Wednesday 31 December 2014

ಹೌದು ಬಿಡಿ. ಮುಗ್ಧರು ಜನರಲ್ಲ, ಮತಾಂತರ ಮಾಡುತ್ತಿರುವವರು!

ಡಿಸೆಂಬರ್‍ 27ರಂದು ಪ್ರಕಟವಾಗಿರುವ ವೇಣುರವರ ಪ್ರತಿಕ್ರಿಯೆಗೆ ಇದೋ ನನ್ನ ಪ್ರತ್ಯುತ್ತರ.

ಮೊದಲನೆಯದಾಗಿ, ನಾನು ನಿಮ್ಮ ಲೇಖನಕ್ಕೆ ಮರುದಿನವೇ ಪ್ರತಿಕ್ರಿಯಿಸಿದ್ದಕ್ಕೆ ಅಸಹನೆಯೇ ಕಾರಣ ಎಂದು ಹೇಗೆ ನಿರ್ಧರಿಸಿದಿರಿ? ನಿಮ್ಮ ಪ್ರಶ್ನೆಗಳಲ್ಲಿ ಹೊಸ ಚಿಂತನೆಯ ಸರಕೇನೂ ಇರಲಿಲ್ಲವಲ್ಲ ಹೆಚ್ಚಿನ ಸಮಯವನ್ನು ವ್ಯಯಿಸಲು? ನನಗೆ ಅಸಹನೆ ಎನ್ನುತ್ತಿರುವ ನೀವು ಸ್ವಲ್ಪ ಸಹನೆಯಿಂದ ನನ್ನ ಪ್ರಶ್ನೆಗಳನ್ನೂ ಅರ್ಥಮಾಡಿಕೊಂಡಿದ್ದರೆ ನಿಮ್ಮ ವಾದ ಹೀಗೆ ಹಳಿ ತಪ್ಪುತ್ತಿರಲಿಲ್ಲ.



ಅದೆಷ್ಟು ದ್ವಂದ್ವ ನಿಮ್ಮ ಲೇಖನಗಳಲ್ಲಿ. ಅದನ್ನು ಪುಷ್ಟೀಕರಿಸುವ ಸಲುವಾಗಿ ಎಷ್ಟೆಲ್ಲಾ ವಿಷಯಾಂತರ! ಇರಲಿ, ನಿಮ್ಮ ಹಾಗೆ ವಾದದ ಮೂಲ ಸ್ವರೂಪವನ್ನೇ ಬದಲಾಯಿಸುವ ಅಗತ್ಯ ನನಗಿಲ್ಲ. ನನ್ನ ಪ್ರಶ್ನೆಗಳಿಗೆ ನೀವು ಕೊಟ್ಟಿರುವ ಉತ್ತರಗಳ ಕಡೆಗೆ ಮಾತ್ರ ನನ್ನ ಗಮನ.


'ಅಂಬೇಡ್ಕರ್‍ಗೆ ಮೊದಲೇ ಗೊತ್ತಿದ್ದರೆ ಬೇಗ ಮತಾಂತರವಾಗುತ್ತಿದ್ದರೇನೋ, ಸಾವು ಯಾರ ಅಪ್ಪಣೆಯನ್ನೂ ಕೇಳಿ ಬರುವುದಿಲ್ಲವಲ್ಲ?' ಎಂದು ವೇದಾಂತಿಯಂತೆ ಮಾತುಗಳನ್ನಾಡಿದ್ದೀರ. ಇಲ್ಲಿ ಕೇಳಿ, ಅಂಬೇಡ್ಕರ್‍ರದ್ದು ದಿಢೀರ್ ಸಾವಲ್ಲ. 1948ರಿಂದಲೇ ಅವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಅದು ಉಲ್ಪಣಿಸಿ, 1954ರಲ್ಲಿ ಸತತವಾಗಿ ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆಗೂ ಅಕ್ಷರಶಃ ಹಾಸಿಗೆ ಹಿಡಿದಿದ್ದರು! 1955ರಲ್ಲೇ ಅವರ ಆರೋಗ್ಯ ವಿಷಮಿಸಿತ್ತು. ಅವರು ಮತಾಂತರಗೊಂಡು ಐದು ಲಕ್ಷ ದಲಿತರನ್ನು ಮತಾಂತರಗೊಳಿಸಿದ್ದು 1956ರ ಅಕ್ಟೋಬರ್ 14ರಂದು! ಇದಾದ ಎರಡೇ ತಿಂಗಳಿಗೆ ಅವರು ಸತ್ತಿದ್ದು! ಇನ್ನೆಷ್ಟು ಹೇಳಿ ಕೇಳಿ ಬರಬೇಕಾಗಿತ್ತು ಅವರ ಸಾವು? ಇಪ್ಪತ್ತು ವರ್ಷಗಳಷ್ಟು ಹಿಂದೆಯೇ 'ನಾನು ಹಿಂದೂವಾಗಿ ಮಾತ್ರ ಸಾಯುವುದಿಲ್ಲ' ಎಂದು ಪ್ರತಿಜ್ಞೆ ಮಾಡಿದ್ದ ಕಾರಣಕ್ಕೇ ಬದುಕಿನ ಕೊನೆ ಘಳಿಗೆಯಲ್ಲಿ ಮತಾಂತರಗೊಂಡರು ಎಂಬ ಸಾಧ್ಯತೆಯನ್ನು ಹೇಗೆ ತಳ್ಳಿಹಾಕುತ್ತೀರ? ಅದೂ ಇರಲಿ, ಅವರ ಉದಾಹರಣೆಯಲ್ಲಿನ ಕೆಲವು ಅಂಶಗಳನ್ನು ಮಾತ್ರ ಜಾಣತನದಿಂದ ನಿಮ್ಮ ವಿತ್ತಂಡವಾದಕ್ಕೆ ಬಳಸಿಕೊಂಡಿದ್ದೀರಲ್ಲ, ಅವರ ಬದುಕಿನ ವಾಸ್ತವ ಸಂಗತಿಗಳು ಮತ್ತ್ಯಾರಿಗೂ ಗೊತ್ತಿರುವುದಿಲ್ಲ ಎಂಬ ಉಡಾಫೆಯೇ ನಿಮಗೆ?

ಅಂಬೇಡ್ಕರ್‍ರನ್ನು ದಲಿತರ ಆಸ್ತಿ ಎಂದು ಬಿಂಬಿಸುತ್ತಾ, 'ಅವರೇ ಮತಾಂತರಗೊಂಡಮೇಲೆ ಇನ್ನು ನಿಮಗ್ಯಾವ ಮಾರ್ಗ ಉಳಿದಿದೆ?’ ಎಂದು ದಲಿತ ಸಮುದಾಯಕ್ಕೆ ಹೀಗೆ ನೇರವಾಗಿಯೇ ಸಂದೇಶ ಸಾರುವ ಮುನ್ನ ಎಲ್ಲ ಅಂಕಿ ಅಂಶಗಳನ್ನೂ, ಸಂದರ್ಭಗಳನ್ನೂ ಕೂಲಂಕಷವಾಗಿ ಪರಾಮರ್ಶಿಸಿ ವೇಣುರವರೆ. ನಿಮ್ಮ ವಾದದ ಬೇರು ಸಡಿಲಾಗುವುದು ಅಲ್ಲೇ.

ಜಿತನ್‍ರಾಮ್ ಮಾಂಜಿಯವರ ಉದಾಹರಣೆಯಲ್ಲೂ ನಿಮ್ಮದು ಅದೇ ಜಾಣತನ. ಆಗಸ್ಟ್ ತಿಂಗಳಿನಲ್ಲೇ ದೇವಸ್ಥಾನಕ್ಕೆ ಹೋಗಿದ್ದ ಮಾಂಜಿಯವರು ಸೆಪ್ಟೆಂಬರ್ 28ರವರೆಗೂ ಈ ವಿಷಯವನ್ನು ಮುಚ್ಚಿಟ್ಟಿದ್ದೇಕೆ? ಅವರೇ ಮುಖ್ಯಮಂತ್ರಿ ತಾನೆ, ಆ ಕ್ಷಣವೇ ತನಿಖೆಗೆ ಆಗ್ರಹಿಸಬಹುದಿತ್ತಲ್ಲ? ಓರ್ವ ಮುಖ್ಯಮಂತ್ರಿಯಾಗಿ, ಅಷ್ಟು ತಡವಾಗಿ, ಅದೂ ಮಾಧ್ಯಮದವರ ಮುಂದೆ ಅಲವತ್ತುಕೊಳ್ಳುವ ಅಗತ್ಯವೇನಿತ್ತು? ಏಕೆಂದರೆ ಆಗ ಚುನಾವಣೆ ನಡೆಯುತ್ತಿತ್ತು. ಎಷ್ಟೆಂದರೂ ರಾಜಕಾರಣಿಯಲ್ಲವೇ, ಸಮಯ ನೋಡಿಕೊಂಡು ಬಾಯಿಬಿಟ್ಟರು ಅಷ್ಟೇ. ಯಾರು ಹೋದರೂ ಬಿಟ್ಟರೂ, ಆ ದೇವಸ್ಥಾನವನ್ನು ದಿನಕ್ಕೆರಡು ಬಾರಿ ಶುಚಿಗೊಳಿಸುವುದು ಅಲ್ಲಿನ ಪದ್ಧತಿಯೆಂದು ಅಲ್ಲಿನ ಅರ್ಚಕರಾದ ಅಶೋಕ್ ಕುಮಾರ್ ಮಿಶ್ರಾರವರೇ ಹೇಳಿದ್ದಾರೆ. ತನಿಖೆಯಾಗಲಿ ಬಿಡಿ, ಸತ್ಯ ಹೊರಬರಲಿ. ಅದಿರಲಿ, ಅಷ್ಟು ದೂರದ ಬಿಹಾರ್‍ನಲ್ಲಿ ನಡೆಯುವ ಅಸ್ಪೃಶ್ಯತೆಯ ಉದಾಹರಣೆ ನಿಮ್ಮ ಕಣ್ಣಿಗೆ ಕಾಣುತ್ತದೆ, ಇಲ್ಲೇ ನಮ್ಮ ಧರ್ಮಸ್ಥಳ, ಹೊರನಾಡು, ಶೃಂಗೇರಿ ಮುಂತಾದ ದೇವಸ್ಥಾನಗಳಲ್ಲಿ, ಯಾವ ಭೇದವೂ ಇಲ್ಲದೆ, ಲಕ್ಷಾಂತರ ಜನರಿಗೆ ನಿತ್ಯವೂ ನಡೆಯುತ್ತಿರುವ ಅನ್ನ ಸಂತರ್ಪಣೆ ಕಾಣುವುದಿಲ್ಲವೇ?

ಇನ್ನು, 'ಸರ್ಕಾರಿ ಶಾಲೆಯ ಶಿಕ್ಷಕ ಶಿಕ್ಷಕಿಯರು ಕಲಿಸಲು ಬಾರದೆ ತಿಣುಕಾಡುತ್ತಾರಾ?' ಎಂದು ವ್ಯಂಗ್ಯವಾಡಿದ್ದೀರ. ಎಂಥ ಬೇಜವಾಬ್ದಾರಿಯ ಮಾತುಗಳು ನಿಮ್ಮವು! ಶಿಕ್ಷಣ ಇಲಾಖೆಯಿಂದ, ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವ ನೂರಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು, ಅದನ್ನು ರಾಜ್ಯದ ಮೂಲೆ ಮೂಲೆಗಳಲ್ಲಿರುವ ಹಳ್ಳಿಯ ಮಕ್ಕಳಿಗೆ ತಲುಪಿಸಲು ಶಿಕ್ಷಕರು ಪಡುತ್ತಿರುವ ಶ್ರಮಕ್ಕೆ ಕಿಂಚಿತ್ತಾದರೂ ಬೆಲೆ ಬೇಡವೇ? ಕಲಿಕೆ ಎಂದರೆ ಅಕ್ಷರ ಮಾತ್ರ ಎಂದು ಯಾರು ಹೇಳಿದ್ದು ನಿಮಗೆ? 'ಕಕ್ಕಸ್ಸಿಗೆ ಹೋದರೆ ಸಾಬೂನು ಹಚ್ಚಿ ಕೈ ತೊಳೆದುಕೊಳ್ಳಬೇಕು' ಎಂಬ ಸಣ್ಣ ವಿಷಯವನ್ನೂ ಕಲಿಸುತ್ತಿದ್ದಾರೆ ನಮ್ಮ ಶಿಕ್ಷಕರು. ಇದು ಸರ್ಕಾರಿ ನಿಯಮವಾ? ಇದೆಯಾ ನಮ್ಮ ಸಂವಿಧಾನದಲ್ಲಿ?

ನಿಮ್ಮ ಪ್ರಕಾರ ಎಲ್ಲರೂ ಸಂವಿಧಾನಕ್ಕೆ ಹೆದರಿ ರಾಜಿಯಾಗಿದ್ದು ಅಲ್ಲವೇ? ಹೌದು ಎಂತಲೇ ಇಟ್ಟುಕೊಳ್ಳೋಣ. ನಾವು ಸಂವಿಧಾನಕ್ಕೆ ಬೆಲೆಯನ್ನಾದರೂ ಕೊಟ್ಟಿದ್ದೇವೆ, ಅದನ್ನೂ ಕೊಡದ ಮಂದಿಗೆ ನೀವೇಕೆ ಹೋಗಿ ಬುದ್ಧಿ ಹೇಳಬಾರದು? ಜಮ್ಮು ಕಾಶ್ಮೀರದಲ್ಲಿ ಅನುಚ್ಛೇದ 370ನ್ನು ಹೀಗೆ ಅನಿರ್ದಿಷ್ಟ ಅವಧಿಯವರೆಗೆ ಮುಂದುವರೆಸಿಕೊಂಡು ಹೋಗಲು ಸಂವಿಧಾನದಲ್ಲಿ ಅನುಮತಿ ಇಲ್ಲ. ದಯವಿಟ್ಟು ನಮ್ಮ ಉದಾಹರಣೆಯನ್ನು ಅಲ್ಲಿಯೂ ಕೊಟ್ಟು ನೋಡಿ, ಅವರು ನಿಮ್ಮ ಮಾತನ್ನಾದರೂ ಕೇಳುತ್ತಾರಾ ನೋಡೋಣ?

ನಾನು, 'ದನಗಳನ್ನು ಭಕ್ಷಿಸಿ ಜನಗಳನ್ನು ಕೊಲ್ಲುವ ಧರ್ಮದಲ್ಲಿ ಮಾನವೀಯತೆ ಇದೆಯಾ' ಎಂದು ಕೇಳಿದ್ದೆ. ಅದಕ್ಕೆ ಉತ್ತರವೇ ಇಲ್ಲ ನಿಮ್ಮ ಬಳಿ. ಬಿಸಿ ತುಪ್ಪವಲ್ಲವೇ, ಪಾಪ! ಭ್ರಷ್ಟಾಚಾರವನ್ನು, ಯಾಗ, ಯಜ್ಞಗಳನ್ನು ಸುಮ್ಮನೆ ಎಳೆದು ತಂದಿದ್ದೀರ ನಿಮ್ಮ ಸಮಜಾಯಿಷಿಯಲ್ಲಿ! ಬೇಡರ ಕಾಲದ ಆಹಾರ ಪದ್ಧತಿಯ ನಿಮ್ಮ ವ್ಯಾಖ್ಯಾನದ ಪ್ರಕಾರವೇ ಹೋಗುವುದಾದರೆ, ನಾವೆಲ್ಲರೂ, ಬ್ರಾಂಡೆಡ್ ಇರಲಿ, ಬಟ್ಟೆಯನ್ನೇ ತೊಡುವ ಹಾಗಿರಲಿಲ್ಲ ಅಲ್ಲವೇ?

ಇಲ್ಲಿಂದ ಮುಂದಕ್ಕಂತೂ ನಿಮ್ಮ ವಾದದ ಸರಣಿಯಲ್ಲಿ ಎಲ್ಲವೂ ಅಯೋಮಯ. ಕೊಂಕಣವನ್ನೇನೋ ಸುತ್ತಿದ್ದೀರ, ಮೈಲಾರಕ್ಕಂತೂ ಬಂದೇ ಇಲ್ಲ. 'ಹೊಂದಿಸಿ ಬರೆಯಿರಿ' ಎಂಬ ಅಭ್ಯಾಸವಿರುತ್ತಿತ್ತಲ್ಲ ಪಾಠಗಳಲ್ಲಿ, ಹಾಗೆ ನೀವು ಕೊಟ್ಟಿರುವ ಉತ್ತರಗಳಿಗೆ ನನ್ನ ಪ್ರಶ್ನೆಗಳನ್ನು ಹೊಂದಿಸಬೇಕಾದ ಪರಿಸ್ಥಿತಿ! ಅದನ್ನೂ ಮಾಡಿದ್ದೇನೆ ನೋಡಿ. ಈ ಸಂದರ್ಭಕ್ಕೆ ಅನಗತ್ಯವಾಗಿ ಬರುವ ಬಸವಣ್ಣ, ಬುದ್ಧರ ಪಥಸಂಚಲನವನ್ನು ದಾಟಿ ಮುಂದೆ ಹೋದರೆ ಕಾಣುವುದು 'ಘರ್ ವಾಪಸಿಯ'ನ್ನು 'ಡರ್ ಕೆ ವಾಪಸಿ' ಎನ್ನುತ್ತಿರುವ ನಿಮ್ಮ ಇಬ್ಬಂದಿಯ ನಿಲುವು. ನಿಮ್ಮ ಹಿಂದಿನ ಲೇಖನದಲ್ಲೇ, 'ಮತಾಂತರಗೊಂಡವರನ್ನು ಕ್ರೈಸ್ತರು ಹಾಗೂ ಮುಸ್ಲಿಮರು ಒಪ್ಪಿಕೊಳ್ಳುವುದಿಲ್ಲವೆಂದರೆ ಅದು ದಲಿತರ ತಪ್ಪೇ?' ಎಂದು ಕೇಳಿದ್ದೀರಲ್ಲ, ಅಲ್ಲಿಗೆ ವಾಪಸಿ ಎನ್ನುವುದು ಹೇಗೆ ತಪ್ಪಾಗುತ್ತದೆ? ಈಗೇಕೆ ಉಲ್ಟಾ ಹೊಡೆಯುತ್ತಿದ್ದೀರಿ? ಅಬ್ಬೇಪಾರಿಗಳಂತೆ ಆಯುಷ್ಯವನ್ನೆಲ್ಲಾ ಬೇರೆಲ್ಲೋ ಕಳೆಯುವ ಬದಲು, ವಾಪಸ್ ಬರುತ್ತೇವೆನ್ನುವ ಮನಸ್ಸುಗಳನ್ನು ನಾವೇಕೆ ನಿರಾಕರಿಸಬೇಕು? ಮತಾಂತರಕ್ಕೆ ಓಕೆ ಎನ್ನುವ ಹಕ್ಕು ನಿಮಗಿದೆಯಾದರೆ, ಈ ಹಿಂದೆ ನಡೆದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಹಕ್ಕು ನಮಗೂ ಇದೆ. ಮಿಷನರಿಗಳು ಕೊಡುವ ಉಚಿತ ಶಿಕ್ಷಣ, ಆಸ್ಪತ್ರೆ ಸೌಲಭ್ಯಗಳು ಮಾನವೀಯತೆಯ ದ್ಯೋತಕವಾದರೆ ರೇಷನ್ ಕಾರ್ಡ್ ಕೂಡ ಅದೇ ವರ್ಗಕ್ಕೆ ಸೇರಬೇಕು ಅಲ್ಲವೇ? ಅಂದ ಹಾಗೆ, ರೇಷನ್ ಕಾರ್ಡಿಗೂ ಭಯಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಡರ್(ಭಯ) ಎನ್ನುವ ಪದವನ್ನು ಪ್ರಾಸಕ್ಕೋಸ್ಕರ ನೀವೇನೋ ಬಳಸಿಕೊಂಡಿರಿ, ಆದರೆ ಅರ್ಥಮಾಡಿಕೊಳ್ಳಲು ನಮಗೆ ಬಹಳ ತ್ರಾಸವಾಗುತ್ತದೆ ಸಾಹಿತಿಗಳೇ.

'ಆಮಿಷಕ್ಕೆಲ್ಲಾ ಮತಾಂತರವಾಗುವ ಕಾಲವೂ ಇದಲ್ಲ, ಜನರೂ ಮುಗ್ಧರಲ್ಲ' ಎಂದು ತೀರ್ಪನ್ನಿತ್ತಿದ್ದೀರಲ್ಲ, ಭಲೇ! ಮೊನ್ನೆಯಷ್ಟೇ ಎಕನಾಮಿಕ್ ಟೈಮ್ಸ್ ಪತ್ರಿಕೆಯ ಬ್ಲಾಗಿನಲ್ಲಿ ಮೋಹನ್‍ದಾಸ್ ಪೈ ರವರು ಮತಾಂತರದ ಹೊಸ ಅವತಾರವನ್ನು ಬಹಳ ಚೆನ್ನಾಗಿ ಹರವಿಟ್ಟಿದ್ದಾರೆ, ಓದಿ ನೋಡಿ. ಕಳೆದ ಐದು ವರ್ಷಗಳಲ್ಲಿ ಒಡಿಸ್ಸಾ, ಜಾರ್ಖಂಡ್, ಗುಜರಾತ್ ಹಾಗೂ ಮಧ್ಯಪ್ರದೇಶದ ಗಿರಿಜನ ಹಾಡಿಗಳೆಲ್ಲಾ ಕ್ರೈಸ್ತರ ಹಾಡಿಗಳಾಗಿ ಬದಲಾಗಿವೆ. ಅರುಣಾಚಲ ಹಾಗೂ ತ್ರಿಪುರಾದ ಗಿರಿಜನರ ಹಾಡಿಗಳಲ್ಲೂ ಎಲ್ಲೆಂದರಲ್ಲಿ ಬೆಂಕಿಪೊಟ್ಟಣದಂಥ ಚರ್ಚುಗಳು ತಲೆ ಎತ್ತುತ್ತಿವೆ. ಆ ಜನರು ಮುಗ್ಧರಲ್ಲ ಅಲ್ಲವೇ? ಎಲ್ಲರೂ IITಗಳಲ್ಲೇ ವ್ಯಾಸಂಗ ಮಾಡುತ್ತಿರುವವರು!  ಟಾಟಾ, ಬಿರ್ಲಾ ಹಾಗೂ ಅಂಬಾನಿಯ ಆಸ್ತಿಯಲ್ಲಿ ಎಲ್ಲರೂ ಸಮಾನ ಪಾಲುದಾರರು! ಅವರಿಗೆಲ್ಲ ಮೊದಲು ಹಿಂದೂ ಹಾಗೂ ಕ್ರೈಸ್ತ ಧರ್ಮಗಳ ಸೂಕ್ಷವನ್ನು ಬೋಧಿಸಿ, ನಂತರ ಆಯ್ಕೆಯನ್ನು ಅವರಿಗೇ ಬಿಡಲಾಯಿತಲ್ಲವೇ? ಸಾಮಾಜಿಕ ಜಾಲತಾಣ ಟ್ವಿಟ್ಟರ್‍ನಲ್ಲಿ ಪಾದ್ರಿಗಳು, ’ನನ್ನ ಗುರಿ 100 ಮಿಲಿಯನ್ ಜನರನ್ನು ಮತಾಂತರಗೊಳಿಸುವುದು, ಈಗಾಗಲೇ 60 ಮಿಲಿಯನ್ ಆಗಿದೆ, ಉಳಿದವರನ್ನು ಮತಾಂತರಿಸಲು ಹಣದ ಸಹಾಯ ಬೇಕಿದೆ’ ಎಂದು ಮುಕ್ತವಾಗಿಯೇ ಕೇಳುವುದನ್ನೂ ಉಲ್ಲೇಖಿಸಿದ್ದಾರೆ ಪೈ. ಡ್ರೈವರ್‍ಗಳು, ಮನೆಕೆಲಸದ ಹೆಂಗಸರು, ತಮ್ಮ ಮಕ್ಕಳ ಶಿಕ್ಷಣದ, ವೈದ್ಯಕೀಯ ಸೌಲಭ್ಯದ ಸಲುವಾಗಿ ಮತಾಂತರ ಹೊಂದುತ್ತಿರುವ ಹಲವಾರು ಉದಾಹರಣೆಗಳನ್ನು ನಾವೇ ನೋಡುತ್ತಿದ್ದೇವೆ. ಅವರ ಬಾಯಿಂದಲೇ ಕೇಳುತ್ತಿದ್ದೇವೆ.

ನಿಮಗೂ ಅಂಕಿ-ಅಂಶಗಳಿಗೂ ಆಗಿ ಬರುವುದಿಲ್ಲವೆಂದು ಗೊತ್ತು. ಆದರೂ ಒಂದು ವಿಷಯ ಹೇಳುತ್ತೇನೆ ಕೇಳಿ. ಇಂದು ಭಾರತದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ವೇಷದಲ್ಲಿರುವ ನೂರಾರು ಕ್ರೈಸ್ತ ಮಿಷನರಿಗಳಿಗೆ ವಿದೇಶಗಳಿಂದ ಹರಿದು ಬರುತ್ತಿರುವ ಹಣ ವಾರ್ಷಿಕ 10ಸಾವಿರ ಕೋಟಿಗೂ ಹೆಚ್ಚು! ಅಲ್ಲದೆ, ಭಾರತದಲ್ಲಿ ನಡೆಯುತ್ತಿರುವ ಬಲವಂತದ, ಪರಿಸ್ಥಿತಿಯ ದುರುಪಯೋಗದ ಮತಾಂತರವನ್ನು (coercion) ವಿದೇಶೀಯರೇ ಧಿಕ್ಕರಿಸುತ್ತಿದ್ದಾರೆ! ಅಲ್ಲಿ ಫಿಲಿಪ್ ಗೋಲ್ಡ್ ಬರ್ಗ್ ನಂಥವರು, ಹಿಂದುತ್ವದಿಂದಾಗಿರುವ ಲಾಭವನ್ನು 'ಅಮೆರಿಕನ್ ವೇದ' ಎಂಬ ಪುಸ್ತಕದ ಮೂಲಕ ಜಗಜ್ಜಾಹೀರುಗೊಳಿಸುತ್ತಿದ್ದರೆ, ಇಲ್ಲಿ ಮತಾಂತರಕ್ಕೆ ಈ ಪರಿಯ ಪ್ರೇರಣೆ! ವಿಪರ್ಯಾಸವಲ್ಲವೇ?

ವ್ಹಾರೆವ್ಹಾ, ನಿಮ್ಮ ಪ್ರಕಾರ ಪೂಜಾರಿಗಳು ಹಾಗೂ ಸೇವಾದರ ಬದಲಾಗುವುದಕ್ಕೂ ಚರ್ಚ್‍ಗಳು ಹಾಗೂ ದೇವರ ಸ್ವರೂಪವೇ ಬದಲಾಗುವುದಕ್ಕೂ ವ್ಯತ್ಯಾಸವೇ ಇಲ್ಲ ಅಲ್ಲವೇ? ಬೆಂಬಲಕ್ಕೆ ಮುಲ್ಲಾ ಮಸೀದಿಗಳ ಪ್ರಸ್ತಾಪ ಬೇರೆ!

ಬ್ರಾಹ್ಮಣ್ಯ, ಜನಿವಾರಗಳನ್ನೆಲ್ಲ ವೃಥಾ ಈ ಚರ್ಚೆಗೆ ಎಳೆದು ತಂದಿರಲ್ಲ, ಅಂಬೇಡ್ಕರರ ಎರಡನೆಯ ಹೆಂಡತಿ, ಸಾರಸ್ವತ ಬ್ರಾಹ್ಮಣರು ಎಂಬುದು ಗೊತ್ತಿಲ್ಲವೇ ನಿಮಗೆ? ಅಂದ ಹಾಗೆ ಮಹಾತ್ಮ ಗಾಂಧಿಯವರು ಕಾಣಲೇ ಇಲ್ಲವಲ್ಲ ನಿಮ್ಮ ವಾದದಲ್ಲಿ? ಅವರು ಅಸ್ಪೃಶ್ಯತೆಯನ್ನು ಎಷ್ಟು ಕಟುವಾಗಿ ಟೀಕಿಸುತ್ತಿದ್ದರೋ ಮತಾಂತರವನ್ನೂ ಅಷ್ಟೇ ಕಟುವಾಗಿ ವಿರೋಧಿಸುತ್ತಿದ್ದರು ಎಂಬ ಕಾರಣಕ್ಕೆ ಅವರಿಗೆ ಸ್ಥಳವಿರಲಿಲ್ಲವೇನೋ ಪಾಪ! ಅಲ್ಲವೇ?

ಹೌದು. ನಾನು ಹಿಂದೂ ಧರ್ಮದ ವಕ್ತಾರಳೇ. ಆದರೆ ನನ್ನ ಧರ್ಮ ಮಂತ್ರ, ಮಡಿವಂತಿಕೆಗಳಿಗೂ ಮೀರಿದ್ದು. ಬದುಕುವ ರೀತಿಯನ್ನು ಕಲಿಸುವ, ಸಮಾನತೆ, ಸೌಹಾರ್ದವನ್ನು ಬಿಂಬಿಸುವ ಸುಂದರ ಪರಿಕಲ್ಪನೆ ಅದು. ಒಂದೆಡೆ, ಶತಶತಮಾನಗಳಿಂದಲೂ ಚಾಲ್ತಿಯಲ್ಲಿರುವ ಅನಿಷ್ಟ ಆಚರಣೆಗಳನ್ನು ಒಂದೊಂದಾಗಿ ಕೊಡವುತ್ತಾ, ಮತ್ತೊಂದೆಡೆ ಹೊಸ ಸ್ವರೂಪಗಳಿಗೆ ತೆರೆದುಕೊಳ್ಳುತ್ತಿದೆ ನನ್ನ ಧರ್ಮ. ಅದು ನನ್ನನ್ನು ಮಲಿನೆ ಎಂದು ನಿಂದಿಸಿಲ್ಲ, ಹೆರುವ ಯಂತ್ರವನ್ನಾಗಿಸಿಲ್ಲ. ಅದು ಕೊಟ್ಟಿರುವ ಸ್ವಾತಂತ್ರ್ಯದಿಂದಲೇ ಇಂದು ನಾನು ನಿಮ್ಮೊಡನೆ ಚರ್ಚಿಸುತ್ತಿರುವುದು. ನಮಗಂಟಿರುವ 'ಅಸ್ಪೃಶ್ಯತೆ' ಎಂಬ ಕಲೆಯನ್ನು, ಒಗ್ಗಟ್ಟಾಗಿದ್ದು ತೊಳೆದುಕೊಳ್ಳುವುದಕ್ಕೇ ಬಿಡದೆ ಇಡೀ ದಲಿತ ಸಮುದಾಯವನ್ನೇ ಇಲ್ಲಿಂದ ಒಕ್ಕಲೆಬ್ಬಿಸುವ ಅಪಾಯಕಾರಿ ಮಾತನ್ನಾಡುವ ನಿಮ್ಮನ್ನು ನಿಂತ ನಿಲುವಿನಲ್ಲೇ ಖಂಡಿಸುವ ದಾರ್ಷ್ಟ್ಯವನ್ನು ಕೊಟ್ಟಿದ್ದೂ ನನ್ನ ಧರ್ಮವೇ. ಇದರಲ್ಲೂ ದೋಷ, ಕೊಳಕುತನಗಳು ಕಾಣುವುದು ಕಾಮಾಲೆ ಕಣ್ಣಿನವರಿಗೆ ಮಾತ್ರ!

ಒಂದಂತೂ ದಿಟ. ನಿದ್ರಿಸುತ್ತಿರುವವರನ್ನು ಎಬ್ಬಿಸಬಹುದು. ನಿದ್ರೆಯನ್ನು ನಟಿಸುತ್ತಿರುವವರನ್ನಲ್ಲ!

2 comments: