Tuesday, 22 April 2014

ಆಸ್ಕರ್‍ನ ವಿಚಾರಣೆ, ನಮ್ಮಲ್ಲೆಂದು ಇಂಥ ಸುಧಾರಣೆ?

ಕ್ರೀಡೆಯಲ್ಲಿ, ಅದರಲ್ಲೂ ಅಥ್ಲೆಟಿಕ್ಸ್ನಲ್ಲಿ ಆಸಕ್ತಿಯಿರುವವರಿಗೆ ಆಸ್ಕರ್ ಪಿಸ್ಟೋರಿಯಸ್ ಚಿರಪರಿಚಿತ ಹೆಸರು. ಹುಟ್ಟುವಾಗಲೇ ಮಂಡಿ ಹಾಗೂ ಪಾದವನ್ನು ಬೆಸೆಯುವ ಮೂಳೆಯಿಲ್ಲದೆ (ಅದಕ್ಕೆ 'ಫಿಬ್ಯೂಲ' ಎನ್ನುತ್ತಾರೆ)  ಹುಟ್ಟಿದವನೀತ. ಈ ಆನುವಂಶಿಕ ಕಾಯಿಲೆಯಿಂದಾಗಿ ಹನ್ನೊಂದು ತಿಂಗಳ ಮಗುವಾಗಿದ್ದಾಗಲೇ ಆಪರೇಷನ್ಗೆ ಒಳಗಾಗಿ ಎರಡೂ ಕಾಲುಗಳನ್ನು ಕಳೆದುಕೊಂಡ. ಕ್ರಮೇಣ ಕೃತಕ ಕಾಲುಗಳೊಂದಿಗೆ ನಡೆಯುವುದನ್ನು, ಓಡುವುದನ್ನೂ ಕಲಿತ. ವಿಕಲಾಂಗರಿಗೆ ಮೀಸಲಾದ ಪ್ಯಾರಾಲಿಂಪಿಕ್ಸ್ ಓಟಗಳಲ್ಲಿ ಅಗ್ರಗಣ್ಯನಾದ. ಕೊನೆಗೆ ಸಾಮಾನ್ಯರ ಒಲಿಂಪಿಕ್ಸ್ನಲ್ಲೂ ಭಾಗವಹಿಸಿ, ಅಭಿಮಾನಿಗಳಿಂದ 'ಬ್ಲೇಡ್ ರನ್ನರ್', ಬ್ಲೇಡ್ ಸ್ಟನ್ನರ್'ಗಳೆಂಬ ಬಿರುದನ್ನೂ ಬೊಗಸೆ ತುಂಬ ಪ್ರೀತಿಯನ್ನೂ ಗಳಿಸಿದ. ಲಂಡನ್ ಒಲಿಂಪಿಕ್ಸ್ನಲ್ಲಿ ಇತಿಹಾಸವನ್ನೇ ನಿರ್ಮಿಸಿದ. ಅವನ ಓಟದ ಬದುಕು ನಿಜಕ್ಕೂ ಎಂಥವರಿಗೂ ಸ್ಫೂರ್ತಿ ನೀಡುವಂಥದ್ದು.
ಅಂಥ ಆಸ್ಕರ್ ಲಿಯೊನಾರ್ಡ್ ಕಾರ್ಲ್ ಪಿಸ್ಟೋರಿಯಸ್ ತನ್ನ ಬದುಕಿನ ಓಟದಲ್ಲಿ ಎಡವಿ, ಇವತ್ತು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ನ್ಯಾಯಾಲಯದಲ್ಲಿ ಗಳಗಳನೆ ಅಳುತ್ತಿದ್ದಾನೆ. ತನ್ನನ್ನು ಕೇಳಲಾಗುತ್ತಿರುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಾಗದೆ ತಡವರಿಸುತ್ತಿದ್ದಾನೆ. ಮಾತು ಮಾತಿಗೂ ನನ್ನನ್ನು ಕ್ಷಮಿಸಿ ಎನ್ನುತ್ತಿದ್ದಾನೆ. ತನ್ನ ಪ್ರತಿವಾದಿ ವಕೀಲರು ತನ್ನ ವ್ಯಕ್ತಿತ್ವವನ್ನು ಎಳೆಎಳೆಯಾಗಿ ಬಿಡಿಸಿಡುತ್ತಿರುವುದನ್ನು ನೋಡಿ ಕನಲಿ ವಾಂತಿ ಮಾಡಿಕೊಳ್ಳುತ್ತಿದ್ದಾನೆ. ಆದರೆ ಇದ್ಯಾವುದೂ ನ್ಯಾಯಾಧೀಶರ ಮೇಲಾಗಲೀ, ಅವನಿಂದ ನಿಜ ಹೊರಡಿಸಲೇಬೇಕೆಂಬ ಹಟಕ್ಕೆ ಬಿದ್ದಿರುವ ಅವನ ಪ್ರತಿವಾದಿ ವಕೀಲರ ಮೇಲಾಗಲೀ, ಅಥವಾ ಅವನೆದುರಿಗೇ ಕೂತು ಅವನ ಪ್ರತಿ ಮಾತನ್ನೂ ಕಿವಿಗೊಟ್ಟು ಆಲಿಸುತ್ತಿರುವ, ಅವನ ಕೈಲಿ ಸಾವಿಗೀಡಾದ ಅವನ ಗೆಳತಿ ರೀವಾ ಸ್ಟೀನ್ಕ್ಯಾಂಪ್ ತಾಯಿ, ಸಹೋದರಿಯರ ಮೇಲಾಗಲೀ ಯಾವ ಪರಿಣಾಮವನ್ನೂ ಬೀರುತ್ತಿಲ್ಲ. ಅವನ ದೈತ್ಯ ಪ್ರತಿಭೆಗೆ ಮರುಳಾಗಿದ್ದ ಅವನ ಅಭಿಮಾನಿಗಳು ಕೂಡ ಸತ್ಯವೇನೆಂದು ತಿಳಿಯುವ, ಸತ್ಯವನ್ನು ಮಾತ್ರ ಬೆಂಬಲಿಸುವ ಉತ್ಸುಕತೆಯಲ್ಲಿದ್ದಾರೆ

27 ವರ್ಷದ ಆಸ್ಕರ್ ಹುಟ್ಟಿದ್ದು ದಕ್ಷಿಣ ಆಫ್ರಿಕಾದ ಜೊಹಾನೆಸ್ಬರ್ಗ್‌ನಲ್ಲಿ, 1986 ನವೆಂಬರ್ 22ರಂದು. ಎರಡೂ ಕಾಲುಗಳನ್ನು ಕತ್ತರಿಸಿ ತೆಗೆಯಲಾಗಿದ್ದರೂ ಕ್ರೀಡೆಯನ್ನು ಬಹಳವಾಗಿ ಪ್ರೋತ್ಸಾಹಿಸುತ್ತಿದ್ದ ಅವನ ತಂದೆತಾಯಿಯರು ಅವನಲ್ಲಿ ವಿಕಲಾಂಗನೆಂಬ ಭಾವನೆ ಬರುವುದಕ್ಕೇ ಬಿಡಲಿಲ್ಲ. ಸಣ್ಣ ಹುಡುಗನಾಗಿದ್ದಾಗಲೇ ಶಾಲೆಯ ರಗ್ಬಿ ಆಟದಲ್ಲಿ ಹಾಗೂ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವನು 17 ವರ್ಷ ತುಂಬುವ ಹೊತ್ತಿಗೆ ವಿಶ್ವ ದರ್ಜೆಯ ಓಟಗಾರನಾಗಿ ಮಾರ್ಪಟ್ಟಿದ್ದ. 2004ರಲ್ಲಿ ಗ್ರೀಸ್ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ನಲ್ಲಿ ಮೊತ್ತಮೊದಲ ಬಾರಿ ಭಾಗವಹಿಸಿ, 200ಮೀ ಓಟದಲ್ಲಿ ಚಿನ್ನ ಹಾಗೂ 100ಮೀ ಓಟದಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡು ರಾತೋರಾತ್ರಿ ಪ್ರಸಿದ್ಧನಾದ. ಮುಂದೆ 2005ರಲ್ಲಿ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಕ್ರೀಡಾಕೂಟದಲ್ಲಿನ ಗೆಲುವು, 2006 ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 100ಮೀ, 200ಮೀ ಮತ್ತು 400ಮೀ ಓಟಗಳಲ್ಲಿ ಪಡೆದ ಚಿನ್ನದ ಪದಕಗಳು ಅವನನ್ನು ಪ್ಯಾರಾಲಿಂಪಿಕ್ಸ್ ಓಟದ ಸಾಮ್ರಾಜ್ಯದ ಅನಭಿಷಿಕ್ತ ದೊರೆಯನ್ನಾಗಿಸಿದವು.

ಏತನ್ಮಧ್ಯೆ 2008ರಲ್ಲಿ ಬೀಜಿಂಗ್ನಲ್ಲಿ ನಡೆದ ಸಾಮಾನ್ಯರ ಒಲಿಂಪಿಕ್ಸ್ನಲ್ಲೂ ಭಾಗವಹಿಸುವ ಆಸೆ ತೋರಿದ ಆಸ್ಕರ್ನನ್ನು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಒಕ್ಕೂಟ ಕೆಲವು ಪರೀಕ್ಷೆಗಳಿಗೆ ಒಳಪಡಿಸಿತು. ಇತರೆ ಓಟಗಾರರ ನೈಸರ್ಗಿಕ ಕಾಲುಗಳಿಗೆ ಹೋಲಿಸಿದರೆ ಆಸ್ಕರ್ ಕೃತಕ ಕಾಲುಗಳು ಅವನ ಶ್ರಮವನ್ನು ಶೇಕಡ 25ರಷ್ಟು ಕಡಿಮೆ ಮಾಡುತ್ತವೆ ಎಂಬ ಕಾರಣ ಕೊಟ್ಟು ಅವನಿಗೆ ಅರ್ಹತಾ ಸುತ್ತಿನ ಓಟಗಳಿಗೆ ಪ್ರವೇಶ ನಿರಾಕರಿಸಲಾಯಿತು. ಆದರೆ ಕ್ರೀಡೆಯ ಅಹವಾಲುಗಳಿಗೆ ಮೀಸಲಾಗಿರುವ ಸ್ವಿಟ್ಜರ್ಲ್ಯಾಂಡ್ ನ್ಯಾಯಾಲಯದ ಮೆಟ್ಟಿಲೇರಿದ ಆಸ್ಕರ್ ತನ್ನ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾದ. ಅರ್ಹತಾ ಸುತ್ತಿನ ಓಟಗಳಲ್ಲಿ ಸ್ಪರ್ಧಿಸಿದರೂ ಒಲಿಂಪಿಕ್ಸ್ಗೆ ಆಯ್ಕೆಗೊಳ್ಳಲಾಗಲಿಲ್ಲ. ಆದರೆ ಅದೇ ವರ್ಷದ ಪ್ಯಾರಾಲಿಂಪಿಕ್ಸ್ನಲ್ಲಿ 100, 200 ಹಾಗೂ 400ಮೀ ಓಟಗಳಲ್ಲಿ ಚಿನ್ನ ಗೆದ್ದು ವಿಶ್ವ ದಾಖಲೆಗಳನ್ನೂ ಬರೆದ. ಮುಂದೆ 2012ರಲ್ಲಿ ಲಂಡನ್ನಲ್ಲಿ ನಡೆದ ಸಾಮಾನ್ಯರ ಒಲಿಂಪಿಕ್ಸ್‌ಗೆ ಸೂಕ್ತ ತಯಾರಿ ನಡೆಸಿ, ಅರ್ಹತೆ ಗಿಟ್ಟಿಸಿ, ಸಾಮಾನ್ಯರೊಡನೆ ಸ್ಪರ್ಧಿಸಿದ ವಿಶ್ವದ ಮೊದಲ ವಿಕಲಾಂಗ ಓಟಗಾರನೆಂಬ ಹೆಗ್ಗಳಿಕೆಗೂ ಪಾತ್ರನಾದ. ಅದೇ ವರ್ಷದ ಪ್ಯಾರಾಲಿಂಪಿಕ್ಸ್ನಲ್ಲಿ 200ಮೀ ಓಟದಲ್ಲಿ ಬೆಳ್ಳಿ ಹಾಗೂ 400ಮೀ ಓಟದಲ್ಲಿ ಚಿನ್ನವನ್ನು ಗೆದ್ದ.

ಅವನ ಅಸಾಮಾನ್ಯ ಸಾಧನೆಗೆ ಟೈಮ್ಸ್ ನಿಯತಕಾಲಿಕವು 2008 100 ಅತ್ಯಂತ ಪ್ರಭಾವಶಾಲಿಯರ ಪಟ್ಟಿಯಲ್ಲಿ ಅವನನ್ನು ಸೇರಿಸಿದರೆ, ಗ್ಲಾಸ್ಗೋ ವಿಶ್ವವಿದ್ಯಾಲಯವು ಅವನಿಗೆ ಗೌರವ ಡಾಕ್ಟರೇಟ್ ನೀಡಿತು. ಜೊತೆಗೇ ಹಲವು ಪ್ರಶಸ್ತಿ, ಸಮ್ಮಾನಗಳೂ ದೊರಕಿದವು. ನೈಕಿ, ಥಿಯರಿ ಮಗ್ಲರ್ನಂಥ ಬ್ರ್ಯಾಂಡ್ಗಳು ಅವನನ್ನು ತಮ್ಮ ಅಂಬಾಸಿಡರ್ ಮಾಡಿಕೊಂಡವು. ಬ್ಲೇಡ್ನಂತೆ ಕಾಣುವ ಕೃತಕ ಕಾಲುಗಳನ್ನು ಹಾಕಿಕೊಂಡು ಅಡೆತಡೆಯಿಲ್ಲದೆ ಓಡುತ್ತಿದ್ದ ಅವನನ್ನು ಜನರು ಪ್ರೀತಿಯಿಂದ, ಅಭಿಮಾನದಿಂದ 'ಬ್ಲೇಡ್ ರನ್ನರ್' ಎಂಬ ಅಡ್ಡಹೆಸರಿನಿಂದ ಕರೆದರು. ನವೆಂಬರ್ 2012ರಲ್ಲಿ ರೀವಾ ಸ್ಟೀನ್ಕ್ಯಾಂಪ್ಎಂಬ ಕಾನೂನು ಪದವೀಧರೆ ಹಾಗೂ ಮಾಡೆಲ್ ಜೊತೆಯಾದಳು. ಸರ್ವಜ್ಞನ ಮಾತಿನಂತೆ ಇನ್ನೇನು ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು ಎನ್ನುವ ಗಳಿಗೆ ಸನ್ನಿಹಿತವಾದಾಗ...

ನೋಡನೋಡುತ್ತಿದ್ದಂತೆ  ಆಸ್ಕರ್ ತನ್ನ ಬದುಕಿಗೇ ಕೊಳ್ಳಿ ಇಟ್ಟುಕೊಂಡ!

2013 ಫೆಬ್ರುವರಿ 14 ಬೆಳಗಿನ ಜಾವ. ಪ್ರೇಮಿಗಳ ದಿನದಂದು ಎಲ್ಲ ಪ್ರೇಮಿಗಳೂ ತಮ್ಮ ವ್ಯಾಲೆಂಟೈನ್ಗಳಿಗೆ ಪ್ರೇಮದ ಹೊಸಹೊಸ ಪರಿಭಾಷೆ ಬರೆದು ಕಳಿಸಲು ಸಜ್ಜಾಗುತ್ತಿದ್ದ ಸಮಯ. ಅಂಥ ಹೊತ್ತಿನಲ್ಲಿ ತನ್ನ ಮನೆಯ ಬಾತ್ರೂಮಿನಲ್ಲಿದ್ದ ಗೆಳತಿ ರೀವಾಳ ಮೇಲೆ ಆಸ್ಕರ್ ಗುಂಡಿನ ಮಳೆಗರೆದ. ನಾಲ್ಕು ಗುಂಡುಗಳನ್ನು ತಿಂದ ರೀವಾ ಹೆಣವಾದಳು. ಪೊಲೀಸರು ಆಸ್ಕರ್‌ನನ್ನು ಬಂಧಿಸಿದರು. ಅವನ ಓಟದ ಬದುಕಿಗೆ ತೆರೆ ಬಿತ್ತು.

ಕಳೆದ ಮಾರ್ಚ್ 3ರಿಂದ ಅವನ ಪ್ರಕರಣ ವಿಚಾರಣೆಗೆ ಬಂದಿದೆ. ವಿಚಾರಣೆ ನಡೆಯುತ್ತಿರುವ ಕೋರ್ಟ್‌ಹಾಲ್‌ನಲ್ಲಿ ಜನಸಂದಣಿ ಹೆಚ್ಚಾಗಿ ಜಾಗ ಸಾಲದೆ, ಪಕ್ಕದ ರೂಮೊಂದರಲ್ಲಿ ಟಿವಿ ಇಟ್ಟು ವಿಚಾರಣೆಯ ನೇರ ಪ್ರಸಾರ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಅವನ ಓಟವನ್ನು ಬಿಟ್ಟಕಣ್ಣು, ಬಿಟ್ಟಬಾಯಿಗಳಿಂದ ನೋಡುತ್ತಿದ್ದ ಜನ ಈಗ ಅವನ ಮಾತುಗಳನ್ನು ಮೌನವಾಗಿ ಕೇಳುತ್ತಿದ್ದಾರೆ. “ಯಾರೋ ದರೋಡೆಕೋರ ಮನೆಯೊಳಗೆ ನುಗ್ಗಿದ್ದಾನೆಂದುಕೊಂಡು ನಾನು ಗುಂಡು ಹಾರಿಸಿದೆ. ಬಾತ್ರೂಮಿನಲ್ಲಿದ್ದುದು ತನ್ನ ಗೆಳತಿ ಎಂಬುದು ಗೊತ್ತಿರಲಿಲ್ಲ. ಇದೊಂದು ಆಕಸ್ಮಿಕ ದುರ್ಘಟನೆ. ನಾನು ತಿಳಿದು ಮಾಡಿದ್ದಲ್ಲ... ಎಂದು ಆಸ್ಕರ್ ಬಿಕ್ಕುತ್ತಲೇ ಸಾಧಿಸುತ್ತಿದ್ದಾನೆ. ಅವನ ಪರವಾಗಿರುವ ವಕೀಲ ಬ್ಯಾರಿ ರೂಕ್ಸ್ ಇದನ್ನು ಅವನು ತಿಳಿಯದೇ ಮಾಡಿದ ಅಪರಾಧವೆಂದು ನಿರೂಪಿಸಲು 15ಕ್ಕೂ ಹೆಚ್ಚು ಸಾಕ್ಷಿಗಳನ್ನು ತಯಾರುಮಾಡಿಕೊಂಡಿದ್ದಾರೆ. ಪ್ರತಿವಾದಿ ವಕೀಲರಾದ, 'ಪಿಟ್‌ಬುಲ್‍' ಎಂದೇ ಪ್ರಖ್ಯಾತರಾದ ಜೆರ್ರಿ ನೆಲ್ ಅವನ ವಾದವನ್ನು ಒಪ್ಪುತ್ತಿಲ್ಲ.  ದೊಡ್ಡ ಸ್ಟಾರ್ ಆದರೂ ಯಾವುದೇ ವಿನಾಯಿತಿಯಿಲ್ಲದೇ ನೀನು ಎಂಥ ಬೇಜವಾಬ್ದಾರ, ಸುಳ್ಳುಗಾರ ನೋಡು! ಎಂದಾಗ ಆಸ್ಕರ್ ತಲೆತಗ್ಗಿಸುತ್ತಾನೆ. ನನ್ನನ್ನು ಕ್ಷಮಿಸಿ ಎನ್ನುತ್ತಾನೆ. ನ್ಯಾಯಾಧೀಶೆ ಥೊಕೊಜೇಲ್ ಮಸಿಪಾ ಕೆಲಕಾಲ ಕಲಾಪ ಮುಂದೂಡಿ ಅವನಿಗೆ ಚೇತರಿಸಿಕೊಳ್ಳಲು ಸಮಯ ನೀಡುತ್ತಾರೆ. ಮತ್ತೆ ನೆಲ್ ವಿಚಾರಣೆ ಶುರುಮಾಡಿ ಆಸ್ಕರ್‌ನ ಇತಿಹಾಸ ಕೆದಕಿದಾಗ ಅವನು  ತಲ್ಲಣಿಸುತ್ತಾನೆ. ಕೆಲ ತಿಂಗಳ ಹಿಂದೆಯಷ್ಟೇ ತುಂಬಿದ ಹೋಟೆಲೊಂದರಲ್ಲಿ ಟೇಬಲ್ ಅಡಿಯಲ್ಲಿ ಆಸ್ಕರ್ ತನ್ನ ಗೆಳೆಯನ ಪಿಸ್ತೂಲು ಚಲಾಯಿಸಿದ್ದೇಕೆ ಎಂದು ಕೇಳುತ್ತಾರೆ. ಟ್ರಿಗ್ಗರ್ ತಾನಾಗೇ ಚಲಿಸಿದ್ದು, ನಾನು ಅದುಮಿದ್ದಲ್ಲ ಎಂದು ಅವನು ಹೇಳಿದಾಗ ಅವನನ್ನು ಕೆಕ್ಕರಿಸಿ ನೋಡುತ್ತಾರೆ ನೆಲ್. ನ್ಯಾಯಾಲಯಕ್ಕೆ ಮತ್ತೊಂದು ವಿಡಿಯೋ ತೋರಿಸುತ್ತಾರೆ.ಅದರಲ್ಲಿ ಪಿಸ್ತೂಲು ಹಿಡಿದ ಆಸ್ಕರ್ ಕಲ್ಲಂಗಡಿ ಹಣ್ಣೊಂದಕ್ಕೆ ಗುಂಡು ಹೊಡೆದು, ಅದು ಹೋಳಾಗುವುದನ್ನು ಕಂಡು 'ಇದು ಮನುಷ್ಯನ ಮಿದುಳಿಗಿಂತ ಬಹಳ ಮೃದು' ಎಂದು ಹೇಳುವ ಚಿತ್ರ ಮೂಡುತ್ತದೆ. ಅವನತ್ತ ತಿರುಗುವ ನೆಲ್, ರೀವಾಳ ತಲೆ ಸಿಡಿದು ಹೋಳಾಗಿದ್ದೂ ಹೀಗೆಯೇ, ನಿನಗೆ ಗೊತ್ತು ತಾನೆ? ಎಂದು ಕೇಳಿದಾಗ ಅವನು ನಿರುತ್ತರನಾಗುತ್ತಾನೆ. ಹೀಗೆ ಅವನಿಗೆ ಸಂಬಂಧಿಸಿದ ಘಟನೆಗಳನ್ನು ಹೆಕ್ಕಿ ತೆಗೆದು ಅವನ ಹೃದಯವನ್ನು ಕಿವುಚಿ, ಅವನ ಮನಸನ್ನು ದಿನದಿನವೂ ಹುರಿದು ತಿನ್ನುತ್ತಾರೆ ನೆಲ್.ದಕ್ಷಿಣ ಆಫ್ರಿಕಾದಲ್ಲಿ ನಮ್ಮಲ್ಲಿರುವಂತೆ ಹಲವು ಸದಸ್ಯರನ್ನೊಳಗೊಂಡ ನ್ಯಾಯಪೀಠ ಇಲ್ಲ. ಅಲ್ಲಿನ ವರ್ಣಭೇದ ನೀತಿಯ ಪ್ರಭಾವ ಹಾಗೂ ಪಳಿಯುಳಿಕೆಯಿಂದಾಗಿ ಅರ್ಹತೆಯಿರುವ ಯಾರೂ ಅದರ ಭಾಗವಾಗಲು ಬಯಸುವುದಿಲ್ಲ. ಆದ್ದರಿಂದ ಅದು 1969ರಲ್ಲೇ ರದ್ದಾಗಿ ಹೋಗಿದೆ. ಈಗ ಓರ್ವ ನಿಯುಕ್ತ ನ್ಯಾಯಾಧೀಶರೇ ಪ್ರಕರಣಗಳ ವಿಚಾರಣೆ ಪೂರೈಸುತ್ತಾರೆ. ಅವರಿಗೆ ತೀರ ಕ್ಲಿಷ್ಟ ಎನಿಸಿದ ಪಕ್ಷದಲ್ಲಿ ಅವರ ಸಹಾಯಕ್ಕೆ ಒಬ್ಬಿಬ್ಬರು ನಿರ್ಣಾಯಕರನ್ನು ಕೊಡಲಾಗುತ್ತದೆ. ಆಸ್ಕರ್ ಪ್ರಕರಣದಲ್ಲೂ ಹೀಗೇ ಆಗಿದೆ. ಮಸಿಪಾರ ಜೊತೆ ಇಬ್ಬರು ನಿರ್ಣಾಯಕರಿದ್ದಾರೆ. ಎಲ್ಲರೂ ಸೇರಿ ತೀರ್ಮಾನಕ್ಕೆ ಬರಬಹುದಾದರೂ ಶಿಕ್ಷೆ ಜಾರಿಗೊಳಿಸುವ ಹಕ್ಕಿರುವುದು ಮಸಿಪಾರಿಗೆ ಮಾತ್ರ. ಆಸ್ಕರ್ ಅಪರಾಧ ಸಾಬೀತಾದರೆ ಅವನಿಗೆ 25 ವರ್ಷ ಕಾರಾಗೃಹವಾಸದ ಶಿಕ್ಷೆ ಜಾರಿಯಾಗಲಿದೆ. ಅಪರಾಧಿಗೆ ಶಿಕ್ಷೆಯಾಗುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಿರಪರಾಧಿಗೆ ಶಿಕ್ಷೆಯಾಗದಿರುವುದು. ಅಂತಲೇ ತಮ್ಮ ಮಹತ್ತರ ಜವಾಬ್ದಾರಿಯ ಅರಿವಿರುವ ಮಸಿಪಾ ಪ್ರತಿಯೊಂದು ಸಾಕ್ಷಿಯನ್ನೂ, ಪ್ರತಿಯೊಂದು ಹೇಳಿಕೆ, ವಾದವಿವಾದವನ್ನೂ ಕೂಲಂಕಷವಾಗಿ ಪರಾಮರ್ಶಿಸುತ್ತಿದ್ದಾರೆ. ಘಟನೆಯ ಜಾಗದಲ್ಲಿದ್ದ ಆಸ್ಕರ್ ಕೃತಕ ಕಾಲಿನ ಪರೀಕ್ಷೆಯಿಂದ ಹಿಡಿದು ಇಡೀ ಘಟನೆಯನ್ನು ಮರುಸೃಷ್ಟಿಸಿರುವ ಫೊರೆನ್ಸಿಕ್ ತಜ್ಞ ರೋಜರ್ ಡಿಕ್ಸನ್ ಅಭಿಪ್ರಾಯದವರೆಗೂ ಎಲ್ಲವೂ ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ಮುಚ್ಚುಮರೆಯಿಲ್ಲದೆ ಎಲ್ಲ ಮಾಧ್ಯಮಗಳಿಂದಲೂ ಜಗಜ್ಜಾಹೀರಾಗುತ್ತಿದೆ.

ಬರೀ ಮೂರು ವಾರಗಳಲ್ಲಿ ಮುಗಿದುಹೋಗಬಹುದು ಎಂದೆಣಿಸಿದ್ದ ವಿಚಾರಣೆಯ ಅವಧಿ ವಿಸ್ತರಿಸುತ್ತಲೇ ಸಾಗಿದೆ. ಈಗ ಮೇ ತಿಂಗಳಲ್ಲಿ ಅಂತ್ಯಗೊಳ್ಳಬಹುದಾದ ಸಾಧ್ಯತೆ ಗೋಚರಿಸಿದೆ. ಆಸ್ಕರ್ ತಪ್ಪು ಮಾಡಿದ್ದಾನೋ ಇಲ್ಲವೋ, ತೀರ್ಪು ಅವನ ಪರವಾಗಿ ಬರುತ್ತದೋ ಇಲ್ಲವೋ, ಆದರೆ ಈಗಾಗಾಲೇ ಬಹಳಷ್ಟು ಅಭಿಮಾನಿಗಳನ್ನು ಕಳೆದುಕೊಂಡಿದ್ದಾನೆ. ನ್ಯಾಯಾಲಯದ, ವಕೀಲರ ವೆಚ್ಚಗಳನ್ನು ಸರಿತೂಗಿಸಲು, ಇದ್ದ ತನ್ನ ಒಂದೇ ಮನೆಯನ್ನು ಮಾರಿಕೊಂಡಿದ್ದಾನೆ. ನೈಕಿ ಅವನನ್ನು ಹೊರಹಾಕಿದೆ. ದಿನವೂ ನ್ಯಾಯಾಲಯಕ್ಕೆ ಬಂದು ಕೂರುವ ಅವನ ಅಣ್ಣ ಹಾಗೂ ತಂಗಿಯ ಬೆಂಬಲದ ಹೊರತಾಗಿಯೂ ಅವನನ್ನು ಶೂನ್ಯ ದಟ್ಟವಾಗಿ ಆವರಿಸಿಕೊಂಡಿದೆ.

ಭಾರತೀಯರಾಗಿ ಪ್ರಕರಣವನ್ನು ನೋಡಿದಾಗ ನಮಗೆ ನಾಚಿಕೆಯೆನಿಸುತ್ತದೆ. ಪ್ರಭಾವಿ ವ್ಯಕ್ತಿಗಳ ವಲಯಕ್ಕೆ ಸೇರಿದೊಡನೆ ಬರುವ ಆನೆಬಲ ಎಲ್ಲ ಅಪರಾಧಗಳನ್ನೂ ಮುಚ್ಚಿಹಾಕುವ ನಮ್ಮ ದೇಶದಲ್ಲಿ ಮಟ್ಟದ ಪಾರದರ್ಶಕತೆ ಎಂದಾದರೂ ಬರಲು ಸಾಧ್ಯವೇ? ಸುನಂದಾ ಪುಷ್ಕರ್ ಅನುಮಾನಾಸ್ಪದವಾಗಿ ಸತ್ತಾಗ ಸೀಳುನಾಯಿಗಳಂತೆ ಅಟ್ಟಿಸಿಕೊಂಡು ಓಡಿದ ನಮ್ಮ ಮಾಧ್ಯಮಗಳು ಆಮೇಲೆ ಬೇಟೆಯ ವಾಸನೆಯನ್ನೇ ಮರೆತು ಹಿಂತಿರುಗಿಬಿಟ್ಟವು! ಎಲ್ಲದಕ್ಕೂ ಸಿ.ಬಿ.. ಕದ ತಟ್ಟಿಯೋ ಆರ್.ಟಿ.. ಮೊರೆ ಹೊಕ್ಕೋ ನ್ಯಾಯ ಕೇಳಬೇಕಾದ ಪರಿಸ್ಥಿತಿಯಲ್ಲಿರುವ ನಾವು ಎಂದಿಗೆ ಇಷ್ಟು ನಿಷ್ಠುರರಾಗುವುದು?

ಹಾಗೆಯೇ, ವ್ಯಕ್ತಿಯೊಬ್ಬನು ಅಸಾಧಾರಣವಾದುದನ್ನು ಸಾಧಿಸಿದ ಕೂಡಲೇ ಅವನನ್ನು ದೇವರು ಮಾಡುವ ನಾವು ನಮ್ಮ ಮಕ್ಕಳಲ್ಲೂ ಅವನ ಕನಸನ್ನೇ ಬಿತ್ತಿ, ಅವನನ್ನೇ ತಮ್ಮ ರೋಲ್ ಮಾಡೆಲ್ಗಳಾಗಿ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತೇವೆ. ಅಸಾಧಾರಣವಾದದ್ದನ್ನು ಸಾಧಿಸಿದ ಮಾತ್ರಕ್ಕೆ ಮನುಷ್ಯ ಸಾಧಾರಣ ತಪ್ಪುಗಳನ್ನು ಮಾಡದೆ ಇರುತ್ತಾನೆಯೇ? ಅಲ್ಲಿಗೆ ಎಲ್ಲರೂ ಸಾಧಾರಣರೇ ಎಂದ ಮೇಲೆ ಎಲ್ಲರಲ್ಲೂ ಸ್ವಂತಿಕೆಯನ್ನು ಬಿತ್ತುವುದು, ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಡವೇ? ವಿಶ್ವದ ಯಾವುದೇ ಮೂಲೆ, ಯಾವುದೇ ಘಟನೆಯಿಂದಾದರೂ ಸರಿ, ನಾವು ಕಲಿಯಬೇಕಾದ ಪಾಠ ಇನ್ನೂ ಬಹಳಷ್ಟಿದೆ!
* * *