Tuesday 10 February 2015

ಗಂಡೆದೆಯ ಕಾರ್ಯಾಚರಣೆಯನ್ನು ನಡೆಸುವುದು ‘ಬೇಬಿ’ಯಂಥ ತಂಡವೇ!

BABY! ಇದು ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಚಿತ್ರ. ಚಿತ್ರದ ಹೆಸರು ಸೂಚಿಸುವಂತೆ ಇದು ಯಾವ ಮಗುವಿನ ಕಥೆಯೂ ಅಲ್ಲ, ಬದಲಿಗೆ, ಉಗ್ರರನ್ನು ಹಿಡಿಯುವ ಕಮಾಂಡೋಗಳ ತಂಡದ ಹೆಸರು! ಇದು,  ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡ ಇಂಡಿಯನ್ ಮುಜಾಹಿದ್ದೀನ್‍ನ ಉಗ್ರನೊಬ್ಬನನ್ನು ಹಿಡಿಯಲು ಹರಸಾಹಸ ಪಡುವ ಭಾರತೀಯ ಕಮಾಂಡೋಗಳ ಕಥೆ. ಕಾರ್ಯಾಚರಣೆಯೊಂದನ್ನು ಹೆಣೆದು ಯಶಸ್ವಿಗೊಳಿಸಲು ಎಷ್ಟೆಲ್ಲಾ ತಿಣುಕಾಡಬೇಕಾಗುತ್ತದೆ ಎಂಬುದರಿಂದ ಹಿಡಿದು ಉಗ್ರವಾದದ ಹಿಂದಿರುವ ಪಾಕಿಸ್ತಾನದ ಕೈವಾಡದವರೆಗಿನ ಎಲ್ಲವನ್ನೂ ಈ ಚಿತ್ರ ಬಹಳ ಚೆನ್ನಾಗಿ ಬೆತ್ತಲಾಗಿಸುತ್ತದೆ. ಆದ್ದರಿಂದಲೇ ಇದು ಪಾಕಿಸ್ತಾನದಲ್ಲಿ ನಿಷೇಧಿಸಲ್ಪಟ್ಟಿದೆ! ಅದಿರಲಿ, ಮಹತ್ವದ ವಿಷಯವೇನೆಂದರೆ ಈ ಚಿತ್ರದಲ್ಲಿ ಬರುವ ಕಥೆ ಕಾಲ್ಪನಿಕವಾದುದಲ್ಲ. ತಮ್ಮ ಮನೆ-ಮಠ, ಸಂಸಾರ, ಕೊನೆಗೆ ಅಸ್ತಿತ್ವವನ್ನೇ ಒತ್ತೆಯಿಟ್ಟು ಹೋರಾಡುತ್ತಾರಲ್ಲ ಕಮಾಂಡೋಗಳು, ಆ ಪಾತ್ರಗಳನ್ನು ನಮ್ಮಲ್ಲಿ ಹುಚ್ಚು ಆವೇಶ ತುಂಬಲು ಸುಮ್ಮನೆ ಸೃಷ್ಟಿಸಿಲ್ಲ. ನಿಮಗೆ ಗೊತ್ತಿರಲಿ, ಸಿಕ್ಕಿಬೀಳುವ ಪ್ರತಿಯೊಬ್ಬ ಉಗ್ರನ ಹಿಂದೆಯೂ 'ಬೇಬಿ'ಯಂಥ ತಂಡದ ಕೈವಾಡವಿದ್ದೇ ಇರುತ್ತದೆ. ಅಂಥದ್ದೇ ಒಂದು ತಂಡ 2013ರಲ್ಲಿ ರೋಚಕ ಕಾರ್ಯಾಚರಣೆಯೊಂದನ್ನು ನಡೆಸಿತ್ತು. ಪರಿಣಾಮವೇ ಯಾಸಿನ್ ಭಟ್ಕಳ್‍ನ ಬಂಧನ!


ಯಾಸಿನ್ ಭಟ್ಕಳ್‍‍ನ ಜಾತಕ ನಿಮಗೆ ಗೊತ್ತಿದೆಯಲ್ಲವೇ? ಅವನು ಇಂಡಿಯನ್ ಮುಜಾಹಿದ್ದೀನ್ ಎಂಬ ಉಗ್ರ ಸಂಘಟನೆಯ ಮೂಲ ಶಕ್ತಿಯಾಗಿದ್ದುದು ಮಾತ್ರವಲ್ಲ, ತನ್ನ ಮೇಲೆ ಸುಮಾರು ಮೂರೂವರೆ ಕೋಟಿ ರೂಪಾಯಿಗಳ ಇನಾಮು ಹೊಂದಿದ್ದ! ಹನ್ನೆರಡಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಾತಕವೆಸಗಿ, ನೂರಾರು ಜನರ ಸಾವಿಗೆ ಕಾರಣನಾಗಿ, ಇಗೋ ಸೆರೆ ಸಿಕ್ಕ ಎನ್ನುವಷ್ಟರಲ್ಲಿ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುವ ನಿಸ್ಸೀಮನೂ ಆಗಿದ್ದ. ಅಂಥವನನ್ನು ನಮ್ಮ ವಿಶೇಷ ಕಾರ್ಯಾಚರಣೆ ಪಡೆ ಬಂಧಿಸಿದ್ದು ಹೇಗೆ ಎಂಬ ಕುತೂಹಲ ಮೂಡುವುದು ಸಹಜವಲ್ಲವೇ? ಕೆದಕುತ್ತ ಹೋದಾಗ ಉತ್ತರದ ರೂಪದಲ್ಲಿ ಸಿಕ್ಕ, ಓಪನ್ ಎಂಬ ನಿಯತಕಾಲಿಕದ ಲೇಖನದ ಆಯ್ದ ಭಾಗ ನಿಮ್ಮ ಓದಿಗಾಗಿ ಇಲ್ಲಿದೆ.


ಅದು 2013ರ ಆಗಸ್ಟ್ ತಿಂಗಳ 13ನೇ ತಾರೀಖು. ಗುಪ್ತಚರ ದಳದ(IB) ಜಂಟಿ ನಿರ್ದೇಶಕರು ಬಿಹಾರದ ರಾಜಧಾನಿ ಪಾಟ್ನಾದ ತಮ್ಮ ಆಫೀಸಿನಲ್ಲಿ ಒಂದು ಸಭೆ ನಡೆಸುತ್ತಿದ್ದರು. ಏನಾಗಿತ್ತೆಂದರೆ, ಇಶ್ರತ್ ಜಹಾನ್‍ಳ ಎನ್‍ಕೌಂಟರ್ ನಕಲಿಯೆಂದು ಬೊಬ್ಬೆ ಹೊಡೆಯುತ್ತಿದ್ದ ಕೇಂದ್ರೀಯ ತನಿಖಾ ದಳ(CBI), ಆರೋಪವನ್ನೆಲ್ಲ ಗುಪ್ತಚರ ದಳದ ಮೇಲೆ ಹೊರಿಸಿ ಕೈತೊಳೆದುಕೊಂಡು ಬಿಟ್ಟಿತ್ತು. ಆ ವಿಷಯವಾಗಿಯೇ ಜಂಟಿ ನಿರ್ದೇಶಕರು ತಮ್ಮ ಕೈಕೆಳಗಿನ ಅಧಿಕಾರಿಗಳ ಜೊತೆ ಚರ್ಚಿಸುತ್ತಿದ್ದರು. ತಮ್ಮ ಸಿಬ್ಬಂದಿಯ ಕುಗ್ಗಿದ್ದ ಮನೋಬಲವನ್ನು ಹೆಚ್ಚಿಸುವುದರಲ್ಲಿ ಮಗ್ನರಾಗಿದ್ದರು. ಆಗ ಇದ್ದಕ್ಕಿದ್ದಂತೆಯೇ ಆ ಅಧಿಕಾರಿಗಳ ಪೈಕಿ ಒಬ್ಬರ ಫೋನ್ ರಿಂಗಣಿಸಿತು. ಕರೆ ಮಾಡುತ್ತಿರುವವರು ಯಾರೆಂದು ನೋಡಿದೊಡನೆಯೇ ಆತ ರೂಮಿನಿಂದ ಹೊರಗೆ ಓಡಿದರು! ಅತ್ತ ಕಡೆಯವರು ಹೇಳಿದ ವಿಷಯವನ್ನು ಕೇಳಿ ಅವಾಕ್ಕಾದರು. ಅವರಿಗೆ ಕರೆ ಮಾಡಿದ್ದು ಮತ್ತ್ಯಾರೂ ಅಲ್ಲ, ಪಕ್ಕದ ನೇಪಾಳದ ಪೋಖ್ರಾ ಎಂಬ ಊರಿನಲ್ಲಿದ್ದ ಅವರ ರಹಸ್ಯ ಮಾಹಿತಿದಾರ. ಕರೆ ಮಾಡಿದ್ದ ಕಾರಣವೇನು ಗೊತ್ತೇ? ಯಾಸಿನ್ ಭಟ್ಕಳ್‍ನನ್ನು ತಾನು ಈಗಷ್ಟೇ ನೋಡಿದೆ ಎಂದು ಹೇಳಲು! ಅವನ ಪ್ರಕಾರ ಯಾಸಿನ್ ತನ್ನನ್ನು ಡಾಕ್ಟರ್ ಯೂಸುಫ್ ಎಂದು ಪರಿಚಯಿಸಿಕೊಂಡು ತಾನೊಬ್ಬ ಯುನಾನಿ ವೈದ್ಯ ಎಂದು ಹೇಳಿಕೊಳ್ಳುತ್ತಿದ್ದನಂತೆ.ನಾನು ಕಳಿಸಿದ ಫೋಟೋದಲ್ಲಿರುವ ವ್ಯಕ್ತಿಯ ಹಾಗೇ ಕಾಣುತ್ತಾನೆ ಅಲ್ಲವೇ ನೋಡಲು?’ ಎಂದು ಆ ಅಧಿಕಾರಿ ಕೇಳಿದಾಗ ಮಾಹಿತಿದಾರ ಖಡಾಖಂಡಿತವಾಗಿ ಹೇಳಿಬಿಟ್ಟ. 'ಫೋಟೋದಲ್ಲಿರುವಂತೆ ಗಡ್ಡ ಬಿಟ್ಟಿಲ್ಲ, ನುಣ್ಣಗೆ ಬೋಳಿಸಿಕೊಂಡಿದ್ದಾನೆ. ಆದರೆ ಕಣ್ಣುಗಳು ಮಾತ್ರ ಅವೇ. ಸಂಶಯವೇ ಇಲ್ಲ. ತನ್ನ ಹೆಂಡತಿ ದೆಹಲಿಯಲ್ಲಿದ್ದಾಳೆ ಹಾಗೂ ತಂದೆ-ತಾಯಿ ದುಬೈನಲ್ಲಿದ್ದಾರೆ ಎಂದೂ ಹೇಳುತ್ತಾನೆ' ಎಂದು. ಇಷ್ಟು ಕೇಳಿದ್ದೇ, ಅವನಿಗೆ ಧನ್ಯವಾದ ಹೇಳಿ ಮತ್ತೆ ಒಳಗೆ ಓಡಿದರು ಆ ಅಧಿಕಾರಿ.

ವಿಷಯವನ್ನು ತಮ್ಮ ಮೇಲಾಧಿಕಾರಿಗೆ ಹೇಳುತ್ತಿದ್ದಂತೆಯೇ ಅವರು ತಮ್ಮ ಮೇಲಿನವರಿಗೂ ಆಗಲೇ ಸುದ್ದಿ ಮುಟ್ಟಿಸಿದರು. ಅವನೇ ಯಾಸಿನ್ ಎಂಬುದು ಎಲ್ಲರಿಗೂ ಖಾತ್ರಿಯಾಗಿತ್ತು. ಏಕೆಂದರೆ ಯುನಾನಿ ವೈದ್ಯನಾಗಿ ವೇಷ ಮರೆಸಿಕೊಳ್ಳುವುದು ಯಾಸಿನ್‍ನ ಹೆಗ್ಗುರುತಾಗಿತ್ತು. ಅವನ ಹೆಂಡತಿ ಮತ್ತು ತಂದೆ-ತಾಯಿಯರು ಇದ್ದ ಸ್ಥಳದ ಬಗ್ಗೆ ಅವನು ಕೊಟ್ಟಿದ್ದ ಮಾಹಿತಿಯೂ ಸರಿಯಾಗಿಯೇ ಇತ್ತು. ಆದರೂ ದೆಹಲಿಯ ಉನ್ನತಾಧಿಕಾರಿಗಳಿಗೆ ನಂಬಿಕೆ ಬರಲಿಲ್ಲ. ಇಶ್ರತ್‍ಳ ಪ್ರಕರಣದಲ್ಲಿ ಛಡಿಯೇಟು ತಿಂದಿದ್ದವರು ಇದಕ್ಕೆ ಹೇಗೆ ಕೈ ಹಾಕಿಯಾರು? ಆ ಅಧಿಕಾರಿಯೂ ಬಿಡಲಿಲ್ಲ. 'ಸರ್, ಈ ಅವಕಾಶವನ್ನು ಕೈಚೆಲ್ಲುವುದು ಮೂರ್ಖತನವಾದೀತು. ನನ್ನ ಮಾಹಿತಿದಾರ ಹೇಳಿದ್ದನ್ನು ಅಲ್ಲಗಳೆಯುವಂತಿಲ್ಲ, ಹೇಗಾದರೂ ಮಾಡಿ ದೆಹಲಿಯವರನ್ನು ಒಪಿಸಿ' ಎಂದು ದುಂಬಾಲು ಬಿದ್ದರು. ಮತ್ತೊಮ್ಮೆ ದೆಹಲಿಯ ಬಾಗಿಲು ಬಡಿದ ಜಂಟಿ ನಿರ್ದೇಶಕರಿಗೆ ಕೊನೆಗೂ ಹಲವು ಶರತ್ತುಗಳೊಂದಿಗೆ ಒಪ್ಪಿಗೆ ದೊರೆಯಿತು.

ಈ ಕಾರ್ಯಾಚರಣೆ ಎಲ್ಲೂ ಔಪಚಾರಿಕವಾಗಿ ದಾಖಲಾಗುವಂತಿರಲಿಲ್ಲ. ಕಾರ್ಯಾಚರಣೆಗೆ ಹೋಗುವವರು ತಮ್ಮ ಗುರುತಿನ ಚೀಟಿಗಳನ್ನೂ ಕೊಂಡೊಯ್ಯುವಂತಿರಲಿಲ್ಲ. ಜೀವ ಹೋಗಿಬಿಟ್ಟರಂತೂ ಸರಿಯೇ ಸರಿ, ಒಂದೊಮ್ಮೆ ಬದುಕಿ ಯಾರ ಕೈಗಾದರೂ ಸಿಕ್ಕಿ ಜೈಲು ಪಾಲಾದರೆ ತಮ್ಮ ನಿಜ ನಾಮಧೇಯ, ಕೆಲಸ ಇತ್ಯಾದಿಗಳ ಬಗ್ಗೆ ಬಾಯಿ ಬಿಡುವಂತಿರಲಿಲ್ಲ. ಇವರು ಸೋತರೆ, ಜಂಟಿ ನಿರ್ದೇಶಕರ ಕೆಲಸಕ್ಕೂ ಕುತ್ತು ಕಾದಿತ್ತು. ವಿಶೇಷ ಕಾರ್ಯಾಚರಣೆ ಪಡೆಯ ಮುಖ್ಯಸ್ಥರಾಗಿದ್ದ ಆ ಅಧಿಕಾರಿ ಎಲ್ಲದಕ್ಕೂ ಕಣ್ಮುಚ್ಚಿ ಹೂಂ ಎಂದರು. ತಮ್ಮೊಡನೆ ಇನ್ನೂ ನಾಲ್ಕು ಜನರನ್ನು ಸೇರಿಸಿಕೊಂಡು ಐವರ ತಂಡವನ್ನು ಕಟ್ಟಿಕೊಂಡರು. ಜೊತೆಗೆ ಬಿಹಾರ ಹಾಗೂ ನೇಪಾಳದ ಗಡಿಗಳ ಪರಿಚಯವಿದ್ದ ಪೋಲೀಸ್ ಅಧಿಕಾರಿಯೊಬ್ಬರನ್ನು ಜೊತೆಗೆ ಹೊರಡಿಸಿಕೊಂಡರು.

ವಿಶೇಷ ಕಾರ್ಯಾಚರಣೆ ಪಡೆಯೇನೋ ಸಿದ್ಧವಾಯಿತು, ಆದರೆ ಹೋಗಿ ಬರುವ ಖರ್ಚು-ವೆಚ್ಚ? ಒಪ್ಪಿಗೆ ದೊರೆತದ್ದೇ ದೊಡ್ಡ ವಿಷಯ, ಇನ್ನು ಖರ್ಚಿಗೆ ದುಡ್ಡು ಕೇಳಿದರೆ ಕೊಡುತ್ತಾರೆಯೇ ಎಂದು ಅನುಮಾನಿಸಿದ ಅಧಿಕಾರಿ ತಾವೇ ಗೆಳೆಯರ ಬಳಿ 40 ಸಾವಿರ ರೂಪಾಯಿಗಳನ್ನು ಎರವಲು ಪಡೆದರು! ಜೊತೆಗಿದ್ದ ಪೋಲೀಸ್ ಅಧಿಕಾರಿಯೂ 80 ಸಾವಿರ ರೂಪಾಯಿಗಳ ವ್ಯವಸ್ಥೆ ಮಾಡಿದರು. ಅಂದ ಹಾಗೆ, ಕಾರ್ಯಾಚರಣೆಗಿಳಿದಾಗ ತಮ್ಮ ಸಂಬಳದ ಹಣವನ್ನು ಹೀಗೆ ಖರ್ಚು ಮಾಡುವುದು ವಿಶೇಷ ಪಡೆಯ ಅಧಿಕಾರಿಗಳ ಮಾಮೂಲು ಅಭ್ಯಾಸವಂತೆ. ಹಾಗಂತ ಅವರೇನು ಪ್ರತಿ ತಿಂಗಳೂ ಲಕ್ಷಗಟ್ಟಳೆ ಎಣಿಸುವವರಲ್ಲ. ಆದರೆ ಅವರ ಧಮನಿಗಳಲ್ಲಿ ರಕ್ತಕ್ಕಿಂತ ಹೆಚ್ಚಾಗಿ ಹರಿಯುವ ದೇಶಪ್ರೇಮ ಅವರನ್ನು ಬಿಡಬೇಕಲ್ಲ?

ಅಂದು ಆಗಸ್ಟ್ 20ನೇ ತಾರೀಖು. ಆ ತಂಡ ಎರಡು ಜೀಪುಗಳಲ್ಲಿ ನೇಪಾಳದ ಪೋಖ್ರಾಗೆ ಹೊರಟಿತು. ಪೋಲೀಸ್ ಅಧಿಕಾರಿಯನ್ನು ತಮ್ಮ ಜೊತೆ ಸೇರಿಸಿಕೊಂಡಿದ್ದ ವಿಷಯ ಆ ಐವರನ್ನು ಬಿಟ್ಟರೆ ಮತ್ತ್ಯಾರಿಗೂ ಗೊತ್ತಿರಲಿಲ್ಲ. ಪೋಖ್ರಾ ತಲುಪಿದೊಡನೆ ಗುಂಪಿನ ನೇತೃತ್ವ ವಹಿಸಿದ್ದ ಅಧಿಕಾರಿ ಮಾಡಿದ ಮೊತ್ತ ಮೊದಲ ಕೆಲಸ, ಆ ಮಾಹಿತಿದಾರನನ್ನು ಖುದ್ದು ಭೇಟಿಯಾಗಿದ್ದು. ಎಕೆಂದರೆ ಇಲ್ಲಿಯತನಕ ಅವನೊಡನೆ ಮಾತನಾಡಿದ್ದರೇ ವಿನಾ ಅವನನ್ನು ನೋಡಿರಲಿಲ್ಲ. ಅವನು ಸುಳ್ಳು ಮಾಹಿತಿ ನೀಡಿ ಇವರನ್ನು ಸಿಕ್ಕಿಸುವ ಸಾಧ್ಯತೆಯೂ ಬಹಳಷ್ಟಿತ್ತು. ಅವನೊಡನೆ ಮಾತನಾಡಿದ ಮೇಲೇ ಅವರಿಗೆ ನಿರಾಳವಾಗಿದ್ದು. ಇನ್ನು ಮುಂದಿನ ಕೆಲಸ ಯಾಸಿನ್‍ನ ಅಡಗುತಾಣವನ್ನು ಪತ್ತೆ ಮಾಡುವುದು.

ಯಾಸಿನ್‍‍ನನ್ನು ತಲುಪಲು ಅವನಿಗೆ ಆಪ್ತನಾಗಿದ್ದ ಅಬ್ದುಲ್ಲಾ ಎಂಬಾತನ ನೆರವಿನ ಅಗತ್ಯವಿತ್ತು. ಅಬ್ದುಲ್ಲಾನಿಗೆ ಗಾಳ ಹಾಕಲು ಆ ಅಧಿಕಾರಿ ಮತ್ತೆ ಮಾಹಿತಿದಾರನನ್ನೇ ಉಪಯೋಗಿಸಿಕೊಂಡರು. ವೈದ್ಯನ ಬಳಿ ಹೋಗುವವನು ರೋಗಿಯೇ ತಾನೆ? ತನಗೆ ಹುಷಾರಿಲ್ಲವೆಂದೂ, ತಾನು ಯುನಾನಿ ಔಷಧಿಯನ್ನು ಮಾತ್ರ ತೆಗೆದುಕೊಳ್ಳುತ್ತೇನೆಂದೂ ಅವನು ಹೇಳಿದಾಗ ಅಬ್ದುಲ್ಲಾ ಅವನನ್ನು ವೈದ್ಯರ ಬಳಿ ಕರೆದೊಯ್ಯಲು ಒಪ್ಪಿದ. ಇದಕ್ಕಾಗಿಯೇ ಹೊಂಚು ಹಾಕಿ ಕಾದಿದ್ದ ತಂಡ ಅವರಿಬ್ಬರನ್ನು ಹಿಂಬಾಲಿಸಿತು. ಬಾಡಿಗೆ ಮೋಟಾರ್‍ಬೈಕುಗಳ ಮೇಲೆ, ಟೀ ಶರ್ಟ್ ಹಾಗೂ ಬರ್ಮುಡಾಗಳನ್ನು ತೊಟ್ಟು ಹೊರಟ ಇವರನ್ನು ಪೋಲೀಸರು ಎಂದು ದೇವರಾಣೆಗೂ ಹೇಳಲು ಸಾಧ್ಯವಿರಲಿಲ್ಲ. ಕಾರಿನಲ್ಲಿ ಮುಂದೆ ಹೊರಟ ಅಬ್ದುಲ್ಲಾ ಮತ್ತು ಆ ಮಾಹಿತಿದಾರ ಹೋಗಿ ತಲುಪಿದ್ದು ಹೆದ್ದಾರಿಯ ಅಂಚಿನಲ್ಲಿದ್ದ ಮನೆಯೊಂದನ್ನು.

ಆ ಮಾಹಿತಿದಾರನೇನೂ ಸುಮ್ಮನೆ ಹೋಗಿರಲಿಲ್ಲ. ಅವನಿಗೂ ಕೆಲವು ಹೋಂವರ್ಕ್ ಗಳನ್ನು ನೀಡಿ ಕಳಿಸಲಾಗಿತ್ತು. ವೈದ್ಯರ ಧ್ವನಿಯನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ತರುವುದು ಒಂದಾದರೆ, ಅವರ ಹಣೆಯ ಮೇಲೆ ಗಾಯದ ಗುರುತಿದೆಯಾ ಎಂಬುದನ್ನು ಗಮನಿಸುವುದು ಇನ್ನೊಂದು. ಇಷ್ಟೆಲ್ಲ ಮೊದಲ ಭೇಟಿಯಲ್ಲೇ ಸಾಧ್ಯವಾಗುತ್ತದೆಂಬ ಭರವಸೆಯಂತೂ ಇರಲಿಲ್ಲ. ಅಂತೂ ಆಗಸ್ಟ್ 24ರಂದು ವೈದ್ಯರ ಧ್ವನಿಮುದ್ರಣ ಸಿಕ್ಕಿತು. ಅದನ್ನು ಕೇಳಿದೊಡನೆ ಆ ವೈದ್ಯರೇ ಯಾಸಿನ್ ಸಾಹೇಬರು ಎಂಬುದು ಖಾತ್ರಿಯಾಯಿತು. ತಕ್ಷಣವೇ ಜಂಟಿ ನಿರ್ದೇಶಕರಿಗೆ ಫೋನಾಯಿಸಿದರು ಅಧಿಕಾರಿ. 'ನಿಜ ತಾನೆ?' ಎಂಬ ಅವರ ಪ್ರಶ್ನೆಗೆ '200 ಪ್ರತಿಶತ ನಿಜ ಸರ್' ಎಂಬ ಉತ್ತರವನ್ನಿತ್ತರು. ನಿಖರತೆಯ ಪ್ರಾಮುಖ್ಯದ ಅರಿವು ಇಬ್ಬರಿಗೂ ಇತ್ತು. ಬೇರೊಂದು ದೇಶಕ್ಕೆ ಹೋಗಿ, ಬರೀ ಅನುಮಾನದ ಆಧಾರದ ಮೇಲೆ ಯಾರನ್ನೂ ಬಂಧಿಸುವುದು ಸಾಧ್ಯವಿರಲಿಲ್ಲ. ಒಂದು ಪಕ್ಷ ಅವರು ನಿರಪರಾಧಿಯೆಂಬುದು ಸಾಬೀತಾದರೆ ಇವರಿಗೆ ಉಳಿಗಾಲವಿರಲಿಲ್ಲ.

ಯಾಸಿನ್‍ನನ್ನು 'ಎತ್ತಿಹಾಕಿಕೊಂಡು' ಬರಲು ಇವರೇನೋ ತಯಾರಿದ್ದರು, ಅದರೆ ದೆಹಲಿಯವರು ಹೂಂ ಅನ್ನಬೇಕಲ್ಲ? ಬದಲಿಗೆ ನೇಪಾಳ ಸರ್ಕಾರದೊಂದಿಗೆ ತಕ್ಷಣವೇ ಮಾತುಕತೆ ನಡೆಸಿ ಅಲ್ಲಿಯ ಪೋಲೀಸರಿಗೆ ಮಾಹಿತಿ ರವಾನಿಸಿದರು. ಆಗಲೂ ನಮ್ಮ ತಂಡಕ್ಕೆ ಸಿಕ್ಕಿದ್ದು ಬರೀ ಶರತ್ತುಗಳೇ. ನೇಪಾಳದ ಪೋಲೀಸರು ಅವನನ್ನು ಹಿಡಿಯುವ ತನಕ ನಮ್ಮವರು ಮಧ್ಯ ಪ್ರವೇಶಿಸಬಾರದು. ಅವನು ನಿರಪರಾಧಿಯೆಂದು ಸಾಬೀತಾದರೆ ಅವನನ್ನು ಬಿಟ್ಟುಬಿಡಬೇಕು ಇತ್ಯಾದಿ. ಕಾರ್ಯಾಚರಣೆಯನ್ನು ರಾತ್ರಿಯೇ ನಡೆಸಬೇಕು ಎಂಬ ಕಟ್ಟಪ್ಪಣೆ ಬೇರೆ. ಅಂತೂ 28ರ ದಿನಾಂಕ ನಿಗದಿಯಾಯಿತು. ದುರದೃಷ್ಟವೆಂಬಂತೆ ಅಂದು ಸಂಜೆಯಿಂದಲೇ ಧಾರಾಕಾರ ಮಳೆ ಶುರುವಾಯಿತು. ನೇಪಾಳದ ಪೋಲೀಸರು ‘ಇವತ್ತು ಬೇಡ, ಮಳೆಯಿದೆ’ ಎಂದುಬಿಟ್ಟರು. ನಮ್ಮವರ ಹಟದಿಂದ ಅಂತೂ ರಾತ್ರಿ ಎಂಟು ಘಂಟೆಗೆ ಮನೆಯೊಳಗೆ ಹೋದರು. ಅತ್ತ ಅವರು ಹೋದರೆ ಇತ್ತ ಇವರು ಹೊರಗೆ ಚಾತಕ ಪಕ್ಷಿಗಳಂತೆ ಕಾಯುತ್ತ ನಿಂತರು. ಸುಮಾರು ಹತ್ತು ಘಂಟೆಗೆ ನೇಪಾಳದ ಭಾರತೀಯ ದೂತಾವಾಸ ಕಚೇರಿಯಿಂದ ನಮ್ಮ ಪೋಲೀಸರಿಗೆ ಫೋನ್ ಬಂತು. ಮಾತನಾಡಿದ್ದು ಭಾರತೀಯ ಪೋಲೀಸ್ ಅಧಿಕಾರಿಯೇ. 'ಸುಮ್ಮನೆ ನಿರಪರಾಧಿಯನ್ನು ಹಿಡಿದಿದ್ದೀರ. ಅವನೊಬ್ಬ ಸಾಮಾನ್ಯ ಟರ್ಬೈನ್ ಎಂಜಿನಿಯರ್' ಎಂದು ರೇಗಿದರು ಆತ. ಇವರಿಗೂ ರೇಗಿ ಹೋಯಿತು. 'ನೀವು ಐಪಿಎಸ್ ಮಾಡಿರುವುದೇ ನಿಜವಾದರೆ, ಒಬ್ಬ ಯುನಾನಿ ವೈದ್ಯ ತನ್ನನ್ನು ಟರ್ಬೈನ್ ಇಂಜಿನಿಯರ್ ಎಂದು ಹೇಳಿದಾಗಲೇ ನಿಮಗೆ ಅರ್ಥವಾಗಬೇಕು' ಎಂದು ಮಾರುತ್ತರ ನೀಡಿದರು. ಹತ್ತು ನಿಮಿಷಗಳ ನಂತರ ಯಾಸಿನ್‍ನೊಂದಿಗೆ ಹೊರಬಂದರು ಪೋಲೀಸರು. ಕಾದಿದ್ದ ನಮ್ಮವರು ಅವನ ಮೇಲೆರಗುತ್ತಿದ್ದಂತೆಯೇ ಅವನು ತನ್ನ ನಿಜ ಪರಿಚಯವನ್ನು ಹೇಳಿಕೊಂಡ. ಅವನ ಜೊತೆ ಸಿಮಿ ಸಂಘಟನೆಯ ಅಸಾದುಲ್ಲ ಅಖ್ತರ್‍ನೂ ಸೆರೆ ಸಿಕ್ಕ. ಇಬ್ಬರನ್ನೂ ಹಿಡಿದು ಇನ್ನೂ ಸರಿಯಾಗಿ ಗಡಿಯವರೆಗೂ ತಂದಿರಲಿಲ್ಲ, ಅಷ್ಟರಲ್ಲೇ ನಮ್ಮ ಗೃಹ ಸಚಿವಾಲಯ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗಳು ತಾವೇ ಅವನನ್ನು ಹಿಡಿದದ್ದು ಎಂದು ಬೆನ್ನುತಟ್ಟಿಕೊಳ್ಳುವ ಪೈಪೋಟಿಗೆ ಬಿದ್ದಿದ್ದವು!


 ಹೀಗೆ ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಂಡು ಯಾಸಿನ್‍ನನ್ನು ಸೆರೆ ಹಿಡಿದವರಿಗೆ ಸಿಕ್ಕಿದ್ದೇನು ಗೊತ್ತೇ? ಗುಪ್ತಚರ ದಳದ ಜಂಟಿ ನಿರ್ದೇಶಕರಿಗೆ ಒಂದು ಪ್ರಶಸ್ತಿ ಪತ್ರ ಹಾಗೂ ವಿಶೇಷ ಪಡೆಯ ಅಧಿಕಾರಿಗೆ ಒಂದು ಲಕ್ಷ ರೂಪಾಯಿಗಳ ನಗದು! ಮೊದಲು ಆತನಿಗೆ ಮೂರುವರೆ ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದ್ದ ಸುಶೀಲ್ ಶಿಂಧೆಯವರ ಗೃಹ ಸಚಿವಾಲಯ ನಂತರ ಅದನ್ನು ನಾಚಿಕೆಯಿಲ್ಲದೆ ಹಿಂಪಡೆಯಿತು. ಅದು ನೀಡಿದ ಕಾರಣ, ಆತ ಮಾಡಿದ್ದು ತಮ್ಮ ಕರ್ತವ್ಯವನ್ನೇ, ಅದರಲ್ಲೇನೂ ಹೆಚ್ಚುಗಾರಿಕೆಯಿಲ್ಲ ಎಂಬುದು!

ಈಗ ಹೇಳಿ, ಬೆಳಗಿನ ಬಿಸಿಬಿಸಿ ಕಾಫಿ ಹೀರುತ್ತಾ, 'ಆ ಉಗ್ರ ಸೆರೆಸಿಕ್ಕನಂತೆ' ಎಂದು ಪೇಪರಿನಲ್ಲಿ ಓದುವ ನಮಗೆ ಅದೂ ಉಳಿದವುಗಳಂತೆ ಒಂದು ಸುದ್ದಿ ಎನಿಸಿಬಿಡುತ್ತದೆ ಅಲ್ಲವೇ? ಇಂಥ ಸುದ್ದಿಗಳ ರೂವಾರಿಗಳಾಗುವವರ ಗಂಡೆದೆ, ಧೈರ್ಯ, ಸಾಹಸ, ತ್ಯಾಗಗಳು, ನಮ್ಮನ್ನು ಬಹುತೇಕ ತಟ್ಟುವುದೇ ಇಲ್ಲ. ನೀರಜ್ ಪಾಂಡೆಯಂಥ ನಿರ್ದೇಶಕರು ಧೈರ್ಯವಾಗಿ 'ಬೇಬಿ'ಯ ರೂಪದಲ್ಲಿ ಬಿಡಿಸಿ ಹೇಳಿದರೂ ಅದು ನಮ್ಮ ದಪ್ಪ ಚರ್ಮದೊಳಗೆ ಇಳಿಯುವುದಿಲ್ಲ. ಅಲ್ಕಾಳಂಥ ಹೆಣ್ಣುಮಗಳು ಅಪ್ಪನ ಕಳೇಬರದ ಮುಂದೆ ನಿಂತು, 'ನನ್ನನ್ನು ಬಿಟ್ಟು ಹೋದೆಯಲ್ಲ, ಇನ್ಯಾರನ್ನು ಅಪ್ಪಾ ಎನ್ನಲಿ?' ಎಂದು ಅಳುವುದನ್ನು ಬಿಟ್ಟು ಗೂರ್ಖಾ ರೆಜಿಮೆಂಟಿನ ಯುದ್ಧಘೋಷವನ್ನು ಕೂಗುತ್ತಾಳಲ್ಲ ಆಗ ಎಲ್ಲೋ ಕೆಲವೊಮ್ಮೆ ತಟ್ಟುತ್ತದೆ.

ಆದರೆ ನಮ್ಮ ಕಡೆಯಿಂದ ಇಷ್ಟು ಸಂವೇದನೆ ಸಾಕೇ?

                                                                                                                                                                    

No comments:

Post a Comment