Wednesday 31 December 2014

ಹೌದು ಬಿಡಿ. ಮುಗ್ಧರು ಜನರಲ್ಲ, ಮತಾಂತರ ಮಾಡುತ್ತಿರುವವರು!

ಡಿಸೆಂಬರ್‍ 27ರಂದು ಪ್ರಕಟವಾಗಿರುವ ವೇಣುರವರ ಪ್ರತಿಕ್ರಿಯೆಗೆ ಇದೋ ನನ್ನ ಪ್ರತ್ಯುತ್ತರ.

ಮೊದಲನೆಯದಾಗಿ, ನಾನು ನಿಮ್ಮ ಲೇಖನಕ್ಕೆ ಮರುದಿನವೇ ಪ್ರತಿಕ್ರಿಯಿಸಿದ್ದಕ್ಕೆ ಅಸಹನೆಯೇ ಕಾರಣ ಎಂದು ಹೇಗೆ ನಿರ್ಧರಿಸಿದಿರಿ? ನಿಮ್ಮ ಪ್ರಶ್ನೆಗಳಲ್ಲಿ ಹೊಸ ಚಿಂತನೆಯ ಸರಕೇನೂ ಇರಲಿಲ್ಲವಲ್ಲ ಹೆಚ್ಚಿನ ಸಮಯವನ್ನು ವ್ಯಯಿಸಲು? ನನಗೆ ಅಸಹನೆ ಎನ್ನುತ್ತಿರುವ ನೀವು ಸ್ವಲ್ಪ ಸಹನೆಯಿಂದ ನನ್ನ ಪ್ರಶ್ನೆಗಳನ್ನೂ ಅರ್ಥಮಾಡಿಕೊಂಡಿದ್ದರೆ ನಿಮ್ಮ ವಾದ ಹೀಗೆ ಹಳಿ ತಪ್ಪುತ್ತಿರಲಿಲ್ಲ.



ಅದೆಷ್ಟು ದ್ವಂದ್ವ ನಿಮ್ಮ ಲೇಖನಗಳಲ್ಲಿ. ಅದನ್ನು ಪುಷ್ಟೀಕರಿಸುವ ಸಲುವಾಗಿ ಎಷ್ಟೆಲ್ಲಾ ವಿಷಯಾಂತರ! ಇರಲಿ, ನಿಮ್ಮ ಹಾಗೆ ವಾದದ ಮೂಲ ಸ್ವರೂಪವನ್ನೇ ಬದಲಾಯಿಸುವ ಅಗತ್ಯ ನನಗಿಲ್ಲ. ನನ್ನ ಪ್ರಶ್ನೆಗಳಿಗೆ ನೀವು ಕೊಟ್ಟಿರುವ ಉತ್ತರಗಳ ಕಡೆಗೆ ಮಾತ್ರ ನನ್ನ ಗಮನ.


'ಅಂಬೇಡ್ಕರ್‍ಗೆ ಮೊದಲೇ ಗೊತ್ತಿದ್ದರೆ ಬೇಗ ಮತಾಂತರವಾಗುತ್ತಿದ್ದರೇನೋ, ಸಾವು ಯಾರ ಅಪ್ಪಣೆಯನ್ನೂ ಕೇಳಿ ಬರುವುದಿಲ್ಲವಲ್ಲ?' ಎಂದು ವೇದಾಂತಿಯಂತೆ ಮಾತುಗಳನ್ನಾಡಿದ್ದೀರ. ಇಲ್ಲಿ ಕೇಳಿ, ಅಂಬೇಡ್ಕರ್‍ರದ್ದು ದಿಢೀರ್ ಸಾವಲ್ಲ. 1948ರಿಂದಲೇ ಅವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಅದು ಉಲ್ಪಣಿಸಿ, 1954ರಲ್ಲಿ ಸತತವಾಗಿ ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆಗೂ ಅಕ್ಷರಶಃ ಹಾಸಿಗೆ ಹಿಡಿದಿದ್ದರು! 1955ರಲ್ಲೇ ಅವರ ಆರೋಗ್ಯ ವಿಷಮಿಸಿತ್ತು. ಅವರು ಮತಾಂತರಗೊಂಡು ಐದು ಲಕ್ಷ ದಲಿತರನ್ನು ಮತಾಂತರಗೊಳಿಸಿದ್ದು 1956ರ ಅಕ್ಟೋಬರ್ 14ರಂದು! ಇದಾದ ಎರಡೇ ತಿಂಗಳಿಗೆ ಅವರು ಸತ್ತಿದ್ದು! ಇನ್ನೆಷ್ಟು ಹೇಳಿ ಕೇಳಿ ಬರಬೇಕಾಗಿತ್ತು ಅವರ ಸಾವು? ಇಪ್ಪತ್ತು ವರ್ಷಗಳಷ್ಟು ಹಿಂದೆಯೇ 'ನಾನು ಹಿಂದೂವಾಗಿ ಮಾತ್ರ ಸಾಯುವುದಿಲ್ಲ' ಎಂದು ಪ್ರತಿಜ್ಞೆ ಮಾಡಿದ್ದ ಕಾರಣಕ್ಕೇ ಬದುಕಿನ ಕೊನೆ ಘಳಿಗೆಯಲ್ಲಿ ಮತಾಂತರಗೊಂಡರು ಎಂಬ ಸಾಧ್ಯತೆಯನ್ನು ಹೇಗೆ ತಳ್ಳಿಹಾಕುತ್ತೀರ? ಅದೂ ಇರಲಿ, ಅವರ ಉದಾಹರಣೆಯಲ್ಲಿನ ಕೆಲವು ಅಂಶಗಳನ್ನು ಮಾತ್ರ ಜಾಣತನದಿಂದ ನಿಮ್ಮ ವಿತ್ತಂಡವಾದಕ್ಕೆ ಬಳಸಿಕೊಂಡಿದ್ದೀರಲ್ಲ, ಅವರ ಬದುಕಿನ ವಾಸ್ತವ ಸಂಗತಿಗಳು ಮತ್ತ್ಯಾರಿಗೂ ಗೊತ್ತಿರುವುದಿಲ್ಲ ಎಂಬ ಉಡಾಫೆಯೇ ನಿಮಗೆ?

ಅಂಬೇಡ್ಕರ್‍ರನ್ನು ದಲಿತರ ಆಸ್ತಿ ಎಂದು ಬಿಂಬಿಸುತ್ತಾ, 'ಅವರೇ ಮತಾಂತರಗೊಂಡಮೇಲೆ ಇನ್ನು ನಿಮಗ್ಯಾವ ಮಾರ್ಗ ಉಳಿದಿದೆ?’ ಎಂದು ದಲಿತ ಸಮುದಾಯಕ್ಕೆ ಹೀಗೆ ನೇರವಾಗಿಯೇ ಸಂದೇಶ ಸಾರುವ ಮುನ್ನ ಎಲ್ಲ ಅಂಕಿ ಅಂಶಗಳನ್ನೂ, ಸಂದರ್ಭಗಳನ್ನೂ ಕೂಲಂಕಷವಾಗಿ ಪರಾಮರ್ಶಿಸಿ ವೇಣುರವರೆ. ನಿಮ್ಮ ವಾದದ ಬೇರು ಸಡಿಲಾಗುವುದು ಅಲ್ಲೇ.

ಜಿತನ್‍ರಾಮ್ ಮಾಂಜಿಯವರ ಉದಾಹರಣೆಯಲ್ಲೂ ನಿಮ್ಮದು ಅದೇ ಜಾಣತನ. ಆಗಸ್ಟ್ ತಿಂಗಳಿನಲ್ಲೇ ದೇವಸ್ಥಾನಕ್ಕೆ ಹೋಗಿದ್ದ ಮಾಂಜಿಯವರು ಸೆಪ್ಟೆಂಬರ್ 28ರವರೆಗೂ ಈ ವಿಷಯವನ್ನು ಮುಚ್ಚಿಟ್ಟಿದ್ದೇಕೆ? ಅವರೇ ಮುಖ್ಯಮಂತ್ರಿ ತಾನೆ, ಆ ಕ್ಷಣವೇ ತನಿಖೆಗೆ ಆಗ್ರಹಿಸಬಹುದಿತ್ತಲ್ಲ? ಓರ್ವ ಮುಖ್ಯಮಂತ್ರಿಯಾಗಿ, ಅಷ್ಟು ತಡವಾಗಿ, ಅದೂ ಮಾಧ್ಯಮದವರ ಮುಂದೆ ಅಲವತ್ತುಕೊಳ್ಳುವ ಅಗತ್ಯವೇನಿತ್ತು? ಏಕೆಂದರೆ ಆಗ ಚುನಾವಣೆ ನಡೆಯುತ್ತಿತ್ತು. ಎಷ್ಟೆಂದರೂ ರಾಜಕಾರಣಿಯಲ್ಲವೇ, ಸಮಯ ನೋಡಿಕೊಂಡು ಬಾಯಿಬಿಟ್ಟರು ಅಷ್ಟೇ. ಯಾರು ಹೋದರೂ ಬಿಟ್ಟರೂ, ಆ ದೇವಸ್ಥಾನವನ್ನು ದಿನಕ್ಕೆರಡು ಬಾರಿ ಶುಚಿಗೊಳಿಸುವುದು ಅಲ್ಲಿನ ಪದ್ಧತಿಯೆಂದು ಅಲ್ಲಿನ ಅರ್ಚಕರಾದ ಅಶೋಕ್ ಕುಮಾರ್ ಮಿಶ್ರಾರವರೇ ಹೇಳಿದ್ದಾರೆ. ತನಿಖೆಯಾಗಲಿ ಬಿಡಿ, ಸತ್ಯ ಹೊರಬರಲಿ. ಅದಿರಲಿ, ಅಷ್ಟು ದೂರದ ಬಿಹಾರ್‍ನಲ್ಲಿ ನಡೆಯುವ ಅಸ್ಪೃಶ್ಯತೆಯ ಉದಾಹರಣೆ ನಿಮ್ಮ ಕಣ್ಣಿಗೆ ಕಾಣುತ್ತದೆ, ಇಲ್ಲೇ ನಮ್ಮ ಧರ್ಮಸ್ಥಳ, ಹೊರನಾಡು, ಶೃಂಗೇರಿ ಮುಂತಾದ ದೇವಸ್ಥಾನಗಳಲ್ಲಿ, ಯಾವ ಭೇದವೂ ಇಲ್ಲದೆ, ಲಕ್ಷಾಂತರ ಜನರಿಗೆ ನಿತ್ಯವೂ ನಡೆಯುತ್ತಿರುವ ಅನ್ನ ಸಂತರ್ಪಣೆ ಕಾಣುವುದಿಲ್ಲವೇ?

ಇನ್ನು, 'ಸರ್ಕಾರಿ ಶಾಲೆಯ ಶಿಕ್ಷಕ ಶಿಕ್ಷಕಿಯರು ಕಲಿಸಲು ಬಾರದೆ ತಿಣುಕಾಡುತ್ತಾರಾ?' ಎಂದು ವ್ಯಂಗ್ಯವಾಡಿದ್ದೀರ. ಎಂಥ ಬೇಜವಾಬ್ದಾರಿಯ ಮಾತುಗಳು ನಿಮ್ಮವು! ಶಿಕ್ಷಣ ಇಲಾಖೆಯಿಂದ, ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವ ನೂರಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು, ಅದನ್ನು ರಾಜ್ಯದ ಮೂಲೆ ಮೂಲೆಗಳಲ್ಲಿರುವ ಹಳ್ಳಿಯ ಮಕ್ಕಳಿಗೆ ತಲುಪಿಸಲು ಶಿಕ್ಷಕರು ಪಡುತ್ತಿರುವ ಶ್ರಮಕ್ಕೆ ಕಿಂಚಿತ್ತಾದರೂ ಬೆಲೆ ಬೇಡವೇ? ಕಲಿಕೆ ಎಂದರೆ ಅಕ್ಷರ ಮಾತ್ರ ಎಂದು ಯಾರು ಹೇಳಿದ್ದು ನಿಮಗೆ? 'ಕಕ್ಕಸ್ಸಿಗೆ ಹೋದರೆ ಸಾಬೂನು ಹಚ್ಚಿ ಕೈ ತೊಳೆದುಕೊಳ್ಳಬೇಕು' ಎಂಬ ಸಣ್ಣ ವಿಷಯವನ್ನೂ ಕಲಿಸುತ್ತಿದ್ದಾರೆ ನಮ್ಮ ಶಿಕ್ಷಕರು. ಇದು ಸರ್ಕಾರಿ ನಿಯಮವಾ? ಇದೆಯಾ ನಮ್ಮ ಸಂವಿಧಾನದಲ್ಲಿ?

ನಿಮ್ಮ ಪ್ರಕಾರ ಎಲ್ಲರೂ ಸಂವಿಧಾನಕ್ಕೆ ಹೆದರಿ ರಾಜಿಯಾಗಿದ್ದು ಅಲ್ಲವೇ? ಹೌದು ಎಂತಲೇ ಇಟ್ಟುಕೊಳ್ಳೋಣ. ನಾವು ಸಂವಿಧಾನಕ್ಕೆ ಬೆಲೆಯನ್ನಾದರೂ ಕೊಟ್ಟಿದ್ದೇವೆ, ಅದನ್ನೂ ಕೊಡದ ಮಂದಿಗೆ ನೀವೇಕೆ ಹೋಗಿ ಬುದ್ಧಿ ಹೇಳಬಾರದು? ಜಮ್ಮು ಕಾಶ್ಮೀರದಲ್ಲಿ ಅನುಚ್ಛೇದ 370ನ್ನು ಹೀಗೆ ಅನಿರ್ದಿಷ್ಟ ಅವಧಿಯವರೆಗೆ ಮುಂದುವರೆಸಿಕೊಂಡು ಹೋಗಲು ಸಂವಿಧಾನದಲ್ಲಿ ಅನುಮತಿ ಇಲ್ಲ. ದಯವಿಟ್ಟು ನಮ್ಮ ಉದಾಹರಣೆಯನ್ನು ಅಲ್ಲಿಯೂ ಕೊಟ್ಟು ನೋಡಿ, ಅವರು ನಿಮ್ಮ ಮಾತನ್ನಾದರೂ ಕೇಳುತ್ತಾರಾ ನೋಡೋಣ?

ನಾನು, 'ದನಗಳನ್ನು ಭಕ್ಷಿಸಿ ಜನಗಳನ್ನು ಕೊಲ್ಲುವ ಧರ್ಮದಲ್ಲಿ ಮಾನವೀಯತೆ ಇದೆಯಾ' ಎಂದು ಕೇಳಿದ್ದೆ. ಅದಕ್ಕೆ ಉತ್ತರವೇ ಇಲ್ಲ ನಿಮ್ಮ ಬಳಿ. ಬಿಸಿ ತುಪ್ಪವಲ್ಲವೇ, ಪಾಪ! ಭ್ರಷ್ಟಾಚಾರವನ್ನು, ಯಾಗ, ಯಜ್ಞಗಳನ್ನು ಸುಮ್ಮನೆ ಎಳೆದು ತಂದಿದ್ದೀರ ನಿಮ್ಮ ಸಮಜಾಯಿಷಿಯಲ್ಲಿ! ಬೇಡರ ಕಾಲದ ಆಹಾರ ಪದ್ಧತಿಯ ನಿಮ್ಮ ವ್ಯಾಖ್ಯಾನದ ಪ್ರಕಾರವೇ ಹೋಗುವುದಾದರೆ, ನಾವೆಲ್ಲರೂ, ಬ್ರಾಂಡೆಡ್ ಇರಲಿ, ಬಟ್ಟೆಯನ್ನೇ ತೊಡುವ ಹಾಗಿರಲಿಲ್ಲ ಅಲ್ಲವೇ?

ಇಲ್ಲಿಂದ ಮುಂದಕ್ಕಂತೂ ನಿಮ್ಮ ವಾದದ ಸರಣಿಯಲ್ಲಿ ಎಲ್ಲವೂ ಅಯೋಮಯ. ಕೊಂಕಣವನ್ನೇನೋ ಸುತ್ತಿದ್ದೀರ, ಮೈಲಾರಕ್ಕಂತೂ ಬಂದೇ ಇಲ್ಲ. 'ಹೊಂದಿಸಿ ಬರೆಯಿರಿ' ಎಂಬ ಅಭ್ಯಾಸವಿರುತ್ತಿತ್ತಲ್ಲ ಪಾಠಗಳಲ್ಲಿ, ಹಾಗೆ ನೀವು ಕೊಟ್ಟಿರುವ ಉತ್ತರಗಳಿಗೆ ನನ್ನ ಪ್ರಶ್ನೆಗಳನ್ನು ಹೊಂದಿಸಬೇಕಾದ ಪರಿಸ್ಥಿತಿ! ಅದನ್ನೂ ಮಾಡಿದ್ದೇನೆ ನೋಡಿ. ಈ ಸಂದರ್ಭಕ್ಕೆ ಅನಗತ್ಯವಾಗಿ ಬರುವ ಬಸವಣ್ಣ, ಬುದ್ಧರ ಪಥಸಂಚಲನವನ್ನು ದಾಟಿ ಮುಂದೆ ಹೋದರೆ ಕಾಣುವುದು 'ಘರ್ ವಾಪಸಿಯ'ನ್ನು 'ಡರ್ ಕೆ ವಾಪಸಿ' ಎನ್ನುತ್ತಿರುವ ನಿಮ್ಮ ಇಬ್ಬಂದಿಯ ನಿಲುವು. ನಿಮ್ಮ ಹಿಂದಿನ ಲೇಖನದಲ್ಲೇ, 'ಮತಾಂತರಗೊಂಡವರನ್ನು ಕ್ರೈಸ್ತರು ಹಾಗೂ ಮುಸ್ಲಿಮರು ಒಪ್ಪಿಕೊಳ್ಳುವುದಿಲ್ಲವೆಂದರೆ ಅದು ದಲಿತರ ತಪ್ಪೇ?' ಎಂದು ಕೇಳಿದ್ದೀರಲ್ಲ, ಅಲ್ಲಿಗೆ ವಾಪಸಿ ಎನ್ನುವುದು ಹೇಗೆ ತಪ್ಪಾಗುತ್ತದೆ? ಈಗೇಕೆ ಉಲ್ಟಾ ಹೊಡೆಯುತ್ತಿದ್ದೀರಿ? ಅಬ್ಬೇಪಾರಿಗಳಂತೆ ಆಯುಷ್ಯವನ್ನೆಲ್ಲಾ ಬೇರೆಲ್ಲೋ ಕಳೆಯುವ ಬದಲು, ವಾಪಸ್ ಬರುತ್ತೇವೆನ್ನುವ ಮನಸ್ಸುಗಳನ್ನು ನಾವೇಕೆ ನಿರಾಕರಿಸಬೇಕು? ಮತಾಂತರಕ್ಕೆ ಓಕೆ ಎನ್ನುವ ಹಕ್ಕು ನಿಮಗಿದೆಯಾದರೆ, ಈ ಹಿಂದೆ ನಡೆದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಹಕ್ಕು ನಮಗೂ ಇದೆ. ಮಿಷನರಿಗಳು ಕೊಡುವ ಉಚಿತ ಶಿಕ್ಷಣ, ಆಸ್ಪತ್ರೆ ಸೌಲಭ್ಯಗಳು ಮಾನವೀಯತೆಯ ದ್ಯೋತಕವಾದರೆ ರೇಷನ್ ಕಾರ್ಡ್ ಕೂಡ ಅದೇ ವರ್ಗಕ್ಕೆ ಸೇರಬೇಕು ಅಲ್ಲವೇ? ಅಂದ ಹಾಗೆ, ರೇಷನ್ ಕಾರ್ಡಿಗೂ ಭಯಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಡರ್(ಭಯ) ಎನ್ನುವ ಪದವನ್ನು ಪ್ರಾಸಕ್ಕೋಸ್ಕರ ನೀವೇನೋ ಬಳಸಿಕೊಂಡಿರಿ, ಆದರೆ ಅರ್ಥಮಾಡಿಕೊಳ್ಳಲು ನಮಗೆ ಬಹಳ ತ್ರಾಸವಾಗುತ್ತದೆ ಸಾಹಿತಿಗಳೇ.

'ಆಮಿಷಕ್ಕೆಲ್ಲಾ ಮತಾಂತರವಾಗುವ ಕಾಲವೂ ಇದಲ್ಲ, ಜನರೂ ಮುಗ್ಧರಲ್ಲ' ಎಂದು ತೀರ್ಪನ್ನಿತ್ತಿದ್ದೀರಲ್ಲ, ಭಲೇ! ಮೊನ್ನೆಯಷ್ಟೇ ಎಕನಾಮಿಕ್ ಟೈಮ್ಸ್ ಪತ್ರಿಕೆಯ ಬ್ಲಾಗಿನಲ್ಲಿ ಮೋಹನ್‍ದಾಸ್ ಪೈ ರವರು ಮತಾಂತರದ ಹೊಸ ಅವತಾರವನ್ನು ಬಹಳ ಚೆನ್ನಾಗಿ ಹರವಿಟ್ಟಿದ್ದಾರೆ, ಓದಿ ನೋಡಿ. ಕಳೆದ ಐದು ವರ್ಷಗಳಲ್ಲಿ ಒಡಿಸ್ಸಾ, ಜಾರ್ಖಂಡ್, ಗುಜರಾತ್ ಹಾಗೂ ಮಧ್ಯಪ್ರದೇಶದ ಗಿರಿಜನ ಹಾಡಿಗಳೆಲ್ಲಾ ಕ್ರೈಸ್ತರ ಹಾಡಿಗಳಾಗಿ ಬದಲಾಗಿವೆ. ಅರುಣಾಚಲ ಹಾಗೂ ತ್ರಿಪುರಾದ ಗಿರಿಜನರ ಹಾಡಿಗಳಲ್ಲೂ ಎಲ್ಲೆಂದರಲ್ಲಿ ಬೆಂಕಿಪೊಟ್ಟಣದಂಥ ಚರ್ಚುಗಳು ತಲೆ ಎತ್ತುತ್ತಿವೆ. ಆ ಜನರು ಮುಗ್ಧರಲ್ಲ ಅಲ್ಲವೇ? ಎಲ್ಲರೂ IITಗಳಲ್ಲೇ ವ್ಯಾಸಂಗ ಮಾಡುತ್ತಿರುವವರು!  ಟಾಟಾ, ಬಿರ್ಲಾ ಹಾಗೂ ಅಂಬಾನಿಯ ಆಸ್ತಿಯಲ್ಲಿ ಎಲ್ಲರೂ ಸಮಾನ ಪಾಲುದಾರರು! ಅವರಿಗೆಲ್ಲ ಮೊದಲು ಹಿಂದೂ ಹಾಗೂ ಕ್ರೈಸ್ತ ಧರ್ಮಗಳ ಸೂಕ್ಷವನ್ನು ಬೋಧಿಸಿ, ನಂತರ ಆಯ್ಕೆಯನ್ನು ಅವರಿಗೇ ಬಿಡಲಾಯಿತಲ್ಲವೇ? ಸಾಮಾಜಿಕ ಜಾಲತಾಣ ಟ್ವಿಟ್ಟರ್‍ನಲ್ಲಿ ಪಾದ್ರಿಗಳು, ’ನನ್ನ ಗುರಿ 100 ಮಿಲಿಯನ್ ಜನರನ್ನು ಮತಾಂತರಗೊಳಿಸುವುದು, ಈಗಾಗಲೇ 60 ಮಿಲಿಯನ್ ಆಗಿದೆ, ಉಳಿದವರನ್ನು ಮತಾಂತರಿಸಲು ಹಣದ ಸಹಾಯ ಬೇಕಿದೆ’ ಎಂದು ಮುಕ್ತವಾಗಿಯೇ ಕೇಳುವುದನ್ನೂ ಉಲ್ಲೇಖಿಸಿದ್ದಾರೆ ಪೈ. ಡ್ರೈವರ್‍ಗಳು, ಮನೆಕೆಲಸದ ಹೆಂಗಸರು, ತಮ್ಮ ಮಕ್ಕಳ ಶಿಕ್ಷಣದ, ವೈದ್ಯಕೀಯ ಸೌಲಭ್ಯದ ಸಲುವಾಗಿ ಮತಾಂತರ ಹೊಂದುತ್ತಿರುವ ಹಲವಾರು ಉದಾಹರಣೆಗಳನ್ನು ನಾವೇ ನೋಡುತ್ತಿದ್ದೇವೆ. ಅವರ ಬಾಯಿಂದಲೇ ಕೇಳುತ್ತಿದ್ದೇವೆ.

ನಿಮಗೂ ಅಂಕಿ-ಅಂಶಗಳಿಗೂ ಆಗಿ ಬರುವುದಿಲ್ಲವೆಂದು ಗೊತ್ತು. ಆದರೂ ಒಂದು ವಿಷಯ ಹೇಳುತ್ತೇನೆ ಕೇಳಿ. ಇಂದು ಭಾರತದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ವೇಷದಲ್ಲಿರುವ ನೂರಾರು ಕ್ರೈಸ್ತ ಮಿಷನರಿಗಳಿಗೆ ವಿದೇಶಗಳಿಂದ ಹರಿದು ಬರುತ್ತಿರುವ ಹಣ ವಾರ್ಷಿಕ 10ಸಾವಿರ ಕೋಟಿಗೂ ಹೆಚ್ಚು! ಅಲ್ಲದೆ, ಭಾರತದಲ್ಲಿ ನಡೆಯುತ್ತಿರುವ ಬಲವಂತದ, ಪರಿಸ್ಥಿತಿಯ ದುರುಪಯೋಗದ ಮತಾಂತರವನ್ನು (coercion) ವಿದೇಶೀಯರೇ ಧಿಕ್ಕರಿಸುತ್ತಿದ್ದಾರೆ! ಅಲ್ಲಿ ಫಿಲಿಪ್ ಗೋಲ್ಡ್ ಬರ್ಗ್ ನಂಥವರು, ಹಿಂದುತ್ವದಿಂದಾಗಿರುವ ಲಾಭವನ್ನು 'ಅಮೆರಿಕನ್ ವೇದ' ಎಂಬ ಪುಸ್ತಕದ ಮೂಲಕ ಜಗಜ್ಜಾಹೀರುಗೊಳಿಸುತ್ತಿದ್ದರೆ, ಇಲ್ಲಿ ಮತಾಂತರಕ್ಕೆ ಈ ಪರಿಯ ಪ್ರೇರಣೆ! ವಿಪರ್ಯಾಸವಲ್ಲವೇ?

ವ್ಹಾರೆವ್ಹಾ, ನಿಮ್ಮ ಪ್ರಕಾರ ಪೂಜಾರಿಗಳು ಹಾಗೂ ಸೇವಾದರ ಬದಲಾಗುವುದಕ್ಕೂ ಚರ್ಚ್‍ಗಳು ಹಾಗೂ ದೇವರ ಸ್ವರೂಪವೇ ಬದಲಾಗುವುದಕ್ಕೂ ವ್ಯತ್ಯಾಸವೇ ಇಲ್ಲ ಅಲ್ಲವೇ? ಬೆಂಬಲಕ್ಕೆ ಮುಲ್ಲಾ ಮಸೀದಿಗಳ ಪ್ರಸ್ತಾಪ ಬೇರೆ!

ಬ್ರಾಹ್ಮಣ್ಯ, ಜನಿವಾರಗಳನ್ನೆಲ್ಲ ವೃಥಾ ಈ ಚರ್ಚೆಗೆ ಎಳೆದು ತಂದಿರಲ್ಲ, ಅಂಬೇಡ್ಕರರ ಎರಡನೆಯ ಹೆಂಡತಿ, ಸಾರಸ್ವತ ಬ್ರಾಹ್ಮಣರು ಎಂಬುದು ಗೊತ್ತಿಲ್ಲವೇ ನಿಮಗೆ? ಅಂದ ಹಾಗೆ ಮಹಾತ್ಮ ಗಾಂಧಿಯವರು ಕಾಣಲೇ ಇಲ್ಲವಲ್ಲ ನಿಮ್ಮ ವಾದದಲ್ಲಿ? ಅವರು ಅಸ್ಪೃಶ್ಯತೆಯನ್ನು ಎಷ್ಟು ಕಟುವಾಗಿ ಟೀಕಿಸುತ್ತಿದ್ದರೋ ಮತಾಂತರವನ್ನೂ ಅಷ್ಟೇ ಕಟುವಾಗಿ ವಿರೋಧಿಸುತ್ತಿದ್ದರು ಎಂಬ ಕಾರಣಕ್ಕೆ ಅವರಿಗೆ ಸ್ಥಳವಿರಲಿಲ್ಲವೇನೋ ಪಾಪ! ಅಲ್ಲವೇ?

ಹೌದು. ನಾನು ಹಿಂದೂ ಧರ್ಮದ ವಕ್ತಾರಳೇ. ಆದರೆ ನನ್ನ ಧರ್ಮ ಮಂತ್ರ, ಮಡಿವಂತಿಕೆಗಳಿಗೂ ಮೀರಿದ್ದು. ಬದುಕುವ ರೀತಿಯನ್ನು ಕಲಿಸುವ, ಸಮಾನತೆ, ಸೌಹಾರ್ದವನ್ನು ಬಿಂಬಿಸುವ ಸುಂದರ ಪರಿಕಲ್ಪನೆ ಅದು. ಒಂದೆಡೆ, ಶತಶತಮಾನಗಳಿಂದಲೂ ಚಾಲ್ತಿಯಲ್ಲಿರುವ ಅನಿಷ್ಟ ಆಚರಣೆಗಳನ್ನು ಒಂದೊಂದಾಗಿ ಕೊಡವುತ್ತಾ, ಮತ್ತೊಂದೆಡೆ ಹೊಸ ಸ್ವರೂಪಗಳಿಗೆ ತೆರೆದುಕೊಳ್ಳುತ್ತಿದೆ ನನ್ನ ಧರ್ಮ. ಅದು ನನ್ನನ್ನು ಮಲಿನೆ ಎಂದು ನಿಂದಿಸಿಲ್ಲ, ಹೆರುವ ಯಂತ್ರವನ್ನಾಗಿಸಿಲ್ಲ. ಅದು ಕೊಟ್ಟಿರುವ ಸ್ವಾತಂತ್ರ್ಯದಿಂದಲೇ ಇಂದು ನಾನು ನಿಮ್ಮೊಡನೆ ಚರ್ಚಿಸುತ್ತಿರುವುದು. ನಮಗಂಟಿರುವ 'ಅಸ್ಪೃಶ್ಯತೆ' ಎಂಬ ಕಲೆಯನ್ನು, ಒಗ್ಗಟ್ಟಾಗಿದ್ದು ತೊಳೆದುಕೊಳ್ಳುವುದಕ್ಕೇ ಬಿಡದೆ ಇಡೀ ದಲಿತ ಸಮುದಾಯವನ್ನೇ ಇಲ್ಲಿಂದ ಒಕ್ಕಲೆಬ್ಬಿಸುವ ಅಪಾಯಕಾರಿ ಮಾತನ್ನಾಡುವ ನಿಮ್ಮನ್ನು ನಿಂತ ನಿಲುವಿನಲ್ಲೇ ಖಂಡಿಸುವ ದಾರ್ಷ್ಟ್ಯವನ್ನು ಕೊಟ್ಟಿದ್ದೂ ನನ್ನ ಧರ್ಮವೇ. ಇದರಲ್ಲೂ ದೋಷ, ಕೊಳಕುತನಗಳು ಕಾಣುವುದು ಕಾಮಾಲೆ ಕಣ್ಣಿನವರಿಗೆ ಮಾತ್ರ!

ಒಂದಂತೂ ದಿಟ. ನಿದ್ರಿಸುತ್ತಿರುವವರನ್ನು ಎಬ್ಬಿಸಬಹುದು. ನಿದ್ರೆಯನ್ನು ನಟಿಸುತ್ತಿರುವವರನ್ನಲ್ಲ!

ಆಮಿಷದ ಉದ್ಯಮ ಮತಾಂತರವನ್ನು ಆಯ್ಕೆ ಎಂದು ಬಿಂಬಿಸುವಿರಲ್ಲ

ನಿನ್ನೆ ಪ್ರಕಟವಾದ, ವೇಣುರವರ ಲೇಖನದಲ್ಲಿ ಹಲವಾರು ಪ್ರಶ್ನೆಗಳಿದ್ದವು. ಪ್ರಶ್ನೆ ಕೇಳುವವರು ಪ್ರಶ್ನೆಗಳನ್ನು ಎದುರಿಸಲೂ ಸಿದ್ಧರಿರಬೇಕು ಎನ್ನುತ್ತಾರಲ್ಲ, ಆದ್ದರಿಂದ ಈ ಧಾಟಿಯ ಪ್ರತಿಕ್ರಿಯೆ.



‘ವೇಣುರವರೇ, ನೀವು ನಿಜವಾಗಿಯೂ ಮತಾಂತರದ ಆಶಯ, ಸ್ವರೂಪಗಳು ಗೊತ್ತಿಲ್ಲದ ಅಮಾಯಕರೋ ಅಥವಾ ಬೇಕಂತಲೇ ಹಾಗೆ ನಟಿಸುತ್ತಿದ್ದೀರೋ? ನೀವು ಸಮರ್ಥಿಸಿಕೊಳ್ಳುತ್ತಿರುವ ಪರಿ 'ಬೆರಳಿಗೆ ಗಾಯವಾಗಿದೆ, ಆದ್ದರಿಂದ ಕೈಯನ್ನೇ ಕತ್ತರಿಸಿಬಿಡೋಣ' ಎಂಬಂತಿಲ್ಲವೇ?

ಅಂಬೇಡ್ಕರ್‍ರ ಉದಾಹರಣೆಯನ್ನು ಜಾಣತನದಿಂದ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದೀರಲ್ಲ ಏಕೆ? ‘ಏನಾದರಾಗಲಿ, ನಾನು ಸಾಯುವಾಗ ಹಿಂದೂವಾಗಿ ಮಾತ್ರ ಸಾಯುವುದಿಲ್ಲ’ ಎಂದು ಭೀಷ್ಮ ಪ್ರತಿಜ್ಞೆ ಮಾಡಿಬಿಟ್ಟಿದ್ದರು ನಮ್ಮ ಸಂವಿಧಾನ ಶಿಲ್ಪಿ. ಹಾಗೆ ಮಾಡಿದ ಮೇಲೆ ಮತಾಂತರಗೊಳ್ಳಲು ಅವರು ತೆಗೆದುಕೊಂಡ ಸಮಯ ಎಷ್ಟು ಗೊತ್ತೇ? ಬರೋಬ್ಬರಿ ಇಪ್ಪತ್ತು ವರ್ಷಗಳು! ಅದೂ, ಅನಾರೋಗ್ಯ ಉಲ್ಪಣಿಸಿದಾಗ. ಹಾಗಾದಾಗಲೂ ಅವರು ಮೊತ್ತ ಮೊದಲು ಬಾಗಿಲು ಬಡಿದದ್ದು ಬೌದ್ಧ ಧರ್ಮದ್ದಲ್ಲ, ಸಿಖ್ಖರ ಸಮುದಾಯದ್ದು! ಅಲ್ಲಿ ಸರಿಯಾದ ಮನ್ನಣೆ ಸಿಗುವುದಿಲ್ಲ ಎಂದು ಖಾತ್ರಿಯಾದ ಮೇಲಷ್ಟೇ ಬೌದ್ಧ ಧರ್ಮದ ಕಡೆ ಹೊರಳಿ ನೋಡಿದ್ದು ಅವರು. ಅದಕ್ಕೆ ಅವರು ಆಯ್ದುಕೊಂಡದ್ದು 1956ನೇ ಇಸವಿಯ ಅಕ್ಟೋಬರ್ ತಿಂಗಳ 14ನೇ ತಾರೀಖನ್ನು. ಅಂದು ತಾವೊಬ್ಬರೇ ಮತಾಂತರಗೊಳ್ಳಲಿಲ್ಲ, ಸುಮಾರು ಐದು ಲಕ್ಷ ದಲಿತರನ್ನೂ ಮತಾಂತರಗೊಳಿಸಿದರು! ಇದಾದ ಮೇಲೆ ಅವರು ಬದುಕಿದ್ದು ಬರೀ ಎರಡೇ ತಿಂಗಳು. ತಮ್ಮ ನಂತರ ಆ ಜನರ ಪಾಡು ಏನಾಗಬಹುದೆಂದು ಏಕೆ ಯೋಚಿಸಲಿಲ್ಲ ಅಷ್ಟು ಬುದ್ಧಿವಂತರಾದ ಅಂಬೇಡ್ಕರ್?

ಯಾವ ಭ್ರಮಾಲೋಕದಲ್ಲಿದ್ದೀರಿ ವೇಣುರವರೇ ನೀವು? 'ನೊಂದ, ವಿದ್ಯಾವಂತ, ಸ್ವಾಭಿಮಾನಿ ದಲಿತ ತನ್ನ ಸಾಮಾಜಿಕ ಗೌರವವನ್ನು ಕಾಪಾಡಿಕೊಳ್ಳಲು ಮತಾಂತರವಾಗದೆ ಇನ್ನಾವ ಮಾರ್ಗವಿದೆ' ಎನ್ನುತ್ತೀರಲ್ಲ, ಸಮಾಜದಲ್ಲಿ ಗೌರವ ಹುಟ್ಟುವುದೇ ವಿದ್ಯೆಯಿಂದ ಎಂಬುದು ಇಷ್ಟೊಂದು ಓದಿಕೊಂಡ ನಿಮಗೆ ಗೊತ್ತಿಲ್ಲವಾ? ಚೆನ್ನಾಗಿ ಓದಿ ವಿದ್ಯಾವಂತನಾದ ದಲಿತ ಏಕೆ ನೊಂದುಕೊಳ್ಳುತ್ತಾನೆ? ಎಷ್ಟು ಜನ ದಲಿತ ಇಂಜಿನಿಯರುಗಳು, ಡಾಕ್ಟರುಗಳು, ಸ್ವಾಭಿಮಾನದ, ಗೌರವದ, ಹೆಮ್ಮೆಯ ಬದುಕು ನಡೆಸುತ್ತಿಲ್ಲ? ಅವರೆಲ್ಲಾ ಮತಾಂತರಗೊಳ್ಳುತ್ತಿದ್ದಾರಾ? ವಿದ್ಯೆ ಇಲ್ಲದೆ, ಬಡತನದಲ್ಲಿ ಬೇಯುತ್ತಿರುವ ಹಳ್ಳಿಗರೇ ಮತಾಂತರದ ಮೊರೆ ಹೋಗುತ್ತಿರುವುದು ಎಂಬುದು ನಿಮ್ಮ ಕಣ್ಣಿಗೆ ಮಾತ್ರ ಏಕೆ ಕಾಣಿಸುತ್ತಿಲ್ಲ? ಸಂವಿಧಾನದ 25ನೇ ವಿಧಿಯತ್ತ ಬೊಟ್ಟು ಮಾಡಿ ತೋರಿಸಿ, ಮತಾಂತರಕ್ಕೆ ಸಮ್ಮತಿ ಇದೆ ಎನ್ನುತ್ತೀರಲ್ಲ, ಸಮಾಜದ ನೈತಿಕ ಸ್ವಾಸ್ಥ್ಯವನ್ನು ಹಾಳುಗೆಡವದಿದ್ದರೆ ಮಾತ್ರ ಸಮ್ಮತಿ ಇದೆ ಎಂದಿರುವುದನ್ನು ಏಕೆ ಹೇಳುವುದಿಲ್ಲ? ಎಲ್ಲ ನೋವುಗಳಿಗೂ ಏಸು ಕ್ರಿಸ್ತನೇ ದಿವ್ಯೌಷಧ ಎಂದು ಹೇಳುವ ಮಿಷನರಿಗಳಿಗೂ, ಮತಾಂತರವಲ್ಲದೆ ಅನ್ಯಮಾರ್ಗವಿಲ್ಲ ಎನ್ನುತ್ತಿರುವ ನಿಮಗೂ ಏನೂ ವ್ಯತ್ಯಾಸವೇ ಇಲ್ಲವಲ್ಲ ಸ್ವಾಮಿ? ಈ ಚಂದಕ್ಕಾಗಿಯಾ ನಮ್ಮ ಸರ್ಕಾರಿ ಶಾಲೆಗಳ ಶಿಕ್ಷಕ ಶಿಕ್ಷಕಿಯರು ರಾಜ್ಯದ ಮೂಲೆ ಮೂಲೆಗಳಲ್ಲಿರುವ ಶಾಲೆಗಳಿಗೆ ಹೋಗಿ ಶ್ರಮಿಸುತ್ತಿರುವುದು? ದಲಿತ ಮಕ್ಕಳಿಗೆ ಕಲಿಸಲು ತಿಣುಕುವ ಅವರ ಬವಣೆಯನ್ನು ನೋಡಿದ್ದೀರಾ ಎಂದಾದರೂ?

ನಿಮ್ಮ ಪ್ರಕಾರ ದನಗಳನ್ನು ಪೂಜಿಸಿ ಜನಗಳನ್ನು ದೂರವಿಟ್ಟ ಧರ್ಮದಲ್ಲಿ ಮಾನವೀಯತೆ ಇಲ್ಲ ಅಲ್ಲವೇ? ಹಾಗಾದರೆ ದನಗಳನ್ನು ಭಕ್ಷಿಸಿ ಜನಗಳನ್ನು ಕೊಲ್ಲುವ ಧರ್ಮದಲ್ಲಿ ಮಾನವೀಯತೆ ಇದೆಯಾ? ದೂರವಿಡುವುದು ಕೊಲ್ಲುವುದಕ್ಕಿಂತ, ಅತ್ಯಾಚಾರ ಮಾಡುವುದಕ್ಕಿಂತ ಹೀನ ಕೆಲಸ ಎಂದು ಅರ್ಥ ಮಾಡಿಕೊಳ್ಳೋಣವಾ ಇನ್ನು ಮೇಲೆ? ಸಾವಿರಾರು ವರ್ಷಗಳಿಂದ ಮತಾಂತರಕ್ಕೆ, ಅತ್ಯಾಚಾರಗಳಿಗೆ ಬಲಿಯಾದರೂ ಕ್ರೌರ್ಯವನ್ನು ಎಂದೂ ಒಂದು ಮಾರ್ಗವಾಗಿ ಪರಿಗಣಿಸದ ಹಿಂದೂಗಳಲ್ಲಿ ಮಾನವೀಯತೆಯ ಲವಲೇಶವೂ ಇಲ್ಲ ಅಲ್ಲವೇ ನಿಮ್ಮ ಪ್ರಕಾರ?

'ತಾವು ಸ್ಪರ್ಶಿಸದ, ಸಹಾನುಭೂತಿ, ಪ್ರೀತಿ ತೋರದ ಜನರು ಮತಾಂತರವಾಗುತ್ತಾರೆಂದರೆ  ನೀವೇಕೆ ವೃಥಾ ಗಾಬರಿಗೊಳ್ಳುತ್ತೀರಿ?' ಎಂದು ಕೇಳಿದ್ದೀರಿ. ಕಣ್ಣುಬಿಟ್ಟು ಸ್ವಲ್ಪ ಸುತ್ತ-ಮುತ್ತ ನೋಡಿ. ಸ್ಪರ್ಶಿಸದ, ಸಹಾನುಭೂತಿ ತೋರದ ಕಾಲ ಮುಗಿಯುತ್ತಾ ಬಂದಿದೆ. ಇಂದು ನೂರಾರು ಸ್ವಯಂಸೇವಕರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ದಲಿತರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ. ನಾವು ಗಾಬರಿಯಾದಂತೆ ಕಾಣುತ್ತಿದ್ದೇವಾ ನಿಮಗೆ? ಖಂಡಿತ ಇಲ್ಲ. ಹೀಗೇ ಬಿಟ್ಟರೆ ಈ ವ್ಯಾಧಿ ನಮ್ಮನ್ನೇ ಆಪೋಶನ ತೆಗೆದುಕೊಂಡುಬಿಡಬಹುದೆಂದು ಎಚ್ಚೆತ್ತುಕೊಳ್ಳುತ್ತಿದ್ದೇವೆ ಅಷ್ಟೇ. ಮುಗ್ಧ ಜನರನ್ನು ಪ್ರೀತಿ ಕನಿಕರದ ಹೆಸರಿನಲ್ಲಿ ಸೆಳೆಯುವುದನ್ನು ಪ್ರತಿಭಟಿಸುತ್ತಿದ್ದೇವೆ. ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದೂ ಇದೇ ಕನಿಕರದಿಂದಲೇ ಅಲ್ಲವೇ? 60 ವರ್ಷಗಳಲ್ಲಿ ಇಡೀ ದಲಿತ ಸಮುದಾಯಕ್ಕೆ ಎಷ್ಟು ಸಹಾಯಮಾಡಿದೆ ಈ ಕನಿಕರ? ‘ಭಯವೇ ನಿಮಗೆ? ಹಿಂದೂ ಧರ್ಮ ಅಷ್ಟೊಂದು ಬಲಹೀನವೇ?’ ಎಂದೂ ಕೇಳಿದ್ದೀರಿ. ಛೆ! ಆ ಅಭದ್ರತೆ ನಮ್ಮನ್ನು ಕಾಡಲು ಸಾಧ್ಯವೇ ಇಲ್ಲ ಬಿಡಿ. ನಿನ್ನೆ ಮೊನ್ನೆ ಹುಟ್ಟಿದ ನವಜಾತ ಶಿಶು ಎಂದುಕೊಂಡಿದ್ದೀರೇನು ಇಂಥ ಒಂದು ಸಣ್ಣ ಜಾಂಡೀಸ್ ಬಂದರೆ ಸಾಯಲು? ಸಾವಿರಾರು ‘ಎಬೋಲ’ಗಳನ್ನು ಮೆಟ್ಟಿ ನಿಂತ ಧರ್ಮ ನಮ್ಮದು. ಹಿಂದೂ ಧರ್ಮ ಬಲಹೀನವಾಗಿದ್ದಿದ್ದರೆ, ನಿಮ್ಮಂಥವರ, ನಿಮ್ಮನ್ನು ಮೀರಿಸುವಂಥವರ ಆರ್ಭಟದ ಮಧ್ಯೆಯೂ ಇಷ್ಟು ಕಾಲ ಉಳಿಯುವುದು ಸಾಧ್ಯವಿತ್ತೇ ಹೇಳಿ?

ಧರ್ಮವೇನು ಬಾಡಿಗೆ ಮನೆಯೇ ಮನಸ್ಸು ಬಂದಂತೆ ಬದಲಾಯಿಸಲು? ನಮ್ಮದೇ ಜಾತಿಯ ಬೇರೊಂದು ಮನೆಯ ಹೆಣ್ಣುಮಗು ಸೊಸೆಯಾಗಿ ಬಂದರೇ ಒಪ್ಪಿಕೊಳ್ಳಲು ಆಯುಷ್ಯವೆಲ್ಲಾ ತಿಣುಕಾಡುವ ಜನ ನಾವು. ಇನ್ನು ಮತಾಂತರವಾದವರ ಪಾಡೇನು? ‘ದಲಿತರನ್ನು ನಿಮ್ಮಂತೆಯೇ ಕ್ರೈಸ್ತರು, ಮುಸ್ಲಿಮರು ಒಪ್ಪಿಕೊಳ್ಳದೇ ಹೋದರೆ ಅದು ಅವರ ತಪ್ಪೇ’ ಎಂದು ಕೇಳಿದ್ದೀರಿ. ಅದನ್ನೇ ಸ್ವಾಮಿ ನಾವೂ ನಿಮ್ಮನ್ನು ಕೇಳುತ್ತಿರುವುದು. ಒಪ್ಪಿಕೊಳ್ಳುವುದಿಲ್ಲ ಎಂದು ಗೊತ್ತಿದ್ದಮೇಲೂ ಅಲ್ಲಿಗೆ ದೂಡುವ ಹಟವೇಕೆ? ಅಲ್ಲಿಗೆ ಹೊಂದಿಕೊಳ್ಳಲು ಒಂದೆರಡು ತಲೆಮಾರುಗಳಾದರೂ ಆದೀತೇನೋ ಎನ್ನುತ್ತೀರಲ್ಲ, ಅಷ್ಟು ತಲೆಮಾರುಗಳನ್ನು ಬಲಿಕೊಡಬೇಕೇಕೆ? ಆ ಹೊಂದಾಣಿಕೆಯನ್ನು ಇಲ್ಲಿದ್ದೇ ಮಾಡಿಕೊಂಡರಾಗದೇ?

ಮತಾಂತರವನ್ನೂ ಹೊಸ ಧರ್ಮಗಳ ಹುಟ್ಟನ್ನೂ ಒಂದೇ ತಕ್ಕಡಿಯಲ್ಲಿಟ್ಟು ಏಕೆ ತೂಗುತ್ತೀರ? ವೇದಗಳನ್ನು ತಿರಸ್ಕರಿಸಿದ ಬುದ್ಧ ಬೌದ್ಧ ಧರ್ಮವನ್ನು ಹುಟ್ಟುಹಾಕಿದ್ದು ಧರ್ಮ ಜಿಜ್ಞಾಸೆ, ಚಿಂತನ ಮಂಥನಗಳ ಫಲಶ್ರುತಿಯಿಂದ. ಆಗ ಧರ್ಮ ಪ್ರಚಾರ ನಡೆಯುತ್ತಿದ್ದುದೂ ತರ್ಕ, ಅಧ್ಯಯನ, ವಾದ-ವಿವಾದಗಳ ತಳಹದಿಯ ಮೇಲೇ. ಈಗ ನಡೆಯುವ ಮತಾಂತರಗಳಲ್ಲೂ ಜನರಿಗೆ ತಮ್ಮದಾಗಲಿರುವ ಧರ್ಮದ ಆಳ ಅಗಲಗಳು ಗೊತ್ತಿರುತ್ತವಾ? ಅಂಬೇಡ್ಕರ್, ಐದೂ ಲಕ್ಷ ಜನರಿಗೆ ಮೊದಲು ಬೌದ್ಧ ಧರ್ಮದ ಸೂಕ್ಷ್ಮಗಳನ್ನು ಹೇಳಿಕೊಟ್ಟು ನಂತರ ಮತಾಂತರಗೊಳಿಸಿದರಾ?

'ಸ್ವಭಾವತಃ ಸಜ್ಜನರೂ ಸರಳರೂ ಆದ ಕ್ರೈಸ್ತರನ್ನು ಕಂಡರೇಕೆ ಭಯ?' ಎನ್ನುತ್ತಾ ಅವರ ಗುಣಗಾನ ಮಾಡುತ್ತೀರಿ. 'ಅತಿವಿನಯಂ ಧೂರ್ತ ಲಕ್ಷಣಂ' ಎನ್ನುತ್ತೇವೆ ನಾವು. ಇಷ್ಟೊಂದು ಸಂಖ್ಯೆಯಲ್ಲಿರುವ ಶಾಲೆ ಕಾಲೇಜುಗಳು, ಆಸ್ಪತ್ರೆಗಳು ಬರೀ ಸಮಾಜ ಸೇವೆಗೆ ಮೀಸಲಿವೆ ಎಂಬ ಹೂವನ್ನು ನಮ್ಮ ಕಿವಿಯ ಮೇಲೇಕೆ ಇಡುತ್ತೀರಿ? ಅವರ ಶಾಲೆ, ಆಸ್ಪತ್ರೆಗಳು ಮತಾಂತರ ಕೇಂದ್ರಗಳಾಗಿರುವುದು ನಮಗೆ ಗೊತ್ತಿಲ್ಲವೆ? ಅಲ್ಲಿ ಸಕಲವೂ ಏಸುಮಯ. ಹಳ್ಳಿಗಾಡಿನ ದೀನದಲಿತರ ಮೈದಡವುವುದು, ಕಣ್ಣೀರು ಒರೆಸುವುದು ಎಲ್ಲವೂ ಮತಾಂತರವಾಗುವವರೆಗೆ ಮಾತ್ರ. ಪ್ರೀತಿಯ ಧಾರೆ ಎನ್ನುತ್ತೀರಲ್ಲ, ಅದೂ ನಾಲ್ಕು ದಿನಗಳ ನಂತರ ಬತ್ತಿ ಹೋಗುವ ಕೃತಕ ಜಲಧಾರೆ! ಮತಾಂತರವಾಗುವ ಮುನ್ನ ಒಟ್ಟುಗಂಟಿನಲ್ಲಿ ಕೊಟ್ಟಿರುತ್ತಾರಲ್ಲ ಹಣ, ಮತಾಂತರವಾದ ಮೇಲೆ ಅದನ್ನು ಏಸುವಿನ ಸೇವೆಯ ಹೆಸರಿನಲ್ಲಿ ತಿಂಗಳಿಗೆ ಇಷ್ಟಿಷ್ಟೇ ಎಂದು ವಸೂಲಿ ಮಾಡುತ್ತಾರೆ!

ಇನ್ನು, ಅವರು ನಮ್ಮ ದಲಿತರನ್ನು ಚರ್ಚುಗಳಲ್ಲಿ ಬಿಟ್ಟುಕೊಂಡು ಕೀಳರಿಮೆಯಿಂದ ಮುಕ್ತಗೊಳಿಸಿದರು ಎನ್ನುವುದು ನಿಮ್ಮ ವಾದ. ಹಾಗಿದ್ದ ಪಕ್ಷದಲ್ಲಿ ಅವರ ಚರ್ಚುಗಳ, ಏಸುವಿನ ಸ್ವರೂಪ ಏಕೆ ಬದಲಾಗುತ್ತಿತ್ತು? ಸ್ವಲ್ಪ ಅರ್ಥಮಾಡಿಕೊಳ್ಳಿ. ಆ ಯೇಸುವಿನಲ್ಲಿ ನಮ್ಮ ಜನರಿಗೆ ಹಿಂದೂ ದೇವರುಗಳು ಕಾಣುತ್ತಿಲ್ಲ. ಸಣ್ಣ ಗರ್ಭಗುಡಿಯಲ್ಲಿದ್ದೇ ಮನಸ್ಸನ್ನು ಅಗಾಧವಾಗಿ ವ್ಯಾಪಿಸಿಕೊಳ್ಳುವ ನಮ್ಮ ದೇವರುಗಳು ಆ ಎತ್ತರದ ಶಿಲುಬೆಗಳಲ್ಲಿ, ವಿಗ್ರಹಗಳಲ್ಲಿ ಹುಡುಕಿದರೂ ಸಿಗುತ್ತಿಲ್ಲ. ‘ತಪ್ಪು ಮಾಡಿಬಿಟ್ಟೆವಾ’ ಎಂಬ ಕೀಳರಿಮೆಯಿಂದ ನರಳುತ್ತಿದ್ದಾರೆ ಜನ. ಅದನ್ನು ಹೋಗಲಾಡಿಸುವ ಸಲುವಾಗಿಯೇ ಚರ್ಚುಗಳು ಆಲಯಗಳಾಗುತ್ತಿವೆ. ಏಸುಕ್ರಿಸ್ತ ಕೃಷ್ಣನಾಗಿ ಕೊಳಲನ್ನೂದುತ್ತಾ ಕಾಣಿಸಿಕೊಂಡರೆ, ಮೇರಿಯಮ್ಮ ಅಂಚು-ಸೆರಗಿನ ಸೀರೆಯುಟ್ಟು ನಿಂತಿದ್ದಾಳೆ! ಇನ್ನು ಹೇಗೆ ಹೇಳಿದರೆ ನಿಮಗೆ ಅರ್ಥವಾದೀತು?

ಹೀಗೆ ಅನ್ಯ ಧರ್ಮಗಳು ನಮ್ಮ ಸನಾತನ ಧರ್ಮದ ಬೇರುಗಳನ್ನು ಕತ್ತರಿಸುವ ಕೆಲಸಕ್ಕೆ ಕೈ ಹಾಕಿರುವಾಗ. ನಮ್ಮ ರೆಂಬೆ ಕೊಂಬೆಗಳನ್ನು ನಾವೂ ಹೊರದೇಶಗಳಲ್ಲಿ ಚಾಚುವುದರಲ್ಲೇನು ತಪ್ಪು?
'ಅಂಬೇಡ್ಕರ್‍ರಂಥ ಮೇಧಾವಿಯೇ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದ ಮೇಲೆ ಹಿಂದೂ ಧರ್ಮದಲ್ಲೇ ದೋಷವಿರಬೇಕಲ್ಲವೇ?' ಎಂದು ಕೇಳುತ್ತೀರಲ್ಲ, ನಿಮ್ಮ ಪ್ರಶ್ನೆಗೆ ನಗಬೇಕೋ, ಅಳಬೇಕೋ? ಅವರು ಮೇಧಾವಿಯೇ ಇರಬಹುದು, ಆದರೆ ಹಿಂದೂ ಧರ್ಮವನ್ನು ಬಿಟ್ಟು ಹೋಗಿದ್ದು ಧರ್ಮವನ್ನು ಸಮಗ್ರವಾಗಿ ಅಭ್ಯಸಿಸಿ ಅದರಲ್ಲಿ ಕಂಡು ಬಂದ ನ್ಯೂನತೆಗಳಿಂದಲ್ಲ. ಜಾತಿ ಪದ್ಧತಿಯೆಂಬ ಅನಿಷ್ಟದಿಂದ ರೋಸಿಹೋಗಿ! ಅವರಷ್ಟೇ ಅಥವಾ ಅವರಿಗಿಂತ ಮೇಧಾವಿಗಳೆನಿಸಿಕೊಂಡ ಅನ್ಯ ಧರ್ಮೀಯರನೇಕರು ಹಿಂದೂ ಧರ್ಮಕ್ಕೆ ಬಂದಿದ್ದಾರಲ್ಲ, ಹಾಗಾದರೆ ಅವರ ಧರ್ಮಗಳಲ್ಲೂ ದೋಷವಿದೆಯೆಂದು ಹೀಗೇ ಎದೆತಟ್ಟಿ ಹೇಳುತ್ತೀರಾ?

ಜನತೆ ತಮಗೆ ಕ್ಷೇಮ ಎನಿಸಿದ ಕಡೆ ಹೋಗುವುದನ್ನು ನಾವು ಹಂಗಿಸುತ್ತೇವೆ ಎನ್ನುತ್ತೀರ. ಕ್ಷೇಮಕ್ಕೂ ಪ್ರಲೋಭನೆಗೂ ವ್ಯತ್ಯಾಸ ಗೊತ್ತಿಲ್ಲವೇ ನಿಮಗೆ? ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಜನರಿಗೆ ದುಡ್ಡು ಅಥವಾ ಪುಕ್ಕಟೆ ಸೌಲಭ್ಯಗಳ ಆಸೆ ತೋರಿಸಿದರೆ ಹೋಗದೆ ಏನು ಮಾಡಿಯಾರು? ಹಾಗೆ ಹೋದವರು ತಮ್ಮ ಕ್ಷೇಮ ಅಲ್ಲಿಲ್ಲ ಎಂದರಿವಾದ ಮೇಲೆ ಹಿಂದಿರುಗಬಯಸಿದರೆ ಅದಕ್ಕೂ ಬೊಬ್ಬೆ ಹೊಡೆಯುವುದೇಕೆ? ಮಡಿವಂತಿಕೆ ಬರೀ ಹಿಂದೂಗಳಲ್ಲಿದೆ ಎಂದು ಯಾರು ಹೇಳಿದ್ದು ನಿಮಗೆ? ವ್ಯಾಟಿಕನ್‍‍ನವರ ಹಾಗೂ ಅರಬ್ಬರ ಮಡಿವಂತಿಕೆಗಳ ಬಗ್ಗೆ ಗೊತ್ತಿಲ್ಲವೇ?

ಹಿಂದೆ ಅನುಭವಿಸಿದ ಅವಮಾನ, ನೋವು, ಕಹಿಗಳು ಮುಂದಿನ ಸಾಮರಸ್ಯಕ್ಕೆ ಪಾಠವಾಗಬೇಕು, ಪಲಾಯನವಾದಕ್ಕೆ ಪ್ರೇರಣೆಯಲ್ಲ. ನಮ್ಮ ಜುಟ್ಟನ್ನು ನಮ್ಮ ಕೈಯಲ್ಲಿಟ್ಟುಕೊಳ್ಳುವ ಬದಲು ಅನ್ಯರ ಕೈಗೆ ಕೊಟ್ಟು, 'ಕೋ, ಕತ್ತರಿಸು' ಎಂದರೆ ಬಿಟ್ಟಾರೆಯೇ? 

Friday 19 December 2014

ಈ ತುಳಸಿ ಅಮೆರಿಕದ ಹಿತ್ತಲಲ್ಲಿ ಬೆಳೆದಿದ್ದು!

ಅರೆ, ಇದ್ಯಾವ ತುಳಸಿ? ಅಮೆರಿಕದ ಹಿತ್ತಲಲ್ಲಿ ಏಕೆ ಬೆಳೆಯಿತು? ಇಲ್ಲಿಂದ ಹೋದ ಭಾರತೀಯರು ಬೆಳೆಸಿದ್ದಾ ಎಂಬ ಪ್ರಶ್ನೆಗಳು ಮೂಡುತ್ತಿವೆಯಾ? ಸ್ವಲ್ಪ ತಡೆಯಿರಿ. ಈ ತುಳಸಿಯ ಬೇರು ಭಾರತದ್ದಲ್ಲ. ಇಲ್ಲಿಯ ಮಣ್ಣಿನ ಒಂದೇ ಒಂದು ಕಣವೂ ಅದಕ್ಕೆ ಅಂಟಿಕೊಂಡಿಲ್ಲ. ಆದರೆ ಇಲ್ಲಿಂದ ಬೀಸಿದ ಹಿಂದುತ್ವದ ಗಂಧ-ಗಾಳಿ ಆ ತುಳಸಿಯನ್ನು ಬೆಳೆಸಿದೆ. ಆ ಗಾಳಿಯ ಪಸೆಯನ್ನು ಹೀರಿಕೊಂಡೇ ಅದು ನಳನಳಿಸುತ್ತಿದೆ. ಇನ್ನು ಸಾಕು ಹೀಗೆ ಒಗಟಾಗಿ ಹೇಳಿದ್ದು ಎನ್ನುತ್ತೀರಾ? ಇದೋ ಕೇಳಿ, ಇಷ್ಟು ಹೊತ್ತೂ ಉಲ್ಲೇಖಿಸಿದ್ದು ನಮ್ಮೆಲರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ತುಳಸಿ ಗಿಡದ ಬಗ್ಗೆಯಲ್ಲ, ನಮಗೆ ಅಷ್ಟೇನೂ ಪರಿಚಿತಳಲ್ಲದ, ತುಳಸಿ ಗೆಬಾರ್ಡ್ ಎಂಬ ಅಮೆರಿಕದ ಹೆಣ್ಣು ಮಗಳ ಬಗ್ಗೆ!


ಇಂದು ಭಾರತದಲ್ಲಿ ಹಿಂದೂ ಎನ್ನುವುದೇ ಎಲ್ಲ ಸಮಸ್ಯೆಗಳಿಗೂ ಮೂಲವಾಗಿಬಿಟ್ಟಿದೆ. ಹಿಂದೂ ಎನ್ನುವುದಕ್ಕೇ ಹಿಂಜರಿಕೆ. ಅದರ ಜೊತೆಗೇ ಹುಟ್ಟಿದ ಅವಳಿಯೇನೋ ಎನ್ನುವಷ್ಟು, ‘ಸೆಕ್ಯುಲರ್’ ಪದದ ಬಳಕೆ. ನೀವೇನಾದರೂ ಅಪ್ಪಿತಪ್ಪಿ ಭಾರತವನ್ನು ಹಿಂದೂ ರಾಷ್ಟ್ರ ಎಂದುಬಿಟ್ಟಿರೋ, ಅಲ್ಲಿಗೆ ಮುಗಿಯಿತು ಕಥೆ. ನಿಮ್ಮನ್ನು ಕೆಕ್ಕರಿಸಿ ನೋಡಿ ಮಾತಿನ ಕತ್ತಿಯಲ್ಲೇ ಸಾವಿರ ಹೋಳಾಗಿ ಸೀಳಿ ಬಿಡುವ ಮಂದಿ. ಹಿಂದೂವಿಗೆ ಸಂಬಂಧಿಸಿದ ಎಲ್ಲವೂ ಸೆಕ್ಯುಲರ್ ನ್ಯಾಯಾಧೀಶರುಗಳ ಪರಾಮರ್ಶೆಗೆ ಹೋಗಲೇಬೇಕು. ಕಡೆಗೆ ಭಗವದ್ಗೀತೆಯ ಸಾರಾಮೃತಕ್ಕೂ ಕೋಮುವಾದದ ಒಗ್ಗರಣೆಯೇ ಗತಿ! ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡೋಣವೇ ಎಂದು ಕೇಳಿದರೆ, 'ಬೇಡ, ಅದು ಹಿಂಸೆಯನ್ನು ಪ್ರಚೋದಿಸುತ್ತದೆ’ ಎನ್ನುತ್ತಿವೆ ಹಟ ಮೆತ್ತಿಕೊಂಡ ಮನಸ್ಸುಗಳು. ತುಂಬಾ ಓದಿಕೊಂಡ, ಬುದ್ಧಿವಂತರೆನಿಸಿಕೊಂಡ ಹಿಂದೂಗಳೇ ಮಗ್ಗುಲು ಬದಲಾಯಿಸಿದಷ್ಟು ಸಲೀಸಾಗಿ ಧರ್ಮವನ್ನು ಬದಲಾಯಿಸುತ್ತಿದ್ದಾರೆ! 'ಏನಿದೆ ಈ ಧರ್ಮದಲ್ಲಿ? ಗೀತೆಯಲ್ಲಿ?' ಎಂಬ ಅವರ ಪ್ರಶ್ನೆಗಳಿಗೆ ಉತ್ತರವಾಗಿ ನಿಂತಿದ್ದಾಳೆ ಈ ಹೆಣ್ಣುಮಗಳು ತುಳಸಿ!

ಕೇಳಿ, ಈಕೆ ಅಪ್ಪಟ ಅಮೆರಿಕನ್ನಳು. ಹುಟ್ಟಿದ್ದು ಅಮೆರಿಕನ್ ಸಮೋವಾ ಎಂಬ ದ್ವೀಪದಲ್ಲಿ. ಎರಡು ವರ್ಷದವಳಾಗಿದ್ದಾಗ, ಹವಾಯಿ ದ್ವೀಪ ಸಮೂಹಕ್ಕೆ ಕುಟುಂಬ ಸಮೇತ ವಲಸೆ ಹೋದರು ತಂದೆ ಮೈಕ್ ಗೆಬಾರ್ಡ್. ಅಂದಹಾಗೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ನೀಡುವುದರಲ್ಲಿ ಹವಾಯಿಯದ್ದು ಎತ್ತಿದ ಕೈ. ಗೆಬಾರ್ಡ್ ದಂಪತಿಯ ಐವರು ಮಕ್ಕಳಲ್ಲಿ ಈಕೆ ನಾಲ್ಕನೆಯವಳು. ತಂದೆ ತಾಯಿ ಮೂಲತಃ ಕ್ರೈಸ್ತರು. ಆದರೆ ತಂದೆಗೆ ಮಂತ್ರ ಪಠನೆ, ಧ್ಯಾನ ಹಾಗೂ ಕೀರ್ತನೆಗಳಲ್ಲಿ ಅತೀವ ಆಸಕ್ತಿ. ಅವರು ಕ್ರೈಸ್ತರಾಗಿಯೇ ಉಳಿದು ಅವುಗಳನ್ನು ಮುಂದುವರೆಸಿದರೆ, ತಾಯಿ ಹಿಂದೂ ಧರ್ಮದ ಅನುಯಾಯಿಯಾದರು. ಐದೂ ಮಕ್ಕಳ ಹೆಸರು ಕ್ರಮವಾಗಿ, ಭಕ್ತಿ, ಜೈ, ಆರ್ಯನ್, ತುಳಸಿ ಹಾಗೂ ವೃಂದಾವನ್! ಇವರ ತಾಯಿ ಭಗವದ್ಗೀತೆಯ ಸಾರವನ್ನು ತಾವೂ ಉಂಡಿದ್ದಲ್ಲದೆ ಮಕ್ಕಳಿಗೂ ಉಣಬಡಿಸಿದರು. ಅದನ್ನು ಎಲ್ಲರಿಗಿಂತ ಹೆಚ್ಚಾಗಿ ಆಸ್ವಾದಿಸಿದವಳು ತುಳಸಿ. ತಾನು ಇದೇ ಧರ್ಮದ ಮಾರ್ಗದಲ್ಲಿ ನಡೆಯುತ್ತೇನೆ ಎಂದು ನಿಶ್ಚಯಿಸಿದಾಗ ಇನ್ನೂ ಹದಿಹರೆಯ ಈಕೆಗೆ. ಹಿಂದೂವಾಗಿ, ವೈಷ್ಣವಳಾಗಿ, ವಿಷ್ಣುವಿನ ಅವತಾರಗಳ ಬಗ್ಗೆ ಅರಿತು, ರಾಮಾಯಣ ಮಹಾಭಾರತಗಳನ್ನೂ ಮನನ ಮಾಡಿಕೊಂಡಳು ಎನ್ನುವುದಷ್ಟೇ ಈಕೆಯ ಕಥೆಯಾಗಿದ್ದರೆ ಅದನ್ನು ಹೇಳುವ ಅವಶ್ಯಕತೆಯೇ ಬೀಳುತ್ತಿರಲಿಲ್ಲ. ನಮ್ಮ ಮಕ್ಕಳು ಸ್ಪರ್ಧೆಗೋಸ್ಕರ ಭಗವದ್ಗೀತೆಯ ಶ್ಲೋಕಗಳನ್ನು ಕಲಿತು, ವ್ಯಾಸಂಗಕ್ಕೋಸ್ಕರ ಅವುಗಳನ್ನು ಮರೆತುಬಿಡುತ್ತಾರಲ್ಲ, ಆ ವಯಸ್ಸಿನಲ್ಲಿ ತುಳಸಿ ಅದನ್ನು ತನ್ನ ಬದುಕಿನ ತಳಹದಿಯನ್ನಾಗಿಸಿಕೊಂಡಳು. ನಂತರ ಅವಳು ಸಾಧಿಸಿದ್ದೇನು ಕಡಿಮೆಯೇ?

ಚಿಕ್ಕಂದಿನಿಂದಲೇ ತಂದೆಯ ವ್ಯಾಪಾರದಲ್ಲಿ ಸಣ್ಣ ಪುಟ್ಟ ಸಹಾಯಗಳನ್ನು ಮಾಡಿಕೊಡುತ್ತಿದ್ದ ತುಳಸಿ ಸಮರ ಕಲೆಗಳಲ್ಲಿ ಪ್ರವೀಣೆಯಾದಳು. ವಿಚಾರಗಳ ಮಂಥನದಿಂದ ಮನಸ್ಸೆಷ್ಟು ಗಟ್ಟಿಯಾಗುತ್ತಿತ್ತೋ, ದೇಹವನ್ನೂ ಅಷ್ಟೇ ಗಟ್ಟಿಯಾಗಿಸಿಕೊಂಡಳು. ಜವಾಬ್ದಾರಿಗಳು, ಅಪಾಯಗಳೆಂದರೆ ಅದೇನೋ ಪ್ರೀತಿ. ಎಲ್ಲಕ್ಕಿಂತ ಹೆಚ್ಚಾಗಿ, ಸಮಾಜಕ್ಕೆ ಮಾಡಬೇಕಾದ ಕರ್ತವ್ಯ, ಒಳಿತುಗಳ ಬಗ್ಗೆ ಅತೀವ ತುಡಿತ. ಅಂತಾರಾಷ್ಟ್ರೀಯ ವ್ಯಾಪಾರದ ವಿಷಯದಲ್ಲಿ ಡಿಗ್ರಿ ಪಡೆಯುವ ಹೊತ್ತಿಗೆ, ಅದಾಗಲೇ ತನ್ನ ಸಮಾಜಮುಖಿ, ಪರಿಸರಸ್ನೇಹಿ ಕೆಲಸಗಳಿಂದ ಖ್ಯಾತಳಾಗಿದ್ದಳು. 2002ರಲ್ಲಿ, ಅಂದರೆ ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲೇ ಹವಾಯಿಯ ಶಾಸಕಾಂಗಕ್ಕೆ ಮೊದಲ ಬಾರಿ ಆಯ್ಕೆಯಾದಳು. ಹೀಗೆ ಆಯ್ಕೆಯಾದ ಅತಿ ಕಿರಿಯ ವ್ಯಕ್ತಿ ಎಂಬ ದಾಖಲೆಗೂ ಪಾತ್ರಳಾದಳು. ಸಮಾಜ ಸೇವೆಯ ಗೀಳು ಹೇಗೂ ಇದ್ದೇ ಇತ್ತಲ್ಲ, 2001ರಲ್ಲಿ ಓಸಾಮಾ ಮಾಡಿದ ದಾಳಿಯೂ ಮನಸ್ಸಿನಲ್ಲಿ ಹಸಿರಾಗಿತ್ತು. ಸೀದಾ ಹೋಗಿ ಸೇನೆಯನ್ನು ಸೇರಿಕೊಂಡುಬಿಟ್ಟಳು. ನೀವೇ ಹೇಳಿ, ರಾಜಕೀಯದ ರುಚಿ ಕಂಡ ಎಷ್ಟು ಜನ ಸೇನೆಯನ್ನು ಸೇರುತ್ತಾರೆ? ಹೋಗಲಿ, ನಾಮಕಾವಸ್ಥೆಗೆ ತರಬೇತಿ ಪಡೆದಂತೆ ಮಾಡಿ ಸುಮ್ಮನಾದಳಾ? ಇಲ್ಲ. 2004ರಲ್ಲಿ ಇರಾಕ್‍ನ ಯುದ್ಧ ಭೂಮಿಗೇ ಹೋಗಿ ನಿಂತಳು. ಸತತ ಹನ್ನೆರಡು ತಿಂಗಳುಗಳ ಕಾಲ ಅಲ್ಲಿದ್ದು ತನ್ನ ತುಕಡಿಯೊಂದಿಗೆ ಹಿಂದಿರುಗಿದಳು. ಅಲ್ಲಿಂದ ಹಿಂದಿರುಗುತ್ತಿದ್ದಂತೆಯೇ ಸೇನಾಧಿಕಾರಿಗಳಿಗೆ ಸೀಮಿತವಾಗಿದ್ದ ಉನ್ನತ ತರಬೇತಿ ಪಡೆದು, ತನ್ನ ಕೇಂದ್ರಕ್ಕೇ ಮೊದಲಿಗಳಾದಳು. 2008ರಲ್ಲಿ ಅವಳು ಮತ್ತೆ ನುಗ್ಗಿದ್ದು ಕುವೈತ್‍ನ ಯುದ್ಧ ಭೂಮಿಗೆ. ಅವಳ ಸಾಹಸ, ಶೌರ್ಯ, ಸಮಯಪ್ರಜ್ಞೆಗಳನ್ನು ಕಂಡು ಕುವೈತ್‍ನ ಸೇನಾಧಿಕಾರಿಗಳು ಎಷ್ಟು ಪ್ರಭಾವಿತರಾದರು ಗೊತ್ತೇ? ಹೆಣ್ಣುಮಗಳೆಂಬ ಕಾರಣಕ್ಕೆ ಕೈಕುಲುಕಲು ಹಿಂಜರಿಯುತ್ತಿದ್ದ ಮಂದಿ ಅವಳಿಗೊಂದು ಪ್ರಶಸ್ತಿಯನ್ನೇ ನೀಡಿ ಸನ್ಮಾನಿಸಿದರು. ಮಹಿಳೆಯೊಬ್ಬಳ ಶೌರ್ಯಕ್ಕೆ ಪ್ರಶಸ್ತಿ ಕೊಡಮಾಡಿದ್ದು ಕುವೈತ್‍ನ ಇತಿಹಾಸದಲ್ಲೇ ಇದು ಮೊದಲ ಬಾರಿ!

ನಂತರ 2010ರಲ್ಲಿ ಹೊನೊಲುಲು ನಗರ ಸಭೆಗೆ ಆಯ್ಕೆಯಾಗಿ ಅಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಳು. 2012ರಲ್ಲಿ ಅಮೆರಿಕದ ಕೆಳಮನೆ, 'ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್' ಗಾಗಿ ನಡೆದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದಿಂದ ಚುನಾವಣೆಗೆ ನಿಂತಳು. ಅಲ್ಲಿ ಗೆದ್ದಿದ್ದೂ ದಾಖಲೆ ಅಂತರದಿಂದಲೇ! ಅಲ್ಲಿಗೆ 31ರ ಹರೆಯದ ತುಳಸಿ ಹೊಸ ಇತಿಹಾಸವನ್ನು ಬರೆದಿದ್ದಳು. ಅಮೆರಿಕದ ಕಾಂಗ್ರೆಸ್ ಸೇರಿದ ಮೊತ್ತ ಮೊದಲ ಹಿಂದೂ ಮಹಿಳೆಯಾಗಿದ್ದಳು! ಜೊತೆಗೆ, ಇತಿಹಾಸದಲ್ಲೇ ಪ್ರಪ್ರಥಮವಾಗಿ ಆಯ್ಕೆಯಾದ ಸೇನಾ ಹಿನ್ನೆಲೆಯುಳ್ಳ ಇಬ್ಬರು ಮಹಿಳೆಯರ ಪೈಕಿ ಓರ್ವಳೆಂಬ ಗರಿ. ಈಕೆಯ ದಾಖಲೆಗಳು ಇಲ್ಲಿಗೇ ಮುಗಿಯುವುದಿಲ್ಲ. ಭಗವದ್ಗೀತೆಯನ್ನು ಸಾಕ್ಷಿಯಾಗಿಟ್ಟುಕೊಂಡೇ ಪ್ರಮಾಣ ವಚನ ಸ್ವೀಕಾರ ಮಾಡಿ, ಅಮೆರಿಕದ ಸಂಸತ್ತಿನಲ್ಲಿ ಹೀಗೆ ಮಾಡಿದ ಮೊತ್ತಮೊದಲನೆಯವಳೆಂಬ ಹೆಗ್ಗಳಿಕೆಗೂ ಪಾತ್ರಳಾದಳು!


ಇಲ್ಲಿ ಮತ್ತೊಂದು ಮುಖ್ಯ ವಿಷಯವನ್ನು ಹೇಳಲೇಬೇಕು. ಅಮೆರಿಕದ ಸಂಸತ್ತಿನಲ್ಲಿ ಹಿಂದೂಗಳಿಗೆ ಕೆಂಪು ಹಾಸಿನ ಸ್ವಾಗತ ಸಿಗುವುದಿಲ್ಲ. ಅಲ್ಲಿ ಆದ್ಯತೆ ಏನಿದ್ದರೂ ಕ್ರೈಸ್ತರಿಗೆ. ಭಾರತೀಯ ಸಂಜಾತರಾದ ಬಾಬ್ಬಿ ಜಿಂದಾಲ್ ಮತ್ತು ನಿಕ್ಕಿ ಹ್ಯಾಲೆ ಸಹ ತುಳಸಿಯ ಹಾಗೇ ಸಂಸತ್ತಿಗೆ ಆಯ್ಕೆಯಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಹಿಂದೂವಾಗಿದ್ದ ಬಾಬ್ಬಿ ಹಾಗೂ ಸಿಖ್ಖಳಾಗಿದ್ದ ನಿಕ್ಕಿ ಇಬ್ಬರೂ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದವರು ಎಂಬುದು ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ. ಬಾಬ್ಬಿಯಂತೂ ತನ್ನ ಭಾರತೀಯ ಮೂಲವನ್ನು, ಧರ್ಮದ ಬೇರನ್ನು ಯಾರಾದರೂ ಕೆದಕಿದರೆ ಸಾಕು, ಕಸಿವಿಸಿಗೊಳ್ಳುವ ಮನುಷ್ಯ. ಆದರೆ ತುಳಸಿ ಅದಕ್ಕೆ ಸಂಪೂರ್ಣ ವ್ಯತಿರಿಕ್ತಳು. 'ನಾನು ಸೇನೆಯನ್ನು ಸೇರುವಾಗ, ಯಾವ ಧರ್ಮದವಳು ಎಂದು ಯಾರೂ ಕೇಳಲಿಲ್ಲವಲ್ಲ, ಈಗ ಅದೇಕೆ ಅಳತೆಗೋಲಾಗಬೇಕು? ಎಂದು ನೇರವಾಗಿಯೇ ಕೇಳಿದವಳು. ಆದ್ದರಿಂದಲೇ ಇಂದು ಅಮೆರಿಕದಲ್ಲಿರುವ ಹಿಂದೂಗಳಿಗೆ ಬಾಬ್ಬಿ ಹಾಗೂ ನಿಕ್ಕಿಗಿಂತ ತುಳಸಿಯೇ ಆಪ್ತಳಾಗಿರುವುದು!

ತುಳಸಿಯದ್ದು ನೇರ, ದಿಟ್ಟ ಮಾತು. ಮೋದಿಯವರಿಗೆ ವೀಸಾ ನಿರಾಕರಿಸಿ ಅಮೆರಿಕ ದೊಡ್ಡ ತಪ್ಪು ಮಾಡುತ್ತಿದೆ ಎಂದು ಖಂಡಿಸಿದ್ದಳು ಈಕೆ. ಸಂಸತ್ತಿಗೆ ಹೋದ ಮೇಲೂ ಅಷ್ಟೇ, ಅಮೆರಿಕ ತನ್ನ ಯೋಧರನ್ನು ಕಂಡ ಕಂಡ ದೇಶಗಳಿಗೆ ಯುದ್ಧದ ಸಲುವಾಗಿ ಅಟ್ಟುವುದನ್ನು ಕಟುವಾಗಿ ವಿರೋಧಿಸಿದ್ದಳು. ಮುಸ್ಲಿಂ ಉಗ್ರರು ಹಾಗೂ ಅವರು ಹುಟ್ಟುಹಾಕುತ್ತಿರುವ ಅಶಾಂತಿಗೂ ಈಕೆಯ ವಿರೋಧವಿದೆ. ಕಳೆದ ಸೆಪ್ಟೆಂಬರ್‍ನಲ್ಲಿ ಮೋದಿಯವರು ಮ್ಯಾಡಿಸನ್ ಚೌಕಕ್ಕೆ ಬಂದಿದ್ದರಲ್ಲ, ಆಗ ತುಳಸಿಯನ್ನು ಭೇಟಿಯಾಗಿದ್ದರು. ಭಾರತಕ್ಕೆ ಬರುವಂತೆ ಅಕ್ಕರೆಯ ಆಮಂತ್ರಣವನ್ನೂ ನೀಡಿದ್ದರು. ಆಗ ನಡೆದಿದ್ದ ಮಜಾ ನೋಡಿ, ಸೆಕ್ಯುಲರ್ ಪತ್ರಕರ್ತೆಯರ ಪಟಾಲಂನಲ್ಲಿ ಅಗ್ರ ಸ್ಥಾನದಲ್ಲಿರುವ ಬರ್ಖಾ ದತ್ ತುಳಸಿಯ ಸಂದರ್ಶನಕ್ಕೆಂದು ಓಡೋಡಿ ಹೋಗಿ, ವಿಚಿತ್ರವಾದ ವ್ಯಂಗ್ಯ ಬೆರೆಸಿ 'ಇಡೀ ಸಂಸತ್ತಿನಲ್ಲಿ ನೀವೊಬ್ಬರೇ ಹಿಂದೂ. ಏನನಿಸುತ್ತದೆ ನಿಮಗೆ' ಎಂದು ಕೇಳಿದಾಗ ತುಳಸಿ ಕೊಟ್ಟ ಅಭಿಮಾನದ ಉತ್ತರ ಬರ್ಖಾಳ ಉತ್ಸಾಹವನ್ನು ಜರ್ರನೆ ಇಳಿಸಿತ್ತು!

'ನನ್ನ ಬದುಕಿನ ಸ್ಫೂರ್ತಿ ಹಾಗೂ ಜೀವಾಳವೇ ಭಗವದ್ಗೀತೆ' ಎಂದು ಅಳುಕಿಲ್ಲದೆ ಹೇಳುತ್ತಾಳೆ ತುಳಸಿ. ಧೈರ್ಯ, ಶಾಂತಿ, ನೆಮ್ಮದಿ, ತಾಳ್ಮೆ ಹಾಗೂ ಸಮಾಜ ಸೇವೆಯ ಗುಣಗಳನ್ನು ಬೆಳೆಸಿದ್ದೇ ಗೀತೆ ಎನ್ನಲು ಈಕೆಗೆ ಸಂಕೋಚವೇನಿಲ್ಲ. ಭಕ್ತಿ ಹಾಗೂ ಕರ್ಮ ಯೋಗಗಳು ಮೆಚ್ಚಿನವೇ ಆದರೂ ಸಾಂಖ್ಯಯೋಗದ 23ನೆಯ ಶ್ಲೋಕ ಅತ್ಯಂತ ಪ್ರೀತಿಯದ್ದಂತೆ. ಅದು ಹೀಗಿದೆ:

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ

ಆತ್ಮನನ್ನು ಶಸ್ತ್ರಗಳು ತುಂಡರಿಸಲಾರವು, ಬೆಂಕಿಯು ಸುಡಲಾರದು, ನೀರು ನೆನೆಸಲಾರದು ಹಾಗೂ ಗಾಳಿಯು ಒಣಗಿಸಲಾರದು ಎಂಬುದು ಇದರ ತಾತ್ಪರ್ಯ. ಇದನ್ನು ಅರ್ಥ ಮಾಡಿಕೊಳ್ಳುವ ಪ್ರೌಢಿಮೆ, ಜಪ ಧ್ಯಾನಗಳನ್ನು ತಪ್ಪದೇ ಮಾಡುವ ಅಪ್ಪಟ ಸಸ್ಯಾಹಾರಿ ತುಳಸಿಗಿದೆ. 'ಬದಲಾಯಿಸುವ ಶಕ್ತಿ' ಇದೆಯೆಂದು ಹೇಳಿಕೊಳ್ಳುವವರು ಆಡುವ ಅತಿರೇಕ ಈಕೆಯದ್ದಲ್ಲ. 'ವಿಷ್ಣು ನನ್ನೊಡನೆ ಮಾತನಾಡುತ್ತಾನೆ, ಇದ್ದಕ್ಕಿದ್ದಂತೆ ಪವಾಡವೊಂದು ನಡೆದು ನನ್ನ ಕಷ್ಟಗಳೆಲ್ಲಾ ಪರಿಹಾರವಾದವು' ಎಂಬಂಥ ತಿಕ್ಕಲುತನಗಳು ಈಕೆಯ ವ್ಯಕ್ತಿತ್ವದ ಹಾಸಿನ ಯಾವ ಅಂಚಿನಲ್ಲೂ ಗೋಚರಿಸುವುದಿಲ್ಲ. ಈಗ ವ್ಯಕ್ತಿತ್ವ ವಿಕಸನದ ಪಾಠಗಳಲ್ಲಿ ಹೇಗೆ ಗೀತೆಯನ್ನು ಅಳವಡಿಸುತ್ತಿದ್ದಾರೋ ಹಾಗೇ ತುಳಸಿಯೂ ತನ್ನ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿರುವುದು. ಅದರ ಫಲವೇ ಈ ಯಶಸ್ಸು ಹಾಗೂ ಸಾರ್ಥಕ್ಯ. ಅಂದ ಹಾಗೇ ಮೊನ್ನೆ ನವೆಂಬರ್‍ನಲ್ಲಿ ನಡೆದ ಚುನಾವಣೆಯಲ್ಲಿ ಎರಡನೆಯ ಅವಧಿಗೆ ಮತ್ತೆ ಆಯ್ಕೆಯಾಗಿದ್ದಾಳೆ.

ಮೋದಿಯವರ ಆಹ್ವಾನಕ್ಕೆ ಮನ್ನಣೆಯಿತ್ತು, ಮೊತ್ತ ಮೊದಲ ಬಾರಿ ತನ್ನ ಪ್ರೀತಿಯ ಧರ್ಮದ ಹುಟ್ಟೂರನ್ನು ನೋಡಲು ಕಾತರಿಸಿ ಬಂದಿದ್ದಾಳೆ ಈ ಹೆಣ್ಣುಮಗಳು. ಮಂಥನ ಹಾಗೂ ಮಿಥಿಕ್ ಸೊಸೈಟಿ ಜಂಟಿಯಾಗಿ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲೋಸುಗ ನಾಳೆ ಬೆಂಗಳೂರಿಗೂ ಬರುತ್ತಿದ್ದಾಳೆ. ಸಂವಾದವಿರುವುದು ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿಯ ಸಭಾಂಗಣದಲ್ಲಿ. ಎಲ್ಲರಿಗೂ ಮುಕ್ತ ಆಹ್ವಾನವಿದೆ. ಪ್ರಶ್ನೆಗಳನ್ನು ಬಾಣದಂತೆ ಹೂಡುವ ಅವಕಾಶವೂ. ಒಟ್ಟಿನಲ್ಲಿ, ಹಿಂದೂ ಮನಸ್ಸುಗಳಿಗೆ ಕವಿದಿರುವ ಮಂಕನ್ನು ನೋಡಿ ಈಕೆಗೆ ಭ್ರಮನಿರಸನವಾಗದಿದ್ದರೆ ಸರಿ!

ಈಕೆಯ ಮಾತುಗಳಾದರೂ ಶಂಖದಿಂದ ಬೀಳುವ ತೀರ್ಥವಾದೀತಾ?

Friday 12 December 2014

'ಪವರ್ ಟು ಚೇಂಜ್' - ಏನನ್ನು ಬದಲಾಯಿಸುವ ಹವಣಿಕೆ ಇದು?

ಕೆಲ ದಿನಗಳ ಹಿಂದೆ ಎಲ್ಲ ಪತ್ರಿಕೆಗಳ ಮುಖಪುಟದಲ್ಲೂ ಈ ಜಾಹೀರಾತಿನದ್ದೇ ವೈಭವ! ರಸ್ತೆ ಬದಿಯ ಹೋರ್ಡಿಂಗ್‍ಗಳಲ್ಲೂ ಇದರದ್ದೇ ನರ್ತನ! 'ಪವರ್ ಟು ಚೇಂಜ್' ಎಂಬ ತಲೆಬರಹ ನೋಡಿದೊಡನೆ, ಅದೇನೆಂಬ ಕುತೂಹಲ ಹುಟ್ಟಿಸುವ ಜಾಣತನ. ತಮ್ಮ ಜೀವನವನ್ನು ಬದಲಾಯಿಸಿಕೊಂಡು ನಮ್ಮನ್ನೂ ಬದಲಾಯಿಸಲು ತುದಿಗಾಲಲ್ಲಿ ನಿಂತಿರುವ ಮಂದಸ್ಮಿತ ದೇವದೂತ(ಭೂತ?)ರುಗಳ ದರ್ಶನ. ತಕ್ಷಣವೇ ಗೊತ್ತಾಗಿ ಹೋಯಿತು, ಇದು ಕ್ರೈಸ್ತರ, ಮತಾಂತರದ ಹೊಸ ಅವತಾರ ಎಂದು. ಆದರೆ ಈ ಅವತಾರದಲ್ಲೇನು ವಿಶೇಷ ಎಂಬುದು ಮಾತ್ರ ಅರ್ಥವಾಗಿರಲಿಲ್ಲ. ಈಗ ಅವರಿಗೇ ಫೋನ್ ಮಾಡಿ ಮಾತನಾಡಿದ ಮೇಲೆ ಅರ್ಥವಾಗುತ್ತಿದೆ ಎಲ್ಲಾ. ಆ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಈ ಲೇಖನ. ಜೊತೆಗೇ ಹಲವಾರು ಪ್ರಶ್ನೆಗಳ ಮಂಥನ. ಓದಿದ ಮೇಲೆ ಹೇಳುತ್ತೀರಾ, ನಾವಿಡಬೇಕಾದ ಮುಂದಿನ ಹೆಜ್ಜೆಯನ್ನ?


ಬದಲಾವಣೆಯ ಆಶ್ವಾಸನೆ ನೀಡುವ ಜಾಹೀರಾತನ್ನು ನೋಡಿದೊಡನೆ ಅರ್ಥವಾಗುವುದು ಒಂದೇ - ಅಲ್ಲಿ ಕೊಟ್ಟಿರುವ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಉಚಿತ ಪುಸ್ತಕ ಸಿಗುತ್ತದೆಂಬುದು. ಅದರಂತೆಯೇ ಕರೆ ಮಾಡಿದ್ದಾಯಿತು. ಹೆಸರನ್ನು ನೋಂದಣಿ ಮಾಡಿಸಿ ಉಚಿತ ಪುಸ್ತಕಕ್ಕೆ ಬೇಡಿಕೆಯನ್ನೂ ಇಟ್ಟಿದ್ದಾಯಿತು. ಪುಸ್ತಕ ಸಿಗಲು ಕಡೇ ಪಕ್ಷ ಹದಿನೈದು ದಿನಗಳಾದರೂ ಬೇಕಾಗುತ್ತವೆಂಬುದು ತಿಳಿದು ಬಂದಾಗ ಆಗಿದ್ದು ಭಾರೀ ನಿರಾಶೆ! ‘ಏನು ಮಾಡುವುದು, ಸಮಸ್ಯೆಗೆ ಸಮಾಧಾನ ಈ ತಕ್ಷಣವೇ ಬೇಕಾಗಿದೆಯಲ್ಲ’ ಎಂದು ಪೇಚಾಡಿಕೊಂಡಿದ್ದಕ್ಕೆ, ಫೋನಿನಲ್ಲಿ ಮಾತನಾಡುತ್ತಿದ್ದ ಅವರ ಪ್ರತಿನಿಧಿ ಸಮಸ್ಯೆಯ ಸ್ವರೂಪವನ್ನು ಕೇಳಿದರು. ಕಛೇರಿಯ ಸಮಸ್ಯೆ, ಸಹೋದ್ಯೋಗಿಗಳೊಂದಿಗೆ ಸರಿಯಾಗಿ ವ್ಯವಹರಿಸಲಾಗದ ಸಮಸ್ಯೆ ಎಂದು ಹೇಳಿದ್ದನ್ನು ಯಥಾವತ್ತಾಗಿ ಬರೆದುಕೊಂಡರು! ಮತ್ತೇನಾದರೂ ಸಮಸ್ಯೆಗಳಿವೆಯಾ ಎಂದು ಕಳಕಳಿಯಿಂದ ವಿಚಾರಿಸಿದರು. ಇಲ್ಲವೆಂದು ಹೇಳಿದಾಗ, 'ನಿಮ್ಮ ಸಮಸ್ಯೆ ಏನೇ ಇದ್ದರೂ ನಿವಾರಣೆಯಾಗುತ್ತದೆ, ನಿಮ್ಮ ಜೀವನ ಬದಲಾಗುತ್ತದೆ, ಯೋಚಿಸಬೇಡಿ. ನಿಮಗೆ ಶುಭವಾಗಲಿ' ಎಂದು ಹೇಳಿದರು. ಹಾಗೇ 'ನಮ್ಮ ಸಲಹೆಗಾರರೊಬ್ಬರು ನಿಮ್ಮನ್ನು ಸದ್ಯದಲ್ಲೇ ಸಂಪರ್ಕಿಸುತ್ತಾರೆ’ ಎಂದೂ ತಿಳಿಸಿದರು'! ಅಲ್ಲಿಗೆ ಒಂದು ಹಂತ ಮುಗಿದಿತ್ತು.

ಇನ್ನು ಅವರು ಸಂಪರ್ಕಿಸುವುದು ಯಾವ ಕಾಲಕ್ಕೋ, ಕಾದು ನೋಡಿದರಾಯಿತು ಎಂದುಕೊಂಡರೆ, ಅರ್ಧ ಘಂಟೆಯೊಳಗೇ ಸಲಹಾಕಾರರ ಕರೆ. ಆತ್ಮೀಯವೆನಿಸುವ, ವಿನಮ್ರ ದನಿ. ತಮ್ಮ ಹೆಸರನ್ನು ಹೇಳಿ ಪರಿಚಯಿಸಿಕೊಂಡು ವಿಷಯಪ್ರವೇಶ ಮಾಡಿಯೇಬಿಟ್ಟರು.  'ಮೊದಲೇ ಹೇಳಿಬಿಡುತ್ತೇನೆ. ನನ್ನ ಸಮಸ್ಯೆ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ನಿಮ್ಮ ಉತ್ತರದಲ್ಲೂ ಧರ್ಮದ ಲೇಪವಿರಕೂಡದು' ಎಂದು ಖಡಕ್ಕಾಗಿ ಹೇಳಿದೊಡನೆಯೇ ಎಚ್ಚೆತ್ತರು ಆತ. 'ಛೆ ಖಂಡಿತಾ ಇಲ್ಲ. ಧರ್ಮ ಹಾಗೂ ದೇವರು ಎರಡೂ ಒಂದೇ ಎಂದು ನೀವು ತಪ್ಪು ತಿಳಿದಿದ್ದೀರ. ಧರ್ಮಕ್ಕೂ ದೇವರಿಗೂ ಇರುವ ವ್ಯತ್ಯಾಸ ನಿಮಗೆ ತಿಳಿದೇ ಇಲ್ಲ. ನಾನು ಧಾರ್ಮಿಕ ವ್ಯಕ್ತಿಯಲ್ಲ, ಆದರೆ ದೇವರನ್ನು ನಂಬುತ್ತೇನೆ. ದೇವರನ್ನು ನೋಡುತ್ತಾ ಅವನೊಂದಿಗೆ ಮಾತನಾಡುತ್ತೇನೆ. ಈಗ ನಿಮಗೆ ಅದರಲ್ಲಿ ಆಸಕ್ತಿ ಇಲ್ಲವಾದ್ದರಿಂದ ಮೊದಲು ನಿಮ್ಮ ಕಛೇರಿಯ ಸಮಸ್ಯೆಯನ್ನು ಪರಿಹರಿಸೋಣ. ನಿಮಗೆ ದೇವರ ವಿಷಯ ಮಾತನಾಡಬೇಕು ಎನಿಸುವವರೆಗೂ ದೇವರಾಣೆಗೂ ನಾನು ಅದನ್ನು ತೆಗೆಯುವುದಿಲ್ಲ' ಎಂದರು! ಆಮೇಲೆ ಕಛೇರಿಯ ಸಮಸ್ಯೆಯ ನೆಪದಲ್ಲಿ ಅವರೊಡನೆ ಸ್ವಲ್ಪ ಹೊತ್ತು ಸಂಭಾಷಿಸಿದ್ದಾಯಿತು. ಕೊನೆಯಲ್ಲಿ ಅವರು 'ನೀವು ಯಾವುದೇ ಸಂಕಷ್ಟಕ್ಕೆ ಸಿಲುಕಿದರೂ, ಯಾವ ಹೊತ್ತಿನಲ್ಲಾದರೂ ನನಗೆ ಕರೆ ಮಾಡಲು ಹಿಂದೆ ಮುಂದೆ ನೋಡಬೇಡಿ. ನಾನೊಂದು ಪಕ್ಷ ಕರೆ ಸ್ವೀಕರಿಸದಿದ್ದರೂ ನಂತರ ನಿಮಗೆ ನಾನೇ ಕರೆ ಮಾಡುತ್ತೇನೆ. ನಿಮ್ಮ ಕಷ್ಟಗಳನ್ನು ಪರಿಹರಿಸಲು ನಾನು ಸದಾ ಸಿದ್ಧ. ದೇವರು ನಿಮಗೆ ಒಳ್ಳೆಯದು ಮಾಡಲಿ' ಎಂದು ಹೇಳಿ ಮಾತು ಮುಗಿಸಿದರು.


ಹೌದು. ಮೊದಲ ಸುತ್ತಿನ ಮಾತುಗಳೇನೋ ಮುಗಿದಿವೆ, ಆದರೆ ಆಗಿನಿಂದ ತಲೆಯ ತುಂಬಾ ಅಶಾಂತಿಯೆಂಬ ಜೇನು ಹುಳುಗಳು ಗುಂಯ್‍ಗುಡುತ್ತಿವೆ. ಮನಸ್ಸನ್ನು ಕಚ್ಚಿ ಗಾಯಗೊಳಿಸುತ್ತಿವೆ. ಅವರಿಗೆ ಕರೆ ಮಾಡುವ ಮುನ್ನವೇ ಇದು ಮತಾಂತರದ ಹುನ್ನಾರ ಎಂಬುದು ಗೊತ್ತಿತ್ತು. ಅವರ ವೆಬ್‍ಸೈಟನ್ನು ನೋಡಿ, ಅದರಲ್ಲಿರುವವರು ಹೇಳುವ, ತಮ್ಮ ಜೀವನದಲ್ಲಿ ಏನುಕ್ರಿಸ್ತನಿಂದಾದ ಪವಾಡಗಳ ಕಥೆಗಳನ್ನು ಕೇಳಿದಾಗಲೇ ಎಲ್ಲವೂ ಸ್ಪಷ್ಟವಾಗಿತ್ತು. ಆದರೆ ನಿಜವಾಗಿಯೂ ದಿಗಿಲಾಗಿದ್ದು ಅವರ ನಂಬರಿಗೆ ಕರೆ ಮಾಡಿ ಮಾತನಾಡಿದಾಗ. ಒಂದಿಡೀ ಟೋಲ್‍ಫ್ರೀ ವ್ಯವಸ್ಥೆಯನ್ನು ಎಷ್ಟು ಅಚ್ಚುಕಟ್ಟಾಗಿ ಅಣಿ ಮಾಡಿಕೊಂಡಿದ್ದಾರೆ ಗೊತ್ತೇ? ಏರ್‍ಟೆಲ್ ಅಥವಾ ಬೇರೆ ಕಾಲ್ ಸೆಂಟರಿಗೆ ಕರೆ ಮಾಡಿದಾಗ ಕೇಳುತ್ತದಲ್ಲ ಗೌಜು ಗದ್ದಲ, ಇಲ್ಲೂ ಅದೇ ವಾತಾವರಣ. ನಮ್ಮ ಹೆಸರು, ವಿಳಾಸಗಳನ್ನೆಲ್ಲ ಶೇಖರಿಸಿಡುವ ಡೇಟಾಬೇಸ್! ನಮ್ಮ ಸಮಸ್ಯೆಗಳನ್ನು ಅಲ್ಲೇ ಬರೆದುಕೊಂಡು ತತ್‍ಕ್ಷಣವೇ ಆಪ್ತ ಸಲಹೆಗಾರರಿಗೆ ಮುಟ್ಟಿಸುವ ಚುರುಕು ವ್ಯವಸ್ಥೆ. ನಿಂತನಿಲುವಿನಲ್ಲೇ ಸ್ಪಂದಿಸುವ ಆಪ್ತ ಸಲಹೆಗಾರರು. ಜೊತೆಗೆ, 'ನಿಮ್ಮ ಎಲ್ಲ ಕಷ್ಟಗಳಿಗೂ ನಾನಿದ್ದೇನೆ ಬಿಡಿ, ಚಿಂತಿಸಬೇಡಿ' ಎಂದು ಫೋನಿನಲ್ಲೇ ಕೈಹಿಡಿದು ಹೇಳಿಬಿಡುವ ಅವರ ಅಕ್ಕರೆಯ ಧಾಟಿ! ಇದಕ್ಕಿಂತ ಏನು ಬೇಕು ಅಧೀರವಾದ ಮನಸ್ಸು ಕರಗಲು? ದುಃಖವನ್ನೆಲ್ಲ ಅವರಲ್ಲಿ ತೋಡಿಕೊಂಡು ನೀರಾಗಲು?

ಇಲ್ಲಿ ಕೇಳಿ, ಈಗ ಬಂದಿದೆಯಲ್ಲ, ಇದು ಪ್ರಚಂಡ ರೂಪ. ಇಲ್ಲಿಯವರೆಗೂ ಬರೀ ಅನಕ್ಷರಸ್ಥರನ್ನು, ಕಡು ಬಡವರನ್ನು, ಹಿಂದುಳಿದವರನ್ನು ವ್ಯವಸ್ಥಿತವಾಗಿ ಮತಾಂತರಗೊಳಿಸುತ್ತಿದ್ದ ಕ್ರೈಸ್ತ ಮಿಷನರಿಗಳು ಈಗ ಗುರಿಯಾಗಿಸಿಕೊಂಡಿರುವುದು ಹಿಂದೂ ಸಮುದಾಯದ ಬುದ್ಧಿವಂತ, ಪ್ರತಿಭಾವಂತ ಮಧ್ಯಮ ವರ್ಗವನ್ನು! ಹಿಂದುಳಿದವರಲ್ಲಿ ಇವರು ಬದಲಾಯಿಸುವುದು ಬರೀ ಧರ್ಮವನ್ನಾದರೆ ನಮ್ಮ ವಿಷಯದಲ್ಲಿ ಬದುಕನ್ನೇ ಬದಲಾಯಿಸಲು ಹೊರಟಿದ್ದಾರೆ. ಅವಿದ್ಯಾವಂತರಿಗೇನೋ ಧರ್ಮದ ಹೆಸರಿನ ಮಖ್ಮಲ್ ಟೊಪಿ ಹಾಕಬಹುದು. ವಿದ್ಯಾವಂತರಿಗೆ ಹಾಗಲ್ಲವಲ್ಲ, ಆದ್ದರಿಂದ ಅವರಿಗೆ ದೇವರ ಹೆಸರಿನಲ್ಲಿ ಶಾಲು ಹೊದೆಸಿ ಸನ್ಮಾನ ಮಾಡುವ ಹುನ್ನಾರ. ಧರ್ಮವೇ ಬೇರೆ ದೇವರೇ ಬೇರೆ ಎಂಬ ಹೊಸ ವ್ಯಾಖ್ಯಾನದೊಂದಿಗೆ ನಮ್ಮ ಚಿಂತನೆ, ರೀತಿ, ಜೀವನಕ್ರಮಗಳ ಮೇಲೆ ಹಿಡಿತಹೊಂದಲು ಇವರು ಆಪ್ತಮಿತ್ರರಾಗಿ, ಆಪ್ತರಕ್ಷಕರಾಗಿ ಬರುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಸಲಹೆಗಾರರಾಗಿ ಶಾಶ್ವತವಾಗಿ ನಮ್ಮ ಬದುಕಿನಲ್ಲಿ, ಮನಸಿನಲ್ಲಿ ನೆಲೆಯೂರುವ ಪ್ರಯತ್ನ ಇವರದ್ದು. ಇವರು ತಮ್ಮ ವೆಬ್‍ಸೈಟಿನಲ್ಲಿ ಹಾಕಿಕೊಂಡಿರುವ ವಿಡಿಯೋಗಳನ್ನು ದಯವಿಟ್ಟು ಒಮ್ಮೆ ನೋಡಿ, ಕೇಳಿ. ಅದರಲ್ಲಿ, ಬ್ರಾಹ್ಮಣನಿದ್ದಾನೆ, ಗೌಡತಿಯಿದ್ದಾಳೆ, ತಮಿಳನಿದ್ದಾನೆ, ಸಂಗೀತಗಾರ, ಹಾಸ್ಯನಟ, ಮಾಜಿ ಪೋಲೀಸ್ ಅಧಿಕಾರಿ ಎಲ್ಲರೂ ಇದ್ದಾರೆ. ಸಮಾಜದಲ್ಲಿ ಉನ್ನತ ಸ್ತರದಲ್ಲಿರುವವರು ಆ ವಿಡಿಯೋದಲ್ಲಿ ಹೀರೋ ಹೀರೋಯಿನ್‍ಗಳಂತೆ ಕುಳಿತು ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಾರೆ.

ಎಂಥವು ಎಂದುಕೊಂಡಿರಿ? ಅವೇ ಹಳಸಲು ಕಥೆಗಳು. ಭೂತ ಪ್ರೇತಗಳ ಕಾಟದ ಕಥೆ ಒಬ್ಬಾಕೆಯದ್ದಾದರೆ, ಮತ್ತೊಬ್ಬನದು ಅತೀವ ಮಡಿವಂತಿಕೆಯ ಕುಟುಂಬದ್ದು. ಒಬ್ಬರದ್ದು ಬಡತನ, ಆತ್ಮಹತ್ಯೆಗಳ ವಿಷಯವಾದರೆ ಮತ್ತೊಬ್ಬರದು ಮಾದಕ ವ್ಯಸನಕ್ಕೆ ಅಂಟಿಕೊಂಡ ಕಥೆ. ಇದರಲ್ಲಿ ಹೊಸದೇನಿದೆ? ಏನೂ ಇಲ್ಲ. ಒಳಗೆ ಅದೇ ತಂಗಳು ಚಿತ್ರಾನ್ನ. ಹೊರಗಿನ ಪೇಪರ್ ಮಾತ್ರ ರಂಗು ರಂಗಾಗಿ ನೋಡಲು ಚೆನ್ನ! ಕೊನೆಯಲ್ಲಿ ಎಲ್ಲರೂ ಹೇಳುವುದು ಒಂದೇ. ಏಸುವನ್ನು ಪೂಜಿಸಲು ಶುರುಮಾಡಿದಾಗಿನಿಂದ ಬದುಕಿನಲ್ಲಿ ಖುಷಿಯೋ ಖುಷಿ. ಎಲ್ಲೆಲ್ಲೂ ಪರಮಾನಂದ! ಅವರ ಕೃತಕ ಭಾವ ಭಂಗಿಗಳನ್ನು, ವಿಷಯವನ್ನು ವೈಭವೀಕರಿಸಿ ಹೇಳುವ ರೀತಿಯನ್ನು ನೋಡಿ ವಿಪರೀತ ನಗು ಬರುತ್ತದೆ. ಬದುಕಿನ ಕಷ್ಟದ ಘಳಿಗೆಗಳನ್ನು ನಿಭಾಯಿಸಲು ಬಾರದ ಅಳ್ಳೆದೆಯವರು ಹೆಮ್ಮೆಯಿಂದ ಹೇಳಿಕೊಳ್ಳುವ ಇದು ಖಂಡಿತಾ ಸಾಧನೆ ಅಲ್ಲವೇ ಅಲ್ಲ. ಆದರೆ ದಿಗಿಲೂ ಆಗುತ್ತದೆ. ಇಂಥವೇ ಪರಿಸ್ಥಿತಿಗಳನ್ನು ಎದುರಿಸುತ್ತಿರುವ, ದುರ್ಬಲ ಮನಸ್ಸಿನ ಹಲವರು ನಮ್ಮ-ನಿಮ್ಮ ನಡುವೆಯೇ ಇದ್ದಾರೆ. ಅವರೆಲ್ಲ ಇದೇ ಹಾದಿಯನ್ನು ಹಿಡಿದರೆ? ದೇವರನ್ನು ಮಾತ್ರ ಬದಲಾಯಿಸುವುದು ತಾನೆ, ಧರ್ಮ ಹೇಗೂ ಇದೇ ಆಗಿರುತ್ತದಲ್ಲ ಎಂಬ ವಿಷವ್ಯೂಹಕ್ಕೆ ಸಿಲುಕಿದರೆ? ಉಹೂಂ, ಹೊರಬರಲಾಗುವುದಿಲ್ಲ. ಮೊದಲು ದೇವರನ್ನು ನುಂಗುವ ರಕ್ಕಸ ಕೊನೆಗೆ ಧರ್ಮವನ್ನೂ ತಿಂದು ತೇಗುತ್ತಾನೆ!

ಇದನ್ನು ಎಲ್ಲರೂ ನೋಡುತ್ತಿದ್ದಾರೆ. ಮಾಧ್ಯಮದವರು, ರಾಜಕಾರಣಿಗಳು, ಸೆಕ್ಯುಲರ್ ಮಂದಿ ಎಲ್ಲರೂ. ಯಾರೂ ತುಟಿಪಿಟಕ್ಕೆನ್ನುತ್ತಿಲ್ಲ. ಅವರ ಪ್ರಕಾರ ಇದು ಮತಾಂತರವಲ್ಲ. ಜನ ತಮ್ಮ ಇಚ್ಛೆಗನುಗುಣವಾಗಿ ಬದಲಾಗುವುದು ಮತಾಂತರ ಹೇಗಾದೀತು? ಅಲ್ಲವೇ ಮತ್ತೆ? ಇವೆಲ್ಲಾ ನಗಣ್ಯ. ಮೊನ್ನೆ ಆಗ್ರಾದಲ್ಲಿ 200 ಮುಸ್ಲಿಮರನ್ನು ಹಿಂದೂಗಳಾಗಿ ಮರುಮತಾಂತರಗೊಳಿಸಿದರಲ್ಲಾ ಅದು, ಅದು ಘೋರ ಅಪರಾಧ! ಮುಸ್ಲಿಮರಾಗಲಿ, ಕ್ರೈಸ್ತರಾಗಲಿ, ವಾಪಸ್ ಹಿಂದೂ ಧರ್ಮಕ್ಕೆ ಮರಳುವ ಹಾಗಿಲ್ಲ. ಸ್ವಇಚ್ಛೆಯಿಂದ ಮರಳಿದರೂ ಅದು ಬಲವಂತಕ್ಕೆ, ಸಾಮೂಹಿಕ ಅತ್ಯಾಚಾರಕ್ಕೆ ಸಮಾನ. ಆದರಿಂದಲೇ ಆ ಘಟನೆ ನಡೆಯುತ್ತಿದ್ದಂತೆಯೇ ಸಮಸ್ತ ಸೆಕ್ಯುಲರ್ ಮಂದಿಯೂ ಕುಂಡೆ ಸುಟ್ಟ ಬೆಕ್ಕಿನಂತೆ ಮಿಯಾಂವ್‍ಗುಡಲು ಶುರು ಮಾಡಿದ್ದು. ಸದನದಲ್ಲಿ ಕೋಲಾಹಲ, ಟಿವಿ ಚರ್ಚೆಗಳಲ್ಲಿ ಬೆಂಕಿಯ ಮಳೆ, ಎಲ್ಲೆಲ್ಲೂ ಕೋಮುವಾದದ ಕಾಡ್ಗಿಚ್ಚು! ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸೋಣ ಎಂದು ವೆಂಕಯ್ಯನಾಯ್ಡುರವರು ಹೇಳುತ್ತಿದ್ದಂತೆಯೇ ಎಲ್ಲರೂ ಸಿಟ್ಟಿನಲ್ಲಿ ದಾಪುಗಾಲು ಹಾಕಿಕೊಂಡು ಸದನದಿಂದ ಪೇರಿ!

ಅವರದ್ದು ಹಾಳಾಗಲಿ, ಈಗ ನಾವೇನು ಮಾಡಬೇಕು ಹೇಳಿ? ಒಂದೆಡೆ ರಕ್ತ ಪಿಪಾಸು ಮುಸ್ಲಿಂ ಭಯೋತ್ಪಾದಕರ ಹಾವಳಿಯಾದರೆ ಮತ್ತೊಂದೆಡೆ ನಯಗಾರಿಕೆಯಿಂದಲೇ ಬುಡಕ್ಕೆ ಕೊಡಲಿ ಹಾಕುವ ಕ್ರೈಸ್ತರು. ಇವರುಗಳು ಸಾಲದು ಎಂಬಂತೆ ಹಿಂದೂಗಳಲ್ಲೇ ಸೆಕ್ಯುಲರ್‍ಗಳು, ಬುದ್ಧಿಜೀವಿಗಳು ಹಾಗೂ ನಾಸ್ತಿಕರು. ಇನ್ನುಳಿದವರು ಯಾರು? ಕೋಮುವಾದಿಗಳ ಹಣೆಪಟ್ಟಿ ಹೊತ್ತ ಅಭಾಗ್ಯರು.

ಹಿಂದೂಗಳಾಗಿಯೇ ಇರಿ, ಆದರೆ ಏಸುವನ್ನು ಪ್ರೀತಿಸಿ ಎಂಬ ಈ 'ದೇವರನ್ನು ಬದಲಾಯಿಸುವ’ ಹೊಸ ತಂತ್ರಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು? ಈಗಾಗಲೇ ತಲೆಯ ಮೇಲಿರುವ ವಿಶಾಲಹೃದಯಿಗಳೆಂಬ ಕಿರೀಟವನ್ನು ಮತ್ತೊಮ್ಮೆ ಸರಿಮಾಡಿಕೊಂಡು ಕುಳಿತುಬಿಡಬೇಕಾ? ಹೀಗಾದರೆ ಹೇಗೆ ಉಳಿದೀತು ನಮ್ಮ ಧರ್ಮ, ದೇವರು? ನಾವಾಯಿತು ನಮ್ಮ ಕುಟುಂಬವಾಯಿತು ಎಂಬ ಧೋರಣೆಯನ್ನು ಬಿಡದಿದ್ದರೆ ನಮ್ಮತನವನ್ನು ಜತನ ಮಾಡುವವರು ಯಾರು? ನಮಗೇಕೆ ಈ ಉಸಾಬರಿ ಎಂದು ಈಗ ದೂರ ಉಳಿದರೆ ನಾಳೆ ಮನೆಯೊಳಗೆ ಬರದಿರುತ್ತಾಳೆಯೇ ಈ ಮಾರಿ? 'ಏಳಿ ಎದ್ದೇಳಿ' ಎಂದು ಸ್ವಾಮಿ ವಿವೇಕಾನಂದರು ಸ್ವಾಭಿಮಾನವನ್ನು ಬಡಿದೆಬ್ಬಿಸಲು ಅಂದು ಆಡಿದ್ದ ಮಾತುಗಳು ಇಂದಿಗೂ ಪ್ರಸ್ತುತ ಎನಿಸುತ್ತಿಲ್ಲವೇ?

ವ್ಹಾರೆವ್ಹಾ ಏಸುಕ್ರಿಸ್ತ, ಒಟ್ಟಿನಲ್ಲಿ ನೀನೇ ಪುಣ್ಯವಂತ! 



Monday 8 December 2014

ಹೇ ರಾಮ, ಏನು ಅಯೋಧ್ಯೆಯ ಮಂದಿರದ ಮರ್ಮ?

ಇಂದಿಗೆ ಸರಿಯಾಗಿ ಇಪ್ಪತ್ತೆರಡು ವರ್ಷಗಳು ಸಂದಿವೆ ಆ ಘಟನೆ ನಡೆದು. 1992ರ ಡಿಸೆಂಬರ್ ಆರನೆಯ ತಾರೀಖು ಮಧ್ಯಾಹ್ನ 12.35ಕ್ಕೆ ಬಾಬರಿ ಮಸೀದಿಯ ಮೊದಲ ಗುಮ್ಮಟ ಧರೆಗುರುಳಿತ್ತು. ಇನ್ನೆರಡೇ ಘಂಟೆಗಳಲ್ಲಿ ಉಳಿದ ಎರಡು ಗುಮ್ಮಟಗಳೂ ನೆಲಸಮವಾಗಿದ್ದವು. ನಂತರ ನಡೆದ ಗಲಭೆಗಳಲ್ಲಿ ಸಂಭವಿಸಿದ ಸಾವು ನೋವುಗಳಿಗೆ ಲೆಕ್ಕವಿಲ್ಲ ಬಿಡಿ. ಆಗಿನಿಂದ ಪ್ರತಿ ವರ್ಷ ಡಿಸೆಂಬರ್ ಆರು ಬಂತೆಂದರೆ ಒಂದು ರೀತಿಯ ಬಿಗುವಿನ ವಾತಾವರಣ. ಹಿಂದೂಗಳೆಲ್ಲ ಸೇರಿ ಏನೋ ಮಾಡಬಾರದ್ದನ್ನು ಮಾಡಿಬಿಟ್ಟರು ಎಂಬ ಮುಸ್ಲಿಮರ ರೋದನ. ಈ ಬಾರಿಯೂ ಹಾಗೇ ಆಗುತ್ತಿತ್ತೇನೋ, 92 ವರ್ಷದ ಅಜ್ಜ ಮೊಹಮ್ಮದ್ ಹಾಶಿಮ್ ಅನ್ಸಾರಿ ಬಾಯಿಬಿಡದಿದ್ದರೆ! ಈ ಹಾಶಿಮ್ ಅನ್ಸಾರಿ ಯಾರು ಗೊತ್ತೇ? ಬಾಬರಿ ಮಸೀದಿಯ ಸಲುವಾಗಿ ನ್ಯಾಯಾಲಯದ ಕಟಕಟೆಯೇರಿದ ಹಿರಿಯ ತಲೆಗಳಲ್ಲಿ ಒಬ್ಬರು! ಇಷ್ಟೂ ವರ್ಷ ನ್ಯಾಯ ಬೇಕು ನ್ಯಾಯ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದ ಈತ ಈಗ ಇದ್ದಕ್ಕಿದ್ದಂತೆ ಮನಸ್ಸು ಬದಲಾಯಿಸಿಬಿಟ್ಟಿದ್ದಾರೆ. 'ಇದು ಬರೀ ರಾಜಕೀಯದಾಟ. 'ರಾಮ್ ಲಲ್ಲಾ' ನನ್ನು ಹಿಂದೂಗಳೇ ಇಟ್ಟುಕೊಳ್ಳಲಿ, ವಿಷಯವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳೋಣ, ಮೋದಿಯವರು ಬಂದರೆ ಮಾತುಕತೆಗೆ ಸಿದ್ಧ' ಎಂದು ಹೇಳಿದ್ದಾರೆ. ನಾವು ಆಶ್ಚರ್ಯ ಪಡುವುದು ಹಾಗಿರಲಿ, ಅವರ ಇಡೀ ಮುಸ್ಲಿಂ ಸಮುದಾಯವೇ ಗಾಬರಿಯಾಗಿಬಿಟ್ಟಿದೆ! ಅವರು ಪ್ರಕರಣ ವಾಪಸ್ ಪಡೆಯುತ್ತಿರುವುದು ರಾಜಕೀಯ ಒತ್ತಡಕ್ಕೆ ಸಿಲುಕಿ ಎಂಬುದು ಕೆಲವರ ಸಮಜಾಯಿಷಿಯಾದರೆ, ಅವರೊಬ್ಬರು ಹಿಂತೆಗೆಯುವುದರಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ, ನಾವು ಯುದ್ಧ ಮಾಡಿಯೇ ಸಿದ್ಧ ಎಂಬುದು ಉಳಿದವರ ದೃಢ ಸಂಕಲ್ಪ. ಭೇಷ್ ಎನ್ನಲೇಬೇಕು ಇವರ ಹಟಕ್ಕೆ! ಇಂಥ ಆರೋಗ್ಯಕರ ಬದಲಾವಣೆಯನ್ನು ಬಯಸುವ ಮನಸ್ಸುಗಳಿಗೆ ಉತ್ತೇಜನ ದೊರೆತು, ಅವರ ಸಂಖ್ಯೆ ಹೆಚ್ಚಿಬಿಟ್ಟರೇನು ಗತಿ? ಅಲ್ಲೆಲ್ಲೋ ಸ್ವರ್ಗದಲ್ಲಿ(?) ಕುಳಿತು ಬಗ್ಗಿ ನೋಡುತ್ತಿರುವ ಬಾಬರನ ಆತ್ಮ ಕನಲಿಬಿಡುವುದಿಲ್ಲವೇ? ಹೋಗಲಿ, ಅಂಥ ಘನಂದಾರಿ ಕೆಲಸವನ್ನೇನು ಮಾಡಿದ್ದಾನೆ ಬಾಬರ್? ನೋಡೋಣ ಬನ್ನಿ.


ಇಸವಿ 1525ರಲ್ಲಿ ಅಫಘಾನಿಸ್ತಾನದ ಕಾಬುಲ್‍ನಿಂದ ಭಾರತಕ್ಕೆ ಅಡಿಯಿಟ್ಟ ಮೊಘಲರ ಮೊತ್ತ ಮೊದಲ ಆಕ್ರಮಣಕಾರನೇ ಬಾಬರ್. ಪಾಣಿಪತ್‍ನ ಮೊದಲ ಯುದ್ಧದಲ್ಲಿ ಇಬ್ರಾಹಿಂ ಲೋಧಿಯನ್ನು ಸೋಲಿಸುತ್ತಿದ್ದಂತೆಯೇ ಅವನಿಗೆ ಆನೆ ಬಲ ಬಂದಿತು. ಉತ್ತರ ಭಾರತದ ಹಲವು ರಾಜರುಗಳನ್ನು ಸೋಲಿಸಿದ ಅವನು ಮಾಡಿದ ಮೊದಲ ಕೆಲಸ ಇಸ್ಲಾಂ ಧರ್ಮವನ್ನು ಹೇರತೊಡಗಿದ್ದು. ಅದೂ ಹೇಗೆ? ಹಿಂದೂಗಳ ಶ್ರದ್ಧಾ ಕೇಂದ್ರವಾಗಿದ್ದ ದೇವಾಲಯಗಳನ್ನು ಒಂದೊಂದಾಗಿ ನೆಲಸಮ ಮಾಡಿ ಅಲ್ಲಿ ಮಸೀದಿಗಳನ್ನು ಕಟ್ಟಿಸಿ! ಅದಾದ ನಂತರ ಹಿಂದೂಗಳ ಮತಾಂತರ! ಹೀಗೆ ಸಾಗಿದ ಅವನ ಕಣ್ಣಿಗೆ ಬಿದ್ದಿದ್ದು ಆಯೋಧ್ಯೆಯ ಶ್ರೀರಾಮ ಮಂದಿರ. ಸರಯೂ ನದಿ ತಟದಲ್ಲಿರುವ ಅಯೋಧ್ಯೆ ರಾಮನ ಜನ್ಮಭೂಮಿ ಎಂಬುದು, ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲೊಂದು ಎಂಬುದು ಅವನಿಗೆ ಗೊತ್ತಿತ್ತು. ಆದ್ದರಿಂದಲೇ 1528ರಲ್ಲಿ ತನ್ನ ಸೇನಾಧಿಕಾರಿ 'ಮೀರ್ ಬಾಕಿ'ಯನ್ನು ಕಳಿಸಿ ಮಂದಿರವನ್ನು ಕೆಡವಿಸಿದ. ಅದೇ ಜಾಗದಲ್ಲಿ ಮಸೀದಿಯನ್ನೂ ಕಟ್ಟಿಸಿದ. ಇಂದಿಗೂ ಒಂದು ವ್ರಣವಾಗಿ, ಕೆರೆದಷ್ಟೂ ಉಲ್ಪಣಿಸಿ ಕಾಡುತ್ತಿರುವ ಆ ಮಸೀದಿಯೇ ಬಾಬರಿ ಮಸೀದಿ!

ಒಂದು ಮಂದಿರವನ್ನು ಕೆಡವುವುದೆಂದರೆ ಬರೀ ಗೋಡೆಗಳನ್ನು, ಶಿಖರಗಳನ್ನು ಉರುಳಿಸುವುದಲ್ಲ. ನಮ್ಮ ಧರ್ಮವನ್ನು ಹೀಗಳೆಯುವುದು, ನಮ್ಮ ಇರವನ್ನೇ ಅಲ್ಲಗಳೆಯುವುದು ಹಾಗೂ ನಮ್ಮ ಶ್ರದ್ಧೆ, ನಂಬಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂಬುದನ್ನು ಸಾರಿ ಹೇಳುವುದು. ದೇವರ ವಿಗ್ರಹಗಳಿಗೆ ಬೀಳುವ ಏಟು ನಮ್ಮ ಆಂತರ್ಯವನ್ನು ನಡುಗಿಸುವುದಿಲ್ಲವೇ? ಮನಸ್ಸುಗಳು ಅನಾಥವಾಗಿ ನೆಲೆಯಿಲ್ಲದೆ ಅಲೆದಾಡುವುದಿಲ್ಲವೇ? ಎಂಥ ದಾರ್ಷ್ಟ್ಯ, ಅದೇನು ದುರುಳತನ? ಧರ್ಮವನ್ನು ಹೀಗೆ ಪ್ರಚಾರ ಮಾಡಿ ಎಂದು ಯಾವ ದೇವರು ಹೇಳುತ್ತಾನೆ? ಮಸೀದಿ ಕಟ್ಟಲೇ ಬೇಕೆಂದಿದ್ದರೆ ಖಾಲಿ ಜಾಗದಲ್ಲಿ ಕಟ್ಟಬಹುದಿತ್ತಲ್ಲವೇ? ಮಂದಿರವನ್ನು ಕೆಡವಿಯೇ ಕಟ್ಟುವ ಹಟ ಏಕೆ? ಇಂಥ ಪೆಟ್ಟು ತಿಂದಮೇಲೆ ಹಿಂದೂಗಳು ಹೇಗೆ ಸುಮ್ಮನಿದ್ದಾರು? ಮರಳಿ ರಾಮ ಮಂದಿರವನ್ನು ಕಟ್ಟುವ ಪ್ರಯತ್ನಕ್ಕೆ ಕೈ ಹಾಕಿದರು. ನೀವು ನಂಬಲಿಕ್ಕಿಲ್ಲ, ಇದರ ಸಲುವಾಗಿ 1528ರಿಂದ ಹಿಡಿದು 1934ರ ವರೆಗೂ 76 ಯುದ್ಧಗಳು ನಡೆದಿವೆ!

1885ರಷ್ಟು ಹಿಂದೆಯೇ ಮಸೀದಿಯ ಹೊರ ಆವರಣದಲ್ಲಿ ರಾಮನ ಹೆಸರಿನಲ್ಲಿ ಒಂದು ಸಣ್ಣ ಕಟ್ಟೆಯೊಂದನ್ನು(ಹಿಂದಿಯಲ್ಲಿ ಚಬೂತರಾ ಎಂದು ಕರೆಯುತ್ತಾರೆ) ಕಟ್ಟಿಕೊಂಡ ಹಿಂದೂಗಳು ಅಲ್ಲಿ ಪೂಜೆ, ಆರತಿಗಳನ್ನು ಮಾಡುತ್ತಿದ್ದರು. ಮಹಂತ ರಘುವರ ದಾಸರು ಅಲ್ಲಿ ದೇವಸ್ಥಾನ ಕಟ್ಟುವ ಕೋರಿಕೆಯನ್ನು ಬ್ರಿಟಿಷರ ಮುಂದಿಟ್ಟಾಗ ಅದನ್ನು ನಿರಾಕರಿಸಲಾಯಿತು. ಕಾರಣ ಮಂದಿರವನ್ನು ಧ್ವಂಸಗೊಳಿಸಿ ಅದಾಗಲೇ 350 ವರ್ಷಗಳಾಗಿದ್ದವಲ್ಲ! ಆದರೆ 1934ರಲ್ಲಿ ಮುಸ್ಲಿಮರು ಎಗ್ಗಿಲ್ಲದೇ ನಡೆಸಿದ ಗೋಹತ್ಯೆ ಹಿಂದೂಗಳನ್ನು ಕೆರಳಿಸಿಬಿಟ್ಟಿತು. ಸೀದಾ ಬಾಬರಿ ಮಸೀದಿಯನ್ನು ಹತ್ತಿ ಮೂರೂ ಗುಮ್ಮಟಗಳನ್ನು ಮೊತ್ತ ಮೊದಲ ಸಲ ಧ್ವಂಸ ಮಾಡಿದರು! ಅದನ್ನು ರಿಪೇರಿ ಮಾಡಿಸಿದ ಬ್ರಿಟಿಷ್ ಸರ್ಕಾರ ಖರ್ಚನ್ನು ಕರದ ರೂಪದಲ್ಲಿ ವಸೂಲಿ ಮಾಡಿದ್ದು ಹಿಂದೂಗಳಿಂದಲೇ. ಆದರೆ ಆ ಘಟನೆಯ ನಂತರ ಮುಸ್ಲಿಮರು ರಾಮಜನ್ಮ ಭೂಮಿಗೆ ಕಾಲಿಡುವ ಧೈರ್ಯ ಮಾಡಲಿಲ್ಲ.

ಸ್ವಾತಂತ್ರ್ಯಾನಂತರ, ಅಂದರೆ 1949ರ ಡಿಸೆಂಬರ್ 23ರಂದು ಬೆಳಿಗ್ಗೆ ಚಬೂತರಾದಲ್ಲಿ ರಾಮ ಲಲ್ಲಾ (ಬಾಲ ರಾಮ)ನ ವಿಗ್ರಹಗಳು ಪ್ರತ್ಯಕ್ಷವಾದವು. ಅಷ್ಟೇ ಅಲ್ಲ, ಪೂಜೆಗಳೂ ನಿಯಮಿತವಾಗಿ ನಡೆಯತೊಡಗಿದವು. ಇದನ್ನು ನೋಡಿದ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ರಾಮಜನ್ಮ ಭೂಮಿಯ ಒಡೆತನ ತನಗೆ ಬೇಕೆಂದು ಉತ್ತರಪ್ರದೇಶದ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಆದೇ ಸಮಯದಲ್ಲೇ 'ರಾಮ ಜನ್ಮ ಭೂಮಿ ಮುಕ್ತಿ ಆಂದೋಲನ' ಜನರಲ್ಲಿ ಜಾಗೃತಿಯನ್ನು ಮೂಡಿಸುವ ಒಂದು ಚಳುವಳಿಯಾಗಿ ಹೊಮ್ಮಿದ್ದು. ಸರ್ಕಾರದ ಜೊತೆ ಗುದ್ದಾಡಿ ಶಿಲಾನ್ಯಾಸ ನಡೆಸಿ, ಮಂದಿರದ ನಿರ್ಮಾಣದ ರೂಪು ರೇಷೆಗಳನ್ನು ಒಂದೆಡೆ ತಯಾರು ಮಾಡುತ್ತಿದ್ದರೆ, ಮತ್ತೊಂದೆಡೆ ವಕ್ಫ್ ಮಂಡಳಿಯೊಡನೆ ಮಾತುಕತೆಯೂ ಜಾರಿಯಲ್ಲಿತ್ತು. ಮುಸ್ಲಿಮರಿಗೆ ಈ ಜಾಗದ ಮಹತ್ವದ ಅರಿವನ್ನು ಮೂಡಿಸಿ ಅವರನ್ನು ಒಪ್ಪಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆದವು. ಆದರೆ ಈ ಪ್ರಕರಣದಲ್ಲಿ ಮುಖ್ಯವಾಗಿ ಮಧ್ಯಸ್ಥಿಕೆ ವಹಿಸ ಬೇಕಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಪಾತ್ರವನ್ನು ಸರಿಯಾಗಿ ನಿಭಾಯಿಸಲೇ ಇಲ್ಲ. ಬದಲಿಗೆ, ಹಿಂದೂಗಳ ಮನಸ್ಸನ್ನು ಘಾಸಿಗೊಳಿಸುವ ಕೆಲಸಕ್ಕೆ ಕೈಹಾಕಿದವು.

ಅದು 1990ರ ಅಕ್ಟೋಬರ್ 30. ರಾಮಜನ್ಮಭೂಮಿಯಲ್ಲಿ ಶಾಂತಿಯುತ ಕರಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು. ಲಕ್ಷಾಂತರ ಕರಸೇವಕರು ಸೇರಿ, ರಾಮಮಂದಿರ ನಿರ್ಮಾಣದ ತಮ್ಮ ಹಕ್ಕನ್ನು ಪ್ರತಿಪಾದಿಸುವುದು ಮೂಲ ಉದ್ದೇಶವಾಗಿತ್ತು. ನೋಡ ನೋಡುತ್ತಿದ್ದಂತೆಯೇ ಹೆಚ್ಚಿದ ಅವರ ಸಂಖ್ಯೆ, ಅವರಲ್ಲಿ ಮನೆ ಮಾಡಿದ್ದ ಆವೇಶ ಹಾಗೊ ಜೈ ಶ್ರೀ ರಾಮ್ ಎಂಬ ಅವರ ಎಡಬಿಡದ ಘೋಷಣೆ, ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್‍ರ ಎದೆಯಲ್ಲಿ ನಡುಕವನ್ನೇ ಹುಟ್ಟಿಸಿಬಿಟ್ಟಿತು. ಕರಸೇವಕರನ್ನು ಹೆದರಿಸಿ ಹಿಮ್ಮೆಟ್ಟಿಸಲು ಏನು ಮಾಡಿದರು ಗೊತ್ತೇ ಮುಲಾಯಂ? ಗುಂಡು ಹೊಡೆಯುವಂತೆ ಆದೇಶಿಸಿದರು ಅರೆಸೇನಾ ಪಡೆಗಳಿಗೆ! ಕೆಲ ನಿಮಿಷಗಳಲ್ಲೇ ನೂರಾರು ಕರಸೇವಕರು ಹೆಣವಾದರು. ಎಷ್ಟು ಜನ ಸತ್ತರೆಂಬ ಲೆಕ್ಕ ಸಿಗಬಾರದೆಂದು ಮತ್ತೊಂದು ಉಪಾಯ ಮಾಡಿದರು. ಅವರ ಹೆಣಗಳಿಗೆ ಉಸುಕಿನ ಚೀಲಗಳನ್ನು ಕಟ್ಟಿ ಸರಯೂ ನದಿಯಲ್ಲಿ ಮುಳುಗಿಸಿದರು. ಹೆಣಗಳು ತೇಲದೇ ಇದ್ದರೆ ಲೆಕ್ಕ ಹೇಗೆ ಸಿಕ್ಕೀತು? ಅಂದು ಮುಸ್ಲಿಮರಿಂದ ಶಭಾಸ್‍ಗಿರಿ ಪಡೆಯುವ ಸಲುವಾಗಿ ಹೇಡಿಯಂತೆ ಗುಂಡಿನ ಮಳೆಗರೆಸಿದ ಮುಲಾಯಂ ಸಿಂಗರಿಗೆ 'ಮುಲ್ಲಾ ಮುಲಾಯಂ' ಎಂಬ ಅಡ್ಡ ಹೆಸರು ಶಾಶ್ವತವಾಗಿ ಅಂಟಿಕೊಂಡಿತು!

ಇದರ ನಂತರ ಮತ್ತೊಂದು ಮಹತ್ವದ ಘಟನೆ ನಡೆಯಿತು. ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೇರಿದ ಚಂದ್ರಶೇಖರ್ ವಿಶ್ವ ಹಿಂದೂ ಪರಿಷತ್ ಹಾಗೂ ಬಾಬರಿ ಮಸೀದಿಯ ಕಾರ್ಯಕಾರಿ ಸಮಿತಿ ಎರಡನ್ನೂ ಬರ ಹೇಳಿದರು. ಅವರು ಹೇಳಿದ್ದಿಷ್ಟೇ 'ಎರಡೂ ಕಡೆಯವರು ಸಾಕ್ಷ್ಯಗಳನ್ನು ಒಟ್ಟು ಮಾಡಿ ತನ್ನಿ. ಒಂದು ವೇಳೆ ಬಾಬರಿ ಮಸೀದಿಗೆ ಮೊದಲು ಅಲ್ಲಿ ಶ್ರೀರಾಮನ ಮಂದಿರವಿತ್ತು ಎಂಬುದು ಸಾಬೀತಾದರೆ, ಮುಸ್ಲಿಮರು ತಮ್ಮ ಅಹವಾಲನ್ನು ಹಿಂತೆಗೆದುಕೊಳ್ಳಬೇಕು' ಎಂದು. ಈ ಸಭೆ ನಡೆದಿದ್ದು 1990ರ ಡಿಸೆಂಬರ್ ನಾಲ್ಕರಂದು. 1991ರ ಜನವರಿ 24ರ ವರೆಗೂ ಸಾಕ್ಷ್ಯಗಳನ್ನು ತಂದೊಪ್ಪಿಸುವ ಗಡುವನ್ನು ನೀಡಲಾಗಿತ್ತು.  ಐತಿಹಾಸಿಕ, ಪುರಾತತ್ವ ಇಲಾಖೆಯ, ಕಂದಾಯ ಇಲಾಖೆಯ ಹಾಗೂ ಕಾನೂನಿಗೆ ಸಂಬಂಧಿಸಿದ (ಒಟ್ಟಾರೆ ನಾಲ್ಕು ವಿಧದ ಸಾಕ್ಷ್ಯಗಳನ್ನು) ತೋರಿಸುವುದು ಕಡ್ಡಾಯವಾಗಿತ್ತು. ನಿಗದಿತ ದಿನದಂದು ಹಿಂದೂಗಳ ರಾಯಭಾರಿ ಎಲ್ಲ ಸಾಕ್ಷ್ಯಗಳೊಂದಿಗೆ ಹಾಜರಾದರೆ ಮುಸ್ಲಿಮರು ತಂದದ್ದು ಇತಿಹಾಸ ಮತ್ತು ಪುರಾತತ್ವ ಇಲಾಖೆಯ ಸಾಕ್ಷ್ಯಗಳನ್ನು ಮಾತ್ರ. ಉಳಿದ ಸಾಕ್ಷ್ಯಗಳನ್ನು ತರಲು ಆರು ವಾರಗಳ ಗಡುವು ಕೇಳಿ ಹೋದ ಮುಸ್ಲಿಮರು ಆಮೇಲೆ ನಾಪತ್ತೆ! ಕರೆಸಿ ಕೇಳಿದರೆ ಸಾಕ್ಷ್ಯವೂ ಇಲ್ಲ, ಸಮಂಜಸ ಉತ್ತರವೂ ಇಲ್ಲ.

ಅಲ್ಲಿ ಸಾಕ್ಷ್ಯವಿದ್ದರೆ ತಾನೆ ತರುವುದು? ಮಸೀದಿಯನ್ನು ಕಟ್ಟಲು ಬಾಬರ್ ಖಾಲಿ ಜಾಗವನ್ನು ಗುರುತಿಸಿದ್ದಕ್ಕೆ ಯಾವ ಆಧಾರವೂ ಇರಲಿಲ್ಲ. ಆದರೆ ಅಲ್ಲಿ ಶ್ರೀರಾಮನ ಮಂದಿರವಿದ್ದುದಕ್ಕೆ ಹೇರಳವಾದ ಸಾಕ್ಷಿಗಳಿದ್ದವು. ನಮ್ಮ ರಾಮಾಯಣ, ಉಪನಿಷತ್ತುಗಳಷ್ಟೇ ಅಲ್ಲದೆ, ಆ ಕಾಲದಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಐರೋಪ್ಯ ದೇಶಗಳ ವಿಲಿಯಂ ಫ್ಲಿಂಚ್, ಫ್ಯೂರರ್ ಹಾಗೂ ಜೋಸೆಫ್ ಟಿಫೆನ್‍ಥೆಲ್ಲರ್ ದಾಖಲಿಸಿದ್ದ ಬರಹಗಳಿದ್ದವು. ಹೊರಗಿನವರದ್ದು ಬಿಡಿ, ಮುಸ್ಲಿಂ ಲೇಖಕರೇ ಬಾಬರನು ಮಸೀದಿ ಕಟ್ಟಿದ ಬಗೆಯನ್ನು ಸ್ಪಷ್ಟವಾಗಿ ಬರೆದಿಟ್ಟಿದ್ದರು! ಮಿರ್ಜಾ ಜಾನ್, ಮಿರ್ಜಾ ರಜಬ್ ಅಲಿ ಬೈಗ್ ಹಾಗೂ ಖುದ್ದು ಬಾಬರಿ ಮಸೀದಿಯ ಇಮಾಮ್ ಆಗಿದ್ದ ಮೌಲ್ವಿ ಅಬ್ದುಲ್ ಕರೀಮ್ ಬರೆದಿರುವುದನ್ನು ಹೇಗೆ ಅಲ್ಲಗಳೆಯಲಾದೀತು? ಇಷ್ಟು ಸಾಲದೆಂಬಂತೆ ಪುರಾತತ್ವ ಇಲಾಖೆ ಅಗೆದು ಹೊರ ತೆಗೆದ ರಾಶಿ ರಾಶಿ ಕಂಬಗಳು, ಶಿಲಾ ಶಾಸನಗಳು ಹಾಗೂ ದೇವ ದೇವತೆಯರ ವಿಗ್ರಹಗಳು. ಕೊರತೆಯಿದ್ದದ್ದು ಸಾಕ್ಷಿಗಳಲ್ಲಲ್ಲ, ನೋಡಲು ತಯಾರಿಲ್ಲದ ಮನಸುಗಳಲ್ಲಿ!


ವಿಷಯ ಅಲ್ಲಿಗೇ ನಿಂತಿದ್ದರಿಂದ 1992ರ ಡಿಸೆಂಬರ್ ಆರರಂದು ಮತ್ತೊಂದು ಕರಸೇವೆಯನ್ನು ಹಮ್ಮಿಕೊಳ್ಳಲಾಯಿತು. ಲಕ್ಷಗಟ್ಟಳೆ ಸಂಖ್ಯೆಯಲ್ಲಿ ಸೇರಿದ್ದರು ರಾಮಭಕ್ತರು. ಸರಯೂ ನದಿಯಿಂದ ತಲಾ ಒಂದೊಂದು ಹಿಡಿ ಮರಳನ್ನು ತಂದು ರಾಶಿ ಹಾಕುತ್ತಿದ್ದರು. ಅದೆಲ್ಲಿತ್ತೋ ಆವೇಶ, ಕರಸೇವಕನೊಬ್ಬ ಗುಮ್ಮಟವೊಂದನ್ನು ಹತ್ತಿ ಜೈ ಶ್ರೀರಾಮ್ ಎಂದದ್ದೇ ತಡ, ಎಲ್ಲರ ಸಂಯಮದ ಕಟ್ಟೆ ಒಡೆಯಿತು. ಒಟ್ಟಾಗಿ ಲಗ್ಗೆಯಿಟ್ಟವರೇ ಮಸೀದಿಯನ್ನು ಪುಡಿ ಪುಡಿ ಮಾಡಿಬಿಟ್ಟರು. ಇಲ್ಲಿ ಒಂದು ಮುಖ್ಯವಾದ ವಿಷಯವನ್ನು ಹೇಳಬೇಕು. ಅಯೋಧ್ಯೆಯಲ್ಲಿ ಹೀಗೆ ಮಂದಿರಗಳನ್ನು ಒಡೆದುಕಟ್ಟಿರುವ ಇನ್ನೂ ಎರಡು ಮಸೀದಿಗಳಿವೆ. ಅವು 'ಸ್ವರ್ಗ ದ್ವಾರ್' ಮತ್ತು 'ತ್ರೇತಾ ಠಾಕೂರ್ ಮಂದಿರ್'‍ಗಳು. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಕರಸೇವಕರು ಆ ಮಸೀದಿಗಳನ್ನೂ ಧ್ವಂಸ ಮಾಡಬಹುದಿತ್ತಲ್ಲವೇ? ರೋಷಾವೇಷದಿಂದ ಸಿಕ್ಕ ಸಿಕ್ಕ ಮುಸ್ಲಿಮರನ್ನು ಕೊಚ್ಚಿ ಕೊಲ್ಲಬಹುದಿತ್ತಲ್ಲವೇ? ಆದರೆ ಹಾಗಾಗಲಿಲ್ಲ.

ನಂತರವಷ್ಟೇ ಅಲಹಾಬಾದ್‍ನ ಉಚ್ಚ ನ್ಯಾಯಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು. ವಿಚಾರಣೆಗಳೆಲ್ಲ ನಡೆದು ತೀರ್ಪು ಹೊರಬಿದ್ದಿದ್ದು 2010ರಲ್ಲಿ. ಅದರ ಪ್ರಕಾರ ಸುನ್ನಿ ವಕ್ಫ್ ಮಂಡಳಿಯ ಅಹವಾಲು ವಜಾ ಆಗಿದೆ. ರಾಮಜನ್ಮಭೂಮಿ ಮುಸ್ಲಿಮರ, ಹಿಂದೂಗಳ ಹಾಗೂ ನಿರ್ಮೋಹಿ ಅಖಾಡಾ (ಇವರೂ ರಾಮನನ್ನು ಪೂಜಿಸುವ ಸಾಧುಗಳೇ) ನಡುವೆ ಸಮನಾಗಿ ಹಂಚಲ್ಪಟ್ಟಿದೆ. ಮತ್ತೆ ಎಲ್ಲರೂ ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಈಗ ಹೇಳಿ, ಬಾಬರಿ ಮಸೀದಿಗಾಗಿ ಹೋರಾಡುತ್ತೇವೆನ್ನುವ ಮುಸ್ಲಿಮರಿಗೆ ಅರ್ಥವಾಗದ ಚಿದಂಬರ ರಹಸ್ಯ ಏನಿದೆ ಇಲ್ಲಿ? ಬಾಬರನಿಗೂ ಭಾರತೀಯ ಮುಸ್ಲಿಮರಿಗೂ ಎತ್ತಣಿಂದೆತ್ತಣ ಸಂಬಂಧ? ನಿಮಗೆ ಗೊತ್ತಿರಲಿ, ಭಾರತೀಯ ಮುಸ್ಲಿಮರು ಒಲಸೆ ಬಂದವರಲ್ಲ. ಈ ನೆಲವೇ ಅವರ ಮೂಲ. ಹೋಗಲಿ ಬಾಬರ್ ತನ್ನ ಜೊತೆ ಎಷ್ಟು ಜನರನ್ನು ಕರೆತಂದಿದ್ದ? ಕೇವಲ ಹನ್ನೆರಡು ಸಾವಿರ! ಹಾಗಾದರೆ ಲಕ್ಷಗಟ್ಟಳೆ ಮುಸ್ಲಿಮರು ಹುಟ್ಟಿಕೊಂಡಿದ್ದು ಹೇಗೆ? ಗಿಡ ಮರಗಳಂತೆ ಭೂತಾಯಿಯ ಒಡಲಿನಿಂದಲ್ಲ,  ಮಳೆಹನಿಯಂತೆ ಆಕಾಶದಿಂದಲೂ ಅಲ್ಲ. ಮತಾಂತರವೆಂಬ ಹೇಯ ಕೃತ್ಯದಿಂದ ಎಂಬುದನ್ನು ಬಿಡಿಸಿ ಹೇಳಬೇಕೇ? ಸಂಕಟವಾಗುವುದೇ ಅದಕ್ಕೆ. ಎಲ್ಲಿಯವರೆಗೂ ಮುಸ್ಲಿಮರು ಬಾಬರಿ ಮಸೀದಿ ಬೇಕು ಎನ್ನುತ್ತಾರೋ ಅಲ್ಲಿಯವರೆಗೂ ಬಾಬರನನ್ನು, ಅವನ ಧರ್ಮಾಂಧತೆ, ಕ್ರೌರ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದೇ ಅರ್ಥ. ಅವರು ಬಾಬರನನ್ನು ಬಿಡದಿದ್ದರೆ, ನಮ್ಮವರು ಎನ್ನುವ ಭಾವ ನಮಗೆ ಬರುವುದು ಹೇಗೆ? ತಮ್ಮವನೇ ಆದ ಹಿಟ್ಲರ್ ನಡೆಸಿದ ಹತ್ಯಾಕಾಂಡಕ್ಕೆ ಜರ್ಮನ್ನರು ಇಂದಿಗೂ ಕ್ಷಮೆ ಕೇಳುತ್ತಲೇ ಇದ್ದಾರೆ. ಪರಕೀಯನಾದ ಬಾಬರನೊಂದಿಗಿನ ಕೊಂಡಿ ಕಳಚಲಾರದೇ?

ನಿಮಗೆ ಗೊತ್ತಿರಲಿ, ಏನಿಲ್ಲವೆಂದರೂ 30ಸಾವಿರ ಮಂದಿರಗಳನ್ನು ಕಳೆದುಕೊಂಡಿದ್ದೇವೆ ನಾವು. ಅದಕ್ಕೆ ಪರಿಹಾರ ಕೇಳಿಲ್ಲ. ಅವೇ ಮಂದಿರಗಳನ್ನು ಮತ್ತೆ ಕಟ್ಟಿ ಕೊಡಿ ಎಂದು ಹಟಕ್ಕೆ ಬಿದ್ದಿಲ್ಲ. ಹೋಗಲಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತೇವೆಂದು 30ಸಾವಿರ ಮಸೀದಿಗಳನ್ನು ಧ್ವಂಸ ಮಾಡಿಲ್ಲ. ನಮಗೆ ತುಂಬಾ ಅಪ್ಯಾಯಮಾನವಾದ ಮೂರು ಶ್ರದ್ಧಾ ಕೇಂದ್ರಗಳಿವೆ. ಅಯೋಧ್ಯೆಯ ರಾಮ ಮಂದಿರ, ಮಥುರೆಯಲ್ಲಿರುವ ಕೃಷ್ಣನ ಜನ್ಮ ಸ್ಥಾನ ಹಾಗೂ ಕಾಶಿಯಲ್ಲಿರುವ ವಿಶ್ವೇಶ್ವರನ ದೇವಸ್ಥಾನ. ಇಂದು ಈ ಮೂರೂ ನಮ್ಮ ಪಾಲಿನ ಪೂರ್ಣ ಪ್ರಮಾಣದ ದೇವಸ್ಥಾನಗಳಾಗಿ ಉಳಿದಿಲ್ಲ. ಅಲ್ಲಿರುವ ಮಸೀದಿಗಳನ್ನು ತೆರವುಗೊಳಿಸಿ ನಮ್ಮದನ್ನು ನಮಗೆ ಹಿಂತಿರುಗಿಸಿ ಎಂದು ಕೇಳುವುದು ತಪ್ಪೇ? ಮುಸ್ಲಿಂ ಗ್ರಂಥಗಳ ಪ್ರಕಾರ ಬಲವಂತವಾಗಿ ವಶಪಡಿಸಿಕೊಂಡ ಸ್ಥಳ ಪ್ರಾರ್ಥನಾ ಯೋಗ್ಯವೇ ಅಲ್ಲ. ಅಂದಮೇಲೆ ಅದನ್ನು ಬಿಟ್ಟುಕೊಡಬಾರದೆಂಬ ಹಟವೇಕೆ?

ಹನ್ನೆರಡನೆಯ ಶತಮಾನದಲ್ಲಿ ಸ್ಪೇನ್ ದೇಶವನ್ನು ಮುಸ್ಲಿಮರು ಮುತ್ತಿಗೆ ಹಾಕಿದಾಗ ಅಲ್ಲಿದ್ದ ಚರ್ಚುಗಳನ್ನು ಮುರಿದು ಎಲ್ಲರನ್ನೂ ಮತಾಂತರ ಮಾಡಿಬಿಟ್ಟಿದ್ದರು. ಮತ್ತೆ ಅಧಿಕ್ಕಾರಕ್ಕೇರಿದ ಕ್ರೈಸ್ತರು, ಮತಾಂತರಗೊಂಡವರಿಗೆ ಕೊಟ್ಟಿದ್ದು ಮೂರೇ ಆಯ್ಕೆಗಳು ‘ಕ್ರೈಸ್ತ ಮತಕ್ಕೆ ಮರಳಿ, ದೇಶ ಬಿಟ್ಟು ತೊಲಗಿ ಅಥವಾ ಸಾಯುವುದಕ್ಕೆ ಸಿದ್ಧರಾಗಿ!’ ಚರ್ಚುಗಳೆಲ್ಲಾ ಮತ್ತೆ ಯಥಾಸ್ಥಿತಿಗೂ ಬಂದವು. ಇದಕ್ಕಿಂತ ಉದಾಹರಣೆ ಬೇಕೇ ಹಿಂದೂಗಳಷ್ಟು ಸಹಿಷ್ಣುಗಳು ಬೇರೊಬ್ಬರಿಲ್ಲವೆಂಬುದಕ್ಕೆ?

ನಮಗಿರುವ ಅಪಾರ ಸಹನೆ ನಮ್ಮ ದೌರ್ಬಲ್ಯವಲ್ಲ, ಒಳ್ಳೆಯತನ ಅಷ್ಟೇ. ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಮುಸ್ಲಿಂ ಲೇಖಕ/ಲೇಖಕಿಯರಲ್ಲಿ ಒಂದೇ ಒಂದು ಮನವಿ. ಈ ಹೊತ್ತು ಮುಸ್ಲಿಂ ಸಮಾಜ ಬದಲಾವಣೆಯ ಕಿಟಕಿಗಳನ್ನು ಸ್ವಲ್ಪ ಸ್ವಲ್ಪವಾಗಿ ತೆರೆಯುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಅದರಿಂದ ತೂರಿ ಬರುವ ಸತ್ಯದ ಪ್ರಖರ ಕಿರಣಗಳು ಮೊದಲಿಗೆ ಕಣ್ಣನ್ನು ಕುಕ್ಕಿದರೂ ಕ್ರಮೇಣ ಅಭ್ಯಾಸವಾಗಲಿವೆ ಎಂದು ಅವರಿಗೆ ಬಿಡಿಸಿ ಹೇಳಬಲ್ಲಿರಾ? ಆ ಬೆಳಕಿನಿಂದಾಗಿ ಮುಂದೊಂದು ದಿನ ಅವರಿರುವ ಕತ್ತಲೆ ಕೋಣೆಯ ಸಮಸ್ತವೂ ಝಗಮಗಿಸಿ ಅವರ ಭ್ರಮೆಗೂ ವಾಸ್ತವಕ್ಕೂ ಇರುವ ವ್ಯತ್ಯಾಸವನ್ನು ಅವರೇ ನೋಡಬಲ್ಲರು ಎಂಬುದನ್ನು ಮನದಟ್ಟು ಮಾಡಿಕೊಡಬಲ್ಲಿರಾ? ಇದು ಸದ್ಯದ ಪರಿಸ್ಥಿತಿಯಲ್ಲಿ ಸಮನ್ವಯ, ಸೌಹಾರ್ದಗಳನ್ನು ಹೆಚ್ಚಿಸಲು ನೀವು ಹೊರಲೇಬೇಕಾದ ಸಾಮಾಜಿಕ ಜವಾಬ್ದಾರಿ. ನೀವು ಮುಂದಡಿಯಿಡಿ, ನಾವು ನಿಮ್ಮ ಬೆನ್ನಿಗಿರುತ್ತೇವೆ. ಆಗಬಹುದಾ?