Wednesday, 24 September 2014

ಯಾರನ್ನು ಪೆಂಗರನ್ನಾಗಿಸಹೊರಟಿದ್ದಾರೆ ಜಿನ್‍ಪಿಂಗ್?ಅಂತೂ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ ಬಂದಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ಚೀನಾದ ಒಟ್ಟಾರೆ ಅಧ್ಯಕ್ಷರಲ್ಲಿ ಇವರು ಮೂರನೆಯವರು. 1996ರಲ್ಲಿ ಜಿಯಾಂಗ್ ಜೆಮಿನ್ ಬಂದಿದ್ದರು. ನಂತರ 2006ರಲ್ಲಿ ಬಂದಿದ್ದು ಹು ಜಿಂಟಾವೋ. ಈಗ ಜಿನ್‍ಪಿಂಗ್‍ರ ಸರದಿ. ಕಮ್ಯೂನಿಸ್ಟ್ ಪಕ್ಷದ ನೇತಾರ, ಚೀನೀ ಸೇನೆಯ ಪರಮೋಚ್ಛ ಅಧಿಕಾರಿ ಹಾಗೂ ಆ ದೇಶದ ಅಧ್ಯಕ್ಷರೂ ಆಗಿರುವುದು ಅವರ ವೈಶಿಷ್ಟ್ಯ. ತಮ್ಮ ದೇಶಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳ ಮೇಲೂ ನೇರ ಹಿಡಿತ ಹೊಂದಿರುವ ಶಕ್ತಿ ಕೇಂದ್ರ ಆತ. ಎಲ್ಲ ಸರಿ, ಆದರೆ ಭಾರತಕ್ಕೆ ಭೇಟಿ ನೀಡುವುದರ ಹಿಂದಿನ ಅವರ ಉದ್ದೇಶವೇನಿರಬಹುದು ಎಂಬ ಕುತೂಹಲ ನಮ್ಮನ್ನು ಕಾಡುತ್ತದಲ್ಲವೇ? ಇಂದು ಆರ್ಥಿಕವಾಗಿ ಸಬಲವಾಗಿರುವ ದೇಶಗಳ ಪಟ್ಟಿಯಲ್ಲಿ ಚೀನಾದ್ದು ಎರಡನೆಯ ಸ್ಥಾನ. ನಮ್ಮೊಡನೆ ಸಾಮರಸ್ಯ ಬಿಡಿ, ತೋರಿಕೆಯ ಸೌಹಾರ್ದದ ಹಂಗೂ ಅದಕ್ಕೆ ಬೇಕಾಗಿಲ್ಲ. ಹಾಗಿರುವಾಗ, ತಾನಾಗಿಯೇ ಜೇಬಿನಲ್ಲಿ 100 ಬಿಲಿಯನ್ ಡಾಲರ್‍ಗಳನ್ನಿಟ್ಟುಕೊಂಡು ಬಂದು ವ್ಯಾಪಾರವೃದ್ಧಿಯ ಹೆಸರಿನಲ್ಲಿ ಭಾರತದ ಬಾಗಿಲು ಬಡಿಯುವ ಕರ್ಮ ಅದಕ್ಕೇನಿದೆ ಎನಿಸುತ್ತದೆ ಅಲ್ಲವೇ? ಹೌದು. ವಿಶ್ವದಲ್ಲೇ ಅತ್ಯಂತ ದೊಡ್ಡ ಸೇನಾಬಲವಿರುವ ಚೀನಾದೊಳಗೂ ಸಮಸ್ಯೆಗಳಿವೆ. ಭಾರತದಲ್ಲಿ ಹೂಡಿಕೆ ಮಾಡುವ ಹುನ್ನಾರಕ್ಕೂ ಕಾರಣಗಳಿವೆ. ಅವುಗಳನ್ನು ವಿಶ್ಲೇಷಿಸೋಣ ಬನ್ನಿ.

ಕಳೆದ ಕೆಲ ದಶಕಗಳಿಂದ ಚೀನಾದ ಕಮ್ಯುನಿಸ್ಟ್ ಸರ್ಕಾರ ತನ್ನ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ. ನಮ್ಮ ಪ್ರಧಾನಿಗಳ ನಿವಾಸ ನಂ.7, ರೇಸ್‍ಕೋರ್ಸ್ ರಸ್ತೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಆದರೆ ಚೀನಾದ ಅಧ್ಯಕ್ಷರಾಗಲೀ, ಪಾಲಿಟ್ ಬ್ಯೂರೋದ ಇತರೆ ಏಳು ಸದಸ್ಯರಾಗಲೀ ಎಲ್ಲಿ ವಾಸ ಮಾಡುತ್ತಾರೆ ಎಂಬುದು ಇವತ್ತಿಗೂ ನಿಗೂಢ! ಅವರಿಗಾಗಿ ಮೀಸಲಾಗಿರುವ ಮನೆಗಳಲ್ಲಿ ಅವರು ಇರುವುದೇ ಇಲ್ಲ. ಪಾರದರ್ಶಕತೆಯೇ ಇಲ್ಲದ ಆಡಳಿತ ನೀಡುವ ಮಂದಿಗೆ ಜನರ ನಡುವೆ ವಾಸಿಸುವ ಧೈರ್ಯ ಹೇಗೆ ತಾನೆ ಬಂದೀತು ಅಲ್ಲವೇ? ಮತ್ತೊಂದು ಮುಖ್ಯ ವಿಷಯವೂ ಇದೆ. 1976ರಲ್ಲಿ ಚೀನಾದ ಜನಸಂಖ್ಯೆ ಸುಮಾರು 940 ಮಿಲಿಯನ್ (1 ಮಿಲಿಯನ್ = 10 ಲಕ್ಷ) ಮುಟ್ಟಿತ್ತು. ಜನಸಂಖ್ಯಾ ಸ್ಫೋಟವನ್ನು ತಡೆಯಲು ಅದು ಕೈಗೊಂಡ ನಿರ್ಣಯ ಯಾವುದು ಹೇಳಿ? ದಂಪತಿಗಳೆಲ್ಲ ಒಂದೇ ಮಗುವನ್ನು ಹೊಂದಬೇಕೆಂಬ ಕಡ್ಡಾಯ ನಿಯಮವನ್ನು ಹೇರಿದ್ದು! ಮೊದಲ ಮಗು ಅಂಗವಿಕಲವಾಗಿದ್ದರೆ, ಮಾನಸಿಕವಾಗಿ ಅಸ್ವಸ್ಥವಾಗಿದ್ದರೆ ಅಥವಾ ಹೆಣ್ಣಾಗಿದ್ದರೆ ಎರಡನೆಯದಕ್ಕೆ ಅನುಮತಿ ಸಿಗುತ್ತಿತ್ತು. ಕೆಲ ನಗರಗಳಲ್ಲಿ ದಂಡ ಕಟ್ಟಿ (ಸುಮಾರು 18000 ಅಮೆರಿಕನ್ ಡಾಲರ್‍ನಷ್ಟು!) ಎರಡನೆಯ ಮಗುವನ್ನು ಹೊಂದುವ ಅವಕಾಶವಿತ್ತಾದರೂ ಅದು ಎಲ್ಲರಿಗೂ ಸಾಧ್ಯವಾಗುತ್ತಿರಲಿಲ್ಲ. ಕದ್ದು ಬಸಿರಾದವರನ್ನು ಸರ್ಕಾರಿ ಅಧಿಕಾರಿಗಳು ಮುಲಾಜಿಲ್ಲದೆ ಎಳೆದುಕೊಂಡು ಹೋಗುತ್ತಿದ್ದರು. ಕೈಕಾಲು ಕಟ್ಟಿ ಹೊಟ್ಟೆಯಲ್ಲೇ ಮಗುವನ್ನು ಸಾಯಿಸುವ ವಿಷಪೂರಿತ ಚುಚ್ಚುಮದ್ದುಗಳನ್ನು ಡಾಕ್ಟರ್‍ಗಳ ಕೈಲಿ ಕೊಡಿಸುತ್ತಿದ್ದರು. ಹೀಗೆ 1979ರಿಂದ 2013ರ ವರೆಗೂ ಸುಮಾರು 330ಮಿಲಿಯನ್ ಭ್ರೂಣಗಳನ್ನು ಹತ್ಯೆಮಾಡಲಾಗಿದೆ. 400ಮಿಲಿಯನ್‍ಗೂ ಹೆಚ್ಚು ಗರ್ಭನಿರೋಧಕಗಳನ್ನು ಯುವತಿಯರ ಗರ್ಭಕೋಶಗಳೊಳಗೆ ಬಲವಂತವಾಗಿ ಹೂತಿಡಲಾಗಿದೆ! ಈ ನಿಯಮ ಸಡಿಲಾಗಿದ್ದು ಕಳೆದ ನವೆಂಬರ್‍ನಲ್ಲಿ. ಈಗ, ಗಂಡಹೆಂಡಿರಲ್ಲಿ ಒಬ್ಬರಾದರೂ ತನ್ನ ತಂದೆ-ತಾಯಿಯರ ಒಂದೇ ಮಗುವಾಗಿದ್ದ ಪಕ್ಷದಲ್ಲಿ ಅವರು ಎರಡು ಮಕ್ಕಳನ್ನು ಹೊಂದಬಹುದು!

ಅದರ ಸರ್ವಾಧಿಕಾರಿ ಧೋರಣೆ ಇಲ್ಲಿಗೇ ನಿಲ್ಲುವುದಿಲ್ಲ. ಜಿದ್ದಿಗೆ ಬಿದ್ದು ಉತ್ಪಾದನಾ ಘಟಕಗಳನ್ನು, ಕಾರ್ಖಾನೆಗಳನ್ನು ತೆರೆದಿರುವ ಚೀನಾ ಸರ್ಕಾರ ಭೂಮಿಯ ಸ್ವಾಧೀನವನ್ನು ತಾನೇ ಇಟ್ಟುಕೊಳ್ಳುತ್ತದೆ. ಉದ್ಯಮಿಗಳ ಪಾಲೇನಿದ್ದರೂ ಬರುವ ಲಾಭಕ್ಕೆ ಸೀಮಿತ. ಕೀಲಿ ಕೊಟ್ಟ ಗೊಂಬೆಗಳ ಹಾಗೆ ದುಡಿಯುವ ಚೀನೀಯರು ಯಂತ್ರಗಳಿಗಿಂತ ಕಡೆಯಾಗಿಬಿಟ್ಟಿದ್ದಾರೆ. ನಗುವೆಂಬುದೇ ತುಟ್ಟಿ. ಇನ್ನು ವಾತಾವರಣದ ಪಾಡೋ ದೇವರಿಗೇ ಪ್ರೀತಿ! ಹವೆ ಎಷ್ಟು ಕಲುಷಿತವಾಗಿದೆಯೆಂದರೆ ಕತ್ತೆತ್ತಿ ನೋಡಿದಾಗ ನೀಲಾಕಾಶ ಕಂಡರೆ ಆ ಬ್ರಹ್ಮನ ಮೇಲಾಣೆ! ಬರುವ ಆದಾಯದಲ್ಲಿ ಶೇಕಡಾ 10ರಷ್ಟು, ಗಾಳಿ, ನೀರುಗಳ ಶುದ್ಧೀಕರಣಕ್ಕೇ ವ್ಯಯವಾಗುತ್ತದೆ! ಇವೆಲ್ಲದರಿಂದ ರೋಸಿಹೋಗಿರುವ ಜನ ಮುಷ್ಕರಗಳಿಗೆ ಇಳಿಯುತ್ತಿದ್ದಾರೆ. ಕಳೆದ ವರ್ಷವೊಂದರಲ್ಲೇ ಸುಮಾರು 2ಲಕ್ಷ 35ಸಾವಿರದಷ್ಟು ಮುಷ್ಕರಗಳು ನಡೆದಿವೆ! ನೆಮ್ಮದಿಯ ಸಲುವಾಗಿ ಜನ ತಂಡೋಪತಂಡವಾಗಿ ಯೋಗ ಕೇಂದ್ರಗಳಿಗೆ ಲಗ್ಗೆಯಿಡುತ್ತಿದ್ದಾರೆ!

ಇವು ಆಂತರಿಕ ವಿಷಯಗಳಾದವು. ಇನ್ನು ಆರ್ಥಿಕ ವಲಯ ಹೇಗಿದೆ ನೋಡೋಣ ಬನ್ನಿ. ಯಾವುದೇ ದೇಶದ ಆರ್ಥಿಕ ಸಾಮರ್ಥ್ಯದ ಅಳತೆಗೋಲಾಗುವುದು ಅದರ ನಿವ್ವಳ ದೇಶೀಯ ಉತ್ಪನ್ನ(GDP). ತಾನು ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿದ್ದೇನೆ ಎಂದು ಪ್ರತಿಪಾದಿಸುತ್ತಿರುವ ಚೀನಾದ GDP ಕ್ರಮೇಣ ಕುಸಿಯುತ್ತಿದೆ. ಶೇಕಡಾ 10ರಷ್ಟಿದ್ದ ಬೆಳವಣಿಗೆ ಈಗ ಶೇಕಡಾ 7.2ಕ್ಕೆ ಬಂದು ನಿಂತಿದೆ. ಉತ್ಪಾದನಾ ವೆಚ್ಚವೊ ಶೇಕಡಾ 300ರಷ್ಟು ಹೆಚ್ಚಿದೆ. ಒಮ್ಮೆ ಹಾಳಾದರೆ ಮತ್ತೆ ರಿಪೇರಿ ಮಾಡಲಾಗದ ಕಳಪೆ ಗುಣಮಟ್ಟ ಎಂಬ ಹಣೆಪಟ್ಟಿ ಬೇರೆ. ತನ್ನ ಉತ್ಪನ್ನಗಳ ಶೇಕಡಾ 39ರಷ್ಟನ್ನು ಮಾತ್ರ ತಾನು ಬಳಸುವ ಚೀನಾ ಉಳಿದದ್ದನ್ನೆಲ್ಲಾ ರಫ್ತು ಮಾಡುತ್ತದೆ. ಒಟ್ಟಿನಲ್ಲಿ ಅದರ ಆರ್ಥಿಕತೆ ಅವಲಂಬಿತವಾಗಿರುವುದೇ ರಫ್ತಿನ ಮೇಲೆ. ಒಂದೊಮ್ಮೆ ಆರ್ಥಿಕ ಬಿಕ್ಕಟ್ಟು ಉಂಟಾಯಿತೆಂದುಕೊಳ್ಳಿ, ಹೊಡೆತ ತಪ್ಪಿದ್ದಲ್ಲ. ಉದಾಹರಣೆಗೆ, 2008ರಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದಾಗ ಚೀನಾದ ನೂರಾರು ಕಾರ್ಖಾನೆಗಳು ಮುಚ್ಚಿದವು. ಬರೋಬ್ಬರಿ 28 ಮಿಲಿಯನ್ ಜನರು ನಿರುದ್ಯೋಗಿಗಳಾದರು!

ಅಷ್ಟೇ ಅಲ್ಲ, ಮಂಗಳಗ್ರಹವನ್ನು ತಲುಪುವ ಯತ್ನದಲ್ಲೂ ವಿಫಲವಾಗಿರುವ ಚೀನಾ ತಂತ್ರಜ್ಞಾನದ ವಿಷಯದಲ್ಲಿ ನಮ್ಮ ಮುಂದೆ ಕೈಕಟ್ಟಿ ನಿಲ್ಲಲೇಬೇಕಿದೆ! ಇನ್ನು ಕ್ಷಿಪಣಿಗಳ, ಯುದ್ಧನೌಕೆಗಳ ವಿಷಯದಲ್ಲಿ ಅದಿನ್ನೂ ಅಂಬೆಗಾಲಿಡುತ್ತಿದೆ. ಹೀಗೆ ತನ್ನದೇ ವಿಷವರ್ತುಲದಲ್ಲಿ ಸಿಕ್ಕಿಕೊಂಡಿರುವ ಅದರ ದೊಡ್ಡ ತಲೆನೋವಾಗಿರುವುದು ಭಾರತದ ವಿದೇಶಾಂಗ ನೀತಿ. ವಿಯೆಟ್ನಾಂ‍ದೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿರುವ ಭಾರತ, ದಕ್ಷಿಣ ಚೀನಾ ಸಮುದ್ರದಲ್ಲಿ ತೈಲ ನಿಕ್ಷೇಪದ ಶೋಧನೆಗಿಳಿಯುವುದನ್ನು ಚೀನಾ ಸಹಿಸುತ್ತಿಲ್ಲ. ಈಗಾಗಲೇ ಐದು ಬಿಲಿಯನ್ ಡಾಲರ್‍ಗಳಷ್ಟು ಹಣವನ್ನು ಹೂಡಿರುವ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಯನ್ನು(ONGC) ಅಲ್ಲಿಂದ ಜಾಗ ಖಾಲಿಮಾಡುವಂತೆ ಒತ್ತಾಯಿಸುತ್ತಿದೆ. ಜಪಾನಿನೊಂದಿಗೆ ವಹಿವಾಟು ನಡೆಸುವ ಭಾರತದ ಧೋರಣೆ ಅದಕ್ಕೆ ಕಣ್ಣುರಿ ತರಿಸುತ್ತದೆ. ನೇಪಾಳ, ಭೂತಾನದ ಭೇಟಿಗಳು ಇರುಸುಮುರುಸು ಉಂಟುಮಾಡುತ್ತವೆ. ಇವೆಲ್ಲಕ್ಕಿಂತ ದೊಡ್ಡ ಪೆಟ್ಟು ಕೊಡುತ್ತಿರುವುದು ದೊಡ್ಡಣ್ಣ ಅಮೆರಿಕ. 2010ರಲ್ಲೇ, ಚೀನಾದ ವಿಸ್ತಾರವಾದಕ್ಕೊಂದು ಇತಿಶ್ರೀ ಹಾಡಬೇಕೆಂದು ನಿರ್ಧರಿಸಿದ ಒಬಾಮಾ ಅಮೆರಿಕ ನೌಕಾದಳದ ಶೇಕಡಾ 60ರಷ್ಟು ಯುದ್ಧ ಪರಿಕರಗಳನ್ನು ಏಷ್ಯಾಕ್ಕೆ ವರ್ಗಾಯಿಸಿದರು. ಫಿಲಿಪ್ಪೈನ್ಸ್, ಸಿಂಗಾಪುರ ಹಾಗೂ ಥಾಯ್ಲೆಂಡ್‍ಗಳೊಡನೆ ಸಂಪರ್ಕ ಬೆಳೆಸಿದರು. ಇನ್ನೂ ಮುಂದುವರೆದು, ವಿಯೆಟ್ನಾಂ‍ನೊಂದಿಗೆ ಪರಮಾಣು ಒಪ್ಪಂದವನ್ನೂ ಮಾಡಿಕೊಂಡರು.

ತನ್ನ ಆಂತರಿಕ ಅಭದ್ರತೆಗಳಷ್ಟೇ ಅಲ್ಲದೆ, ಅಮೆರಿಕದ ರಾಜತಾಂತ್ರಿಕ ನಡೆ ಹಾಗೂ ಭಾರತದ ಪ್ರಭಾವಿ ವಿದೇಶಾಂಗ ನೀತಿಗಳು ಚೀನಾದ ಪಾಲಿಗೆ ನುಂಗಲಾರದ ತುತ್ತಾಗಿವೆ. ಆದ್ದರಿಂದಲೇ ಅದು ಭಾರತದತ್ತ ಮುಖಮಾಡಿದೆ. ಎಲ್ಲ ರಾಷ್ಟ್ರಗಳೂ ಕೈ ಜೋಡಿಸುತ್ತಿವೆ ಎಂಬ ಸಂಕಟ ಒಂದೆಡೆ. ದಿನೇ ದಿನೇ ಬಲಿಷ್ಠವಾಗುತ್ತಿರುವ ಭಾರತ ಮತ್ತೊಂದೆಡೆ. ನೀವೇ ಯೋಚಿಸಿ, ಕಳೆದ 14ವರ್ಷಗಳಲ್ಲಿ ಬರೀ 400 ಮಿಲಿಯನ್‍ಗಳನ್ನು ಭಾರತದಲ್ಲಿ ಹೂಡಿರುವ ಚೀನಾ ಈಗ ಇದ್ದಕ್ಕಿದ್ದಂತೆ 100 ಬಿಲಿಯನ್‍ಗಳನ್ನು ಹೂಡುತ್ತದೆ ಎಂದರೆ ನಂಬುವುದಾದರೂ ಹೇಗೆ? ನಿಮಗೆ ಗೊತ್ತಿರಲಿ, ಚೀನಾ ತನ್ನ ಮಾರುಕಟ್ಟೆಯನ್ನು ಭಾರತಕ್ಕೆ ಮುಕ್ತವಾಗಿ ಎಂದೂ ತೆರೆದಿಲ್ಲ. ಈಗಲೂ ಅಷ್ಟೇ, ತನ್ನ ಉತ್ಪಾದನೆಗಳನ್ನು ಇಲ್ಲಿ ತಂದು ಸುರಿಯಲು ಹವಣಿಸುತ್ತಿದೆ. ತನ್ನ 23ಕ್ಕೂ ಹೆಚ್ಚು ಮಾಧ್ಯಮ ವರದಿಗಾರರನ್ನು ಭಾರತದಲ್ಲೇ ಇರಿಸಿರುವ ಚೀನಾಗೆ ಇಲ್ಲಿನ ಪ್ರತಿ ಘಟನೆಯೂ ತಪ್ಪದೆ ವರದಿಯಾಗುತ್ತದೆ! ಅಲ್ಲಿನ ಸುದ್ದಿ ನಮಗೆ ತಿಳಿಯುವುದು ಮಾತ್ರ ವಿದೇಶೀ ಸುದ್ಧಿ ಸಂಸ್ಥೆಗಳಿಂದಲೇ!

ವ್ಯಾಪಾರವೃದ್ಧಿಯ ನೆಪ ಮಾಡಿಕೊಂಡು ಭಾರತಕ್ಕೆ ಜಿನ್‍ಪಿಂಗ್‍ ಬಂದದ್ದು ಹೌದಾದರೂ ಅವರ ಧೋರಣೆಯಲ್ಲಿ ಯಾವ ಬದಲಾವಣೆಯಿದೆ? ಅಲ್ಲಿ ಅವರು ಹೊರಡುತ್ತಿದ್ದಂತೆಯೇ, ಇಲ್ಲಿ ದಕ್ಷಿಣ ಲಡಾಖ್‍ನ ಗಡಿಯಲ್ಲಿರುವ ಹಳ್ಳಿ ಚುಮಾರ್‍ನಲ್ಲಿ ಚೀನೀಯರು ಬಂದು ಜಮಾಯಿಸಿದರು! ಅವರನ್ನು ಓಡಿಸಲು ಭಾರತೀಯ ಸೇನೆ ಹಾಗೂ ಟಿಬೆಟ್ ಗಡಿಯ ಪೋಲೀಸರು ಹೋಗಬೇಕಾಯಿತು! ಇದು ಮೊದಲ ಬಾರಿಯೇನಲ್ಲ. 2013ರ ಮೇ ತಿಂಗಳಲ್ಲಿ ಅಂದಿನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಸಲ್ಮಾನ್ ಖುರ್ಶಿದ್ ಚೀನಾಗೆ ಹೊರಡುವ ತಯಾರಿಯಲ್ಲಿದ್ದಾಗಲೇ ಚೀನೀಯರು ಲಡಾಖ್‍ನೊಳಗೆ ನುಗ್ಗಿ ಬಂದಿದ್ದರು. ಅದೂ ಸುಮಾರು 19ಕಿಮೀಗಳಷ್ಟು ಒಳಗೆ! ಗಡಿ ವಿಷಯದಲ್ಲಿ ಚೀನಾ ಪದೇಪದೇ ತಕರಾರು ತೆಗೆಯುವುದೇಕೆ? ಲಡಾಖ್‍ನ ಅಕ್ಸಾಯ್ ಚಿನ್‍ ಹೆಸರಿನಲ್ಲಿ ಸುಮಾರು 52ಸಾವಿರ ಚದರಕಿಮೀ ಜಾಗವನ್ನು ಕಬಳಿಸಿದೆಯಲ್ಲ, ಅದನ್ನು ಭಾರತಕ್ಕೆ ಮರಳಿಸುತ್ತದೆಯೇ? 2005ರಿಂದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದೇ ಸರ್ಕಾರಿ ದಾಖಲೆಗಳಲ್ಲಿ ನಮೂದಿಸಿ ನಕ್ಷೆಗಳಲ್ಲಿ ಬರೆದಿಟ್ಟುಕೊಂಡಿದೆಯಲ್ಲ, ಅದನ್ನು ಅಳಿಸಿಹಾಕುತ್ತದೆಯೇ? ಕಾಲಕಾಲಕ್ಕೆ ತಾನೇ ಖುದ್ದಾಗಿ ಹೋಗಿ ಪಾಕಿಸ್ತಾನಕ್ಕೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಒದಗಿಸಿ ಬರುತ್ತದಲ್ಲ, ಅದನ್ನು ನಿಲ್ಲಿಸುತ್ತದೆಯೇ? ತಾನಾಗಿಯೇ ಒಂದು ಮದ್ದು ಗುಂಡನ್ನೂ ತಯಾರಿಸಿಕೊಳ್ಳುವ ಯೋಗ್ಯತೆಯಿಲ್ಲದ ಪಾಕಿಸ್ತಾನವನ್ನು ಇಂದು ಅಣು ಶಕ್ತಿಯುಳ್ಳ ರಾಷ್ಟ್ರವನ್ನಾಗಿ ಮಾಡುತ್ತಿದೆ ಚೀನಾ! ಬದಲಿಗೆ ಅದಕ್ಕೆ ದಕ್ಕುತ್ತಿರುವುದು ಪಾಕ್ ಆಕ್ರಮಿತ ಪ್ರದೇಶಗಳಲ್ಲಿರುವ ಚಿನ್ನದ, ಕಬ್ಬಿಣದ ಅದಿರುಗಳನ್ನು ಕೊಳ್ಳೆ ಹೊಡೆಯುವ ಸುಯೋಗ. ಜೊತೆಗೆ, ಪಾಕಿಸ್ತಾನ ಭಾರತವನ್ನು ನಿರಂತರವಾಗಿ ಪೀಡಿಸುತ್ತಲೇ ಇರುತ್ತದೆಂಬ ನೆಮ್ಮದಿ ಬೇರೆ! ಚೀನಾಕ್ಕೆ ನಮ್ಮಿಂದ ಬಹಳ ಅಪೇಕ್ಷೆಗಳಿವೆ. ಟಿಬೆಟಿಯನ್ನರ ಧರ್ಮಗುರು ದಲೈಲಾಮಾರನ್ನು ನಾವು ಚೀನಾದ ಸುಪರ್ದಿಗೆ ಒಪ್ಪಿಸಬೇಕು. ಅಪ್ಪಿತಪ್ಪಿಯೂ ಜಪಾನ್, ಅಮೆರಿಕ ಹಾಗೂ ವಿಯೆಟ್ನಾಂಗಳೊಡನೆ ಯಾವ ಬಾಂಧವ್ಯವನ್ನೂ ಇಟ್ಟುಕೊಳ್ಳಬಾರದು. ಹಿಂದೂ ಮಹಾಸಾಗರದಲ್ಲಿ, ಕಡಲುಗಳ್ಳರನ್ನು ಹಿಡಿಯುವ ನೆಪದಲ್ಲಿ ನಡೆಯುವ ಚೀನಾದ ನೌಕಾದಳದ ಅಭ್ಯಾಸವನ್ನು ನೋಡಿಯೂ ನೋಡದಂತಿರಬೇಕು!

ನಮಗೆ ಅಭಿವೃದ್ಧಿಯ ಕನವರಿಕೆಯಿದೆ ನಿಜ. ಆದರೆ ಅದು ದೇಶದ ಹಿತಾಸಕ್ತಿ, ಭದ್ರತೆಗಳಿಗಿಂತ ಹೆಚ್ಚಲ್ಲ. ಆದ್ದರಿಂದಲೇ  ಜಿನ್‍ಪಿಂಗ್ ಭಾರತಕ್ಕೆ ಹೊರಡುವ ಮುನ್ನವೇ ಸರ್ಕಾರದ ಪರವಾಗಿ ಸಚಿವೆ ಸುಷ್ಮಾ ಸ್ವರಾಜ್ ಗುಡುಗಿದ್ದು 'ಗಡಿಗೆ ಸಂಬಂಧಿಸಿದ ಯಾವ ವಿಷಯದಲ್ಲೂ ಭಾರತ ಯಾವ ಕಾರಣಕ್ಕೂ ರಾಜಿಮಾಡಿಕೊಳ್ಳುವುದಿಲ್ಲ' ಎಂದು. ಇಂಥ ದಿಟ್ಟ ಘೋಷಣೆ ನಮಗೆ ಮೊದಲ ಅನುಭವ. ಚೀನಾಕ್ಕೂ. ಏನಾಗುತ್ತದೋ ಕಾದು ನೋಡೋಣ! 

No comments:

Post a Comment