Wednesday, 14 January 2015

ಗೆಲುವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೋ ಅಥವಾ ಉಗ್ರವಾದಕ್ಕೋ?

ಇದಪ್ಪಾ ಕೆಚ್ಚೆದೆಯೆಂದರೆ! ಚಾರ್ಲಿ ಹೆಬ್ಡೊ, ತನ್ನ ಈ ವಾರದ ಸಂಚಿಕೆಯ ಮುಖಪುಟದಲ್ಲಿ ಮತ್ತೆ ಪ್ರವಾದಿ ಮೊಹಮ್ಮದರ ಹೊಸದೊಂದು ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ! ಕಂಬನಿ ಮಿಡಿಯುತ್ತಾ, 'ನಾನು ಚಾರ್ಲಿ' ಎಂಬ ಬರಹವನ್ನು ಹೊತ್ತು ನಿಂತಿರುವ ಪ್ರವಾದಿಗಳ ಚಿತ್ರ. ಅದರಲ್ಲಿ ಮೇಲೆ, ‘ಎಲ್ಲವನ್ನೂ ಕ್ಷಮಿಸಲಾಗಿದೆ ಎಂಬ ವ್ಯಂಗ್ಯೋಕ್ತಿ!
ಮೊನ್ನೆ ಜನವರಿ ಏಳರಂದು ಫ್ರಾನ್ಸ್ ದೇಶದ ವಿಡಂಬನಾತ್ಮಕ ವಾರಪತ್ರಿಕೆ 'ಚಾರ್ಲಿ ಹೆಬ್ಡೊ'ದ ಮೇಲೆ ನಡೆದ ದಾಳಿ ಈಗ ಜಗದ್ವ್ಯಾಪಿ ಸುದ್ದಿ. ಅಂದು ಶರೀಫ್ ಕವಾಚಿ, ಸಯೀದ್ ಕವಾಚಿ ಹಾಗೂ ಹಮೀದ್ ಮೌರಾದ್ ಎಂಬ ಮೂವರು ಮುಸ್ಲಿಂ ಉಗ್ರರು ಪ್ಯಾರಿಸ್ ನಗರದಲ್ಲಿರುವ ಚಾರ್ಲಿಯ ಕಚೇರಿಗೆ ಲಗ್ಗೆಯಿಟ್ಟಿದ್ದರು. ಕಚೇರಿಯ ಹೊರಗಿದ್ದ ಓರ್ವ ಮಹಿಳಾ ಸಿಬ್ಬಂದಿಗೆ ಬಂದೂಕು ತೋರಿಸಿ ಬಾಗಿಲು ತೆರೆಯಿಸಿ ಒಳನುಗ್ಗಿದ ಅವರು ನಡೆಸಿದ ಮಾರಣ ಹೋಮಕ್ಕೆ ವಿಶ್ವವೇ ದಂಗಾಗಿತ್ತು. ಸಂಪಾದಕ ಸ್ಟಿಫಾನ್ ಶಾರ್ಬೊನೇರ್ ಹಾಗೂ ನಾಲ್ವರು ಖ್ಯಾತ ವ್ಯಂಗ್ಯಚಿತ್ರಕಾರರೂ ಸೇರಿ ಒಟ್ಟು ಹನ್ನೆರಡು ಜನ ಐದೇ ನಿಮಿಷಗಳಲ್ಲಿ ಹೆಣವಾಗಿದ್ದರು. ಸಂಪಾದಕೀಯ ಸಭೆ ನಡೆಯುತ್ತಿದ್ದುದರಿಂದ ಎಲ್ಲರೂ ಒಂದೇ ಕೋಣೆಯಲ್ಲಿದ್ದುದು ಉಗ್ರರಿಗೆ ವರದಾನವಾಗಿ ಪರಿಣಮಿಸಿತ್ತು.


ಈ ದಾಳಿಯ ಹಾಗೂ ಪತ್ರಿಕೆಯ ಹಿನ್ನೆಲೆಯನ್ನು ಕೆದಕಿದಾಗ ಬಹಳಷ್ಟು ವಿಷಯಗಳು ಬೆಳಕಿಗೆ ಬಂದವು. ಹೌದು. ಚಾರ್ಲಿಯ ಜಾಯಮಾನವೇ ಹಾಗೆ. ಅದು ಯಾವ ಧರ್ಮವನ್ನೂ ಬಿಟ್ಟಿಲ್ಲ. ಫ್ರಾನ್ಸ್ ದೇಶದ ಯಾವ ರಾಜಕಾರಣಿಯನ್ನೂ, ಖ್ಯಾತ ಲೇಖಕನನ್ನೂ ಬಿಟ್ಟಿಲ್ಲ. ಅಕ್ಷರಗಳಿಗೇ ಸಡ್ಡು ಹೊಡೆಯುತ್ತವೆ ಅದರ ವ್ಯಂಗ್ಯಚಿತ್ರಗಳು. ಸದ್ದಿಲ್ಲದೆ ಬೀಳುವ ವಕ್ರರೇಖೆಗಳ ಚಾಟಿಯೇಟನ್ನು ಜೀರ್ಣಿಸಿಕೊಳ್ಳಲು ನಿಜವಾಗಿಯೂ ತಾಕತ್ತು ಬೇಕು. ಆ ಚಿತ್ರಗಳಿಗೆ ಪ್ರವಾದಿಗಳು ಆಹಾರವಾಗತೊಡಗಿದ್ದು ಯಾಕೆ ಎಂಬ ಆಸಕ್ತಿಕರ ವಿಷಯ ಇಲ್ಲಿದೆ ನೋಡಿ. 2005ನೆಯ ಇಸವಿಯಲ್ಲಿ ಯೂರೋಪ್‍ನ ಬಹುತೇಕ ದೇಶಗಳಲ್ಲಿ, ‘ನಮ್ಮನ್ನು ಮಾತ್ರ ಮುಖ್ಯವಾಹಿನಿಗೆ ಸೇರಿಸಿಕೊಳ್ಳದೆ ಪ್ರತ್ಯೇಕವಾಗಿ ಕಾಣಲಾಗುತ್ತಿದೆ, ಕಡೆಗಣಿಸಲಾಗುತ್ತಿದೆ’ ಎಂದು ಮುಸ್ಲಿಂ ಸಮುದಾಯ ವಿಪರೀತವಾಗಿ ಗೋಳಾಡುತ್ತಿತ್ತು. ಸಮಾನ ಹಕ್ಕುಗಳು ಬೇಕೆಂಬ ಅದರ ಬೇಡಿಕೆಯನ್ನು ನೋಡಿದ ಡೆನ್ಮಾರ್ಕ್ ದೇಶದ ಪತ್ರಿಕೆ ಜಿಲ್ಯಾಂಡ್ಸ್ ಪೋಸ್ಟನ್, ಏಕಾಏಕಿ ಪ್ರವಾದಿ ಮೊಹಮ್ಮದರ ಹನ್ನೆರಡು ಚಿತ್ರಗಳನ್ನು ಪ್ರಕಟಿಸಿಬಿಟ್ಟಿತ್ತು! ಅದರ ಸಂಪಾದಕ ಫ್ಲೆಮಿಂಗ್ ರೋಸ್ ಹೇಳಿಯೂ ಬಿಟ್ಟ, 'ಸಮಾನ ಹಕ್ಕುಗಳು ಬೇಕಲ್ಲವೇ ನಿಮಗೆ? ನಮ್ಮ ವ್ಯಂಗ್ಯಚಿತ್ರಕಾರರು ಇಸ್ಲಾಂ ಧರ್ಮವನ್ನೂ ಉಳಿದ ಧರ್ಮಗಳ ಸಾಲಿಗೆ ಸೇರಿಸಿಕೊಂಡಿದ್ದಾರೆ ನೋಡಿ. ಈಗ ಎಲ್ಲರೂ ಸಮಾನರೇ. ನಿಮ್ಮನ್ನೂ ನಮ್ಮ ವಿಡಂಬನೆಯ ಪ್ರಪಂಚದೊಳಕ್ಕೆ ಸೇರಿಸಿಕೊಂಡಿದ್ದೇವೆ' ಎಂದು. ವಿಶೇಷ ಸವಲತ್ತುಗಳನ್ನು ಮಾತ್ರ ಬಯಸಿದ್ದ ಮುಸ್ಲಿಂ ಸಮುದಾಯಕ್ಕೆ ಇದು ಸಹ್ಯವಾಗುವುದು ಸಾಧ್ಯವಿತ್ತೇ? ಉಹೂಂ. ವಿಪರೀತ ಆಕ್ರೋಶ ವ್ಯಕ್ತವಾಯಿತು. ಆಗ ಆ ಪತ್ರಿಕೆಯ ಬೆಂಬಲಕ್ಕೆ ನಿಂತಿದ್ದೇ ಚಾರ್ಲಿ ಹೆಬ್ಡೊ. ಅವೇ ಚಿತ್ರಗಳನ್ನು ತಾನೂ ನಿರ್ಭೀತವಾಗಿ ಪ್ರಕಟಿಸಿತ್ತು.

ಚಾರ್ಲಿ ಅಲ್ಲಿಗೇ ಸುಮ್ಮನಾಗಲಿಲ್ಲ. 2011ರಲ್ಲಿ ಇಸ್ಲಾಂನ ತೀವ್ರವಾದವನ್ನು ಪ್ರಶ್ನಿಸಿ, 'ಶರಿಯಾ ಹೆಬ್ಡೊ' ಎಂಬ ತಲೆಬರಹದಡಿಯಲ್ಲಿ ಮತ್ತೊಮ್ಮೆ ಪ್ರವಾದಿಗಳ ನಗ್ನ ಚಿತ್ರವನ್ನು ಪ್ರಕಟಿಸಿತ್ತು. ಆಗ ಕಚೇರಿಯ ಮೇಲೆ ಅಪರಾತ್ರಿಯಲ್ಲೇ ಬಾಂಬ್ ದಾಳಿ ನಡೆಯಿತು. ಪತ್ರಿಕೆಗೆ ಹಾಗೂ ಸಿಬ್ಬಂದಿಗೆ ಜೀವ ಬೆದರಿಕೆಯ ಕರೆಗಳೂ ಬರಲಾರಂಭಿಸಿದ್ದವು. ಸಂಪಾದಕ ಶಾರ್ಬೊನೇರ್ ಎಳ್ಳಷ್ಟೂ ವಿಚಲಿತನಾಗಿರಲಿಲ್ಲ. 'ಬೇರೆ ಯಾವುದರ ಬಗ್ಗೆ ಬರೆಯಲೂ ನಮಗೆ ಸ್ವಾತಂತ್ರ್ಯವಿದೆ, ಆದರೆ ಈ ತೀವ್ರವಾದಿ ಮುಸ್ಲಿಮರ ವಿಷಯಕ್ಕೆ ಬಂದಾಗ ಮಾತ್ರ ಹೀಗೆ. ನನ್ನದು ಉದ್ಧಟತನವೆನಿಸಬಹುದು ನಿಮಗೆ. ಅದೇನಾಗಿಬಿಡುತ್ತದೋ ಆಗಲಿ. ಎದೆ ಸೆಟೆಸಿ ನಿಂತು ಸಾಯುತ್ತೇನೇ ವಿನಾ ಇವರಿಗೆ ಹೆದರಿ ಮಂಡಿಯೂರಿ ಬದುಕುವುದಿಲ್ಲ’ ಎಂದಿದ್ದ ಪುಣ್ಯಾತ್ಮ! ನುಡಿದಂತೆ ನಡೆದೂ ಬಿಟ್ಟ.

ಘಟನೆಯ ನಂತರ ಜಗತ್ತಿನಾದ್ಯಂತ ವ್ಯಾಪಕ ಖಂಡನೆಯಾಯಿತು, ಆದರೆ ಸೌದಿ, ಇರಾನ್ ಸೇರಿದಂತೆ ಮುಸ್ಲಿಂ ದೇಶಗಳ್ಯಾವುವೂ ತುಟಿ ಪಿಟಕ್ಕೆನ್ನಲಿಲ್ಲ! ಪಾಕಿಸ್ತಾನದ ಪೇಶಾವರದಲ್ಲಂತೂ ಸಂಭ್ರಮಾಚರಣೆಯೂ ನಡೆಯಿತು! ಫ್ರಾನ್ಸ್‌ನ ಪ್ರಜೆಗಳು 'ಜಿ ಸೂಯಿ ಚಾರ್ಲಿ (ನಾನು ಚಾರ್ಲಿ)' ಎಂಬ ಬೋರ್ಡುಗಳನ್ನು ಹೊತ್ತು ನಿಂತರು.  ವಿಶ್ವಾದ್ಯಂತ ವ್ಯಂಗ್ಯಚಿತ್ರಕಾರರು ತಮ್ಮ ಮನೋಜ್ಞ ಚಿತ್ರಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. 'ನನಗೆ ಹೆದರಿಕೆಯಿಲ್ಲ' ಎಂಬ ಬರಹವನ್ನು ಹೊತ್ತ ದೊಡ್ಡ ದೊಡ್ಡ ಪೆನ್ಸಿಲ್‍ಗಳ ಕಟೌಟ್‍ಗಳು ಎಲ್ಲೆಡೆ ರಾರಾಜಿಸಿದವು. ಐರೋಪ್ಯ ದೇಶಗಳ ಗಣ್ಯರೂ ಸೇರಿದಂತೆ  ಲಕ್ಷಾಂತರ ಜನ ಪ್ಯಾರಿಸ್‍ನ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಜನರೇ ಈ ಪರಿ ಬೆಂಬಲಿಸಿದಾಗ ತನ್ನ ಸಹೋದ್ಯೋಗಿಗಳನ್ನು ಕಳೆದುಕೊಂಡ ಪತ್ರಿಕೆ ಸುಮ್ಮನಿದ್ದೀತೇ? ಮುಂದಿನ ಸಂಚಿಕೆ ಅವರಿಗೇ ಮೀಸಲು ಎಂದು ತಕ್ಷಣವೇ ಸಾರಿತ್ತು. ಈಗ ನೋಡಿ, ಯಾರಿಗೂ ಕ್ಯಾರೇ ಅನ್ನದೆ ಮತ್ತೆ ಯಥಾಸ್ಥಿತಿಗೆ ಮರಳಿದೆ. ಅಂದ ಹಾಗೆ, ಈ ಸಂಚಿಕೆಯ ವಿಶೇಷವೇನು ಗೊತ್ತೇ? ಯಾವಾಗಲೂ ಮುದ್ರಿಸುತ್ತಿದ್ದ ಪ್ರತಿಗಳ ಸಂಖ್ಯೆ 60ಸಾವಿರವಾದರೆ ಈ ಬಾರಿಯದ್ದು ಭರ್ತಿ 30ಲಕ್ಷ! ಅದೂ 16 ಬೇರೆಬೇರೆ ಭಾಷೆಗಳ ಆವೃತ್ತಿಗಳು! ಏನಾದರಾಗಲಿ, ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಂಡೇ ಸಿದ್ಧ ಎಂಬ ಹಟ ಅದರದ್ದು.

ಈ ಘಟನೆಯಿಂದಾಗಿ ಹೊಸದೊಂದು ವಿವಾದ ಹುಟ್ಟಿಕೊಂಡಿದೆ – ಅದೇ, 'ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಬಹುದೇ? ಎನ್ನುವುದು. ಜಗತ್ತಿನಾದ್ಯಂತ ಪರ-ವಿರೋಧ ಲೇಖನಗಳು, ಟ್ವೀಟ್‍ಗಳು ಹರಿದಾಡುತ್ತಿವೆ. ಆದರೆ ನಮ್ಮ ದೇಶದಲ್ಲಿ ಇಂಥದ್ದೇ ಘಟನೆ ದಶಕಗಳ ಹಿಂದೆಯೇ ನಡೆದು ಹೋಗಿದೆ. ಒಂದೇ ವ್ಯತ್ಯಾಸವೆಂದರೆ ನಮ್ಮ ದೇಶದ ಚಿತ್ರಕಾರ ಚಿತ್ರಿಸಿದ್ದು ಹಿಂದೂ ದೇವರುಗಳನ್ನು! ಆದ್ದರಿಂದಲೇ ಆತ 95ವರ್ಷಗಳವರೆಗೂ ತುಂಬು ಬದುಕನ್ನು ಅನುಭವಿಸಿ ಸಹಜವಾಗಿ ಸತ್ತರು! ಹೌದು. ಅವರೇ ಎಂ.ಎಫ್ ಹುಸೇನ್.

ಚಾರ್ಲಿಯ ಘಟನೆ ನಡೆದ ದಿನವೇ ನಮ್ಮ ರಾಷ್ಟ್ರೀಯ ಮಾಧ್ಯಮಗಳು ಮುಸ್ಲಿಂ ಚಿಂತಕರನ್ನು, ಬುದ್ಧಿಜೀವಿಗಳನ್ನು ಒಂದೆಡೆ ಸೇರಿಸಿ ಅಭಿಪ್ರಾಯ ಕೇಳಿದವು. ಅದೊಂಥರಾ, ಹಾಗಲಕಾಯಿ ಬೇವಿನಕಾಯಿಯ ಸಾಕ್ಷ್ಯ ಕೇಳಿದ ಹಾಗೆ! ಎಲ್ಲರದ್ದೂ ಒಕ್ಕೊರಲಿನ ದನಿಯೇ. ಪತ್ರಕರ್ತರನ್ನು ಕೊಂದದ್ದು ತಪ್ಪು ಆದರೆ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಅವರು ಹಾನಿಯುಂಟುಮಾಡಬಾರದಿತ್ತು ಎಂಬುದು! ಎಲ್ಲರಿಗಿಂತ ಹೆಚ್ಚಾಗಿ ಹುಬ್ಬುಗಂಟಿಕ್ಕಿಕ್ಕೊಂಡು ಹರಿಹಾಯ್ದವರು ಜಾವೇದ್ ಅಖ್ತರ್ ಸಾಹೇಬರು. ನೆನಪಿಡಿ, ಇದೇ ಜಾವೇದ್ ಅಖ್ತರ್ ಬಿಟ್ಟೂಬಿಡದೆ ಎಂ.ಎಫ್ ಹುಸೇನ್‍ರನ್ನು ಸಮರ್ಥಿಸಿಕೊಂಡಿದ್ದರು. ಚಾರ್ಲಿಯೇನೋ ವಿಡಂಬನೆಗೇ ಮೀಸಲಾದ ಪತ್ರಿಕೆ. ಆದರೆ ಹುಸೇನ್ ವಿಡಂಬನಾತ್ಮಕ ಚಿತ್ರಕಾರರಾಗಿರಲಿಲ್ಲವಲ್ಲ? ಅಂದ ಮೇಲೇಕೆ ತಮ್ಮ ಧರ್ಮದವರಿಗೆಲ್ಲ ಮೈತುಂಬಾ ಬಟ್ಟೆ, ಮುಖದ ತುಂಬಾ ಬುರ್ಖಾ ತೊಡಿಸಿ ಹಿಂದೂ ದೇವರುಗಳನ್ನು ನಗ್ನರಾಗಿ ಚಿತ್ರಿಸುವ ತಾರತಮ್ಯ ಮಾಡಿದ್ದರು? ಅವರನ್ನು ಸಮರ್ಥಿಸುವಾಗ, ಲಕ್ಷ್ಮಿಯನ್ನು ಬೆತ್ತಲಾಗಿ ಗಣೇಶನ ತಲೆಯ ಮೇಲೆ ಕುಳಿತ ಹಾಗೆ ತೋರಿಸುವ, ಸರಸ್ವತಿಯನ್ನು ನಗ್ನಳಾಗಿ ತೋರಿಸುವ ಚಿತ್ರಗಳು ಹಿಂದೂಗಳ ಧಾರ್ಮಿಕ ಭಾವನೆಗೆ ಹಾನಿಯುಂಟುಮಾಡುತ್ತವೆ ಎಂಬುದು ಆ ಪರಿ ಕಥೆ ಕವನಗಳನ್ನು ಬರೆಯುವ ಜಾವೇದ್‍ಗೆ ಅರ್ಥವಾಗಿರಲಿಲ್ಲವಾ? ದೇವರುಗಳನ್ನಷ್ಟೇ ಅಲ್ಲದೆ, ಭಾರತಮಾತೆಯನ್ನೇ ನಗ್ನಳನ್ನಾಗಿಸಿದ್ದು ಭಾರತೀಯರಿಗೆ ನೋವುಂಟುಮಾಡುತ್ತದೆ ಎಂಬ ಪರಿಜ್ಞಾನವೂ ಇರಲಿಲ್ಲವಾ? ಅಷ್ಟಾಗಿಯೂ ಹುಸೇನ್‍ರನ್ನು ಯಾರೂ ಕೊಲ್ಲಲಿಲ್ಲ. ಸುಮಾರು 900ಜನ ವಿವಿಧ ನ್ಯಾಯಾಲಯಗಳಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿದರು ಅಷ್ಟೇ. ಕತಾರ್‍ಗೆ ಓಡಿ ಹೋದ ಹುಸೇನ್ ಕೊನೆತನಕ ಭಾರತಕ್ಕೆ ಬರಬೇಕೆಂಬ ಹಪಾಹಪಿಯಲ್ಲೇ ಸತ್ತರು.

ಇರಲಿ, ಈ ಇಡೀ ಪ್ರಕರಣದಲ್ಲಿ ಉಗ್ರರ ಪರ ವಹಿಸದಿದ್ದವರು ಸಲ್ಮಾನ್ ರಶ್ದಿಯೊಬ್ಬರೇ. ಭಾರತೀಯ ಮೂಲದವರೇ ಆದ ಅವರು 'ಸಟಾನಿಕ್ ವರ್ಸಸ್' ಎಂಬ ಪುಸ್ತಕ ಬರೆದು ಮುಸ್ಲಿಂ ಸಂಪ್ರದಾಯವಾದವನ್ನು ಟೀಕಿಸಿದ ತಪ್ಪಿಗೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹುಸೇನ್‍ಗೆ  ಹಿಂದೂಗಳು ಕೊಟ್ಟ ರಿಯಾಯಿತಿಯನ್ನು ಸಲ್ಮಾನ್‍ಗೆ ಮುಸ್ಲಿಮರೇ ಕೊಡಲಿಲ್ಲ ನೋಡಿ! 1989ರಿಂದಲೂ ಜೀವವನ್ನು ಅಕ್ಷರಶಃ ಕೈಯಲ್ಲಿ ಹಿಡಿದುಕೊಂಡು ಸತ್ತು ಬದುಕುತ್ತಿದ್ದಾರೆ ಆ ಬಡಪಾಯಿ. ಅವರನ್ನು ಕೊಲ್ಲುವಂತೆ ಇರಾನಿನ ಅಯಾತುಲ್ಲಾ ಖೊಮೇನಿ ಹೊರಡಿಸಿರುವ ಫತ್ವಾ ಅವರ ಬದುಕನ್ನೇ ನರಕವಾಗಿಸಿದೆ. ಆದರೂ ಮನುಷ್ಯ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ವಹಿಸುವುದನ್ನು ಬಿಟ್ಟಿಲ್ಲ.

ಈಗ ಹೇಳಿ, ಧಾರ್ಮಿಕ ಭಾವನೆಗಳಿರುವುದು ಮುಸ್ಲಿಮರಿಗೆ ಮಾತ್ರವಾ? ವಿಶ್ವರೂಪಂ ಚಿತ್ರದಿಂದ ತಮ್ಮ ಭಾವನೆಗಳಿಗೆ ನೋವಾಗಿದೆ ಎಂದು ಕಮಲಹಾಸನ್‍ರ ಕೈಲಿ ಕ್ಷಮೆ ಕೇಳಿಸಿದರಲ್ಲ, ಈಗ pk ಚಿತ್ರದಲ್ಲಿ ತೋರಿಸಿರುವ ಅಂಶಗಳಿಂದ ಹಿಂದೂಗಳಿಗೂ ನೋವಾಗಿದೆ. ಅಮೀರ್ ಖಾನ್ ಕ್ಷಮೆಯಾಚಿಸುತ್ತಾರಾ? ಇಲ್ಲ, ಅಗತ್ಯವೇ ಬೀಳುವುದಿಲ್ಲ. ಕಾರ್ನಾಡರಂಥ ಜ್ಞಾನಪೀಠಿಗಳು ಇದಕ್ಕೆ ವೈಚಾರಿಕತೆಯ ಹೊದಿಕೆ ಹೊದೆಸಿಬಿಡುತ್ತಾರಲ್ಲ, ನಾವು ಮುಸುಕಿನಲ್ಲಿ ಗುದ್ದಾಡಬೇಕು ಅಷ್ಟೇ. ನಮ್ಮ ಜನರೇ ನಮ್ಮ ಭಗವದ್ಗೀತೆಯನ್ನು ಹಿಂಸೆಗೆ ಮೂಲ ಎನ್ನುತ್ತಾರೆ, ನಾವು ಸುಮ್ಮನಿರಬೇಕು. ಅಮೀರ್ ಖಾನ್ ತನ್ನ ಚಿತ್ರದಲ್ಲಿ, 'ಯಾರು ಹೆದರುತ್ತಾರೋ ಅವರು ದೇಗುಲಗಳಿಗೆ ಹೋಗುತ್ತಾರೆ' ಎನ್ನುತ್ತಾನೆ. ಅದನ್ನು ಕೇಳಿಯೂ ನಮ್ಮ ರಕ್ತದೊತ್ತಡ 80/120ರಲ್ಲೇ ಇರಬೇಕು. ಸ್ವಲ್ಪ ಕದಲಿದರೂ, ಕನಲಿದರೂ, ದನಿಯೇರಿಸಿದರೂ ನಾವು ಕೋಮುವಾದಿಗಳು, ವೈಚಾರಿಕತೆ ಇರದವರು. ಅನ್ಯಧರ್ಮೀಯರು ಬೇಡವೇ ಬೇಡ, ನಮ್ಮವರೇ ತೋಳೇರಿಸಿಕೊಂಡು ಬಂದುಬಿಡುತ್ತಾರೆ ನಮ್ಮ ಬಾಯಿ ಮುಚ್ಚಿಸಲು. ‘ಯಾರು ಹೆದರುತ್ತಾರೋ ಅವರು ಮಸೀದಿಗಳಿಗೆ ಹೋಗುತ್ತಾರೆ’ ಎಂದೇಕೆ ಹೇಳುವುದಿಲ್ಲ ಅಮೀರ್ ಖಾನ್? ಮರುಕ್ಷಣವೇ ಹೆಣವಾಗಿ ಬಿಡುತ್ತೇನೆ ಎಂಬುದು ಗೊತ್ತಿದೆ ಆತನಿಗೆ. ಹಿಂದೂಗಳ ವಿಷಯದಲ್ಲಿ ಹಾಗಲ್ಲ, ಏನನ್ನು ಬೇಕಾದರೂ ಆಡಿ, ತೋರಿಸಿ, ಅರಗಿಸಿಕೊಳ್ಳಬಹುದಲ್ಲ!

ಈಗ ವಿಶ್ವದೆಲ್ಲೆಡೆ ನಡೆದಿರುವ ಉಗ್ರವಾದದ ಉದ್ದೇಶ ಒಂದೇ - ಮುಸ್ಲಿಂ ಅಧಿಪತ್ಯವನ್ನು ಸ್ಥಾಪಿಸಿ ಶರಿಯಾ ಕಾನೂನನ್ನು ಜಾರಿಗೊಳಿಸುವುದು. ವಿಧಗಳು ಬೇರೆ ಬೇರೆ ಅಷ್ಟೇ. ಚಾರ್ಲಿಯ ಗಲಾಟೆಯಲ್ಲಿ, ನೈಜೀರಿಯಾ ದೇಶದ ಬೋಕೋ ಹರಾಮ್ ಉಗ್ರ ಸಂಘಟನೆ ನಡೆಸುತ್ತಿರುವ ಮಾರಣ ಹೋಮ ಮಸುಕಾಗಿ ಹೋಗಿದೆ. ಆ ಸಂಘಟನೆಯ ನೇತಾರ ಅಬುಬಕರ್-ಅಲ್-ಶೇಕಾವು ನಡೆಸುತ್ತಿರುವ ಅಟ್ಟಹಾಸ ಮೇರೆ ಮೀರುತ್ತಿದೆ. ತೀರ ಇತ್ತೀಚೆಗೆ ಬಾಗಾ ಎಂಬ ಪಟ್ಟಣದಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಜನರನ್ನು ಒಂದೇ ದಿನದಲ್ಲಿ ಕೊಲ್ಲಿಸಿದ್ದಾನೆ. ಸೇನೆಗಿಂತ ಬಲಿಷ್ಠವಾಗಿರುವ ಉಗ್ರರ ದಂಡು ಅಧಿಕಾರಕ್ಕೇರಲು ಸರ್ವ ರೀತಿಯಲ್ಲೂ ಸಜ್ಜಾಗುತ್ತಿದೆ. ಮೊದಲು ಕ್ರೈಸ್ತರ ನಿರ್ನಾಮದ ಪಣ ತೊಟ್ಟಿದ್ದ ಉಗ್ರರು ಈಗ ತಮಗೆ ಪ್ರತಿರೋಧ ತೋರುತ್ತಿರುವವರೆಲ್ಲರನ್ನೂ ತರಿದು ಹಾಕುತ್ತಿದ್ದಾರೆ.

ಒಂದೆಡೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿರುವ ಚಾರ್ಲಿ ಹೆಬ್ಡೊ. ಮತ್ತೊಂದೆಡೆ ಇಡೀ ವಿಶ್ವವನ್ನೇ ತೆಕ್ಕೆಗೆ ತೆಗೆದುಕೊಳ್ಳಬಯಸುತ್ತಿರುವ ಬಹುರೂಪಿ ಉಗ್ರವಾದ. ಚಾರ್ಲಿ ಗೆಲ್ಲಬಾರದು ಎನ್ನುತ್ತಿರುವವರು ಮತ್ತೊಮ್ಮೆ ಯೋಚಿಸುವುದೊಳಿತು. ಉಗ್ರವಾದದ ಗೆಲುವು ಮಾನವೀಯತೆಯ ಸೋಲಲ್ಲವಾ?


No comments:

Post a Comment