Wednesday 11 June 2014

ಹದಿಮೂರರ ಪೋರಿಯೂ ನಮಗೆ ಬದುಕು ಕಲಿಸಬಲ್ಲಳು!

ಹದಿಮೂರು ವರ್ಷದ ಚುರುಕು ಹುಡುಗಿಯೊಬ್ಬಳು ಸತತವಾಗಿ ಎರಡು ವರ್ಷಗಳ ಕಾಲ ಹೊರಪ್ರಪಂಚದ ಸಂಪರ್ಕ ಕಡಿದುಕೊಂಡು ತನ್ನ ಕುಟುಂಬದೊಂದಿಗೆ ಅಜ್ಞಾತವಾಸದಲ್ಲಿರಬೇಕಾಗಿ ಬಂದರೆ ಏನಾಗಬಹುದು? ಹಣೆಬರಹವನ್ನು ಹಳಿಯುತ್ತ ದಿನದೂಡಬಹುದು. ತನಗೆ ಈ ದುರ್ಗತಿಯನ್ನು ತಂದಿತ್ತ ದೇವರನ್ನು ಶಪಿಸುತ್ತ ಕಣ್ಣೀರಿಡಬಹುದು ಅಥವಾ ಸುಮ್ಮನೆ ಕೊರಗಿ ಖಿನ್ನತೆಗೊಳಗಾಗಬಹುದು. ಅದೆಲ್ಲ ಬಿಟ್ಟು ತನ್ನ ನೋವು ಸಂಕಟ ತೊಳಲಾಟಗಳನ್ನು, ಆ ದಿನಗಳ ಚಿತ್ರಣವನ್ನು ತನ್ನ ಡೈರಿಯಲ್ಲಿ ಯಥಾವತ್ತಾಗಿ ದಾಖಲಿಸಿಟ್ಟು ಸಾವಿನ ನಂತರವೂ ಸ್ಮರಣೀಯಳಾಗಬಹುದೇ? ವ್ಯತಿರಿಕ್ತ ಪರಿಸ್ಥಿತಿಯನ್ನು ಎಳೆ‍ಎಳೆ‍ಯಾಗಿ ಬಿಡಿಸಿಟ್ಟು, ಸಣ್ಣ-ಪುಟ್ಟದ್ದಕ್ಕೆಲ್ಲ ಧೃತಿಗೆಡುವವರಿಗೆ ಸ್ಫೂರ್ತಿಯಾಗಿ ವಿಶ್ವಕ್ಕೇ ಮಾನವೀಯತೆಯ ಪಾಠ ಕಲಿಸುವ ಗುರುವಾಗಬಹುದೇ? ಹೌದು ಎನ್ನುತ್ತದೆ ಇತಿಹಾಸ. ತನ್ನ ಪುಟ್ಟ ಬದುಕನ್ನು ಡೈರಿಯ ಪುಟಗಳಲ್ಲಿ ಸ್ಫುಟವಾಗಿ ಬರೆದಿಟ್ಟು, ಸತ್ತ ಮೇಲೂ ತನ್ನ ಬರಹದಿಂದಲೇ ಬದುಕಿರುವ ಈ ಬಾಲೆಯ ಹೆಸರು 'ಆನ್ ಫ್ರ್ಯಾಂಕ್'.

ಆನ್ ಹುಟ್ಟಿದ್ದು 1929ನೇ ಇಸವಿಯ ಜೂನ್ 12ರಂದು, ಜರ್ಮನಿಯ ಫ್ರಾಂಕ್‍ಫರ್ಟ್ ಎಂಬಲ್ಲಿ. ಅಪ್ಪ ಓಟ್ಟೊ ಫ್ರ್ಯಾಂಕ್, ಅಮ್ಮ ಎಡಿತ್ ಹಾಗೂ ಅಕ್ಕ ಮಾರ್ಗೋಟ್‍ರನ್ನೊಳಗೊಂಡ ಸಣ್ಣ ಯಹೂದಿ ಕುಟುಂಬ ಇವರದ್ದು. ಅಪ್ಪ ಪುಸ್ತಕ ಪ್ರಿಯನಾದ್ದರಿಂದ ಮನೆಯಲ್ಲೇ ದೊಡ್ಡ ಗ್ರಂಥಾಲಯವಿತ್ತು. ಮಕ್ಕಳಿಗೂ ಪುಸ್ತಕಗಳನ್ನು ಓದಲು ಬಹಳ ಉತ್ತೇಜನವಿತ್ತು. 'ಆನ್‍'ಗೆ  ನಾಲ್ಕು ವರ್ಷಗಳಾಗುವವರೆಗೂ ಎಲ್ಲ ಮಾಮೂಲಾಗಿಯೇ ಇತ್ತು. ಆದರೆ 1933ರ ಮಾರ್ಚ್ 13ರಂದು ನಡೆದ ಚುನಾವಣೆಯಲ್ಲಿ ಹಿಟ್ಲರ್‍ನ ನಾಜಿ ಪಕ್ಷ ಗೆದ್ದೊಡನೆ ಯಹೂದಿಗಳಲ್ಲಿ ಸಣ್ಣ ಸಂಚಲನ ಶುರುವಾಯಿತು. ಚಾನ್ಸೆಲರ್ ಆಗಿ ನಿಯುಕ್ತನಾದ ಹಿಟ್ಲರ್ ನಿರೀಕ್ಷಿಸಿದ್ದಂತೆಯೇ ದೌರ್ಜನ್ಯಕ್ಕಿಳಿದ. ಅವನು ಮಾಡಿದ ಮೊತ್ತ ಮೊದಲ ಕೆಲಸ Concentration Camp ಎಂದು ಕರೆಯಲ್ಪಡುತ್ತಿದ್ದ ಸಮರ ಶಿಬಿರ(ಯುದ್ಧದ ಸೆರೆಯಾಳುಗಳನ್ನು ಕೂಡಿಡುವ ಶಿಬಿರ)ಗಳನ್ನು ಶುರುಮಾಡಿ ಒಂದು ವರ್ಷದಲ್ಲೇ ಸುಮಾರು 45 ಸಾವಿರ ಜನರನ್ನು ಅಲ್ಲಿಗೆ ದೂಡಿದ್ದು. ಆಗ ಜರ್ಮನಿಯನ್ನು ತೊರೆದ ಸುಮಾರು 3 ಲಕ್ಷ ಯಹೂದಿ ಕುಟುಂಬಗಳಲ್ಲಿ 'ಆನ್‍'ಳ ಕುಟುಂಬವೂ ಸೇರಿತ್ತು.

ಹೀಗೆ ಜರ್ಮನಿ ಬಿಟ್ಟು ಆಶ್ರಯ ಹುಡುಕಿಕೊಂಡು ಹೊರಟ ಈ ಕುಟುಂಬ ನೆಲೆ ಕಂಡುಕೊಂಡದ್ದು ಹಾಲೆಂಡ್‍ನಲ್ಲಿ. ಐದಾರು ವರ್ಷಗಳು ನೆಮ್ಮದಿಯಾಗಿ ಉರುಳಿದ್ದವೇನೋ, 1940ರ ಮೇ ತಿಂಗಳಿನಲ್ಲಿ ಹಾಲೆಂಡ್‍ನ ಮೇಲೆ ದಾಳಿ ನಡೆಸಿದ ಹಿಟ್ಲರ್‍ನ ಸೈನ್ಯ ಅದನ್ನು ಸುಲಭವಾಗಿ ವಶಪಡಿಸಿಕೊಂಡಿತು. ದುರುಳ ಹಿಟ್ಲರ್‍ನ ಯಹೂದಿ ವಿರೋಧಿ ಚಟುವಟಿಕೆಗಳು ಇಲ್ಲಿಯೂ ಗರಿಗೆದರಿದವು. ಯಹೂದಿಗಳೆಲ್ಲ ಹೆಸರು ನೋಂದಣಿ ಮಾಡಿಸುವುದು ಕಡ್ಡಾಯವಾಯಿತು. ಅಪ್ಪ ಓಟ್ಟೊ ತನ್ನ ಉದ್ಯಮವನ್ನು ಗೆಳೆಯರ ಹೆಸರಿಗೆ ಹಸ್ತಾಂತರಿಸಿದರೆ, ಓದಿನಲ್ಲಿ ಮುಂದಿದ್ದ ಅಕ್ಕ-ತಂಗಿಯರು ತಾವು ಹೋಗುತ್ತಿದ್ದ ಪ್ರತಿಷ್ಠಿತ ಶಾಲೆಗಳನ್ನು ಬಿಟ್ಟು ಯಹೂದಿಯರಿಗೆ ಮೀಸಲಿದ್ದ ಶಾಲೆ ಸೇರಬೇಕಾಯಿತು. ಅಕ್ಕ ಮಾರ್ಗೋಟ್ ತುಂಬಾ ಮೆದು ಸ್ವಭಾವದ ಅಂತರ್ಮುಖಿಯಾಗಿದ್ದರೆ ತಂಗಿ ಆನ್ ವಾಚಾಳಿ ಹಾಗೂ ನಿರ್ಭೀತ ವ್ಯಕ್ತಿತ್ವದವಳಾಗಿದ್ದಳು. ಹಿಟ್ಲರ್‍ನ ಸೇನೆ ಹೇರಿದ್ದ ನೂರೆಂಟು ನಿರ್ಬಂಧಗಳ ನಡುವೆಯೂ ಬದುಕು ಹೇಗೋ ಸಾಗುತ್ತಿತ್ತು. 1943ನೇ ಇಸವಿಯ ಜೂನ್ 12 'ಆನ್‍'ಳ 13ನೆಯ ಹುಟ್ಟುಹಬ್ಬ. ಅಂದು ತಾನು ಬಹಳ ದಿನಗಳಿಂದ ಬಯಸಿದ್ದ ಕೆಂಪು-ಬಿಳಿ ಚೌಕಗಳಿದ್ದ ಆಟೋಗ್ರಾಫ್ ಪುಸ್ತಕವೊಂದನ್ನು ಉಡುಗೊರೆಯಾಗಿ ಪಡೆದಳು. ಅದನ್ನು ಡೈರಿಯಂತೆ ಬಳಸುವ ನಿಶ್ಚಯ ಮಾಡಿ ಪ್ರತಿದಿನ ನಡೆಯುತ್ತಿದ್ದ ಘಟನೆಗಳನ್ನು ದಾಖಲಿಸತೊಡಗಿದಳು. 

ಜುಲೈ 1943ರ ಒಂದು ದುರ್ದಿನ - ಅಕ್ಕ ಮಾರ್ಗೋಟ್‍ಳಿಗೆ ಸಮರ ಶಿಬಿರವೊಂದನ್ನು ಸೇರುವ ನಿರ್ದೇಶನ ಬಂದಿತ್ತು. ಕ್ರೌರ್ಯದ ಪರಾಕಾಷ್ಠೆಯಾಗಿದ್ದ ಈ ಶಿಬಿರಗಳು ಯಹೂದಿಗಳನ್ನು ಜೀತದಾಳುಗಳಾಗಿ ದುಡಿಸಿಕೊಂಡು, ಉಪವಾಸ ಕೆಡವಿ, ದೈಹಿಕವಾಗಿ ಮಾನಸಿಕವಾಗಿ ಚಿತ್ರಹಿಂಸೆ ನೀಡಿ, ಕೆಲವೊಮ್ಮೆ ವಿಷಯುಕ್ತ ಅನಿಲ ತುಂಬಿದ ಕೊಠಡಿಗೆ ತಳ್ಳಿ ಕೊಲ್ಲಲ್ಲೆಂದೇ ನಿರ್ಮಿತವಾಗಿದ್ದವು. ಲ್ಲಿಗೆ ಹೋಗಿ ಸೇರುವುದೆಂದರೆ ಸಾವಿನ ಮನೆಯ ಕದ ತಟ್ಟುವುದೆಂದೇ ಅರಿವಿದ್ದ ಕುಟುಂಬಕ್ಕೆ ಭೂಗತವಾಗದೇ ಬೇರೆ ವಿಧಿಯಿರಲಿಲ್ಲ. ಕೆಲ ಸಹೋದ್ಯೋಗಿಗಳ ನೆರವಿನಿಂದ ಅಡಗುದಾಣವೊಂದನ್ನು ಪತ್ತೆಹಚ್ಚಿದ ಓಟ್ಟೋ ಜುಲೈ ಆರರ ಬೆಳಿಗ್ಗೆ ಮನೆಯವರೊಂದಿಗೆ ಹೊರಟ. ನಾಜಿ ಅಧಿಕಾರಿಗಳ ದಾರಿ ತಪ್ಪಿಸಲು ತಾನು ಸ್ವಿಟ್ಜರ್‍ಲ್ಯಾಂಡ್‍ಗೆ ಹೋಗುತ್ತಿರುವುದಾಗಿ ಚೀಟಿ ಬರೆದಿಟ್ಟ. ಯಹೂದಿಗಳು ಸಾರ್ವಜನಿಕ ವಾಹನಗಳನ್ನು ಬಳಸುವುದು ನಿಷಿದ್ಧವಾಗಿದ್ದರಿಂದ ಎಲ್ಲರೂ ಮೈಲುಗಟ್ಟಲೆ ನಡೆದು ಅಡಗುದಾಣ ತಲುಪಿದರು.

ಹಾಗೆ ಕದ್ದು ಮುಚ್ಚಿ ಬದುಕುವುದೂ ಒಂದು ದೊಡ್ಡ ಸವಾಲೇ ಆಗಿತ್ತು. ಹೊರಗೆ ಅಡ್ಡಾಡುವುದಿರಲಿ, ಕಿಟಕಿ ತೆರೆಯುವ ಹಾಗೂ ಇರಲಿಲ್ಲ. ಸಿಕ್ಕಿಹಾಕಿಕೊಂಡರೆ ಇವರ ಜೀವದ ಜೊತೆಗೆ ಇವರಿಗೆ ಆಶ್ರಯ ನೀಡಿದ್ದ ಓಟ್ಟೋನ ಸಹೋದ್ಯೋಗಿಗಳ ಜೀವಕ್ಕೂ ಅಪಾಯವಿತ್ತು. ಊಟ ತಿಂಡಿಗಳ ವಿಷಯದಲ್ಲೂ ಅಷ್ಟೆ. 'ಗೆಸ್ಟಾಪೊ'(ನಾಜಿ ಅಧಿಕಾರಿ)ಗಳು ಪ್ರತಿ ಮನೆಯನ್ನೂ ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆಂದರೆ ಪ್ರತಿ ತಿಂಗಳು ಕೊಂಡುಕೊಳ್ಳುವ ರೇಷನ್‍ನಲ್ಲಿ ಅನಗತ್ಯ ಹೆಚ್ಚಳವಾದರೆ ನಿಂತ ನಿಲುವಲ್ಲೇ ಮನೆಯಲ್ಲಿ ಎಷ್ಟು ಮಂದಿ ಇದ್ದಾರೆಂಬ ತಪಾಸಣೆಗಿಳಿದುಬಿಡುತ್ತಿದ್ದರು. ಶಂಕೆಗೆ ಸ್ವಲ್ಪವೂ ಆಸ್ಪದ ಕೊಡುವ ಹಾಗಿರಲಿಲ್ಲ. ಆದ್ದರಿಂದ ಅವರು ಮಾಡುವ ಅಡುಗೆಯಲ್ಲೇ ಮಿಗಿಸಿಕೊಟ್ಟದ್ದನ್ನು ಇವರು ಹಂಚಿಕೊಂಡು ತಿನ್ನಬೇಕಿತ್ತು. ಸಾಲದ್ದಕ್ಕೆ ಈ ಗುಂಪಿಗೆ ಇವರ ಹಾಗೇ ಇನ್ನೂ ನಾಲ್ಕು ಜನ ಬಂದು ಸೇರಿದ್ದರು. ಇರಲು ಸರಿಯಾದ ಜಾಗವಿರದೆ, ಹೊಟ್ಟೆ ತುಂಬ ಆಹಾರವಿರದೆ, ಯಾರ ಕಿವಿಗಾದರೂ ಬಿದ್ದರೆ ಎಂಬ ಭೀತಿಯಲ್ಲಿ ಜೋರಾಗಿ ಮಾತನ್ನೂ ಆಡದೆ ಪ್ರತಿ ಕ್ಷಣವನ್ನೂ ಹೆದರುತ್ತಲೇ ಕಳೆಯಬೇಕಾದ ಅನಿವಾರ್ಯತೆ ಬಂದೊದಗಿತ್ತು.

ಇಂಥ ಸನ್ನಿವೇಶದಲ್ಲಿ ಆನ್ ತನ್ನ ಡೈರಿಯೊಡನೆ ಮಾತಿಗಿಳಿದಳು. ತನ್ನ ಒಂಟಿತನ, ಹತಾಶೆ, ಮನೆಯವರೆಲ್ಲರ ಅಸಹಾಯಕತೆ, ಸಂಬಂಧಗಳ ಪರಿಭಾಷೆಗಳೆಲ್ಲ ಅಕ್ಷರಗಳಾಗಿ ಮೂಡಿದವು. ಮಾತುಮಾತಿಗೂ ವ್ಯಗ್ರಳಾಗುತ್ತಿದ್ದ ಅಮ್ಮನನ್ನು ಮೊದಮೊದಲು ತೆಗಳಿದ ಆನ್ ಕೊನೆಗೆ ಅವಳನ್ನು ತೆಗಳಿದ್ದಕ್ಕೆ ತನ್ನ ಮೇಲೇ ಅಸಹ್ಯಪಟ್ಟುಕೊಂಡಳು. ಮನೆಯವರೆಲ್ಲರಲ್ಲೂ ಹಿಂದೆಂದೂ ಇರದ ಸೌಹಾರ್ದ ಸಾಮರಸ್ಯ ಮೂಡಿರುವುದನ್ನು ಗುರುತಿಸಿದಳು. ಕಳೆದು ಹೋಗುತ್ತಿದ್ದ ತನ್ನ ಮಾನಸಿಕ ಸಮತೋಲನ, ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಹೆಣಗುತ್ತಿದ್ದ ರೀತಿಗಳನ್ನೂ ದಾಖಲಿಸಿದಳು. ತನ್ನ ಕುಟುಂಬಕ್ಕೆ ಆಶ್ರಯ ಕೊಟ್ಟಿದ್ದವರು ಬಂದು ಹೇಳುತ್ತಿದ್ದ ನಾಜಿಗಳ ದೌರ್ಜನ್ಯದ ಘಟನೆಗಳನ್ನು ಯಥಾವತ್ತಾಗಿ ಬರೆಯುತೊಡಗಿದಳು.

ತಾನು ಬರೆಯುತ್ತಿರುವ ಡೈರಿ ತನ್ನ ಓದಿಗೆ ಮಾತ್ರ ಸೀಮಿತ ಎಂದು ಮೊದಲು ಭಾವಿಸಿದ್ದ ಅವಳಿಗೆ 1944ರ ಮಾರ್ಚ್ 28ರಂದು ಹಾಲೆಂಡ್‍ನ ಸಚಿವ ಗೆರಿಟ್ ರೇಡಿಯೋದಲ್ಲಿ ಮಾಡಿದ ಭಾಷಣ ಬೇರೆಯ ದಿಕ್ಕನ್ನೇ ತೋರಿಸಿತು. ಅಂದು ಮಾತನಾಡಿದ ಗೆರಿಟ್, 'ಇತಿಹಾಸವನ್ನು ಬರೀ ಸರ್ಕಾರಿ ಕಾಗದ ಪತ್ರಗಳಿಂದ ಬರೆಯಲಾಗುವುದಿಲ್ಲ. ಇಂದು ನಾವು ಅನುಭವಿಸುತ್ತಿರುವುದೆಲ್ಲ ಮುಂದಿನ ಪೀಳಿಗೆಗೆ ಲಭ್ಯವಾಗಬೇಕಾದರೆ ಇದನ್ನು ಸಾಮಾನ್ಯ ಜನರು ಪತ್ರಗಳಲ್ಲಿ, ಡೈರಿಗಳಲ್ಲಿ ದಾಖಲಿಸಿಡಬೇಕು. ಈ ಎಲ್ಲ ಮಾಹಿತಿಯನ್ನೂ ಒಟ್ಟಾಗಿ ಕಲೆ ಹಾಕಿದಾಗ ಮಾತ್ರ ನಮ್ಮ ಹೋರಾಟದ ನಿಜ ಸ್ವರೂಪದ ಚಿತ್ರಣ ಸಿಗುವುದು' ಎಂದರು. ಇದನ್ನು ಕೇಳಿದ ಆನ್ ತನ್ನ ಡೈರಿಯನ್ನು ತನಗೆ ಮಾತ್ರ ಮೀಸಲಿಟ್ಟುಕೊಳ್ಳುವ ವಿಚಾರವನ್ನು ಕೈಬಿಟ್ಟು ಯುದ್ಧಸಂಬಂಧಿ ವಿವರಗಳಿಗೆ ಹೆಚ್ಚು ಮಹತ್ವ ಕೊಟ್ಟಳು. ಹಲವೆಡೆ ಬರೆದದ್ದನ್ನು ತಿದ್ದಿ ಮತ್ತೆ ಬರೆದಳು. ತನ್ನ ಡೈರಿಯ ಪುಟಗಳೆಲ್ಲ ತುಂಬಿದ ಮೇಲೆ ಮತ್ತೆರಡು ನೋಟ್‍ಪುಸ್ತಕಗಳನ್ನೂ ತುಂಬಿಸಿದಳು. ಮುನ್ನೂರಕ್ಕೂ ಮಿಕ್ಕಿ ಬಿಡಿ ಹಾಳೆಗಳಲ್ಲೂ ಬರೆದಳು. ನಾಲ್ಕು ಗೋಡೆಗಳ ಮಧ್ಯೆ ಬಂದಿಯಾದ 14 ವರ್ಷದ ಪೋರಿ ಅಂಥ ಸ್ಥಿತಿಯಲ್ಲಿ ಮತ್ತೇನು ಮಾಡಿಯಾಳು?

1944ರ ಜೂನ್ 6ರಂದು ಬ್ರಿಟನ್ ಸೇನೆ ಜರ್ಮನಿಯ ಸೇನೆಯನ್ನು ಧೊಳೀಪಟ ಮಾಡಿದ್ದನ್ನು ಸಂತಸದಿಂದ ಬರೆದ ಅವಳು ಜುಲೈ 15ರಂದು ಬರೆದದ್ದು ಹೀಗೆ: 'ನನ್ನ ಜೀವನವನ್ನು ಈ ಸಾವು ನೋವುಗಳ ಬುನಾದಿಯ ಮೇಲೆ ಕಟ್ಟಲು ಸಾಧ್ಯವೇ ಇಲ್ಲ. ನಿಧಾನವಾಗಿ ಇಡೀ ಪ್ರಪಂಚ ಪಾಳುಭೂಮಿಯಾಗುತ್ತಿದೆ ಎನಿಸುತ್ತಿದೆ. ನಾವೆಲ್ಲರೂ ನಿರ್ನಾಮವಾಗಿಬಿಡುತ್ತೇವೆ ಎನಿಸುತ್ತಿದೆ. ಆದರೂ ಕೆಲವೊಮ್ಮೆ ಮತ್ತೆ ಎಲ್ಲವೂ ಸರಿ ಹೋಗಲಿದೆ, ಕ್ರೌರ್ಯ ಕಳೆದು ಶಾಂತಿ ನೆಲೆಸಲಿದೆ ಎನಿಸುತ್ತದೆ. ಅಲ್ಲಿಯವರೆಗೂ ನಾನು ಗಟ್ಟಿಯಾಗಿರಬೇಕು. ಬಹುಶಃ ಆ ದಿನವನ್ನೂ ನಾನು ಕಾಣುತ್ತೇನೆ'

ದುರದೃಷ್ಟವಶಾತ್ ಆನ್ ಆ ದಿನವನ್ನು ಕಾಣಲೇ ಇಲ್ಲ. ಯಾರೋ ಅನಾಮಧೇಯರು ಕೊಟ್ಟ ಮಾಹಿತಿಯ ಮೇರೆಗೆ 1944ರ ಆಗಸ್ಟ್ ನಾಲ್ಕರಂದು ಇವರ ಅಡಗುದಾಣದ ಮೇಲೆ ದಾಳಿ ಮಾಡಿದ ಜರ್ಮನ್ ಪೋಲೀಸರು ಎಲ್ಲರನ್ನೂ ಬಂಧಿಸಿ ಯುದ್ಧ ಶಿಬಿರಗಳಿಗೆ ಕರೆದೊಯ್ದರು. ಅಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಗಂಡಸರಿಂದ ಬೇರ್ಪಡಿಸಲಾಯಿತು. 15 ವರ್ಷದೊಳಗಿದ್ದ ಮಕ್ಕಳನ್ನೆಲ್ಲ ಸೀದಾ ವಿಷಾನಿಲ ಕೊಟ್ಟು ಸಾಯಿಸುವ ಕೊಠಡಿಗಳಿಗೆ ರವಾನಿಸಲಾಯಿತು. ಆಗಷ್ಟೇ 15 ತುಂಬಿದ್ದ ಆನ್ ಬಚಾವಾದಳು. ನಂತರದ ದಿನಗಳಲ್ಲಿ ಅಮ್ಮ ಎಡಿತ್ ತನ್ನ ಪಾಲಿನ ಊಟವನ್ನೂ ಮಕ್ಕಳಿಗೇ ಕೊಟ್ಟು ತಾನು ಹಸಿವಿನಿಂದ ಸತ್ತಳು. ಅಕ್ಕ ಮಾರ್ಗೊಟ್ ನಿಶ್ಯಕ್ತಿಯಿಂದ ಸತ್ತರೆ, ಬದುಕುವ ತೀವ್ರ ತುಡಿತವಿದ್ದ ಆನ್ ಸಾಂಕ್ರಾಮಿಕ ರೋಗ 'ಟೈಫಸ್'ಗೆ ಕೊನೆಗೂ ಬಲಿಯಾದಳು. ಇದಾದ ಕೆಲವೇ ವಾರಗಳಲ್ಲಿ ಯುದ್ಧ ಮುಗಿದು ಬ್ರಿಟನ್ ಪಡೆಗಳು ಎಲ್ಲ ಕೈದಿಗಳನ್ನೂ ಬಿಡುಗಡೆಗೊಳಿಸಿದವು. ಹಾಲೆಂಡ್‍ನಿಂದ ಬಂದಿಗಳಾಗಿ ತೆರಳಿದ್ದ ಒಂದು ಲಕ್ಷಕ್ಕೂ ಹೆಚ್ಚು ಯಹೂದಿಗಳಲ್ಲಿ ಉಳಿದವರು ಐದು ಸಾವಿರ ಮಾತ್ರ! ಅದರಲ್ಲಿ ಓಟ್ಟೊ ಫ್ರ್ಯಾಂಕ್‍ನೂ ಒಬ್ಬ. ತಮ್ಮ ಅಡಗುದಾಣಕ್ಕೆ ಹಿಂದಿರುಗಿದ ಅವನು ಮಗಳ ಡೈರಿಯನ್ನು ಮತ್ತು ಸಿಕ್ಕಷ್ಟು ಹಾಳೆಗಳನ್ನು ಒಟ್ಟುಗೂಡಿಸಿ ಅದನ್ನು ಪ್ರಕಟಿಸುವಲ್ಲಿ ಶ್ರಮವಹಿಸಿದ. ಪರಿಣಾಮವೇ - 'ಆನ್ ಫ್ರ್ಯಾಂಕ್: ದ ಡೈರಿ ಆಫ್ ಎ ಯಂಗ್ ಗರ್ಲ್' ಎಂಬ ತಲೆಬರಹದ ಇಂಗ್ಲಿಷ್ ಪುಸ್ತಕ. 



ಮುಂದೆ ಆ ಪುಸ್ತಕ ಹಾಗೂ ಆನ್ ಬಹಳ ಜನಪ್ರಿಯರಾದರು. ಅವಳ ಚಿಂತನಾಶೀಲತೆ, ಜೀವನ ಪ್ರೀತಿ ಹಾಗೂ ವಯಸ್ಸಿಗೆ ಮೀರಿದ ಪ್ರಬುದ್ಧ ಬರವಣಿಗೆ ಜನಸಾಮಾನ್ಯರಿಗಷ್ಟೇ ಅಲ್ಲದೆ ವಿಶ್ವದ ಅನೇಕ ಕವಿಗಳು,ನಾಟಕಕಾರರು ಹಾಗೂ ಜನನಾಯಕರಿಗೆ ಸ್ಫೂರ್ತಿದಾಯಕವೆನಿಸಿದವು. 'ಆನ್'ಳ ಹೆಸರಿನಲ್ಲಿ ಸ್ಥಾಪಿಸಿದ ಸಂಸ್ಥೆಯಿಂದ 1994ರಲ್ಲಿ ಪ್ರಶಸ್ತಿ ಸ್ವೀಕರಿಸುತ್ತಾ ಮಾತನಾಡಿದ ನೆಲ್ಸನ್ ಮಂಡೇಲಾ ತಾವು ಸೆರೆಮನೆಯಲ್ಲಿದ್ದಾಗ ಅವಳ ಪುಸ್ತಕದಿಂದ ಬಹಳ ಪ್ರಭಾವಿತರಾಗಿದ್ದನ್ನು ಸ್ಮರಿಸಿದರು.

ಸರಿಯಾಗಿ ಶಾಲೆಯನ್ನೇ ಮುಗಿಸದಿದ್ದ ಆನ್ ಮತ್ತೆ ಮತ್ತೆ ನೆನಪಾಗುತ್ತಾಳೆ. ಜೂನ್ 12 ಬಂದಾಗ ಮಾತ್ರವಲ್ಲ. ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ವಿದ್ಯಾರ್ಹತೆ ಇಲ್ಲವೆಂಬ ಪುಕಾರು ಎದ್ದಾಗ. ಪರೀಕ್ಷೆಗಳಲ್ಲಿ ಫೇಲಾದ ವಿದ್ಯಾರ್ಥಿಗಳು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಂಡಾಗ. ಖ್ಯಾತ ವಿಶ್ವವಿದ್ಯಾಲಯಗಳ ಪದವೀಧರರು ಧರ್ಮದ ಹೆಸರಿನಲ್ಲಿ ಭಯೋತ್ಪಾದಕರಾದಾಗ. ಸಿಕ್ಕಾಪಟ್ಟೆ ಓದಿಕೊಂಡ ಬುದ್ಧಿವಂತರು ಬುದ್ಧಿಗೇಡಿಗಳ ಹಾಗೆ ವರ್ತಿಸಿದಾಗ ಕೂಡ.

ಕಲಿಯುವ ಸಂಕಲ್ಪ ಮೂಡಬೇಕು - ಉದಾಹರಣೆಗಳಿಗೇನು, ಬೇಕಾದಷ್ಟು ಸಿಗುತ್ತವೆ!

No comments:

Post a Comment