Thursday, 24 March 2016

ಕಮ್ಯೂನಿಸ್ಟ್ ನೆಹರೂ ಬರೆದು ಹೋದ ಕರಾಳ ಅಧ್ಯಾಯ!

ಕಳೆದ ವಾರ ಎನ್‍ಡಿಟಿವಿ ತನ್ನ ಅಂಗಳದಲ್ಲಿ 'ಜೆ‍ಎನ್‍ಯು'ದ ವಿದ್ಯಾರ್ಥಿಗಳನ್ನು ಮಾತಿಗೆ ಕೂಡಿಸಿಕೊಂಡಿತ್ತು. ಅಲ್ಲಿದ್ದ ಗುಂಪು, ತಾವೇಕೆ ಅಫ್ಜಲ್‍ನನ್ನು ಬೆಂಬಲಿಸುತ್ತೇವೆ ಎಂಬ ವಿತಂಡವಾದವನ್ನು ಮಂಡಿಸುತ್ತಿತ್ತು. ಚರ್ಚೆ ಮುಗಿಯುವ ಹೊತ್ತಿಗೆ ಹುಡುಗಿಯೊಬ್ಬಳು ಹತಾಶಳಾಗಿ ಹೇಳಿದಳು - 'ಎಂ. ಎಫ್ ಹುಸೇನ್‍ರಂಥ ಮಹಾನ್ ಕಲಾವಿದನನ್ನು ಹೊರಗಟ್ಟಿದ ನತದೃಷ್ಟ ದೇಶ ನಮ್ಮದು. ಛೇ!' ಅವಳು ಬಿಟ್ಟ ದೊಡ್ಡ ನಿಟ್ಟುಸಿರಿಗೆ ಅರೆಕ್ಷಣ ಮೌನ ಮಡುಗಟ್ಟಿತು. ಅಲ್ಲಿದ್ದ ವಿರೋಧಿ ಗುಂಪಿನಲ್ಲಿ ಯಾರಾದರೂ ಒಬ್ಬರು ಅವಳನ್ನು ಒಂದೇ ಒಂದು ಪ್ರಶ್ನೆ ಕೇಳಿದ್ದರೆ ಸಾಕಿತ್ತು - 'ನಿನ್ನ ಅಮ್ಮ ನಗ್ನರಾಗಿರುವ ಚಿತ್ರವನ್ನು ಎಂ.ಎಫ್ ಹುಸೇನ್ ಬರೆದಿದ್ದರೆ ಆಗಲೂ ನೀನು ಇದೇ ಮಾತನ್ನು ಹೇಳುತ್ತಿದ್ದೆಯಾ?' ಎಂದು. ದೇಶದ ಬಗ್ಗೆ ಕಿಂಚಿತ್ತೂ ಪೂಜ್ಯ ಭಾವನೆ ಇರದ ಈ ಜಾಡ್ಯ ಹೊಸದಲ್ಲ. 'ನಮ್ಮ ತಾಯಿ ಭಾರತಿ' ಎನ್ನುವ ಪಾಠವನ್ನು ಎಷ್ಟೋ ಜನ ಕಲಿತಿಲ್ಲವೆಂದರೆ ಅದಕ್ಕೆ ಕಾರಣವೂ ಇಲ್ಲದಿಲ್ಲ. ದಶಕಗಳಿಂದ 'ಜೆ‍ಎನ್‍ಯು'ದಂಥ ವಿಶ್ವವಿದ್ಯಾಲಯಗಳಲ್ಲಿ ಕಮ್ಯೂನಿಸಂ ಎಂಬ ಅಫೀಮಿನ ಅಮಲನ್ನು ತಲೆಗೇರಿಸಿಕೊಂಡು ಬೆಳೆದ ಪೀಳಿಗೆಗಳೇ ಇವೆ. ಅವುಗಳ ಗಡ್ಡ-ಮೀಸೆ ಬೆಳ್ಳಗಾಗಿ, ಜುಬ್ಬ ಹರಿದು, ಚಪ್ಪಲಿ ಸವೆದು, ಕಣ್ಣಿಗೆ ಕನ್ನಡಕ ಬಂದಿದ್ದರೂ ಇಂದಿನ ಹೊಸ ಪೀಳಿಗೆಯ ದಾರಿ ತಪ್ಪಿಸುವ ಉಮೇದು ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಹಾಗಾದರೆ ಯಾರು ಇದಕ್ಕೆಲ್ಲ ಮೂಲ ಕಾರಣ? ವಿದೇಶೀಯನಾ? ಮತಾಂಧನಾ? ದೇಶದ ಮೇಲೆ ದಂಡೆತ್ತಿ ಬಂದ ದಾಳಿಕೋರನಾ? ಅಲ್ಲವೇ ಅಲ್ಲ. ಅಪ್ಪಟ ದೇಶೀ ತಳಿಯೇ ಆದ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ! ಕಮ್ಯೂನಿಸಂ ಎಂಬ ಕ್ರಿಮಿಯನ್ನು ತಲೆಯೊಳಗೆ ಬಿಟ್ಟುಕೊಂಡ ನೆಹರೂ ಹಂತಹಂತವಾಗಿ ಅದನ್ನು ಹೇಗೆ ದೇಶದ ನರನಾಡಿಗಳಲ್ಲಿ, ಮುಖ್ಯವಾಗಿ ದಿಲ್ಲಿಯೆಂಬ ಮಸ್ತಿಷ್ಕದೊಳಗೆ ಹರಿಯಬಿಟ್ಟರು ಎನ್ನುವ ಸತ್ಯ ಇತಿಹಾಸದ ಪುಟಗಳನ್ನು ಬಗೆದು ನೋಡಿದಾಗ ಸ್ವಷ್ಟವಾಗಿ ಕಾಣುತ್ತದೆ.

1924-25. ಭಾರತದಲ್ಲಿ ಎಡಪಂಥೀಯ ವಿಚಾರಧಾರೆಯನ್ನು ಹುಟ್ಟುಹಾಕುವ ಸಲುವಾಗಿ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ಕಮ್ಯೂನಿಸ್ಟರ ಕೇಂದ್ರವೊಂದು ಹುಟ್ಟಿಕೊಂಡಿತ್ತು. ಅದರ ರೂವಾರಿ ಸೋವಿಯತ್ ಒಕ್ಕೂಟ. ಆಗ ಕಾಮ್ರೇಡ್ ಎಮ್.ಎನ್. ರಾಯ್‍ರ ಪತ್ನಿ ಐಲೀನ್, ನೆಹರೂರನ್ನು ಸಂಪರ್ಕಿಸಿದರು. ಪುರೋಹಿತರು ಬೊಟ್ಟು ಮಾಡಿದೆಡೆ ನೋಡಿ ಹಾಡಹಗಲಲ್ಲೂ ಅರುಂಧತಿ ನಕ್ಷತ್ರ ಕಂಡಿತೆಂದು ಬೀಗುವ ಮದುಮಕ್ಕಳ ಹಾಗೆ ಬೀಗಿದರು ನೆಹರೂ! ಥೈ ಅಂತ ಸಜ್ಜಾಗಿ 1925ರಲ್ಲಿ ಯೂರೋಪ್ ಪ್ರವಾಸಕ್ಕೆ ಹೊರಟರು. ನೆವವಿದ್ದಿದ್ದು ಹೆಂಡತಿಯ ಅನಾರೋಗ್ಯದ ಚಿಕಿತ್ಸೆ ಎಂಬುದು! ಅಲ್ಲಿಂದ, 1927ರ ನವೆಂಬರ್‍ನಲ್ಲಿ ಸೋವಿಯತ್ ತಲುಪಿದರು. ಏನಿಲ್ಲವೆಂದರೂ ಎಪ್ಪತ್ತು   ಲಕ್ಷ ಜನರನ್ನು ಕೊಂದಿದ್ದ ಲೆನಿನ್‍ನ ಸಮಾಧಿಯ ಮುಂದೆ ನಿಂತು ಕೃತಾರ್ಥರಾಗಿ ಕಣ್ಣೀರು ಸುರಿಸಿದರು! ಪ್ರವಾಸ ಮುಗಿಸಿ ಭಾರತಕ್ಕೆ ಮರಳುವ ಹೊತ್ತಿಗೆ ನೆಹರೂ ನಮ್ಮವರಾಗಿರಲಿಲ್ಲ. ಕಮ್ಯೂನಿಸ್ಟ್ ಸಿದ್ಧಾಂತದ ಕೈಗೊಂಬೆಯಾಗಿದ್ದರು. ಆಗ ಸೂತ್ರಧಾರಿಯಾಗಿದ್ದವನು ಮಹಾಕ್ರೂರಿ ಸ್ಟಾಲಿನ್! 
ಅಲ್ಲಿಂದ ಹಿಂದಿರುಗಿದ ನೆಹರೂ ಮಾಡಿದ ಮೊದಲ ಕೆಲಸ, ಸೋವಿಯತ್ ರಷ್ಯಾ ಎಂಬ ಪುಸ್ತಕವನ್ನು ಬರೆದಿದ್ದು. ಅಷ್ಟಕ್ಕೇ ಸುಮ್ಮನಾಗದೆ, ಕಾಂಗ್ರೆಸ್‍ನ ಪ್ರತಿಯೊಂದು ಅಧಿವೇಶನದಲ್ಲೂ ಸೋವಿಯತ್‍ನ ಪರ ಅಧಿಸೂಚನೆಗಳ ಷರಾ ಹೊರಡಿಸಿದರು. ಒಂದೇ ಘೋಷಣೆ ಅವರದ್ದು. 'ಸೋವಿಯತ್ ಹಾಗೂ ಭಾರತ ಹಲವಾರು ವಿಚಾರಗಳಲ್ಲಿ ಸಾಮ್ಯ ಹೊಂದಿರುವುದರಿಂದ ಎರಡೂ ದೇಶಗಳು ಅತ್ಯಂತ ಮಧುರವಾದ ಬಾಂಧವ್ಯ ಹೊಂದುವುದು ಸಾಧ್ಯ' ಎನ್ನುವುದು. ಇದೇ ಸೋವಿಯತ್ 1919-20 ರಲ್ಲಿ ಪಂಜಾಬ್‍ನ ಪಠಾಣರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿ ದಂಗೆಯೆಬ್ಬಿಸಲು ಕುಮ್ಮಕ್ಕು ನೀಡಿದ್ದ ವಿಷಯ ನೆಹರೂರಿಗೆ ನೆನಪಾಗಲೇ ಇಲ್ಲ ಪಾಪ! ಅವರಿಗಿದ್ದ ಮತ್ತೊಂದು ದೊಡ್ಡ ಭ್ರಮೆ, ನಮ್ಮನ್ನಾಳುತ್ತಿದ್ದ ಸಾಮ್ರಾಜ್ಯಶಾಹಿ ಇಂಗ್ಲೆಂಡ್ ಕಾಲು ಕೆರೆದುಕೊಂಡು ಸೋವಿಯತ್‍ನ ಜೊತೆ ಯುದ್ಧಕ್ಕೆ ಹೋಗಿ ಅದನ್ನು ಸೋಲಿಸಿಬಿಡುತ್ತದೆ ಎನ್ನುವುದು. ಹಾಗೊಂದು ಪಕ್ಷ ಇಂಗ್ಲೆಂಡ್ ಯುದ್ಧಕ್ಕಿಳಿದರೆ ಭಾರತೀಯರು ಸುತರಾಂ ಬೆಂಬಲಿಸಬಾರದು ಎಂಬ ಅವರ ಮನದಿಂಗಿತ ಮತ್ತೊಂದು ಅಧಿಸೂಚನೆಯ ರೂಪದಲ್ಲಿ ಹೊರಬಿತ್ತು.

1935 - World Peace Congress ಎಂಬ ಕಮ್ಯೂನಿಸ್ಟರ ಒಕ್ಕೂಟವನ್ನು ಸೃಷ್ಟಿಸಿತು ಸೋವಿಯತ್. ಉದ್ದೇಶ, Popular Front ನ ಹೆಸರಿನಲ್ಲಿ ದಂಗೆಕೋರರ ಸೇನೆ ಕಟ್ಟಿ, ರಕ್ತಪಾತ ಮಾಡಿಯಾದರೂ ವಿವಿಧ ದೇಶಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವುದು. ತಕ್ಷಣ ನೆಹರೂ ಎರಡು ಮುಖ್ಯ ಕೆಲಸಗಳನ್ನು ಮಾಡಿದರು. ಒಂದು – ಆ ಒಕ್ಕೂಟಕ್ಕೆ ಭಾರತದ ಪ್ರತಿನಿಧಿಯಾಗಿ ಕೃಷ್ಣ ಮೆನನ್‍ರನ್ನು ನೇಮಿಸಿದ್ದು! ಎರಡು - ವಿದೇಶಾಂಗ ವ್ಯವಹಾರಗಳ ಇಲಾಖೆಯನ್ನು ಪ್ರಾರಂಭಿಸಿ ಅದರ ಉಸ್ತುವಾರಿಯನ್ನು ಅಹಮದ್ ಮತ್ತು ಅಶ್ರಫ್ ಎಂಬಿಬ್ಬರು ಕಾಮ್ರೇಡ್‍ಗಳಿಗೆ ವಹಿಸಿಕೊಟ್ಟಿದ್ದು!
1939- ಭಾರತದ ಪಾಲಿಗೆ ಮಹತ್ವಪೂರ್ಣ ವರ್ಷ. ನೆಹರೂ ನಿಜವಾಗಿಯೂ ದೇಶಭಕ್ತರಾಗಿದ್ದಿದ್ದರೆ ನಮಗೆ ಆ ವರ್ಷವೇ ಸ್ವಾತಂತ್ರ್ಯ ಸಿಕ್ಕಿಬಿಡುತ್ತಿತ್ತು. ಏಕೆಂದರೆ ಆಗಲೇ ಕಾಂಗ್ರೆಸ್ ಅತ್ಯಂತ ಪ್ರಬಲವಾಗಿದ್ದಿದ್ದು. ಸೋವಿಯತ್, ಇಂಗ್ಲೆಂಡನ್ನು ಆಪೋಶನ ತೆಗೆದುಕೊಳ್ಳಲು ಕಮ್ಯೂನಿಸ್ಟ್ ಚಳವಳಿಯನ್ನು ಹುಟ್ಟು ಹಾಕಿದ್ದೂ ಅದೇ ವರ್ಷದಲ್ಲೇ. ಭಾರತವೂ ಇಂಗ್ಲೆಂಡಿನ ಮೇಲೆ ಒತ್ತಡ ಹೇರಬಹುದಿತ್ತು. ಆಗಿನ್ನೂ ಮುಸ್ಲಿಂ ಲೀಗ್ ಬಲಿತಿರಲಿಲ್ಲ. ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷವೂ ಬೇರೂರಿರಲಿಲ್ಲ. ಅದು ಅರ್ಥವಾಗಿದ್ದರಿಂದಲೇ ‘Britain’s Difficulty is India’s Opportunity’ ಅಂತ ನೇತಾಜಿ ಗುಡುಗಿದ್ದು! ಕೈಗೆ ಬಂದಿರುವ ಅದ್ಭುತವಾದ ಅವಕಾಶವನ್ನು ಬಳಸಿಕೊಳ್ಳುವ ತುಡಿತ ಅವರದ್ದು. ಆದರೆ ನೆಹರೂ ಗುಮ್ಮನಂತೆ ಕುಳಿತುಬಿಟ್ಟಿದ್ದರು! ಸ್ಟಾಲಿನ್‍ನ ಆಜ್ಞೆಗೋಸ್ಕರ ಕಾಯುತ್ತಿದ್ದರು! ರೋಸಿ ಹೋದ ನೇತಾಜಿಯನ್ನು ಕಾಂಗ್ರೆಸ್‍ನಿಂದ ಹೊರಹಾಕಲಾಯಿತು!
1947 - ಎರಡನೆಯ ವಿಶ್ವಯುದ್ಧದಲ್ಲಿ ಹೈರಾಣಾಗಿದ್ದ ಇಂಗ್ಲೆಂಡ್‍ಗೆ ಸುಭಾಷ್‍ರ ಸೇನೆಯೊಡನೆ ಬಡಿದಾಡುವಷ್ಟು ತ್ರಾಣವಿರಲಿಲ್ಲ. ಭಾರತದಿಂದ ಗಂಟು ಮೂಟೆ ಕಟ್ಟಲು ಸಜ್ಜಾಯಿತು. ಸ್ಟಾಲಿನ್ ನೆಹರೂರನ್ನು ಗಮನಿಸತೊಡಗಿದ. ರಾಷ್ಟ್ರವಾದಿಗಳ ಗುಂಪಿನಲ್ಲಿದ್ದ ನೆಹರೂರಿಗೆ ಕಮ್ಯೂನಿಸ್ಟ್ ಸಿದ್ಧಾಂತಗಳನ್ನು ಆಚರಣೆಗೆ ತರುವುದು ಕಷ್ಟವಾಯಿತು.
1948 - ಸಿಟ್ಟಾದ ಸ್ಟಾಲಿನ್ ಸಿಪಿಐನ ಭಾರತೀಯ ಕಾಮ್ರೇಡ್‍ಗಳನ್ನು ದೇಶದ ಮೇಲೆ ಛೂಬಿಟ್ಟ! ಕಮ್ಯೂನಿಸ್ಟ್ ವೀರರು ಕ್ರೌರ್ಯಕ್ಕಿಳಿದರು! ಅಂದು ಪಟೇಲರು ಅವರನ್ನು ಮಟ್ಟ ಹಾಕಿರದಿದ್ದರೆ ದೇಶಕ್ಕೆ ದೇಶವೇ ಹತ್ತಿ ಉರಿದು ಹೋಗುತ್ತಿತ್ತು! ನೆಹರೂ ಮಾಡಿದ ಘನಂದಾರಿ ಕೆಲಸ ಒಂದೇ. ಕೂತು ಕಣ್ಣೀರು ಹಾಕಿದ್ದು! ದೇಶದಲ್ಲಿ ದಂಗೆಯಾಗುತ್ತಿದೆ ಎಂಬ ಕಾರಣಕ್ಕಲ್ಲ, ಸ್ಟಾಲಿನ್ ತಮ್ಮ ನಿಷ್ಠೆಯನ್ನು ನಂಬದೆ ತಮ್ಮನ್ನು ಅನುಮಾನಿಸಿಬಿಟ್ಟನಲ್ಲ ಎಂಬ ಕಾರಣಕ್ಕೆ! ರೋಸಿಹೋದ ಬಂಗಾಳವಂತೂ ಕಮ್ಯೂನಿಸ್ಟ್ ಪಕ್ಷವನ್ನು ನಿಷೇಧಿಸಿತು. ಆಗ ಅಸಹಾಯಕತೆಯಿಂದ ಕುಗ್ಗಿ ಹೋದ ನೆಹರೂ ಏನು ಮಾಡಿದರು ಗೊತ್ತೇ? ಮಾಸ್ಕೋದಲ್ಲಿ ಭಾರತೀಯ ರಾಯಭಾರಿಯಾಗಿದ್ದ ಸಹೋದರಿ ವಿಜಯಲಕ್ಷಿ ಪಂಡಿತರಿಗೆ ಆತುರಾತುರವಾಗಿ ತಂತಿಯ ಮೂಲಕ ಸಂದೇಶ ಕಳಿಸಿದರು – ‘ಪಶ್ಚಿಮ ಬಂಗಾಳ ಹೇರಿರುವ ನಿಷೇಧಕ್ಕೆ ಭಾರತ ಸರ್ಕಾರದ ಒಪ್ಪಿಗೆಯಿಲ್ಲ, ದೇಶದ ಬೇರಾವುದೇ ಭಾಗದಲ್ಲೂ ಸಿಪಿಐ ನಿಷೇಧಿಸಲ್ಪಡುವುದಿಲ್ಲ' ಎಂದು. ಪಾಪ, ಸ್ಟಾಲಿನ್‍ನ ನಿಷ್ಠರ ಪಟ್ಟಿಯಲ್ಲಿ ಇವರೇ ಮೊದಲಿಗರಾಗಿರಲು ಹಾತೊರೆಯುತ್ತಿದ್ದರಲ್ಲ?
1950 - ಪಟೇಲ್‍ರು ಇಲ್ಲವಾದರು. ನೆಹರೂರನ್ನು ಪ್ರಶ್ನಿಸಬಲ್ಲ ಛಾತಿಯಿದ್ದ ಅವರನ್ನು ಕಳೆದುಕೊಂಡಿದ್ದು ಈ ದೇಶದ ದುರಾದೃಷ್ಟ!  
ಆಮೇಲೆ, ನೆಹರೂ ಆಡಿದ್ದೇ ಆಟವಾಗಿ ಹೋಯಿತು! ಥೇಟ್ ಅಪ್ಪನನ್ನೇ ಅನುಕರಿಸಿದ ಇಂದಿರಾ ಗಾಂಧಿ ಮಾಸ್ಕೋದ ಬಂಟರನ್ನೆಲ್ಲ ಗುಡ್ಡೆಹಾಕಿಕೊಂಡರು. ಜೆ‍ಎನ್‍ಯು ವಿಶ್ವವಿದ್ಯಾಲಯವನ್ನು ಕಟ್ಟಿ ಕಮ್ಯೂನಿಸ್ಟ್ ಪ್ರೊಫೆಸರ್‍ಗಳನ್ನೇ ಸಾಕಿಕೊಂಡರು. ಇವರಿಗೆಂದೇ ಪತ್ರಿಕೋದ್ಯಮ, ಶೈಕ್ಷಣಿಕ ಹಾಗೂ ಆಡಳಿತ ವಲಯಗಳಲ್ಲಿ ಹುದ್ದೆಗಳು ಹುಟ್ಟಿಕೊಂಡವು. ಇವರದೇ ಗುಂಪಿನವರನ್ನು ಏಕಾಏಕಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಧೀಶರನ್ನಾಗಿ ನೇಮಿಸಲೂ ಇಂದಿರಾ ಹಿಂಜರಿಯಲಿಲ್ಲ. ನಿಧಾನವಾಗಿ ಈ ಮಾಫಿಯಾ ಬೆಳೆಯತೊಡಗಿತು. ಅಧಿಕಾರ ಕೇಂದ್ರಗಳನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿಯಿತು. ಸಮಾಜವಾದದ ಮೂಲ ಸಿದ್ಧಾಂತವನ್ನು ಅನುಷ್ಠಾನಗೊಳಿಸಲಾಗದಿದ್ದರೇನಂತೆ, ಭಾರತೀಯತೆಗೆ ವಿರುದ್ಧವಾದದ್ದೆಲ್ಲವನ್ನೂ ಪೋಷಿಸತೊಡಗಿತು. ನಕ್ಸಲರು, ಇಸ್ಲಾಂ ಮೂಲಭೂತವಾದಿಗಳೆಲ್ಲ ಪ್ರಿಯರಾಗತೊಡಗಿದರು. ಇವರು ಹೇಳುವ ವಿಶ್ವಶಾಂತಿ, ಸೌಹಾರ್ದಗಳಿಗೆಲ್ಲ ರಕ್ತಪಾತವೇ ತಳಹದಿ. ಆದ್ದರಿಂದಲೇ ರಾಷ್ಟ್ರೀಯ ವಿಚಾರಗಳು ಬಂದಾಗಲೆಲ್ಲ ಜೆ‍ಎನ್‍ಯುದ ಆವರಣದಲ್ಲಿ ಕ್ರಾಂತಿಯ ಕಹಳೆ ಮೊಳಗುತ್ತದೆ. ಯಾಕೂಬ್ ಮೆಮನ್ ಸತ್ತರೆ ಇವರ ಆತ್ಮಗಳು ನರಳುತ್ತವೆ. ಭಾರತದ ಸಮಗ್ರತೆಯ ಕಟ್ಟಾ ದ್ವೇಷಿಗಳು ಈ ಮಂದಿ!
ಸಿಟ್ಟು ಬರುವುದು ಇವರ್ಯಾರ ಮೇಲೂ ಅಲ್ಲ. ಈ ಕೊಳಕು ಪೀಳಿಗೆಗೆ ನಾಂದಿ ಹಾಡಿ ಹೋದ ಲಜ್ಜೆಗೇಡಿ ನೆಹರೂ ಮೇಲೆ. ಭರ್ತಿ ಹದಿನೆಂಟು ವರ್ಷ ಈ ದೇಶದ ಪ್ರಧಾನಿಯಾಗಿದ್ದವರು ನೆಹರೂ. ಸ್ಟಾಲಿನ್‍ನ ಕರೆಗೆ ಚಾತಕ ಪಕ್ಷಿಯಂತೆ ಕಾಯುತ್ತಾ, ಎಡ್ವಿನಾ ಮೌಂಟ್‍ಬ್ಯಾಟನ್ ಕರೆದಾಗಲೆಲ್ಲ ಅವಳ ಹಾಸಿಗೆ ಹತ್ತುತ್ತಾ ತಾವೆಂಥ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದರ ಪರಿವೆಯೇ ಇಲ್ಲದವರಂತೆ ವರ್ತಿಸಿದರು! ಭಾರತದಲ್ಲಿ ಕಮ್ಯೂನಿಸ್ಟ್ ಸಿದ್ಧಾಂತವನ್ನು ಹರಡಲು 1926ರಲ್ಲಿ ಬಂದ ಮೊತ್ತಮೊದಲ ವಿದೇಶೀಯ (Comintern) ಫಿಲಿಪ್ ಸ್ಪ್ರಾಟ್ ಕೂಡ ನೆಹರೂರ ಕಮ್ಯೂನಿಸ್ಟ್ ನಿಷ್ಠೆಯನ್ನು ನೋಡಿ ದಂಗಾಗಿದ್ದ! ಸಮಾಜವಾದದ ಗೆದ್ದಲು ಅವರ ಮನಸ್ಸನ್ನು ಯಾವ ಪರಿ ತಿಂದು ಹಾಕಿತ್ತು ಎನ್ನುವುದು ಅರ್ಥವಾಗಲು ಒಂದೇ ಒಂದು ಉದಾಹರಣೆ ಸಾಕು. 1953ರಲ್ಲಿ ಸ್ಟಾಲಿನ್ ಸತ್ತಾಗ, ಹೆತ್ತ ತಂದೆಯನ್ನು ಕಳೆದುಕೊಂಡು ಅನಾಥರಾದ ಹಾಗೆ ಒದ್ದಾಡಿ, ಸಂಸತ್ತಿನಲ್ಲಿ ಅವನನ್ನು 'ಮಾರ್ಶಲ್ ಸ್ಟಾಲಿನ್' ಎಂದು ಸಂಬೋಧಿಸಿದ್ದರು! ಆದರೆ 1948ರಲ್ಲಿ ಗಾಂಧಿ ಸತ್ತಿದ್ದಾಗ ವಿಶ್ವದ ಎಲ್ಲ ನಾಯಕರೂ ಸಂತಾಪ ವ್ಯಕ್ತಪಡಿಸಿದ್ದರೂ ಸ್ಟಾಲಿನ್ ತುಟಿಪಿಟಕ್ಕೆಂದಿರಲಿಲ್ಲ!


ನಮ್ಮ ದೇಶಕ್ಕೆ ಅನ್ವಯವೇ ಆಗದ ಸಮಾಜವಾದ, ಸೆಕ್ಯುಲರ್‍ವಾದಗಳ ಕೆಟ್ಟ ಅಧ್ಯಾಯ ಬರೆದು ಹೋಗಿದ್ದಾರೆ ನೆಹರೂ. ಪರಿಣಾಮವಾಗಿ, ದೇಶದ ಅನ್ನವನ್ನೇ ಉಂಡು ದೇಶದ ವಿರುದ್ಧವೇ ಧಿಕ್ಕಾರ ಕೂಗುತ್ತಿರುವವರ ದಾರ್ಷ್ಟ್ಯ ಮೇರೆ ಮೀರುತ್ತಿದೆ. ಸತ್ಯ ಏನು ಎನ್ನುವುದು ಗೊತ್ತೇ ಇಲ್ಲದಿದ್ದವರಿಗೆ ಹೇಳಿ ಅರ್ಥಮಾಡಿಸಬಹುದು. ಗೊತ್ತಿದ್ದೂ ಎಡಬಿಡಂಗಿಗಳ ಹಾಗೆ ಆಡುವವರಿಗೆ ಮೂಗುದಾರ ಹಾಕುವ ಪರಿ ಹೇಗೆ?

No comments:

Post a Comment