Tuesday, 24 June 2014

ಸ್ಮಾರಕವಾಗಲಿ ಈ ನೌಕೆ, ಸ್ವಾಭಿಮಾನವ ಮುರಿಯಬೇಕೇಕೆ?

ಈಗ್ಗೆ ಕೆಲ ದಿನಗಳ ಹಿಂದೆ ಆನಂದ್ ಖಾರ್ಡೆ ಎಂಬುವರ ಅಹವಾಲೊಂದು ಮಿಂಚಂಚೆಯಲ್ಲಿ ಹರಿದಾಡುತ್ತಿತ್ತು. ಅಹವಾಲಿನ ಉದ್ದೇಶವೇನು ಗೊತ್ತೇ? ನಮ್ಮ ದೇಶದ ಹೆಮ್ಮೆಯ ಯುದ್ಧನೌಕೆ ಐಎನ್‍ಎಸ್ ವಿಕ್ರಾಂತ್‍ ಗುಜರಿಗೆ ಹೋಗದಂತೆ ತಡೆದು ಅದನ್ನು ಒಂದು ಸ್ಮಾರಕವನ್ನಾಗಿ ಪರಿವರ್ತಿಸುವುದು! ಸಾಧ್ಯವಾದಷ್ಟೂ ಜನರಿಗೆ ಈ ಅಹವಾಲು ತಲುಪಿಸಿ, ಅವರ ಹಸ್ತಾಕ್ಷರಗಳನ್ನು ಸಂಗ್ರಹಿಸಿ ಯುದ್ಧನೌಕೆಯನ್ನು ಈಗಿರುವಂತೆಯೆ ಉಳಿಸಿಕೊಳ್ಳುವ ಅಭಿಯಾನ ಅದಾಗಿತ್ತು. ಅಂದು ನಾವು ವ್ಯಕ್ತಪಡಿಸಿದ ಬೆಂಬಲ ಈಗ ಫಲ ಕೊಟ್ಟಿದೆ. ಸರ್ವೋಚ್ಚ ನ್ಯಾಯಾಲಯ ಐಎನ್‍ಎಸ್ ವಿಕ್ರಾಂತ್‍‍ ಕುರಿತ ತೀರ್ಪನ್ನು ತಡೆ ಹಿಡಿದಿದೆ. ಭಾರತೀಯ ನೌಕಾದಳದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಯುದ್ಧವೊಂದರಲ್ಲಿ ನಿರ್ಣಾಯಕ ಪಾತ್ರ ವಹಿಸಿ ಗೆಲುವು ತಂದುಕೊಟ್ಟ ಐಎನ್‍ಎಸ್ ವಿಕ್ರಾಂತ್‍ನ ಬದುಕಲ್ಲಿ ಬಹಳಷ್ಟು ನಡೆದು ಹೋಗಿದೆ. ಒಮ್ಮೆ ಅದರ ಜಾತಕ ನೋಡಿಬಿಡೋಣ ಬನ್ನಿ.ಎಚ್‍ಎಮ್‍ಎಸ್ ಹರ್ಕ್ಯುಲಿಸ್ ಎಂಬ ಜನ್ಮನಾಮದೊಂದಿಗೆ 1943ರ ನವೆಂಬರ್ 12ರಂದು ಬ್ರಿಟನ್ನಿನಲ್ಲಿ ಅಸ್ತಿತ್ವಕ್ಕೆ ಬಂದ ಈ ಯುದ್ಧನೌಕೆ ಎರಡನೆಯ ಮಹಾಯುದ್ಧದ ಕಾರಣದಿಂದ ನಿರೀಕ್ಷಿತ ವೇಗದಲ್ಲಿ ಪೂರ್ಣಗೊಳ್ಳಲಿಲ್ಲ. ನಂತರ ಭಾರತ ಇದನ್ನು 1957ರಲ್ಲಿ ವಿಕ್ರಾಂತ್ ಎಂಬ ಹೆಸರಿನಲ್ಲಿ ದತ್ತು ಪಡೆಯಿತು. ಆಗ ಭಾರತೀಯ ಹೈ ಕಮಿಷನರ್ ಆಗಿದ್ದ ವಿಜಯಲಕ್ಷ್ಮಿ ಪಂಡಿತ್ ಅವರು ಇದನ್ನು ಸೇನೆಗೆ ಹಸ್ತಾಂತರಿಸಿದ್ದು 1961ರ ಮಾರ್ಚ್ ನಾಲ್ಕರಂದಾದರೆ ಇದು ಅಧಿಕೃತವಾಗಿ ನೌಕಾದಳಕ್ಕೆ ಸೇರ್ಪಡೆಗೊಂಡಿದ್ದು 1961ರ ನವೆಂಬರ್ ಮೂರರಂದು. ಮರು ವರ್ಷವೇ ನಡೆದ ಭಾರತ-ಚೀನಾದ ಘನಘೋರ ಕದನ ಕಂಡು ನಮ್ಮ ಅಂದಿನ ಪುಕ್ಕಲು ಪ್ರಧಾನಿ ಎಷ್ಟು ವಿಚಲಿತರಾಗಿದ್ದರೆಂದರೆ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನೆಲ್ಲ ವಾಪಸ್ ಕರೆಸಿಕೊಂಡುಬಿಟ್ಟರು. ಪರಿಣಾಮ, ಚೀನ ನಮ್ಮನ್ನು ತರಿದು ಹಾಕಿತು. ಮತ್ತೆ 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧವಾದಾಗಲೂ ನಮ್ಮ ನೌಕಾಪಡೆಗೆ ಸುಮ್ಮನಿರುವಂತೆ ಆದೇಶಿಸಲಾಯಿತು. ಬಂದರಿನಲ್ಲಿ ಲಂಗರು ಹಾಕಿಸಿಕೊಂಡು ಕುಳಿತ ವಿಕ್ರಾಂತ್ ಇದನ್ನೆಲ್ಲ ಸುಮ್ಮನೆ ನೋಡುತ್ತಿತ್ತು! ಆದರೆ 1971ರಲ್ಲಿ ಮತ್ತೆ ಪಾಕಿಸ್ತಾನ ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಾಗ ಮೊತ್ತ ಮೊದಲ ಬಾರಿಗೆ ಸರಿಯಾದ ರಣತಂತ್ರ ರೂಪಿಸುವ ಅಗತ್ಯವನ್ನು ನಮ್ಮ ನಾಯಕರು ಮನಗಂಡರು. ಸ್ಪಷ್ಟ ರೂಪು-ರೇಷೆಯೊಂದಿಗೆ ಕಣಕ್ಕಿಳಿಯುವಂತೆ ಸೂಚಿಸಿದ ಇಂದಿರಾ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನಗಳನ್ನು ಜಲಮಾರ್ಗದಲ್ಲಿ ಕಟ್ಟಿಹಾಕುವಂತೆ ನೌಕಾಪಡೆಗೆ ಸೂಚಿಸಿದರು.

ಆಗ ಕ್ಯಾಪ್ಟನ್ ಸ್ವರಾಜ್ ಪ್ರಕಾಶ್‍ರ ನೇತೃತ್ವದಲ್ಲಿ ಹೊರಟಿತು ನೋಡಿ ಐಎನ್ಎಸ್ ವಿಕ್ರಾಂತ್!

ಅಂದಿನ ಕಾಲಕ್ಕೆ ಭಾರತದ ಬಳಿಯಿದ್ದ ಅತ್ಯುನ್ನತ ಹಾಗೂ ಅತಿದೊಡ್ಡ ಯುದ್ಧನೌಕೆ ಇದೊಂದೆ! ಎಲ್ಲವೂ ಸರಿಯಾಗಿದ್ದಿದ್ದರೆ, ನೇರವಾಗಿ ಕರಾಚಿಯನ್ನೇ ಮುತ್ತಿಬಿಡುವ ಇರಾದೆಯಿತ್ತು ನಮ್ಮ ಸೇನೆಗೆ. ಆದರೆ ತಾಂತ್ರಿಕ ದೋಷದಿಂದಾಗಿ ಒಂದು ಬಾಯ್ಲರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ವಿಕ್ರಾಂತ್‍ ರಿಪೇರಿಗೆ ಬಂದಿತ್ತು. ಯುದ್ಧಕ್ಕೆ ಸನ್ನದ್ಧವಾಗಲು ಅದಕ್ಕೆ ಒಂದು ವರ್ಷವಾದರೂ ಹಿಡಿಯುವುದೆಂದು ಅಂದಾಜಿಸಲಾಗಿತ್ತು. ತುರ್ತು ಪರಿಸ್ಥಿತಿ ಬಂದೊದಗಿದ್ದರಿಂದ ಅವಸರದ ತೇಪೆ ಹಚ್ಚಲಾಯಿತಾದರೂ ಹೊಡೆತ ಬಿದ್ದದ್ದು ಅದರ ಕ್ಷಿಪ್ರಗತಿಯ ಚಲನೆಗೆ! ಆದರೂ ಯುದ್ಧ ಶುರುವಾದ ದಿನ, ಅಂದರೆ ಡಿಸೆಂಬರ್ ನಾಲ್ಕರಂದು, ಪೂರ್ವ ಪಾಕಿಸ್ತಾನದ ಬಂದರುಗಳನ್ನು ಧ್ವಂಸಮಾಡುವ ಗುರಿಯೊಂದಿಗೆ ಅಂಡಮಾನ್-ನಿಕೋಬಾರ್ ದ್ವೀಪಸಮೂಹಗಳ ಬಂದರಿನಿಂದ ಮುನ್ನಡೆಯಿತು ವಿಕ್ರಾಂತ್.

ಪಾಕಿಸ್ತಾನಕ್ಕೆ ಮೊದಲಿನಿಂದಲೂ ವಿಕ್ರಾಂತ್‍ನ ಮೇಲೊಂದು ಕಣ್ಣಿದ್ದೇ ಇತ್ತು. 1965ರ ಯುದ್ಧದಲ್ಲೇ ತಾನು ಅದನ್ನು ಮುಳುಗಿಸಿಬಿಟ್ಟಿದ್ದೇನೆಂದು ಎಲ್ಲೆಡೆ ಡಂಗುರ ಸಾರಿಕೊಂಡು ಬಂದಿದ್ದ ಪಾಕಿಸ್ತಾನ ತನ್ನ ಮಾತನ್ನು ಈಗಲಾದರೂ ನಿಜ ಮಾಡಿಕೊಳ್ಳುವ ಹವಣಿಕೆಯಲ್ಲಿ ಜಲಾಂತರ್ಗಾಮಿ ಯುದ್ಧನೌಕೆ ಪಿಎನ್‍ಎಸ್ ಘಾಜಿಯನ್ನು ಸದ್ದಿಲ್ಲದೆ ವಿಕ್ರಾಂತ್‍ನೆಡೆಗೆ ತೇಲಿಬಿಟ್ಟಿತು. ಪಾಪ, ಅದರ ಕನಸು ನನಸಾಗಲೇ ಇಲ್ಲ. ವಿಶಾಖಪಟ್ಟಣವನ್ನೂ ತಲುಪುವ ಮೊದಲೇ ನಮ್ಮ ಇನ್ನೊಂದು ಯುದ್ಧ ನೌಕೆ ಐಎನ್‍ಎಸ್ ರಜಪೂತ್ನ ದಾಳಿಯಿಂದ ಸಮುದ್ರ ತಳದಲ್ಲೇ ತುಂಡಾಯಿತು ಘಾಜಿ. ಮುನ್ನಡೆದ ವಿಕ್ರಾಂತ್ ಚಿತ್ತಗಾಂಗ್‍ಗೆ ಹತ್ತಿರವಾಗುತ್ತಿದ್ದಂತೆ ಅದರ ಮೇಲೆ ರೆಕ್ಕೆ ಹರಡಿ ಕುಳಿತ ವಾಯುಸೇನೆಯ ಎಂಟು ಸೀ ಹಾಕ್  ವಿಮಾನಗಳು ಆಕಾಶಕ್ಕೆ ಚಿಮ್ಮಿದವು. ಮೊದಲ ಬಲಿ ಕಾಕ್ಸ್ ಬಜಾರ್ ಬಂದರು. ನಂತರ ಧೂಳಿಪಟವಾಗಿದ್ದು ಖುಲ್ನ. ನೋಡನೋಡುತ್ತಿದ್ದಂತೆ ಚಿತ್ತಗಾಂಗ್ ಬಂದರೂ ಪೂರ್ಣ ಧ್ವಂಸ! ಆರು ದಿನಗಳ ಅವಿರತ ಹೋರಾಟದ ಫಲವಾಗಿ ಪೂರ್ವ ಪಾಕಿಸ್ತಾನದ ಹಡಗು ಯುದ್ಧನೌಕೆಗಳೆಲ್ಲ ಹೇಳ ಹೆಸರಿಲ್ಲದಂತಾದವು. ಮತ್ತೊಂದೆಡೆ ಕರಾಚಿಯನ್ನು ಗುರಿಯಾಗಿಸಿ ಹೊರಟ ಪಶ್ಚಿಮ ನೌಕಾ ನೆಲೆಯ ಕ್ಷಿಪಣಿ ದೋಣಿಗಳು ನಿರೀಕ್ಷಿಸಿದ್ದಂತೆಯೇ ಅದನ್ನೂ ಕೈವಶ ಮಾಡಿಕೊಂಡವು. ಎಡ-ಬಲಗಳೆರಡೂ ಕಟ್ಟಿ ಹಾಕಲ್ಪಟ್ಟ ಪಾಕಿಸ್ತಾನದ ಜಲಮಾರ್ಗ ಪೂರ್ಣವಾಗಿ ಭಾರತದ ಕೈವಶವಾಯಿತು. ಪಾಕಿಸ್ತಾನ ಒಂದು ಹಡಗನ್ನೂ ನೀರಿಗಿಳಿಸಲಾಗಲಿಲ್ಲ. ಯಾವ ಮಿತ್ರರೂ ಅದರ ಸಹಾಯಕ್ಕೆ ಧಾವಿಸುವುದೂ ಆಗಲಿಲ್ಲ. ಕೆಲವೇ ದಿನಗಳಲ್ಲಿ ಸುಮಾರು 90 ಸಾವಿರ ಯೋಧರ ಶರಣಾಗತಿಯೊಂದಿಗೆ ಸೋಲೊಪ್ಪಿಕೊಂಡಿತು. ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯ ಯುದ್ಧಗಳಲ್ಲೊಂದು ಎಂದು ಪರಿಗಣಿಸುವ ಇದು ನಡೆದದ್ದು ಒಟ್ಟು 13 ದಿನಗಳು ಮಾತ್ರ. ಶತ್ರುವನ್ನು ಸದೆಬಡಿಯುವಲ್ಲಿ ಮಹತ್ವದ ಪಾತ್ರ ವಹಿಸಿದ ವಿಕ್ರಾಂತ್ ತನ್ನ ತಂಡಕ್ಕೆ ಗಳಿಸಿಕೊಟ್ಟ ಕೀರ್ತಿ ಎಷ್ಟು ಗೊತ್ತೇ? 2 ಮಹಾವೀರ ಹಾಗೂ 12 ವೀರ ಚಕ್ರಗಳು! ಪರಿಣಾಮ, ಸೇನಾಧಿಕಾರಿಗಳ ಹಾಗೂ ಜನರ ಕಣ್ಮಣಿಯಾಗಿಬಿಟ್ಟಿತು. ಆಗಬೇಕಾದ್ದೇ. ಕುಳಿತು ಓದುವ ನಮಗೇ ಇಷ್ಟು ರೋಮಾಂಚನವಾಗಬೇಕಾದರೆ ದಿನಗಟ್ಟಲೆ ಅದರೊಂದಿಗೇ ಒಡನಾಡಿದ , ಅಭೂತಪೂರ್ವ ವಿಜಯವೊಂದರ ರೂವಾರಿಯಾದ ಅದರ ಬಗ್ಗೆ ನಮ್ಮ ಸೇನಾಧಿಕಾರಿಗಳಿಗೆ ವಿಶೇಷ ಮಮತೆ ಇರಬೇಕಾದ್ದು ಸಹಜವೇ ಅಲ್ಲವೇ?

ಯುದ್ಧದ ನಂತರವೂ ನೂರಾರು ಯೋಧರ ತರಬೇತಿಗೆ ಬಳಕೆಯಾದ ವಿಕ್ರಾಂತ್ 1997ರಲ್ಲಿ ಅಧಿಕೃತವಾಗಿ ಸೇನೆಯಿಂದ ನಿವೃತ್ತವಾಯಿತು. ಅದರ ಪ್ರಸಿದ್ಧಿ ಹಾಗೂ ಅದರೊಡನೆ ಬೆಸೆದುಕೊಂಡಿದ್ದ ಬಂಧದಿಂದಾಗಿ ಸೇನಾಧಿಕಾರಿಗಳು ಹಾಗೂ ಜನಸ್ತೋಮ ವಿಜಯದ ಸ್ಮರಣಾರ್ಥ ಅದನ್ನೊಂದು ಸ್ಮಾರಕವನ್ನಾಗಿ ಮಾರ್ಪಡಿಸುವ ಬೇಡಿಕೆಯನ್ನಿಟ್ಟವು. ಇಷ್ಟು ಹೊತ್ತಿಗೆ ಮುಂಬಯಿಯ ಪಶ್ಚಿಮ ನೌಕಾ ವಲಯ ಸೇರಿದ್ದ ವಿಕ್ರಾಂತ್‍ನ ಕುರಿತ ನಿರ್ಣಯ ಸಹಜವಾಗಿಯೇ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ನಾರಾಯಣ ರಾಣೆಯವರ ಹೆಗಲೇರಿತು. ತಾರಮ್ಮಯ್ಯ ಎಂದು ಕೈಯಾಡಿಸಿಬಿಟ್ಟರು ರಾಣೆ. ಮತ್ತ್ಯಾರ ಬೆನ್ನು ಬೀಳುವುದು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ಕಾರ್ಗಿಲ್ ಕದನ ಶುರುವಾಯಿತು. ಆ ಅಧ್ಯಾಯ ಮುಗಿಯುವ ಹೊತ್ತಿಗೆ ಬಾಳಾ ಠಾಕ್ರೆಯವರು ಆಸಕ್ತಿ ತೋರಿಸಿದರೂ ಸ್ಮಾರಕದ ಕನಸು 2001ರಲ್ಲಿ  ನನಸಾಗಿದ್ದು ತಾತ್ಕಾಲಿಕವಾಗಿ ಮಾತ್ರ. ಆಗ ವಿಕ್ರಾಂತ್ ಜನರ ವೀಕ್ಷಣೆಗೆ ಮುಕ್ತವಾಗಿ ಲಭ್ಯವಾಯಿತು. ವಿಪರ್ಯಾಸ ನೋಡಿ. ಜನರಿಂದ ಉತ್ತಮ ಪ್ರತಿಕ್ರಿಯೆಯೇನೋ ದೊರೆಯಿತು ಆದರೆ ಉದ್ಯಮ ವರ್ಗದ ಕುಳಗಳ್ಯಾರೂ ಇತ್ತ ತಿರುಗಿಯೂ ನೋಡಲಿಲ್ಲ. ಸೂಕ್ತ ಪ್ರಾಯೋಜಕರಿಲ್ಲದೆ ಹಣಕಾಸಿನ ನೆರವಿಲ್ಲದೆ ಸೊರಗತೊಡಗಿತು ವಿಕ್ರಾಂತ್‍ನ ದೈತ್ಯ ಶರೀರ. 2010ರ ಹೊತ್ತಿಗೆ ಪರಿಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ಸ್ಮಾರಕವನ್ನು ಮುಚ್ಚಲಾಯಿತು. ಕೊನೆಗೆ 2013ರಲ್ಲಿ ನಿರ್ವಹಣಾ ವೆಚ್ಚ ಸಾಲದೆ, ಅನ್ಯ ಮಾರ್ಗವಿಲ್ಲದೆ ಹರಾಜಿನ ಹೊಸ್ತಿಲಿಗೆ ಬಂದು ನಿಂತಿತು ವಿಕ್ರಾಂತ್‍!

ಇದನ್ನು ನಮ್ಮ ಅಖಂಡತೆಯ, ಸ್ವಾಭಿಮಾನದ ಪ್ರತೀಕವೆಂದು ಭಾವಿಸಿದ್ದ, ಮುಂಬೈನ ಕಿರಣ್ ಪೈಗಾಣ್‍ಕರ್ ಎಂಬ ಶ್ರೀಸಾಮಾನ್ಯರೊಬ್ಬರು ಸಮಿತಿಯೊಂದನ್ನು ರಚಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದರು. ಇದರಿಂದ ಪ್ರಯೋಜನವೇನಾದರೂ ಆಯಿತಾ? ಇಲ್ಲ. ಸರ್ಕಾರ ಹಾಗೂ ನೌಕಾದಳ ಎರಡೂ ದುಡ್ಡಿಲ್ಲವೆಂದು ಕೈಚೆಲ್ಲಿದ್ದರಿಂದ ವಿಧಿಯಿಲ್ಲದೆ 2014ರ ಜನವರಿಯಲ್ಲಿ ಮುಂಬೈ ನ್ಯಾಯಾಲಯ ಹರಾಜಿನ ತೀರ್ಮಾನಕ್ಕೆ ಸಮ್ಮತಿಯ ಅಂತಿಮ ಮುದ್ರೆಯನ್ನೊತ್ತಿತು.

ಅಂತರ್ಜಾಲದಲ್ಲಿ ನಡೆದ ಹರಾಜಿನಲ್ಲಿ ವಿಕ್ರಾಂತ್ ಹರಾಜಾಗಿದ್ದು 63.2 ಕೋಟಿ ರುಪಾಯಿಗಳಿಗೆ! ಕೊಂಡದ್ದು ಭಾವನಗರದಲ್ಲಿರುವ ಅಲಾಂಗ್ ಶಿಪ್ ಬ್ರೇಕರ್ಸ್ ಎಂಬ ಸಂಸ್ಥೆ. ಗೋವುಗಳು ಕಸಾಯಿಖಾನೆಗೆ ಹೋದರೆ ಆಗುವ ಕಥೆಯೇ ವಿಕ್ರಾಂತ್ ಅಲಾಂಗ್‍ಗೆ ಹೋದರೆ ಆಗುತ್ತಿತ್ತು. ಸ್ಮಾರಕವಾಗಿ ನಿಲ್ಲಬೇಕಾದ ಯುದ್ಧನೌಕೆ ಒಂದೊಂದೇ ಭಾಗವನ್ನು ಮುರಿಸಿಕೊಂಡು ಕಳಚಿ ಬೀಳುವುದನ್ನು ಸಹಿಸದ ಆನಂದ್ ಖಾರ್ಡೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಿ ಜನರ ಸಹಿ ಸಂಗ್ರಹಣೆ ಶುರು ಮಾಡಿದರು. ಆಗ ನಡೆಯಿತು ನೋಡಿ ಪವಾಡ! ಜನರ ಒತ್ತಡಕ್ಕೆ ಮಣಿದ ಸರ್ವೋಚ್ಚ ನ್ಯಾಯಾಲಯ ಮೇ 5ರ ತನ್ನ ತೀರ್ಪಿನಲ್ಲಿ ವಿಕ್ರಾಂತ್‍‍ನನ್ನು ಶಿಪ್ ಬ್ರೇಕರ್ಸ್ ಸಂಸ್ಥೆಗೆ ಹಸ್ತಾಂತರಿಸದಿರಲು ನಿರ್ಧರಿಸಿತು. ಏಕೆಂದರೆ ವಿಕ್ರಾಂತ್‍ನ ಪರವಾಗಿ ಸುಮಾರು 12,000ಕ್ಕೂ ಹೆಚ್ಚಿನ ಮಂದಿ ನಿಂತಿದ್ದರು. ಹಾಗೆ ನೋಡಿದರೆ 125 ಕೋಟಿಯ ಮುಂದೆ ಜುಜುಬಿ 12 ಸಾವಿರ ಯಾವ ಲೆಕ್ಕ ಅಲ್ಲವೇ? ಸಮಾಧಾನವೆಂದರೆ ಅಂತಿಮ ತೀರ್ಪು ಹೊರಬರಲಿರುವುದು ಜುಲೈನಲ್ಲಿ. ಈಗ ಖಾರ್ಡೆ ಮತ್ತವರ ತಂಡ ಮತ್ತೆ ಕಾರ್ಯೋನ್ಮುಖವಾಗಿದೆ. ಹೇಗಾದರೂ ಮಾಡಿ ಅಗತ್ಯವಿರುವ ಹಣಕಾಸಿನ ಬೆಂಬಲ ಗಿಟ್ಟಿಸಲೇಬೇಕೆಂಬ ಹಟಕ್ಕೆ ಬಿದ್ದಿದೆ.

ಇದೆಲ್ಲದರ ನಡುವೆ ಮೊನ್ನೆಯಷ್ಟೇ ಮೋದಿಯವರು ವಿಕ್ರಮಾದಿತ್ಯನನ್ನು ದೇಶಕ್ಕೆ ಅರ್ಪಿಸಿದ್ದಾರೆ. ವಿಕ್ರಾಂತನಿಗೆ ಹೋಲಿಸಿದರೆ ವಿಕ್ರಮಾದಿತ್ಯ ಅತೀವ ಬಲಶಾಲಿ. 45,000 ಟನ್ ತೂಕದ ಇದು ಮಿಗ್-29ಕೆ ಸೇರಿದಂತೆ 34 ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲುದು. ಅತ್ಯಂತ ಸುಸಜ್ಜಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ. ಇದರ ಸಾಮರ್ಥ್ಯ ಬೇರೆ ರಾಷ್ಟ್ರಗಳ ಜಂಘಾಬಲವನ್ನು ಎಷ್ಟು ಉಡುಗಿಸಿದೆಯೆಂದರೆ, ಕಳೆದ ನವೆಂಬರ್‍ನಲ್ಲಿ ರಷ್ಯಾದಲ್ಲಿ ಪರೀಕ್ಷೆಗೊಳಪಟ್ಟಿದ್ದಾಗ ನೇಟೊ ರಾಷ್ಟ್ರಗಳ ವಿಮಾನವೊಂದು ಸದ್ದಿಲ್ಲದೆ ಬಂದು ಇದರ ನೆತ್ತಿಯ ಮೇಲೆ ಹಾರಾಡಿತ್ತು. ತಕ್ಷಣವೇ ಬೆನ್ನು ಹತ್ತಿದ ರಷ್ಯಾದ ಮಿಗ್ 29ಕೆ ವಿಮಾನದ ಕೈಗೆ ಸಿಗದೆ ಹಾಗೇ ಪರಾರಿಯೂ ಆಯಿತು! ನಿಜ, ಒಂದಿಲ್ಲೊಂದು ಕಾರಣ ಕೊಟ್ಟು ಚೀನಾ ನಮ್ಮನ್ನು ಸುತ್ತುವರಿದಿರುವ ಈ ಹೊತ್ತಿನಲ್ಲಿ ನಮಗೆ ವಿಕ್ರಮಾದಿತ್ಯನ ಅಗತ್ಯ ಬಹಳವಿದೆ. ಇಂಥ ನೌಕೆ ನಮ್ಮದಾಗಿರುವ ಹೆಮ್ಮೆಯೂ ಇದೆ. ಹಾಗೇ ವಿಕ್ರಾಂತನನ್ನು ಉಳಿಸಿಕೊಳ್ಳುವ ಅಗತ್ಯವೂ ಇದೆ. ಐತಿಹ್ಯವಿರಲಿ ಬಿಡಲಿ, ತೀರಾ ಮಾಮೂಲಿ ಎನಿಸುವಂಥದ್ದನ್ನೆಲ್ಲ ಸ್ಮಾರಕದ ನೆಪದಲ್ಲಿ ಜೋಪಾನ ಮಾಡುವ, ಅತಿಯಾದ ಪ್ರಚಾರದಿಂದ ಪ್ರವಾಸಿಗಳನ್ನು ಸೆಳೆಯುವ ಪಾಶ್ಚಾತ್ಯ ರಾಷ್ಟ್ರಗಳನ್ನು ನಾವು ಈ ವಿಷಯದಲ್ಲಿ ಅನುಕರಿಸಲೇಬೇಕಿದೆ.

ನಮ್ಮ ಕಾರು, ಬೈಕು, ಮನೆಗಳನ್ನು ಅಸಾಧ್ಯ ಪ್ರೀತಿಸುತ್ತೇವೆ. ಸಾಕಿದ ನಾಯಿ ಬೆಕ್ಕುಗಳು ಸತ್ತರೆ ವರ್ಷಗಟ್ಟಲೆ ಅಳುತ್ತೇವೆ. ಹೆಮ್ಮೆಯ ಪ್ರತೀಕವಾದ ವಿಕ್ರಾಂತ್‍ನನ್ನು ತಬ್ಬಲಿಯಂತೆ ಗುಜರಿ ಅಂಗಡಿಗೆ ಕಳಿಸಿಬಿಡೋಣವೇ? ತಾಯಿ ಭಾರತಿಗೆ ನಾವಿಷ್ಟು ಜನ ಭಾರವಲ್ಲ. ಅವಳನ್ನು ರಕ್ಷಿಸಿದ, 20,000 ಟನ್ ತೂಕದ ವಿಕ್ರಾಂತ್ ನಮಗೆ ಭಾರವೇ? ನಾನು ನನ್ನದು ಎಂಬ ಸ್ವಾರ್ಥದ ಪರಿಧಿಯಲ್ಲಿ ಸೇರಿಸಿಕೊಂಡಾಗ ಮಾತ್ರ ವಿಕ್ರಾಂತ್ ಉಳಿಯಬಲ್ಲ. ನಿರ್ಧಾರ ನಮಗೇ ಬಿಟ್ಟದ್ದು!

No comments:

Post a Comment