Sunday, 14 September 2014

ಸಮಂತಾ ಎಂಬ ಬಾಲೆ ಶಾಂತಿ ದೂತಳಾದಾಗ
ನಿಮಗೆಲ್ಲ ಎರಡನೆಯ ವಿಶ್ವಯುದ್ಧದ ಬಗ್ಗೆ ತಿಳಿದಿರಬಹುದು. ಅದು ಮುಗಿದದ್ದು 1945ರಲ್ಲಿ. ಅದರಲ್ಲಿ ನಾಜಿ ಜರ್ಮನಿಯನ್ನು ಸೋಲಿಸಲು, ವಿಶ್ವದ ಎರಡು ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಾಗಿದ್ದ ಸೋವಿಯತ್ ಒಕ್ಕೂಟ ಹಾಗೂ ಅಮೆರಿಕ ಕೈಜೋಡಿಸಿದ್ದವು. ಹಾಗೆ ಜರ್ಮನಿಯನ್ನು ಸೋಲಿಸಿದ ನಂತರ ಸೈದ್ಧಾಂತಿಕ, ಆರ್ಥಿಕ ಹಾಗೂ ರಾಜನೈತಿಕ ಭಿನ್ನಾಭಿಪ್ರಾಯಗಳನ್ನು ನೆಪವಾಗಿಟ್ಟುಕೊಂಡು ದೂರ ಆಗಿಬಿಟ್ಟವು. ತನ್ನ ಮಿತ್ರರಾದ ನೇಟೋ ರಾಷ್ಟ್ರಗಳೊಂದಿಗೆ ಅಮೆರಿಕ ಪಶ್ಚಿಮಕ್ಕೆ ಮುಖ ಹೊರಳಿಸಿ ಕುಳಿತರೆ, ತಾನೇನು ಕಡಿಮೆ ಎಂಬಂತೆ ಸೋವಿಯತ್ ಒಕ್ಕೂಟ ಪೂರ್ವಕ್ಕೆ ತಿರುಗಿ ಕುಳಿತಿತ್ತು. ತಾನೇ ಪ್ರಬಲ ಎಂದು ನಿರೂಪಿಸುವ ಹಪಾಹಪಿ ಎರಡಕ್ಕೂ! ಈ ಎರಡೂ ರಾಷ್ಟ್ರಗಳ ಮುನಿಸಿನಿಂದ ಶುರುವಾದದ್ದೇ ಶೀತಲ ಸಮರ. 1947ರಿಂದ ಹಿಡಿದು 1991ರ ವರೆಗೂ, ಅಂದರೆ ಸುಮಾರು 44 ವರ್ಷಗಳ ಕಾಲ ಇದೇ ವಾತಾವರಣವಿತ್ತು. ಈ ರಾಷ್ಟ್ರಗಳು ಅದೆಷ್ಟರ ಮಟ್ಟಿಗೆ ಶಸ್ತ್ರಾಸ್ತ್ರಗಳನ್ನು (ಅಣ್ವಸ್ತ್ರಗಳ ಸಹಿತ) ಸಜ್ಜು ಮಾಡಿಕೊಂಡು ಕುಳಿತಿದ್ದವೆಂದರೆ ಯಾವ ಕ್ಷಣ ಮೂರನೆಯ ವಿಶ್ವಯುದ್ಧ ಶುರುವಾಗಿಬಿಡುವುದೋ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು. ಯುದ್ಧದ ಸಿದ್ಧತೆ ಯಾವ ಮಟ್ಟದ್ದಾಗಿತ್ತೆಂದರೆ, ಕ್ಷಿಪಣಿಗಳನ್ನು ಬಿಡಿ, ಭೂಮಿಯ ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳಿಂದ ಅಸ್ತ್ರಗಳನ್ನು ಪ್ರಯೋಗಿಸಿ ತಮಗೆ ಬೇಕಾದ ದೇಶಗಳನ್ನು ಧ್ವಂಸ ಮಾಡುವ ನಿಟ್ಟಿನಲ್ಲಿ ಸಂಶೋಧನೆಗಳು ಎರಡೂ ಕಡೆ ಭರದಿಂದ ನಡೆಯುತ್ತಿದ್ದವು!

ಪರಿಸ್ಥಿತಿ ಹೀಗಿದ್ದಾಗ, 1982ರ ನವೆಂಬರ್ 12ರಂದು ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದವರೇ ಯೂರಿ ಆಂಡ್ರೋಪೋವ್. ಅವರು ನಿಯುಕ್ತರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳಲ್ಲಿ ಭಾರೀ ಸಂಚಲನ ಉಂಟಾಯಿತು. ಏಕೆಂದರೆ ಯೂರಿ ಬಹಳ ನಿರ್ದಯಿ ಹಾಗೂ ಕ್ರೂರಿ ಎಂದೇ ಖ್ಯಾತರಾಗಿದ್ದರು. ಹಿಂದೆ ಅವರು ಸೋವಿಯತ್‍ನ ರಾಯಭಾರಿಯಾಗಿ ಹಂಗೇರಿಯಲ್ಲಿದ್ದಾಗ, ಅಲ್ಲಿನ ದಂಗೆಯನ್ನು ಹತ್ತಿಕ್ಕಲು ಸೇನೆಯ ಸಹಾಯ ಪಡೆದ ಹಾಗೂ ಕೆಲ ನೇತಾರರನ್ನು ಕೊಲ್ಲಿಸಿದ ಅಪವಾದ ಹೊತ್ತಿದ್ದರು. ಅಂಥವರು ಶೀತಲ ಸಮರದಂಥ ಸೂಕ್ಷ್ಮ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟದ ಮುಂದಾಳತ್ವ ವಹಿಸಿಕೊಂಡಾಗ ಸಹಜವಾಗಿಯೇ ಅಮೆರಿಕ ಕೋಲಾಹಲವೆಬ್ಬಿಸಿತು. ತನ್ನ ದೇಶದಲ್ಲೆಲ್ಲ ಈ ಸುದ್ದಿಯನ್ನು ಬಿತ್ತರಿಸಿತು. ಹಾಗೆ ಟೈಮ್ ನಿಯತಕಾಲಿಕೆಯ ಮುಖಪುಟದಲ್ಲಿ, ಕನ್ನಡಕ ಧರಿಸಿದ, ಬಿಗಿದ ಮೊಗದ ‘ಯೂರಿ’ಯ ಚಿತ್ರ ಪ್ರಕಟವಾದಾಗ ಅಮೆರಿಕದವರ ಮುಖದ ಮೇಲೆ ಮಂದಹಾಸ ಮೂಡಲು ಯಾವ ಕಾರಣವೂ ಇರಲಿಲ್ಲ.

ಕಣ್ಣುಗಳಲ್ಲಿ ತಣ್ಣಗಿನ ಕ್ರೌರ್ಯವನ್ನು ತುಂಬಿಕೊಂಡಂತಿದ್ದ ‘ಯೂರಿ’ಯ ಚಿತ್ರವನ್ನು ಕಂಡು ಎಲ್ಲರೂ ಭಯಪಡುತ್ತಿದ್ದಾಗಲೇ ಹತ್ತು ವರ್ಷದ ಪುಟ್ಟ ಬಾಲೆಯೊಬ್ಬಳು ತನ್ನ ತಾಯಿಯನ್ನು ಮುಗ್ಧವಾಗಿ ಕೇಳಿದಳು 'ಎಲ್ಲರಿಗೂ ಅವರನ್ನು ಕಂಡರೆ ಅಷ್ಟೊಂದು ಭಯವೆಂದಮೇಲೆ, ಅವರು ಯುದ್ಧ ಶುರು ಮಾಡುತ್ತಾರೋ ಇಲ್ಲವೋ ಎಂದು ಅವರನ್ನೇ ಏಕೆ ನೇರವಾಗಿ ಕೇಳಬಾರದು ಅಮ್ಮಾ?' ಎಂದು. 'ನೀನೇ ಏಕೆ ಅವರಿಗೆ ಪತ್ರ ಬರೆದು ಕೇಳಬಾರದು?' ಎಂದಳು ತಾಯಿ ತಮಾಷೆಯಾಗಿ. ಮಗಳ ಪ್ರಶ್ನೆಯನ್ನು ಅಲ್ಲಿಗೆ ಮರೆತೂ ಬಿಟ್ಟಳು. ಆದರೆ ಅಮ್ಮನ ಮಾತನ್ನು ಹಗುರವಾಗಿ ತೆಗೆದುಕೊಳ್ಳಲಿಲ್ಲ ಆ ಪುಟ್ಟ ಹುಡುಗಿ. ‘ಯೂರಿ’ಗೆ ಪತ್ರವೊಂದನ್ನು ಬರೆದೇ ಬಿಟ್ಟಳು. ಅದರ ಒಕ್ಕಣೆ ಹೀಗಿತ್ತು. 'ನಾನು ಹತ್ತು ವರ್ಷದ ಹುಡುಗಿ ಸಮಂತಾ ಸ್ಮಿತ್. ನಿಮ್ಮ ಹೊಸ ಪದವಿಗೆ ನನ್ನ ಅಭಿನಂದನೆ. ಅಮೆರಿಕ ಹಾಗೂ ಸೋವಿಯತ್ ರಾಷ್ಟ್ರಗಳು ಅಣ್ವಸ್ತ್ರ ಯುದ್ಧ ನಡೆಸುತ್ತವೆಯೇ ಎಂಬುದು ನನ್ನನ್ನು ಬಹಳ ಯೋಚನೆಗೀಡುಮಾಡುತ್ತಿದೆ. ನೀವು ಯುದ್ಧದ ಪರವಾಗಿದ್ದೀರಾ? ಇಲ್ಲವೆಂದರೆ ಯುದ್ಧ ನಡೆಯದಂತೆ ಹೇಗೆ ತಡೆಯುತ್ತೀರಿ ಎಂದು ಹೇಳಬಲ್ಲಿರಾ? ನೀವೇಕೆ ಈ ಪ್ರಪಂಚವನ್ನು ಅಥವಾ ಅಮೆರಿಕವನ್ನು ಗೆಲ್ಲ ಬಯಸುತ್ತೀರಿ? ದೇವರು ಪ್ರಪಂಚವನ್ನು ಸೃಷ್ಟಿಸಿರುವುದು ನಾವೆಲ್ಲ ಒಂದಾಗಿ ಕೂಡಿ ನೆಮ್ಮದಿಯಿಂದ ಬಾಳಲು. ಜಗಳವಾಡಲು ಅಲ್ಲ.'


ಹಾಗೆ ನಿರ್ಭೀತಳಾಗಿ ಪತ್ರವನ್ನು ಬರೆದ ಸಮಂತಾ ಹುಟ್ಟಿದ್ದು 1972ರ ಜೂನ್ 29ರಂದು. ಕೆನಡಾ-ಅಮೆರಿಕದ ಗಡಿಯಲ್ಲಿದ್ದ ಹ್ಯೂಲ್ಟನ್ ಎಂಬ ಸಣ್ಣ ಪಟ್ಟಣದಲ್ಲಿ. ನಂತರ ತಂದೆ-ತಾಯಿಯರೊಡನೆ ಮ್ಯಾಂಚೆಸ್ಟರ್‍ಗೆ ವಾಸ್ತವ್ಯ ಬದಲಾಯಿಸಿದ ಅವಳು ಅಲ್ಲಿನ ಎಲಿಮೆಂಟರಿ ಶಾಲೆಯಲ್ಲಿ ಕಲಿಯುತ್ತಿದ್ದಳು. ಸಾಹಿತ್ಯದ ಅಧ್ಯಾಪಕರಾಗಿದ್ದ ತಂದೆ ಹಾಗೂ ಸಮಾಜ ಸೇವಕಿಯಾಗಿದ್ದ ತಾಯಿಯಿಂದ ಅವಳಿಗೆ ಸಾಕಷ್ಟು ತಿಳುವಳಿಕೆ, ಲೋಕಜ್ಞಾನಗಳು ಲಭಿಸಿದ್ದವು. ಯುದ್ಧದ ಕಾರ್ಮೋಡ ಕವಿದಿದ್ದ ಆ ದಿನಗಳಲ್ಲಿ, ಅಣ್ವಸ್ತ್ರ ಯುದ್ಧವಾದರೆ ಆಗುವ ದುಷ್ಪರಿಣಾಮವನ್ನು ಶಾಲೆಯಲ್ಲಿ ತನ್ನ ಟೀಚರ್‍ಗಳಿಂದ ಕೇಳಿ ತಿಳಿದಿದ್ದಳು. ಆದ್ದರಿಂದಲೇ ತನ್ನ ವಯಸ್ಸಿಗೂ ಮೀರಿದ ದೂರದೃಷ್ಟಿ, ಕಳಕಳಿಯಿಂದ ‘ಯೂರಿ’ಗೆ ಪತ್ರವನ್ನು ಬರೆದಿದ್ದಳು! ಅವಳ ಬಹಿರಂಗ ಪತ್ರ ಸೋವಿಯತ್ ಒಕ್ಕೂಟದ ಪತ್ರಿಕೆ 'ಪ್ರವ್ಡಾ'ದಲ್ಲಿ ಪ್ರಕಟವೂ ಆಯಿತು. ಆದರೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಹಾಗೆಂದು ಸುಮ್ಮನಾಗಲಿಲ್ಲ ಸಮಂತಾ. ಅಮೆರಿಕದಲ್ಲಿದ್ದ ಸೋವಿಯತ್‍ನ ರಾಯಭಾರಿಯನ್ನು ಪತ್ರ ಮುಖೇನ ಸಂಪರ್ಕಿಸಿದಳು. ತನ್ನ ಪತ್ರಕ್ಕೆ ಯೂರಿ ಉತ್ತರಿಸುವ ಇರಾದೆ ಹೊಂದಿದ್ದಾರಾ ಎಂದು ವಿಚಾರಿಸಿದಳು. ಅವಳ ಶ್ರಮ ವ್ಯರ್ಥವಾಗಲಿಲ್ಲ. 1983ರ ಏಪ್ರಿಲ್ 26ರಂದು ಯೂರಿ ಆಂಡ್ರೋಪೋವ್‍ರ ಉತ್ತರ ಬಂದೇ ಬಿಟ್ಟಿತು. ತುಂಬಾ ನೇರವಾಗಿ, ಪ್ರಾಮಾಣಿಕವಾಗಿ ಹಾಗೂ ವಿಶದವಾಗಿ ಉತ್ತರಿಸಿದ್ದರು ಯೂರಿ. ಅವರ ಪತ್ರದ ಒಕ್ಕಣೆ ಹೀಗಿತ್ತು. 'ನೀನು ಅಷ್ಟೊಂದು ಧೈರ್ಯ ಹಾಗೂ ಪ್ರಾಮಾಣಿಕತೆಯಿಂದ ಬರೆದ ಪತ್ರ ನನ್ನ ಕೈ ತಲುಪಿತು. ನಿನ್ನ ಪ್ರಶ್ನೆಗೆ ನೇರವಾಗಿ ಉತ್ತರಿಸುತ್ತೇನೆ ಕೇಳು. ಸೋವಿಯತ್ ಯಾವ ಯುದ್ಧವನ್ನೂ ಬಯಸುವುದಿಲ್ಲ. ಜರ್ಮನಿಯ ಅಟ್ಟಹಾಸಕ್ಕೆ ಬಲಿಯಾಗಿ ಮನೆ-ಮಠ, ಜೀವಗಳನ್ನು ಕಳೆದುಕೊಂಡಿರುವ ನಮ್ಮ ದೇಶದ ಯಾವ ಪ್ರಜೆಗೂ ಮತ್ತೊಂದು ಯುದ್ಧ ಬೇಕಿಲ್ಲ. ನಾವು ಜರ್ಮನಿಯನ್ನು ಸೋಲಿಸಿದ್ದೇ ನಿನ್ನ ದೇಶವಾದ ಅಮೆರಿಕದ ಸಹಾಯದಿಂದ. ಆದ್ದರಿಂದ ನಾವು ಅಮೆರಿಕ ಮಾತ್ರವಲ್ಲ, ಉಳಿದ ಎಲ್ಲಾ ದೇಶಗಳೊಂದಿಗೂ ಶಾಂತಿಯುತವಾಗಿ ಬಾಳ್ವೆ ಮಾಡಬೇಕೆಂದಿದ್ದೇವೆ. ಇಂದು ನಮ್ಮೆರಡೂ ದೇಶಗಳ ಬಳಿ ಮಾರಕವಾದ ಅಣ್ವಸ್ತ್ರಗಳಿವೆ. ಅದಕ್ಕೆ ಕ್ಷಣವೊಂದರಲ್ಲೇ ಲಕ್ಷಗಟ್ಟಳೆ ಜನರ ಪ್ರಾಣ ತೆಗೆಯಬಲ್ಲ ಶಕ್ತಿಯಿದೆ. ಆದರೆ ನಾವು ಅದನ್ನು ಯಾವುದೇ ಕಾರಣಕ್ಕೂ ಮೊದಲು ಉಪಯೋಗಿಸುವುದಿಲ್ಲ. ಅಷ್ಟೇ ಅಲ್ಲ, ಅಣ್ವಸ್ತ್ರ ಇರುವ ರಾಷ್ಟ್ರಗಳೆಲ್ಲ ಅವುಗಳನ್ನು ನಾಶಮಾಡಬೇಕು ಹಾಗೂ ಮತ್ತೆ ಅದನ್ನು ತಯಾರು ಮಾಡಬಾರದು ಎಂದು ನಾವು ಬಯಸುತ್ತೇವೆ. ನಮ್ಮ ದೇಶದ ಯಾವ ರೈತ, ವೈದ್ಯ, ಸಾಹಿತಿ, ಸಂಶೋಧಕ, ಹಿರಿಯ ಅಥವಾ ಕಿರಿಯನಿಗೂ ಯುದ್ಧ ಮಾಡುವ ಇಚ್ಛೆಯಿಲ್ಲ. ನಾವು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಮಾಡಬೇಕು, ಪುಸ್ತಕಗಳನ್ನು ಬರೆಯಬೇಕು, ನಿನ್ನ ಹಾಗೂ ನಿನ್ನಂಥ ಉಳಿದ ಮಕ್ಕಳ ಸಲುವಾಗಿ ಶಾಂತಿ ಕಾಪಾಡಬೇಕು. ಒಂದು ಕೆಲಸ ಮಾಡು. ಈ ಬೇಸಿಗೆಯಲ್ಲಿ ನಮ್ಮ ದೇಶಕ್ಕೆ ಬಾ. ಇಲ್ಲಿಯ ಜನರೊಂದಿಗೆ, ಮಕ್ಕಳೊಂದಿಗೆ ಒಡನಾಡು. ಇಲ್ಲಿಯ ವಾತಾವರಣ, ಜನರ ಮನಸ್ಥಿತಿ ನಿನಗೇ ತಿಳಿಯುತ್ತದೆ. ನಿನ್ನ ಪುಟ್ಟ ಬದುಕಿಗೆ ಮುಂದೆ ಒಳ್ಳೆಯದಾಗಲಿ'.

‘ಯೂರಿ’ಯ ಉತ್ತರ ಲಕ್ಷಾಂತರ ಅಮೆರಿಕನ್ನರ ಮನದ ಬೇಗುದಿಯನ್ನು ಕ್ಷಣದಲ್ಲಿ ಪರಿಹರಿಸಿತ್ತು. ಇಷ್ಟು ಸುಲಭವಾಗಿ ವಾತಾವರಣವನ್ನು ತಿಳಿಗೊಳಿಸಿದ ಸಮಂತಾ ರಾತ್ರೋರಾತ್ರಿ ಖ್ಯಾತಳಾಗಿಬಿಟ್ಟಳು. ಯೂರಿಯ ಆಹ್ವಾನವನ್ನು ಒಪ್ಪಿಕೊಂಡು, ತಂದೆ-ತಾಯಿಯರೊಡಗೂಡಿ ಅದೇ ವರ್ಷದ ಜುಲೈ ಏಳರಂದು ಸೋವಿಯತ್ ಒಕ್ಕೂಟದ ಮಾಸ್ಕೋ ನಗರಕ್ಕೆ ತೆರಳಿದಳು. ಅಲ್ಲಿನ ಜನರೂ ತಮ್ಮಂತೆಯೇ ಎಂದು ಅವಳಿಗೆ ತಿಳಿದು ಬಂದಿದ್ದೇ ಆಗ. ಎರಡು ವಾರಗಳ ಅವಳ ಸೋವಿಯತ್ ಭೇಟಿಯಲ್ಲಿ ಹಲವಾರು ಜಾಗಗಳಿಗೆ ಹೋಗಿ, ಜನರೊಡನೆ ಕಲೆತು ಬಂದಳು. ಪತ್ರಿಕಾಗೋಷ್ಠಿಗಳಲ್ಲಿ ಸೋವಿಯತ್ ಜನರ ಸಹೃದಯತೆಯನ್ನು ಹೊಗಳಿದಳು. ಅದೆಲ್ಲಕ್ಕೂ ಕಾರಣರಾದ ಯೂರಿಯನ್ನು ಭೇಟಿಯಾಗಲು ಮಾತ್ರ ಸಾಧ್ಯವಾಗಲಿಲ್ಲ. ಅವರ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಅವರು ದೂರವಾಣಿಯಲ್ಲಷ್ಟೇ ಮಾತಿಗೆ ಸಿಕ್ಕರು.

ಅಮೆರಿಕಕ್ಕೆ ಹಿಂತಿರುಗಿದ ಸಮಂತಾಳಿಗೆ ದೊರೆತದ್ದು ಭವ್ಯ ಸ್ವಾಗತ. ಅವಳು ಹೇಳಿದ ವೃತ್ತಾಂತವನ್ನು ಕೇಳಿದ ಅಮೆರಿಕನ್ನರ ಮನಸ್ಸಿನಲ್ಲಿ ಸೋವಿಯತ್ ಜನರ ಬಗ್ಗೆ ಇದ್ದ ಭ್ರಮೆ ದೂರವಾಯಿತು. ತನ್ನ ಅನುಭವವನ್ನು 'ಜರ್ನಿ ಟು ದಿ ಸೋವಿಯತ್ ಯೂನಿಯನ್' ಎಂಬ ಪುಸ್ತಕದಲ್ಲಿಯೂ ದಾಖಲಿಸಿದಳು. ಎರಡು ದೇಶಗಳ ನಡುವೆ ಬಾಂಧವ್ಯ ಬೆಸೆದ ಸಮಂತಾ ಅವಳಿಗರಿವಿಲ್ಲದಂತೆಯೇ ಶಾಂತಿ ದೂತಳಾಗಿಬಿಟ್ಟಿದ್ದಳು. ಅಮೆರಿಕ ಮತ್ತು ಸೋವಿಯತ್ ಪ್ರತಿ ವರ್ಷ ಹೀಗೇ ಮಕ್ಕಳನ್ನು ಕೆಲದಿನಗಳ ಮಟ್ಟಿಗೆ ಆಹ್ವಾನಿಸಬೇಕೆಂಬ ಅವಳ ಸಲಹೆಗೆ ಎರಡೂ ಸರ್ಕಾರಗಳೂ ಒಪ್ಪಿದವು. ತಮ್ಮ ಮಕ್ಕಳನ್ನು ಕಳಿಸುವ ದೇಶಕ್ಕೆ ಬಾಂಬ್ ಹಾಕುವ ಮನಸ್ಸು ಬರಲಾರದು ಎಂದು ಯೋಚಿಸುವಷ್ಟು ದೂರಕ್ಕೆ ಅವಳ ಬುದ್ಧಿ ಬೆಳೆದಿತ್ತು! ಅದರಂತೆ ಸೋವಿಯತ್‍ನ, ಹನ್ನೊಂದರ ಬಾಲೆ 'ಕಾತ್ಯಾ' ಅಮೆರಿಕಕ್ಕೆ ಬಂದು ಹೋದದ್ದೂ ಆಯಿತು. ಅಮೆರಿಕದ ಹಲವು ಟಿ.ವಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ ಸಮಂತಾ ಎಲ್ಲರ ಕಣ್ಮಣಿಯಾಗಿದ್ದಳು.

ಆದರೆ ವಿಧಿಯೆಂಬುದೂ ಒಂದಿದೆಯಲ್ಲ..!

ಅದು 1985ನೇ ಇಸವಿಯ ಆಗಸ್ಟ್ ತಿಂಗಳ 25 ನೇ ತಾರೀಖು. ಟಿ.ವಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ರಾತ್ರಿ ಹತ್ತು ಗಂಟೆಯ ಸುಮಾರಿಗೆ ತಂದೆಯೊಡನೆ ವಿಮಾನದಲ್ಲಿ ಬರುತ್ತಿದ್ದಳು ಸಮಂತಾ. ಹತೋಟಿ ಕಳೆದುಕೊಂಡ ವಿಮಾನ ಮರಗಳಿಗೆ ಅಪ್ಪಳಿಸಿ ಅಪಘಾತಕ್ಕೀಡಾಗಿ ಪೂರ್ತಿ ನುಜ್ಜುಗುಜ್ಜಾಯಿತು. ಸಮಂತಾ ಹಾಗೂ ಅವಳ ತಂದೆ ಸೇರಿದಂತೆ ವಿಮಾನದಲ್ಲಿದ್ದ ಎಂಟೂ ಜನ ಸತ್ತುಹೋದರು. ಶಾಂತಿ ಮೂಡಿಸುವ ಹೊಸ ಪ್ರಕ್ರಿಯೆ ಶುರು ಮಾಡಿದ ಎರಡೇ ವರ್ಷಗಳಲ್ಲಿ ಸಮಂತಾ ಇಲ್ಲವಾದಳು. ಅಮೆರಿಕದ ವ್ಯಥೆ ಹಾಗಿರಲಿ, ಸೋವಿಯತ್ ಅವಳ ನೆನಪಿನಲ್ಲಿ ಸ್ಮಾರಕಗಳನ್ನು ಕಟ್ಟಿಸಿತು. ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿತು.

ದೇಶ-ದೇಶಗಳ ನಡುವಿನ ಗಲಭೆ, ಕಲಹ, ಅಶಾಂತಿಗಳು ಮುಗಿಯದ ಈ ಹೊತ್ತಿನಲ್ಲಿ ಸಮಂತಾ ನೆನಪಾಗುತ್ತಾಳೆ. ಚಿಕ್ಕ ಮಕ್ಕಳನ್ನು ಶಾಂತಿಯ ರಾಯಭಾರಿಗಳನ್ನಾಗಿಸುವುದು ಅವಳು ಕಂಡಿದ್ದ ಕನಸು. ಅದೇ ಮಕ್ಕಳು ಮತಾಂಧರ ಧರ್ಮಯುದ್ಧದ ದಾಳಗಳಾಗಿ ಮುಲಾಜಿಲ್ಲದೇ ಬಲಿಯಾಗುತ್ತಿರುವುದು ಇಂದಿನ ಕಹಿ ನನಸು. ಶಾಂತಿ ಎಂಬ ಕನಸೊಂದನ್ನು ಗಡಿಗಳಾಚೆಗೆ ಸಾಗಿಸಬಲ್ಲ ಸರಕು ತಾವಾಗಬಹುದೆಂಬ ಅರಿವೂ ಇಲ್ಲದೆ ಕಮರಿ ಹೋಗುತ್ತಿರುವ ಎಳೆಯ ಜೀವಗಳಿಗೆ ಲೆಕ್ಕವೇ ಇಲ್ಲ. ಎಂಥ ವಿಪರ್ಯಾಸ ಅಲ್ಲವೇ?

No comments:

Post a Comment