Monday 20 October 2014

ಹದಗೆಟ್ಟಿದೆ ಬಂಗಾಳ, ದೀದಿಗೆ ದಾದಾಗಿರಿಯೇ ಬಂಡವಾಳ!

ಇದೇ ತಿಂಗಳ ಅಕ್ಟೋಬರ್ 2ನೇ ತಾರೀಖು. ಪಶ್ಚಿಮ ಬಂಗಾಳ ಎಂದಿನಂತೆ ದುರ್ಗಾ ಪೂಜೆಯ ಸಡಗರದಲ್ಲಿ ಮುಳುಗಿತ್ತು. ಅಂದು ಗಾಂಧಿ ಜಯಂತಿ ಬೇರೆ. ಸರಿಸುಮಾರು ಮಧ್ಯಾಹ್ನದ ಹೊತ್ತಿಗೆ, ಕಲ್ಕತ್ತಾದಿಂದ 100ಕಿ.ಮೀ ದೂರ ಇರುವ ಬರ್ದ್ವಾನ್ ನಗರದ ಮನೆಯೊಂದರಲ್ಲಿ ದೊಡ್ಡ ಸ್ಫೋಟವಾಯಿತು. ಕುಕ್ಕರ್ ಅಥವಾ ಗ್ಯಾಸ್ ಸಿಲಿಂಡರ್ ಸಿಡಿದಿರಬೇಕು ಎಂದುಕೊಂಡರು ಅಕ್ಕಪಕ್ಕದ ಜನ. ಆದರೆ ಸ್ಥಳೀಯ ಪೋಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ನೋಡಿದಾಗ ವಾಸ್ತವ ಬೇರೆಯೇ ಆಗಿತ್ತು. ರಿವಾಲ್ವರ್ ಹಿಡಿದ ಹೆಂಗಸರಿಬ್ಬರು ಮನೆಯೊಳಗೆ ಯಾರನ್ನೂ ಸೇರಿಸಲೇ ಇಲ್ಲ. ಬಲವಂತವಾಗಿ ನುಗ್ಗಲು ಪ್ರಯತ್ನಿಸಿದರೆ ಮನೆಯನ್ನೇ ಸ್ಫೋಟಿಸಿಬಿಡುತ್ತೇವೆ ಎಂದು ಹೆದರಿಸಿದರು. ಹಾಗೆ ಪೋಲೀಸರು ಒಳಬರದಂತೆ ಒಂದು ಘಂಟೆಯ ಕಾಲದವರೆಗೂ ತಡೆದು ಆ ಹೆಂಗಸರು ಮಾಡಿದ್ದೇನು ಗೊತ್ತೇ? ಮನೆಯಲ್ಲಿದ್ದ ದಾಖಲೆಗಳನ್ನು ಸಾಧ್ಯವಾದಷ್ಟೂ ಸುಟ್ಟು ಹಾಕಿದ್ದು. ಕೊನೆಗೊಮ್ಮೆ ಪೋಲೀಸರು ಒಳನುಗ್ಗಿದಾಗ ಅವರಿಗೆ ಕಂಡಿದ್ದು ಸ್ಫೋಟದಿಂದ ಹೆಣವಾಗಿ ಬಿದ್ದಿದ್ದ ಶಕೀಲ್ ಅಹ್ಮದ್, ಸಾವಿನ ದವಡೆಯಲ್ಲಿದ್ದ ಶೋಭನ್ ಮಂಡಲ್ ಹಾಗೂ ಗಾಯಗೊಂಡಿದ್ದ ಅಬ್ದುಲ್ ಹಕೀಮ್ ಎಂಬ ಉಗ್ರರು. ಜೊತೆಗೆ ಅಳಿದುಳಿದ ಸಾಕ್ಷ್ಯಗಳು. ಅದರಲ್ಲಿ ಮುಖ್ಯವಾದದ್ದು ಸುಮಾರು 55 ಬಾಂಬ್‍ಗಳು, 40ಕೆಜಿಯಷ್ಟು ಸ್ಫೋಟಕ, ಹಲವು ಸಿಮ್ ಕಾರ್ಡ್‍ಗಳು, ನಕಲಿ ಗುರುತಿನ ಪತ್ರಗಳು ಹಾಗೂ ಅಲ್-ಕೈದಾಗೆ ಸಂಬಂಧಿಸಿದ ಭಿತ್ತಿ ಪತ್ರಗಳು, ವೀಡಿಯೋಗಳು! ಪೋಲೀಸರನ್ನು ತಡೆದ ಆ ವೀರ ವನಿತೆಯರ ಹೆಸರು ರೂಮಿ ಮತ್ತು ಅಲಿಮಾ ಹಾಗೂ ಆ ಮನೆಯಲ್ಲಿ ನಡೆಯುತ್ತಿದ್ದ ಘನಕಾರ್ಯ ಬಾಂಬ್‍ಗಳ ತಯಾರಿಕೆ! ದೀಪಾವಳಿಯ ಪ್ರಯುಕ್ತ ನಮಗೆ ರಕ್ತದೋಕುಳಿಯ ಉಡುಗೊರೆ ನೀಡಲು ಸಜ್ಜಾಗುತ್ತಿತ್ತು ಆ ತಂಡ. ಅದರೆ ಅವರ ಅದೃಷ್ಟ ಕೆಟ್ಟು ಒಂದು ಬಾಂಬ್ ಅಲ್ಲೇ ಸ್ಫೋಟಿಸಿಬಿಟ್ಟಿತ್ತು.


ಇದು ಘಟನೆಯ ಒಂದು ಮುಖ. ಮತ್ತೊಂದು ಮುಖವನ್ನು ನೋಡೋಣ ಬನ್ನಿ. ಬಾಂಬ್ ತಯಾರಾಗುತ್ತಿತ್ತಲ್ಲ, ಆ ಮನೆಯನ್ನು, 18 ಸಾವಿರ ರೂಪಾಯಿಗಳಿಗೆ ಉಗ್ರರಿಗೆ ಬಾಡಿಗೆಗೆ ನೀಡಿದ್ದಾತ ನೂರುಲ್ ಹಸನ್ ಚೌಧುರಿ. ಅವನು ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡ. ಅಷ್ಟೇ ಅಲ್ಲ, ಆ ಮನೆ ಟಿಎಂಸಿ ಪಕ್ಷದ ಕಛೇರಿಯಾಗಿಯೂ ಬಳಕೆಯಾಗುತ್ತಿತ್ತು ಎಂಬ ಸತ್ಯ ಈಗ ಬಯಲಾಗಿದೆ. ಘಟನೆ ನಡೆದ ಮೇಲೆ ಅಲ್ಲಿದ್ದ ಬಾಂಬ್‍ಗಳನ್ನು ವಶಪಡಿಸಿಕೊಂಡ ಪೋಲೀಸರು ತುರಾತುರಿಯಲ್ಲಿ ಅವುಗಳನ್ನು ನಾಶಪಡಿಸಿಬಿಟ್ಟರು. ಅವರು ಹಾಗೆ ಮಾಡಲು ಕಾರಣವೇ ಇರಲಿಲ್ಲ. ಏಕೆಂದರೆ ದೇಶದ ಭದ್ರತೆಯ ವಿಚಾರವಾದ ಇದು ರಾಷ್ಟ್ರೀಯ ತನಿಖಾ ದಳದ ಗಮನಕ್ಕೆ ಬರಲೇ ಬೇಕಿತ್ತು. ಆದರೆ ಕೇಂದ್ರಕ್ಕೆ ತಿಳಿಸದೇ ಸಾಕ್ಷ್ಯಗಳನ್ನು ಹಾಳುಮಾಡಲು ಅಣತಿ ಇತ್ತವರು ಬೇರಾರೂ ಅಲ್ಲ, ಸ್ವತಃ ಬಂಗಾಳದ ಮುಖ್ಯಮಂತ್ರಿ ಮಮತಾ ದೀದಿ! ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆಬರುತ್ತಿರುವ ಸಾವಿರಾರು ಮುಸ್ಲಿಮರನ್ನು ಓಲೈಸುತ್ತಿರುವ ದೀದಿಗೆ ಈ ಘಟನೆಯನ್ನು ಮುಚ್ಚಿಡುವ ತವಕ. ಏಕೆಂದರೆ ಇದರಲ್ಲಿ ಮೃತಪಟ್ಟ ಶಕೀಲ್ ಹೀಗೇ ವಲಸೆ ಬಂದವನು. ಬಾಂಗ್ಲಾದೇಶದಲ್ಲಿರುವ ಉಗ್ರವಾದಿ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್‍ನ ಸದಸ್ಯ! ಇಂಥ ನೂರಾರು ವಲಸಿಗರು ಬಂಗಾಳವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಧಿಕಾರದ ಅಮಲೇರಿಸಿಕೊಂಡಿರುವ ದೀದಿಯ ಕಣ್ಣಿಗೆ ಅಲ್ಪಸಂಖ್ಯಾತರ ಮತಗಳನ್ನು ಬಿಟ್ಟು ಬೇರೇನೂ ಕಾಣುತ್ತಿಲ್ಲ. ಅವರ ಹಟ ಯಾವ ಮಟ್ಟಕ್ಕೆ ಹೋಗಿದೆಯೆಂದರೆ ಈ ಸ್ಫೋಟದ ತನಿಖೆಯನ್ನು ಕೇಂದ್ರಕ್ಕೆ ವಹಿಸಿಕೊಡಲು ಅವರು ಸುತರಾಂ ಸಿದ್ಧರಿಲ್ಲ.

ನಿಮಗೆ ಗೊತ್ತಿರಲಿ, ದಿನವೊಂದಕ್ಕೆ ಸಾವಿರಾರು ಬಾಂಗ್ಲಾದೇಶೀ ಮುಸ್ಲಿಮರು ವಲಸೆ ಬರುತ್ತಿದ್ದಾರೆ. ಯಾವ ಅಧಿಕೃತ ದಾಖಲೆಗಳೂ ಇಲ್ಲದ ಅವರಿಗೆ ನಕಲಿ ದಾಖಲೆಗಳನ್ನು ಎಗ್ಗಿಲ್ಲದೇ ಸರಬರಾಜು ಮಾಡಲಾಗುತ್ತಿದೆ. ಅವರ ಹಿನ್ನೆಲೆಯ ಕುರಿತ ಯಾವ ವಿಚಾರಣೆ ಅಥವಾ ಪರಿಶೀಲನೆಯೂ ನಡೆಯುತ್ತಿಲ್ಲ. ಪರಿಣಾಮ, ಬಂಗಾಳದಲ್ಲಿ ಮುಸ್ಲಿಮರ ಜನಸಂಖ್ಯೆ ಮಿತಿ ಮೀರುತ್ತಿದೆ. ಮತ್ತೊಂದೆಡೆ ದೇಶದ್ರೋಹಿ ಚಟುವಟಿಕೆಗಳೂ ಹೆಚ್ಚುತ್ತಿವೆ. ನುಸುಳಿ ಬರುತ್ತಿರುವ ಉಗ್ರರು ಬುರ್ಖಾ ತಯಾರಿಸುವುದಾಗಿ ಹೇಳಿ ಮನೆಗಳನ್ನು ಬಾಡಿಗೆಗೆ ಪಡೆದು ಬಾಂಬ್ ತಯಾರಿಗೆ ತೊಡಗುತ್ತಾರೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಬಂಗಾಳವನ್ನು ಪ್ರತ್ಯೇಕಿಸುವ ಬೇಡಿಕೆ ಇಡದೆ ಇರುತ್ತಾರೆಯೇ? ಇದನ್ನೆಲ್ಲ ದೀದಿ ಏಕೆ ಮಟ್ಟ ಹಾಕುತ್ತಿಲ್ಲ? ಇಸ್ಲಾಂನ ಇತಿಹಾಸದ ವಿಷಯದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದದ್ದು ಹೀಗೆ ಓಲೈಕೆ ಮಾಡಲೆಂದೇ? ಹೋಗಲಿ, ಪರಿಸ್ಥಿತಿಯ ಸೂಕ್ಷ್ಮತೆ ಅವರಿಗೆ ಅರ್ಥವಾಗಿಲ್ಲ ಎಂದುಕೊಳ್ಳೋಣವೆಂದರೆ ಅದೂ ಸಾಧ್ಯವಿಲ್ಲ. ಏಕೆಂದರೆ 2006ರಲ್ಲಿ ಸಾಕ್ಷಾತ್ ಇದೇ ದೀದಿ ಸಂಸತ್ತಿನಲ್ಲಿ ಕೆಂಡಾಮಂಡಲವಾಗಿ ತಮ್ಮ ರಾಜೀನಾಮೆ ಪತ್ರವನ್ನು ಡೆಪ್ಯೂಟಿ ಸ್ಪೀಕರ್‍ರ ಮುಖದ ಮೇಲೆಸೆದಿದ್ದರು. ಆಗ ಬಾಂಗ್ಲಾದೇಶದ ಅಕ್ರಮ ವಲಸಿಗರು ಬಂಗಾಳಕ್ಕೆ ನುಸುಳುತ್ತಿರುವುದನ್ನು ಪ್ರತಿಭಟಿಸಿ ಸದನವನ್ನು ಮುಂದೂಡಲು ಅನುಮತಿ ಕೇಳಿದ್ದರು. ಅನುಮತಿ ನಿರಾಕರಿಸಿದ ಸ್ಪೀಕರ್ ಸೋಮನಾಥ ಚಾಟರ್ಜಿ ಅವರ ಮೇಲೆ ಸಿಟ್ಟಾಗಿ ಮೈಮೇಲೆ ದೇವರು ಬಂದಂತೆ ವರ್ತಿಸಿದ್ದರು! ಅಂದು ಅಕ್ರಮ ವಲಸೆಯನ್ನು ವಿರೋಧಿಸಿದ್ದ ದೀದಿ ಇಂದು ಅದರ ಪರವಾಗಿ ಯುದ್ಧಕ್ಕೆ ನಿಲ್ಲುತ್ತಾರೆ. ‘ಒಬ್ಬ ವಲಸಿಗನನ್ನು ಯಾರಾದರೂ ಮುಟ್ಟಿ ನೋಡಿ, ನಾನು ದಿಲ್ಲಿಗೆ ಮುತ್ತಿಗೆ ಹಾಕುತ್ತೇನೆ’ ಎಂದು ಘರ್ಜಿಸುತ್ತಾರೆ. ಹಾಗೆ ಮಾಡಬೇಕಾದ್ದೇ. ಎಷ್ಟೇ ಆದರೂ ವಿಧಾನಸಭೆಯ, ಲೋಕಸಭೆಯ ಎಲ್ಲ ಚುನಾವಣೆಗಳನ್ನೂ ಗೆಲ್ಲಿಸುತ್ತಿರುವವರು ಈ ಮುಸ್ಲಿಂ 'ಮತ'ಬಾಂಧವರೇ ಅಲ್ಲವೇ?

ಓಲೈಕೆಗೂ ಮಿತಿ ಇರಬೇಕು. ರಾಜ್ಯದಲ್ಲಿ 30ಸಾವಿರಕ್ಕೂ ಹೆಚ್ಚಿನ ಇಮಾಮರಿಗೆ ಭತ್ಯೆ ಕೊಟ್ಟಿದ್ದೇನು, ಹೆಣ್ಣುಮಕ್ಕಳಿಗೆ ಸೈಕಲ್ ಕೊಡಿಸಿದ್ದೇನು. ಕೊಡಿಸಬಾರದು ಎಂದಲ್ಲ, ಆದರೆ ಯಾವುದೇ ಕೊಡುಗೆ ಅಪಾತ್ರ ದಾನವಾಗಬಾರದು. ಅರ್ಹರೋ ಅಲ್ಲವೋ, ಉಗ್ರರೋ ಅಲ್ಲವೋ ಎಂಬುದನ್ನೂ ನೋಡದೆ ಹೀಗೆ ಕೊಟ್ಟು ಕೆಡಿಸುವುದು ಎಷ್ಟು ಸಮಂಜಸ? ಹೋಗಲಿ, ಸೈಕಲ್‍ಗಳನ್ನು ಕೊಡಿಸುವಾಗ, ಪ್ರತಿಭಾ ಪುರಸ್ಕಾರಗಳನ್ನು ಕೊಡುವಾಗ ಇವರಿಗೆ ಹಿಂದುಳಿದ ಹಿಂದೂಗಳು ಕಣ್ಣಿಗೆ ಕಾಣುತ್ತಾರೆಯೇ? ಇಲ್ಲ. ಬಡಪಾಯಿಗಳು ಅಲ್ಪ ಸಂಖ್ಯಾತರಲ್ಲವಲ್ಲ! ಆದ್ದರಿಂದಲೇ ಬಾಂಗ್ಲಾದೇಶದಿಂದ ಬರುವ ಹಿಂದೂ ಹಾಗೂ ಬೌದ್ಧ ವಲಸಿಗರಿಗೆ ಇವರ ರಾಜಾಶ್ರಯ ದೊರಕುವುದೇ ಇಲ್ಲ. ಅಲ್ಪ ಸಂಖ್ಯಾತರ ಕುರಿತ ನಿರ್ಣಯಗಳನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡಿರುವ ದೀದಿ, ಗೋಮಾಂಸ ಭಕ್ಷಣೆ ಮೂಲಭೂತ ಹಕ್ಕಾಗಬೇಕು ಎಂದು ಸಂಸತ್ತಿನಲ್ಲಿ ಈ ಹಿಂದೆಯೇ ಹೇಳಿಬಿಟ್ಟಿದ್ದಾರೆ. ಬಂಗಾಳದಲ್ಲಿ 34 ವರ್ಷಗಳ ಕಮ್ಯೂನಿಸ್ಟ್ ಆಡಳಿತಕ್ಕೆ ಕೊನೆ ಹಾಡಿ ತನ್ನನ್ನು ಅಧಿಕಾರಕ್ಕೆ ತಂದ ಮುಸ್ಲಿಂ ಲಾಬಿಯ ಋಣಸಂದಾಯವನ್ನು ತಮ್ಮ ಶಕ್ತ್ಯಾನುಸಾರ ಮಾಡುತ್ತಿದ್ದಾರೆ! ಯಾವ ಹಿನ್ನೆಲೆಯನ್ನೂ ವಿಚಾರಿಸದೆ 22 ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರಿಗೆ ಸಾಲ ನೀಡುತ್ತಿರುವುದು, ಅಲ್ಪಸಂಖ್ಯಾತರಿಗೆ ಮೀಸಲಿರುವ ಹಣದ ಪ್ರಮಾಣವನ್ನು 1000 ಕೋಟಿ ದಾಟಿಸಿರುವುದು ಹಾಗೂ ಸಾವಿರಾರು ಮದರಸಾಗಳನ್ನು ತೆರೆಯಲು ಒಪ್ಪಿಗೆ ನೀಡಿರುವುದೂ ಋಣಸಂದಾಯದ ಕೆಲ ವಿಧಾನಗಳೇ.

ದೀದಿಯ ಅತಿರೇಕ ಇಲ್ಲಿಗೇ ಮುಗಿಯುವುದಿಲ್ಲ. ಶಾರದಾ ಚಿಟ್ ಫಂಡ್ ಹಗರಣದ ಬಗ್ಗೆ ನೀವು ಕೇಳಿರಬೇಕು. ಅದರಲ್ಲಿ ಬಂಗಾಳದ ಲಕ್ಷಾಂತರ ಮಧ್ಯಮ, ಕೆಳ-ಮಧ್ಯಮ ವರ್ಗದ ಜನ ತಮ್ಮ ಹಣವನ್ನು ಹೂಡಿದ್ದರು. ಕೋಟಿಗಟ್ಟಳೆ ಹಣಕ್ಕೆ ಮೇಲ್ವಿಚಾರಕರಾಗಿ ಸಂಸದ ಸುದೀಪ್ತೋ ಸೇನ್‍ರನ್ನು ನೇಮಿಸಲಾಯಿತು. ಜವಾಬ್ದಾರಿಯಿಲ್ಲದೆ ಜನರ ಹಣವನ್ನು ಕಂಡ ಕಂಡಲ್ಲಿ ಹೂಡಿದ ಪರಿಣಾಮ ಸಂಸ್ಥೆ ದಿವಾಳಿಯೆದ್ದಿತು. ದೀದಿಯನ್ನು ವಿಚಾರಿಸಿದಾಗ 'ಹೋದದ್ದು ಹೋಯಿತು ಬಿಡಿ' ಎಂದು ಬಿಟ್ಟರು ಸಲೀಸಾಗಿ. ತಾವೇ ಒಂದು ತನಿಖಾ ತಂಡವನ್ನು ರಚಿಸಿ ವಿಚಾರಣೆಗೆ ಆದೇಶಿಸಿದರೇ ಹೊರತು ಸಿ.ಬಿ.ಐಯನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಆದರೆ ಹೂಡಿಕೆದಾರರು ಬಿಡಬೇಕಲ್ಲ? ಸರ್ವೋಚ್ಚ ನ್ಯಾಯಾಲಯದ ಬಾಗಿಲು ಬಡಿದು ಪ್ರಕರಣವನ್ನು ಸಿ.ಬಿ.ಐಗೆ ಒಪಿಸಿದ್ದಾರೆ. ಸುದೀಪ್ತೋರನ್ನು ಒಳಗೆ ಹಾಕಿದ ಮೇಲೆ ಹುಳುಕುಗಳು ಹೊರ ಬರುತ್ತಿವೆ. ತೃಣಮೂಲ ಪಕ್ಷದ ಹಲವರು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಉಳಿದವರದ್ದು ಬಿಡಿ, ಈ ಅವ್ಯವಹಾರದ ಕಳಂಕ ದೀದಿಯನ್ನೂ ಸುತ್ತಿಕೊಳ್ಳುವ ಲಕ್ಷಣಗಳಿವೆ. ದೀದಿಗೆ ಚಿತ್ರಕಲೆಯ ಹವ್ಯಾಸವಿದೆ. ಕಳೆದ ವರ್ಷ ಅವರ ಪೇಂಟಿಂಗ್ ಒಂದನ್ನು ಬರೋಬ್ಬರಿ 1.8ಕೋಟಿ ರೂಗಳಿಗೆ ಕೊಂಡಿದ್ದರು ಸುದೀಪ್ತೋ ಸೇನ್. ಹವ್ಯಾಸಿ ಚಿತ್ರಕಲೆಗೆ ಇಷ್ಟೊಂದು ಬೆಲೆಯೇ ಎಂದು ಅಚ್ಚರಿಪಟ್ಟಿದ್ದೆವು ನಾವು. ಆ ದುಡ್ಡು ಶಾರದಾ ಫಂಡ್‍ನದೇ ಎಂದು ಈಗ ಬಾಯಿ ಬಿಡುತ್ತಿದ್ದಾರೆ ಸುದೀಪ್ತೋ. ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡಲು ಇವರೇ ಆಗಬೇಕೇ? ಮೋದಿಯವರು ಚುನಾವಣೆಯ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೇ ಸಿಟ್ಟಾಗಿದ್ದರು ದೀದಿ, ಈಗ ಸಿ.ಬಿ.ಐನ ಕೆಂಗಣ್ಣನ್ನು ಹೇಗೆ ಎದುರಿಸುತ್ತಾರೋ. ಇದಕ್ಕಿಂತ ಆಘಾತಕಾರಿಯಾದ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಉಗ್ರ ಸಂಘಟನೆಗಳಿಗೆ ಶಾರದಾ ಫಂಡ್‍ನದೇ ದುಡ್ಡು ಸರಬರಾಜಾಗಿದೆಯಂತೆ. ಸುದೀಪ್ತೋ ಸೇನ್‍ರ ನೆರವಿನೊಂದಿಗೆ ಕೋಟಿಗಟ್ಟಳೆ ಹಣವನ್ನು ಹೊತ್ತ ಆಂಬುಲೆನ್ಸ್ ಗಳು ರಾತ್ರೋರಾತ್ರಿ ಬಂಗಾಳದ ಗಡಿಯನ್ನು ದಾಟಿದವು ಎಂಬ ಅಂಶವನ್ನು ಸಿ.ಬಿ.ಐ ಹೊರಹಾಕಿದೆ. ಹಾಗೆ ಹಣವನ್ನು ದಾಟಿಸಿದವನು ಇಸ್ಲಾಮಿಕ್ ಉಗ್ರ ಸಂಘಟನೆ ಸಿಮಿಯ ಮುಖಂಡ ಇಮ್ರಾನ್‍. ಇದೇ ಇಮ್ರಾನ್‍ನನ್ನೇ ದೀದಿ ತಲೆಯ ಮೇಲೆ ಕೂರಿಸಿಕೊಂಡು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದ್ದು! 2001ರಲ್ಲೇ ಸಿಮಿಯ ಮೇಲೆ ನಿರ್ಬಂಧ ಹೇರಿರುವುದು ಗೊತ್ತಿದ್ದೂ ಆವನನ್ನು ಆರಿಸುವ ಅಗತ್ಯವೇನಿತ್ತು? ದೇಶದ್ರೋಹಿಗಳನ್ನು ಅಧಿಕಾರ ಕೇಂದ್ರದಲ್ಲಿ ಕೂಡಿಸುವುದೂ ಅಲ್ಲದೇ, ನಮ್ಮದೇ ಜನರ ದುಡ್ಡನ್ನು ಉಗ್ರವಾದಿ ಚಟುವಟಿಕೆಗಳಿಗೆ ಬಳಸುವುದನ್ನು ಹೇಗೆ ಸಮರ್ಥಿಸಿಕೊಳ್ಳಲಾದೀತು?

ಅರ್ಧ ಬೆಂದ ಆಹಾರ ವಿಷಕ್ಕೆ ಸಮಾನವಂತೆ. ಹಾಗೆಯೇ ರಾಜಕಾರಣಿಗಳ ಅಪಕ್ವ ಚಿಂತನೆಗಳು ಕಾರ್ಯರೂಪಕ್ಕಿಳಿಯುವುದು ದೇಶದ ಸ್ವಾಸ್ಥ್ಯಕ್ಕೆ ಮಾರಕ. ಅತಿಯಾದ ಓಲೈಕೆ, ಮಿತಿಮೀರಿದ ದ್ವೇಷಸಾಧನೆಗಳು ಸಮಾಜದ ಸಮತೋಲನವನ್ನು ಹಾಳುಗೆಡವುತ್ತವೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾಯಾವತಿ, ಜಯಲಲಿತಾ ಹಾಗೂ ಮಮತಾಗಳೆಂಬ ತ್ರಿಮೂರ್ತಿಗಳು ಆಡುತ್ತಿದ್ದ ರೀತಿ ನೆನಪಿದೆಯಲ್ಲವೇ? ಅಧಿಕಾರಕ್ಕೇರಲು ತಮ್ಮ ಬೆಂಬಲ ಬೇಕೇ ಬೇಕಾಗುತ್ತದೆಂಬ ದುರಹಂಕಾರದಿಂದ ಬೀಗುತ್ತಿದ್ದ ಅವರನ್ನು ಹಿಡಿಯಲು ಸಾಧ್ಯವಿತ್ತೇ? ಮಾಯಾವತಿಯ ಸೊಲ್ಲು ಸೋತ ಮೇಲೆ ಅಡಗಿತು. ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದ ಜಯಲಲಿತಾ ಜೈಲ್‍ಲಲಿತಾ ಆಗಿದ್ದಾಯಿತು. ಇನ್ನುಳಿದಿರುವುದು ದೀದಿಯ ಸರದಿ. ‘ಅಮ್ಮ’ಳನ್ನೇ ಬಿಡದ ಕಾನೂನು ದೀದಿಯನ್ನು ಬಿಟ್ಟೀತೇ? ಮೇರೆ ಮೀರುತ್ತಿರುವ ಆಕೆಯ ನಿರಂಕುಶ ಪ್ರಭುತ್ವಕ್ಕೂ ಕಡಿವಾಣ ಬೀಳಬೇಕಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅಲ್ಲವೇ?

No comments:

Post a Comment