಗುಜರಾತಿಯನ್ನೂ ತಲುಪಿದ್ದ ಮೋದಿಗೆ ತಾವು ದೆಹಲಿಗೆ ಹೋಗಿ ಮಾಡಬೇಕಾದುದೇನೆಂಬುದರ ಸಂಪೂರ್ಣ ಅರಿವಿತ್ತು. ಪ್ರಧಾನಿ ಅಭ್ಯರ್ಥಿಯೆಂಬ ಘೋಷಣೆಯಾಗುತ್ತಲೇ ಅಭಿವೃದ್ಧಿ ಹಾಗೂ ಸಮಾನತೆಯ ಮಂತ್ರ ಪಠಿಸುತ್ತ ಕಣಕ್ಕಿಳಿದೇಬಿಟ್ಟರು. ಪ್ರತ್ಯುತ್ತರವಾಗಿ, ಎಂದೋ ಸತ್ತು ಗೋರಿಯಾಗಿರುವ ಗೋಧ್ರಾ ಘಟನೆಯನ್ನು ಬಾರಿಬಾರಿಗೂ ಕೆದಕುತ್ತಿದ್ದ ಜಾತ್ಯತೀತರುಗಳಿಗೆ, ಮಾಧ್ಯಮದವರಿಗೆ, ಇಂದಿಗೂ ಗೋಧ್ರಾದ ಗಣೇಶ ಉತ್ಸವದ ಸಂಪೂರ್ಣ ಸಿದ್ಧತೆ ನಡೆಸುವವರು ಅಲ್ಲಿಯ ಮುಸ್ಲಿಮರೇ ಎಂಬ ಸತ್ಯ ಕೊನೆತನಕ ತಿಳಿಯಲೇ ಇಲ್ಲ.

ಫಲಿತಾಂಶದ ದಿನ 9 ಲಕ್ಷದ 30 ಸಾವಿರ ಮತಗಟ್ಟೆಗಳಲ್ಲಿ 14 ಲಕ್ಷ ಮತಯಂತ್ರಗಳು ತಮ್ಮ ಗರ್ಭದೊಳಗಿನ ಸತ್ಯವನ್ನು ಹೊರಹಾಕುತ್ತಿದ್ದಂತೆ ಎಲ್ಲರ ನಿರೀಕ್ಷೆಗಳು ನಿಜವಾಗತೊಡಗಿದವು. ಮೊದಲಿನಿಂದಲೇ ನಿರ್ಗಮನ ಸಮೀಕ್ಷೆಗಳೆಲ್ಲಾ ಮೋದಿ ಪರವಾಗಿಯೇ ಇದ್ದರೂ ಅದನ್ನು ಪ್ರಮಾಣಿಸಿ ನೋಡದ ಹೊರತು ನಂಬುವ ಹಾಗಿರಲಿಲ್ಲ. ಜೊತೆಗೆ ಚಿದಂಬರಂ ಬೇರೆ 'ಫಲಿತಾಂಶದ ದಿನ ಎಲ್ಲರಿಗೂ ಅಚ್ಚರಿ ಕಾದಿದೆ, ನೋಡುತ್ತಿರಿ' ಎಂದುಬಿಟ್ಟಿದ್ದರಲ್ಲ, ಯಾವ ಏರುಪೇರು ಕಾದಿದೆಯೋ ಎಂಬ ಆತಂಕ ಬೇರೆ. ಅಚ್ಚರಿ ಕಾದಿದ್ದು ಅವರಿಗೆ, ಪುತ್ರ ಕಾರ್ತಿಯ ಸೋಲಿನಿಂದ ಎಂಬುದು ತಿಳಿದು ಬಂದದ್ದು ಆಮೇಲೆ!

ಎಣಿಕೆ ಶುರುವಾಗುತ್ತಲೇ ಶುರುವಾಯಿತು ವಿದ್ಯುತ್ ಸಂಚಾರ. 'ಇಲ್ಲಿ ನೆಟ್ ಸ್ವಲ್ಪ ಸ್ಲೋ ಇದೆ. ಎಷ್ಟಾಯಿತು ನೋಡಿ ಪ್ಲೀಸ್ ಬೇಗ ' ಎನ್ನುವ, ‘ಟ್ರಾಫಿಕ್‍ನಲ್ಲಿ ಸಿಕ್ಕಿಕೊಂಡಿದ್ದೇನೆ, ಸ್ವಲ್ಪ ಟೋಟಲ್ ಕನ್‍ಫರ್ಮ್ ಮಾಡಿ’ ಎನ್ನುವ ಮನವಿಗಳು ಹರಿದಾಡತೊಡಗಿದವು. ಸಚಿನ್ ತೆಂಡೂಲ್ಕರ್‍ನ ಸ್ಕೋರ್ ತಿಳಿಯುವಾಗಿನ ಧಾವಂತ, ಕಳಕಳಿಗಿಂತ ಬಹಳ ಹೆಚ್ಚಿನ ಪಟ್ಟು ಈ ಮನವಿಗಳಲ್ಲಿತ್ತು. 'ಫೇಸ್‍ಬುಕ್'ನಂಥ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ನಿಮಿಷಕ್ಕಿಂತ ಹೆಚ್ಚಿನ ಸಮಯ ವ್ಯಯಿಸದವರೂ ತಾಸುಗಟ್ಟಲೆ ಕೂತು ಕೇಳಿದವರಿಗೆಲ್ಲಾ ಪ್ರತಿ ನಿಮಿಷದ 'ಸ್ಕೋರ್' ಹೇಳಬೇಕಾಯಿತು. ಭೂಪಟದ ಇನ್ನೊಂದು ತುದಿಯಲ್ಲಿದ್ದವರಿಗಂತೂ ಇದು ವರ್ಷದ ಎರಡನೆಯ ಶಿವರಾತ್ರಿ. ಫಲಿತಾಂಶ ಖಾತ್ರಿಯಾಗುತ್ತಿದ್ದಂತೆ ಎಲ್ಲರ ಮುಖಗಳಲ್ಲೂ ಮಂದಹಾಸ. ಮನೆಯಲ್ಲಿ ಸಿಹಿ ತಯಾರಿಸಲು ಹೇಳಿದವರಷ್ಟೋ, ಆಫೀಸುಗಳಲ್ಲಿ ಕೇಕ್ ಕತ್ತರಿಸಿ ಸಂಭ್ರಮಪಟ್ಟವರೆಷ್ಟೋ, ವಿಷಯ ಗೊತ್ತಿದ್ದರೂ ಹಂಚಿಕೊಳ್ಳುವ ನೆವದಲ್ಲಿ ಗೆಳೆಯರಿಗೆ, ಬಂಧು-ಬಾಂಧವರಿಗೆ ಫೋನಾಯಿಸಿದವರೆಷ್ಟೋ! ಗಣಿತದ ಅಂಕಿ-ಅಂಶಗಳು ಹೇಳಿದ ವಿಜಯ ವಾರ್ತೆಗಿಂತ ಭಾವನಾತ್ಮಕವಾಗಿ ಇಡೀ ದೇಶದ ಜನತೆ ಬೆಸೆದು ಹೋಗಿದ್ದ 'ಮೋದಿ ಅಲೆ' ಹುಸಿಯಲ್ಲ ಎನ್ನುವ ಸತ್ಯ ನಿರೂಪಿತವಾದುದು ಬಹಳ ತೃಪ್ತಿಕರವಾಗಿತ್ತು.

Better Late Than Never!

ಮೊತ್ತಮೊದಲ ಬಾರಿಗೆ 'ನಾನೊಬ್ಬ ವೋಟ್ ಮಾಡದಿದ್ದರೇನು ಮಹಾ ವ್ಯತ್ಯಾಸವಾಗುವುದು' ಎಂಬ ಧೋರಣೆಯನ್ನು ಬದಿಗಿಟ್ಟು ಸಾಕಷ್ಟು ಪ್ರಜ್ಞಾವಂತ ಭಾರತೀಯರು ಮತ ಹಾಕಿರುವುದರ ಪರಿಣಾಮವೇ ಈ ಐತಿಹಾಸಿಕ ಬದಲಾವಣೆ. ಇಷ್ಟು ದಿನ ನಮ್ಮ ರಾಜಕಾರಣಿಗಳು ಹೇಳಿದ್ದೇ ಮಾತು, ನಡೆಸಿದ್ದೇ ಆಡಳಿತ, ಮಾಡಿದ್ದೇ ರಾಜಕಾರಣ. ಮೋದಿಯವರನ್ನೇ ಗುರಿಯಾಗಿಸಿಕೊಂಡು ಚಲಾಯಿಸಿದ ಪ್ರತಿ ಮತವೂ ಈಗ ತಂದಿತ್ತಿದೆ ಸಂತಸದ ಸಿಹಿ ಹೂರಣ. ಇನ್ನುಳಿದಿರುವುದು ಹಂತ ಹಂತಗಳಲ್ಲಿ ಬದಲಾವಣೆಯ ಅನಾವರಣ.

ನಿಮ್ಮ ಕರೆಗೆ ಕಾಯಾ, ವಾಚಾ, ಮನಸಾ ಓಗೊಟ್ಟಿದ್ದೇವೆ ನರೇಂದ್ರ ಭಾಯ್, ಇನ್ನು ಈ ದೇಶವನ್ನು ಪೊರೆಯುವ ಹೊಣೆ ನಿಮ್ಮದು!


Monday, 19 May 2014

ಎಂಥವರು ಬೇಕೀಗ ಭಾರತಕ್ಕೆ?

ಅಂತೂ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಚುನಾವಣೆ ಎಂಬ ಮಹಾಸಮರ ಮುಗಿದಿದೆ.  ನಾವೆಲ್ಲಾ ಉಸ್ಸಪ್ಪಾ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ದೇಶದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಯ ಚುನಾವಣೆಯೆಂಬ ಹೆಗ್ಗಳಿಕೆಯ ಇದು 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 7ರಂದು ಶುರುವಾಗಿ ಮೇ 12ರವರೆಗೂ ನಡೆಯಿತು. ಅಷ್ಟೂ ದಿನ ಬೇರೆ ವಿಷಯಗಳೆಲ್ಲಾ ಉಸಿರು ಕಳೆದುಕೊಂಡು ನಿತ್ರಾಣವಾಗಿ ನೀಲಿಗಟ್ಟಿಹೋದವು. ಗೆದ್ದೇ ತೀರುವ ಜಿದ್ದಿಗೆ ಬಿದ್ದು ಸ್ಪರ್ಧಿಸಿದ ಅಭ್ಯರ್ಥಿಗಳದು ಹಾಗಿರಲಿ, ನಮ್ಮ ಪಾಡು ಹೇಳತೀರದಾಗಿತ್ತು. ಒಂದು ಚಾನೆಲ್‍ನಲ್ಲಿ ಅರ್ಣಬ್ ಗೋಸ್ವಾಮಿಯಿಂದ ತಪ್ಪಿಸಿಕೊಂಡರೆ ಮತ್ತೊಂದರಲ್ಲಿ ಬರ್ಖಾ‍ದತ್‍ಳ ಕೈಲಿ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ. ಪ್ರತಿಯೊಂದು ಪಕ್ಷದ ವಕ್ತಾರರೂ ಒಂದೊಂದು ಘಂಟೆಗೂ ಅಕ್ಕಪಕ್ಕದ ಚಾನೆಲ್‍ಗಳಿಗೆ ಹಾರಿ ಅವೇ ಮಾತುಗಳನ್ನಾಡಿದ್ದೇ ಆಡಿದ್ದು. ಜೊತೆಗೆ ಲಂಗು ಲಗಾಮಿಲ್ಲದೆ ಪರಸ್ಪರರ ಮೇಲೆ ಹರಿಸಿದ ನಿಂದನೆಗಳ ಸುರಿಮಳೆ ಬೇರೆ. ಷಂಡ, ಭಂಡ, ಕೊಲೆಗಡುಕ ಎಂಬುದರಿಂದ ಶುರುವಾಗಿ, ಕತ್ತರಿಸಿ ತುಂಡು ಮಾಡುತ್ತೇನೆ, ಜೈಲಿಗಟ್ಟುತ್ತೇನೆ ಎಂಬಲ್ಲಿಗೆ ಬಂದು ನಿಂತ ಪದಪುಂಜಗಳ ಪ್ರಯೋಗ ನೋಡಿ ನಾವಿರುವುದು ಯಾವ ಪಾಪಿಗಳ ಲೋಕದಲ್ಲಿ ಎಂಬ ಗಾಬರಿ ನಮಗೆ. 

ಪರಿಸ್ಥಿತಿಯ ಗಾಂಭೀರ್ಯದ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದು ಎರಡೇ ವಿಷಯಗಳು. ಒಂದು, ಇತ್ತೀಚೆಗಷ್ಟೇ ಸಂದರ್ಶನಗಳ ವೇದಿಕೆಯಲ್ಲಿ ಅರಂಗೇಟ್ರಂ ಮಾಡಿದ ರಾಹುಲ್ ಗಾಂಧಿಯವರದು. ಕಂಠಪಾಠ ಮಾಡಿದ್ದ ಉತ್ತರ ಮರೆತು ಹೋಗಿ, ಬಹಳಷ್ಟು ಪ್ರಶ್ನೆಗಳಿಗೆ ಮಹಿಳಾ ಸಬಲೀಕರಣವನ್ನೇ ಉತ್ತರವಾಗಿಸಿಕೊಂಡು ತಮ್ಮ  ಕ್ಷಮತೆ, ಪ್ರತಿಭೆ ಹಾಗೂ ಆಲೋಚನಾ ವೈಖರಿಗಳ ನಿಜ ಸ್ವರೂಪವನ್ನು ನಮ್ಮೆದುರು ಹರವಿಟ್ಟರು. ತನ್ಮೂಲಕ ಫೇಸ್‍ಬುಕ್, ಟ್ವಿಟ್ಟರ್‍ ಹಾಗೂ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರವಾಗಿ, ನಗೆಹನಿಯಾಗಿ ಬಂದು ನಮ್ಮನ್ನು ಮನಸಾರೆ ನಗಿಸಿದರು.  ಎರಡನೆಯದು, ತಾನು ಆಮ್ ಆದ್ಮಿ, ತನಗೆ ಯಾವ ರಕ್ಷಣೆಯೂ ಬೇಡ ಎಂದು ಬೀದಿಗೆ ನುಗ್ಗಿ ಬಾರಿಬಾರಿಗೂ ಕಪಾಳ ಮೋಕ್ಷ ಮಾಡಿಸಿಕೊಂಡು ಬಂದ ಅರವಿಂದ ಕೇಜ್ರಿವಾಲರದ್ದು. ಏಟು ತಿಂದ ಮೇಲೆ, ಇದು ಯಾರ ಹುನ್ನಾರ, ನನ್ನನ್ನೇ ಏಕೆ ಗುರಿಯಾಗಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ ಕೇಜ್ರಿವಾಲರ ಕಳವಳವೂ ನಮ್ಮ ತುಟಿಯಂಚಿಗೆ ನಗು ತರಿಸಿತು. 49 ದಿನಗಳ ಕಾಲ ನಡೆಸಿದ ದಿಲ್ಲಿಯ ದರ್ಬಾರಿನಲ್ಲಿ ನೀರು, ವಿದ್ಯುತ್, ಭ್ರಷ್ಟಾಚಾರರಹಿತ ಆಡಳಿತ ಕೊಡುತ್ತೇನೆ ಎಂದೆಲ್ಲಾ ಹೇಳಿ ಕೊನೆಗೆ ಕೈ ಕೊಟ್ಟು ಓಡಿ ಹೋಗಿದ್ದ ಇವರಿಗೆ ರೋಸಿಹೋಗಿದ್ದ ದೆಹಲಿಯ ಆಮ್ ಆದ್ಮಿಯೇ ತನ್ನ ಕೈ ರುಚಿ ತೋರಿಸಿದ್ದ!

ಎಂದಿಗೆ ಮುಗಿಯುವುದೋ ಎನಿಸುತ್ತಿದ್ದ ಕಾಳಗ ಕೊನೆಗೂ ಮುಗಿದಿದೆ. ಈಗ ಚಾತಕಪಕ್ಷಿಗಳಂತೆ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಎಲ್ಲರೂ ಬದಲಾವಣೆಯ ನಿರೀಕ್ಷೆಯಲ್ಲಿರುವುದಂತೂ ದಿಟ. ಇಷ್ಟು ದಿನ ಸೂತ್ರದ ಗೊಂಬೆಯಾಟವಾಗಿಹೋಗಿದ್ದ ನಮ್ಮ ಆಡಳಿತಯಂತ್ರ ಹೊಸ ಹುಟ್ಟು ಪಡೆಯುವುದಾ ಎಂಬ ಕಾತರವೇ ಎಲ್ಲೆಡೆ. ಎಂಥವರು ನಮಗೆ ಹೊಸತನದ ಹರಿಕಾರರಾಗಿ, ನೇತಾರರಾಗಿ ಬೇಕು ಹಾಗೂ ಅವರು ನಿರ್ದಿಷ್ಟವಾಗಿ ಎಂಥ ಬದಲಾವಣೆಯನ್ನು ತರಬೇಕು ಎಂದು ನಮ್ಮನ್ನು ಕೇಳಿದರೆ…

  • ·        ಎಲ್ಲದಕ್ಕೂ ತುಟಿ ಹೊಲಿದುಕೊಂಡು ಕುಳಿತ ಮೌನ ಮೋಹನರು ನಮ್ಮನ್ನಾಳಿದ್ದು ಸಾಕು. ಬಹುಕೋಟಿ ಕಲ್ಲಿದ್ದಲು ಹಗರಣದ ಬಗ್ಗೆ ಇಡೀ ದೇಶವೇ ತುದಿಗಾಲಲ್ಲಿ ನಿಂತು ಪ್ರಶ್ನಿಸತೊಡಗಿದಾಗ 'ಸಾವಿರಾರು ಉತ್ತರಗಳಿಗಿಂತ ನನ್ನ ಮೌನವೇ ವಾಸಿ, ಎಷ್ಟೋ ಪ್ರಶ್ನೆಗಳ ಮರ್ಯಾದೆ ಉಳಿಸಿದೆ' ಎಂದು ಕವಿಯಂತೆ ಹೇಳಿ ನುಣುಚಿಕೊಂಡು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟಂಥವರು ನಮಗಿನ್ನು ಬೇಡ. ನಮ್ಮ ಸೈನಿಕರ ರುಂಡಗಳು ತರಿದು ಹೋದಾಗಲೂ ‘ಮಾತು ಬೆಳ್ಳಿ, ಮೌನ ಬಂಗಾರ’ ಎಂದು ಸುಮ್ಮನಿದ್ದಂಥವರು ಖಂಡಿತ ಬೇಡ.  ದೇಶದ ಆಗುಹೋಗುಗಳಿಗೆಲ್ಲ ತಲೆಕೊಡುವ, ನಾವು ಕೇಳುವ ಪ್ರಶ್ನೆಗಳಿಗೆ ಉತ್ತರವಾಗುವ ಗಟ್ಟಿತನವಿರುವವರು ಬೇಕು.

  • ·        ನಮಗೆ ರಬ್ಬರ್ ಸ್ಟ್ಯಾಂಪ್ ಆಗುವ ಪ್ರಧಾನಿ ಬೇಡ. ನಂ.7 ರೇಸ್ ಕೋರ್ಸ್ ರೋಡ್‍‍ಗೆ ಮೀಸಲಾಗಿರಬೇಕಾದ ಸಭೆ, ನಿರ್ಧಾರಗಳೆಲ್ಲ ನಂ.10 ಜನಪಥದಲ್ಲಿ ನಡೆದುಹೋಗುವುದು ನಮಗೆ ಸಮ್ಮತವಲ್ಲ. ಎರಡೆರಡು ಅಧಿಕಾರ ಕೇಂದ್ರಗಳ ಪದ್ಧತಿಗೆ ಇತಿಶ್ರೀ ಹಾಡಿ  ಸ್ವತಂತ್ರವಾಗಿ ಯೋಚಿಸುವ, ಯಾರ ಹಸ್ತಕ್ಷೇಪವೂ ಇರದೆ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವ ಮನಸ್ಥಿತಿಯವರು ಬೇಕು.

  • ·        ವಂಶಪಾರಂಪರ್ಯವಾಗಿ ಬಂದಿರುವ ಕುಟಂಬ ರಾಜಕಾರಣ ನಮಗಿನ್ನು ಬೇಡ. ‘ಗಾಂಧಿ’ ಎಂಬ ಹೆಸರು ಅಂಟಿದಾಕ್ಷಣ ಬಂದು ಬಿಡುವ ಅರ್ಹತೆ, ಸಿಕ್ಕಿಬಿಡುವ ರಿಯಾಯಿತಿ, ಸರ್ವಾಧಿಕಾರಗಳಿನ್ನು ಸಾಕು. ಬರಿದೇ ನಾಮಬಲದಿಂದ ಅಧಿಕ್ಕಾರಕ್ಕೇರಿ ದೇಶವನ್ನೇ ಬುಗುರಿಯಂತಾಡಿಸುವವರ ಕೈಗೊಂಬೆಗಳಾಗಿ ಸಲಾಮು ಹೊಡೆಯುವವರು   ನಮಗೊಪ್ಪಿಗೆಯಾಗುವುದಿಲ್ಲ. ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಓದಿ ಬಂದರೂ ನಿರರ್ಗಳವಾಗಿ ನಾಲ್ಕು ಮಾತನ್ನೂ ಆಡಲು ಬರದವರು ಈ ದೇಶದ ಚುಕ್ಕಾಣಿ ಹಿಡಿದು ಮುಗ್ಗರಿಸುವುದು ಬೇಡ. ದೇಶದ ಬಗ್ಗೆ ಅಭಿಮಾನ, ಪ್ರೇಮ, ದೂರದೃಷ್ಟಿಗಳಿರುವ, ಈ ಮಣ್ಣಿನ ಕಣಕಣದ ಪರಿಚಯವಿರುವ, ಜನರ ನಾಡಿಮಿಡಿತವನ್ನರಿಯಬಲ್ಲ ಚಹಾ ಮಾರುತ್ತಿದ್ದವರು ನಮ್ಮ ನೇತಾರರಾದರೂ ನಮಗೆ ಆದೀತು!

  • ·        ಹಿಂದು ಎಂದೊಡನೆ ಕೋಮುವಾದಿ, ಮುಸ್ಲಿಂ ಎಂದೊಡನೆ ಜಾತ್ಯಾತೀತ ಎಂಬ ಕಲ್ಪನೆಯನ್ನು ಹುಟ್ಟುಹಾಕಿ, ಅದನ್ನೇ ಅಸ್ತ್ರವನ್ನಾಗಿಸಿಕೊಂಡು ನಮ್ಮನ್ನು ಒಡೆದು ಆಳುತ್ತಾ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದವರು ಸಾಕು. ಹಿಂದುವಾಗಲೀ, ಮುಸ್ಲಿಂ ಆಗಲೀ, ಇತರೆ ಧರ್ಮದವರಾಗಲೀ, ಎಲ್ಲರೂ ಭಾರತೀಯರು ಮಾತ್ರ ಎಂಬ ಹೊಸ ಪರಿಭಾಷೆಯನ್ನು ಪರಿಣಾಮಕಾರಿಯಾಗಿ ಚಾಲ್ತಿಗೆ ತರಬಲ್ಲ ಎಂಟೆದೆಯಿರುವವರು ಬೇಕು. ಅಲ್ಪಸಂಖ್ಯಾತರ ಮೇಲೆ ಹರಿಸುತ್ತಿರುವ ಕೃತಕ ಅನುಕಂಪ, ತೋರಿಕೆಯ ಓಲೈಕೆಗಳ ಹೊಳೆಯನ್ನು ನಿಲ್ಲಿಸಿ ಅವರಿಗೆ ವಾಸ್ತವವನ್ನು ಮನದಟ್ಟು ಮಾಡಿಸಿ ಮುಖ್ಯವಾಹಿನಿಗೆ ತರುವ ನಯಗಾರಿಕೆಯಿರುವವರು ಬೇಕು.

  • ·        ಕಳೆದ ಹತ್ತು ವರ್ಷಗಳಲ್ಲಿ ಭಾರತಮಾತೆಯ ಕುತ್ತಿಗೆಗೆ ಪೋಣಿಸಿರುವ ಹಗರಣಗಳ ಮಾಲೆ ಸಾಕು. ಹತ್ತು ಲಕ್ಷ ಕೋಟಿಗೂ ಮೀರಿದ ಕಲ್ಲಿದ್ದಲು ಹಗರಣ, 1.76 ಲಕ್ಷ ಕೋಟಿಯ 2ಜಿ ತರಂಗ ಹಗರಣ, 3600 ಕೋಟಿಯ ಹೆಲಿಕಾಪ್ಟರ್ ಹಗರಣ,90 ಕೋಟಿಯ ಕಾಮನ್‍ವೆಲ್ತ್ ಹಗರಣ ಮುಂತಾದವುಗಳಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗಿಯಾಗಿದ್ದ ಸರ್ಕಾರ ತೆರಿಗೆದಾರರ ಹಣವನ್ನು ನುಂಗಿ ನೀರು ಕುಡಿದದ್ದು ಸಾಕು. ಮತ್ತೆ ಇಂಥವೇ ಹಗರಣಗಳನ್ನು ವ್ಯವಸ್ಥಿತವಾಗಿ ಹುಟ್ಟುಹಾಕುವ ಆಡಳಿತಯಂತ್ರ ನಮಗೆ ಬೇಡ. ಹಗರಣಮುಕ್ತವಾದ ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುವ ಶುಭ್ರ ಮನಸಿನ ಶುದ್ಧಹಸ್ತರು ಬೇಕು.

  • ·        ವಿದೇಶಗಳಲ್ಲಿದ್ದುಕೊಂಡೇ ತಮ್ಮ ಕಬಂಧ ಬಾಹುಗಳನ್ನು ಚಾಚಿ ನಮ್ಮ ಧರ್ಮದ ಬೇರುಗಳನ್ನು ಅಲುಗಾಡಿಸುತ್ತಿರುವ ಮತಾಂತರಿಗಳಿಗೆ ಇಷ್ಟು ವರ್ಷ ಸಿಕ್ಕಿರುವ ಪ್ರೋತ್ಸಾಹ ಸಾಕು. ಆ ಬಾಹುಗಳನ್ನು ನಿರ್ದಯವಾಗಿ ಕತ್ತರಿಸಿ, ದೇಶದ ಬೇಲಿಯನ್ನು ಗಟ್ಟಿಗೊಳಿಸಿ ನಮ್ಮ ಧರ್ಮದ ಬೇರುಗಳನ್ನು ಸಂರಕ್ಷಿಸುವ ನಿಷ್ಠುರಿ ಬೇಕು.

  • ·        ದಿನಕ್ಕೊಂದು ಉಪಟಳ ನೀಡುತ್ತಾ ಗಡಿಯಲ್ಲಿ ಅಸಂಖ್ಯ ಯೋಧರ ಪ್ರಾಣ ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಸರಿಯಾದ ಎಚ್ಚರಿಕೆ ಕೊಡದೆ, ದೇಶಕ್ಕಾಗಿ ಹುತಾತ್ಮರಾದ ಸೈನಿಕರ ತ್ಯಾಗಕ್ಕೆ ಅಪಚಾರ ಮಾಡುತ್ತಿರುವ ಅಂಜುಬುರುಕುತನ ಇನ್ನು ಬೇಡ. ಅತಿಯಾಗಿರುವ ಸಂಯಮಕ್ಕೆ ಕೊನೆ ಹಾಡಿ, ಗಡಿಯಿಂದ ನುಸುಳಿ ನಮ್ಮವರ ರಕ್ತದೋಕುಳಿಯಾಡುತ್ತಿರುವವರ ಹೆಡೆಮುರಿ ಕಟ್ಟಿ  ಸಾಮ, ದಾನ, ಭೇದದಿಂದಾಗದ್ದನ್ನು ದಂಡದಿಂದಲಾದರೂ ಅವರಿಗೆ ದಯಪಾಲಿಸುವ ಧೀರ ನೇತಾರರು ಬೇಕು.

  • ·        ಹಣದುಬ್ಬರವನ್ನು ಹೆಚ್ಚಿಸಿ, ಜಿ.ಡಿ.ಪಿಯನ್ನು ಕೆಳಗಿಳಿಸಿ, ಶ್ರೀಮಂತರನ್ನು ಆಗರ್ಭ ಶ್ರೀಮಂತರನ್ನಾಗಿಸಿ ಬಡವರನ್ನು ಹಾಗೇ ಉಳಿಸಿದ ಈಗಿನ ಸರ್ಕಾರದ ಆರ್ಥಿಕ ನೀತಿಗಳು ಸಾಕು. ಪ್ರಸಕ್ತ ಬಡತನದ ರೇಖೆಯೊಳಗಿರುವ ಶೇಕಡ 11.8ರಷ್ಟು ಭಾರತೀಯರ ಬದುಕಿನ ಸ್ತರವನ್ನು ಮೇಲೆತ್ತುವ ನಿಟ್ಟಿನಲ್ಲಿ ಹೊಸ ನೀತಿಗಳು ರೂಪುಗೊಳ್ಳಬೇಕು. ದೇಶದಲ್ಲಿ ಸರಾಸರಿ 50ರಷ್ಟಿರುವ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಕಾಯಕವಾಗಬೇಕು. ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಗಳಿಗೆ ಒತ್ತುಕೊಟ್ಟು ಹೊಸ ಉದ್ಯೋಗಗಳ ಸೃಷ್ಟಿಗೆ ಅವಕಾಶ ನೀಡಬೇಕು. ಒಟ್ಟಾರೆ ಪರಿಣಾಮಕಾರಿಯಾದ ಆರ್ಥಿಕ , ರಕ್ಷಣಾ  ಹಾಗೂ ವಿದೇಶಾಂಗ ನೀತಿಗಳ ರಚನೆಗೆ ಇಂಬು ಕೊಡುವ ಬುದ್ಧಿವಂತ ನಾಯಕ ಬೇಕು.

  • ·        ದೇಶಕ್ಕೆ ಮುಕುಟಪ್ರಾಯವಾಗಿರುವ ಕಾಶ್ಮೀರಕ್ಕೆ ದಶಕಗಳಿಂದಲೂ ಕೊಡಮಾಡಿರುವ ಸೆಕ್ಷನ್ 370 ಇನ್ನು ಮುಂದುವರೆಯುವುದು ಕೂಡದು. ನಮಗೆ ಸೇರಿಯೂ ಸೇರದಂತಿರುವ, ನಮ್ಮದೇ ಹಣದಿಂದ ಎಲ್ಲ ಸೌಲಭ್ಯಗಳನ್ನೂ ಪಡೆಯುತ್ತಿದ್ದರೂ ನಮ್ಮ ಯಾವ ಕಾನೂನಿನ ಮಿತಿಗೂ ಒಳಪಡದ, ಒಟ್ಟಿನಲ್ಲಿ ನಮಗೆ ಅಧಿಕಾರವೇ ಇರದೆ ಭಾರತದ ಸಮಗ್ರತೆಗೆ ಕಪ್ಪು ಚುಕ್ಕೆಯಾಗಿರುವ ಇಂಥ ಲಕ್ಷ್ಮಣರೇಖೆಗಳು ಇನ್ನು ತೆರವಾಗಬೇಕು. ತರಬೇಕಾದ ತಿದ್ದುಪಡಿಯನ್ನು ಶೀಘ್ರವೇ ತಂದು ಉಳಿದ ರಾಜ್ಯಗಳಂತೆಯೇ ಕಾಶ್ಮೀರವನ್ನೂ ನಮ್ಮ ಸಂವಿಧಾನದೊಳಗೆ ಅಡಕವಾಗಿಸಿ ನಮ್ಮ ದೇಶದ ನಕ್ಷೆಯನ್ನು ಈಗಿರುವಂತೆಯೇ ಶಾಶ್ವತವಾಗಿ ಉಳಿಸಿಕೊಳ್ಳಬಲ್ಲ ಉಕ್ಕಿನ ಮನುಷ್ಯ ಬೇಕು.

  • ·        ನೆರೆಯ ರಾಷ್ಟ್ರಗಳ ವಿಷಯದಲ್ಲೇ ಮುನ್ನೆಚ್ಚರಿಕೆಯಿಲ್ಲದೆ, ಸಂಸತ್ತಿನ ಅಧಿವೇಶನದ ಸಮಯದಲ್ಲೆಲ್ಲಾ ಬರೀ ದೂರ ದೇಶಗಳಿಗೆ ಪ್ರಯಾಣ ಮಾಡಿ ಸುಮಾರು 640 ಕೋಟಿಯಷ್ಟು ವಿದೇಶ ಪ್ರಯಾಣ ವೆಚ್ಚದ ಹೊರೆಯನ್ನು ಹೊರಿಸಿದಂಥ ಪ್ರಧಾನಿ ನಮಗೆ ಬೇಡ. ನಮ್ಮ ಸುತ್ತ-ಮುತ್ತ ಏನಾಗುತ್ತಿದೆ ಎಂದು ಮೊದಲು ತಿಳಿದುಕೊಂಡು ಅದಕ್ಕೆ ತಕ್ಕ ತಯಾರಿಯೊಡನೆ ಸನ್ನದ್ಧರಾಗಿರುವ ತಂತ್ರಗಾರಿಕೆಯವರು ಬೇಕು. ಕಾರಣ ಸಿಕ್ಕೊಡನೆ ಭೂ, ಜಲ ಹಾಗೂ ವಾಯುಮಾರ್ಗಗಳ ಮುಖೇನ ನಮ್ಮ ಮೇಲೆ ಆಕ್ರಮಣಕ್ಕೆ ಸಿದ್ಧವಾಗಿರುವ ಚೀನಾಕ್ಕೆ ಪ್ರತ್ಯುತ್ತರ ನೀಡಿ 1962 ಮತ್ತೆ ಮರುಕಳಿಸದಂತೆ ತಡೆಯುವ ಮುಂಜಾಗರೂಕತೆ, ಛಾತಿಯಿರುವವರು ಬೇಕು.


ಸ್ವಚ್ಛತೆಯಲ್ಲಿ ಸಿಂಗಾಪುರ, ಅಭಿವೃದ್ಧಿಯಲ್ಲಿ ದುಬೈ, ತಂತ್ರಜ್ಞಾನದಲ್ಲಿ ಅಮೆರಿಕ ಹಾಗೂ ದೇಶರಕ್ಷಣೆಯಲ್ಲಿ ಇಸ್ರೇಲ್ ಆಗಬೇಕು ನಮ್ಮ ಭಾರತ ಎಂಬುದು ನಮ್ಮ ಕನಸು. ಇಷ್ಟು ದಶಕಗಳಿಂದ ಗೆದ್ದಲು ಹಿಡಿದಿರುವ ನಮ್ಮ ವ್ಯವಸ್ಥೆಯನ್ನು ರಾತ್ರಿಕಳೆದು ಬೆಳಗಾಗುವುದರಲ್ಲಿ ಬದಲಾಯಿಸುವುದು ಸ್ವತಃ ಭಗವಂತನಿಗೇ ಸಾಧ್ಯವಾಗಲಾರದೇನೋ. ಆದರೆ ನಮ್ಮ ಕನಸುಗಳ ಜೊತೆ ಕೈಜೋಡಿಸುವ ನೇತಾರ ಸಿಕ್ಕಿದರೆ ನನಸು ಮಾಡಿಕೊಳ್ಳುವ ಮಾರ್ಗ ಸಿಕ್ಕಂತೆಯೇ ಅಲ್ಲವೆ? ಅಮೆರಿಕ, ದುಬೈ, ಯೂರೋಪ್‍ ಪ್ರಯಾಣವೆಂದರೆ ಸಂಭ್ರಮಿಸುತ್ತಾ ಹೊರಡುವ ನಮಗೆ ಅದೇ ಪಟ್ಟಿಗೆ ನಮ್ಮ ಭಾರತವೂ ಸೇರಿದರೆ ಎಷ್ಟು ಹೆಮ್ಮೆಯಾದೀತಲ್ಲವೇ? ಬದಲಾವಣೆಯ ಕನಸು ಕಂಡಷ್ಟೇ ಮುಖ್ಯ ಬದಲಾವಣೆಗೆ ಸಹಕರಿಸುವುದೂ. ಆ ಕ್ರಿಯೆಯಲ್ಲಿ ಒಂದೆರಡು ಉಳಿ ಪೆಟ್ಟು ನಮಗೂ ಬೀಳಬಹುದು. ದೇಶದ ಕಾಯಕಲ್ಪದ ಸಲುವಾಗಿ ತೀರಾ ಅಷ್ಟನ್ನೂ ತಡೆದುಕೊಳ್ಳಲಾರೆವೇ? ಮೋದಿಯಂಥ ರಾಷ್ಟ್ರಪ್ರೇಮಿ ನಮ್ಮ ನೇತಾರರಾದರೆ ಅಬ್ಬಬ್ಬಾ ಎಂದರೆ ಏನಾದೀತು? ಅನಂತಮೂರ್ತಿಯಂಥ ಬುದ್ಧಿಜೀವಿಗಳು ದೇಶ ಬಿಟ್ಟು ಹೋದಾರು. ಹೋಗಲಿ ಬಿಡಿ. ನಾವು ಬದಲಾವಣೆಯ ಮೂಲಕ ದೇಶಕಟ್ಟುವ ಕಾಯಕಕ್ಕೆ ಹೆಗಲಾಗಿ ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳೋಣ. ಏನಂತೀರಿ?

Tuesday, 13 May 2014

ಇಂಥ ತಾಯಿಯರಿಗೆ ಮೀಸಲಾಗಿಡೋಣವೇ ಈ ದಿನವನ್ನ?

ಘಟನೆ1: 12 ಜನವರಿ 1598ರಲ್ಲಿ, ನಿಜಾಮರ ಅಡಿಯಾಳಾಗಿದ್ದ ಲಖೋಜಿರಾವ್ ಜಾಧವ್ ಎಂಬ ಮರಾಠನ ಮಗಳಾಗಿ ಹುಟ್ಟುತ್ತಾಳೆ ಜೀಜಾಬಾಯಿ. ಎಳವೆಯಲ್ಲಿಯೇ ಅವಳ ವಿವಾಹ ಮಾಲೋಜಿರಾವ್‍ನ ಮಗ ಶಹಾಜಿ ಭೋಸಲೆಯೊಂದಿಗೆ ನಡೆಯುತ್ತದೆ. ಸ್ವತಂತ್ರ ಹಿಂದು ಸಾಮ್ರಾಜ್ಯ ಕಟ್ಟಲು ಎರಡು ಬಾರಿ ಹವಣಿಸುವ ಶಹಾಜಿ ಪ್ರತಿ ಬಾರಿಯೂ ನಿಜಾಮರ ಹಾಗೂ ಮುಘಲರ ಕೈಯಲ್ಲಿ ಸೋಲುಣ್ಣುತ್ತಾನೆ. ಕೊನೆಗೆ ಆದಿಲ್‍ಶಾಹಿಯ ಸೈನ್ಯದಲ್ಲಿ ಸರದಾರನಾಗಿ ಸೇರುತ್ತಾನೆ. ಮುಘಲರು ಆದಿಲ್‍ಶಾಹಿಯ ವಸಾಹತುಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಾಗ ಶಹಾಜಿ ಕರ್ನಾಟಕದತ್ತ ಪಯಣ ಬೆಳೆಸಿದರೆ ಗರ್ಭವತಿಯಾಗಿದ್ದ ಜೀಜಾಬಾಯಿ ಶಿವನೇರಿಯನ್ನು ಸೇರುತ್ತಾಳೆ. ದಿನೇದಿನೇ ಹೆಚ್ಚುವ ಮುಘಲರ ಉಪಟಳ ತನ್ನ ತಂದೆ ಹಾಗೂ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಳ್ಳುವುದನ್ನು ನೋಡಿ ಕನಲುತ್ತಾಳೆ. ತಮ್ಮ ರಾಜ್ಯ, ದೇಶಗಳನ್ನು ಒಗ್ಗೂಡಿಸಿ ಉಳಿಸಿಕೊಳ್ಳಲಾಗದೆ ಮುಘಲರಿಗೆ ಮಣಿಯಬೇಕಾದ ಮರಾಠರ ಅಸಹಾಯಕತೆ, ತಮ್ಮ ಹೆಣ್ಣುಮಕ್ಕಳನ್ನು ಬಲಿಕೊಡಬೇಕಾದ ನಿರ್ವೀರ್ಯತೆಯನ್ನು ಕಂಡು ಸಿಡಿದೇಳುತ್ತಾಳೆ. ಎಲ್ಲ ಹೆಂಗಳೆಯರಂತೆ ತನ್ನ ಹೊಟ್ಟೆಯಲ್ಲಿರುವ ಮಗು ಹೇಗಿರುತ್ತದೋ ಎಂದು ಕನಸು ಕಾಣುವ ಬದಲು ಅದು ಹೀಗೇ ಇರಬೇಕು ಎಂದು ಕೆಚ್ಚಿನಿಂದ ನಿರ್ಧರಿಸುತ್ತಾಳೆ. ತನ್ನ ಪ್ರತಿಯೊಂದು ಆಲೋಚನೆ, ವರ್ತನೆಯ ಪ್ರಭಾವ ತನ್ನ ಮಗುವಿನ ಮೇಲಾಗುತ್ತದೆ ಎಂಬ ಅರಿವಿನಿಂದ ಅಂಥ ಪರಿಸ್ಥಿತಿಯಲ್ಲೂ ಆಡಳಿತ ಸೂಕ್ಷ್ಮಗಳನ್ನು ಅರಿತು, ಅರಗಿಸಿಕೊಂಡು, ಬೆಟ್ಟಗಳನ್ನು ಹತ್ತಿಳಿದು, ಕತ್ತಿವರಸೆ, ಕುದುರೆ ಸವಾರಿಯಂಥ ಸಾಹಸಗಳಿಗೆ ಮೈಯ್ಯೊಡ್ಡುತ್ತಾಳೆ. ತನಗೆ ಹುಟ್ಟುವ ಮಗು ಗುಲಾಮಗಿರಿಯ ಮನಸ್ಥಿತಿಯವನಾಗಿರದೆ ದೇಶವನ್ನು ಮುಘಲರ ದಾಸ್ಯದಿಂದ ಮುಕ್ತಗೊಳಿಸುವ ಶೂರನಾಗಬೇಕು ಎಂಬ ಏಕೈಕ ಸಂಕಲ್ಪವನ್ನೇ ಅಹರ್ನಿಶಿ ತಪಸ್ಸಿನಂತೆ ಆಚರಿಸುವ ಅವಳ ಮನೋದಾರ್ಢ್ಯ,ಇಚ್ಛಾಶಕ್ತಿ ಶಿವಾಜಿಯ ರೂಪದಲ್ಲಿ ಫಲಿಸುತ್ತದೆ. ಶಹಾಜಿ ಮತ್ತೊಂದು ಮದುವೆಯಾದರೂ ವಿಚಲಿತಳಾಗದೆ ತನ್ನ ಗಮನವನ್ನು ಶಿವಾಜಿಯನ್ನು ರೂಪಿಸುವಲ್ಲೇ ಕೇಂದ್ರೀಕರಿಸುತ್ತಾಳೆ. ಬಾಲ್ಯದಿಂದಲೇ ಶಿವಾಜಿಯಲ್ಲಿ 'ಹಿಂದವಿ ಸ್ವರಾಜ್ಯ'ದ ಕಲ್ಪನೆಯನ್ನು ಹುಟ್ಟುಹಾಕಿ ಅವನನ್ನು ಅಪ್ರತಿಮ ಶೂರ ಹಾಗೂ ಸಾಹಸಿಯನ್ನಾಗಿ ಮಾಡುತ್ತಾಳೆ. ಶಿವಾಜಿ ತನ್ನ 16ನೆಯ ವಯಸಿನಲ್ಲೇ ಮೊತ್ತ ಮೊದಲ ವಿಜಯವನ್ನು ದಾಖಲಿಸಿದಾಗ, ಗೆರಿಲ್ಲಾ ಯುದ್ಧತಂತ್ರದಿಂದ ತೋರಣ ಹಾಗೂ ರಾಜಗಢದ ಕೋಟೆಯನ್ನು ವಶಪಡಿಸಿಕೊಂಡಾಗ ಹೆಮ್ಮೆಯಿಂದ ಬೀಗುತ್ತಾಳೆ. ಅವನ ಪ್ರತಿ ಹೋರಾಟಕ್ಕೂ ಬರಿದೇ ಬಾಯಿಮಾತಿನ ಸ್ಫೂರ್ತಿ, ಬೆನ್ನೆಲುಬಾಗಿರದೆ ಅವನ ಅನುಪಸ್ಥಿತಿಯಲ್ಲಿ ಸೇನೆಯನ್ನು ಮುನ್ನಡೆಸಿ ಹಲವಾರು ವಿಜಯಗಳಿಗೆ ಕಾರಣಳಾಗುತ್ತಾಳೆ. ಶಿವಾಜಿ ಆಗ್ರಾದಲ್ಲಿ ಔರಂಗಜೇಬನ ಬಂದಿಯಾದಾಗಲಾಗಲೀ ಅಥವಾ ಮಿರ್ಜಾರಾಜಾ ಜೈಸಿಂಗ್‍ನ ಕೈಲಿ ಸೋತಾಗಲಾಗಲೀ ಧೃತಿಗೆಡದೆ ಅವನ ಗೆಳೆಯರಾದ ತಾನಾಜಿ ಮಾನ್ಸುರೆ ಹಾಗೂ ಬಾಜಿ ಪ್ರಭುವನ್ನು ಹುರಿದುಂಬಿಸುತ್ತಾಳೆ. ಕೊನೆಗೆ 1674ರಲ್ಲಿ ಶಿವಾಜಿ ತನ್ನನ್ನು ಸ್ವತಂತ್ರ ರಾಜನೆಂದು ಘೋಷಿಸಿಕೊಳ್ಳುವುದನ್ನು ಕಣ್ತುಂಬ ನೋಡಿ 12ದಿನಗಳ ನಂತರ ತನ್ನ ತ್ಯಾಗ ಹಾಗೂ ಹೋರಾಟದ ದಿಟ್ಟ ಬದುಕಿಗೆ ವಿದಾಯ ಹೇಳುತ್ತಾಳೆ.

ಘಟನೆ2: ಬೆಟ್ಟಿ ಎಂಬ ಅಮೆರಿಕನ್ ಮಹಿಳೆ ಅಮೆರಿಕದಲ್ಲಿ ನೆಲೆಸಿದ್ದ ಡಾ.ಸಯ್ಯದ್ ಮೆಹಮೂದಿ ಎಂಬ ಇರಾನಿ ವೈದ್ಯನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಮೆಹ್‍ತಾಬ್ ಎಂಬ ಮುದ್ದು ಮಗಳ ತಾಯಿಯಾಗುವ ಅವಳನ್ನು ಮದುವೆಯಾದ ಏಳು ವರ್ಷಗಳ ನಂತರ ಗಂಡ ಮೊದಲಬಾರಿ ಇರಾನಿಗೆ ಹೊರಡಿಸುತ್ತಾನೆ. ಎರಡು ವಾರಗಳ ಕಾಲ ಟೆಹರಾನ್‍ನಲ್ಲಿದ್ದು ತನ್ನ ಬಂಧು-ಬಳಗ, ನೆಂಟರಿಷ್ಟರನ್ನು ಭೇಟಿಯಾಗಿ ಬಂದು ಬಿಡೋಣ ಎಂದು ಹೇಳಿ ಅವಳನ್ನು ಒಪ್ಪಿಸುತ್ತಾನೆ. 1984ರ ಆಗಸ್ಟ್ 3ರಂದು ಅಮೆರಿಕದಿಂದ ಹೊರಡುವ ಅವರು ಟೆಹರಾನ್‍ ತಲುಪುತ್ತಿದ್ದಂತೆ ಅವಳ ಹಾಗೂ ಮಗಳ ಪಾಸ್‍ಪೋರ್ಟ್‍ಗಳನ್ನು ಜೋಪಾನಮಾಡುವ ಸಲುವಾಗಿ ತೆಗೆದಿರಿಸಿಕೊಳ್ಳುತ್ತಾನೆ. ಅಲ್ಲಿಯ ಜನ, ವಾತಾವರಣ, ರೀತಿ-ನೀತಿಗಳಿಗೆ ಹೊಂದಿಕೊಳ್ಳಲು ತಿಣುಕಾಡುವ ತಾಯಿ-ಮಗಳು, ಎರಡು ವಾರ ತಾನೆ ಎಂದು ಸಮಾಧಾನ ತಂದುಕೊಳ್ಳುತ್ತಾರೆ. ಆದರೆ ಎರಡು ವಾರಗಳು ಕಳೆದರೂ ಹೊರಡುವ ಸೂಚನೆಯೇ ಸಿಗದಾದಾಗ ಚಡಪಡಿಸುವ ಬೆಟ್ಟಿಗೆ, ತಾನು ಅವರನ್ನು ಕರೆತಂದಿರುವುದು ಅಲ್ಲೇ ಶಾಶ್ವತವಾಗಿ ನೆಲೆಸಲು ಎಂಬ ಸತ್ಯವನ್ನು ಅರುಹುತ್ತಾನೆ ಮೆಹಮೂದಿ. ಅಷ್ಟು ಹೊತ್ತಿಗೆ, ಬದಲಾದ ಪರಿಸರವನ್ನು, ತಂದೆಯ ಹೊಸ ರೂಪವನ್ನು ಕಂಡು ನಾಲ್ಕು ವರ್ಷದ ಮೆಹ್‍ತಾಬ್ ಮಾನಸಿಕವಾಗಿ ಕುಗ್ಗಿಹೋಗಿರುತ್ತಾಳೆ. ತನ್ನೂರಿಗೆ ಹಿಂತಿರುಗೋಣ ಎಂದು ಹಪಹಪಿಸುತ್ತಾ ತಾಯಿಯನ್ನು ಹಿಡಿದು ರೋದಿಸುತ್ತಾಳೆ. ಅಧೀರಳಾಗುವ ಬೆಟ್ಟಿ ಅಮೆರಿಕೆಗೆ ಹಿಂತಿರುಗುವ ಸಾಧ್ಯತೆಗಳನ್ನು ಪರಿಶೀಲಿಸಲಾರಂಭಿಸುತ್ತಾಳೆ. ಗಂಡನ ಕಣ್ಣುತಪ್ಪಿಸಿ ಅಲ್ಲಿಯ ಅಮೆರಿಕದ ರಾಯಭಾರಿ ಕಛೇರಿಯನ್ನು ಸಹಾಯಕ್ಕಾಗಿ ಸಂಪರ್ಕಿಸಿದಾಗ ಮಗಳನ್ನು ಬಿಟ್ಟು ಅವಳೊಬ್ಬಳೇ ಹಿಂತಿರುಗಲು ಸಿದ್ಧಳಾದರೆ ಎಲ್ಲ ಸಹಾಯವೂ ಸಿಗುವ ಆಶ್ವಾಸನೆ ದೊರಕುತ್ತದೆ. ಯಾವ ಕಾರಣಕ್ಕೂ ಮಗಳನ್ನು ಬಿಟ್ಟು ಹೋಗುವುದಿಲ್ಲ ಎಂದು ಹಟಕ್ಕೆ ಬೀಳುವ ಬೆಟ್ಟಿ, ಹೋದರೆ ಮಗಳೊಂದಿಗೆ, ಇಲ್ಲದಿದ್ದರೆ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಾಳೆ. ಮೊದಮೊದಲು ಗಂಡನನ್ನು ವಿರೋಧಿಸಿ ಗೃಹಬಂಧನಕ್ಕೀಡಾಗುವ ಅವಳು ನಂತರ ಅವನಿಗೆ ತಾನು ಅಲ್ಲಿಯೇ ಇರಲು ಸಿದ್ಧ ಎಂದು ಹೇಳುತ್ತಾಳೆ. ಕ್ರಮೇಣ ತನ್ನ ವರ್ತನೆಯನ್ನು ಬದಲಾಯಿಸಿಕೊಂಡು ತಾನು ಅಲ್ಲಿಗೆ ಒಗ್ಗಿಕೊಳ್ಳುತ್ತಿದ್ದೇನೆ ಎಂಬ ನಂಬಿಕೆ ಮೂಡಿಸುತ್ತಾಳೆ. ಮಗಳನ್ನು ಅಲ್ಲೇ ಶಾಲೆಗೆ ಸೇರಿಸಿ ಅವಳನ್ನು ಕರೆದೊಯ್ಯುವ ನೆಪದಲ್ಲಿ ಅಲ್ಲಿಂದ ಪಾರಾಗುವ ಪ್ರಯತ್ನಕ್ಕೆ ತೊಡಗುತ್ತಾಳೆ. ಕೊನೆಗೆ ಸ್ಥಳೀಯನೊಬ್ಬನ ನೆರವಿನಿಂದ ಕಳ್ಳಸಾಗಾಣಿಕೆದಾರರ ತಂಡದೊಂದಿಗೆ ಟೆಹರಾನ್‍ನಿಂದ ಕಾರಿನಲ್ಲಿ ವೇಷಮರೆಸಿಕೊಂಡು ಹೊರಟು ದುರ್ಗಮವಾದ ಹಿಮಪರ್ವತಗಳನ್ನು ಕುದುರೆಯ ಮೇಲೇರಿ ದಾಟಿ ಮಗಳೊಂದಿಗೆ ಟರ್ಕಿ ತಲುಪುತ್ತಾಳೆ. ಒಂದಿಡೀ ವಾರ ತೆಗೆದುಕೊಳ್ಳುವ ಈ ಪ್ರಯಾಣ ಅವಳನ್ನು ಹಾಗೂ ಮಗಳನ್ನು ಶಾರೀರಿಕವಾಗಿ ಜರ್ಝರಿತಗೊಳಿಸುತ್ತದೆ. ಹಲವೆಡೆ ಕುಸಿದು, ಉರುಳಿ ಬಿದ್ದು, ಪ್ರಜ್ಞೆತಪ್ಪಿದರೂ ಮನದಾಳದಲ್ಲಿ ಬೇರುಬಿಟ್ಟ ಮಗಳನ್ನು ಕ್ಷೇಮವಾಗಿ ಮನೆ ತಲುಪಿಸುವ ಹಟ ಅವಳನ್ನು ಜೀವಂತವಾಗಿರಿಸುತ್ತದೆ. ಟರ್ಕಿಯ ಅಮೆರಿಕ ರಾಯಭಾರಿ ಕಛೇರಿಯ ನೆರವಿನೊಂದಿಗೆ 1986ರ ಫೆಬ್ರುವರಿ 7ರಂದು ಕೊನೆಗೂ ಕ್ಷೇಮವಾಗಿ ಅಮೆರಿಕ ತಲುಪುತ್ತಾಳೆ.

ಮೇಲಿನ ಎರಡೂ ಘಟನೆಗಳೂ ಬೇರೆಬೇರೆ ಕಾಲಘಟ್ಟದಲ್ಲಿ ಸಂಭವಿಸಿದಂಥವು. ಇಲ್ಲಿ ಧರ್ಮ,ದೇಶ, ಭಾಷೆ, ಆಚಾರ-ವಿಚಾರ ಎಲ್ಲವೂ ವಿಭಿನ್ನ ಹಾಗೂ ಗೌಣ. ಇರುವ ಒಂದೇ ಸಮಾನ ಅಂಶವೆಂದರೆ ಈರ್ವರಲ್ಲೂ ಪ್ರವಹಿಸುವ ತಾಯಿ ಎಂಬ ಶಕ್ತಿ.  ಆ ಶಕ್ತಿಯ ಮುಂದೆ ಬೇರೆಲ್ಲಾ ಲೆಕ್ಕಾಚಾರಗಳೂ ಹೇಗೆ ತಲೆಕೆಳಗಾಗುತ್ತವೆ, ವೈಪರೀತ್ಯಗಳೆಲ್ಲಾ ಹೇಗೆ ಸೊಂಟ ಮುರಿದುಕೊಂಡು ಸೋಲುತ್ತವೆ ಎಂಬುದಕ್ಕೆ ಇವು ನಿದರ್ಶನಗಳಷ್ಟೇ.

ಅಂಥ ತಾಯಿಯರನ್ನು ನೆನೆಯುವ, ಅಭಿನಂದಿಸುವ ಸಲುವಾಗಿ ಬಹಳಷ್ಟು ರಾಷ್ಟ್ರಗಳು ಮೇ ತಿಂಗಳ ಎರಡನೆಯ ಭಾನುವಾರವನ್ನು ತಾಯಿಯರ ದಿನವನ್ನಾಗಿ ಆಚರಿಸುತ್ತವೆ.

ಈ ತಾಯಿಯರ ದಿನ ಶುರುವಾದದ್ದೂ ಒಂದು ವಿಚಿತ್ರ ಸನ್ನಿವೇಶದಿಂದಲೇ. 1861ರ ಏಪ್ರಿಲ್ 12ರಿಂದ ಹಿಡಿದು 1865ರ May 10ರ ವರೆಗೂ ನಡೆದ ಅಮೆರಿಕದ ಯುದ್ಧದಲ್ಲಿ ಸುಮಾರು 6ಲಕ್ಷ ಯೋಧರು ಮಡಿದಿದ್ದರು. ಯುದ್ಧದ ಪರಿಣಾಮ ಎಲ್ಲೆಡೆ ಟೈಫಾಯಿಡ್‍ನಂಥ ರೋಗರುಜಿನಗಳು ಹರಡತೊಡಗಿದ್ದವು. ಇದನ್ನು ಹತೋಟಿಗೆ ತಂದು ಜನರಿಗೆ ನೆರವಾಗುವ ಸಲುವಾಗಿ 1868ರಲ್ಲಿ ಆನ್ ಜಾರ್ವಿಸ್ ಎಂಬ ಮಹಿಳೆ ಯುದ್ಧದಲ್ಲಿ ಮಡಿದ ಯೋಧರ ತಾಯಂದಿರನ್ನು ಕಲೆ ಹಾಕಿ ಕಾರ್ಯಕಾರಿ ಸಮಿತಿಯೊಂದನ್ನು ಸ್ಥಾಪಿಸಿದಳು. ಕ್ರಿಯಾಶೀಲಳಾಗಿ ಸಮಾಜ ಸೇವೆ ಮಾಡಿ ನಂತರ 1905ನಲ್ಲಿ ಮರಣ ಹೊಂದಿದಳು. ಅವಳ ನೆನಪಿನಲ್ಲಿ ಮಗಳು ಅನ್ನಾ ಜಾರ್ವಿಸ್ 1908ರಲ್ಲಿ ಮೊದಲ ಬಾರಿ ತಾಯಿಯರ ದಿನವನ್ನು ಆಚರಣೆಗೆ ತಂದಳು. ಸೇವಾಮನೋಭಾವ ಪಸರಿಸಲೆಂದು ಅನ್ನಾ ಶುರುಮಾಡಿದ ಆಂದೋಲನ ನೋಡನೋಡುತ್ತಿದ್ದಂತೆ ದೊಡ್ಡ ಸಂಭ್ರಮಾಚರಣೆಯಾಗಿ ಉಡುಗೊರೆ ಹಾಗೂ ಗ್ರೀಟಿಂಗ್ ಕಾರ್ಡ್‍ಗಳ ವಿನಿಮಯಕ್ಕೆ ಸೀಮಿತವಾಗಿಹೋಯಿತು. ಬೇಸತ್ತ ಅನ್ನಾ ಅದನ್ನು ಪ್ರತಿಭಟಿಸುತ್ತಲೇ, ತಾನದನ್ನು ಆಚರಣೆಗೆ ತರಲೇಬಾರದಿತ್ತು ಎಂದು ಕೊರಗುತ್ತಲೇ 1948ರಲ್ಲಿ ಪ್ರಾಣ ಬಿಟ್ಟಳು.
ಹೀಗೆ ಅಮೆರಿಕದಲ್ಲಿ ಶುರುವಾದ ಆಚರಣೆ ಇತರೆ ರಾಷ್ಟ್ರಗಳಿಗೂ ಸೋಕಿ ಅವೂ ಇದರಲ್ಲಿ ಅರ್ಥ ಕಂಡುಕೊಂಡವು. ಅಮೆರಿಕಕ್ಕೂ ಮೊದಲೇ ಇಂಥ ಆಚರಣೆ ಹೊಂದಿದ್ದ ಬ್ರಿಟನ್ ಹಾಗೂ ಗ್ರೀಸ್ ದೇಶಗಳೂ ಕೆಲ ಮಾರ್ಪಾಡು ಮಾಡಿಕೊಂಡವು.

ಅಮೆರಿಕದಿಂದ ಫ್ರೆಂಡ್‍ಶಿಪ್ ಡೇ, ವ್ಯಾಲೆಂಟೈನ್‍‍ಡೇಗಳನ್ನು ಬಹಳ ಹಿಂದೆಯೇ ಎರವಲು ಪಡೆದಿರುವ ನಮಗೆ ಈ ದಿನದ ಬಗ್ಗೆ ಅಕ್ಕರಾಸ್ಥೆಮೂಡುತ್ತಿರುವುದು ತೀರಾ ಇತ್ತೀಚೆಗೆ. ಬೇರೆ ದೇಶಗಳಂತೆ ನಾವು ಇದನ್ನು ಓರ್ವ ತಾಯಿ ಅಥವಾ ಒಂದು ಸಂಘಟನೆಗೆ ಮೀಸಲಿಟ್ಟಿಲ್ಲ. ಉದಾಹರಣೆಗೆ ಇಸ್ರೇಲ್ ತಾಯಿಯರ ದಿನವನ್ನಾಚರಿಸುವುದು ಹೆನ್ರಿಟಾ ಜೋಲ್ಡ್ ಎಂಬ ಮಹಿಳೆಯ ನೆನಪಿನಲ್ಲಿ. ತನಗೆ ಸ್ವಂತ ಮಕ್ಕಳಿಲ್ಲದಿದ್ದರೂ ಜರ್ಮನಿಯ ನಾಜಿಗಳ ಕೈಯಿಂದ ಅನೇಕ ಯಹೂದಿ ಮಕ್ಕಳನ್ನುಳಿಸಿದ ಅವಳಿಗೆ ಈ ದಿನವನ್ನರ್ಪಿಸುವುದು ಅವರಿಗೆ ಸೂಕ್ತವಾಗಿ ಕಂಡಿತು.

ಹಾಗೆಂದು ನಮ್ಮಲ್ಲಿ ತ್ಯಾಗ,ಆದರ್ಶ,ಸ್ಫೂರ್ತಿಗಳ ಸಾಕಾರರೂಪವಾದ ತಾಯಿಯರಿಗೆ ಬರವಿಲ್ಲ! ಪತಿ ವಿಶ್ವನಾಥದತ್ತರು ಅಕಾಲ ಮರಣವನ್ನಪ್ಪಿದಾಗ ಶ್ರೀಮಂತಿಕೆಯಿಂದ ದಟ್ಟದಾರಿದ್ರ್ಯಕ್ಕೆ ಕಾಲಿಟ್ಟ ಭುವನೇಶ್ವರಿದೇವಿಯವರು ಸಂಸಾರದ ನೊಗವನ್ನು ಬಲವಂತವಾಗಿ ಹಿರಿಯ ಮಗನ ಹೆಗಲಿಗೇರಿಸಿದ್ದರೆ ನರೇಂದ್ರನಾಥದತ್ತ ಸ್ವಾಮಿ ವಿವೇಕಾನಂದರಾಗುತ್ತಿರಲಿಲ್ಲ! ಎಳವೆಯಿಂದಲೇ ಧಮನಿ-ಧಮನಿಗಳಲ್ಲಿಯೂ ದೇಶಪ್ರೇಮವನ್ನು ಹರಿಸಿಕೊಂಡು ಓಡಾಡುತ್ತಿದ್ದ ಮಗನನ್ನು ತಾಯಿ ವಿದ್ಯಾವತಿ ಆತಂಕದಿಂದ, ಪುತ್ರಮೋಹದಿಂದ ತನ್ನ ಮಡಿಲಿನಲ್ಲೇ ಕಟ್ಟಿಹಾಕಿಬಿಟ್ಟಿದ್ದರೆ ಭಗತ್‍ ಸಿಂಗ್‍ ಎಂಬ ಸಿಂಹ ತನ್ನ 23ನೆಯ ವಯಸ್ಸಿಗೇ ಬಲಿಯಾಗಿ ಎಲ್ಲರಲ್ಲೂ ಸ್ವಾತಂತ್ರ್ಯದ ಕಿಚ್ಚು ಹಚ್ಚುತ್ತಿರಲಿಲ್ಲ! ಹಾಗೆ ನೋಡಿದರೆ ಪ್ರತಿ ತಾಯಿಯೂ ಅಭಿನಂದನಾರ್ಹಳೇ. ನಿಸ್ವಾರ್ಥಿಯಾಗಿ ತನ್ನ ಮಕ್ಕಳ ಏಳಿಗೆ ಬಯಸುತ್ತ, ಬದುಕು ತನಗೆ ಕಲಿಸಿದ ಪಾಠದ ರಾಶಿಯನ್ನು ಅವರ ಮುಂದೆ ಸುರಿದು, ಸಂದರ್ಭ ಬಂದಾಗಲೆಲ್ಲಾ ಒಂದೊಂದನ್ನೇ ಹೆಕ್ಕಿಕೊಟ್ಟು ಅವರನ್ನು ಮುನ್ನಡೆಸುತ್ತಾಳೆ.

ಆದರೂ ನಮ್ಮ ಕಣ್ಣು ತೇವಗೊಳ್ಳುವುದು 1999ರ ಕಾರ್ಗಿಲ್ ಯುದ್ಧದ ಮೊದಲ ಬಲಿಯಾದ 22ರ ಹರೆಯದ ಸೌರಭ್ ಕಾಲಿಯಾನ ತಾಯಿ ವಿಜಯ್ ಕಾಲಿಯಾರನ್ನು ನೋಡಿದಾಗ. ಪಾಕಿಸ್ತಾನದವರ ಕೈಗೆ ಸಿಕ್ಕು ಬರೋಬ್ಬರಿ 22ದಿನಗಳ ಕಾಲ ಅಸಹನೀಯ ಯಾತನೆಯನ್ನನ್ನುಭವಿಸಿ ಪ್ರತಿಸಲ ಅಮ್ಮಾ ಎಂದು ಚೀರುತ್ತಿದ್ದಾಗ ಈ ತಾಯಿಯ ಕರುಳೆಷ್ಟು ಬೆಂದಿರಬೇಕು? ನಮ್ಮ ಹೃದಯ ಮಿಡುಕುವುದು ನವೆಂಬರ್ 2008ರ ಮುಂಬೈ ದಾಳಿಯಲ್ಲಿ ಮಡಿದ 31ರ ಹರೆಯದ ಮೇಜರ್ ಸಂದೀಪ್ ಉನ್ನಿಕೃಷ್ಣನ್ನ ತಾಯಿ ಧನಲಕ್ಷ್ಮಿಯವರನ್ನು ನೆನೆದಾಗ. ಗಂಟಲ ಸೆರೆಯುಬ್ಬಿಬರುವುದು ಮೊನ್ನೆ ಏಪ್ರಿಲ್ 25ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಕದನದಲ್ಲಿ ಮಡಿದ 31ರ ಹರೆಯದ ಮುಕುಂದ್ ವರದರಾಜನ್ನ ತಾಯಿ ಗೀತಾರ ಮಾತುಗಳನ್ನು ಕೇಳಿದಾಗ.

ತಮ್ಮ ಭಯವನ್ನು ಬದಿಗೊತ್ತಿ ಮಕ್ಕಳ ಆಸೆಗೆ ಅಡ್ಡಬರದೆ ಜೀವವನ್ನು ಅಂಗೈಯಲ್ಲಿ ಹಿಡಿದು ಅವರನ್ನು ದೇಶಸೇವೆಗೆ ಅರ್ಪಿಸುವ ಈ ತಾಯಿಯರ ಧೈರ್ಯವನ್ನು ಅಳೆಯಲು ಯಾವ ಅಳತೆಗೋಲಿದೆ? ಎದೆಯುದ್ದಕ್ಕೂ ಬೆಳೆದ ಮಕ್ಕಳು ಶವವಾಗಿ ಬರುವುದನ್ನು ಕಾಣುತ್ತಲೇ ಕಂಗಳಲ್ಲಿ ಶೂನ್ಯ ತುಂಬಿಕೊಳ್ಳುವ ಇವರನ್ನು ಸಮಾಧಾನಿಸಬಲ್ಲ ಯಾವ ದಿವ್ಯೌಷಧ ಲಭ್ಯವಿದೆ?  ಇವರ ತ್ಯಾಗಕ್ಕೆ ಸಾಟಿಯಾಗಬಲ್ಲ ಯಾವುದೂ ನಮ್ಮ ಬಳಿಯಿಲ್ಲ. ಕಡೇಪಕ್ಷ ಈ ದಿನವನ್ನು ಇವರಿಗೆ ಮೀಸಲಿಟ್ಟು, ಇವರ ತ್ಯಾಗ ನಮಗೆ ಅರ್ಥವಾಗಿ ನಾವೂ ಸ್ಪಂದಿಸುತ್ತಿದ್ದೇವೆಂಬ ಭಾವವನ್ನಾದರೂ ಮೂಡಿಸ ಬಹುದಲ್ಲವೇ?

Sunday, 4 May 2014

ಸಿನಿಮಾದವರಿಗೇಕೆ ಸೆಕ್ಯುಲರಿಸಂ ಉಸಾಬರಿ?

ಇಷ್ಟು ದಿನ ಸೆಕ್ಯುಲರಿಸಂ ಎಂಬ ಹಳಸಲು ಪದವನ್ನು ರಾಜಕಾರಣಿಗಳ ಬಾಯಲ್ಲಿ ಕೇಳಿಕೇಳಿ ನಮಗೆ ತಲೆ ಚಿಟ್ಟು ಹಿಡಿದು ಹೋಗಿತ್ತು. ಇದೇ ಸೆಕ್ಯುಲರಿಸಂ ಸಲುವಾಗಿ ನಮ್ಮ ರಾಜ್ಯದ ಸ್ವಘೋಷಿತ ಬುದ್ಧಿಜೀವಿಗಳು, ಮಾಜಿ ಸಾಹಿತಿಗಳು ಮೈಮೇಲೆ ಮುಕ್ಕೋಟಿ ದೇವರುಗಳನ್ನೂ ಬರಿಸಿಕೊಂಡು ಚುನಾವಣೆಯ ಪ್ರಚಾರಕ್ಕಿಳಿದಾಗ ನಮಗೆ ಸಿಕ್ಕಾಪಟ್ಟೆ ನಗೆಯೂ ಬಂದಿತ್ತು. ಪಾಪ, ಸಾಹಿತ್ಯ ಕೃಷಿಗೆ ಬೇಕಾದ ದಾಸ್ತಾನು ಖಾಲಿಯಾಗಿರುವಾಗ ಸುದ್ದಿಯಲ್ಲಿರಲು ಉದ್ಯೋಗವೇನಾದರೂ ಬೇಕೇ ಬೇಕಲ್ಲ! ಆದರೆ ಅಂಜುಂ ರಾಜಬಲಿ ಎಂಬ ಚಿತ್ರಕಥೆಗಾರ ಒಂದಷ್ಟು ಬಾಲಿವುಡ್ ಮಂದಿಯ ಗುಂಪು ಕಟ್ಟಿಕೊಂಡು ನಮಗೆಲ್ಲಾ ಸೆಕ್ಯುಲರಿಸಂನ ಪಾಠ ಮಾಡಲು ಶುರುವಿಟ್ಟುಕೊಂಡಿರುವುದು ಅದೇಕೋ ಅಸಾಧ್ಯ ಸಿಟ್ಟು ತರಿಸುತ್ತಿದೆ.

ಸೆಕ್ಯುಲರಿಸಂ ಎಂಬುದು 17ನೇ ಶತಮಾನದಷ್ಟು ಹಿಂದೆಯೇ ಐರೋಪ್ಯ ರಾಷ್ಟ್ರಗಳಲ್ಲಿ ಕ್ರೈಸ್ತ ಧರ್ಮ ಹೇರುತ್ತಿದ್ದ ಅಪಾರ ನಿಬಂಧನೆಗಳಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಆಲೋಚನಾ ಸರಣಿ. ಆಡಳಿತ, ವಿಜ್ಞಾನ-ತಂತ್ರಜ್ಞಾನ ಹಾಗೂ ಒಟ್ಟಾರೆ ಸಮಾಜದ ಅಭಿವೃದ್ಧಿ, ಎಲ್ಲವೂ ಕ್ರೈಸ್ತ ಧರ್ಮ‍ಕ್ಕನುಗುಣವಾಗಿ ನಡೆಯಬೇಕು ಹಾಗೂ ಸಂಪೂರ್ಣವಾಗಿ ಅದರ ಅಧೀನದಲ್ಲಿರಬೇಕು ಎಂದು ಬಯಸಿದ್ದ ಕೆಲ ಧರ್ಮಾಂಧರನ್ನು ವಿರೋಧಿಸುವ ಪ್ರಕ್ರಿಯೆಯಾಗಿ ಆರಂಭವಾಗಿದ್ದು. ಕ್ರಮೇಣ ಗೆಲಿಲಿಯೊನಂಥ ಹಲವು ವಿಜ್ಞಾನಿಗಳನ್ನು, ಹೊಸತನದ ಪ್ರತಿಪಾದಕರನ್ನು ಬಲಿ ಪಡೆದು ಧರ್ಮವನ್ನು ಆಡಳಿತದಿಂದ ಪೂರ್ತಿಯಾಗಿ ಬೇರ್ಪಡಿಸುವ ಒಂದು ಮಾರ್ಗವಾಗಿ ಹೊಮ್ಮಿದ್ದು. ಇದಕ್ಕೆ ಅಧಿಕೃತವಾಗಿ ಸೆಕ್ಯುಲರಿಸಂ ಎಂದು 19ನೇ ಶತಮಾನದಲ್ಲಿ ನಾಮಕರಣ ಮಾಡಿದ್ದು ಬ್ರಿಟನ್‍ನ ಬರಹಗಾರ ಜಾರ್ಜ್ ಜೇಕಬ್. ಒಟ್ಟಾರೆ ಈ ತತ್ವದ ಉದ್ದೇಶ ಧರ್ಮವನ್ನು ರಾಜಕಾರಣದಿಂದ ಪ್ರತ್ಯೇಕಿಸಿ, ಆಡಳಿತಯಂತ್ರಕ್ಕೆ ಬೇಕಾದ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟು, ಹೊಸ ಚಿಂತನೆ ಆವಿಷ್ಕಾರಗಳನ್ನು ಉತ್ತೇಜಿಸುವುದಾಗಿತ್ತು. ಒಂದೆಡೆ ಧರ್ಮ ಎಲ್ಲೂ ಕಡೆಗಣಿಸಲ್ಪಡದೆ ಮನುಕುಲದ ಏಳ್ಗೆಗೆ ಬೆಳಕು ತೋರುವ ದೀವಿಗೆ ಮಾತ್ರವಾಗಿ ತನ್ನ ಘನತೆಯನ್ನುಳಿಸಿಕೊಂಡರೆ ಮತ್ತೊಂದೆಡೆ ನಿಜವಾದ ಅರ್ಥದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಹಾಗೂ ಅಭಿವೃದ್ಧಿಯನ್ನು ಸಾಧ್ಯವಾಗಿಸುವ ಸಮಯೋಚಿತ ಕಲ್ಪನೆ ಇದಾಗಿತ್ತು.

ಇದನ್ನು ಭಾರತದಲ್ಲಿ ಮೊಟ್ಟ ಮೊದಲ ಬಾರಿ ಅಳವಡಿಸಿಕೊಂಡವನು ಪಂಜಾಬಿನ ಮಹಾರಾಜ ರಣಜೀತ್ ಸಿಂಗ್. ಅವನು ತನ್ನ ದರ್ಬಾರನ್ನು ಹಿಂದು, ಮುಸ್ಲಿಂ ಹಾಗೂ ಸಿಖ್ಖರ ನೇತೃತ್ವದಲ್ಲಿ ನಡೆಸಿ ರಾಜ್ಯವನ್ನು ಎಲ್ಲ ರೀತಿಯಿಂದಲೂ ಶ್ರೀಮಂತಗೊಳಿಸಿದನು. ಅಂಥ ಹಿನ್ನೆಲೆಯಿಂದ ಶುರುವಾದ ಈ ಸರಳ ಸೂತ್ರವನ್ನು ಈಗ ನಾವೆಷ್ಟು ಜಟಿಲಗೊಳಿಸಿದ್ದೇವೆ ನೋಡಿ. ಬಿಡಿಬಿಡಿಯಾಗಿರಬೇಕಾದ ಧರ್ಮ ಹಾಗೂ ಸೆಕ್ಯುಲರಿಸಂಗಳನ್ನು ಒಟ್ಟಿಗೆ ಸೇರಿಸಿ ಗೋಜಲು ಮಾಡಿಬಿಟ್ಟಿದ್ದೇವೆ. ಎರಡನ್ನೂ ಬಿಡಿಸಿ ಅದರದರ ಸ್ವಸ್ಥಾನಕ್ಕೆ ಸೇರಿಸುವ ಬಗೆ ಹೇಗೆಂದು ಚಿಂತಿಸಬೇಕಾದ ನಮ್ಮ ರಾಜಕೀಯ ನಾಯಕರುಗಳಿಗೆ ಜಾಣಕುರುಡಿನಿಂದಾಗಿ ಏನೂ ಕಾಣಿಸುತ್ತಿಲ್ಲ. ಇನ್ನು ಇರುವ ಬುದ್ಧಿಮತ್ತೆಯನ್ನೆಲ್ಲಾ ಸತ್ಯವನ್ನು ತಿರುಚುವುದಕ್ಕೇ ಖರ್ಚು ಮಾಡಿ ಖಾಲಿಮಾಡಿಕೊಳ್ಳುತ್ತಿರುವ ನಮ್ಮ ಬುದ್ಧಿಜೀವಿಗಳಿಗೆ ಪ್ರಾಮಾಣಿಕವಾದ ಆಸಕ್ತಿ ಲವಲೇಶವೂ ಇಲ್ಲ.

ಹಾಗಾಗಿ, ನಾವೂ ಒಂದು ಕೈ ನೋಡೇಬಿಡೋಣ ಎಂದು ಬಾಲಿವುಡ್‍ನ ಸೆಕ್ಯುಲರಿಸಂ ಪಾಠದ ಮೇಷ್ಟರಾಗಿ ಅಂಜುಂ ರಾಜಬಲಿ ರಂಗಪ್ರವೇಶ ಮಾಡಿದ್ದಾರೆ. ಅದೂ ಹೇಗೆ - ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ತಾವೇ ರಚಿಸಿದ ಲಿಖಿತ ಅಹವಾಲಿನೊಂದಿಗೆ! 20 ವರ್ಷಗಳಿಂದ ಚಿತ್ರಕಥೆಗಾರರಾಗಿ ನುರಿತಿರುವ ಇವರ ಅಹವಾಲಿನ ಸಾರಾಂಶ ಇಷ್ಟೆ: "ಒಂದು ದಶಕದಿಂದ ನಾವು ಕಂಡಿರುವ ಅಸಮರ್ಪಕ ಆಡಳಿತ, ಮಿತಿಮೀರಿದ ಭ್ರಷ್ಟಾಚಾರಗಳು ಕಾಳಜಿಯ ವಿಷಯ ಹೌದಾದರೂ ಅದ್ಯಾವುದೂ ಸೆಕ್ಯುಲರಿಸಂಗೆ ಧಕ್ಕೆ ತಂದಿಲ್ಲ. ದೇಶದ ಪ್ರಶ್ನೆ ಬಂದಾಗ ನಾವು ಯಾವುದರಲ್ಲಾದರೂ ರಾಜಿ ಮಾಡಿಕೊಂಡೇವು ಆದರೆ ಸೆಕ್ಯುಲರಿಸಂ ವಿಷಯದಲ್ಲಲ್ಲ. ಆದ್ದರಿಂದ ನಾವೆಲ್ಲರೂ ಸೆಕ್ಯುಲರ್ ಪಕ್ಷಕ್ಕೇ ಮತ ಹಾಕಬೇಕು". ಗುಜರಾತ್‍ನ ಅಭಿವೃದ್ಧಿಯೇ ಒಂದು ಕಟ್ಟು ಕಥೆ ಎನ್ನುವ ಇವರು ಮೋದಿಯನ್ನು ಬೆಂಬಲಿಸಬಾರದು ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೋಗಲಿ ಯಾವ ಪಕ್ಷ ಸೆಕ್ಯುಲರ್ ಹೇಳಿ ಅದಕ್ಕೇ ಮತ ಹಾಕುತ್ತೇವೆ ಎಂದರೆ ಇಂಥದೇ ಪಕ್ಷ ಎಂದು ಬೊಟ್ಟು ಮಾಡಿಯೂ ತೋರಿಸುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ದೇಶದ ಕಾಳಜಿಯ ಸಮಸ್ತ ಭಾರವನ್ನೂ ತಾವೇ ಹೊತ್ತಂತೆ ತಮ್ಮ ಅಹವಾಲಿಗೆ ಸಿನಿಮಾ ಮಂದಿಯ ಸಹಿ ಸಂಗ್ರಹಣೆಯಲ್ಲಿ ತೊಡಗಿದ್ದಾರೆ! ಇವರನ್ನು ಬೆಂಬಲಿಸಿ ಸಹಿ ಮಾಡಿರುವವರಲ್ಲಿ ಮಹೇಶ್ ಭಟ್, ನಂದಿತಾ ದಾಸ್, ಇಮ್ತಿಯಾಜ್ ಅಲಿ, ತೀಸ್ತಾ ಸೇತಲ್ವಾಡ್ ಮುಂತಾದ ಮಹಾರಥಿಗಳಿದ್ದಾರೆ.

ಇವರ ಚಿತ್ರಕಥೆಗಳನ್ನು ಮೆಚ್ಚಿದ ಮಾತ್ರಕ್ಕೆ ಇತರೆ ನೀತಿಕಥೆಗಳಿಗೆ ತಲೆಯಾಡಿಸಲಾಗದೆಂದು ಇವರಿಗೇಕೆ ಅರ್ಥವಾಗುವುದಿಲ್ಲ? ಇಂದು ಚಿತ್ರವೊಂದು ಫ್ಲಾಪ್ ಆದರೆ ಫಾರ್ಮುಲಾ ಬದಲಾಯಿಸಿ ನಾಳೆ ಮತ್ತೊಂದು ಹಿಟ್ ಚಿತ್ರ ಮಾಡಬಹುದು. ಆದರೆ ಭ್ರಷ್ಟಾಚಾರ, ಅಸಮರ್ಪಕ ಆಡಳಿತ ಅಡ್ಡಿಯಿಲ್ಲ ಎಂಬ ಇವರ ಮಾತನ್ನು ನಂಬಿದರೆ ನಾಳೆ ದೇಶವೇ ದುರಂತಕಥೆಯಾಗಿ ಹೋಗುತ್ತದಲ್ಲಾ, ಇವರು ಸರಿ ಮಾಡುತ್ತಾರಾ? ರಾಜಕಾರಣದಲ್ಲಿ ಸೆಕ್ಯುಲರಿಸಂ ಬಿಟ್ಟು ಉಳಿದದ್ದೆಲ್ಲಾ ಗೌಣ ಎನ್ನುವ ಇವರೇಕೆ ‘ರಾಜನೀತಿ’, ‘ಸತ್ಯಾಗ್ರಹ’ದಂಥ ಚಿತ್ರಗಳನ್ನು ಮಾಡಿದ್ದಾರೆ?

ಬಾಲಿವುಡ್‍ನಲ್ಲಂತೂ ಸೆಕ್ಯುಲರಿಸಂ ಮೊದಲಿನಿಂದಲೂ ಹಾಸುಹೊಕ್ಕಾಗಿದೆ. ನಾವೆಂದೂ ಕಲೆಯನ್ನು ಧರ್ಮದ ನೆಲೆಯಲ್ಲಿ ಪ್ರತ್ಯೇಕಿಸಿ ನೋಡಿಯೇ ಇಲ್ಲ. ದೇವಾನಂದ್‍ರನ್ನು ಆರಾಧಿಸಿದಷ್ಟೇ ದಿಲೀಪ್ ಕುಮಾರ್‍ರನ್ನೂ (ಅವರ ನಿಜನಾಮಧೇಯ ಮೊಹಮ್ಮದ್ ಯೂಸುಫ್ ಖಾನ್ ಎಂದು ಗೊತ್ತಿದ್ದೂ) ಆರಾಧಿಸಿದ್ದೇವೆ. ನೂತನ್‍‍‍ಳಿಗೆ ಸಿಕ್ಕ ಪ್ರೀತಿಯೇ ನರ್ಗೀಸ್‍ಗೂ ಸಿಕ್ಕಿದೆ. ಇಳಯರಾಜರ ಸಂಗೀತವನ್ನು ಆಸ್ವಾದಿಸುವಷ್ಟೇ ಎ.ಆರ್.ರೆಹಮಾನ್‍ರ ಸಂಗೀತವನ್ನೂ ಆಸ್ವಾದಿಸುತ್ತೇವೆ. ಹೃತಿಕ್ ರೋಷನನಷ್ಟೇ ಅಮೀರ್ ಖಾನನೂ ನಮಗೆ ಅಚ್ಚುಮೆಚ್ಚು. ಧರ್ಮವನ್ನು ನೆಪವಾಗಿಸದೆ ಪ್ರತಿಭೆಯೊಂದಕ್ಕೇ ಮಣೆ ಹಾಕುತ್ತಾ ಬಂದಿರುವ ನಮ್ಮ ಹೃದಯ, ನರನಾಡಿಗಳಲ್ಲಿ ಹರಿಯುತ್ತಿರುವುದು ಸೆಕ್ಯುಲರಿಸಂ ಅಲ್ಲದೆ ಮತ್ತೇನು? ಈಗ ಇವರಿಂದ ಹೊಸದಾಗಿ ಕಲಿಯುವಂಥದ್ದೇನಿದೆ?

ಧಿಡೀರನೆ ಬಾಲಿವುಡ್‍ನಿಂದ ಬಂಗೀಜಂಪ್ ಮಾಡಿ ಚುನಾವಣೆಯ ಸಲುವಾಗಿ ಸಹಿ ಸಂಗ್ರಹಣೆಗೆ ನಿಲ್ಲುವಂಥ ತುರ್ತು ಪರಿಸ್ಥಿತಿ ಈಗೇನು ಬಂದಿರುವುದು? ಕಳೆದ ಜುಲೈನಲ್ಲಿ ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡು ಲಕ್ಷಾಂತರ ಮಂದಿಯನ್ನು ಗತಿಗೆಡಿಸಿದ ಉತ್ತರಾಖಂಡದ ಜಲಪ್ರಳಯವಾದಾಗ 'ಹ್ಯೂಮನಿಸಂ'ನ ಪಾಠ ಮಾಡಲು ಇವರೇಕೆ ಬರಲಿಲ್ಲ? ಈಗ ಕರೆದುಕೊಂಡು ಬಂದಿರುವ ದಂಡು-ದಾಳಿಯನ್ನು ಆಗಲೇ ಕರೆದುಕೊಂಡು ಬರಬಹುದಿತ್ತಲ್ಲ! ಬರೀ ಸಹಿಯೇನು, ಸಾಕಷ್ಟು ದೇಣಿಗೆಯನ್ನೂ ಸಂಗ್ರಹಿಸಿ ಸಂತ್ರಸ್ತರಿಗೆ ನೆರವಾಗಬಹುದಿತ್ತಲ್ಲ!

ಈ ಮಹಾಚುನಾವಣೆಯಲ್ಲಿ ಇನ್ನೆಲ್ಲಿ ಜನ ದಿಕ್ಕು ತಪ್ಪುತ್ತಾರೋ ಎಂಬ ಕಳಕಳಿಯಿರುವ ಇವರಿಗೆ ಹಂತ ಹಂತವಾಗಿ ನಮ್ಮನ್ನು ದಿಕ್ಕುತಪ್ಪಿಸುತ್ತಿರುವ ಬಾಲಿವುಡ್‍ನ ಇತ್ತೀಚಿನ ಬೆಳವಣಿಗೆಗಳೇಕೆ ಕಾಣುತ್ತಿಲ್ಲ? ಬಾಲಿವುಡ್ ಇಂದು ಕಲೆಯನ್ನು ಮೀರಿದ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಒಂದು ಚಿತ್ರ ವಿಶ್ವದೆಲ್ಲೆಡೆ ಬಿಡುಗಡೆಯಾಗಿ ಸುಮಾರಾಗಿ ವೀಕ್ಷಿಸಲ್ಪಟ್ಟರೂ ಒಂದು ವಾರದೊಳಗೆ 100 ಕೋಟಿಯನ್ನು ಸಲೀಸಾಗಿ ಸಂಪಾದಿಸಿಬಿಡುತ್ತದೆ. ಪ್ರತಿ ಚಿತ್ರದಿಂದ ಬರುವ ಆದಾಯದ ಶೇಕಡ 70 ರಷ್ಟು ಹುಟ್ಟುವುದು ವಿದೇಶಗಳಲ್ಲಿ ಮಾರಾಟವಾಗುವ ಟಿಕೆಟ್‍ಗಳಿಂದಲೇ. ಹಾಗಾಗಿ ದೇಶೀಯ ಸೊಗಡು ಬಲಿಯಾಗಿ ಎಲ್ಲೆಲ್ಲೂ ಪಾಶ್ಚಾತ್ಯ ಸಂಸ್ಕೃತಿ, ಆಧುನಿಕತೆಗಳೇ ತಾಂಡವವಾಡುತ್ತಿವೆ. ಚಿತ್ರದ ಗುಣಮಟ್ಟಕ್ಕಿಂತ ಯಾರು ಯಾರ ಜೊತೆ ಯಾವಾಗ ಯಾವ ಕಲರ್ ಬಿಕಿನಿಯಲ್ಲಿ ಕಾಣಿಸಿಕೊಂಡರು ಎಂಬುದೇ ಹೆಚ್ಚು ಚರ್ಚಿತವಾಗುತ್ತಿದೆ. ಆಧುನಿಕತೆಯನ್ನು ಅಭಿನಯಿಸುತ್ತಾ, ಅನುಭವಿಸುತ್ತಾ ಅದನ್ನೇ ವಾಸ್ತವಕ್ಕೂ ಅಳವಡಿಸಿಕೊಳ್ಳುತ್ತಿರುವ ನಮ್ಮ ನಟ-ನಟಿಯರು ಹಲವಾರು ವರ್ಷಗಳ ತಮ್ಮ ದಾಂಪತ್ಯವನ್ನು ಮುರಿಯುವುದಕ್ಕೂ ಹೇಸುತ್ತಿಲ್ಲ! ಇವರದೇ ಈ ಕಥೆಯಾದರೆ ತೊಡುವ ದಿರಿಸಿನಿಂದ ಹಿಡಿದು ಕಾಣುವ ಕನಸಿನವರೆಗೂ ಇವರನ್ನೇ ಅನುಕರಿಸುವ ನಮ್ಮ ಯುವಪೀಳಿಗೆ ಏನಾಗಬೇಕು?

ಒಂದು ಕಾಲಕ್ಕೆ ‘ಸಾರಾಂಶ್‍’ನಂಥ ಅಮೋಘ ಚಿತ್ರ ನೀಡಿದ್ದ ಮಹೇಶ್ ಭಟ್ ಇಂದು ಬಿಗ್‍ಬಾಸ್‍ನ ತುಂಬಿದ ಮನೆಯಲ್ಲಿ ಸನ್ನಿ ಲಿಯೋನಿಯಂಥ 'ಬೇಬಿಡಾಲ್'ಗೆ ಅವಕಾಶ ನೀಡಲು ಹಾತೊರೆಯುತ್ತಾರಲ್ಲ, ಅಂಥ ದರಿದ್ರವೇನು ಬಂದಿರುವುದು ಬಾಲಿವುಡ್‍ಗೆ? ಅವರವರ ಕಾರ್ಯಕ್ಷೇತ್ರಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ನಮ್ಮ ಸಂಸ್ಕೃತಿ, ಮನಸ್ಥಿತಿಗೆ ಸರಿ ಹೊಂದದವರನ್ನು ನಮ್ಮ ಮೇಲೆ ಹೇರುವಾಗ ಇದರ ಪರಿಣಾಮವೇನಾಗಬಹುದೆಂಬ ಸಾಮಾಜಿಕ ಕಳಕಳಿ ಬೇಡವೇ? ಇಷ್ಟು ಪ್ರಭಾವಿ ಮಾಧ್ಯಮದ ಅಂಗವಾಗಿರುವುದರ ಕಿಂಚಿತ್ ಜವಾಬ್ದಾರಿ ಬೇಡವೇ? ತಮ್ಮ ಜಿಸ್ಮ್2 ಚಿತ್ರದಲ್ಲಿ ಸನ್ನಿಯನ್ನು ಹೆಮ್ಮೆಯಿಂದ ಪರಿಚಯಿಸಿದ ಭಟ್, ತಮ್ಮ ಮಗಳು ಆಲಿಯಾಳನ್ನು ಮಾತ್ರ ಯಾವ ಹುಡುಗನೊಂದಿಗೂ ಡೇಟಿಂಗ್‍ಗೆ ಕಳಿಸದೆ ಏಕೆ ಕಾಪಾಡುತ್ತಾರೆ?

ಜಿಸ್ಮ್2ರ ನಂತರ ಈಗ ಬೇಬಿಡಾಲ್, 'ರಾಗಿಣಿ ಎಮ್.ಎಮ್.ಎಸ್.೨' ಚಿತ್ರದಲ್ಲಿ ಕುಣಿಯುತ್ತಿದೆ. ಇನ್ನೂ ಹಲವಾರು ಚಿತ್ರಗಳಲ್ಲಿ ಕುಣಿಯಲಿದೆ. ಅನೇಕ ಸ್ಟಾರ್‍ಗಳು ಪ್ರಶಂಸೆಯ ಮಳೆ ಸುರಿಸಿ ತಾವು ಮಡಿವಂತರಲ್ಲ ಎಂದು ಸಾಬೀತುಪಡಿಸಿದ್ದಾರೆ. ಇಂಥ ಇನ್ನೂ ಹಲವಾರು ಬೇಬಿಡಾಲ್‍ಗಳ ಅಗತ್ಯ ಬಾಲಿವುಡ್‍ಗಿದೆಯೆಂದು ಅಭಯ್ ಡಿಯೋಲ್ ಮೊನ್ನೆ ತಾನೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅದೂ ಸರಿಯೇ. ಮೈತುಂಬಾ ಪ್ರತಿಭೆಯೇ ತುಂಬಿರುವ ಈ ಬೇಬಿಡಾಲ್‍ಗಳು ಎಲ್ಲ ರೀತಿಯ ಪ್ರದರ್ಶನ ಕೊಡಬಲ್ಲರಾದ್ದರಿಂದ ಜಿಯಾ ಖಾನ್‍‍ಳಂತೆ ಎಲ್ಲಿಯೂ ಸಲ್ಲದೆ ಅವಕಾಶ ವಂಚಿತರಾಗಿ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ!

ಕಾಮಿಡಿ ಟೈಮ್ಸ್ ನಂಥ ಹಾಸ್ಯ ವೇದಿಕೆಯಲ್ಲಿ ಕಪಿಲ್ ಶರ್ಮ ಬೇಬಿಡಾಲ್‍‍ಳೊಡನೆ ಮಾತಿಗಿಳಿದಾಗ ಹಾಸ್ಯವೂ ಅಸಹನೀಯವೆನಿಸಿ ನೋಡಲಾಗುವುದಿಲ್ಲ. ಇನ್ನೂ ಮೀಸೆ ಮೂಡಿರದ ಹುಡುಗರು, ಎಳೆ ವಯಸ್ಸಿನ ಹುಡುಗಿಯರು ಕಾಫಿ ಡೇಗಳಲ್ಲಿ, ಪಾರ್ಕ್‍ಗಳಲ್ಲಿ ತೋರುವ ವರ್ತನೆ ವಾಕರಿಕೆ ತರಿಸುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿಷಯಗಳನ್ನೆಲ್ಲಾ ಇಡೀ ಬ್ರಹ್ಮಾಂಡದ ಮುಂದೆ ಬಿಡಿಸಿಡಲು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬಿದ್ದಿರುವ ಬಾಲಿವುಡ್ ಮಂದಿಯ ಮೇಲೆ ವ್ಯಗ್ರತೆ ಹುಟ್ಟುತ್ತದೆ. ಹಣದ ಹೊಳೆ ಹರಿಸುವ ಹುಚ್ಚಿಗೆ ಬಿದ್ದು ಆಧುನಿಕತೆಯ ಹೆಸರಿನಲ್ಲಿ ಸ್ವೇಚ್ಛಾಚಾರವನ್ನು ಈ ಪರಿ ಬೀದಿಗೆಳೆದು ತಂದಿರುವ ಇವರಿಗೆ ಸಮಾಜದ ಸ್ವಾಸ್ಥ್ಯದ ಯಾವ ಪರಿವೆಯೂ ಇಲ್ಲದಿರಬಹುದು, ಆದರೆ ನೈತಿಕತೆ, ಸಂಸ್ಕಾರಗಳನ್ನುಳಿಸಿಕೊಳ್ಳುವ ಅಗತ್ಯ ನಮಗೆ ಖಂಡಿತ ಇದೆ. ಇವರನ್ನು ಅನುಕರಿಸಿ ನಮ್ಮ ಮೌಲ್ಯಾಧಾರಿತ ಸಂಸ್ಕೃತಿಗೆ ತರ್ಪಣ ಕೊಡಲು ನಾವು ಸಿದ್ಧರಿಲ್ಲ.
ಈಗ ಹೇಳಿ, ಸಹಿ ಸಂಗ್ರಹಿಸಬೇಕಾಗಿರುವವರು ಯಾರು? 

ದೇಶವನ್ನೇ ಹೊನ್ನಶೂಲಕ್ಕೇರಿಸುವ ಅಕ್ಷಯ ತದಿಗೆ!

ಮತ್ತೊಂದು ಅಕ್ಷಯ ತದಿಗೆ ಹಾದುಹೋಗಿದೆ. ಮಾಮೂಲಿನಂತೆ ಬಾರಿಯೂ ಕಂಡದ್ದು ಚಿನ್ನ ಕೊಳ್ಳುವ ಸಡಗರವೇ. ಕೈಯಲ್ಲಿ ದುಡ್ಡಿಲ್ಲದಿದ್ದರೂ ಸರಿ, ಹೇಗಾದರೂ ಗುದ್ದಾಡಿ ಕೆಲವೇ ಕೆಲವು ಗ್ರಾಂಗಳನ್ನಾದರೂ ಕೊಳ್ಳಲೇಬೇಕು. ಯಥೇಚ್ಛ ದುಡ್ಡಿದ್ದರಂತೂ ಮುಗಿದೇ ಹೋಯಿತು. ಪ್ರತಿಷ್ಠಿತ ಚಿನ್ನದ ಮಳಿಗೆಗಳಿಗೆ ಬೆಳ್ಳಂಬೆಳಿಗ್ಗೆಯೇ ಲಗ್ಗೆಯಿಟ್ಟು ಉದ್ದ ಕ್ಯೂನಲ್ಲಿ ತಾಸುಗಟ್ಟಲೆ ನಿಂತು ಸಾಧ್ಯವಾದಷ್ಟೂ ತೂಕದ ಒಡವೆಯನ್ನೋ, ಕಾಸನ್ನೋ, ಬಿಸ್ಕತ್ತನ್ನೋ ಕೈಲಿ ಹಿಡಿದೇ ಬರಬೇಕು. ಬೆಳಗಿನಿಂದ ಸಂಜೆಯವರೆಗಿನ ಸಮಯ ಪೂರ್ತಿ ವ್ಯಯವಾದರೂ ಸರಿಯೇ, ಲಕ್ಷ್ಮೀದೇವಿಯ ಆವಾಹನೆ ರೂಪದಲ್ಲೇ ಆಗಬೇಕು. ತಂದ ಚಿನ್ನವನ್ನು ಪೂಜಿಸಿ ಮನೆಯ ತಿಜೋರಿಯಲ್ಲೋ ಬ್ಯಾಂಕ್ ಲಾಕರ್ನಲ್ಲೋ ಇಡಬೇಕು. ಆಮೇಲೆ ಅದು ಮೊಟ್ಟೆ ಇಡುತ್ತದೋ, ಮರಿ ಹಾಕುತ್ತದೋ ಒಟ್ಟಿನಲ್ಲಿ ಹೇಗೋ ಅಕ್ಷಯ ಆಗಿಯೇ ತೀರುತ್ತದೆ ಎಂಬ ಸಮಾಧಾನವನ್ನೂ ತಂದುಕೊಳ್ಳಬೇಕು.

ನಿಜವಾಗಿಯೂ ವಿಧ್ಯುಕ್ತವಾಗಿ ಚಿನ್ನದ ಖರೀದಿಗೆ ಮೀಸಲಾಗಿರುವುದೇ ಅಕ್ಷಯ ತದಿಗೆ? ಅಲ್ಲ ಎನ್ನುತ್ತವೆ ನಮ್ಮ ಪುರಾಣದ ಪುರಾವೆಗಳು. ಯಾವುದೇ ಶುಭ ಕಾರ್ಯಗಳಿಗಾದರೂ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಡುವ ಮೂರೂವರೆ ಮುಹೂರ್ತಗಳಲ್ಲಿ ಇದೂ ಒಂದು. ಮೊದಲನೆಯದು ಚೈತ್ರ ಮಾಸ ಶುದ್ಧ ಪಾಡ್ಯವಾದರೆ, ಎರಡನೆಯದು ವೈಶಾಖ ಮಾಸ ಶುದ್ಧ ತದಿಗೆ (ಅಕ್ಷಯ ತದಿಗೆ). ಮೂರನೆಯದು ಅಶ್ವಿನ ಮಾಸ ಶುದ್ಧ ದಶಮಿ (ವಿಜಯದಶಮಿ)ಯಾದರೆ, ಕೊನೆಯ ಅರ್ಧ ಕಾರ್ತಿಕ ಮಾಸ ಶುದ್ಧ ಪಾಡ್ಯ. ಮೂರೂವರೆ ಮುಹೂರ್ತಗಳಲ್ಲಿ ಅಕ್ಷಯ ತದಿಗೆಗೆ ಬಹಳ ಪ್ರಾಶಸ್ತ್ಯವಿದೆ. ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವಿನ ಆರನೆಯ ಅವತಾರವಾದ ಪರಶುರಾಮನ ಜನನವಾದದ್ದು ದಿನವಂತೆ. ಗಂಗೆ ಧರೆಗಿಳಿದದ್ದು, ಯುಧಿಷ್ಠಿರನಿಗೆ ಅಕ್ಷಯಪಾತ್ರೆ ಲಭ್ಯವಾದದ್ದೂ ಇದೇ ದಿನ ಎಂಬ ಪ್ರತೀತಿಯೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಚಲಿತದಲ್ಲಿರುವುದು ಕೃಷ್ಣ-ಸುದಾಮರ ಕಥೆ. ತನ್ನ ಜೀವದ ಗೆಳೆಯನಾದ ಕೃಷ್ಣನನ್ನು ಭೇಟಿಯಾಗಲು ಹೋಗುವ ಸುದಾ, ನನಗಾಗಿ ಏನು ತಂದಿದ್ದೀ ಎಂದು ಕೇಳುವ ಕೃಷ್ಣನಿಗೆ ತಾನು ಒಯ್ದಿದ್ದ ಒಣ ಅವಲಕ್ಕಿಯನ್ನಷ್ಟೇ ಕೊಟ್ಟು ತನ್ನ ಬಡತನದ ಬಗ್ಗೆ ಒಂದೂ ಮಾತನಾಡದೆ ಮನೆಗೆ ಹಿಂದಿರುಗುತ್ತಾನೆ. ಆದರೆ ಮನೆಗೆ ಬರುವಷ್ಟರಲ್ಲಿ, ಕೃಷ್ಣನ ಕೃಪಾಕಟಾಕ್ಷದಿಂದ ಅವನ ಗುಡಿಸಲು ಅರಮನೆಯಾಗಿ, ಅಷ್ಟೈಶ್ವರ್ಯಗಳಿಂದ ತುಂಬಿರುತ್ತದೆ. ಆದ್ದರಿಂದ ಪ್ರಾಂಜಲ ಮನಸಿನಿಂದ ಕೈಗೊಳ್ಳುವ ಯಾವುದೇ ಶುಭಕಾರ್ಯವನ್ನಾದರೂ ಸರಿಯೇ, ಪಂಚಾಂಗವನ್ನೂ ನೋಡದೆ ಕಣ್ಮುಚ್ಚಿ ಶುರುಮಾಡಬಹುದಾದ ದಿನವಿದು.

ಆದರೆ, ಕೈಗೊಂಡ ಕಾರ್ಯಗಳು ಸಿದ್ಧಿಸಿ ಯಶಸ್ಸು ನೆಮ್ಮದಿ ಸಂತೋಷಗಳು ಅಕ್ಷಯವಾಗುತ್ತವೆಂದು ಸೂಚಿಸುವ ದಿನಕ್ಕೂ ಚಿನ್ನದ ಖರೀದಿಗೂ ತಳಕು ಹಾಕಿದ್ದು ಅದ್ಯಾವ ಅಕ್ಕಸಾಲಿಗನೋ, ಲಕ್ಷ್ಮೀದೇವಿಯೇ ಹೇಳಬೇಕು! ಅಲ್ಲಿಯವರೆಗೂ ಇದ್ದೂ ಇರದಂತಿದ್ದ ಇದು ಕ್ರಮೇಣ ದೊಡ್ಡ ಆಚರಣೆಯಾಗಿ, ಈಗ ಚಿನ್ನ ಕೊಳ್ಳಲೇಬೇಕೆಂಬುದು ಅಲಿಖಿತ ನಿಯಮವೇ ಆಗಿಹೋಗಿದೆ. ಕಳೆದ ದಶಕದಿಂದೀಚೆಗಂತೂ ಸಣ್ಣ ದೊಡ್ಡ ಪಟ್ಟಣಗಳಲ್ಲೆಲ್ಲಾ ವಿಪರೀತ ಎನ್ನುವಷ್ಟು ಹೆಚ್ಚಾಗಿರುವ ಇದರ ಗೀಳಿನಿಂದ ಜನಸಾಮಾನ್ಯರು ಖರೀದಿಸಿದ ಚಿನ್ನ ಅಕ್ಷಯವಾಗುತ್ತಿದೆಯೋ ಇಲ್ಲವೋ ಆದರೆ ಚಿನ್ನದಂಗಡಿಗಳ ಗಲ್ಲಾಪೆಟ್ಟಿಗೆಗಳಂತೂ ಭರ್ಜರಿಯಾಗಿ ತುಂಬುತ್ತಿವೆ. ಒಂದಿಡೀ ವರ್ಷದ ವ್ಯಾಪಾರ ಒಂದೇ ದಿನದಲ್ಲಿ ಆಗುವುದಾದರೆ ಬರೀ ತದಿಗೆಯೇನು, ಚತುರ್ಥಿ, ಪಂಚಮಿಗಳ ಕುರಿತೂ ಅವರು ಕಥೆ ಹೆಣೆಯಲು ಸಿದ್ಧ. ಕೈಜೋಡಿಸಲು ಕೆಲ ಮಾಧ್ಯಮ ದಲ್ಲಾಳಿಗಳು ಹೇಗೂ ಇದ್ದಾರೆ. ಸ್ಟುಡಿಯೋದಲ್ಲಿ  ಜ್ಯೋತಿಷಿಗಳನ್ನು ಕುಳ್ಳಿರಿಸಿ, ನಮ್ಮ ರಾಶಿಗನುಗುಣವಾಗಿ ಎಷ್ಟು ಖರೀದಿಸಿದರೆ ಶ್ರೇಷ್ಠವೆಂಬುದನ್ನೂ ಬೇಕಾದರೆ ಹೇಳಿಸುತ್ತಾರೆ. ನಮ್ಮ ಹಿರಿಯರ ಆಚರಣೆಗಳನ್ನು ಗೊಡ್ಡುಸಂಪ್ರದಾಯವೆಂದು ಉಪೇಕ್ಷಿಸುವ ನಾವು ಇವರ ಮಾತು ಕೇಳುವ ಸಲುವಾಗಿ, ಮಿದುಳಿಗೆ ಬೀಗ ಹಾಕಿ ಕಿವಿಗಳನ್ನು ಎರವಲು ನೀಡಿದರೆ ಸಾಕು!

ನಾವು ಭಾರತೀಯರು ಅಪ್ಪಟ ಮೈದಾಸರು. ವಿಶ್ವದ ಚಿನ್ನ ಖರೀದಿದಾರರ ಪಟ್ಟಿಯಲ್ಲಿ ಕಳೆದ ವರ್ಷದವರೆಗೂ ನಮ್ಮದೇ ಅಗ್ರಸ್ಥಾನ. ವರ್ಷವರ್ಷವೂ ಹೆಚ್ಚುತ್ತಿದ್ದ ನಮ್ಮ ಬೇಡಿಕೆ ಒಂದಿಡೀ ದಶಕದ ದಾಖಲೆಯನ್ನು ಮುರಿದದ್ದು ಕಳೆದ ವರ್ಷ. ಕಳೆದ ಜೂನ್ನಲ್ಲಿ ನಡೆದ ಆಭರಣ ಚಿನ್ನದ ಖರೀದಿ ಸುಮಾರು 188 ಟನ್ಗಳಷ್ಟು. ಕಾಸು, ಬಿಸ್ಕತ್ತುಗಳ ಮೂಲವಾದ ಅಪರಂಜಿಯ ಖರೀದಿ ಸುಮಾರು 122 ಟನ್ಗಳಷ್ಟು. ಶೇರುಗಳ ರೂಪದಲ್ಲಿ ಹರಿದಾಡಿದ ಚಿನ್ನ 20,000 ಟನ್ಗಳಿಗೂ ಹೆಚ್ಚು. ಹಾಗೆಂದು ಇದು ಹೆಮ್ಮೆಯ ವಿಷಯ ಖಂಡಿತ ಅಲ್ಲ. ಒಂದು ಗುಲಗಂಜಿಯಷ್ಟು ಚಿನ್ನವೂ ನಮ್ಮಲ್ಲಿ ಲಭ್ಯವಿರದಿದ್ದರೂ ಬರೀ ಆಮದು ಮಾಡಿಕೊಳ್ಳುತ್ತಾ ಹೋದದ್ದಕ್ಕೆ ನಾವು ಭಾರೀ ಬೆಲೆಯನ್ನೇ ತೆತ್ತಿದ್ದೇವೆ.

ಹೇಗೆಂದು ಅರ್ಥ ಮಾಡಿಕೊಳ್ಳಲು ಸರಳವಾದುದೊಂದು ವ್ಯಾಖ್ಯಾನವಿದೆ. ವಿಶ್ವ ಮಾರುಕಟ್ಟೆಯಲ್ಲಿ ನಾವು ಏನನ್ನೇ ಆಮದು ಅಥವಾ ರಫ್ತು ಮಾಡಿದರೂ ಅದು ಫೋರೆಕ್ಸ್ ಎಂದು ಕರೆಯಲಾಗುವ ವಿದೇಶೀ ವಿನಿಮಯದ ಲೆಕ್ಕಕ್ಕೆ ಜಮೆಯಾಗುತ್ತಾ ಹೋಗುತ್ತದೆ. ನಾವು ಹೆಚ್ಚು ಹೆಚ್ಚು ರಫ್ತು ಮಾಡಿದಷ್ಟೂ ನಮ್ಮ ಇಡುಗಂಟು ಹೇಗೆ ಹೆಚ್ಚುತ್ತದೋ ಹೆಚ್ಚು ಆಮದು ಮಾಡಿಕೊಂಡಷ್ಟೂ ಕುಸಿಯುತ್ತದೆ. 2012 ರಲ್ಲಿ 860 ಟನ್ಗಳಷ್ಟು ಚಿನ್ನವನ್ನು ಆಮದು ಮಾಡಿಕೊಂಡ ನಾವು 2013ರಲ್ಲಿ 974 ಟನ್ಗಳಿಗೆ ಜಿಗಿದೆವು. ಪರಿಣಾಮ, 50 ಬಿಲಿಯನ್ ಡಾಲರ್ಗಳಷ್ಟು ಹೊರೆಯನ್ನು ಚಿನ್ನದ ಖರೀದಿಯೊಂದೇ ಸೃಷ್ಟಿಸಿಬಿಟ್ಟಿತು. ಹಾಗಾಗಿ ಇತರೆ ಪ್ರಮುಖ ಅಗತ್ಯಗಳಾದ ಕಚ್ಚಾ ತೈಲ, ನೈಸರ್ಗಿಕ ಅನಿಲ ಹಾಗೂ ಗೊಬ್ಬರಗಳನ್ನು ಕೊಳ್ಳಲು ಕಣ್ಣು ಬಾಯಿ ಬಿಡುವಂತಾಯಿತು.

ಅಪಾಯವನ್ನರಿತ ಹಣಕಾಸು ಮಂತ್ರಿ ಚಿದಂಬರಂ ಕಳೆದ ಜೂನ್ನಲ್ಲಿ ಆರ್ತರಾಗಿ ಜನರಲ್ಲಿ ಮೊರೆಯಿಟ್ಟರು.'ದಯವಿಟ್ಟು ಚಿನ್ನ ಖರೀದಿಸುವುದನ್ನು ಕಡಿಮೆಮಾಡಿ, ನೀವು ರುಪಾಯಿಯಲ್ಲಿ ಕೊಳ್ಳುವುದನ್ನು ನಾವು ಡಾಲರ್ ಕೊಟ್ಟು ತರಬೇಕಾಗಿದೆ, ಅರ್ಥಮಾಡಿಕೊಳ್ಳಿಎಂದು ತಿಳಿಹೇಳಲು ಪ್ರಯತ್ನಿಸಿದರು. ‘ಚಿನ್ನ ನಮ್ಮ ಸಂಸ್ಕೃತಿಯ ಭಾಗವೇ ಆಗಿರುವುದರಿಂದ ನಾವು ಆಮದನ್ನು ನಿಷೇಧಿಸಲಾರೆವು, ಆದರೆ ನೀವು ಖರೀದಿಸಲೇಬೇಕೆಂದಾದರೆ 20ಗ್ರಾಂ ಖರೀದಿಸುವಲ್ಲಿ 10ಗ್ರಾಂ ಮಾತ್ರ ಖರೀದಿಸಿ ಸಹಕರಿಸಿಎಂದು ಮನವಿ ಮಾಡಿಕೊಂಡರು. ತಮ್ಮ ಗ್ರಾಹಕರಿಗೆ ಬುದ್ಧಿ ಹೇಳುವಂತೆ ಬ್ಯಾಂಕ್ಗಳನ್ನೂ ವಿನಂತಿಸಿದರು. ಬರಿಯ ಬಾಯಿ ಮಾತಿನಿಂದ ಪ್ರಯೋಜನವಿಲ್ಲವೆಂದರಿತು ಕಳೆದ ಇಪ್ಪತ್ತು ತಿಂಗಳಲ್ಲಿ ಚಿನ್ನದ ಮೇಲಿನ ಆಮದು ಶುಲ್ಕವನ್ನು ನಾಲ್ಕು ಬಾರಿ ಏರಿಸಿ ಈಗ ಶೇಕಡ 10ಕ್ಕೆ ತಂದು ನಿಲ್ಲಿಸಿದ್ದಾರೆ. ಪರಿಣಾಮ, ಚಿನ್ನದ ಬೆಲೆ ಹೆಚ್ಚಿದೆ. ಹಾಗಂತ ಚಿನ್ನದ ಒಳಹರಿವು ನಿಂತಿಲ್ಲ. ಆಮದು ಶುಲ್ಕ ಹೆಚ್ಚಾದಷ್ಟೂ ಕಳ್ಳ ಸಾಗಾಣಿಕೆಯೂ ಹೆಚ್ಚಿದೆ. 2011ರಲ್ಲಿ ಆಮದು ಶುಲ್ಕ ಶೇಕಡ 3 ಇದ್ದಾಗ 2 ಕೆ.ಜಿಯಷ್ಟು ಚಿನ್ನ ಕಸ್ಟಮ್ಸ್ ಅಧಿಕಾರಿಗಳ ವಶವಾಗಿತ್ತು. 2012ರಲ್ಲಿ ಆಮದು ಶುಲ್ಕ ಶೇಕಡ 5 ಆದಾಗ 6.8 ಕೆ.ಜಿಯಷ್ಟು ಚಿನ್ನ ವಶವಾಗಿತ್ತು. 2013 ರಲ್ಲಿ ಶುಲ್ಕ ಮತ್ತೂ ಹೆಚ್ಚಿದಂತೆ ಸುಮಾರು 352 ಕೆ.ಜಿ ಚಿನ್ನ ವಶವಾಗಿತ್ತು.

ಬಾರಿಯ ಅಕ್ಷಯ ತದಿಗೆ ಕಳೆದ ಬಾರಿಯಷ್ಟು ಭರ್ಜರಿಯಾಗಿ ನಡೆದಿಲ್ಲ. ಚಿನ್ನದ ಬೆಲೆಯ ಹೆಚ್ಚಳ ಒಂದು ಕಾರಣವಾದರೆ ಮಹಾಚುನಾವಣೆಯ ಬಿಸಿ ಮತ್ತೊಂದು ಕಾರಣ. ಎಲ್ಲೆಡೆ ಇದ್ದ ಸರ್ಪಗಾವಲು ಕಳ್ಳಮಾಲು ಒಳ ಬರುವುದಕ್ಕೂ ಕಡಿವಾಣ ಹಾಕಿದೆ. ತನ್ನ ಕೈಲಾದ ನಿರ್ಬಂಧವನ್ನೇನೋ ಸರ್ಕಾರ ಹೇರಿದೆ, ಆದರೆ ನಾವು ಎಂದಿಗೆ ನಮ್ಮ ಲೋಭಕ್ಕೆ ಕಡಿವಾಣ ಹಾಕಿಕೊಳ್ಳುವುದು? ನಮ್ಮಂಥ ಸಾಮಾನ್ಯರಿಗೆ, ಹಾಕಿಕೊಳ್ಳುವ ಒಡವೆಗಳಿಂದ ಹಿಡಿದು ಕಟ್ಟಿಸಿಕೊಳ್ಳುವ ಹಲ್ಲಿನವರೆಗೂ ಬಂಗಾರವೇ ಬೇಕು. ಇನ್ನು ಶ್ರೀಮಂತ ವರ್ಗಕ್ಕೆ, ಗಣಿಯಿಂದ ತೆಗೆದ ಲಕ್ಷ್ಮಿಯನ್ನು ಮನೆಯ ನೆಲಮಾಳಿಗೆ, ಸಂದೂಕಗಳಲ್ಲಿ ಹೂತಿಡುವ ಧಣಿಗಳಿಗೆ ತಾವು ಊಟ ಮಾಡುವ ತಟ್ಟೆ-ಲೋಟಗಳು, ಕೂರುವ ಕುರ್ಚಿಗಳೂ ಬಂಗಾರದ್ದೇ ಆಗಬೇಕು! ಬಂಗಾರದೊಡವೆಗಳು ಸ್ತ್ರೀಯರಿಗೆ ಮಾತ್ರ ಭೂಷಣವೆನ್ನುತ್ತಿದ್ದ ಕಾಲವೊಂದಿತ್ತು. ಈಗ ಭೇದವಿಲ್ಲ. ಉದಾಹರಣೆಗೆ, ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿಯವರನ್ನೊಮ್ಮೆ ನೋಡಿಬಿಟ್ಟರೆ ಒಂದು ಸಣ್ಣ ಚಿನ್ನದಂಗಡಿಯನ್ನೇ ನೋಡಿದಂತಾಗುತ್ತದೆ. ಅವರಾದರೂ ಬೇಕು, ಕೆಲವು ರಿಯಲ್ ಎಸ್ಟೇಟ್ ಉದ್ದಿಮೆದಾರರಂತೂ ಕೈಯ್ಯ ಹತ್ತೂ ಬೆರಳುಗಳಿಗೆ ತರಹೇವಾರಿ ಉಂಗುರ, ಕತ್ತನ್ನೇ ಬಗ್ಗಿಸಿಬಿಡುವ ತೂಕದ ಸರಗಳು ಹಾಗೂ ಕೈಗೆ ತಿಹಾರ್ ಜೈಲಿನ ಕೋಳವನ್ನೂ ಮೀರಿಸುವ ಕಡಗಗಳನ್ನು ಹಾಕಿಕೊಳ್ಳುತ್ತಾರೆ. ತಲೆಯ ಮೇಲೆ ಚಿನ್ನದ ಕಿರೀಟವಿಟ್ಟು ಕೈಗೊಂದು ಗದೆ ಕೊಟ್ಟುಬಿಟ್ಟರೆ ಹಿರಣ್ಯಕಶಿಪು ಅಥವಾ ಹಿರಣ್ಯಾಕ್ಷನನ್ನೇ ಪ್ರತ್ಯಕ್ಷ ನೋಡಿದ ಅನುಭವ!

ಪ್ರತಿಷ್ಠೆಗೆ, ತೋರಿಕೆಗೆ ಚಿನ್ನವನ್ನು ಹೊತ್ತು ತರುವ ನಾವು ಬೇಕೆನಿಸಿದಾಗ ಒಡವೆಗಳನ್ನು ಧರಿಸಿ ರಸ್ತೆಗಿಳಿಯುವುದು ಸಾಧ್ಯವೇ? ಮನೆಯಲ್ಲಿಟ್ಟುಕೊಳ್ಳುವುದೂ ಸುರಕ್ಷಿತವಲ್ಲವೆಂದು, ಠೇವಣಿ ತುಂಬಿ, ಪ್ರತಿ ವರ್ಷ ಬಡ್ಡಿದರವನ್ನೂ ಪಾವತಿಸಿ ಬ್ಯಾಂಕ್ಲಾಕರ್ಗಳಲ್ಲಿಡುತ್ತೇವೆ. ಪದೇ ಪದೇ ಲಾಕರ್ನಿಂದ ತರುವ ತಲೆನೋವೇಕೆಂದು ನಕಲಿ ಆಭರಣಗಳನ್ನು ಧರಿಸುವ ಉಪಾಯವನ್ನೂ ಕಂಡುಕೊಂಡಿದ್ದೇವೆ. ಹೋಗಲಿ, ಬದುಕಿದ್ದಾಗ ಭದ್ರವಾಗಿಟ್ಟದ್ದನ್ನು ಸತ್ತ ಮೇಲಾದರೂ ಕೊಂಡೊಯ್ಯುತ್ತೇವಾ? ಪ್ರಾಣಪಕ್ಷಿ ಹಾರಿದೊಡನೆ ನಡೆವ ಮೊದಲ ಕೆಲಸವೇ ಮೈಮೇಲಿನ ಒಡವೆಗಳನ್ನು ತೆಗೆಯುವುದು. ನಯವಾಗಿ ತೆಗೆಯಲಾಗದಿದ್ದರೆ ಕತ್ತರಿಸುವುದು!

ಎಲ್ಲರಿಗೂ ಕುವ ಹೂಡಿಕೆ ದರದಲ್ಲಿ ಲಭ್ಯವಾಗುವ, ಆಪತ್ಕಾಲದಲ್ಲಿ ನಮ್ಮ ಸ್ವಾಭಿಮಾನವನ್ನುಳಿಸಿ ನೆರವಾಗುವ ಚಿನ್ನ ನಮಗೆ ಆಸರೆಯಾಗಬಲ್ಲುದೆಂಬುದು ದಿಟ. ಹಾಗೆಂದೇ ನಾವು ಅದನ್ನು ಕೊಳ್ಳುವಾಗ ಬಹಳಷ್ಟು ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. 22ಕ್ಯಾರಟ್ ಶುದ್ಧತೆಯಿರುತ್ತದೆ ಎಂದು 916 ಗುರುತನ್ನು ತೋರಿಸಿ ಅಂಗಡಿಯವರು ಕೊಡುವ ಆಭರಣಗಳನ್ನು ಕೊಂಡು ತಂದಾಗ ಅಥವಾ ಹಳೆ ಒಡವೆಯನ್ನು ಕೊಟ್ಟು ಹೊಸದನ್ನು ಖರೀದಿಸುವಾಗ, ಶುದ್ಧತೆಯ ಬಗ್ಗೆ, 'ವೇಸ್ಟೇಜ್' ಬಗ್ಗೆ ನಾವು ಪ್ರಶ್ನಿಸುವುದಿಲ್ಲ. ಒಂದು ಬ್ರ್ಯಾಂಡೆಡ್ ಅಂಗಡಿಯಿಂದ 24ಕ್ಯಾರಟ್ ಶುದ್ಧತೆಯ ಚಿನ್ನದ ಕಾಸು ಖರೀದಿಸಿದರೆ ಅದನ್ನು ತಿರುಗಿ ಅಂಗಡಿಗೇ ಮಾರಬೇಕೇ ವಿನ ಬೇರೆಯವರು ಕೊಳ್ಳುವುದಿಲ್ಲ. ಹಾಗೆ ಕೊಳ್ಳುವಾಗಲೂ ಅವರು ಅಂದಿನ ಬೆಲೆಯಲ್ಲಿ ಶೇಕಡ 9ರಿಂದ 10ರಷ್ಟು ಹಣವನ್ನು ಕಡಿತ ಮಾಡಿಕೊಳ್ಳುತ್ತಾರಲ್ಲ ಎಂಬ ಲೆಕ್ಕಾಚಾರವೂ ನಮ್ಮನ್ನು ಬಾಧಿಸುವುದಿಲ್ಲ.
ಎಲ್ಲರೂ ಶೇರು ದಲ್ಲಾಳಿಗಳೋ ಅರ್ಥಶಾಸ್ತ್ರಜ್ಞರೋ ಆಗುವುದು ಬೇಡ. ಆದರೆ ನಮ್ಮ ಮೇಲಷ್ಟೇ ಅಲ್ಲದೆ ನಮ್ಮ ದೇಶದ ಆರ್ಥಿಕ ಸ್ಥಿತಿಗತಿಯ ಮೇಲೂ ಮಟ್ಟದ ಹಿಡಿತ ಹೊಂದಿರುವ ಚಿನ್ನದ ಬಗ್ಗೆ ಒಂದಷ್ಟು ಆಳವಾಗಿ ತಿಳಿದುಕೊಳ್ಳದಿದ್ದರೆ ಹೇಗೆ? ಆಯವ್ಯಯ ಮಂಡಿಸುವವರಿಗೆ ಮತ್ತು ಎಂಬಿಎ ಓದುವವರಿಗೇ ಎಲ್ಲಾ ಗುಣಾಕಾರ ಭಾಗಾಕಾರಗಳನ್ನು ಮೀಸಲಿಟ್ಟರೆ ನಮ್ಮ ಪಾಲಿನ ಲೆಕ್ಕವನ್ನು ಯಾರು ಮಾಡಬೇಕು?

ದೇಶ ನಮಗೇನು ಕೊಟ್ಟಿದೆ ಎಂದು ಕೇಳಿಕೊಳ್ಳುತ್ತಲೇ ನಿತ್ಯ ಹಾಸಿಗೆಯಿಂದೇಳುವ ನಾವೂ ದೇಶಕ್ಕೆ ಹೊರೆಯಾಗದೆ ಕೊಡಬೇಕಾದುದು ಬಹಳಷ್ಟಿದೆಯೆನಿಸುವುದಿಲ್ಲವೇ? ಒಂದುವೇಳೆ ಹಾಗನಿಸದಿದ್ದರೆ ಖಂಡಿ ನಮ್ಮಲ್ಲೇನೋ ಐಬಿದೆ!