Tuesday, 1 April 2014

ಗರ್ವ ಮೂಡಿಸುವ 'ಪ್ರತಾಪ್'ಎಂಬ ಪತ್ರಕರ್ತ 'ಸಿಂಹ'ನ ಘರ್ಜನೆ

ಕಳೆದ ಕೆಲ ವಾರಗಳಿಂದ 'ಕನ್ನಡ ಪ್ರಭ'ದ ಶನಿವಾರದ ಅಂಕಣಗಳ ಪುಟ ಭಣಗುಡುತ್ತಿದೆ. ಚುನಾವಣೆಯ ಕುರಿತಾದ ಬಹಳಷ್ಟು ಹಾಸ್ಯ, ವಿಡಂಬನೆ, ಸುದ್ಧಿ, ವರದಿ-ವಿಶ್ಲೇಷಣೆಗಳ ಹೊರತಾಗಿಯೂ ಒಂದು ಖಾಲಿತನ ಕಾಡುತ್ತಿದೆ. ಶನಿವಾರದ ಪತ್ರಿಕೆ ಕೈಗೆ ಬಂದೊಡನೆ ಅಭ್ಯಾಸಬಲದಿಂದ ಅಯಾಚಿತವಾಗಿ ಕೈಗಳು ಅಂಕಣಗಳ ಪುಟವನ್ನೇ ತೆರೆಯುತ್ತವೆ. ಕಂಗಳು 'ಬೆತ್ತಲೆ ಪ್ರಪಂಚ' ಇರುತ್ತಿದ್ದ ಪುಟದ ಭಾಗವನ್ನೊಮ್ಮೆ ನಿರುಕಿಸಿ ಕೆಲಕಾಲ ಮತ್ತೆಲ್ಲೂ ಹರಿಯದೆ ಅಲ್ಲೇ ಕಲ್ಲಾಗುತ್ತವೆ. ನಾ ಮೊದಲೇ ಹೇಳಿದ್ದೆ ತಾನೆ, ಗೊತ್ತಿದ್ದೂ ಮತ್ತೆ ಮತ್ತೆ ಅಲ್ಲೇ ಏಕೆ ತಡಕಾಡುತ್ತೀ ಎಂದು ಮನಸು ಮಧ್ಯೆ ಪ್ರವೇಶಿಸಿ, ಸೀಟಿ ಊದುವ ಗಾರ್ಡ್ ನಂತೆ ಗದರಿಸಿ ಎಚ್ಚರಿಸಿದ ಮೇಲೆ ಕಂಗಳು ಆಗಷ್ಟೇ ಹೊರಟ ರೈಲಿನಂತೆ ನಿಧಾನವಾಗಿ ಬೇರೆಡೆ ಚಲಿಸತೊಡಗುತ್ತವೆ. ಅವುಗಳು ನೋಡಿದ್ದನ್ನೆಲ್ಲಾ, ಓದಿದ್ದನ್ನೆಲ್ಲಾ ಅರ್ಥ ಮಾಡಿಕೊಂಡು, ಬಿಡಿಬಿಡಿಯಾಗಿಸಿ, ಬೇಕಾದ್ದನ್ನು ಮೆಮೊರಿಯಲ್ಲಿ ತುಂಬಿಸಿಡುವ, ಬೇಡದ್ದನ್ನು ಮರೆವಿನ ಸರಕಾಗಿಸುವ ಮಿದುಳಿನ ಎಂದಿನ ಪ್ರಕ್ರಿಯೆಗೆ ನಿಧಾನವಾಗಿ ಚಾಲನೆ ದೊರಕುತ್ತದೆ. 
ಮಂಗನ ಅಪರಾವತಾರವಾಗಿರುವ, ಒಂದರೆ ಕ್ಷಣವೂ ಎಲ್ಲಿಯೂ ನೆಲೆಯೂರಲು ಒಪ್ಪದ ಮನಸಿಗೆ ಮೂಗುದಾರ ಹಾಕಿ, ಕೆಲಕಾಲದ ಮಟ್ಟಿಗೆ ಅದನ್ನು ಹಿಡಿದಿಟ್ಟು ಗಂಭೀರ ಚಿಂತನೆಗೆ ಹಚ್ಚುವ ಪ್ರಕ್ರಿಯೆ ಈಗ್ಗೆ ಹಲವು ವರ್ಷಗಳಿಂದ ನಿಯಮಿತವಾಗಿ, ನಿರಾತಂಕವಾಗಿ ನಡೆದು ಬಂದಿತ್ತು. ನಮ್ಮ ಸುತ್ತಲಿನ ಪ್ರಪಂಚದ ಅನೇಕ ವಿಚಾರ, ವ್ಯಕ್ತಿ, ವ್ಯವಸ್ಥೆಗಳು ಎಳೆಎಳೆಯಾಗಿ ಸಕಾರಾತ್ಮಕವಾಗಿಯಾಗಲೀ, ನಕಾರಾತ್ಮಕವಾಗಿಯಾಗಲೀ ನಮ್ಮೆದುರು ಬೆತ್ತಲಾದಾಗ ಉಳಿಯ ಏಟು ತಿಂದಂತೆ ಮನಸು ಎಚ್ಚೆತ್ತು ಪ್ರತಿಕ್ರಿಯಿಸುತ್ತಿತ್ತು. ತಾನೂ ಒಂದು ನಿಲುವಿಗೆ ಬರುತ್ತಿತ್ತು. ಇಂಥ ಸ್ಪಂದನೆಗೆ ಒಗ್ಗಿ ಹೋಗಿದ್ದ ಮನಸು ಈಗ ಆ ಬೆತ್ತಲಾಗಿಸುವ ಪ್ರಕ್ರಿಯೆ ನಿಂತುಹೋಗಿರುವುದನ್ನು ಕಂಡು ಸ್ವಲ್ಪ ಮೂಕವಾಗಿದೆ. ಇದೆಲ್ಲದರ ರೂವಾರಿಯಾಗಿದ್ದ ಪ್ರತಾಪ ಸಿಂಹ ಎಂಬೊಬ್ಬ ಪತ್ರಕರ್ತನ ಉಪಸ್ಥಿತಿಯಾಗಲೀ, ಅನುಪಸ್ಥಿತಿಯಾಗಲೀ ನಮ್ಮನ್ನು ಈ ಪರಿ ಕಾಡುತ್ತದೆಂದರೆ ಅವನನ್ನು ನಮ್ಮ ಮನೋಮಂದಿರದಲ್ಲಿ ಯಾವ ಮಟ್ಟಿಗೆ ಆವಾಹಿಸಿಕೊಂಡಿದ್ದೆವು ಎಂಬುದು ಸ್ಫುಟವಾಗುತ್ತದೆ.

ಲೇಖನಗಳೆಂದರೆ ಪೂರ್ಣವಿರಾಮ ಚಿಹ್ನೆಯಿಂದಲೇ ಬೆಸೆಯಲ್ಪಟ್ಟು ಅದರಿಂದಲೇ ಮುಗಿಯಬೇಕಾದ್ದು ಎಂಬ ಪರಿಭಾಷೆಯಿದ್ದ ಕಾಲದಲ್ಲಿ ಎಲ್ಲದಕ್ಕೂ ಪ್ರಶ್ನಾರ್ಥಕ ಹಾಗೂ ಆಶ್ಚರ್ಯ ಸೂಚಕ ಚಿಹ್ನೆಗಳಿಂದಲೇ ತನ್ನ ಅಂಕಣವನ್ನು ಅಲಂಕರಿಸಿದವನು ಪ್ರತಾಪ ಸಿಂಹ. ಅದರಲ್ಲಿ ಮೂಡುತ್ತಿದ್ದ ಪ್ರಶ್ನಾರ್ಥಕ ಹಾಗೂ ಆಶ್ಚರ್ಯಸೂಚಕಗಳು ಕ್ರಮೇಣ ನಮ್ಮ ಮನಃ ಪಟಲದಲ್ಲಿ ಅಚ್ಚೊತ್ತಿ ನಮ್ಮ ಯೋಚನಾ ವಿಧಾನವೂ ಪ್ರಶ್ನಾರ್ಥಕವಾಗೇ ರೂಪುಗೊಂಡು ನಮ್ಮ ನಡೆ ನುಡಿಗಳಲ್ಲಿ ಬಿಂಬಿತವಾಗತೊಡಗಿದವು. ಶನಿವಾರದಿಂದ ಶನಿವಾರಕ್ಕೆ ಜಿಗಿಯುತ್ತ, ಕಾಶ್ಮೀರದಿಂದ ರಾಮಸೇತುವಿನವರೆಗೆ, ತೆಂಡೂಲ್ಕರ್‍ನಿಂದ ಶೂಮಾಕರ್‍ವರೆಗೆ ತನ್ನ ಅಂಕಣದ ಹರಹನ್ನು ಆತ ವಿಸ್ತರಿಸುತ್ತಾ ಹೋದಂತೆ ನಾವೂ ಬೆರಗಿನಿಂದ ಹಿಂಬಾಲಿಸಿದೆವು. ನಮ್ಮ ಅರಿವಿನ ಪರಿಧಿ ಇಂಚಿಂಚೇ ಹೆಚ್ಚಿದಂತೆಲ್ಲಾ ನಾವೂ ಸಂಭ್ರಮ ಪಟ್ಟೆವು. ಆತ ಕೇಳುತ್ತಿದ್ದ ಪ್ರಶ್ನೆಗಳು ನಮಗೇಕೆ ಹೊಳೆಯಲಿಲ್ಲ ಎಂದೋ, ಅಸ್ಪಷ್ಟವಾಗಿ ಹುದುಗಿದ್ದ ವಿಚಾರಗಳು ಆತನನ್ನೋದುವವರೆಗೂ ಹೀಗೇಕೆ ಮೂರ್ತ ರೂಪ ಪಡೆಯಲಿಲ್ಲವೆಂದೋ ನಮ್ಮನ್ನೇ ಪ್ರಶ್ನಿಸಿಕೊಳ್ಳುತ್ತಿದ್ದೆವು! ಎಲ್ಲಕ್ಕೂ ಮಿಗಿಲಾಗಿ, ಅರೆ! ಹೌದಾ, ಹೀಗೂ ಇರುತ್ತದಾ ಎಂಬ ಪ್ರಶ್ನೆಯಿಂದ ಶುರುವಾಗಿ, ಹೀಗೂ ಇರಬಹುದು ಎಂಬ ಸಾಧ್ಯತೆಯ ಮಜಲಿಗೆ ಏರಿ, ಕೊನೆಗೆ ಆತ ಬರೆದಿದ್ದಾನೆಂದ ಮೇಲೆ ಇದು ಹೀಗೇ ಇರಬೇಕು ಎಂಬ ಖಚಿತತೆಯ ತೆಕ್ಕೆಗೆ ಬಿದ್ದು ಮನಸನ್ನು ಆತನ ಸುಪರ್ದಿಗೆ ಒಪ್ಪಿಸುವವರೆಗಿನ ನಮ್ಮ ಈ ಪಯಣ ಎಷ್ಟು ದೀರ್ಘವಾದದ್ದು ಎಂಬ ಅರಿವಾಗುವುದು ಒಮ್ಮೆ ಹಿಂತಿರುಗಿ ನೋಡಿದಾಗಲೇ.

ಮೊದಲೆಲ್ಲ ಮನೆಗೆ ದಿನಪತ್ರಿಕೆ ಬಂದೊಡನೆ, ಬಾಳ ಮುಸ್ಸಂಜೆಯಲ್ಲಿರುವ, ಎಲ್ಲ ಜವಾಬ್ದಾರಿಗಳನ್ನೂ ಪೂರೈಸಿ ಹಗುರಾಗಿರುವ ಮನೆಯ ಹಿರಿತಲೆಗಳು ಬೆಳಗಿನ ಕಾಫಿ ಹೀರುತ್ತ ನಿಧಾನವಾಗಿ ಒಂದೂ ಅಕ್ಷರ ಬಿಡದೆ ಪತ್ರಿಕೆ ಓದಿ ಮುಗಿಸಿದ ಮೇಲಷ್ಟೇ ಉಳಿದವರ ಸರದಿ ಬರುತ್ತಿದ್ದುದು. ಉಳಿದವರಿಗೆ ಪತ್ರಿಕೆಯನ್ನು ಕಸಿದು ಮೊದಲು ಓದಬೇಕೆಂಬ ಧಾವಂತಕ್ಕೆ ಕಾರಣವೂ ಇರುತ್ತಿರಲಿಲ್ಲ. ಏಕೆಂದರೆ  ದಿನಪತ್ರಿಕೆಯೆಂಬುದು ಸಾಧ್ಯವಾದಮಟ್ಟಿಗೆ ಲೋಪದೋಷವಿರದ, ಸುದ್ದಿಯನ್ನು ಯಥಾವತ್ತಾಗಿ ನಮಗೆ ತಲುಪಿಸುವ ಸುದ್ಧಿ ವಾಹಕನಾಗಿರುತ್ತಿತ್ತೇ ಹೊರತು ಎಲ್ಲಿಯೂ ನಮ್ಮನ್ನು ತನ್ನೊಡನೆ ಬೆಸಯುವ ಕೊಂಡಿಯಾಗುತ್ತಿರಲಿಲ್ಲ. ಪತ್ರಿಕೋದ್ಯಮದಲ್ಲಿ ನುರಿತವರ ಒಂದು ತಂಡಕ್ಕೆ ಮಾತ್ರ ಸುದ್ದಿಯ ಮೇಲಿನ ಸ್ವಾಮ್ಯ ಎಂಬ ಭಾವ ಇದ್ದುದರಿಂದ ಓದುಗರಿಗೆ ಅದು ತಮ್ಮದಲ್ಲದ, ತಮಗೆ ಸೇರದ ಸುದ್ದಿ ಎಂಬ ನಿರ್ಲಿಪ್ತತೆ. ಸುದ್ದಿಯನ್ನು ಬರಿದೇ ಸುದ್ದಿಯಾಗಿ ತಿಳಿವ ಕುತೂಹಲ ಇರುತ್ತಿತ್ತೇ ವಿನಃ ಪ್ರತಿಕ್ರಿಯಿಸಲೇಬೇಕಾದಂಥ ನಂಟು, ಆಪ್ತತೆ ಇರುತ್ತಿರಲಿಲ್ಲ. ಆದ್ದರಿಂದ, ಓದುವಾಗ ಯಾವ ಚಿಂತನೆ ಭಾವಾವೇಷಕ್ಕೂ ಆಸ್ಪದವಿರದೆ ಓದಿನ ಹರಿವು ಒಂದೇ ಮಟ್ಟದ್ದಾಗಿರುತ್ತಿತ್ತು. ಕಾಲಕಾಲಕ್ಕೆ ಹಲವು ಪತ್ರಿಕೆಗಳು, ಅಂಕಣಕಾರರು, ನಿರ್ಭೀತತೆಯನ್ನು ಪ್ರಕಟಪಡಿಸಿದ್ದರಾದರೂ ಅವೆಲ್ಲ ಸಾಂದರ್ಭಿಕ ಮಾತ್ರವಾಗಿದ್ದುದರಿಂದ ಸಾಮಾನ್ಯ ಓದುಗರು ತಮ್ಮ ದೈನಂದಿನ ಚಿಂತನೆ, ಆಲೋಚನೆಗಳನ್ನು ಬಾರಿ ಬಾರಿಗೂ ಹೊರಗೆಡುಹಲು ಅದು ವೇದಿಕೆಯಾಗುತ್ತಲೇ ಇರಲಿಲ್ಲ. ಆದ್ದರಿಂದ ಓದುಗರು ಮಾಸಪತ್ರಿಕೆಗಳನ್ನು ತಮ್ಮ ಭಾವಾಭಿವ್ಯಕ್ತಿಗೆ ಬಳಸಿಕೊಳ್ಳುತ್ತಿದ್ದರು. ಮನರಂಜನೆ ಹಾಗೂ ವಿಷಯ ವೈವಿಧ್ಯತೆಗಳಿದ್ದರೂ ಮಾಸಪತ್ರಿಕೆಗಳೆಂದೂ ಗಂಭೀರ ಚರ್ಚೆಗೆ, ಚಿಂತನಾ ಸಮರಕ್ಕೆ, ಆಯುಧವಾಗಲೇ ಇಲ್ಲ. ಹೀಗೆ ಹಿರಿಯ, ಮಧ್ಯವಯಸ್ಕ ಹಾಗೂ ಕಿರಿಯ ಓದುಗರ ವರ್ಗಗಳು ದಿನಪತ್ರಿಕೆ ಹಾಗೂ ಮಾಸಪತ್ರಿಕೆಗಳ ನಡುವೆ ಹಂಚಿಹೋಗಿದ್ದಾಗ ನಿಧಾನವಾಗಿ ಶುರುವಾಗಿದ್ದೇ ಅಂಕಣಗಳ ಯುಗ.

ಮೊದಮೊದಲಿಗೆ ಕೆಲವು ಲೇಖಕರು, ಅಂಕಣಕಾರರು, ಬಹಳ ದಿಟ್ಟತನ, ಪಾರದರ್ಶಕತನದಿಂದೆಂಬಂತೆ ಬರವಣಿಗೆಯ ಹೊಳೆ ಹರಿಸಿದಾಗ ನಾವೂ ಅದರಲ್ಲಿ ಮಿಂದೆದ್ದೆವು. ಆದರೆ ಬರಬರುತ್ತಾ ಅದರಲ್ಲಿನ ಬಾಲಿಶತೆ ತೀವ್ರವಾದಾಗ, ಭಾಷೆ ಬೇರೆ ಯಾವುದೋ ಜಾಡನ್ನು ಹಿಡಿದಾಗ, ವಿಷಯ ವೈವಿಧ್ಯತೆಯ ಕೊರತೆ ಕಾಣತೊಡಗಿದಾಗ ಬಹುತೇಕರಿಗೆ ಇದು 'ಅಗಸ ಹೊಸದರಲ್ಲ್ಲಿಗೋಣಿಯನ್ನು ಎತ್ತಿ ಒಗೆದಂತೆ' ಎನಿಸಿಬಿಟ್ಟಿತು. ಈ ಹೊಸತನದ ಅಲೆಗಳ ಹೊಡೆತದ ಮಧ್ಯೆ ಸಣ್ಣದೊಂದು ನಾವೆಯೆಂಬಂತೆ ಪ್ರತಾಪ್ ಸಿಂಹನ 'ಬೆತ್ತಲೆ ಜಗತ್ತು' ಮೂಡಿಬರುತ್ತಿತ್ತು. ಆತನ ಬರಹದಲ್ಲಿನ ದಿಟ್ಟತನ, ನೇರಾ ನೇರ ವಿಷಯ ಪ್ರಸ್ತುತಿ, ಆತ ಕೊಡುತ್ತಿದ್ದ ಅಂಕಿ ಅಂಶಗಳ ಆಧಾರ ಹಾಗೂ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುತ್ತಿದ್ದ ರೀತಿ ಎಲ್ಲವೂ ಓದಿದ ಮೊದಲ ಅಂಕಣದಲ್ಲೇ ಢಾಳಾಗಿ ಕಾಣಸಿಕ್ಕವು. ಅವು ಮನಸಿಗೆ ಖುಶಿ ಕೊಟ್ಟರೂ ಎಲ್ಲಿ ಇದೂ ಉಳಿದವುಗಳ ಥರ ‘False Pregnancy’ ಆಗಿಬಿಡುತ್ತದೋ ಎಂಬ ಭಯವಿತ್ತು. ನಾಲ್ಕು ತೀಕ್ಷ್ಣ  ಅಂಕಣಗಳ ನಂತರ ಸರಕೆಲ್ಲ ಖಾಲಿಯಾಗಿಬಿಡುತ್ತದಾ, ಅಥವಾ ಅವೇ ವಿಷಯಗಳ ಏಕತಾನತೆಗೆ ನಮ್ಮನ್ನು ಒಡ್ಡಿಬಿಡುತ್ತಾನಾ ಎಂಬ ಅಳುಕಿನಿಂದಲೇ ಓದುತ್ತಾ ಹೋದ ನಮಗೆ ಇದು ಸದಾಕಾಲ ಉತ್ಕೃಷ್ಟ ‘Basmati Rice’ ಅನ್ನೇ ಕೊಡುವ, ಎಂದೂ ಖಾಲಿಯಾಗದ, ದ್ರೌಪದಿಯ ಅಕ್ಷಯ ಪಾತ್ರೆ ಎಂಬುದು ಬಹುಬೇಗ ಮನದಟ್ಟಾಯಿತು.
ಅಗಾಧವಾಗಿದ್ದ ಆತನ ವಿಷಯ ವೈವಿಧ್ಯತೆ, ಅಚ್ಚರಿಯೆನಿಸುವಷ್ಟಿದ್ದ ಆತನ ಅರಿವಿನ ವ್ಯಾಪ್ತಿ, ಮೊನಚು ಕಳೆದುಕೊಳ್ಳದ ಬರಹದ ತೀಕ್ಷ್ಣತೆ, ಗುಲಗಂಜಿಯಷ್ಟೂ ಕಡಿಮಯಾಗದ ಎದೆಗಾರಿಕೆ, ಇವೆಲ್ಲಕ್ಕೂ ಸಮನಾದಷ್ಟೇ ಬುದ್ದಿವಂತಿಕೆ ಅಂಕಣದಿಂದ ಅಂಕಣಕ್ಕೆ ಆತನ ಮೇಲಿನ ಅಭಿಮಾನವನ್ನು ಹೆಚ್ಚಿಸುತ್ತಾ ಹೋಯಿತು. ಹಾಗೆಯೇ ಆತನ ಓದುಗ ಬಳಗವನ್ನೂ ಕೂಡ. ಹೊಗಳಲೋ, ತೆಗಳಲೋ , ಒಟ್ಟಿನಲ್ಲಿ ಎಲ್ಲರೂ ಆತನನ್ನು ಓದಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಆತ ಎಸೆಯುತ್ತಿದ್ದ ಪ್ರಶ್ನೆಗಳ ಬಾಣ 'ಎಡ','ಬಲ'ಕ್ಕೇ ಆದರೂ ಅದು ಸೀದಾ ಬಂದು ನಾಟುತ್ತಿದ್ದುದು ನಮ್ಮ ಹೃದಯಕ್ಕೇ!! ರಾಶಿರಾಶಿ ಎಂಬಷ್ಟಿರುವ ಟಿ.ವಿ.ಪತ್ರಕರ್ತರು ಕೈಗಳಲ್ಲಿ ಮೈಕ್ ಹಿಡಿದು, ದೃಶ್ಯ ಮಾಧ್ಯಮವನ್ನು ದಿನದ ಇಪ್ಪತ್ತ್ನಾಲ್ಕೂ ಗಂಟೆ ಬಳಸಿಕೊಂಡೂ ಮೂಡಿಸಲಾಗದ ಛಾಪನ್ನು ಆತ ಬರಿಗೈ ಬರಹಗಳಿಂದ ಮೂಡಿಸಿದ ಪರಿ ಶ್ಲಾಘನೀಯವಾಗಿತ್ತು. ಇವೆಲ್ಲಕ್ಕೂ ಒತ್ತಾಸೆಯಾಗಿ ನಿಂತು ಈ 'ಅರ್ಜುನ’ನ ಪಾಲಿನ 'ಶ್ರೀಕೃಷ್ಣ'ನಾಗಿ, ಹೊಸತನದ ಹರಿಕಾರರಾಗಿ, ಅವಕಾಶಗಳ ಹೊಳೆಯನ್ನೇ ಹರಿಸಿದವರು ಸಂಪಾದಕ ವಿಶ್ವೇಶ್ವರ ಭಟ್ಟರು ಎಂಬುದು ಎಲ್ಲರಿಗೂ ತಿಳಿದಿದ್ದರೂ ಇವರೀರ್ವರೂ ಬರೆದ ಜುಗಲ್ ಬಂದಿಯ ಭಾಷ್ಯ ನಮಗೆಲ್ಲರಿಗೂ ಅಪ್ಯಾಯಮಾನವಾಗಿತ್ತು. ಪರಿಣಾಮ, ಶನಿವಾರದ ದಿನಪತ್ರಿಕೆ ಓದಲು ನಾ ಮುಂದು ತಾ ಮುಂದು ಎಂಬ ಪೈಪೋಟಿ ಶುರುವಾಗಿ ಎಲ್ಲರಿಗಿಂತ ಮೊದಲು ಪತ್ರಿಕೆ ಓದುವ ಹಿರಿಯ ನಾಗರಿಕರ ಜನ್ಮಸಿದ್ಧ ಹಕ್ಕಿಗೆ ಕಡಿವಾಣ ಬಿತ್ತು!

ಇಲ್ಲಿ ಪ್ರತಾಪ ಸಿಂಹ ಎಂಬ ವ್ಯಕ್ತಿಯನ್ನು ಜರಡಿಯಾಡುವುದರ  ಉದ್ದೇಶ ಆತ ಪತ್ರಕರ್ತನಾಗಿ ಕಂಡ ಯಶಸ್ಸು/ಹಿನ್ನಡೆ ಎಷ್ಟು ಎಂಬುದನ್ನಾಗಲೀ, ಆತನನ್ನು ಹೊಗಳುವ/ತೆಗಳುವ ಬಳಗ ಎಷ್ಟು ದೊಡ್ಡದೆಂಬುದನ್ನಾಗಲೀ ಬಿಂಬಿಸುವುದಲ್ಲ. ಓರ್ವ ಲೇಖಕ ತನ್ನ ಬರವಣಿಗೆಯ ಪ್ರಖರತೆಯಿಂದ ತನ್ನ ವಿಚಾರಲಹರಿಯನ್ನು ಹೇಗೆ ಎಲ್ಲರ ಮೇಲೆ ಹರಿಬಿಟ್ಟು ಆ ಝಳವನ್ನು ಸದಾಕಾಲ ಕಾಪಾಡಿಕೊಳ್ಳಬಲ್ಲ ಎಂಬುದು. ಪ್ರಾರಂಭದಲ್ಲಿ ಆತನನ್ನೋದುವಾಗ ಯಾರೋ ನೆರೆಮನೆಯ ಹುಡುಗ ಪ್ರಶ್ನೆಗಳನ್ನು ಕೇಳುವಷ್ಟೇ ಸಲೀಸಾಗಿ ಈತನೂ ಕೇಳುತ್ತಿದ್ದಾನೆ ಎನಿಸತೊಡಗಿ, ಬಹಳ ಸಣ್ಣದಾಗಿ ಶುರುವಾದ ಅವನ ಪಾತ್ರ, ಬರಬರುತ್ತಾ ಬೃಹದಾಕಾರವಾಗಿ ಬೆಳೆದು, ನಮ್ಮ ಮನಸನ್ನು ವ್ಯಾಪಿಸಿ ಆಳವಾಗಿ ಬೇರು ಬಿಟ್ಟು, ಆತ ಅಪರಿಚಿತನೆಂಬ ಭಾವ ನಶಿಸಿ ಹೋಗಿ, ನಮ್ಮ ಪ್ರತಿರೂಪವೇ ಆತನೆನಿಸಿ, ಆತನ ದನಿಯೂ ನಮ್ಮದೇ ಎನಿಸಿ, ಆತನ ವಿಚಾರಗಳೆಲ್ಲ ನಮ್ಮವೇ ಎಂಬ ಸಲಿಗೆಯಿಂದ ಅದರ ವಿಶ್ಲೇಷಣೆಗೆ ತೊಡಗಿಕೊಂಡೆವು. ಮುಖಾಮುಖಿ ಕೂತು ಚರ್ಚಿಸದಿದ್ದರೂ ಎಲ್ಲ ವಯೋಮಾನದವರನ್ನೂ ಯಾವುದೋ ವಿಶಿಷ್ಟ ಮಂತ್ರದಂಡದಿಂದೆಂಬಂತೆ ಕಟ್ಟಿ ಹಾಕುತ್ತಾ ಸಾಗಿದ ಪರಿಗೆ ಬೆರಗಾಗಿ ತಲೆದೂಗಿದೆವು. ನಾವುಗಳೂ ಆತನೇ ಆಗಿ ನಮ್ಮ ವಲಯಗಳಲ್ಲಿ ಅಲ್ಪಸ್ವಲ್ಪವಾದರೂ ದಿಟ್ಟತನ ತೋರಿ, ಆತನ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸಿ ಗಳಿಸಿದ ಸಣ್ಣ ಪುಟ್ಟ ವಿಜಯಗಳಿಗೆ ನಮ್ಮ ಬೆನ್ನನ್ನು ನಾವೇ ಚಪ್ಪರಿಸಿಕೊಂಡೆವು. ನೇರವಂತಿಕೆ, ಸ್ವಲ್ಪ ಮಟ್ಟಿಗಿನ ಹುಂಬಧೈರ್ಯ ಹಾಗೂ ಎದೆಗಾರಿಕೆಯಂಥ  ವ್ಯಕ್ತಿತ್ವ ವಿಕಸನದ ಪಾಠಗಳನ್ನು ನಾವೂ ಅಲ್ಲಲ್ಲಿ ನಮಗೆ ಸಾಧ್ಯವಾದಷ್ಟು ಅಳವಡಿಸಿಕೊಂಡು ಅದರ ರುಚಿ ಸವಿದೆವು. ಕಡೆಗೊಮ್ಮೆ ಆತ 'ಬೆತ್ತಲೆ ಜಗತ್ತಿ'ನಿಂದ 'ಬೆತ್ತಲೆ ಪ್ರಪಂಚಕ್ಕೆ'ಗುಳೆ ಹೋದಾಗ ನಾವೂ ಮರುಮಾತನಾಡದೆ ಹಿಂಬಾಲಿಸಿದೆವು. ಹಾಗೆ ಹಿಂಬಾಲಿಸುವಾಗಲೇ ನಮಗೆ ಅರಿವಾಗಿದ್ದು - ನಮ್ಮ ಮಿದುಳಿಗೆ ಆತನ ಅಂಕಣದ ಆಹಾರದ ವ್ಯಸನವನ್ನು ನಾವೆಷ್ಟು ಹಿಡಿಸಿದ್ದೆವೆಂದು!

ಹಿಂಬಾಲಕರ ಹಿಂಡಿದೆಯೆಂದು ತನ್ನ ಬರವಣಿಗೆಯ ಬಿಗಿಯನ್ನು ಒಂದಿನಿತೂ ಸಡಿಲಿಸದೆ, ಹೇಗೂ ಓದುಗರಿದ್ದಾರೆಂದು ತನ್ನದೇ ಮುಖಸ್ತುತಿಗಿಳಿಯದೆ, ಮೊದಲ ಲೇಖನದ ಮೊದಲನೇ ವಾಕ್ಯದ ಓಘವನ್ನೇ ಕೊನೆಯವರೆಗೂ ಉಳಿಸಿಕೊಂಡು ಬಂದು, ಬರೀ ಪ್ರತಿಭೆಯೊಂದರಿಂದಲೇ ಲಕ್ಷಾಂತರ ಓದುಗ ಮನಸುಗಳೊಂದಿಗೆ ಸಂವಹಿಸಿ, ಹೆಜ್ಜೆ ಹೆಜ್ಜೆಗೂ ಚಿಂತನ ಶೀಲತೆಯನ್ನು ಬಿತ್ತಿ, ಹೀಗೂ ಆಲೋಚಿಸಬಹುದು ಎಂದು ವಿಷಯಗಳ ವಿಭಿನ್ನ ಆಯಾಮಗಳನ್ನು ತೆರೆದಿಡುತ್ತಾ, ಅಗತ್ಯ ಬಿದ್ದಲ್ಲಿ  
ಮುಖವಾಡಗಳನ್ನು ಕಳಚುತ್ತಾ, ಎಲ್ಲರನ್ನೂ ತನ್ನೊಡನೆ ಸೆಳೆದೊಯ್ಯುತ್ತಿದ್ದ ಆತನ ಈ ಪ್ರಕ್ರಿಯೆ ಹೀಗೇ ಕೊನೆಯಿಲ್ಲದೆ ಮುಂದುವರೆಯಲೆಂದು ನಾವು ಆಶಿಸಿದ್ದೆವು. ಹೀಗೊಂದು ಆಕಸ್ಮಿಕ ತಿರುವು ಬಂದು ಆತ ಬೇರೆಯದೇ ಸಮರಕ್ಕೆ ಸಜ್ಜಾಗಿ ಹೊರಟದ್ದು, ಶುಭವಾಗಲಿ ಎಂದು ಎಲ್ಲರೂ ಹಾರೈಸಿದ್ದು, ಎಲ್ಲವೂ ಸರಿ, ಆದರೆ ಆತ ಬಿಟ್ಟು ಹೋದ ಖಾಲಿತನವನ್ನು ಮತ್ತೆ ತುಂಬಲು ಸಾಧ್ಯವಿದೆಯಾ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲವೆನಿಸಿ, ಆ 'Era' ಮುಗಿಯಿತಲ್ಲ ಎಂದು ಖೇದಪಡುವ ಮನಸಿಗೆ ‘ಎಲ್ಲದಕ್ಕೂ ಒಂದು ಅಂತ್ಯವಿರಲೇಬೇಕು' ಎಂಬ ಅಥವಾ 'ಬದಲಾವಣೆಯೊಂದೇ ನಿರಂತರ' ಎಂಬ ಸಮಾಧಾನದ ಮಾತುಗಳೂ ಬರೀ ಔಪಚಾರಿಕವಾಗಿ ಕಾಣುತ್ತವೆ.

ಒಂದೂವರೆ ದಶಕಗಳ ನಿನ್ನ ಈ ಸಿಂಹ ನಡಿಗೆಯನ್ನು ಇದೇ ಠೀವಿಯಿಂದ ಮತ್ತಾರೂ ಮಾಡಲಾರರು. 
ನಿನ್ನ ಹಾಗೆ ಘರ್ಜಿಸಿ, ಮೈಮನಗಳನ್ನು ಗರ್ವದಿಂದ ನವಿರೇಳಿಸಲಾರರು.
ನಮ್ಮ ಹೃದಯಾರಣ್ಯದಲ್ಲಿ ನಿನ್ನ ಘರ್ಜನೆ ಎಂದೆಂದಿಗೂ ಮಾರ್ದನಿಸುತ್ತಲೇ ಇರುತ್ತದೆ ಪ್ರತಾಪ್….!
* * *

12 comments:

 1. This comment has been removed by the author.

  ReplyDelete
 2. ಪ್ರತಾಪಸಿಂಹ ರವರ ಬರಹಗಳನ್ನು ಓದುತ್ತಿದ್ದ ಪ್ರಾರಂಭದ ವರ್ಷಗಳಲ್ಲಿ ನನ್ನ ಅನಿಸಿಕೆಗಳು ಹೀಗೆ ಇದ್ದವು.
  ಎಲೆಕ್ಟ್ರಾನಿಕ್ ಮಾಧ್ಯಮಗಳಿಂದಾಗಿಯಾದರೂ ಯುವಜನರು ದೇಶದ ಪರಿಸ್ಥಿತಿಯ ಬಗ್ಗೆ ಯೋಚಿಸುವಂತೆ ಆಗಿದ್ದು ಭರವಸೆ ಮೂಡಿಸುವ ವಿಷಯ .ಆದರೆ ಯಾವುದೇ ವಿಷಯವನ್ನು ನಂಬುವಂತೆ ಹೇಳುವ ಜಾಣ್ಮೆಗೆ ಮರುಳಾಗಿಬಿಟ್ಟರೆ ವಿಷಯಗಳನ್ನು ಅರಿಯುವ ದೃಷ್ಟಿ ಕೋನ ವನ್ನು ಮರೆತುಬಿಡುವ ಅಪಾಯವೂ ಇದೆ!

  ReplyDelete
 3. True the combination of Pratap and Bhat ess awesome. Pratap has made Saturdays dull after his resignation. It is not that we accepted and agreed all his views, but the, way he presented the facts, the way he wrote, made its to wait for Saturdays. We miss you Pratap, really we miss your weekend fire.

  ReplyDelete
 4. Very nice writing liked so much

  ReplyDelete
 5. ನನ್ನ ಹೈಸ್ಕೂಲ್ ದಿನಗಳಲ್ಲಿ ನನಗೆ ಸಿಂಹನ ಬರಹಗಳ ಹುಚ್ಚು ಎಷ್ಟಿತ್ತೆಂದರೆ ಅವರ ಅಂಕಣ ಬರಹಗಳನ್ನೆಲ್ಲಾ ಕತ್ತರಿಸಿ ಎತ್ತಿಟ್ಟುಕೊಂಡಿರುತ್ತಿದ್ದೆ... ಪ್ರತಾಪ್ ಬಗ್ಗೆಗಿನ ಹೆಮ್ಮೆಯನ್ನು ಅಕ್ಷರಕ್ಕಿಳಿಸಿದ್ದಿರಿ ಧನ್ಯವಾದಗಳು...

  ReplyDelete
 6. After tremendous WIN, hope Prathap will be back with new force. Wishing Prathap all the very best for his new journey.

  ReplyDelete
 7. This comment has been removed by the author.

  ReplyDelete
 8. you cheap third rate blogger shouldn't promote your third rate article on other person profile. grow up you fool. if anyone follow V.bhatt, twitter, no one with brain will accept him as editorial of newspaper. As per Pratap sigh consider, never like his article. Learn to see my point of view.. more you know about world, you will know how ignorant misinformed he is! Moreover, he is very selective about critics, just like you.. though there are 100 good things people do, you sick sad pessimistic immature see only one bad things, I am kannadiga and hate my own people because of this reason..

  ReplyDelete
  Replies
  1. How pathetic that you being a kannadiga does not know how to respect others' views or choose right words to express your views. I pity your state of mind. Feel sorry for you, god bless!!!

   Delete
  2. Stop this non sense.If you can't encourage one at least dnt troll.Because of such insane like you respect towards motherland has been degraded..

   Delete
 9. ಅದ್ಭುತವಾದ ಲೇಖನ..ಧನ್ಯವಾದಗಳು

  ReplyDelete