Wednesday, 9 April 2014

ಆಮ್ ಆದ್ಮಿಯ ಪ್ರಶ್ನೆಗೆ ಉತ್ತರಿಸುವಿರಾ ಕೇಜ್ರಿವಾಲ್?

ನೀವೊಬ್ಬರು ಕಡಿಮೆಯಿದ್ದಿರಿ ಮಿ.ಕೇಜ್ರಿವಾಲ್. ಒಂದಿಡೀ ದಶಕದ ಕಾಂಗ್ರೆಸ್‍ನ ಭ್ರಷ್ಟ ಆಡಳಿತ, ಕಂಡುಕೇಳಿರದಷ್ಟು ಲಕ್ಷ ಕೋಟಿ ಮೊತ್ತಗಳ ಸಾಲು ಸಾಲು ಹಗರಣ, ದಿನದಿನಕ್ಕೆ ಹೆಚ್ಚುತ್ತಿರುವ ನಮ್ಮ ಆರ್ಥಿಕ ದಿವಾಳಿತನ, ಜಾತಿಯ ಹೆಸರಲ್ಲಿ ಒಡೆದು ಆಳಿ, ವೋಟ್ ಬ್ಯಾಂಕ್‍ನ ಹುನ್ನಾರದಲ್ಲಿ ಇಡೀ ದೇಶವನ್ನು ತುಂಡು ತುಂಡಾಗಿ ಕತ್ತರಿಸಿ ಹಂಚಹೊರಟಿರುವ “ಜಾತ್ಯಾತೀತ” ನಾಯಕರೆನಿಸಿಕೊಂಡವರ ಲಜ್ಜೆಗೇಡಿತನ, ಇಲ್ಲಿಯ ಉಪ್ಪನ್ನೇ ಉಂಡು ನಮ್ಮವರದೇ ರಕ್ತದೋಕುಳಿಯಾಡುತ್ತಿರುವವರ ದೇಶದ್ರೋಹಿತನ – ಇವುಗಳನ್ನೆಲ್ಲ ನೋಡಿ ನೋಡಿ ಬೇಸತ್ತಿರುವ, ಈ ದೇಶದ ಭವಿಷ್ಯಕ್ಕೇನು ಗಂಡಾಂತರ ಕಾದಿದೆಯೋ ಎಂದು ಕಂಗಾಲಾಗಿರುವ ನಮಗೆ ಈ ಹೊತ್ತಿನಲ್ಲಿ ವಿಚಿತ್ರ ಬೇನೆಯಾಗಿ ಕಾಡಲು ನೀವೊಬ್ಬರು ಕಡಿಮೆಯಿದ್ದಿರಿ ಮಿ.ಕೇಜ್ರಿವಾಲ್
.
ಐ.ಐ.ಟಿ. ಖರಗಪುರದ ವಿದ್ಯಾರ್ಥಿಯಾಗಿ, ಕಂದಾಯ ಇಲಾಖೆಯ ಜಂಟಿ ಆಯುಕ್ತರಾಗಿ, ಮಾಹಿತಿ ಹಕ್ಕು ಕಾಯ್ದೆಯ ಪ್ರತಿಪಾದಕರಾಗಿ, ಏಷ್ಯಾದ ನೊಬೆಲ್ ಎಂದೇ ಪ್ರಖ್ಯಾತವಾದ ಮ್ಯಾಗ್ಸೆಸ್ಸೆ ಪ್ರಶಸ್ತಿಯ ವಿಜೇತರಾಗಿ, ಅಣ್ಣಾ ಹಜಾರೆಯವರ ಬಲಗೈಯಾಗಿ, ನಂತರ ಆಮ್ ಆದ್ಮಿ ಪಾರ್ಟಿಯ ಸಂಸ್ಥಾಪಕರಾಗಿ, ರಾತ್ರೋರಾತ್ರಿ ದಿಲ್ಲಿಯ ಮುಖ್ಯಮಂತ್ರಿಯೂ ಆಗಿ, 49 ದಿನಗಳ ಕಾಲ ರಾಜಧಾನಿಯನ್ನಾಳಿ, ಅಷ್ಟೇ ಅವಸರದಲ್ಲಿ ರಾಜೀನಾಮೆಯನ್ನೂ ನೀಡಿ, ನೀವ್ಯಾರು, ಏನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲೇ ಹಂತ ಹಂತವಾಗಿ ಬಣ್ಣ ಬದಲಾಯಿಸುವ ಗೋಸುಂಬೆಯಾಗಿ, ದಿನಕ್ಕೊಂದು ಹೊಸ ರೂಪದಲ್ಲಿ, ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗುತ್ತಿದ್ದೀರಲ್ಲ, ನಿಮ್ಮ ಜಾಡನ್ನು ಹಿಡಿದು ನಡೆಯುವವರನ್ನೆಲ್ಲ ಗೊಂದಲಕ್ಕೆ ತಳ್ಳುತ್ತ, ಒಂದು ಮುಗಿಯುವಷ್ಟರಲ್ಲಿ ಮತ್ತೊಂದು ಬೀದಿ ನಾಟಕವಾಡುತ್ತಾ ರಾಜಕಾರಣವನ್ನು ದೊಂಬರಾಟ ಮಾಡಿ, ನಿಮ್ಮನ್ನು ಆರಿಸಿ ಕಳುಹಿಸಿದವರು ಬೆಪ್ಪಾಗುವಂತೆ ಮಾಡಿಬಿಟ್ಟಿರಲ್ಲ?

ಸಿಕ್ಕಸಿಕ್ಕವರ ಮುಖದ ಮುಂದೆಲ್ಲ ಪ್ರಶ್ನೆ ಪತ್ರಿಕೆಗಳನ್ನು ಹಿಡಿದು, ಡಜನ್‍ಗಟ್ಟಳೆ ಪ್ರಶ್ನೆಗಳ ಬಾಣಗಳನ್ನು ತೂರಿಬಿಡುವ, ಅವರನ್ನು ಕಕ್ಕಾಬಿಕ್ಕಿ ಮಾಡಿ ಅವರು ಉತ್ತರಿಸುವ ಮೊದಲೇ ಮತ್ತೊಬ್ಬರನ್ನು ಗುರಿ ಮಾಡಿಕೊಳ್ಳುವ ನಿಮಗಿದೋ ನಿಜವಾದ “ಆಮ್ ಆದ್ಮಿ”ಗಳಾದ ನಮ್ಮ ಕೇವಲ ಅರ್ಧ ಡಜನ್ ಪ್ರಶ್ನೆಗಳು:

1. ಕುಳಿತ ಮೊದಲ ಪರೀಕ್ಷೆಯಲ್ಲೆ Rank ಬಂದಂತೆ ದಿಲ್ಲಿಯಲ್ಲಿ 28 ಸೀಟುಗಳನ್ನು ಗೆದ್ದು, ಯಾರ ಜೊತೆಯೂ ಕೈಜೋಡಿಸಿ ಸರ್ಕಾರ ರಚಿಸುವುದಿಲ್ಲ ಎಂದು ಹೂಂಕರಿಸಿ, ನಂತರ ಅಷ್ಟು ವಾಚಾಮಗೋಚರವಾಗಿ ನಿಂದಿಸಿದ್ದ ಕಾಂಗ್ರೆಸ್ ನ ಬಾಲ ಹಿಡಿದಾದರೂ ಗದ್ದುಗೆ ಏರಬೇಕೆಂಬ ಚಪಲ ಬಂದುದ್ಯಾಕೆ? ಅಣ್ಣಾ ಹಜಾರೆಯಂಥ ನೈತಿಕ ಬಲಾಢ್ಯರ ಕಟ್ಟಾ ಬೆಂಬಲಿಗರಾಗಿದ್ದ ನಿಮಗೆ ಗದ್ದುಗೆಯೇರುವಾಗ ನೈತಿಕತೆ ಏಕೆ ಅಡ್ಡಬರಲಿಲ್ಲ? ಅತಿ ದೊಡ್ಡ ಪಕ್ಷ ನೀವಲ್ಲವಾದ್ದರಿಂದ ನೀವು ಅಧಿಕಾರ ಹಿಡಿಯುವುದು ಸಮಂಜಸವಲ್ಲ ಎಂಬ ಹಟಕ್ಕೆ ಏಕ ಅಂಟಿಕೊಳ್ಳಲಿಲ್ಲ?
ಆಗಷ್ಟೇ ಹುಟ್ಟಿದ ಮಗು ತಾನೇ ಹೊಕ್ಕಳು ಕತ್ತರಿಸಿಕೊಂಡು ನಡೆದಾಡುವುದು ಜಾಹೀರಾತಿನಲ್ಲಿ ಮಾತ್ರ ನೋಡಲು ಚಂದ ಮತ್ತು ಸಾಧ್ಯ! ರಾಜಕಾರಣದಲ್ಲಿ ಈಗಷ್ಟೇ ಹುಟ್ಟಿರುವ ನೀವು ಕಣ್ಣು ಬಿಡುವ ಮೊದಲೇ ನಡೆದಾಡಲು ಹೋಗಿ ಎಡವಿ ಬಿದ್ದಿರಲ್ಲಾ, ಅಧಿಕಾರಕ್ಕೆ ಬಂದೊಡನೆ ಅವಸರದಲ್ಲಿ ವಿದ್ಯುತ್ ನಲ್ಲಿ ಒಂದಷ್ಟು ವಿನಾಯಿತಿ, ಕೆಲವರಿಗೆ ಒಂದಷ್ಟು ಕಿಲೋಲೀಟರ್ ನೀರು ಕುಡಿಸಿಬಿಟ್ಟರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಬಿಟ್ಟಿತೇ? ದಿಲ್ಲಿಯ ತುಂಬ ಬರೀ ಸಮಸ್ಯೆಗಳೆ ತುಂಬಿವೆ ಎಂದು ಚುನಾವಣೆಗೆ ಮುಂಚೆ ಬೊಬ್ಬೆ ಹಾಕುತ್ತಿದ್ದ ನೀವು ಅಧಿಕಾರಕ್ಕೆ ಬಂದ ತಕ್ಷಣ ಜನ ಇನ್ನೆಲ್ಲಿ ನಿಮ್ಮ “Problem solving skills” ನ ಒರೆಗೆ ಹಚ್ಚುತ್ತಾರೋ ಎಂದು ಅಂಜಿ ವಿಷಯಾಂತರ ಮಾಡಿಬಿಟ್ಟಿರಿ. ಸಮಸ್ಯೆಗಳನ್ನು ಆಲಿಸುವ "ಜನತಾ ದರ್ಬಾರ್“ ಹಂತದಲ್ಲೇ ಸೋತು ಸುಣ್ಣವಾಗಿ ಬೆನ್ನು ತೋರಿಸಿ ಓಡಿದ ನೀವು, ದೇಶದುದ್ದಗಲಕ್ಕೂ ವ್ಯಾಪಿಸಿ ಹಣ್ಣುಮಾಡುತ್ತಿರುವ ಸಮಸ್ಯೆಗಳನ್ನು ಎದುರಿಸಿ ಹೇಗೆ ಪರಿಹರಿಸುತ್ತೀರಿ? 

2. ಮಾತು ಮಾತಿಗೂ ಉಪವಾಸ ಪ್ರತಿಭಟನೆಯ ನೆಪದಲ್ಲಿ ಬೀದಿಗಿಳಿಯುತ್ತೀರಲ್ಲ, ಎಲ್ಲದಕ್ಕೂ ಜನರನ್ನು ಕೇಳುತ್ತೇನೆ ಜನರನ್ನು ಕೇಳುತ್ತೇನೆ ಎಂದು ನಡು ರಸ್ತೆಗೆ ಬಂದು ನಿಲ್ಲುತ್ತೀರಲ್ಲ, ಬೀದಿಯಲ್ಲಿದ್ದು ಆಳುವಂಥಾ ದೇಶವಾ ವಿಶ್ವದ ಅತಿ ದೊಡ್ಡದಾದ ಈ ಪ್ರಜಾಪ್ರಭುತ್ವ? ಜನರನ್ನುಕೇಳಿ ಕೇಳಿ ಉತ್ತರ ಪಡೆಯಲು ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳು “Bournvita Quiz” ನ ಸಾಮಾನ್ಯಜ್ಞಾನ ಪ್ರಶ್ನೆಗಳಾ? ಎಲ್ಲರನ್ನೂ ಪ್ರಶ್ನಿಸುವುದೆ ನಿಮ್ಮ ಹಕ್ಕು ಎಂದು ಭಾವಿಸಿರುವ ನೀವು ದಿಲ್ಲಿಯ ಎಷ್ಟು ಪ್ರಶ್ನೆಗಳಿಗೆ ಉತ್ತರವಿತ್ತಿರಿ? ಉತ್ತರವಾದಿರಿ? ಸಿಕ್ಕ ಅವಕಾಶಕ್ಕೆ ನ್ಯಾಯ ಸಲ್ಲಿಸದೆ, ಅಸಾಂವಿಧಾನಿಕವಾಗಿ ವ್ಯವಹರಿಸಿ, ಅರ್ಧರಾತ್ರಿಯಲ್ಲಿ ರಾಜೀನಾಮೆ ನೀಡಿ ನೀವೇ ಒಂದು ಯಕ್ಷ ಪ್ರಶ್ನೆಯಾಗಿಬಿಟ್ಟಿರಲ್ಲ, ನಿಮ್ಮ ಅವತಾರಗಳನ್ನು ನೋಡಿದ ಜನ ಮತ್ತೆ ಯಾವ ಹೊಸಬರಿಗೆ ಮಣೆ ಹಾಕುತ್ತಾರೆ? ನಿಮ್ಮ ತಿಕ್ಕಲುತನದಿಂದಾಗಿ ಹೊಸ ವಿಚಾರಸರಣಿಯನ್ನು ಮಂಡಿಸುವ ಎಲ್ಲರನ್ನೂ ಜನ ಅನುಮಾನದಿಂದಲೇ ನೋಡುವುದಿಲ್ಲವೇ?

3. ಭ್ರಷ್ಟಾಚಾರದ ಕೂಗೊಂದನ್ನೇ ನಿತ್ಯ ಸುಪ್ರಭಾತವಾಗಿಸಿಕೊಂಡಿರುವ ನಿಮಗೆ ಅರುಣಾಚಲ, ಅಸ್ಸಾಂ, ಜಮ್ಮು ಕಾಶ್ಮೀರ ಗಳು ದ್ರೋಹ, ಭಯೋತ್ಪಾದನೆಗಳಿಂದ ಬೆಂದು ಹೋಗಿರುವುದು ಕಾಣಿಸುತ್ತಿಲ್ಲವೇ? ಭಾರತದ ಏಕತೆ, ಸುಭದ್ರತೆ ಹಿಂದೆಂದೂ ಇರದ ಅಪಾಯಕಾರಿ ಸ್ಥಿತಿಯಲ್ಲಿ ಇಂದು ಇರುವುದು ನಿಮ್ಮ ಅರಿವಿಗೆ ಬಂದಿಲ್ಲವೆ? ಕುಸಿದು ಬಿದ್ದಿರುವ ರಕ್ಷಣಾ ವ್ಯವಸ್ಥೆ, ಬುಡಮೇಲಾಗಿರುವ ಆರ್ಥಿಕ ವ್ಯವಸ್ಥೆ, ಬರಿದಾಗಿರುವ ಬೊಕ್ಕಸ, ಅರಾಜಕತೆ, ಅಂಕೆ ಮೀರಿರುವ ಅಲ್ಪಸಂಖ್ಯಾತರ ಓಲೈಕೆ, ಎಗ್ಗಿಲ್ಲದೆ ನಡೆಯುತ್ತಿರುವ ಮತಾಂತರ, ನಾಯಿಕೊಡೆಗಳನ್ನೂ ಮೀರಿಸುವ ನಿರುಪಯೋಗಿ ಯೋಜನೆಗಳು, ಅತಿರೇಕದ ಮಟ್ಟಕ್ಕೆ ಹೋಗಿರುವ ಕುಟುಂಬ ರಾಜಕಾರಣ, ಇದನ್ನು ನೋಡಿ ರೋಸಿ ಹೋಗಿರುವ ಪ್ರಜ್ಞಾವಂತ ಭಾರತೀಯ, ಇದ್ಯಾವುದೂ ಗೋಚರಿಸುತ್ತಲೇ ಇಲ್ಲವೇ? ಅನಿವಾಸಿ ಭಾರತೀಯರ, ವಿದೇಶಿಯರ ಧನಬಲ, ನಾಮಬಲಗಳಿಗಾಗಿ ಜಾಣಕುರುಡು ಪ್ರದರ್ಶಿಸುತ್ತಿರುವ ನೀವು, ಆ ಇಡುಗಂಟನ್ನು ನೆಚ್ಚಿಕೊಂಡು ನಮ್ಮ ರಾಜಕಾರಣ ಮರ್ಮವನ್ನು ವಿದೇಶೀಯರ ಕೈಲಿಡ ಹೋದರೆ ಎಂಥ  ಅನರ್ಥವಾಗುತ್ತದೆಂದು ತಿಳಿಯದಷ್ಟು ಮೂಢರೇ ಮಿ.ಕೇಜ್ರಿವಾಲ್?

4. ನಿಮ್ಮದೇ ಆದ ಒಂದು ಧ್ಯೇಯೋದ್ದೇಶ ಇಲ್ಲದೇ ಹೋದರೂ ಎಲ್ಲರಲ್ಲೂ ತಪ್ಪು ಕಂಡು ಹಿಡಿಯುವುದೇ ಚಟವಾಗಿಬಿಟ್ಟಿರುವ ನಿಮಗೆ ಸರಿದಾರಿಯಲ್ಲಿ ನಡೆಯುತ್ತಿರುವವರೂ ತಪ್ಪಿತಸ್ಥರಾಗಿಯೇ ಏಕೆ ಕಾಣುತ್ತಿದ್ದಾರೆ? ಒಂದು ದಶಕದ ಆಡಳಿತಾನುಭವವಿರುವ, ಎಲ್ಲ ವಿಧದಲ್ಲೂ ತಮ್ಮ ರಾಜ್ಯವನ್ನು ಮಾದರಿಯಾಗಿಸಲೆತ್ನಿಸುತ್ತಿರುವ, ಪ್ರತಿಕೂಲ ಪರಿಸ್ಥಿತಿಯನ್ನೂ ಯಶಸ್ವಿಯಾಗಿ ನಿಭಾಯಿಸಿತೋರಿಸಿರುವ, ದೂರ ದೃಷ್ಟಿಯುಳ್ಳ, ಉತ್ತಮ ವಾಗ್ಮಿ, ಸಮರ್ಥ ಆಡಿಳಿತಗಾರರಾಗಿರುವ ನರೇಂದ್ರ ಮೋದಿ ಯವರ ಮೇಲೆ ಏಕೆ ಕೆಂಗಣ್ಣು? ನಮ್ಮ ನೇತಾರರೆನಿಸಿಕೊಂಡವರು ದಶಕಗಳಿಂದ ದೇಶವನ್ನು ಒಂದು ಉಡುಗೊರೆಯಂತೆ ಬೆಳ್ಳಿ ತಟ್ಟೆಯಲ್ಲಿಟ್ಟು ಯೋಗ್ಯತೆ ಇಲ್ಲದಿದ್ದರ್ರೂ ಮಕ್ಕಳು ಮೊಮ್ಮಕ್ಕಳಿಗೆ ಕೊಡುತ್ತಾ ಬಂದಿರುವುದರ ಪರಿಣಾಮವನ್ನೇ ನಾವೀಗ ನೋಡುತ್ತಿರುವುದು. ಹುಳು ಹಿಡಿದು ಹೋಗಿರುವ ನಮ್ಮ ವ್ಯವಸ್ಥೆ ಬದಲಾಗುವ ಸುಸಮಯ ಬಂತೆಂದು ನಾವು ಸಂಭ್ರಮಿಸುತ್ತಿರುವಾಗ ಶಿವ ಪೂಜೆಯಲ್ಲಿ ಕರಡಿ ಬಿಟ್ಟಂತೆ ನೀವೆಲ್ಲಿಂದ ಬಂದಿರಿ? ಏಕೆ ಬಂದಿರಿ? ಮೋದಿಯವರಿಗೊಂದು ಅವಕಾಶ ಕೊಡುವ ಸಂಕಲ್ಪ ಮಾಡುತ್ತಿರುವವರ ಮನಃಪರಿವರ್ತಿಸುವ ಸಲುವಾಗಿ ಅವರ ಮೇಲೆ ಇಲ್ಲ ಸಲ್ಲದ ಆರೋಪಕ್ಕೆ ಸಜ್ಜಾಗಿ ನಿಂತಿರುವ ನೀವು ಅವರಿಗೆ ಸಾಟಿಯಾಗಬಲ್ಲಿರಾ? ಯಾರ ಪ್ರೇರಣೆಯಿಂದ ಮೋದಿಯವರನ್ನು ಸೋಲಿಸುವ ಈ ಕೆಟ್ಟ ಆಟ ಆಡುತ್ತಿದ್ದೀರ ಮಿ.ಕೇಜ್ರಿವಾಲ್?

5. ಮಿತಿಮೀರುತ್ತಿರುವ ಅವ್ಯವಸ್ಥೆಯಿಂದ ಈ ಪೀಳಿಗೆಯ ಬಹಳಷ್ಟು ಬುದ್ಧಿವಂತ ಮಂದಿ ಈಗಾಗಲೇ ವಿದೇಶಗಳಲ್ಲಿ ನೆಲೆಸಿದ್ದಾರೆ. ಸಂಶೋಧನೆ, ಕೃಷಿ, ರಕ್ಷಣಾ ವ್ಯವಸ್ಥೆ ಮುಂತಾದ ಮುಖ್ಯ, ಕ್ಲಿಷ್ಟಕರ ವಿಭಾಗಗಳಿಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. ದೇಶದ ಒಂದೊಂದೇ ಭಾಗವನ್ನು ಹಂಚುತ್ತಾ ಹೋದರೆ ದೇಶಭಕ್ತಿಯನ್ನು, ರಾಷ್ಟ್ರಪ್ರೇಮವನ್ನು ಹೇಗೆ ಬಿತ್ತೋಣ? ಸದ್ಯದ ಪರಿಸ್ಥಿತಿಯಲ್ಲಿ ಜಾತಿವಾದವನ್ನು ಬದಿಗೊತ್ತಿ ನಮ್ಮ ಸಮಗ್ರತೆ, ಏಕತೆಯನ್ನು ಎತ್ತಿ ಹಿಡಿದು, ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಅಡಿಪಾಯ ಹಾಕಿ, ಹಾಗೇ ನಮ್ಮ ನೆರೆ ರಾಷ್ಟ್ರಗಳಿಗೆ ಕೊಡಬೇಕಾದ ಸಂದೇಶವನ್ನು ಸರಿಯಾದ ರೀತಿಯಲ್ಲಿ ಕೊಟ್ಟು, ನಮ್ಮ ಸೇನೆಯನ್ನು ಬಲಿಷ್ಠಗೊಳಿಸಿಕೊಂಡು, ಮತಾಂತರಿಗಳನ್ನು ಮಟ್ಟ ಹಾಕಿ, ನಮ್ಮ ವಿಷಯದಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಿ ನಮ್ಮ ಒಗ್ಗಟ್ಟು ಮುರಿಯದಂತೆ ತಡೆದು ನಾವು ಒಟ್ಟಾಗಿ ಬಾಳಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿ ಕಾಣುತ್ತಿಲ್ಲವೆ ಮಿ.ಕೇಜ್ರಿವಾಲ್? ಸಣ್ಣ ಪುಟ್ಟ ರಾಷ್ಟ್ರಗಳೆಲ್ಲಾ ನಾ ಮುಂದು ತಾ ಮುಂದು ಎಂದು ಅಭಿವೃದ್ಧಿ ಹೊಂದುತ್ತಿರುವಾಗ ಗಾತ್ರ, ಕ್ಷಮತೆ, ಯೋಗ್ಯತೆಯಲ್ಲಿ ಯಾರಿಗೂ ಕಡಿಮೆಯಿಲ್ಲದ ನಾವು ಅವರಿಗೆಲ್ಲಾ ಸಡ್ಡು ಹೊಡೆಯಬೇಡವೆ? ಇದನ್ನೆಲ್ಲಾ ಸಾಧ್ಯವಾಗಿಸುವ ಧೈರ್ಯ ಸ್ಥೈರ್ಯಗಳಿರುವ ನಾಯಕ ಯಾರು? ಸರಿಯಾಗಿ ಸಂದರ್ಶನ ಕೊಡಲುಬರದೆ ಉರು ಹೊಡೆದ ಉತ್ತರಗಳನ್ನು ಹೇಳಿ ನಗೆಪಾಟಲಿಗೀಡಾಗುವವರೋ, ಯಾವಾಗಲೂ ಯಾರನ್ನಾದರೂ ದೂಷಿಸುತ್ತ ಹೊತ್ತಲ್ಲದ ಹೊತ್ತಿನಲ್ಲಿ ರಸ್ತೆಗಿಳಿದು ಮೈಕ್ ಹಿಡಿದು ತಾರಕ ಸ್ವರದಲ್ಲಿ ಅರಚಾಡಿ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುವ ನಿಮ್ಮಂಥವರೋ ಅಥವಾ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕ ಸಮಾಧಾನ ಕೊಡುತ್ತೇನೆಂಬ ವಿಶ್ವಾಸವನ್ನು ತಮ್ಮ ನಡೆ ನುಡಿಗಳಿಂದ ಕೊಡುತ್ತಿರುವ ನರೇಂದ್ರ ಮೋದಿಯವರೋ?

6. ಅಂಬೆಗಾಲಿಟ್ಟು ಶುರು ಮಾಡಬೇಕಾದ ರಾಜಕೀಯ ಜೀವನವನ್ನ ದಾಪುಗಾಲಿಟ್ಟುಕೊಂಡೇ ಶುರು ಮಾಡುವ ಯೋಗ ಎಷ್ಟು ಜನಕ್ಕೆ ದೊರಕುತ್ತದೆ ಹೇಳಿ? ಈಗ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ. ಹಗಲು ರಾತ್ರಿಯನ್ನು ಬೀದಿಯಲ್ಲಿ, ಪ್ರತಿಭಟನೆಯಲ್ಲಿ ಕಳೆಯುವುದನ್ನು ನಿಲ್ಲಿಸಿ ಮೊದಲು ನಿಮ್ಮ ತಂಡ ಜೊತೆ ಬೆರೆತು ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಅಚಾನಕ್ಕಾಗಿ ಬಂದ ಅನಪೇಕ್ಷಿತ ಅಧಿಕಾರದ ಅಮಲನ್ನು ತಲೆಗೇರಿಸಿಕೊಂಡು ಹೀಗೆ ಕುಳಿತಲ್ಲಿ ನಿಂತಲ್ಲಿ ಎಲ್ಲರ ಮೇಲೆ ಹರಿಹಾಯುವುದು ಅವಶ್ಯವೇ? ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯಲೇಬೇಕೆ ಮಿ.ಕೇಜ್ರಿವಾಲ್ಕಡೇ ಪಕ್ಷ ನಿಮ್ಮಂಥ ಐ.ಐ.ಟಿ ಪದವೀಧರರಿಂದ ಅಷ್ಟರಮಟ್ಟಿಗಿನ ಜಾಣ್ಮೆ, ಪ್ರೌಢಿಮೆಯನ್ನು ನಿರೀಕ್ಷಿಸುವುದೂ ನಮ್ಮಂಥ ಸಾಮಾನ್ಯ ಜನರ ತಪ್ಪೇ ಹೇಳಿ?
* * *


1 comment:

  1. ಪುಸ್ತಕದ ಬುದ್ದಿ ಮತ್ತೆ ಒಂದು ಕಡೆಯಾದರೆ ಮಸ್ತಕದ ಬುದ್ದಿ ಮತ್ತೆ ಇನ್ನೊಂದು ಕಡೆ.. ಪುಸ್ತಕದ ಬುದ್ದಿಯನ್ನು ಮಸ್ತಕದ ಬುದ್ದಿಗೆ ಸೇರಿಸಿದಾಗ ಬುದ್ದಿವಂತನಾಗುತ್ತಾನೆ.. ಈತ ಪರಕೆ ಹಿಡಿದರೆ ಮಾತ್ರ ಸಾಲದು ಅದನ್ನು ಉಪಯೋಗಿಸುವ ನೈಪುಣ್ಯತೆ ಇರಬೇಕು. ಅಣ್ಣ ಅಂತಹ ಹಿರಿಯರ ಜೊತೆಯಲ್ಲಿ ಇದ್ದು ಹೆಸರು ಬಂದ ಮೇಲೆ.. ಅವರಿಂದ ಸಿಡಿದು ಹೋದ ಬಂಡೆಯ ಚೂರಾಗದೆ ಬೂದಿಯ ಕಸವಾದ ಪೊರಕೆ ಇಂದು ಗುಡಿಸಲಿಕ್ಕು ಬಾರದೆ.. ಬಳಸಲಿಕ್ಕು ಬಾರದ ನಗೆಪಾಟಲಾಗಿದೆ.

    ಸುಂದರ ಲೇಖನ.. ಹೇಳಿಕೊಟ್ಟ ಮಾತು ಕಟ್ಟಿ ಕೊಟ್ಟ ಬುತ್ತಿ ಬಹಳ ದಿನ ಬಾರದು ಎಂದು ನಿರೂಪಿಸುವ ಉತ್ತಮ ಉದಾಹರಣೆ ಈ ಮನುಷ್ಯ..

    ಕೇಳಿದ ಪ್ರಶ್ನೆಗಳೆಲ್ಲ ಸಮಂಜಸ.... ಅದಕ್ಕೆ ಉತ್ತರ ಗೊತ್ತಿದು ಹೇಳಲಾರದಂಥಹ ಗುಲಾಮಿ ಪದ್ದತಿಗೆ ಹೋಗಿಬಿಟ್ಟಿದ್ದಾರೆ ಪೊರಕೆ..

    ReplyDelete