Wednesday, 27 January 2016

ಮನಸ್ಸು ಹೊರಳಿದರೆ ನಾಲಗೆ ಹೊರಳಲೆಷ್ಟು ಹೊತ್ತು?

ಬಹುಶ ನೀವೆಲ್ಲ ಅಮೆರಿಕದಲ್ಲಿ ನಡೆಯುವ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ ಬಗ್ಗೆ ಕೇಳಿರುತ್ತೀರ. ಕ್ಲಿಷ್ಟವಾದ ಆಂಗ್ಲ ಪದಗಳ ಸ್ಪೆಲ್ಲಿಂಗನ್ನು ಮಕ್ಕಳು ನಾಲಗೆ ಹೊರಳಿಸಿಕೊಂಡು ನಿರರ್ಗಳವಾಗಿ ಹೇಳುವಾಗ ಕೇಳುಗರೆಲ್ಲರಿಗೂ ಮೂಗಿನ ಮೇಲೆ ಬೆರಳಿಡುವಷ್ಟು ಅಚ್ಚರಿ! ಇತ್ತೀಚೆಗಂತೂ ಆ ಸ್ಪರ್ಧೆಯಲ್ಲಿ ಗೆಲ್ಲುವವರು ಹೆಚ್ಚಾಗಿ ಭಾರತೀಯ ಸಂಜಾತರ ಮಕ್ಕಳೇ. ಅವರು ಪ್ರತಿ ಬಾರಿ ಗೆದ್ದಾಗಲೂ ನಮಗೆಲ್ಲ ಹೆಮ್ಮೆ! ಆಗಬೇಕಾದ್ದೇ. ಆದರೆ ಅವರಿಗಿಂತ ಲೀಲಾಜಾಲವಾಗಿ ನಮ್ಮ ಮಕ್ಕಳು ಸಂಸ್ಕೃತವನ್ನಾಡುವಾಗಲೂ ನಮಗೆ ಅಷ್ಟೇ ಹೆಮ್ಮೆಯಾಗುತ್ತದಾ? ಉತ್ತರಿಸಲು ಕಷ್ಟವಾಗುತ್ತದೆ ತಾನೆ? ಅಲ್ಲೇ ಇರುವುದು ಸಮಸ್ಯೆ. ಸಂಸ್ಕೃತವೆಂದರೆ ಅರ್ಥಮಾಡಿಕೊಳ್ಳಲು, ಆಡಲು ಬಹಳ ಕಷ್ಟವಾದ ಭಾಷೆಯೆಂಬ ಭಾವನೆ ನಮ್ಮದು! ಅದು ಬರೀ ಸಂಸ್ಕೃತ ಪಾಠಶಾಲೆಗೆ ಸೀಮಿತವಾಗಿರುವ, ಶಿಖೆ ಬಿಟ್ಟುಕೊಂಡ, ವೈದಿಕ ಧರ್ಮಕ್ಕೆ ಸೇರಿದ ಮಕ್ಕಳು ಮಾತ್ರ ಕಲಿಯಬಹುದಾದ, ಕಲಿಯಬೇಕಾದ ವಿದ್ಯೆಯೆಂಬ ತಪ್ಪು ಕಲ್ಪನೆ! ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಸ್ಕೃತ ಕಲಿತು ಆಗಬೇಕಿರುವುದಾದರೂ ಏನು ಎಂಬ ಅಸಡ್ಡೆಯ ಧೋರಣೆ! ನೂರಕ್ಕೆ ನೂರು ಅಂಕಗಳಿಸುವುದು ಸುಲಭ ಎಂಬ ಕಾರಣಕ್ಕೆ ಹತ್ತನೇ ತರಗತಿಯವರೆಗೂ ಜೊತೆಯಾಗುವ ಸಂಸ್ಕೃತವನ್ನು ಆಮೇಲೆ ನಾವು ನಿರ್ದಾಕ್ಷಿಣ್ಯವಾಗಿ ದೂರ ಮಾಡಿಕೊಳ್ಳುವುದೂ ಇದೇ ಕಾರಣಕ್ಕೆ! ನಾವು ಎಡವುತ್ತಿರುವುದೇ ಇಲ್ಲಿ. ಸಂಸ್ಕೃತದ ಕಲಿಕೆ ಹಿಂದೆಂದಿಗಿಂತಲೂ ಈಗ ಅತ್ಯವಶ್ಯವಾಗಿದೆ. ಯಾಕೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ ಬನ್ನಿ.

ಸಾವಿರಾರು ವರ್ಷಗಳಿಂದ ತಾಳೆಗರಿಯ ಹಸ್ತಪ್ರತಿಗಳ ರೂಪದಲ್ಲಿ ಹುದುಗಿರುವ ಸಂಸ್ಕೃತದ ಜ್ಞಾನಭಂಡಾರ ನಮ್ಮ ಊಹೆಗೂ ಮೀರಿದ್ದು. ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ ಸುಮಾರು 45 ಲಕ್ಷ ತಾಳೆಗರಿಯ ಹಸ್ತಪ್ರತಿಗಳು ಲಭ್ಯವಿದೆ. ಇವುಗಳು ಭಾರತದ ಪಾಂಡಿಚೇರಿ, ತಂಜಾವೂರು, ಮೈಸೂರು, ಕಾಶಿ, ತಿರುಪತಿ ಹಾಗೂ ಜಮ್ಮುವಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿವೆ. ಅದರಲ್ಲಿ ಪುಸ್ತಕರೂಪದಲ್ಲಿ ಹೊರಬಂದಿರುವುದು ಎಷ್ಟಿರಬಹುದು ಹೇಳಿ? ಕೇವಲ 22 ಸಾವಿರ ಮಾತ್ರ! ಅಂದರೆ ಇನ್ನೂ ಲಕ್ಷೋಪಲಕ್ಷ ಪ್ರತಿಗಳಲ್ಲಡಗಿರುವ ರಹಸ್ಯವನ್ನು ಭೇದಿಸುವುದು ಬಾಕಿಯಿದೆ. ಸಾಧಾರಣವಾಗಿ ನಾವುಗಳು ಅಂದುಕೊಂಡಿರುವ ಹಾಗೆ ಸಂಸ್ಕೃತವೆಂದರೆ ಬರೀ ವೇದ, ಉಪನಿಷತ್ತು, ಕಾವ್ಯ, ಸಾಹಿತ್ಯಗಳಲ್ಲ. ಅವುಗಳ ಪಾಲು ಅಬ್ಬಬ್ಬಾ ಎಂದರೆ ಶೇಕಡ 20 ರಷ್ಟಿರಬೇಕು ಅಷ್ಟೇ! ಉಳಿದದ್ದರಲ್ಲಿ ಹೆಚ್ಚಾಗಿರುವುದು ವಿಜ್ಞಾನ ಹಾಗೂ ಗಣಿತಕ್ಕೆ ಸಂಬಂಧಿಸಿದ ಜ್ಞಾನ ಸಂಪತ್ತೇ! ಶಿಲ್ಪಶಾಸ್ತ್ರ, ಸೂರ್ಯಸಿದ್ಧಾಂತ, ಜೀವಶಾಸ್ತ್ರ, ಲೋಹವಿಜ್ಞಾನ, ರತ್ನಶಾಸ್ತ್ರಗಳಿಗೆ ಸಂಬಂಧಿಸಿದ ಯಕ್ಷ ಪ್ರಶ್ನೆಗಳಿಗೆಲ್ಲ ಸಂಸ್ಕೃತದಲ್ಲಿ ಸಿದ್ಧ ಸೂತ್ರವಿದೆ.
ಹಾಗಾದರೆ ಈ ಭಾಷಾ ಸಂಪತ್ತನ್ನು ನಾವೆಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದೇವೆ? ಕೆಳಗಿನ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಭಾರತದಲ್ಲಿ 17 ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. 120 ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ವಿಭಾಗಗಳಿವೆ. ಈಗಾಗಲೇ 70 ಸಾವಿರಕ್ಕೂ ಅಧಿಕ ಸಂಸ್ಕೃತ ಶಿಕ್ಷಕರಿದ್ದಾರೆ. ಇಷ್ಟಿದ್ದರೆ ಸಾಕಲ್ಲ, ಇನ್ನೇನು ಬೇಕು ಅನಿಸುತ್ತದೆ ಅಲ್ಲವೇ? ಇದು ಏನೇನೂ ಸಾಲದು. ನಿಮಗೆ ಗೊತ್ತಿರಲಿ, ಭಾರತವನ್ನು ಹೊರತುಪಡಿಸಿ 40 ದೇಶಗಳು ನಾಮುಂದು ತಾಮುಂದು ಎಂದು ಮುಗಿಬಿದ್ದು ಸಂಸ್ಕೃತವನ್ನು ಕಲಿಯುತ್ತಿವೆ! ವಿದೇಶಗಳ 254 ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತದ ಕಲಿಕೆ ಸಾಂಗವಾಗಿ ಸಾಗಿದೆ! ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈಗಾಗಲೇ 60 ಸಾವಿರ ತಾಳೆಗರಿಗಳ ಪ್ರತಿಗಳನ್ನು ತನ್ನೆದುರು ಹರವಿಕೊಂಡು ಕೂತಿದೆ. ನಮ್ಮ ಛಂದಸ್ಸಿನ ಲಘು ಗುರು (0,1) ಗಳನ್ನು ಕರಾರುವಾಕ್ಕಾಗಿ ಅಳವಡಿಸಿಕೊಂಡು ಸೂಪರ್ ಕಂಪ್ಯೂಟರ್ ತಯಾರಿಸುವುದು ಹೇಗೆ ಎಂದು ಅದು ಒಂದೊಂದೇ ತಾಳೆಗರಿಯನ್ನು ಕೆದಕಿ ನೋಡುತ್ತಿದೆ! ಲಂಡನ್ ಹಾಗೂ ಐರ್ಲ್ಯಾಂಡ್ ದೇಶಗಳ ಬಹಳಷ್ಟು ಶಾಲೆಗಳು ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿವೆ. ಹಾಗೆ ಮಾಡುವುದರಿಂದ ಮಿದುಳಿನ ಕಾರ್ಯನಿರ್ವಹಣಾ ಶಕ್ತಿ ಹಾಗೂ ನೆನಪಿನ ಶಕ್ತಿ ಹೆಚ್ಚುತ್ತದೆ ಎಂಬುದು ಅವಕ್ಕೆ ಅರ್ಥವಾಗಿರುವ ಸತ್ಯ. ಇತ್ತೀಚೆಗೆ ನಮ್ಮ ಪ್ರಧಾನಿ ಐರ್ಲ್ಯಾಂಡ್‍ಗೆ ಭೇಟಿ ಕೊಟ್ಟಾಗ ಶಾಲಾ ಮಕ್ಕಳು ಸಂಸ್ಕೃತ ಶ್ಲೋಕ ಪಠಣ ಮಾಡಿ ಅವರನ್ನು ಸ್ವಾಗತಿಸಿದ್ದು ನಿಮಗೆ ನೆನಪಿರಬಹುದು. ಅದೂ ಇರಲಿ, ಜನ್ಮತಃ ಮುಸ್ಲಿಮಳಾದ, ರಷ್ಯಾದ ಖ್ಯಾತ ಪಾಪ್ ಗಾಯಕಿ ಸಾತಿ ಕಜನೋವಾ ಸಲೀಸಾಗಿ ಸಂಸ್ಕೃತದ ಶ್ಲೋಕಗಳನ್ನು ಹಾಡಿದ್ದನ್ನು ನೋಡಿ ಮೋದಿಯವರೇ ಬೆರಗಾದರು! ಮೊದಲೆಲ್ಲ, ತತ್ವಶಾಸ್ತ್ರ, ಭಾಷಾಶಾಸ್ತ್ರ, ಬೌದ್ಧಧರ್ಮ ಅಥವಾ ಏಷ್ಯಾ ಖಂಡದ ಕುರಿತು ಅಧ್ಯಯನ ನಡೆಸುವವರಿಗೆ ಮಾತ್ರ ಸಂಸ್ಕೃತವನ್ನು ಆಳವಾಗಿ ಅಭ್ಯಸಿಸುವ ತುಡಿತವಿತ್ತು. ಈಗಂತೂ ಜನಸಾಮಾನ್ಯರಿಗೂ ಅದನ್ನು ಶತಾಯ ಗತಾಯ ಕಲಿಯಲೇಬೇಕೆಂಬ ಹಟ! ಅವರೆಲ್ಲ ಪೈಪೋಟಿಯ ಮೇಲೆ ಸಂಸ್ಕೃತದ ಮೇಲೆ ಪ್ರಭುತ್ವ ಸಾಧಿಸುತ್ತಿದ್ದಾರೆ. ಜರ್ಮನಿಯಲ್ಲಂತೂ ಆಸಕ್ತ ವಿದ್ಯಾರ್ಥಿಗಳ ಸಂಖ್ಯೆ ವಿಪರೀತ ಹೆಚ್ಚುತ್ತಿರುವುದರಿಂದ ಎಷ್ಟು ತರಗತಿಗಳನ್ನು ನಡೆಸಿದರೂ ಸಾಲದಾಗುತ್ತಿದೆ! ಇವೆಲ್ಲ ವಿದೇಶಗಳ ಕಥೆ. ಆದರೆ ನಾವೇನು ಮಾಡುತ್ತಿದ್ದೇವೆ ಹೇಳಿ? ನಮ್ಮ ಮಕ್ಕಳಿಗೆ ಇಂಟರ್‍ನ್ಯಾಷನಲ್ ಶಾಲೆಗಳಲ್ಲಿ ಅಮೆರಿಕನ್ ಇಂಗ್ಲೀಷ್ ಕಲಿಸುತ್ತಿದ್ದೇವೆ! ಖೇದವಾಗುವುದೇ ಅದಕ್ಕೆ. ಒಂದು ಉದಾಹರಣೆ ನೋಡಿ. ಚೀನಾ ಯೋಗ ಕಲಿಕೆಯನ್ನು ಶುರುಮಾಡಿದ್ದು ಬರೀ ಹನ್ನೊಂದು ವರ್ಷಗಳ ಹಿಂದೆ. ಇವತ್ತು ಅದನ್ನು ಯಾವ ಮಟ್ಟದಲ್ಲಿ ಅಳವಡಿಸಿಕೊಂಡಿದೆಯೆಂದರೆ, ನಮ್ಮ ದೇಶ ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಣೆ ಮಾಡದೆ ಹೋಗಿದ್ದ ಪಕ್ಷದಲ್ಲಿ ಚೀನಾ ಅದನ್ನೂ ತನ್ನ ದೇಶಕ್ಕೇ ಸೇರಿದ್ದು ಎಂದುಬಿಡುತ್ತಿತ್ತೋ ಏನೋ! ಮೊದಲೇ ಐರೋಪ್ಯ ದೇಶಗಳಿಗೆ ಸಂಸ್ಕೃತವೆಂದರೆ ಪ್ರೀತಿ. ತಮ್ಮ ಭಾಷೆಗಳು ಹುಟ್ಟಿಕೊಂಡಿದ್ದೇ ಅದರಿಂದ ಎಂಬ ಕಾರಣಕ್ಕೆ ಅದರ ಬಗ್ಗೆ ಅಪಾರ ಹೆಮ್ಮೆ, ಗೌರವ! ನಾಳೆ ಸಂಸ್ಕೃತದ ವಿಷಯದಲ್ಲಿ ಆ ದೇಶಗಳು ಸ್ವಾಮ್ಯ ಸ್ಥಾಪಿಸಿ, ನಾವು ಕಣ್ಣುಕಣ್ಣು ಬಿಡಬೇಕಾಗಿ ಬಂದರೆ ಆಶ್ಚರ್ಯವೇನಿಲ್ಲ! ಹಿತ್ತಲ ಗಿಡ ಮದ್ದಲ್ಲ ನಿಜ. ಆದರಿದು ಅಂತಿಂಥ ಗಿಡವಲ್ಲ, ಜ್ಞಾನ ಸಂಜೀವಿನಿ ಎಂಬುದು ತಿಳಿದುಬಂದ ಮೇಲಾದರೂ ನಮ್ಮ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕು ತಾನೆ? ಅದರಲ್ಲೂ ಸಂಸ್ಕೃತ ಭಾರತಿಯಂಥ ಲಾಭರಹಿತ, ಸರ್ಕಾರೇತರ ಸಂಸ್ಥೆ ಅಹರ್ನಿಶಿ ಶ್ರಮಿಸುತ್ತಿರುವಾಗ?

ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ 1981ರಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಸಂಸ್ಕೃತ ಭಾರತಿ. ಅದನ್ನು ಹುಟ್ಟುಹಾಕಿದವರು ಶ್ರೀ ಚ ಮೂ ಕೃಷ್ಣ ಶಾಸ್ತ್ರಿ, ಶ್ರೀ ಜನಾರ್ಧನ ಹೆಗಡೆ ಮತ್ತು ಯುವಮಿತ್ರರು. ಅಂದಿನಿಂದಲೂ ಅದು ಸಂಸ್ಕೃತವನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಟೊಂಕ ಕಟ್ಟಿ ನಿಂತಿದೆ. ಅದರ ಪ್ರತಿಫಲವೇ ಇಂದು ದೇಶಾದ್ಯಂತ ಸಂಸ್ಕೃತದ ಕುರಿತು ಒಲವು ಹೆಚ್ಚುತ್ತಿರುವುದು. 39 ದೇಶಗಳಲ್ಲಿ ಸಂಸ್ಕೃತದ ಗಂಧ ಪಸರಿಸುತ್ತಿರುವುದು! ಇಲ್ಲಿಯವರೆಗೂ ಅದು ಸುಮಾರು ಒಂದೂಕಾಲು ಲಕ್ಷ ಶಿಬಿರಗಳನ್ನು ನಡೆಸಿ 95 ಲಕ್ಷಕ್ಕೂಹೆಚ್ಚು ಜನರಿಗೆ ಸಂಸ್ಕೃತದಲ್ಲಿ ಸಂಭಾಷಿಸಲು ಕಲಿಸಿದೆ! ಕೆಲವು ವರ್ಷದ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿದ್ದು ಕಡಿಮೆ ಸಾಧನೆಯೇನಲ್ಲ! ಅಂದಹಾಗೆ ಶಿಬಿರಗಳು ನಡೆಯುವುದು ಜನಸಾಮಾನ್ಯರಿಗೆ ಮಾತ್ರವಲ್ಲ. ಸಂಸದರಿಗೂ ಶಿಬಿರವನ್ನು ಆಯೋಜಿಸಿದ್ದಾಗ ಎಲ್.ಕೆ. ಅಡ್ವಾಣಿಯವರು ಶಿಬಿರಾರ್ಥಿಯಾಗಿ ಬಂದಿದ್ದರು! ಭಾರತಕ್ಕೆ ಸೇರಿರುವುದು ಹೌದಾ ಎಂಬ ಅನುಮಾನ ಹುಟ್ಟಿಸುವ ಈಶಾನ್ಯ ರಾಜ್ಯಗಳಲ್ಲೂ ಸಂಸ್ಕೃತ ಭಾರತಿ ಸಕ್ರಿಯವಾಗಿದೆ ಎಂದರೆ ನೀವು ನಂಬಲೇಬೇಕು! ಕೇರಳದಲ್ಲಂತೂ ಈ ವರ್ಷದಿಂದ ಒಂದನೇ ತರಗತಿಯಿಂದಲೇ ಸಂಸ್ಕೃತದ ಪಠ್ಯ ಶುರುವಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಉತ್ತರಾಖಂಡ ರಾಜ್ಯ ತನ್ನ ಎರಡನೆಯ ಅಧಿಕೃತ ಭಾಷೆಯಾಗಿ ಸಂಸ್ಕೃತವನ್ನು ಸ್ವೀಕರಿಸಿದೆ. ಸಂಸ್ಕೃತ ಭಾರತಿಯಿಂದ ತರಬೇತಾದ ಸಾವಿರಾರು ಶಿಕ್ಷಕರಿದ್ದಾರೆ. ಸಂಸ್ಕೃತವನ್ನೇ ಸಂವಹನದ ಮಾಧ್ಯಮವನ್ನಾಗಿಸಿಕೊಂಡಿರುವ ಸಾವಿರಾರು ಕುಟುಂಬಗಳಿವೆ. ಹಳ್ಳಿ-ಹಳ್ಳಿಗಳೇ ಸಂಸ್ಕೃತಮಯವಾಗಿವೆ. ಉಳಿದವರಿಗೆ ಸಾಧ್ಯವಾಗಿರುವುದು ನಮಗೇಕಾಗುವುದಿಲ್ಲ? ಹಾಗಂತ ಕಲಿಕೆಯೇನೂ ಕಬ್ಬಿಣದ ಕಡಲೆಯಲ್ಲ. ಕಲಿಕೆಯ ಸಲುವಾಗಿ ಎಷ್ಟೊಂದು ಮಾರ್ಗಗಳನ್ನು ಕಲ್ಪಿಸಿದೆ ಗೊತ್ತೇ ಸಂಸ್ಕೃತ ಭಾರತಿ? ಒಂದರಿಂದ ಏಳನೆಯ ತರಗತಿಯವರೆಗೆ ಕಲಿಸುವ ಸಂಸ್ಕೃತದ ಪಠ್ಯಪುಸ್ತಕಗಳಿವೆ. ವಯಸ್ಕರಿಗೆ, ಆಸಕ್ತರಿಗೆ ಅಂಚೆಯ ಮೂಲಕ ಶಿಕ್ಷಣ ಲಭ್ಯವಿದೆ, ಅದೂ ನಾವು ಇಷ್ಟಪಡುವ ಮಾಧ್ಯಮದಲ್ಲೇ! ಅಷ್ಟೇ ಅಲ್ಲ, ಭಗವದ್ಗೀತೆಯನ್ನು ಸಂಸ್ಕೃತದ ಮೂಲಕ, ಸಂಸ್ಕೃತವನ್ನು ಭಗವದ್ಗೀತೆಯ ಮೂಲಕ ಕಲಿಯುವ ಅವಕಾಶವೂ ಇದೆ. ಹತ್ತೇ ದಿನಗಳಲ್ಲಿ ಸಂಭಾಷಣೆಯನ್ನು ಕಲಿಸುವ ಶಿಬಿರಗಳಂತೂ ಸದಾ ನಡೆಯುತ್ತಲೇ ಇರುತ್ತವೆ. ಇನ್ನೆಷ್ಟು ಪ್ರೋತ್ಸಾಹ, ಸೌಲಭ್ಯಗಳು ಬೇಕು ನಮಗೆ?

2015ರಲ್ಲಿ ಸಂಸ್ಕೃತ ಭಾರತಿ ನೂರಾರು ಜನಪದ ಸಮ್ಮೇಳನಗಳನ್ನು ದೇಶಾದ್ಯಂತ ಹಮ್ಮಿಕೊಂಡಿತ್ತು. ಕರ್ನಾಟಕದಕ್ಷಿಣದಲ್ಲಿಯೇ 25 ಜಿಲ್ಲಾಮಟ್ಟದ ಸಂಸ್ಕೃತ ಸಮ್ಮೇಳನಗಳನ್ನುನಡೆಸಿದೆ. ಅದರ ಮುಂದಿನ ಹಂತವಾಗಿ ಪ್ರಾಂತ ಸಮ್ಮೇಳನವನ್ನು ಬರುವ ಜನವರಿ 9,10ರಂದು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ, ದಕ್ಷಿಣಕರ್ನಾಟಕ ಮಟ್ಟದಲ್ಲಿ ಆಯೋಜಿಸಿದೆ. ಸಂಸ್ಕೃತದ ಪುನಶ್ಚೇತನ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಇದು ನಮಗೆ ಲಭಿಸುತ್ತಿರುವ ಸದಾವಕಾಶವೆಂದರೆ ಅತಿಶಯೋಕ್ತಿಯೇನಲ್ಲ! ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಏನಿಲ್ಲವೆಂದರೂ ಒಂದು ಸಾವಿರ ಜನರು ಹೊರಡಲುದ್ಯುಕ್ತರಾಗಿದ್ದಾರೆ. ಅವರಲ್ಲಿ ಹೆಚ್ಚಾಗಿ ತರುಣರು, ಅದರಲ್ಲೂ ಐಟಿ ಉದ್ಯೋಗಿಗಳು ಆಸಕ್ತರಾಗಿರುವುದು ವಿಶೇಷ! ಘನತೆವೆತ್ತ ರಾಜ್ಯಪಾಲರು, ಇಸ್ರೋದ ಅಧ್ಯಕ್ಷ ಶ್ರೀ ಕಿರಣ್‍ಕುಮಾರ್ ವಿಶೇಷ ಮುತುವರ್ಜಿಯಿಂದ ಭಾಗವಹಿಸುತ್ತಿದ್ದಾರೆ. ಈಗಾಗಲೇ ಸಂಸ್ಕೃತಕ್ಕೆ ಅನುವಾದಗೊಂಡಿರುವ, ಖ್ಯಾತ ಸಾಹಿತಿ ಶ್ರೀ ಎಸ್.ಎಲ್. ಭೈರಪ್ಪನವರ ಕಾದಂಬರಿ 'ದಾಟು' ಅಲ್ಲೇ ಬಿಡುಗಡೆಯಾಗಲಿದೆ. ಚಿಣ್ಣರಿಗೆ ಪಾಠಮಾಡಬಹುದಾದ ಪುಸ್ತಕಗಳ ಲೋಕಾರ್ಪಣೆಯಾಗಲಿದೆ. ಸಮ್ಮೇಳನದ ಕುರಿತ ಹೆಚ್ಚಿನ ವಿವರಗಳಿಗೆ ದಿಲೀಪಶರ್ಮಾ (9538330511)ರನ್ನು ಸಂಪರ್ಕಿಸಬಹುದಾಗಿದೆ. ಮತ್ತೊಂದು ಸ್ವಾರಸ್ಯಕರ ಅಂಶವೆಂದರೆ ಉತ್ತರ ಕರ್ನಾಟಕದ ಅಥಣಿಯಲ್ಲೂ ಅವೇ ದಿನಗಳಲ್ಲಿ ಬೃಹತ್ ಸಮಾವೇಶ ನಡೆಯಲಿದೆ.(ಸಂಪರ್ಕ: ಶ್ರೀ ವಿ.ಜಿ. ಹೆಗಡೆ: 9448252841)

ನಮಗಿನ್ನೂ ಸಂಸ್ಕೃತವನ್ನು ಜಾತಿ ಮತಗಳ ತಕ್ಕಡಿಯಲ್ಲಿಟ್ಟು ತೂಗುವುದರಲ್ಲೇ ಸುಖ! ಡಾ. ಅಂಬೇಡ್ಕರ್ ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಮಾಡಲು ನಡೆಸಿದ ಪ್ರಯತ್ನವನ್ನು ಏಕೆ ಮರೆತಿದ್ದೇವೆ? ಶ್ರೀ ನಸೀರುದ್ದೀನ್ ಅಹಮದ್, ಸರ್ ಮಿರ್ಜಾ ಇಸ್ಮಾಯಿಲ್, ಡಾ. ಶೈದುಲ್ಲ, ಫಕ್ರುದ್ದೀನ್ ಅಲಿ ಅಹಮದ್ ಇವರೆಲ್ಲ ಸಂಸ್ಕೃತದ ಪರವಾಗಿ ನಿಂತವರು, ಧರ್ಮ, ಜಾತಿಗಳೇನೇ ಆಗಿರಲಿ, ಪ್ರತಿ ಭಾರತೀಯನಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಭಾವೈಕ್ಯತೆಗಳನ್ನು ಹುಟ್ಟುಹಾಕಲು ಸಂಸ್ಕೃತ ಅಗತ್ಯ ಎಂದು ಪ್ರತಿಪಾದಿಸಿದವರು ಎಂಬುದಕ್ಕೆ ನಾವೇಕೆ ಪ್ರಾಮುಖ್ಯ ನೀಡುವುದಿಲ್ಲ?
ಇನ್ನಾದರೂ ನಾವು ಸಂಸ್ಕೃತವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಂಭಾಷಿಸುವುದನ್ನು ಕಲಿಯುವುದೇ ಅಂತಿಮ ಗುರಿಯಲ್ಲ. ಭಾಷಾಶುದ್ಧತೆ, ವ್ಯಾಕರಣ ಜ್ಞಾನವನ್ನು ಕಲಿತ ಮೇಲೆ ಮುಂದೇನು ಎಂದು ಚಿಂತಿಸಬೇಕಾಗಿಯೂ ಇಲ್ಲ. ಇನ್ನೂ ಯಾರ ಕೈಗೂ ಎಟುಕಿರದ ಶಾಸ್ತ್ರಗ್ರಂಥಗಳ ಹಾಗೂ ಲಕ್ಷಾಂತರ ಹಸ್ತಪ್ರತಿಗಳ ಅಧ್ಯಯನ ಹಾಗೂ ಸಂಶೋಧನೆ ಬಾಕಿಯಿದೆ! ಅವುಗಳ ಹುರುಳನ್ನು ಹೆಕ್ಕಿ ತೆಗೆದು ವಿವಿಧ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳುವ ಕಾರ್ಯವಾಗಬೇಕಿದೆ. ನಮ್ಮ ಸಂಪತ್ತನ್ನು ಅನ್ಯರಿಗೆ ದೋಚಲು ಬಿಡುವುದೇ ಮೊದಲಿನಿಂದಲೂ ನಾವು ಬೆಳೆಸಿಕೊಂಡು ಬಂದಿರುವ ಪರಿಪಾಠ! ಇನ್ನಾದರೂ ಅದಕ್ಕೆ ಕಡಿವಾಣ ಬೀಳಬೇಡವೇ?

ಸಂಸ್ಕೃತ ಬರೀ ಭಾಷೆಯಲ್ಲ, ನಮ್ಮ ನರನಾಡಿಗಳಲ್ಲಿ ಪ್ರವಹಿಸುವ ಸಮೃದ್ಧ ಸಂಸ್ಕೃತಿಯ ಪ್ರತೀಕ. ಇದರ ಹೊಸ ಚೈತನ್ಯದ ಕಹಳೆಗೆ ಪ್ರತಿ ಭಾರತೀಯನೂ ಓಗೊಡಬೇಕು. ಇದನ್ನು ಕಳೆದುಕೊಂಡರೆ ನಮ್ಮ ಪರಂಪರೆಯನ್ನೇ ಕಳೆದುಕೊಂಡಂತಾಗುತ್ತದೆ. ನೀವೇ ನೋಡಿ, ಸರಿಯಾದ ಉಚ್ಛಾರವೇ ಬರದಿದ್ದ ವಿದೇಶೀ ನಾಲಗೆಗಳು ಈಗ ಎಗ್ಗಿಲ್ಲದೆ ಗಾಯತ್ರಿ ಮಂತ್ರವನ್ನು ಜಪಿಸತೊಡಗಿವೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಹೇಗೆ? ಈಗ ನಮ್ಮ ಮನಸ್ಸುಗಳು ಸರಿಯಾದ ದಿಕ್ಕಿನಲ್ಲಿ ಹೊರಳಬೇಕಷ್ಟೇ. ನಾಲಗೆ ಹೊರಳಲೆಷ್ಟು ಹೊತ್ತು? ಅಲ್ಲವೇ?

No comments:

Post a Comment