Thursday, 19 February 2015

ಈ ಸಮಯ 'ಸಿರಿಸೇನಾ'ಮಯ!

ಅದು 1987ರ ಜುಲೈ 29. ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಶ್ರೀಲಂಕಾದ ಅಂದಿನ ಅಧ್ಯಕ್ಷ ಜೆ.ಆರ್. ಜಯವರ್ಧನೆ ಅಕ್ಕಪಕ್ಕದಲ್ಲಿ ಕುಳಿತು ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕಿದರು.  ಅದಕ್ಕೆ ಎರಡು ದಿನಗಳ ಹಿಂದಷ್ಟೇ ರಾಜೀವ್ ಎಲ್‍ಟಿಟಿಇನ ಮುಖ್ಯಸ್ಥ ಪ್ರಭಾಕರನ್ ಹಾಗೂ ಅವನ ಕುಟುಂಬವನ್ನು ದೆಹಲಿಗೆ ಕರೆಸಿಕೊಂಡಿದ್ದರು. ಅಲ್ಲಿ ಅವನನ್ನು ಭೇಟಿಯಾಗಿ, ಕುಶಲೋಪರಿ ನಡೆಸಿ ಅಶೋಕ ಹೋಟೆಲ್‍ನಲ್ಲಿ ಅವನಿಗೆ ಹಾಗೂ ಕುಟುಂಬಕ್ಕೆ ವಾಸ್ತವ್ಯ ಕಲ್ಪಿಸಿ ಇಲ್ಲಿ ಒಪ್ಪಂದಕ್ಕೆ ಸಹಿ ಮಾಡಲು ಬಂದಿದ್ದರು. ಒಪ್ಪಂದವಾದ ಮರುದಿನವೇ ಭಾರತದ ಶಾಂತಿ ಪಾಲನಾ ಪಡೆ ಲಂಕೆಗೆ ಬಂದಿಳಿಯಿತು. ಅದಾಗಿ ಸರಿಯಾಗಿ ಮೂರು ದಿನಗಳಿಗೆ, ಅಂದರೆ ಆಗಸ್ಟ್ ಎರಡರಂದು ಪ್ರಭಾಕರನ್‍ನನ್ನು ಶೀಲಂಕಾದ ಜಾಫ್ನಾ ಪಟ್ಟಣಕ್ಕೆ ಕ್ಷೇಮವಾಗಿ ವಾಪಸ್ ಕಳುಹಿಸಲಾಯಿತು. ರಾಜೀವ್ ಎಲ್ಲವೂ ಸುಸೂತ್ರವಾಗಿ ಮುಗಿಯಿತೆಂದು ನಿರಾಳವಾದರು. ತಾನು ಭಾರತ ಹಾಗೂ ಶ್ರೀಲಂಕಾದ ಸಂಬಂಧದ ಹೊಸ ಭಾಷ್ಯ ಬರೆದಿದ್ದೇನೆಂದು ಭಾವಿಸಿದ್ದರೇನೋ, ಆದರೆ ಅವರು ಬರೆದದ್ದು ತಮ್ಮದೇ ಸಾವಿನ ಮುನ್ನುಡಿಯಾಗಿತ್ತು!

ಭಾರತ ಹಾಗೂ ಶ್ರೀಲಂಕಾದ ನಡುವಿನ ಈ ಒಪ್ಪಂದಕ್ಕೆ ಕಾರಣವೂ ಇತ್ತು. 1977ರಿಂದ ಹಿಡಿದು 1987ರವರೆಗೂ ಸುಮಾರು ಒಂದು ದಶಕದ ಕಾಲ ಭಾರತ ಶ್ರೀಲಂಕಾದ ತಮಿಳರಿಗೆ ಬೆಂಬಲ ನೀಡುತ್ತಲೇ ಇತ್ತು. ಶ್ರೀಲಂಕಾ ಸರ್ಕಾರದ ವಿರೋಧದ ನಡುವೆಯೂ ತಮಿಳರ ಪ್ರತ್ಯೇಕತೆಯ ಕೂಗನ್ನು ಪೋಷಿಸಿಕೊಂಡೇ ಬಂದಿತ್ತು. ಹಾಗೆ ಜನ ಸಂಘಟನೆಯಿಂದ ಹಿಡಿದು ಶಸ್ತ್ರಾಸ್ತ್ರಗಳವರೆಗಿನ ತರಬೇತಿಯನ್ನು ನೀಡಿ ಹಾಲೆರೆದು ಪೋಷಿಸಿದ ಕೂಸೇ ಎಲ್‍ಟಿಟಿಇ! ಒಂದೆಡೆ ಬಲಿಷ್ಠವಾಗುತ್ತಿದ್ದ ಎಲ್‍ಟಿಟಿಇ, ಮತ್ತೊಂದೆಡೆ ಅದನ್ನು ಶತಾಯ ಗತಾಯ ಹಣಿಯಲೇಬೇಕೆಂದು ಹೆಣಗುತ್ತಿದ್ದ ಶ್ರೀಲಂಕಾ ಸರ್ಕಾರ. ಮಧ್ಯ ಸಿಲುಕಿ ನಲುಗುತ್ತಿದ್ದವರು ಲಂಕೆಯ ಶ್ರೀಸಾಮಾನ್ಯರು! ಕೊನೆಗೊಮ್ಮೆ ಶ್ರೀಲಂಕಾ ಸರ್ಕಾರ ಎಷ್ಟು ರೋಸಿಹೋಯಿತೆಂದರೆ, ಎಲ್‍ಟಿಟಿಇಯ ಕೇಂದ್ರ ಕಾರ್ಯಸ್ಥಾನವಾದ ಜಾಫ್ನಾ ಪಟ್ಟಣಕ್ಕೆ ಲಗ್ಗೆಯಿಟ್ಟಿತು. ಆಗ ರಾಜೀವ್ ಏನು ಮಾಡಿದರು ಗೊತ್ತೇ? ನಮ್ಮ ವಾಯುಸೇನೆಯ ಹೆಲಿಕಾಪ್ಟರ್‍ ಹಾಗೂ ಯುದ್ಧವಿಮಾನಗಳನ್ನು ಬಳಸಿಕೊಂಡು ಎಲ್‍ಟಿಟಿಇ ತಂಡಕ್ಕೆ ಆಕಾಶದಿಂದಲೇ ಆಹಾರ-ನೀರುಗಳನ್ನು ಸರಬರಾಜು ಮಾಡಿದರು! ಶ್ರೀಲಂಕಾ ಸರ್ಕಾರವೇನಾದರೂ ಮಧ್ಯ ಪ್ರವೇಶಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ನಮ್ಮ ದೇಶದಲ್ಲಿದ್ದ ಶ್ರೀಲಂಕಾದ ರಾಯಭಾರಿಗೆ ಧಮಕಿಯನ್ನೂ ಹಾಕಿದರು. ಇನ್ನು ಪೂರ್ಣ ಪ್ರಮಾಣದ ಯುದ್ಧವಾಗುವುದೊಂದೇ ಬಾಕಿಯಿದ್ದದ್ದು. ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡ ಶ್ರೀಲಂಕಾ ಸರ್ಕಾರ ಇದಕ್ಕೊಂದು ಕೊನೆ ಹಾಡಬೇಕೆಂದು ನಿರ್ಧರಿಸಿತು. ಅದರ ಫಲವೇ ಭಾರತ ಶ್ರೀಲಂಕಾ ಒಪ್ಪಂದ. ಅದರ ಪ್ರಕಾರ ನಿರ್ಧಾರವಾಗಿದ್ದು, ಶ್ರೀಲಂಕಾ ಸರ್ಕಾರ ಜಾಫ್ನಾದಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕು, ಎಲ್‍ಟಿಟಿಇ ತನ್ನ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ತಂದೊಪ್ಪಿಸಬೇಕು ಹಾಗೂ ಶಾಂತಿಯನ್ನು ಕಾಪಾಡಲು ಭಾರತ ಸರ್ಕಾರ ತನ್ನ ಶಾಂತಿ ಪಾಲನಾ ಪಡೆಯನ್ನು ಕಳಿಸಬೇಕು ಎಂದು.ಒಪ್ಪಂದ ನಡೆಯುವ ಮುನ್ನ ತಮ್ಮ ಗುಂಡು ನಿರೋಧಕ ಕವಚವನ್ನೇ ಪ್ರಭಾಕರನ್‍ಗೆ ಪ್ರೀತಿಯಿಂದ ಕೊಟ್ಟು 'ನಿನ್ನ ಬಗ್ಗೆ ಕಾಳಜಿ ವಹಿಸು' ಎಂದಿದ್ದ ರಾಜೀವ್ ಪ್ರಭಾಕರನ್‍ನನ್ನು ಬಲವಾಗಿ ನಂಬಿದ್ದರು. ಒಪ್ಪಂದ ಮುಗಿಯುವಷ್ಟರಲ್ಲಿ ಇನ್ನೆಲ್ಲಿ ಅವನ ಜೀವಕ್ಕೆ ಸಂಚಕಾರ ಬರುತ್ತದೋ ಎಂದು ಅವನನ್ನು, ಅವನ ಕುಟುಂಬವನ್ನು ಜೋಪಾನ ಮಾಡಿದ್ದರು. ಆದರೆ ಪ್ರಭಾಕರನ್ ರಾಜೀವ್‍ರ ಒಪ್ಪಂದಕ್ಕೆ ಕವಡೆ ಕಾಸಿನ ಬೆಲೆಯನ್ನೂ ಕೊಡಲಿಲ್ಲ ನೋಡಿ, ಆಗಲೇ ಅವರಿಗೆ ತಾವೆಂಥ ಹಾವಿಗೆ ಹಾಲೆರೆದಿದ್ದೇವೆ ಎಂಬುದು ಅರಿವಾಗಿದ್ದು. ಅವನ ಹಾಗೂ ಅವನ ತಂಡದ ಉಪಟಳ ದಿನೇ ದಿನೇ ಹೆಚ್ಚುತ್ತಲೇ ಹೋಯಿತು. 1990ರ ಹೊತ್ತಿಗೆ ಭಾರತದ ಶಾಂತಿ ಪಾಲನಾ ಪಡೆಯ ಒಂದು ಸಾವಿರಕ್ಕೂ ಹೆಚ್ಚು ಸೈನಿಕರು ಹತರಾದರು. ಕೊನೆಗೆ ರಾಜೀವ್‍ಗೆ ಉಳಿದದ್ದು ಒಂದೇ ಮಾರ್ಗ, ಎಲ್‍ಟಿಟಿಇಯನ್ನು ಸದೆಬಡಿಯುವುದು. ಅದನ್ನು ಅವರು ಮನಸ್ಸಿನಲ್ಲೇ ನಿರ್ಧರಿಸಿಕೊಂಡು ಸುಮ್ಮನಿರಬಹುದಿತ್ತು. ಆದರೆ ವಿಧಿಯೆಂಬುದೂ ಒಂದಿದೆಯಲ್ಲ, 1990ರ ಆಗಸ್ಟ್ ತಿಂಗಳಿನಲ್ಲಿ ಸಂಡೇ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ 'ನಾನು ಮುಂದಿನ ಚುನಾವಣೆಯಲ್ಲಿ ಪ್ರಧಾನಿಯಾದರೆ ಎಲ್‍ಟಿಟಿಯ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳುತ್ತೇನೆ' ಎಂದು ಮುಲಾಜಿಲ್ಲದೆ ಹೇಳಿಬಿಟ್ಟರು. ಪ್ರಧಾನಿಯಾಗಲು ಬಿಟ್ಟರೆ ತಾನೇ ನಮ್ಮ ತಂಟೆಗೆ ಬರುವುದು ಎಂದುಕೊಂಡ ಪ್ರಭಾಕರನ್ ಮರುವರ್ಷ ಮೇ ತಿಂಗಳಿನಲ್ಲಿ ಬಾಂಬ್ ದಾಳಿಯೊಂದರಲ್ಲಿ ರಾಜೀವ್‍ರ ಕಥೆಯನ್ನೇ ಮುಗಿಸಿಬಿಟ್ಟ! ಅಲ್ಲಿಗೆ ಭಾರತ ಹಾಗೂ ಶ್ರೀಲಂಕಾದ ನಡುವಿನ ಕೊಂಡಿ ಕಳಚಿಬಿತ್ತು. ರಾಮಾಯಣದ ಭಾಷೆಯಲ್ಲಿ ಹೇಳುವುದಾದರೆ, ಲಂಕೆಯ ರಾವಣ ಭಾರತದ ರಾಮನನ್ನು ಸಂಹರಿಸಿಬಿಟ್ಟಿದ್ದ.

ಹೌದು, ಬೇರೆ ದೇಶಗಳ ಜೊತೆ ಸಂಬಂಧವನ್ನು ಬೆಳೆಸಲು ಆರ್ಥಿಕ, ವಾಣಿಜ್ಯ, ಅಭಿವೃದ್ಧಿಯ ಕಾರಣಗಳಿಗಾಗಿ ತಡಕಾಡುತ್ತೇವೆ. ಆದರೆ ಲಂಕೆಯ ವಿಷಯದಲ್ಲಿ ಅವುಗಳ ಅಗತ್ಯವೇ ಇಲ್ಲ. ರಾಮಾಯಣವೆಂಬ ಕಥೆಯನ್ನು, ರಾಮನೆಂಬ ಆದರ್ಶ ಪುರುಷನನ್ನು ದೇವರೆಂದು ನೆನೆದಾಗಲೊಮ್ಮೆ ಲಂಕೆಯೂ ಕಣ್ಮುಂದೆ ಸುಳಿಯಲೇ ಬೇಕು. ಇಂದಿನ ನೇಪಾಳದ ಜನಕಪುರಿಯಲ್ಲಿ ಜನಿಸಿದ ಸೀತೆ, ಅಯೋಧ್ಯೆಯ ರಾಮನನ್ನು ವರಿಸಿ, ನಾಸಿಕ್‍ನ ಹತ್ತಿರವಿರುವ ಪಂಚವಟಿಯಲ್ಲಿದ್ದಳು ಎನ್ನುವವರೆಗೆ ಮಾತ್ರ ಭಾರತದ ಪಾತ್ರ. ನಂತರ ರಾಮಾಯಣವೆಲ್ಲವೂ ಲಂಕಾಮಯವೇ! ಅವಳನ್ನು ಅಪಹರಿಸಿದ ರಾವಣನನ್ನು ಬೆಂಬೆತ್ತಿ ಹೋದ ವಾನರ ಸೇನೆ ನಿರ್ಮಿಸಿದ ರಾಮ ಸೇತುವನ್ನು, ಲಂಕೆಯಲ್ಲಿರುವ ರಾವಣನ ದೇಗುಲ ಅಥವಾ ಸೀತೆಯ ಅಶೋಕವನವನ್ನು ನೋಡುವಾಗ, ರಾಮಾಯಣ ಬರೀ ಕಾಲ್ಪನಿಕ ಕಥೆ ಎಂದು ವಾದಿಸುವವರು ಕೆಲ ಕ್ಷಣಗಳ ಮಟ್ಟಿಗಾದರೂ ಮೂಗರಾಗಲೇಬೇಕು! ಇಂದಿಗೂ ಲಂಕೆಯ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸುಮಾರು ಮೂವತ್ತು ಜಾಗಗಳಿವೆ! ಐತಿಹ್ಯವೇ ಬೆಸೆದಿರುವ ಈ ತಂತುವನ್ನು ನಾವು ಭಾವರಹಿತವಾಗಿ ಕಡಿದುಕೊಂಡಿದ್ದೇಕೆ ಎಂಬುದು ಮಾತ್ರ ಅರ್ಥವಾಗುವುದಿಲ್ಲ.

ಇರಲಿ, 2009ರಲ್ಲಿ ನಾವು ಲೋಕಸಭಾ ಚುನಾವಣೆಯಲ್ಲಿ ಕಳೆದುಹೋಗಿದ್ದಾಗ ಶ್ರೀಲಂಕಾ ಪ್ರಭಾಕರನ್‍ನನ್ನು ಹೊಡೆದುರುಳಿಸಿತು. ಆಗ ಅದು ಭಾರತದ ಸಹಾಯವನ್ನೇನೂ ಬೇಡಲಿಲ್ಲ. ಅದಕ್ಕೂ ಮುಂಚೆ, ಅಂದರೆ 2005ರಲ್ಲಿ ಮಹಿಂದಾ ರಾಜಪಕ್ಷೆ ಶ್ರೀಲಂಕಾದ ಅಧ್ಯಕ್ಷರಾದ ಮೇಲೆ ಅದು ತಾನು ಭಾರತದ ಗೆಳೆಯ ಎಂದು ಹೇಳಿಕೊಂಡರೂ ಸಾಬೀತು ಮಾಡುವ ಪ್ರಯಾಸವನ್ನೇನೂ ಮಾಡಲಿಲ್ಲ. ನಾವೂ ಅಷ್ಟೇ. ಬೇರೆ ದೇಶಗಳ ಜೊತೆ 'ಟೂ' ಬಿಟ್ಟಷ್ಟೇ ಸಲೀಸಾಗಿ ಇದರ ಜೊತೆಗೂ ಬಿಟ್ಟೆವು. ನಾವು ಇಂಚಿಂಚೇ ಹೊರಬಂದೆವಲ್ಲ, ಚೀನಾ ಮೆಲ್ಲನೆ ಒಳಸರಿಯಿತು. ಲಂಕೆಯಲ್ಲಿ ತನ್ನ ಬಂಡವಾಳವನ್ನು ಧಾರಾಳವಾಗಿ ಹೂಡಿತು. ಅದಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನೆಲ್ಲ ತಾನೇ ಸರಬರಾಜು ಮಾಡಿತು. ರಾಜಪಕ್ಷೆಯವರಿಗಂತೂ ಚೀನಾವೇ ಅಪ್ಯಾಯಮಾನವಾಗಿತ್ತು. ಈ ನಂಟು ಬರೀ ಅವೆರಡು ದೇಶಗಳಿಗೆ ಸೀಮಿತವಾಗಿದ್ದಿದ್ದರೆ ಭಾರತ ಕಳವಳಪಡಬೇಕಾಗಿರಲಿಲ್ಲ. ಆದರೆ ಕಳೆದ ವರ್ಷ ಚೀನಾದ ಜಲಾಂತರ್ಗಾಮಿ ಹಡಗುಗಳು ಎರಡು ಬಾರಿ ಲಂಕೆಯ ಬಂದರಿನಲ್ಲಿ ಲಂಗರು ಹಾಕಿ ನಿಂತವಲ್ಲ, ಆಗ ಭಾರತಕ್ಕೆ ತಳಮಳ ಶುರುವಾಯಿತು. ಆಷ್ಟೇ ಅಲ್ಲ, ಸರ್ವಾಧಿಕಾರಿಯಂತೆ ಆಡತೊಡಗಿದ್ದ ರಾಜಪಕ್ಷೆ ಸಂಪುಟದ ತುಂಬೆಲ್ಲ ತಮ್ಮ ಬಂಧು-ಬಾಂಧವರನ್ನೇ ತುಂಬಿಕೊಂಡಿದ್ದರು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಲಂಕೆಯ ಅಧ್ಯಕ್ಷರಾಗಲು ಇದ್ದ ಎರಡು ಅವಧಿಗಳ ಮಿತಿಯನ್ನೂ ಕಿತ್ತು ಹಾಕಿದ್ದರು. ತಮ್ಮ ಎರಡನೆಯ ಅವಧಿ ಮುಗಿದ ನಂತರವೂ ಅಧಿಕಾರದಲ್ಲೇ ಮುಂದುವರೆಯುವುದು ಅವರ ಹುನ್ನಾರವಾಗಿತ್ತು. ಚೀನಾಗೆ ಬೇಕಾಗಿದ್ದಿದ್ದೂ ಅದೇ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ತಾನೇ?ಆದರೆ ಕಳೆದ ನವೆಂಬರ್‍ನಲ್ಲಿ ಪವಾಡವೊಂದು ನಡೆದು ಹೋಯಿತು. ರಾಜಪಕ್ಷೆಯ ಸಂಪುಟದಲ್ಲೇ ಆರೋಗ್ಯ ಸಚಿವರಾಗಿದ್ದ ಮೈತ್ರಿಪಾಲ ಸಿರಿಸೇನಾ ತಾನು ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಬಿಟ್ಟರು. ಅವರಿಗೆ ರಾವಣ ಬುದ್ಧಿಕೊಟ್ಟನೋ ರಾಮ ಬುದ್ದಿಕೊಟ್ಟನೋ ಅವರೇ ಹೇಳಬೇಕು. ಆದರೆ ಶ್ರೀಲಂಕಾದ ಕೆಲವು ಸುದ್ದಿ ಮಾಧ್ಯಮಗಳ ಪ್ರಕಾರ ಅವರಿಗೆ ಬುದ್ಧಿ ಕೊಟ್ಟದ್ದು ಭಾರತ ಸರ್ಕಾರದ ಗುಪ್ತಚರ ದಳವಂತೆ! ಅಲ್ಲಿಯ ಬೇಹುಗಾರರೊಬ್ಬರು ಸಿರಿಸೇನಾರ ಮನವೊಲಿಸಿದ್ದೂ ಅಲ್ಲದೆ ಅವರ ಪರವಾಗಿ ಹಲವು ಪ್ರಭಾವಿ ಮಾಜಿ ಅಧ್ಯಕ್ಷರು ಹಾಗೂ ಪ್ರಧಾನಮಂತ್ರಿಗಳನ್ನು ಸಂಘಟಿಸಿದರಂತೆ! ಅದರ ಫಲವೇ ಸಿರಿಸೇನಾರಿಗೆ ದಕ್ಕಿದ ವಿಜಯವಂತೆ. ಹಿಂದೊಮ್ಮೆ ಭಾರತ ಲಂಕೆಯ ಅಂತರಂಗಕ್ಕೆ ನೇರವಾಗಿ ಕೈಹಾಕಿ ಕದಡಿತ್ತು. ಈ ಬಾರಿ ಪರೋಕ್ಷವಾಗಿ ಕೈಯ್ಯಾಡಿಸಿ ತನ್ನ ಕಾರ್ಯ ಸಾಧಿಸಿಕೊಂಡಿದೆ ಎಂಬ ಗುಮಾನಿ ಎಲ್ಲರದೂ. ಇಂಥ ವಿಷಯಗಳನ್ನು ಯಾರೂ ನೇರವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಸೂಚ್ಯವಾಗಿ ತಮ್ಮ ನಡವಳಿಕೆಯಿಂದ ಅರ್ಥ ಮಾಡಿಸುತ್ತಾರೆ. ಚುನಾವಣೆಯ ಫಲಿತಾಂಶ ಪ್ರಕಟವಾದ ಕೆಲ ತಾಸುಗಳಲ್ಲೇ ಭಾರತದ ರಾಯಭಾರಿ ವೈ.ಕೆ ಸಿನ್ಹಾ ಸಿರಿಸೇನಾರನ್ನು ಭೇಟಿಯಾಗಿ ಶುಭಕೋರಿದರೆ, ಚೀನಾದ ರಾಯಭಾರಿಗೆ ಅವಕಾಶ ಸಿಕ್ಕಿದ್ದು ಬರೋಬ್ಬರಿ ಆರು ದಿನಗಳ ನಂತರ!

ಮರ್ಮಾಘಾತವಾಗಿರುವುದು ತಾನು ಸೋಲುತ್ತೇನೆ ಎಂದು ಕನಸಿನಲ್ಲೂ ನಿರೀಕ್ಷಿಸದಿದ್ದ ರಾಜಪಕ್ಷೆಗೆ ಮಾತ್ರವಲ್ಲ, ಇಂಥ ಫಲಿತಾಂಶವನ್ನು ನಿರೀಕ್ಷಿಸದಿದ್ದ ಚೀನಾಕ್ಕೂ. ಸಿರಿಸೇನಾ ತಮ್ಮ ಹಿಂದಿನ ಸರ್ಕಾರ ಕೈಗೊಂಡಿದ್ದ ಅನೇಕ ನಡೆಗಳನ್ನು ಪ್ರಶ್ನಿಸಿದ್ದಾರೆ. ಆಂತರಿಕವಾಗಿ ಅವರೇನೇ ಮಾಡಿಕೊಳ್ಳಲಿ, ನಮ್ಮ ಕಾಳಜಿಯಿರುವುದು ಅವರು ಚೀನಾದೊಂದಿಗೆ ವ್ಯವಹರಿಸುವ ಬಗ್ಗೆ. ಅದು ಅರ್ಥವಾಗಿದೆಯೆಂಬಂತೆ ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಭಾರತವನ್ನೇ ಆಯ್ದುಕೊಂಡು ಬಂದಿದ್ದಾರೆ. ಈಗಿನ ಅವರ ಭೇಟಿ ನಮಗೆ ಬಹಳ ಮುಖ್ಯ. ಒಪ್ಪಂದಗಳಿರುವ ಕಾಗದದ ಮೇಲೆ ಬೀಳುವ ಶಾಯಿಯ ಮೊಹರಿಗಿಂತ ಹೃದಯಗಳಲ್ಲಿ ಅಚ್ಚೊತ್ತುವ ನಂಬಿಕೆ, ವಿಶ್ವಾಸಗಳ ಗುರುತು ಸ್ಥಾಯಿಯಾಗಲಿದೆ.

ಭೂಪಟದಲ್ಲಿರುವಂತೆ ಭಾರತದ ನಕ್ಷೆಯನ್ನು ಬರೆಯಿರಿ ಎಂದಾಗ ನಾವು ಬರೆಯುತ್ತಿದ್ದುದು ಹೇಗೆ ಹೇಳಿ? ಉತ್ತರ, ಪೂರ್ವ, ಪಶ್ಚಿಮಗಳನ್ನು ವಕ್ರರೇಖೆಗಳಲ್ಲಿ ಬಿಡಿಸಲು ತಿಣುಕಾಡಿ, ಕ್ಯಾರಟ್‍ಅನ್ನೋ ಮೂಲಂಗಿಯನ್ನೋ ಹೋಲುವಂತೆ ದಕ್ಷಿಣ ಭಾರತವನ್ನು ಸುಲಭವಾಗಿ ಬಿಡಿಸಿ, ಕೆಳಗೆ ಅದರ ಬಲಕ್ಕೆ ಮಚ್ಚೆಯಂತೆ ಎರಡು ಚುಕ್ಕಿಗಳನ್ನಿಟ್ಟು ಅದರ ಕೆಳಗೆ ನೀರಿನ ಹನಿಯ ಆಕಾರದ ಲಂಕೆಯನ್ನು ಬಿಡಿಸುವುದು. ಯಾವುದನ್ನು ಬರೆಯುವುದು ಕಷ್ಟವಾದರೂ ಲಂಕೆ ಸುಲಭವಾಗಿ ಮೂಡುತ್ತಿತ್ತು ಅಲ್ಲವೇ? ಅದರಲ್ಲಿ ತಪ್ಪಾಗುವುದಿಲ್ಲವೆಂಬ ಖಾತ್ರಿಯೂ ಇರುತ್ತಿತ್ತು. ಅದಿಲ್ಲದ ಭಾರತದ ನಕ್ಷೆ ಎಂದಾದರೂ ನಮಗೆ ಪೂರ್ಣವೆನಿಸುತ್ತಿತ್ತೇ? ನಿಜವಾಗಿಯೂ ಭಾರತಕ್ಕಂಟಿದ ಬಾಲಂಗೋಚಿ ಶ್ರೀಲಂಕಾ ಎನಿಸುವುದು ಅದಕ್ಕೇ.
ನಕ್ಷೆಯಲ್ಲಿ ಬೆಸೆದುಕೊಂಡಿರುವುದು ಈಗ ಹೃದಯಗಳಲ್ಲೂ ಮೂಡಬೇಕಾಗಿದೆ. ಎರಡೂ ರಾಷ್ಟ್ರಗಳ ಕ್ಷೇಮದ, ಅಭಿವೃದ್ಧಿಯ ನೆಪದಲ್ಲಾದರೂ ಇದು ಸಾಧ್ಯವಾದೀತಾ? ಕಾದು ನೋಡೋಣ.

1 comment: