Friday, 8 August 2014

ಧಾರಾವಾಹಿಗಳ ಲೋಕದಲ್ಲೇಕೆ ಕೃತಕತೆಯ ಕೇಕೆ?

ಭವ್ಯವಾದ ಮನೆಯ ಕೋಣೆಯೊಂದರಲ್ಲಿ ಕಥಾನಾಯಕ ತನ್ನ ಅಪ್ಪ ಹಾಗೂ ಅಮ್ಮನೊಂದಿಗೆ ಕುಳಿತಿರುತ್ತಾನೆ. ಗೃಹಿಣಿಯಾದ ಅಮ್ಮ ಸೀರೆಗೆ ಹೊಂದುವಂಥ ಬಳೆ, ಲಿಪ್‍ಸ್ಟಿಕ್ ಹಾಗೂ ಹಣೆಬೊಟ್ಟುಗಳನ್ನು ಧರಿಸಿ ಮಿರಿಮಿರಿ ಮಿಂಚುತ್ತಾ ಕುಳಿತಿದ್ದರೆ, ನಿವೃತ್ತನಾದ ಅಪ್ಪ ಟ್ರಿಮ್ ಆಗಿ ಕುಳಿತ ‘ಸಫಾರಿ’ಧಾರಿ! ಸ್ವಲ್ಪ ಹೊತ್ತಿನ ಮೌನದ ನಂತರ, "ಅಪ್ಪಾ, ನಿಮಗೆ ಹೇಗೆ ಹೇಳುವುದು ಎಂದೇ ತಿಳಿಯುತ್ತಿಲ್ಲ. ನಮಗೆ ಸಿಗಬೇಕಾಗಿದ್ದ ಟೆಂಡರ್ ನಮ್ಮ ಪ್ರತಿಸ್ಪರ್ಧಿ ಕಂಪೆನಿಗೆ ಸಿಕ್ಕಿಬಿಟ್ಟಿದೆ. ಯಾರೋ ನಮ್ಮವರೇ ನಮಗೆ ಮೋಸ ಮಾಡಿದ್ದಾರೆ." ಎನ್ನುತ್ತಾನೆ ಮಗ. ವಿಷಯ ಕೇಳಿದ ತಕ್ಷಣ ತಂದೆ-ತಾಯಿ ಒಟ್ಟಿಗೆ ಬೆಚ್ಚಿಬೀಳುವುದಿಲ್ಲ. ಅಥವಾ ಹಾಗೆ ತೋರಿಸುವುದಿಲ್ಲ. ಒಬ್ಬೊಬ್ಬರಾಗಿ ಕಣ್ಣುಗಳನ್ನು ಅಗಲಿಸುತ್ತಾರೆ. ಹಾಗೆ ಅಗಲಿಸಿದಾಗ, ನಾಯಕನ ತಾಯಿಯ ಕಣ್ಣಿಗೆ ಹಚ್ಚಿದ ಲೈನರ್, ಮಸ್ಕರಾ, ಕಾಡಿಗೆಗಳೆಲ್ಲ ಸ್ಪಷ್ಟವಾಗಿ ಗೋಚರಿಸುತ್ತವೆ. ಅದನ್ನು ನೋಡಿಯೇ, ಅವರಿಗೆ ಶಾಕ್ ಆಗಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇಬ್ಬರನ್ನೂ ಹೀಗೆ ಸರದಿಯಲ್ಲಿ ಕೆಲಕ್ಷಣಗಳ ಮಟ್ಟಿಗೆ ತೋರಿಸುವಾಗ, ಹಿನ್ನೆಲೆಯಲ್ಲಿ, ಆಕಾಶವೇ ಕಳಚಿ ಬಿದ್ದಿತೇನೋ ಎನಿಸುವಂಥ ಕರ್ಣ-ಕಠೋರ ಸಂಗೀತ ಹೊಮ್ಮುತ್ತದೆ. ಅದರ ನಂತರದ ದೃಶ್ಯ, ಪಕ್ಕದ ಕೋಣೆಯಲ್ಲಿ ನಿಂತು, ಅವರ ಮಾತುಗಳನ್ನು ಕೇಳಿಸಿಕೊಂಡು ಮುಗುಳ್ನಗುತ್ತಿರುವ ಖಳನಾಯಕಿ ಸೊಸೆಯದ್ದು. ಅವಳಿಗೇ ಬೇರೆ ಹಿನ್ನೆಲೆ ಸಂಗೀತ! ಮೋಸದ ರೂವಾರಿ ಅವಳೇ ಎಂಬುದು ಅವಳ ಸೇಡು ತುಂಬಿದ ನಗೆಯನ್ನು, ಇರಿಯುವ ನೋಟವನ್ನು ನೋಡಿದ ಕೂಡಲೇ ಗೊತ್ತಾಗಿಹೋಗುತ್ತದೆ.

ಇದು ಇಂದಿನ ಯಾವುದೇ ಭಾಷೆಯ ಮೆಗಾ-ಧಾರಾವಾಹಿಗಳಲ್ಲಿ ಕಾಣಬರುವ ಸಾಮಾನ್ಯ ಸನ್ನಿವೇಶಗಳಲ್ಲಿ ಒಂದು. ಮತ್ತೊಂದು ಸನ್ನಿವೇಶ ನೋಡಿ. ಕಥಾನಾಯಕಿ ಹಣ್ಣು-ಕಾಯಿಯ ಬುಟ್ಟಿ ಹಿಡಿದು ದೇವಸ್ಥಾನಕ್ಕೆ ಹೊರಡುತ್ತಾಳೆ. ಸೋಮವಾರದ ಸಂಚಿಕೆಯಲ್ಲಿ ಅವಳು ಆಟೋ ಹತ್ತಿದರೆ ದೇವಸ್ಥಾನ ತಲುಪುವುದು ಗುರುವಾರ ಅಥವಾ ಶುಕ್ರವಾರದ ಸಂಚಿಕೆಯಲ್ಲಿಯೇ. ಏಕೆಂದರೆ ಮಾರ್ಗ ಮಧ್ಯದಲ್ಲಿ ಅವಳಿಗೆ, ಬಹಳ ದಿನಗಳಿಂದ ಕಾಣೆಯಾಗಿದ್ದ ಖಳನಾಯಕ ಕಣ್ಣಿಗೆ ಬೀಳುತ್ತಾನೆ. ರಸ್ತೆ ಬದಿಯಲ್ಲಿ ನಿಂತು ಫೋನ್‍ನಲ್ಲಿ ಮಾತನಾಡುತ್ತಿದ್ದವನನ್ನು ಅವಳು ಗಮನಿಸಿ, ಆಟೋ ನಿಲ್ಲಿಸುತ್ತಾಳೆ. ಅವನೇನಾ ಎಂದು ಖಚಿತಪಡಿಸಿಕೊಳ್ಳಲು ಮೆಲ್ಲಗೆ ಅವನ ಬಳಿ ಹೋಗುತ್ತಾಳೆ. ಅವಳನ್ನು ನೋಡಿ ಓಡುವ ಅವನು, ಅವನನ್ನು ಹಿಂಬಾಲಿಸಿ ಓಡುವ ಅವಳು, ಅವಳನ್ನೇ ಕಾಯುತ್ತಾ ನಿಲ್ಲುವ ಆಟೋದವನು! ಒಟ್ಟಿನಲ್ಲಿ ಖಳನಾಯಕನನ್ನು ಹಿಡಿಯಲಾಗದೆ ಉಸ್ಸಪ್ಪಾ ಎಂದು ಮರಳಿ ಆಟೋದವನ ಬಳಿ ಬಂದು, 'ನಡಿಯಪ್ಪಾ ದೇವಸ್ಥಾನಕ್ಕೆ' ಎಂದು ಹೇಳುವ ಹೊತ್ತಿಗೆ ಗುರುವಾರ ಬಂದೇ ಬಿಟ್ಟಿರುತ್ತದೆ! ದೇವಸ್ಥಾನದ ಒಳಗಿರುವ ಆ ದೇವರಾಣೆಗೂ ಇಲ್ಲಿ ಕಥೆಯೆಂಬುದು ಗೌಣ. ಪ್ರಾಮುಖ್ಯವೇನಿದ್ದರೂ ನಾಟಕೀಯತೆ, ಅಸಹಜತೆಯನ್ನು ಮೆರೆಸುವ ಪಾತ್ರ ಹಾಗೂ ಘಟನೆಗಳಿಗೆ ಮಾತ್ರ. ಸಂಬಂಧಗಳ ಗಾಢತೆಯನ್ನು ಕಲಕಿ, ಅರ್ಥವನ್ನು ತಿರುಚಿ, ಬೆಲೆಯನ್ನೇ ಬರಿದುಮಾಡಿಬಿಡುವ ಈ ಧಾರಾವಾಹಿಗಳದ್ದು ಎಂಥಾ ಲೋಕ? ಇಲ್ಲಿ ಒಬ್ಬನ ಹೆಂಡತಿಯಾಗಿ ಮಗುವನ್ನು ಹೆತ್ತವಳು ಸಲೀಸಾಗಿ ಮತ್ತೊಬ್ಬನ ಹೆಂಡತಿಯಾಗಬಲ್ಲಳು. ದ್ವೇಷ ಸಾಧಿಸಲೆಂದೇ ಒಂದು ಮನೆಗೆ ಸೊಸೆಯ ರೂಪದ ಹೆಮ್ಮಾರಿಯಾಗಿ ಬರಬಲ್ಲಳು. ವಂಶವನ್ನೇ ನಿರ್ವಂಶ ಮಾಡುವ ಹಟ ಹಿಡಿದು ಗೆಲ್ಲಬಲ್ಲಳು. ಎಲ್ಲ ವ್ಯೂಹ, ತಂತ್ರಗಾರಿಕೆಗಳೂ ಇಲ್ಲಿ ಲಭ್ಯ. ಕುಡಿಯುವ ಹಾಲಿನಲ್ಲಿ ವಿಷ ಬೆರೆಸುವುದರಿಂದ ಹಿಡಿದು ಗರ್ಭಿಣಿಯನ್ನು ಹೊತ್ತೊಯ್ಯುವುದೂ ಇಲ್ಲಿ ಸಾಧ್ಯ. 'ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳೂ ಕೇವಲ ಕಾಲ್ಪನಿಕ' ಎಂಬ ಒಂದು ಸಾಲು ಹಾಕಿಬಿಟ್ಟರೆ ಕಲ್ಪನೆಯ ಕುದುರೆ ಹುಚ್ಚೆದ್ದು ಓಡುವುದಕ್ಕೆ ರಹದಾರಿ ಸಿಕ್ಕಿದಂತೆಯೇ! ನಂಟುಗಳನ್ನು ಬಿಂಬಿಸುವಲ್ಲಿ ಸ್ವಲ್ಪವಾದರೂ ನೈಜತೆ ಬೇಡವೇ? ಪಾತ್ರಗಳಿಗೊಂದು ತೂಕವಿರಬಾರದೇ? ಗಮನಿಸಿ ನೋಡಿ, ಮನೆಯಲ್ಲಿರಲಿ ಅಥವಾ ಆಸ್ಪತ್ರೆಯ ಹಾಸಿಗೆಯಲ್ಲಿರಲಿ, ಸ್ತ್ರೀ ಪಾತ್ರಗಳ ಸಿಂಗಾರದಲ್ಲಿ ಒಂಚೂರೂ ವ್ಯತ್ಯಾಸವಿರುವುದಿಲ್ಲ. ಸಂದರ್ಭ ಯಾವುದೇ ಇರಲಿ, ಕಾಲೇಜು ಹುಡುಗಿಯರಿಂದ ಹಿಡಿದು, ಮೂವರು ಸೊಸೆಯಂದಿರಿರುವ ಅತ್ತೆಯವರೆಗೂ ಎಲ್ಲರ ಮುಖಗಳ ಮೇಲೂ ಮುಕ್ಕಾಲು ಕೇಜಿ ಮೇಕಪ್ ಇರಲೇಬೇಕು. ಅದು ಹೋಗಲಿ, ರಾತ್ರಿ ನಿದ್ರಿಸುತ್ತಿರುವಾಗಲೂ ತಲೆಯ ಒಂದು ಕೂದಲೂ ಅತ್ತಿತ್ತ ಅಲುಗುವುದಿಲ್ಲ. ಸೀರೆಯ ನೆರಿಗೆ ಸರಿಯುವುದಿಲ್ಲ. ಸೆರಗು ಸುಕ್ಕುಗಟ್ಟುವುದಿಲ್ಲ. ಸಣ್ಣ ತಲೆ ನೋವು ಬಂದರೆ ಅಥವಾ ಒಂದು ಇಡೀ ದಿನ ಅಡುಗೆಮನೆಯಲ್ಲಿ ಕಳೆದರೆ ಅಬ್ಬೆಪಾರಿಗಳಂತೆ ಕಾಣುವವರು ನಾವು ನೀವು ಮಾತ್ರ. ಅವರಿಗೆ ಅದು ಅನ್ವಯಿಸುವುದೇ ಇಲ್ಲ.

ಮೊದಲು ಹೀಗಿರಲಿಲ್ಲ ಧಾರಾವಾಹಿಗಳು. ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿ ಹೊಸ ದಾಖಲೆಯನ್ನೇ ಬರೆದ ರಾಮಾಯಣವಾಗಲೀ, ಮಹಾಭಾರತವಾಗಲೀ ಎಷ್ಟು ನೈಜವಾಗಿದ್ದವು! ಕೌಟುಂಬಿಕ ಧಾರಾವಾಹಿಗಳಾದ ನುಕ್ಕಡ್, ಬುನಿಯಾದ್‍ಗಳನ್ನು ಮರೆಯುವುದು ಸಾಧ್ಯವೇ? ಮಕ್ಕಳ ಸಲುವಾಗಿ ಪ್ರಸಾರವಾಗುತ್ತಿದ್ದ ಏಕ್,ದೋ,ತೀನ್,ಚಾರ್ ಹಾಗೂ ವಿಕ್ರಮ್ ಔರ್ ಬೇತಾಲ್‍ನ ಕಥೆಗಳೂ ಅಷ್ಟೇ ಸ್ವಾರಸ್ಯಕರವಾಗಿರುತ್ತಿದ್ದವು. ಪ್ರೇಮ ಕಥೆ ಚಂದ್ರಕಾಂತ, ಪತ್ತೇದಾರಿ ಬ್ಯೋಮಕೇಶ್ ಬಕ್ಷಿ, ಒಂದೇ ಎರಡೇ ವೈವಿಧ್ಯಗಳು? ಚಾಣಕ್ಯನ ನೀತಿಪಾಠ ಒಂದೆಡೆಯಾದರೆ, ಚಿತ್ರಹಾರದ ಹಾಡುಗಳ ಸರಮಾಲೆ ಮತ್ತೊಂದೆಡೆ. ನಮ್ಮ ಭಾನುವಾರ ಶುರುವಾಗುತ್ತಿದ್ದುದೇ ಬೆಳಗಿನ ರಂಗೋಲಿಯಿಂದ. ಇದ್ದದ್ದು ಒಂದೇ ವಾಹಿನಿಯಾದರೂ ಎಲ್ಲ ವಯೋಮಾನದವರ ಅಭಿರುಚಿಗೆ ತಕ್ಕಂತೆ ಇರುತ್ತಿದ್ದವು ಧಾರಾವಾಹಿಗಳು, ಕಾರ್ಯಕ್ರಮಗಳು. ಸಣ್ಣ ಕಥೆಗಳ ಹಂದರವಿದ್ದ, 'ಮಾಲ್ಗುಡಿ ಡೇಸ್'ನ ಉದಾಹರಣೆಯನ್ನೇ ನೋಡಿ. ಒಟ್ಟು 39 ಕಂತುಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿ ನಮ್ಮ ಕರ್ನಾಟಕದ ಕಲಾವಿದರದ್ದೇ ಎಂಬುದೊಂದು ಹೆಮ್ಮೆ. ಪ್ರತಿಭೆಯ ಖನಿಯಾಗಿದ್ದ ಶಂಕರ್‍ನಾಗ್‍ರ ಸಾರಥ್ಯದಲ್ಲಿ, ಮಾಸ್ಟರ್ ಮಂಜುನಾಥ್, ಅನಂತ್‍ನಾಗ್, ಬಿ.ಜಯಶ್ರೀ ಮುಂತಾದವರ ಹೃದಯಸ್ಪರ್ಶಿ ಅಭಿನಯದೊಂದಿಗೆ ಮೂಡಿ ಬಂದ ಈ ಧಾರಾವಾಹಿಗೆ ಇಡೀ ದೇಶ ಮನಸೋತಿತ್ತು. ಹಾಗೆಯೇ, ನಮ್ಮ ದೇಶದ ಸಾಂಸ್ಕೃತಿಕತೆಯ ಸ್ವಾದವನ್ನು ಉಣಬಡಿಸುತ್ತಿದ್ದ ಸುರಭಿ ಎಂಬ ರಸಗವಳವೂ ನೆನಪಿರಬೇಕು ನಿಮಗೆ. ಕಾರ್ಯಕ್ರಮದ ನಿರೂಪಕರಾದ ಸಿದ್ಧಾರ್ಥ ಕಾಕ್ ಹಾಗೂ ರೇಣುಕಾ ಶಹಾನೆ ನಗುನಗುತ್ತಾ 'ನಮಶ್ಕಾರ್'ಎನ್ನುವುದನ್ನೇ ಕಾಯುತ್ತಿತ್ತು ದೇಶದ ಜನತೆ. ಕಾರ್ಯಕ್ರಮದ ಪ್ರಶ್ನೋತ್ತರ ವಿಭಾಗದಲ್ಲಿ, ಪ್ರಯೋಗಾರ್ಥವಾಗಿ, ಮೊತ್ತಮೊದಲ ಬಾರಿಗೆ ಜನರನ್ನು ಉದ್ದೇಶಿಸಿ ಪ್ರಶ್ನೆಗಳನ್ನು ಕೇಳಿ, ಪೋಸ್ಟ್ ಕಾರ್ಡ್ ನಲ್ಲಿ ಉತ್ತರ ಬರೆದು ಕಳುಹಿಸುವಂತೆ ಕೋರಲಾಯಿತು. ಯಾವ ಮಟ್ಟದ ಪ್ರತಿಕ್ರಿಯೆ ಹರಿದು ಬರತೊಡಗಿತ್ತೆಂದರೆ, ಸುಲಭವಾಗಿ ಗುರುತಿಸುವ ಸಲುವಾಗಿ ಅಂಚೆ ಇಲಾಖೆ 'ಕಾಂಪಿಟೇಶನ್ ಪೋಸ್ಟ್ ಕಾರ್ಡ್' ಎಂಬ ಹೊಸ ಕಾರ್ಡನ್ನೇ ಪರಿಚಯಿಸಬೇಕಾಯಿತು! ಇವಿಷ್ಟೇ ಅಲ್ಲದೆ, ಫೌಜಿ, ಸರ್ಕಸ್,  ಕರಮ್‍ಚಂದ್ ಮುಂತಾದ ಅನೇಕ ಧಾರಾವಾಹಿಗಳು ತಮ್ಮ ವಿಭಿನ್ನತೆಯಿಂದಾಗಿ ಮನಸೆಳೆದಿದ್ದವು. ಆದ್ದರಿಂದಲೇ ಅವು ಇಂದಿಗೂ ನಮ್ಮ ಮನಃಪಟಲದಿಂದ ಮಾಸಿಲ್ಲ. ಮಾಸುವುದೂ ಇಲ್ಲ
ದೂರದರ್ಶನದ ಅಧಿಪತ್ಯ ಕೊನೆಯಾಗಿ ಖಾಸಗಿ ವಾಹಿನಿಗಳು ಶುರುವಾಗುತ್ತಿದ್ದಂತೆಯೇ ಬದಲಾಯಿತು ನೋಡಿ ಹವೆ. ಇಸವಿ 2000ರಲ್ಲಿ ಸ್ಮೃತಿ ಇರಾನಿ 'ಕ್ಯೋಂಕಿ ಸಾಸ್ ಭೀ ಕಭೀ ಬಹು ಥೀ' ಎಂಬ ಧಾರಾವಾಹಿಯ ಶೀರ್ಷಿಕೆ ಗೀತೆಯಲ್ಲಿ ಮನೆಯ ಎರಡೂ ಬಾಗಿಲುಗಳನ್ನು ದೊಡ್ದದಾಗಿ ತೆರೆದದ್ದೇ ಬಂತು, ಮನೆತನದ, ಪೀಳಿಗೆಗಳ ಕುರಿತ ಧಾರಾವಾಹಿಗಳು ಸಾಲಾಗಿ ನಮ್ಮ ಮನೆಗಳಿಗೆ ದಾಳಿ ಇಟ್ಟವು. ಈ ಎಲ್ಲ ಬದಲಾವಣೆಗಳಿಂದ ಕನ್ನಡವೂ ಹೊರತಾಗಲಿಲ್ಲ. ನಮ್ಮಲ್ಲಿ ಮೂಡಿ ಬಂದ ವಿಭಿನ್ನವಾದ ಧಾರಾವಾಹಿಗಳ ಪಟ್ಟಿ ಸಣ್ಣದೇ. ದೂರದರ್ಶನದಲ್ಲಿ ಪ್ರಸಾರವಾದ, ಟಿ.ಎನ್.ಸೀತಾರಾಂ ಅವರ ಮಾಯಾಮೃಗ ಎಷ್ಟು ಸರಳತೆ ಹಾಗೂ ಹೊಸತನಗಳಿಂದ ಕೂಡಿತ್ತೆಂದರೆ ನಾವೆಲ್ಲ ಅದರ ಮೋಡಿಗೆ ಬಲಿಯಾಗಿದ್ದೆವು. ನಂತರ ಬಂದ ‘ಮನ್ವಂತರ’ ಹಾಗೂ ‘ಮುಕ್ತ’ ಧಾರಾವಾಹಿಗಳಲ್ಲಿ ನ್ಯಾಯಾಲಯದ ಕಲಾಪಗಳು ನಮ್ಮ ಮನಸೂರೆಗೊಂಡದ್ದೂ ಆಯಿತು, ಆ ಏಕತಾನತೆ ಕೊಂಚ ಮಟ್ಟಿಗೆ ಬೇಸರ ಹಿಡಿಸಿದ್ದೂ ಆಯಿತು. ಉತ್ತರ ಕರ್ನಾಟಕದ ಸೊಬಗನ್ನು ತೆರೆದಿಟ್ಟ ಮೂಡಲ ಮನೆ, ಎಸ್.ಎಲ್ ಭೈರಪ್ಪನವರ ಕೃತಿಯನ್ನಾಧರಿಸಿದ ಗೃಹಭಂಗ ಹಾಗೂ ಶುದ್ಧ ಹಾಸ್ಯದಿಂದ ಎಲ್ಲರಿಗೂ ಪ್ರಿಯವಾದ ಕೆಲವು ಧಾರಾವಾಹಿಗಳನ್ನು ಬಿಟ್ಟರೆ ವಿಶಿಷ್ಟ ಎನಿಸಿದ, ನಮ್ಮನ್ನು ಹಿಡಿದಿಟ್ಟ ಧಾರಾವಾಹಿಗಳು ಬೆರಳೆಣಿಕೆಯಷ್ಟೇ. ನಂತರ ಶುರುವಾಗಿದ್ದು ಕೌಟುಂಬಿಕ ಧಾರಾವಾಹಿಗಳ ಭರಾಟೆ.

ಈಗ ಅವುಗಳ ಪರ್ವ ಕಾಲ. ಏಕೆಂದರೆ ಅವುಗಳನ್ನು ಬಿಟ್ಟರೆ ಮನರಂಜನೆಗೆ ಬೇರೆ ಮಾರ್ಗವೇ ಇಲ್ಲ. ರಾಮಾಯಣ, ಮಹಾಭಾರತಗಳ ಹೊಸ ಆವೃತ್ತಿಗಳು ಬರುತ್ತಲೇ ಇವೆಯಾದರೂ ಹಳೆಯದಕ್ಕೆ ಅವು ಸಾಟಿಯಲ್ಲ. ಇನ್ನುಳಿದವು ರಿಯಾಲಿಟಿ ಶೋಗಳು. ಹಾಡು, ಕುಣಿತ, ಪ್ರತಿಭಾ ಪ್ರದರ್ಶನ, ಎಲ್ಲದರಲ್ಲೂ ಜಿದ್ದಾಜಿದ್ದಿನ ಹಣಾಹಣಿ. ಇಷ್ಟು ಸಾಲದು ಎಂಬಂತೆ ಈ ಪಟ್ಟಿಗೆ ಬಿಗ್ ಬಾಸ್ ಎಂಬ ಹೊಸ ಸೇರ್ಪಡೆ ಬೇರೆ. ಪ್ರಾಣಿಗಳಿಗೆ ಮೃಗಾಲಯ ಹೇಗೋ ಮನುಷ್ಯರಿಗೆ ಬಿಗ್ ಬಾಸ್‍ನ ಮನೆಯೂ ಹಾಗೇ. ಒಂದಷ್ಟು ಜನರನ್ನು ಒಳಗೆ ಕೂಡಿಟ್ಟು, ಅವರನ್ನು ಕೆಣಕಿ, ಭಾವನೆಗಳನ್ನು ಅತಿರೇಕಕ್ಕೆ ಕೊಂಡೊಯ್ದು ಮಜಾ ನೋಡುವುದು. ಅವರ ಕಿತ್ತಾಟವನ್ನು ಜಗತ್ತಿಗೆಲ್ಲ ಬಿತ್ತರಿಸುವುದು. ಮನರಂಜನೆಯ ಹೆಸರಿನಲ್ಲಿ ನಡೆಯುತ್ತಿರುವ ಇದು ತಿಕ್ಕಲುತನವಲ್ಲದೇ ಮತ್ತೇನು?

ನಿಜವಾಗಿಯೂ ದಿಗಿಲಾಗುತ್ತದೆ ಇಂದಿನ ಬಹುತೇಕ ಧಾರಾವಾಹಿಗಳನ್ನು ನೋಡಿದಾಗ. ಕಥೆ ಇರಲೇಬೇಕೆಂಬುದು ಕಡ್ಡಾಯವಲ್ಲ. ನಟ-ನಟಿಯರಿಗೆ ಅಭಿನಯದ ಗಂಧ-ಗಾಳಿ ಇರಬೇಕೆಂಬ ನಿಯಮವೂ ಇಲ್ಲ. ನೋಡುಗರಿಗೆ ಮಾದರಿಯಾಗಬಲ್ಲ ಅಂಶಗಳು ಹುಡುಕಿದರೂ ಸಿಗುವುದಿಲ್ಲ. ಹಾಗಾದರೆ ಯಾವ ಪುರುಷಾರ್ಥಕ್ಕೆ ಹೀಗೆ ಡಜನ್‍ಗಟ್ಟಳೆ ಸಂಖ್ಯೆಯಲ್ಲಿ ಪ್ರಸಾರವಾಗುತ್ತಿವೆ? ಅವುಗಳಿಂದ ನಾವು ಖಂಡಿತ ಭಗವದ್ಗೀತೆಯ ಸಾರಾಮೃತವನ್ನು ಅಪೇಕ್ಷಿಸುವುದಿಲ್ಲ. ಆದರೆ ಒಂದು ಸಣ್ಣ ಸಂದೇಶ, ಚಿಂತನೆ ಅಥವಾ ಕಲಿಕೆಯನ್ನು ಕೊಡಲಾರದಷ್ಟು ಸಾಂಸ್ಕೃತಿಕ ಬಡತನ ವಕ್ಕರಿಸಿದೆಯೇ? ಬದುಕೆಂದರೆ ಬರೀ ಅಸೂಯೆ, ಪ್ರತೀಕಾರ ಹಾಗೂ ಅಕ್ರಮ ಸಂಬಂಧಗಳೇ? ವಸ್ತ್ರ, ಆಭೂಷಣ, ಮಾತು, ನಡತೆ, ವ್ಯವಹಾರ ಎಲ್ಲವೂ ಬರೀ ತೋರಿಕೆ. ಎಲ್ಲೆಲ್ಲೂ ಗುಟ್ಟು, ಸೇಡು, ಗುಂಪುಗಾರಿಕೆ. ನೈಜ ಬದುಕಿಗೂ ಧಾರಾವಾಹಿಗಳಿಗೂ ಸಾಮ್ಯವೇ ಇಲ್ಲ. ಟಿ.ಆರ್.ಪಿ ಎಂಬ ಬಕಾಸುರನ ಹಸಿವಿಗೆ ನಮ್ಮ ಸೂಕ್ಷ್ಮ ಸಂವೇದನೆ, ಮೌಲ್ಯಗಳೇ ಆಹಾರವಾಗಬೇಕೇ? ಇಂಥ ಧಾರಾವಾಹಿಗಳನ್ನು, ಚಟ ಹತ್ತಿಸಿಕೊಂಡು ನೋಡುವ ಹಲವು ಮನೆಗಳಲ್ಲಿ ನಿತ್ಯ ರಣರಂಪ. ಟಿ.ವಿಯ ರಿಮೋಟ್‍ಗಾಗಿ ಗುದ್ದಾಟ! ಹಿರಿಯರಿಗೇನೋ ಹೊತ್ತು ಕಳೆಯುವ ಸಾಧನ, ಆದರೆ ಮಕ್ಕಳ ಮೇಲಾಗುವ ಪರಿಣಾಮ?


ಕಥೆ ಹೇಳುವ ಕಲೆಗಾರಿಕೆಯೇ ಇಲ್ಲದವರು ಹೇರುತ್ತಿರುವುದನ್ನು ಒಲ್ಲೆ ಎನ್ನಲಾಗದಷ್ಟು ದುರ್ಬಲರು ನಾವಾಗಿದ್ದೇವೆ. ಅಂದಮೇಲೆ, ತಪ್ಪು ನಮ್ಮಲ್ಲೇ ಇರಬೇಕು. ಅಲ್ಲವೇ? 

No comments:

Post a Comment