Tuesday 7 April 2015

‘ಮೈ ಚಾಯ್ಸ್’ನಿಂದ ಸಾಧ್ಯವೇ ಸೈನಾ ಸೃಷ್ಟಿ?

'ಮೈ ಬಾಡಿ, ಮೈ ಮೈಂಡ್, ಮೈ ಚಾಯ್ಸ್'. ಹೀಗೆ ಶುರುವಾಗುತ್ತದೆ ದೀಪಿಕಾ ಪಡುಕೋಣೆಯ 'ಮೈ ಚಾಯ್ಸ್' ಎಂಬ ವೀಡಿಯೋ. ಅದನ್ನು ಚಿತ್ರೀಕರಿಸಿರುವುದು ವೋಗ್ ಇಂಡಿಯಾ ಎಂಬ, ಫ್ಯಾಷನ್‍ಗೆ ಸೀಮಿತವಾದ ಮಾಸಪತ್ರಿಕೆ. ಯೂ ಟ್ಯೂಬ್‍ನಲ್ಲಿ ಲಭ್ಯವಿರುವ ಅದನ್ನು ಒಮ್ಮೆಯಾದರೂ ತಪ್ಪದೆ ನೋಡಿ. ದೀಪಿಕಾ ಭರ್ತಿ ಎರಡೂವರೆ ನಿಮಿಷ ಅದಮ್ಯ ಆತ್ಮವಿಶ್ವಾಸದಿಂದ ಮಾತುಗಳನ್ನಾಡುತ್ತಾಳೆ. ಮಹಿಳಾ ಸಬಲೀಕರಣದ ಆ ದಿಟ್ಟ ಮಾತುಗಳು ಹೇಗಿವೆ ಗೊತ್ತಾ? ಬಿಟ್ಟ ಬಾಣಗಳಂತೆ ಕೇಳುಗರ ಎದೆಯನ್ನು ನೇರವಾಗಿ ನಾಟುತ್ತವೆ. ಆದ್ದರಿಂದಲೇ ವೀಡಿಯೋ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ವೈರಸ್‍ನಂತೆ ಹಬ್ಬಿ ಸಂಚಲನ ಸೃಷ್ಟಿಸಿದ್ದು, ಲಕ್ಷಾಂತರ ಮಂದಿ ಮುಗಿಬಿದ್ದು ಅದನ್ನು ವೀಕ್ಷಿಸಿದ್ದು. ಇಡೀ ಗಂಡು ಜಾತಿಯನ್ನು ಉದ್ದೇಶಿಸಿ ಹೇಳಿರುವ ಅವಳ ಖಡಕ್ ಮಾತುಗಳ ಒಟ್ಟಾರೆ ಸಾರ ಇಷ್ಟು: 'ಇದು ನನ್ನ ದೇಹ, ನನ್ನ ಮನಸ್ಸು, ಆದ್ದರಿಂದ ಎಲ್ಲವೂ ನನ್ನ ಆಯ್ಕೆ. ನನಗೆ ಬೇಕಾದ ಬಟ್ಟೆಯನ್ನು ಹಾಕಿಕೊಳ್ಳುವುದು ನನ್ನ ಆಯ್ಕೆ. ಸಣ್ಣ ಅಥವಾ ದಪ್ಪಗಿರುವುದು ನನ್ನ ಆಯ್ಕೆ. ಮದುವೆಯಾಗುವುದು ಬಿಡುವುದು ನನ್ನ ಆಯ್ಕೆ. ಮದುವೆಗೆ ಮುಂಚಿನ ಸೆಕ್ಸ್, ಮದುವೆಯಾಚೆಗಿನ ಸೆಕ್ಸ್ ಅಥವಾ ಸೆಕ್ಸ್ ಬೇಡವೆನ್ನುವುದು ನನ್ನ ಆಯ್ಕೆ. ತಾತ್ಕಾಲಿಕವಾಗಿ ಪ್ರೀತಿಸುವುದೋ ಶಾಶ್ವತವಾಗಿಯೋ ಎಂಬುದು ನನ್ನ ಆಯ್ಕೆ. ಹುಡುಗನನ್ನು, ಹುಡುಗಿಯನ್ನು ಅಥವಾ ಇಬ್ಬರನ್ನೂ ಪ್ರೀತಿಸುವುದು ನನ್ನ ಆಯ್ಕೆ. ನೆನಪಿಡು, ನೀನು ನನ್ನ ಆಯ್ಕೆ. ನನ್ನ ಹಣೆಯ ಕುಂಕುಮ, ನನ್ನ ಕೈನ ಉಂಗುರ, ನಾನಿಟ್ಟುಕೊಳ್ಳುವ ನಿನ್ನ ಸರ್‍ನೇಮ್ (ಉಪನಾಮ) ಕೇವಲ ಆಭರಣಗಳಿದ್ದಂತೆ. ಅವುಗಳನ್ನು ಬದಲಾಯಿಸಬಹುದು, ಆದರೆ ನಿನ್ನ ಮೇಲಿರುವ ನನ್ನ ಪ್ರೀತಿಯನ್ನಲ್ಲ. ಆದ್ದರಿಂದ ಅದರ ಬೆಲೆ ಉಳಿಸಿಕೋ. ನನಗೆ ಬೇಕಾದ ಹೊತ್ತಿಗೆ ಮನೆಗೆ ಬರುವುದು ನನ್ನ ಆಯ್ಕೆ. ನಿನ್ನ ಮಗುವನ್ನು ಹಡೆಯುವುದು ಬಿಡುವುದು ನನ್ನ ಆಯ್ಕೆ. ನನ್ನ ಸಂತೋಷ ನಿನಗೆ ನೋವು ಮಾಡಬಹುದು, ಅದು ನನ್ನ ಆಯ್ಕೆ. ನನ್ನ ಆಯ್ಕೆಗಳೇ ನನ್ನ ಗುರುತು, ಅವುಗಳಿಂದಲೇ ನಾನು ಅನನ್ಯಳು. ನಾನು ಭಿನ್ನವಾಗಿರಬೇಕೆಂದು ಬಯಸುವವಳು. ಮಿತಿಯೇ ಇಲ್ಲದೆ ನಿರಂತರವಾಗಿ ವಿಸ್ತರಿಸುತ್ತಿರುವ ಈ ಬ್ರಹ್ಮಾಂಡದಂತೆಯೇ ನಾನೂ. ಇದು ನನ್ನ ಆಯ್ಕೆ'.

ಹೀಗೆ ಲಂಗುಲಗಾಮಿಲ್ಲದ ಆಯ್ಕೆಗಳನ್ನು ಬೆಡಗಿ ದೀಪಿಕಾ ಎಗ್ಗಿಲ್ಲದೆ ಹೇಳುತ್ತಾಳೆ. ಈಕೆಯ ಮಾತುಗಳನ್ನು ಕೆಲವರು ಅನುಮೋದಿಸಿದ್ದರೆ ಮತ್ತೆ ಕೆಲವರು ಟೀಕಿಸಿದ್ದಾರೆ. ಅಲ್ಲ, ಇದು ಹುಚ್ಚುತನವಲ್ಲದೆ ಮತ್ತೇನು? ಖ್ಯಾತಿಯ ಉತ್ತುಂಗ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವಂತೆ ಪ್ರೇರೇಪಿಸುತ್ತದಾ? ಹೇಳುವುದಕ್ಕೇನು? ಆಯ್ಕೆಗಳನ್ನು ನಾವೂ ನೀವೂ ಹೇಳಬಹುದು. ಆದರೆ ಅವುಗಳ ಪರಿಣಾಮ? ಸ್ವಲ್ಪ ಯೋಚಿಸಿ. ಬೇಕಾದ ಬಟ್ಟೆ ಹಾಕಿಕೊಂಡು ಬೀದಿಗಿಳಿಯುವುದು, ಹೊತ್ತು-ಗೊತ್ತಿಲ್ಲದೆ ಮನೆಗೆ ಬರುವುದು ನಮ್ಮ ಆಯ್ಕೆಯಾದರೆ, ಹಿಡಿದು ಅತ್ಯಾಚಾರ ಮಾಡುವುದೂ ವಿಕೃತ ಮನಸ್ಸಿನವರ ಆಯ್ಕೆಯೇ! ಅದನ್ನು ಅನ್ಯಾಯ, ದೌರ್ಜನ್ಯ ಎನ್ನುವ ಹಾಗಿಲ್ಲ ಮತ್ತೆ! ಅನ್ಯಾಯವೇ ಆಗಿಲ್ಲದ ಮೇಲೆ ಇನ್ನೆಲ್ಲಿಯ ಶಿಕ್ಷೆ? ಅದೂ ಹೋಗಲಿ, ಮದುವೆಯಾಚೆಗಿನ ಸೆಕ್ಸ್, ಮಕ್ಕಳನ್ನು ಹಡೆಯದಿರುವುದನ್ನೂ ಆಯ್ಕೆ ಎಂದುಬಿಟ್ಟರೆ ಏನಾಗಲಿದೆ ಸಮಾಜದ ಗತಿ? ಮೊದಲೇ ಸಂಬಂಧಗಳು ಹದಗೆಡುತ್ತಿವೆ. ಅಂಥಾದ್ದರಲ್ಲಿ ಮನೆ-ಮಂದಿಯೆಲ್ಲ ಆಯ್ಕೆಯೆಂಬ ಕತ್ತಿಯನ್ನು ಝಳಪಿಸುತ್ತಾ ಒಬ್ಬರ ಮೇಲೊಬ್ಬರು ಮುಗಿಬಿದ್ದರೆ ಹೇಗೆ? ಪ್ರತಿಯೊಂದು ಮನೆಯೂ ಅಕ್ಷರಶಃ ರಣರಂಗವಾಗಿಬಿಡುವುದಿಲ್ಲವೇ? ಹೀಗೆ ಆಯ್ಕೆಯ ಬೆನ್ನು ಹತ್ತಿ ಹೋಗುವವರನ್ನು ಯಾವ ಸಂಕೋಲೆ ಕಟ್ಟಿ ಹಾಕಬಲ್ಲುದು? ಶಿಸ್ತು, ಬದ್ಧತೆಗಳು ಬೆಲೆ ಕಳೆದುಕೊಳ್ಳುವುದಿಲ್ಲವೇ? ಅವೆರಡೂ ಇಲ್ಲದಿದ್ದ ಮೇಲೆ ಏನನ್ನೇ ಸಾಧಿಸಿದರೂ ಏನು ಪ್ರಯೋಜನ? ಒಂದೆಡೆ ಇಂಥ ಅಗ್ಗದ ಹೇಳಿಕೆಗಳನ್ನು ನೀಡಿ ದೀಪಿಕಾ ತನ್ನ ಅಭಿಮಾನಿಗಳನ್ನು ಎತ್ತಲೋ ಕೊಂಡೊಯ್ಯುತ್ತಿದ್ದರೆ ಮತ್ತೊಂದೆಡೆ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಿದ್ದಾಳೆ ಇನ್ನೊಬ್ಬ ಹೆಣ್ಣುಮಗಳು.

ಅವಳೇ ಸೈನಾ ನೆಹವಾಲ್!

ಹೌದು. ಸೈನಾಳ ಸಾಧನೆ ಭಾರತೀಯರಿಗೆ ಹೆಮ್ಮೆಯ ಕೋಡು ಮೂಡಿಸಿದೆ. ಬ್ಯಾಡ್ಮಿಂಟನ್ ಆಟದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ನಮ್ಮ ದೇಶದ ಹೆಣ್ಣುಮಗಳೊಬ್ಬಳು ನಂ.1 ಸ್ಥಾನಕ್ಕೇರಿದ್ದಾಳೆ. ಅವಳೀಗ ವಿಶ್ವಚಾಂಪಿಯನ್! ಹಾಗಂತ ಸೈನಾ ರಾತ್ರೋರಾತ್ರಿ ಸ್ಟಾರ್ ಆಗಿಬಿಡಲಿಲ್ಲ. ಈಗ 25ರ ಹರೆಯದ ಅವಳು ಎಂಟರ ಎಳವೆಯಿಂದಲೇ ಈ ಆಟಕ್ಕೆ ತನ್ನ ನಿಷ್ಠೆಯನ್ನು ಕಾಯಾ ವಾಚಾ ಮನಸಾ ಧಾರೆಯೆರೆದಿದ್ದಾಳೆ.

ಸೈನಾ ಹುಟ್ಟಿದ್ದು ಹರ್ಯಾಣ ರಾಜ್ಯದ ಹಿಸಾರ್ ನಗರದಲ್ಲಿ. ವಿಜ್ಞಾನಿಯಾಗಿದ್ದ ತಂದೆ ಹರವೀರ್ ಸಿಂಗ್, ಕುಟುಂಬದೊಂದಿಗೆ ಹಿಸಾರ್ ಬಿಟ್ಟು ಆಂಧ್ರಪ್ರದೇಶದ ಹೈದರಾಬಾದ್‍ಗೆ ವಲಸೆ ಬಂದರು. ಸೈನಾ ಚಿಕ್ಕ ಹುಡುಗಿಯಾಗಿದ್ದಾಲೇ ಕರಾಟೆಯಲ್ಲಿ ಆಸಕ್ತಿ ತೋರಿ ಬ್ರೌನ್ ಬೆಲ್ಟ್ ಸಂಪಾದಿಸಿಕೊಂಡಿದ್ದಳು. ಆದರೆ ಅದೊಮ್ಮೆ ಹೈದರಾಬಾದಿನ ಲಾಲ್ ಬಹಾದೂರ್ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ಈ ಎಂಟರ ಪೋರಿಯನ್ನು ನೋಡಿದ ತರಬೇತುದಾರ ನಾಣಿ ಪ್ರಸಾದ್ ರಾವ್, 'ಇವಳಲ್ಲಿ ಅದ್ಭುತ ಪ್ರತಿಭೆಯಿದೆ, ತರಬೇತಿ ಕೊಡಿಸಬೇಕು ಎಂದಿದ್ದರೆ ನನ್ನ ಬಳಿ ಅಭ್ಯಾಸಕ್ಕೆ ಕರೆ ತನ್ನಿ' ಎಂದರು. ಆ ಕ್ಷಣದಲ್ಲಿ ತಂದೆ ಮಗಳನ್ನು ನಿನ್ನ ಆಯ್ಕೆ ಏನು ಎಂದು ಕೇಳಲೂ ಇಲ್ಲ, ನನ್ನ ಆಯ್ಕೆ ಇದು ಎಂದು ಮಗಳು ಹೇಳಲೂ ಇಲ್ಲ. ಅಪ್ಪ ಕಲಿಸುವ ಮನಸ್ಸು ಮಾಡಿದರು, ಮಗಳು ಕಲಿತಳು ಅಷ್ಟೇ!


ಅಪ್ಪ ಮಗಳ ಸವಾರಿ ಮನೆಯಿಂದ 20ಕಿಮೀ ದೂರ ಇದ್ದ ಕ್ರೀಡಾಂಗಣಕ್ಕೆ ನಿತ್ಯ ಬೆಳಗಿನ ಜಾವ ಹೊರಡುತ್ತಿತ್ತು. ಸರಿಯಾಗಿ ಆರು ಘಂಟೆಗೆ ಅಲ್ಲಿಗೆ ತಲುಪಿ ಎರಡು ತಾಸು ಕಠಿಣ ಅಭ್ಯಾಸ ನಡೆಸಬೇಕಿತ್ತು. ನಂತರ ಸೈನಾಳ ಶಾಲೆ ಮತ್ತಿತರ ಚಟುವಟಿಕೆಗಳು ಮುಂದುವರೆಯುತ್ತಿದ್ದವು. ಪ್ರತಿದಿನ ಮಗಳನ್ನು ಹಲವಾರು ಕಿಲೋಮೀಟರುಗಳಷ್ಟು ದೂರ ಗಾಡಿಯಲ್ಲಿ ಕರೆದುಕೊಂಡು ಹೋಗುವ ಶ್ರಮ ತಂದೆಯದಾದರೆ ಆ ಕಠಿಣ ತರಬೇತಿಗೆ ಒಗ್ಗಿಕೊಳ್ಳುವ ಸವಾಲು ಸೈನಾಳದಾಗಿತ್ತು. ಗಾಡಿಯ ಹಿಂದಿನ ಸೀಟಿನಲ್ಲಿ ಕುಳಿತು ತೂಕಡಿಸುತ್ತಿದ್ದ ದಣಿದ ಮಗಳು ಇನ್ನೆಲ್ಲಿ ಬಿದ್ದುಬಿಡುತ್ತಾಳೋ ಎಂಬ ಆತಂಕದಿಂದ ಅವಳ ತಾಯಿಯೂ ಜೊತೆಗೂಡುತ್ತಿದ್ದರು. ಸುಮಾರು ಮೂರು ತಿಂಗಳ ಈ ಪಡಿಪಾಟಲು ಅವರು ಕ್ರೀಡಾಂಗಣದ ಹತ್ತಿರದ ಮನೆಯೊಂದಕ್ಕೆ ವಾಸ್ತವ್ಯ ಬದಲಾಯಿಸಿದ ನಂತರವೇ ಮುಗಿದಿದ್ದು. ಬಳಿಕ ಅವಳ ತರಬೇತಿಯ ಅವಧಿ ಹೆಚ್ಚಿ ಸಂಜೆಗೂ ವಿಸ್ತರಿಸಿತು. ಪರಿಣಾಮ, ಸೈನಾ ಆಟದಲ್ಲಿ ಚೆನ್ನಾಗಿ ನುರಿತಳು. ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ತರಬೇತುದಾರ ಆರಿಫ್ ಹಾಗೂ ಖ್ಯಾತ ಆಟಗಾರ ಹಾಗೂ ತರಬೇತುದಾರರಾದ ಪುಲ್ಲೇಲ ಗೋಪಿಚಂದ್‍ರ ಗರಡಿಯಲ್ಲೂ ಪಳಗಿದಳು.

ಒಂದೆಡೆ ಮಗಳ ತರಬೇತಿ ನಡೆಯುತ್ತಿದ್ದರೆ, ಮತ್ತೊಂದೆಡೆ ಹಣವನ್ನು ಹೊಂದಿಸಲು ತಂದೆ ಪರದಾಡುತ್ತಿದ್ದರು. ಅವಳ Racket, ಶೂ ಮತ್ತಿತರೆ ಪರಿಕರಗಳ ಖರ್ಚುಗಳು ಹೆಚ್ಚುತ್ತ ಸಾಗಿದ್ದವು. ಆಗಿನ್ನೂ ಯಾವ ಪ್ರಾಯೋಜಕರೂ ಸಿಕ್ಕಿರಲಿಲ್ಲ. ಹಣ ಬೇಕೆಂದಾಗಲೆಲ್ಲ ತಂದೆ ಏನು ಮಾಡುತ್ತಿದ್ದರು ಗೊತ್ತೇ? ಹಿಂದೆ-ಮುಂದೆ ಆಲೋಚಿಸದೆ ತಮ್ಮ ಪ್ರಾವಿಡೆಂಟ್ ಫಂಡ್‍ನಿಂದ ತೆಗೆದು ಕೊಡುತ್ತಿದ್ದರು. ಮಗಳಿಗೆ ಗೊತ್ತಾದರೆ ಇನ್ನೆಲ್ಲಿ ಅವಳ ಮನಸ್ಸಿನ ಮೇಲೆ ಪರಿಣಾಮವಾಗುತ್ತದೋ ಎಂದು ಅವಳಿಗೆ ಹೇಳುತ್ತಲೂ ಇರಲಿಲ್ಲ. ತಮ್ಮ ಭವಿಷ್ಯದ ಸಲುವಾಗಿ ಇರಿಸಿಕೊಂಡಿದ್ದ ಆಪದ್ಧನಕ್ಕೆ ಹಾಗೆ ಸೀದಾ ಕೈ ಹಾಕಬೇಕಾದರೆ, ಮಗಳ ನಿಷ್ಠೆಯ ಮೇಲೆ ಅವರಿಗೆ ಅದಿನ್ಯಾವ ಪರಿಯ ನಂಬಿಕೆಯಿದ್ದಿರಬೇಕಲ್ಲವೆ? ಅತ್ತ ಅವರು ತಮ್ಮ ಕೈಖಾಲಿ ಮಾಡಿಕೊಳ್ಳುತ್ತಿದ್ದರೆ ಇತ್ತ ಸೈನಾ ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನೇರುತ್ತಿದ್ದಳು. 2006ರಲ್ಲಿ 19 ವರ್ಷದ ಒಳಗಿನ ವಯೋಮಾನದವರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದಳು. ಅಲ್ಲಿಂದಾಚೆಗೆ ಅವಳು ಹಿಂತಿರುಗಿ ನೋಡಿದ್ದೇ ಇಲ್ಲ. 2008ರಲ್ಲಿ ಜೂನಿಯರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಪಟ್ಟ ಗಿಟ್ಟಿಸಿದಳು. ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತಳಾದಳು. ಅವುಗಳಲ್ಲಿ ಮುಖ್ಯವಾದದ್ದು 2010ರ ಕಾಮನ್‍ವೆಲ್ತ್ ಕ್ರೀಡಾಕೂಟದ ಚಿನ್ನ ಹಾಗೂ 2012ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಡೆದ ಕಂಚಿನ ಪದಕಗಳು.

ಇಷ್ಟೆಲ್ಲ ಆದರೂ ಸೈನಾಳದ್ದೊಂದು ದೊಡ್ಡ ದೌರ್ಬಲ್ಯವಿತ್ತು. ಅಗ್ರ ಕ್ರಮಾಂಕದ ಚೀನೀ ಪ್ರತಿಸ್ಪರ್ಧಿಗಳ ಎದುರು ನೇರಾನೇರ ಸೆಟ್‍ಗಳಲ್ಲಿ ಸೋತು ಸುಣ್ಣವಾಗಿಬಿಡುತ್ತಿದ್ದಳು. ಸೈನಾ 2013 ಹಾಗೂ 2014ರಲ್ಲಿ ಕೆಲ ಮುಖ್ಯ ಪಂದ್ಯಗಳಲ್ಲಿ ಅವರೆದುರು ಸೋತಾಗ ಇನ್ನು ಅವಳ ಬ್ಯಾಡ್ಮಿಂಟನ್ ಭವಿಷ್ಯ ಮುಗಿಯಿತೆಂದೇ ಎಲ್ಲರೂ ತಿಳಿದಿದ್ದರು. ಅವಳೇ ಹೇಳುವ ಪ್ರಕಾರ ಕಳೆದ ವರ್ಷ ವಿಶ್ವ ಚಾಂಪಿಯನ್‍ಶಿಪ್‍ನ ಪಂದ್ಯವನ್ನು ಸೋತಾಗಲಂತೂ ತನ್ನ ಮೇಲೇ ನಂಬಿಕೆ ಕಳೆದುಕೊಂಡಿದ್ದಳಂತೆ. ಈ ಆಟಕ್ಕೆ ವಿದಾಯ ಹೇಳಿಬಿಡಬೇಕೆಂಬ ತೀರ್ಮಾನವೂ ಮನಸ್ಸಿನಲ್ಲಿ ಹಾದುಹೋಗಿತ್ತಂತೆ. ಹಾಗಂತ, 'ನನ್ನ ಕೈಲಿ ಆಡಲಾಗುತ್ತಿಲ್ಲ, ಮೈ ಚಾಯ್ಸ್’ ಎಂದು ಅವಳು (Racket) ಎಸೆದುಬಿಡಲಿಲ್ಲ. ವರ್ಷಗಳಿಂದ ತನಗಾಗಿ ಅನೇಕ ತ್ಯಾಗಗಳನ್ನು ಮಾಡಿಕೊಂಡು ಬಂದ ತಂದೆ-ತಾಯಿಯರ ನಿರೀಕ್ಷೆಗಳನ್ನು ಹುಸಿ ಮಾಡಲಿಲ್ಲ. ತಾನು ಬಯಸಿದಷ್ಟು ಸಮಯ ತರಬೇತಿ ಹಾಗೂ ತನ್ನೆಡೆ ಹೆಚ್ಚಿನ ಗಮನವನ್ನು ನೀಡದ ಗೋಪಿಚಂದ್‍ರ ಅಕಾಡೆಮಿಯನ್ನು ಕಳೆದ ಸೆಪ್ಟೆಂಬರ್‍ನಲ್ಲಿ ತೊರೆದಳು. ಬೆಂಗಳೂರಿನಲ್ಲಿರುವ ಪ್ರಕಾಶ್ ಪಡುಕೋಣೆಯವರ ಅಕಾಡೆಮಿ ಸೇರಿ ಅಲ್ಲಿ ವಿಮಲ್ ಕುಮಾರ್ ಎಂಬ ತರಬೇತುದಾರರ ಕೈಕೆಳಗೆ ತರಬೇತಿ ಪಡೆಯತೊಡಗಿದಳು. ಫಲಿತಾಂಶ ಈಗ ನಮ್ಮೆದುರಲ್ಲೇ ಇದೆ.

2015ರ ಇಂಡಿಯಾ ಓಪನ್ ಗ್ರಾಂಡ್ ಪ್ರೀ ಗೆದ್ದಿದ್ದೂ ಅಲ್ಲದೆ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಎಂಬ ಪಟ್ಟವನ್ನೂ ದಕ್ಕಿಸಿಕೊಂಡಿದ್ದಾಳೆ. ಮೈ ಚಾಯ್ಸ್ ಎಂದು ಹೇಳಿ ಶಿಸ್ತಿನ, ಬದ್ಧತೆಯ ಚೌಕಟ್ಟಿನಿಂದ ನುಸುಳಿಕೊಂಡು ಹೊರಬರುವುದು ಸುಲಭ. ಏಕೆಂದರೆ ಮನಸೋ ಇಚ್ಛೆ ಮಾಡಿಕೊಳ್ಳುವ ಆಯ್ಕೆಗಳಿಗೆ ಪರಿಣಾಮದ ಹಂಗಿರುವುದಿಲ್ಲ. ಆದರೆ ಸೈನಾಳಂಥ ಪರಿಣಾಮದ ಸೃಷ್ಟಿಯಾಗಬೇಕಾದರೆ ಹೆಜ್ಜೆ ಹೆಜ್ಜೆಗೂ ದೊರಕುವ ಬಹಳಷ್ಟು ಚಾಯ್ಸ್ ಗಳನ್ನು ಮುಲಾಜಿಲ್ಲದೆ ಬದಿಗೆ ಸರಿಸಬೇಕು. ನಾನು ಎಂಬ ಸ್ವಾರ್ಥಕ್ಕಿಂತ ಹೆಚ್ಚಾಗಿ ನನ್ನ ಜನ, ನನ್ನ ದೇಶಗಳೆಂಬ ಭಾವನೆಗಳೇ ಮುಖ್ಯವಾಗಬೇಕು. ಮೈಮಾಟದ ಅಂದವನ್ನು ಕಾಪಾಡಿಕೊಳ್ಳುವ ಸಲುವಾಗಿ ಜಿಮ್‍ಗೆ ಹೋಗುವ ದೀಪಿಕಾಳಿಗೂ, ದೈಹಿಕ ಕ್ಷಮತೆಯ ಸಲುವಾಗಿ ಕಸರತ್ತುಗಳನ್ನು ಮಾಡುವ ಸೈನಾಳಿಗೂ ಬಹಳ ವ್ಯತ್ಯಾಸವಿದೆ. ಚಿತ್ರೀಕರಣದ ವೇಳೆ ದೀಪಿಕಾಳ ಒಂದು ಶಾಟ್ ತಪ್ಪಾದರೆ ನೂರು ರೀಟೇಕ್‍ಗಳಿಗೆ ಅವಕಾಶವಿದೆ. ಆಕೆ ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಪಂದ್ಯದಲ್ಲಿ ಸೈನಾಳ ಒಂದು ಶಾಟ್ ತಪ್ಪಾದರೆ ಅದು ಅವಳ ಆತ್ಮವಿಶ್ವಾಸವನ್ನೇ ನುಚ್ಚುನೂರು ಮಾಡಬಹುದು. ಕ್ರೀಡಾ ಜೀವನಕ್ಕೇ ಮುಳುವಾಗಬಹುದು!

ದೀಪಿಕಾಳ ವೀಡಿಯೋಗೆ ಪ್ರತ್ಯುತ್ತರವೆಂಬಂತೆ ಕೆಲ ವಿದ್ಯಾರ್ಥಿಗಳು ಬಹಳ ಮಾರ್ಮಿಕವಾದ ಒಂದು ವೀಡಿಯೋ ಮಾಡಿದ್ದಾರೆ. ಅದರಲ್ಲಿ ಪುರುಷನೊಬ್ಬ ಥೇಟ್ ದೀಪಿಕಾಳಂತೆಯೇ, ನನ್ನ ಬಟ್ಟೆ, ನನ್ನ ಕಾರು, ನನ್ನ ಮನೆ ಎಲ್ಲ ನನ್ನ ಆಯ್ಕೆ ಎನ್ನುವವರೆಗೂ ಎಲ್ಲ ಸರಿಯಾಗಿರುತ್ತದೆ. ಮದುವೆಯಾಚೆಗಿನ ಸೆಕ್ಸ್ ನನ್ನ ಆಯ್ಕೆ ಎನ್ನುತ್ತಿದ್ದಂತೆ ಒಂದು ದೃಶ್ಯ ತೋರಿಸುತ್ತಾರೆ. ಅದು ಮೋಸ ಮಾಡಿದ ಗಂಡನ ಕತ್ತಿನ ಪಟ್ಟಿಯನ್ನು ಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಅವನನ್ನು ಉಗಿದು ಉಪ್ಪಿನಕಾಯಿ ಹಾಕುತ್ತಿರುವ ಹೆಂಡತಿಯ ದೃಶ್ಯ! ಅವಳ ಬೆಂಬಲಕ್ಕೆ ಸುತ್ತಲೂ ಹಲವಾರು ಮಂದಿ. ನನಗೆ ಮೋಸ ಮಾಡಿ ನನ್ನ ಬಾಳನ್ನು ಯಾಕೋ ಹಾಳುಮಾಡಿದೆ ಅಯೋಗ್ಯ ಎಂದು ಕಿರುಚಾಡುತ್ತಿರುವ ಹೆಂಡತಿ. ಅವಳ ಜೊತೆ ಸೇರಿ ಅವನಿಗೆ ಸಹಸ್ರನಾಮಾರ್ಚನೆ ಮಾಡುತ್ತಿರುವ ಮತ್ತೋರ್ವ ಹೆಂಗಸು. ಇದಲ್ಲವೇ ವಾಸ್ತವ?

ಸೆಲೆಬ್ರಿಟಿಗಳ ಅಭಿಮಾನಿಗಳಾಗಿ ಅತಿರೇಕಕ್ಕೆ ಬೀಳುವ ನಾವೂ ಕೊಂಚ ಯೋಚಿಸಬೇಕಿದೆ. ದೀಪಿಕಾಳ ಮಾತುಗಳನ್ನೇ ಅನ್ವಯಿಸುವುದಾದರೆ ಗಡಿಯಲ್ಲಿ ವೈರಿ ಬಂದು ನಿಂತಾಗ ನಮ್ಮ ಯೋಧರು 'ಮೈ ಚಾಯ್ಸ್' ಎಂದು ಬಂದೂಕನ್ನು ಬಿಸುಟರೆ ಏನಾದೀತು? ಆಪರೇಷನ್ ಥಿಯೇಟರಿಗೆ ಕೊಂಡೊಯ್ದ ಪೇಷೆಂಟನ್ನು ನೋಡಿದ ವೈದ್ಯ 'ಮೈ ಚಾಯ್ಸ್' ಎಂದು ಸಲೀಸಾಗಿ ಹೊರ ನಡೆದರೆ? ಸತ್ತವರ ಅಂತಿಮ ಸಂಸ್ಕಾರ ನಡೆಸಿಕೊಡಿ ಎಂದು ಕರೆದಾಗ ಪುರೋಹಿತರು 'ಮೈ ಚಾಯ್ಸ್' ಎಂದು ತಾರಮ್ಮಯ್ಯ ಅಂತ ಕೈಯ್ಯಾಡಿಸಿಬಿಟ್ಟರೆ?

ಖ್ಯಾತಿಯನ್ನು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳು ತಮ್ಮ ನಡೆ-ನುಡಿಗಳ ಬಗ್ಗೆ ಎಚ್ಚರದಿಂದಿರಬೇಕು. ಅವರನ್ನು ಅನುಕರಿಸುವ, ನೆರಳಿನಂತೆ ಅನುಸರಿಸುವ ಸಾವಿರಾರು ಮನಸ್ಸುಗಳಿರುತ್ತವೆ. ನಮಗೆ ಯಾರು ಮಾದರಿಯಾಗುತ್ತಾರೆ? ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಅಸಂಬದ್ಧ ಹೇಳಿಕೆಗಳನ್ನು ನೀಡಿರುವ ದೀಪಿಕಾಳೋ ಅಥವಾ ತನ್ನ ಶ್ರಮ ಏಕಾಗ್ರತೆಗಳಿಂದ ಸಾಧನೆಯ ಶಿಖರವನ್ನೇರಿರುವ ಸೈನಾ ನೆಹವಾಲಳೋ?

ಮೈ ಚಾಯ್ಸ್ ಎನ್ನುವಷ್ಟು ಮತಿಭ್ರಮಣೆ ನಮಗಂತೂ ಆಗಿಲ್ಲ!


No comments:

Post a Comment