Wednesday, 8 October 2014

ಪ್ರಮಾಣ ಪತ್ರ ಬೇಡ, ಧೋರಣೆ ಬದಲಾದರೆ ಸಾಕು!ಇತ್ತೀಚೆಗೆ ಸಾದಿಯಾರವರು ತಮ್ಮ ಅಂಕಣದಲ್ಲಿ, 'ಮುಸ್ಲಿಮರು ದೇಶಪ್ರೇಮಕ್ಕೆ ಪ್ರಮಾಣಪತ್ರ ಇಟ್ಟುಕೊಂಡಿರಬೇಕೇ?' ಎಂಬ ಸಮಯೋಚಿತ ಪ್ರಶ್ನೆಯನ್ನು ಕೇಳಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸುವ ಮುನ್ನ, ನಮ್ಮ ಪ್ರಶ್ನೆಗಳನ್ನು ಅವರ ಮುಂದಿಡುವ ಮುನ್ನ ಒಂದು ಘಟನೆಯನ್ನು ಹೇಳಬೇಕು. ಕೆಲ ದಿನಗಳ ಹಿಂದೆ, ಹಿಂದೂ ಮುಸ್ಲಿಂ ಸಂವಾದವೊಂದರಲ್ಲಿ ಭಾಗವಹಿಸುವ ಅವಕಾಶ ದೊರೆತಿತ್ತು. ಅದನ್ನು ಏರ್ಪಡಿಸಿದ್ದು ಮೆಟಾ-ಕಲ್ಚರ್ ಎಂಬ ಸಂಸ್ಥೆ. ಯಾವ ರಾಜಕೀಯ ವ್ಯಕ್ತಿ ಅಥವಾ ಪಕ್ಷಗಳೊಂದಿಗೂ ಗುರುತಿಸಿಕೊಳ್ಳದ ಆ ಸಂಸ್ಥೆಯ ಮುಖ್ಯ ಉದ್ದೇಶ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣೆಯಲ್ಲಿ ಸಹಕರಿಸುವುದು. ಈ ಬಾರಿ ಅದು ಆಯ್ದುಕೊಂಡಿದ್ದು ಹಿಂದೂ-ಮುಸ್ಲಿಮರ ವಿಷಯವನ್ನು. ಅದನ್ನು ಪ್ರಾಯೋಜಿಸಿದ್ದು ದೆಹಲಿಯಲ್ಲಿರುವ ಹಾಲೆಂಡ್‍ನ ದೂತಾವಾಸ ಕಛೇರಿ. ಅಲ್ಲಿ ಬೆರಳೆಣಿಕೆಯಷ್ಟು ಹಿಂದೂಗಳನ್ನು ಆಯ್ದು, ಅಷ್ಟೇ ಮುಸ್ಲಿಮರನ್ನೂ ಆಯ್ದು ಇಬ್ಬರಿಗೂ ಪರಸ್ಪರರೊಡನೆ ಮಾತನಾಡುವ ಅವಕಾಶ ಮಾಡಿಕೊಡಲಾಗುತ್ತದೆ. ಮೊದಲ ಸುತ್ತಿನ ಮಾತುಕತೆ ನಡೆಯುವುದು ಗುಂಪಿನಲ್ಲೇ. ನಂತರ ಓರ್ವ ಹಿಂದೂವಿಗೆ ಓರ್ವ ಮುಸ್ಲಿಂ ಅನ್ನು ಜತೆಗಾರರನ್ನಾಗಿ ಮಾಡಿ ಸಂವಾದಕ್ಕೆ ಕಾಲಾವಕಾಶ ನೀಡಲಾಗುತ್ತದೆ. ಅದು ಚರ್ಚೆ ಖಂಡಿತ ಅಲ್ಲ. ಆದ್ದರಿಂದಲೇ, ನಾವು ಮಾತನಾಡುವಾಗ ಇರುವಷ್ಟೇ ಉತ್ಸಾಹ ಎದುರಿನವರ ಮಾತನ್ನು ಕೇಳುವಾಗಲೂ ಇರಬೇಕು. ಒಬ್ಬರು ಮತ್ತೊಬ್ಬರನ್ನು ಯಾವ ಪ್ರಶ್ನೆಯನ್ನಾದರೂ ಕೇಳಬಹುದು. ಧರ್ಮ, ಆಚಾರ-ವಿಚಾರ, ಉಡುಗೆ-ತೊಡುಗೆಗಳಿಗೆ ಸಂಬಂಧಿಸಿದ ಎಷ್ಟೇ ಸೂಕ್ಷ್ಮ ವಿಷಯವನ್ನಾದರೂ ನಿರ್ಭಿಡೆಯಿಂದ ಮಾತಿಗೆ ಎಳೆದು ತರಬಹುದು. ಏಕೆಂದರೆ, ಕೇಳಿದ ಪ್ರಶ್ನೆಗಳನ್ನು ತಿರುಚುವುದಕ್ಕೆ, ಇಲ್ಲದ ಅರ್ಥ ಕಲ್ಪಿಸುವುದಕ್ಕೆ ಅಲ್ಲಿ ಅರ್ಣಬ್ ಗೋಸ್ವಾಮಿ, ಬರ್ಖಾ ದತ್‍ರಂಥ ಬುದ್ಧಿಗೇಡಿಗಳಿರುವುದಿಲ್ಲ. ಪರಸ್ಪರರ ಭಿನ್ನಾಭಿಪ್ರಾಯಗಳನ್ನು ಅರಿತು ನಿವಾರಿಸಿಕೊಂಡು ಸಾಮರಸ್ಯ ಕಂಡುಕೊಳ್ಳುವ ನಿಟ್ಟಿನ ಪ್ರಯತ್ನವದು ಅಷ್ಟೇ. ಅಲ್ಲಿಗೆ ಬಂದಿದ್ದ ಮುಸ್ಲಿಮರಲ್ಲಿ ಬಹುತೇಕರು ವಿದೇಶಗಳಲ್ಲಿ ಓದಿದವರು. ನಮ್ಮ ಮಾತುಗಳನ್ನು ಕೇಳುವ ತಾಳ್ಮೆ ಹಾಗೂ ಅರ್ಥಮಾಡಿಕೊಳ್ಳುವ ಮನಸ್ಥಿತಿ ಇದ್ದವರು.

ನಾವು ಅವರನ್ನು ಕೇಳಿದ ಕೆಲ ಪ್ರಶ್ನೆಗಳು ಹೀಗಿದ್ದವು: 'ಗಾಜಾ ಪಟ್ಟಿಯ ಮೇಲಿನ ಇಸ್ರೇಲ್ ಆಕ್ರಮಣವನ್ನು ಪ್ರತಿಭಟಿಸಲು ಬೆಂಗಳೂರೊಂದರಲ್ಲೇ ಸುಮಾರು ಐದು ಸಾವಿರ ಮಂದಿ ಸೇರಿದ್ದಿರಲ್ಲ, ದಶಕಗಳಿಂದ ನಮ್ಮ ಮೇಲೆ ನಿರಂತರವಾಗಿ ನಡೆದಿರುವ ಪಾಕಿಸ್ತಾನದ ಉಗ್ರರ ಹಾವಳಿಯನ್ನು ಪ್ರತಿಭಟಿಸಲು ಇಲ್ಲಿಯವರೆಗೆ ಎಷ್ಟು ಬಾರಿ, ಎಷ್ಟು ಸಂಖ್ಯೆಯಲ್ಲಿ ಸೇರಿದ್ದೀರಿ? ಈ ಆರು ದಶಕಗಳಲ್ಲಿ ಒಮ್ಮೆಯಾದರೂ ಭಾರತ ಸರ್ಕಾರಕ್ಕೆ, 'ನಾವೆಂದಿಗೂ ನಿಮ್ಮ ಪರ' ಎಂದು ಘಂಟಾಘೋಷವಾಗಿ ಹೇಳಿದ್ದೀರಾ? ‘ಈ ದೇಶದ ತಂಟೆಗೆ ಬಂದರೆ ಹುಷಾರ್' ಎಂದು ಪಾಕ್ ಉಗ್ರರಿಗೆ ಖಡಕ್ಕಾದ ಸಂದೇಶವನ್ನು ಒಮ್ಮೆಯಾದರೂ ರವಾನಿಸಿದ್ದೀರಾ? ನಿಮ್ಮ ಧರ್ಮಕ್ಕೇ ಸೇರಿದ ಅವರ ಅಟ್ಟಹಾಸಕ್ಕೆ ಬಲಿಯಾಗಿರುವ ಹಿಂದೂಗಳ, ಭಾರತೀಯರ ಕ್ಷಮೆಯಾಚಿಸಿದ್ದೀರಾ? ನಿಮ್ಮ ಹಾಗೇ ಪೇಟ ಧರಿಸಿ ಗಡ್ಡ ಬಿಡುವ ಸಿಖ್ಖರನ್ನು ಕಂಡರೆ ಆಗದ ಭಯ ನಿಮ್ಮನ್ನು ಕಂಡರೆ ಆಗುತ್ತದಲ್ಲ. ನಿಮಗೆ ಅದರ ಅರಿವಿದೆಯೇ? ಪ್ರತಿ ಭಯೋತ್ಪಾದಕನೂ ಮದರಸಾದಿಂದ ಬಂದವನೇ ಆಗಿರುತ್ತಾನಲ್ಲ ಏಕೆ? ವಿದೇಶಗಳಲ್ಲಿ ಓದಿಕೊಂಡು ಬಂದ ನೀವು ಕೆಳವರ್ಗದ ಮುಸ್ಲಿಮರ ಶಿಕ್ಷಣ, ಜೀವನಮಟ್ಟದ ಕುರಿತು ಎಂದಾದರೂ ಯೋಚಿಸಿದ್ದೀರಾ? ಯಾವುದು ದೊಡ್ಡದು ನಿಮಗೆ, ದೇಶವೋ ಧರ್ಮವೋ?' ಈ ಪ್ರಶ್ನೆಗಳಿಗೆ ನಿಂತ ನಿಲುವಿನಲ್ಲೇ ಸಮಂಜಸ ಉತ್ತರಗಳು ದೊರಕಲಿಲ್ಲ. ಆದರೆ ನಮ್ಮ ಪ್ರಾಮಾಣಿಕ ಕಳಕಳಿ ಅವರಲ್ಲಿ ಕೆಲವರಿಗಂತೂ ಅರ್ಥವಾಯಿತು. ಅಂತಲೇ ಅವರು ಆರ್‍ಎಸ್‍ಎಸ್‍ ಆಯೋಜಿಸಿದ್ದ 'ಸಮರ್ಥ ಭಾರತ' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಿಸ್ವಾರ್ಥ ಸ್ವಯಂಸೇವೆಯ ಇತಿಹಾಸ ಹಾಗೂ ಪರಿಕಲ್ಪನೆಗಳನ್ನು ನೋಡಿ ಅಚ್ಚರಿಪಟ್ಟು, ಅಭಿನಂದಿಸಿ ಹಿಂದಿರುಗಿದರು.

ಈಗ ಅವೇ ಪ್ರಶ್ನೆಗಳು ಸಾದಿಯಾರಿಗೂ ಅನ್ವಯಿಸುತ್ತವೆ. ಭಾರತೀಯ ಮುಸ್ಲಿಮರು ಪಾಕಿಸ್ತಾನವನ್ನೇ ಬೆಂಬಲಿಸುತ್ತಾರೆ ಎಂಬ ಭಾವನೆ ನಮ್ಮಲ್ಲಿ ಮೊಳೆಯಲು ಆಸ್ಪದ ಏಕೆ ಕೊಟ್ಟಿರಿ? ಒಂದು ಕ್ರಿಕೆಟ್ ಆಟದ ಫಲಿತಾಂಶದಿಂದ ನಿಮಗೆ ಅಷ್ಟು ನೋವಾಗಿದೆ ಎನ್ನುವುದಾದರೆ, ದಶಕಗಳಿಂದ ಮುಸ್ಲಿಂ ಉಗ್ರವಾದಕ್ಕೆ ಬಲಿಯಾಗಿ ಜೀವಗಳನ್ನೇ ಕಳೆದುಕೊಳ್ಳುತ್ತಿರುವ ನಮಗೆಷ್ಟು ನೋವಾಗಿರಬಹುದು ಅರಿವಿದೆಯೇ? ಅಷ್ಟಾಗಿಯೂ ದೇಶದ ಅತ್ಯುನ್ನತ ಹುದ್ದೆಗೆ ರಾಷ್ಟ್ರಪತಿಯಾಗಿ ಅಬ್ದುಲ್ ಕಲಾಂರನ್ನು ಆರಿಸಿದಾಗ ನಾವು ಸಂಭ್ರಮಿಸಲಿಲ್ಲವೇ? ಬದಲಿಗೆ ನಿಮ್ಮಿಂದ ನಮಗೆಷ್ಟು ಬೆಂಬಲ ಸಿಕ್ಕಿದೆ?
ಇತ್ತೀಚಿನ ಆಘಾತಕಾರಿ ಬೆಳವಣಿಗೆಯನ್ನೇ ನೋಡಿ. ಪಾಕಿಸ್ತಾನ ಪ್ರಾಯೋಜಿತ ಕೈದತ್-ಅಲ್-ಜಿಹಾದ್ ಭಾರತಕ್ಕೆ ಬರಲಿದೆ ಎಂದು ಅಲ್-ಕೈದಾ ಸಂಘಟನೆಯ ಮುಖ್ಯಸ್ಥ ಅಯಮಾನ್-ಅಲ್-ಜವಾಹಿರಿ ಅಧಿಕೃತವಾಗಿ ಘೋಷಿಸಿದ್ದಾನೆ. ಇಂಥ ಹೇಳಿಕೆಗಳು ಬಂದ ತಕ್ಷಣ ನೀವೇಕೆ ಖಂಡಿಸುವುದಿಲ್ಲ? ಈ ಹಿಂದೆ ಹೈದರಾಬಾದಿನ ಸಂಸದ ಅಸಾದುದ್ದೀನ್ ಒವೈಸಿ 'ಒಂದು ಪಕ್ಷ ಭಾರತ ಹಾಗೂ ಪಾಕ್ ಯುದ್ಧವಾದರೆ ಭಾರತದ ಮುಸ್ಲಿಮರೆಲ್ಲ ಬೆಂಬಲಿಸುವುದು ಪಾಕಿಸ್ತಾನವನ್ನೇ' ಎಂದು ಹೇಳಿದ್ದಾಗಲೂ ನೀವೇಕೆ ಮೌನವಾಗಿದ್ದಿರಿ? ಈ ಮೌನದ ಅರ್ಥ ಸಮ್ಮತಿಯೆಂದೇ? ಹಾಗಿದ್ದರೆ ಭಾರತದಲ್ಲಿದ್ದು ಬೆಂಬಲಿಸುವ ಬದಲು ಪಾಕಿಸ್ತಾನಕ್ಕೇ ಹೋಗಿಬಿಡಿ ಎಂದರೆ ಎಲ್ಲರೂ ಅಲ್ಲಿಗೆ ಹೋಗಲು ಸಿದ್ಧರೇ? ಹುಚ್ಚು ನೆರೆ ಉಕ್ಕಿ ಹರಿದ ಜಮ್ಮು-ಕಾಶ್ಮೀರದಲ್ಲಿ ಲಕ್ಷಾಂತರ ಮುಸ್ಲಿಮರನ್ನು ಜೀವದ ಹಂಗು ತೊರೆದು ರಕ್ಷಿಸಿದ ಭಾರತೀಯ ಸೇನೆಯನ್ನು ಎಷ್ಟು ಜನ ಮುಕ್ತವಾಗಿ ಶ್ಲಾಘಿಸಿದ್ದೀರಿ? ಅದು ಬರಿದೇ ಅವರ ಕರ್ತವ್ಯ ಎಂದರೆ ಈ ದೇಶದ ಸಲುವಾಗಿ ನಿಮ್ಮ ಕರ್ತವ್ಯಗಳೇನೂ ಇಲ್ಲವೇ?


ಕಾಶ್ಮೀರವೆಂದೊಡನೆ ಮುಟ್ಟಿದರೆ-ಮುನಿಯಂತಾಡಲು ಮುಸ್ಲಿಮರಿಗೆ ಯಾವ ಕಾರಣವೂ ಇಲ್ಲ. ಏಕೆಂದರೆ, 1947ರ ಅಕ್ಟೋಬರ್ 26ರಂದು ಮಹಾರಾಜ ಹರಿಸಿಂಗ್‍ರ ಆಳ್ವಿಕೆಯಲ್ಲಿದ್ದ ಜಮ್ಮು-ಕಾಶ್ಮೀರ ರಾಜ್ಯ ಅವರ ಇಚ್ಛೆಗನುಗುಣವಾಗಿ, ಸಾಂವಿಧಾನಿಕವಾಗಿ, ಕಾನೂನುಬದ್ಧವಾಗಿ ಭಾರತದೊಂದಿಗೆ ವಿಲೀನಗೊಂಡಿತು. ಆಗ ಯಾವ ಪ್ರತ್ಯೇಕತಾವಾದದ ಕೂಗೂ ಇರಲಿಲ್ಲ. ತಕ್ಷಣವೇ ತನ್ನ ಜನರನ್ನು ಛೂಬಿಟ್ಟು ಗಲಾಟೆ ಎಬ್ಬಿಸಿತು ‘ಪಾಪಿ’ಸ್ತಾನ. ಈಗಲೂ ಅಷ್ಟೇ. ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಶೇಕಡಾ 85ರಷ್ಟು ವಿಸ್ತೀರ್ಣವಿರುವುದು ಜಮ್ಮು ಹಾಗೂ ಲಡಾಖ್‍ಗಳದ್ದೇ. ಕಾಶ್ಮೀರದ ವ್ಯಾಪ್ತಿ ಶೇಕಡಾ 15 ಮಾತ್ರ! ಜಮ್ಮುವಿನಲ್ಲಿರುವವರಲ್ಲಿ ಶೇಕಡಾ 70ರಷ್ಟು ಹಿಂದೂಗಳೇ. ಲಡಾಖಿನಲ್ಲಿರುವವರು ಬೌದ್ಧರು ಹಾಗೂ ಶಿಯಾ ಮುಸ್ಲಿಮರು. ಇಲ್ಲಿಯವರೆಗೂ ಅವರುಗಳು ಒಂದೇ ಒಂದು ಬಾರಿಯೂ ಪ್ರತ್ಯೇಕತಾವಾದಕ್ಕೆ ಬೆಂಬಲ ಸೂಚಿಸಿಲ್ಲ. ಅಫ್ಜಲ್ ಗುರುವನ್ನು ನೇಣಿಗೇರಿಸಿದಾಗಲೂ ಅಲ್ಲಿ ಒಂದೂ ಬಂದ್ ಅಥವಾ ಪ್ರತಿಭಟನೆ ನಡೆದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಜಮ್ಮು-ಕಾಶ್ಮೀರ ನಮ್ಮೊಡನೆ ಬೆಸೆದುಕೊಂಡಿರುವುದೇ ಆ ಜನರ ನಿಷ್ಠೆಯಿಂದಾಗಿ! ಕಿರಿಕಿರಿಯೇನಿದ್ದರೂ ಗಾತ್ರದಲ್ಲಿ ಕಿರಿದಾದ ಕಾಶ್ಮೀರದ್ದೇ. ಸುನ್ನಿ ಮುಸ್ಲಿಮರ ಪ್ರಾಬಲ್ಯ ಇರುವ ಇಲ್ಲಿ ಮಾತ್ರವೇ ಗದ್ದಲ, ಹೋರಾಟ. ಒಟ್ಟಾರೆ ರಾಜ್ಯದ 22 ಜಿಲ್ಲೆಗಳಲ್ಲಿ 17 ಜಿಲ್ಲೆಗಳು ಸದಾ ಶಾಂತ. ಇನ್ನೈದು ಜಿಲ್ಲೆಗಳ ಪ್ರತಿಭಟನೆ, ಹಿಂಸಾಚಾರ ಸಂಪೂರ್ಣವಾಗಿ ಪಾಕ್ ಪ್ರೇರಿತ! ಇಲ್ಲಿ ಮತ್ತೊಂದು ವಿಷಯ ಹೇಳಲೇಬೇಕು. ಅನುಚ್ಛೇದ (article) 370ರ ಬಗ್ಗೆ ನಮಗೆ ಇರುವುದೂ ತಪ್ಪು ತಿಳುವಳಿಕೆಯೇ. ಸ್ವಾತಂತ್ರ್ಯಪೂರ್ವದಲ್ಲಿ ಭಾರತ ಎರಡು ರೀತಿಯ ಆಳ್ವಿಕೆಯಲ್ಲಿ ಹಂಚಿಹೋಗಿತ್ತು. ಒಂದು ಬ್ರಿಟಿಷರದ್ದಾದರೆ ಮತ್ತೊಂದು ಸ್ವತಂತ್ರ ರಾಜರದ್ದು. ಸ್ವಾತಂತ್ರ್ಯದ ಬಳಿಕ ಆ ರಾಜರ ಆಳ್ವಿಕೆಯಲ್ಲಿದ್ದ ರಾಜ್ಯಗಳನ್ನೆಲ್ಲ ನಮ್ಮ ಸಂವಿಧಾನದೊಂದಿಗೆ ವಿಲೀನಗೊಳಿಸಲಾಯಿತು. ಮೈಸೂರು, ಕೊಚ್ಚಿನ್ ಮುಂತಾದ ರಾಜ್ಯಗಳು ಸುಲಭವಾಗಿ ಭಾರತದ ತೆಕ್ಕೆ ಸೇರಿದವು. ಆದರೆ ಪಾಕಿಸ್ತಾನ ಹುಟ್ಟುಹಾಕಿದ್ದ ಗಲಭೆಯಿಂದಾಗಿ ಜಮ್ಮು-ಕಾಶ್ಮೀರದ ವಿಲೀನ ಗೊಂದಲಮಯವಾಯಿತು. ಆದ್ದರಿಂದ ತಾತ್ಕಾಲಿಕವಾಗಿ 370ಯನ್ನು ಜಾರಿಗೆ ತರಲಾಯಿತು. ಮೂಲತಃ ಯಾವ ವಿಶೇಷ ಸವಲತ್ತುಗಳನ್ನೂ ಅದು ಒಳಗೊಂಡಿರಲಿಲ್ಲ. ಅವುಗಳನ್ನು ಬರಿದೇ ಬಾಯಿ ಮಾತಿನಲ್ಲಿ ದಯಪಾಲಿಸಿದವರು ‘I am the last Englishman to rule in India’ ಎಂದು ನಾಚಿಕೆಯಿಲ್ಲದೆ ಹೇಳಿಕೊಂಡಿದ್ದ ಹೊಣೆಗೇಡಿ ನೆಹರೂ! ಅಂದಿನಿಂದಲೂ ಆ ಗೊಂದಲ, ಸವಲತ್ತುಗಳು ಹಾಗೇ ಮುಂದುವರೆಯುತ್ತಾ ಬಂದಿವೆ.

ಈಗ ಹೇಳಿ, ಕಾನೂನುಬದ್ಧವಾಗಿ ಕಾಶ್ಮೀರದ ವಿಷಯದಲ್ಲಿ ಯಾವ ಸಮಸ್ಯೆಯಿದೆ? ಹಾಗಿದ್ದಿದ್ದರೆ ಸಂಯುಕ್ತ ರಾಷ್ಟ್ರಗಳ ಒಕ್ಕೂಟ ಪಾಕಿಸ್ತಾನಕ್ಕೆ ಛೀಮಾರಿ ಹಾಕಿ ಏಕೆ ಕಳಿಸುತ್ತಿತ್ತು? ಅಲ್ಪಸಂಖ್ಯಾತರು ಎಂಬ ಹಣೆಪಟ್ಟಿ ಹಚ್ಚಿ ಓಲೈಕೆ ರಾಜಕಾರಣ ಮಾಡುತ್ತಿರುವವರೇ ಇಂದಿನ ನಿಜವಾದ ಸಮಸ್ಯೆ ಎನಿಸುವುದಿಲ್ಲವೇ? ಅನುಚ್ಛೇದ 370ಯನ್ನು ತಪ್ಪಾಗಿ ಬಿಂಬಿಸುತ್ತಿರುವ ಮಾಧ್ಯಮಗಳು, ಆಗಿಯೇ ಇಲ್ಲದ ಅನ್ಯಾಯವನ್ನು ಸರಿಪಡಿಸಲು ಹೋರಾಟದ ಸೋಗು ಹಾಕುತ್ತಿರುವ ಸೆಕ್ಯುಲರ್ ಮಂದಿಗಿಂತ ದೊಡ್ಡ ಸಮಸ್ಯೆ ಯಾವುದಿದೆ? ಇದೆಲ್ಲ ಮುಸ್ಲಿಮರಿಗೆ ಅರ್ಥವಾಗುತ್ತಲೇ ಇಲ್ಲವೆಂದರೆ ಹೇಗೆ ನಂಬುವುದು?
ಸಾದಿಯಾರವರಿಗೆ ಮತ್ತೂ ಒಂದು ಮುಖ್ಯವಾದ ಪ್ರಶ್ನೆಯಿದೆ. 'ನಮ್ಮ ದೇಗುಲಗಳ ಅರ್ಚಕರು ಹಾಗೂ ಧರ್ಮಗುರುಗಳದ್ದು ತುಂಬಾ ಸೀಮಿತ ಪಾತ್ರ. ಧರ್ಮವನ್ನು ನಮ್ಮ ಮೇಲೆ ಹೇರುವ ಸ್ವಾತಂತ್ರ್ಯವನ್ನು ನಾವು ಅವರಿಗೆ ಯಾವತ್ತೂ ಕೊಟ್ಟಿಲ್ಲ. ಹಾಗೆಯೇ, ನಮ್ಮ ಸಾಮಾಜಿಕ ಬದ್ಧತೆಗಳಿಗೆ, ಧರ್ಮವನ್ನೇ ನೆಪಮಾಡಿಕೊಂಡು ಅವರು ಯಾವತ್ತೂ ಅಡ್ಡಗಾಲು ಹಾಕಿಯೂ ಇಲ್ಲ. ನಿಮ್ಮ ಧರ್ಮಗುರುಗಳಿಗೆ ಮಾತ್ರ ಏಕೆ ಇಡೀ ಸಮುದಾಯದ ಸಾಮಾಜಿಕ ಚಿಂತನೆ, ವಿಚಾರಗಳ ಮೇಲೆಲ್ಲ ಅಷ್ಟೊಂದು ಹಿಡಿತ? ನೀವೇ ನೋಡಿ. ಮುಸ್ಲಿಮರಲ್ಲಿ ಧರ್ಮಗುರುಗಳಿಗೆ ಹೊರತಾಗಿರುವ ಬಲಿಷ್ಠ ಸಾಮಾಜಿಕ ನಾಯಕತ್ವವಿಲ್ಲ. ಆ ಪೊರೆ ಕಳಚಿ ಹೊರಬಂದರಷ್ಟೇ ಅವರಿಗೆ ಶಿಕ್ಷಣ, ಸ್ವಾಸ್ಥ್ಯ, ರಾಷ್ಟ್ರೀಯತೆ, ಸೌಹಾರ್ದ, ಬದುಕಿನ ಗುಣಮಟ್ಟ, ಸಮಾಜದ ಆಗು-ಹೋಗುಗಳ ಬಗೆಗಿನ ಅರಿವು ಮೂಡಲು ಸಾಧ್ಯ. ಧರ್ಮವೆಂಬುದು ಬದುಕಿನ ನಡಿಗೆಯನ್ನು ಸುಗಮಗೊಳಿಸುವ ದಾರಿದೀಪವಾಗಬೇಕೇ ಹೊರತು, ನಡೆಯುವವನ ಕಣ್ಣಿಗೇ ಬಟ್ಟೆ ಕಟ್ಟಿ ಅವನನ್ನು ತನ್ನ ಹೆಗಲ ಮೇಲೆ ಹೊತ್ತೊಯ್ಯಬಾರದು.

ಭಾರತದ ಸಮಗ್ರತೆಯ ಅಗತ್ಯ ಹಿಂದೂಗಳಿಗೆಷ್ಟಿದೆಯೋ, ಮುಸ್ಲಿಮರಿಗೂ ಅಷ್ಟೇ ಇದೆ. ಇಲ್ಲಿ ಸಿಗುವ ಸ್ಥಾನ-ಮಾನ ಅವರಿಗೆ ಬೇರೆಲ್ಲಿಯೂ ಸಿಗುವುದಿಲ್ಲ. ವಾಸ್ತವವನ್ನು ಅರಿತು ಅದಕ್ಕೆ ಸ್ಪಂದಿಸುವ ಪ್ರಯತ್ನವಾಗಬೇಕು ಅಷ್ಟೇ. ಕಡೇಪಕ್ಷ ಸಾದಿಯಾರಂಥ ಸುಶಿಕ್ಷಿತ ಮುಸ್ಲಿಮರಾದರೂ ಬದಲಾವಣೆಯ ಪ್ರಕ್ರಿಯೆಗೆ ನಾಂದಿ ಹಾಡುತ್ತಾರೆ ಎಂದು ಆಶಿಸೋಣವೇ?

No comments:

Post a Comment