Tuesday, 19 August 2014

ಸಾಕು ಮಾಡೋಣ ನಿರೀಕ್ಷೆ, ಪಡೆಯೋಣ ಕಾಯಕ ದೀಕ್ಷೆ

ಇದು ಬಹಳ ಹಿಂದಿನ ಕಥೆ. ಅನೇಕ ವರ್ಷಗಳ ಹಿಂದೆ ಒಂದು ಊರಿನಲ್ಲಿ ಓರ್ವ ಶ್ರೀಮಂತ ವ್ಯಾಪಾರಿ ಇದ್ದ. ಅವನದ್ದು ಅಪಾರವಾದ ದೈವಭಕ್ತಿ. ಶುಭ್ರ ಸ್ಫಟಿಕದಂಥ ಕಲ್ಮಶರಹಿತ ಮನಸ್ಸು. ವ್ಯಾಪಾರದಲ್ಲೆಷ್ಟು ಚತುರನೋ ಒಳ್ಳೆಯತನದಲ್ಲೂ ಅಷ್ಟೇ ಮುಂದು. ಒಬ್ಬರನ್ನೂ ನೋಯಿಸದ ಜೀವ. ಬಂದ ಲಾಭದಲ್ಲಿ ತನಗಿಷ್ಟು ಇಟ್ಟುಕೊಂಡು ಉಳಿದದ್ದನ್ನು ದೇವರ ಹೆಸರಿನಲ್ಲಿ ಬಡ-ಬಗ್ಗರಿಗೆ ದಾನ ಮಾಡಿಬಿಡುತ್ತಿದ್ದ. ಅವನ ಒಳ್ಳೆಯತನ ಕಂಡ ದೇವರು ಒಮ್ಮೆ ಕನಸಿನಲ್ಲಿ ಕಾಣಿಸಿಕೊಂಡು, 'ವತ್ಸಾ, ನಿನಗೆ ಏನೇ ತೊಂದರೆ ಬಂದರೂ ನನ್ನನ್ನು ಒಮ್ಮೆ ಸ್ಮರಿಸಿಕೋ. ನಾನು ಬಂದು ನಿನ್ನ ಕಷ್ಟವನ್ನು ಪರಿಹರಿಸುತ್ತೇನೆ' ಎಂದ. ದೇವರೇ ಅಭಯವಿತ್ತಮೇಲೆ ಇನ್ನು ಭಯವೆಲ್ಲಿಯದು ಎಂದು ಭಾವಿಸಿದ ವ್ಯಾಪಾರಿ ದೂರದ ಊರುಗಳಿಗೆ ವ್ಯಾಪಾರಕ್ಕೆ ಹೋಗಲಾರಂಭಿಸಿದ. ಹೀಗೇ ಒಮ್ಮೆ ಹಡಗಿನಲ್ಲಿ ಸರಕನ್ನು ಹೇರಿಕೊಂಡು ಹೋಗುತ್ತಿದ್ದಾಗ, ಕಂಡು ಕೇಳರಿಯದ ಭಯಂಕರ ಚಂಡಮಾರುತ ಸಮುದ್ರಕ್ಕೆ ಅಪ್ಪಳಿಸಿತು. ಆ ಆರ್ಭಟಕ್ಕೆ ಸಿಕ್ಕ ಹಡಗು ಹೊಯ್ದಾಡಿತು. ನಿಧಾನವಾಗಿ ಮುಳುಗತೊಡಗಿತು. ವ್ಯಾಪಾರಿಗೆ ತಕ್ಷಣ ದೇವರ ನೆನಪಾಯಿತು. 'ದೇವರೇ ನಾನು ಪ್ರಾಣಾಪಾಯದಲ್ಲಿ ಸಿಲುಕಿದ್ದೇನೆ. ನನ್ನನ್ನು ಕಾಪಾಡು ಬಾ' ಎಂದು ಮೊರೆಯಿಟ್ಟ. ದೇವರ ನಿರೀಕ್ಷೆಯಲ್ಲಿ ಆಕಾಶ ನೋಡುತ್ತಾ ಕುಳಿತುಬಿಟ್ಟ. ಆಗ, ಅವನ ಹಡಗಿಗಿಂತ ದೊಡ್ಡದಾದ ಹಾಗೂ ವೇಗವಾಗಿ ಹೋಗಬಲ್ಲ ಹಡಗೊಂದು ಪಕ್ಕದಲ್ಲಿ ಬಂದಿತು. ಅದರ ವ್ಯಾಪಾರಿ ಅವನನ್ನು ಕೂಗಿ ಕರೆದ. 'ನಿನ್ನ ಹಡಗು ಮುಳುಗುತ್ತಿದೆ, ನನ್ನದಕ್ಕೆ ಬಾ, ಜೀವ ಉಳಿಸಿಕೋ' ಎಂದ. ದೇವರಿಗಾಗಿ ಕಾಯುತ್ತಾ ಕುಳಿತಿದ್ದನಲ್ಲ? ಹಾಗಾಗಿ ವ್ಯಾಪಾರಿ ತಿರುಗಿಯೂ ನೋಡಲಿಲ್ಲ. ಇನ್ನೂ ಎರಡು ಹಡಗುಗಳು ತಾವಾಗಿಯೇ ಅವನ ಸಹಾಯಕ್ಕೆ ಬಂದವು. ವ್ಯಾಪಾರಿ ಕದಲಲೇ ಇಲ್ಲ. ಕೊನೆಗೊಮ್ಮೆ ಅವನ ಹಡಗು ಪೂರ್ತಿ ಮುಳುಗಿತು. ವ್ಯಾಪಾರಿ ಸತ್ತೇ ಹೋದ. ತುಂಬಾ ಪುಣ್ಯಕಾರ್ಯಗಳನ್ನು ಮಾಡಿದ್ದರಿಂದ ಸೀದಾ ಸ್ವರ್ಗಕ್ಕೇ ಪ್ರವೇಶ ಸಿಕ್ಕಿತು. ದೇವರನ್ನು ಕಾಣುತ್ತಿದ್ದಂತೆ ಅವನ ದುಃಖದ ಕಟ್ಟೆಯೊಡೆಯಿತು. 'ಬಂದು ಕಾಪಾಡುತ್ತೀ ಎಂದು ಮಾತು ಕೊಟ್ಟಿದ್ದೆಯಲ್ಲ ಭಗವಂತಾ, ನೀನು ಹೀಗೆ ಮೋಸ ಮಾಡಬಹುದೇ?' ಎಂದು ಕಣ್ಣೀರು ತುಂಬಿಕೊಂಡು ಕೇಳಿದ. 'ಬಂದೆನಲ್ಲ ವತ್ಸಾ ನಾನು, ಒಂದಲ್ಲ, ಮೂರು ಬಾರಿ ಬಂದೆ. ಮೂರು ಹಡಗುಗಳ ರೂಪದಲ್ಲಿ ನಿನ್ನ ಜೀವ ಉಳಿಸಲು ಬಂದೆ. ನಿರಾಕರಿಸಿ ಕಳಿಸಿದ್ದು ನೀನೇ ಅಲ್ಲವೇ, ನೆನಪು ಮಾಡಿಕೋ. ನಾನಂತೂ ಮಾತಿಗೆ ತಪ್ಪಲಿಲ್ಲ' ಎಂದ ದೇವರು. ಆಗ ವ್ಯಾಪಾರಿಗೆ ತನ್ನ ಅವಿವೇಕದ ಅರಿವಾಯಿತು. ಆದರೇನು, ಕಾಲ ಮಿಂಚಿ ಹೋಗಿತ್ತು!
ಕೆಂಪು ಕೋಟೆಯಲ್ಲಿ, ಕೆಂಪು ಪೇಟ ಸುತ್ತಿಕೊಂಡು, ಸ್ವಾತಂತ್ರ್ಯೋತ್ಸವದ ತಮ್ಮ ಚೊಚ್ಚಲ ಭಾಷಣವನ್ನು ಮಾಡುತ್ತಿದ್ದ ನೂತನ ಪ್ರಧಾನಿ ಮೋದಿಯವರನ್ನು ನೋಡಿದ ತಕ್ಷಣ ಯಾಕೋ ಈ ಕಥೆ ನೆನಪಾಯಿತು. ಈಗ್ಗೆ ಕೆಲ ತಿಂಗಳುಗಳ ಹಿಂದಿನವರೆಗೂ ಯಾರಾದರೂ ನಮ್ಮನ್ನು, ಈ ದೇಶದ ಭವಿಷ್ಯದ ಬಗ್ಗೆ ನಿಮಗೇನನಿಸುತ್ತದೆ ಎಂದು ಕೇಳಿದಾಗಲೆಲ್ಲ ಸಿಗುತ್ತಿದ್ದ ಉತ್ತರ ಒಂದೇ. 'ಈ ದೇಶದ ಹಣೆಬರಹವೇ ಇಷ್ಟು, ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ' ಎಂಬುದು! ಯಾವುದೂ ಬದಲಾಗುವುದಿಲ್ಲ, ಇನ್ನು ಇಷ್ಟೇ ಅಥವಾ ಇದಕ್ಕಿಂತ ಅಧ್ವಾನ ಎಂಬ ಮನಸ್ಥಿತಿಯಲ್ಲಿದ್ದವರಿಗೆ ಮೋದಿ ಎಂಬ ಬದಲಾವಣೆಯ ಪರ್ವವನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಲು, ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ. ಯಾವುದೋ ಮಾಯೆ, ನೋಡನೋಡುತ್ತಿದ್ದಂತೆಯೇ ಅದೆಲ್ಲಿಂದಲೋ ನಮಗಾಗಿ ಧುತ್ತೆಂದು ಒಳ್ಳೆಯ ದಿನಗಳನ್ನು ಹಾಗೂ ಬದಲಾವಣೆಗಳನ್ನು ತಂದು ಕೊಟ್ಟೀತೆಂದು ಕಾದುಕುಳಿತಿರುವ ನಾವೆಲ್ಲ ದೇವರ ನಿರೀಕ್ಷೆಯಲ್ಲಿ ಕುಳಿತ ವ್ಯಾಪಾರಿಯ ಪ್ರತಿರೂಪಗಳಂತಾಗಿ ಬಿಟ್ಟಿದ್ದೇವೆ ಅಲ್ಲವೇ? ಹೌದು. ಅಧಿಕಾರಕ್ಕೇರಿದ ಎರಡೇ ತಿಂಗಳುಗಳಲ್ಲಿ ನಮ್ಮ ಈ ಮನಸ್ಥಿತಿಯನ್ನು ಬಹಳ ಚೆನ್ನಾಗಿ ಅರಿತಿದ್ದಾರೆ ಮೋದಿ. ಆದ್ದರಿಂದಲೇ ತಮ್ಮ ಭಾಷಣದಲ್ಲಿ ನಮಗೆ ಬಹಳಷ್ಟು ಸಂದೇಶಗಳನ್ನು ರವಾನಿಸಿದ್ದಾರೆ.

ಈಗಾಗಲೇ ಮೋದಿಯವರ ಚುನಾವಣಾ ಪ್ರಚಾರ ಸಂದರ್ಭದ ಭಾಷಣಗಳನ್ನು ಕೇಳಿರುವ ನಮಗೆ, ಅವರು ಕೆಂಪು ಕೋಟೆಯಲ್ಲಿ ನಿಂತು ಚೀಟಿ ಓದುವುದಿಲ್ಲ ಎಂಬ ಖಾತ್ರಿಯಂತೂ ಖಂಡಿತ ಇತ್ತು. ಆದರೆ ಅವರ ಮಾತಿನ ಚಾಟಿಯೇಟು ನಮ್ಮನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿಯೂ ಇರಲಿದೆ ಎಂಬ ನಿರೀಕ್ಷೆ ಇರಲೇ ಇಲ್ಲ. ತಮ್ಮನ್ನು ಪ್ರಧಾನ ಸೇವಕ ಎಂದು ಕರೆದುಕೊಂಡ ಮೋದಿ, ಈ ಹಿಂದಿನ ಪ್ರಧಾನಿಗಳು ಮಾಡುತ್ತಿದ್ದಂತೆ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸುವ ಗೋಜಿಗೇ ಹೋಗಲಿಲ್ಲ. ಕಡು ಬಡವರಿಗೂ ಬ್ಯಾಂಕ್ ಖಾತೆಗಳನ್ನು ದೊರಕಿಸಿಕೊಡುವ ಜನ-ಧನ ಯೋಜನೆಯೊಂದನ್ನೇ ಅವರು ಪ್ರಸ್ತಾಪಿಸಿದ್ದು. ಉಳಿದಂತೆ, ಎಲ್ಲರೂ ಒಟ್ಟಾಗಿ ಸೇರಿ ಕಾಣಬೇಕಿರುವ ದೊಡ್ಡ ದೊಡ್ಡ ಕನಸುಗಳ, ಹೊರಬೇಕಿರುವ ಜವಾಬ್ದಾರಿಯ ಬಗ್ಗೆಯೇ ಮಾತು. ನಮ್ಮದೋ, ಉತ್ತಮ ಸರ್ಕಾರವನ್ನು ಆರಿಸಿಕಳಿಸಿದ್ದಾಯಿತಲ್ಲ, ಇನ್ನು ನಮ್ಮ ಪಾತ್ರ ಮುಗಿಯಿತು ಎಂಬ ನಿಶ್ಚಲ ಸ್ಥಿತಿ. ಅವರದ್ದು, ‘ಪ್ರತಿ ಭಾರತೀಯನೂ ಒಂದು ಹೆಜ್ಜೆ ಮುಂದಿಟ್ಟರೆ, ದೇಶ ನೂರಿಪ್ಪತ್ತೈದುಕೋಟಿ ಹೆಜ್ಜೆಗಳಷ್ಟು ಮುಂದುವರಿಯಲಿದೆ’ ಎಂದು ನಮ್ಮನ್ನು ಚಲನೆಗೆ ದೂಡುವ ಪ್ರಯತ್ನ! ಜನಮಾನಸವನ್ನು ತಲುಪಿದ ಇಂಥ ಅರ್ಥವತ್ತಾದ ಸಂವಾದ ಚರಿತ್ರೆಯಲ್ಲಿ ಇದೇ ಮೊದಲು! ಕ್ಷೀಣಿಸುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ, ಶೌಚಾಲಯವಿರದ ಶಾಲೆಗಳ ದುಃಸ್ಥಿತಿ, ತುರ್ತಾಗಿ ಮೂಡಲೇಬೇಕಾಗಿರುವ ಸ್ವಚ್ಛತೆಯ ಬಗೆಗಿನ ಅರಿವು, ಇವುಗಳ ಕುರಿತು ಮನೆಯ ಹಿರಿಯಣ್ಣನಂತೆ ಮಾತನಾಡುವ ಪ್ರಧಾನಿಯನ್ನು ಈ ಮೊದಲು ಕಂಡಿದ್ದಿರಾ? ಯುವಕರಿಗೆ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಪ್ರೇರೇಪಣೆಯಾದರೆ ಸಂಸದರಿಗೆ ಆದರ್ಶ ಗ್ರಾಮಗಳನ್ನು ರಚಿಸುವ ಹೊಣೆ. ಎಲೆಕ್ಟ್ರಾನಿಕ್ ಉಪಕರಣಗಳ ಆಮದು ನಿಂತು ಭಾರತ ಸ್ವಾವಲಂಬಿಯಾಗಲಿ ಎಂಬ ಹಪಹಪಿ ಒಂದೆಡೆಯಾದರೆ ವಿದೇಶೀಯರಿಗೆ ' ಕಮ್, ಮೇಕ್ ಇನ್ ಇಂಡಿಯಾ(ಬನ್ನಿ, ಭಾರತದಲ್ಲೇ ತಯಾರಿಸಿ)' ಎಂಬ ಮುಕ್ತ ಆಹ್ವಾನ ಮತ್ತೊಂದೆಡೆ.

'ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಆಗುಹೋಗುಗಳಿಗೆಲ್ಲ ಮುಝೆ ಕ್ಯಾ(ನನಗೇನು ಆಗಬೇಕಾಗಿರುವುದು) ಹಾಗೂ ಮೇರಾ ಕ್ಯಾ(ನನ್ನದೇನು ಹೋಗಬೇಕಾಗಿರುವುದು) ಎಂದೇ ಸ್ಪಂದಿಸಿ ಅಭ್ಯಾಸವಿರುವ ನಾವು ಇನ್ನುಮೇಲಾದರೂ ಅದನ್ನು ಬಿಡಬೇಕಾಗಿದೆ' ಎಂದಾಗ ನಮಗೆಲ್ಲ 'ಕುಂಬಳಕಾಯಿ ಕಳ್ಳ ಎಂದೊಡನೆ ಹೆಗಲುಮುಟ್ಟಿ ನೋಡಿಕೊಂಡಂತಾಗಿದ್ದು' ಸುಳ್ಳಲ್ಲ ಅಲ್ಲವೇ? ಇಲ್ಲಿ ಇನ್ನೊಂದು ವಿಷಯವನ್ನೂ ಹೇಳಬೇಕು. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು ಹೆಚ್ಚಿರುವ ಹಿನ್ನೆಲೆಯಲ್ಲಿ, ಮೋದಿಯವರು ತಮ್ಮ ಭಾಷಣದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡಬೇಕು ಎಂದು ಹಲವರು ಅಹವಾಲುಗಳನ್ನು ಸಲ್ಲಿಸಿದ್ದರು. ಇಡೀ ದೇಶವೇ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿರುವ ಈ ಹೊತ್ತಿನಲ್ಲಿ ಮೋದಿಯವರು ಏನು ಹೇಳುವರೋ ಎಂಬ ಕುತೂಹಲ ಎಲ್ಲರಿಗೂ ಇತ್ತು. ಶಿಕ್ಷೆ ಮಿಗಿಲೋ ಅಥವಾ ಲೈಂಗಿಕ ಶಿಕ್ಷಣ ಮಿಗಿಲೋ ಎಂಬ ಚರ್ಚೆ ಶುರುವಾಗಿ, ಕಾವು ಏರಿ, ಇನ್ನೇನು ಲೈಂಗಿಕ ಶಿಕ್ಷಣದ ಹೊಸ ವಿಶ್ವವಿದ್ಯಾಲಯವನ್ನು ಹುಟ್ಟುಹಾಕುವುದೊಂದೇ ಬಾಕಿ ಎನ್ನುವ ಹಂತದಲ್ಲಿರುವಾಗ ಎಷ್ಟು ಸರಳ ನೇರ ಪರಿಹಾರ ಸೂಚಿಸಿಬಿಟ್ಟರು ನೋಡಿ. 'ಹೆಣ್ಣು ಮಕ್ಕಳನ್ನು ಎಲ್ಲಿಗೆ ಹೋಗುತ್ತೀರಿ ಎಷ್ಟು ಹೊತ್ತಿಗೆ ಬರುತ್ತೀರಿ ಎಂದೆಲ್ಲ ಕೇಳುವ ತಂದೆ-ತಾಯಿಯರು ಗಂಡು ಮಕ್ಕಳನ್ನೂ ಎಂದಾದರೂ ಹೀಗೇ ವಿಚಾರಿಸಿದ್ದೀರಾ?, ನಿರ್ಬಂಧಿಸಿದ್ದೀರಾ?' ಎಂದು ಕೇಳಿದರು. ಪಾಲಕರು ನೈತಿಕ ಹೊಣೆ ಹೊತ್ತರೆ ತಮ್ಮ ಮಕ್ಕಳು ಅತ್ಯಾಚಾರಿಗಳು, ಉಗ್ರಗಾಮಿಗಳು, ನಕ್ಸಲರು ಆಗುವುದನ್ನು ತಡೆಯಬಹುದೆಂದು ಸ್ಪಷ್ಟವಾಗಿ ಹೇಳಿ ಸಮಾಜದ ಸ್ವಾಸ್ಥ್ಯದ ಜವಾಬ್ದಾರಿಯಲ್ಲಿ ನಮ್ಮ ಮಹತ್ತರ ಪಾಲಿರುವುದರ ಅರಿವು ಮೂಡಿಸಿದರು.

ಗರೀಬೀ ಹಟಾವೋ ಎಂದುಬಿಟ್ಟ ಮಾತ್ರಕ್ಕೆ ಬಡತನ ಬಾಲಮುದುರಿಕೊಂಡು ಓಡಿ ಹೋಗುವುದಿಲ್ಲ. ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಮಾತ್ರ ಅದರ ನಿರ್ಮೂಲನೆ ಸಾಧ್ಯ.ನಮಗಿಂತ ಒಂದೇ ಒಂದು ದಿನ ಮುಂಚಿತವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಪಾಕಿಸ್ತಾನದಲ್ಲಿ ಆಗಸ್ಟ್ 14ರಂದು ಪರಿಸ್ಥಿತಿ ಹೇಗಿತ್ತು ಗೊತ್ತೆ? ಅಂದು ದೇಶದೆಲ್ಲೆಡೆ ಸ್ವಾತಂತ್ರ್ಯದ ಸಂಭ್ರಮವನ್ನೂ ಮೀರಿಸುವ ರಾಷ್ಟ್ರೀಯ ಬಿಕ್ಕಟ್ಟು! ಒಂದು ಕಡೆ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದಲ್ಲಿ, ಆಡಳಿತ ಪಕ್ಷವನ್ನು ವಿರೋಧಿಸಿ ನಡೆದ 'ಸ್ವಾತಂತ್ರ್ಯದ ಮೆರವಣಿಗೆ'ಯಾದರೆ ಮತ್ತೊಂದು ಕಡೆ ತಾಹಿರ್-ಉಲ್-ಕದ್ರಿ ಎಂಬ ಮುಸ್ಲಿಂ ಧರ್ಮಗುರುವಿನ ಅನುಯಾಯಿಗಳ ಪ್ರತಿಭಟನೆ. ಪ್ರಧಾನಿ ನವಾಜ್ ಶರೀಫರ ರಾಜೀನಾಮೆಗೆ ಇಬ್ಬರದೂ ಒತ್ತಾಯ. ಕಳೆದ ವರ್ಷ ಚುನಾಯಿತರಾದ ಅವರು ಗದ್ದುಗೆಯೇರಿದ್ದು ಅಕ್ರಮವಾಗಿ ಎಂಬ ಅಪವಾದ. ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಲುವಾಗಿ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿಗೆ ಹೋಗುವ ಎಲ್ಲ ಹಾದಿಗಳೂ ಅಕ್ಷರಶಃ ಬಂದ್! ಎಂಥ ಆಡಳಿತ ಬೇಕು ಎಂಬುದೇ ಸ್ಪಷ್ಟವಿಲ್ಲದ ಜನತೆ. ಉತ್ತಮ ಆಯ್ಕೆಗಳಿಗೂ ಕೊರತೆ! ಹಾಗೊಮ್ಮೆ, ಹೀಗೊಮ್ಮೆ ಹೊಯ್ದಾಡುವ ಅವರ ಮನಸ್ಸು. ಯಾವ ಕ್ಷಣದಲ್ಲಾದರೂ ಪ್ರಧಾನಿಯ ಮೇಲೆರಗಿ ಆಡಳಿತವನ್ನು ಕಿತ್ತುಕೊಂಡು ಮತ್ತೆ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳಲು ಕಾಯುತ್ತಿರುವ ಸೇನೆ. ಗೆದ್ದಲು ಹುಳುವಿನಂತೆ, ಒಳಗಿನಿಂದಲೇ ದೇಶವನ್ನು ತಿಂದುಹಾಕುತ್ತಿರುವ ತಾಲಿಬಾನ್. ಸೇನೆಯ ಆಡಳಿತವನ್ನು ವಿರೋಧಿಸುವ ಪ್ರಧಾನಿಯ ನೆತ್ತಿಯ ಮೇಲೆ ಸದಾ ಭಯದ ತೂಗುಕತ್ತಿ. ಹೆದರಿದ ಗುಬ್ಬಚ್ಚಿಯಂತೆ ಅವರಾಡುವ ಮಾತುಗಳು. ಯಾರು ಹಡೆಯಬೇಕು ಅಭಿವೃದ್ಧಿಯ ಕನಸುಗಳನ್ನು? ಯಾರು ತೆರೆಯಬೇಕು ಅವಕಾಶಗಳ ಬಾಗಿಲನ್ನು?

ಎಷ್ಟು ವ್ಯತ್ಯಾಸವಿದೆಯಲ್ಲವೇ ಎರಡೂ ದೇಶಗಳ ನಡುವೆ? ಅವುಗಳ ನೇತಾರರ ನಡುವೆ? ಬರೀ ನಮ್ಮ ದೇಶವನ್ನಷ್ಟೇ ಅಲ್ಲ, ಸಾರ್ಕ್ ದೇಶಗಳನ್ನೆಲ್ಲ ಒಟ್ಟಾಗಿ ಕೈಹಿಡಿದು ನಡೆಸುವ ಕನಸು ಕಾಣುತ್ತಿರುವ, ಅಭಿವೃದ್ಧಿಯ ಹೊಸ ಮಜಲುಗಳನ್ನು ಸೃಷ್ಟಿಸುವ ಹುಮ್ಮಸ್ಸಿನಲ್ಲಿರುವ ನಮ್ಮ ಪ್ರಧಾನಿಯ ಧ್ಯೇಯೋದ್ದೇಶವನ್ನು ನಾವು ಮನಗಾಣುವುದು ಯಾವಾಗ? ಅವರೊಂದಿಗೆ ಹೆಗಲುಸೇರಿಸಿ ಕನಸುಗಳನ್ನೆಲ್ಲ ನನಸುಮಾಡಿಕೊಂಡು ಬೀಗುವುದು ಯಾವಾಗ? ನಮ್ಮ ಭಾರತವನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಲು ಇದಕ್ಕಿಂತ ಸುಸಂದರ್ಭ ಬೇಕೇ? ಈಗ ಕೈಗೆಟುಕುವಂತಿರುವ ಅವಕಾಶಗಳನ್ನು ನಮ್ಮ ಎಂದಿನ ಉದಾಸೀನ ಧೋರಣೆಯಿಂದಾಗಿ ಕಳೆದುಕೊಂಡು, ಕೊನೆಗೆ, ದೇವರ ನಿರೀಕ್ಷೆಯಲ್ಲಿ ಕುಳಿತ ವ್ಯಾಪಾರಿಯ ಕಥೆ ನಮ್ಮದಾಗಬಾರದಲ್ಲವೇ?

ನೆನಪಿರಲಿ, God helps only those who help themselves! 

4 comments:

  1. you dont surprise me. you are excellent. one more wonderful thoughtprovoking article. loved your clear expression. keep writing!

    ReplyDelete
  2. Speech keliddakinta ondu paTTu jasthi inspiration idanna odi siktu... Salute.

    ReplyDelete