Saturday, 16 August 2014

ಭಾರತ ಪ್ಯಾಲೆಸ್ತೀನನ್ನು ಬೆಂಬಲಿಸಿದ್ದೇಕೆ ಗೊತ್ತೆ?

ಕೆಲ ದಿನಗಳ ಹಿಂದೆ ಬಿಜೆಪಿಯ ರಾಜ್ಯಸಭಾ ಸಂಸದ ತರುಣ್ ವಿಜಯ್‍ರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ಮೋದಿಯವರ ಸಲಹಾಕಾರರ ತಂಡದ ಸದಸ್ಯರೂ ಆಗಿರುವ ಅವರಿಂದ ಸಹಜವಾಗಿಯೇ ಸರ್ಕಾರದ ಆಡಳಿತ ಯಂತ್ರ ಹೇಗೆ ಕಾರ್ಯ‍ನಿರ್ವಹಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ತವಕವಿತ್ತು. ಜೊತೆಜೊತೆಗೇ ಮನಸ್ಸನ್ನು ತುಂಬಿಕೊಂಡಿದ್ದ ನೂರೆಂಟು ಪ್ರಶ್ನೆಗಳು. ಕಾಶ್ಮೀರವನ್ನು ನಮ್ಮೊಂದಿಗೆ ವಿಲೀನಗೊಳಿಸುವ ಸೆಕ್ಷನ್ 370 ಅನುಷ್ಠಾನವಾಗುತ್ತದಾ? ಜಿಹಾದ್‍ನ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಕೊನೆಯಾಗುವ ಬಗೆ ಹೇಗೆ? ಮತಾಂತರಿಗಳನ್ನು ಮಟ್ಟಹಾಕುವ ಯಾವ ಸೂತ್ರ ಸಿದ್ಧವಾಗುತ್ತಿದೆ? ನಮ್ಮ ಗಡಿಯಲ್ಲಿ ಘಳಿಗೆಗೊಮ್ಮೆ ಗುಲ್ಲೆಬ್ಬಿಸುತ್ತಿರುವ ಪಾಕಿಸ್ತಾನವನ್ನು ಶಾಶ್ವತವಾಗಿ ಸುಮ್ಮನಾಗಿಸುವುದು ಹೇಗೆ? ಚೀನಾದ ವಿಷಯದಲ್ಲಿ ನಮ್ಮ ಧೋರಣೆ ಏನು ಇತ್ಯಾದಿ. ಆದರೆ ಹೆಚ್ಚು ಚರ್ಚಿತವಾದದ್ದು ಬದಲಾಗುತ್ತಿರುವ ಭಾರತದ ರಾಜತಾಂತ್ರಿಕ ನಡೆ-ನುಡಿ ರೀತಿ-ನೀತಿಗಳು. ಅದರಲ್ಲೂ ತೀರಾ ಇತ್ತೀಚೆಗೆ ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಇಸ್ರೇಲ್‍ನ ನಿಲುವನ್ನು ವಿರೋಧಿಸಿ ಮತ ಹಾಕಿತಲ್ಲ ಮೋದಿ ಸರ್ಕಾರ, ಆ ವಿಷಯ ಬಹಳ ಗಂಭೀರ ಚರ್ಚೆಗೆ ಒಳಪಟ್ಟಿತು. ಆ ಒಂದು ಉದಾಹರಣೆಯನ್ನು ಗಣನೆಗೆ ತೆಗೆದುಕೊಂಡರೆ ಸಾಕು, ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ಅಗತ್ಯ ಎಷ್ಟಿದೆ ಎಂಬುದು ವೇದ್ಯವಾಗುತ್ತದೆ. ಸರ್ಕಾರದ ನಿರ್ಧಾರಗಳನ್ನು ಶುದ್ಧ ಅವಿವೇಕತನ ಎಂದು ಆತುರದಲ್ಲಿ ಹಳಿಯುವ ಮೊದಲು ನಾವು ಮೈಗೂಡಿಸಿಕೊಳ್ಳಬೇಕಾದ ತಾಳ್ಮೆ, ವಿವೇಚನೆಯ ಬಗ್ಗೆಯೂ ಅರಿವು ಮೂಡುತ್ತದೆ. ಬನ್ನಿ, ಸ್ವಲ್ಪ ವಿಶದವಾಗಿ ಅರಿಯೋಣ ಈ ವಿಷಯವನ್ನು.


ಕಳೆದ ಒಂದು ತಿಂಗಳಿನಿಂದ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‍ಗಳ ನಡುವೆ ನಡೆದಿರುವ ಘನಘೋರ ಕಾಳಗವನ್ನು ಜಗತ್ತಿಡೀ ಗಮನಿಸುತ್ತಿದೆ. ಇಸ್ರೇಲ್‍ನ ಗಡಿಯಾದ ಗಾಜಾ ಪಟ್ಟಿಯಲ್ಲಿ ಬೀಡು ಬಿಟ್ಟಿರುವ, ಆಡಳಿತಾರೂಢ ಹಮಾಸ್‍ನ ಉಗ್ರರು ಇಸ್ರೇಲ್‍ನ ಮೇಲೆ ರಾಕೆಟ್‍ಗಳ ದಾಳಿ ನಡೆಸುತ್ತಿದ್ದಾರೆ. ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ಪ್ಯಾಲೆಸ್ತೀನ್‍‍ನ ಬಹಳಷ್ಟು ಅಮಾಯಕ ನಾಗರಿಕರು, ಮಕ್ಕಳು ಸಾಯುತ್ತಿದ್ದಾರೆ ಎಂದು ಹಮಾಸ್ ಎಲ್ಲರೆದುರು ಬೊಬ್ಬೆ ಹೊಡೆಯುತ್ತಿದೆ. ಆದ್ದರಿಂದಲೇ ಇಸ್ರೇಲ್‍ನ ದಾಳಿಯನ್ನು ಕುರಿತು ತನಿಖೆಯಾಗಬೇಕು ಎಂಬ ನಿರ್ಧಾರವನ್ನು ವಿಶ್ವ ಸಂಸ್ಥೆಯ 47 ರಾಷ್ಟ್ರಗಳ ಒಕ್ಕೂಟ ಒಮ್ಮತದಿಂದ ತೆಗೆದುಕೊಂಡಿತು. ಪರ-ವಿರೋಧವಾಗಿ ನಡೆದ ಮತದಾನದಲ್ಲಿ 29 ದೇಶಗಳು ತನಿಖೆಯ ಪರವಾಗಿ ಮತ ಹಾಕಿದರೆ 17 ದೇಶಗಳು ನಿರ್ಲಿಪ್ತವಾಗಿದ್ದವು. ತನಿಖೆಯನ್ನು ವಿರೋಧಿಸಿ ಮತ ಹಾಕಿದ ಏಕೈಕ ದೇಶ, ದೊಡ್ಡಣ್ಣ ಅಮೆರಿಕ! ಭಾರತ, ರಷ್ಯ ಚೀನಾ ಬ್ರೆಜಿಲ್ ಸೇರಿದಂತೆ ಇತರೆ ರಾಷ್ಟ್ರಗಳೊಡಗೂಡಿ ಇಸ್ರೇಲ್‍ಗೆ ವಿರುದ್ಧವಾಗಿ ಮತ ಹಾಕಿದೊಡನೆ ಎಷ್ಟೆಲ್ಲ ಖಂಡಿಸಿಬಿಟ್ಟೆವಲ್ಲ ನಾವು ಸರ್ಕಾರವನ್ನು. ನಮ್ಮಂಥ ಜನಸಾಮಾನ್ಯರು ಅನುಮಾನಿಸುವುದೇನೋ ಸರಿ, ಆದರೆ ಮೋದಿಯವರ ಕಟ್ಟಾ ಬೆಂಬಲಿಗರೆಲ್ಲ ಸಿಟ್ಟಾಗಿಬಿಟ್ಟರು. ಅಂಥ ಜೀವದ ಗೆಳೆಯ ಇಸ್ರೇಲ್‍ಅನ್ನು ವಿರೋಧಿಸಿ ಮತ ಹಾಕುವ ಬದಲು ನಿರ್ಲಿಪ್ತವಾಗಿರಬಹುದಿತ್ತಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಜ, ಹಮಾಸ್ನ ದಾಳಿಗೆ ನಿರಂತರವಾಗಿ ಒಳಗಾಗುತ್ತಲೇ ಬಂದಿರುವ ಇಸ್ರೇಲ್‍ಗೆ ನಮ್ಮ ಬೆಂಬಲದ ಅಗತ್ಯವಿದೆ. ಏಕೆಂದರೆ ನಾವಿಬ್ಬರೂ ಸಮಾನ ದುಃಖಿಗಳು. ಹಿಂದೂಗಳಿಗೆ ಭಾರತ ಹೇಗೋ ಯಹೂದಿಗಳಿಗೆ ಇಸ್ರೇಲ್ ಹಾಗೇ. ಈ ವಿಶಾಲ ಪ್ರಪಂಚದಲ್ಲಿ, ನಿರುಮ್ಮಳವಾಗಿ ವಾಸಿಸಲು ಅವರಿಗೆ ತಮ್ಮ ತಾಯ್ನಾಡೂ ಸುರಕ್ಷಿತ ಸ್ಥಳವಲ್ಲ. ಅದಕ್ಕೂ ಪ್ರತಿಕ್ಷಣ ಬಡಿದಾಡಬೇಕು. ನೆಮ್ಮದಿ ಎಂಬುದು ಇಲ್ಲವೇ ಇಲ್ಲ. ನಾವು ಪಾಕಿಸ್ತಾನ, ಬಾಂಗ್ಲಾದೇಶಗಳ ಕಿರುಕುಳದಿಂದಾಗಿ ಅನುಭವಿಸುತ್ತಿರುವ ಯಾತನೆಯ ನೂರು ಪಟ್ಟು ಇಸ್ರೇಲ್ ಪ್ರತಿನಿತ್ಯ ಅನುಭವಿಸುತ್ತಿದೆ. ಹಿಟ್ಲರನ ಸರ್ವಾಧಿಕಾರ 60ಲಕ್ಷ ಯಹೂದಿಗಳನ್ನು ಬಲಿತೆಗೆದುಕೊಂಡ ಮೇಲೆ ಅಳಿದುಳಿದ ಯಹೂದಿಗಳು ವಿಶ್ವದೆಲ್ಲೆಡೆಯಿಂದ ಬಂದು ಸೇರಿಕೊಂಡಿದ್ದು ಇಸ್ರೇಲನ್ನೇ. ಅಲ್ಲಿದ್ದ ಅರಬ್ ಮುಸ್ಲಿಮರನ್ನು ಬೇರೆ ಯಾವ ಮುಸ್ಲಿಂ ರಾಷ್ಟ್ರಗಳೂ ಸೇರಿಸಿಕೊಳ್ಳದೆ ಹೋದುದರಿಂದ ಅವರುಗಳು ಗಾಜಾಪಟ್ಟಿಯನ್ನು ಆಕ್ರಮಿಸಿ ಕುಳಿತರು. ಎಲ್ಲ ಕಡೆಗಳಲ್ಲಿ ಮಾಡುವಂತೆ ಇಲ್ಲಿಯೂ ಸ್ವತಂತ್ರ ರಾಷ್ಟ್ರದ ಬೇಡಿಕೆ ಇಟ್ಟರು. ಎಂದಿನಂತೆ ಅವರ ಸಹಾಯಕ್ಕೆ 'ಮುಸ್ಲಿಂ ಭ್ರಾತೃತ್ವ'ದ ಹೆಸರಿನಲ್ಲಿ ಇತರೆ ಮುಸ್ಲಿಂ ರಾಷ್ಟ್ರಗಳು ಧಾವಿಸಿಯೇ ಬಿಟ್ಟವು. ಹಾಗೆ ಹಮಾಸ್ ಎಂಬ ಹೆಸರಿನಲ್ಲಿ ಅಂದು ಶುರುವಾದ ಉಗ್ರರ ಉಪಟಳ ಇಂದಿಗೂ ಇಸ್ರೇಲ್‍‍ಅನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಪ್ರತಿ ಬಾರಿಯೂ ಏಟು ತಿಂದು ಸೋತು ಹಿಂದಿರುಗಿದರೂ ಮತ್ತೆ ಮತ್ತೆ ದಾಳಿ ಮಾಡುತ್ತಲೇ ಇದೆ.

ಈ ಬಾರಿಯ ಯುದ್ಧ ಶುರುವಾಗಿದ್ದು ಕಳೆದ ಜುಲೈ 8ರಂದು. ಇಸ್ರೇಲ್‍ನ ಮೂವರು ಯುವಕರನ್ನು ಹಮಾಸ್‍ನ ಉಗ್ರರು ಅಪಹರಿಸಿ ಹತ್ಯೆ ಮಾಡಿದರು ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯ. ಈ ಕಾರಣಕ್ಕೆ ಇಸ್ರೇಲ್ ಯುದ್ಧಕ್ಕೆ ಇಳಿಯಿತಾದರೂ ಕಾರಣ ಇದೊಂದೇ ಆಗಿರಲಿಲ್ಲ. ಇಸ್ರೇಲ್‍ಅನ್ನು ನೇರವಾಗಿ ವೈಮಾನಿಕ ಅಥವಾ ರಾಕೆಟ್‍ಗಳ ದಾಳಿಯಿಂದ ಸೋಲಿಸಲು ಸಾಧ್ಯವಿಲ್ಲ ಎಂದು ಅರಿತಿತ್ತು ಹಮಾಸ್. ಆದ್ದರಿಂದಲೇ ಈ ಬಾರಿ ಸುಮಾರು 36 ಸುರಂಗಗಳನ್ನು ಕೊರೆದು ಅದರ ಮೂಲಕ ರಹಸ್ಯವಾಗಿ ಇಸ್ರೇಲ್‍‍ಅನ್ನು ತಲುಪಿ ಒಮ್ಮೆಗೇ ಅದರ ಮೇಲೆ ದಾಳಿ ಮಾಡುವ ಇರಾದೆ ಹೊಂದಿತ್ತು. ಪ್ರತಿ ಸುರಂಗ ಕೊರೆಯುವುದಕ್ಕೂ ಏನಿಲ್ಲವೆಂದರೂ ಸುಮಾರು 10ಲಕ್ಷ ರೂಪಾಯಿಗಳಷ್ಟು (ಅಲ್ಲಿನ ಕರೆನ್ಸಿಯಲ್ಲಿ) ಖರ್ಚಾಗಿರಬಹುದು! ಊಟಕ್ಕೂ ಗತಿಯಿಲ್ಲದ ಪ್ಯಾಲೆಸ್ತೀನ್‍ನಲ್ಲಿ ಇಂಥ ಮನೆಹಾಳು ಕೆಲಸಗಳಿಗೆ ಕೋಟ್ಯಂತರ ರೂಪಾಯಿ ಹರಿದುಬರುತ್ತಿರಬೇಕಾದರೆ ಅದ್ಯಾವ ಪರಿಯ ಧರ್ಮಾಂಧತೆ ಆವರಿಸಿಕೊಂಡಿರಬೇಕು ಯೋಚಿಸಿ! ಸುಳಿವು ಸಿಕ್ಕ ಇಸ್ರೇಲ್ ಸುಮ್ಮನೆ ಕೂರುವಂತಿರಲಿಲ್ಲ. ಜುಲೈ 17ರಂದು ತನ್ನ ಸೇನೆಯನ್ನು, ಈ ಎಲ್ಲ ಸುರಂಗಗಳನ್ನು ನಿರ್ನಾಮಗೊಳಿಸಲು ಕಳಿಸಿತು. ಒಂದೊಂದೇ ಸುರಂಗವನ್ನು ಶೋಧಿಸಿ, ಉಗ್ರರನ್ನು ಸದೆಬಡಿದು ಇಡೀ ಸುರಂಗವನ್ನು ನೆಲಸಮಗೊಳಿಸುತ್ತಾ ಸಾಗಿತು. ಆದ್ದರಿಂದಲೇ ತನ್ನ ಕೆಲಸ ಪೂರ್ತಿ ಮುಗಿಯುವವರೆಗೂ ಯಾವ ಕಾರಣಕ್ಕೂ ಗಾಜಾ ಪಟ್ಟಿಯಿಂದ ತನ್ನ ಸೇನೆಯನ್ನು ಹಿಂಪಡೆಯಲಿಲ್ಲ. ಯುದ್ಧ ಇಷ್ಟು ದೀರ್ಘಕಾಲ ನಡೆದದ್ದಕ್ಕೂ ಇದೇ ಕಾರಣ.

10ಸಾವಿರದಷ್ಟು ರಾಕೆಟ್‍ಗಳ ದಾಸ್ತಾನನ್ನು ಇಟ್ಟುಕೊಂಡಿದ್ದ ಹಮಾಸ್ ಇಸ್ರೇಲ್‍ನ ಮೇಲೆ ದಿನವೊಂದಕ್ಕೆ ನೂರಾರು ರಾಕೆಟ್‍ಗಳನ್ನು ಮನಬಂದಂತೆ ಹಾರಿಸುತ್ತಿತ್ತು. ಆದರೂ ಇಸ್ರೇಲ್‍ನಲ್ಲಿ ಸಾವು-ನೋವುಗಳು ಹೆಚ್ಚಾಗಿ ಸಂಭವಿಸಲಿಲ್ಲ. ಏಕೆಂದರೆ ಹಾಗೆ ರಾಕೆಟ್ ಹಾರಿ ಬಂದಾಗ ಸೈರನ್ ಮೊಳಗಿ ಇಸ್ರೇಲ್‍ನ ಜನ ತಮ್ಮ ರಕ್ಷಣೆಗಾಗಿಯೇ ನಿರ್ಮಿಸಲಾಗಿದ್ದ ಕಬ್ಬಿಣದ ಗೂಡುಗಳಲ್ಲಿ ಅಡಗಿಕೊಳ್ಳುತ್ತಿದ್ದರು. ತಾನು ಪ್ರತಿದಾಳಿ ಮಾಡುವ ಮೊದಲು ಇಸ್ರೇಲ್ ಪ್ಯಾಲೆಸ್ತೀನ್‍ನ ನಾಗರಿಕರಿಗೆ ಅಡಗಿಕೊಳ್ಳುವ ಸೂಚನೆ ಕೊಡುತ್ತಿತ್ತು. ಅಷ್ಟಾದರೂ ಅಮಾಯಕ ಜನರು ಸಾಯುತ್ತಿದ್ದಾರೆ ಎಂದು ಬೊಬ್ಬಿರಿಯುವುದನ್ನು ಹಮಾಸ್ ಬಿಡಲಿಲ್ಲ. ಏಕೆಂದರೆ ಹಮಾಸ್‍ನ ಹೇಡಿಗಳು ರಕ್ಷಣೆಗಾಗಿ ಅಡಗುತ್ತಿದ್ದುದೇ ಹೆಂಗಸರು, ಮಕ್ಕಳ ಹಿಂದೆ! ಅವರೆಲ್ಲರೂ ಅಮಾಯಕರೇ ಎಂಬುದೂ ನಿಜವಲ್ಲ. ಜನಸಂಖ್ಯಾ ಜಿಹಾದ್ಆನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ ಹಮಾಸ್‍! ಹುಟ್ಟುವ ನಾಲ್ಕು ಮಕ್ಕಳಲ್ಲಿ ಒಂದು ಜಿಹಾದ್‍ಗಾಗಿಯೇ ಮೀಸಲು. ಇಂಥವರನ್ನು ಬಲಿಕೊಟ್ಟು ವಿಶ್ವದೆದುರು ಕಣ್ಣೀರಿಟ್ಟು ಆನುಕಂಪ ಗಿಟ್ಟಿಸುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ.

ಇಷ್ಟೆಲ್ಲಾ ಆಗುತ್ತಿರಬೇಕಾದರೆ ನಾವು ನ್ಯಾಯವಾಗಿ ಇಸ್ರೇಲ್‍ಅನ್ನೇ ಬೆಂಬಲಿಸಬೇಕಿತ್ತಲ್ಲವೇ? ಅಲ್ಲೇ ಇರುವುದು ನೋಡಿ ಸ್ವಾರಸ್ಯ. ನಾವು ಅದರ ವಿರೋಧವಾಗಿ ಮತ ಚಲಾಯಿಸಿದ ತಕ್ಷಣವೇ ಇಸ್ರೇಲ್‍ ನಮ್ಮ ನಿರ್ಧಾರವನ್ನು ಸ್ವಾಗತಿಸಿತು! ಇದರಿಂದ ನಮ್ಮ ಮಿತೃತ್ವಕ್ಕೆ ಯಾವ ಧಕ್ಕೆಯೂ ಉಂಟಾಗುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿತು. ಕಾರಣವಿಷ್ಟೇ. ಪ್ಯಾಲೆಸ್ತೀನ್ ಎಂದರೆ ಹಮಾಸ್ ಮಾತ್ರವಲ್ಲ. ಒಂದು ಭಾಗವನ್ನು ಹಮಾಸ್ ಆಳುತ್ತಿದ್ದರೆ ಮತ್ತೊಂದನ್ನು ಫತೆಹ್ ಎಂಬ ಶಾಂತಿಪ್ರಿಯರು ಆಳುತ್ತಿದ್ದಾರೆ. ಅವರಿಗೆ ಯುದ್ಧ, ರಕ್ತಪಾತ ಬೇಕಿಲ್ಲ. ಇಷ್ಟು ದಿನ ಹಮಾಸ್‍ಅನ್ನು ಬೆಂಬಲಿಸುತ್ತಿದ್ದ ಈಜಿಪ್ತ್, ಕತಾರ್ ಮತ್ತು ಟರ್ಕಿಗಳಿಗೆ ಈಗ ಜ್ಞಾನೋದಯವಾಗಿದೆ. ಹೀಗೇ ಮುಂದುವರೆದರೆ ಪ್ಯಾಲೆಸ್ತೀನ್‍ನ ಸ್ಥಿತಿ ಇನ್ನೂ ಶೋಚನೀಯವಾಗಿಬಿಡುತ್ತದೆ ಎಂದು ಅವರಿಗೆ ಮನದಟ್ಟಾಗಿದೆ. ಆದ್ದರಿಂದಲೇ ಫತೆಹ್ ಹಾಗೂ ಹಮಾಸ್‍‍ಗೆ ಹೊಂದಿಕೊಂಡು ಒಟ್ಟಾಗಿ ಆಡಳಿತ ನಡೆಸುವಂತೆ ಸೂಚಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದಿಂದಲೂ ಒತ್ತಡ ಹೇರಿಸುತ್ತಿದ್ದಾರೆ.ನಾವು ಬ್ರಿಕ್ಸ್ (BRICS) ರಾಷ್ಟ್ರಗಳೆಲ್ಲ ಸೇರಿ ಸಹಿಮಾಡಿದ ಘೋಷಣೆಯಲ್ಲೂ ಈ ಸಾಲುಗಳು ಸ್ಪಷ್ಟವಾಗಿ ನಮೂದಾಗಿವೆ. ಪ್ಯಾಲೆಸ್ತೀನ್‍ನಲ್ಲಿ ಶಾಂತಿಪ್ರಿಯರ ಆಡಳಿತ ಶುರುವಾದರೆ ಲಾಭವಾಗುವುದು ಇಸ್ರೇಲ್‍ಗೇ. ಅದಕ್ಕೂ ಒಂದು ದೀರ್ಘಾವಧಿ ವಿರಾಮದ ಅಗತ್ಯವಿದೆ. ನೀವು ನಂಬುವುದಿಲ್ಲ, ಈ ಸಂಘರ್ಷ ಯುದ್ಧಗಳಿಂದಾಗಿ ಇಸ್ರೇಲಿಗಳಿಗೆ ಮಕ್ಕಳನ್ನು ಮಾಡಿಕೊಳ್ಳಲೂ ಪುರುಸೊತ್ತು ಸಿಗುತ್ತಿಲ್ಲ. ಮಕ್ಕಳ ಜನನದ ಪ್ರಮಾಣ ದಿನೇ ದಿನೇ ಕುಸಿಯುತ್ತಿದೆ. ಇದು ಒಂದು ಕಾರಣವಾದರೆ ಮತ್ತೂ ಒಂದು ಕಾರಣವಿದೆ. ಇಂದು ಜಗತ್ತಿನ ಯಾವ ಎರಡು ಮುಸ್ಲಿಂ ರಾಷ್ಟ್ರಗಳೂ ಸ್ನೇಹದಿಂದಿಲ್ಲ. ಒಂದೇ ರಾಷ್ಟ್ರಕ್ಕೆ ಸೇರಿದ ಪಂಗಡಗಳಲ್ಲೇ ಒಮ್ಮತವಿಲ್ಲ. ಅವರವರೇ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ. ಇಂಥ ಸನ್ನಿವೇಶದಿಂದ ರೋಸಿಹೋಗಿರುವ ಬಹಳಷ್ಟು ರಾಷ್ಟ್ರಗಳಿಗೆ ಬದಲಾವಣೆ ಬೇಕಾಗಿದೆ. ತನ್ನ ಮೇಲೆ ನಂಬಿಕೆಯಿಟ್ಟು ಬೆಂಬಲಿಸಿರುವ ಭಾರತವನ್ನು ನಾಳೆ ಪ್ಯಾಲೆಸ್ತೀನ್ ಕಾಶ್ಮೀರದ ವಿಷಯದಲ್ಲಿ ಬೆಂಬಲಿಸಲೇ ಬೇಕಾಗುತ್ತದೆ. ಪಾಕಿಸ್ತಾನವೆಂಬ ಪೀಡೆಯನ್ನು ಮತ್ತಷ್ಟು ಕಾರ್ಗಿಲ್‍ಗಳ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬ ನಿಯಮವೇನೂ ಇಲ್ಲವಲ್ಲ? ನೆರವು ಅನಪೇಕ್ಷಿತ ರೂಪದಲ್ಲಿ ಬಂದರೆ ಯಾಕಾಗಬಾರದು? ಇಲ್ಲಿ ಮತ್ತೊಂದು ಸೋಜಿಗವೂ ಇದೆ. ಅಷ್ಟೂ ರಾಷ್ಟ್ರಗಳ ಪೈಕಿ ಇಸ್ರೇಲ್‍‍ನ ಪರವಾಗಿ ನಿಂತದ್ದು ಅಮೆರಿಕ ಒಂದೇ. ಒಂದೆಡೆ ಇಸ್ರೇಲ್ ನೂರಾರು ನಾಗರಿಕರನ್ನು ಕೊಲ್ಲುವುದು ತಪ್ಪು ಎಂದು ಬುದ್ಧಿ ಹೇಳುವ ಅಮೆರಿಕ ಮತ್ತೊಂದೆಡೆ ಅದಕ್ಕೆ ಯುದ್ಧ ಸಾಮಗ್ರಿಗಳನ್ನು ತುಂಬಾ ನಿಯತ್ತಾಗಿ ಸರಬರಾಜು ಮಾಡುತ್ತದೆ! ಯಾವ ಕಾರಣಕ್ಕೂ ಇಸ್ರೇಲ್ ಸೋಲಲು ಅಮೆರಿಕ ಬಿಡುವುದಿಲ್ಲ!

ಕಾರ್ಗಿಲ್ ಯುದ್ಧ ಹಾಗೂ ಪೋಖ್ರಾನ್‍ನ ಪರೀಕ್ಷೆಯ ನಂತರ ಜಗತ್ತು ನಮ್ಮನ್ನು ನೋಡುವ ರೀತಿ ಬದಲಾಗಿದೆ. ಮೊದಲೆಲ್ಲ ನಮ್ಮ ಪ್ರಧಾನಿ ಅಮೆರಿಕಕ್ಕೆ ಹೋದರೆ ನ್ಯೂಯಾರ್ಕ್ ಟೈಮ್ಸ್ ಅಥವಾ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳಲ್ಲಿ ಒಂದು ಸಾಲೂ ಪ್ರಕಟವಾಗುತ್ತಿರಲಿಲ್ಲ. ಇಂದು ಮೋದಿಯವರ ಪ್ರಮಾಣ ವಚನ ಸ್ವೀಕಾರದ ವಿಷಯ ಅಚ್ಚಾಗದ ಪತ್ರಿಕೆಯೇ ಇಲ್ಲ. ನಮ್ಮ ಸರ್ಕಾರಕ್ಕೆ  ದೇಶದೊಳಗಿನ ಸಮಸ್ಯೆಗಳನ್ನು ನಿವಾರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಸರಿಯಾದ ಛಾಪು ಮೂಡಿಸುವುದು. ದೇಶದ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಣಯಗಳ ರೀತಿ,ಆಳ,ಆಂತರ್ಯಗಳು ನಮಗೆ ತಕ್ಷಣಕ್ಕೆ ಅರ್ಥವಾಗದೇ ಇರಬಹುದು. ಹಾಗೆಂದು ನಾವೇ ವಿರೋಧ ಪಕ್ಷದವರಿಗಿಂತ ಹೆಚ್ಚಾಗಿ ಹಾರಾಡಿಬಿಟ್ಟರೆ ಯಾರು ಬೆಂಬಲಿಸಬೇಕು?

ಕೊನೆಯದಾಗಿ ತರುಣ್ ಒಂದು ಮಾತು ಹೇಳಿದರು. 'ಇಷ್ಟು ವರ್ಷಗಳ ನಂತರ ಓರ್ವ ನಿಸ್ವಾರ್ಥ ಸ್ವಯಂಸೇವಕನನ್ನು ಭಾರತಮಾತೆ ತನ್ನ ಸೇವೆಗೆ ಆರಿಸಿಕೊಂಡಿದ್ದಾಳೆ ಎಂದ ಮೇಲೆ ಇದರಲ್ಲೇನೋ ಮರ್ಮವಿರಲೇಬೇಕಲ್ಲವೇ?' ಎಂದು. ನಿಜ, ಭಾರತದ ಭಾಗ್ಯವನ್ನು ವಿಧಾತ ಸರಿಯಾಗಿಯೇ ಬರೆದಿರಬೇಕು. ನಂಬಿಕೆಯಿಟ್ಟು ಕಾದು ನೋಡೋಣ. ಅಲ್ಲವೇ? 

No comments:

Post a Comment