Wednesday 9 April 2014

ಕಡಿ! ಕತ್ತರಿಸು! ತರಿ! ಇದಾವ ರಾಜಕಾರಣದ ಪರಿ?

ದೇಶವೀಗ ಚುನಾವಣೆಯ ಹೊಸ್ತಿಲಲ್ಲಿ ನಿಂತಿದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಆರತಿ ಎತ್ತಿ ಬರಮಾಡಿಕೊಳ್ಳಲು ಚುನಾವಣಾ ಆಯೋಗ ಸನ್ನದ್ಧವಾಗಿದೆ. ಟಿ.ವಿ.ಚಾನೆಲ್ಗಳು ಮತಗಳಿಕೆಯ ಗುಣಾಕಾರ ಭಾಗಾಕಾರದಲ್ಲಿ ಎಡಬಿಡದೆ ನಿರತವಾಗಿವೆ. ರಾಜಕೀಯ ವಿಶ್ಲೇಷಕರು ದಿನೇದಿನೇ ಸೋಲು-ಗೆಲುವುಗಳ ಹೊಸ ಅಂಕಿ-ಅಂಶಗಳನ್ನು, ಲೆಕ್ಕಾಚಾರಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎಲ್ಲ ಪಕ್ಷಗಳ ಕಾರ್ಯಕರ್ತರೂ ಹಗಲಿರುಳೆನ್ನದೆ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹೀಗೆ ಎಲ್ಲರೂ ತಂತಮ್ಮ ಪಾಲಿನ ಕೆಲಸಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದಾರೆ ಸರಿ, ಆದರೆ ನಮ್ಮ ಅಭ್ಯರ್ಥಿ ಮಹೋದಯರುಗಳೇನು ಮಾಡುತ್ತಿದ್ದಾರೆ?

ಜ್ವಲಂತ ಸಮಸ್ಯೆಗಳನ್ನು ಪರಿಗಣಿಸಿ ಅವುಗಳನ್ನು ತಮ್ಮ ಪ್ರಣಾಳಿಕೆಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರಾ? ಬೇರೆ ಪಕ್ಷಗಳಿಗಿಂತ ವಿಭಿನ್ನವಾಗಿ ಪ್ರಣಾಳಿಕೆಗಳನ್ನು ಸಿದ್ಧಪಡಿಸಿ ಜನರ ನಂಬಿಕೆ ಗಳಿಸುವ ಯತ್ನದಲ್ಲಿದ್ದಾರಾ? ಕಳೆದ ಬಾರಿ ಈಡೇರಿಸಲಾಗದ ಆಶ್ವಾಸನೆಗಳನ್ನು ಬಾರಿಯಾದರೂ ಈಡೇರಿಸುವ ಬಗೆ ಹೇಗೆಂದು ಯೋಚಿಸುತ್ತಿದ್ದಾರಾ? ಅಥವಾ, ಹಿಂದೆ ಗೆದ್ದು ಬಂದರೂ ಯಾವ ರಾಜಕಾರ್ಯವನ್ನೂ ಮಾಡಲಿಲ್ಲವಲ್ಲ, ಈಗ ಜನರಿಗೆ ಹೇಗೆ ಮುಖ ತೋರಿಸುವುದೆಂದು ಹಲುಬುತ್ತಿದ್ದಾರಾ? ಯಾವುದೂ ಅಲ್ಲ. ಸಾಧ್ಯವಾದಷ್ಟೂ ಸಭ್ಯತೆಯ ಎಲ್ಲೆ ಮೀರಿ ಒಬ್ಬರನ್ನೊಬ್ಬರು ವಾಚಾಮಗೋಚರ ನಿಂದಿಸುತ್ತಿದ್ದಾರೆ! ತಮ್ಮ ವಿರೋಧಿ ವಿಷ ತೆಗೆದುಕೊಂಡು ಸಾಯಲಿ ಎಂಬ ಬಯಕೆ ಒಬ್ಬರದಾದರೆ, ಯಾರದೋ ಮುಖಕ್ಕೆ ಉಗಿಯುವ ಹಂಬಲ ಮತ್ತೊಬ್ಬರದು. ಕೆಲವರಿಗೆ ನಪುಂಸಕ, ನರಹಂತಕನೆಂಬ ಹಣೆಪಟ್ಟಿಯಾದರೆ ಮತ್ತೆ ಕೆಲವರಿಗೆ ಗೂಂಡಾ, ಲಫಂಗ ಎಂಬ ಬಿರುದು. ಒಟ್ಟಿನಲ್ಲಿ ಅವ್ಯಾಹತವಾಗಿ ಹರಿದು ಬರುತ್ತಿರುವ ಬೈಗುಳದ ಸುರಿಮಳೆ. ನಮ್ಮನ್ನು ಪ್ರತಿನಿಧಿಸುವವರ ನಿಘಂಟಿನಲ್ಲಿರುವ '()ಸಂಸ್ಕೃತ' ಬೈಗುಳಗಳ ಪದಪುಂಜವನ್ನು ನೋಡಿ ನಾವು ದಂಗಾಗಿಹೋಗಿದ್ದೇವೆ. ಛೀ! ನಾಚಿಕೆಯಾಗಬೇಕು. ಯಾರಿಗೆ? ಇಷ್ಟು ಮುಕ್ತವಾಗಿ, ಸಾರ್ವಜನಿಕವಾಗಿ ವ್ಯಕ್ತಿನಿಂದನೆಗೆ ಇಳಿದಿರುವ ಇವರಿಗೋ ಅಥವಾ ಇವರ ಎಲುಬಿಲ್ಲದ ನಾಲಗೆಗೆ ಮಟ್ಟಕ್ಕೆ ಹೊರಳುವ ಆಸ್ಪದ ಕೊಟ್ಟ ನಮಗೋ?

ಇಂಥ ಕೊಳಕು ಭಾಷೆ ಕೇಳಿ ನಮಗೆ ರೂಢಿಯಿಲ್ಲ. ಹೀಗೆ ಕೀಳು ಮಟ್ಟಕ್ಕಿಳಿದು ದೂಷಿಸುವ ಸಂಸ್ಕೃತಿ ನಮ್ಮದಲ್ಲವೂ ಅಲ್ಲ. ವೈಚಾರಿಕ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮೊದಲೂ ಇದ್ದವು. ಚುನಾವಣೆಯ ಸಮಯದಲ್ಲಿ, ಸಂಸತ್ತಿನ ಅಧಿವೇಶನಗಳಲ್ಲಿ ಅವು ಚರ್ಚೆಗೂ ಬರುತ್ತಿದ್ದವು. ವಾದವಿವಾದಗಳ ಪರಾಕಾಷ್ಠೆಗೆ ಇಡೀ ದೇಶ ಸಾಕ್ಷಿಯಾಗುತ್ತಿತ್ತು. ವಿಷಯಕ್ಕೆ ಸಂಬಂಧಿಸಿದ ಆರೋಗ್ಯಕರ ಚರ್ಚೆಯಿಂದ ಸಭೆ ಕಳೆಗಟ್ಟುತ್ತಿತ್ತು. ಪರ ವಿರೋಧಗಳವರು ಮಂಡಿಸುತ್ತಿದ್ದ ವಿಷಯಗಳಲ್ಲಿ ಸತ್ವ, ಗಟ್ಟಿತನ, ಪ್ರಶ್ನೆ, ಟೀಕೆ, ಸವಾಲುಗಳಿರುತ್ತಿದ್ದವೇ ಹೊರತು, ಹೀಯಾಳಿಕೆ, ಅಸಂಬದ್ಧತೆ ಅಥವಾ ಅಸಂತುಲಿತ ಮಾತುಗಾರಿಕೆ ನಮ್ಮ ರಾಜಕಾರಣದ ಪರಿಪಾಠವಾಗಿರಲೇ ಇಲ್ಲ. ವಾತಾವರಣ ಎಷ್ಟೇ ಕಾವೇರಿದರೂ ನಾಲಗೆಯನ್ನು ಬುದ್ಧಿ ತನ್ನ ಹಿಡಿತದಲ್ಲಿಟ್ಟುಕೊಂಡಿರುತ್ತಿತ್ತು. ಎದುರಿಗೆ ಇರುತ್ತಿದ್ದ ವ್ಯಕ್ತಿಗೆ ಸಂದಾಯವಾಗಬೇಕಾದ ಗೌರವಕ್ಕೆ ಚ್ಯುತಿ ಬರುತ್ತಿರಲಿಲ್ಲಉದಾಹರಣೆಗೆ, ಭರ್ತಿ ನಲವತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದರೂ, ಅತ್ಯುತ್ತಮ ಚರ್ಚಾಪಟು, ವಾಗ್ಮಿಯಾಗಿದ್ದರೂ, ಎಂಥ ವ್ಯತಿರಿಕ್ತ ಸಂದರ್ಭದಲ್ಲೂ ಒಬ್ಬರ ವಿರುದ್ಧವೂ ಒಂದೇ ಒಂದು ಎಲ್ಲೆ ಮೀರಿದ ನಿಂದನೆಯ ನುಡಿಯನ್ನಾಡದ ಅಟಲ್ ಬಿಹಾರಿ ವಾಜಪೇಯಿಯವರಂಥ ಸ್ವಚ್ಛ ನಾಲಗೆಯ ಅಜಾತಶತ್ರುಗಳಿದ್ದರು. 1996 ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊಮ್ಮಿದ್ದರೂ ವಿರೋಧ ಪಕ್ಷಗಳು ತಮ್ಮ ಪಕ್ಷವನ್ನು ಅಧಿಕಾರದಿಂದ ಹೊರಗಿಡುವ ಒಂದೇ ದುರುದ್ದೇಶದಿಂದ ಕೈಜೋಡಿಸಿ, ಬಹುಮತ ಸಿಗದೆ, ಹದಿಮೂರು ದಿನಗಳ ತಮ್ಮ ಸರ್ಕಾರಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಾಗಲೂ ಬಹಳ ನೊಂದು ಮಾರ್ಮಿಕವಾಗಿ 'ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲಎಂದರೇ ಹೊರತು ಯಾರನ್ನೂ ನಪುಂಸಕ, ದ್ರೋಹಿ ಎನ್ನಲಿಲ್ಲ.

ಅಂತಹ ಸತ್ವಪರೀಕ್ಷೆಯ ಕಾಲದಲ್ಲೂ ಸಂಯಮವನ್ನೇ ಮೆರೆದ, ಮುಂದೆ ದೇಶದ ಪ್ರಧಾನಿಯಾದ ಅವರನ್ನು 1999ರಲ್ಲಿ 'ದೇಶದ್ರೋಹಿ' ಹಾಗೂ 'ಸುಳ್ಳುಗಾರ' ಎಂದು ಸಾರ್ವಜನಿಕವಾಗಿ ಜರೆದು, ನಿಂದನೆಯ ಹೊಸ ಭಾಷ್ಯ ಬರೆದವರು ಸೋನಿಯಾ ಗಾಂಧಿ. ಓರ್ವ ವ್ಯಕ್ತಿಯನ್ನು, ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದ ಮಾತ್ರಕ್ಕೆ, ಆತ ಪ್ರಧಾನಿಯಾದರೂ ಸರಿಯೆ, ಹೀಗೂ ಬಾಲಿಶವಾಗಿ ನಿಂದಿಸಬಹುದೆಂದು ತೋರಿಸಿಕೊಟ್ಟ, ವ್ಯಕ್ತಿದೂಷಣೆಯನ್ನು ಮಟ್ಟಕ್ಕೂ ಇಳಿಸಬಹುದೆಂದು ನಿರೂಪಿಸಿ ಇತರರಿಗೆ ಮುನ್ನುಡಿ ಹಾಕಿಕೊಟ್ಟ ಶ್ರೇಯವೂ ಅವರದೇ. ತಮ್ಮ ಹಿಂದಿ ಟೀಚರ್ಕೈಲಿ ಪದಗಳನ್ನು ಹೇಳಿಸಿಕೊಳ್ಳುವಾಗ ಇದು ಯಾರ ಮೇಲಿನ ಪ್ರಯೋಗಕ್ಕೆ ಎಂದು ಇವರು ಹೇಳಲಿಲ್ಲವೇನೋ. ಹೇಳಿದ್ದರೆ ಪಾಪ ಅವರು ಪದಗಳ ಬದಲು ವಾಜಪೇಯಿಯವರ ವ್ಯಕ್ತಿತ್ವಕ್ಕೆ ಹೋಲಿಸಬಹುದಾದ ಬೈಗುಳಗಳನ್ನಾದರೂ ಕಲಿಸುತ್ತಿದ್ದರೇನೋ! ಇಷ್ಟಕ್ಕೇ ನಿಲ್ಲಿಸದೆ, 2003ರಲ್ಲಿ ಸಂಸತ್ತಿನ ತಮ್ಮ ಭಾಷಣದಲ್ಲಿ ವಾಜಪೇಯಿ ಸರ್ಕಾರವನ್ನು ನಪುಂಸಕ, ಜಡ, ಬೇಜವಾಬ್ದಾರಿ ಹಾಗೂ ಭ್ರಷ್ಟಾಚಾರಿ ಎಂದರು. ಕೆರಳಿದ ವಾಜಪೇಯಿಯವರು ಪ್ರತಿಯಾಗಿ, ವಿರೋಧ ಪಕ್ಷವೊಂದು ಆಡುವ ಮಾತು, ಬೆಂಬಲಿಸುವ ಅಥವಾ ಖಂಡಿಸುವ ವೈಖರಿ ಇದಲ್ಲವೆಂದು ಸೋನಿಯಾರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಏಕೆಂದರೆ ಹಿಂದೆ ಪಿ.ವಿ.ನರಸಿಂಹರಾವ್ರವರು ಪ್ರಧಾನಿಯಾಗಿದ್ದಾಗ, ಜಿನೀವಾದಲ್ಲಿ ನಡೆದ ಸಂಯುಕ್ತ ರಾಷ್ಟ್ರಗಳ ಸಭೆಗೆ ಸಲಹಾಕಾರರಾಗಿ ವಿರೋಧ ಪಕ್ಷದವರಾಗಿದ್ದ ವಾಜಪೇಯಿಯವರನ್ನೂ ಜೊತೆಗೆ ಕರೆದೊಯ್ದಿದ್ದರು. ದೇಶದ ಹಿತ ಕಾಯಲೋಸುಗ ಆಳುವ ಮತ್ತು ವಿರೋಧಪಕ್ಷದ ನೇತಾರರು ಪಕ್ಷಭೇದ ಮರೆತು ಒಟ್ಟಿಗೆ ಹೆಗಲ ಮೇಲೆ ಕೈಹಾಕಿ ಬಂದದ್ದು ನೋಡಿ ಪಾಕಿಸ್ತಾನ ದಂಗಾಗಿ ಹೋಗಿತ್ತು. ಅಷ್ಟರಮಟ್ಟಿಗಿನ ಸೌಹಾರ್ದದೊಂದಿಗೆ ವ್ಯವಹರಿಸಿ ಅಭ್ಯಾಸವಿದ್ದ ವಾಜಪೇಯಿಯವರಿಗೆ, ನಮ್ಮ ನೀರು-ಬೇರುಗಳ ಪರಿಚಯವಿಲ್ಲದ ಸೋನಿಯಾರ ಧಾಟಿ ಸಮ್ಮತವಿರಲಿಲ್ಲ. ಹಾಗೆಂದು,  ನಿಂದಿಸುವ ರುಚಿ ಹತ್ತಿದ ಸೋನಿಯಾ ಸುಮ್ಮನಾಗಲೂ ಇಲ್ಲ.

2007 ಡಿಸೆಂಬರ್ 1ರಂದು ಗುಜರಾತಿಗೆ ಭೇಟಿಕೊಟ್ಟಾಗ ಮೋದಿಯವರನ್ನು ಸಾರಾಸಗಟಾಗಿ 'ಸಾವಿನ ವ್ಯಾಪಾರಿ' ಎಂದರು. ಇಷ್ಟು ಹೊತ್ತಿಗೆ ಟೀಚರ್ಗಿಂತ ಹೆಚ್ಚಿನ ಹಿಂದಿ ಕಲಿತಿದ್ದ ಇವರಿಗೆ ತಾವು ಆಡುತ್ತಿದ್ದ ಪ್ರತಿ ಮಾತಿನ ಅರ್ಥದ ಸಂಪೂರ್ಣ ಅರಿವಂತೂ ಇದ್ದೇಇತ್ತು! ಇವರೇ ಮೇಲ್ಪಂಕ್ತಿ ಹಾಕಿಕೊಟ್ಟ ಮೇಲೆ ಉಳಿದವರು ಸುಮ್ಮನಿರಲಾದೀತೇ? ತಮ್ಮ ನಿಘಂಟುಗಳಲ್ಲಿದ್ದ ತಕ್ಕಮಟ್ಟಿಗಿನ '()ಸಂಸ್ಕೃತ' ಪದಗಳನ್ನು ಹೆಕ್ಕಿ, ಬೇಕಾದವರ ಮೇಲೆ ಓತಪ್ರೋತವಾಗಿ ಹರಿಬಿಟ್ಟು ತಮ್ಮ ಸಾಮರ್ಥ್ಯ ಮೆರೆದರು. ಮಾತಿಗೆ ಪ್ರತಿಮಾತುಗಳಾದವು. ಸಭೆ ಸಮಾರಂಭಗಳಲ್ಲಿ, ಭಾಷಣಗಳಲ್ಲಿ, ಓರ್ವ ವ್ಯಕ್ತಿಯನ್ನು ಕೇಂದ್ರೀಕರಿಸಿಕೊಂಡು ವಾಗ್ದಾಳಿ ನಡೆಸುವುದೇ ರಾಜಕಾರಣದ ನಿಜವಾದ ಚರ್ಚೆಯ ರೀತಿಯೆಂಬಂತಾಯಿತು. ಬರಬರುತ್ತಾ ಮೋದಿಯವರನ್ನು ಗುರಿಯಾಗಿಸಿಕೊಂಡು ಜರೆಯುವುದು ಸರ್ವೇಸಾಮಾನ್ಯವಾಯಿತು. ನಪುಂಸಕ, ತಲೆಕೆಟ್ಟವ, ಆರ್.ಎಸ್.ಎಸ್.ಗೂಂಡಾ ಎಂಬೆಲ್ಲ ಬಿರುದು ಬಾವಲಿಗಳು ಮೋದಿಯವರ ಪಾಲಿಗೆ ಬಂದವು. ಇವೆಲ್ಲಕ್ಕೂ ಹೊನ್ನ ಕಳಶವಿಟ್ಟಂತೆ ಇತ್ತೀಚೆಗೆ ಸಹರಾನಪುರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಮೋದಿಯವರನ್ನು ಕತ್ತರಿಸಿ ತುಂಡುತುಂಡು ಮಾಡುತ್ತೇನೆ ಎಂದು ರೋಷಾವೇಶದಿಂದ ಗುಡುಗಿದರು. ಅಲ್ಲ, ಕತ್ತರಿಸಿ ತುಂಡು ತುಂಡು ಮಾಡಲು ಮೋದಿಯವರೇನು ಇವರ ಕೋಳಿಫಾರಂನ ನಾಟಿ ಕೋಳಿಯೇ?

ಹೊಲಸು ಮಾತಿನ ಬೆಳೆ ಬಿತ್ತಿ ಅದು ಹೆಮ್ಮರವಾಗುವುದೆಂದು ಖಾತ್ರಿ ಪಡಿಸಿಕೊಂಡ ಸೋನಿಯಾ ಮೇಡಂ ಮಾತ್ರ ಅಖಾಡದಿಂದ ಕಾಲ್ಕಿತ್ತು ಮಗನ ಭಾಷಣ ವೈಖರಿಯ ಕಡೆ ಗಮನ ನೆಟ್ಟರು. ಇದೇ ಜನವರಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಾವೇಶದಲ್ಲಿ ಹಾಗೂ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಮಯದಲ್ಲಿ, ಪಕ್ಕದಲ್ಲೇ ಕುಳಿತು ಮಗನ ಆವೇಶಭರಿತ ಮಾತುಗಳನ್ನು ಕೇಳಿ ತಾಯಿ ಹೃದಯ ಉಬ್ಬಿದ್ದೇ ಉಬ್ಬಿದ್ದು! ನೈಜವೋ, ನಾಟಕೀಯವೋ, ಒಟ್ಟಿನಲ್ಲಿ ಮಗ ಇಷ್ಟು ವರ್ಷಗಳ ಮೇಲಾದರೂ ನಿರರ್ಗಳವಾಗಿ ಮಾತಾಡುವುದನ್ನು ಕಲಿತನಲ್ಲಾ ಎಂಬ ಹೆಮ್ಮೆ ತುಟಿಯಂಚಿಗೆ ನಗುವಿನ ರೂಪದಲ್ಲಿ ಬಂದಿದ್ದೇ ಬಂದಿದ್ದು! ಏನು ಸಂತೋಷ! ಏನು ಸಾರ್ಥಕ್ಯ! ಅರ್ಥವಾಗುತ್ತದೆ ಬಿಡಿ. ನಮ್ಮ ಮಕ್ಕಳು ನರ್ಸರಿ ಪದ್ಯಗಳನ್ನು ಮೊದಲ ಬಾರಿ ಕಂಠಪಾಠ ಮಾಡಿ ಒಪ್ಪಿಸಿದಾಗ ನಮಗೂ ಹೀಗೇ ಆಗಿತ್ತು! ನಿಮ್ಮ ಮಗನಿಗೇನೋ ಮಾತು ಬಂತು ಮೇಡಂ, ಈಗ ನಮ್ಮವರ ಮಾತು ಅಂಕೆ ತಪ್ಪಿಬಿಟ್ಟಿದೆಯಲ್ಲ, ಹೇಗೆ ನೇರ ಮಾಡುತ್ತೀರಿ? ನಿಮ್ಮ ಮಗ ಮಾತನಾಡುವಾಗ ತಿರುತಿರುಗಿ ನೋಡಿ ನಗುತ್ತೀರಲ್ಲ, ಉಳಿದವರ ಅವಾಚ್ಯ ನಿಂದನೆಗಳನ್ನು ಕೇಳಿದಾಗಲೂ ಹೀಗೇ ನಗು ಬರುತ್ತದಾ?

ಸಂಸತ್ತಿನ ಹೊರಗೆ ಇಷ್ಟೆಲ್ಲ ಚಟುವಟಿಕೆಯಿಂದಿರುವ ಸೋನಿಯಾ ಮತ್ತು ಅವರ ಸುಪುತ್ರನ ಹಾಜರಿ ಸಂಸತ್ತಿನಲ್ಲೇಕೆ ಕಡಿಮೆ? ಪ್ರಸಕ್ತ 15ನೇ ಲೋಕಸಭೆಯ, 14ನೇ ಮುಂಗಾರು ಅಧಿವೇಶನ ಕಳೆದ ಸೆಪ್ಟಂಬರ್ನಲ್ಲಿ ಮುಗಿಯುವವರೆಗಿನ ಸೋನಿಯಾ ಹಾಜರಿ ಶೇಕಡ 47 ಮಾತ್ರ. ಭಾಗವಹಿಸಿದ ಚರ್ಚೆಗಳ ಸಂಖ್ಯೆ 2. ರಾಹುಲ್ ಹಾಜರಿ ಶೇಕಡ 43 ಮಾತ್ರ. ಅವರು ಭಾಗವಹಿಸಿದ ಚರ್ಚೆಗಳ ಸಂಖ್ಯೆ 1. ಹೋಗಲಿ ಹಾಜರಿರುವವರಾದರೂ ಸದನದ ಕಲಾಪ ಸರಾಗವಾಗಿ ನಡೆಯಲು ಬಿಡುತ್ತಾರಾ? ಇಲ್ಲ. ಶೇಕಡ 43ರಷ್ಟು ಸಮಯ ಬರೀ ಗದ್ದಲ, ಕಲಾಪ ಮುಂದೂಡಿಕೆಗಳಲ್ಲೇ ವ್ಯರ್ಥವಾಗಿದೆ! ಎಲ್ಲಿ ಸಮಸ್ಯೆಗಳ ಚರ್ಚೆಯಾಗುತ್ತದೋ ಅಲ್ಲಿ ಇವರ ಅಗತ್ಯ ಹೆಚ್ಚಲ್ಲವೇ? ಆದರೆ ಇವರು ಹೀಗೆ ಎಲ್ಲರಿಗೂ ಮಾತು ಕಲಿಸುವುದರಲ್ಲಿ ಮಗ್ನರಾದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಯಾರು ಸೂಚಿಸಬೇಕು?

ಹೋಗಲಿ, ಇವರಿಂದ ಪ್ರೇರಿತರಾದವರ ಆವೇಶ ಬರೀ ಮಾತಿಗೆ ಸೀಮಿತವಾಗುತ್ತದೆಯೇ? ಅದೂ ಇಲ್ಲ. ಮೊನ್ನೆ ಸೀಮಾಂಧ್ರದ ಸಂಸದ ರಾಜ್ಗೋಪಾಲ್ ತುಂಬಿದ ಸದನದಲ್ಲಿ ಪೆಪ್ಪರ್ ಸ್ಪ್ರೇ ಹೊಡೆದು, ಮೂವರು ಸಂಸದರು ಆಸ್ಪತ್ರೆ ಸೇರಿ, ಉಳಿದವರು ಮೂಗಿಗೆ ಕರ್ಚೀಫು ಹಿಡಿದು ಕಣ್ಣಲ್ಲಿ ನೀರು ಸುರಿಸಿಕೊಂಡು ಹೊರಗೋಡಿಬಂದರು! ಯಾವ ಕ್ಷಣ ಯಾರ ಮೈಮೇಲೆ ಯಾವ ದೇವರು ಬರುತ್ತದೋ, ಯಾರು ಬಂದು ಮೈಕ್ ಕಿತ್ತುಕೊಳ್ಳುತ್ತಾರೋ, ಯಾರು ಗಾಜು ಒಡೆಯುತ್ತಾರೋ ಎಂಬ ಭಯದಲ್ಲಿ ನಮ್ಮ ಸಭಾಧ್ಯಕ್ಷರುಗಳು ಜೀವ ಕೈಲಿ ಹಿಡಿದು ಕುಳಿತಿರುತ್ತಾರೆ. ದಾಖಲೆಗಳನ್ನು ಹರಿದೆಸೆದು, ಒಬ್ಬರನ್ನೊಬ್ಬರು ಹಿಡಿದು ಜಗ್ಗಿ ಹೊರಳಾಡಿದರೂ ಸಭಾಧ್ಯಕ್ಷರು ದನಿಯೇರಿಸುವಂತಿಲ್ಲ. ಕುರ್ಚಿಯನ್ನೋ, ಮೇಜನ್ನೋ ತಂದು ಅವರ ತಲೆಗೇ ಮೊಟಕಿದರೆ, ಪೆಪ್ಪರ್ ಸ್ಪ್ರೇ ತಂದು ಅವರ ಮುಖಕ್ಕೇ ಹೊಡೆದುಬಿಟ್ಟರೆ ಎಂಬ ಅವರ ಅಂಜಿಕೆಯೂ ಸಹಜವೇ.

ಮಾತಿನಿಂದ ಶುರುವಾದ ಆವೇಶ ಕೃತಿಗಿಳಿದು, ಮನುಷ್ಯತ್ವವನ್ನೇ ಕೊಂದು ಎಲ್ಲರಲ್ಲೂ ರಾಕ್ಷಸೀ ಪ್ರವೃತ್ತಿ ರಾರಾಜಿಸುವಂತೆ ಮಾಡುತ್ತಿದೆಯಲ್ಲ, ಇಮ್ರಾನ್ ಮಸೂದ್ನಂಥವರು ನಾಳೆ ಸದನದಲ್ಲಿ ತಮಗೆ ಬೇಡದವರನ್ನು ಅಕ್ಷರಶಃ ತುಂಡು ತುಂಡು ಮಾಡಲು ಹೊರಡುವುದಿಲ್ಲ ಎಂಬುದಕ್ಕೆ ಖಾತ್ರಿಯೇನು? ಧರ್ಮ, ಜಾತಿಗಳೆಂಬ ದಾಳ ಉರುಳಿಸಿದೊಡನೆ ಇವರು ನಡೆಸಿದಂತೆ ನಡೆವ ಪಗಡೆಕಾಯಿಗಳಾಗುವ ನಾವೇಕೆ ಇವರ ಮಾತುಗಳನ್ನು ಪ್ರಶ್ನಿಸುತ್ತಿಲ್ಲ? ಒಪ್ಪಿಗೆಯಾಗದಿದ್ದಲ್ಲಿ ಪ್ರತಿಭಟಿಸುತ್ತಿಲ್ಲ? ಒಟ್ಟಿನಲ್ಲಿ ಪ್ರತಿಕ್ರಿಯಿಸುತ್ತಲೇ ಇಲ್ಲ? ಯಾರಾದರೂ ಸರಿ, ಒಟ್ಟಿನಲ್ಲಿ ನಮ್ಮನ್ನಾಳಿದರೆ ಸಾಕೇ? ಮನಸ್ಥಿತಿಯಿಂದಾಗಿಯೇ ಅಲ್ಲವೇ ಅರವತ್ತು ವರ್ಷ ನಮ್ಮನ್ನಾಳಿದವರು ನಮ್ಮ ಮಾನ, ಪ್ರಾಣ, ಪ್ರತಿಷ್ಠೆಗಳನ್ನು ಮುಲಾಜಿಲ್ಲದೆ ಅಡವಿಟ್ಟಿದ್ದರೂ ನಾವು ಸುಮ್ಮನಿರುವುದು? ಇನ್ನಾದರೂ ನಾವು ಬದಲಾಗಬೇಡವೇ? ಗಂಭೀರವಾಗಿ ಯೋಚಿಸಬೇಕಿದೆ ಮತ್ತು ಈಗಲೇ ಕಾರ್ಯೋನ್ಮುಖರಾಗಬೇಕಿದೆ!

6 comments:

  1. ಸಹನಾ..ಬರಹ ಅರ್ಥಪೂರ್ಣ ಹಾಗೂ ಚಿ೦ತನ-ಪ್ರಚೋದಕ. ನಿಜವಾಗಿ ನೆನಪಾಗುತ್ತದೆ ಹಿ೦ದಿನ ಸ೦ಸತ್ ಕಲಾಪಗಳ ಸ್ವಾರಸ್ಯ. ಇಲ್ಲಿ ಬರೆದ೦ತೆ ವ್ಯಕ್ತಿನಿ೦ದಕ ಭಾಷೆ ಆಗೆಲ್ಲಾ ಇರಲೇ ಇಲ್ಲ. ಆರೋಗ್ಯಕರ ಚರ್ಚೆಗಳು ಲಘು ಹಾಸ್ಯಲೇಪಿತ ಉತ್ತರ-ಪ್ರತ್ಯುತ್ತರಗಳು ಅ೦ದಿನ ವಿಧಾನಸಭೆಗಳಲ್ಲಿ ಕೂಡ ಕ೦ಡು ಬರುತ್ತಿತ್ತು. ದೈಹಿಕವಾಗಿ ಮಾನಸಿಕವಾಗಿ ಹಿ೦ಸೆ ಮಾಡುವುದು ಹೆಗ್ಗಳಿಕೆ ಆಗಿರುವುದು ದುರ೦ತ.ನಾವೆಲ್ಲಾ ಸ್ವಲ್ಪ ಚಿ೦ತಿಸಿ ಗಾದಿ ಏರಿಸುವ ಈ ಬಾರಿಯ ಸ೦ಸದರು ಸ೦ಸತ್ತಿನಲ್ಲಿ ಮೌಲ್ಯಾಧಾರಿತ ಪ್ರಗತಿಶೀಲ ನಡವಳಿಕೆಗೆ ತೊಡಗಿಸಿಕೊಳ್ಳಲೆ೦ದು ಆಶಿಸೋಣ.

    ReplyDelete
  2. ಪ್ರಚಲಿತ ವಿಷಯವನ್ನೊಳಗೊಂಡ ಸಂದರ್ಭಯೋಚಿತ ಲೇಖನವನ್ನು ಪ್ರಸ್ತುತ ರಾಜಕಾರಣ ಮತ್ತು ರಾಜಕೀಯ ಜನಪ್ರತಿನಿಧಿಗಳ ಚಿತ್ರಣವನ್ನು ತೆರೆದಿಟ್ಟ ಲೇಖನ ಮಾಲೆ ಉತ್ತಮ ಮಾಹಿತಿಯನ್ನು ಒದಗಿಸಿ ಕೊಡುತ್ತದೆ. ಲೇಖನವನ್ನು ಬರೆದ ನಿಮಗೆ ಅಭಿನಂದನೆಗಳು.
    ವೀರಣ್ಣ ಮಂಠಾಳಕರ್, ಬಸವಕಲ್ಯಾಣ

    ReplyDelete
  3. Dhanyavaadhagalu
    Raajakeeyadha bagge thilisikottiruvudakke

    ReplyDelete
  4. A well-mannered article supported with ideal words and perfect examples!! \nn/

    #legends PVN and ABV..

    ReplyDelete
  5. Good...worth reading sister.......

    ReplyDelete
  6. ಮೊದಲು ಈ ಮೂರ್ಖ ಜನಗಳಿಗೆ ತಮ್ಮ ಓಟಿನ ಬೆಲೆ ಏನು ಎಂಬುದನ್ನು ಪರಿಣಾಮಕಾರಿಯಾಗಿ ತಿಳಿವಳಿಕೆ ಮೂಡಿಸಬೇಕು.

    ReplyDelete