Tuesday 26 August 2014

ಸಾವಿನಲ್ಲಿ ‘ಸಂಸ್ಕಾರ’ ಕಂಡ ಮೂರ್ತಿಯವರಲ್ಲಿ 'ವಂಶವೃಕ್ಷ' ಅಡಕವಾಗಿತ್ತೇ?



ಇತ್ತೀಚೆಗೆ ಭೈರಪ್ಪನವರ 'ಯಾನ' ಬಿಡುಗಡೆಯಾಯಿತಷ್ಟೇ. ಅವರ ಕಾದಂಬರಿಗಳನ್ನು ನಿಯಮಿತವಾಗಿ ಓದುವ ಒಂದು ವರ್ಗವಂತೂ ಇದ್ದೇ ಇದೆ. ಟೀಕಿಸುವ ಸಲುವಾಗಿಯೇ ಓದುವ ಪ್ರಗತಿಪರರ ಮತ್ತೊಂದು ವರ್ಗವೂ ಇದೆ. ಈ ಕಾದಂಬರಿಯ ವಿಷಯ ಹಿಂದುತ್ವ ಅಥವಾ ಧಾರ್ಮಿಕತೆಗೆ ಸಂಬಂಧ ಪಡದಿದ್ದುದು ಪ್ರಗತಿಪರರಿಗೆ ನಿರಾಸೆ ಮೂಡಿಸಿತೇನೋ. ಅಂಥಾ ದೊಡ್ದ ಮಟ್ಟದ ಚರ್ಚೆ, ಟೀಕೆಗಳಾಗಲಿಲ್ಲ. ಆದರೆ ಫೇಸ್‍ಬುಕ್ನಲ್ಲಿ, ಬೋಧಿವೃಕ್ಷದ ನೆರಳಿನಲ್ಲಿರುವವರೊಬ್ಬರು 'ಭೈರಪ್ಪನವರು ಚಿಂತನೆಯಲ್ಲಿ ಕೆಲ ವರ್ಷಗಳ ಹಿಂದೆ ಎಲ್ಲಿದ್ದರೋ ಈಗಲೂ ಅಲ್ಲೇ ನಿಂತು ಬಿಟ್ಟಿದ್ದಾರೆ' ಎಂಬರ್ಥದ ಕಾಮೆಂಟನ್ನು ಹಾಕಿಕೊಂಡಿದ್ದರು. ಅದು ಅವರ ಅಭಿಪ್ರಾಯ ಬಿಡಿ. ನಮ್ಮ ಅಭ್ಯಂತರವೇನೂ ಇಲ್ಲ. ಏಕೆಂದರೆ, ಬೋಧಿವೃಕ್ಷದ ಟೊಂಗೆಯ ಮೇಲೆ ನಿಂತು ನೋಡುವವರಿಗೆ ಕಾಣುವಷ್ಟು ಪ್ರಪಂಚ 60ಕ್ಕೂ ಹೆಚ್ಚು ದೇಶಗಳನ್ನು ಸುತ್ತಿರುವ ಭೈರಪ್ಪನವರಿಗೆ ಕಾಣದೇ ಇರಬಹುದು. ಆದ್ದರಿಂದಲೇ ಅವರು ಅಧ್ಯಯನದ ಸಲುವಾಗಿ ಆ ಪರಿ ದೇಶ ಸುತ್ತಿ, ಕೋಶ ಓದುತ್ತಾ ತಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳುತ್ತಿರಬಹುದು. ಆದರೆ ಆ ಕಾಮೆಂಟಿಗೆ ಪ್ರತಿಕ್ರಿಯಿಸಿದ್ದ ರವಿ ಬೆಳಗೆರೆ ಇದೊಂದು ದೊಡ್ಡ ರಾಷ್ಟ್ರೀಯ ವಿಪತ್ತು ಎಂಬಂತೆ 'But what to do with these illegitimate sons of Bhairappa?’ ಎಂದು ಕೇಳಿದ್ದರು. ಬಹಳ ನೋವಾಗಿತ್ತು ಆ ಪದಪುಂಜವನ್ನು ನೋಡಿ. Illegitimate ಎಂಬ ಪದಕ್ಕೆ ಅಪ್ರಾಮಾಣಿಕ, ಅಕ್ರಮ, ಕ್ರಿಮಿನಲ್ ಎಂಬೆಲ್ಲ ಅರ್ಥಗಳು ಬರುತ್ತವೆ. ಹಾಗಾದರೆ ಯಾವ ಅರ್ಥದಲ್ಲಿ ಜರೆದಿದ್ದರು ಭೈರಪ್ಪನವರ ಓದುಗರನ್ನು (ಒಂದರ್ಥದಲ್ಲಿ ಅವರ ಮಕ್ಕಳನ್ನೂ) ಅವರು? ಭೈರಪ್ಪನವರ ಯಾವ ಅಕ್ರಮ, ಅಪ್ರಾಮಾಣಿಕ ಅಥವಾ ಕ್ರಿಮಿನಲ್ ಮಕ್ಕಳು ಅವರ ತಲೆಯ ಮೇಲೆ ಹತ್ತಿ ಕುಳಿತಿದ್ದರು?But what to do’ ಎಂದು ಕೇಳಿಕೊಳ್ಳಬೇಕಾದಂಥ ಸಮಸ್ಯೆಗಳನ್ನೇನು ಸೃಷ್ಟಿಸಿದ್ದರು?

ಮೊನ್ನೆಯಷ್ಟೇ ಮುಗಿದ ಅನಂತ ಮೂರ್ತಿಯವರ ಅಂತಿಮ 'ಸಂಸ್ಕಾರ' ರವಿ ಬೆಳಗೆರೆಯ ಮಾತುಗಳನ್ನು ನೆನಪಿಸಿತು. ಇಲ್ಲಿ, ಸತ್ತಿರುವವರ ಚರಿತ್ರೆಯನ್ನು ಕೆದಕುವುದು ಅಥವಾ ಅವರ ಬಗ್ಗೆ ಕಟು ನುಡಿಗಳನ್ನಾಡುವುದು ಉದ್ದೇಶವಲ್ಲ. ಹಾಗೆ ಮಾಡಲು ನಮ್ಮ ‘ಸಂಸ್ಕಾರ’ ನಮಗೆ ಅನುಮತಿಯನ್ನೂ ನೀಡುವುದಿಲ್ಲ. ಆದರೆ ಹಿರಿಯ, ಜನಪ್ರಿಯ, ಸಾಮಾಜಿಕ ಕಳಕಳಿಯುಳ್ಳ ಸಾಹಿತಿಯೊಬ್ಬರು ತಾವು ಬದುಕಿನುದ್ದಕ್ಕೂ ಪ್ರತಿಪಾದಿಸಿಕೊಂಡು ಬಂದುದನ್ನು ಸಾವಿನಲ್ಲಿ ಹೀಗೆ ಸಲೀಸಾಗಿ, ಸಾರಾಸಗಟಾಗಿ ತಿರಸ್ಕರಿಸಿದುದನ್ನು ಸುಮ್ಮನೆ ಬಿಡಲಾಗುವುದಿಲ್ಲ. ಇದನ್ನೂ 'ಅವರ ಒಂದು ವಿಚಾರಧಾರೆ' ಎಂಬ ನೆಲೆಗಟ್ಟಿನಲ್ಲಿ ವಿಮರ್ಶಿಸಲೇಬೇಕಾಗುತ್ತದೆ. ಆದ್ದರಿಂದ ಇದಕ್ಕೆ,'ಸತ್ತವರ ಬಗ್ಗೆ ಮಾನವೀಯತೆ ಇಲ್ಲದೆ ಆಡುತ್ತಿರುವ ಮಾತು' ಎಂಬ ಅರ್ಥ ಕೊಡಬಾರದಾಗಿ ಓದುಗರಲ್ಲಿ ಮನವಿ.



ಎಲ್ಲ ವೇದಿಕೆಗಳಲ್ಲೂ ಆಧುನಿಕ ವಿಚಾರಧಾರೆಯ, ಪ್ರಗತಿಪರತೆಯ ಪರವಾಗಿ ಚರ್ಚೆಗಿಳಿಯುತ್ತಿದ್ದ, ವಾದ-ವಿವಾದಗಳಿಗೆ ಈಡಾದರೂ ಬೇಸರಿಸದೆ ತಮ್ಮ ನಿಲುವನ್ನು ಉಡದಂತೆ ಗಟ್ಟಿಯಾಗಿ ಕಚ್ಚಿ ಹಿಡಿಯುತ್ತಿದ್ದ ಮೂರ್ತಿಯವರು ಕೊನೆಯಲ್ಲಿ ಹೀಗೇಕೆ ಮಾಡಿದರು? ಪರವೋ ವಿರೋಧವೋ, ಒಟ್ಟಿನಲ್ಲಿ ಅವರನ್ನು ಗಮನಿಸುತ್ತಲೇ ಇದ್ದ ನಮ್ಮ ಮುಂದೆ ಈಗಿರುವುದು ಬರೀ ಪ್ರಶ್ನೆಗಳ ಕಂತೆ. ಬದುಕಿನುದ್ದಕ್ಕೂ ಸಂಸ್ಕಾರಕ್ಕೆ ಧಿಕ್ಕಾರ ಹಾಕುತ್ತಾ ಬಂದಿದ್ದ ಅವರ ಮನದಾಳದಲ್ಲಿ ‘ಸಂಸ್ಕಾರ’ದ ಕುರಿತ ಪ್ರೀತಿ ಮೊದಲಿನಿಂದಲೂ ಇತ್ತೇ? ಅಥವಾ ಬಾಹ್ಯದಲ್ಲಿ ವಿರೋಧಿಸುತ್ತಾ ಹೋದಷ್ಟೂ ಅದು ಅಂತರಂಗದಲ್ಲಿ ಗಟ್ಟಿಯಾಗತೊಡಗಿತ್ತೇ? ವಿರೋಧಿಸಿದ್ದರಿಂದ ಸಿಗುತ್ತಿದ್ದ ಜನಪ್ರಿಯತೆ ಅವರ ಆಂತರ್ಯವನ್ನು ಮೆಟ್ಟಿ ನಿಲ್ಲುತ್ತಿತ್ತೇ? ಉತ್ತರ ಕೊಡಬಹುದಾಗಿದ್ದ ಸಂದರ್ಭದಲ್ಲಿ ಅವರು ಇಂಥ ಯಾವ ಪ್ರಶ್ನೆಗಳಿಗೂ ಆಸ್ಪದವನ್ನೇ ಕೊಡಲಿಲ್ಲ!

ಈ ಕೆಲಸವನ್ನು ಯಾರೋ ರಾಜಕಾರಣಿ ಮಾಡಿದ್ದರೆ ನಾವೂ ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಅವರ ಮಾತುಗಳ ಅಥವಾ ಕ್ರಿಯೆಗಳ ಮೂಲಕ ನಾವು ಸಮಾಜವನ್ನು, ನಮ್ಮ ಬದುಕನ್ನು ನೋಡುವುದಿಲ್ಲ. ರೂಪಿಸಿಕೊಳ್ಳುವುದೂ ಇಲ್ಲ. ಆದರೆ ಸಾಹಿತಿಗಳದ್ದು ಹಾಗಲ್ಲ. ಅವರ ಬರಹ, ಚಿಂತನೆ ಎಲ್ಲದರ ನೇರ ಪರಿಣಾಮವೂ ನಮ್ಮ ಮೇಲೆಯೇ. ಅವರು ಸೃಷ್ಟಿಸಿದ ಪಾತ್ರಗಳಲ್ಲಿ ನಮ್ಮನ್ನು ಹುಡುಕಿಕೊಳ್ಳುವ, ಅವರ ಆಲೋಚನೆಗಳನ್ನು ನಮ್ಮದರ ಜೊತೆ ತಾಳೆ ಹಾಕಿ ನೋಡುವ, ಸಾಮ್ಯ ಕಂಡು ಬಂದರೆ ಸಂಭ್ರಮಿಸುವ ನಾವು ನಮಗರಿವಿಲ್ಲದಂತೆಯೇ ಅವರೊಡನೆ ಬೆಸೆದುಕೊಂಡುಬಿಡುತ್ತೇವೆ. ಅವರೊಡನೆ ಅವರ ಆಲೋಚನೆ, ಬರಹಗಳ ಮೂಲಕ ಪಯಣಿಸುವಾಗ ಅವರು ಹೀಗೆ ಅನಿರೀಕ್ಷಿತ ತಿರುವು ತೆಗೆದುಕೊಂಡುಬಿಟ್ಟರೆ ನಮ್ಮ ಮುಂದಿನ ಪಯಣ ಹೇಗೆ? ತಮ್ಮ ಧೋರಣೆಯಿಂದ ಚಿಂತಕರ ಒಂದಿಡೀ ವರ್ಗವನ್ನೇ ಹುಟ್ಟು ಹಾಕಿ ತಮ್ಮೊಂದಿಗೆ ಬೆಳೆಸಿದ ಮೂರ್ತಿಯವರು ಕೊನೆಗೆ ಮಾಡಿದ್ದು ನಂಬಿಕೆ ದ್ರೋಹವಲ್ಲವೇ? ಅವರಿಂದ ಪ್ರೇರಿತರಾದ ಮಂದಿ ಈಗ ಯಾವ ತತ್ವಕ್ಕೆ ಜೋತುಬೀಳಬೇಕು? ಜನಿವಾರವನ್ನು ಧರಿಸದೇ ಬಿಸುಟವರನ್ನು, ಮಧ್ಯರಾತ್ರಿ ವಿಗ್ರಹಗಳ ಮೇಲೆ ಮೂತ್ರ ಮಾಡಿ ಬಂದವರನ್ನು ಈಗ ಪಾಪ ಪ್ರಜ್ಞೆ ಕಾಡುವುದಿಲ್ಲವೇ? ಅವರೆಲ್ಲ ತಮ್ಮ ತಮ್ಮ ಆಚರಣೆ, ಸಂಸ್ಕಾರಗಳಿಗೆ ಮರಳಬೇಕೇ? ಎಂಥ ಗೊಂದಲವನ್ನು ಸೃಷ್ಟಿಸಿದ್ದಾರೆ ನೋಡಿ ಜ್ಞಾನಪೀಠದ ಗದ್ದುಗೆಯೇರಿದ್ದವರು!

ಸಾವಿನಲ್ಲೂ ತಮ್ಮ ವಿಚಾರವಾದಕ್ಕೆ ಅಂಟಿಕೊಂಡವರ ಉದಾಹರಣೆಗಳು ನಮ್ಮ ನಡುವೆಯೇ ಇದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ನಿಮಗೆ ನೆನಪಿರಬಹುದು. ಪಕ್ಕಾ ಮಾರ್ಕ್ಸ್ ವಾದಿಯಾದ ಅವರು ತಮ್ಮ ಸಾವಿನ ನಂತರ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ದಾನ ಮಾಡಿಬಿಡುವಂತೆ ಕೋರಿದ್ದರು. ನಮ್ಮ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರೂ ಅಷ್ಟೆ. ತಮ್ಮ ಲಿಂಗಾಯಿತ ಸಮುದಾಯದ ಶಾಸ್ತ್ರಗಳ ಪ್ರಕಾರ ಸಂಸ್ಕಾರ ಮಾಡಿಸಿಕೊಳ್ಳಲೇ ಇಲ್ಲ! ಬಹುಶಃ ಬದುಕಿನುದ್ದಕ್ಕೂ ತಮ್ಮ ಮನಸ್ಸಿಗೆ ಪ್ರಾಮಾಣಿಕವಾಗಿ ನಡೆದುಕೊಂಡವರಿಗೆ ಸಾವಿನಲ್ಲಿ ಏನನ್ನೂ ನಿರೂಪಿಸುವ ಅಗತ್ಯ ಬೀಳುವುದಿಲ್ಲವೇನೋ.

ರವಿ ಬೆಳಗೆರೆಯ ಮಾತು ನೆನಪಾಗುವುದೇ ಅದಕ್ಕೆ. ಈಗ ಹೇಳಿ, ನಿಜವಾದ ಅರ್ಥದಲ್ಲಿ ಯಾರು ಅಪ್ರಾಮಾಣಿಕರು? ಭೈರಪ್ಪನವರ ವಿಷಯದಲ್ಲಿ ಕೇಳಿದ ಪ್ರಶ್ನೆಯನ್ನೇ ಆವರು ಮೂರ್ತಿಯವರ ವಿಷಯದಲ್ಲೂ ಕೇಳುತ್ತಾರಾ?  ಮಾತನ್ನೇ ಆಡದೆ, ತಮ್ಮ ಕೃತಿಗಳ ಮೂಲಕವೇ ತಮ್ಮ ಸಂಸ್ಕಾರವನ್ನು ಪ್ರತಿಪಾದಿಸಿಕೊಂಡು ಬಂದಿರುವ ಭೈರಪ್ಪನವರಿಗೆ ಅಥವಾ ಅವರ ಓದುಗ ಸಂತತಿಗೆ illegitimate ಎಂಬ ಪದ ಹೇಗೆ ಅನ್ವಯವಾಗಲು ಸಾಧ್ಯ? ಪ್ರತಿ ಕಾದಂಬರಿಯಲ್ಲೂ ತಮ್ಮ ಧಾರ್ಮಿಕ, ವೈಚಾರಿಕ ನೆಲೆಗೆ ಸಾಕಷ್ಟು ಸಾಕ್ಷ್ಯ, ಸರಕುಗಳನ್ನೂ ಒದಗಿಸುವ ಭೈರಪ್ಪನವರು ತಮ್ಮ ಓದುಗ ವರ್ಗವನ್ನು ಯಾವಾಗ ಗೊಂದಲದಲ್ಲಿ ಕೆಡವಿದ್ದಾರೆ? ಇಬ್ಬಗೆ ನೀತಿಯನ್ನು ಎಲ್ಲಿ, ಎಷ್ಟು ಬಾರಿ ಪ್ರದರ್ಶಿಸಿದ್ದಾರೆ? ಅವರ ಅಥವಾ ಅವರ ಓದುಗ ಸಂತತಿಯಿಂದ ಎಷ್ಟು ಸಮಸ್ಯೆಗಳು ಉದ್ಭವವಾಗಿವೆ?

ಬದುಕಿನ ಎಲ್ಲ ಸ್ತರಗಳಲ್ಲೂ, ವೇದಿಕೆಗಳಲ್ಲೂ ಭೈರಪ್ಪನವರನ್ನು ಕಟುವಾಗಿ ವಿರೋಧಿಸಿದ ಮೂರ್ತಿಯವರು ಸಾವಿನಲ್ಲಿ ಮಾತ್ರ ಅವರನ್ನೇ ಸಂಪೂರ್ಣವಾಗಿ ಅನುಮೋದಿಸಿಬಿಟ್ಟರು ಎನಿಸುವುದಿಲ್ಲವೇ? ಈ ವಾಸ್ತವದ ಮುಂದೆ ಅವರ ಬರಹಗಳೆಲ್ಲ ಅರ್ಥ ಕಳೆದುಕೊಳ್ಳುವುದಿಲ್ಲವೇ? ತಮ್ಮ 'ಸಂಸ್ಕಾರ'ವನ್ನು ಬದಿಗಿಟ್ಟು ಭೈರಪ್ಪನವರ 'ವಂಶ ವೃಕ್ಷ'ವನ್ನು ಅಪ್ಪಿದರು ಎಂಬ ಸಂಶಯ ಕಾಡತೊಡಗುವುದಿಲ್ಲವೇ? ವಂಶ-ವೃಕ್ಷ ಕಾದಂಬರಿಯಲ್ಲಿ, ಅಪ್ಪಟ ಬ್ರಾಹ್ಮಣ ಶ್ರೋತ್ರಿಯರ ಮನೆ ಸೊಸೆ ಕಾತ್ಯಾಯಿನಿ ಎಳವೆಯಲ್ಲೇ ವಿಧವೆಯಾಗುತ್ತಾಳೆ. ಅಕ್ಕರೆ ತೋರುವ ಅತ್ತೆ ಮಾವ, ಗಂಡನ ದ್ಯೋತಕವಾದ ಮಗ ಇದ್ದರೂ ಬೇರೊಬ್ಬನನ್ನು ಪ್ರೀತಿಸಿ ಧರ್ಮಸಂಕಟಕ್ಕೆ ಸಿಲುಕುತ್ತಾಳೆ. ಕೊನೆಗೆ, ತಾನು ಹೆತ್ತ ಮಗನನ್ನು ಅತ್ತೆ ಮಾವನಿಗೊಪ್ಪಿಸಿ, ಪ್ರೀತಿಸಿದವನನ್ನು ಮದುವೆಯಾಗುತ್ತಾಳೆ. ಆದರೆ ತಮ್ಮ ವಂಶದ ಬಗ್ಗೆ ಅಪಾರ ಅಭಿಮಾನವಿದ್ದ ಶ್ರೋತ್ರಿಯರಿಗೆ ಮೋಸ ಮಾಡಿದೆನೆಂಬ ಪಾಪ ಪ್ರಜ್ಞೆ ಅವಳನ್ನು ಕಿತ್ತು ತಿನ್ನುತ್ತದೆ. ಹೊಸ ಗಂಡನಿಗೆ ತಕ್ಕ ಮಡದಿಯೂ ಆಗಲಾರದೆ ಅವನಿಗಾಗಿ ಒಂದು ಮಗುವನ್ನೂ ಹೆರಲಾರದೆ ಕೊನೆಯವರೆಗೂ ಕೊರಗಿ ಸಾಯುತ್ತಾಳೆ. ಬಂಡಾಯವನ್ನೇ ಉಸಿರಾಗಿಸಿಕೊಂಡ ಮೂರ್ತಿಯವರಲ್ಲಿಯೂ ಓರ್ವ ಕಾತ್ಯಾಯಿನಿ ಇದ್ದಳೇ? ತಾವು ಧಿಕ್ಕರಿಸಿದ ಸಂಸ್ಕಾರಕ್ಕೆ ಕೊನೆಗಾಲದಲ್ಲಾದರೂ ಕಟ್ಟು ಬೀಳುವಂತೆ ಅವಳೇ ಇವರನ್ನು ಪ್ರೇರೇಪಿಸಿದಳೇ? ಈ ವೈರುಧ್ಯ ನಮ್ಮ ನಂಬಿಕೆಯ ಬುಡವನ್ನೇ ಅಲುಗಾಡಿಸಿದೆ. ನಮ್ಮನ್ನು ಸಂದಿಗ್ಧದಲ್ಲಿ ಸಿಲುಕಿಸಿದೆ. ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡಬೇಕು ಎಂಬುದು ನಮಗೆ ಗೊತ್ತು. ಬದುಕಿರುವಾಗ ಆಡಿದ ಮಾತು, ಮಾಡಿದ ಕಾರ್ಯಗಳು ನಂಬಿಕೆಗೆ ಅರ್ಹವಲ್ಲ ಎನ್ನುವುದಾದರೆ ಪ್ರಮಾಣಿಸಿ ನೋಡಲು ಸಾವೇ ಮಾನದಂಡವೇ?

Illegitimate ಎಂದು ಯಾರು ಎಷ್ಟೇ ಟೀಕಿಸಲಿ, ಭೈರಪ್ಪನವರು ಮೊದಲು ಎಲ್ಲಿ ಇದ್ದರೋ ಈಗಲೂ ಅಲ್ಲೇ ನಿಂತುಬಿಟ್ಟಿದ್ದಾರೆ ಎಂದು ಹೇಳಲಿ ನಮಗೆ ಅಡ್ಡಿಯಿಲ್ಲ. ಎಲ್ಲೂ ಸಲ್ಲದೆ ಕೊನೆಗೊಮ್ಮೆ ನಮ್ಮನ್ನು ಅನಾಥರನ್ನಾಗಿ, ಅಧೀರರನ್ನಾಗಿ ಮಾಡಿ ಹೋಗುವ ಸಿದ್ಧಾಂತಗಳಿಗಿಂತ ಒಂದೇ ನೆಲೆಯಲ್ಲಿ ಗಟ್ಟಿಯಾಗಿ ಬೇರೂರಿ ನಿಲ್ಲುವ ಭೈರಪ್ಪನವರ ವಿಚಾರಧಾರೆಗಳ ಅಗತ್ಯ ಎಂದಿಗಿಂತಲೂ ಈಗ ಹೆಚ್ಚಿದೆ ಎನಿಸುವುದಿಲ್ಲವೇ? ಬೇರುಗಳೇ ಇಲ್ಲದ ಆಲೋಚನೆಗಳನ್ನು ಓದುಗರ ಮನಸ್ಸಿನಲ್ಲಿ ಚಿಗುರಿಸಿ ಉಪಯೋಗವೇನು? ನಮಗೆ ಬೇರುಗಳು ಬೇಕು. ಅದು ನೀಡುವ ಆಧಾರ, ಧೈರ್ಯ ಬೇಕು. ಚಿಗುರು ಮೊಳೆಯಲೆಷ್ಟು ಹೊತ್ತು?

ಈಗ ಭೈರಪ್ಪನವರ ಬರಹಗಳನ್ನೆಲ್ಲ ಮತ್ತೊಮ್ಮೆ ಹೊಸದಾಗಿ ಓದಬೇಕೆನಿಸುತ್ತಿದೆ! 

Tuesday 19 August 2014

ಸಾಕು ಮಾಡೋಣ ನಿರೀಕ್ಷೆ, ಪಡೆಯೋಣ ಕಾಯಕ ದೀಕ್ಷೆ

ಇದು ಬಹಳ ಹಿಂದಿನ ಕಥೆ. ಅನೇಕ ವರ್ಷಗಳ ಹಿಂದೆ ಒಂದು ಊರಿನಲ್ಲಿ ಓರ್ವ ಶ್ರೀಮಂತ ವ್ಯಾಪಾರಿ ಇದ್ದ. ಅವನದ್ದು ಅಪಾರವಾದ ದೈವಭಕ್ತಿ. ಶುಭ್ರ ಸ್ಫಟಿಕದಂಥ ಕಲ್ಮಶರಹಿತ ಮನಸ್ಸು. ವ್ಯಾಪಾರದಲ್ಲೆಷ್ಟು ಚತುರನೋ ಒಳ್ಳೆಯತನದಲ್ಲೂ ಅಷ್ಟೇ ಮುಂದು. ಒಬ್ಬರನ್ನೂ ನೋಯಿಸದ ಜೀವ. ಬಂದ ಲಾಭದಲ್ಲಿ ತನಗಿಷ್ಟು ಇಟ್ಟುಕೊಂಡು ಉಳಿದದ್ದನ್ನು ದೇವರ ಹೆಸರಿನಲ್ಲಿ ಬಡ-ಬಗ್ಗರಿಗೆ ದಾನ ಮಾಡಿಬಿಡುತ್ತಿದ್ದ. ಅವನ ಒಳ್ಳೆಯತನ ಕಂಡ ದೇವರು ಒಮ್ಮೆ ಕನಸಿನಲ್ಲಿ ಕಾಣಿಸಿಕೊಂಡು, 'ವತ್ಸಾ, ನಿನಗೆ ಏನೇ ತೊಂದರೆ ಬಂದರೂ ನನ್ನನ್ನು ಒಮ್ಮೆ ಸ್ಮರಿಸಿಕೋ. ನಾನು ಬಂದು ನಿನ್ನ ಕಷ್ಟವನ್ನು ಪರಿಹರಿಸುತ್ತೇನೆ' ಎಂದ. ದೇವರೇ ಅಭಯವಿತ್ತಮೇಲೆ ಇನ್ನು ಭಯವೆಲ್ಲಿಯದು ಎಂದು ಭಾವಿಸಿದ ವ್ಯಾಪಾರಿ ದೂರದ ಊರುಗಳಿಗೆ ವ್ಯಾಪಾರಕ್ಕೆ ಹೋಗಲಾರಂಭಿಸಿದ. ಹೀಗೇ ಒಮ್ಮೆ ಹಡಗಿನಲ್ಲಿ ಸರಕನ್ನು ಹೇರಿಕೊಂಡು ಹೋಗುತ್ತಿದ್ದಾಗ, ಕಂಡು ಕೇಳರಿಯದ ಭಯಂಕರ ಚಂಡಮಾರುತ ಸಮುದ್ರಕ್ಕೆ ಅಪ್ಪಳಿಸಿತು. ಆ ಆರ್ಭಟಕ್ಕೆ ಸಿಕ್ಕ ಹಡಗು ಹೊಯ್ದಾಡಿತು. ನಿಧಾನವಾಗಿ ಮುಳುಗತೊಡಗಿತು. ವ್ಯಾಪಾರಿಗೆ ತಕ್ಷಣ ದೇವರ ನೆನಪಾಯಿತು. 'ದೇವರೇ ನಾನು ಪ್ರಾಣಾಪಾಯದಲ್ಲಿ ಸಿಲುಕಿದ್ದೇನೆ. ನನ್ನನ್ನು ಕಾಪಾಡು ಬಾ' ಎಂದು ಮೊರೆಯಿಟ್ಟ. ದೇವರ ನಿರೀಕ್ಷೆಯಲ್ಲಿ ಆಕಾಶ ನೋಡುತ್ತಾ ಕುಳಿತುಬಿಟ್ಟ. ಆಗ, ಅವನ ಹಡಗಿಗಿಂತ ದೊಡ್ಡದಾದ ಹಾಗೂ ವೇಗವಾಗಿ ಹೋಗಬಲ್ಲ ಹಡಗೊಂದು ಪಕ್ಕದಲ್ಲಿ ಬಂದಿತು. ಅದರ ವ್ಯಾಪಾರಿ ಅವನನ್ನು ಕೂಗಿ ಕರೆದ. 'ನಿನ್ನ ಹಡಗು ಮುಳುಗುತ್ತಿದೆ, ನನ್ನದಕ್ಕೆ ಬಾ, ಜೀವ ಉಳಿಸಿಕೋ' ಎಂದ. ದೇವರಿಗಾಗಿ ಕಾಯುತ್ತಾ ಕುಳಿತಿದ್ದನಲ್ಲ? ಹಾಗಾಗಿ ವ್ಯಾಪಾರಿ ತಿರುಗಿಯೂ ನೋಡಲಿಲ್ಲ. ಇನ್ನೂ ಎರಡು ಹಡಗುಗಳು ತಾವಾಗಿಯೇ ಅವನ ಸಹಾಯಕ್ಕೆ ಬಂದವು. ವ್ಯಾಪಾರಿ ಕದಲಲೇ ಇಲ್ಲ. ಕೊನೆಗೊಮ್ಮೆ ಅವನ ಹಡಗು ಪೂರ್ತಿ ಮುಳುಗಿತು. ವ್ಯಾಪಾರಿ ಸತ್ತೇ ಹೋದ. ತುಂಬಾ ಪುಣ್ಯಕಾರ್ಯಗಳನ್ನು ಮಾಡಿದ್ದರಿಂದ ಸೀದಾ ಸ್ವರ್ಗಕ್ಕೇ ಪ್ರವೇಶ ಸಿಕ್ಕಿತು. ದೇವರನ್ನು ಕಾಣುತ್ತಿದ್ದಂತೆ ಅವನ ದುಃಖದ ಕಟ್ಟೆಯೊಡೆಯಿತು. 'ಬಂದು ಕಾಪಾಡುತ್ತೀ ಎಂದು ಮಾತು ಕೊಟ್ಟಿದ್ದೆಯಲ್ಲ ಭಗವಂತಾ, ನೀನು ಹೀಗೆ ಮೋಸ ಮಾಡಬಹುದೇ?' ಎಂದು ಕಣ್ಣೀರು ತುಂಬಿಕೊಂಡು ಕೇಳಿದ. 'ಬಂದೆನಲ್ಲ ವತ್ಸಾ ನಾನು, ಒಂದಲ್ಲ, ಮೂರು ಬಾರಿ ಬಂದೆ. ಮೂರು ಹಡಗುಗಳ ರೂಪದಲ್ಲಿ ನಿನ್ನ ಜೀವ ಉಳಿಸಲು ಬಂದೆ. ನಿರಾಕರಿಸಿ ಕಳಿಸಿದ್ದು ನೀನೇ ಅಲ್ಲವೇ, ನೆನಪು ಮಾಡಿಕೋ. ನಾನಂತೂ ಮಾತಿಗೆ ತಪ್ಪಲಿಲ್ಲ' ಎಂದ ದೇವರು. ಆಗ ವ್ಯಾಪಾರಿಗೆ ತನ್ನ ಅವಿವೇಕದ ಅರಿವಾಯಿತು. ಆದರೇನು, ಕಾಲ ಮಿಂಚಿ ಹೋಗಿತ್ತು!




ಕೆಂಪು ಕೋಟೆಯಲ್ಲಿ, ಕೆಂಪು ಪೇಟ ಸುತ್ತಿಕೊಂಡು, ಸ್ವಾತಂತ್ರ್ಯೋತ್ಸವದ ತಮ್ಮ ಚೊಚ್ಚಲ ಭಾಷಣವನ್ನು ಮಾಡುತ್ತಿದ್ದ ನೂತನ ಪ್ರಧಾನಿ ಮೋದಿಯವರನ್ನು ನೋಡಿದ ತಕ್ಷಣ ಯಾಕೋ ಈ ಕಥೆ ನೆನಪಾಯಿತು. ಈಗ್ಗೆ ಕೆಲ ತಿಂಗಳುಗಳ ಹಿಂದಿನವರೆಗೂ ಯಾರಾದರೂ ನಮ್ಮನ್ನು, ಈ ದೇಶದ ಭವಿಷ್ಯದ ಬಗ್ಗೆ ನಿಮಗೇನನಿಸುತ್ತದೆ ಎಂದು ಕೇಳಿದಾಗಲೆಲ್ಲ ಸಿಗುತ್ತಿದ್ದ ಉತ್ತರ ಒಂದೇ. 'ಈ ದೇಶದ ಹಣೆಬರಹವೇ ಇಷ್ಟು, ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ' ಎಂಬುದು! ಯಾವುದೂ ಬದಲಾಗುವುದಿಲ್ಲ, ಇನ್ನು ಇಷ್ಟೇ ಅಥವಾ ಇದಕ್ಕಿಂತ ಅಧ್ವಾನ ಎಂಬ ಮನಸ್ಥಿತಿಯಲ್ಲಿದ್ದವರಿಗೆ ಮೋದಿ ಎಂಬ ಬದಲಾವಣೆಯ ಪರ್ವವನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಲು, ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ. ಯಾವುದೋ ಮಾಯೆ, ನೋಡನೋಡುತ್ತಿದ್ದಂತೆಯೇ ಅದೆಲ್ಲಿಂದಲೋ ನಮಗಾಗಿ ಧುತ್ತೆಂದು ಒಳ್ಳೆಯ ದಿನಗಳನ್ನು ಹಾಗೂ ಬದಲಾವಣೆಗಳನ್ನು ತಂದು ಕೊಟ್ಟೀತೆಂದು ಕಾದುಕುಳಿತಿರುವ ನಾವೆಲ್ಲ ದೇವರ ನಿರೀಕ್ಷೆಯಲ್ಲಿ ಕುಳಿತ ವ್ಯಾಪಾರಿಯ ಪ್ರತಿರೂಪಗಳಂತಾಗಿ ಬಿಟ್ಟಿದ್ದೇವೆ ಅಲ್ಲವೇ? ಹೌದು. ಅಧಿಕಾರಕ್ಕೇರಿದ ಎರಡೇ ತಿಂಗಳುಗಳಲ್ಲಿ ನಮ್ಮ ಈ ಮನಸ್ಥಿತಿಯನ್ನು ಬಹಳ ಚೆನ್ನಾಗಿ ಅರಿತಿದ್ದಾರೆ ಮೋದಿ. ಆದ್ದರಿಂದಲೇ ತಮ್ಮ ಭಾಷಣದಲ್ಲಿ ನಮಗೆ ಬಹಳಷ್ಟು ಸಂದೇಶಗಳನ್ನು ರವಾನಿಸಿದ್ದಾರೆ.

ಈಗಾಗಲೇ ಮೋದಿಯವರ ಚುನಾವಣಾ ಪ್ರಚಾರ ಸಂದರ್ಭದ ಭಾಷಣಗಳನ್ನು ಕೇಳಿರುವ ನಮಗೆ, ಅವರು ಕೆಂಪು ಕೋಟೆಯಲ್ಲಿ ನಿಂತು ಚೀಟಿ ಓದುವುದಿಲ್ಲ ಎಂಬ ಖಾತ್ರಿಯಂತೂ ಖಂಡಿತ ಇತ್ತು. ಆದರೆ ಅವರ ಮಾತಿನ ಚಾಟಿಯೇಟು ನಮ್ಮನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿಯೂ ಇರಲಿದೆ ಎಂಬ ನಿರೀಕ್ಷೆ ಇರಲೇ ಇಲ್ಲ. ತಮ್ಮನ್ನು ಪ್ರಧಾನ ಸೇವಕ ಎಂದು ಕರೆದುಕೊಂಡ ಮೋದಿ, ಈ ಹಿಂದಿನ ಪ್ರಧಾನಿಗಳು ಮಾಡುತ್ತಿದ್ದಂತೆ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸುವ ಗೋಜಿಗೇ ಹೋಗಲಿಲ್ಲ. ಕಡು ಬಡವರಿಗೂ ಬ್ಯಾಂಕ್ ಖಾತೆಗಳನ್ನು ದೊರಕಿಸಿಕೊಡುವ ಜನ-ಧನ ಯೋಜನೆಯೊಂದನ್ನೇ ಅವರು ಪ್ರಸ್ತಾಪಿಸಿದ್ದು. ಉಳಿದಂತೆ, ಎಲ್ಲರೂ ಒಟ್ಟಾಗಿ ಸೇರಿ ಕಾಣಬೇಕಿರುವ ದೊಡ್ಡ ದೊಡ್ಡ ಕನಸುಗಳ, ಹೊರಬೇಕಿರುವ ಜವಾಬ್ದಾರಿಯ ಬಗ್ಗೆಯೇ ಮಾತು. ನಮ್ಮದೋ, ಉತ್ತಮ ಸರ್ಕಾರವನ್ನು ಆರಿಸಿಕಳಿಸಿದ್ದಾಯಿತಲ್ಲ, ಇನ್ನು ನಮ್ಮ ಪಾತ್ರ ಮುಗಿಯಿತು ಎಂಬ ನಿಶ್ಚಲ ಸ್ಥಿತಿ. ಅವರದ್ದು, ‘ಪ್ರತಿ ಭಾರತೀಯನೂ ಒಂದು ಹೆಜ್ಜೆ ಮುಂದಿಟ್ಟರೆ, ದೇಶ ನೂರಿಪ್ಪತ್ತೈದುಕೋಟಿ ಹೆಜ್ಜೆಗಳಷ್ಟು ಮುಂದುವರಿಯಲಿದೆ’ ಎಂದು ನಮ್ಮನ್ನು ಚಲನೆಗೆ ದೂಡುವ ಪ್ರಯತ್ನ! ಜನಮಾನಸವನ್ನು ತಲುಪಿದ ಇಂಥ ಅರ್ಥವತ್ತಾದ ಸಂವಾದ ಚರಿತ್ರೆಯಲ್ಲಿ ಇದೇ ಮೊದಲು! ಕ್ಷೀಣಿಸುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ, ಶೌಚಾಲಯವಿರದ ಶಾಲೆಗಳ ದುಃಸ್ಥಿತಿ, ತುರ್ತಾಗಿ ಮೂಡಲೇಬೇಕಾಗಿರುವ ಸ್ವಚ್ಛತೆಯ ಬಗೆಗಿನ ಅರಿವು, ಇವುಗಳ ಕುರಿತು ಮನೆಯ ಹಿರಿಯಣ್ಣನಂತೆ ಮಾತನಾಡುವ ಪ್ರಧಾನಿಯನ್ನು ಈ ಮೊದಲು ಕಂಡಿದ್ದಿರಾ? ಯುವಕರಿಗೆ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಪ್ರೇರೇಪಣೆಯಾದರೆ ಸಂಸದರಿಗೆ ಆದರ್ಶ ಗ್ರಾಮಗಳನ್ನು ರಚಿಸುವ ಹೊಣೆ. ಎಲೆಕ್ಟ್ರಾನಿಕ್ ಉಪಕರಣಗಳ ಆಮದು ನಿಂತು ಭಾರತ ಸ್ವಾವಲಂಬಿಯಾಗಲಿ ಎಂಬ ಹಪಹಪಿ ಒಂದೆಡೆಯಾದರೆ ವಿದೇಶೀಯರಿಗೆ ' ಕಮ್, ಮೇಕ್ ಇನ್ ಇಂಡಿಯಾ(ಬನ್ನಿ, ಭಾರತದಲ್ಲೇ ತಯಾರಿಸಿ)' ಎಂಬ ಮುಕ್ತ ಆಹ್ವಾನ ಮತ್ತೊಂದೆಡೆ.

'ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಆಗುಹೋಗುಗಳಿಗೆಲ್ಲ ಮುಝೆ ಕ್ಯಾ(ನನಗೇನು ಆಗಬೇಕಾಗಿರುವುದು) ಹಾಗೂ ಮೇರಾ ಕ್ಯಾ(ನನ್ನದೇನು ಹೋಗಬೇಕಾಗಿರುವುದು) ಎಂದೇ ಸ್ಪಂದಿಸಿ ಅಭ್ಯಾಸವಿರುವ ನಾವು ಇನ್ನುಮೇಲಾದರೂ ಅದನ್ನು ಬಿಡಬೇಕಾಗಿದೆ' ಎಂದಾಗ ನಮಗೆಲ್ಲ 'ಕುಂಬಳಕಾಯಿ ಕಳ್ಳ ಎಂದೊಡನೆ ಹೆಗಲುಮುಟ್ಟಿ ನೋಡಿಕೊಂಡಂತಾಗಿದ್ದು' ಸುಳ್ಳಲ್ಲ ಅಲ್ಲವೇ? ಇಲ್ಲಿ ಇನ್ನೊಂದು ವಿಷಯವನ್ನೂ ಹೇಳಬೇಕು. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು ಹೆಚ್ಚಿರುವ ಹಿನ್ನೆಲೆಯಲ್ಲಿ, ಮೋದಿಯವರು ತಮ್ಮ ಭಾಷಣದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡಬೇಕು ಎಂದು ಹಲವರು ಅಹವಾಲುಗಳನ್ನು ಸಲ್ಲಿಸಿದ್ದರು. ಇಡೀ ದೇಶವೇ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿರುವ ಈ ಹೊತ್ತಿನಲ್ಲಿ ಮೋದಿಯವರು ಏನು ಹೇಳುವರೋ ಎಂಬ ಕುತೂಹಲ ಎಲ್ಲರಿಗೂ ಇತ್ತು. ಶಿಕ್ಷೆ ಮಿಗಿಲೋ ಅಥವಾ ಲೈಂಗಿಕ ಶಿಕ್ಷಣ ಮಿಗಿಲೋ ಎಂಬ ಚರ್ಚೆ ಶುರುವಾಗಿ, ಕಾವು ಏರಿ, ಇನ್ನೇನು ಲೈಂಗಿಕ ಶಿಕ್ಷಣದ ಹೊಸ ವಿಶ್ವವಿದ್ಯಾಲಯವನ್ನು ಹುಟ್ಟುಹಾಕುವುದೊಂದೇ ಬಾಕಿ ಎನ್ನುವ ಹಂತದಲ್ಲಿರುವಾಗ ಎಷ್ಟು ಸರಳ ನೇರ ಪರಿಹಾರ ಸೂಚಿಸಿಬಿಟ್ಟರು ನೋಡಿ. 'ಹೆಣ್ಣು ಮಕ್ಕಳನ್ನು ಎಲ್ಲಿಗೆ ಹೋಗುತ್ತೀರಿ ಎಷ್ಟು ಹೊತ್ತಿಗೆ ಬರುತ್ತೀರಿ ಎಂದೆಲ್ಲ ಕೇಳುವ ತಂದೆ-ತಾಯಿಯರು ಗಂಡು ಮಕ್ಕಳನ್ನೂ ಎಂದಾದರೂ ಹೀಗೇ ವಿಚಾರಿಸಿದ್ದೀರಾ?, ನಿರ್ಬಂಧಿಸಿದ್ದೀರಾ?' ಎಂದು ಕೇಳಿದರು. ಪಾಲಕರು ನೈತಿಕ ಹೊಣೆ ಹೊತ್ತರೆ ತಮ್ಮ ಮಕ್ಕಳು ಅತ್ಯಾಚಾರಿಗಳು, ಉಗ್ರಗಾಮಿಗಳು, ನಕ್ಸಲರು ಆಗುವುದನ್ನು ತಡೆಯಬಹುದೆಂದು ಸ್ಪಷ್ಟವಾಗಿ ಹೇಳಿ ಸಮಾಜದ ಸ್ವಾಸ್ಥ್ಯದ ಜವಾಬ್ದಾರಿಯಲ್ಲಿ ನಮ್ಮ ಮಹತ್ತರ ಪಾಲಿರುವುದರ ಅರಿವು ಮೂಡಿಸಿದರು.

ಗರೀಬೀ ಹಟಾವೋ ಎಂದುಬಿಟ್ಟ ಮಾತ್ರಕ್ಕೆ ಬಡತನ ಬಾಲಮುದುರಿಕೊಂಡು ಓಡಿ ಹೋಗುವುದಿಲ್ಲ. ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಮಾತ್ರ ಅದರ ನಿರ್ಮೂಲನೆ ಸಾಧ್ಯ.ನಮಗಿಂತ ಒಂದೇ ಒಂದು ದಿನ ಮುಂಚಿತವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಪಾಕಿಸ್ತಾನದಲ್ಲಿ ಆಗಸ್ಟ್ 14ರಂದು ಪರಿಸ್ಥಿತಿ ಹೇಗಿತ್ತು ಗೊತ್ತೆ? ಅಂದು ದೇಶದೆಲ್ಲೆಡೆ ಸ್ವಾತಂತ್ರ್ಯದ ಸಂಭ್ರಮವನ್ನೂ ಮೀರಿಸುವ ರಾಷ್ಟ್ರೀಯ ಬಿಕ್ಕಟ್ಟು! ಒಂದು ಕಡೆ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದಲ್ಲಿ, ಆಡಳಿತ ಪಕ್ಷವನ್ನು ವಿರೋಧಿಸಿ ನಡೆದ 'ಸ್ವಾತಂತ್ರ್ಯದ ಮೆರವಣಿಗೆ'ಯಾದರೆ ಮತ್ತೊಂದು ಕಡೆ ತಾಹಿರ್-ಉಲ್-ಕದ್ರಿ ಎಂಬ ಮುಸ್ಲಿಂ ಧರ್ಮಗುರುವಿನ ಅನುಯಾಯಿಗಳ ಪ್ರತಿಭಟನೆ. ಪ್ರಧಾನಿ ನವಾಜ್ ಶರೀಫರ ರಾಜೀನಾಮೆಗೆ ಇಬ್ಬರದೂ ಒತ್ತಾಯ. ಕಳೆದ ವರ್ಷ ಚುನಾಯಿತರಾದ ಅವರು ಗದ್ದುಗೆಯೇರಿದ್ದು ಅಕ್ರಮವಾಗಿ ಎಂಬ ಅಪವಾದ. ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಲುವಾಗಿ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿಗೆ ಹೋಗುವ ಎಲ್ಲ ಹಾದಿಗಳೂ ಅಕ್ಷರಶಃ ಬಂದ್! ಎಂಥ ಆಡಳಿತ ಬೇಕು ಎಂಬುದೇ ಸ್ಪಷ್ಟವಿಲ್ಲದ ಜನತೆ. ಉತ್ತಮ ಆಯ್ಕೆಗಳಿಗೂ ಕೊರತೆ! ಹಾಗೊಮ್ಮೆ, ಹೀಗೊಮ್ಮೆ ಹೊಯ್ದಾಡುವ ಅವರ ಮನಸ್ಸು. ಯಾವ ಕ್ಷಣದಲ್ಲಾದರೂ ಪ್ರಧಾನಿಯ ಮೇಲೆರಗಿ ಆಡಳಿತವನ್ನು ಕಿತ್ತುಕೊಂಡು ಮತ್ತೆ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳಲು ಕಾಯುತ್ತಿರುವ ಸೇನೆ. ಗೆದ್ದಲು ಹುಳುವಿನಂತೆ, ಒಳಗಿನಿಂದಲೇ ದೇಶವನ್ನು ತಿಂದುಹಾಕುತ್ತಿರುವ ತಾಲಿಬಾನ್. ಸೇನೆಯ ಆಡಳಿತವನ್ನು ವಿರೋಧಿಸುವ ಪ್ರಧಾನಿಯ ನೆತ್ತಿಯ ಮೇಲೆ ಸದಾ ಭಯದ ತೂಗುಕತ್ತಿ. ಹೆದರಿದ ಗುಬ್ಬಚ್ಚಿಯಂತೆ ಅವರಾಡುವ ಮಾತುಗಳು. ಯಾರು ಹಡೆಯಬೇಕು ಅಭಿವೃದ್ಧಿಯ ಕನಸುಗಳನ್ನು? ಯಾರು ತೆರೆಯಬೇಕು ಅವಕಾಶಗಳ ಬಾಗಿಲನ್ನು?

ಎಷ್ಟು ವ್ಯತ್ಯಾಸವಿದೆಯಲ್ಲವೇ ಎರಡೂ ದೇಶಗಳ ನಡುವೆ? ಅವುಗಳ ನೇತಾರರ ನಡುವೆ? ಬರೀ ನಮ್ಮ ದೇಶವನ್ನಷ್ಟೇ ಅಲ್ಲ, ಸಾರ್ಕ್ ದೇಶಗಳನ್ನೆಲ್ಲ ಒಟ್ಟಾಗಿ ಕೈಹಿಡಿದು ನಡೆಸುವ ಕನಸು ಕಾಣುತ್ತಿರುವ, ಅಭಿವೃದ್ಧಿಯ ಹೊಸ ಮಜಲುಗಳನ್ನು ಸೃಷ್ಟಿಸುವ ಹುಮ್ಮಸ್ಸಿನಲ್ಲಿರುವ ನಮ್ಮ ಪ್ರಧಾನಿಯ ಧ್ಯೇಯೋದ್ದೇಶವನ್ನು ನಾವು ಮನಗಾಣುವುದು ಯಾವಾಗ? ಅವರೊಂದಿಗೆ ಹೆಗಲುಸೇರಿಸಿ ಕನಸುಗಳನ್ನೆಲ್ಲ ನನಸುಮಾಡಿಕೊಂಡು ಬೀಗುವುದು ಯಾವಾಗ? ನಮ್ಮ ಭಾರತವನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಲು ಇದಕ್ಕಿಂತ ಸುಸಂದರ್ಭ ಬೇಕೇ? ಈಗ ಕೈಗೆಟುಕುವಂತಿರುವ ಅವಕಾಶಗಳನ್ನು ನಮ್ಮ ಎಂದಿನ ಉದಾಸೀನ ಧೋರಣೆಯಿಂದಾಗಿ ಕಳೆದುಕೊಂಡು, ಕೊನೆಗೆ, ದೇವರ ನಿರೀಕ್ಷೆಯಲ್ಲಿ ಕುಳಿತ ವ್ಯಾಪಾರಿಯ ಕಥೆ ನಮ್ಮದಾಗಬಾರದಲ್ಲವೇ?

ನೆನಪಿರಲಿ, God helps only those who help themselves! 

Saturday 16 August 2014

ಭಾರತ ಪ್ಯಾಲೆಸ್ತೀನನ್ನು ಬೆಂಬಲಿಸಿದ್ದೇಕೆ ಗೊತ್ತೆ?

ಕೆಲ ದಿನಗಳ ಹಿಂದೆ ಬಿಜೆಪಿಯ ರಾಜ್ಯಸಭಾ ಸಂಸದ ತರುಣ್ ವಿಜಯ್‍ರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ಮೋದಿಯವರ ಸಲಹಾಕಾರರ ತಂಡದ ಸದಸ್ಯರೂ ಆಗಿರುವ ಅವರಿಂದ ಸಹಜವಾಗಿಯೇ ಸರ್ಕಾರದ ಆಡಳಿತ ಯಂತ್ರ ಹೇಗೆ ಕಾರ್ಯ‍ನಿರ್ವಹಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ತವಕವಿತ್ತು. ಜೊತೆಜೊತೆಗೇ ಮನಸ್ಸನ್ನು ತುಂಬಿಕೊಂಡಿದ್ದ ನೂರೆಂಟು ಪ್ರಶ್ನೆಗಳು. ಕಾಶ್ಮೀರವನ್ನು ನಮ್ಮೊಂದಿಗೆ ವಿಲೀನಗೊಳಿಸುವ ಸೆಕ್ಷನ್ 370 ಅನುಷ್ಠಾನವಾಗುತ್ತದಾ? ಜಿಹಾದ್‍ನ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಕೊನೆಯಾಗುವ ಬಗೆ ಹೇಗೆ? ಮತಾಂತರಿಗಳನ್ನು ಮಟ್ಟಹಾಕುವ ಯಾವ ಸೂತ್ರ ಸಿದ್ಧವಾಗುತ್ತಿದೆ? ನಮ್ಮ ಗಡಿಯಲ್ಲಿ ಘಳಿಗೆಗೊಮ್ಮೆ ಗುಲ್ಲೆಬ್ಬಿಸುತ್ತಿರುವ ಪಾಕಿಸ್ತಾನವನ್ನು ಶಾಶ್ವತವಾಗಿ ಸುಮ್ಮನಾಗಿಸುವುದು ಹೇಗೆ? ಚೀನಾದ ವಿಷಯದಲ್ಲಿ ನಮ್ಮ ಧೋರಣೆ ಏನು ಇತ್ಯಾದಿ. ಆದರೆ ಹೆಚ್ಚು ಚರ್ಚಿತವಾದದ್ದು ಬದಲಾಗುತ್ತಿರುವ ಭಾರತದ ರಾಜತಾಂತ್ರಿಕ ನಡೆ-ನುಡಿ ರೀತಿ-ನೀತಿಗಳು. ಅದರಲ್ಲೂ ತೀರಾ ಇತ್ತೀಚೆಗೆ ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಇಸ್ರೇಲ್‍ನ ನಿಲುವನ್ನು ವಿರೋಧಿಸಿ ಮತ ಹಾಕಿತಲ್ಲ ಮೋದಿ ಸರ್ಕಾರ, ಆ ವಿಷಯ ಬಹಳ ಗಂಭೀರ ಚರ್ಚೆಗೆ ಒಳಪಟ್ಟಿತು. ಆ ಒಂದು ಉದಾಹರಣೆಯನ್ನು ಗಣನೆಗೆ ತೆಗೆದುಕೊಂಡರೆ ಸಾಕು, ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ಅಗತ್ಯ ಎಷ್ಟಿದೆ ಎಂಬುದು ವೇದ್ಯವಾಗುತ್ತದೆ. ಸರ್ಕಾರದ ನಿರ್ಧಾರಗಳನ್ನು ಶುದ್ಧ ಅವಿವೇಕತನ ಎಂದು ಆತುರದಲ್ಲಿ ಹಳಿಯುವ ಮೊದಲು ನಾವು ಮೈಗೂಡಿಸಿಕೊಳ್ಳಬೇಕಾದ ತಾಳ್ಮೆ, ವಿವೇಚನೆಯ ಬಗ್ಗೆಯೂ ಅರಿವು ಮೂಡುತ್ತದೆ. ಬನ್ನಿ, ಸ್ವಲ್ಪ ವಿಶದವಾಗಿ ಅರಿಯೋಣ ಈ ವಿಷಯವನ್ನು.


ಕಳೆದ ಒಂದು ತಿಂಗಳಿನಿಂದ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‍ಗಳ ನಡುವೆ ನಡೆದಿರುವ ಘನಘೋರ ಕಾಳಗವನ್ನು ಜಗತ್ತಿಡೀ ಗಮನಿಸುತ್ತಿದೆ. ಇಸ್ರೇಲ್‍ನ ಗಡಿಯಾದ ಗಾಜಾ ಪಟ್ಟಿಯಲ್ಲಿ ಬೀಡು ಬಿಟ್ಟಿರುವ, ಆಡಳಿತಾರೂಢ ಹಮಾಸ್‍ನ ಉಗ್ರರು ಇಸ್ರೇಲ್‍ನ ಮೇಲೆ ರಾಕೆಟ್‍ಗಳ ದಾಳಿ ನಡೆಸುತ್ತಿದ್ದಾರೆ. ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ಪ್ಯಾಲೆಸ್ತೀನ್‍‍ನ ಬಹಳಷ್ಟು ಅಮಾಯಕ ನಾಗರಿಕರು, ಮಕ್ಕಳು ಸಾಯುತ್ತಿದ್ದಾರೆ ಎಂದು ಹಮಾಸ್ ಎಲ್ಲರೆದುರು ಬೊಬ್ಬೆ ಹೊಡೆಯುತ್ತಿದೆ. ಆದ್ದರಿಂದಲೇ ಇಸ್ರೇಲ್‍ನ ದಾಳಿಯನ್ನು ಕುರಿತು ತನಿಖೆಯಾಗಬೇಕು ಎಂಬ ನಿರ್ಧಾರವನ್ನು ವಿಶ್ವ ಸಂಸ್ಥೆಯ 47 ರಾಷ್ಟ್ರಗಳ ಒಕ್ಕೂಟ ಒಮ್ಮತದಿಂದ ತೆಗೆದುಕೊಂಡಿತು. ಪರ-ವಿರೋಧವಾಗಿ ನಡೆದ ಮತದಾನದಲ್ಲಿ 29 ದೇಶಗಳು ತನಿಖೆಯ ಪರವಾಗಿ ಮತ ಹಾಕಿದರೆ 17 ದೇಶಗಳು ನಿರ್ಲಿಪ್ತವಾಗಿದ್ದವು. ತನಿಖೆಯನ್ನು ವಿರೋಧಿಸಿ ಮತ ಹಾಕಿದ ಏಕೈಕ ದೇಶ, ದೊಡ್ಡಣ್ಣ ಅಮೆರಿಕ! ಭಾರತ, ರಷ್ಯ ಚೀನಾ ಬ್ರೆಜಿಲ್ ಸೇರಿದಂತೆ ಇತರೆ ರಾಷ್ಟ್ರಗಳೊಡಗೂಡಿ ಇಸ್ರೇಲ್‍ಗೆ ವಿರುದ್ಧವಾಗಿ ಮತ ಹಾಕಿದೊಡನೆ ಎಷ್ಟೆಲ್ಲ ಖಂಡಿಸಿಬಿಟ್ಟೆವಲ್ಲ ನಾವು ಸರ್ಕಾರವನ್ನು. ನಮ್ಮಂಥ ಜನಸಾಮಾನ್ಯರು ಅನುಮಾನಿಸುವುದೇನೋ ಸರಿ, ಆದರೆ ಮೋದಿಯವರ ಕಟ್ಟಾ ಬೆಂಬಲಿಗರೆಲ್ಲ ಸಿಟ್ಟಾಗಿಬಿಟ್ಟರು. ಅಂಥ ಜೀವದ ಗೆಳೆಯ ಇಸ್ರೇಲ್‍ಅನ್ನು ವಿರೋಧಿಸಿ ಮತ ಹಾಕುವ ಬದಲು ನಿರ್ಲಿಪ್ತವಾಗಿರಬಹುದಿತ್ತಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಜ, ಹಮಾಸ್ನ ದಾಳಿಗೆ ನಿರಂತರವಾಗಿ ಒಳಗಾಗುತ್ತಲೇ ಬಂದಿರುವ ಇಸ್ರೇಲ್‍ಗೆ ನಮ್ಮ ಬೆಂಬಲದ ಅಗತ್ಯವಿದೆ. ಏಕೆಂದರೆ ನಾವಿಬ್ಬರೂ ಸಮಾನ ದುಃಖಿಗಳು. ಹಿಂದೂಗಳಿಗೆ ಭಾರತ ಹೇಗೋ ಯಹೂದಿಗಳಿಗೆ ಇಸ್ರೇಲ್ ಹಾಗೇ. ಈ ವಿಶಾಲ ಪ್ರಪಂಚದಲ್ಲಿ, ನಿರುಮ್ಮಳವಾಗಿ ವಾಸಿಸಲು ಅವರಿಗೆ ತಮ್ಮ ತಾಯ್ನಾಡೂ ಸುರಕ್ಷಿತ ಸ್ಥಳವಲ್ಲ. ಅದಕ್ಕೂ ಪ್ರತಿಕ್ಷಣ ಬಡಿದಾಡಬೇಕು. ನೆಮ್ಮದಿ ಎಂಬುದು ಇಲ್ಲವೇ ಇಲ್ಲ. ನಾವು ಪಾಕಿಸ್ತಾನ, ಬಾಂಗ್ಲಾದೇಶಗಳ ಕಿರುಕುಳದಿಂದಾಗಿ ಅನುಭವಿಸುತ್ತಿರುವ ಯಾತನೆಯ ನೂರು ಪಟ್ಟು ಇಸ್ರೇಲ್ ಪ್ರತಿನಿತ್ಯ ಅನುಭವಿಸುತ್ತಿದೆ. ಹಿಟ್ಲರನ ಸರ್ವಾಧಿಕಾರ 60ಲಕ್ಷ ಯಹೂದಿಗಳನ್ನು ಬಲಿತೆಗೆದುಕೊಂಡ ಮೇಲೆ ಅಳಿದುಳಿದ ಯಹೂದಿಗಳು ವಿಶ್ವದೆಲ್ಲೆಡೆಯಿಂದ ಬಂದು ಸೇರಿಕೊಂಡಿದ್ದು ಇಸ್ರೇಲನ್ನೇ. ಅಲ್ಲಿದ್ದ ಅರಬ್ ಮುಸ್ಲಿಮರನ್ನು ಬೇರೆ ಯಾವ ಮುಸ್ಲಿಂ ರಾಷ್ಟ್ರಗಳೂ ಸೇರಿಸಿಕೊಳ್ಳದೆ ಹೋದುದರಿಂದ ಅವರುಗಳು ಗಾಜಾಪಟ್ಟಿಯನ್ನು ಆಕ್ರಮಿಸಿ ಕುಳಿತರು. ಎಲ್ಲ ಕಡೆಗಳಲ್ಲಿ ಮಾಡುವಂತೆ ಇಲ್ಲಿಯೂ ಸ್ವತಂತ್ರ ರಾಷ್ಟ್ರದ ಬೇಡಿಕೆ ಇಟ್ಟರು. ಎಂದಿನಂತೆ ಅವರ ಸಹಾಯಕ್ಕೆ 'ಮುಸ್ಲಿಂ ಭ್ರಾತೃತ್ವ'ದ ಹೆಸರಿನಲ್ಲಿ ಇತರೆ ಮುಸ್ಲಿಂ ರಾಷ್ಟ್ರಗಳು ಧಾವಿಸಿಯೇ ಬಿಟ್ಟವು. ಹಾಗೆ ಹಮಾಸ್ ಎಂಬ ಹೆಸರಿನಲ್ಲಿ ಅಂದು ಶುರುವಾದ ಉಗ್ರರ ಉಪಟಳ ಇಂದಿಗೂ ಇಸ್ರೇಲ್‍‍ಅನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಪ್ರತಿ ಬಾರಿಯೂ ಏಟು ತಿಂದು ಸೋತು ಹಿಂದಿರುಗಿದರೂ ಮತ್ತೆ ಮತ್ತೆ ದಾಳಿ ಮಾಡುತ್ತಲೇ ಇದೆ.

ಈ ಬಾರಿಯ ಯುದ್ಧ ಶುರುವಾಗಿದ್ದು ಕಳೆದ ಜುಲೈ 8ರಂದು. ಇಸ್ರೇಲ್‍ನ ಮೂವರು ಯುವಕರನ್ನು ಹಮಾಸ್‍ನ ಉಗ್ರರು ಅಪಹರಿಸಿ ಹತ್ಯೆ ಮಾಡಿದರು ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯ. ಈ ಕಾರಣಕ್ಕೆ ಇಸ್ರೇಲ್ ಯುದ್ಧಕ್ಕೆ ಇಳಿಯಿತಾದರೂ ಕಾರಣ ಇದೊಂದೇ ಆಗಿರಲಿಲ್ಲ. ಇಸ್ರೇಲ್‍ಅನ್ನು ನೇರವಾಗಿ ವೈಮಾನಿಕ ಅಥವಾ ರಾಕೆಟ್‍ಗಳ ದಾಳಿಯಿಂದ ಸೋಲಿಸಲು ಸಾಧ್ಯವಿಲ್ಲ ಎಂದು ಅರಿತಿತ್ತು ಹಮಾಸ್. ಆದ್ದರಿಂದಲೇ ಈ ಬಾರಿ ಸುಮಾರು 36 ಸುರಂಗಗಳನ್ನು ಕೊರೆದು ಅದರ ಮೂಲಕ ರಹಸ್ಯವಾಗಿ ಇಸ್ರೇಲ್‍‍ಅನ್ನು ತಲುಪಿ ಒಮ್ಮೆಗೇ ಅದರ ಮೇಲೆ ದಾಳಿ ಮಾಡುವ ಇರಾದೆ ಹೊಂದಿತ್ತು. ಪ್ರತಿ ಸುರಂಗ ಕೊರೆಯುವುದಕ್ಕೂ ಏನಿಲ್ಲವೆಂದರೂ ಸುಮಾರು 10ಲಕ್ಷ ರೂಪಾಯಿಗಳಷ್ಟು (ಅಲ್ಲಿನ ಕರೆನ್ಸಿಯಲ್ಲಿ) ಖರ್ಚಾಗಿರಬಹುದು! ಊಟಕ್ಕೂ ಗತಿಯಿಲ್ಲದ ಪ್ಯಾಲೆಸ್ತೀನ್‍ನಲ್ಲಿ ಇಂಥ ಮನೆಹಾಳು ಕೆಲಸಗಳಿಗೆ ಕೋಟ್ಯಂತರ ರೂಪಾಯಿ ಹರಿದುಬರುತ್ತಿರಬೇಕಾದರೆ ಅದ್ಯಾವ ಪರಿಯ ಧರ್ಮಾಂಧತೆ ಆವರಿಸಿಕೊಂಡಿರಬೇಕು ಯೋಚಿಸಿ! ಸುಳಿವು ಸಿಕ್ಕ ಇಸ್ರೇಲ್ ಸುಮ್ಮನೆ ಕೂರುವಂತಿರಲಿಲ್ಲ. ಜುಲೈ 17ರಂದು ತನ್ನ ಸೇನೆಯನ್ನು, ಈ ಎಲ್ಲ ಸುರಂಗಗಳನ್ನು ನಿರ್ನಾಮಗೊಳಿಸಲು ಕಳಿಸಿತು. ಒಂದೊಂದೇ ಸುರಂಗವನ್ನು ಶೋಧಿಸಿ, ಉಗ್ರರನ್ನು ಸದೆಬಡಿದು ಇಡೀ ಸುರಂಗವನ್ನು ನೆಲಸಮಗೊಳಿಸುತ್ತಾ ಸಾಗಿತು. ಆದ್ದರಿಂದಲೇ ತನ್ನ ಕೆಲಸ ಪೂರ್ತಿ ಮುಗಿಯುವವರೆಗೂ ಯಾವ ಕಾರಣಕ್ಕೂ ಗಾಜಾ ಪಟ್ಟಿಯಿಂದ ತನ್ನ ಸೇನೆಯನ್ನು ಹಿಂಪಡೆಯಲಿಲ್ಲ. ಯುದ್ಧ ಇಷ್ಟು ದೀರ್ಘಕಾಲ ನಡೆದದ್ದಕ್ಕೂ ಇದೇ ಕಾರಣ.

10ಸಾವಿರದಷ್ಟು ರಾಕೆಟ್‍ಗಳ ದಾಸ್ತಾನನ್ನು ಇಟ್ಟುಕೊಂಡಿದ್ದ ಹಮಾಸ್ ಇಸ್ರೇಲ್‍ನ ಮೇಲೆ ದಿನವೊಂದಕ್ಕೆ ನೂರಾರು ರಾಕೆಟ್‍ಗಳನ್ನು ಮನಬಂದಂತೆ ಹಾರಿಸುತ್ತಿತ್ತು. ಆದರೂ ಇಸ್ರೇಲ್‍ನಲ್ಲಿ ಸಾವು-ನೋವುಗಳು ಹೆಚ್ಚಾಗಿ ಸಂಭವಿಸಲಿಲ್ಲ. ಏಕೆಂದರೆ ಹಾಗೆ ರಾಕೆಟ್ ಹಾರಿ ಬಂದಾಗ ಸೈರನ್ ಮೊಳಗಿ ಇಸ್ರೇಲ್‍ನ ಜನ ತಮ್ಮ ರಕ್ಷಣೆಗಾಗಿಯೇ ನಿರ್ಮಿಸಲಾಗಿದ್ದ ಕಬ್ಬಿಣದ ಗೂಡುಗಳಲ್ಲಿ ಅಡಗಿಕೊಳ್ಳುತ್ತಿದ್ದರು. ತಾನು ಪ್ರತಿದಾಳಿ ಮಾಡುವ ಮೊದಲು ಇಸ್ರೇಲ್ ಪ್ಯಾಲೆಸ್ತೀನ್‍ನ ನಾಗರಿಕರಿಗೆ ಅಡಗಿಕೊಳ್ಳುವ ಸೂಚನೆ ಕೊಡುತ್ತಿತ್ತು. ಅಷ್ಟಾದರೂ ಅಮಾಯಕ ಜನರು ಸಾಯುತ್ತಿದ್ದಾರೆ ಎಂದು ಬೊಬ್ಬಿರಿಯುವುದನ್ನು ಹಮಾಸ್ ಬಿಡಲಿಲ್ಲ. ಏಕೆಂದರೆ ಹಮಾಸ್‍ನ ಹೇಡಿಗಳು ರಕ್ಷಣೆಗಾಗಿ ಅಡಗುತ್ತಿದ್ದುದೇ ಹೆಂಗಸರು, ಮಕ್ಕಳ ಹಿಂದೆ! ಅವರೆಲ್ಲರೂ ಅಮಾಯಕರೇ ಎಂಬುದೂ ನಿಜವಲ್ಲ. ಜನಸಂಖ್ಯಾ ಜಿಹಾದ್ಆನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ ಹಮಾಸ್‍! ಹುಟ್ಟುವ ನಾಲ್ಕು ಮಕ್ಕಳಲ್ಲಿ ಒಂದು ಜಿಹಾದ್‍ಗಾಗಿಯೇ ಮೀಸಲು. ಇಂಥವರನ್ನು ಬಲಿಕೊಟ್ಟು ವಿಶ್ವದೆದುರು ಕಣ್ಣೀರಿಟ್ಟು ಆನುಕಂಪ ಗಿಟ್ಟಿಸುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ.

ಇಷ್ಟೆಲ್ಲಾ ಆಗುತ್ತಿರಬೇಕಾದರೆ ನಾವು ನ್ಯಾಯವಾಗಿ ಇಸ್ರೇಲ್‍ಅನ್ನೇ ಬೆಂಬಲಿಸಬೇಕಿತ್ತಲ್ಲವೇ? ಅಲ್ಲೇ ಇರುವುದು ನೋಡಿ ಸ್ವಾರಸ್ಯ. ನಾವು ಅದರ ವಿರೋಧವಾಗಿ ಮತ ಚಲಾಯಿಸಿದ ತಕ್ಷಣವೇ ಇಸ್ರೇಲ್‍ ನಮ್ಮ ನಿರ್ಧಾರವನ್ನು ಸ್ವಾಗತಿಸಿತು! ಇದರಿಂದ ನಮ್ಮ ಮಿತೃತ್ವಕ್ಕೆ ಯಾವ ಧಕ್ಕೆಯೂ ಉಂಟಾಗುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿತು. ಕಾರಣವಿಷ್ಟೇ. ಪ್ಯಾಲೆಸ್ತೀನ್ ಎಂದರೆ ಹಮಾಸ್ ಮಾತ್ರವಲ್ಲ. ಒಂದು ಭಾಗವನ್ನು ಹಮಾಸ್ ಆಳುತ್ತಿದ್ದರೆ ಮತ್ತೊಂದನ್ನು ಫತೆಹ್ ಎಂಬ ಶಾಂತಿಪ್ರಿಯರು ಆಳುತ್ತಿದ್ದಾರೆ. ಅವರಿಗೆ ಯುದ್ಧ, ರಕ್ತಪಾತ ಬೇಕಿಲ್ಲ. ಇಷ್ಟು ದಿನ ಹಮಾಸ್‍ಅನ್ನು ಬೆಂಬಲಿಸುತ್ತಿದ್ದ ಈಜಿಪ್ತ್, ಕತಾರ್ ಮತ್ತು ಟರ್ಕಿಗಳಿಗೆ ಈಗ ಜ್ಞಾನೋದಯವಾಗಿದೆ. ಹೀಗೇ ಮುಂದುವರೆದರೆ ಪ್ಯಾಲೆಸ್ತೀನ್‍ನ ಸ್ಥಿತಿ ಇನ್ನೂ ಶೋಚನೀಯವಾಗಿಬಿಡುತ್ತದೆ ಎಂದು ಅವರಿಗೆ ಮನದಟ್ಟಾಗಿದೆ. ಆದ್ದರಿಂದಲೇ ಫತೆಹ್ ಹಾಗೂ ಹಮಾಸ್‍‍ಗೆ ಹೊಂದಿಕೊಂಡು ಒಟ್ಟಾಗಿ ಆಡಳಿತ ನಡೆಸುವಂತೆ ಸೂಚಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದಿಂದಲೂ ಒತ್ತಡ ಹೇರಿಸುತ್ತಿದ್ದಾರೆ.ನಾವು ಬ್ರಿಕ್ಸ್ (BRICS) ರಾಷ್ಟ್ರಗಳೆಲ್ಲ ಸೇರಿ ಸಹಿಮಾಡಿದ ಘೋಷಣೆಯಲ್ಲೂ ಈ ಸಾಲುಗಳು ಸ್ಪಷ್ಟವಾಗಿ ನಮೂದಾಗಿವೆ. ಪ್ಯಾಲೆಸ್ತೀನ್‍ನಲ್ಲಿ ಶಾಂತಿಪ್ರಿಯರ ಆಡಳಿತ ಶುರುವಾದರೆ ಲಾಭವಾಗುವುದು ಇಸ್ರೇಲ್‍ಗೇ. ಅದಕ್ಕೂ ಒಂದು ದೀರ್ಘಾವಧಿ ವಿರಾಮದ ಅಗತ್ಯವಿದೆ. ನೀವು ನಂಬುವುದಿಲ್ಲ, ಈ ಸಂಘರ್ಷ ಯುದ್ಧಗಳಿಂದಾಗಿ ಇಸ್ರೇಲಿಗಳಿಗೆ ಮಕ್ಕಳನ್ನು ಮಾಡಿಕೊಳ್ಳಲೂ ಪುರುಸೊತ್ತು ಸಿಗುತ್ತಿಲ್ಲ. ಮಕ್ಕಳ ಜನನದ ಪ್ರಮಾಣ ದಿನೇ ದಿನೇ ಕುಸಿಯುತ್ತಿದೆ. ಇದು ಒಂದು ಕಾರಣವಾದರೆ ಮತ್ತೂ ಒಂದು ಕಾರಣವಿದೆ. ಇಂದು ಜಗತ್ತಿನ ಯಾವ ಎರಡು ಮುಸ್ಲಿಂ ರಾಷ್ಟ್ರಗಳೂ ಸ್ನೇಹದಿಂದಿಲ್ಲ. ಒಂದೇ ರಾಷ್ಟ್ರಕ್ಕೆ ಸೇರಿದ ಪಂಗಡಗಳಲ್ಲೇ ಒಮ್ಮತವಿಲ್ಲ. ಅವರವರೇ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ. ಇಂಥ ಸನ್ನಿವೇಶದಿಂದ ರೋಸಿಹೋಗಿರುವ ಬಹಳಷ್ಟು ರಾಷ್ಟ್ರಗಳಿಗೆ ಬದಲಾವಣೆ ಬೇಕಾಗಿದೆ. ತನ್ನ ಮೇಲೆ ನಂಬಿಕೆಯಿಟ್ಟು ಬೆಂಬಲಿಸಿರುವ ಭಾರತವನ್ನು ನಾಳೆ ಪ್ಯಾಲೆಸ್ತೀನ್ ಕಾಶ್ಮೀರದ ವಿಷಯದಲ್ಲಿ ಬೆಂಬಲಿಸಲೇ ಬೇಕಾಗುತ್ತದೆ. ಪಾಕಿಸ್ತಾನವೆಂಬ ಪೀಡೆಯನ್ನು ಮತ್ತಷ್ಟು ಕಾರ್ಗಿಲ್‍ಗಳ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬ ನಿಯಮವೇನೂ ಇಲ್ಲವಲ್ಲ? ನೆರವು ಅನಪೇಕ್ಷಿತ ರೂಪದಲ್ಲಿ ಬಂದರೆ ಯಾಕಾಗಬಾರದು? ಇಲ್ಲಿ ಮತ್ತೊಂದು ಸೋಜಿಗವೂ ಇದೆ. ಅಷ್ಟೂ ರಾಷ್ಟ್ರಗಳ ಪೈಕಿ ಇಸ್ರೇಲ್‍‍ನ ಪರವಾಗಿ ನಿಂತದ್ದು ಅಮೆರಿಕ ಒಂದೇ. ಒಂದೆಡೆ ಇಸ್ರೇಲ್ ನೂರಾರು ನಾಗರಿಕರನ್ನು ಕೊಲ್ಲುವುದು ತಪ್ಪು ಎಂದು ಬುದ್ಧಿ ಹೇಳುವ ಅಮೆರಿಕ ಮತ್ತೊಂದೆಡೆ ಅದಕ್ಕೆ ಯುದ್ಧ ಸಾಮಗ್ರಿಗಳನ್ನು ತುಂಬಾ ನಿಯತ್ತಾಗಿ ಸರಬರಾಜು ಮಾಡುತ್ತದೆ! ಯಾವ ಕಾರಣಕ್ಕೂ ಇಸ್ರೇಲ್ ಸೋಲಲು ಅಮೆರಿಕ ಬಿಡುವುದಿಲ್ಲ!

ಕಾರ್ಗಿಲ್ ಯುದ್ಧ ಹಾಗೂ ಪೋಖ್ರಾನ್‍ನ ಪರೀಕ್ಷೆಯ ನಂತರ ಜಗತ್ತು ನಮ್ಮನ್ನು ನೋಡುವ ರೀತಿ ಬದಲಾಗಿದೆ. ಮೊದಲೆಲ್ಲ ನಮ್ಮ ಪ್ರಧಾನಿ ಅಮೆರಿಕಕ್ಕೆ ಹೋದರೆ ನ್ಯೂಯಾರ್ಕ್ ಟೈಮ್ಸ್ ಅಥವಾ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳಲ್ಲಿ ಒಂದು ಸಾಲೂ ಪ್ರಕಟವಾಗುತ್ತಿರಲಿಲ್ಲ. ಇಂದು ಮೋದಿಯವರ ಪ್ರಮಾಣ ವಚನ ಸ್ವೀಕಾರದ ವಿಷಯ ಅಚ್ಚಾಗದ ಪತ್ರಿಕೆಯೇ ಇಲ್ಲ. ನಮ್ಮ ಸರ್ಕಾರಕ್ಕೆ  ದೇಶದೊಳಗಿನ ಸಮಸ್ಯೆಗಳನ್ನು ನಿವಾರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಸರಿಯಾದ ಛಾಪು ಮೂಡಿಸುವುದು. ದೇಶದ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಣಯಗಳ ರೀತಿ,ಆಳ,ಆಂತರ್ಯಗಳು ನಮಗೆ ತಕ್ಷಣಕ್ಕೆ ಅರ್ಥವಾಗದೇ ಇರಬಹುದು. ಹಾಗೆಂದು ನಾವೇ ವಿರೋಧ ಪಕ್ಷದವರಿಗಿಂತ ಹೆಚ್ಚಾಗಿ ಹಾರಾಡಿಬಿಟ್ಟರೆ ಯಾರು ಬೆಂಬಲಿಸಬೇಕು?

ಕೊನೆಯದಾಗಿ ತರುಣ್ ಒಂದು ಮಾತು ಹೇಳಿದರು. 'ಇಷ್ಟು ವರ್ಷಗಳ ನಂತರ ಓರ್ವ ನಿಸ್ವಾರ್ಥ ಸ್ವಯಂಸೇವಕನನ್ನು ಭಾರತಮಾತೆ ತನ್ನ ಸೇವೆಗೆ ಆರಿಸಿಕೊಂಡಿದ್ದಾಳೆ ಎಂದ ಮೇಲೆ ಇದರಲ್ಲೇನೋ ಮರ್ಮವಿರಲೇಬೇಕಲ್ಲವೇ?' ಎಂದು. ನಿಜ, ಭಾರತದ ಭಾಗ್ಯವನ್ನು ವಿಧಾತ ಸರಿಯಾಗಿಯೇ ಬರೆದಿರಬೇಕು. ನಂಬಿಕೆಯಿಟ್ಟು ಕಾದು ನೋಡೋಣ. ಅಲ್ಲವೇ? 

Friday 8 August 2014

ಧಾರಾವಾಹಿಗಳ ಲೋಕದಲ್ಲೇಕೆ ಕೃತಕತೆಯ ಕೇಕೆ?

ಭವ್ಯವಾದ ಮನೆಯ ಕೋಣೆಯೊಂದರಲ್ಲಿ ಕಥಾನಾಯಕ ತನ್ನ ಅಪ್ಪ ಹಾಗೂ ಅಮ್ಮನೊಂದಿಗೆ ಕುಳಿತಿರುತ್ತಾನೆ. ಗೃಹಿಣಿಯಾದ ಅಮ್ಮ ಸೀರೆಗೆ ಹೊಂದುವಂಥ ಬಳೆ, ಲಿಪ್‍ಸ್ಟಿಕ್ ಹಾಗೂ ಹಣೆಬೊಟ್ಟುಗಳನ್ನು ಧರಿಸಿ ಮಿರಿಮಿರಿ ಮಿಂಚುತ್ತಾ ಕುಳಿತಿದ್ದರೆ, ನಿವೃತ್ತನಾದ ಅಪ್ಪ ಟ್ರಿಮ್ ಆಗಿ ಕುಳಿತ ‘ಸಫಾರಿ’ಧಾರಿ! ಸ್ವಲ್ಪ ಹೊತ್ತಿನ ಮೌನದ ನಂತರ, "ಅಪ್ಪಾ, ನಿಮಗೆ ಹೇಗೆ ಹೇಳುವುದು ಎಂದೇ ತಿಳಿಯುತ್ತಿಲ್ಲ. ನಮಗೆ ಸಿಗಬೇಕಾಗಿದ್ದ ಟೆಂಡರ್ ನಮ್ಮ ಪ್ರತಿಸ್ಪರ್ಧಿ ಕಂಪೆನಿಗೆ ಸಿಕ್ಕಿಬಿಟ್ಟಿದೆ. ಯಾರೋ ನಮ್ಮವರೇ ನಮಗೆ ಮೋಸ ಮಾಡಿದ್ದಾರೆ." ಎನ್ನುತ್ತಾನೆ ಮಗ. ವಿಷಯ ಕೇಳಿದ ತಕ್ಷಣ ತಂದೆ-ತಾಯಿ ಒಟ್ಟಿಗೆ ಬೆಚ್ಚಿಬೀಳುವುದಿಲ್ಲ. ಅಥವಾ ಹಾಗೆ ತೋರಿಸುವುದಿಲ್ಲ. ಒಬ್ಬೊಬ್ಬರಾಗಿ ಕಣ್ಣುಗಳನ್ನು ಅಗಲಿಸುತ್ತಾರೆ. ಹಾಗೆ ಅಗಲಿಸಿದಾಗ, ನಾಯಕನ ತಾಯಿಯ ಕಣ್ಣಿಗೆ ಹಚ್ಚಿದ ಲೈನರ್, ಮಸ್ಕರಾ, ಕಾಡಿಗೆಗಳೆಲ್ಲ ಸ್ಪಷ್ಟವಾಗಿ ಗೋಚರಿಸುತ್ತವೆ. ಅದನ್ನು ನೋಡಿಯೇ, ಅವರಿಗೆ ಶಾಕ್ ಆಗಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇಬ್ಬರನ್ನೂ ಹೀಗೆ ಸರದಿಯಲ್ಲಿ ಕೆಲಕ್ಷಣಗಳ ಮಟ್ಟಿಗೆ ತೋರಿಸುವಾಗ, ಹಿನ್ನೆಲೆಯಲ್ಲಿ, ಆಕಾಶವೇ ಕಳಚಿ ಬಿದ್ದಿತೇನೋ ಎನಿಸುವಂಥ ಕರ್ಣ-ಕಠೋರ ಸಂಗೀತ ಹೊಮ್ಮುತ್ತದೆ. ಅದರ ನಂತರದ ದೃಶ್ಯ, ಪಕ್ಕದ ಕೋಣೆಯಲ್ಲಿ ನಿಂತು, ಅವರ ಮಾತುಗಳನ್ನು ಕೇಳಿಸಿಕೊಂಡು ಮುಗುಳ್ನಗುತ್ತಿರುವ ಖಳನಾಯಕಿ ಸೊಸೆಯದ್ದು. ಅವಳಿಗೇ ಬೇರೆ ಹಿನ್ನೆಲೆ ಸಂಗೀತ! ಮೋಸದ ರೂವಾರಿ ಅವಳೇ ಎಂಬುದು ಅವಳ ಸೇಡು ತುಂಬಿದ ನಗೆಯನ್ನು, ಇರಿಯುವ ನೋಟವನ್ನು ನೋಡಿದ ಕೂಡಲೇ ಗೊತ್ತಾಗಿಹೋಗುತ್ತದೆ.

ಇದು ಇಂದಿನ ಯಾವುದೇ ಭಾಷೆಯ ಮೆಗಾ-ಧಾರಾವಾಹಿಗಳಲ್ಲಿ ಕಾಣಬರುವ ಸಾಮಾನ್ಯ ಸನ್ನಿವೇಶಗಳಲ್ಲಿ ಒಂದು. ಮತ್ತೊಂದು ಸನ್ನಿವೇಶ ನೋಡಿ. ಕಥಾನಾಯಕಿ ಹಣ್ಣು-ಕಾಯಿಯ ಬುಟ್ಟಿ ಹಿಡಿದು ದೇವಸ್ಥಾನಕ್ಕೆ ಹೊರಡುತ್ತಾಳೆ. ಸೋಮವಾರದ ಸಂಚಿಕೆಯಲ್ಲಿ ಅವಳು ಆಟೋ ಹತ್ತಿದರೆ ದೇವಸ್ಥಾನ ತಲುಪುವುದು ಗುರುವಾರ ಅಥವಾ ಶುಕ್ರವಾರದ ಸಂಚಿಕೆಯಲ್ಲಿಯೇ. ಏಕೆಂದರೆ ಮಾರ್ಗ ಮಧ್ಯದಲ್ಲಿ ಅವಳಿಗೆ, ಬಹಳ ದಿನಗಳಿಂದ ಕಾಣೆಯಾಗಿದ್ದ ಖಳನಾಯಕ ಕಣ್ಣಿಗೆ ಬೀಳುತ್ತಾನೆ. ರಸ್ತೆ ಬದಿಯಲ್ಲಿ ನಿಂತು ಫೋನ್‍ನಲ್ಲಿ ಮಾತನಾಡುತ್ತಿದ್ದವನನ್ನು ಅವಳು ಗಮನಿಸಿ, ಆಟೋ ನಿಲ್ಲಿಸುತ್ತಾಳೆ. ಅವನೇನಾ ಎಂದು ಖಚಿತಪಡಿಸಿಕೊಳ್ಳಲು ಮೆಲ್ಲಗೆ ಅವನ ಬಳಿ ಹೋಗುತ್ತಾಳೆ. ಅವಳನ್ನು ನೋಡಿ ಓಡುವ ಅವನು, ಅವನನ್ನು ಹಿಂಬಾಲಿಸಿ ಓಡುವ ಅವಳು, ಅವಳನ್ನೇ ಕಾಯುತ್ತಾ ನಿಲ್ಲುವ ಆಟೋದವನು! ಒಟ್ಟಿನಲ್ಲಿ ಖಳನಾಯಕನನ್ನು ಹಿಡಿಯಲಾಗದೆ ಉಸ್ಸಪ್ಪಾ ಎಂದು ಮರಳಿ ಆಟೋದವನ ಬಳಿ ಬಂದು, 'ನಡಿಯಪ್ಪಾ ದೇವಸ್ಥಾನಕ್ಕೆ' ಎಂದು ಹೇಳುವ ಹೊತ್ತಿಗೆ ಗುರುವಾರ ಬಂದೇ ಬಿಟ್ಟಿರುತ್ತದೆ! ದೇವಸ್ಥಾನದ ಒಳಗಿರುವ ಆ ದೇವರಾಣೆಗೂ ಇಲ್ಲಿ ಕಥೆಯೆಂಬುದು ಗೌಣ. ಪ್ರಾಮುಖ್ಯವೇನಿದ್ದರೂ ನಾಟಕೀಯತೆ, ಅಸಹಜತೆಯನ್ನು ಮೆರೆಸುವ ಪಾತ್ರ ಹಾಗೂ ಘಟನೆಗಳಿಗೆ ಮಾತ್ರ. ಸಂಬಂಧಗಳ ಗಾಢತೆಯನ್ನು ಕಲಕಿ, ಅರ್ಥವನ್ನು ತಿರುಚಿ, ಬೆಲೆಯನ್ನೇ ಬರಿದುಮಾಡಿಬಿಡುವ ಈ ಧಾರಾವಾಹಿಗಳದ್ದು ಎಂಥಾ ಲೋಕ? ಇಲ್ಲಿ ಒಬ್ಬನ ಹೆಂಡತಿಯಾಗಿ ಮಗುವನ್ನು ಹೆತ್ತವಳು ಸಲೀಸಾಗಿ ಮತ್ತೊಬ್ಬನ ಹೆಂಡತಿಯಾಗಬಲ್ಲಳು. ದ್ವೇಷ ಸಾಧಿಸಲೆಂದೇ ಒಂದು ಮನೆಗೆ ಸೊಸೆಯ ರೂಪದ ಹೆಮ್ಮಾರಿಯಾಗಿ ಬರಬಲ್ಲಳು. ವಂಶವನ್ನೇ ನಿರ್ವಂಶ ಮಾಡುವ ಹಟ ಹಿಡಿದು ಗೆಲ್ಲಬಲ್ಲಳು. ಎಲ್ಲ ವ್ಯೂಹ, ತಂತ್ರಗಾರಿಕೆಗಳೂ ಇಲ್ಲಿ ಲಭ್ಯ. ಕುಡಿಯುವ ಹಾಲಿನಲ್ಲಿ ವಿಷ ಬೆರೆಸುವುದರಿಂದ ಹಿಡಿದು ಗರ್ಭಿಣಿಯನ್ನು ಹೊತ್ತೊಯ್ಯುವುದೂ ಇಲ್ಲಿ ಸಾಧ್ಯ. 'ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳೂ ಕೇವಲ ಕಾಲ್ಪನಿಕ' ಎಂಬ ಒಂದು ಸಾಲು ಹಾಕಿಬಿಟ್ಟರೆ ಕಲ್ಪನೆಯ ಕುದುರೆ ಹುಚ್ಚೆದ್ದು ಓಡುವುದಕ್ಕೆ ರಹದಾರಿ ಸಿಕ್ಕಿದಂತೆಯೇ! ನಂಟುಗಳನ್ನು ಬಿಂಬಿಸುವಲ್ಲಿ ಸ್ವಲ್ಪವಾದರೂ ನೈಜತೆ ಬೇಡವೇ? ಪಾತ್ರಗಳಿಗೊಂದು ತೂಕವಿರಬಾರದೇ? ಗಮನಿಸಿ ನೋಡಿ, ಮನೆಯಲ್ಲಿರಲಿ ಅಥವಾ ಆಸ್ಪತ್ರೆಯ ಹಾಸಿಗೆಯಲ್ಲಿರಲಿ, ಸ್ತ್ರೀ ಪಾತ್ರಗಳ ಸಿಂಗಾರದಲ್ಲಿ ಒಂಚೂರೂ ವ್ಯತ್ಯಾಸವಿರುವುದಿಲ್ಲ. ಸಂದರ್ಭ ಯಾವುದೇ ಇರಲಿ, ಕಾಲೇಜು ಹುಡುಗಿಯರಿಂದ ಹಿಡಿದು, ಮೂವರು ಸೊಸೆಯಂದಿರಿರುವ ಅತ್ತೆಯವರೆಗೂ ಎಲ್ಲರ ಮುಖಗಳ ಮೇಲೂ ಮುಕ್ಕಾಲು ಕೇಜಿ ಮೇಕಪ್ ಇರಲೇಬೇಕು. ಅದು ಹೋಗಲಿ, ರಾತ್ರಿ ನಿದ್ರಿಸುತ್ತಿರುವಾಗಲೂ ತಲೆಯ ಒಂದು ಕೂದಲೂ ಅತ್ತಿತ್ತ ಅಲುಗುವುದಿಲ್ಲ. ಸೀರೆಯ ನೆರಿಗೆ ಸರಿಯುವುದಿಲ್ಲ. ಸೆರಗು ಸುಕ್ಕುಗಟ್ಟುವುದಿಲ್ಲ. ಸಣ್ಣ ತಲೆ ನೋವು ಬಂದರೆ ಅಥವಾ ಒಂದು ಇಡೀ ದಿನ ಅಡುಗೆಮನೆಯಲ್ಲಿ ಕಳೆದರೆ ಅಬ್ಬೆಪಾರಿಗಳಂತೆ ಕಾಣುವವರು ನಾವು ನೀವು ಮಾತ್ರ. ಅವರಿಗೆ ಅದು ಅನ್ವಯಿಸುವುದೇ ಇಲ್ಲ.

ಮೊದಲು ಹೀಗಿರಲಿಲ್ಲ ಧಾರಾವಾಹಿಗಳು. ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿ ಹೊಸ ದಾಖಲೆಯನ್ನೇ ಬರೆದ ರಾಮಾಯಣವಾಗಲೀ, ಮಹಾಭಾರತವಾಗಲೀ ಎಷ್ಟು ನೈಜವಾಗಿದ್ದವು! ಕೌಟುಂಬಿಕ ಧಾರಾವಾಹಿಗಳಾದ ನುಕ್ಕಡ್, ಬುನಿಯಾದ್‍ಗಳನ್ನು ಮರೆಯುವುದು ಸಾಧ್ಯವೇ? ಮಕ್ಕಳ ಸಲುವಾಗಿ ಪ್ರಸಾರವಾಗುತ್ತಿದ್ದ ಏಕ್,ದೋ,ತೀನ್,ಚಾರ್ ಹಾಗೂ ವಿಕ್ರಮ್ ಔರ್ ಬೇತಾಲ್‍ನ ಕಥೆಗಳೂ ಅಷ್ಟೇ ಸ್ವಾರಸ್ಯಕರವಾಗಿರುತ್ತಿದ್ದವು. ಪ್ರೇಮ ಕಥೆ ಚಂದ್ರಕಾಂತ, ಪತ್ತೇದಾರಿ ಬ್ಯೋಮಕೇಶ್ ಬಕ್ಷಿ, ಒಂದೇ ಎರಡೇ ವೈವಿಧ್ಯಗಳು? ಚಾಣಕ್ಯನ ನೀತಿಪಾಠ ಒಂದೆಡೆಯಾದರೆ, ಚಿತ್ರಹಾರದ ಹಾಡುಗಳ ಸರಮಾಲೆ ಮತ್ತೊಂದೆಡೆ. ನಮ್ಮ ಭಾನುವಾರ ಶುರುವಾಗುತ್ತಿದ್ದುದೇ ಬೆಳಗಿನ ರಂಗೋಲಿಯಿಂದ. ಇದ್ದದ್ದು ಒಂದೇ ವಾಹಿನಿಯಾದರೂ ಎಲ್ಲ ವಯೋಮಾನದವರ ಅಭಿರುಚಿಗೆ ತಕ್ಕಂತೆ ಇರುತ್ತಿದ್ದವು ಧಾರಾವಾಹಿಗಳು, ಕಾರ್ಯಕ್ರಮಗಳು. ಸಣ್ಣ ಕಥೆಗಳ ಹಂದರವಿದ್ದ, 'ಮಾಲ್ಗುಡಿ ಡೇಸ್'ನ ಉದಾಹರಣೆಯನ್ನೇ ನೋಡಿ. ಒಟ್ಟು 39 ಕಂತುಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿ ನಮ್ಮ ಕರ್ನಾಟಕದ ಕಲಾವಿದರದ್ದೇ ಎಂಬುದೊಂದು ಹೆಮ್ಮೆ. ಪ್ರತಿಭೆಯ ಖನಿಯಾಗಿದ್ದ ಶಂಕರ್‍ನಾಗ್‍ರ ಸಾರಥ್ಯದಲ್ಲಿ, ಮಾಸ್ಟರ್ ಮಂಜುನಾಥ್, ಅನಂತ್‍ನಾಗ್, ಬಿ.ಜಯಶ್ರೀ ಮುಂತಾದವರ ಹೃದಯಸ್ಪರ್ಶಿ ಅಭಿನಯದೊಂದಿಗೆ ಮೂಡಿ ಬಂದ ಈ ಧಾರಾವಾಹಿಗೆ ಇಡೀ ದೇಶ ಮನಸೋತಿತ್ತು. ಹಾಗೆಯೇ, ನಮ್ಮ ದೇಶದ ಸಾಂಸ್ಕೃತಿಕತೆಯ ಸ್ವಾದವನ್ನು ಉಣಬಡಿಸುತ್ತಿದ್ದ ಸುರಭಿ ಎಂಬ ರಸಗವಳವೂ ನೆನಪಿರಬೇಕು ನಿಮಗೆ. ಕಾರ್ಯಕ್ರಮದ ನಿರೂಪಕರಾದ ಸಿದ್ಧಾರ್ಥ ಕಾಕ್ ಹಾಗೂ ರೇಣುಕಾ ಶಹಾನೆ ನಗುನಗುತ್ತಾ 'ನಮಶ್ಕಾರ್'ಎನ್ನುವುದನ್ನೇ ಕಾಯುತ್ತಿತ್ತು ದೇಶದ ಜನತೆ. ಕಾರ್ಯಕ್ರಮದ ಪ್ರಶ್ನೋತ್ತರ ವಿಭಾಗದಲ್ಲಿ, ಪ್ರಯೋಗಾರ್ಥವಾಗಿ, ಮೊತ್ತಮೊದಲ ಬಾರಿಗೆ ಜನರನ್ನು ಉದ್ದೇಶಿಸಿ ಪ್ರಶ್ನೆಗಳನ್ನು ಕೇಳಿ, ಪೋಸ್ಟ್ ಕಾರ್ಡ್ ನಲ್ಲಿ ಉತ್ತರ ಬರೆದು ಕಳುಹಿಸುವಂತೆ ಕೋರಲಾಯಿತು. ಯಾವ ಮಟ್ಟದ ಪ್ರತಿಕ್ರಿಯೆ ಹರಿದು ಬರತೊಡಗಿತ್ತೆಂದರೆ, ಸುಲಭವಾಗಿ ಗುರುತಿಸುವ ಸಲುವಾಗಿ ಅಂಚೆ ಇಲಾಖೆ 'ಕಾಂಪಿಟೇಶನ್ ಪೋಸ್ಟ್ ಕಾರ್ಡ್' ಎಂಬ ಹೊಸ ಕಾರ್ಡನ್ನೇ ಪರಿಚಯಿಸಬೇಕಾಯಿತು! ಇವಿಷ್ಟೇ ಅಲ್ಲದೆ, ಫೌಜಿ, ಸರ್ಕಸ್,  ಕರಮ್‍ಚಂದ್ ಮುಂತಾದ ಅನೇಕ ಧಾರಾವಾಹಿಗಳು ತಮ್ಮ ವಿಭಿನ್ನತೆಯಿಂದಾಗಿ ಮನಸೆಳೆದಿದ್ದವು. ಆದ್ದರಿಂದಲೇ ಅವು ಇಂದಿಗೂ ನಮ್ಮ ಮನಃಪಟಲದಿಂದ ಮಾಸಿಲ್ಲ. ಮಾಸುವುದೂ ಇಲ್ಲ
ದೂರದರ್ಶನದ ಅಧಿಪತ್ಯ ಕೊನೆಯಾಗಿ ಖಾಸಗಿ ವಾಹಿನಿಗಳು ಶುರುವಾಗುತ್ತಿದ್ದಂತೆಯೇ ಬದಲಾಯಿತು ನೋಡಿ ಹವೆ. ಇಸವಿ 2000ರಲ್ಲಿ ಸ್ಮೃತಿ ಇರಾನಿ 'ಕ್ಯೋಂಕಿ ಸಾಸ್ ಭೀ ಕಭೀ ಬಹು ಥೀ' ಎಂಬ ಧಾರಾವಾಹಿಯ ಶೀರ್ಷಿಕೆ ಗೀತೆಯಲ್ಲಿ ಮನೆಯ ಎರಡೂ ಬಾಗಿಲುಗಳನ್ನು ದೊಡ್ದದಾಗಿ ತೆರೆದದ್ದೇ ಬಂತು, ಮನೆತನದ, ಪೀಳಿಗೆಗಳ ಕುರಿತ ಧಾರಾವಾಹಿಗಳು ಸಾಲಾಗಿ ನಮ್ಮ ಮನೆಗಳಿಗೆ ದಾಳಿ ಇಟ್ಟವು. ಈ ಎಲ್ಲ ಬದಲಾವಣೆಗಳಿಂದ ಕನ್ನಡವೂ ಹೊರತಾಗಲಿಲ್ಲ. ನಮ್ಮಲ್ಲಿ ಮೂಡಿ ಬಂದ ವಿಭಿನ್ನವಾದ ಧಾರಾವಾಹಿಗಳ ಪಟ್ಟಿ ಸಣ್ಣದೇ. ದೂರದರ್ಶನದಲ್ಲಿ ಪ್ರಸಾರವಾದ, ಟಿ.ಎನ್.ಸೀತಾರಾಂ ಅವರ ಮಾಯಾಮೃಗ ಎಷ್ಟು ಸರಳತೆ ಹಾಗೂ ಹೊಸತನಗಳಿಂದ ಕೂಡಿತ್ತೆಂದರೆ ನಾವೆಲ್ಲ ಅದರ ಮೋಡಿಗೆ ಬಲಿಯಾಗಿದ್ದೆವು. ನಂತರ ಬಂದ ‘ಮನ್ವಂತರ’ ಹಾಗೂ ‘ಮುಕ್ತ’ ಧಾರಾವಾಹಿಗಳಲ್ಲಿ ನ್ಯಾಯಾಲಯದ ಕಲಾಪಗಳು ನಮ್ಮ ಮನಸೂರೆಗೊಂಡದ್ದೂ ಆಯಿತು, ಆ ಏಕತಾನತೆ ಕೊಂಚ ಮಟ್ಟಿಗೆ ಬೇಸರ ಹಿಡಿಸಿದ್ದೂ ಆಯಿತು. ಉತ್ತರ ಕರ್ನಾಟಕದ ಸೊಬಗನ್ನು ತೆರೆದಿಟ್ಟ ಮೂಡಲ ಮನೆ, ಎಸ್.ಎಲ್ ಭೈರಪ್ಪನವರ ಕೃತಿಯನ್ನಾಧರಿಸಿದ ಗೃಹಭಂಗ ಹಾಗೂ ಶುದ್ಧ ಹಾಸ್ಯದಿಂದ ಎಲ್ಲರಿಗೂ ಪ್ರಿಯವಾದ ಕೆಲವು ಧಾರಾವಾಹಿಗಳನ್ನು ಬಿಟ್ಟರೆ ವಿಶಿಷ್ಟ ಎನಿಸಿದ, ನಮ್ಮನ್ನು ಹಿಡಿದಿಟ್ಟ ಧಾರಾವಾಹಿಗಳು ಬೆರಳೆಣಿಕೆಯಷ್ಟೇ. ನಂತರ ಶುರುವಾಗಿದ್ದು ಕೌಟುಂಬಿಕ ಧಾರಾವಾಹಿಗಳ ಭರಾಟೆ.

ಈಗ ಅವುಗಳ ಪರ್ವ ಕಾಲ. ಏಕೆಂದರೆ ಅವುಗಳನ್ನು ಬಿಟ್ಟರೆ ಮನರಂಜನೆಗೆ ಬೇರೆ ಮಾರ್ಗವೇ ಇಲ್ಲ. ರಾಮಾಯಣ, ಮಹಾಭಾರತಗಳ ಹೊಸ ಆವೃತ್ತಿಗಳು ಬರುತ್ತಲೇ ಇವೆಯಾದರೂ ಹಳೆಯದಕ್ಕೆ ಅವು ಸಾಟಿಯಲ್ಲ. ಇನ್ನುಳಿದವು ರಿಯಾಲಿಟಿ ಶೋಗಳು. ಹಾಡು, ಕುಣಿತ, ಪ್ರತಿಭಾ ಪ್ರದರ್ಶನ, ಎಲ್ಲದರಲ್ಲೂ ಜಿದ್ದಾಜಿದ್ದಿನ ಹಣಾಹಣಿ. ಇಷ್ಟು ಸಾಲದು ಎಂಬಂತೆ ಈ ಪಟ್ಟಿಗೆ ಬಿಗ್ ಬಾಸ್ ಎಂಬ ಹೊಸ ಸೇರ್ಪಡೆ ಬೇರೆ. ಪ್ರಾಣಿಗಳಿಗೆ ಮೃಗಾಲಯ ಹೇಗೋ ಮನುಷ್ಯರಿಗೆ ಬಿಗ್ ಬಾಸ್‍ನ ಮನೆಯೂ ಹಾಗೇ. ಒಂದಷ್ಟು ಜನರನ್ನು ಒಳಗೆ ಕೂಡಿಟ್ಟು, ಅವರನ್ನು ಕೆಣಕಿ, ಭಾವನೆಗಳನ್ನು ಅತಿರೇಕಕ್ಕೆ ಕೊಂಡೊಯ್ದು ಮಜಾ ನೋಡುವುದು. ಅವರ ಕಿತ್ತಾಟವನ್ನು ಜಗತ್ತಿಗೆಲ್ಲ ಬಿತ್ತರಿಸುವುದು. ಮನರಂಜನೆಯ ಹೆಸರಿನಲ್ಲಿ ನಡೆಯುತ್ತಿರುವ ಇದು ತಿಕ್ಕಲುತನವಲ್ಲದೇ ಮತ್ತೇನು?

ನಿಜವಾಗಿಯೂ ದಿಗಿಲಾಗುತ್ತದೆ ಇಂದಿನ ಬಹುತೇಕ ಧಾರಾವಾಹಿಗಳನ್ನು ನೋಡಿದಾಗ. ಕಥೆ ಇರಲೇಬೇಕೆಂಬುದು ಕಡ್ಡಾಯವಲ್ಲ. ನಟ-ನಟಿಯರಿಗೆ ಅಭಿನಯದ ಗಂಧ-ಗಾಳಿ ಇರಬೇಕೆಂಬ ನಿಯಮವೂ ಇಲ್ಲ. ನೋಡುಗರಿಗೆ ಮಾದರಿಯಾಗಬಲ್ಲ ಅಂಶಗಳು ಹುಡುಕಿದರೂ ಸಿಗುವುದಿಲ್ಲ. ಹಾಗಾದರೆ ಯಾವ ಪುರುಷಾರ್ಥಕ್ಕೆ ಹೀಗೆ ಡಜನ್‍ಗಟ್ಟಳೆ ಸಂಖ್ಯೆಯಲ್ಲಿ ಪ್ರಸಾರವಾಗುತ್ತಿವೆ? ಅವುಗಳಿಂದ ನಾವು ಖಂಡಿತ ಭಗವದ್ಗೀತೆಯ ಸಾರಾಮೃತವನ್ನು ಅಪೇಕ್ಷಿಸುವುದಿಲ್ಲ. ಆದರೆ ಒಂದು ಸಣ್ಣ ಸಂದೇಶ, ಚಿಂತನೆ ಅಥವಾ ಕಲಿಕೆಯನ್ನು ಕೊಡಲಾರದಷ್ಟು ಸಾಂಸ್ಕೃತಿಕ ಬಡತನ ವಕ್ಕರಿಸಿದೆಯೇ? ಬದುಕೆಂದರೆ ಬರೀ ಅಸೂಯೆ, ಪ್ರತೀಕಾರ ಹಾಗೂ ಅಕ್ರಮ ಸಂಬಂಧಗಳೇ? ವಸ್ತ್ರ, ಆಭೂಷಣ, ಮಾತು, ನಡತೆ, ವ್ಯವಹಾರ ಎಲ್ಲವೂ ಬರೀ ತೋರಿಕೆ. ಎಲ್ಲೆಲ್ಲೂ ಗುಟ್ಟು, ಸೇಡು, ಗುಂಪುಗಾರಿಕೆ. ನೈಜ ಬದುಕಿಗೂ ಧಾರಾವಾಹಿಗಳಿಗೂ ಸಾಮ್ಯವೇ ಇಲ್ಲ. ಟಿ.ಆರ್.ಪಿ ಎಂಬ ಬಕಾಸುರನ ಹಸಿವಿಗೆ ನಮ್ಮ ಸೂಕ್ಷ್ಮ ಸಂವೇದನೆ, ಮೌಲ್ಯಗಳೇ ಆಹಾರವಾಗಬೇಕೇ? ಇಂಥ ಧಾರಾವಾಹಿಗಳನ್ನು, ಚಟ ಹತ್ತಿಸಿಕೊಂಡು ನೋಡುವ ಹಲವು ಮನೆಗಳಲ್ಲಿ ನಿತ್ಯ ರಣರಂಪ. ಟಿ.ವಿಯ ರಿಮೋಟ್‍ಗಾಗಿ ಗುದ್ದಾಟ! ಹಿರಿಯರಿಗೇನೋ ಹೊತ್ತು ಕಳೆಯುವ ಸಾಧನ, ಆದರೆ ಮಕ್ಕಳ ಮೇಲಾಗುವ ಪರಿಣಾಮ?


ಕಥೆ ಹೇಳುವ ಕಲೆಗಾರಿಕೆಯೇ ಇಲ್ಲದವರು ಹೇರುತ್ತಿರುವುದನ್ನು ಒಲ್ಲೆ ಎನ್ನಲಾಗದಷ್ಟು ದುರ್ಬಲರು ನಾವಾಗಿದ್ದೇವೆ. ಅಂದಮೇಲೆ, ತಪ್ಪು ನಮ್ಮಲ್ಲೇ ಇರಬೇಕು. ಅಲ್ಲವೇ?