Tuesday 3 June 2014

ಫಿಕ್ಸಿಂಗ್, ಬೆಟ್ಟಿಂಗ್‍ಗಳ ಆರ್ಭಟದಲ್ಲಿ ಆಟವಾಗಿ ಉಳಿಯದ ಕ್ರಿಕೆಟ್

2012ರ ಜೂನ್ 21ರಂದು ಗೋವಾದಲ್ಲಿ ಇಬ್ಬರು ಹದಿನೆಂಟು ವರ್ಷದೊಳಗಿನ ಯುವಕರು 65 ವರ್ಷದ ತಮ್ಮ ಅಜ್ಜಿಯನ್ನು ದಾರುಣವಾಗಿ ಹತ್ಯೆ ಮಾಡಿದ್ದರು. ಆಕೆಯ ಮೈಮೇಲಿದ್ದ ಆಭರಣ ಹಾಗೂ ನಾಲ್ಕು ಲಕ್ಷ ರೂಪಾಯಿಗಳಷ್ಟು ಹಣವನ್ನು ದೋಚಲಾಗಿತ್ತು. ಹತ್ಯೆಯ ಉದ್ದೇಶ - IPL ಬೆಟ್ಟಿಂಗ್‍ಗೆ ಬೇಕಾಗಿದ್ದ ಹಣ ಹೊಂದಿಸುವುದು. 2013ರ ಮೇ 15ರಂದು ಮುಂಬಯಿಯಲ್ಲಿ ಜಿತೇಂದ್ರ ರಾಂಕಾ ಎಂಬ ವಜ್ರದ ವ್ಯಾಪಾರಿಯ 13 ವರ್ಷದ ಮಗ ಆದಿತ್ಯ ರಾಂಕಾ ಅಪಹರಣವಾಗಿದ್ದ. ಅಪಹರಣಕಾರರು 30ಲಕ್ಷ ರೂಗಳ ಬೇಡಿಕೆಯಿಟ್ಟಿದ್ದರು. ತಂದೆ ಜಿತೇಂದ್ರ ಪೋಲೀಸರ ನೆರವಿಗಾಗಿ ಕೈ ಚಾಚುತ್ತಿದ್ದಂತೆ ಮಗ ಆದಿತ್ಯ ಕೊಲೆಯಾಗಿ ಹೋಗಿದ್ದ. ಕೈಯ ನರಗಳನ್ನು ಕತ್ತರಿಸಿ ಅವನನ್ನು ಸಜೀವವಾಗಿ ದಹಿಸಲಾಗಿತ್ತು. ತನಿಖೆ ನಡೆದು ಕೊಲೆಗಾರ ಹಿಮಾಂಶು ಸೆರೆಯಾಗುತ್ತಿದ್ದಂತೆ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಏಕೆಂದರೆ, ಹಿಮಾಂಶು ಮೃತ ಆದಿತ್ಯನ ಹತ್ತಿರದ ಸಂಬಂಧಿಯಷ್ಟೇ ಆಗಿರದೆ MBA ಪದವೀಧರನೂ ಆಗಿದ್ದ. IPL ಬೆಟ್ಟಿಂಗ್‍ನಲ್ಲಿ ಕಳೆದುಕೊಂಡಿದ್ದ 10ಲಕ್ಷ ರೂಗಳನ್ನು ಹೇಗಾದರೂ ವಾಪಸ್ ಪಡೆಯುವ ಹುನ್ನಾರದಲ್ಲಿ ತನ್ನ ಸೋದರ ಸಂಬಂಧಿಯ ಅಪಹರಣಕ್ಕೆ ಕೈ ಹಾಕಿದ್ದ. ದುಡ್ಡು ಸಿಗುವುದಿಲ್ಲವೆಂಬುದು ಖಾತ್ರಿಯಾದೊಡನೆ ಅವನನ್ನು ಅಮಾನುಷವಾಗಿ ಕೊಂದುಹಾಕಿದ್ದ! ತೀರಾ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡರು. ಕಾರಣ ಮತ್ತದೇ. IPL ಬೆಟ್ಟಿಂಗ್‍ನಲ್ಲಿ ಹಣ ಕಳೆದುಕೊಂಡದ್ದು. ಇವೆಲ್ಲಾ ದಾಖಲಾದ ಪ್ರಕರಣಗಳು. ದಾಖಲಾಗದವು ಇನ್ನೆಷ್ಟೋ.

ಒಮ್ಮೆ ಬೆನ್ನೇರಿದರೆ ಮತ್ತೆ ಬಿಡದ ಈ ‘ಬೆಟ್ಟಿಂಗ್‍ಭೂತ’ದ ವ್ಯಾಪ್ತಿ ಭಯಾನಕ. ಜನಪ್ರಿಯ ಚುನಾವಣೆಗಳಿರಲಿ, ಆಟಗಳಿರಲಿ, ಸೋಲು ಗೆಲುವಿನ ಸಾಧ್ಯತೆಯಿರುವೆಡೆಯೆಲ್ಲಾ ಬುಕ್ಕಿಗಳು (ಬೆಟ್ಟಿಂಗ್ ನಡೆಸುವ ಏಜೆಂಟ್‍ಗಳು) ಹಾಗೂ ಪಂಟರ್‍ಗಳ (ಹಣ ಹೂಡುವ ಜನಸಾಮಾನ್ಯರು) ತೆರೆ ಮರೆಯ ಬೆಟ್ಟಿಂಗ್ ಪ್ರಪಂಚ ಅಸ್ತಿತ್ವಕ್ಕೆ ಬಂದು ಬಿಡುತ್ತದೆ. ಉದಾಹರಣೆಗೆ ಈ ಬಾರಿಯ ಲೋಕಸಭಾ ಚುನಾವಣೆ. ಅಂದಾಜು 70,000ಕೋಟಿ ರೂಗಳ ಬೆಟ್ಟಿಂಗ್ ವಹಿವಾಟು ನಡೆದದ್ದು, ಮೋದಿಯವರೇ ಪ್ರಧಾನಿಯಾಗುತ್ತಾರೆ ಎನ್ನುವ ಬೆಟ್‍ಗೆ ಪ್ರತಿ ಒಂದು ರೂಪಾಯಿಗೆ 42 ಪೈಸೆಯ ಲಾಭ ನಿಗದಿಯಾಗಿದ್ದು ನಮ್ಮಲ್ಲಿ ಬಹುಪಾಲು ಜನರಿಗೆ ಗೊತ್ತಿರಲಿಕ್ಕಿಲ್ಲ! ಚುನಾವಣೆಯದೇ ಈ ಕಥೆಯಾದರೆ ಇನ್ನು ನಮ್ಮ ದೇಶದ ಜೀವನಾಡಿಯಾಗಿರುವ ಕ್ರಿಕೆಟ್‍ನ ಬಗ್ಗೆ ಹೇಳುವಂತೆಯೇ ಇಲ್ಲ. ಸಾಮಾನ್ಯವಾಗಿ ವರ್ಲ್ಡ್ ಕಪ್, ಭಾರತ-ಪಾಕಿಸ್ತಾನ ಹಾಗೂ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ನಡೆಯುವ ಆಶಸ್ ಸರಣಿಯಪಂದ್ಯಗಳು ಬೆಟ್ಟಿಂಗ್ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿರುತ್ತಿದ್ದವು. ಆದರೆ IPL ಪಂದ್ಯಗಳು ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಂತೆ ಬೆಟ್ಟಿಂಗ್‍ನ ಎಲ್ಲಾ ದಾಖಲೆಗಳನ್ನೂ ಮುರಿದಿವೆ. ಇವು ಬೆಟ್ಟಿಂಗ್‍ನ ಕಪಿಮುಷ್ಟಿಗೆ ಸಿಲುಕದೆ ಗತ್ಯಂತರವಿರಲಿಲ್ಲ ಎಂಬುದೇನೋ ಸರಿ, ಆದರೆ ಅಷ್ಟಕ್ಕೇ ಸೀಮಿತವಾಗಿರದೆ 'ಫಿಕ್ಸಿಂಗ್'ಗೂ ಮಗ್ಗುಲು ಬದಲಾಯಿಸಿರುವುದು ಬಹು ದೊಡ್ಡ ದುರಂತ.

ಬೆಟ್ಟಿಂಗ್‍ನ ಬಗ್ಗೆ ಅಲ್ಪ ಸ್ವಲ್ಪ ಅರಿವಿದ್ದ ನಮಗೆ ಆಟಗಾರರೂ ಶಾಮೀಲಾಗುವ 'ಫಿಕ್ಸಿಂಗ್' ಬಗೆಗಿನ ಸತ್ಯ ಮೊದಲ ಬಾರಿ ತಿಳಿದದ್ದು 2000ನೇ ಇಸವಿಯ ಏಪ್ರಿಲ್ ಏಳರಂದು. ಎಲ್ಲರ 'ರೋಲ್ ಮಾಡೆಲ್' ಆಗಿ ಖ್ಯಾತನಾಗಿದ್ದ ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೋನಿಯೆ ಭಾರತದ ಬುಕ್ಕಿ ಸಂಜಯ್ ಚಾವ್ಲಾನೊಡನೆ ಸಂಪರ್ಕ ಹೊಂದಿದ್ದು ದೃಢಪಟ್ಟಾಗ ಅವನ ಮೇಲಷ್ಟೇ ಅಲ್ಲ, ಇಡೀ ಕ್ರಿಕೆಟ್ನ ಮೇಲಿನ ನಂಬಿಕೆಯೇ ಬುಡಮೇಲಾಗಿತ್ತು. ಅವನೊಡನೆ ಭಾರತದ ಅಜರುದ್ದೀನ್, ಅಜಯ್ ಜಡೇಜ ಹಾಗೂ ಮನೋಜ್ ಪ್ರಭಾಕರ್‍ ಅವರುಗಳ ಮೇಲೂ ನಿಷೇಧ ಹೇರಲ್ಪಟ್ಟಾಗ ಮೋಸಹೋದ ಭಾವದಿಂದಾಗಿ  ಕ್ರಿಕೆಟ್ ಜೊತೆಗಿನ ನಮ್ಮ ನಂಟೂ ಉರಿದು ಬೂದಿಯಾಗಿಹೋಗಿತ್ತು.

ಆದರೆ ಮರುಹುಟ್ಟು ಪಡೆದ ಕ್ರಿಕೆಟ್ ಎಂಬ ಫೀನಿಕ್ಸ್ ಪಕ್ಷಿ ದಿನದಿನಕ್ಕೆ ಗರಿಗೆದರಿ ನಿಂತು IPL ಎಂಬ ಮರಿಯನ್ನೂ ಹಾಕಿತು. 2008ರಲ್ಲಿ ಶುರುವಾದ ಮೊದಲ ಆವೃತ್ತಿಯ ಅಪಾರ ಯಶಸ್ಸಿನ ನಂತರ ಪ್ರತಿ ವರ್ಷ ನಿರಂತರವಾಗಿ ನಡೆಯುತ್ತಾ ಸಾಗಿದ ಇದಾದರೂ 'ಫಿಕ್ಸಿಂಗ್'ನ ಶಾಪದಿಂದ ಮುಕ್ತವಾಗಿದೆ ಎಂದುಕೊಳ್ಳುತ್ತಿದ್ದಾಗಲೇ 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಶಾಂತಕುಮಾರನ್ ಶ್ರೀಶಾಂತ್, ಅಜಿತ್ ಚಾಂಡಿಲ ಹಾಗೂ ಅಂಕಿತ್ ಚವಾಣ್ ಸಿಕ್ಕಿಬಿದ್ದರು. ಇವರ ಜೊತೆ ಹದಿನಾಲ್ಕು ಬುಕ್ಕಿಗಳೂ ಬಲೆಗೆ ಬಿದ್ದರು. ತೀರಾ ಆಘಾತವಾಗಿದ್ದು ಆರೋಪಿಗಳಲ್ಲಿ BCCIನ ಅಧ್ಯಕ್ಷ ಶ್ರೀನಿವಾಸನ್‍ರ ಅಳಿಯ, ಚೆನ್ನೈ ಸೂಪರ್ ಕಿಂಗ್ಸ್ನ ಮಾಲೀಕ ಗುರುನಾಥ್ ಮೇಯಪ್ಪನ್‍ರೂ ‘ಮೇಯಲು’ ನಿಂತಿದ್ದಾರೆಂಬುದು ತಿಳಿದುಬಂದಾಗ. ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿ, 2013ರ ಅಕ್ಟೋಬರ್‍ನಲ್ಲಿ ಜಸ್ಟಿಸ್ ಮುಕುಲ್ ಮುದ್ಗಲ್‍ರನ್ನೊಳಗೊಂಡ ಏಕ ಸದಸ್ಯ ಪೀಠ ರಚಿಸಿ ತನಿಖೆಯನ್ನು ಅವರಿಗೊಪ್ಪಿಸಿತು. ಘಟನೆ ನಡೆದು ವರ್ಷವಾಗುತ್ತಾ ಬಂದರೂ BCCIನ ತಮ್ಮ ಕುರ್ಚಿ ಬಿಡದ ಶ್ರೀನಿವಾಸನ್‍ರಿಗೆ ಸುಪ್ರೀಂ ಕೋರ್ಟ್  ಕಳೆದ ಮಾರ್ಚ್‍ನಲ್ಲಿ 'ನಿಮ್ಮ ಅಧಿಕಾರ ಲಾಲಸೆ ನೋಡಿದರೆ ವಾಕರಿಕೆ ಬರುತ್ತದೆ' ಎಂದು ಛೀಮಾರಿ ಹಾಕಿ ಕೆಳಗಿಳಿಯುವಂತೆ ಸೂಚಿಸಿತು. ಈ ಅವಾಂತರಗಳಿಂದಾಗಿ 2013ರ ಆವೃತ್ತಿ ಸಪ್ಪೆಯಾಗಿಯೇ ಮುಗಿಯಿತು.

ಆದರೆ ಸಮಸ್ಯೆ ಸುಲಭದಲ್ಲಿ ಮುಗಿದುಹೋಗುವಷ್ಟು ಸರಳವಾಗಿಲ್ಲ. ನಮ್ಮ ದೇಶದಲ್ಲಿ ಲಾಟರಿ ಮತ್ತು 'ಕುದುರೆ ಬಾಲ'ದ ಬೆಟ್ಟಿಂಗ್ ಬಿಟ್ಟರೆ ಮತ್ತ್ಯಾವ ಜೂಜಿಗೂ ಕಾನೂನಿನ ಮಾನ್ಯತೆ ಇಲ್ಲ. ಆದ್ದರಿಂದ  IPL ಸೇರಿದಂತೆ ಉಳಿದೆಲ್ಲ ಬೆಟ್ಟಿಂಗ್‍ಗಳೂ ಕದ್ದುಮುಚ್ಚಿ ನಡೆಯುವುದು ಫೋನ್‍ ಅಥವಾ ಅಂತರ್ಜಾಲದ ವೆಬ್‍ಸೈಟ್‍ಗಳ ಮೂಲಕವೇ. ಹೀಗೆ ನಡೆವ ವಹಿವಾಟಿನ ವಾರ್ಷಿಕ ಮೊತ್ತ ಸುಮಾರು 30 ಬಿಲಿಯನ್ ಡಾಲರ್‍ಗಳು. IPLನ ಮೊದಲನೇ ಆವೃತ್ತಿಯಲ್ಲಿ ಅಂದಾಜು 6000ಕೋಟಿಯಷ್ಟಿದ್ದ ಬೆಟ್ಟಿಂಗ್ನ ಮೊತ್ತ ಕಳೆದ ವರ್ಷ 4೦,೦೦೦ಕೋಟಿ ಮುಟ್ಟಿತ್ತು! ಬುಕ್ಕಿಗಳೇ ಹೇಳುವಂತೆ ಪ್ರತಿ ಬೆಟ್‍‍ಗೂ ನಿಗದಿಯಾಗುವ ಕನಿಷ್ಠ ದರ 1೦೦೦ರೂಗಳು. ಗರಿಷ್ಠಕ್ಕೆ ಮಿತಿಯೆಂಬುದಿಲ್ಲ. ಪಂಟರ್‍ಗಳ ಶಕ್ತ್ಯಾನುಸಾರ ಕೋಟಿಗಟ್ಟಲೆ ಹಣ ಪಣಕ್ಕಿಡಲ್ಪಡುತ್ತದೆ. ಪೂರ್ತಿ ವ್ಯವಹಾರ ನಡೆಯುವುದೇ ನಂಬಿಕೆಯ ಮೇಲೆ. ಸಿಕ್ಕಿಬೀಳಬಾರದೆಂಬ ಉದ್ದೇಶದಿಂದ ಬುಕ್ಕಿಯೊಬ್ಬ ಕಡೇಪಕ್ಷ 15 ಮೊಬೈಲ್‍ ಫೋನ್‍ಗಳನ್ನು ಹೊಂದಿರುತ್ತಾನೆ. ಹೀಗೆ ಪ್ರತಿ ಬುಕ್ಕಿಯೂ ಸಲೀಸಾಗಿ 100ಕೋಟಿ ರೂಗಳ ವ್ಯವಹಾರ ನಿಭಾಯಿಸಬಲ್ಲ. ಇಂಥ ಸಾವಿರಾರು ಬುಕ್ಕಿಗಳಿಂದಾಗಿ ಪ್ರತಿಯೊಂದು ಆಟವೂ 15,೦೦೦ಕೋಟಿ ರೂಗಳಿಂದ  20,೦೦೦ಕೋಟಿ ರೂಗಳಷ್ಟು ಹಣವನ್ನೊಳಗೊಂಡಿರುತ್ತದೆ. ಭಾರತದ ಬೆಟ್ಟಿಂಗ್‍ನ ರಾಜಧಾನಿ ಹೈದರಾಬಾದ್‍ನಲ್ಲಿ ಒಟ್ಟಾರೆ ಬೆಟ್ಟಿಂಗ್‍ನ ಶೇಕಡ 2೦ರಷ್ಟು ನಡೆಯುತ್ತದೆ. ನಂತರದ ಸ್ಥಾನ ಮೆಟ್ರೋ ನಗರಗಳದ್ದು, ಗುಜರಾತ್ ಹಾಗೂ ರಾಜಸ್ಥಾನದ್ದು. ಎಲ್ಲಕ್ಕಿಂತ ಆಶ್ಚರ್ಯಕರವಾದ ಸಂಗತಿಯೆಂದರೆ ಇದು ಸಂಪೂರ್ಣವಾಗಿ ನಿಯಂತ್ರಿಸಲ್ಪಡುತ್ತಿರುವುದು ಪೋರ್ಚುಗಲ್‍ನ ರಾಜಧಾನಿ ಲಿಸ್ಬನ್‍ನಿಂದ! ಅಲ್ಲಿ ಕ್ರೀಡಾ ಬೆಟ್ಟಿಂಗ್‍ಗೆ ಕಾನೂನಿನ ಮಾನ್ಯತೆಯಿರುವುದರಿಂದ ಭಾರತದ ಬುಕ್ಕಿಗಳೆಲ್ಲ ತಮ್ಮ ಹಣಕಾಸಿನ ವಹಿವಾಟು ನಡೆಸುವುದು ಅಲ್ಲಿಂದಲೇ. ಮುಂದೆ ಈ ಕೋಟ್ಯಾಧೀಶ ಬುಕ್ಕಿಗಳು ಹುಡುಕುವುದು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬಲ್ಲ ಸೂಕ್ತ ಆಟಗಾರರನ್ನು. ಅವರಿಗೆ ಹಣದ ಆಮಿಷ ತೋರಿಸಿ ಆಟವನ್ನು 'ಫಿಕ್ಸ್' ಮಾಡಿಸುತ್ತಾರೆ. ಕೆಲವೊಮ್ಮೆ 'ಫಿಕ್ಸಿಂಗ್' ಆರರಿಂದ ಎಂಟು ಓವರ್‍ಗಳಿಗೆ ಸೀಮಿತವಾದರೆ ಮತ್ತೆ ಕೆಲವೊಮ್ಮೆ ಇಡೀ ಆಟ 'ಫಿಕ್ಸ್' ಆಗಿರುತ್ತದೆ.

ಒಂದಾನೊಂದು ಕಾಲದಲ್ಲಿ 'ಜೆಂಟ್‍ಲ್‍ಮ್ಯಾನ್ಸ್ ಗೇಮ್' ಆಗಿದ್ದ ಕ್ರಿಕೆಟ್ ಈಗ ಅಕ್ಷರಶಃ ಹಣ ಮಾಡುವ ದಂಧೆಯಾಗಿ ಹೋಗಿದೆ. ಆದರೆ ಇದನ್ನು ಅತಿಯಾಗಿ ಮೋಹಿಸುವ ನಮಗೆ ಇಂಥ ಅಪ್ರಿಯ ಸತ್ಯಗಳು ಬೇಕಿಲ್ಲ. ಯಾವ ನಮೂನೆಯ ಕ್ರಿಕೆಟ್ ಪ್ರೇಮಿಗಳಿದ್ದಾರೆಂದರೆ, ಕ್ರಿಕೆಟ್ ನೋಡಲೇಬೇಕೆಂದು ಮನಸಿಗೆ ಬಂದುಬಿಟ್ಟರೆ ಭಾರತವಲ್ಲದಿದ್ದರೂ ಸರಿ, ಬೇರೆ ದೇಶಗಳ ಆಟ ನೋಡುತ್ತಾರೆ. ಅದೂ ಇಲ್ಲದಿದ್ದರೆ ಮಹಿಳೆಯರ ಕ್ರಿಕೆಟ್ ಆಸ್ವಾದಿಸುತ್ತಾರೆ. ಅದೂ ಸಿಗದಿದ್ದರೆ ಅಂಧರ ಕ್ರಿಕೆಟ್ ಆದರೂ ಸೈ! ಒಟ್ಟಿನಲ್ಲಿ ಕ್ರಿಕೆಟ್ ಪ್ರವಹಿಸುತ್ತಿರಲೇಬೇಕು ಮನೆ-ಮನಗಳಲ್ಲಿ! ಇಂಥ ಮನಸ್ಥಿತಿಯಿರುವುದರಿಂದಲೇ ಮತ್ತೆ ಈ ಬಾರಿಯೂ IPL ಎಂದಿನಂತೆ ವಿಜೃಂಭಿಸಿದೆ. ನಮ್ಮ ನೆಚ್ಚಿನ ಕ್ರೀಡೆಯೆಂದು ಇದೊಂದನ್ನೇ ವೈಭವೀಕರಿಸಿಬಿಟ್ಟರೆ ಉಳಿದವುಗಳ ಪಾಡೇನಾಗಬೇಕು? ವಿಶ್ವದ ಫುಟ್ಬಾಲ್ ಲೀಗ್‍ಗಳ ಪ್ರೇರಣೆಯಿಂದಲೇ ಭಾರತದ ಕ್ರಿಕೆಟ್ ಲೀಗ್ ಶುರುವಾಗಿದ್ದು ನಿಜ. ಅವರುಗಳು ಹುಚ್ಚೆದ್ದು ಫುಟ್ಬಾಲ್ ನೋಡುವುದು, ಬೆಟ್ ಕಟ್ಟುವುದು ಎಲ್ಲವೂ ನಿಜ, ಆದರೆ ಅವರು ಬೇರೆ ಕ್ರೀಡೆಗಳನ್ನೂ ಅಷ್ಟೇ ಪ್ರೀತಿಸಿ ಪ್ರೋತ್ಸಾಹಿಸುತ್ತಾರೆ. ಫುಟ್ಬಾಲ್ ಟ್ರೋಫಿಗಳನ್ನು ಗೆದ್ದಷ್ಟೇ ಲೀಲಾಜಾಲವಾಗಿ ಒಲಿಂಪಿಕ್ಸ್ ಪದಕಗಳನ್ನೂ ಗೆಲ್ಲುತ್ತಾರೆ. ಅದೇ ಭಾರತದ ಸಾಧನೆ ನೋಡಿ. ಇಲ್ಲಿಯವರೆಗೂ ನಾವು ಒಂಬತ್ತು ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರೂ ಒಂದೂ ಪದಕ ಗೆಲ್ಲಲಾಗಿಲ್ಲ.  23 ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರೂ ಗೆದ್ದಿರುವುದು 26 ಪದಕಗಳನ್ನು ಮಾತ್ರ. ಅದರಲ್ಲಿ ಹನ್ನೊಂದು ಪದಕಗಳು ಹಾಕಿಯೊಂದರಿಂದಲೇ ಲಭಿಸಿದಂಥವು. ಅಥ್ಲೆಟಿಕ್ಸ್ಲ್ಲಂತೂ ಎಂಥ ದುಸ್ಥಿತಿಯಿದೆಯೆಂದರೆ ಬಂದಿರುವ ಎರಡೂ ಪದಕಗಳೂ 1900ರ ಮೊತ್ತಮೊದಲ ಒಲಿಂಪಿಕ್ಸ್ನಲ್ಲಿ ನಾರ್ಮನ್ ಪ್ರಿಚರ್ಡ್‍ 200ಮೀ ಓಟ ಹಾಗೂ ಹರ್ಡಲ್ಸ್‌ನಲ್ಲಿ ದೊರಕಿಸಿಕೊಟ್ಟದ್ದು! ನಾವಿನ್ನೂ 1960ರ, ಮಿಲ್ಖಾ ಸಿಂಗ್‍ರ ಒಲಿಂಪಿಕ್ಸ್ ಓಟವನ್ನೇ ಕಥೆಯಾಗಿಟ್ಟುಕೊಂಡು 'ಭಾಗ್ ಮಿಲ್ಖಾ ಭಾಗ್' ಸಿನಿಮಾ ಮಾಡಿ ಸಂಭ್ರಮಿಸುತ್ತಿದ್ದೇವೆ!

ಇನ್ನೂ ಅನೇಕ ಮೇರಿಕೋಮ್, ಸೈನಾ ನೆಹ್ವಾಲ್ ಹಾಗೂ ಮಿಲ್ಖಾ ಸಿಂಗ್‍ರನ್ನು ತಯಾರಿಸುವುದಿದೆ. ಬೇಸಿಗೆ ಶಿಬಿರಗಳಿಗೆ ಮಾತ್ರ ಸೀಮಿತವಾಗಿರುವ ಈಜು ಹಾಗೂ ಸ್ಕೇಟಿಂಗ್‍ಗಳನ್ನು ಅದರಾಚೆಗೂ ವಿಸ್ತರಿಸಬೇಕಾಗಿದೆ. ಕಳೆದ ವರ್ಷದಿಂದ ಭಾರತದ ಹಾಕಿ ಲೀಗ್ ಪಂದ್ಯಗಳು ಶುರುವಾಗಿವೆ. ಈ ವರ್ಷದ ಮಾರ್ಚ್‌ನಲ್ಲಿ ಆನಂದ್ ಮಹೀಂದ್ರ ಹಾಗೂ ಚಾರು ಶರ್ಮ ಸೇರಿ ಭಾರತದ ಕಬಡ್ಡಿ ಲೀಗ್ ಶುರು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಳುಗಳು ಭಾಗವಹಿಸಲಿರುವ ಈ ಪಂದ್ಯಗಳಿಗೆ ನಮ್ಮ ಪ್ರೋತ್ಸಾಹದ ಅವಶ್ಯಕತೆ ಬಹಳ ಇದೆ.

ಕೋಟಿಗಟ್ಟಲೆಗೆ ಹರಾಜಾಗುವ, ಬ್ರ್ಯಾಂಡ್‍ಗಳ ರಾಯಭಾರಿಗಳಾಗಿ ಇನ್ನಷ್ಟು ಕೋಟಿ ಗಳಿಸುವ, ಮತ್ತಷ್ಟು ಕೋಟಿಗಳ ದುರಾಸೆಗೆ ಬಿದ್ದು 'ಫಿಕ್ಸಿಂಗ್'ಗೆ ಇಳಿದಿರುವ ನಮ್ಮ ಕ್ರಿಕೆಟಿಗರುಗಳಿಗೆ ನಮ್ಮ ಮುನಿಸು ತಟ್ಟುವುದು ಹೇಗೆ? ಕೆಲವೊಮ್ಮೆ ಕೈಯ ಗಡಿಯಾರ ತಿರುಗಿಸಿ, ಕೆಲವೊಮ್ಮೆ ಕತ್ತಿನ ಲಾಕೆಟ್ ಸರಿ ಮಾಡಿಕೊಂಡು ಮತ್ತೆ ಕೆಲವೊಮ್ಮೆ ಪ್ಯಾಂಟ್ ಜೇಬಿನಲ್ಲಿ ಟವಲ್ಲು ಸಿಕ್ಕಿಸಿಕೊಂಡು 'ಸ್ಪಾಟ್ ಫಿಕ್ಸಿಂಗ್'ನ ಕರಾರಿನಂತೆ ತಮ್ಮ ಬುಕ್ಕಿಗಳಿಗೆ ಸಿಗ್ನಲ್ ಕೊಡುತ್ತಿರುವ ಇವರು ‘ಕ್ರಿಕೆಟ್ ಇನ್ನು ಬರೀ ಆಟವಾಗಿ ಉಳಿದಿಲ್ಲ’ ಎಂದು ನಮಗೂ ಸಿಗ್ನಲ್ ಕೊಡುತ್ತಿರುವುದು ನಮಗೇಕೆ ಅರ್ಥವಾಗುತ್ತಿಲ್ಲ? ಪರದೆಯ ಮೇಲಿನ ಆಟಕ್ಕೆ ಕೇಕೆ ಹಾಕುವ ನಾವು ಪರದೆಯ ಹಿಂದಿನ ಪದರಗಳನ್ನು ಕೆದಕಲು ಏಕೆ ಮುಂದಾಗುತ್ತಿಲ್ಲ?

ಇಂದು BCCI ವಿಶ್ವದ ಶ್ರೀಮಂತ ಕ್ರೀಡಾ ಪ್ರಾಧಿಕಾರವಾಗಿರಬಹುದು, ಆದರೆ ಭಾರತದ ಕ್ರಿಕೆಟ್ ಪ್ರೇಮಿ ಬಡವಾಗಿದ್ದಾನೆ. ಆತ್ಮಸಾಕ್ಷಿಯ ವಿಚಾರದಲ್ಲಂತೂ ಖಂಡಿತ ಹೌದು!

No comments:

Post a Comment