Monday 27 June 2016

ಗಂಟಲಲ್ಲೇ ಉಳಿದ ಎನ್‍ಎಸ್‍ಜಿ ಎಂಬ ಬಿಸಿತುಪ್ಪ!

ಅದು 1974ರ ಮೇ 18. ಆವತ್ತು ಬುದ್ಧ ಜಯಂತಿ. ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಗೆ ಬೇರೆಯದೇ ಕಾರಣಕ್ಕೆ ಸಡಗರ. ತಮ್ಮ ಪ್ರಯತ್ನ ಕೈಗೂಡುತ್ತದೋ ಇಲ್ಲವೋ ನೋಡಿಬಿಡುವ ಕಾತರ. ಶಕ್ತಿ -1 ಹೆಸರಿನ ಪರಮಾಣು ಬಾಂಬ್ ಅನ್ನು ಸ್ಫೋಟಿಸಲು ಪೋಖ್ರಾನ್‍ನ ಮರುಭೂಮಿಯಲ್ಲಿ ಜಾಗವನ್ನು ಅದಾಗಲೇ ಗುರುತಿಸಿ ಆಗಿತ್ತು. ಮೂರು ವರ್ಷಗಳ ಹಿಂದಷ್ಟೇ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ್ದರೂ, ಸಮಯದಲ್ಲಿ ತನ್ನ ನೆರವಿಗೆಂದು ಸೋವಿಯತ್ ಸರ್ಕಾರ ಕಳಿಸಿದ್ದ ಅಣ್ವಸ್ತ್ರಗಳ ಪಡೆಯನ್ನು ಕಂಡು ಭಾರತ ಅಸೂಯೆ ಪಟ್ಟಿತ್ತು. ತನ್ನ ಹತ್ತಿರ ಅಣ್ವಸ್ತ್ರಗಳಿಲ್ಲವೆಂಬ ಕೊರಗು ಭಾರತವನ್ನು ಕಾಡುತ್ತಲೇ ಇತ್ತು. ಹಾಗಂತ ಅದೇನೂ ಕೈಕಟ್ಟಿಕೊಂಡು ಸುಮ್ಮನೆ ಕೂತಿರಲಿಲ್ಲ.



1954ರಲ್ಲೇ ಡಾ. ಹೋಮಿ ಜಹಾಂಗೀರ್ ಭಾಭಾ ಭಾರತವನ್ನು ಅಣ್ವಸ್ತ್ರಗಳ ರಾಷ್ಟ್ರವನ್ನಾಗಿಸುವ ಕನಸು ಕಾಣತೊಡಗಿದ್ದರು. ಅವರ ಆಶಯದಂತೆಯೇ ನುರಿತ ವಿಜ್ಞಾನಿಗಳ ದಂಡೊಂದು ತಯಾರಾಗುತ್ತಿತ್ತು. ಬಾಂಬ್‍ನ ತಯಾರಿಕೆಯಿಂದ ಹಿಡಿದು, ಪರಮಾಣು ರಿಯಾಕ್ಟರ್ ತಯಾರಿಕೆ, ಅದರ ಇಂಧನ ಪ್ಲುಟೋನಿಯಂ ಅನ್ನು ಸಂಪಾದಿಸುವ ಬಗೆ ಹೇಗೆ ಎಂಬೆಲ್ಲ ಲೆಕ್ಕಾಚಾರಗಳೂ ಅವರ ಮನಸ್ಸಿನಲ್ಲಿ ನಡೆಯುತ್ತಿದ್ದವು. ಪರಮಾಣು ಶಕ್ತಿಯ ಬಗ್ಗೆ ಜನರ ಮನಸ್ಸಿನಲ್ಲಿದ್ದ ಗೊಂದಲವನ್ನು ದೂರ ಮಾಡಲು ಜನರನ್ನುದ್ದೇಶಿಸಿ ರೇಡಿಯೋದಲ್ಲಿ ಮಾತನಾಡಲೂ ಭಾಭಾ ಹಿಂಜರಿಯಲಿಲ್ಲ! ಅದರ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಷ್ಟೇ ಮುತುವರ್ಜಿಯಿಂದ ರಾಜಕಾರಣಿಗಳಿಗೂ ವಿವರಿಸಿದರು. ಪರಿಣಾಮವೇ ಮೊದಲ ಅಣುಪರೀಕ್ಷೆಯ ತಯಾರಿ. ಆಗ ಅವರ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಖ್ಯಾತ ವಿಜ್ಞಾನಿ ಡಾ. ರಾಜಾರಾಮಣ್ಣ. ಆದರೆ ದುರಾದೃಷ್ಟ. 1966ರ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಭಾಭಾ ಸಾವನ್ನಪ್ಪಿದರು. ಅವರ ಕನಸನ್ನು ಜೀವಂತವಾಗಿರಿಸಿದರು ರಾಜಾರಾಮಣ್ಣ.

ಹೋಮಿ ಸೇತ್ನಾ, ಪಿ.ಕೆ ಅಯ್ಯಂಗಾರ್, ಆರ್ ಚಿದಂಬರಂ ಮುಂತಾದ ವಿಜ್ಞಾನಿಗಳನ್ನು ಬೆನ್ನಿಗಿಟ್ಟುಕೊಂಡು ಅಣು ಪರೀಕ್ಷೆಯ ತಯಾರಿಯಲ್ಲಿ ನಿರತರಾದ ರಾಜಾರಾಮಣ್ಣರಿಗೆ ಬೆಂಬಲವಾಗಿ ನಿಂತರು ಇಂದಿರಾ ಗಾಂಧಿ! ಇಡೀ ಕಾರ್ಯಾಚರಣೆ ಗುಟ್ಟೋ ಗುಟ್ಟು! ಸುಮಾರು 75 ವಿಜ್ಞಾನಿಗಳು, ಇಂದಿರಾ ಗಾಂಧಿ, ಅವರ ಆಪ್ತ ಸಲಹೆಗಾರರು ಹಾಗೂ ಸೈನ್ಯದ ಮುಖ್ಯಸ್ಥರನ್ನು ಬಿಟ್ಟರೆ ಬೇರಾರಿಗೂ ಈ ವಿಷಯ ಗೊತ್ತಿರಲಿಲ್ಲ. ಅಂದಿನ ರಕ್ಷಣಾ ಮಂತ್ರಿ ಜಗಜೀವನರಾಂ ಅವರ ಕಿವಿಗೆ ವಿಷಯ ಬಿದ್ದಿದ್ದೂ ಎಲ್ಲ ಮುಗಿದ ಮೇಲೇ! ಪರೀಕ್ಷೆಗೆ ಬೇಕೆಂದೇ ಬುದ್ಧ ಜಯಂತಿಯನ್ನು ಆರಿಸಿಕೊಂಡಿದ್ದರು. ಭಾರತದ ಉದ್ದೇಶ ಶಾಂತಿ ಸ್ಥಾಪನೆ ಎನ್ನುವುದನ್ನು ಸಾಂಕೇತಿಕವಾಗಿ ಜಗತ್ತಿಗೆ ಸಾರಲು! ಆದ್ದರಿಂದಲೇ ಕಾರ್ಯಾಚರಣೆಗೆ 'ಸ್ಮೈಲಿಂಗ್ ಬುದ್ಧ' ಎಂದೇ ಹೆಸರಿಡಲಾಗಿತ್ತು.



ಆವತ್ತು ನಮ್ಮ ಅಣು ಬಾಂಬ್ ನೆಲದೊಳಗೆ (ಸುಮಾರು 107 ಮೀಟರ್ ಆಳದಲ್ಲಿ) ಸಿಡಿದು 70 ಮೀಟರ್ ವ್ಯಾಸದಷ್ಟು ಭೂಮಿ ಕಂಪಿಸಿ ಕುಸಿಯಿತು ನೋಡಿ, ಆಗ ಅಮೆರಿಕ ಎಚ್ಚೆತ್ತುಕೊಂಡಿತು. ಪಾಕಿಸ್ತಾನದ ಕರುಳಿನಲ್ಲಂತೂ ಮೆಣಸಿನಕಾಯಿ ಕಿವುಚಿದ ಹಾಗಾಯಿತು. ಪರಮಾಣು ಪೂರೈಕೆದಾರರ ಸಂಘ ಅಥವಾ ಎನ್‍ಎಸ್‍ಜಿ ಹುಟ್ಟಿಕೊಂಡಿದ್ದೇ ಆಗ! ಸೋವಿಯತ್ ಒಕ್ಕೂಟ, ಅಮೆರಿಕ, ಫ್ರಾನ್ಸ್, ಜಪಾನ್ ಸೇರಿದಂತೆ ಏಳು ರಾಷ್ಟ್ರಗಳು ಮೊದಲಿಗೆ ಅದರ ಸದಸ್ಯತ್ವ ಪಡೆದವು. ಉಳಿದ ರಾಷ್ಟ್ರಗಳು ಎನ್‍ಎಸ್‍ಜಿ ತಂಡಕ್ಕೆ ಸೇರ್ಪಡೆಯಾಗಬೇಕೆಂದರೆ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ (Non-Proliferation Treaty) ಸಹಿ ಹಾಕುವುದು ಅನಿವಾರ್ಯ ಎಂಬ ನಿಯಮವನ್ನು ತಂದಿದ್ದೂ ಆ ರಾಷ್ಟ್ರಗಳೇ.

ಎನ್‍ಎಸ್‍ಜಿ ತಂಡಕ್ಕೆ ಸೇರಿದರೆ ಅದರದ್ದೇ ಆದ ಲಾಭವಿದೆ. ಆ ರಾಷ್ಟ್ರಗಳು ಅಣ್ವಸ್ತ್ರಗಳ ದುರುಪಯೋಗಕ್ಕಿಳಿಯುವುದಿಲ್ಲ. ತಾವಾಗೇ ಯಾವ ರಾಷ್ಟ್ರಗಳ ಮೇಲೂ ಅಣ್ವಸ್ತ್ರ ಯುದ್ಧ ಘೋಷಿಸುವುದಿಲ್ಲ. ಪರಮಾಣು ತಂತ್ರಜ್ಞಾನವನ್ನು ವಿಜ್ಞಾನ, ವೈದ್ಯಕೀಯ ಮುಂತಾದ ಜನೋಪಯೋಗಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತವೆ. ಆದ್ದರಿಂದಲೇ ಈಗ ವಿಶ್ವದ 48 ದೇಶಗಳು ಎನ್‍ಎಸ್‍ಜಿ ಸೇರಿವೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿ ಪರಮಾಣು ತಂತ್ರಜ್ಞಾನದ ಲಾಭ ಪಡೆಯುತ್ತಿವೆ. ಭಾರತದ ಉದ್ದೇಶವೂ ಅಣ್ವಸ್ತ್ರದ ಸದ್ಬಳಕೆಯೇ ತಾನೇ, ಹಾಗಾದರೆ ನಾವ್ಯಾಕೆ ಆ ಒಪ್ಪಂದಕ್ಕೆ ಸಹಿ ಹಾಕುತ್ತಿಲ್ಲ? ಬಿಡಿಸಲಾಗದ ಒಗಟಿರುವುದೇ ಅಲ್ಲಿ!

ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದದ ಪ್ರಕಾರ 1970ಕ್ಕೆ ಮೊದಲೇ ಅಣ್ವಸ್ತ್ರ ಪರೀಕ್ಷೆ ನಡೆಸಿದ ಐದು ದೇಶಗಳನ್ನು ಬಿಟ್ಟು ಉಳಿದ ದೇಶಗಳು ಯಾವ ಕಾರಣಕ್ಕೂ ಅಣ್ವಸ್ತ್ರಗಳನ್ನು ಹೊಂದುವಂತಿಲ್ಲ! ಅಣ್ವಸ್ತ್ರ ಇಟ್ಟುಕೊಳ್ಳುವುದು ಹಾಗಿರಲಿ, ಒಂದು ಸಣ್ಣ ಪರೀಕ್ಷೆಯನ್ನೂ ನಡೆಸುವ ಹಾಗಿಲ್ಲ! ರಿಯಾಕ್ಟರ್‍ಗಳು, ಅದರಲ್ಲಿ ಬಳಕೆಯಾಗುವ ಇಂಧನ, ಪರಮಾಣು ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳೆಲ್ಲದರ ಮೇಲೂ ಈ ಐದು ದೇಶಗಳು ಸದಾ ಕಣ್ಣಿಟ್ಟಿರುತ್ತವೆ. ಅವುಗಳ ಅಣತಿಯಿಲ್ಲದೆ ಬೇರೆ ದೇಶಗಳೊಂದಿಗೆ ಪರಮಾಣು ತಂತ್ರಜ್ಞಾನದ ಅಥವಾ ಇಂಧನದ ಆಮದು, ರಫ್ತು ಯಾವುದೂ ಸಾಧ್ಯವಿಲ್ಲ! ಏನೇ ಮಾಡಿದರೂ ಜಗಜ್ಜಾಹೀರು ಮಾಡಲೇಬೇಕು. ಎಲ್ಲಕ್ಕಿಂತ ಆತಂಕಕಾರಿ ಸಂಗತಿಯೆಂದರೆ ಆ ಐದು ದೇಶಗಳಲ್ಲಿ ಚೀನಾ ಕೂಡ ಸೇರಿದೆ! ಈಗಾಗಲೇ ಒಂದು ಯುದ್ಧದಲ್ಲಿ ನಮಗೆ ಹೀನಾಯ ಸೋಲಿನ ರುಚಿ ತೋರಿಸಿರುವ, ತಾನು ಮಾತ್ರ ಭಾರೀ ಸಾಮರ್ಥ್ಯದ ಅಣ್ವಸ್ತ್ರ ಇಟ್ಟುಕೊಂಡಿರುವ ಚೀನಾದ ಎದುರು ನಾವು ಬರಿಗೈಲಿ ಕೂತಿರಲು ಹೇಗೆ ಸಾಧ್ಯ?

ಜೊತೆಗೆ ಚೀನಾ ಮತ್ತೂ ಒಂದು ಕೆಲಸ ಮಾಡುತ್ತಿದೆ. ಪಾಕಿಸ್ತಾನಕ್ಕೆ ನಿಯಮಿತವಾಗಿ ಪರಮಾಣು ತಂತ್ರಜ್ಞಾನವನ್ನು ರಫ್ತು ಮಾಡುತ್ತಿದೆ. ಪಾಕಿಸ್ತಾನದಲ್ಲಿ ಒಂದೆರಡಲ್ಲ, ಒಟ್ಟು ಆರು ಪರಮಾಣು ರಿಯಾಕ್ಟರ್‍ಗಳನ್ನು ಸ್ಥಾಪಿಸಲು ನೆರವಾಗುತ್ತಿದೆ! ಭಾರತ ಒಂದು ಕ್ಷಿಪಣಿ ಪರೀಕ್ಷೆ ನಡೆಸಿದರೂ ಸಾಕು, ತಾನೂ ನಿಂತನಿಲುವಿನಲ್ಲೇ ಕ್ಷಿಪಣಿ ಉಡಾಯಿಸುವ ಪಾಕಿಸ್ತಾನ ಇನ್ನು ಈ ವಿಷಯದಲ್ಲಿ ಸುಮ್ಮನಿರುತ್ತದೆಯೇ? ಚೀನಾದ ತಂತ್ರಗಾರಿಕೆ ಒಂದು ಕಡೆ, ಪಾಕಿಸ್ತಾನದ ತೀರದ ಹಗೆತನ ಇನ್ನೊಂದು ಕಡೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟರೆ ನಮ್ಮ ಸುರಕ್ಷತೆಯ ಗತಿಯೇನು? ಇದು ಭಾರತದ ವಾದ. ಇದೇ ವಾದವನ್ನೇ ಪಾಕಿಸ್ತಾನವೂ ಮಾಡುತ್ತಿದೆ. ಅದರ ಮಾತಿಗೆ ಪುಷ್ಟಿ ನೀಡುವ ಹಾಗೆ ನಾವು ಎರಡನೆಯ ಸಲವೂ ಅಣು ಪರೀಕ್ಷೆ ಮಾಡಿಬಿಟ್ಟೆವಲ್ಲ! 1998ರಲ್ಲಿ!



ಅದಂತೂ ಇನ್ನೂ ರೋಚಕ ಕಥೆ. ದೇಶದ ಅಭಿವೃದ್ಧಿಯ ಕನಸನ್ನು ಕಂಡ ಮಹಾನುಭಾವ ಪಿ.ವಿ ನರಸಿಂಹರಾವ್‍ಗೆ ಮತ್ತೊಂದು ಪರಮಾಣು ಪರೀಕ್ಷೆ ಮಾಡಿಬಿಡುವ ಆತುರ. ಆದರೆ ಅಮೆರಿಕ ಗದರಿಸಿದ ಕಾರಣಕ್ಕೆ, ಇನ್ನೆಲ್ಲಿ ಆರ್ಥಿಕ ಉದಾರೀಕರಣಕ್ಕೆ ಪೆಟ್ಟು ಬಿದ್ದೀತೋ ಎಂಬ ಕಾರಣಕ್ಕೆ ಕೊನೆ ಕ್ಷಣದಲ್ಲಿ ಸುಮ್ಮನಾದರು. ಆದರೆ ಈ ವಿಷಯವಾಗಿ ಐ.ಕೆ ಗುಜರಾಲ್ ಹಾಗೂ ವಾಜಪೇಯಿಯವರ ಕಿವಿ ಊದಿದರು. ವಾಜಪೇಯಿಯವರು ಅಧಿಕಾರಕ್ಕೆ ಬಂದಾಗ ಭರದ ಸಿದ್ಧತೆ ಶುರುವಾಯಿತು. ಅಮೆರಿಕದ ಬೇಹುಗಾರಿಕಾ ಉಪಗ್ರಹ ತಮ್ಮ ಮೇಲೆ ಕಣ್ಣಿಟ್ಟಿದೆ ಎಂದು ಗೊತ್ತಿದ್ದರೂ ಅದನ್ನು ಯಶಸ್ವಿಯಾಗಿ ಯಾಮಾರಿಸಿದರು. ವಿಜ್ಞಾನಿಗಳೆಲ್ಲ ಸೈನಿಕರ ಸಮವಸ್ತ್ರಗಳನ್ನು ಧರಿಸಿ ಪೋಖ್ರಾನ್‍ನಲ್ಲಿ ಜಮಾಯಿಸಿದರು. ಬಾಂಬ್‍ಗಳ ಸಾಗಾಣಿಕೆ, ಜೋಡಣೆ, ಎಲ್ಲ ನಡೆಯುತ್ತಿದ್ದುದೂ ನಟ್ಟಿರುಳಿನಲ್ಲೇ. ಅಂತೂ ಪರೀಕ್ಷೆ ಮುಗಿಯುವವರೆಗೂ ಯಾರೊಬ್ಬರಿಗೂ ಗೊತ್ತಾಗಲಿಲ್ಲ. ಆಮೇಲೆ ಅಮೆರಿಕದಿಂದ ದಿಗ್ಬಂಧನ, ಉಳಿದ ದೇಶಗಳ ಕಣ್ಣಲ್ಲಿ ಖಳನಾಯಕನೆಂಬ ಪಟ್ಟ! ಚೀನಾ ಹಾಗೂ ಪಾಕಿಸ್ತಾನಗಳಿಗೆ ನಮ್ಮ ವಿರುದ್ಧ ದನಿಯೆತ್ತಲು ಇಷ್ಟೇ ಸಾಕಾಯಿತು. ನಾವು ಪರೀಕ್ಷೆ ನಡೆಸಿದ ಒಂದೇ ತಿಂಗಳೊಳಗೆ ಪಾಕಿಸ್ತಾನವೂ ತನ್ನ ಪರಮಾಣು ಶಕ್ತಿಯನ್ನು ಪ್ರದರ್ಶಿಸಿ ತಾನೇನೂ ಕಡಿಮೆಯಲ್ಲ ಎಂದು ಸಾರಿತು. ಆದರೂ ಮೊದಲಿಗೆ ಶುರುವಿಟ್ಟುಕೊಂಡಿದ್ದು ಭಾರತ, ಆದ್ದರಿಂದ ಅದನ್ನು ಎನ್‍ಎಸ್‍ಜಿ ಗುಂಪಿಗೆ ಸೇರಿಸಿಕೊಳ್ಳಬೇಡಿ ಎಂಬ ವರಾತ ಶುರು ಮಾಡಿತು. ಅದನ್ನು ಸೇರಿಸಿಕೊಂಡರೆ ತನ್ನನ್ನೂ ಸೇರಿಸಿಕೊಳ್ಳಬೇಕಾಗುತ್ತದೆ ಎಂಬ ಧಮಕಿಯನ್ನೂ ಹಾಕಿತು. ಅದರ ಬೆಂಬಲಕ್ಕೆ ನಿಂತಿತು ಚೀನಾ. ಅಂದಿನಿಂದ ಇಂದಿನವರೆಗೂ ಈ ಅಘೋಷಿತ ಯುದ್ಧ ನಡೆಯುತ್ತಲೇ ಬಂದಿದೆ.

ಐದು ರಾಷ್ಟ್ರಗಳನ್ನು ಹೊರತುಪಡಿಸಿದರೆ, ತಮ್ಮ ಬಳಿ ಅಣ್ವಸ್ತ್ರಗಳಿವೆ ಎಂದು ಹೇಳಿಕೊಂಡಿರುವ ದೇಶಗಳು ಮೂರೇ ಮೂರು. ಭಾರತ, ಪಾಕಿಸ್ತಾನ ಹಾಗೂ ಉತ್ತರಕೊರಿಯಾ. ಏನನ್ನೂ ತೋರಿಸಿಕೊಳ್ಳದೆ ಒಳಗೊಳಗೇ ಅಣ್ವಸ್ತ್ರಗಳನ್ನು ಗುಡ್ಡೆಹಾಕಿಕೊಂಡು ಕೂತಿದೆ ಇಸ್ರೇಲ್. ಮಿಕ್ಕ ದೇಶಗಳು ಈ ಉಸಾಬರಿಗೇ ಹೋಗಿಲ್ಲ. ಉಳಿದವುಗಳ ಕಥೆ ಏನೇ ಇರಲಿ, ನಮ್ಮ ವಾದ ಸರಿಯಾಗೇ ಇದೆ. ನಾವು ಸುಮಾರು 7,500 ಕಿಮೀಗಳ ಗಡಿಯನ್ನು ಚೀನಾ ಹಾಗೂ ಪಾಕಿಸ್ತಾನಗಳೊಂದಿಗೆ ಹಂಚಿಕೊಂಡಿದ್ದೇವೆ. ಎರಡೂ ದೇಶಗಳೊಡನೆ ಈ ಹಿಂದೆ ಯುದ್ಧವೂ ನಡೆದಿದೆ. ಹೀಗಿರುವಾಗ, ನಾವು ಶಾಂತಿಪ್ರಿಯರು ಎಂಬ ಕಾರಣಕ್ಕೆ ಅವರೂ ಸುಮ್ಮನಿರುತ್ತಾರೆ ಎಂದು ನೆಚ್ಚಿಕೊಳ್ಳಲು ಹೇಗೆ ಸಾಧ್ಯ?

ಈ ಸತ್ಯವನ್ನೇ ಉಳಿದ ದೇಶಗಳಿಗೆ ಮನವರಿಕೆ ಮಾಡಿಕೊಡುತ್ತಾ ಬಂದಿದೆ ಭಾರತ ಸರ್ಕಾರ. ಅವುಗಳ ಮನಸ್ಥಿತಿಯಲ್ಲಿ ಬದಲಾವಣೆಯೂ ಇದೆ. 2008ರಲ್ಲಿ ಅಮೆರಿಕ ನಮ್ಮೊಡನೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದೇ ಅದಕ್ಕೆ ಸಾಕ್ಷಿ. ಈ ಸಲವಂತೂ ಇನ್ನಿಲ್ಲದ ಪ್ರಯತ್ನ ನಡೆಸಿತು ಮೋದಿ ಸರ್ಕಾರ. ಎನ್‍ಎಸ್‍ಜಿಯ ಅಧ್ಯಕ್ಷ ರಾಫೆಲ್ ಗ್ರಾಸಿ ಇದೇ ತಿಂಗಳು ಭಾರತಕ್ಕೆ ಬಂದು ಮಾತುಕತೆಯಾಡಿ ಹೋದರು. ಒಂದೊಮ್ಮೆ ಭಾರತವನ್ನು ಸೇರಿಸಿಕೊಂಡರೆ ಪಾಕಿಸ್ತಾನವನ್ನೂ ಸೇರಿಸಿಕೊಳ್ಳಬೇಕು ಎಂದು ಚೀನಾ ಎಂದಿನಂತೆ ಪಟ್ಟು ಹಿಡಿಯಿತು. ಉಳಿದ 48 ಸದಸ್ಯ ರಾಷ್ಟ್ರಗಳ ಅಭಿಮತವನ್ನೂ ಕೇಳಿತು. ಟರ್ಕಿಯನ್ನು ಬಿಟ್ಟರೆ ಬಹುತೇಕ ಎಲ್ಲ ರಾಷ್ಟ್ರಗಳೂ ಭಾರತದ ಸೇರ್ಪಡೆಯನ್ನು ಬೆಂಬಲಿಸಿದವು. ಚೀನಾದ ಅಧ್ಯಕ್ಷ ಜಿನ್‍ಪಿಂಗ್‍ರ ಮನವೊಲಿಸಲು ಖುದ್ದು ಮೋದಿಯೇ ಮಾತುಕತೆ ನಡೆಸಿದರು. ಆದರೂ ಅದು ತನ್ನ ಹಟ ಬಿಡಲಿಲ್ಲ. ಪರಿಣಾಮ, ಎನ್‍ಎಸ್‍ಜಿ ಎಂಬ ಬಿಸಿತುಪ್ಪ ನಮ್ಮ ಗಂಟಲಲ್ಲೇ ಉಳಿದಿದೆ.

ಒಂದು ಕೆನ್ನೆಗೆ ಹೊಡೆದರೆ ಇನ್ನೊಂದನ್ನೂ ತೋರಿಸು ಎನ್ನುವುದು ಗಾಂಧಿಯ ಕಾಲಕ್ಕೇ ಮುಗಿಯಿತು. ಈಗ ಒಂದು ಕೆನ್ನೆಗೂ ಏಟು ತಿನ್ನದಿರುವುದೇ ಜಾಣತನ. ಇಂಥ ಪ್ರಯತ್ನಗಳು ಸದಾ ಜಾರಿಯಲ್ಲಿರಬೇಕು. ಫಲಿತಾಂಶ ಇಂದಲ್ಲ ನಾಳೆ ಖಂಡಿತ ಸಿಗುತ್ತದೆ!

ಬ್ರಾಹ್ಮಣನಿಗೆ ಬ್ರಾಹ್ಮಣನೇ ಶತ್ರು!

ಮಾತನ್ನು ಹೇಳಲೇಬೇಕೆನಿಸುತ್ತಿದೆ. ಅವತ್ತು ಮತ್ತೂರನ್ನೆಲ್ಲ ಸುತ್ತು ಹಾಕಿ ವಿಷಯ ಸಂಗ್ರಹ ಮಾಡಿ ದಣಿದು ರಾತ್ರಿ ಟಿವಿ ಮುಂದೆ ಕೂತೆ. ವಿಷಯದ ಪ್ರಸಾರವನ್ನೇ ದತ್ತು ಪಡೆದ ಕೆಲ ಚಾನೆಲ್ಗಳಿವೆಯಲ್ಲ, ಅವು ಏನು ಹೇಳುತ್ತಿವೆಯೋ ನೋಡೋಣವೆಂಬ ಕುತೂಹಲ ನನಗೆ. ನೋಡಿದರೆ, ಮೇಕೆಯ ಒಡೆಯ ಕುಮಾರ ಹಾಗೂ ಅವನ ಮೇಕೆಯ ನೇರಪ್ರಸಾರ! ಅವನಿಗಾದರೂ ವಿಷಯ ಅರ್ಥವಾಗುತ್ತೆ, ಆದರೆ ಪಾಪದ ಮೇಕೆಗೆಲ್ಲಿ ಹಣೆಬರಹ? ಮಧ್ಯಾಹ್ನವಷ್ಟೇ ಕುಮಾರ ಅಲವತ್ತುಕೊಂಡಿದ್ದ. 'ಮೇಕೆಯನ್ನ ಎಲ್ಲರಿಗೂ ತೋರಿಸಿ ತೋರಿಸಿ ಸಾಕಾಗಿದೆ ಮೇಡಂ. ಒಳ್ಳೆ ಕೆಲಸಕ್ಕೆ ಅಂತ ಕೊಟ್ಟಿದ್ದೇ ದೊಡ್ಡ ತಪ್ಪಾಗೋಯ್ತು ನೋಡಿ.' ಅಂತ. ಈಗ ಮತ್ತೆ ಅವನನ್ನು ಎಳೆದುಕೊಂಡು ಬಂದಿದ್ದರು. ಬಹುಶ ಐಶ್ವರ್ಯ ರೈಳನ್ನು ಬಿಟ್ಟರೆ ನಮ್ಮ ಮಾಧ್ಯಮದವರು ಹೀಗೆ ಮುಗಿಬಿದ್ದು ನೋಡಿದ್ದು ಮೇಕೆಯನ್ನೇ ಏನೋ! ಯಾರೋ ಪುಣ್ಯಾತ್ಮರು ಫೋಟೋದಲ್ಲಿದ್ದ ಮೇಕೆಯನ್ನೂ ಜೀವಂತ ಮೇಕೆಯನ್ನೂ ಹೊಂದಿಸಿ ನೋಡುತ್ತಿದ್ದರು. ಅದರ ಬಾಲ, ತಲೆ, ಮೈಬಣ್ಣ ಎಲ್ಲವನ್ನೂ ಇಂಚು ಪಟ್ಟಿ ಹಿಡಿದು ಅಳತೆ ತೆಗೆದಿರುವವರ ಹಾಗೆ ಮಾತನಾಡುತ್ತಿದ್ದರು. ಅಷ್ಟರಲ್ಲೇ ಕಿವಿಗೆ ಅಪ್ಪಳಿಸಿತು ವಿದ್ವಾಂಸರೊಬ್ಬರ ದನಿ. 'ಇದು ಸೋಮಯಾಗ ಅಲ್ಲವೇ ಅಲ್ಲ. ಅದಕ್ಕೆ ಬಾಡಿಗೆ ಮೇಕೆ ತರುವುದು ಸಿಂಧುವಲ್ಲ.' ಎಂದು ಹೇಳಿ, ಜೊತೆಗೆ ಇನ್ನೂ ಏನೇನೋ ಸೇರಿಸುತ್ತಾ, ತಮ್ಮ ಪ್ರಕಾರ ಸೋಮಯಾಗವನ್ನು ಹೇಗೆ ಮಾಡಬೇಕೆಂಬುದನ್ನು ವಿವರಿಸುತ್ತಿದ್ದರು.
ಕೇಳಿ ನಿಜವಾಗಿಯೂ ಮೈ ಉರಿದುಹೋಯಿತು. ಎಲ್ಲರೂ ಸೇರಿ ಬ್ರಾಹ್ಮಣರ ಮೇಲೆ ಮುಗಿಬಿದ್ದಿರುವ ಹೊತ್ತಿನಲ್ಲಿ, ಸತ್ಯಾಸತ್ಯತೆಯನ್ನು ಅರಿಯುವ ಒಂದೇ ಉದ್ದೇಶದಿಂದ ನನ್ನ ಖಾಸಗಿ ಕೆಲಸವನ್ನು ಬದಿಗೊತ್ತಿ ಮತ್ತೂರು ಸುತ್ತಿದ್ದೆ. ಇಲ್ಲಿ ನೋಡಿದರೆ ನಮ್ಮ ವಿದ್ವಾಂಸರುಗಳೇ ಸಾಕ್ಷಾತ್ ವಿಧ್ವಂಸಕರಾಗಿಬಿಟ್ಟಿದ್ದಾರೆ! ತಮ್ಮವರೇ ಮಾಡಿದ ಯಾಗವನ್ನು ಟಿವಿ ಚಾನೆಲ್ಗಳ ಮುಂದೆ ಹಳಿಯುತ್ತಿದ್ದಾರೆ. ತಮ್ಮ ವ್ಯಾಖ್ಯಾನವೇ ಸರಿ ಎಂದು ತೋರಿಸುವ ಉಮೇದು! ತಮ್ಮ ಪಾಂಡಿತ್ಯವನ್ನು ಜಗಜ್ಜಾಹೀರುಗೊಳಿಸುವ ತವಕ! ವೇದಗಳನ್ನು ಓದಿಕೊಂಡಿರದಿದ್ದರೂ, ಯಾವ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂಬ, ನನಗಿರುವ common sense ಅವರ ವಿದ್ವತ್ತಿಗಿಂತ ಎಷ್ಟೋ ವಾಸಿ ಎನಿಸಿಬಿಟ್ಟಿತು! ತಮ್ಮ ಜ್ಞಾನಸಂಪತ್ತನ್ನು ಹರವಿಡಲು ಕೋಳಿಜಗಳಗಳಲ್ಲಿ ಭಾಗವಹಿಸಬೇಕೇ? ಜಗತ್ತಿನೆದುರು ತಮ್ಮವರನ್ನೇ ಮಾತಿನಲ್ಲಿ ಕುಕ್ಕಿ ಹುಳುಕು ತೆಗೆಯಬೇಕೆ? ಇವರೊಬ್ಬರ ಗೆಲುವು ಇಡೀ ಸಮುದಾಯದ ಸೋಲಲ್ಲವೇ? ಹೋಗಲಿ, ಇವರು ತಮ್ಮ ಬುದ್ಧಿ ಖರ್ಚು ಮಾಡಿ ಹೇಳಿದರು ಎಂಬ ಕಾರಣಕ್ಕೆ ಚಾನೆಲ್ಗಳವರು ಇವರು ಹೇಳಿದ ರೀತಿಯಲ್ಲಿ ಯಥಾವತ್ತು ಇನ್ನೊಂದು ಯಾಗ ಮಾಡಿಸಿಬಿಡುತ್ತಾರೆಯೇ? ಟಿವಿ ಚಾನೆಲ್ಗಳ ಟಿಆರ್ಪಿ ಹಸಿವನ್ನು ನೀಗಿಸುವ ಆಹಾರವಾಗಿ ಬಳಕೆಯಾಗುತ್ತಿದ್ದೇವೆಂಬ ಪರಿಜ್ಞಾನವಾದರೂ ಬೇಡವೇ? ವಿಷಯ ಅಂತಲೇ ಅಲ್ಲ. ಉಳಿದವುಗಳಲ್ಲೂ ಅಷ್ಟೇ. ಉದಾಹರಣೆಗೆ, ಸಾಹಿತಿಯೊಬ್ಬರು ಒಂದು ವಿಷಯವಾಗಿ ಏನನ್ನಾದರೂ ಬರೆದರು ಅಂತಿಟ್ಟುಕೊಳ್ಳಿ. ಮರುಕ್ಷಣವೇ ಅದನ್ನು ಮತ್ತೊಬ್ಬ ಸಾಹಿತಿ ಖಂಡಿಸಲನುವಾಗುತ್ತಾರೆ. ವಾಗ್ಮಿಯೊಬ್ಬರು ಒಂದು ಹೇಳಿಕೆ ಕೊಟ್ಟರೆ ನಿಂತನಿಲುವಲ್ಲೇ ಅದಕ್ಕೊಂದು ಟೀಕೆ ಹುಟ್ಟು ಹಾಕುವ ಚತುರ ಬ್ರಾಹ್ಮಣರಿರುತ್ತಾರೆ. ಅಲ್ಲವೇ ಮತ್ತೆ? ಭಗವಂತ ತಲೆಯ ತುಂಬ ಧಾರಾಳವಾಗಿ ತುಂಬಿ ಕಳುಹಿಸಿರುವ ಬುದ್ಧಿ ಖರ್ಚಾಗುವುದು ಬೇಡವೇ? ಬೇರೆಯವರು ಹೇಳಿದ್ದು ಸರಿ ಎಂದು ಒಪ್ಪಿಕೊಂಡರೆ ಇವರು ವರ್ಷಗಟ್ಟಳೆ ಓದಿ ಗಳಿಸಿಕೊಂಡ ವಿದ್ಯೆಗೆ ಅವಮಾನವಲ್ಲವೇ?


ವಾಸ್ತವವಾಗಿ ಬ್ರಾಹ್ಮಣರ ನಡು ಮುರಿಯಲು ಯಾವ ಮುಸ್ಲಿಮನೂ, ಮತಾಂತರಿಯೂ ಬೇಕಿಲ್ಲ. ವಿಧ್ವಂಸಕರೇ ಸಾಕು. ಯಾರಾದರೂ ಮಾಧ್ಯಮದವರೋ ಅಥವಾ ಸೆಕ್ಯುಲರ್ ಮಂದಿಯೋ ಇವರಿಗೆ 'ಕೀ' ಕೊಟ್ಟು ತಿರುಗಿಸಿಬಿಟ್ಟರೆ ಸಾಕು, ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಲೇ ಇರುತ್ತಾರೆ. ಒಗ್ಗಟ್ಟಾಗಿರಬೇಕೆಂಬ, ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಬೇರೆಯವರಿಗೆ ಗೊತ್ತಾಗಬಾರದೆಂಬ ಕನಿಷ್ಠ ಸಾಮಾನ್ಯಜ್ಞಾನವಿಲ್ಲದಿದ್ದ ಮೇಲೆ ಎಷ್ಟು ಪಾಂಡಿತ್ಯವಿದ್ದರೇನು ಬಂತು? ವಿಭೂತಿಯನ್ನು ನೋಡಿದರೆ ನಾಮಕ್ಕೆ ಸಂಕಟ! ನಾಮವನ್ನು ನೋಡಿದರೆ ಮುದ್ರೆಗೆ ಇರುಸುಮುರುಸು! ಮಠಗಳಲ್ಲೂ ಅಷ್ಟೇ. ಮುಖ ನೋಡಿ ಮುಲಾಜಿಲ್ಲದೆ ಮೂರಡಿ ಮೇಲಿನಿಂದ ತೀರ್ಥ ಸುರಿಯುವ ಮಂದಿ ಇವರು! ಇದೆಲ್ಲ ಎಂದಿಗಾದರೂ ಸರಿಹೋದೀತಾ?
ಗಳಿಸಿಕೊಂಡಿರುವ ವಿದ್ಯೆಯನ್ನು ವಿನಿಯೋಗಿಸಲು ಟಿವಿ ಚಾನೆಲ್ಗಳೇ ಆಗಬೇಕೆಂದಿಲ್ಲ. ಈಗಿನ ನಮ್ಮ ಶಿಕ್ಷಣ ಪದ್ಧತಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಾಕು, ಬೇಕಾದಷ್ಟು ಮಾರ್ಗಗಳು ಗೋಚರಿಸುತ್ತವೆ. ಧಾರ್ಮಿಕ ಶಿಕ್ಷಣದ ಗಂಧ-ಗಾಳಿಯೂ ಇಲ್ಲದ ಇಂದಿನ ಪೀಳಿಗೆಗೆ ವೇದಗಳ ಅರಿವು ಮೂಡಿಸಬಹುದಲ್ಲ? ಬೇಸಿಗೆ ರಜೆಯಲ್ಲಿ ವಿಧಿಯಿಲ್ಲದೆ ಸಮ್ಮರ್ ಕ್ಲಾಸುಗಳಿಗೆ ಹೋಗುವ ಮಕ್ಕಳನ್ನು ಒಂದು ಕಡೆ ಗುಡ್ಡೆ ಹಾಕಿಕೊಂಡು ಅವುಗಳಿಗೆ ಶಿಕ್ಷಣ ಕೊಡಬಹುದಲ್ಲ? ಎಲ್ಲಕ್ಕಿಂತ ಹೆಚ್ಚಾಗಿ, ಅಭಿಪ್ರಾಯಭೇದವಿರುವ ವಿಷಯಗಳ ಬಗ್ಗೆ ಒಟ್ಟಾಗಿ ಕೂತು ಚರ್ಚಿಸಿ ಎಲ್ಲರಿಗೂ ಒಪ್ಪಿಗೆಯಾಗುವ ನಿರ್ಣಯಕ್ಕೆ ಬರಬಹುದಲ್ಲ? ಒಬ್ಬರು ಯಾಗ ಮಾಡುವವರೆಗೂ ಕಾದು ಕೂತು, ಆಮೇಲೆ ತೋಳಗಳ ಹಾಗೆ ಅವರ ಮೇಲೆರಗುವ ಅವಶ್ಯಕತೆ ಏನಿದೆ? ನಾಲ್ಕು ದಿನ ಕಳೆದು ವಿವಾದ ತಣ್ಣಗಾದ ಮೇಲೆ, ಮತ್ತೊಂದು ಯಾಗ ನಡೆಯುವವರೆಗೂ ಇವರನ್ನು ಯಾರಾದರೂ ತಿರುಗಿ ನೋಡುತ್ತಾರಾ?
ನಮಗೆ ಮಾದರಿಯಾಗಬಲ್ಲ ಒಂದು ಉದಾಹರಣೆಯನ್ನು ಗಮನಿಸಿ. ನಮ್ಮಲ್ಲಿ ತ್ರಿಮತಸ್ಥರಿರುವ ಹಾಗೆ ಮುಸಿಮರಲ್ಲಿ ನಾಲ್ಕು School Of Thoughtಗಳಿವೆ. ಅವುಗಳೆಂದರೆ, ಇಮಾಮ್ ಹನೀಫ, ಇಮಾಮ್ ಶಫಿ, ಇಮಾಮ್ ಮಲ್ಲಿಕ್ ಹಾಗೂ ಇಮಾಮ್ ಹನ್ಬಲ್‍‍ರದ್ದು. ಕುರಾನ್, ಹದಿಸ್, ಸುನ್ನ ಹಾಗೂ ಶರಿಯಾಗಳು ಎಲ್ಲರಿಗೂ ಏಕಪ್ರಕಾರವಾಗೇ ಅನ್ವಯವಾದರೂ ಸಣ್ಣ ಪುಟ್ಟ ಅಭಿಪ್ರಾಯಭೇದಗಳು ಅವರಲ್ಲೂ ಇವೆ. ಉದಾಹರಣೆಗೆ, ಇಸ್ಲಾಮಿಗೆ ಮತಾಂತರ ಹೊಂದಲಿಚ್ಛಿಸದ ಕಾಫಿರರು ಕರ ಕೊಟ್ಟು (ಅರೇಬಿಕ್ನಲ್ಲಿ ಅದನ್ನು ಜಿಸ್ಯಾಹ್ ಎನ್ನುತ್ತಾರೆ) ಬದುಕಬಹುದು ಎಂಬುದನ್ನು ಇಮಾಮ್ ಹನೀಫ ಮಾತ್ರ ಬೆಂಬಲಿಸುತ್ತಾರೆ. ಉಳಿದವರದ್ದು ಇದಕ್ಕೆ ಕಟ್ಟಾ ವಿರೋಧ. ಅವರ ಪ್ರಕಾರ ಅಂಥ ಕಾಫಿರರಿಗೆ ಬದುಕುವ ಅವಕಾಶವನ್ನೇ ನೀಡಬಾರದು! ಅಭಿಪ್ರಾಯಭೇದವಿದೆಯೆಂದ ಮಾತ್ರಕ್ಕೆ ಅವರು ಒಬ್ಬರನ್ನೊಬ್ಬರು ಖಂಡಿಸುವುದಿಲ್ಲ. ಮತ್ತೂಬ್ಬರದು ತಪ್ಪೆಂದು ಸಾಬೀತು ಮಾಡಲು ಪ್ರಯತ್ನಿಸುವುದಿಲ್ಲ. ಅಷ್ಟ್ಯಾಕೆ, ಇಮಾಮನೊಬ್ಬ ಹೊರಡಿಸುವ ಫತ್ವಾದ ಬಗ್ಗೆ ಬೇರೊಬ್ಬ ಅಪ್ಪಿತಪ್ಪಿಯಾದರೂ ಸೊಲ್ಲೆತ್ತುವುದನ್ನೆಲ್ಲಾದರೂ ಕೇಳಿದ್ದೀರಾ? ಅದರಲ್ಲೆಷ್ಟೇ ತಪ್ಪಿರಲಿ, ಉಳಿದವರು ತೆಪ್ಪಗಿರುತ್ತಾರೆ! ತಮ್ಮವರನ್ನು ಬಿಟ್ಟುಕೊಡುವುದಿಲ್ಲ.
ತೀರ ಮೊನ್ನೆ ನನಗಾದ ಇನ್ನೊಂದು ಅನುಭವ. ಶಿವಮೊಗ್ಗದಿಂದ ರೈಲಿನಲ್ಲಿ ಬಂದು ಅಲ್ಲಿಂದ ಮನೆಗೆ ಬರುವ ಸಲುವಾಗಿ ಕ್ಯಾಬ್ ಹತ್ತಿದೆ. ಹೀಗೇ ಲೋಕಾಭಿರಾಮದ ಮಾತನ್ನಾಡುತ್ತಿದ್ದ ಕ್ಯಾಬ್ ಡ್ರೈವರ್ಗೆ ನಾನು ಬ್ರಾಹ್ಮಣಳೆನ್ನುವುದು ಗೊತ್ತಾಗಿರಬೇಕು. ಕೇಳಿದ, 'ಮೇಡಮ್, ರೈತನಿಂದ ಅನ್ನವಾದರೂ ಸಿಗುತ್ತೆ. ಕುರುಬನಿಂದ ತಿನ್ನಲು ಕುರಿ ಸಿಗುತ್ತೆ. ಬ್ರಾಹ್ಮಣರಿಂದ ಸಮಾಜಕ್ಕೆ ಏನು ಸಿಗುತ್ತೆ?' ನಾನು ಬೇಕಂತಲೇ ಸುಮ್ಮನಾದೆ. ನನ್ನ ಮೌನ ಅವನಿಗೆ ಪುಷ್ಠಿ ನೀಡಿತೇನೋ, ಸುಮಾರು ಹತ್ತು ನಿಮಿಷ ಶೋಷಣೆಯ, ಅಂಬೇಡ್ಕರ್ ಬಗ್ಗೆ ಮಾತನಾಡಿದ. ಕೇಳುವಷ್ಟು ಕೇಳಿ ಕೊನೆಗೊಮ್ಮೆ ರೋಸಿಹೋಗಿ, ‘ಭೂಮಿಯ ಮೇಲಿರುವ ಬ್ರಾಹ್ಮಣರನ್ನೆಲ್ಲ ಅಳಿಸಿ ಹಾಕಿಬಿಟ್ಟರೆ ನಿಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಸಿಕ್ಕಿಬಿಡುತ್ತದಾ?' ಎಂದೆ. ನಿರುತ್ತರನಾದ. ಅಲ್ಲಿಂದ ಮುಂದೆ ನಾನು ಮಾತನಾಡಿದೆ. ಅವನು ಕೇಳಿಸಿಕೊಂಡ. ಅಂಬೇಡ್ಕರ್ರನ್ನು ಹೆಜ್ಜೆಹೆಜ್ಜೆಗೂ ಕೈಹಿಡಿದು ಕಾಪಾಡಿದ್ದು, ಅವರನ್ನು ಬೆಳೆಯಲು ಬಿಟ್ಟಿದ್ದು, ಸಂವಿಧಾನದ ಕರಡು ಪ್ರತಿಯನ್ನು ಬರೆದಿದ್ದೂ ಬ್ರಾಹ್ಮಣರೇ ಎಂಬುದನ್ನೆಲ್ಲ ಸಾದ್ಯಂತವಾಗಿ ವಿವರಿಸಿದೆ. ಮೀಸಲಿನ ದುರ್ಬಳಕೆಯಾಗುತ್ತಿರುವ ಪರಿಯನ್ನು ಹೇಳಿದಾಗಲಂತೂ ಅವನು ಹೇಳಿದ್ದು, 'ಅಯ್ಯೋ, ಇದನ್ನೆಲ್ಲ ಬ್ರಾಹ್ಮಣರು ನೀವು ಓದಿ ನಮಗೆ ಬಿಡಿಸಿ ಹೇಳಬೇಕು. ಇಲ್ಲದಿದ್ದರೆ ಸತ್ಯ ನಮಗೆ ಹೇಗೆ ಗೊತ್ತಾಗುತ್ತೆ?' ಎಂದು. ಅವನು ತಾರಕದಲ್ಲಿ ಕಿರುಚಿ ಮಾಡಿದ್ದ ವಾದಕ್ಕೆ ನನ್ನ ಪ್ರತಿವಾದ ಮೆಲುದನಿಯ ವಿವರಣೆಯೇ ಆಗಿದ್ದರೂ ಬ್ರಾಹ್ಮಣರ ಅಗತ್ಯವನ್ನು ಅವನೇ ಹೆಜ್ಜೆಹೆಜ್ಜೆಗೂ ಅನುಮೋದಿಸುತ್ತಿದ್ದುದು ಸ್ಪಷ್ಟವಾಗಿತ್ತು. ನಾನು ಹೇಳಲು ಹೊರಟಿರುವುದು ಇಷ್ಟೇ. ದುರ್ಬುದ್ಧಿಜೀವಿಗಳು ಎಂದೋ ಬಿತ್ತಿರುವ ವಿಷಬೀಜ ಇಂದು ರಾಕ್ಷಸಾಕಾರವಾಗಿ ಬೆಳೆದು ನಿಂತಿದೆ. ಒಂದು ಸಣ್ಣ ಕಾರಣ ಸಿಕ್ಕರೂ ಸಾಕು, ಬ್ರಾಹ್ಮಣರನ್ನು ಬಡಿದು ಬಾಯಿಗೆ ಹಾಕಿಕೊಳ್ಳಲು ನೂರಾರು ಮಂದಿ ಸಿದ್ಧರಿದ್ದಾರೆ. ಕ್ಯಾಬ್ಡ್ರೈವರ್ನಿಗೆ ಅರ್ಥಮಾಡಿಸುವಷ್ಟು ತಿಳುವಳಿಕೆ ನನಗಿತ್ತು. ಇಲ್ಲದಿದ್ದರೆ ಅವನ ಮಾತಿನಲ್ಲಿದ್ದ ರೋಷ, ಆವೇಶಕ್ಕೆ ಭಯಗೊಳ್ಳುವ ಸಾಧ್ಯತೆಯೇ ಹೆಚ್ಚಿದ್ದಿದ್ದು.
ನೆನಪಿಡಿ, ದಿನಂಪ್ರತಿ ಜನರೊಂದಿಗೆ ಒಡನಾಡುವಾಗ, ಇಂಥ ಸಂದರ್ಭಗಳು ಎದುರಾದಾಗ ನಮ್ಮ ಜೊತೆ ವಿದ್ವಾಂಸರುಗಳಿರುವುದಿಲ್ಲ. ನಮ್ಮ ವಾಗ್ಯುದ್ಧದ ತಯಾರಿಯನ್ನು ನಾವೇ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನಮಗೆ ಬೇಕಾದ ಸತ್ಯಾಂಶಗಳನ್ನು ಒದಗಿಸುವ ಹೊಣೆ ಅವರದ್ದೇ ಆಗಿರುತ್ತದೆ. ಹೊಣೆಯನ್ನು ಈಗೆಷ್ಟು ಮಂದಿ ಸರಿಯಾದ ಅರ್ಥದಲ್ಲಿ ನಿಭಾಯಿಸುತ್ತಿದ್ದಾರೆ? ವೇದಬ್ರಹ್ಮರುಗಳಿಗೂ ಸಂಸ್ಕೃತ ವಿದ್ವಾಂಸರುಗಳಿಗೂ ಇರುವ ಮುನಿಸು ಯಾವತ್ತು ಮರೆಯಾಗುತ್ತದೆ? ಒಮ್ಮತವೆಂಬ ವೈಕುಂಠದ ದ್ವಾರ ತೆರೆದುಕೊಂಡು ನಮಗೆ ಯಾವಾಗ ಮೋಕ್ಷ ಪ್ರಾಪ್ತಿಯಾಗುತ್ತದೆ? ಸೋಮಯಾಗದ ವಿಷಯಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನೇ ನೋಡಿ. ಸಿಕ್ಕಿದ್ದೇ ಅವಕಾಶ ಎಂದು ಭಗವಾನ(ರರು)ಗಳೆಲ್ಲ ತಮ್ಮ ನಾಲಗೆಯ ತೀಟೆ ತೀರಿಸಿಕೊಳ್ಳುತ್ತಿದ್ದಾರೆ. ಯಜ್ಞ-ಯಾಗಾದಿಗಳನ್ನೆಲ್ಲ ಬಹಿಷ್ಕರಿಸಿ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಮುಸ್ಲಿಮರ ವಿಷಯದಲ್ಲಿ ಮೂಕ ಬಸವಗಳಾಗಿಬಿಡುವ ಇವರಿಗೆ ಬ್ರಾಹ್ಮಣರ ವಿಷಯದಲ್ಲಿ ಇಷ್ಟೊಂದು ಸದರ ಹುಟ್ಟಿಕೊಳ್ಳಲು ಕಾರಣರಾರು? ನಮ್ಮ ವೈಮನಸ್ಸೇ ತಾನೆ?

ನಾಮದ ಗೀಟುಗಳನ್ನು, ವಿಭೂತಿ ಪಟ್ಟೆಯ ಗೆರೆಗಳನ್ನು ನೋಡಿ ಹೆಮ್ಮೆಪಟ್ಟುಕೊಳ್ಳುವ ಕಾಲ ಯಾವತ್ತೋ ಮುಗಿದಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, 'ಒಂದಾನೊಂದು ಕಾಲದಲ್ಲಿ, ಬ್ರಾಹ್ಮಣರು ಎಂದು ಕರೆಸಿಕೊಳ್ಳುತ್ತಿದ್ದ ಜನರಿದ್ದರಂತೆ.' ಎಂಬ ಕಥೆ ಹುಟ್ಟಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ! ತ್ರಿಮತಸ್ಥರೇ, ಇನ್ನಾದರೂ ಒಟ್ಟಾಗಿ!

ಮದ್ಯ ಹೀರಿ ಮಾಂಸಾಹಾರ ಸೇವಿಸಲು ಲಕ್ಷಗಟ್ಟಳೆ ಖರ್ಚಿನ ಸೋಮಯಾಗವೇ ಆಗಬೇಕೇ?

ಹಿನ್ನೆಲೆ:
ಒಂದು ಮಿತಿಯಿರಬೇಕು. ಸುದ್ದಿಯನ್ನು ತಿರುಚುವುದಕ್ಕೆ, ಅಸತ್ಯವನ್ನೇ ಸತ್ಯವೆಂದು ಬಿಂಬಿಸಲು ಹೊರಡುವ ಉದ್ಧಟತನಕ್ಕೆ ಒಂದು ಮಿತಿ ಇರಲೇಬೇಕು. ಇಲ್ಲದಿದ್ದರೆ ಅಸಹ್ಯ ಹುಟ್ಟುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದನ್ನೇ ಅಸ್ತ್ರವಾಗಿಸಿಕೊಂಡು ತಮಗೆ ಬೇಡದವರ ಮೇಲೆ ಕೆಸರೆರಚುವುದನ್ನು ನೋಡಿದರೆ ಮನಸ್ಸು ನಿಜವಾಗಿಯೂ ಮುರುಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳ ಗೋಡೆಗಳ ಮೇಲೆ ಅನಿಸಿಕೆಗಳನ್ನು ಬರೆದುಕೊಳ್ಳುವುದು ಒಂದು ಮಾತು. ಆದರೆ ರಾಜ್ಯಮಟ್ಟದ ಪತ್ರಿಕೆಯೊಂದು ಕೈಗೆ ಸಿಕ್ಕ ಸುದ್ದಿಯ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ, ಕನಿಷ್ಠ ಪತ್ರಿಕಾಧರ್ಮವನ್ನೂ ಪಾಲಿಸದೆ ಶರಾ ಬರೆದುಬಿಡುತ್ತದಲ್ಲ, ಅದರಿಂದಾಗುವ ಅನರ್ಥ, ಕದಡುವ ಸಾಮರಸ್ಯವನ್ನು ಸರಿ ಮಾಡುವುದು ಅಷ್ಟು ಸುಲಭವಲ್ಲ.
ಸುದ್ದಿ ಹುಟ್ಟಿದ್ದು ಹೀಗೆ. 'ಮತ್ತೂರಿನಲ್ಲಿ ಸೋಮಯಾಗ ನಡೆಯಿತಂತೆ! ಎಂಟು ಮೇಕೆಗಳು ಬಲಿಯಾದವಂತೆ! ಯಾಗದಲ್ಲಿ ಭಾಗವಹಿಸಿದ ಬ್ರಾಹ್ಮಣರೆಲ್ಲ ಮೇಕೆಗಳ ಮಾಂಸವನ್ನು ತಿಂದು, ಸೋಮರಸ ಎಂಬ ಕಳ್ಳಭಟ್ಟಿ ಸಾರಾಯಿಯನ್ನೂ ಕಂಠಪೂರ್ತಿ ಕುಡಿದು ತೇಗಿದರಂತೆ!' ವಿಷಯ ಅಲ್ಲಿಗೇ ನಿಲ್ಲಲಿಲ್ಲ. ಅದಕ್ಕೆ ಪೂರಕವಾದ ಒಂದಿಷ್ಟು ಫೋಟೋಗಳು, ವೀಡಿಯೋಗಳೂ ಎಲ್ಲರ ಮೊಬೈಲುಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡಿದವು. ಅಷ್ಟಕ್ಕೇ ಶುರುವಾಯಿತು ಬೊಬ್ಬೆ! ಸುದ್ದಿಯ ನಿಖರತೆ, ಯಾಗದ ಬಗೆಗಿನ ಮಾಹಿತಿಯನ್ನು ಕಲೆಹಾಕುವುದಕ್ಕಿಂತ, ಬಡಬ್ರಾಹ್ಮಣರನ್ನು ಮತ್ತೊಮ್ಮೆ ಹಳಿಯುವ ಅವಕಾಶ ಸಿಕ್ಕಿತಲ್ಲ ಎಂದು ಬೀಗಿಬಿಟ್ಟಿತು ಸೆಕ್ಯುಲರರ ಸಮುದಾಯ. ಬುದ್ಧಿಜೀವಿಗಳ ಸತ್ತ ಮಿದುಳುಗಳಲ್ಲಿ ಇದ್ದಕ್ಕಿದ್ದ ಹಾಗೆ ಜೀವಶಕ್ತಿಯ ಸಂಚಾರ! ಸೋಮಯಾಗ ಎಂಬುದೊಂದಿದೆ ಎನ್ನುವುದೇ ಗೊತ್ತಿರದ ಮಂದಿಯೂ ಬ್ರಾಹ್ಮಣರಿಗೆ ಹಿಡಿಶಾಪ ಹಾಕಿ ಹಗುರವಾದರು! ಪ್ರತಿಭಟನಾಕಾರರಿಗೆ, ಬೀದಿಗಿಳಿದು ಧಿಕ್ಕಾರ ಕೂಗಲು, ಹೊತ್ತು ಕಳೆಯಲು ಹೊಸದೊಂದು ವಿಷಯ ಸಿಕ್ಕ ಸಂಭ್ರಮ.
ಅತ್ತ, ರಾಜ್ಯದ ಸಮಸ್ತ ಆಗು-ಹೋಗುಗಳ ಜವಾಬ್ದಾರಿಯೂ ತನ್ನದೇ ಎಂಬ ಪರ-ವಿರೋಧದ ಬೇಗೆಯಲ್ಲಿ ಬೆಂಗಳೂರು ಬೇಯುತ್ತಿದ್ದಾಗಲೇ ಇತ್ತ, ತಲೆಯನ್ನು ಅಂತೆ-ಕಂತೆಗಳ ಸಂತೆಯನ್ನಾಗಿಸಿಕೊಂಡು ಮತ್ತೂರಿನ ದಾರಿ ಹಿಡಿದೆ. ಇದು ಮತ್ತೂರಿನ ರಸ್ತೆ ತಾನೆ ಎಂದು ಕೇಳಿದಾಕ್ಷಣ ಮರುಪ್ರಶ್ನೆ. ‘ನೀವು ಟಿವಿಯವರಾ ಅಥವಾ ಪೇಪರ್ನವರಾ?’ ತಕ್ಷಣಕ್ಕೆ ತೋಚಿದ ಒಂದು ಉತ್ತರವನ್ನು ಹೇಳಿ ಹೊರಟೊಡನೆ ಬೆನ್ನ ಹಿಂದೆಯೇ ಉದ್ಗಾರ. ' ಯಾಗ ಮಾಡಿದ್ದೇ ನೆಪ. ಅದೆಷ್ಟು ಜನ ಬರ್ತಿದಾರೆ ನೋಡಿ ಮತ್ತೂರಿಗೆ.'
ಅಂತೂ ಮತ್ತೂರು ತಲುಪಿ, ಯಾಗದ ರೂವಾರಿ, ಯಜಮಾನ, ಸಂಕಲ್ಪ ಶಕ್ತಿಯಾದ ಸಂಸ್ಕೃತ ವಿದ್ವಾಂಸ ಶ್ರೀಯುತ ಸನತ್ ಕುಮಾರ ಅವಧಾನಿಗಳೊಡನೆ ಒಂದಷ್ಟು ಹೊತ್ತು ಕಳೆದ ಮೇಲೆ ನಿಜ ವಿಷಯದ ಅರಿವಾಗತೊಡಗಿತು. ಅಲ್ಲಿಂದ ಸೀದಾ ಯಾಗ ನಡೆದ ಶ್ರೀಕಂಠಪುರಕ್ಕೆ (ಮತ್ತೂರಿನಿಂದ 1 ಕಿಮೀ) ಭೇಟಿ ಕೊಟ್ಟು, ಇನ್ನೂ ಅಲ್ಲೇ ಪ್ರತಿಷ್ಠಾಪಿಸಲಾಗಿದ್ದ ಅಗ್ನಿಹೋತ್ರವನ್ನು ನೋಡಿದ ಮೇಲೂ ಕುತೂಹಲ ತಣಿಯಲಿಲ್ಲ. ಸೋಮಯಾಗದ ವಿಲನ್ ಮೇಕೆ ತಾನೇ? ಅದು ಯಾವ ಊರಿನದು, ಅದನ್ನು ನೋಡಬಹುದೇ ಎಂದು ಕೇಳಿದಾಗ ಮೇಕೆಯ ಒಡೆಯನನ್ನು ಕರೆಸಿ ನನ್ನನ್ನು ಅವನೂರು ಸಿದ್ಧರಹಳ್ಳಿಗೂ (ಮತ್ತೂರಿನಿಂದ 1 ಕಿಮೀ) ಕಳಿಸಿದರು. ಅವನ ಕೊಟ್ಟಿಗೆಯಲ್ಲಿ ಮಹಾತಾಯಿ ತನ್ನಿಬ್ಬರು ಮಕ್ಕಳಿಗೆ ಹಾಲೂಡಿಸುತ್ತ ನೆಮ್ಮದಿಯಾಗಿ ಮಲಗಿದ್ದಳು. ಮನಸ್ಸು ಸ್ವಲ್ಪ ಮಟ್ಟಿಗೆ ಶಾಂತವಾಯಿತು. ಆದರೆ ಆಗಿನಿಂದ ಒಂದು ಹೊಸ ಕಳವಳ ಮನೆಮಾಡಿದೆ. ನಾಲ್ಕಾರು ಜನ ತಮಗೆ ತೋಚಿದ್ದನ್ನೇ ಸತ್ಯ ಎಂದು ಹೇಳುವುದನ್ನೇ ಒಪ್ಪಿಕೊಳ್ಳುವಷ್ಟು ಕುಸಿದಿದೆಯಾ ನಮ್ಮ ಪತ್ರಿಕೋದ್ಯಮದ ನೈತಿಕತೆ? ಬ್ರಾಹ್ಮಣ ಸಮುದಾಯವನ್ನು ಪರಿ ದ್ವೇಷಿಸುವ, ಅದನ್ನು ಅಧಃಪತನಕ್ಕೆ ನೂಕುವ ತುರ್ತಾದರೂ ಏನಿದೆ ಈಗ? ಬ್ರಾಹ್ಮಣರ ವಿರುದ್ಧ ಇಷ್ಟು ವ್ಯವಸ್ಥಿತ ಸಂಚು ನಡೆಸುವುದಕ್ಕೆ ಅವರೇನು ಉಗ್ರಗಾಮಿಗಳೋ, ರಕ್ತಪಿಪಾಸುಗಳೋ ಅಥವಾ ಮತಾಂತರಿಗಳೋ? ಇರಲಿ. ಮತ್ತೂರಿನಲ್ಲಿ ಅರಿವಿಗೆ ಬಂದ ಅಷ್ಟೂ ವಿಷಯಗಳು ಎಲ್ಲರಿಗೂ ಅರ್ಥವಾಗಬೇಕಾದ್ದು ಅವಶ್ಯ. ವೇದ, ಹೋಮ-ಹವನ, ಯಜ್ಞ-ಯಾಗಾದಿಗೆ ಸಂಬಂಧಿಸಿದ ವಿಷಯಗಳು ಪುರೋಹಿತರದ್ದು, ಅದನ್ನು ಕಟ್ಟಿಕೊಂಡು ನಮಗೇನಾಗಬೇಕು ಎಂಬ ಧೋರಣೆ ನಮ್ಮಲ್ಲಿದೆ. ಅದನ್ನು ಇನ್ನಾದರೂ ಬಿಡಬೇಕು. ನಮಗೆ ಎಲ್ಲವನ್ನೂ ತಿಳಿಹೇಳುವ ನಿಟ್ಟಿನಲ್ಲಿ ಋತ್ವಿಜರೂ ಸಹಕರಿಸಬೇಕು. ಮತ್ತೂರಿನಲ್ಲಿ ನಿಜವಾಗಿಯೂ ಆದದ್ದು ಏನು ಎಂಬುದನ್ನು ವಿವರವಾಗಿ ಬಿಡಿಸಿಡುವ ಪ್ರಯತ್ನ ಲೇಖನ.




ಏನಿದು ಸೋಮಯಾಗ?
ಬ್ರಾಹ್ಮಣರಿಗೆ ಅಗ್ನಿಯ ಆರಾಧನೆ ಬಹಳ ವಿಶೇಷವಾದದ್ದು. ಉಳಿದ ದೇವರುಗಳಿಗೆ ತಿಂಡಿ-ತೀರ್ಥಗಳ ನೈವೇದ್ಯ ಮಾತ್ರವಾದರೆ ಅಗ್ನಿದೇವ ತನಗೆ ಅರ್ಪಿಸಿದ್ದೆಲ್ಲವನ್ನೂ ತಿಂದು ತೇಗುತ್ತಾನೆ. ತನ್ಮೂಲಕ ದೇವ-ದೇವತೆಯರ ಪಾಲನ್ನು ಅವರವರಿಗೆ ತಲುಪಿಸುವ ಪೋಸ್ಟ್ ಮ್ಯಾನ್ನ ಕೆಲಸ ಮಾಡುತ್ತಾನೆಂಬ ನಂಬಿಕೆ ನಮ್ಮ ವೇದಗಳದ್ದು. ಜೊತೆಗೆ ಅವನು ಊರ್ಧ್ವಮುಖಿ. ನಮ್ಮ ವರ್ಚಸ್ಸು, ಕಾಂತಿ, ಆಯಸ್ಸು, ತೇಜಸ್ಸನ್ನು ಹೆಚ್ಚಿಸುವ ಸಾಮರ್ಥ್ಯವುಳ್ಳವನು ಎಂಬುದೂ ಅವನಿಗೆ ವಿಶೇಷ ಸ್ಥಾನವನ್ನು ಕಲ್ಪಿಸಿದೆ. ಆದ್ದರಿಂದಲೇ ಅವನ ಆರಾಧನೆಗೆಂದೇ ಯಾಗಗಳು ನಡೆಯುತ್ತವೆ. ಅವುಗಳಲ್ಲಿ ಸೋಮ ಸಂಸ್ಥೆ ಹಾಗೂ ಹವಿಸ್ಸು ಸಂಸ್ಥೆಗಳೆಂಬ ಎರಡು ಬಗೆಗಳಿವೆ. ಹವಿಸ್ಸು ಸಂಸ್ಥೆಯಲ್ಲಿ ಏಳು ವಿಧಗಳು. ಬ್ರಾಹ್ಮಣನೋರ್ವನ ವಿವಾಹವಾದಾಗ ಹೆಂಡತಿಯ ಜೊತೆ ಅಗ್ನಿಯೂ ಅವನ ಮನೆಗೆ ಬರುತ್ತದೆ. ಅದನ್ನು ಔಪಾಸನಾಗ್ನಿ ಎನ್ನುತ್ತಾರೆ. ಅದನ್ನು ಅವನು ಜೀವನಪರ್ಯಂತ ನಿತ್ಯವೂ ಧಾರಣೆ ಮಾಡಿ, ಬೆಳಿಗ್ಗೆ ಮತ್ತು ಸಂಜೆ ಅದಕ್ಕೆಆಹುತಿ ಕೊಡುತ್ತಾನೆ. ಸತ್ತವರಿಗೆ ಸಂಸ್ಕಾರವಾಗುವುದೂ ಅಗ್ನಿಯಿಂದಲೇ. ಇನ್ನು ಸೋಮಸಂಸ್ಥೆಯೂ ಅಷ್ಟೇ. ಇದರಲ್ಲಿ ಅಗ್ನಿಷ್ಟೋಮ, ಅತ್ಯಗ್ನಿಷ್ಟೋಮ ಮುಂತಾದ ಏಳು ವಿಧದ ಯಾಗಗಳಿವೆ. ಇವುಗಳಲ್ಲಿ ಯಾವೊಂದನ್ನು ಮಾಡಿದರೂ ಅದು ಸೋಮಯಾಗವೆನಿಸಿಕೊಳ್ಳುತ್ತದೆ.  ಮಾಡುವವರು ಸೋಮಯಾಜಿ ಅಥವಾ ಸೋಮಯಜ್ವಗಳೆಂಬ ಹೆಸರು ಪಡೆಯುತ್ತಾರೆ. (ವಾಜಪೇಯ ಯಾಗ ಮಾಡಿದವರು ವಾಜಪೇಯಿ ಎಂಬ ಹೆಸರನ್ನು ಪಡೆಯುತ್ತಾರಲ್ಲ, ಹಾಗೆ). ಸೋಮಯಾಗವನ್ನು ಮಾಡುವುದು ಲೋಕಕಲ್ಯಾಣ ಹಾಗೂ ಮುಖ್ಯವಾಗಿ ಸುವೃಷ್ಠಿ (ಮಳೆ)ಗೋಸ್ಕರ. ವೇದಪಾರಂಗತರನೇಕರು ಹೇಳುವ ಪ್ರಕಾರ ಒಂದು ಕಾಲದಲ್ಲಿ ಇದು ಪಶುಯಾಗವೇ ಆಗಿತ್ತು. ಯಜ್ಞಕ್ಕೆ ಅರ್ಪಿತವಾಗುವ ಪಶುವಿಗೆ ಮುಕ್ತಿ ಸಿಗುವುದರಿಂದ ಈ ಕ್ರಿಯೆಯನ್ನು ಬಲಿ ಅಥವಾ ಹಿಂಸೆ ಎಂದು ಪರಿಗಣಿಸಬಾರದು ಎಂಬ ಕಲ್ಪನೆಯಿತ್ತು. ಆದ್ದರಿಂದ ಇದು ಅಧ್ವರ (ಅಹಿಂಸೆ) ವೆಂದೇ ಪರಿಗಣಿಸಲ್ಪಡುತ್ತಿತ್ತು. ಆದರೆ ಈಗ ಪಶುವನ್ನು ಬಲಿ ಕೊಡುವ ಬದಲು, ಪರ್ಯಾಯವಾಗಿ ಪಿಷ್ಠವನ್ನೋ (ಅಕ್ಕಿ ಅಥವಾ ಉದ್ದಿನ ಹಿಟ್ಟಿನಿಂದ ಮಾಡಿದ್ದು), ಆಜ್ಯವನ್ನೋ (ತುಪ್ಪ) ಬಳಸುವುದು ಚಾಲ್ತಿಯಲ್ಲಿದೆ. ಹೀಗೆ, ಸೋಮಯಾಗದಲ್ಲಿ ಒಂದು ಮಹತ್ವವಾದ ಪಾತ್ರವನ್ನು ಅಗ್ನಿಯದ್ದು. ಮತ್ತೊಂದು,ಸೋಮನದ್ದು.
ಸೋಮ ಎನ್ನುವುದು ಚಂದ್ರನ ಹೆಸರು. ಅಗ್ನಿ ಮತ್ತು ಸೋಮರು ಜಗತ್ತಿನ ಅತಿ ಮುಖ್ಯ ದೇವತೆಗಳು. ಒಬ್ಬ ಜಗತ್ತಿಗೇ ಶಾಖ ಕೊಟ್ಟರೆ ಮತ್ತೊಬ್ಬ ತಂಪನ್ನೀಯುತ್ತಾನೆ. ಇಬ್ಬರನ್ನೂ ಆರಾಧಿಸುವುದೇ ಸೋಮಯಾಗದ ವೈಶಿಷ್ಟ್ಯ. ವೇದಗಳಲ್ಲಿ ಅವನ ಬಗ್ಗೆ ಒಂದು ಕಥೆಯೇ ಇದೆ. ಸೋಮ, ಎಲ್ಲ ದೇವ-ದೇವತೆಯರ ಪಾಲಿನ ಪುಣ್ಯರಾಶಿಯನ್ನೂ ತಾನೊಬ್ಬನೇ ಸಂಪಾದಿಸಿಕೊಂಡು ಹೊರಟುಬಿಡುತ್ತಾನೆ. ತಾವು ಶ್ರಮಪಟ್ಟಿದ್ದರೂ ತಮ್ಮ ಪುಣ್ಯವನ್ನು ಹೊತ್ತೊಯ್ಯುವ ಅವನನ್ನು ಅಟ್ಟಿಸಿಕೊಂಡು ದೇವತೆಗಳೂ ಹೊರಡುತ್ತಾರೆ. ಆಗ ಅವನು ಒಂದು ಬಳ್ಳಿಯಾಗಿ ರೂಪಾಂತರಗೊಳ್ಳುತ್ತಾನೆ. ಬಳ್ಳಿಯೇ  ನಮಗೆ ಸೋಮಲತೆ ಎಂಬ ಹೆಸರಿನಿಂದ ಪರಿಚಿತವಾಗಿರುವುದು ಎಂಬುದು ಪ್ರತೀತಿ. ಇದು ಎಲ್ಲೆಂದರಲ್ಲಿ ಬೆಳೆಯುವುದೂ ಇಲ್ಲ.

ಶ್ರೀಕಂಠಪುರದಲ್ಲಿ ನಡೆದ ಸೋಮಯಾಗ ಭಿನ್ನವಾಗಿತ್ತೇ?
ಇಲ್ಲ. ಅವಧಾನಿಗಳು ದೀಕ್ಷೆಯನ್ನು ಪಡೆದು ಮಾಡಿದ ಈ ಸೋಮಯಾಗ ವೇದಾನುಸಾರವಾಗೇ ನಡೆಯಿತು. ಸೋಮಲತೆಯನ್ನು ಅರಸಿಕೊಂಡು ಜಮ್ಮು-ಕಾಶ್ಮೀರದಲ್ಲಿರುವ ಲಡಾಕಿನವರೆಗೂ ಹೋಗಿ, ಅರಣ್ಯದಲ್ಲಿ ಸುಮಾರು 45 ಕಿಮೀಗಳಷ್ಟು ದೂರ ಸುತ್ತಾಡಿ, ಕೊನೆಗೆ ಅಲ್ಲಿನ ವೈದ್ಯಕುಟುಂಬವೊಂದರ ನೆರವಿನಿಂದ ಸೋಮಲತೆಯನ್ನು ಪತ್ತೆ ಹಚ್ಚಿತು ಈ ಋತ್ವಿಜರ ತಂಡ. ಆಗಲೇ ಅವರಿಗೆ ತಿಳಿದುಬಂದಿದ್ದು, ಔಷಧೀಯ ಗುಣಗಳುಳ್ಳ ಸೋಮಲತೆಯಲ್ಲಿ 20 ಪ್ರಬೇಧಗಳಿದ್ದು, ಅವು 30ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣ ಎನ್ನುವ ಸತ್ಯ! ಅದರ ಮತ್ತೊಂದು ವೈಶಿಷ್ಟ್ಯವೆಂದರೆ ಅದು ರಾತ್ರಿ ಚಂದ್ರನ ಬೆಳಕಿನಲ್ಲಿ ಹೊಳೆಯುವುದೇ ಅಲ್ಲದೆ, ಅದರ ಕಾಂಡದ ನಡುವಿನಲ್ಲಿ ಒಂದು ಸ್ವರ್ಣ ರೇಖೆಯೂ ಗೋಚರಿಸುತ್ತದಂತೆ. ಇರಲಿ, ಯಾಗದ ಸಲುವಾಗಿ ಒಂದು ಸುಮಾರಾದ ಕಟ್ಟನ್ನು ತರಲು ಅವರಿಗೆ ತಗುಲಿದ ವೆಚ್ಚ ಒಂದು ಲಕ್ಷ ರೂಪಾಯಿಗಳು! ಐದು ದಿನಗಳ ಈ ಯಾಗದಲ್ಲಿ ಸೋಮಲತೆಯ ಪಾತ್ರ ಶುರುವಾಗುವುದು ಎರಡನೆಯ ದಿನದಿಂದ. ಅದನ್ನು ಚಕ್ಕಡಿಯಲ್ಲಿಟ್ಟು, ಸೋಮರಥ ಎಂದು ಪರಿಗಣಿಸಿ ಮೆರವಣಿಗೆ ಮಾಡಿ ತರುವುದೇ ಒಂದು ಉತ್ಸವ. ಆಮೇಲೆ, ಸೋಮರಾಜನಿಗೆ ಹದಿನಾರು ಋತ್ವಿಜರಿಂದ ಅಭಿಷೇಕ. ನಂತರ ಗಂಗೆಯಲ್ಲಿ ಸೋಮಲತೆಯನ್ನು ಕುಟ್ಟಿ ಆ ರಸವನ್ನು ಹಿಂಡುವ ಪ್ರಕ್ರಿಯೆ. ಐದು ದಿನಗಳಲ್ಲಿ ನಡೆಯುವ ಒಟ್ಟು ಹೋಮಗಳು ಹದಿನೈದು. ಎಲ್ಲದಕ್ಕೂ ಸಾಲಬೇಕಲ್ಲ ಎಂಬ ಕಾರಣಕ್ಕೆ ಒಂದೇ ಚಮಚ ರಸವನ್ನು ಲೀಟರುಗಟ್ಟಳೆ ನೀರಿಗೆ ಬೆರೆಸಲಾಯಿತು. ಪ್ರತಿಯೊಂದು ಹೋಮ ಮುಗಿದ ಮೇಲೂ ಪ್ರಸಾದವೆಂದು ಒಂದೊಂದು ಉದ್ಧರಣೆ ರಸವನ್ನು ಋತ್ವಿಜರು ಸೇವಿಸಿದ್ದರು. ಇಷ್ಟೇ ನಡೆದಿದ್ದು. ಕಳ್ಳಭಟ್ಟಿ ಸಾರಾಯಿ ಅಥವಾ ಮತ್ತು ಬರಿಸುವ ಸೋಮರಸ ಎಂಬ ಹೆಸರು ಬಂದಿದ್ದು ಇದಕ್ಕೇ!
ಇನ್ನು ಮಾಂಸಭಕ್ಷಣೆಯ ವಿಷಯ. ಯಾಗಸ್ಥಳದಲ್ಲಿ ಮೂರು ಯಜ್ಞಕುಂಡಗಳು ಹಾಗೂ ಒಂದು ಯೂಪಸ್ತಂಭವಿರುತ್ತದೆ. ಯಜ್ಞಕ್ಕೆ ಬಳಕೆಯಾಗುವ ಪಶುವನ್ನು ಕಟ್ಟುವುದೇ ಆ ಸ್ತಂಭಕ್ಕೆ. ಈ ಯಾಗ ನಡೆದಾಗಲೂ ಮೇಕೆಯನ್ನು ಅಲ್ಲೇ ಕಟ್ಟಲಾಗಿತ್ತು. ಮೊದಲೇ ಹೇಳಿದಂತೆ, ಪಶುಯಾಗಕ್ಕೆ ವೇದಗಳಲ್ಲಿ ಸಮ್ಮತಿಯಿದ್ದರೂ ಅದರ ಆಚಾರ ನಿಂತು ಯಾವುದೋ ಕಾಲವಾಗಿದೆ. ಬಲಿ ಕೊಡಬೇಕಾಗಿರುವ ಪಶುವಿನ ಅಂಗಾಂಗಗಳನ್ನು ಕಲ್ಪಿಸಿಕೊಂಡು, ಅವುಗಳನ್ನು ಬೇರೆ ದ್ರವ್ಯಗಳಲ್ಲಿ ಮಾಡಿಕೊಂಡು ಅದನ್ನು ಅಗ್ನಿಗೆ ಸಮರ್ಪಿಸುವುದು ಈಗ ಬಹುತೇಕ ಚಾಲ್ತಿಯಲ್ಲಿರುವ ರೀತಿ. ಇಲ್ಲೂ ಮೇಕೆಯನ್ನು ಕಟ್ಟಲಾಗಿದ್ದು ಬರೀ ಸಾಂಕೇತಿಕವಾಗಿ ಅಷ್ಟೇ. ಐದು ದಿನಗಳ ಯಾಗದ ಅವಧಿ ಪೂರೈಸಿದ ನಂತರ ಮೇಕೆ ಹಾಗೂ ಅದರ ಮರಿಯನ್ನು ವಾಪಸ್ ಕೊಡಲಾಯಿತು. ಮೇಕೆಯನ್ನು ತರಲು ಮತ್ತೊಂದು ಮುಖ್ಯ ಕಾರಣ ಯಜ್ಞದಲ್ಲಿ ನಡೆಯುವ ಪ್ರವರ್ಗ್ಯದ್ದು. ಮಣ್ಣಿನ ಮಡಕೆಗಳಲ್ಲಿ ತುಪ್ಪವನ್ನು ಮಂತ್ರೋಚ್ಛಾರದೊಂದಿಗೆ ಕುದಿಸಿ, ಅದಕ್ಕೆ ಮೊದಲಿಗೆ ಆಕಳ ಹಾಲು ಹಾಗೂ ನಂತರ ಮೇಕೆಯ ಹಾಲನ್ನು ಹಾಕಲಾಗುತ್ತದೆ. ಆಗ ಅಗ್ನಿಯ ಜ್ವಾಲೆ ಆಕಾಶದೆತ್ತರ ಚಿಮ್ಮುತ್ತದೆ. ಕತ್ತರಿಸಿ ಹೋಗಿರುವ ಅಗ್ನಿದೇವನ ಕತ್ತನ್ನು ಜೋಡಿಸುವ ಸಲುವಾಗಿ ಈ ಕ್ರಿಯೆ ನಡೆಯುತ್ತದೆ ಎಂಬ ವಿವರಣೆ ವೇದದ ಕಥೆಗಳಲ್ಲಿದೆ. (ಪ್ರವರ್ಗ್ಯ ಹಾಗೂ ಉಪಸತ್ತುಗಳನ್ನು ಸೇರಿಸುವ ಕ್ರಿಯೆ). ಹೀಗೆ, ಯಾವ ಪಶುಬಲಿಯನ್ನೂ ನೀಡದೆ, ಕಳ್ಳಭಟ್ಟಿ ಕುಡಿಯದೆ ಸಂಪನ್ನಗೊಂಡಿತು ಸೋಮಯಾಗ.

ಹಾಗಾದರೆ ಹುಯಿಲೆದ್ದಿದ್ದೇಕೆ?
ಮೊತ್ತಮೊದಲನೆಯದಾಗಿ, ಇದು ಅವಧಾನಿಗಳು ಸ್ವತಃ ಸಂಕಲ್ಪಿಸಿ ಕೈಗೊಂಡ ಯಾಗ. ಅವರ ಉದ್ದೇಶ ಉತ್ತಮ ಮಳೆಯಾಗಿ, ಬಿರುಬಿಸಿಲಿನ ಹೊಡೆತ ಕಡಿಮೆಯಾಗಲಿ ಎನ್ನುವುದಷ್ಟೇ. ಹಾಗಂತ ಈ ಕಾರ್ಯಕ್ರಮ ಊರಿನವರಿಗೆಲ್ಲ ನಿರ್ಬಂಧ ಹೇರುವಷ್ಟು ಖಾಸಗಿಯಾಗೇನೂ ಇರಲಿಲ್ಲ. ಇಲ್ಲಿ ಯಾವ ಮುಚ್ಚುಮರೆಯೂ ಇರಲಿಲ್ಲ. ಅವರ ನೆಂಟರಿಷ್ಟರು, ಬಂಧುಗಳು, ಊರಿನವರನೇಕರು ಇದರಲ್ಲಿ ಭಾಗವಹಿಸಿದ್ದಾರೆ. ಅವರಲ್ಲೇ ಯಾರೋ ಒಬ್ಬರು ಮೇಕೆಯನ್ನು ಯೂಪಸ್ತಂಭಕ್ಕೆ ಕಟ್ಟಿಹಾಕಿರುವ ಚಿತ್ರವನ್ನು ತೆಗೆದಿದ್ದಾರೆ. ಆಮೇಲೆ, ಅಗ್ನಿಗೆ ಆಹುತಿ ನೀಡುತ್ತಿರುವ ದ್ರವ್ಯದ ಹಾಗೂ ಋತ್ವಿಜರು ಸೋಮರಸವನ್ನು ಸೇವಿಸುತ್ತಿರುವ ಚಿತ್ರಗಳನ್ನು ಬಿಡಿಬಿಡಿಯಾಗಿ ತೆಗೆದಿದ್ದಾರೆ. ಅದನ್ನು ಹೊಂದಿಸಿ ನೋಡಿದರೆ ಮೂಡಬಹುದಾದ ಕಥೆಯನ್ನು ಅವರೇ ಹೇಳಿದರೋ ಅಥವಾ ಬ್ರಾಹ್ಮಣ ವಿರೋಧಿ ಸೆಕ್ಯುಲರ್ಶಕ್ತಿಗಳು ತಾವೇ ಊಹಿಸಿಕೊಂಡವೋ ಗೊತ್ತಿಲ್ಲ. ಒಟ್ಟಿನಲ್ಲಿ, ಬಿಡಿಯಾದ ಕಾರ್ಟೂನ್ಗಳನ್ನು ಸೇರಿಸಿ ಅನಿಮೇಟಡ್ ಚಿತ್ರವನ್ನು ಮಾಡುವಂತೆ ಈ ವಿಷಯದಲ್ಲೂ ಆಗಿದೆ. ಕಟ್ಟಿ ಹಾಕಿದ್ದ ಮೇಕೆ ಅಗ್ನಿಗೆ ಆಹುತಿಯಾಯಿತು ಎಂಬ ಗುಲ್ಲೆದ್ದಿದೆ. ಬ್ರಾಹ್ಮಣರು ಸೋಮರಸ ಸೇವಿಸಿ ಕೆಟ್ಟರು ಎಂದು ಬೊಬ್ಬೆ ಹೊಡೆದಿದ್ದಾರೆ. ವಿಷಯ ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಯಾಗದ ರೂವಾರಿ ಅವಧಾನಿಗಳು ಎರಡು ದಿನ ಭರಪೂರ ನಿಂದನೆಗೊಳಗಾಗಿದ್ದಾರೆ. ಅವರಿಂದಾಗಿ, ಸಂಸ್ಕೃತಕ್ಕೆ ತವರೂರಾಗಿರುವ ಮತ್ತೂರಿಗೇ ಕಳಂಕ ಬಂತು ಎಂಬರ್ಥದ ಸಂದೇಶವೂ ಅವರಿಗೆ ರವಾನೆಯಾಗಿದೆ. ಎಲ್ಲ ಮೀಡಿಯಾ ಚಾನೆಲ್ಗಳ, ವಿಕೃತ ಮನಸ್ಸಿನ ಕೆಲ ಪತ್ರಿಕೆಗಳ ಕೃಪೆ!
ಇಲ್ಲಿ ಕೆಲವು ವಿಷಯಗಳನ್ನು ಗಮನಿಸಬೇಕು. ಸಣ್ಣ-ಪುಟ್ಟ ಹೋಮ-ಹವನಗಳನ್ನು ಮಾಡುವುದಕ್ಕೂ ಸೋಮಯಾಗದಂಥ ದೊಡ್ಡ ಯಾಗವನ್ನು ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಸೋಮಯಾಗಕ್ಕೆ ಬಾಧ್ಯಸ್ಥರಾಗಬಲ್ಲ ಅಗ್ನಿಹೋತ್ರಿಗಳ ಸಂಖ್ಯೆಯೇ ಅತಿ ವಿರಳ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸರಾಸರಿ ದಶಕಕ್ಕೊಂದು ಯಾಗವೂ ನಡೆಯುವುದಿಲ್ಲ. ಯಾಗ ಮಾಡಿದಾಗಲೊಮ್ಮೆ ಪಶುಬಲಿಯ ಪ್ರಶ್ನೆ ಉದ್ಭವಿಸುತ್ತದೆ. ಹಾಗಿರುವಾಗ, ಯಾರೇ ಆಗಲಿ, ಸೋಮಯಾಗ ಮಾಡುತ್ತಾರೆಂದರೆ, ಅವರು ಹೇಗೆ ಮಾಡುತ್ತಾರೆಂಬ ಕುತೂಹಲ, ಮಾಡಿಬಿಡುತ್ತಿದ್ದಾರಲ್ಲ ಎಂಬ ಈರ್ಷ್ಯೆ ಹುಟ್ಟುವ ಎಲ್ಲ ಅವಕಾಶವೂ ಇರುತ್ತದೆ. ಇನ್ನು ಆ ಯಾಗದಲ್ಲಿ ಆಹುತಿ ಕೊಡಲು ಬಳಸುವ ಸೌಟಿನಂಥ ಸಲಕರಣೆಗಳನ್ನು ಗಮನಿಸಿದರೆ, ಒಂದೊಂದೂ ಒಂದೊಂದು ಆಕಾರದಲ್ಲಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಲೋಕಕಲ್ಯಾಣಾರ್ಥವಾಗಿ ಮಾಡುವ ಇದಕ್ಕೆ ತಗಲುವ ವೆಚ್ಚ ಏನಿಲ್ಲವೆಂದರೂ ಹತ್ತರಿಂದ-ಹನ್ನೆರಡು ಲಕ್ಷ ರೂಪಾಯಿಗಳು!



ಈ ಬಗ್ಗೆ ಉಳಿದ ಋತ್ವಿಜರು ಏನೆನ್ನುತ್ತಾರೆ?
ಋತ್ವಿಜರಲ್ಲಿ ಮುಖ್ಯರಾದ ಚೆನ್ನಕೇಶವ ಹಾಗೂ ವೆಂಕಟೇಶ ಅವಧಾನಿಗಳನ್ನು ಮಾತಿಗೆಳೆದಾಗ ಅವರ ದನಿಯಲ್ಲಿನ ನೋವು ಸ್ಪಷ್ಟವಾಗಿ ಕಂಡಿತು. ಎಲ್ಲರ ಹಿತಕ್ಕೋಸ್ಕರ ಮಾಡುವ ಒಂದು ಯಾಗಕ್ಕೂ ನಾವು ಬ್ರಾಹ್ಮಣರು ಈ ಮಟ್ಟಿಗಿನ ಸ್ಪಷ್ಟೀಕರಣ ಕೊಡಬೇಕೇ ಎಂದು ಅವರು ಕೇಳಿದಾಗ ಯಾರಲ್ಲೂ ಉತ್ತರವಿರಲಿಲ್ಲ. ಸ್ವಾತಂತ್ರ್ಯಹರಣ ಬಹುರೂಪ ಪಡೆಯುತ್ತಿದೆಯಲ್ಲ ಎನ್ನುವ ಅವರ ಖೇದವನ್ನು ಉಪೇಕ್ಷೆ ಮಾಡುವಂತಿಲ್ಲ. ಅಧಿಕಾರಿಗಳು, ಮೀಡಿಯಾದವರು ಇನ್ನೂ ಮತ್ತೂರಿನ ಮನೆಮನೆಯ ಬಾಗಿಲನ್ನೂ ಬಡಿಯುತ್ತಿದ್ದಾರೆ. ಇಂದು ಬ್ರಾಹ್ಮಣರಿಗಿಂತ ಮೇಕೆಗಳ ಪ್ರಾಣಕ್ಕೇ ಬೆಲೆ ಹೆಚ್ಚಾಗಿದೆ ಎಂದು ಮತ್ತೂರಿನ ಜನರಿಗೆ ಅನಿಸುತ್ತಿದ್ದರೂ ಅದರಲ್ಲಿ ಅತಿಶಯೋಕ್ತಿಯೇನಿಲ್ಲ!

ಜನಸಾಮಾನ್ಯರು ಏನೆನ್ನುತ್ತಾರೆ?
ಅವಧಾನಿಗಳ ಹೆಸರು ಹೇಳಿದರೆ ಸಾಕು, ಕೈ ಎತ್ತಿ ಮುಗಿಯುತ್ತಾರೆ. ವರ್ಷಗಟ್ಟಳೆ ಮೌನವ್ರತವನ್ನು ಮಾಡುವ ಅವರಿಗೆ ಈ ಮೂಲಕ ಕೇಡು ಬಗೆಯುವ ಹುನ್ನಾರ ನಡೆದಿದೆ ಎಂಬುದನ್ನು ಯಾವ ಸಂಕೋಚವೂ ಇಲ್ಲದೆ ಹೇಳುತ್ತಾರೆ. ನೇಮ-ನಿಷ್ಠೆಗಳನ್ನು ಮೈಗೂಡಿಸಿಕೊಂಡಿರುವ, ಎಲ್ಲರೊಂದಿಗೂ ನಗುನಗುತ್ತಲೇ ವ್ಯವಹರಿಸುವ ಅವರ ಬಗ್ಗೆ ಸಣ್ಣ ಅಗೌರವದ, ಬೇಸರದ ಸುಳಿವೂ ಯಾವ ಮುಖಗಳಲ್ಲೂ ಕಾಣುವುದಿಲ್ಲ. ಎಲ್ಲರ ಬೇಸರವೂ ಅವರನ್ನು ಅನುಮಾನಿಸುತ್ತಿರುವವರ ಬಗ್ಗೆಯೇ! ಉಳಿದವರದ್ದು ಹಾಗಿರಲಿ, ಯಾಗಕ್ಕೋಸ್ಕರ ಮೇಕೆಯನ್ನು ಕೊಟ್ಟ ಆಳಂತೂ ಎಲ್ಲರಿಗೂ ಅದನ್ನು ತೋರಿಸಿ ತೋರಿಸಿ ಹೈರಾಣಾಗಿದ್ದಾನೆ! ಆದರೂ ಅವನದ್ದು, ಅವನ ತಾಯಿಯದ್ದು ಒಂದೇ ನಂಬಿಕೆ. ಮೇಲಿರುವ ಭಗವಂತ ಹಾಗೂ ಕೆಳಗಿರುವ ಭೂತಾಯಿಯಿಂದ ಯಾವ ವಿಷಯವನ್ನೂ ಮುಚ್ಚಿಡುವುದು ಸಾಧ್ಯವಿಲ್ಲ, ಇದು ಯಾರ ಹುನ್ನಾರ ಎನ್ನುವುದು ಸದ್ಯದಲ್ಲೇ ಬಯಲಾಗಿ, ಅವರಿಗೆ ಶಿಕ್ಷೆಯಾಗಲಿದೆ ಎನ್ನುವುದು.
ಪ್ರಕರಣದ ಸದ್ಯದ ಸ್ಥಿತಿಗತಿ:
ದೂಷಣಾ ಪ್ರಹಸನದ ಒಂದು ಅಂಕ ಮುಗಿದಿದೆ. ಪರಿಶೀಲನೆಗೆ ಬಂದ ಅಧಿಕಾರಿಗಳೆಲ್ಲ ಖಾಲಿ ಕೈಯಲ್ಲಿ ಹಿಂದಿರುಗಿದ್ದಾರೆ. ಅಷ್ಟೇ ಅಲ್ಲ, ಇದೊಂದು ಸಂಚು ಅಷ್ಟೇ ಎಂಬುದನ್ನೇ ಅವರೂ ಸೂಚ್ಯವಾಗಿ ಹೇಳಿ ಹೋಗಿದ್ದಾರೆ. ಋತ್ವಿಜರೆಲ್ಲ ಒಂದು ದೊಡ್ಡ ನಿಟ್ಟುಸಿರಿಟ್ಟು ಸುಮ್ಮನಾಗಿದ್ದಾರೆ. ಅವಧಾನಿಗಳು ಮಾತ್ರ ಎಂದಿನಂತೆ ಅಗ್ನಿಹೋತ್ರದಲ್ಲಿ ನಿರತರಾಗಿದ್ದಾರೆ. ನೀವು ನಮಗೆ ಕಳಂಕ ತಂದಿರಿ ಎಂದು ಸಂದೇಶ ಕಳಿಸುವವರಿಗೆಲ್ಲ ಅವರದ್ದು ಒಂದೇ ಉತ್ತರ. 'ಭಗವಂತ ನಿಮಗೆ ಒಳ್ಳೆಯದು ಮಾಡಲಿ.' ಎನ್ನುವುದು. ಮತ್ತೂರಿನ ಮನಸ್ಸುಗಳು ಮತ್ತೆ ಶಾಂತವಾಗುತ್ತಿವೆ. ಇವೆಲ್ಲದರ ರೂವಾರಿ ಯಾರು ಎಂಬುದು ಬೆಳಕಿಗೆ ಬಂದ ಮೇಲೆ ಮತ್ತೊಂದು ಕೋಲಾಹಲ ಶುರುವಾಗುತ್ತದೋ ಏನೋ!
ಈ ಪ್ರಕರಣ ಯಾರ್ಯಾರಿಗೆ ಪಾಠ?
ಕಲಿಯುವ ಮನಸ್ಸಿರುವವರೆಲ್ಲರಿಗೂ. ಪತ್ರಿಕೋದ್ಯಮದ ಹೆಸರಲ್ಲಿ ಸಮಾಜವನ್ನು ಒಡೆಯುತ್ತಿರುವವ ಕೊಳಕು ಮನಸ್ಸಿನವರು ಇನ್ನಾದರೂ ಇಂಥ ನೀಚತನವನ್ನು ಬಿಡಬೇಕು. ಅವರಿಗಿಂತ ಹೆಚ್ಚಾಗಿ, ಬ್ರಾಹ್ಮಣ ಸಮುದಾಯ ಒಂದಾಗಿ ಇಂಥ ಘಟನೆಗಳನ್ನು ಖಂಡ-ತುಂಡವಾಗಿ ವಿರೋಧಿಸಬೇಕು. ಒಂದೇ ಸಮಾಧಾನವೆಂದರೆ, ಅವಧಾನಿಗಳಿಗೆ ವಿಪ್ರವೃಂದದಿಂದ ಅಪಾರ ಬೆಂಬಲ ಹರಿದು ಬಂದಿದೆ. ಮಾನನಷ್ಟ ಮೊಕದ್ದಮೆ ಹೂಡಿ ಎನ್ನುವ ಸಲಹೆಗಳಿಗೂ ಕೊರತೆಯಿಲ್ಲ. ಹೌದು. ಈ ಪ್ರಕರಣವನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ವಿವಿಧ ಮಠಗಳಲ್ಲಿ ಹಂಚಿಹೋಗಿರುವ, ಅವುಗಳಿಗೆ ಮಾತ್ರ ಮೀಸಲು ಎನ್ನುವ ಮನಸ್ಥಿತಿಯಿಂದ ಇನ್ನಾದರೂ ಬ್ರಾಹ್ಮಣರು ಹೊರಬರದಿದ್ದರೆ, ಹೋಮ- ಹವನಗಳು ಹಾಗಿರಲಿ, ನಿತ್ಯ ಸಂಧ್ಯಾವಂದನೆ, ಆಚಮನಗಳೂ ಮೂಢನಂಬಿಕೆಯ ಪಟ್ಟಿ ಸೇರಿ ನಿಷೇಧಿಸಲ್ಪಡುವ ದಿನ ದೂರವಿಲ್ಲ!
ನೀವೇ ಯೋಚಿಸಿ ನೋಡಿ. ಮುಸ್ಲಿಮರ ಹಬ್ಬಗಳಲ್ಲಿ ಲಕ್ಷಾಂತರ ಪ್ರಾಣಿಗಳ ತಲೆ ಕಡಿದು ರಕ್ತದ ಕೋಡಿ ಹರಿದರೂ ಕನಲದ ಸೆಕ್ಯುಲರ್ ಮಂದಿ ಯಜ್ಞ-ಯಾಗಾದಿಗಳಲ್ಲಿ ನಡೆಯುವ ಆಹುತಿಗಳ ಮೇಲೇ ಕಣ್ಣಿಡುತ್ತಾರಲ್ಲ ಏಕೆ? ಒಂದು ಪಕ್ಷ ಬ್ರಾಹ್ಮಣರು ಮಾಂಸವನ್ನು ಭಕ್ಷಿಸಿಯೇ ಬಿಟ್ಟರೂ ಇವರ ಗಂಟೇನು ಹೋಗುವುದು? ಉಳಿದ ಕೋಮಿನವರಿಗೆ ಅನ್ವಯವಾಗದ ಪ್ರಾಣಿಹತ್ಯೆ ನಿಷೇಧ ಬ್ರಾಹ್ಮಣರಿಗೆ ಮಾತ್ರ ಹೇಗೆ ಅನ್ವಯವಾಗುತ್ತದೆ? ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಹಸಿವನ್ನು ತಣಿಸಿಕೊಳ್ಳುವುದಕ್ಕಾಗಿ ಭಕ್ಷಿಸುವ ಮಾಂಸಾಹಾರಕ್ಕೂ, ಯಜ್ಞಶೇಷಕ್ಕೂ (ಆಹುತಿ ಕೊಟ್ಟ ಮೇಲೆ ಉಳಿಯುವ ಪ್ರಸಾದ) ಅಪಾರ ವ್ಯತ್ಯಾಸವಿದೆ ಎಂಬ ವ್ಯಾಖ್ಯಾನ ವೇದಗಳಲ್ಲೇ ಲಭ್ಯವಿದೆ. ಆದರೂ ಪಶುಬಲಿ ಸಮಾಜಕ್ಕೆ ಪೂರಕವಲ್ಲ ಎಂಬ ಒಂದೇ ಕಾರಣಕ್ಕೆ ಅವುಗಳ ಆಹುತಿಯನ್ನು ಬ್ರಾಹ್ಮಣ ಸಮುದಾಯ ನೂರಾರು ವರ್ಷಗಳ ಹಿಂದೆಯೇ ನಿಲ್ಲಿಸಿದೆ. ಧರ್ಮಶಾಸ್ತ್ರದಲ್ಲಿ ಒಂದು ಮಾತಿದೆ. 'ಅಸ್ವರ್ಗ್ಯಂ ಲೋಕವಿದ್ವಿಷ್ಟಂ ಧರ್ಮ್ಯಮಪಿ ಆಚರೇನ್ನತು.' ನಿನಗೆ ಸ್ವರ್ಗವನ್ನು ಪ್ರಾಪ್ತಿ ಮಾಡದ ಆಚರಣೆಯನ್ನು ಮಾಡಬೇಡ. ಹಾಗೇ, ಲೋಕಕ್ಕೆ ಪ್ರಿಯವಾಗದ ಆಚರಣೆಯನ್ನು, ಅದು ಧರ್ಮವೇ ಆದರೂ ಮಾಡಬೇಡ ಎನ್ನುವುದು ಅದರ ತಾತ್ಪರ್ಯ! ಹಿಂದೂ ಧರ್ಮವಲ್ಲದೆ ಬೇರಾವ ಧರ್ಮ ಈ ಮಟ್ಟಿಗಿನ ಸ್ವಾತಂತ್ರ್ಯವನ್ನು ಕೊಡುತ್ತದೆ? ಕಾಲಾನುಸಾರ, ಸಮಾಜದ ಸ್ಥಿತ್ಯಾನುಸಾರ ನಿನ್ನ ಆಚರಣೆಯನ್ನೇ ಬದಲಿಸಿಕೋ ಎಂದು ಪ್ರೇರೇಪಿಸುತ್ತದೆ?
ಅಂದ ಹಾಗೆ, ಸೋಮಯಾಗ ಮುಗಿದ ಮೇಲೂ ಮತ್ತೂರಿನ ಹದಿನೈದು ಬ್ರಾಹ್ಮಣರು ತುಂಗೆಯೊಳಗೆ ಎದೆಮಟ್ಟ ಮುಳುಗಿ ನಿಂತು ಮೂರೂವರೆ ಘಂಟೆಗಳ ಕಾಲ ಜಪ ಮಾಡಿ, ಪರ್ಜನ್ಯ ಪಾರಾಯಣ ಹಾಗೂ ಹೋಮವನ್ನು ಮಾಡಿ, ಈಶ್ವರನಿಗೆ ಅಭಿಷೇಕ ಮಾಡಿದರು. ಬೇಗ ಮಳೆಯಾಗಲಿ ಎಂಬ ಸದುದ್ದೇಶದಿಂದ!
'ದೇವೋ ದುರ್ಬಲ ಘಾತಕಃ' ಎಂದು ಸುಮ್ಮನೆ ಹೇಳಿಲ್ಲ. ತನ್ನನ್ನು ರಕ್ಷಿಸಿಕೊಳ್ಳಲಾರದವನನ್ನು ದೇವರೂ ಮೇಲಿಂದ ಮೇಲೆ ಕಷ್ಟಕ್ಕೆ ದೂಡುತ್ತಾನಂತೆ. ಬ್ರಾಹ್ಮಣರು ಬೆನ್ನೆಲುಬಿಲ್ಲದವರು ಎಂಬ ಭಾವನೆ ಈಗಾಗಲೇ ಬೇರೂರಿಬಿಟ್ಟಿದೆ. ಅದರ ಪರಿಣಾಮವೇ ಹೆಜ್ಜೆಗೂ ಹೆಜ್ಜೆಗೂ ನಡೆಯುತ್ತಿರುವ ಈ ರಂಪ-ರಾಮಾಯಣಗಳು! ಮನುಸ್ಮೃತಿಯ ಕನ್ನಡಕ ಹಾಕಿಕೊಂಡೇ ಅವರನ್ನು ನೋಡುವ, ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಪ್ರಚಾರ ಪಡೆಯುವ ಮತಿಹೀನರು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಮದ್ಯ ಹೀರಿ, ಮಾಂಸ ತಿನ್ನಲು, ಸಾಲ-ಸೋಲ ಮಾಡಿ ಹನ್ನೆರಡು ಲಕ್ಷ ಖರ್ಚು ಮಾಡಿ ಸೋಮಯಾಗವನ್ನು ಮಾಡಬೇಕಾಗಿರಲಿಲ್ಲ! ಶಿವಮೊಗ್ಗದಿಂದ ಮತ್ತೂರಿಗೆ ಹೋಗುವ ದಾರಿಯಲ್ಲಿ ಎಂಟು ಮಾಂಸದಂಗಡಿಗಳಿವೆ. ಯಾವುದಾದರೊಂದನ್ನು ಹೊಕ್ಕಿದ್ದರೂ ಸಾಕಿತ್ತು!