Thursday, 26 March 2015

ರಾಜಕಾರಣಿಗಳೇ, ಅಧಿಕಾರಿಗಳೆಂದರೆ ಏಕಿಷ್ಟು ಅಗ್ಗ ನಿಮಗೆ?

'ನೀನು ಹಲ್ಕಾ ಕೆಲಸ ಮಾಡ್ಕೊಂಡ್ರೆ ಮಗನೆ, ಸಸ್ಪೆಂಡ್ ಆಗೋದಲ್ಲ, ಜೀವನ ಪೂರ್ತಿ ಊಟ ಸಿಗದಂಗೆ ಮಾಡಿಬಿಡ್ತೀನಿ ಹುಷಾರ್. ನಿಂದು ಗಾಂಚಲಿ ಜಾಸ್ತಿ ಆಗೋಯ್ತು'. ಆಹಾ! ಎಂಥ ಮುತ್ತಿನಂಥ ಮಾತುಗಳು ಇವು! ನಮ್ಮ ಶಾಲಾ ಪರೀಕ್ಷೆಗಳಲ್ಲಿ ಸಂದರ್ಭ ಸಹಿತ ವಿವರಿಸಿ ಎಂಬ ಶೀರ್ಷಿಕೆಯಡಿಯಲ್ಲಿ ಈ ಮಾತನ್ನು ಯಾರು ಯಾರಿಗೆ ಹೇಳಿದರು ಎಂಬ ಪ್ರಶ್ನೆ ಇರುತ್ತಿತ್ತಲ್ಲ, ಅದೀಗ ನೆನಪಾಗುತ್ತಿದೆ. ಇಲ್ಲಿ ಬೈಸಿಕೊಂಡ ನತದೃಷ್ಟ ಯಾರೋ ಗೊತ್ತಿಲ್ಲ, ಆದರೆ ಬೈದ ಮಹಾನುಭಾವ ವರ್ತೂರು ಪ್ರಕಾಶ್ ಎಂಬ ಶಾಸಕ! ಈ ಮಾತುಗಳಿರುವ ಆಡಿಯೋ ಬಹುತೇಕರ ಮೊಬೈಲ್‍ಗಳಲ್ಲಿ ಕೆಲದಿನಗಳಿಂದ ಹರಿದಾಡುತ್ತಿದೆ. ಇದರ ಮುದ್ರಿತ ರೂಪವೂ ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆತ ತನ್ನ ಎಲುಬಿಲ್ಲದ ನಾಲಗೆಯನ್ನು ತನ್ನದೇ ಕೈಕೆಳಗಿನ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹರಿಬಿಟ್ಟಿರುವ ರೀತಿ ಇದು! ಕೇಳಿದೊಡನೆ ಎಂಥಾ ಜಿಗುಪ್ಸೆ ಹುಟ್ಟುತ್ತದಲ್ಲವೆ? ಹಾಗಂತ ಇದು ಆತನಿಗೆ ಮಾತ್ರ ಸೀಮಿತ ಎಂದುಕೊಳ್ಳಬೇಡಿ. ಇನ್ನೊಂದಷ್ಟು ನಮೂನೆಗಳು ಇಲ್ಲಿವೆ ನೋಡಿ.
‘ಬಕ್‍ವಾಸ್ ಕರ್ತೇ ಹೋ? ಚುಪ್ ಬೈಠಿಯೇ ಆಪ್, ಬದ್‍ತಮೀಜ್ ಕಹೀಂ ಕಾ’ ಎಂದು ಸಮಾಜವಾದಿ ಪಕ್ಷದ ಸಚಿವ ಆಜಂ ಖಾನ್ ತುಂಬಿದ ಸಭೆಯಲ್ಲಿ, ಪತ್ರಕರ್ತರೆಲ್ಲರ ಎದುರೇ ತನ್ನ ಕೈಕೆಳಗಿನ ಐಎಎಸ್ ಅಧಿಕಾರಿಯ ಮೇಲೆ ಅಬ್ಬರಿಸಿದ್ದ. ತಾನು ಉತ್ತರಪ್ರದೇಶದ ನಗರಾಭಿವೃದ್ಧಿ ಸಚಿವನೆಂಬ ದರ್ಪ ಆತನ ಕೈಲಿ ಆ ಮಾತುಗಳನ್ನಾಡಿಸಿತ್ತು. ಹಿಂದಿಯಲ್ಲಿ ಬೈದ ಆ ಮಾತುಗಳ ಭಾವಾರ್ಥ, 'ತಲೆಹರಟೆ ಮಾತಾಡುತ್ತೀಯಾ? ತೆಪ್ಪಗಿರು, ಶಿಸ್ತಿಲ್ಲದ ಮನುಷ್ಯ ನೀನು' ಎಂಬುದು. ಆ ಐಎಎಸ್ ಅಧಿಕಾರಿ ಪ್ರತ್ಯುತ್ತರ ನೀಡುವುದು ಹಾಗಿರಲಿ, ತಗ್ಗಿಸಿದ ತಲೆಯನ್ನೂ ಮೇಲೆತ್ತಲಿಲ್ಲ. ಅಂದಹಾಗೆ, ಪಾಪ ಅವರ ತಪ್ಪೇನೂ ಇರಲಿಲ್ಲ. ಅವರ ಇಬ್ಬರು ಸಹೋದ್ಯೋಗಿಗಳು ಅಂದು ಆಜಂ ಖಾನ್ ಕರೆದಿದ್ದ ಸಭೆಯನ್ನು ಬಿಟ್ಟು ಮತ್ತ್ಯಾವುದೋ ಸಭೆಗೆ ಹೋಗಿದ್ದರು. ಅದನ್ನು ಹೇಳಹೋದ ಆ ಅಧಿಕಾರಿ ಆಜಂ ಖಾನ್‍ ಕೈಲಿ ಶಿಸ್ತಿನ ಪಾಠವನ್ನು ಸಾರ್ವಜನಿಕವಾಗಿ ಹೇಳಿಸಿಕೊಳ್ಳಬೇಕಾಯಿತು. ಜೊತೆಗೆ, 'ನಾನು ಶಿಸ್ತಿನ ಮನುಷ್ಯ. ನನ್ನ ಕೈಕೆಳಗಿನ ಅಧಿಕಾರಿಗಳಷ್ಟೇ ಯಾಕೆ, ನಾನೇ ಶಿಸ್ತನ್ನು ಮೀರಿದರೆ ಸ್ವತಃ ನನ್ನನ್ನೂ ದಂಡಿಸಿಕೊಳ್ಳದೆ ಬಿಡುವುದಿಲ್ಲ' ಎಂದು ತನ್ನ ಕೊಳಕು ಮಾತುಗಳನ್ನು ಮಾಧ್ಯಮಗಳೆದುರು ಸಮರ್ಥಿಸಿಕೊಂಡಿದ್ದ! ಆತನ ಶಿಸ್ತು, 'ಕಾರ್ಗಿಲ್ ಯುದ್ಧವನ್ನು ಗೆದ್ದವರು ಹಿಂದೂಗಳಲ್ಲ, ಮುಸ್ಲಿಂ ಸೈನಿಕರು' ಎಂಬ ಹೇಳಿಕೆ ನೀಡಿ ಯೋಧರ ಒಗ್ಗಟ್ಟನ್ನು ಮುರಿಯುವ ಮಟ್ಟದ್ದು. ಅದೂ ಹೋಗಲಿ, ಕಳೆದು ಹೋದ ತನ್ನ ಏಳು ಎಮ್ಮೆಗಳನ್ನು ಹುಡುಕಿಸಿಕೊಳ್ಳಲು ಉತ್ತರಪ್ರದೇಶದ ಪೋಲೀಸರನ್ನು ಹಾಗೂ ಪೋಲೀಸು ನಾಯಿಗಳನ್ನು ಬೀದಿ ಬೀದಿ ಅಲೆಸಿದನಲ್ಲ, ಆಗ ಇಡೀ ದೇಶವೇ ಆ ಭೂಪನನ್ನು ನೋಡಿ ನಕ್ಕಿತ್ತು. ಎಲ್ಲಿಗೆ ಬಂತಪ್ಪಾ ಅಧಿಕಾರದ ದುರುಪಯೋಗ ಎಂದು ವಿಷಾದ ಪಟ್ಟಿತ್ತು! ಅಂಥವನಿಂದ ಐಎಎಸ್ ಅಧಿಕಾರಿಗೆ ಶಿಸ್ತಿನ ಉಪದೇಶ!ಕಾನ್ಪುರದ ಸಮಾಜವಾದಿ ಪಕ್ಷದ ಪುಢಾರಿ ಇರ್ಫಾನ್ ಸೋಲಂಕಿಯದ್ದು ಮತ್ತೊಂದು ಕಥೆ. 20 ಜನರ ದಂಡು ಕಟ್ಟಿಕೊಂಡು, ಕಾನ್ಪುರದ ವಿದ್ಯುಚ್ಛಕ್ತಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ರಿತು ಮಹೇಶ್ವರಿ ಎಂಬ ಮಹಿಳಾ ಐಎಎಸ್ ಅಧಿಕಾರಿಯ ಕಚೇರಿಗೆ ನುಗ್ಗಿದ್ದ. ಆಕೆಯನ್ನು ಅವಾಚ್ಯವಾಗಿ ನಿಂದಿಸಿ ಅಸಭ್ಯವಾಗಿಯೂ ವರ್ತಿಸಿದ್ದ.

ಮತ್ತೊಂದು ಪ್ರಕರಣದಲ್ಲಿ ಉತ್ತರಪ್ರದೇಶದ ಐಪಿಎಸ್ ಅಧಿಕಾರಿ ಉದಯ್ ಶಂಕರ್ ಜೈಸ್ವಾಲ್, ಕೃಷಿ ಸಚಿವ ಆನಂದ್ ಸಿಂಗ್‍ರ ಪದತಲದಲ್ಲಿ ಚಕ್ಕಳಮಟ್ಟೆ ಹಾಕಿಕೊಂಡು ಕುಳಿತಿದ್ದ ಚಿತ್ರ ಮಾಧ್ಯಮಗಳಲ್ಲೆಲ್ಲ ಪ್ರಸಾರವಾಗಿತ್ತು. ಆ ಅಧಿಕಾರಿ ಅಚ್ಚುಕಟ್ಟಾಗಿ ನೆಲದ ಮೇಲೆ ಕುಳಿತು, ತಮ್ಮ ಕಚೇರಿಗೆ ಸಂಬಂಧಿಸಿದ ಕಾಗದ-ಪತ್ರಗಳನ್ನು ಹರವಿಕೊಂಡು ಫೋನಿನಲ್ಲಿ ಸಂಭಾಷಿಸುತ್ತಿದ್ದರೆ, ಸಚಿವ ಮಹಾಶಯರು ಮೇಲೆ ವಿರಾಜಮಾನರಾಗಿದ್ದರು!

ಇವು ಬೆಳಕಿಗೆ ಬಂದಿರುವ ಕೆಲವು ಉದಾಹರಣೆಗಳಾದರೆ ತೆರೆಮರೆಯಲ್ಲಿ ನಿತ್ಯ ನಡೆಯುವ ಹೀಯಾಳಿಕೆ, ಬೈಗುಳ, ಅಪಮಾನಗಳೆಷ್ಟಿರಬಹುದೋ ಊಹಿಸಿ! ಅಧಿಕಾರಿಗಳನ್ನು ಘಂಟೆಗಟ್ಟಳೆ ತಮ್ಮ ಕಚೇರಿಯ ಹೊರಗೆ ನಿಲ್ಲಿಸಿ ಕಾಯಿಸುವ, ಅವರಿಂದ ತಮ್ಮ ಖಾಸಗಿ ಕೆಲಸಗಳನ್ನು ಮಾಡಿಸಿಕೊಳ್ಳುವ, ಅವರು ತಮ್ಮ ಸ್ವಾಭಿಮಾನವನ್ನು ಬಲಿಕೊಟ್ಟು ಅವುಡುಗಚ್ಚಿ ಎಲ್ಲವನ್ನೂ ಸಹಿಸುವಂತೆ ಮಾಡುವ, ಸೆಟೆದು ನಿಲ್ಲುವವರನ್ನು ಮನಬಂದಂತೆ ಎತ್ತಂಗಡಿ ಅಥವಾ ಅಮಾನತು ಮಾಡುವ ನೂರಾರು ಘಟನೆಗಳ ಹಿಂದೆ ರಾಜಕಾರಣಿಗಳ ಕೈವಾಡವೇ ಅಲ್ಲವೇ ಇರುವುದು? ಪ್ರಾಮಾಣಿಕ ಅಧಿಕಾರಿಗಳ ಮೇಲೆ ನಡೆಯುವ ಹಲ್ಲೆ, ದಾಳಿಗಳಿಗೆ, ಬೆಲೆಯೇ ಇಲ್ಲದಂತೆ ನಿಗೂಢವಾಗಿ ಮುರುಟಿ ಹೋಗುವ ಅವರ ಜೀವಗಳಿಗೆ ಹೊಣೆಯೂ ರಾಜಕಾರಣಿಗಳೇ ತಾನೆ?

ಕಾರ್ಪೋರೇಟ್ ಪ್ರಪಂಚದ ಒಂದೇ ಒಂದು ಉದಾಹರಣೆ ತೆಗೆದುಕೊಳ್ಳಿ. ಪ್ರತಿ ಕಂಪೆನಿಯಲ್ಲೂ ಮಾನವ ಸಂಪನ್ಮೂಲ ವಿಭಾಗವೆಂಬುದೊಂದಿರುತ್ತದೆ. ಕೆಲಸ ಮಾಡದ ಶುದ್ಧಾತಿಶುದ್ಧ ಮುಟ್ಠಾಳನನ್ನೂ ‘ನೀನು ಅಯೋಗ್ಯ’ ಎಂದು ನೇರವಾಗಿ ಬಯ್ಯುವಂತಿಲ್ಲ. ನಿನ್ನ ಕೆಲಸದ ಗುಣಮಟ್ಟ ನಮ್ಮ ನಿರೀಕ್ಷೆಯಷ್ಟಿಲ್ಲ ಎಂಬ ಬೆಣ್ಣೆ ಸವರಿದ ಪ್ರೀತಿಯ ಮಾತುಗಳನ್ನಾಡೇ ಅವನನ್ನು ಸಾಗಹಾಕಬೇಕು. ಆ ಮಗನೆ ಈ ಮಗನೆ ಎಂದು ಏಕವಚನದಲ್ಲಿ ಬೈಯ್ಯುವುದು ಹಾಗಿರಲಿ, ನಮ್ಮ ಮಾತಿನ ಧಾಟಿ ತುಸು ಕಟುವಾಗಿದ್ದು ಅವನ ಮನಸ್ಸಿಗೆ ನೋವಾಗಿಬಿಟ್ಟರೆ ಮಾನವ ಸಂಪನ್ಮೂಲ ವಿಭಾಗದವರು ನಮ್ಮ ಜನ್ಮ ಜಾಲಾಡಿಬಿಡುತ್ತಾರೆ. ಕೆಲಸ ಬರುವುದಿಲ್ಲವೆಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬನ ಮಾನಸಿಕ ಸ್ಥೈರ್ಯವನ್ನು ತುಳಿದುಹಾಕುವ ಯಾವ ಹಕ್ಕೂ ನಮಗಿರುವುದಿಲ್ಲ ಎಂಬುದು ಖಂಡಿತ ಒಪ್ಪಬೇಕಾದ್ದೇ. ಇಂಜಿನಿಯರುಗಳಿಗೆ ಇರುವ ಪರಿಗಣನೆ ಅಧಿಕಾರಿಗಳಿಗೇಕಿಲ್ಲ? ಅವರೂ ಮನುಷ್ಯರೇ ತಾನೆ?

ಏಕೆ ರಾಜಕಾರಣಿಗಳೇ ಈ ಧೋರಣೆ? ನಿಮಗೆ ಅಷ್ಟೊಂದು ಅಗ್ಗವಾ ನಮ್ಮ ಅಧಿಕಾರಿಗಳೆಂದರೆ, ಅದರಲ್ಲೂ ಐಎಎಸ್ ಅಧಿಕಾರಿಗಳೆಂದರೆ? ಅಥವಾ ಐಎಎಸ್ ಅಧಿಕಾರಿಯಾಗುವುದು ರಾಜಕಾರಣಿಯಾದಷ್ಟೇ ಸಲೀಸು ಎಂದುಕೊಂಡುಬಿಟ್ಟಿದ್ದೀರೋ ಹೇಗೆ? ಇಲ್ಲಿ ಕೇಳಿ, ನೀವು ಸ್ಲೇಟು-ಬಳಪ ಕೈಯ್ಯಲ್ಲಿ ಹಿಡಿಯದೇ ಇದ್ದರೂ, ನಿಮ್ಮ ನಾಲಗೆಯಿಂದ ನಾಲ್ಕು ಪದಗಳು ಸರಿಯಾಗಿ ಉದುರದೇ ಇದ್ದರೂ ನೀವು ರಾಜಕಾರಣಿಗಳಾಗಬಹುದು! ನಿಮ್ಮ ಯೋಗ್ಯತೆಯನ್ನಳೆಯುವ ಒಂದೇ ಒಂದು ಸರಳ ಸ್ಪರ್ಧೆ, ಪರೀಕ್ಷೆ,? ಉಹೂಂ. ಇಲ್ಲವೇ ಇಲ್ಲ. ನಿಮಗೆ ಯಾವ ವಿದ್ಯಾರ್ಹತೆಯೂ ಬೇಕಿಲ್ಲ, ವ್ಯಕ್ತಿತ್ವ ಹೀಗೇ ಇರಬೇಕೆಂಬ ಯಾವ ಮಾನದಂಡವೂ ಇಲ್ಲ.  ನಿಮ್ಮ ಭಾಷೆ, ಮ್ಯಾನರಿಸಂ, ವ್ಯವಹರಿಸುವ ರೀತಿಯ ಬಗ್ಗೆ ಕಟ್ಟುಪಾಡುಗಳಿಲ್ಲ. ನಮ್ಮನ್ನು ಆಳುವ ನಿಮ್ಮಿಂದ ಒಟ್ಟಾರೆ ನಮಗಿರುವುದು ಶೂನ್ಯ ನಿರೀಕ್ಷೆಗಳು! ಜಾತಿ, ಹಣ, ಹೆಸರು ಅಥವಾ ತೋಳ್ಬಲಗಳ ಬೆಂಬಲವಿದ್ದರೆ ನೀವು ಬೇಕೆಂದಾಗ ರಾಜಕಾರಣಿಗಳಾಗಬಹುದು! ಗ್ರಹಚಾರವೊಂದು ಸರಿಯಾಗಿರಬೇಕು ಅಷ್ಟೆ. ಅದನ್ನೂ ಹುಟ್ಟುತ್ತಲೇ ಹಣೆಯ ಮೇಲೆ ಬ್ರಹ್ಮನ ಕೈಲೇ ಬರೆಸಿಕೊಂಡು ಬಂದುಬಿಡುವುದರಿಂದ ಅದರಲ್ಲೂ ಶ್ರಮ ಹಾಕುವ ಪ್ರಮೇಯವಿಲ್ಲ! ರಾಜಕಾರಣಿಗಳೆಂಬ ಪಟ್ಟ ಸಿಕ್ಕಿ, ಕೈಗೊಂದು ಪದವಿಯೂ ದಕ್ಕಿಬಿಟ್ಟರಂತೂ ನೀವು ಆಡಿದ್ದೇ ಆಟ! ಅಧಿಕಾರಿಗಳೆಲ್ಲ ನಿಮ್ಮ ಸೇವಕರು ಎಂಬ ಭ್ರಾಂತಿಗೆ ಬೀಳುತ್ತೀರಲ್ಲ, ಜನರ ಸೇವಕರಂತೆ ಕೆಲಸ ಮಾಡಬೇಕಾದವರು ನೀವು ಎಂಬುದನ್ನು ಏಕೆ ಮರೆಯುತ್ತೀರ? ಬದುಕಿರುವಾಗಲಂತೂ ಸರಿಯೇ ಸರಿ, ಸತ್ತ ಮೇಲೂ ಅಧಿಕಾರಿಗಳನ್ನು 'ಅವನು', 'ಇವನು' ಎಂದು ಏಕವಚನದಲ್ಲಿ ಕರೆಯುತ್ತೀರಲ್ಲ, ಅವರ ಪ್ರತಿಭೆಗೆ, ವಿದ್ಯಾರ್ಹತೆಗೆ, ಕಡೇಪಕ್ಷ ಜೀವಕ್ಕೊಂದು ಬೆಲೆಯಾದರೂ ಬೇಡವೆ?

ನಿಮ್ಮ ಕೈಕೆಳಗೆ ದುಡಿಯುವ ಒಬ್ಬೊಬ್ಬ ಐಎಎಸ್ ಅಧಿಕಾರಿಯೂ ಅದೆಷ್ಟು ಕಷ್ಟಪಟ್ಟು ಆ ಮಟ್ಟಕ್ಕೇರಿರುತ್ತಾನೆ ಗೊತ್ತಾ? ಪ್ರತಿ ವರ್ಷ ಲಕ್ಷಾಂತರ ಯುವಕ-ಯುವತಿಯರು ಐಎಎಸ್ ಪಾಸು ಮಾಡುವ ಕನಸು ಕಾಣುತ್ತಾರೆ. ಕನಸೆಂದರೆ ಎಮ್ಮೆ ಅಥವಾ ಹಸುಗಳನ್ನು ಮೇಯಿಸಿಕೊಂಡು ಕಾಣುವ ಹಗಲುಗನಸಲ್ಲ. ಹಟಕ್ಕೆ ಬಿದ್ದು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತಾಸುಗಟ್ಟಳೆ ಓದಿ, ವರ್ಷಗಟ್ಟಳೆ ಹಾಕುವ ಸತತ ಶ್ರಮ ಅದು. ಮೊದಲು ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಆ ಪರೀಕ್ಷೆಯೇ ಕಠಿಣ. ತಲಾ 200 ಅಂಕಗಳ ಎರಡು ಪೇಪರ್. ಇತಿಹಾಸ, ವಿಜ್ಞಾನ, ಪ್ರಚಲಿತ ವಿದ್ಯಮಾನ, ಭೂಗೋಳ, ಸಂವಹನ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ನೈಪುಣ್ಯ, ಹೀಗೆ ಹಲವಾರು ವಿಷಯಗಳ ಕುರಿತು ತಯಾರಿ ನಡೆಸಬೇಕು. ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಗುರುತಿಸಬೇಕು. ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆದುಕೊಳ್ಳಬೇಕು. ಒಟ್ಟಿನಲ್ಲಿ ಆ ಹಂತ ದಾಟಿದ ಮೇಲೆ ಮುಖ್ಯ ಪರೀಕ್ಷೆ! ಒಂಭತ್ತು ಪೇಪರ್‍ಗಳಿರುವ ಮುಖ್ಯ ಪರೀಕ್ಷೆಯ ಒಟ್ಟು ಅಂಕಗಳು 1750! ಪ್ರಬಂಧ, ಸಾಮಾನ್ಯ ವಿಷಯಗಳು, ಐಚ್ಛಿಕ ವಿಷಯಗಳೆಲ್ಲವೂ ಅದರಲ್ಲಿರುತ್ತವೆ. ಆಡಳಿತ, ಸಂವಿಧಾನ, ವಿದೇಶಾಂಗ ವ್ಯವಹಾರ, ತಂತ್ರಜ್ಞಾನಗಳಿಂದ ಹಿಡಿದು ನೈತಿಕತೆ, ಸಮಗ್ರತೆಯವರೆಗಿನ ಎಲ್ಲ ಪಾಠಗಳನ್ನೂ ಓದಬೇಕು. ಇದರ ಜೊತೆಗೆ 275 ಅಂಕಗಳ ಮೌಖಿಕ ಪರೀಕ್ಷೆ ಬೇರೆ. ಒಟ್ಟಿನಲ್ಲಿ ಐಎಎಸ್ ಪರೀಕ್ಷೆಗೆ ಕೂರುವ ಅಭ್ಯರ್ಥಿಗಳು ಭಾರತ ಮಾತ್ರವಲ್ಲ, ಇಡೀ ವಿಶ್ವದ ಆಗುಹೋಗುಗಳ ಬಗ್ಗೆ ತಿಳಿದುಕೊಂಡಿರಬೇಕು. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವವರಂತೂ ಎಲ್ಲ ವಿಷಯಗಳಲ್ಲೂ ಎತ್ತಿದ ಕೈ ಎನ್ನುವಷ್ಟು ಜ್ಞಾನವನ್ನು ಸಂಪಾದಿಸಿಕೊಂಡವರೇ. ಇನ್ನೊಂದು ವಿಷಯ ಗೊತ್ತಾ? ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಅತ್ಯುನ್ನತವಾದದ್ದು ಐಎಎಸ್ ಹಾಗೂ ಐಎಫ್‍ಎಸ್. ಒಮ್ಮೆ ಓರ್ವ ಅಭ್ಯರ್ಥಿ ಐಎಎಸ್ ಅಥವಾ ಐಎಫ್‍ಎಸ್ ಅಧಿಕಾರಿಯಾಗಿ ನಿಯುಕ್ತನಾದರೆ ಅವನು ಮತ್ತೊಮ್ಮೆ ನಾಗರಿಕ ಸೇವಾ ಪರೀಕ್ಷೆಗೆ ಕೂರುವ ಹಾಗಿಲ್ಲ! ಏಕೆಂದರೆ ಐಎಎಸ್‍ ಅಥವಾ ಐಎಫ್‍ಎಸ್‍ಗೆ ಸೇರಲು ಬೇಕಾಗುವಷ್ಟು ಅಂಕಗಳನ್ನು ಗಳಿಸಬಲ್ಲವರು ಗರಿಷ್ಠ ಮಟ್ಟವನ್ನು ಮುಟ್ಟಿದಂತೆ! ಹಾಗಾದರೆ ಅಭ್ಯರ್ಥಿಗಳು ಅದಿನ್ಯಾವ ಮಟ್ಟದ ತಯಾರಿ ನಡೆಸಬೇಕು ಹೇಳಿ? ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದಕ್ಕೆ ಅದೆಷ್ಟು ತರಬೇತಿ, ಏಕಾಗ್ರತೆ, ಪರಿಶ್ರಮಗಳು ಬೇಕು?

ಇಷ್ಟು ಬುದ್ಧಿವಂತರನ್ನ, ಪ್ರತಿಭಾವಂತರನ್ನ ನಿಮ್ಮ ಜೋಳಿಗೆಗೆ ಹಾಕುತ್ತಾರಲ್ಲ, ನೀವು ಅವರನ್ನು ನಡೆಸುಕೊಳ್ಳುವ ರೀತಿ ಸರಿಯಾ? ಅಸಲಿಗೆ ಯಾರು ಯಾರ ಕೈಕೆಳಗಿರಬೇಕು? ನಿಮಗೆ ಅಧಿಕಾರವಿದೆ ಮತ್ತು ನಿಮ್ಮಲ್ಲೂ ಬೆರಳೆಣಿಕೆಯಷ್ಟು ಮಂದಿ ಸಭ್ಯರು, ಬುದ್ಧಿವಂತರಿದ್ದಾರೆ ಎಂಬ ಅಂಶಗಳನ್ನು ಬಿಟ್ಟರೆ ನಿಮಗೂ ಅವರಿಗೂ ಯಾವುದರಲ್ಲಿ ಹೋಲಿಕೆ? ಇಷ್ಟು ಕ್ಷಮತೆಯುಳ್ಳವರು ನಿಮ್ಮ ರಾಜಕೀಯ ಪಗಡೆಯಾಟದ ಕಾಯಿಗಳೇಕಾಗಬೇಕು? ನೀವು ನಡೆಸಿದಂತೆ ನಡೆದರೆ ಸರಿ, ಇಲ್ಲವೆಂದರೆ ಅವರೇಕೆ ಬಲಿಯಾಗಬೇಕು? ಸ್ವಲ್ಪ ಯೋಚಿಸಿ ನೋಡಿ. ನಮ್ಮ ಯುವಕರು ಇಂಜಿನಿಯರ್, ಡಾಕ್ಟರ್ ಹಾಗೂ ಐಎಎಸ್ ಅಧಿಕಾರಿಗಳಾಗ ಬಯಸುತ್ತಾರೆ. ರಾಜಕಾರಣಿಯಾಗ ಬಯಸುವವರ ಪ್ರಮಾಣ ಎಷ್ಟಿದೆ ಹೇಳಿ? ಇದನ್ನೊಂದು ಔದ್ಯೋಗಿಕ ಕ್ಷೇತ್ರ ಎಂದು ಪರಿಗಣಿಸಲು ಬೇಕಾದ ಘನತೆಯನ್ನೇನಾದರೂ ಉಳಿಸಿದ್ದೀರಾ? ಯಾವುದರಲ್ಲಾದರೂ ಮಾದರಿಯಾಗಿ ಯುವಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದೀರಾ? ಬದಲಿಗೆ, ಅಧಿಕಾರಿಗಳನ್ನು ಇಷ್ಟು ಹೀನಮಟ್ಟದಲ್ಲಿ ಕಂಡು ನಮ್ಮ ಕಣ್ಣುಗಳಲ್ಲಿ ಇನ್ನೂ ಕುಸಿದಿದ್ದೀರ. ಡಿ.ಕೆ ರವಿಯವರ ನಿಗೂಢ ಸಾವಿನಿಂದಾಗಿ ಇಡೀ ರಾಜ್ಯವೇ ಒಗ್ಗಟ್ಟಾಗಿ ಬೀದಿಗಿಳಿದದ್ದು ನೋಡಿದರೆ ನಿಮ್ಮ ವರ್ತನೆಯಿಂದ ನಾವೆಷ್ಟು ರೋಸಿಹೋಗಿದ್ದೇವೆ ಎಂಬುದು ಅರ್ಥವಾಗುವುದಿಲ್ಲವೇ?

ಇರುವ ಯಂಕ, ನಾಣಿ, ಸೀನರಲ್ಲಿ ಒಬ್ಬರನ್ನು ಕಣ್ಮುಚ್ಚಿ ಆರಿಸಿ ಕಳಿಸುವ ನಮ್ಮ ತಪ್ಪೂ ಇದರಲ್ಲಿದೆ ಬಿಡಿ. ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ನಾವು ಸರಿಯಾಗಿ ನಿಭಾಯಿಸಿದರೆ ಇಂಥವಕ್ಕೆ ಆಸ್ಪದವೇ ಇರುವುದಿಲ್ಲ. ಇಂದು ಒಬ್ಬ ಅಧಿಕಾರಿಗಾಗಿ ಜನ ಬೀದಿಗಿಳಿದಿದ್ದಾರೆ. ಇದೇ ಜನ ನಾಳೆ ಈ ವ್ಯವಸ್ಥೆ ಬದಲಾಗಬೇಕೆಂಬ ಹಟಕ್ಕಿಳಿದರೆ ಆಶ್ಚರ್ಯವೇನಿಲ್ಲ.

ಈ ಕ್ಷಣಕ್ಕೆ ನಮಗೆ ತೋಚುತ್ತಿರುವ ಒಂದು ಪರಿಹಾರವೇನು ಗೊತ್ತಾ? ನಿಮಗೂ  ಅರ್ಹತಾ ಪರೀಕ್ಷೆಗಳನ್ನಿಡಬೇಕು. ಅದರಲ್ಲಿ ಉತ್ತೀರ್ಣರಾದವರಿಗೆ ಮಾತ್ರ ರಾಜಕಾರಣಿ ಎಂಬ ಹಣೆಪಟ್ಟಿ ಅಂಟಿಸಬೇಕು. ನಮ್ಮ ಹಾಗೆ ಅಂಕಗಳಿಗೆ, ಉನ್ನತ ಶ್ರೇಣಿಗಳಿಗೆ ನೀವೂ ತಿಣುಕಾಡಬೇಕು. ಆಗಲಾದರೂ ಬುದ್ಧಿವಂತರ, ಪರಿಶ್ರಮಿಗಳ, ದಕ್ಷರ ಹಾಗೂ ಪ್ರಾಮಾಣಿಕರ ಬೆಲೆ ನಿಮಗೆ ತಿಳಿಯಬಹುದು!

5 comments:

 1. ಖಾದಿ ಖದರ್ ಮತ್ತು ಅದರ ಮದ ರಾಜಕಾರಣಿಗಳನ್ನು ಮತ್ತೇರಿಸುತ್ತದೆ ಅಂತ ಕಾಣುತ್ತದೆ! ಪ್ರಜಾಪ್ರಭುತ್ವದ ಆಯ್ಕೆಯ ಪೊಳ್ಳು ಇರುವುದೇ ಬಹು ಮತದಲ್ಲಿ. ಒಂದೇ ಮತ ಹೆಚ್ಚಿಗೆ ಬಂದ ಕತ್ತೆಯೂ ಗೆದ್ದ ಹಾಗೆಯೇ!

  ಇಂತಹ ಪಕ್ಷಾಂತರಿ ರಾಜಕಾರಣಿಗಳನ್ನು ಬೆಳೆಸುವ ನನ್ನಂತಹ ಶ್ರೀ ಸಾಮಾನ್ಯನಿಗಿಲ್ಲ ಮತದಾನದ ನಂತರ ಉಳಿಗಾಲ!

  ReplyDelete
 2. ಖಾದಿ ಖದರ್ ಮತ್ತು ಅದರ ಮದ ರಾಜಕಾರಣಿಗಳನ್ನು ಮತ್ತೇರಿಸುತ್ತದೆ ಅಂತ ಕಾಣುತ್ತದೆ! ಪ್ರಜಾಪ್ರಭುತ್ವದ ಆಯ್ಕೆಯ ಪೊಳ್ಳು ಇರುವುದೇ ಬಹು ಮತದಲ್ಲಿ. ಒಂದೇ ಮತ ಹೆಚ್ಚಿಗೆ ಬಂದ ಕತ್ತೆಯೂ ಗೆದ್ದ ಹಾಗೆಯೇ!

  ಇಂತಹ ಪಕ್ಷಾಂತರಿ ರಾಜಕಾರಣಿಗಳನ್ನು ಬೆಳೆಸುವ ನನ್ನಂತಹ ಶ್ರೀ ಸಾಮಾನ್ಯನಿಗಿಲ್ಲ ಮತದಾನದ ನಂತರ ಉಳಿಗಾಲ!

  ReplyDelete
 3. ಖಾದಿ ಖದರ್ ಮತ್ತು ಅದರ ಮದ ರಾಜಕಾರಣಿಗಳನ್ನು ಮತ್ತೇರಿಸುತ್ತದೆ ಅಂತ ಕಾಣುತ್ತದೆ! ಪ್ರಜಾಪ್ರಭುತ್ವದ ಆಯ್ಕೆಯ ಪೊಳ್ಳು ಇರುವುದೇ ಬಹು ಮತದಲ್ಲಿ. ಒಂದೇ ಮತ ಹೆಚ್ಚಿಗೆ ಬಂದ ಕತ್ತೆಯೂ ಗೆದ್ದ ಹಾಗೆಯೇ!

  ಇಂತಹ ಪಕ್ಷಾಂತರಿ ರಾಜಕಾರಣಿಗಳನ್ನು ಬೆಳೆಸುವ ನನ್ನಂತಹ ಶ್ರೀ ಸಾಮಾನ್ಯನಿಗಿಲ್ಲ ಮತದಾನದ ನಂತರ ಉಳಿಗಾಲ!

  ReplyDelete