Wednesday, 14 January 2015

ಉಗ್ರರ ನಿಗ್ರಹದಲ್ಲೂ ರಾಜಕೀಯವೇ?

ಅದು 2008ನೆಯ ಇಸವಿಯ ನವೆಂಬರ್ 26. 'ಕುಬೇರ' ಎಂಬ ಹೆಸರಿನ ದೋಣಿ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿತ್ತು. ಅದರಲ್ಲಿದ್ದ ನಾಲ್ವರು ಬೆಸ್ತರು ಮೀನು ಹಿಡಿಯುವುದರಲ್ಲಿ ಮಗ್ನರಾಗಿದ್ದರೆ ಕ್ಯಾಪ್ಟನ್ ಅಮರ್‍ಸಿನ್ಹ ಸೋಲಂಕಿ ದೋಣಿಯನ್ನು ಸಂಭಾಳಿಸುತ್ತಿದ್ದರು. ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ನುಗ್ಗಿ ಬಂದಿತು ಮತ್ತೊಂದು ಅಪರಿಚಿತ ದೋಣಿ. ನೋಡನೋಡುತ್ತಿದ್ದಂತೆಯೇ, ಅದರಲ್ಲಿದ್ದವರು ಈ ದೋಣಿಗೆ ನೆಗೆದು ಮೊದಲು ನಿರ್ದಯವಾಗಿ ಸೋಲಂಕಿಯವರ ಕತ್ತನ್ನು ಕತ್ತರಿಸಿ ಹಾಕಿದರು! ದೋಣಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಮೇಲೆ ಉಳಿದ ಮೀನುಗಾರರಿಗೆ ಏನು ಮಾಡಿದರೋ ಗೊತ್ತಿಲ್ಲ, ಏಕೆಂದರೆ ಅವರ ದೇಹಗಳು ಇಂದಿನವರೆಗೂ ಸಿಕ್ಕಿಲ್ಲ. ನಂತರ ದೋಣಿಯನ್ನು ಸೀದಾ ಮುಂಬಯಿಯ ಕಡಲ ತೀರಕ್ಕೆ ನಡೆಸಿಕೊಂಡು ಬಂದು, ಅಲ್ಲಿಂದ ನಗರದೊಳಗೆ ನುಗ್ಗಿ ಮನಬಂದಂತೆ ಗುಂಡಿನ ಮಳೆಗರೆದರು. ಸಮುದ್ರ ಮಾರ್ಗವಾಗಿ ಬಂದು ಹೀಗೆ ಮಾರಣಹೋಮ ನಡೆಸಿದ್ದು ಮತ್ತ್ಯಾರೂ ಅಲ್ಲ, ಪಾಕ್ ಉಗ್ರ ಅಜ್ಮಲ್ ಕಸಬ್‍ ಮತ್ತು ಅವನ ತಂಡ!

2014ನೆಯ ಇಸವಿಯ ಡಿಸೆಂಬರ್ 31ನೇ ತಾರೀಖು. ಬೆಳಿಗ್ಗೆ 8.30ರ ಸುಮಾರಿಗೆ ಭಾರತದ ಕೋಸ್ಟ್ ಗಾರ್ಡ್‍ಗಳಿಗೆ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಿಂದ (ಎನ್‍ಟಿಆರ್‍ಓ) ವೈರ್‍ಲೆಸ್ ಸಂದೇಶವೊಂದು ಬಂದಿತು. ಅದರ ಪ್ರಕಾರ, ಕರಾಚಿಯ ಹತ್ತಿರವಿರುವ ಕೇತಿ ಬಂದರಿನಿಂದ ಭಾರತದೆಡೆಗೆ ಎರಡು ಅನುಮಾನಾಸ್ಪದ ದೋಣಿಗಳು ಹೊರಟಿದ್ದವು. ತಕ್ಷಣವೇ ಎಚ್ಚೆತ್ತ ಕೋಸ್ಟ್ ಗಾರ್ಡ್ ಸಿಬ್ಬಂದಿ ತಮ್ಮ ಡಾನಿಯರ್ ವಿಮಾನ ಹಾಗೂ ಕಾವಲು ಹಡಗು ರಾಜ್‍ರತನ್‍ಗಳೊಡನೆ ಕಾರ್ಯಾಚರಣೆಗಿಳಿದರು. ಮಧ್ಯಾಹ್ನದ ಹೊತ್ತಿಗೆ ಒಂದು ದೋಣಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯೂ ಆದರು. ಆ ದೋಣಿ ಸುಮ್ಮನೆ ಒಂದೇ ಕಡೆ ಹೊಯ್ದಾಡುತ್ತಾ ಯಾರದೋ ಅಣತಿಗೆ ಕಾಯುತ್ತಾ ನಿಂತಿತ್ತು! ಅಷ್ಟರಲ್ಲಾಗಲೇ ಆ ದೋಣಿಯಲ್ಲಿದ್ದವರಿಗೆ ಬರುತ್ತಿದ್ದ ಕರೆಗಳನ್ನು ಕದ್ದಾಲಿಸತೊಡಗಿತ್ತು ನಮ್ಮ ಗುಪ್ತಚರ ಸಂಸ್ಥೆ. ಅದರ ಪ್ರಕಾರ, 'ಅಲ್ಲಿಯ ಪರಿಸ್ಥಿತಿಯನ್ನು ನೋಡಿಕೊಂಡು ನಿಮ್ಮ ಕೆಲಸ ಶುರು ಮಾಡಿ' ಎಂಬ ಸೂಚನೆ ಸಿಕ್ಕಿತ್ತಂತೆ ದೋಣಿಯಲ್ಲಿದ್ದವರಿಗೆ. ಹಾಗೇ 'ನಿಮ್ಮ ಖಾತೆಗಳಿಗೆ ತಲಾ ಐದು ಲಕ್ಷ ರೂಪಾಯಿಗಳನ್ನು ಹಾಕಲಾಗಿದೆ' ಎಂಬ ಸಂದೇಶವೂ ಬಂದಿತ್ತಂತೆ. ಸಂದೇಶಗಳನ್ನು ಕಳಿಸುತ್ತಿದ್ದವರು ಯಾರೆಂದು ನೋಡಿದರೆ ಪಾಕಿಸ್ತಾನದ ಸೇನೆ ಹಾಗೂ ನೌಕಾನೆಲೆಯ ಸಂಸ್ಥೆಗಳು! ಇವರಿಗೆ ಕರೆ ಮಾಡುತ್ತಿದ್ದ ಪುಣ್ಯಾತ್ಮರು ಥಾಯ್ಲೆಂಡ್ ದೇಶದಲ್ಲೂ ಅದ್ಯಾರಿಗೋ ಪದೇ ಪದೇ ಕರೆ ಮಾಡುತ್ತಿದ್ದರಂತೆ! ನಮ್ಮ ಗುಪ್ತಚರ ಸಂಸ್ಥೆಯನ್ನು ಎಲ್ಲಕ್ಕಿಂತ ಆತಂಕಕ್ಕೀಡುಮಾಡಿದ ವಿಷಯವೆಂದರೆ, ದೋಣಿಯಲ್ಲಿದ್ದವರು, 'ನಮಗೆ ಶಸ್ತ್ರಾಸ್ತ್ರಗಳು ಸಿಕ್ಕಿವೆ' ಎಂಬ ಮರು ಸಂದೇಶವನ್ನು ರವಾನಿಸಿದ್ದು.


ಕೋಸ್ಟ್ ಗಾರ್ಡ್‍ನ ಉಪನಿರ್ದೇಶಕರಾದ ಕೆ.ಆರ್ ನೌಟಿಯಾಲ್ ಹೇಳುವ ಪ್ರಕಾರ, ರಾತ್ರಿ ಸುಮಾರು 10.30ರ ಹೊತ್ತಿಗೆ ಆ ದೋಣಿಯ ಹತ್ತಿರ ತಲುಪಿದೆ ನಮ್ಮ ಕೋಸ್ಟ್ ಗಾರ್ಡ್‍ನ ನೌಕೆ. ಇದನ್ನು ನೋಡುತ್ತಿದ್ದಂತೆ ಆ ದೋಣಿ ಪಾಕಿಸ್ತಾನದೆಡೆಗೆ ಪರಾರಿಯಾಗಲು ಯತ್ನಿಸಿದೆ. ಬೆನ್ನತ್ತಿದ ನಮ್ಮ ನೌಕೆಯ ಕೈಗೆ ಸಿಗದೆ ಸುಮಾರು ಒಂದು ಘಂಟೆಯಷ್ಟು ಕಾಲ ಸತಾಯಿಸಿದೆ. ಕೊನೆಗೊಮ್ಮೆ ನಮ್ಮ ಸಿಬ್ಬಂದಿ ಅವರಿಗೆ ನಿಲ್ಲುವಂತೆ ಸೂಚನೆ ನೀಡಿ ಗಾಳಿಯಲ್ಲಿ ಕೆಲ ಸುತ್ತು ಗುಂಡು ಹಾರಿಸಿದ್ದಾರೆ. ಅದೇನನಿಸಿತೋ ದೋಣಿಯಲ್ಲಿದ್ದ ನಾಲ್ವರಿಗೆ, ಇಡೀ ದೋಣಿಯನ್ನು ಸ್ಫೋಟಿಸಿಬಿಟ್ಟಿದ್ದಾರೆ. ಜನವರಿ 1ನೇ ತಾರೀಖಿನ ಬೆಳಗಿನ ಜಾವ ಧಗಧಗನೆ ಹತ್ತಿ ಉರಿದ ದೋಣಿ ಪೂರ್ಣವಾಗಿ ಸುಟ್ಟು, ಮುಳುಗಿ ಹೋಗಿದೆ. ಅದರಲ್ಲಿದ್ದವರು ಸತ್ತರೋ ಅಥವಾ ನೀರಿಗೆ ಧುಮುಕಿ ಜೀವ ಉಳಿಸಿಕೊಂಡರೋ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಏನಾದರೂ ಅವಶೇಷ ಅಥವಾ ಸುಳಿವು ಸಿಕ್ಕೀತೇನೋ ಎಂದು ಪಟ್ಟು ಬಿಡದೆ ನಮ್ಮ ಕೋಸ್ಟ್ ಗಾರ್ಡ್ ಅಲ್ಲೇ ನಿಂತಿದೆ. ಮೊದಲನೆಯ ದೋಣಿಯದ್ದು ಈ ಕಥೆಯಾದರೆ, ಎರಡನೆಯ ದೋಣಿ ತನ್ನ ಕೆಲಸವನ್ನು ಮುಗಿಸಿ ಹಿಂದಿರುಗುತ್ತಿರುವುದಾಗಿ ಸಂದೇಶವನ್ನು ನೀಡಿತ್ತಂತೆ. ಕೋಸ್ಟ್ ಗಾರ್ಡ್ನ ಮತ್ತೊಂದು ಪಡೆ ಅದರ ಶೋಧ ಕಾರ್ಯದಲ್ಲಿ ನಿರತವಾಗಿದೆ. ಇನ್ನೂ ಯಾವ ಸುಳಿವೂ ಸಿಕ್ಕಿಲ್ಲ. ಇಷ್ಟೆಲ್ಲ ನಡೆದದ್ದು ಪೋರಬಂದರಿನಿಂದ ಸುಮಾರು 365ಕಿಮೀಗಳಷ್ಟು ದೂರವಿರುವ ಅರಬ್ಬೀ ಸಮುದ್ರದ ಒಡಲಿನಲ್ಲಿ.ಇದೆಲ್ಲ ಮುಗಿದ ಮೇಲೆ, ಕೋಸ್ಟ್ ಗಾರ್ಡ್‍ನ ಕಾರ್ಯಾಚರಣೆಯನ್ನು ಶ್ಲಾಘಿಸಿದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಸಂಭವನೀಯ ಉಗ್ರರ ದಾಳಿಯನ್ನು ಯಶಸ್ವಿಯಾಗಿ ತಡೆದಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲಿಯವರೆಗೂ ಎಲ್ಲ ಸರಿಯಾಗಿಯೇ ಇತ್ತು. ಆದರೆ ಆಮೇಲೆ ಖ್ಯಾತ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನ ಇಡೀ ಕಾರ್ಯಾಚರಣೆಯ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿತು ನೋಡಿ, ನಿದ್ದೆಯಿಂದೆದ್ದು ಕುಳಿತಿತು ಕಾಂಗ್ರೆಸ್! ಆ ಲೇಖನದಲ್ಲಿ, ‘ದೋಣಿಯಲ್ಲಿದ್ದವರು ಉಗ್ರರಲ್ಲ, ಡೀಸೆಲ್ ಅಥವಾ ಮಾದಕ ದ್ರವ್ಯ ಕಳ್ಳಸಾಗಣಿಕೆದಾರರಿರಬಹುದು’ ಎಂಬ ಅಂಶವಿದೆ. ಹಾಗೇ, ಅಷ್ಟು ಸಣ್ಣ ದೋಣಿಯಲ್ಲಿ ಉಗ್ರರು ಬರುವ ಸಾಧ್ಯತೆಯ ಬಗ್ಗೆ, ಆ ದೋಣಿ ಸ್ಫೋಟಗೊಂಡ ರೀತಿಯ ಬಗ್ಗೆಯೂ ಅನುಮಾನಗಳಿವೆ. ಅದ್ಯಾವ ಅಮೃತ ಘಳಿಗೆಯಲ್ಲಿ ಆ ಲೇಖನವನ್ನು ಓದಿದರೋ ಕಾಂಗ್ರೆಸ್‍ನ ವಕ್ತಾರ ಅಜಯ್ ಕುಮಾರ್, ಇಡೀ ಘಟನೆಯೇ ಒಂದು ನಾಟಕ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ದೋಣಿಯಲ್ಲಿದ್ದವರು ಪಾಕ್‍ನ ಉಗ್ರರೇ ಎಂಬುದನ್ನು ಸಾಬೀತುಪಡಿಸಿ ಅವರಿಗೆ ಈಗ್ಗಿಂದೀಗಲೇ ಸಾಕ್ಷ್ಯಗಳನ್ನು ತೋರಿಸಬೇಕಂತೆ! ಅವರೊಬ್ಬರೇ ಅಲ್ಲ, ಕಾಂಗ್ರೆಸ್‍ನ ಎಲ್ಲರದ್ದೂ ಇದೇ ವರಾತವೇ! ಇಲ್ಲೇನು ಅಲ್ಪಸಂಖ್ಯಾತರ ಎನ್‍ಕೌಂಟರ್‍ ನಡೆದಿದೆಯೇ ಇವರ ಮೈಮೇಲೆ ಹೀಗೆ ದೇವರು ಬರುವುದಕ್ಕೆ? ಇನ್ನು ಇವರ ತಾಳಕ್ಕೆ ತಕ್ಕಂತೆ ಕುಣಿಯುವ ಕೆಲ ಟಿವಿ ಮಾಧ್ಯಮಗಳೋ, 'ಅವಸರದಲ್ಲಿ ಅಜ್ಜಿ ಮೈನೆರೆದಂತೆ' ಎಂಬ ಗಾದೆಯ ತದ್ರೂಪು. ಒಂದು ಸಣ್ಣ ವಿಷಯ ಸಿಕ್ಕರೂ ಸಾಕು, ಮೈಕು, ಕ್ಯಾಮೆರಾ ತೂರಿಸಿ ಎಲ್ಲವನ್ನೂ ಅಲ್ಲಿಯೇ ತೋರಿಸಿಬಿಡಬೇಕು!

ಅಂದ ಹಾಗೆ, ಆ ಲೇಖನದಲ್ಲಿರುವ ಅಂಶಗಳಿಗೆ ಎಲ್ಲರದೂ ಸಹಮತವಿಲ್ಲ. ಮೊದಲನೆಯದಾಗಿ ಕಳ್ಳಸಾಗಣೆದಾರರು ಪಾಕಿಸ್ತಾನದಿಂದ ಭಾರತಕ್ಕೆ ಡೀಸಲ್ ಸಾಗಿಸುವುದಿಲ್ಲ. ಏಕೆಂದರೆ ಪಾಕಿಸ್ತಾನದಲ್ಲಿ ಡೀಸಲ್‍ಗೆ ಲೀಟರ್ ಒಂದಕ್ಕೆ 86ರೂಪಾಯಿಗಳಾದರೆ ಭಾರತದಲ್ಲಿ 56ರೂಪಾಯಿಗಳು ಮಾತ್ರ! ಕದ್ದು ತರುವವರು ಅಲ್ಲಿ ಜಾಸ್ತಿ ದುಡ್ಡು ಕೊಟ್ಟು ತಂದು ಇಲ್ಲಿ ಕಡಿಮೆಗೆ ಮಾರುವ ಧರ್ಮಾತ್ಮರೇ? ಡೀಸಲ್ ಹೋಗುವುದು ಏನಿದ್ದರೂ ಭಾರತದಿಂದಲೇ. ಇನ್ನು ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುತ್ತಿತ್ತು ಎಂದುಕೊಳ್ಳೋಣವೆಂದರೆ, ಅವರುಗಳು ಇದೊಂದೇ ಕಾರಣಕ್ಕೆ ದೋಣಿಯನ್ನು ಸ್ಫೋಟಿಸಿಕೊಂಡು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವುದಿಲ್ಲ. ಗಾರ್ಡ್ಗಳ ಕೈಗೆ ಸಿಕ್ಕಿಬೀಳುವ ಸಂದರ್ಭ ಬಂದರೆ ಸೀದಾ ತಮ್ಮ ಸರಕನ್ನು ಸಮುದ್ರಕ್ಕೆ ಎಸೆದು ಬಿಡುತ್ತಾರೆ ಅಥವಾ ಶರಣಾಗುತ್ತಾರೆ. ದೋಣಿಯಲ್ಲಿದ್ದವರು ಅಮಾಯಕರೇ ಆಗಿದ್ದರೆ ಹೀಗೇಕೆ ಮಾಡುತ್ತಿದ್ದರು?

ಪೇಶಾವರದಲ್ಲಿ ನೂರಾರು ಮಕ್ಕಳು ಸತ್ತ ಮೇಲಾದರೂ ಪಾಕಿಸ್ತಾನ ಬದಲಾಗಿದೆಯಾ? ಇಲ್ಲ. ಗಡಿಯಲ್ಲಿ ಒಂದೇ ಸಮನೆ ನಮ್ಮ ಯೋಧರನ್ನು ಕೆಣಕುತ್ತಿದೆ. ತಕ್ಕ ಪ್ರತ್ಯುತ್ತರ ನೀಡುವಲ್ಲಿ ನಮ್ಮವರೂ ನಿರತರಾಗಿದ್ದಾರೆ. ಅದರ ಗ್ರೆನೇಡ್ ದಾಳಿಯಿಂದ ರಕ್ಷಿಸಲು ಸಾವಿರಾರು ಹಳ್ಳಿಗರನ್ನು ಸ್ಥಳಾಂತರಿಸಲಾಗಿದೆ. ಶಾಲೆಗಳು ಮುಚ್ಚಿವೆ. ಗುಜರಾತಿನಲ್ಲಿ ನಡೆಯಲಿರುವ ಹೂಡಿಕೆದಾರರ ಸಭೆಗೆ ಅಮೆರಿಕದ ಜಾನ್ ಕೆರ್ರಿ ಬರುತ್ತಿರುವುದು ಹಾಗೂ ನಮ್ಮ ಗಣರಾಜ್ಯೋತ್ಸವ ಸಮಾರಂಭಕ್ಕೆ ಒಬಾಮಾ ಆಗಮಿಸುತ್ತಿರುವುದು ಪಾಕಿಸ್ತಾನದ ಕಣ್ಣುಗಳನ್ನು ಕೆಂಪಗಾಗಿಸಿದೆ. ಹೇಗಾದರೂ ಸರಿಯೇ, ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯವಾಗಲೇಬೇಕೆಂದು ಅದು ಪಣ ತೊಟ್ಟು ನಿಂತಿದೆ. ಹಾಗಾಗಿ ನಮ್ಮ ಪೂರ್ವ, ದಕ್ಷಿಣ ಹಾಗೂ ಪಶ್ಚಿಮದ ಸಮುದ್ರಗಳಲ್ಲೆಲ್ಲ ಬಂದೋಬಸ್ತ್ ಬಿಗಿಯಾಗಿದೆ. ಯೋಧರು ಮೈಯೆಲ್ಲ ಕಣ್ಣಾಗಿ ಗಡಿಗಳನ್ನು ಕಾಯುತ್ತಿದ್ದಾರೆ. ಇಂಥ ಹೊತ್ತಿನಲ್ಲಿ, ಸಣ್ಣ ಪುಟ್ಟ ಸುಳಿವುಗಳನ್ನೇ ಆಗಲಿ, ಕಡೆಗಣಿಸಲಾದೀತೇ?

ಸಾಕ್ಷ್ಯ ಬೇಕು ಸಾಕ್ಷ್ಯ ಬೇಕು ಎಂದು ಒಂದೇ ಸಮನೆ ಹರಿಹಾಯುತ್ತಿರುವ ಕಾಂಗ್ರೆಸ್ ತಾನು ಸರ್ಕಾರದಲ್ಲಿದ್ದಾಗ ಮಾಡಿದ್ದೇನು? ಕಸಬ್ ನಡೆಸಿದ ಮಾರಣಹೋಮದ ರೂವಾರಿ ಜಾಕಿ-ಉರ್-ರೆಹಮಾನ್-ಲಖ್ವಿಯ ವಿರುದ್ಧ ಬಹಳಷ್ಟು ಸಾಕ್ಷ್ಯಗಳು ಹೇಗೂ ದೊರೆತಿದ್ದವು. ಅವನ್ನೆಲ್ಲ ಇಲ್ಲೇ ಬಹಿರಂಗಪಡಿಸಿ ಎಂದರೂ ಕೇಳದೆ ಜೋಪಾನವಾಗಿ ಗಂಟು ಕಟ್ಟಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿತಲ್ಲ, ಅವೇ ಸಾಕ್ಷ್ಯಗಳು ಲಖ್ವಿಯನ್ನು ಶಿಕ್ಷಿಸಲು ಸಾಲದು ಎಂದು ಅವನನ್ನು ಬಿಡುಗಡೆ ಮಾಡಲು ಹೊರಟಿತ್ತು ಪಾಕಿಸ್ತಾನದ (ಅ)ನ್ಯಾಯಾಲಯ! ಈಗ ಸಾಕ್ಷ್ಯ ಕೇಳುವ ಯಾವ ನೈತಿಕ ಹಕ್ಕಿದೆ ಅದಕ್ಕೆ? ಆಗ ಮುಂಬೈ ದಾಳಿಯನ್ನು ಜಂಟಿಯಾಗಿ ನಡೆಸಿದ್ದೇ ಆರ್‍ಎಸ್‍ಎಸ್, ಇಸ್ರೇಲಿನ ಗುಪ್ತಚರ ಸಂಸ್ಥೆ ಮೊಸಾದ್ ಹಾಗೂ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಎಂಬ ಹೇಳಿಕೆಯನ್ನೂ ಘಂಟಾಘೋಷವಾಗಿ ನೀಡಿಬಿಟ್ಟಿದ್ದರು ದಿಗ್ವಿಜಯ್ ಸಿಂಗ್! ಈಗ ಈ ಪ್ರಯತ್ನದಲ್ಲಿ ಕಾಂಗ್ರೆಸ್‍‍ನ ಕೈವಾಡವಿದೆಯಾ ಹಾಗಾದರೆ?

ತನಿಖೆ ಇನ್ನೂ ನಡೆಯುತ್ತಿದೆ, ಎಲ್ಲ ಮುಗಿಯುತ್ತಿದ್ದಂತೆ ವಿವರಗಳನ್ನು ನೀಡುತ್ತೇವೆ ಎನ್ನುತ್ತಿದೆ ಸರ್ಕಾರ. ದೇಶದ ಭದ್ರತೆಯ ಕುರಿತ ಕಾರ್ಯಾಚರಣೆ ಎಂದ ಮೇಲೆ ಕೆಲವು ರಹಸ್ಯಗಳನ್ನು ಕಾಪಾಡಿಕೊಳ್ಳಲೇಬೇಕಲ್ಲವಾ? ಯಾವುದನ್ನು ವಿರೋಧಿಸಬೇಕು ಯಾವುದನ್ನು ಕೂಡದು ಎಂಬ ಜ್ಞಾನವೇ ಇಲ್ಲದ, ಭದ್ರತೆಯ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‍ ವಿರೋಧ ಪಕ್ಷವೆಂದು ಕರೆಸಿಕೊಳ್ಳಲೂ ನಾಲಾಯಕ್ಕು ಎನಿಸುವುದಿಲ್ಲವಾ? ಒಂದು ಪಕ್ಷ ಈ ದೋಣಿಯೇನಾದರೂ ಉಗ್ರರದ್ದೇ ಆಗಿದ್ದು, ಅವರೆಲ್ಲ ಗುಜರಾತಿನ ಒಳಹೊಕ್ಕಿದ್ದರೆ ಏನು ಗತಿಯಾಗುತ್ತಿತ್ತು ಹೇಳಿ? ಉಗ್ರವಾದವನ್ನು ಹತ್ತಿಕ್ಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಇದೇ ಪಕ್ಷ ಆಗ ರಂಪ ಮಾಡುತ್ತಿರಲಿಲ್ಲವಾ?
ನಿಜವಾಗಿಯೂ ಬೇಸರವಾಗುತ್ತಿರುವುದು ಎರಡು ವಿಷಯಗಳಿಗೆ. ಒಂದು, ನಮ್ಮ ದೇಶದ ಪಕ್ಷ ವೊಂದು ಪಾಕಿಸ್ತಾನವನ್ನು ಕಟಕಟೆಯಲ್ಲಿ ನಿಲ್ಲಿಸುವುದನ್ನು ಬಿಟ್ಟು ಅದರ ಪರವಾಗಿರುವುದಕ್ಕೆ. ಇಂಥವೇ ಇನ್ನೊಂದಷ್ಟು ಘಟನೆಗಳಾಗಿಬಿಟ್ಟರೆ ಕಾಂಗ್ರೆಸ್‍ನ ಮುಖ್ಯ ಕಾರ್ಯಾಲಯವನ್ನು ಪಾಕಿಸ್ತಾನಕ್ಕೇ ವರ್ಗಾಯಿಸಿಬಿಡಬಹುದೇನೋ!

ಎರಡು, ದೇಶವನ್ನು ಕಾಯುತ್ತಿರುವವರ ಬಗ್ಗೆ ಕಿಂಚಿತ್ತೂ ಬೆಲೆ ಇಲ್ಲದೆ ಹೀಗೆ ಕೇವಲವಾಗಿ ಮಾತನಾಡುವುದಕ್ಕೆ. ಅರಬ್ಬೀ ಸಮುದ್ರದಲ್ಲಿ ಒಂದೇ ಸಮನೆ ಕಾರ್ಯಾಚರಣೆಯಲ್ಲಿ ನಿರತವಾಗಿರುವ ಕೋಸ್ಟ್ ಗಾರ್ಡ್ ಗಳನ್ನು, 'ಹೋಗಿ, ಸ್ವಲ್ಪ ವಿಶ್ರಾಂತಿ ಪಡೆದು ಬನ್ನಿ', ಎಂದರೆ, 'ದೇಶದ ಭದ್ರತೆ ಮೊದಲು, ನಿದ್ದೆ, ವಿಶ್ರಾಂತಿ ಆಮೇಲೆ' ಎನ್ನುತ್ತಾರೆ ಉತ್ಸಾಹದಿಂದ. ಯಾಕಾಗಿ ಮಾಡಬೇಕು ಅವರು ಇಷ್ಟೆಲ್ಲ? ಇಂಥ ಹೊಣೆಗೇಡಿ ಮಾತುಗಳಿಗೋಸ್ಕರವಾ? ಪ್ರಾಣ ಹೋಗುತ್ತಿದ್ದರೂ ಕಸಬ್‍ನನ್ನು ಬಿಡದೆ ಹಿಡಿದಿದ್ದ ಪೇದೆ ತುಕಾರಾಂ ಓಂಬ್ಳೆ, ಉಗ್ರರನ್ನು ಸದೆಬಡಿಯುತ್ತಲೇ ಸತ್ತ ಮೇಜರ್ ಸಂದೀಪ್ ಉನ್ನಿಕೃಷ್ಣನ್‍ರ ತ್ಯಾಗಗಳು ಅಷ್ಟೊಂದು ಕೇವಲವಾ?

ಹೃದಯದಲ್ಲಿ ನೈತಿಕತೆ, ದೇಶಪ್ರೇಮಗಳೇ ಇಲ್ಲದೆ ಬಾಯಿಯ ತುಂಬೆಲ್ಲ ಬರೀ ಇಂಗ್ಲೀಷ್ ಪದಗಳನ್ನೇ ತುಂಬಿಕೊಂಡಿರುವವರು ನಡೆಸುತ್ತಿರುವ ಹೊಲಸು ರಾಜಕೀಯಕ್ಕೆ ಧಿಕ್ಕಾರವಿರಲಿ! 

No comments:

Post a Comment