Thursday, 5 February 2015

ಒಬಾಮಾ 'ಬರಾಕ್' ಒಪ್ಪಿದ್ದೇಕೆ?

ಅದು 1994ರ ಮೇ ತಿಂಗಳು. ನಮ್ಮ ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್ ಅಮೆರಿಕಕ್ಕೆ ಭೇಟಿಯಿತ್ತಿದ್ದರು. ಕೈಬೀಸಿಕೊಂಡು ಹಾಗೆ ಹೋಗಿ ಹೀಗೆ ಬರುವ ಉದ್ದೇಶ ಅವರದ್ದಾಗಿರಲಿಲ್ಲ. ಆರ್ಥಿಕವಾಗಿ ಭಾರತವನ್ನು ಸಬಲಗೊಳಿಸುವ, ಅದಕ್ಕಾಗಿ ವಿಶ್ವದ ದೊಡ್ಡಣ್ಣ ಅಮೆರಿಕದೊಂದಿಗೆ ಕೈಜೋಡಿಸುವ ದೊಡ್ಡದೊಂದು ಕನಸು ಅವರಿಗಿತ್ತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದವರು ಬಿಲ್ ಕ್ಲಿಂಟನ್. ಅವರು ನರಸಿಂಹರಾವ್‍ರ ದೂರದರ್ಶಿತ್ವವುಳ್ಳ ಆಶೋತ್ತರಗಳಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ ಸಕಾರತ್ಮಕವಾಗಿಯೇ ಸ್ಪಂದಿಸಿದ್ದರು. ಹೀಗೆ, ಭಾರತದ ಪಾಲಿಗೆ ಅವಕಾಶಗಳ ಬಾಗಿಲು ತೆಗೆಯುವುದು ಖಚಿತವಾಗುತ್ತಿದ್ದಂತೆ ನೆಮ್ಮದಿಯಾಗಿ ಹಿಂದಿರುಗಿದ್ದರು ನರಸಿಂಹರಾವ್!

ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ತಮ್ಮ ಭೇಟಿಯನ್ನು ಸಾರ್ಥಕಗೊಳಿಸಿದ ಕ್ಲಿಂಟನ್‍ರಿಗೆ ಹೇಗೆ ಧನ್ಯವಾದ ಅರ್ಪಿಸುವುದು ಎಂಬ ಯೋಚನೆಯಲ್ಲಿ ಬಿದ್ದರು. ಆಗ ಅವರಿಗೆ ನೆನಪಾಗಿದ್ದೇ 1995ರ ಗಣರಾಜ್ಯೋತ್ಸವದ ಸಂದರ್ಭ! ಕ್ಲಿಂಟನ್‍ರನ್ನೇಕೆ ಮುಖ್ಯ ಅತಿಥಿಯಾಗಿ ಕರೆಸಬಾರದು ಎಂಬ ಆಲೋಚನೆ ಬಂದದ್ದೇ ತಡ, ಅದನ್ನು ತಮ್ಮ ವಿದೇಶಾಂಗ ಕಾರ್ಯದರ್ಶಿ ಕೃಷ್ಣನ್ ಶ್ರೀನಿವಾಸನ್‍ರ ಗಮನಕ್ಕೆ ತಂದರು. ಹೀಗೆ ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಲು ಅಮೆರಿಕಕ್ಕೆ ಮೊತ್ತ ಮೊದಲ ಆಹ್ವಾನ ಹೋಗಿದ್ದು 1994ರ ವರ್ಷಾಂತ್ಯದಲ್ಲಿ! ಬಹುಶಃ ನರಸಿಂಹರಾವ್‍ರಿಗಿದ್ದ ಸಂಭ್ರಮ ಕ್ಲಿಂಟನ್‍ರಿಗಿರಲಿಲ್ಲವೇನೋ. ಜೊತೆಗೆ ಸರಿ ಸುಮಾರು ಅದೇ ಸಮಯಕ್ಕೆ (ಜನವರಿ 26ರ ಆಸುಪಾಸು) ಅಮೆರಿಕದ ಅಧ್ಯಕ್ಷರು ತಮ್ಮ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಪರಿಪಾಠ ವರ್ಷಗಳಿಂದ ಚಾಲ್ತಿಯಲ್ಲಿದೆ. ಅದೇ ಕಾರಣವನ್ನು ಮುಂದೊಡ್ಡಿ ನರಸಿಂಹರಾವ್‍ರ ಆಹ್ವಾನವನ್ನು ಕ್ಲಿಂಟನ್ ನಯವಾಗಿ ತಿರಸ್ಕರಿಸಿದರು! ಪುರಸ್ಕರಿಸಲೇಬೇಕಾದ ಅನಿವಾರ್ಯತೆಯನ್ನು ಆಗಿನ ಕಾಲಕ್ಕೆ ಭಾರತ ಒಂದು ದೇಶವಾಗಿ ಇನ್ನೂ ಸೃಷ್ಟಿಸಿರಲಿಲ್ಲ ಎಂಬುದೂ ಅಷ್ಟೇ ಸತ್ಯ ಬಿಡಿ.

ಪಾಪ, ನರಸಿಂಹರಾವ್ ಅಂದು ಅದೆಷ್ಟು ನಿರಾಶರಾದರೋ! ನಿಮಗೆ ಗೊತ್ತಿರಲಿ, ಭಾರತ ಹಾಗೂ ಅಮೆರಿಕದ ಆರ್ಥಿಕ ಸಂಬಂಧಗಳಿಗೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟ ಮೊತ್ತ ಮೊದಲ ಪ್ರಧಾನಿ ನರಸಿಂಹರಾವ್! ಇಂದು ಲಕ್ಷಾಂತರ ಭಾರತೀಯರು ಒಂದು ಕಾಲನ್ನು ಇಲ್ಲಿ, ಮತ್ತೊಂದು ಕಾಲನ್ನು ಅಮೆರಿಕದಲ್ಲಿ ಇಟ್ಟಿರುವುದಕ್ಕೆ, ಪ್ರತಿ ಡಾಲರ್ ಗಳಿಸಿದಾಗಲೂ x ‍‍‍65 ರೂಪಾಯಿ ಎಂದು ಮನಸ್ಸಿನಲ್ಲೇ ಗುಣಾಕಾರ ಹಾಕಿಕೊಳ್ಳುವುದಕ್ಕೂ ಅವರೇ ಕಾರಣ! ಅಂಥ ಬುದ್ಧಿವಂತ ಹಾಗೂ ದೂರದೃಷ್ಟಿಯುಳ್ಳವರಾಗಿದ್ದ ಮಾಜಿ ಪ್ರಧಾನಿಯನ್ನು ಅವರದ್ದೇ ಆದ ಕಾಂಗ್ರೆಸ್ ಪಕ್ಷ ಸ್ಮರಿಸದೇ ಇದ್ದರೂ ಪರವಾಗಿಲ್ಲ, ನಾವುಗಳಂತೂ ಈಗ ಖಂಡಿತ ನೆನೆಯಲೇಬೇಕು.

ಏಕೆಂದರೆ…

ಇಪ್ಪತ್ತು ವರುಷಗಳ ತರುವಾಯ ಇತಿಹಾಸ ಮರುಕಳಿಸಿದೆ! ನರಸಿಂಹರಾವ್‍ರ ಜಾಡನ್ನೇ ಅನುಸರಿಸಿದ ಭಾರತದ ಮತ್ತೋರ್ವ ಪ್ರಧಾನಿ ಅಮೆರಿಕಕ್ಕೆ ಆಹ್ವಾನ ನೀಡಿ, ಅವರು ಅದನ್ನು ಸ್ವೀಕರಿಸಿ ಭಾರತಕ್ಕೆ ಬಂದೂ ಆಗಿದೆ. ಬರಾಕ್ ಒಬಾಮಾರ ಉಪಸ್ಥಿತಿಯಲ್ಲಿ ನಡೆದ ನಿನ್ನೆಯ ಗಣರಾಜ್ಯೋತ್ಸವ ಎಷ್ಟು ಅದ್ಧೂರಿಯಾತ್ತಲ್ಲವೇ? ಎಲ್ಲೆಲ್ಲೂ ಶಿಸ್ತು, ಭಾವೈಕ್ಯತೆ, ದೇಶಪ್ರೇಮಗಳ ರಂಗು ರಂಗಿನ ಸಿಂಚನ. ಹಾಗೇ, ಮರಣೋತ್ತರವಾಗಿ ನೀಡಲಾದ ಅಶೋಕ ಚಕ್ರವನ್ನು ಪಡೆಯಲು ಬಂದ ವೀರಯೋಧರ ಮಡದಿಯರನ್ನು ನೋಡಿದಾಗ ಹೃದಯ ಭಾರವಾಗಿ, ಗಂಟಲ ಸೆರೆಯುಬ್ಬಿ ಬಂದು ಕಣ್ಣಂಚಿನಲ್ಲಿ ನೀರಾಡಿದ್ದರೂ ಆಶ್ಚರ್ಯವಿಲ್ಲ! ಹೆಮ್ಮೆಯಿಂದ ಎದೆಯುಬ್ಬಿಸಿ ಪಥಸಂಚಲನ ಮಾಡಿದ ನಮ್ಮ ಸೇನಾ ತುಕಡಿಗಳ ಸ್ಫೂರ್ತಿ ಇಮ್ಮಡಿಯಾಗಿದ್ದರೆ, ನೋಡಿ ಆನಂದಿಸಿದ ನಮ್ಮ ಅಭಿಮಾನ ನೂರ್ಮಡಿಯಾಗಿತ್ತು. ಹೌದು. ಅಂತಹುದೇ ಸಂತಸ ಒಬಾಮಾರ ಮುಖದ ಮೇಲೂ ಮಿನುಗುತ್ತಿತ್ತು. ಮೋದಿಯವರು ತಮ್ಮನ್ನು ಸ್ವಾಗತಿಸಿದ ಪರಿಯನ್ನು, ತಮ್ಮೊಡನೆ ನಡೆಸಿದ 'ಚಾಯ್ ಪೆ ಚರ್ಚಾ'ಗಳನ್ನು ಮುಕ್ತವಾಗಿ ಶ್ಲಾಘಿಸಿದ ಒಬಾಮಾರಿಗೆ ಭಾರತದ ಈ ಭೇಟಿ ಅವಿಸ್ಮರಣೀಯವಾಗಲಿದೆ!


ಒಬಾಮಾರ ಈ ಭೇಟಿಯಲ್ಲಿ ಎರಡು ಪ್ರಥಮಗಳಿವೆ. ಮೊದಲನೆಯದು, ನಮ್ಮ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಬರುತ್ತಿರುವ ಅಮೆರಿಕದ ಮೊತ್ತಮೊದಲ ಅಧ್ಯಕ್ಷರೆಂಬುದು. ಎರಡನೆಯದು, ತಮ್ಮ ಅಧಿಕಾರಾವಧಿಯಲ್ಲಿ ಭಾರತಕ್ಕೆ ಎರಡನೆಯ ಬಾರಿ ಭೇಟಿ ನೀಡುತ್ತಿರುವ ಮೊತ್ತಮೊದಲ ಅಧ್ಯಕ್ಷರೆಂಬುದು. ಒಬಾಮಾರಿಗೆ ಪ್ರತಿ ವರ್ಷದಂತೆಯೇ ಈ ಬಾರಿಯೂ ತಮ್ಮ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವಿತ್ತು. ಅದನ್ನೇ ನೆಪವಾಗಿಸಿಕೊಂಡು ಮೋದಿಯವರ ಆಹ್ವಾನವನ್ನು ತಿರಸ್ಕರಿಸಬಹುದಾಗಿತ್ತಲ್ಲ? ಅವರು ಹಾಗೆ ಮಾಡಲಿಲ್ಲ. ಆಹ್ವಾನವನ್ನು ಸ್ವೀಕರಿಸಿದವರೇ, ತಮ್ಮ ಭಾಷಣದ ವೇಳಾಪಟ್ಟಿಯನ್ನು ಇದೇ ಜನವರಿ ತಿಂಗಳ 20ಕ್ಕೆ ಬದಲಾಯಿಸಿಕೊಂಡರು. ಅದನ್ನು ಮುಗಿಸಿಕೊಂಡು ಕೊಟ್ಟ ಮಾತಿನಂತೆಯೇ ಇಲ್ಲಿಗೆ ಬಂದಿಳಿದಿದ್ದಾರೆ. ಹಾಗಾದರೆ ಅವರನ್ನು ಇಲ್ಲಿಗೆ ಕರೆತಂದದ್ದು ಏನು? ಮೋದಿಯವರ ವರ್ಚಸ್ಸಾ? ಬದಲಾಗುತ್ತಿರುವ ರಾಜಕೀಯ ವಿದ್ಯಮಾನಗಳಾ? ವಿಶ್ಲೇಷಿಸೋಣ.

ನಮ್ಮ ದೇಶದ ಕಾರ್ಯಕ್ರಮಗಳಿಗೆ ಅನ್ಯ ದೇಶದ ಗಣ್ಯರನ್ನು ಆಹ್ವಾನಿಸುವಾಗ ಎರಡು ಮುಖ್ಯ ಮಾನದಂಡಗಳು ಗಣನೆಗೆ ಬರುತ್ತವೆ. ಒಂದು, ಆ ಗಣ್ಯರ ಬರುವಿಕೆಯಿಂದ ದೇಶದೊಳಗೆ ಕ್ಷೋಭೆಯ ವಾತಾವರಣ ಉಂಟಾಗುತ್ತದಾ ಎಂಬುದು. ಎರಡನೆಯದು, ಆ ದೇಶದೊಂದಿಗೆ ದೀರ್ಘಕಾಲೀನ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಲು ಸಾಧ್ಯವಾ ಎಂಬುದು. ಆದ್ದರಿಂದಲೇ ನಾವು ಜಪಾನಿನ ಪ್ರಧಾನಿ ಶಿಂಜೋ ಅಬೆಯವರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿದ್ದೇವೆಯೇ ಹೊರತು ಚೀನಾ ಅಥವಾ ಪಾಕಿಸ್ತಾನವನ್ನು ಕರೆಯುವ ತಂಟೆಗೆ ಹೋಗಿಲ್ಲ! ಇನ್ನು ಅಮೆರಿಕದ ವಿಷಯದಲ್ಲಿ ಮೊದಲನೆಯ ಅಂಶ ಅನ್ವಯವಾಗುವುದಿಲ್ಲವಾದರೂ ರಾಜತಾಂತ್ರಿಕ ಸಂಬಂಧಗಳು ಮೊದಲಿನಿಂದಲೂ ಒಂದೇ ತೆರನಾಗಿಲ್ಲ.

1994ರಲ್ಲಿ ನರಸಿಂಹರಾವ್ ಆರಂಭಿಸಿದ ಭರ್ಜರಿ ಇನ್ನಿಂಗ್ಸ್ ಮುಂದಿನ ಪ್ರಧಾನಿ ಐ.ಕೆ ಗುಜರಾಲ್‍ರ ಅವಧಿಯಲ್ಲಿ ಸ್ವಲ್ಪ ಮಂಕಾಗಿತ್ತು. ನಂತರ ಅಧಿಕಾರಕ್ಕೇರಿದ ವಾಜಪೇಯಿವರು ನಾಲ್ಕು ಬಾರಿ ಅಮೆರಿಕಕ್ಕೆ ಭೇಟಿ ನೀಡಿ ತಂತ್ರಜ್ಞಾನಕ್ಕೆ ಒತ್ತು ಕೊಟ್ಟರು. ಆದರೆ 1998ರ ಪೋಖ್ರಾನ್ ಅಣು ಪರೀಕ್ಷೆಯಿಂದಾಗಿ ಅಮೆರಿಕ ನಮ್ಮ ಮೇಲೆ ಆರ್ಥಿಕ ದಿಗ್ಬಂಧನ ಹೇರಿಬಿಟ್ಟಿತು. ಆಗ ಇಡೀ ವಿಶ್ವದ ಎಲ್ಲ ರಾಷ್ಟ್ರಗಳೂ ನಮ್ಮನ್ನು ಖಂಡಿಸಿದರೂ ನಮ್ಮ ಜೊತೆ ನಿಂತಿದ್ದು ಇಸ್ರೇಲ್ ಮಾತ್ರ! ಇನ್ನು, ವಾಜಪೇಯಿಯವರ ನಂತರ ಬಂದ ‘ಮೌನ’ಮೋಹನ ಸಿಂಗ್‍ರು ಸುಮಾರು ಎಂಟು ಬಾರಿ ತಮ್ಮ ‘ಪುಷ್ಪಕ ವಿಮಾನ’ದಲ್ಲಿ ಅಮೆರಿಕ ಪ್ರವಾಸ ಮಾಡಿದರೂ ಒಂದೊಂದರದ್ದೂ ಒಂದೊಂದು ಕಥೆ! ಅದನ್ನು ಈಗ ಹೇಳಿ ಪ್ರಯೋಜನವಿಲ್ಲ ಬಿಡಿ. ಒಟ್ಟಾರೆ ಕಳೆದ ದಶಕದಲ್ಲಿ ನಮ್ಮನ್ನು ನಾವು ಬೆನ್ನೆಲುಬೇ ಇಲ್ಲದಂತೆ ಬಿಂಬಿಸಿಕೊಂಡ ರೀತಿಯನ್ನು ನೋಡಿದ ಅಮೆರಿಕ ಏನು ಮಾಡಿತ್ತು ಗೊತ್ತೇ? ಚೀನಾಕ್ಕೆ ನೇರವಾಗೇ 'ದಕ್ಷಿಣ ಏಷ್ಯಾ ಪೂರ್ತಿ ನಿನ್ನದೇ' ಎಂದು ಹೇಳಿಬಿಟ್ಟಿತ್ತು.

ಆ ಮಾತಿಗೇ ಕಾದು ನಿಂತಿದ್ದ ಚೀನಾ ಸರಸರನೆ ತನ್ನ ಕುತಂತ್ರದ ಸರಪಳಿ ಹೆಣೆಯತೊಡಗಿತು. ಭಾರತವನ್ನು ಸುತ್ತುವರೆಯಲು ನೌಕಾನೆಲೆಗಳನ್ನು ಸ್ಥಾಪಿಸಿದ್ದೇ ಅಲ್ಲದೆ ನಮ್ಮ ನೆರೆಯ ಪಾಕಿಸ್ತಾನ, ನೇಪಾಳ ಹಾಗೂ ಇತರೆ ದೇಶಗಳೊಂದಿಗೂ ಸಂಬಂಧವನ್ನು ಬಲಗೊಳಿಸಿಕೊಂಡಿತು. ಚೀನಾ ಬರೀ ಏಷ್ಯಾದಲ್ಲಿ ಪ್ರಬಲವಾಗಲು ಹವಣಿಸಿದ್ದರೆ ಅಮೆರಿಕ ಸುಮ್ಮನಿರುತ್ತಿತ್ತೇನೋ, ಆದರೆ ತನ್ನ ನಂ. 1 ಸ್ಥಾನಕ್ಕೇ ಕುತ್ತು ತರಲು ತಯಾರಾಗಿದ್ದನ್ನು ನೋಡಿ ಅದು ಕೆರಳಿತು. ಮುಖ್ಯವಾಗಿ ದಕ್ಷಿಣ ಚೀನಾ ಸಮುದ್ರವನ್ನು, ಅದರಲ್ಲಿರುವ ತೈಲ ನಿಕ್ಷೇಪವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂಬ ಚೀನಾದ ಹವಣಿಕೆಯನ್ನು ಅದು ನಿಷ್ಫಲಗೊಳಿಸಲೇಬೇಕಿತ್ತು! ಆದ್ದರಿಂದ 2010ರಿಂದಲೇ ಚೀನಾವನ್ನು ಹತ್ತಿಕ್ಕಲು ಶುರುಮಾಡಿತು. ಸಿಂಗಪೂರ್, ವಿಯೆಟ್ನಾಂ, ಫಿಲಿಪ್ಪೀನ್ಸ್ ಹಾಗೂ ಥಾಯ್ಲೆಂಡ್‍ಗಳಿಗೆ ತನ್ನ ಸೇನೆಯನ್ನು ಕಳಿಸಿ ಚೀನಾಕ್ಕೆ ಪರೋಕ್ಷವಾಗಿ ಬೆದರಿಕೆಯೊಡ್ಡಿತು. ಕಳೆದ ವರ್ಷ ಆಯ್ಕೆಯಾದ ಭಾರತದ ಹೊಸ ಪ್ರಧಾನಿಗಳನ್ನು ಅರಿತ ಮೇಲೆ ಅದಕ್ಕೂ ತುಸು ನೆಮ್ಮದಿಯಾಗಿರಬೇಕು. ಪರಿಣಾಮವೇ, ಭಾರತದ ಈ ಭೇಟಿ!

ಹಾಗಾದರೆ ಇದರಲ್ಲಿ ನಮ್ಮ ಲಾಭವೇನೂ ಇಲ್ಲವೇ? ಇದೆ. ಆರ್ಥಿಕ, ವ್ಯಾಪಾರ ವಲಯಗಳಲ್ಲಿ ಬಹಳಷ್ಟು ಒಪ್ಪಂದಗಳು ನಡೆದಿವೆ. ಸೌರಶಕ್ತಿಯ ಬಳಕೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸರಬರಾಜು ಹಾಗೂ ಬೇಹುಗಾರಿಕೆಯ ವಲಯಗಳಲ್ಲೂ ಮಹತ್ತರವಾದ ಮೈಲುಗಲ್ಲುಗಳು ಸೃಷ್ಟಿಯಾಗಿವೆ. ಎಲ್ಲಕ್ಕಿಂತ ಮುಖ್ಯವಾದ ಗೆಲುವು ದಕ್ಕಿರುವುದು ಪರಮಾಣು ಒಪ್ಪಂದದಲ್ಲಿ. 2008ರಲ್ಲಿ ನಡೆದಿದ್ದ ಒಪ್ಪಂದದನ್ವಯ ಅಮೆರಿಕ ಭಾರತಕ್ಕೆ ಅಣು ರಿಯಾಕ್ಟರ್‍ಗಳನ್ನು ಪೂರೈಸಬೇಕಿತ್ತು. ಆದರೆ ನಮ್ಮ ಎರಡು ಶರತ್ತುಗಳನ್ನು ಅದು ಒಪ್ಪಿರಲಿಲ್ಲ. ಮೊದಲನೆಯದು, ಏನಾದರೂ ಅವಗಢವಾದ ಪಕ್ಷದಲ್ಲಿ ಭಾರತಕ್ಕೆ ಅಣು ರಿಯಾಕ್ಟರ್‍ಗಳನ್ನು ಸರಬರಾಜು ಮಾಡುವ ಸಂಸ್ಥೆಯ ಹೊಣೆ ಎಷ್ಟಿರುತ್ತದೆಯೋ ಆ ರಿಯಾಕ್ಟರ್‍ಗಳ ಬಿಡಿ ಭಾಗಗಳನ್ನು ಪೂರೈಸುವವರ ಹೊಣೆಗಾರಿಕೆಯೂ ಅಷ್ಟೇ ಇರುತ್ತದೆ ಎಂಬುದು. ಇದರಿಂದಾಗಿ ಅಮೆರಿಕದ ಮೇಲೆ ಬೀಳುವ ವಿಮೆಯ ಹಣದ ಭಾರ ಅಪಾರ. ಎರಡನೆಯದು, ನಮಗೆ ಸರಬರಾಜಾಗುವ ಅಣು ಇಂಧನ ಅಥವಾ ಇತರೆ ಕಚ್ಚಾ ವಸ್ತುಗಳ ಮೇಲೆ ಅಮೆರಿಕ ಬೇಹುಗಾರಿಕೆ ನಡೆಸುವಂತಿಲ್ಲ ಎಂಬುದು. ಈಗ ಒಬಾಮಾ ಅವುಗಳನ್ನು ಒಪ್ಪಿದ್ದಾರೆ!

ಹಾಗೆಂದು ನಾವು ಅತಿಯಾಗಿ ಸಂಭ್ರಮ ಪಡುವಂತೆಯೂ ಇಲ್ಲ. ಒಂದು ಕೈಯಲ್ಲಿ ಮಗುವನ್ನು ಚಿವುಟಿ, ಮತ್ತೊಂದು ಕೈಯ್ಯಲ್ಲಿ ತೊಟ್ಟಿಲನ್ನು ತೂಗುವುದರಲ್ಲಿ ಅಮೆರಿಕ ನಿಸ್ಸೀಮ! ನಾವು ಎಷ್ಟೆಷ್ಟು ಕೇಳಿಕೊಂಡರೂ ಅದು ಪಾಪಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಸರಬರಾಜನ್ನು ನಿಲ್ಲಿಸುವುದಿಲ್ಲ. ಭಾರತ ಹಾಗೂ ರಷ್ಯಾದ ಮಿತೃತ್ವಕ್ಕೆ ಸಡ್ದು ಹೊಡೆಯಲು 1954ರಲ್ಲಿ ಪಾಪಿಸ್ತಾನದ ಕೈ ಹಿಡಿದ ಅಮೆರಿಕಕ್ಕೆ ಇನ್ನೂ ಅದಕ್ಕೆ ವಿಚ್ಛೇದನ ಕೊಡಲು ಸಾಧ್ಯವಾಗಿಲ್ಲ! ‘ಆಂತರಿಕ ಭಯೋತ್ಪಾದನೆಯ ನಿಗ್ರಹಕ್ಕೆ’ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪಾಕ್ ಭಿಕ್ಷೆ ಬೇಡಿದಾಗಲೆಲ್ಲ ಅದರ ಜೋಳಿಗೆಗೆ ಹೊಸ ಆಯುಧಗಳನ್ನು ಸುರಿಯುತ್ತದೆ. ಅವು ಬಲಿತೆಗೆದುಕೊಳ್ಳುವುದು ಭಾರತೀಯ ಸೈನಿಕರು ಹಾಗೂ ನಾಗರಿಕರನ್ನು ಎಂಬುದು ಗೊತ್ತಿದ್ದೂ! ಹಾಗೇ, ಅಫಘಾನಿಸ್ತಾನದಲ್ಲಿರುವ ತನ್ನ ಪಡೆಯನ್ನೂ ಅದು ಹಿಂಪಡೆದುಕೊಳ್ಳುವುದಿಲ್ಲ. ತಾನಾಯಿತು ತನ್ನ ಪಾಡಾಯಿತು ಎಂದು ಸುಮ್ಮನಿರುವುದು ಅದರ ಜಾಯಮಾನದಲ್ಲೇ ಇಲ್ಲ. ಯಾರ ಮನೆ ಬೇಳೆ ಬೆಂದಿದೆ ಯಾರದ್ದು ಬೆಂದಿಲ್ಲ ಎಂಬ ಮಾಹಿತಿ ಅದಕ್ಕೆ ಬೇಕೇ ಬೇಕು.

ಈ ಮಿತಿಗಳ ನಡುವೆಯೂ ಎರಡೂ ದೇಶಗಳ ಸಂಬಂಧ ಹೊಸದಾಗಿ ಚಿಗುರುತ್ತಿದೆ. ನಮ್ಮ ತಾಳಕ್ಕೆ ತಕ್ಕಂತೆ ಹೇಗೆ ಅಮೆರಿಕ ಕುಣಿಯುವುದಿಲ್ಲವೋ, ಅದರ ತಾಳಕ್ಕೆ ತಕ್ಕಂತೆ ನಾವು ಕುಣಿಯುವ ಅಗತ್ಯವೂ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುತ್ತಿದೆ ಮೋದಿ ಸರ್ಕಾರ. ಇಲ್ಲಿ ಒಂದು ವಿಷಯವನ್ನು ನಾವು ಗಮನಿಸಬೇಕು. ಎಲ್ಲ ದೇಶಗಳ ನೇತಾರರಿಗೂ ಅಂತಿಮವಾಗಿ ಮುಖ್ಯವಾಗುವುದು ತಮ್ಮ ದೇಶದ ಹಿತಾಸಕ್ತಿಯೇ. ಅದಕ್ಕೆ ಧಕ್ಕೆ ತರುವವರನ್ನು ಜಾಣ್ಮೆಯಿಂದ ನಿಭಾಯಿಸುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಇಷ್ಟು ದಶಕಗಳ ಬಳಿಕ ಅಂಥ ಚತುರ ಕಲೆಗಾರಿಕೆಯ ನೇತಾರ ನಮಗೆ ಸಿಕ್ಕಿದ್ದಾರೆ. ಜಿನ್‍ಪಿಂಗ್ ಬಂದು ಹೋದ ಬೆನ್ನಲ್ಲೇ ಒಬಾಮಾ ಬಂದಿದ್ದಾರೆ. ಇನ್ನುಳಿದಿರುವುದು ಸಂದರ್ಭಾನುಸಾರ ನಮ್ಮ ಹಿತಾಸಕ್ತಿಯನ್ನು ಪೋಷಿಸಿಕೊಂಡು ಹೋಗುವುದಷ್ಟೇ!ನಮ್ಮ ಪ್ರಧಾನಿ ರಾಜನೀತಿಯ ಹದವನ್ನರಿತು ವಿದೇಶಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುತ್ತಿದ್ದಾರೆ. ಇಲ್ಲಿಗೆ ಬರಲು ಒಬಾಮಾರಿಗೆ ಸಾಕಷ್ಟು ರಾಜತಾಂತ್ರಿಕ ಕಾರಣಗಳಿರಬಹುದು. ಆದರೆ ಅವರ ಬಾಯಿಂದಲೇ ‘ಯೂ ಆರ್ ಎ ಮ್ಯಾನ್ ಆಫ್ ಆಕ್ಷನ್’ ಎಂದು ಮುಕ್ತವಾಗಿ ಹೊಗಳಿಸಿಕೊಂಡ ನಮ್ಮ ಪ್ರಭಾವಿ ಪ್ರಧಾನಿಗಳೂ ಒಂದು ಮುಖ್ಯ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ!
ಪರಮಾಣು ಒಪ್ಪಂದದ ಹೆಗ್ಗಳಿಗೆ ತಮಗೇ ಸೇರಬೇಕು ಎಂದು ಕಾಂಗ್ರೆಸ್ ಮಂದಿ ಬಾಯಿಮಾಡುತ್ತಿದ್ದಾರೆ. 2008ರಲ್ಲಿ ಇದೇ ಒಪ್ಪಂದಕ್ಕೆ ಸಹಿ ಮಾಡಬೇಡಿ ಎಂದು ಸೋನಿಯಾ ಹಟ ಹಿಡಿದಿದ್ದನ್ನು, ಬೇಸತ್ತ ಮನಮೋಹನ್ ಸಿಂಗ್ ರಾಜೀನಾಮೆಯ ಧಮಕಿ ನೀಡಿದ್ದನ್ನು ಕಾಂಗ್ರೆಸ್ ಮರೆತಿದೆಯೇ? ಅಂದು ಸೋನಿಯಾರ ವಿರೋಧದ ನಡುವೆಯೂ ನಡೆದ ಒಪ್ಪಂದ ನಂತರ ಅಲ್ಲೇ ಕಾಲು ಮುರಿದುಕೊಂಡು ಕುಳಿತಿತೇಕೆ?

ವಿದೇಶೀ ವಿಶ್ವವಿದ್ಯಾಲಯಗಳ ಪದವಿ, ಬಿರುದುಗಳಿಂದ ಸಾಧಿಸಲಾಗದ್ದನ್ನು ಪ್ರಭಾವಿ ವ್ಯಕ್ತಿತ್ವದಿಂದ ಸಾಧಿಸಬಹುದು! ಅಮ್ಮನ ಸೆರಗಿನಲ್ಲಿ ಅವಿತುಕೊಳ್ಳುವವರಿಂದ ಇಂಥ ಫಲಿತಾಂಶಗಳನ್ನು ನಿರೀಕ್ಷಿಸಲು ಸಾಧ್ಯವೇ? 

No comments:

Post a Comment