Sunday 14 September 2014

ಮೋದಿ ಅಬೆಯನ್ನು ಅಪ್ಪಿದರೆ ಚೀನಾ ಏಕೆ ಹಬೆಯಾಡಬೇಕು?


2013ರ ಮೇ ತಿಂಗಳು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಜಪಾನ್‍ಗೆ ಭೇಟಿ ನೀಡಿದ್ದರು. ಆಗ ನಡೆದಿದ್ದ ಮಾತುಕತೆಯಲ್ಲಿ ಜಪಾನ್ ಭಾರತಕ್ಕೆ ಪೂರಕವಾದ ಹಲವು ನಿರ್ಣಯಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿತ್ತು. ಅದರಲ್ಲಿ ಮುಖ್ಯವಾದದ್ದು, 2ನೇ ವಿಶ್ವಯುದ್ಧದ ನಂತರ ಜಪಾನ್ ಭಾರತದ ಮೇಲೆ ಹೇರಿದ್ದ ಶಸ್ತ್ರಾಸ್ತ್ರಗಳ ಪೂರೈಕೆಯ ನಿಷೇಧವನ್ನು ಹಿಂಪಡೆಯುವುದು. ಅದರ ಫಲವಾಗಿ ಭಾರತಕ್ಕೆ, ಜಪಾನಿನ ಹಾರುವ ದೋಣಿ ಎಂದೇ ಖ್ಯಾತವಾದ ವಿಮಾನ ‘ಶಿನ್‍‍ಮಯ್ವಾ ಯುಎಸ್-2’ ಲಭಿಸಲಿತ್ತು. ನೆಲ ಹಾಗೂ ಜಲದ ಮೇಲೆ ಅತ್ಯಂತ ಕಡಿಮೆ ಅವಧಿಯಲ್ಲಿ ಟೇಕ್‍ ಆಫ್ ಮತ್ತು ಲ್ಯಾಂಡಿಂಗ್ ಮಾಡಬಲ್ಲ ಆಂಫಿಬಿಯಸ್ ವಿಮಾನವಾದ ಇದು ಭಾರತದ ನೆಲ-ಜಲ ಸಂರಕ್ಷಣಾ ಕಾರ್ಯಾಚರಣೆಗಳಿಗೆ ವರವಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇರಲಿಲ್ಲ. ಇದರ ಜೊತೆಗೇ ಚರ್ಚೆಯಾದ ಮತ್ತೊಂದು ವಿಷಯ ಭಾರತ ಹಾಗೂ ಜಪಾನಿನ ನೌಕಾದಳದ ಜಂಟಿ ತರಬೇತಿ. ಈ ಮಾತುಕತೆಗಳು ನಡೆದಿದ್ದವು ಅಷ್ಟೇ. ಇನ್ನೂ ಯಾವ ಅಧಿಕೃತ ಮೊಹರೂ ಬಿದ್ದಿರಲಿಲ್ಲ. ಪ್ರಧಾನಿಗಳಿಬ್ಬರೂ ಇದನ್ನೆಲ್ಲ ಅನುಮೋದಿಸಿ ಯಾವ ಒಪ್ಪಂದಕ್ಕೂ ಸಹಿ ಮಾಡಿರಲೂ ಇಲ್ಲ. ಅಷ್ಟರಲ್ಲೇ ಭುಸುಗುಟ್ಟಿತ್ತು ಚೀನಾ! ಕಮ್ಯೂನಿಸ್ಟ್ ವಾದದ ವಿಷವನ್ನುಗುಳಲು ವೇದಿಕೆಯಾಗಿ ಬಳಕೆಯಾಗುವ ತನ್ನ ಪತ್ರಿಕೆ 'ಪೀಪಲ್ಸ್ ಡೈಲಿ'ಯಲ್ಲಿ, 'ದೆಹಲಿಯ ಜಾಣತನವಿರುವುದು ಬೀಜಿಂಗ್‍ನೊಂದಿಗಿನ ತನ್ನ ವೈಮನಸ್ಯವನ್ನು ಶಾಂತವಾಗಿ ಪರಿಹರಿಸಿಕೊಳ್ಳುವುದರಲ್ಲಿ, ಕುಮ್ಮಕ್ಕು ಕೊಡುವ ಬೇರೆ ದೇಶಗಳೊಡನೆ ಕೈಜೋಡಿಸುವುದರಲ್ಲಲ್ಲ' ಎಂದು ತನ್ನ ಸಿಟ್ಟನ್ನು ಹೊರಹಾಕಿತ್ತು. ಜಪಾನಿನ ಪ್ರಧಾನಿ ಶಿಂಝೋ ಅಬೆ ಭಾರತ, ಆಸ್ಟ್ರೇಲಿಯ ಹಾಗೂ ಅಮೆರಿಕಗಳ ಕಡೆ ಸ್ನೇಹ ಹಸ್ತ ಚಾಚಿದ್ದಕ್ಕೆ ಅವರನ್ನು ಚಿಲ್ಲರೆ ಕಳ್ಳಕಾಕರು ಎಂದು ಜರೆಯಲೂ ಅದು ಹಿಂದೆಮುಂದೆ ನೋಡಲಿಲ್ಲ.

ಮತ್ತೊಂದು ಘಟನೆ ಇತ್ತೀಚೆಗೆ ನಡೆದದ್ದು. ಅಮೆರಿಕದ ವಾಷಿಂಗ್ಟನ್‍ನಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಸಭೆಯೊಂದು ಆಯೋಜಿಸಲ್ಪಟ್ಟಿತ್ತು. ಚಹಾ ವಿರಾಮದ ನಂತರ ನಡೆದ ಕುಶಲೋಪರಿಯ ವೇಳೆ ಚೀನಾದ ಪ್ರತಿನಿಧಿ ಭಾರತದ ಬಗ್ಗೆ ಆಡಿದ ಮಾತು ಕೇಳಿ ಅಲ್ಲಿದ್ದ ಎಲ್ಲರಿಗೂ ಮುಜುಗರವಾಯಿತು. ಆತ ಹೇಳಿದ್ದೇನು ಗೊತ್ತೇ? 'ಅಶಿಸ್ತಿನಿಂದ ಕೂಡಿರುವ ಭಾರತದಂಥ ದೊಡ್ಡ ದೇಶ, ಇನ್ನೂ ಕುಷ್ಠರೋಗಿಗಳನ್ನು ಹೊಂದಿರುವ ಕೊಳಕು ದೇಶ ಅದು ಹೇಗೆ ಇಷ್ಟು ಬೇಗ ಪ್ರಗತಿ ಸಾಧಿಸುತ್ತಿದೆ ಎಂಬುದೇ ನಮ್ಮ ಪಾಲಿಗೆ ದೊಡ್ಡ ಆಶ್ಚರ್ಯ' ಎಂದು. ಹೌದು. ಚೀನಾ ನಮ್ಮನ್ನು ಕೀಳಾಗಿ ಕಾಣುತ್ತದೆ. ತುಂಬಾ ಆಳವಾಗಿ ದ್ವೇಷಿಸುತ್ತದೆ. ನಮ್ಮೊಂದಿಗಿನ ಅದರ ಸ್ಪರ್ಧೆ ಬರೀ ಆರ್ಥಿಕತೆ ಅಥವಾ ಗಡಿ ತಗಾದೆಗಳಿಗೆ ಮಾತ್ರ ಸೀಮಿತವಾದುದಲ್ಲ. ನಮ್ಮನ್ನು ಒಂದು ಪರಂಪರೆ ಅಥವಾ ನಾಗರಿಕತೆ ಎಂದು ಅದು ಪರಿಗಣಿಸಿಯೇ ಇಲ್ಲ. ಸಾವಿರಾರು ವರ್ಷಗಳ ನಮ್ಮ ಅಸ್ತಿತ್ವಕ್ಕೆ ಅದು ಕವಡೆ ಕಾಸಿನ ಕಿಮ್ಮತ್ತೂ ಕೊಡುವುದಿಲ್ಲ. ಇಂದಿಗೂ ಅದು ನಮ್ಮನ್ನು ನೋಡುತ್ತಿರುವುದು 1962ರ ಯುದ್ಧದ ಕನ್ನಡಕ ಹಾಕಿಕೊಂಡೇ! ಅಂದು ಹೀನಾಯವಾಗಿ ಸೋತ ನಾವು ಅದರ ಕಣ್ಣಿಗೆ ಹೇಗೆ ಕಂಡೆವೋ ಇಂದೂ ಹಾಗೇ ಕಾಣಬೇಕು. ಇಲ್ಲದಿದ್ದರೆ ಅದಕ್ಕೆ ಸಹ್ಯವಾಗುವುದಿಲ್ಲ. ನಾವು ಬದಲಾಗುತ್ತಿದ್ದೇವೆಂಬ ಸತ್ಯವನ್ನು ಜೀರ್ಣಿಸಿಕೊಳ್ಳುವುದು ಹಾಗಿರಲಿ, ಮೇಲ್ನೋಟಕ್ಕೆ ಒಪ್ಪಿಕೊಳ್ಳುವುದಕ್ಕೂ ಅದು ತಯಾರಿಲ್ಲ.

ಅದರ ಮಲತಾಯಿ ಧೋರಣೆ ಹೇಗಿದೆ ನೋಡಿ. 14 ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತಿದೆ. ಎಲ್ಲರೊಡನೆಯೂ ಒಂದಿಲ್ಲೊಂದು ತಕರಾರೇ ಆದರೂ ಕಳೆದ ಮೂವತ್ತು ವರ್ಷಗಳಿಂದ ಒಂದೊಂದೇ ಕಲಹವನ್ನು ಪರಿಹರಿಸಿಕೊಳ್ಳಲ್ಲು ಪ್ರಯತ್ನಿಸುತ್ತಿದೆ. ಭಾರತವೊಂದನ್ನು ಬಿಟ್ಟು! ರಷ್ಯಾ ಸೇರಿದಂತೆ ಉಳಿದೆಲ್ಲಾ ದೇಶಗಳಿಗೂ ರಿಯಾಯಿತಿ ಸಿಕ್ಕಿದ್ದರೂ ಭಾರತದ ಮೇಲೆ ಮಾತ್ರ ನಿರಂತರ ದಂಡ ಪ್ರಯೋಗ! ಅದೂ ಹಾಗಿರಲಿ, ಟಿಬೆಟ್‍ನ ಭಾಗದಲ್ಲಿ ತನ್ನ ಅಣ್ವಸ್ತ್ರಗಳ ಶೇಖರಣೆಯ ಶೇಕಡಾ 30ರಷ್ಟನ್ನು ಎದುರಿಗೇ ಕಾಣುವಂತೆ ಪೇರಿಸಿಟ್ಟಿರುವ ಚೀನಾ, 'ತಾನು ಮೊದಲು ಅಣ್ವಸ್ತ್ರವನ್ನು ಉಪಯೋಗಿಸುವುದಿಲ್ಲ' ಎಂದು ಅಧಿಕೃತವಾಗಿ ಭಾಷೆ ಕೊಟ್ಟಿರುವ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಭಾರತದ ಹೆಸರು ಮಾತ್ರ ಇಲ್ಲ! ಕಾರಣವೇನಿರಬಹುದು ಹೇಳಿ? ಎಲ್ಲ ಪಶ್ಚಿಮ ರಾಷ್ಟ್ರಗಳೂ ತನಗೆ ಸಲಾಮು ಹೊಡೆಯಬೇಕೆಂದು ಬಯಸುವ ಚೀನಾ ಅದಕ್ಕಾಗಿ ತನ್ನನ್ನು ತಾನೇ ಹಲವು ವರ್ಷಗಳಿಂದ ಅಣಿಗೊಳಿಸಿಕೊಳ್ಳುತ್ತಾ ಬಂದಿದೆ. ಇಡೀ ಏಷ್ಯಾ ಖಂಡದ ಅನಭಿಷಿಕ್ತ ದೊರೆಯಾಗುವ ಕನಸು ಕಂಡಿದೆ. ಆದರೆ 1990ರ ನಂತರದ ಬೆಳವಣಿಗೆಗಳಿಂದ ಅದರ ದೊಡ್ಡ ಪ್ರತಿಸ್ಪರ್ಧಿಯಾಗಿ, ತಲೆನೋವಾಗಿ ಕಾಡುತ್ತಿರುವುದು ಭಾರತ. ಗಾತ್ರ, ಸಾಮರ್ಥ್ಯಗಳಲ್ಲಿ ಯಾವುದಕ್ಕೂ ಕಡಿಮೆಯಿಲ್ಲದ ನಮ್ಮ ದೇಶ ಆಂತರಿಕ ಕಲಹಗಳಲ್ಲಿ ಮುಳುಗಿದ್ದರೆ ಚೀನಾಕ್ಕೆ ಸಂತೋಷ, ಸಮಾಧಾನ. ಪರಮಾಣು ಪರೀಕ್ಷೆಯ ನೆಪದಲ್ಲಿ ಅಮೆರಿಕ ನಮಗೆ ದಿಗ್ಬಂಧನ ಹಾಕುವುದನ್ನು ಚೀನಾ ಮುಕ್ತವಾಗಿ ಸ್ವಾಗತಿಸುತ್ತದೆ. ಅದೇ ಅಮೆರಿಕ ನಮ್ಮನ್ನು ಅಣು ಶಕ್ತಿಯುಳ್ಳ ರಾಷ್ಟ್ರ ಎಂದು ಗುರುತಿಸಿ ಒಪ್ಪಿಕೊಂಡಾಗ ಅದನ್ನು ತೀವ್ರವಾಗಿ ಖಂಡಿಸುತ್ತದೆ. ಭಾರತದಂಥ, ಪ್ರಜಾಪ್ರಭುತ್ವವುಳ್ಳ ರಾಷ್ಟ್ರ ಇತರೆ ದೇಶಗಳೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ದಿನೇ ದಿನೇ ಸುಧಾರಿಸಿಕೊಳ್ಳುತ್ತಿರುವುದು ಅದರ ಪಾಲಿನ ನುಂಗಲಾರದ ತುತ್ತಾಗಿದೆ. ಮೋದಿಯವರು ಪ್ರಧಾನಿಯಾದ ಮೇಲಂತೂ, ಭಾರತ ಇನ್ನೆಲ್ಲಿ ತನ್ನನ್ನು ಮೀರಿ ಬೆಳೆದುಬಿಡುವುದೋ ಎಂಬ ಅಭದ್ರತೆ ಅದನ್ನು ಕಾಡುತ್ತಿದೆ.

ಇದೇ ಫೆಬ್ರುವರಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗಲೇ ಮೋದಿಯವರು ಚೀನಾದ ವಿಸ್ತಾರವಾದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 21ನೇ ಶತಮಾನ ಭಾರತದ್ದಾಗಲಿದೆ ಎಂದೂ ಹೇಳಿದ್ದರು. ಆಗಲೇ ಚೀನಾಗೆ ಇರಿಸುಮುರುಸಾಗಿತ್ತು. ಅದೇ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾದ ಮೇಲಂತೂ ಚೀನಾ ಪೂರ್ತಿ ‘ಸಾವಧಾನ’ ಭಂಗಿಯಲ್ಲಿ ನಿಂತಿತು. ಮೋದಿಯವರನ್ನು ಬಿಟ್ಟೂ ಬಿಡದೆ ಹಿಂಬಾಲಿಸಿತು. ಅವರು ಭೂತಾನ್ ದೇಶಕ್ಕೆ ಮೊದಲು ಭೇಟಿ ನೀಡಿದ್ದು, ನಂತರ ನೇಪಾಳಕ್ಕೆ ಹೋದದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದೇ ಅಲ್ಲದೆ, ನೇಪಾಳದ ಅಸೆಂಬ್ಲಿಯಲ್ಲಿ ಅವರು 'ನಾವು ನಿಮ್ಮ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸುವುದಿಲ್ಲ, ಆದರೆ ನೀವು ಆಯ್ದುಕೊಳ್ಳುವ ಮಾರ್ಗಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ' ಎಂದು ಹೇಳಿದ ಮಾತುಗಳನ್ನು ಜಾಣತನದ್ದು ಎಂದು ವಿಶ್ಲೇಷಿಸಿತು. ಆದರೆ ಇದೇ ಚೀನಾ, ಮೋದಿಯವರ ಜಪಾನಿನ ಭೇಟಿಯ ಬಗ್ಗೆ ತಿಳಿದುಬರುತ್ತಿದ್ದಂತೆ ಚಡಪಡಿಸಿತ್ತು. ಏಕೆಂದರೆ, ಇತ್ತೀಚೆಗೆ ಜಪಾನ್ ಜೊತೆಗಿನ ಅದರ ಯಾವ ಸಂಬಂಧಗಳೂ ಸೌಹಾರ್ದಯುತವಾಗಿಲ್ಲ. ಅದರಲ್ಲೂ ಜಪಾನ್ ತನ್ನ ಭದ್ರತೆಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಮೇಲಂತೂ ಚೀನಾಗೆ ಇನ್ನಷ್ಟು ದೂರವಾಗಿದೆ. ಪರಿಸ್ಥಿತಿ ಹೀಗಿರುವಾಗ ಭಾರತ ಹಾಗೂ ಜಪಾನ್ ಕೈ ಜೋಡಿಸುವುದನ್ನು ಅದು ಸಹಿಸೀತೇ? ಜಪಾನ್ನ ಸಹಯೋಗದೊಂದಿಗೆ ಭಾರತ ಬಲಾಢ್ಯವಾಗಲು ಬಿಟ್ಟೀತೇ? ಭಾರತದ ನೆರವಿನೊಂದಿಗೆ ಜಪಾನ್ ತನ್ನ ಭದ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವುದನ್ನು ಒಪ್ಪೀತೇ? ತನಗದು ಸಮ್ಮತವಲ್ಲ ಎಂಬ ನಿಲುವನ್ನು ತಕ್ಷಣವೇ ಸರ್ಕಾರದ ಪರವಾಗಿ ಅಲ್ಲಿನ ಬುದ್ಧಿಜೀವಿಯೊಬ್ಬರು 'ಗ್ಲೋಬಲ್ ಟೈಮ್ಸ್'ಎಂಬ ಪತ್ರಿಕೆಗೆ ಬರೆದ ತಮ್ಮ ಲೇಖನ(ಬೆದರಿಕೆ ಪತ್ರ?)ದಲ್ಲಿ ಹೊರಹಾಕಿದ್ದರು.ಮೋದಿಯವರೇನಾದರೂ ಮೊತ್ತ ಮೊದಲ ಭೇಟಿಗೆ ಜಪಾನನ್ನು ಆಯ್ದುಕೊಂಡರೆ ಚೀನಾದೊಂದಿಗಿನ ಭಾರತದ ಸಂಬಂಧ ಹಳಸಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ನಂತರ ಅವರು ದೂರಿದ್ದು ಜಪಾನಿನ ಪ್ರಧಾನಿ ಅಬೆಯವರನ್ನು. ಭಾರತ ಹಾಗೂ ಚೀನಾದ ಸ್ನೇಹವನ್ನು ಅಬೆ ಒಡೆಯುತ್ತಿದ್ದಾರೆ ಎಂದು ಬೊಬ್ಬೆ ಹಾಕಿದ ಮೇಲೆ ಬಂದದ್ದು ನಮ್ಮ ಸರದಿ. ಮೋದಿ ಸರ್ಕಾರಕ್ಕೆ ಜಪಾನ್ ಜೊತೆಗಿನ ಬಾಂಧವ್ಯಕ್ಕಿಂತ ಚೀನಾ ಜೊತೆಗಿನ ಸೌಹಾರ್ದವೇ ಮುಖ್ಯವಾಗಬೇಕು ಎಂದು ಉಪದೇಶಿಸಿದ್ದರು. ಚೀನಾಕ್ಕೆ ಹಿತವಲ್ಲದ ಒಪ್ಪಂದಗಳನ್ನು ಜಪಾನಿನ ಜೊತೆ ಮಾಡಿಕೊಂಡರೆ ಇದೇ ತಿಂಗಳ ಮೂರನೆಯ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಚೀನಾದ ಅಧ್ಯಕ್ಷ ಜಿನ್‍ಪಿಂಗ್‍ರನ್ನು ಮೋದಿ ಹೇಗೆ ಬರಮಾಡಿಕೊಳ್ಳುತ್ತಾರೆ ಎಂದೂ ಪ್ರಶ್ನಿಸಿದ್ದರು.




ಇಷ್ಟೆಲ್ಲದರ ನಡುವೆಯೂ ಮೋದಿ ಜಪಾನಿನ ಪ್ರವಾಸ ಕೈಗೊಂಡಿದ್ದಾರೆ. ಅಚ್ಚುಕಟ್ಟಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವಾರು ಒಪ್ಪಂದಗಳಿಗೆ ಸಹಿ ಮಾಡಲಿದ್ದಾರೆ. ಯುದ್ಧಕ್ಕೆ ಬೇಕಾಗುವ ಪರಿಕರಗಳಿಂದ ಹಿಡಿದು, ಆಂಫಿಬಿಯಸ್ ವಿಮಾನದವರೆಗೂ ಎಲ್ಲವೂ ಲಭ್ಯವಾಗಲಿದೆ. ಜಪಾನಿನ ತಂತ್ರಜ್ಞಾನ ಕೌಶಲದ ಲಾಭ ಇನ್ನು ಮುಂದೆ ನಮಗೂ ದೊರೆಯಲಿದೆ. ಬುಲೆಟ್ ಟ್ರೇನಿನ ಕನಸು ನನಸಾಗಲಿದೆ. ಸಾವಿರ ದೇವಾಲಯಗಳ ನಗರವೆಂದೇ ಖ್ಯಾತವಾದ ಕ್ಯೋಟೊ ಮಾದರಿಯಲ್ಲೇ ವಾರಣಾಸಿ ಹೊಸದಾಗಿ ಮೈದಳೆಯಲಿದೆ. ಒಂದು ನೂರು 'ಸ್ಮಾರ್ಟ್ ಸಿಟಿ'ಗಳ ರೂಪುರೇಷೆಯಲ್ಲಿ ಜಪಾನಿನ ಕೈವಾಡವೂ ಕಾಣಲಿದೆ. ಜಪಾನಿನ ಹೂಡಿಕೆದಾರರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ. 'ರೇರ್ ಅರ್ಥ್ಸ್' ಎಂಬ ಅಪರೂಪದ ಖನಿಜ ಸಂಪತ್ತನ್ನು ಸದ್ವಿನಿಯೋಗಿಸಿಕೊಳ್ಳುವ ಅವಕಾಶ ಎರಡೂ ದೇಶಗಳಿಗೆ ಸಿಗಲಿದೆ. ವಿದ್ಯಾರ್ಥಿಗಳ ವಿನಿಮಯದಂಥ ವಿಶೇಷ ಕಾರ್ಯಕ್ರಮಗಳೂ ತಯಾರಾಗಲಿವೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮೋದಿಯವರು ಜಪಾನಿನ ನೆಲದ ಮೇಲೆ ನಿಂತೇ ಚೀನಾದ ಕಿವಿ ಹಿಂಡಿದ್ದಾರೆ. 'ಇನ್ನೂ 18ನೇ ಶತಮಾನದ ಚಿಂತನೆಗಳನ್ನೇ ಹೊಂದಿರುವವರು ಇತರರ ಭೂಮಿ ಸ್ವಾಧೀನದಲ್ಲಿ, ಸಮುದ್ರ ಗಡಿಯ ಆಕ್ರಮಣದಲ್ಲಿ ಕಾಲೆಳೆಯುತ್ತಾರೆ' ಎಂದು ನೇರವಾಗಿಯೇ ಆರೋಪಿಸಿದ್ದಾರೆ. ಬೇರೆ ಯಾರಾದರೂ ಈ ಮಾತುಗಳನ್ನಾಡಿದ್ದರೆ ಚೀನಾ ಹೇಗೆ ಪ್ರತಿಕ್ರಿಯಿಸುತ್ತಿತ್ತೋ. ಆದರೆ ಈಗ ಕೇಳಿಯೂ ಕೇಳದಂತೆ ಸುಮ್ಮನಿದೆ! 'ಅವರು ಯಾರನ್ನು ಉದ್ದೇಶಿಸಿ ಹೇಳುತ್ತಿದ್ದಾರೆಂಬುದೇ ನಮಗೆ ಗೊತ್ತಿಲ್ಲ' ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ ಕ್ವಿನ್ ಗ್ಯಾಂಗ್ ತಮ್ಮ 'ಜಾಣಪೆದ್ದು'ತನವನ್ನು ಪ್ರದರ್ಶಿಸುತ್ತಿದ್ದಾರೆ. ಯುದ್ಧ ಹಾಗೂ ಅಣ್ವಸ್ತ್ರಗಳ ಹೆಸರಿನಲ್ಲಿ ಎಲ್ಲರನ್ನೂ ಬೆದರಿಸುವ ಕಮ್ಯೂನಿಸ್ಟ್ ಚೀನಾಗೆ ಬಲಿಷ್ಠ ಪ್ರಜಾಪ್ರಭುತ್ವಗಳಾದ ಜಪಾನ್ ಹಾಗೂ ಭಾರತದ ಮಿತೃತ್ವ ಬಿಸಿತುಪ್ಪವಾಗಿ ಪರಿಣಮಿಸಿದೆ. ಅದರ ನಿಜವಾದ ಪ್ರತಿಕ್ರಿಯೆ ಹಾಗೂ ಮುಂದಿನ ನಡೆ ತಿಳಿದುಬರಲು ನಾವು ಜಿನ್‍ಪಿಂಗ್‍ರ ಭಾರತದ ಭೇಟಿಯವರೆಗೂ ಕಾಯಬೇಕು. ಏನೇ ಆಗಲಿ, ಒಂದಂತೂ ಖಾತರಿ. ಮೊದಲಿನಂತೆ ಘರ್ಜಿಸುವುದನ್ನು ಬಿಟ್ಟು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ಅನಿವಾರ್ಯವಂತೂ ಚೀನಾಗೆ ತಪ್ಪಿದ್ದಲ್ಲ.

ಬಹುಶಃ ಪಾಶ್ಚಾತ್ಯ ರಾಷ್ಟ್ರಗಳಿಗೆ ತಿಳಿದಿರುವುದು ಚಹಾ ಮಾರುವವನೊಬ್ಬ ಭಾರತದ ಪ್ರಧಾನಿಯಾದ ಎಂಬುದಷ್ಟೇ. ಆದರೆ ಚೀನಾಕ್ಕೆ ಅದಕ್ಕಿಂತ ಹೆಚ್ಚೇ ಅರ್ಥವಾಗಿದೆ. ಆದ್ದರಿಂದಲೇ ಚೀನಾದ ಬುದ್ಧಿಜೀವಿ ತಮ್ಮ ಲೇಖನದಲ್ಲಿ ಹೀಗೆ ಹೇಳಿದ್ದಾರೆ. 'ಮೋದಿಯವರೊಬ್ಬ ಅಪ್ಪಟ ಉದ್ಯಮಿ ಹಾಗೂ ರಾಜಕಾರಣಿ. ತಮ್ಮ ದೇಶದ ಹಿತವನ್ನು ಕಾಯಲು ಏನು ಮತ್ತು ಹೇಗೆ ಮಾಡಬೇಕೆಂಬುದನ್ನು ಅವರು ಚೆನ್ನಾಗಿ ಬಲ್ಲರು' ಎಂದು.
ಅಚ್ಛೇ ದಿನಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ! ಅಲ್ಲವೇ?


No comments:

Post a Comment