Wednesday, 24 September 2014

ಲವ್ ಜಿಹಾದ್ ಎಂಬ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?


ಲವ್ ಜಿಹಾದ್ ಅಥವಾ ರೋಮಿಯೋ ಜಿಹಾದ್! ಈ ಪದಗಳನ್ನು ಕೇಳಿದೊಡನೆ ಕಿವಿಗೆ ಕಾದ ಸೀಸೆಯನ್ನು ಸುರಿದ ಅನುಭವವಾಗುತ್ತದೆ. ಇದೊಂದು ಕಡಿಮೆಯಾಗಿತ್ತು ನಮಗೆ. ಧರ್ಮಾಂಧತೆಯ ಪರಾಕಾಷ್ಠೆಯಾದ ಉಗ್ರವಾದವನ್ನು ಹತ್ತಿಕ್ಕುವಲ್ಲಿ ಇನ್ನೂ ತಿಣುಕಾಡುತ್ತಲೇ ಇದ್ದೇವೆ. ಅಷ್ಟರಲ್ಲೇ ಇಂಥದ್ದೊಂದು ಸಂಚಿಗೂ ಸನ್ನದ್ಧರಾಗಬೇಕಾಗಿ ಬಂದಿದೆ. ಹಟಕ್ಕೆ ಬಿದ್ದ ಧರ್ಮವೊಂದು ಎಲ್ಲರನ್ನೂ ಆಹುತಿ ತೆಗೆದುಕೊಳ್ಳುವ ಸಲುವಾಗಿ ತನ್ನ ಕಬಂಧ ಬಾಹುಗಳನ್ನು ಅಷ್ಟೂ ದಿಕ್ಕುಗಳಲ್ಲಿ ಚಾಚಿರುವಂತೆ ಭಾಸವಾಗುತ್ತಿದೆ.

ಏನಿದೆ ಲವ್ ಜಿಹಾದ್‍ನಲ್ಲಿ? ಬಾಂಬ್ ಸ್ಫೋಟವಿಲ್ಲ, ರಕ್ತದ ಕೋಡಿ ಹರಿಯುವುದಿಲ್ಲ, ಜೀವಗಳೊಡನೆ ಚೆಲ್ಲಾಟವಂತೂ ಇಲ್ಲವೇ ಇಲ್ಲ. ಆದರೆ ಅದೆಲ್ಲಕ್ಕಿಂತ ಮಿಗಿಲಾದ ಹಾನಿ ಉಂಟಾಗುತ್ತಿದೆ. ನಮ್ಮ ಧರ್ಮ ಉಸಿರುಕಟ್ಟಿ ಸಾಯುತ್ತಿದೆ. ನಮ್ಮ ಚಿಗುರುಗಳನ್ನು ಮೊಳೆಸಬೇಕಾದ ಒಡಲುಗಳು ಅನ್ಯರ ಬಸಿರನ್ನು ಹೊರುತ್ತಿವೆ. ಹೊರಲಾರದೆ ಮುರುಟುತ್ತಿವೆ. ಲವ್ ಜಿಹಾದ್‍ನಲ್ಲಿ ನಡೆಯುವುದೇನೆಂದು ನೋಡೋಣ ಬನ್ನಿ. ಹಿಂದೂಗಳ ಅಡ್ಡ-ಹೆಸರುಗಳನ್ನು ಇಟ್ಟುಕೊಂಡ ಮುಸ್ಲಿಂ ಯುವಕರು ಹಿಂದೂ ಯುವತಿಯರ ಬೆನ್ನು ಬೀಳುತ್ತಾರೆ. ಅವರ ವೇಷವನ್ನು, ಹಣೆಯ ತಿಲಕವನ್ನು ನೋಡುವ ಹುಡುಗಿಯರಿಗೆ ತಾವು ಮರುಳಾಗುತ್ತಿರುವುದು ಧರ್ಮಾಂಧ ದುರುಳರಿಗೆ ಎಂದು ತಿಳಿಯುವುದೇ ಇಲ್ಲ. ಮದುವೆಯಾಗುವ ಸಲುವಾಗಿ ತಂದೆ-ತಾಯಿಯರಿಗೆ ಹೇಳದೆಯೇ ಮನೆಬಿಟ್ಟು ಬರುವ ಹೆಣ್ಣುಮಕ್ಕಳಿಗೆ ಹಿಂದೂ ಹೆಸರಿನ ಹಿಂದಿನ ಮುಸ್ಲಿಂ ಮುಖದ ಕರಾಳತೆ ಅರಿವಾಗುವುದೇ ಆಗ. ತಕ್ಷಣವೇ ಶುರುವಾಗುತ್ತದೆ ಮತಾಂತರದ ವರಾತ. ಹುಡುಗಿಯನ್ನು ತಮ್ಮ ಧರ್ಮಕ್ಕೆ ಬದಲಾಯಿಸಿಕೊಂಡು ಮದುವೆಯಾಗಿಬಿಟ್ಟರೆ ಅಲ್ಲಿಗೆ ಅವರ ಉದ್ದೇಶ ಈಡೇರಿದಂತೆಯೇ. ಹಾಗೆಂದು ಎಲ್ಲ ಪ್ರೇಮ ಪ್ರಕರಣಗಳೂ ಮದುವೆಯಲ್ಲಿ ಮುಕ್ತಾಯವಾಗುವುದಿಲ್ಲ. ತಮ್ಮ ಮುಸ್ಲಿಂ ಪ್ರೇಮಿಗಳ ಹಾಗೂ ಅವರ ಗೆಳೆಯರ ಅತ್ಯಾಚಾರಕ್ಕೆ ಬಲಿಯಾಗುವ ಎಷ್ಟೋ ಹೆಣ್ಣುಮಕ್ಕಳು ಸೂಳೆಕೇರಿಗಳನ್ನು ಸೇರುತ್ತಾರೆ. ಕಳೆದುಹೋದ ಮಾನ, ಕೆಡಿಸಿಕೊಂಡ ಹೆಸರುಗಳು ಅವರನ್ನು ಮತ್ತೆ ಸಮಾಜಮುಖಿಗಳಾಗಲು ಬಿಡುವುದೇ ಇಲ್ಲ. ಕಾಣೆಯಾದವರ ಪಟ್ಟಿಯಲ್ಲಿ ಅವರ ಬದುಕೂ ಕಳೆದು ಹೋಗುತ್ತದೆ.

ವಾಸ್ತವದಲ್ಲಿ ಲವ್ ಜಿಹಾದ್‍ನಂಥ ಯಾವ ಚಟುವಟಿಕೆಗಳೂ ಇಲ್ಲವೇ ಇಲ್ಲ, ಕೋಮುವಾದಿಗಳು ಅಂತರ್ಜಾತೀಯ ಮದುವೆಗಳಿಗೆ ಕೊಟ್ಟಿರುವ ಹೆಸರು ಇದು ಎಂಬುದು ಸೆಕ್ಯುಲರ್‍ವಾದಿಗಳ ವಿತ್ತಂಡ ವಾದ. ಅವರ ಜೊತೆ ದನಿಗೂಡಿಸುವವರು ನಮ್ಮ ರಾಷ್ಟ್ರೀಯ ಚಾನೆಲ್‍ಗಳ ಹೆಸರಾಂತ ಪತ್ರಕರ್ತರು! ಅವರು ಕೊಡುವ ಉದಾಹರಣೆಗಳು ಬಾಲಿವುಡ್‍ ನಟರದ್ದು. ಶಾರುಖ್ ಖಾನ್ ಗೌರಿಯನ್ನು ಮದುವೆಯಾಗಿದ್ದಾನಲ್ಲ ಅದು ಲವ್ ಜಿಹಾದ್‍ನ ಉದಾಹರಣೆಯೇ ಎಂದು ಕೇಳುತ್ತಾರೆ. ಹಿಂದೂ ಪತ್ನಿಯರ ಕೈ ಹಿಡಿದಿರುವ ಅಮೀರ್ ಖಾನ್, ಸೈಫ್ ಅಲಿ ಖಾನ್, ಅರ್‍ಬಾಜ್ ಖಾನ್ ಮುಂತಾದ 'ಖಾನ್'ದಾನಿಗಳು ಜಿಹಾದಿಗಳೇ ಎಂದು ಪ್ರಶ್ನಿಸುತ್ತಾರೆ. ಅಲ್ಲ, ಪ್ರೇಮ ವಿವಾಹಕ್ಕೂ ಲವ್ ಜಿಹಾದ್‍ಗೂ ಇರುವ ವ್ಯತ್ಯಾಸವನ್ನು ಅರಿಯಲಾಗದಷ್ಟು ಬೆಪ್ಪರೇ ನಾವು? ಲವ್ ಜಿಹಾದ್ ಎಂಬುದು ಕಟ್ಟುಕಥೆ ಎನ್ನುವ ಅವರ ವಾದವನ್ನು ಏಕೆ ನಂಬಬೇಕು? ಅದೂ ನಮ್ಮ ಮುಂದೆ ನೂರಾರು ದೃಷ್ಟಾಂತಗಳಿರುವಾಗ?


ಈಗ್ಗೆ ಆರೇಳು ವರ್ಷಗಳಾಗಿವೆ ಲವ್ ಜಿಹಾದ್‍ನ ಅಸ್ತಿತ್ವ ನಮ್ಮ ಗಮನಕ್ಕೆ ಬಂದು. ಮೊತ್ತ ಮೊದಲು, ಅಂದರೆ 2009ರಲ್ಲಿ, ಇದನ್ನು ಎಲ್ಲರ ಗಮನಕ್ಕೆ ತಂದಿದ್ದು ಕೇರಳದ ಕ್ಯಾಥೊಲಿಕ್ ಚರ್ಚ್. ಅಲ್ಲಿನ ಬಿಷಪ್‍ಗಳ ಪ್ರಕಾರ ಅದಾಗಲೇ ಸುಮಾರು 4,500 ಕ್ರೈಸ್ತ ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿತ್ತು. ಅದನ್ನು ಕೇಳಿದ ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕದ ಅಂಕಿ-ಅಂಶಗಳನ್ನು ತಡಕಿದಾಗ ತಿಳಿದುಬಂದದ್ದು, ಕರ್ನಾಟಕದಲ್ಲಿ ಅದಕ್ಕೆ ಬಲಿಯಾದವರ ಸಂಖ್ಯೆ ಸುಮಾರು 30ಸಾವಿರದಷ್ಟು ಎಂಬುದು!  ಈ ಪ್ರಕರಣಗಳನ್ನು ದಾಖಲಿಸಲೆಂದೇ ವಿಶ್ವ ಹಿಂದೂ ಪರಿಷತ್ ಸಹಾಯವಾಣಿಯನ್ನು ಪ್ರಾರಂಭಿಸಿತು. ಮೂರೇ ತಿಂಗಳಲ್ಲಿ ಅದಕ್ಕೆ ಬಂದ ಕರೆಗಳ ಸಂಖ್ಯೆ 1500! ನಿಜವಾಗಿಯೂ ದಿಗಿಲಾದದ್ದೇ ಆಗ. ಒಮ್ಮೆಗೇ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ತನಿಖೆ ಶುರುವಾಯಿತು. ಕರ್ನಾಟಕದಲ್ಲಿ ಸಿ.ಐ.ಡಿ ತನಿಖೆ ನಡೆದರೂ ಲವ್ ಜಿಹಾದ್‍ಅನ್ನು ರುಜುವಾತು ಪಡಿಸುವ ಯಾವ ಸಾಕ್ಷ್ಯಗಳೂ ಸಿಗಲಿಲ್ಲ. ಎಲ್ಲವೂ ಪ್ರೇಮ ವಿವಾಹಗಳೇ, ಎಲ್ಲ ಹೆಣ್ಣುಮಕ್ಕಳೂ ತಮ್ಮಿಚ್ಛೆಯಂತೆಯೇ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ವರದಿ ಕೊಟ್ಟರು ಅಂದಿನ  DIG ಆಗಿದ್ದ ಜೇಕಬ್ ಪುನ್ನೂಸ್. ಆದರೆ ಕೇರಳದಲ್ಲಿ ಹಾಗಾಗಲಿಲ್ಲ. 2009ರ ಡಿಸೆಂಬರ್ 9 ರಂದು, ಕೇರಳದ ಮುಖ್ಯ ನ್ಯಾಯಾಲಯದ ನ್ಯಾಯಾಧೀಶ ಕೆ.ಟಿ.ಸಂಕರನ್ ಇಂಥದೇ ಒಂದು ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಹಲವಾರು ಹುಡುಗಿಯರ ಮತಾಂತರ ಮಾಡಿದ್ದ ಮುಸ್ಲಿಂ ಯುವಕ ಜಾಮೀನಿಗಾಗಿ ಅವರ ಮುಂದೆ ನಿಂತಿದ್ದ. ವಿಚಾರಣೆ ಮುಗಿಯುತ್ತಿದ್ದಂತೆಯೇ ಇದು ಬಲವಂತದ ಮತಾಂತರವೇ ಎಂದು ಸ್ಪಷ್ಟ ಭಾಷೆಯಲ್ಲಿ ಹೇಳಿಬಿಟ್ಟರು ಸಂಕರನ್. ಪರಿಣಾಮವೇನಾಯಿತೆಂದರೆ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆಂಬ ಆರೋಪ ಹೊರಿಸಿ, ಲವ್ ಜಿಹಾದ್ ಪ್ರಕರಣಗಳ ತನಿಖೆಯನ್ನೇ ಸ್ಥಗಿತಗೊಳಿಸಲಾಯಿತು! ಸರಿಯೇ, ನೆಹರೂ ಸ್ಥಾಪಿಸಿ ಹೋಗಿರುವ ಓಲೈಕೆ ಪದ್ಧತಿಯಲ್ಲಿ ಅಲ್ಪಸಂಖ್ಯಾತರ ಭಾವನೆಗಳಿಗೆ ಎಲ್ಲಾದರೂ ಘಾಸಿ ಮಾಡುವುದುಂಟೇ?

2010ರಲ್ಲಿ ಪ್ರಕರಣ ಮತ್ತೊಮ್ಮೆ ಗರಿಗೆದರಿತು. ಕೇರಳದ ಅಂದಿನ ಮುಖ್ಯಮಂತ್ರಿ ಅಚ್ಯುತಾನಂದನ್, ಲವ್ ಜಿಹಾದ್‍ಅನ್ನು ಬಳಸಿಕೊಂಡು ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದರು. ಯಥಾಪ್ರಕಾರ ಕಾಂಗ್ರೆಸ್ ಸರ್ಕಾರ ಅವರ ಬಾಯಿ ಮುಚ್ಚಿಸಿತು. ಆ ನಂತರವೂ ಮತಾಂತರ ಅವ್ಯಾಹತವಾಗಿ ಸಾಗಿದೆ. ಹೇಗಿರುತ್ತವೆ ಲವ್ ಜಿಹಾದ್ ಪ್ರಕರಣಗಳು ಎಂಬ ಕುತೂಹಲವಿರುತ್ತದಲ್ಲವೇ ನಿಮಗೆ, ಕೆಲವನ್ನು ನೋಡೋಣ ಬನ್ನಿ.

ಇದು ಚಾಮರಾಜನಗರದಲ್ಲಿ ನಡೆದ ಘಟನೆ. 2009ರ ಆಗಸ್ಟ್ ತಿಂಗಳು. ಬೇಕರಿ ಮಾಲೀಕರಾಗಿದ್ದ ಸೆಲ್ವ‍ರಾಜ್ ಎಂಬುವರ ಹಿರಿಮಗಳು ಸಿಲ್ಜಾ ರಾಜ್ ಅಸ್ಗರ್ ಎಂಬ ಮುಸ್ಲಿಂ ಬಸ್ ಡ್ರೈವರ್‍ನನ್ನು ಪ್ರೀತಿಸುತ್ತಾಳೆ. ಅವನನ್ನೇ ಮದುವೆಯಾಗುವುದಾಗಿ ಹಟ ಹಿಡಿಯುತ್ತಾಳೆ. ಅಪ್ಪ ಮದುವೆಗೆ ಒಪ್ಪುವುದಿಲ್ಲ ಎನ್ನುವುದು ಗೊತ್ತಾದ ತಕ್ಷಣ ಅಸ್ಗರ್‍ನೊಂದಿಗೆ ಓಡಿ ಹೋಗುತ್ತಾಳೆ. ಮಗಳನ್ನು ಹುಡುಕುವಷ್ಟರಲ್ಲಿ ಹೈರಾಣಾಗುತ್ತಾನೆ ಅಪ್ಪ. ವಾಪಸ್ಸು ಬಾ ಎಂದು ಗೋಗರೆಯುತ್ತಾನೆ. ಅದರೆ ಅಸ್ಗರನ ಮನೆಯವರು ಅವಳನ್ನು ಕಳಿಸುವುದಿಲ್ಲ. ಏಕೆಂದರೆ, ಅಷ್ಟು ಹೊತ್ತಿಗೆ ಅಸ್ಗರನೊಂದಿಗೆ ಮದುವೆಯಾಗಿ ಅವಳು ಮತಾಂತರಗೊಂಡಿರುತ್ತಾಳೆ.

ಮತ್ತೊಂದು ಘಟನೆ. 18 ವರ್ಷದ ಬಂಗಾಳಿ ಹುಡುಗಿ ರಿಂಕು ಇದ್ದಕ್ಕಿದ್ದಂತೆ ಕಾಣೆಯಾಗುತ್ತಾಳೆ. ಪತ್ತೆಯಾಗುವುದು ದೆಹಲಿಯ ಹೋಟೆಲೊಂದರಲ್ಲಿ ಹೆಣವಾಗಿ. ಕಾಸಿಮ್ ಎಂಬ 41 ವರ್ಷದ ಮುಸ್ಲಿಂ ಗೆಳೆಯನೊಂದಿಗೆ ಆ ಹೋಟೆಲ್‍ಗೆ ಹೋದ ರಿಂಕು, ಎರಡು ದಿನಗಳ ನಂತರ ಫ್ಯಾನ್‍ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಿಗುತ್ತಾಳೆ. ಜೊತೆಗಾರ ಕಾಸಿಂ ನಾಪತ್ತೆ!

ಅಸ್ಸಾಂನ ವಿಧಾನಸಭಾ ಸದಸ್ಯೆ ರುಮಿ ನಾಥ್‍ಳ ಕಥೆ ನಿಮಗೆ ಗೊತ್ತೋ ಇಲ್ಲವೋ. ಲಾಯಕ್ಕಾದ ಗಂಡ, ಎರಡು ವರ್ಷದ ಮುದ್ದಾದ ಮಗಳಿದ್ದ ರುಮಿ, ಫೇಸ್‍ಬುಕ್‍ನಲ್ಲಿ ಜಾಕಿರ್ ಎಂಬ ಯುವಕನ ಪ್ರೀತಿಗೆ ಸಿಲುಕುತ್ತಾಳೆ. ಅವನನ್ನು ಮುಸ್ಲಿಂ ಪದ್ಧತಿಯಂತೆ ಮದುವೆಯಾಗಿ ರಾತ್ರೋರಾತ್ರಿ ಗಂಡ, ಮಗಳನ್ನು ಬಿಟ್ಟು ಓಡಿ ಹೋಗುತ್ತಾಳೆ. ತನ್ನ ಹೆಸರನ್ನು ರಬಿಯಾ ಸುಲ್ತಾನಾ ಎಂದು ಬದಲಾಯಿಸಿಕೊಳ್ಳುತ್ತಾಳೆ. ಇಷ್ಟೆಲ್ಲಾ ನಡೆಯುವುದು ಅಸ್ಸಾಂನ ಮಂತ್ರಿ ಸಿದ್ದಿಕಿ ಅಹಮದ್‍ನ ನೇತೃತ್ವದಲ್ಲಿ. ಹಾಗೆ ಜಾಕಿರ್‍ನೊಡನೆ ಬಾಂಗ್ಲಾದೇಶಕ್ಕೆ ಓಡಿ ಹೋಗುವ ರುಮಿಗೆ ಅವನು ಅಯೋಗ್ಯ ಎಂಬ ಸತ್ಯ ಗೊತ್ತಾಗಲು ಬಹಳ ದಿನ ಹಿಡಿಯುವುದಿಲ್ಲ. ದುಶ್ಚಟಗಳ ದಾಸನಾದ ಜಾಕಿರ್ ಅವಳನ್ನು ದೈಹಿಕವಾಗಿ ಹಿಂಸಿಸತೊಡಗಿದಾಗ ಅವನಿಂದ ತಪ್ಪಿಸಿಕೊಂಡು ಬಂದು ಅವನ ವಿರುದ್ಧ ದೂರು ದಾಖಲಿಸುತ್ತಾಳೆ.

ಇತ್ತೀಚೆಗೆ ತುಂಬಾ ಸುದ್ದಿಯಾದ ರಾಷ್ಟ್ರ ಮಟ್ಟದ ಶೂಟರ್ ತಾರಾ ಸಹದೇವಳ ಕಥೆ ನಿಮಗೆ ಗೊತ್ತಿರಬಹುದು. ತನ್ನ ಹಿಂದೂ ಗೆಳೆಯ ರಂಜಿತ್ ಕುಮಾರ್ ಕೋಹ್ಲಿಯನ್ನು ಮದುವೆಯಾಗಿ ಸಂತಸವಾಗಿದ್ದ ಅವಳಿಗೆ ಅವನ ನಿಜ ನಾಮಧೇಯ ರಕೀಬುಲ್ ಹಸನ್ ಖಾನ್ ಎಂಬುದು ತಿಳಿದು ಬರುತ್ತಿದ್ದಂತೆ ಆಘಾತವಾಗುತ್ತದೆ. ಅಷ್ಟೇ ಅಲ್ಲ, ಅವಳನ್ನು ಇಸ್ಲಾಂಗೆ ಮತಾಂತರಗೊಳ್ಳಿಸಲು ಯತ್ನಿಸುವ ರಕೀಬುಲ್, ದೈಹಿಕವಾಗಿಯೂ ಬಹಳ ಹಿಂಸೆ ನೀಡುತ್ತಾನೆ. ಗೃಹಬಂಧಿಯಾಗಿಬಿಡುವ ತಾರಾ ಮನೆಕೆಲಸದವಳ ಮೂಲಕ ತನ್ನ ಸಹೋದರನಿಗೆ ವಿಷಯ ಮುಟ್ಟಿಸುತ್ತಾಳೆ. ಮದುವೆಯಾದ ಮೇಲೆ ಮೋಸದ ಅರಿವಾಗಿ ಪ್ರತಿಭಟಿಸುವ ಇಂಥ ಪ್ರಕರಣಗಳು ಒಂದೆಡೆಯಾದರೆ,  ಅತ್ಯಾಚಾರಕ್ಕೆ ಬಲಿಯಾಗುವ ಪ್ರಕರಣಗಳೂ ಬಹಳಷ್ಟಿವೆ. ಅದೇ ರೇಪ್ ಜಿಹಾದ್!

ಲವ್ ಜಿಹಾದ್‍ಗೆ ಪ್ರೀತಿಯ ಪರದೆಯಾದರೆ ರೇಪ್ ಜಿಹಾದ್‍ಗೆ ಅತ್ಯಾಚಾರದ ಆಸರೆ. ಉದಾಹರಣೆಗೆ, ಕಾಸರಗೋಡಿನ ಹತ್ತಿರ ಬಯರ್ ಎಂಬ ರಬ್ಬರ್ ಬೆಳೆಯುವ ಪ್ರದೇಶವಿದೆ. ಅಲ್ಲಿ, ಕಳೆದ ಆಗಸ್ಟ್ ಏಳರಂದು ಜಕಾರಿಯಾ ಎಂಬ 27ರ ಹರೆಯದ ಮುಸ್ಲಿಂ ಯುವಕ 21ರ ಹರೆಯದ ಹಿಂದೂ ಹುಡುಗಿಯೊಬ್ಬಳನ್ನು ತನ್ನ ಗೆಳೆಯರೊಡನೆ ಸೇರಿ ಅತ್ಯಾಚಾರ ಮಾಡಿದ. ವಿರೋಧಿಸಿದ ಆವಳ ಮೇಲೆ ಅಮಾನುಷವಾಗಿ ಹಲ್ಲೆಯನ್ನೂ ಮಾಡಿದ. ಇವನಷ್ಟೇ ಅಲ್ಲ, ಹಲವು ನಗರಗಳಲ್ಲಿ ರೇಪ್ ಜಿಹಾದಿಗಳು ಹೀಗೇ ಕಾರ್ಯತತ್ಪರರಾಗಿದ್ದಾರೆ.ಗಾಜಿಯಾಬಾದ್‍ನ ಫರ್ಖಾನ್, ಮೀರತ್‍ನ ಇದ್ರಿಶ್ ಕುಖ್ಯಾತರು. ಉತ್ತರಪ್ರದೇಶದ ಹತ್ರಾಸ್‍ನಲ್ಲಿ 22 ವರ್ಷದ ದಲಿತ ಯುವತಿಯ ಮೇಲೆ ಏಳು ಮುಸ್ಲಿಂ ಯುವಕರ ಗುಂಪೊಂದು ಅತ್ಯಾಚಾರವೆಸಗಿತು. ಅಷ್ಟೇ ಸಾಲದು ಎಂಬಂತೆ ಅವಳನ್ನು ಸಜೀವವಾಗಿ ದಹಿಸಿತು. ಕಳೆದ ವರ್ಷ ಬಂಟ್ವಾಳದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಿ. ಬಿ.ಎಡ್ ಮುಗಿಸಿದ್ದ ಸ್ನೇಹಾ ಸರ್ಕಾರಿ ನೌಕರಿ ಸಿಕ್ಕ ಖುಷಿಯಲ್ಲಿದ್ದಳು. ಶಿಕ್ಷಕಿಯಾಗಿ ಬದುಕು ಆರಂಭಿಸುವ ಉತ್ಸಾಹದಲ್ಲಿದ್ದವಳನ್ನು ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಬೆಳ್ತಂಗಡಿಯ ಹತ್ತಿರ ಕೊಲೆಯಾದ ಸೌಜನ್ಯಳದ್ದೂ ಬರ್ಬರ ಅತ್ಯಾಚಾರದ ಕಥೆಯೇ. ಈ ಘಟನೆಗಳಲ್ಲಿ ಆಪಾದಿತರು ಮುಸ್ಲಿಂ ಯುವಕರೇ.

ಇಲ್ಲೇ ಈ ಗತಿಯಾದರೆ ಇನ್ನು ಪಾಕಿಸ್ತಾನದಲ್ಲಿರುವ ಹಿಂದೂಗಳ ಪರಿಸ್ಥಿತಿ ಎಷ್ಟು ದುಸ್ತರವಿರಬಹುದು ಊಹಿಸಿ. ಎಳೆಯ ಕಂದಮ್ಮಗಳು ನಾಪತ್ತೆಯಾಗಿಬಿಡುತ್ತವೆ. ವಯಸ್ಸಿಗೆ ಬಂದಿರುವ ಹುಡುಗಿಯರು ಅಪಹೃತರಾಗುತ್ತಾರೆ. ಕಳೆದ ಜನವರಿಯಲ್ಲಿ ಸಪ್ನಾ ರಾಣಿ ಎಂಬ ಶಿಕ್ಷಕಿಯ ಅಪಹರಣವಾಗಿತ್ತು. ಅವಳ ಮೊಬೈಲ್ ಫೋನ್‍ನಿಂದ ದೊರೆತ ಸುಳಿವಿನ ಜಾಡು ಹಿಡಿದು ಪೋಲೀಸರು ಆವಳನ್ನು ಪಾರು ಮಾಡಿದ್ದರು. ಅವಳದ್ದೂ ಅದೇ ಕಥೆ. ಇಸ್ಲಾಂ ಸೇರುವಂತೆ, ತನ್ನನ್ನು ಮದುವೆಯಾಗುವಂತೆ ಅಪಹರಣಕಾರನ ಒತ್ತಾಯ. ಹೀಗೇ ಪಟ್ಟಿ ಮಾಡುತ್ತಾ ಹೋದರೆ ಬೆಚ್ಚಿ ಬೀಳುವಷ್ಟು ಪ್ರಕರಣಗಳು ಸಿಗುತ್ತವೆ. ಲವ್ ಜಿಹಾದ್‍ನ ಇರುವಿಕೆಯನ್ನೇ ಅಲ್ಲಗಳೆಯುವ ರಾಜಕಾರಣಿಗಳು ಒಂದೆಡೆಯಾದರೆ, ಹಿಂದುತ್ವವನ್ನು ಕೋಮುವಾದ ಎಂದು ಬಿಂಬಿಸಿ ಬೊಬ್ಬೆ ಹೊಡೆಯುವ ರಾಷ್ಟ್ರೀಯ ಮಾಧ್ಯಮಗಳು ಮತ್ತೊಂದೆಡೆ. ಯಾರು ಬೆಳಕಿಗೆ ತರಬೇಕು ಈ ವ್ಯವಸ್ಥಿತ ಸಂಚನ್ನು? ಇದೇ ಕೆಲಸವನ್ನು ಹಿಂದೂಗಳು ಮಾಡಿದ್ದರೆ ಈ ಜನ ಸುಮ್ಮನಿರುತ್ತಿದ್ದರೇ?

ಲವ್ ಜಿಹಾದ್‍ ಎಂಬ ಬೆಂಕಿ ನಮ್ಮ ಕಣ್ಣಿಗೆ ಕಾಣುವಂತೆ ಧಗಧಗನೆ ಉರಿಯುತ್ತಿಲ್ಲ. ಆದರೆ ಕೆಂಡವಾಗಿ ಒಳಗಿನಿಂದಲೇ ನಮ್ಮ ಬೇರುಗಳನ್ನು ಸುಡುತ್ತಿದೆ. ಪ್ರೀತಿಯೆಂಬ ಬೂದಿಯನ್ನು ಮುಚ್ಚಿಕೊಂಡಿರುವ ಇದಕ್ಕೆ ಬಲಿಯಾಗದಂತೆ ನಮ್ಮ ಯುವ ಪೀಳಿಗೆಯನ್ನು ತಡೆಯಬೇಕಾಗಿದೆ. ಬಾಲಿವುಡ್ ಚಿತ್ರಗಳ, ಚಿತ್ರನಟರ ಮೋಡಿಗೆ ಬಲಿಯಾಗಿ ಮನಸ್ಸನ್ನು ಲಂಗು ಲಗಾಮಿಲ್ಲದೆ ಹರಿಯಬಿಡುವ ಮಂದಿಯನ್ನು ವಾಸ್ತವಕ್ಕೆ ಎಳೆದು ತರಬೇಕಾಗಿದೆ. ಸದ್ಯದ ಮಟ್ಟಿಗೆ ಪ್ರೀತಿಯನ್ನು ಧರ್ಮದ ತಳಹದಿಯ ಮೇಲೇ ಹುಡುಕಿಕೊಳ್ಳುವ ಅನಿವಾರ್ಯತೆಯನ್ನೂ ಬಿಡಿಸಿ ಹೇಳಬೇಕಾಗಿದೆ. ಸಹಿಷ್ಣುಗಳು ಎಂಬ ಹಣೆಪಟ್ಟಿಯೊಂದಿಗೆ ಜೀವಿಸುವ ರೂಢಿಯನ್ನು ಬಿಡದಿದ್ದಲ್ಲಿ ನಮ್ಮ ಧರ್ಮಕ್ಕೆ ನಾವೇ ಮಾರಕವಾಗುವ ದಿನಗಳು ದೂರವಿಲ್ಲ.

ತಂಟೆ ಮಾಡುತ್ತಿರುವ ಈ ಲವ್ ಜಿಹಾದ್ ಎಂಬ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

ಯಾರನ್ನು ಪೆಂಗರನ್ನಾಗಿಸಹೊರಟಿದ್ದಾರೆ ಜಿನ್‍ಪಿಂಗ್?ಅಂತೂ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ ಬಂದಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ಚೀನಾದ ಒಟ್ಟಾರೆ ಅಧ್ಯಕ್ಷರಲ್ಲಿ ಇವರು ಮೂರನೆಯವರು. 1996ರಲ್ಲಿ ಜಿಯಾಂಗ್ ಜೆಮಿನ್ ಬಂದಿದ್ದರು. ನಂತರ 2006ರಲ್ಲಿ ಬಂದಿದ್ದು ಹು ಜಿಂಟಾವೋ. ಈಗ ಜಿನ್‍ಪಿಂಗ್‍ರ ಸರದಿ. ಕಮ್ಯೂನಿಸ್ಟ್ ಪಕ್ಷದ ನೇತಾರ, ಚೀನೀ ಸೇನೆಯ ಪರಮೋಚ್ಛ ಅಧಿಕಾರಿ ಹಾಗೂ ಆ ದೇಶದ ಅಧ್ಯಕ್ಷರೂ ಆಗಿರುವುದು ಅವರ ವೈಶಿಷ್ಟ್ಯ. ತಮ್ಮ ದೇಶಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳ ಮೇಲೂ ನೇರ ಹಿಡಿತ ಹೊಂದಿರುವ ಶಕ್ತಿ ಕೇಂದ್ರ ಆತ. ಎಲ್ಲ ಸರಿ, ಆದರೆ ಭಾರತಕ್ಕೆ ಭೇಟಿ ನೀಡುವುದರ ಹಿಂದಿನ ಅವರ ಉದ್ದೇಶವೇನಿರಬಹುದು ಎಂಬ ಕುತೂಹಲ ನಮ್ಮನ್ನು ಕಾಡುತ್ತದಲ್ಲವೇ? ಇಂದು ಆರ್ಥಿಕವಾಗಿ ಸಬಲವಾಗಿರುವ ದೇಶಗಳ ಪಟ್ಟಿಯಲ್ಲಿ ಚೀನಾದ್ದು ಎರಡನೆಯ ಸ್ಥಾನ. ನಮ್ಮೊಡನೆ ಸಾಮರಸ್ಯ ಬಿಡಿ, ತೋರಿಕೆಯ ಸೌಹಾರ್ದದ ಹಂಗೂ ಅದಕ್ಕೆ ಬೇಕಾಗಿಲ್ಲ. ಹಾಗಿರುವಾಗ, ತಾನಾಗಿಯೇ ಜೇಬಿನಲ್ಲಿ 100 ಬಿಲಿಯನ್ ಡಾಲರ್‍ಗಳನ್ನಿಟ್ಟುಕೊಂಡು ಬಂದು ವ್ಯಾಪಾರವೃದ್ಧಿಯ ಹೆಸರಿನಲ್ಲಿ ಭಾರತದ ಬಾಗಿಲು ಬಡಿಯುವ ಕರ್ಮ ಅದಕ್ಕೇನಿದೆ ಎನಿಸುತ್ತದೆ ಅಲ್ಲವೇ? ಹೌದು. ವಿಶ್ವದಲ್ಲೇ ಅತ್ಯಂತ ದೊಡ್ಡ ಸೇನಾಬಲವಿರುವ ಚೀನಾದೊಳಗೂ ಸಮಸ್ಯೆಗಳಿವೆ. ಭಾರತದಲ್ಲಿ ಹೂಡಿಕೆ ಮಾಡುವ ಹುನ್ನಾರಕ್ಕೂ ಕಾರಣಗಳಿವೆ. ಅವುಗಳನ್ನು ವಿಶ್ಲೇಷಿಸೋಣ ಬನ್ನಿ.

ಕಳೆದ ಕೆಲ ದಶಕಗಳಿಂದ ಚೀನಾದ ಕಮ್ಯುನಿಸ್ಟ್ ಸರ್ಕಾರ ತನ್ನ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ. ನಮ್ಮ ಪ್ರಧಾನಿಗಳ ನಿವಾಸ ನಂ.7, ರೇಸ್‍ಕೋರ್ಸ್ ರಸ್ತೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಆದರೆ ಚೀನಾದ ಅಧ್ಯಕ್ಷರಾಗಲೀ, ಪಾಲಿಟ್ ಬ್ಯೂರೋದ ಇತರೆ ಏಳು ಸದಸ್ಯರಾಗಲೀ ಎಲ್ಲಿ ವಾಸ ಮಾಡುತ್ತಾರೆ ಎಂಬುದು ಇವತ್ತಿಗೂ ನಿಗೂಢ! ಅವರಿಗಾಗಿ ಮೀಸಲಾಗಿರುವ ಮನೆಗಳಲ್ಲಿ ಅವರು ಇರುವುದೇ ಇಲ್ಲ. ಪಾರದರ್ಶಕತೆಯೇ ಇಲ್ಲದ ಆಡಳಿತ ನೀಡುವ ಮಂದಿಗೆ ಜನರ ನಡುವೆ ವಾಸಿಸುವ ಧೈರ್ಯ ಹೇಗೆ ತಾನೆ ಬಂದೀತು ಅಲ್ಲವೇ? ಮತ್ತೊಂದು ಮುಖ್ಯ ವಿಷಯವೂ ಇದೆ. 1976ರಲ್ಲಿ ಚೀನಾದ ಜನಸಂಖ್ಯೆ ಸುಮಾರು 940 ಮಿಲಿಯನ್ (1 ಮಿಲಿಯನ್ = 10 ಲಕ್ಷ) ಮುಟ್ಟಿತ್ತು. ಜನಸಂಖ್ಯಾ ಸ್ಫೋಟವನ್ನು ತಡೆಯಲು ಅದು ಕೈಗೊಂಡ ನಿರ್ಣಯ ಯಾವುದು ಹೇಳಿ? ದಂಪತಿಗಳೆಲ್ಲ ಒಂದೇ ಮಗುವನ್ನು ಹೊಂದಬೇಕೆಂಬ ಕಡ್ಡಾಯ ನಿಯಮವನ್ನು ಹೇರಿದ್ದು! ಮೊದಲ ಮಗು ಅಂಗವಿಕಲವಾಗಿದ್ದರೆ, ಮಾನಸಿಕವಾಗಿ ಅಸ್ವಸ್ಥವಾಗಿದ್ದರೆ ಅಥವಾ ಹೆಣ್ಣಾಗಿದ್ದರೆ ಎರಡನೆಯದಕ್ಕೆ ಅನುಮತಿ ಸಿಗುತ್ತಿತ್ತು. ಕೆಲ ನಗರಗಳಲ್ಲಿ ದಂಡ ಕಟ್ಟಿ (ಸುಮಾರು 18000 ಅಮೆರಿಕನ್ ಡಾಲರ್‍ನಷ್ಟು!) ಎರಡನೆಯ ಮಗುವನ್ನು ಹೊಂದುವ ಅವಕಾಶವಿತ್ತಾದರೂ ಅದು ಎಲ್ಲರಿಗೂ ಸಾಧ್ಯವಾಗುತ್ತಿರಲಿಲ್ಲ. ಕದ್ದು ಬಸಿರಾದವರನ್ನು ಸರ್ಕಾರಿ ಅಧಿಕಾರಿಗಳು ಮುಲಾಜಿಲ್ಲದೆ ಎಳೆದುಕೊಂಡು ಹೋಗುತ್ತಿದ್ದರು. ಕೈಕಾಲು ಕಟ್ಟಿ ಹೊಟ್ಟೆಯಲ್ಲೇ ಮಗುವನ್ನು ಸಾಯಿಸುವ ವಿಷಪೂರಿತ ಚುಚ್ಚುಮದ್ದುಗಳನ್ನು ಡಾಕ್ಟರ್‍ಗಳ ಕೈಲಿ ಕೊಡಿಸುತ್ತಿದ್ದರು. ಹೀಗೆ 1979ರಿಂದ 2013ರ ವರೆಗೂ ಸುಮಾರು 330ಮಿಲಿಯನ್ ಭ್ರೂಣಗಳನ್ನು ಹತ್ಯೆಮಾಡಲಾಗಿದೆ. 400ಮಿಲಿಯನ್‍ಗೂ ಹೆಚ್ಚು ಗರ್ಭನಿರೋಧಕಗಳನ್ನು ಯುವತಿಯರ ಗರ್ಭಕೋಶಗಳೊಳಗೆ ಬಲವಂತವಾಗಿ ಹೂತಿಡಲಾಗಿದೆ! ಈ ನಿಯಮ ಸಡಿಲಾಗಿದ್ದು ಕಳೆದ ನವೆಂಬರ್‍ನಲ್ಲಿ. ಈಗ, ಗಂಡಹೆಂಡಿರಲ್ಲಿ ಒಬ್ಬರಾದರೂ ತನ್ನ ತಂದೆ-ತಾಯಿಯರ ಒಂದೇ ಮಗುವಾಗಿದ್ದ ಪಕ್ಷದಲ್ಲಿ ಅವರು ಎರಡು ಮಕ್ಕಳನ್ನು ಹೊಂದಬಹುದು!

ಅದರ ಸರ್ವಾಧಿಕಾರಿ ಧೋರಣೆ ಇಲ್ಲಿಗೇ ನಿಲ್ಲುವುದಿಲ್ಲ. ಜಿದ್ದಿಗೆ ಬಿದ್ದು ಉತ್ಪಾದನಾ ಘಟಕಗಳನ್ನು, ಕಾರ್ಖಾನೆಗಳನ್ನು ತೆರೆದಿರುವ ಚೀನಾ ಸರ್ಕಾರ ಭೂಮಿಯ ಸ್ವಾಧೀನವನ್ನು ತಾನೇ ಇಟ್ಟುಕೊಳ್ಳುತ್ತದೆ. ಉದ್ಯಮಿಗಳ ಪಾಲೇನಿದ್ದರೂ ಬರುವ ಲಾಭಕ್ಕೆ ಸೀಮಿತ. ಕೀಲಿ ಕೊಟ್ಟ ಗೊಂಬೆಗಳ ಹಾಗೆ ದುಡಿಯುವ ಚೀನೀಯರು ಯಂತ್ರಗಳಿಗಿಂತ ಕಡೆಯಾಗಿಬಿಟ್ಟಿದ್ದಾರೆ. ನಗುವೆಂಬುದೇ ತುಟ್ಟಿ. ಇನ್ನು ವಾತಾವರಣದ ಪಾಡೋ ದೇವರಿಗೇ ಪ್ರೀತಿ! ಹವೆ ಎಷ್ಟು ಕಲುಷಿತವಾಗಿದೆಯೆಂದರೆ ಕತ್ತೆತ್ತಿ ನೋಡಿದಾಗ ನೀಲಾಕಾಶ ಕಂಡರೆ ಆ ಬ್ರಹ್ಮನ ಮೇಲಾಣೆ! ಬರುವ ಆದಾಯದಲ್ಲಿ ಶೇಕಡಾ 10ರಷ್ಟು, ಗಾಳಿ, ನೀರುಗಳ ಶುದ್ಧೀಕರಣಕ್ಕೇ ವ್ಯಯವಾಗುತ್ತದೆ! ಇವೆಲ್ಲದರಿಂದ ರೋಸಿಹೋಗಿರುವ ಜನ ಮುಷ್ಕರಗಳಿಗೆ ಇಳಿಯುತ್ತಿದ್ದಾರೆ. ಕಳೆದ ವರ್ಷವೊಂದರಲ್ಲೇ ಸುಮಾರು 2ಲಕ್ಷ 35ಸಾವಿರದಷ್ಟು ಮುಷ್ಕರಗಳು ನಡೆದಿವೆ! ನೆಮ್ಮದಿಯ ಸಲುವಾಗಿ ಜನ ತಂಡೋಪತಂಡವಾಗಿ ಯೋಗ ಕೇಂದ್ರಗಳಿಗೆ ಲಗ್ಗೆಯಿಡುತ್ತಿದ್ದಾರೆ!

ಇವು ಆಂತರಿಕ ವಿಷಯಗಳಾದವು. ಇನ್ನು ಆರ್ಥಿಕ ವಲಯ ಹೇಗಿದೆ ನೋಡೋಣ ಬನ್ನಿ. ಯಾವುದೇ ದೇಶದ ಆರ್ಥಿಕ ಸಾಮರ್ಥ್ಯದ ಅಳತೆಗೋಲಾಗುವುದು ಅದರ ನಿವ್ವಳ ದೇಶೀಯ ಉತ್ಪನ್ನ(GDP). ತಾನು ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿದ್ದೇನೆ ಎಂದು ಪ್ರತಿಪಾದಿಸುತ್ತಿರುವ ಚೀನಾದ GDP ಕ್ರಮೇಣ ಕುಸಿಯುತ್ತಿದೆ. ಶೇಕಡಾ 10ರಷ್ಟಿದ್ದ ಬೆಳವಣಿಗೆ ಈಗ ಶೇಕಡಾ 7.2ಕ್ಕೆ ಬಂದು ನಿಂತಿದೆ. ಉತ್ಪಾದನಾ ವೆಚ್ಚವೊ ಶೇಕಡಾ 300ರಷ್ಟು ಹೆಚ್ಚಿದೆ. ಒಮ್ಮೆ ಹಾಳಾದರೆ ಮತ್ತೆ ರಿಪೇರಿ ಮಾಡಲಾಗದ ಕಳಪೆ ಗುಣಮಟ್ಟ ಎಂಬ ಹಣೆಪಟ್ಟಿ ಬೇರೆ. ತನ್ನ ಉತ್ಪನ್ನಗಳ ಶೇಕಡಾ 39ರಷ್ಟನ್ನು ಮಾತ್ರ ತಾನು ಬಳಸುವ ಚೀನಾ ಉಳಿದದ್ದನ್ನೆಲ್ಲಾ ರಫ್ತು ಮಾಡುತ್ತದೆ. ಒಟ್ಟಿನಲ್ಲಿ ಅದರ ಆರ್ಥಿಕತೆ ಅವಲಂಬಿತವಾಗಿರುವುದೇ ರಫ್ತಿನ ಮೇಲೆ. ಒಂದೊಮ್ಮೆ ಆರ್ಥಿಕ ಬಿಕ್ಕಟ್ಟು ಉಂಟಾಯಿತೆಂದುಕೊಳ್ಳಿ, ಹೊಡೆತ ತಪ್ಪಿದ್ದಲ್ಲ. ಉದಾಹರಣೆಗೆ, 2008ರಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದಾಗ ಚೀನಾದ ನೂರಾರು ಕಾರ್ಖಾನೆಗಳು ಮುಚ್ಚಿದವು. ಬರೋಬ್ಬರಿ 28 ಮಿಲಿಯನ್ ಜನರು ನಿರುದ್ಯೋಗಿಗಳಾದರು!

ಅಷ್ಟೇ ಅಲ್ಲ, ಮಂಗಳಗ್ರಹವನ್ನು ತಲುಪುವ ಯತ್ನದಲ್ಲೂ ವಿಫಲವಾಗಿರುವ ಚೀನಾ ತಂತ್ರಜ್ಞಾನದ ವಿಷಯದಲ್ಲಿ ನಮ್ಮ ಮುಂದೆ ಕೈಕಟ್ಟಿ ನಿಲ್ಲಲೇಬೇಕಿದೆ! ಇನ್ನು ಕ್ಷಿಪಣಿಗಳ, ಯುದ್ಧನೌಕೆಗಳ ವಿಷಯದಲ್ಲಿ ಅದಿನ್ನೂ ಅಂಬೆಗಾಲಿಡುತ್ತಿದೆ. ಹೀಗೆ ತನ್ನದೇ ವಿಷವರ್ತುಲದಲ್ಲಿ ಸಿಕ್ಕಿಕೊಂಡಿರುವ ಅದರ ದೊಡ್ಡ ತಲೆನೋವಾಗಿರುವುದು ಭಾರತದ ವಿದೇಶಾಂಗ ನೀತಿ. ವಿಯೆಟ್ನಾಂ‍ದೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿರುವ ಭಾರತ, ದಕ್ಷಿಣ ಚೀನಾ ಸಮುದ್ರದಲ್ಲಿ ತೈಲ ನಿಕ್ಷೇಪದ ಶೋಧನೆಗಿಳಿಯುವುದನ್ನು ಚೀನಾ ಸಹಿಸುತ್ತಿಲ್ಲ. ಈಗಾಗಲೇ ಐದು ಬಿಲಿಯನ್ ಡಾಲರ್‍ಗಳಷ್ಟು ಹಣವನ್ನು ಹೂಡಿರುವ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಯನ್ನು(ONGC) ಅಲ್ಲಿಂದ ಜಾಗ ಖಾಲಿಮಾಡುವಂತೆ ಒತ್ತಾಯಿಸುತ್ತಿದೆ. ಜಪಾನಿನೊಂದಿಗೆ ವಹಿವಾಟು ನಡೆಸುವ ಭಾರತದ ಧೋರಣೆ ಅದಕ್ಕೆ ಕಣ್ಣುರಿ ತರಿಸುತ್ತದೆ. ನೇಪಾಳ, ಭೂತಾನದ ಭೇಟಿಗಳು ಇರುಸುಮುರುಸು ಉಂಟುಮಾಡುತ್ತವೆ. ಇವೆಲ್ಲಕ್ಕಿಂತ ದೊಡ್ಡ ಪೆಟ್ಟು ಕೊಡುತ್ತಿರುವುದು ದೊಡ್ಡಣ್ಣ ಅಮೆರಿಕ. 2010ರಲ್ಲೇ, ಚೀನಾದ ವಿಸ್ತಾರವಾದಕ್ಕೊಂದು ಇತಿಶ್ರೀ ಹಾಡಬೇಕೆಂದು ನಿರ್ಧರಿಸಿದ ಒಬಾಮಾ ಅಮೆರಿಕ ನೌಕಾದಳದ ಶೇಕಡಾ 60ರಷ್ಟು ಯುದ್ಧ ಪರಿಕರಗಳನ್ನು ಏಷ್ಯಾಕ್ಕೆ ವರ್ಗಾಯಿಸಿದರು. ಫಿಲಿಪ್ಪೈನ್ಸ್, ಸಿಂಗಾಪುರ ಹಾಗೂ ಥಾಯ್ಲೆಂಡ್‍ಗಳೊಡನೆ ಸಂಪರ್ಕ ಬೆಳೆಸಿದರು. ಇನ್ನೂ ಮುಂದುವರೆದು, ವಿಯೆಟ್ನಾಂ‍ನೊಂದಿಗೆ ಪರಮಾಣು ಒಪ್ಪಂದವನ್ನೂ ಮಾಡಿಕೊಂಡರು.

ತನ್ನ ಆಂತರಿಕ ಅಭದ್ರತೆಗಳಷ್ಟೇ ಅಲ್ಲದೆ, ಅಮೆರಿಕದ ರಾಜತಾಂತ್ರಿಕ ನಡೆ ಹಾಗೂ ಭಾರತದ ಪ್ರಭಾವಿ ವಿದೇಶಾಂಗ ನೀತಿಗಳು ಚೀನಾದ ಪಾಲಿಗೆ ನುಂಗಲಾರದ ತುತ್ತಾಗಿವೆ. ಆದ್ದರಿಂದಲೇ ಅದು ಭಾರತದತ್ತ ಮುಖಮಾಡಿದೆ. ಎಲ್ಲ ರಾಷ್ಟ್ರಗಳೂ ಕೈ ಜೋಡಿಸುತ್ತಿವೆ ಎಂಬ ಸಂಕಟ ಒಂದೆಡೆ. ದಿನೇ ದಿನೇ ಬಲಿಷ್ಠವಾಗುತ್ತಿರುವ ಭಾರತ ಮತ್ತೊಂದೆಡೆ. ನೀವೇ ಯೋಚಿಸಿ, ಕಳೆದ 14ವರ್ಷಗಳಲ್ಲಿ ಬರೀ 400 ಮಿಲಿಯನ್‍ಗಳನ್ನು ಭಾರತದಲ್ಲಿ ಹೂಡಿರುವ ಚೀನಾ ಈಗ ಇದ್ದಕ್ಕಿದ್ದಂತೆ 100 ಬಿಲಿಯನ್‍ಗಳನ್ನು ಹೂಡುತ್ತದೆ ಎಂದರೆ ನಂಬುವುದಾದರೂ ಹೇಗೆ? ನಿಮಗೆ ಗೊತ್ತಿರಲಿ, ಚೀನಾ ತನ್ನ ಮಾರುಕಟ್ಟೆಯನ್ನು ಭಾರತಕ್ಕೆ ಮುಕ್ತವಾಗಿ ಎಂದೂ ತೆರೆದಿಲ್ಲ. ಈಗಲೂ ಅಷ್ಟೇ, ತನ್ನ ಉತ್ಪಾದನೆಗಳನ್ನು ಇಲ್ಲಿ ತಂದು ಸುರಿಯಲು ಹವಣಿಸುತ್ತಿದೆ. ತನ್ನ 23ಕ್ಕೂ ಹೆಚ್ಚು ಮಾಧ್ಯಮ ವರದಿಗಾರರನ್ನು ಭಾರತದಲ್ಲೇ ಇರಿಸಿರುವ ಚೀನಾಗೆ ಇಲ್ಲಿನ ಪ್ರತಿ ಘಟನೆಯೂ ತಪ್ಪದೆ ವರದಿಯಾಗುತ್ತದೆ! ಅಲ್ಲಿನ ಸುದ್ದಿ ನಮಗೆ ತಿಳಿಯುವುದು ಮಾತ್ರ ವಿದೇಶೀ ಸುದ್ಧಿ ಸಂಸ್ಥೆಗಳಿಂದಲೇ!

ವ್ಯಾಪಾರವೃದ್ಧಿಯ ನೆಪ ಮಾಡಿಕೊಂಡು ಭಾರತಕ್ಕೆ ಜಿನ್‍ಪಿಂಗ್‍ ಬಂದದ್ದು ಹೌದಾದರೂ ಅವರ ಧೋರಣೆಯಲ್ಲಿ ಯಾವ ಬದಲಾವಣೆಯಿದೆ? ಅಲ್ಲಿ ಅವರು ಹೊರಡುತ್ತಿದ್ದಂತೆಯೇ, ಇಲ್ಲಿ ದಕ್ಷಿಣ ಲಡಾಖ್‍ನ ಗಡಿಯಲ್ಲಿರುವ ಹಳ್ಳಿ ಚುಮಾರ್‍ನಲ್ಲಿ ಚೀನೀಯರು ಬಂದು ಜಮಾಯಿಸಿದರು! ಅವರನ್ನು ಓಡಿಸಲು ಭಾರತೀಯ ಸೇನೆ ಹಾಗೂ ಟಿಬೆಟ್ ಗಡಿಯ ಪೋಲೀಸರು ಹೋಗಬೇಕಾಯಿತು! ಇದು ಮೊದಲ ಬಾರಿಯೇನಲ್ಲ. 2013ರ ಮೇ ತಿಂಗಳಲ್ಲಿ ಅಂದಿನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಸಲ್ಮಾನ್ ಖುರ್ಶಿದ್ ಚೀನಾಗೆ ಹೊರಡುವ ತಯಾರಿಯಲ್ಲಿದ್ದಾಗಲೇ ಚೀನೀಯರು ಲಡಾಖ್‍ನೊಳಗೆ ನುಗ್ಗಿ ಬಂದಿದ್ದರು. ಅದೂ ಸುಮಾರು 19ಕಿಮೀಗಳಷ್ಟು ಒಳಗೆ! ಗಡಿ ವಿಷಯದಲ್ಲಿ ಚೀನಾ ಪದೇಪದೇ ತಕರಾರು ತೆಗೆಯುವುದೇಕೆ? ಲಡಾಖ್‍ನ ಅಕ್ಸಾಯ್ ಚಿನ್‍ ಹೆಸರಿನಲ್ಲಿ ಸುಮಾರು 52ಸಾವಿರ ಚದರಕಿಮೀ ಜಾಗವನ್ನು ಕಬಳಿಸಿದೆಯಲ್ಲ, ಅದನ್ನು ಭಾರತಕ್ಕೆ ಮರಳಿಸುತ್ತದೆಯೇ? 2005ರಿಂದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದೇ ಸರ್ಕಾರಿ ದಾಖಲೆಗಳಲ್ಲಿ ನಮೂದಿಸಿ ನಕ್ಷೆಗಳಲ್ಲಿ ಬರೆದಿಟ್ಟುಕೊಂಡಿದೆಯಲ್ಲ, ಅದನ್ನು ಅಳಿಸಿಹಾಕುತ್ತದೆಯೇ? ಕಾಲಕಾಲಕ್ಕೆ ತಾನೇ ಖುದ್ದಾಗಿ ಹೋಗಿ ಪಾಕಿಸ್ತಾನಕ್ಕೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಒದಗಿಸಿ ಬರುತ್ತದಲ್ಲ, ಅದನ್ನು ನಿಲ್ಲಿಸುತ್ತದೆಯೇ? ತಾನಾಗಿಯೇ ಒಂದು ಮದ್ದು ಗುಂಡನ್ನೂ ತಯಾರಿಸಿಕೊಳ್ಳುವ ಯೋಗ್ಯತೆಯಿಲ್ಲದ ಪಾಕಿಸ್ತಾನವನ್ನು ಇಂದು ಅಣು ಶಕ್ತಿಯುಳ್ಳ ರಾಷ್ಟ್ರವನ್ನಾಗಿ ಮಾಡುತ್ತಿದೆ ಚೀನಾ! ಬದಲಿಗೆ ಅದಕ್ಕೆ ದಕ್ಕುತ್ತಿರುವುದು ಪಾಕ್ ಆಕ್ರಮಿತ ಪ್ರದೇಶಗಳಲ್ಲಿರುವ ಚಿನ್ನದ, ಕಬ್ಬಿಣದ ಅದಿರುಗಳನ್ನು ಕೊಳ್ಳೆ ಹೊಡೆಯುವ ಸುಯೋಗ. ಜೊತೆಗೆ, ಪಾಕಿಸ್ತಾನ ಭಾರತವನ್ನು ನಿರಂತರವಾಗಿ ಪೀಡಿಸುತ್ತಲೇ ಇರುತ್ತದೆಂಬ ನೆಮ್ಮದಿ ಬೇರೆ! ಚೀನಾಕ್ಕೆ ನಮ್ಮಿಂದ ಬಹಳ ಅಪೇಕ್ಷೆಗಳಿವೆ. ಟಿಬೆಟಿಯನ್ನರ ಧರ್ಮಗುರು ದಲೈಲಾಮಾರನ್ನು ನಾವು ಚೀನಾದ ಸುಪರ್ದಿಗೆ ಒಪ್ಪಿಸಬೇಕು. ಅಪ್ಪಿತಪ್ಪಿಯೂ ಜಪಾನ್, ಅಮೆರಿಕ ಹಾಗೂ ವಿಯೆಟ್ನಾಂಗಳೊಡನೆ ಯಾವ ಬಾಂಧವ್ಯವನ್ನೂ ಇಟ್ಟುಕೊಳ್ಳಬಾರದು. ಹಿಂದೂ ಮಹಾಸಾಗರದಲ್ಲಿ, ಕಡಲುಗಳ್ಳರನ್ನು ಹಿಡಿಯುವ ನೆಪದಲ್ಲಿ ನಡೆಯುವ ಚೀನಾದ ನೌಕಾದಳದ ಅಭ್ಯಾಸವನ್ನು ನೋಡಿಯೂ ನೋಡದಂತಿರಬೇಕು!

ನಮಗೆ ಅಭಿವೃದ್ಧಿಯ ಕನವರಿಕೆಯಿದೆ ನಿಜ. ಆದರೆ ಅದು ದೇಶದ ಹಿತಾಸಕ್ತಿ, ಭದ್ರತೆಗಳಿಗಿಂತ ಹೆಚ್ಚಲ್ಲ. ಆದ್ದರಿಂದಲೇ  ಜಿನ್‍ಪಿಂಗ್ ಭಾರತಕ್ಕೆ ಹೊರಡುವ ಮುನ್ನವೇ ಸರ್ಕಾರದ ಪರವಾಗಿ ಸಚಿವೆ ಸುಷ್ಮಾ ಸ್ವರಾಜ್ ಗುಡುಗಿದ್ದು 'ಗಡಿಗೆ ಸಂಬಂಧಿಸಿದ ಯಾವ ವಿಷಯದಲ್ಲೂ ಭಾರತ ಯಾವ ಕಾರಣಕ್ಕೂ ರಾಜಿಮಾಡಿಕೊಳ್ಳುವುದಿಲ್ಲ' ಎಂದು. ಇಂಥ ದಿಟ್ಟ ಘೋಷಣೆ ನಮಗೆ ಮೊದಲ ಅನುಭವ. ಚೀನಾಕ್ಕೂ. ಏನಾಗುತ್ತದೋ ಕಾದು ನೋಡೋಣ! 

Sunday, 14 September 2014

ಸಮಂತಾ ಎಂಬ ಬಾಲೆ ಶಾಂತಿ ದೂತಳಾದಾಗ
ನಿಮಗೆಲ್ಲ ಎರಡನೆಯ ವಿಶ್ವಯುದ್ಧದ ಬಗ್ಗೆ ತಿಳಿದಿರಬಹುದು. ಅದು ಮುಗಿದದ್ದು 1945ರಲ್ಲಿ. ಅದರಲ್ಲಿ ನಾಜಿ ಜರ್ಮನಿಯನ್ನು ಸೋಲಿಸಲು, ವಿಶ್ವದ ಎರಡು ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಾಗಿದ್ದ ಸೋವಿಯತ್ ಒಕ್ಕೂಟ ಹಾಗೂ ಅಮೆರಿಕ ಕೈಜೋಡಿಸಿದ್ದವು. ಹಾಗೆ ಜರ್ಮನಿಯನ್ನು ಸೋಲಿಸಿದ ನಂತರ ಸೈದ್ಧಾಂತಿಕ, ಆರ್ಥಿಕ ಹಾಗೂ ರಾಜನೈತಿಕ ಭಿನ್ನಾಭಿಪ್ರಾಯಗಳನ್ನು ನೆಪವಾಗಿಟ್ಟುಕೊಂಡು ದೂರ ಆಗಿಬಿಟ್ಟವು. ತನ್ನ ಮಿತ್ರರಾದ ನೇಟೋ ರಾಷ್ಟ್ರಗಳೊಂದಿಗೆ ಅಮೆರಿಕ ಪಶ್ಚಿಮಕ್ಕೆ ಮುಖ ಹೊರಳಿಸಿ ಕುಳಿತರೆ, ತಾನೇನು ಕಡಿಮೆ ಎಂಬಂತೆ ಸೋವಿಯತ್ ಒಕ್ಕೂಟ ಪೂರ್ವಕ್ಕೆ ತಿರುಗಿ ಕುಳಿತಿತ್ತು. ತಾನೇ ಪ್ರಬಲ ಎಂದು ನಿರೂಪಿಸುವ ಹಪಾಹಪಿ ಎರಡಕ್ಕೂ! ಈ ಎರಡೂ ರಾಷ್ಟ್ರಗಳ ಮುನಿಸಿನಿಂದ ಶುರುವಾದದ್ದೇ ಶೀತಲ ಸಮರ. 1947ರಿಂದ ಹಿಡಿದು 1991ರ ವರೆಗೂ, ಅಂದರೆ ಸುಮಾರು 44 ವರ್ಷಗಳ ಕಾಲ ಇದೇ ವಾತಾವರಣವಿತ್ತು. ಈ ರಾಷ್ಟ್ರಗಳು ಅದೆಷ್ಟರ ಮಟ್ಟಿಗೆ ಶಸ್ತ್ರಾಸ್ತ್ರಗಳನ್ನು (ಅಣ್ವಸ್ತ್ರಗಳ ಸಹಿತ) ಸಜ್ಜು ಮಾಡಿಕೊಂಡು ಕುಳಿತಿದ್ದವೆಂದರೆ ಯಾವ ಕ್ಷಣ ಮೂರನೆಯ ವಿಶ್ವಯುದ್ಧ ಶುರುವಾಗಿಬಿಡುವುದೋ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು. ಯುದ್ಧದ ಸಿದ್ಧತೆ ಯಾವ ಮಟ್ಟದ್ದಾಗಿತ್ತೆಂದರೆ, ಕ್ಷಿಪಣಿಗಳನ್ನು ಬಿಡಿ, ಭೂಮಿಯ ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳಿಂದ ಅಸ್ತ್ರಗಳನ್ನು ಪ್ರಯೋಗಿಸಿ ತಮಗೆ ಬೇಕಾದ ದೇಶಗಳನ್ನು ಧ್ವಂಸ ಮಾಡುವ ನಿಟ್ಟಿನಲ್ಲಿ ಸಂಶೋಧನೆಗಳು ಎರಡೂ ಕಡೆ ಭರದಿಂದ ನಡೆಯುತ್ತಿದ್ದವು!

ಪರಿಸ್ಥಿತಿ ಹೀಗಿದ್ದಾಗ, 1982ರ ನವೆಂಬರ್ 12ರಂದು ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದವರೇ ಯೂರಿ ಆಂಡ್ರೋಪೋವ್. ಅವರು ನಿಯುಕ್ತರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳಲ್ಲಿ ಭಾರೀ ಸಂಚಲನ ಉಂಟಾಯಿತು. ಏಕೆಂದರೆ ಯೂರಿ ಬಹಳ ನಿರ್ದಯಿ ಹಾಗೂ ಕ್ರೂರಿ ಎಂದೇ ಖ್ಯಾತರಾಗಿದ್ದರು. ಹಿಂದೆ ಅವರು ಸೋವಿಯತ್‍ನ ರಾಯಭಾರಿಯಾಗಿ ಹಂಗೇರಿಯಲ್ಲಿದ್ದಾಗ, ಅಲ್ಲಿನ ದಂಗೆಯನ್ನು ಹತ್ತಿಕ್ಕಲು ಸೇನೆಯ ಸಹಾಯ ಪಡೆದ ಹಾಗೂ ಕೆಲ ನೇತಾರರನ್ನು ಕೊಲ್ಲಿಸಿದ ಅಪವಾದ ಹೊತ್ತಿದ್ದರು. ಅಂಥವರು ಶೀತಲ ಸಮರದಂಥ ಸೂಕ್ಷ್ಮ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟದ ಮುಂದಾಳತ್ವ ವಹಿಸಿಕೊಂಡಾಗ ಸಹಜವಾಗಿಯೇ ಅಮೆರಿಕ ಕೋಲಾಹಲವೆಬ್ಬಿಸಿತು. ತನ್ನ ದೇಶದಲ್ಲೆಲ್ಲ ಈ ಸುದ್ದಿಯನ್ನು ಬಿತ್ತರಿಸಿತು. ಹಾಗೆ ಟೈಮ್ ನಿಯತಕಾಲಿಕೆಯ ಮುಖಪುಟದಲ್ಲಿ, ಕನ್ನಡಕ ಧರಿಸಿದ, ಬಿಗಿದ ಮೊಗದ ‘ಯೂರಿ’ಯ ಚಿತ್ರ ಪ್ರಕಟವಾದಾಗ ಅಮೆರಿಕದವರ ಮುಖದ ಮೇಲೆ ಮಂದಹಾಸ ಮೂಡಲು ಯಾವ ಕಾರಣವೂ ಇರಲಿಲ್ಲ.

ಕಣ್ಣುಗಳಲ್ಲಿ ತಣ್ಣಗಿನ ಕ್ರೌರ್ಯವನ್ನು ತುಂಬಿಕೊಂಡಂತಿದ್ದ ‘ಯೂರಿ’ಯ ಚಿತ್ರವನ್ನು ಕಂಡು ಎಲ್ಲರೂ ಭಯಪಡುತ್ತಿದ್ದಾಗಲೇ ಹತ್ತು ವರ್ಷದ ಪುಟ್ಟ ಬಾಲೆಯೊಬ್ಬಳು ತನ್ನ ತಾಯಿಯನ್ನು ಮುಗ್ಧವಾಗಿ ಕೇಳಿದಳು 'ಎಲ್ಲರಿಗೂ ಅವರನ್ನು ಕಂಡರೆ ಅಷ್ಟೊಂದು ಭಯವೆಂದಮೇಲೆ, ಅವರು ಯುದ್ಧ ಶುರು ಮಾಡುತ್ತಾರೋ ಇಲ್ಲವೋ ಎಂದು ಅವರನ್ನೇ ಏಕೆ ನೇರವಾಗಿ ಕೇಳಬಾರದು ಅಮ್ಮಾ?' ಎಂದು. 'ನೀನೇ ಏಕೆ ಅವರಿಗೆ ಪತ್ರ ಬರೆದು ಕೇಳಬಾರದು?' ಎಂದಳು ತಾಯಿ ತಮಾಷೆಯಾಗಿ. ಮಗಳ ಪ್ರಶ್ನೆಯನ್ನು ಅಲ್ಲಿಗೆ ಮರೆತೂ ಬಿಟ್ಟಳು. ಆದರೆ ಅಮ್ಮನ ಮಾತನ್ನು ಹಗುರವಾಗಿ ತೆಗೆದುಕೊಳ್ಳಲಿಲ್ಲ ಆ ಪುಟ್ಟ ಹುಡುಗಿ. ‘ಯೂರಿ’ಗೆ ಪತ್ರವೊಂದನ್ನು ಬರೆದೇ ಬಿಟ್ಟಳು. ಅದರ ಒಕ್ಕಣೆ ಹೀಗಿತ್ತು. 'ನಾನು ಹತ್ತು ವರ್ಷದ ಹುಡುಗಿ ಸಮಂತಾ ಸ್ಮಿತ್. ನಿಮ್ಮ ಹೊಸ ಪದವಿಗೆ ನನ್ನ ಅಭಿನಂದನೆ. ಅಮೆರಿಕ ಹಾಗೂ ಸೋವಿಯತ್ ರಾಷ್ಟ್ರಗಳು ಅಣ್ವಸ್ತ್ರ ಯುದ್ಧ ನಡೆಸುತ್ತವೆಯೇ ಎಂಬುದು ನನ್ನನ್ನು ಬಹಳ ಯೋಚನೆಗೀಡುಮಾಡುತ್ತಿದೆ. ನೀವು ಯುದ್ಧದ ಪರವಾಗಿದ್ದೀರಾ? ಇಲ್ಲವೆಂದರೆ ಯುದ್ಧ ನಡೆಯದಂತೆ ಹೇಗೆ ತಡೆಯುತ್ತೀರಿ ಎಂದು ಹೇಳಬಲ್ಲಿರಾ? ನೀವೇಕೆ ಈ ಪ್ರಪಂಚವನ್ನು ಅಥವಾ ಅಮೆರಿಕವನ್ನು ಗೆಲ್ಲ ಬಯಸುತ್ತೀರಿ? ದೇವರು ಪ್ರಪಂಚವನ್ನು ಸೃಷ್ಟಿಸಿರುವುದು ನಾವೆಲ್ಲ ಒಂದಾಗಿ ಕೂಡಿ ನೆಮ್ಮದಿಯಿಂದ ಬಾಳಲು. ಜಗಳವಾಡಲು ಅಲ್ಲ.'


ಹಾಗೆ ನಿರ್ಭೀತಳಾಗಿ ಪತ್ರವನ್ನು ಬರೆದ ಸಮಂತಾ ಹುಟ್ಟಿದ್ದು 1972ರ ಜೂನ್ 29ರಂದು. ಕೆನಡಾ-ಅಮೆರಿಕದ ಗಡಿಯಲ್ಲಿದ್ದ ಹ್ಯೂಲ್ಟನ್ ಎಂಬ ಸಣ್ಣ ಪಟ್ಟಣದಲ್ಲಿ. ನಂತರ ತಂದೆ-ತಾಯಿಯರೊಡನೆ ಮ್ಯಾಂಚೆಸ್ಟರ್‍ಗೆ ವಾಸ್ತವ್ಯ ಬದಲಾಯಿಸಿದ ಅವಳು ಅಲ್ಲಿನ ಎಲಿಮೆಂಟರಿ ಶಾಲೆಯಲ್ಲಿ ಕಲಿಯುತ್ತಿದ್ದಳು. ಸಾಹಿತ್ಯದ ಅಧ್ಯಾಪಕರಾಗಿದ್ದ ತಂದೆ ಹಾಗೂ ಸಮಾಜ ಸೇವಕಿಯಾಗಿದ್ದ ತಾಯಿಯಿಂದ ಅವಳಿಗೆ ಸಾಕಷ್ಟು ತಿಳುವಳಿಕೆ, ಲೋಕಜ್ಞಾನಗಳು ಲಭಿಸಿದ್ದವು. ಯುದ್ಧದ ಕಾರ್ಮೋಡ ಕವಿದಿದ್ದ ಆ ದಿನಗಳಲ್ಲಿ, ಅಣ್ವಸ್ತ್ರ ಯುದ್ಧವಾದರೆ ಆಗುವ ದುಷ್ಪರಿಣಾಮವನ್ನು ಶಾಲೆಯಲ್ಲಿ ತನ್ನ ಟೀಚರ್‍ಗಳಿಂದ ಕೇಳಿ ತಿಳಿದಿದ್ದಳು. ಆದ್ದರಿಂದಲೇ ತನ್ನ ವಯಸ್ಸಿಗೂ ಮೀರಿದ ದೂರದೃಷ್ಟಿ, ಕಳಕಳಿಯಿಂದ ‘ಯೂರಿ’ಗೆ ಪತ್ರವನ್ನು ಬರೆದಿದ್ದಳು! ಅವಳ ಬಹಿರಂಗ ಪತ್ರ ಸೋವಿಯತ್ ಒಕ್ಕೂಟದ ಪತ್ರಿಕೆ 'ಪ್ರವ್ಡಾ'ದಲ್ಲಿ ಪ್ರಕಟವೂ ಆಯಿತು. ಆದರೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಹಾಗೆಂದು ಸುಮ್ಮನಾಗಲಿಲ್ಲ ಸಮಂತಾ. ಅಮೆರಿಕದಲ್ಲಿದ್ದ ಸೋವಿಯತ್‍ನ ರಾಯಭಾರಿಯನ್ನು ಪತ್ರ ಮುಖೇನ ಸಂಪರ್ಕಿಸಿದಳು. ತನ್ನ ಪತ್ರಕ್ಕೆ ಯೂರಿ ಉತ್ತರಿಸುವ ಇರಾದೆ ಹೊಂದಿದ್ದಾರಾ ಎಂದು ವಿಚಾರಿಸಿದಳು. ಅವಳ ಶ್ರಮ ವ್ಯರ್ಥವಾಗಲಿಲ್ಲ. 1983ರ ಏಪ್ರಿಲ್ 26ರಂದು ಯೂರಿ ಆಂಡ್ರೋಪೋವ್‍ರ ಉತ್ತರ ಬಂದೇ ಬಿಟ್ಟಿತು. ತುಂಬಾ ನೇರವಾಗಿ, ಪ್ರಾಮಾಣಿಕವಾಗಿ ಹಾಗೂ ವಿಶದವಾಗಿ ಉತ್ತರಿಸಿದ್ದರು ಯೂರಿ. ಅವರ ಪತ್ರದ ಒಕ್ಕಣೆ ಹೀಗಿತ್ತು. 'ನೀನು ಅಷ್ಟೊಂದು ಧೈರ್ಯ ಹಾಗೂ ಪ್ರಾಮಾಣಿಕತೆಯಿಂದ ಬರೆದ ಪತ್ರ ನನ್ನ ಕೈ ತಲುಪಿತು. ನಿನ್ನ ಪ್ರಶ್ನೆಗೆ ನೇರವಾಗಿ ಉತ್ತರಿಸುತ್ತೇನೆ ಕೇಳು. ಸೋವಿಯತ್ ಯಾವ ಯುದ್ಧವನ್ನೂ ಬಯಸುವುದಿಲ್ಲ. ಜರ್ಮನಿಯ ಅಟ್ಟಹಾಸಕ್ಕೆ ಬಲಿಯಾಗಿ ಮನೆ-ಮಠ, ಜೀವಗಳನ್ನು ಕಳೆದುಕೊಂಡಿರುವ ನಮ್ಮ ದೇಶದ ಯಾವ ಪ್ರಜೆಗೂ ಮತ್ತೊಂದು ಯುದ್ಧ ಬೇಕಿಲ್ಲ. ನಾವು ಜರ್ಮನಿಯನ್ನು ಸೋಲಿಸಿದ್ದೇ ನಿನ್ನ ದೇಶವಾದ ಅಮೆರಿಕದ ಸಹಾಯದಿಂದ. ಆದ್ದರಿಂದ ನಾವು ಅಮೆರಿಕ ಮಾತ್ರವಲ್ಲ, ಉಳಿದ ಎಲ್ಲಾ ದೇಶಗಳೊಂದಿಗೂ ಶಾಂತಿಯುತವಾಗಿ ಬಾಳ್ವೆ ಮಾಡಬೇಕೆಂದಿದ್ದೇವೆ. ಇಂದು ನಮ್ಮೆರಡೂ ದೇಶಗಳ ಬಳಿ ಮಾರಕವಾದ ಅಣ್ವಸ್ತ್ರಗಳಿವೆ. ಅದಕ್ಕೆ ಕ್ಷಣವೊಂದರಲ್ಲೇ ಲಕ್ಷಗಟ್ಟಳೆ ಜನರ ಪ್ರಾಣ ತೆಗೆಯಬಲ್ಲ ಶಕ್ತಿಯಿದೆ. ಆದರೆ ನಾವು ಅದನ್ನು ಯಾವುದೇ ಕಾರಣಕ್ಕೂ ಮೊದಲು ಉಪಯೋಗಿಸುವುದಿಲ್ಲ. ಅಷ್ಟೇ ಅಲ್ಲ, ಅಣ್ವಸ್ತ್ರ ಇರುವ ರಾಷ್ಟ್ರಗಳೆಲ್ಲ ಅವುಗಳನ್ನು ನಾಶಮಾಡಬೇಕು ಹಾಗೂ ಮತ್ತೆ ಅದನ್ನು ತಯಾರು ಮಾಡಬಾರದು ಎಂದು ನಾವು ಬಯಸುತ್ತೇವೆ. ನಮ್ಮ ದೇಶದ ಯಾವ ರೈತ, ವೈದ್ಯ, ಸಾಹಿತಿ, ಸಂಶೋಧಕ, ಹಿರಿಯ ಅಥವಾ ಕಿರಿಯನಿಗೂ ಯುದ್ಧ ಮಾಡುವ ಇಚ್ಛೆಯಿಲ್ಲ. ನಾವು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಮಾಡಬೇಕು, ಪುಸ್ತಕಗಳನ್ನು ಬರೆಯಬೇಕು, ನಿನ್ನ ಹಾಗೂ ನಿನ್ನಂಥ ಉಳಿದ ಮಕ್ಕಳ ಸಲುವಾಗಿ ಶಾಂತಿ ಕಾಪಾಡಬೇಕು. ಒಂದು ಕೆಲಸ ಮಾಡು. ಈ ಬೇಸಿಗೆಯಲ್ಲಿ ನಮ್ಮ ದೇಶಕ್ಕೆ ಬಾ. ಇಲ್ಲಿಯ ಜನರೊಂದಿಗೆ, ಮಕ್ಕಳೊಂದಿಗೆ ಒಡನಾಡು. ಇಲ್ಲಿಯ ವಾತಾವರಣ, ಜನರ ಮನಸ್ಥಿತಿ ನಿನಗೇ ತಿಳಿಯುತ್ತದೆ. ನಿನ್ನ ಪುಟ್ಟ ಬದುಕಿಗೆ ಮುಂದೆ ಒಳ್ಳೆಯದಾಗಲಿ'.

‘ಯೂರಿ’ಯ ಉತ್ತರ ಲಕ್ಷಾಂತರ ಅಮೆರಿಕನ್ನರ ಮನದ ಬೇಗುದಿಯನ್ನು ಕ್ಷಣದಲ್ಲಿ ಪರಿಹರಿಸಿತ್ತು. ಇಷ್ಟು ಸುಲಭವಾಗಿ ವಾತಾವರಣವನ್ನು ತಿಳಿಗೊಳಿಸಿದ ಸಮಂತಾ ರಾತ್ರೋರಾತ್ರಿ ಖ್ಯಾತಳಾಗಿಬಿಟ್ಟಳು. ಯೂರಿಯ ಆಹ್ವಾನವನ್ನು ಒಪ್ಪಿಕೊಂಡು, ತಂದೆ-ತಾಯಿಯರೊಡಗೂಡಿ ಅದೇ ವರ್ಷದ ಜುಲೈ ಏಳರಂದು ಸೋವಿಯತ್ ಒಕ್ಕೂಟದ ಮಾಸ್ಕೋ ನಗರಕ್ಕೆ ತೆರಳಿದಳು. ಅಲ್ಲಿನ ಜನರೂ ತಮ್ಮಂತೆಯೇ ಎಂದು ಅವಳಿಗೆ ತಿಳಿದು ಬಂದಿದ್ದೇ ಆಗ. ಎರಡು ವಾರಗಳ ಅವಳ ಸೋವಿಯತ್ ಭೇಟಿಯಲ್ಲಿ ಹಲವಾರು ಜಾಗಗಳಿಗೆ ಹೋಗಿ, ಜನರೊಡನೆ ಕಲೆತು ಬಂದಳು. ಪತ್ರಿಕಾಗೋಷ್ಠಿಗಳಲ್ಲಿ ಸೋವಿಯತ್ ಜನರ ಸಹೃದಯತೆಯನ್ನು ಹೊಗಳಿದಳು. ಅದೆಲ್ಲಕ್ಕೂ ಕಾರಣರಾದ ಯೂರಿಯನ್ನು ಭೇಟಿಯಾಗಲು ಮಾತ್ರ ಸಾಧ್ಯವಾಗಲಿಲ್ಲ. ಅವರ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಅವರು ದೂರವಾಣಿಯಲ್ಲಷ್ಟೇ ಮಾತಿಗೆ ಸಿಕ್ಕರು.

ಅಮೆರಿಕಕ್ಕೆ ಹಿಂತಿರುಗಿದ ಸಮಂತಾಳಿಗೆ ದೊರೆತದ್ದು ಭವ್ಯ ಸ್ವಾಗತ. ಅವಳು ಹೇಳಿದ ವೃತ್ತಾಂತವನ್ನು ಕೇಳಿದ ಅಮೆರಿಕನ್ನರ ಮನಸ್ಸಿನಲ್ಲಿ ಸೋವಿಯತ್ ಜನರ ಬಗ್ಗೆ ಇದ್ದ ಭ್ರಮೆ ದೂರವಾಯಿತು. ತನ್ನ ಅನುಭವವನ್ನು 'ಜರ್ನಿ ಟು ದಿ ಸೋವಿಯತ್ ಯೂನಿಯನ್' ಎಂಬ ಪುಸ್ತಕದಲ್ಲಿಯೂ ದಾಖಲಿಸಿದಳು. ಎರಡು ದೇಶಗಳ ನಡುವೆ ಬಾಂಧವ್ಯ ಬೆಸೆದ ಸಮಂತಾ ಅವಳಿಗರಿವಿಲ್ಲದಂತೆಯೇ ಶಾಂತಿ ದೂತಳಾಗಿಬಿಟ್ಟಿದ್ದಳು. ಅಮೆರಿಕ ಮತ್ತು ಸೋವಿಯತ್ ಪ್ರತಿ ವರ್ಷ ಹೀಗೇ ಮಕ್ಕಳನ್ನು ಕೆಲದಿನಗಳ ಮಟ್ಟಿಗೆ ಆಹ್ವಾನಿಸಬೇಕೆಂಬ ಅವಳ ಸಲಹೆಗೆ ಎರಡೂ ಸರ್ಕಾರಗಳೂ ಒಪ್ಪಿದವು. ತಮ್ಮ ಮಕ್ಕಳನ್ನು ಕಳಿಸುವ ದೇಶಕ್ಕೆ ಬಾಂಬ್ ಹಾಕುವ ಮನಸ್ಸು ಬರಲಾರದು ಎಂದು ಯೋಚಿಸುವಷ್ಟು ದೂರಕ್ಕೆ ಅವಳ ಬುದ್ಧಿ ಬೆಳೆದಿತ್ತು! ಅದರಂತೆ ಸೋವಿಯತ್‍ನ, ಹನ್ನೊಂದರ ಬಾಲೆ 'ಕಾತ್ಯಾ' ಅಮೆರಿಕಕ್ಕೆ ಬಂದು ಹೋದದ್ದೂ ಆಯಿತು. ಅಮೆರಿಕದ ಹಲವು ಟಿ.ವಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ ಸಮಂತಾ ಎಲ್ಲರ ಕಣ್ಮಣಿಯಾಗಿದ್ದಳು.

ಆದರೆ ವಿಧಿಯೆಂಬುದೂ ಒಂದಿದೆಯಲ್ಲ..!

ಅದು 1985ನೇ ಇಸವಿಯ ಆಗಸ್ಟ್ ತಿಂಗಳ 25 ನೇ ತಾರೀಖು. ಟಿ.ವಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ರಾತ್ರಿ ಹತ್ತು ಗಂಟೆಯ ಸುಮಾರಿಗೆ ತಂದೆಯೊಡನೆ ವಿಮಾನದಲ್ಲಿ ಬರುತ್ತಿದ್ದಳು ಸಮಂತಾ. ಹತೋಟಿ ಕಳೆದುಕೊಂಡ ವಿಮಾನ ಮರಗಳಿಗೆ ಅಪ್ಪಳಿಸಿ ಅಪಘಾತಕ್ಕೀಡಾಗಿ ಪೂರ್ತಿ ನುಜ್ಜುಗುಜ್ಜಾಯಿತು. ಸಮಂತಾ ಹಾಗೂ ಅವಳ ತಂದೆ ಸೇರಿದಂತೆ ವಿಮಾನದಲ್ಲಿದ್ದ ಎಂಟೂ ಜನ ಸತ್ತುಹೋದರು. ಶಾಂತಿ ಮೂಡಿಸುವ ಹೊಸ ಪ್ರಕ್ರಿಯೆ ಶುರು ಮಾಡಿದ ಎರಡೇ ವರ್ಷಗಳಲ್ಲಿ ಸಮಂತಾ ಇಲ್ಲವಾದಳು. ಅಮೆರಿಕದ ವ್ಯಥೆ ಹಾಗಿರಲಿ, ಸೋವಿಯತ್ ಅವಳ ನೆನಪಿನಲ್ಲಿ ಸ್ಮಾರಕಗಳನ್ನು ಕಟ್ಟಿಸಿತು. ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿತು.

ದೇಶ-ದೇಶಗಳ ನಡುವಿನ ಗಲಭೆ, ಕಲಹ, ಅಶಾಂತಿಗಳು ಮುಗಿಯದ ಈ ಹೊತ್ತಿನಲ್ಲಿ ಸಮಂತಾ ನೆನಪಾಗುತ್ತಾಳೆ. ಚಿಕ್ಕ ಮಕ್ಕಳನ್ನು ಶಾಂತಿಯ ರಾಯಭಾರಿಗಳನ್ನಾಗಿಸುವುದು ಅವಳು ಕಂಡಿದ್ದ ಕನಸು. ಅದೇ ಮಕ್ಕಳು ಮತಾಂಧರ ಧರ್ಮಯುದ್ಧದ ದಾಳಗಳಾಗಿ ಮುಲಾಜಿಲ್ಲದೇ ಬಲಿಯಾಗುತ್ತಿರುವುದು ಇಂದಿನ ಕಹಿ ನನಸು. ಶಾಂತಿ ಎಂಬ ಕನಸೊಂದನ್ನು ಗಡಿಗಳಾಚೆಗೆ ಸಾಗಿಸಬಲ್ಲ ಸರಕು ತಾವಾಗಬಹುದೆಂಬ ಅರಿವೂ ಇಲ್ಲದೆ ಕಮರಿ ಹೋಗುತ್ತಿರುವ ಎಳೆಯ ಜೀವಗಳಿಗೆ ಲೆಕ್ಕವೇ ಇಲ್ಲ. ಎಂಥ ವಿಪರ್ಯಾಸ ಅಲ್ಲವೇ?

ಮೋದಿ ಅಬೆಯನ್ನು ಅಪ್ಪಿದರೆ ಚೀನಾ ಏಕೆ ಹಬೆಯಾಡಬೇಕು?


2013ರ ಮೇ ತಿಂಗಳು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಜಪಾನ್‍ಗೆ ಭೇಟಿ ನೀಡಿದ್ದರು. ಆಗ ನಡೆದಿದ್ದ ಮಾತುಕತೆಯಲ್ಲಿ ಜಪಾನ್ ಭಾರತಕ್ಕೆ ಪೂರಕವಾದ ಹಲವು ನಿರ್ಣಯಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿತ್ತು. ಅದರಲ್ಲಿ ಮುಖ್ಯವಾದದ್ದು, 2ನೇ ವಿಶ್ವಯುದ್ಧದ ನಂತರ ಜಪಾನ್ ಭಾರತದ ಮೇಲೆ ಹೇರಿದ್ದ ಶಸ್ತ್ರಾಸ್ತ್ರಗಳ ಪೂರೈಕೆಯ ನಿಷೇಧವನ್ನು ಹಿಂಪಡೆಯುವುದು. ಅದರ ಫಲವಾಗಿ ಭಾರತಕ್ಕೆ, ಜಪಾನಿನ ಹಾರುವ ದೋಣಿ ಎಂದೇ ಖ್ಯಾತವಾದ ವಿಮಾನ ‘ಶಿನ್‍‍ಮಯ್ವಾ ಯುಎಸ್-2’ ಲಭಿಸಲಿತ್ತು. ನೆಲ ಹಾಗೂ ಜಲದ ಮೇಲೆ ಅತ್ಯಂತ ಕಡಿಮೆ ಅವಧಿಯಲ್ಲಿ ಟೇಕ್‍ ಆಫ್ ಮತ್ತು ಲ್ಯಾಂಡಿಂಗ್ ಮಾಡಬಲ್ಲ ಆಂಫಿಬಿಯಸ್ ವಿಮಾನವಾದ ಇದು ಭಾರತದ ನೆಲ-ಜಲ ಸಂರಕ್ಷಣಾ ಕಾರ್ಯಾಚರಣೆಗಳಿಗೆ ವರವಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇರಲಿಲ್ಲ. ಇದರ ಜೊತೆಗೇ ಚರ್ಚೆಯಾದ ಮತ್ತೊಂದು ವಿಷಯ ಭಾರತ ಹಾಗೂ ಜಪಾನಿನ ನೌಕಾದಳದ ಜಂಟಿ ತರಬೇತಿ. ಈ ಮಾತುಕತೆಗಳು ನಡೆದಿದ್ದವು ಅಷ್ಟೇ. ಇನ್ನೂ ಯಾವ ಅಧಿಕೃತ ಮೊಹರೂ ಬಿದ್ದಿರಲಿಲ್ಲ. ಪ್ರಧಾನಿಗಳಿಬ್ಬರೂ ಇದನ್ನೆಲ್ಲ ಅನುಮೋದಿಸಿ ಯಾವ ಒಪ್ಪಂದಕ್ಕೂ ಸಹಿ ಮಾಡಿರಲೂ ಇಲ್ಲ. ಅಷ್ಟರಲ್ಲೇ ಭುಸುಗುಟ್ಟಿತ್ತು ಚೀನಾ! ಕಮ್ಯೂನಿಸ್ಟ್ ವಾದದ ವಿಷವನ್ನುಗುಳಲು ವೇದಿಕೆಯಾಗಿ ಬಳಕೆಯಾಗುವ ತನ್ನ ಪತ್ರಿಕೆ 'ಪೀಪಲ್ಸ್ ಡೈಲಿ'ಯಲ್ಲಿ, 'ದೆಹಲಿಯ ಜಾಣತನವಿರುವುದು ಬೀಜಿಂಗ್‍ನೊಂದಿಗಿನ ತನ್ನ ವೈಮನಸ್ಯವನ್ನು ಶಾಂತವಾಗಿ ಪರಿಹರಿಸಿಕೊಳ್ಳುವುದರಲ್ಲಿ, ಕುಮ್ಮಕ್ಕು ಕೊಡುವ ಬೇರೆ ದೇಶಗಳೊಡನೆ ಕೈಜೋಡಿಸುವುದರಲ್ಲಲ್ಲ' ಎಂದು ತನ್ನ ಸಿಟ್ಟನ್ನು ಹೊರಹಾಕಿತ್ತು. ಜಪಾನಿನ ಪ್ರಧಾನಿ ಶಿಂಝೋ ಅಬೆ ಭಾರತ, ಆಸ್ಟ್ರೇಲಿಯ ಹಾಗೂ ಅಮೆರಿಕಗಳ ಕಡೆ ಸ್ನೇಹ ಹಸ್ತ ಚಾಚಿದ್ದಕ್ಕೆ ಅವರನ್ನು ಚಿಲ್ಲರೆ ಕಳ್ಳಕಾಕರು ಎಂದು ಜರೆಯಲೂ ಅದು ಹಿಂದೆಮುಂದೆ ನೋಡಲಿಲ್ಲ.

ಮತ್ತೊಂದು ಘಟನೆ ಇತ್ತೀಚೆಗೆ ನಡೆದದ್ದು. ಅಮೆರಿಕದ ವಾಷಿಂಗ್ಟನ್‍ನಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಸಭೆಯೊಂದು ಆಯೋಜಿಸಲ್ಪಟ್ಟಿತ್ತು. ಚಹಾ ವಿರಾಮದ ನಂತರ ನಡೆದ ಕುಶಲೋಪರಿಯ ವೇಳೆ ಚೀನಾದ ಪ್ರತಿನಿಧಿ ಭಾರತದ ಬಗ್ಗೆ ಆಡಿದ ಮಾತು ಕೇಳಿ ಅಲ್ಲಿದ್ದ ಎಲ್ಲರಿಗೂ ಮುಜುಗರವಾಯಿತು. ಆತ ಹೇಳಿದ್ದೇನು ಗೊತ್ತೇ? 'ಅಶಿಸ್ತಿನಿಂದ ಕೂಡಿರುವ ಭಾರತದಂಥ ದೊಡ್ಡ ದೇಶ, ಇನ್ನೂ ಕುಷ್ಠರೋಗಿಗಳನ್ನು ಹೊಂದಿರುವ ಕೊಳಕು ದೇಶ ಅದು ಹೇಗೆ ಇಷ್ಟು ಬೇಗ ಪ್ರಗತಿ ಸಾಧಿಸುತ್ತಿದೆ ಎಂಬುದೇ ನಮ್ಮ ಪಾಲಿಗೆ ದೊಡ್ಡ ಆಶ್ಚರ್ಯ' ಎಂದು. ಹೌದು. ಚೀನಾ ನಮ್ಮನ್ನು ಕೀಳಾಗಿ ಕಾಣುತ್ತದೆ. ತುಂಬಾ ಆಳವಾಗಿ ದ್ವೇಷಿಸುತ್ತದೆ. ನಮ್ಮೊಂದಿಗಿನ ಅದರ ಸ್ಪರ್ಧೆ ಬರೀ ಆರ್ಥಿಕತೆ ಅಥವಾ ಗಡಿ ತಗಾದೆಗಳಿಗೆ ಮಾತ್ರ ಸೀಮಿತವಾದುದಲ್ಲ. ನಮ್ಮನ್ನು ಒಂದು ಪರಂಪರೆ ಅಥವಾ ನಾಗರಿಕತೆ ಎಂದು ಅದು ಪರಿಗಣಿಸಿಯೇ ಇಲ್ಲ. ಸಾವಿರಾರು ವರ್ಷಗಳ ನಮ್ಮ ಅಸ್ತಿತ್ವಕ್ಕೆ ಅದು ಕವಡೆ ಕಾಸಿನ ಕಿಮ್ಮತ್ತೂ ಕೊಡುವುದಿಲ್ಲ. ಇಂದಿಗೂ ಅದು ನಮ್ಮನ್ನು ನೋಡುತ್ತಿರುವುದು 1962ರ ಯುದ್ಧದ ಕನ್ನಡಕ ಹಾಕಿಕೊಂಡೇ! ಅಂದು ಹೀನಾಯವಾಗಿ ಸೋತ ನಾವು ಅದರ ಕಣ್ಣಿಗೆ ಹೇಗೆ ಕಂಡೆವೋ ಇಂದೂ ಹಾಗೇ ಕಾಣಬೇಕು. ಇಲ್ಲದಿದ್ದರೆ ಅದಕ್ಕೆ ಸಹ್ಯವಾಗುವುದಿಲ್ಲ. ನಾವು ಬದಲಾಗುತ್ತಿದ್ದೇವೆಂಬ ಸತ್ಯವನ್ನು ಜೀರ್ಣಿಸಿಕೊಳ್ಳುವುದು ಹಾಗಿರಲಿ, ಮೇಲ್ನೋಟಕ್ಕೆ ಒಪ್ಪಿಕೊಳ್ಳುವುದಕ್ಕೂ ಅದು ತಯಾರಿಲ್ಲ.

ಅದರ ಮಲತಾಯಿ ಧೋರಣೆ ಹೇಗಿದೆ ನೋಡಿ. 14 ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತಿದೆ. ಎಲ್ಲರೊಡನೆಯೂ ಒಂದಿಲ್ಲೊಂದು ತಕರಾರೇ ಆದರೂ ಕಳೆದ ಮೂವತ್ತು ವರ್ಷಗಳಿಂದ ಒಂದೊಂದೇ ಕಲಹವನ್ನು ಪರಿಹರಿಸಿಕೊಳ್ಳಲ್ಲು ಪ್ರಯತ್ನಿಸುತ್ತಿದೆ. ಭಾರತವೊಂದನ್ನು ಬಿಟ್ಟು! ರಷ್ಯಾ ಸೇರಿದಂತೆ ಉಳಿದೆಲ್ಲಾ ದೇಶಗಳಿಗೂ ರಿಯಾಯಿತಿ ಸಿಕ್ಕಿದ್ದರೂ ಭಾರತದ ಮೇಲೆ ಮಾತ್ರ ನಿರಂತರ ದಂಡ ಪ್ರಯೋಗ! ಅದೂ ಹಾಗಿರಲಿ, ಟಿಬೆಟ್‍ನ ಭಾಗದಲ್ಲಿ ತನ್ನ ಅಣ್ವಸ್ತ್ರಗಳ ಶೇಖರಣೆಯ ಶೇಕಡಾ 30ರಷ್ಟನ್ನು ಎದುರಿಗೇ ಕಾಣುವಂತೆ ಪೇರಿಸಿಟ್ಟಿರುವ ಚೀನಾ, 'ತಾನು ಮೊದಲು ಅಣ್ವಸ್ತ್ರವನ್ನು ಉಪಯೋಗಿಸುವುದಿಲ್ಲ' ಎಂದು ಅಧಿಕೃತವಾಗಿ ಭಾಷೆ ಕೊಟ್ಟಿರುವ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಭಾರತದ ಹೆಸರು ಮಾತ್ರ ಇಲ್ಲ! ಕಾರಣವೇನಿರಬಹುದು ಹೇಳಿ? ಎಲ್ಲ ಪಶ್ಚಿಮ ರಾಷ್ಟ್ರಗಳೂ ತನಗೆ ಸಲಾಮು ಹೊಡೆಯಬೇಕೆಂದು ಬಯಸುವ ಚೀನಾ ಅದಕ್ಕಾಗಿ ತನ್ನನ್ನು ತಾನೇ ಹಲವು ವರ್ಷಗಳಿಂದ ಅಣಿಗೊಳಿಸಿಕೊಳ್ಳುತ್ತಾ ಬಂದಿದೆ. ಇಡೀ ಏಷ್ಯಾ ಖಂಡದ ಅನಭಿಷಿಕ್ತ ದೊರೆಯಾಗುವ ಕನಸು ಕಂಡಿದೆ. ಆದರೆ 1990ರ ನಂತರದ ಬೆಳವಣಿಗೆಗಳಿಂದ ಅದರ ದೊಡ್ಡ ಪ್ರತಿಸ್ಪರ್ಧಿಯಾಗಿ, ತಲೆನೋವಾಗಿ ಕಾಡುತ್ತಿರುವುದು ಭಾರತ. ಗಾತ್ರ, ಸಾಮರ್ಥ್ಯಗಳಲ್ಲಿ ಯಾವುದಕ್ಕೂ ಕಡಿಮೆಯಿಲ್ಲದ ನಮ್ಮ ದೇಶ ಆಂತರಿಕ ಕಲಹಗಳಲ್ಲಿ ಮುಳುಗಿದ್ದರೆ ಚೀನಾಕ್ಕೆ ಸಂತೋಷ, ಸಮಾಧಾನ. ಪರಮಾಣು ಪರೀಕ್ಷೆಯ ನೆಪದಲ್ಲಿ ಅಮೆರಿಕ ನಮಗೆ ದಿಗ್ಬಂಧನ ಹಾಕುವುದನ್ನು ಚೀನಾ ಮುಕ್ತವಾಗಿ ಸ್ವಾಗತಿಸುತ್ತದೆ. ಅದೇ ಅಮೆರಿಕ ನಮ್ಮನ್ನು ಅಣು ಶಕ್ತಿಯುಳ್ಳ ರಾಷ್ಟ್ರ ಎಂದು ಗುರುತಿಸಿ ಒಪ್ಪಿಕೊಂಡಾಗ ಅದನ್ನು ತೀವ್ರವಾಗಿ ಖಂಡಿಸುತ್ತದೆ. ಭಾರತದಂಥ, ಪ್ರಜಾಪ್ರಭುತ್ವವುಳ್ಳ ರಾಷ್ಟ್ರ ಇತರೆ ದೇಶಗಳೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ದಿನೇ ದಿನೇ ಸುಧಾರಿಸಿಕೊಳ್ಳುತ್ತಿರುವುದು ಅದರ ಪಾಲಿನ ನುಂಗಲಾರದ ತುತ್ತಾಗಿದೆ. ಮೋದಿಯವರು ಪ್ರಧಾನಿಯಾದ ಮೇಲಂತೂ, ಭಾರತ ಇನ್ನೆಲ್ಲಿ ತನ್ನನ್ನು ಮೀರಿ ಬೆಳೆದುಬಿಡುವುದೋ ಎಂಬ ಅಭದ್ರತೆ ಅದನ್ನು ಕಾಡುತ್ತಿದೆ.

ಇದೇ ಫೆಬ್ರುವರಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗಲೇ ಮೋದಿಯವರು ಚೀನಾದ ವಿಸ್ತಾರವಾದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 21ನೇ ಶತಮಾನ ಭಾರತದ್ದಾಗಲಿದೆ ಎಂದೂ ಹೇಳಿದ್ದರು. ಆಗಲೇ ಚೀನಾಗೆ ಇರಿಸುಮುರುಸಾಗಿತ್ತು. ಅದೇ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾದ ಮೇಲಂತೂ ಚೀನಾ ಪೂರ್ತಿ ‘ಸಾವಧಾನ’ ಭಂಗಿಯಲ್ಲಿ ನಿಂತಿತು. ಮೋದಿಯವರನ್ನು ಬಿಟ್ಟೂ ಬಿಡದೆ ಹಿಂಬಾಲಿಸಿತು. ಅವರು ಭೂತಾನ್ ದೇಶಕ್ಕೆ ಮೊದಲು ಭೇಟಿ ನೀಡಿದ್ದು, ನಂತರ ನೇಪಾಳಕ್ಕೆ ಹೋದದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದೇ ಅಲ್ಲದೆ, ನೇಪಾಳದ ಅಸೆಂಬ್ಲಿಯಲ್ಲಿ ಅವರು 'ನಾವು ನಿಮ್ಮ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸುವುದಿಲ್ಲ, ಆದರೆ ನೀವು ಆಯ್ದುಕೊಳ್ಳುವ ಮಾರ್ಗಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ' ಎಂದು ಹೇಳಿದ ಮಾತುಗಳನ್ನು ಜಾಣತನದ್ದು ಎಂದು ವಿಶ್ಲೇಷಿಸಿತು. ಆದರೆ ಇದೇ ಚೀನಾ, ಮೋದಿಯವರ ಜಪಾನಿನ ಭೇಟಿಯ ಬಗ್ಗೆ ತಿಳಿದುಬರುತ್ತಿದ್ದಂತೆ ಚಡಪಡಿಸಿತ್ತು. ಏಕೆಂದರೆ, ಇತ್ತೀಚೆಗೆ ಜಪಾನ್ ಜೊತೆಗಿನ ಅದರ ಯಾವ ಸಂಬಂಧಗಳೂ ಸೌಹಾರ್ದಯುತವಾಗಿಲ್ಲ. ಅದರಲ್ಲೂ ಜಪಾನ್ ತನ್ನ ಭದ್ರತೆಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಮೇಲಂತೂ ಚೀನಾಗೆ ಇನ್ನಷ್ಟು ದೂರವಾಗಿದೆ. ಪರಿಸ್ಥಿತಿ ಹೀಗಿರುವಾಗ ಭಾರತ ಹಾಗೂ ಜಪಾನ್ ಕೈ ಜೋಡಿಸುವುದನ್ನು ಅದು ಸಹಿಸೀತೇ? ಜಪಾನ್ನ ಸಹಯೋಗದೊಂದಿಗೆ ಭಾರತ ಬಲಾಢ್ಯವಾಗಲು ಬಿಟ್ಟೀತೇ? ಭಾರತದ ನೆರವಿನೊಂದಿಗೆ ಜಪಾನ್ ತನ್ನ ಭದ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವುದನ್ನು ಒಪ್ಪೀತೇ? ತನಗದು ಸಮ್ಮತವಲ್ಲ ಎಂಬ ನಿಲುವನ್ನು ತಕ್ಷಣವೇ ಸರ್ಕಾರದ ಪರವಾಗಿ ಅಲ್ಲಿನ ಬುದ್ಧಿಜೀವಿಯೊಬ್ಬರು 'ಗ್ಲೋಬಲ್ ಟೈಮ್ಸ್'ಎಂಬ ಪತ್ರಿಕೆಗೆ ಬರೆದ ತಮ್ಮ ಲೇಖನ(ಬೆದರಿಕೆ ಪತ್ರ?)ದಲ್ಲಿ ಹೊರಹಾಕಿದ್ದರು.ಮೋದಿಯವರೇನಾದರೂ ಮೊತ್ತ ಮೊದಲ ಭೇಟಿಗೆ ಜಪಾನನ್ನು ಆಯ್ದುಕೊಂಡರೆ ಚೀನಾದೊಂದಿಗಿನ ಭಾರತದ ಸಂಬಂಧ ಹಳಸಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ನಂತರ ಅವರು ದೂರಿದ್ದು ಜಪಾನಿನ ಪ್ರಧಾನಿ ಅಬೆಯವರನ್ನು. ಭಾರತ ಹಾಗೂ ಚೀನಾದ ಸ್ನೇಹವನ್ನು ಅಬೆ ಒಡೆಯುತ್ತಿದ್ದಾರೆ ಎಂದು ಬೊಬ್ಬೆ ಹಾಕಿದ ಮೇಲೆ ಬಂದದ್ದು ನಮ್ಮ ಸರದಿ. ಮೋದಿ ಸರ್ಕಾರಕ್ಕೆ ಜಪಾನ್ ಜೊತೆಗಿನ ಬಾಂಧವ್ಯಕ್ಕಿಂತ ಚೀನಾ ಜೊತೆಗಿನ ಸೌಹಾರ್ದವೇ ಮುಖ್ಯವಾಗಬೇಕು ಎಂದು ಉಪದೇಶಿಸಿದ್ದರು. ಚೀನಾಕ್ಕೆ ಹಿತವಲ್ಲದ ಒಪ್ಪಂದಗಳನ್ನು ಜಪಾನಿನ ಜೊತೆ ಮಾಡಿಕೊಂಡರೆ ಇದೇ ತಿಂಗಳ ಮೂರನೆಯ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಚೀನಾದ ಅಧ್ಯಕ್ಷ ಜಿನ್‍ಪಿಂಗ್‍ರನ್ನು ಮೋದಿ ಹೇಗೆ ಬರಮಾಡಿಕೊಳ್ಳುತ್ತಾರೆ ಎಂದೂ ಪ್ರಶ್ನಿಸಿದ್ದರು.
ಇಷ್ಟೆಲ್ಲದರ ನಡುವೆಯೂ ಮೋದಿ ಜಪಾನಿನ ಪ್ರವಾಸ ಕೈಗೊಂಡಿದ್ದಾರೆ. ಅಚ್ಚುಕಟ್ಟಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವಾರು ಒಪ್ಪಂದಗಳಿಗೆ ಸಹಿ ಮಾಡಲಿದ್ದಾರೆ. ಯುದ್ಧಕ್ಕೆ ಬೇಕಾಗುವ ಪರಿಕರಗಳಿಂದ ಹಿಡಿದು, ಆಂಫಿಬಿಯಸ್ ವಿಮಾನದವರೆಗೂ ಎಲ್ಲವೂ ಲಭ್ಯವಾಗಲಿದೆ. ಜಪಾನಿನ ತಂತ್ರಜ್ಞಾನ ಕೌಶಲದ ಲಾಭ ಇನ್ನು ಮುಂದೆ ನಮಗೂ ದೊರೆಯಲಿದೆ. ಬುಲೆಟ್ ಟ್ರೇನಿನ ಕನಸು ನನಸಾಗಲಿದೆ. ಸಾವಿರ ದೇವಾಲಯಗಳ ನಗರವೆಂದೇ ಖ್ಯಾತವಾದ ಕ್ಯೋಟೊ ಮಾದರಿಯಲ್ಲೇ ವಾರಣಾಸಿ ಹೊಸದಾಗಿ ಮೈದಳೆಯಲಿದೆ. ಒಂದು ನೂರು 'ಸ್ಮಾರ್ಟ್ ಸಿಟಿ'ಗಳ ರೂಪುರೇಷೆಯಲ್ಲಿ ಜಪಾನಿನ ಕೈವಾಡವೂ ಕಾಣಲಿದೆ. ಜಪಾನಿನ ಹೂಡಿಕೆದಾರರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ. 'ರೇರ್ ಅರ್ಥ್ಸ್' ಎಂಬ ಅಪರೂಪದ ಖನಿಜ ಸಂಪತ್ತನ್ನು ಸದ್ವಿನಿಯೋಗಿಸಿಕೊಳ್ಳುವ ಅವಕಾಶ ಎರಡೂ ದೇಶಗಳಿಗೆ ಸಿಗಲಿದೆ. ವಿದ್ಯಾರ್ಥಿಗಳ ವಿನಿಮಯದಂಥ ವಿಶೇಷ ಕಾರ್ಯಕ್ರಮಗಳೂ ತಯಾರಾಗಲಿವೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮೋದಿಯವರು ಜಪಾನಿನ ನೆಲದ ಮೇಲೆ ನಿಂತೇ ಚೀನಾದ ಕಿವಿ ಹಿಂಡಿದ್ದಾರೆ. 'ಇನ್ನೂ 18ನೇ ಶತಮಾನದ ಚಿಂತನೆಗಳನ್ನೇ ಹೊಂದಿರುವವರು ಇತರರ ಭೂಮಿ ಸ್ವಾಧೀನದಲ್ಲಿ, ಸಮುದ್ರ ಗಡಿಯ ಆಕ್ರಮಣದಲ್ಲಿ ಕಾಲೆಳೆಯುತ್ತಾರೆ' ಎಂದು ನೇರವಾಗಿಯೇ ಆರೋಪಿಸಿದ್ದಾರೆ. ಬೇರೆ ಯಾರಾದರೂ ಈ ಮಾತುಗಳನ್ನಾಡಿದ್ದರೆ ಚೀನಾ ಹೇಗೆ ಪ್ರತಿಕ್ರಿಯಿಸುತ್ತಿತ್ತೋ. ಆದರೆ ಈಗ ಕೇಳಿಯೂ ಕೇಳದಂತೆ ಸುಮ್ಮನಿದೆ! 'ಅವರು ಯಾರನ್ನು ಉದ್ದೇಶಿಸಿ ಹೇಳುತ್ತಿದ್ದಾರೆಂಬುದೇ ನಮಗೆ ಗೊತ್ತಿಲ್ಲ' ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ ಕ್ವಿನ್ ಗ್ಯಾಂಗ್ ತಮ್ಮ 'ಜಾಣಪೆದ್ದು'ತನವನ್ನು ಪ್ರದರ್ಶಿಸುತ್ತಿದ್ದಾರೆ. ಯುದ್ಧ ಹಾಗೂ ಅಣ್ವಸ್ತ್ರಗಳ ಹೆಸರಿನಲ್ಲಿ ಎಲ್ಲರನ್ನೂ ಬೆದರಿಸುವ ಕಮ್ಯೂನಿಸ್ಟ್ ಚೀನಾಗೆ ಬಲಿಷ್ಠ ಪ್ರಜಾಪ್ರಭುತ್ವಗಳಾದ ಜಪಾನ್ ಹಾಗೂ ಭಾರತದ ಮಿತೃತ್ವ ಬಿಸಿತುಪ್ಪವಾಗಿ ಪರಿಣಮಿಸಿದೆ. ಅದರ ನಿಜವಾದ ಪ್ರತಿಕ್ರಿಯೆ ಹಾಗೂ ಮುಂದಿನ ನಡೆ ತಿಳಿದುಬರಲು ನಾವು ಜಿನ್‍ಪಿಂಗ್‍ರ ಭಾರತದ ಭೇಟಿಯವರೆಗೂ ಕಾಯಬೇಕು. ಏನೇ ಆಗಲಿ, ಒಂದಂತೂ ಖಾತರಿ. ಮೊದಲಿನಂತೆ ಘರ್ಜಿಸುವುದನ್ನು ಬಿಟ್ಟು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ಅನಿವಾರ್ಯವಂತೂ ಚೀನಾಗೆ ತಪ್ಪಿದ್ದಲ್ಲ.

ಬಹುಶಃ ಪಾಶ್ಚಾತ್ಯ ರಾಷ್ಟ್ರಗಳಿಗೆ ತಿಳಿದಿರುವುದು ಚಹಾ ಮಾರುವವನೊಬ್ಬ ಭಾರತದ ಪ್ರಧಾನಿಯಾದ ಎಂಬುದಷ್ಟೇ. ಆದರೆ ಚೀನಾಕ್ಕೆ ಅದಕ್ಕಿಂತ ಹೆಚ್ಚೇ ಅರ್ಥವಾಗಿದೆ. ಆದ್ದರಿಂದಲೇ ಚೀನಾದ ಬುದ್ಧಿಜೀವಿ ತಮ್ಮ ಲೇಖನದಲ್ಲಿ ಹೀಗೆ ಹೇಳಿದ್ದಾರೆ. 'ಮೋದಿಯವರೊಬ್ಬ ಅಪ್ಪಟ ಉದ್ಯಮಿ ಹಾಗೂ ರಾಜಕಾರಣಿ. ತಮ್ಮ ದೇಶದ ಹಿತವನ್ನು ಕಾಯಲು ಏನು ಮತ್ತು ಹೇಗೆ ಮಾಡಬೇಕೆಂಬುದನ್ನು ಅವರು ಚೆನ್ನಾಗಿ ಬಲ್ಲರು' ಎಂದು.
ಅಚ್ಛೇ ದಿನಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ! ಅಲ್ಲವೇ?