Monday 1 August 2016

ಏಕರೂಪವೆಂದೊಡನೆ ಭಿನ್ನರಾಗವೇಕೆ?

ನಮ್ಮ ದೇಶದ ಉದ್ದಗಲಕ್ಕೂ ಮೂರು ಹೈವೋಲ್ಟೇಜ್ ತಂತಿಗಳು ಮೈಚಾಚಿಕೊಂಡು ನಿಂತಿವೆ. ಅವುಗಳಲ್ಲಿ ಯಾವುದನ್ನು ಮುಟ್ಟಿದರೂ, ಮುಟ್ಟಿದವರಿಗೆ ಮಾತ್ರವಲ್ಲ, ಇಡೀ ದೇಶಕ್ಕೇ ಕರೆಂಟ್ ಹೊಡೆದುಬಿಡುತ್ತದೆ! ಮೊದಲನೆಯದು, ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ, ಎರಡನೆಯದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನವನ್ನು ಕೊಡಮಾಡಿರುವ ಅನುಚ್ಛೇದ 370ಅನ್ನು ರದ್ದುಗೊಳಿಸುವುದು ಹಾಗೂ ಮೂರನೆಯದು ಏಕರೂಪ ನಾಗರಿಕ ಸಂಹಿತೆ! ಸ್ವಾತಂತ್ರ್ಯೋತ್ತರ ಭಾರತದಲ್ಲಿ ಯಾವೊಬ್ಬ ನೇತಾರನೂ ಈ ಮೂರು ತಂತಿಗಳನ್ನು ಮುಟ್ಟುವ ಧೈರ್ಯ ಮಾಡಿಲ್ಲ. ಮುಟ್ಟಿದ ಮರುಕ್ಷಣವೇ, ಅವನದಷ್ಟೇ ಅಲ್ಲ, ಅವನ ಇಡೀ ಪಕ್ಷದ ಭವಿಷ್ಯವೇ ಸುಟ್ಟು ಕರಕಲಾಗಿಬಿಡುವ ಸಂಭವವಿರುವುದರಿಂದ ಎಲ್ಲರೂ ಈ ತಂತಿಗಳ ಕೆಳಗೆ ಕತ್ತು ಬಗ್ಗಿಸಿಕೊಂಡೇ ನಡೆದಾಡುತ್ತಾರೆ! ಆಗೊಮ್ಮೆ ಈಗೊಮ್ಮೆ ಅದರಿಂದ 'ಚಟಾರ್' ಅಂತ ಒಂದು ಸಣ್ಣ ಕಿಡಿ ಹಾರಿದರೂ ಬೆಚ್ಚಿ ಬೀಳುತ್ತಾರೆ! ಆದರೆ ಈಗ ಇದ್ದಕ್ಕಿದ್ದ ಹಾಗೇ ಮೂರನೆಯ ತಂತಿಯನ್ನು ಮುಟ್ಟುವಂಥ ಸಂದರ್ಭವೊಂದು ಮೋದಿ ಸರ್ಕಾರಕ್ಕೆ ಬಂದೊದಗಿದೆ.

2015ರ ಅಕ್ಟೋಬರ್‍ನಲ್ಲಿ ನ್ಯಾಯಾಧೀಶರುಗಳಾದ ವಿಕ್ರಮಜಿತ್ ಸೇನ್ ಹಾಗೂ ಶಿವಕೀರ್ತಿ ಸಿಂಗ್‍ರನ್ನೊಳಗೊಂಡ ನ್ಯಾಯಪೀಠ ಮೋದಿ ಸರ್ಕಾರವನ್ನು ಮೊತ್ತಮೊದಲ ಬಾರಿ ಈ ಕುರಿತು ಪ್ರಶ್ನಿಸಿತ್ತು. ವೈಯಕ್ತಿಕ ಕಾನೂನುಗಳಿಂದ ಗೊಂದಲಗಳು ಹೆಚ್ಚುತ್ತಿವೆ. ಏಕರೂಪ ನಾಗರಿಕ ಸಂಹಿತೆಯ ಅನುಷ್ಥಾನ ಸಾಧ್ಯವೆನ್ನುವುದಾದರೆ ನೀವೇಕೆ ಅದನ್ನು ಕೈಗೆತ್ತಿಕೊಳ್ಳಬಾರದು?’ ಎಂದು ಪ್ರಶ್ನಿಸಿತ್ತು. ಕ್ರಿಶ್ಚಿಯನ್ನರ ವಿಚ್ಛೇದನದ ಕಾನೂನಿನ ಅಹವಾಲೊಂದನ್ನು ಪರಾಮರ್ಶಿಸುವಾಗ ಅದಕ್ಕೆ ತೊಡಕುಂಟಾಗಿ ಏಕರೂಪ ಸಂಹಿತೆಯ ಅಗತ್ಯ ಎದ್ದುಕಂಡಿತ್ತು. ಪರಿಣಾಮವಾಗಿ ಈಗ ಮೋದಿ ಸರ್ಕಾರ ಕಾನೂನು ಆಯೋಗಕ್ಕೆ ಈ ಕುರಿತು ಪರಿಶೀಲನೆ ನಡೆಸುವಂತೆ ಹೇಳಿದೆ. ಆಯೋಗದ ಮುಖ್ಯಸ್ಥ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಬಲಬೀರ್ ಸಿಂಗ್ ಚೌಹಾಣ್ ತೋಳೇರಿಸಿಕೊಂಡು ನಿಂತಿದ್ದಾರೆ. ಯಾವ ಯಾವ ಶಿಫಾರಸುಗಳನ್ನು ಮುಂದಿಡುತ್ತಾರೋ ಗೊತ್ತಿಲ್ಲ. ಹಾಗೊಂದು ಪಕ್ಷ ಅವರು ಏಕರೂಪ ಸಂಹಿತೆಯನ್ನು ಜಾರಿಗೆ ತರುವುದರ ಔಚಿತ್ಯವನ್ನು ಎತ್ತಿ ಹಿಡಿಯುತ್ತಾರೆ ಎಂದಿಟ್ಟುಕೊಳ್ಳೋಣ. ಆಗೇನಾಗಲಿದೆ ಗೊತ್ತೇ? ಹಿಂದೂ, ಕ್ರೈಸ್ತ, ಜೈನ, ಬೌದ್ಧರುಗಳು ಅಬ್ಬಬ್ಬಾ ಎಂದರೆ ಕುಳಿತಲ್ಲೇ ಸ್ವಲ್ಪ ಕೆಮ್ಮಿಯಾರು ಅಷ್ಟೇ. ಕೆಲವೇ ದಿನಗಳಲ್ಲಿ ದೇಶದ ಕಾನೂನಿನ ಹೊಸರಾಗದ ಶ್ರುತಿಹಿಡಿದು ದನಿಗೂಡಿಸುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಮುಸ್ಲಿಮರು ಹಾಡುವ ಅಪಸ್ವರದ ಭಿನ್ನರಾಗವಿದೆಯಲ್ಲ, ಅದನ್ನು ಕೇಳಲು ಇಡೀ ದೇಶವೇ ಸಜ್ಜಾಗಬೇಕಿದೆ. ಮೊದಲಿಗೆ, ಏಕರೂಪ ನಾಗರಿಕ ಸಂಹಿತೆಯ ಒಳ-ಹೊರಗನ್ನು ಸ್ಥೂಲವಾಗಿ ಅರ್ಥೈಸಿಕೊಂಡುಬಿಡೋಣ.

ನಮ್ಮನ್ನಾಳುತ್ತಿದ್ದ ಬ್ರಿಟಿಷರು 1833ರಲ್ಲಿ Government of India Act ಅನ್ನು ಚಾಲ್ತಿಗೆ ತಂದರು. ಅದರಡಿಯಲ್ಲಿ ಮೊದಲು ಅನುಷ್ಠಾನಕ್ಕೆ ಬಂದಿದು ಏಕರೂಪ ದಂಡ ಸಂಹಿತೆ (Indian Penal Code). ಅದರ ರಚನೆಯಾದಾಗ ಯಾವ ಕೋಲಾಹಲವೂ ಆಗಲಿಲ್ಲ. ಆದರೆ ಏಕರೂಪ ನಾಗರಿಕ ಸಂಹಿತೆಯ ಪ್ರಶ್ನೆ ಬಂದಾಗ ಬ್ರಿಟಿಷರು ತಾಟಸ್ಥ್ಯ ನೀತಿ ತಳೆದುಬಿಟ್ಟರು! ಏಕೆಂದರೆ ಅದರ ಪರಿಧಿಯೊಳಗೆ, ವಿವಾಹ, ವಿಚ್ಛೇದನ, ಉತ್ತರಾಧಿಕಾರ, ಆಸ್ತಿಯ ಪಾಲುದಾರಿಕೆ, ಜೀವನಾಂಶ ಮುಂತಾದ ಕೌಟುಂಬಿಕ ಅಂಶಗಳೆಲ್ಲ ಬರುತ್ತವೆ. ಅಷ್ಟರಲ್ಲಾಗಲೇ ಹಿಂದೂ, ಮುಸ್ಲಿಂ, ಸಿಖ್, ಜೈನ, ಬೌದ್ಧರುಗಳೆಲ್ಲ ತಮ್ಮ ಧರ್ಮಾನುಸಾರ ವೈಯಕ್ತಿಕ ಕಾನೂನುಗಳನ್ನು ರೂಪಿಸಿಕೊಂಡಾಗಿತ್ತು. ಆ ಜೇನುಗೂಡಿಗೆ ತಾನೇಕೆ ಕಲ್ಲೆಸೆಯಬೇಕು ಎಂದು ಸುಮ್ಮನಾಯಿತು ಬ್ರಿಟಿಷ್ ಸರ್ಕಾರ. 1946ರಲ್ಲಿ ನಮ್ಮ ಸಂವಿಧಾನ ರಚನೆಯ ಪ್ರಕ್ರಿಯೆ ಶುರುವಾಯಿತಲ್ಲ, ಆಗ ಬೇರೆಲ್ಲ ವಿಷಯಗಳಲ್ಲಿ ಆದ ಹಾಗೇ ಇದರ ಬಗ್ಗೆಯೂ ಪರ ವಿರೋಧ ಚರ್ಚೆಗಳಾದವು. ಏಕರೂಪ ಕಾಯ್ದೆ ಬೇಕೆಂಬ ಆಸೆಯೇ ಬಹುತೇಕರದ್ದು. ಆದರೆ ಆಯಾ ಧರ್ಮದವರಿಗೆ, ವೈಯಕ್ತಿಕ ಕಾನೂನಿನ ಚೌಕಟ್ಟನ್ನು ಮೀರಿ ಬನ್ನಿ ಎನ್ನುವುದು ಹೇಗೆ ಎಂಬ ಗೊಂದಲ! ಕೊನೆಗೆ ಈ ಕಾಯ್ದೆಯ ಅನುಷ್ಠಾನವನ್ನು ಕಡ್ಡಾಯಗೊಳಿಸದೆ, ಮುಂದೊಮ್ಮೆ ಅಳವಡಿಸಿಕೊಳ್ಳುವ ಗುರಿಯೊಂದಿಗೆ (Directive Principle), ಅನುಚ್ಛೇದ 44ರ ಹೆಸರಿನಡಿ ಸಂವಿಧಾನದೊಳಗೆ ತೂರಿಸಲಾಯಿತು.

ಆದರೆ ನೆಹರೂರಿಗೆ, ಕಡೇಪಕ್ಷ ಹಿಂದೂಗಳನ್ನಾದರೂ ಒಂದೇ ಕಾನೂನಿನಡಿ ತರುವ ಹಂಬಲವಿತ್ತು. ಆದ್ದರಿಂದಲೇ Hindu Code Bills ಎಂಬ ಹೆಸರಿನಲ್ಲಿ ಸಮಸ್ತ ಹಿಂದೂ ಸಮುದಾಯಕ್ಕೆ (ಮುಸ್ಲಿಂ, ಕ್ರಿಶ್ಚಿಯನ್, ಯಹೂದಿ ಹಾಗೂ ಪಾರ್ಸಿಗಳನ್ನು ಹೊರತುಪಡಿಸಿ) ಅನ್ವಯವಾಗುವಂಥ ಕಾನೂನುಗಳನ್ನು ಜಾರಿಗೆ ತರುವ ಪ್ರಯತ್ನಕ್ಕೆ ಕೈ ಹಾಕಿದರು. ಆಗ ಅವರಿಗೆ ಜೊತೆಯಾದವರು ಅಂಬೇಡ್ಕರ್! ವಿಚ್ಛೇದನಕ್ಕೆ ಅನುಮತಿ, ಹೆಣ್ಣುಮಕ್ಕಳಿಗೆ, ವಿಧವೆಯರಿಗೆ ಆಸ್ತಿಯಲ್ಲಿ ಹಕ್ಕು, ಮುಂತಾದ ಹೊಸ ಕ್ರಮಗಳ ಜಾರಿಗೆ ಕಾಂಗ್ರೆಸ್ಸಿಗರಿಂದಲೇ ಭಾರೀ ವಿರೋಧ ವ್ಯಕ್ತವಾಯಿತು. ಆದರೂ 1956ರ ಹೊತ್ತಿಗೆ ಎಲ್ಲ ಕಾನೂನುಗಳೂ ಅಧಿಕೃತವಾಗಿ ಜಾರಿಯಾದವು. ಮೊದಲಿಗೆ ಪ್ರತಿರೋಧ ತೋರಿದರೂ ಐಕ್ಯತೆ, ಸಮಾನತೆಯ ಕಾರಣಗಳನ್ನು ಕೊಟ್ಟಾಗ ಹಿಂದೂಗಳು ಮರುಮಾತಾಡದೆ ಒಪ್ಪಿಕೊಂಡರು! ಇನ್ನು, ಕ್ರಿಶ್ಚಿಯನ್ನರ ಆಚರಣೆ, ಕಾನೂನುಗಳಿಂದ ಯಾವತ್ತೂ ತೊಡಕುಗಳು ಉಂಟಾಗಲಿಲ್ಲ. ಆದರೆ ಮುಸ್ಲಿಮರ ವಿಷಯದಲ್ಲಿ ಮಾತ್ರ ಮೊದಲಿನಿಂದಲೂ ಗೊಂದಲವೇ.

ಹೀಗೇಕೆ? ನೆಹರೂ ಆಗಲೇ ಮುಸ್ಲಿಮರ ಮನವೊಲಿಸಬಹುದಿತ್ತಲ್ಲ, ಅಥವಾ ಬೇರೆ ಯಾರಾದರೂ ನಾಯಕರು ಅವರಿಗೆ ತಿಳಿಸಿಹೇಳಬಹುದಿತ್ತಲ್ಲ ಎಂದು ನಮಗೆ ಅನಿಸುವುದು ಸಹಜ. ಆದರೆ ಮುಸ್ಲಿಮರ ದೃಷ್ಟಿಯಿಂದ ಯೋಚಿಸಿದಾಗ ಮಾತ್ರ ಅವರ ನಿಲುವು, ದ್ವಂದ್ವಗಳು ಅರ್ಥವಾಗಬಹುದೇನೋ. ಮೊದಲಿನಿಂದಲೂ ಭಾರತೀಯ ಮುಸ್ಲಿಮರಿಗೆ ಬೇರೆಯೇ ಪರಿಭಾಷೆ ಹಾಕಿಕೊಟ್ಟು, ಅವರು ಇತರೆ ಭಾರತೀಯರ ಜೊತೆ ಬೆರೆಯದಂತೆ ನೋಡಿಕೊಂಡ ದೊಡ್ಡ ದೊಡ್ಡ ತಲೆಗಳಿದ್ದವು ಎನ್ನುವುದನ್ನು ನಾವು ಆರ್ಥಮಾಡಿಕೊಳ್ಳಬೇಕು. ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಹುಟ್ಟಿಗೆ ಕಾರಣರಾದ ಸರ್ ಸಯ್ಯದ್ ಅಹ್ಮದ್ ಖಾನ್, ಮೊಹಮ್ಮದ್ ಅಲಿ ಜಿನ್ನಾ, ಚೌಧರಿ ರೆಹಮತ್ ಅಲಿ, ಕವಿ ಇಕ್ಬಾಲ್ ಇವರುಗಳ ಪ್ರತ್ಯಕ್ಷ, ಪರೋಕ್ಷ ಕುಮ್ಮಕ್ಕು ಸಾಮಾನ್ಯ ಮುಸ್ಲಿಮರನ್ನು ಪ್ರಚೋದಿಸಿತು. ಮುಸ್ಲಿಂ ಲೀಗ್‍ಅನ್ನು ಹುಟ್ಟುಹಾಕಿ ಭಾರತದ ದೇಹ, ಮನಸ್ಸುಗಳು ತುಂಡಾಗುವಂತೆ ಮಾಡಿತು.

ಇದು ವ್ಯಕ್ತಿಗಳ ಮಾತಾಯಿತು. ಇನ್ನು ಅವರ ಧರ್ಮಗ್ರಂಥಗಳು? ಕಾನೂನಿನ ಗೋಜಲು ಬಗೆಹರಿಯದಿರುವುದೇ ಇಲ್ಲಿ. ಪವಿತ್ರ ಕುರಾನ್‍ನಲ್ಲಿ ಎಲ್ಲ ನಿಯಮಗಳೂ ಅಡಕವಾಗಿಬಿಟ್ಟಿವೆ ಎಂದರೆ ನಂಬುತ್ತೀರಾ? ದಂಡ ಸಂಹಿತೆ, ನಾಗರಿಕ ಸಂಹಿತೆಗಳು ಹೇಳುವ ಶಿಕ್ಷೆ, ನಿಯಮಗಳೆಲ್ಲ ಅಲ್ಲೇ ಲಭ್ಯವಿದೆ. ಒಂದು ಉದಾಹರಣೆಯನ್ನು ಗಮನಿಸಿ. 'ದೇವರ ನ್ಯಾಯಾಲಯದಲ್ಲಿ ಪ್ರವಾದಿಗಳೇ ಮುಖ್ಯ ನ್ಯಾಯಾಧೀಶರು. ಏನೇ ಸಮ್ಮತಿ, ಅಸಮ್ಮತಿಗಳಿರಲಿ, ಅವರನ್ನು ಬಿಟ್ಟು ಅನ್ಯರ ಬಳಿ ಹೋಗತಕ್ಕದ್ದಲ್ಲ.' ಎಂಬರ್ಥದ ಆಯತ್‍ಗಳು ಕುರಾನ್‍ನ ನಾಲ್ಕನೇ ಸುರಾ(ಅಧ್ಯಾಯ)ದಲ್ಲಿವೆ. ಕುರಾನ್ ಹಾಗೂ ಹದಿತ್‍ಗಳನ್ನು (ಪ್ರವಾದಿಗಳ ಆಚರಣೆಗಳ ಸಂಗ್ರಹ) ಸೇರಿಸಿಯೇ ಷರಿಯತ್ ಕಾನೂನನ್ನು ರಚಿಸಿರುವುದು. ದಿನವೂ ಕುರಾನ್‍ ಪಠಣೆ ಮಾಡುವ ಕಟ್ಟಾ ಮುಸ್ಲಿಮರು ಅದನ್ನು ಪಾಲಿಸಲೇಬೇಕು ತಾನೇ? ಪ್ರವಾದಿಗಳ ಮಾತನ್ನು ಉಲ್ಲಂಘಿಸಲಾದೀತೇ? ಷರಿಯತ್ ಅಲ್ಲದೆ ಬೇರೆ ಕಾನೂನನ್ನು ಒಪ್ಪಿಕೊಳ್ಳಲಾದೀತೇ? ವಿಚ್ಛೇದನದ ಬಗ್ಗೆಯೂ ಅಷ್ಟೇ. 65ನೇ ಅಧ್ಯಾಯ ಪೂರ್ತಿ ಅದಕ್ಕೇ ಮೀಸಲಾಗಿದೆ. ಅಕಸ್ಮಾತ್ ಆ ಸಮಯದಲ್ಲಿ ಹೆಂಡತಿ ಗರ್ಭಿಣಿಯಾಗಿದ್ದರೆ ಏನು ಮಾಡಬೇಕು ಎಂಬ ಅಂಶವನ್ನೂ ಬಿಡಿಸಿ ಹೇಳಲಾಗಿದೆ! ದತ್ತು ಸ್ವೀಕಾರ ಆಕ್ಷೇಪಾರ್ಹ ಎಂಬುದನ್ನೂ ತನ್ನ 33ನೇ ಅಧ್ಯಾಯದಲ್ಲಿ ಸ್ಪಷ್ಟವಾಗಿ ಹೇಳುತ್ತದೆ ಕುರಾನ್. ಇನ್ನು ಪಿತ್ರಾರ್ಜಿತ ಆಸ್ತಿ, ಹೆಂಡತಿ, ಮಗ ಹಾಗೂ ಮಗಳಲ್ಲಿ ಹೇಗೆ ಭಾಗವಾಗಬೇಕು ಎಂಬ ಕರಾರುವಾಕ್ ಲೆಕ್ಕಾಚಾರ ನಾಲ್ಕನೇ ಅಧ್ಯಾಯದ ಹನ್ನೊಂದು ಹಾಗೂ ಹನ್ನೆರಡನೇ ಆಯತ್‍ಗಳಲ್ಲಿ ಸಿಗುತ್ತದೆ! ಹೆಣ್ಣು ಮಕ್ಕಳ ಬದುಕನ್ನು ಅನಿಶ್ಚಿತತೆಗೆ ದೂಡುವ ಮೂರು ಬಾರಿ ತಲಾಕ್ ಹೇಳುವ ಕ್ರಮವೂ ಷರಿಯತ್‍ನ ಒಂದು ಭಾಗವೇ. ಒಂದನ್ನು ಮಾತ್ರ ಆಚರಿಸಿ ಮತ್ತೊಂದನ್ನು ಬಿಡುವುದು ಮುಸ್ಲಿಮರಿಗಾದರೂ ಹೇಗೆ ಸಾಧ್ಯ?

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಈ ಎಲ್ಲ ಅಂಶಗಳೂ ಬದಲಾಗುವುದು ಖಂಡಿತ! ಆಗ, ಕುರಾನ್‍ಗೆ ದ್ರೋಹ ಬಗೆಯುತ್ತಿದ್ದೇವೆಂಬ ಭಾವ ಕಾಡುವುದು ಸಹಜವಲ್ಲವೇ? ಆದ್ದರಿಂದಲೇ ಪ್ರತಿ ಸಲವೂ ಈ ವಿಷಯ ಪ್ರಸ್ತಾಪವಾದಾಗ, ಕಾನೂನು ಪಾಲಕ ಉಲೇಮಾಗಳು ಅಧೀರರಾಗುತ್ತಾರೆ. ನೀವೇ ಯೋಚಿಸಿ. ತಲಾಕ್ ಹೇಳುವ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಯಾವ ಗಂಡಸು ತಾನು ಪ್ರೀತಿಸುವ ಹೆಂಡತಿಯನ್ನು ತೊರೆಯುತ್ತಾನೆ? ದೂರದ ಸೌದಿಯಲ್ಲಿ ಶೇಖ್‍ಗಳು ಕೈಗೊಬ್ಬಳು, ಕಾಲಿಗೊಬ್ಬಳನ್ನು ಇಟ್ಟುಕೊಳ್ಳಬಹುದು. ಹಾಗಂತ ಭಾರತೀಯ ಮುಸ್ಲಿಮನೊಬ್ಬನಿಗೆ ಎಷ್ಟು ಜನ ಹೆಂಡತಿಯರಿರುತ್ತಾರೆ?
ದೇಶವನ್ನು ಒಗ್ಗೂಡಿಸಲು ಏಕರೂಪ ನಾಗರಿಕ ಸಂಹಿತೆಯ ಅಗತ್ಯ ಖಂಡಿತ ಇದೆ. ಹಾಗೇ, ಭಾರತದ ಮಟ್ಟಿಗೆ ಷರಿಯತ್ ಕಾನೂನು ಎಷ್ಟು ಪೂರಕ-ಮಾರಕ ಎನ್ನುವುದನ್ನು ಇಡೀ ಮುಸ್ಲಿಂ ಸಮುದಾಯಕ್ಕೆ ಮನದಟ್ಟು ಮಾಡಿಸುವ ಅಗತ್ಯವೂ ಇದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಿಲ್ಲ ಅಷ್ಟೇ! ಆವತ್ತು ಜಿನ್ನಾ ಶುರುಮಾಡಿ ಹೋದ ಕೆಲಸವನ್ನು ಇವತ್ತು ಒವೈಸಿ ಸಹೋದರರು ಮುಂದುವರೆಸುತ್ತಿದ್ದಾರೆ. ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ, ತನ್ನನ್ನು ತಾನೇ ಮುಸ್ಲಿಂ ಧರ್ಮಗುರು ಎಂದು ಕರೆದುಕೊಳ್ಳುವ ಜಾಕಿರ್ ನಾಯಕ್! ಪ್ರತಿಯೊಬ್ಬ ಮುಸ್ಲಿಮನೂ ಭಯೋತ್ಪಾದಕನಾಗಬೇಕು ಎಂದು ಮುಕ್ತವಾಗೇ ಹೇಳಿಕೊಂಡು ತಿರುಗಾಡುವ ಅವನನ್ನು ಹಲವು ದೇಶಗಳು ಕತ್ತು ಹಿಡಿದು ಹೊರದಬ್ಬಿವೆ! ಭಾರತದಲ್ಲಿ ಮಾತ್ರ ಅವನಿಗೆ ಆರತಿ ಎತ್ತಿ ಬರಮಾಡಿಕೊಳ್ಳುವವರ ದಂಡೇ ಇದೆ! ಆ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ ಕಾಂಗ್ರೆಸ್‍ನ ದಿಗ್ವಿಜಯ್ ಸಿಂಗ್! ಮೊನ್ನೆ ಬಾಂಗ್ಲಾದೇಶದ ಢಾಕಾದಲ್ಲಿ ಅಟ್ಟಹಾಸ ಮೆರೆದ ಭಯೋತ್ಪಾದಕರು ಸ್ಫೂರ್ತಿ ಪಡೆದದ್ದು ಜಾಕಿರ್ ನಾಯಕ್‍ನ ಮಾತುಗಳನ್ನು ಕೇಳಿಯೇ ಅಂತೆ! ನಾವೇ ಬೇರೆ ಉಳಿದವರೇ ಬೇರೆ ಎಂಬ ವಿಷಬೀಜವನ್ನು ಕಾಲಕಾಲಕ್ಕೂ ಬಿತ್ತುವ ಇಂಥ ರಕ್ಕಸರನ್ನು ಹತ್ತಿಕ್ಕದೆ ಯಾವ ಕಾನೂನನ್ನು ಆಚರಣೆಗೆ ತರಲು ಸಾಧ್ಯ?


ಪೇಪರಿನ ಮೇಲೆ ನಿಯಮ ರೂಪಿ ಅಕ್ಷರಗಳನ್ನು ಮೂಡಿಸುವುದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ಅದು ಸರಿಯಾಗಿ ಅಚ್ಚೊತ್ತಬೇಕಾಗಿರುವುದು ಹೃದಯಗಳಲ್ಲಿ! ಆಗಲೇ ಈ ಭಿನ್ನರಾಗ ಹೋಗಿ ಮುಸ್ಲಿಮರೂ ಶ್ರುತಿಶುದ್ಧವಾಗಿ ಇತರರೊಡನೆ ದನಿಗೂಡಿಸಲು ಸಾಧ್ಯ! ಹಾಗೆ ಮೊದಲ ಮಧುರ ಸ್ವರವನ್ನು ಹೊರಡಿಸಬಲ್ಲ ಮುಸ್ಲಿಮರು ಯಾರಿದ್ದೀರಿ? ದಯವಿಟ್ಟು ಮುಂದೆ ಬನ್ನಿ!