Wednesday, 27 January 2016

ಸಾಹಿತಿಗಳೇ ನೀವು ಸಾಹಿತಿಗಳಾಗಿದ್ದರೇ ಚೆನ್ನ!

ಕಳೆದ ಜನವರಿ ಏಳರಂದು ಫ್ರಾನ್ಸ್ ನಲ್ಲಿ ನಡೆದ ಚಾರ್ಲಿ ಹೆಬ್ಡೋ ಘಟನೆ ನಿಮಗೆ ನೆನಪಿರಬೇಕು. ಅವತ್ತು ಹಾಡಹಗಲೇ 11.30 ಸಮಯದಲ್ಲಿ ಪತ್ರಿಕೆಯ ಕಛೇರಿಗೆ ನುಗ್ಗಿದ ಇಬ್ಬರು ಇಸ್ಲಾಂ ಮೂಲಭೂತವಾದಿಗಳು ಸಂಪಾದಕೀಯ ತಂಡದ ಮೇಲೆ ಗುಂಡಿನ ಮಳೆಗರೆದರು. ಪರಿಣಾಮ, ಸಂಪಾದಕ ಹಾಗೂ ನಾಲ್ವರು ವ್ಯಂಗ್ಯಚಿತ್ರಕಾರರು ಸೇರಿದಂತೆ 11 ಜನ ಅಲ್ಲೇ ಹೆಣವಾದರು. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಳಾಯಿತು ಎಂದು ಅಳುತ್ತಾ ಕೂರಲಿಲ್ಲ ಪತ್ರಿಕೆ. ಮರುವಾರವೇ ಇನ್ನಷ್ಟು ಕೆಚ್ಚಿನಿಂದ ಪ್ರಕಟಣೆಗೆ ನಿಂತಿತು. ಸಾಮಾನ್ಯವಾಗಿ 60 ಸಾವಿರ ಪ್ರತಿಗಳನ್ನಷ್ಟೇ ಪ್ರಕಟಿಸುತ್ತಿದ್ದ ಅದು ತನ್ನ ಮುಂದಿನ ಸಂಚಿಕೆಯಲ್ಲಿ ಭರ್ತಿ 80 ಲಕ್ಷ ಪ್ರತಿಗಳನ್ನು ಪ್ರಕಟಿಸಿತು! ಅದೂ ಆರು ಬೇರೆ ಬೇರೆ ಭಾಷೆಗಳಲ್ಲಿ! ಹೀಗಿತ್ತು ಅದರ ಪ್ರತಿಭಟನೆ. ಅದರ ಜೊತೆ ವಿಶ್ವದೆಲ್ಲೆಡೆಯ ವ್ಯಂಗ್ಯಚಿತ್ರಕಾರರೂ ಕೈಜೋಡಿಸಿದರು. ತಮಗಾದ ನೋವನ್ನು ತಮ್ಮ ರೇಖಾಚಿತ್ರಗಳಲ್ಲಿ ಮನೋಜ್ಞವಾಗಿ ಬಿಂಬಿಸಿದರು. ಖಡ್ಗಕ್ಕಿಂತ ಲೇಖನಿ ಹರಿತ ಎನ್ನುವುದನ್ನು ಎಲ್ಲರೂ ಸೇರಿ ಮನದಟ್ಟು ಮಾಡಿಸಿದ ಬಗೆ ವಿಶ್ವವನ್ನೇ ಸೆಳೆದಿತ್ತು. ಘಟನೆ ಈಗ ನೆನಪಾಗುತ್ತಿದೆ. ಅದಕ್ಕೆ ಕಾರಣವೂ ಇದೆ.
ಕಲಬುರ್ಗಿಯವರ ಹತ್ಯೆ ಹಾಗೂ ದಾದ್ರಿಯ ಘಟನೆಗಳನ್ನೇ ನೆಪವಾಗಿಸಿಕೊಂಡು ಈಗಾಗಲೇ 25ಕ್ಕೂ ಹೆಚ್ಚು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಾಪಸ್ ಕೊಡುವುದಾಗಿ ಘೋಷಿಸಿದ್ದಾರೆ. ಪ್ರಶಸ್ತಿ ಹಿಂದಿರುಗಿಸುತ್ತಿರುವುದೇ ದೊಡ್ಡ ಘನಕಾರ್ಯ ಎಂಬಂತೆ ವಿವೇಚನೆಯಿಲ್ಲದೆ ವರ್ತಿಸುತ್ತಿರುವ ಇವರನ್ನು ನೋಡಿದಾಗ ಬೇಸರವಾಗುತ್ತದೆ. ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳೇಳುತ್ತವೆ. ಯಾಕೆ, ಕಲಬುರ್ಗಿಯವರ ಸಾವನ್ನು ಪ್ರತಿಭಟಿಸುವ ಬೇರೆ ಮಾರ್ಗವೇ ಇಲ್ಲವಾ? ಇವರು ಪ್ರಶಸ್ತಿ ವಾಪಸ್ ಕೊಟ್ಟರೆ ಕಲಬುರ್ಗಿಯವರ ಹಂತಕರು ಸಿಕ್ಕಿಬಿಡುತ್ತಾರಾ? ಇವರು ವೇದಿಕೆಯ ಮೇಲೆ ಕೂತು ನಗುನಗುತ್ತಾ ತೆಗೆದುಕೊಳ್ಳುವ ಪ್ರಶಸ್ತಿಗಳು ಜನಸಾಮಾನ್ಯರ ತೆರಿಗೆ ಹಣದಿಂದ ಬಂದಿದ್ದು ಎಂಬುದು ಈಗ ವಾಪಸ್ ಕೊಡುವಾಗ ಮರೆತುಹೋಗುತ್ತದಾ? ಮೂಲಕ ಪ್ರಶಸ್ತಿಯ ಘನತೆಗೆ ಕುಂದು ತರುತ್ತಿದ್ದೇವೆ ಎನ್ನುವ ಕನಿಷ್ಠ ಪರಿಜ್ಞಾನವಾದರೂ ಬೇಡವಾ? ಇವರೆಲ್ಲ ಸಾಹಿತಿಗಳು ತಾನೇ? ಬರೆದು ಪ್ರತಿಭಟಿಸಲು ಇವರ ಕೈಗಳಲ್ಲಿ ಲೇಖನಿಯಿಲ್ಲವಾ? ಮನಸ್ಸಿನಲ್ಲಿ ವಿಚಾರಗಳಿಗೆ ಕೊರತೆಯಾ? ಅದೆಲ್ಲ ಹೋಗಲಿ, ಇಷ್ಟು ವರ್ಷ ಹಲವಾರು ಕಾರಣಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಸಾವು ನೋವುಗಳಾದಾಗ ಕಣ್ಮುಚ್ಚಿ ಕುಳಿತಿದ್ದವರು ಈಗ ದಿಢೀರ್ ಅಂತೇಕೆ ಎದ್ದುಬಿಟ್ಟಿದ್ದಾರೆ? ಸ್ವಲ್ಪ ಕೂಲಂಕಷವಾಗಿ ಗಮನಿಸಿ ನೋಡಿದರೆ ಒಳಾರ್ಥ ತಿಳಿದುಬರುತ್ತದೆ.
ಅಕಾಡೆಮಿ ಪ್ರಶಸ್ತಿಯನ್ನು ಮೊತ್ತಮೊದಲು ಹಿಂದಿರುಗಿಸಿದವರು ಹಿಂದಿ ಕವಿ ಉದಯಪ್ರಕಾಶ್. ಆತ ಕೊಟ್ಟ ಕಾರಣಗಳು ಹೇಗಿವೆ ಕೇಳಿ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯಲ್ಲಿ ಸಾಹಿತಿಗಳಿಗೆ ಜೀವಭಯವಿರಲಿಲ್ಲವಂತೆ, ಈಗಿನ ಪರಿಸ್ಥಿತಿ ಅಂದಿಗಿಂತ ಬಹಳ ಭೀಕರವಾಗಿದೆಯಂತೆ! ವೆಂಡಿ ಡೋನಿಗರ್ ಎಂಬ ವಿಕೃತ ಮನಸ್ಸಿನ ಅಮೆರಿಕನ್ ಲೇಖಕಿ ಹಿಂದೂ ಧರ್ಮವನ್ನು ಹೀಯಾಳಿಸಿ ಬರೆದಿರುವ ಪುಸ್ತಕವನ್ನು ದೆಹಲಿ ವಿಶ್ವವಿದ್ಯಾಲಯದ ಪಠ್ಯದಿಂದ ತೆಗೆದಿರುವುದು ಹೆಚ್ಚುತ್ತಿರುವ ಕೋಮುವಾದದ ಸಂಕೇತವಂತೆ! ಮೋದಿಯವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಗುಡುಗಿದ್ದ ಅನಂತಮೂರ್ತಿಯವರಿಗೆ, ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಕೆಲ ಹಿಂದೂಗಳು ಹೇಳಿದ್ದು ಕ್ಷಮಿಸಲಾರದ ಅಪರಾಧವಂತೆ! ಉದಯಪ್ರಕಾಶ್ ಇಷ್ಟೆಲ್ಲ ಕಾರಣಗಳನ್ನು ಕೊಟ್ಟಿದ್ದೇ ತಡ, ನಯನತಾರಾ ಸೆಹೆಗಲ್ ಮತ್ತು ಅಶೋಕ ವಾಜಪೇಯಿಯವರೂ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಲು ಅಣಿಯಾದರು. ನಯನತಾರಾರ ಅಸಹನೆಗೆ ಬೇರೆಯೇ ಬಲವಾದ ಕಾರಣವಿದೆ. ಸಿಖ್ಖರ ಮಾರಣಹೋಮವಾದಾಗ ಆಕೆಯ ಆತ್ಮ ಕನಲಿರಲಿಲ್ಲ. ಉತ್ತರಪ್ರದೇಶದ ಮುಜಫರ್ನಗರದಲ್ಲಿ ದಂಗೆಯಾದಾಗ ಆಕೆಗೆ ನೋವಾಗಿರಲಿಲ್ಲ. ಸಲ್ಮಾನ್ ರಶ್ದಿಯವರ ಸಟಾನಿಕ್ ವರ್ಸಸ್ ಪುಸ್ತಕದ ಮೇಲೆ ನಿಷೇಧ ಹೇರಿದಾಗ ಆಕೆಗೆ ವ್ಯತ್ಯಾಸವೇ ಆಗಿರಲಿಲ್ಲ. ಲಕ್ಷಾಂತರ ಕಾಶ್ಮೀರಿ ಪಂಡಿತರು ಜೀವ ಕಳೆದುಕೊಂಡಾಗಲೂ ಸ್ವತಃ ಕಾಶ್ಮೀರಿ ಪಂಡಿತಳಾದ ಆಕೆ ಒಂದು ಭಾರವಾದ ನಿಟ್ಟುಸಿರನ್ನೂ ಹೊರಹಾಕಿರಲಿಲ್ಲ! ಈಗ ಮಾತ್ರ ಆಕೆಗೆ ಹೇಳತೀರದ ಸಂಕಟ. ಯಾಕಿಷ್ಟು ರೊಚ್ಚಿಗೇಳುತ್ತಿದ್ದೀರ ಎಂದು ಕೇಳಿದರೆ ಆಕೆ ನೇರವಾಗಿ ಹೇಳುತ್ತಾರೆ. 'ಆಗಿನ ಸಂದರ್ಭವೇ ಬೇರೆ. ಈಗ ಅಧಿಕಾರದಲ್ಲಿರುವುದು ಹಿಂದುತ್ವವನ್ನು ಪ್ರತಿಪಾದಿಸುವ ಸರ್ಕಾರ.'! ಅಂತೂ ಹೊರಗೆ ಬಂದಿದೆ ನೋಡಿ ನಿಜವಾದ ಕಾರಣ! ಇದು ಸಾಹಿತಿಗಳೇ ಆರಂಭಿಸಿರುವ ಮೋದಿ ಸರ್ಕಾರದ ವಿರುದ್ಧದ ದಂಗೆ! ಸಾಹಿತಿಗಳ ಪ್ರಕಾರ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದಿರುವುದು ತಪ್ಪುಗಳೇ ಅಲ್ಲ! ಆಗ ಸಂಭವಿಸಿದ ಮುಸ್ಲಿಮರ ಸಾವುಗಳಲ್ಲಿ ಕೋಮುವಾದದ ಸೋಂಕೂ ಇರಲಿಲ್ಲ! ಅವೆಲ್ಲ ಅತಿ ಸಹಜವಾದ ಅಚಾತುರ್ಯಗಳು! ಅದೇ ಮೋದಿ ಸರ್ಕಾರವಿರುವಾಗ ನಡೆಯುವ ದಾದ್ರಿ ಘಟನೆ ರಾಷ್ಟ್ರೀಯ ವಿಪತ್ತು!
ಆಕೆಯನ್ನು ಅನುಸರಿಸುತ್ತಿರುವವರೆಲ್ಲ ಆಕೆಯ ನಿಲುವನ್ನು ಸಮರ್ಥಿಸುವವರೇ! ಆದರೆ ನಮಗೆ ಕೆಲ ವಿಷಯಗಳು ಅರ್ಥವಾಗುತ್ತಿಲ್ಲ. ಸಾಹಿತಿಗಳಿಗೇಕೆ ರಾಜಕೀಯದ ಉಸಾಬರಿ? ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ಇವರೇಕೆ ಎಡ-ಬಲಗಳಲ್ಲಿ ಕಳೆದುಹೋಗುತ್ತಿದ್ದಾರೆ? ಸಾಹಿತ್ಯ ಸಮ್ಮೇಳನಗಳೆಲ್ಲ ವೈಚಾರಿಕ ಕದನದ ಅಖಾಡಾಗಳಾಗುತ್ತಿರುವುದೇಕೆ? ಸಾಹಿತ್ಯ ರಚನೆಗಿಂತ ಓತ-ಪ್ರೋತ ಹೇಳಿಕೆಗಳ ಕಡೆಯೇಕೆ ಇವರ ಗಮನ? ಇವರಲ್ಲಿ ಎಷ್ಟೋ ಜನರ ಹೆಸರು ನಮಗೆ ಗೊತ್ತಾಗಿದ್ದು ಇವರ ಕೃತಿಗಳಿಂದಲ್ಲ, ಇವರು ಸೃಷ್ಟಿಸಿದ ವಿವಾದಗಳಿಂದ ಎನ್ನುವುದಕ್ಕಿಂತ ವಿಪರ್ಯಾಸ ಬೇಕೇ? ಭಗವದ್ಗೀತೆಯನ್ನು ಸುಡಬೇಕು, ರಾಮ ತನ್ನಪ್ಪನಿಗೆ ಹುಟ್ಟಿಲ್ಲ ಎನ್ನುವಂಥ ಸಡಿಲವಾದ ಹೇಳಿಕೆಗಳನ್ನು ನೀಡುವುದು ಸಾಹಿತಿಗಳ ಲಕ್ಷಣವೇ? ಸಾಹಿತಿಗಳೇ, ನಿಮ್ಮಲ್ಲೊಂದು ಕಳಕಳಿಯ ವಿನಂತಿ. ನೀವು ಸಾಹಿತ್ಯ ಸೃಷ್ಟಿಯತ್ತ ಮಾತ್ರ ಗಮನ ಕೊಡಿ. ನಿಮ್ಮ ಮೇಲಿರುವ ಹೊಣೆಗಾರಿಕೆಯನ್ನು ಉಳಿಸಿಕೊಳ್ಳಿ. ನೀವು ಹಾಗಿದ್ದರೇ ಚೆನ್ನ. ಅದೇ ನಮಗೆ ಸಮ್ಮತ.

No comments:

Post a Comment