Wednesday, 27 January 2016

ನಿರ್ಭೀತಿಯೇ ಮೈವೆತ್ತಿರುವ ಆಸಾಮಿ, ಈ ಸುಬ್ರಮಣಿಯನ್ ಸ್ವಾಮಿ!

ಸುಬ್ರಮಣಿಯನ್ ಸ್ವಾಮಿ! ಹೆಸರನ್ನು ಕೇಳಿದ ತಕ್ಷಣ ಎಂಥವರೂ ಎಚ್ಚೆತ್ತುಕೊಳ್ಳಲೇ ಬೇಕು. ಪ್ರತಿಕ್ರಿಯಿಸಲೇ ಬೇಕು. ಸಿಟ್ಟೋ, ಗೊಂದಲವೋ, ಹೆಮ್ಮೆಯೋ, ಪ್ರೀತಿಯೋ ಒಟ್ಟಿನಲ್ಲಿ ಯಾವುದಾದರೊಂದು ಭಾವವಂತೂ ಹೊಮ್ಮಲೇ ಬೇಕು! ಅವರನ್ನು ಉಪೇಕ್ಷೆ ಮಾಡಿ ತಲೆಯನ್ನೊಮ್ಮೆ ಅಡ್ಡಡ್ಡಲಾಗಿ ಕೊಡವಿಕೊಂಡು ಎದ್ದು ಬಿಡುವುದು ಎಂಥವರಿಗೂ ಸಾಧ್ಯವಿಲ್ಲ! ಮೊನ್ನೆ ಜನವರಿ 23ರಂದು ಮೈಸೂರಿನಲ್ಲಿ ಅವರನ್ನು ಭೇಟಿಯಾಗಲು ದೌಡಾಯಿಸುವಾಗ ಮನಸ್ಸಿನಲ್ಲಿ ಹಲವಾರು ಚಿತ್ರಗಳು. ಟಿವಿ ಚಾನೆಲ್‍ಗಳಲ್ಲಿ ವಾದಕ್ಕೆ ನಿಂತಾಗಲೆಲ್ಲ ಗುಂಡು ಹೊಡೆದ ಹಾಗೆ ಮಾತನಾಡುವ, ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ಮುಖದ ನೀರಿಳಿಸಿಬಿಡುವ ಅವರನ್ನು ನೇರಾನೇರ ಕಂಡು ಮಾತನಾಡುವ ಕಾತುರ. ಎದುರಿಗೆ ಹೋಗಿ ನಿಂತು ಸುರಿಸಿದ ಪ್ರಶ್ನೆಗಳ ಮಳೆಗೆ ಅವರದ್ದು ಸಿಡಿಲಬ್ಬರದ ಉತ್ತರ. ಸೆಕ್ಯುರಿಟಿಯವರ ಕೈಯಲ್ಲಿದ್ದ ಎಕೆ 47 ಬಂದೂಕನ್ನೂ ನಾಚಿಸುವಂಥ ಮಾತಿನ ವರಸೆ!'ಸರ್, ಸೋನಿಯಾ ಪ್ರಧಾನಿಯಾಗುವುದು ಕಾನೂನಿನ್ವಯ ಸಾಧ್ಯವಿಲ್ಲ ಎನ್ನುವ ವಿಷಯ ನೀವು ಹೇಳುವವರೆಗೂ (ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂರಿಗೆ ಪತ್ರ ಬರೆದು) ಯಾರಿಗೂ ಗೊತ್ತೇ ಇರಲಿಲ್ಲ, ಯಾವ ಸತ್ಯವನ್ನೇ ಆಗಲಿ ನೀವೇ ಶೋಧಿಸಬೇಕು, ನೀವಲ್ಲದೆ ಬೇರೆ ಯಾರೂ ದಿಕ್ಕಿಲ್ಲ ಎನ್ನುವ ಹಾಗಿಬಿಟ್ಟಿದೆಯಲ್ಲ, ಮುಂದೆ ಹೇಗೆ?' ಎಂಬ ಕಳಕಳಿಯ ಪ್ರಶ್ನೆಗೆ ಅವರು ನಗುತ್ತಾ ಕೊಟ್ಟ ಉತ್ತರ - 'ಅಯ್ಯೋ, ನನ್ನ ಕಥೆ ಈಗಲೇ ಮುಗಿದುಹೋಗುತ್ತದೆ ಅಂದುಕೊಂಡುಬಿಟ್ಟಿರೇನು? ಯಾರಿಗೆ ಗೊತ್ತು, ನಾನು ನೂರಿಪ್ಪತ್ತು ವರ್ಷಗಳ ಕಾಲ ಬದುಕಿದರೂ ಬದುಕಬಹುದು' ಎಂದು! 'ನಾನೊಬ್ಬ ಸಾಧಾರಣ ಹಿನ್ನೆಲೆಯಿಂದ ಬಂದಂಥ ಮನುಷ್ಯ. ಉಳಿದವರಿಗೂ ನನಗೂ ಇರುವ ಒಂದೇ ವ್ಯತ್ಯಾಸವೆಂದರೆ ನಾನು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ. ಗಾಂಧೀಜಿಯವರು ಇದ್ದುದೂ ಹಾಗೇ ಅಲ್ಲವೇ?' ಎಂದು ತಿರುಗಿ ಪ್ರಶ್ನಿಸಿದರು ಸ್ವಾಮಿ.

'ಸೋಷಿಯಲಿಸ್ಟ್ ಹಾಗೂ ಸೆಕ್ಯುಲರ್' ಎಂಬ, ಭಾರತಕ್ಕೆ ಅನ್ವಯವೇ ಆಗದ ಪದಗಳನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನದಲ್ಲಿ ತೂರಿಸಿದ್ದಾರಲ್ಲ ಇಂದಿರಾ, ಅದನ್ನು ತೆಗೆಯುವುದು ಸಾಧ್ಯವೇ ಇಲ್ಲ ಎನ್ನುತ್ತಾರಲ್ಲ ಸರ್?' ನನ್ನ ಮರುಪ್ರಶ್ನೆ. ಸಂವಿಧಾನದ ರಚನೆಯ ಬುಡವನ್ನೇ ಅಲುಗಾಡಿಸಬಲ್ಲ ಈ ಪದಗಳು ಅಸ್ಪೃಶ್ಯ, ಇವುಗಳನ್ನು ಮುಟ್ಟಲು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ ಎಂಬರ್ಥದ ಮಾತುಗಳನ್ನು ಈ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಯೊಬ್ಬರ ಬಾಯಲ್ಲಿ ಕೇಳಿದ್ದೆ. 'ಯಾರು ಹೇಳಿದ್ದು ಹಾಗೆ? ಎಲ್ಲ ಸಾಧ್ಯವಿದೆ. ಮೂರನೇ ಎರಡರಷ್ಟು ಬಹುಮತ ದೊರಕಿಸಿಕೊಳ್ಳಬೇಕು ಅಷ್ಟೇ.' ಬಾಣದಂತೆ ಬಂತು ಅವರ ಪ್ರತ್ಯುತ್ತರ.


'ಸರ್, ರಾಜೀವ್ ಗಾಂಧಿ ಶಾಬಾನು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಲಯದ ತೀರ್ಪನ್ನೇ ಧಿಕ್ಕರಿಸಿದರು. ಆದರೆ ಅವರ ಆಡಳಿತಾವಧಿಯಲ್ಲೇ ರಾಮಜನ್ಮಭೂಮಿಯ ಶಿಲಾನ್ಯಾಸ ನಡೆದಿದ್ದು. ಹಾಗಾದರೆ ರಾಜೀವ್‍ರ ಆಂತರ್ಯದೊಳಗೆ ನಿಜವಾಗಿಯೂ ಏನಿತ್ತು?' ಮತ್ತೊಂದು ಪ್ರಶ್ನೆ. ಓದುಗ ಮಿತ್ರರೇ, ನಿಮಗೆ ಗೊತ್ತೋ ಇಲ್ಲವೋ, ರಾಜೀವ್ ಹಾಗೂ ಸ್ವಾಮಿ ಬಹಳ ಒಳ್ಳೆಯ ಗೆಳೆಯರಾಗಿದ್ದರು. ತಮ್ಮ ಬದುಕಿನ ಬಹುಪಾಲು ರಹಸ್ಯಗಳನ್ನು ರಾಜೀವ್ ಹಂಚಿಕೊಂಡಿದ್ದು ಸ್ವಾಮಿಯವರೊಂದಿಗೆ ಮಾತ್ರ. 'ಶಾಬಾನು ಪ್ರಕರಣದಲ್ಲಿ ರಾಜೀವ್, ಪಕ್ಷದ ಒತ್ತಡಕ್ಕೆ ಮಣಿದರು. ಆದರೆ ಅದೇ ಕಾಂಗ್ರೆಸ್ ಪಕ್ಷ, ದೂರದರ್ಶನದಲ್ಲಿ ರಾಮಾಯಣದ ಪ್ರಸಾರವಾಗಬಾರದೆಂಬ ನಿರ್ಣಯ ಕೈಗೊಂಡಾಗ, ಅದನ್ನು ಒಪ್ಪದೆ ಹಟ ಹಿಡಿದು ಪ್ರಸಾರ ಮಾಡಿಸಿದವರು ರಾಜೀವ್. ಹಿಂದುತ್ವದ ಕುರಿತು ರಾಜೀವ್‍ರ ಒಲವು ದಿನೇ ದಿನೇ ಹೆಚ್ಚುತ್ತಿದ್ದುದನ್ನು ಕಂಡು ಬೇಸತ್ತಿದ್ದ ಸೋನಿಯಾ ಅವರಿಗೆ ವಿಚ್ಛೇದನ ನೀಡಲು ಬಯಸಿದ್ದರು.' ಎಂದು ಸ್ವಾಮಿ ಹೇಳಿದಾಗ ಕೆಲ ಕ್ಷಣಗಳ ಮಟ್ಟಿಗೆ ಗರಬಡಿದವಳ ಹಾಗೆ ನಿಲ್ಲುವುದರ ಹೊರತಾಗಿ ನನಗೆ ಇನ್ನೇನೂ ಮಾಡಲಾಗಲಿಲ್ಲ!

'ವಾಜಪೇಯಿ ಸರ್ಕಾರವನ್ನು ಒಂದೇ ಒಂದು ಮತದ ಅಂತರದಲ್ಲಿ ಕೆಡವಿದ ಮನುಷ್ಯ ನೀವು, ನಿಮ್ಮಲ್ಲಿ ಸ್ಥಿರತೆಯಿಲ್ಲ, ನೀವು ನಡೆಸುತ್ತಿರುವ ಕಾನೂನಿನ ಸಮರಗಳೆಲ್ಲ ಸೋನಿಯಾ ಮೇಲಿನ ಹಗೆತನದಿಂದ ಮಾತ್ರ ಎನ್ನುವವರನ್ನು ದಾರಿಗೆ ತರುವುದು ಹೇಗೆ ಸರ್? ರಾಷ್ಟ್ರೀಯತೆಯ ಕುರಿತ ನಿಮ್ಮ ನಿಲುವನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ಹೇಗೆ? ನಮ್ಮ ಯಾವ ವಾದವೂ ಅವರಿಗೆ ಒಪ್ಪಿಗೆಯಾಗುವುದಿಲ್ಲವಲ್ಲ?' ನನ್ನ ಬತ್ತಳಿಕೆಯೊಳಗಿನಿಂದ ಮತ್ತೊಂದು ಪ್ರಶ್ನೆ. 'ನೀವು ನನ್ನ ಸಲುವಾಗಿ ಕಾದಾಡಲೇಬೇಡಿ. ಅದು ಕೋಣನ ಮುಂದೆ ಕಿಂದರಿ ಬಾರಿಸುವ ಪ್ರಯತ್ನವಾಗಿಬಿಡುತ್ತದೆ. ಭ್ರಷ್ಟಾಚಾರದ, ರಾಷ್ಟ್ರ-ವಿರೋಧಿಗಳ ವಿರುದ್ಧದ ನನ್ನ ಹೋರಾಟ ತೀರಾ ಯಾರಿಗೂ ಅರ್ಥವಾಗದ ಕಬ್ಬಿಣದ ಕಡಲೆಯೇನಲ್ಲ.' ಅವರ ಉತ್ತರ. ವ್ಯಾಟಿಕನ್, ಸರಾಸಿನ್ ಮತ್ತು ಪಿಕ್‍ಟೆಟ್. ಈ ಮೂರೂ ವಿದೇಶೀ ಬ್ಯಾಂಕ್‍ಗಳಲ್ಲಿ ಸೋನಿಯಾ ಖಾತೆ ಹೊಂದಿದ್ದಾರಲ್ಲ ಸರ್?’ ಎಂದು ಕೇಳಿದ್ದೇ ತಡ, 'ಹೌದು, ಆ ಮಾಹಿತಿಯನ್ನು ಸರ್ಕಾರಕ್ಕೆ ಈಗಾಗಲೇ ರವಾನಿಸಿದ್ದೇನೆ.' ಎಂಬ ಉತ್ತರ ಬಂದಿತು.

ಸತ್ಯವನ್ನು ತಿರುಚಿ ಹೇಳಿ, ಅದೇ ನಿಜವೆಂಬ ಭ್ರಮೆ ಹುಟ್ಟಿಸಿಬಿಡುವ ಮಾಧ್ಯಮಗಳನ್ನು ಹದ್ದುಬಸ್ತಿನಲ್ಲಿಡುವುದು ಸಾಧ್ಯವೇ ಇಲ್ಲವಾ ಸರ್? ಎಂಬ ಪ್ರಶ್ನೆಗೆ ಒಂದು ಉದಾಹರಣೆಯನ್ನೂ ಕೊಟ್ಟರು. ಅವರು ಯಾವುದೋ ಸಂದರ್ಭದಲ್ಲಿ ಮಾತನಾಡುತ್ತ, ರಾವಣ ಬ್ರಾಹ್ಮಣ ಎಂಬ ಅಂಶವನ್ನು ಹೇಳಿದ್ದರಂತೆ. ಅದನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ, 'ಸ್ವಾಮಿಯವರು ರಾವಣನನ್ನು ದಲಿತ ಎಂದಿದ್ದಾರೆ, ಅವನು ದಲಿತನಾಗಿದ್ದಕ್ಕೇ ಅಂಥ ಕೆಲಸಕ್ಕೆ ಕೈಹಾಕಿದ' ಎಂದು ತಿರುಚಿ ಬರೆದಿದೆ! ಆಮೇಲೆ ಗೊತ್ತಲ್ಲ, ಎಂದಿನ ಜೋರು ಗಲಾಟೆ, ಜಾತೀಯತೆಯ ಡೌಲು, ಬಾಜಾ-ಬಜಂತ್ರಿಯ ಸಂಭ್ರಮ ನಡೆದಿದೆ! ಇದನ್ನು ಕಂಡ ಸ್ವಾಮಿಯವರು ನ್ಯಾಯಾಲಯದಿಂದ ನೋಟೀಸ್ ಕಳಿಸಿದ್ದೇ ತಡ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ತೆಪ್ಪಗೆ ಕ್ಷಮೆಯಾಚಿಸಿತಂತೆ!ಮತ್ತೊಂದು ಘಟನೆಯನ್ನೂ ಉದಾಹರಿಸಿದರು ಸ್ವಾಮಿ. ಅವರು ಜಯಲಲಿತಾರ ವಿರುದ್ಧ ಒಂದರಮೇಲೊಂದು ಪ್ರಕರಣವನ್ನು ಜಡಿದಾಗ ಜಯಲಲಿತಾ ಬೆಂಡಾಗಿ ಬಸವಳಿದು ಹೋಗಿದ್ದರು! ಕೊನೆಗೆ, ‘ದಿ ಹಿಂದೂ ಪತ್ರಿಕೆಯ ಮಾಲಿನಿ ಪಾರ್ಥಸಾರಥಿಯವರನ್ನು ಮಧ್ಯವರ್ತಿಯನ್ನಾಗಿ ಅಂದಿನ ಪ್ರಧಾನಿ ನರಸಿಂಹರಾವ್‍‍ರ ಬಳಿ ಕಳುಹಿಸಿದ್ದರು. ಯಾಕಿರಬಹುದು ಹೇಳಿ? ಸ್ವಾಮಿಯವರನ್ನು ಸುಮ್ಮನಾಗಿಸಿ ಎಂಬ ಮನವಿ ಮಾಡಿಕೊಳ್ಳಲು! ನರಸಿಂಹರಾವ್ ಏನು ಮಾಡಿದರಂತೆ ಗೊತ್ತೇ? ಆಕೆಯ ಹತ್ತಿರ ಮಾತು ಶುರುಮಾಡುವ ಮೊದಲು ಸ್ವಾಮಿಯವರನ್ನು ಕರೆಸಿ ತಮ್ಮ ಪಕ್ಕದ ರೂಮಿನಲ್ಲಿ ಕುಳ್ಳಿರಿಸಿ ತಮ್ಮ ಕೋಣೆಯ ಬಾಗಿಲನ್ನು ತೆರೆದೇ ಇಟ್ಟರಂತೆ. ತಮ್ಮ ಮಾತುಗಳು ಸ್ವಾಮಿಯವರಿಗೂ ಕೇಳಲಿ ಎಂಬ ಆಶಯದಿಂದ! ಹೇಗಾದರೂ ಮಾಡಿ ಸ್ವಾಮಿಯನ್ನು ಸುಮ್ಮನಿರಿಸಿ ಎಂದು ಕೇಳಿಕೊಂಡ ಆಕೆಗೆ ನರಸಿಂಹರಾವ್, 'ಈ ಪ್ರಪಂಚದಲ್ಲಿ ಆತನನ್ನು ಹಿಡಿತದಲ್ಲಿಟ್ಟುಕೊಳ್ಳಬಲ್ಲ ಒಬ್ಬೇ ಒಬ್ಬ ವ್ಯಕ್ತಿಯಿದ್ದರೂ ನನಗೆ ತೋರಿಸಿ, ನಾನೇ ಅವರ ಬಳಿ ಮಾತನಾಡುತ್ತೇನೆ.' ಎಂದು ಸೀದಾ ಹೇಳಿಬಿಟ್ಟರಂತೆ!

ಇನ್ನೂ ಹಲವು ವಿಷಯಗಳು ಬಂದು ಹೋದವು. ಮುಸ್ಲಿಂ ಸಂತ್ರಸ್ತರ ಮನೆಗಳಿಗೆ ಮೊಸಳೆ ಕಣ್ಣೀರಿನೊಂದಿಗೆ ಲಗ್ಗೆಯಿಡುತ್ತಿರುವ (ದುರಂತ ಪ್ರವಾಸವೆಂತಲೂ ಕರೆಯಬಹುದು!) ರಾಹುಲ್, ನಾಸ್ತಿಕ ಕರುಣಾನಿಧಿಯ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಮೊಳಗುತ್ತಿರುವ ಮಂತ್ರಗಳ ಮಣಮಣ ಸದ್ದು, ಇತ್ತೀಚೆಗಷ್ಟೇ ಸೋನಿಯಾ-ರಾಹುಲ್‍ರನ್ನು ಕೋರ್ಟಿನ ಮೆಟ್ಟಿಲು ಹತ್ತಿಸಿದ ನ್ಯಾಷನಲ್ ಹೆರಾಲ್ಡ್ ಪ್ರಕರಣ, ಹೀಗೆ. ರಾಮಮಂದಿರ ನಿರ್ಮಾಣದ ಕಥೆಯೇನಾಗಲಿದೆ ಎಂಬುದಕ್ಕೆ ಅವರ ಖಡಕ್ಕು ಉತ್ತರ - 'ಧ್ವಂಸವಾಗಿಹೋಗಿರುವ ನಮ್ಮ 40 ಸಾವಿರ ದೇವಾಲಯಗಳ ಪೈಕಿ ಮೂರನ್ನು (ಅಯೋಧ್ಯೆ, ಕಾಶಿ ಹಾಗೂ ಮಥುರಾ) ಮಾತ್ರ ನಮಗೆ ಹಿಂದಿರುಗಿಸಿ ಎಂದು ಮುಸ್ಲಿಮ್ ಮುಖಂಡರೊಂದಿಗೆ ಮಾತುಕತೆಗಿಳಿದಿದ್ದೇನೆ. ನ್ಯಾಯಾಲಯಕ್ಕೂ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಿ ಆಗಿದೆ. ಪ್ರಕರಣ ನಮ್ಮ ಪರವಾಗೇ ಇತ್ಯರ್ಥವಾಗುವ ನಿರೀಕ್ಷೆಯಿದೆ.' ಎಂಬುದು. 'ಪಾಂಡವರು ದುರ್ಯೋಧನನಿಗೂ ಐದು ಹಳ್ಳಿಗಳನ್ನು ಕೊಡುವುದಾಗಿ ಹೇಳಿದ್ದರು. ತನ್ನ ಮುಠ್ಠಾಳತನದಿಂದಾಗಿ ಎಲ್ಲವನ್ನೂ ಕಳೆದುಕೊಂಡ.' ಎಂದು ಅವರು ಮಾರ್ಮಿಕವಾಗಿ ಹೇಳುವಾಗ ಅವರಿಗೆ ಅವರೇ ಸಾಟಿ ಎನಿಸದೇ ಇರದು!ಒಟ್ಟಾರೆ ಅವರ ಮಾತುಗಳಲ್ಲಿ ನಮಗೆ ಸಿಕ್ಕ ಸಂದೇಶಗಳು ಐದು. ಮೊದಲನೆಯದಾಗಿ, ನಮ್ಮ ಸನಾತನ ಧರ್ಮದ ಬಗ್ಗೆ ನಮ್ಮಲ್ಲಿರಬೇಕಾದ ಹೆಮ್ಮೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಡೀ ಜಗತ್ತಿನಲ್ಲಿ ಒಟ್ಟು 46 ನಾಗರಿಕತೆಗಳನ್ನು ಯುನೆಸ್ಕೋ ಗುರುತಿಸಿದೆ. ಆದರೆ ಅವುಗಳಲ್ಲಿ 45 ನಾಗರಿಕತೆಗಳು (ಗ್ರೀಸ್, ಇರಾನ್, ಇಜಿಪ್ಟ್, ಬ್ಯಾಬಿಲೋನ್, ರೋಮ್ ಮುಂತಾದವು) ಈಗಾಗಲೇ ಸಂಪೂರ್ಣ ನಶಿಸಿ ಹೋಗಿವೆ. ಉಳಿದಿರುವುದು ಯಾವುದು ಹೇಳಿ? ನಮ್ಮ ಭಾರತದ್ದೊಂದೇ! ಇದು ಸಂತೋಷಿಸಬೇಕಾದ ವಿಷಯವೇ ತಾನೇ? ಈ ದೇಶದಲ್ಲಿರುವ ಬಹುತೇಕ ಮುಸ್ಲಿಮರ, ಕ್ರಿಶ್ಚಿಯನ್ನರ ಪೂರ್ವಜರು ಹಿಂದೂಗಳೇ ಆಗಿದ್ದರು ಎನ್ನುವುದು ಈಗ ಗೌಪ್ಯವಾಗೇನೂ ಉಳಿದಿಲ್ಲ. ಡಿಎನ್‍ಎ ಪರೀಕ್ಷೆಗಳು ಹಾಗೂ ಸಂಶೋಧನೆಗಳು ಆ ವಿಷಯವನ್ನು ಈಗಾಗಲೇ ದೃಢಪಡಿಸಿವೆ. ಅದನ್ನು ಸ್ವತಃ ಅವರುಗಳೇ ಒಪ್ಪಿಕೊಳ್ಳುತ್ತಾರಾದರೂ ಮುಕ್ತವಾಗಿ ತಮ್ಮ ತಮ್ಮ ಧರ್ಮಗುರುಗಳ ಎದುರಿನಲ್ಲಿ ಹೇಳಲಾರದ ಸಂಕಷ್ಟದಲ್ಲಿ ಸಿಲುಕಿದ್ದಾರೇನೋ ಎನಿಸುತ್ತದೆ.

ಎರಡನೆಯದು, ನಮ್ಮ ಐತಿಹ್ಯದ ಬಗೆಗಿನ ತಿಳುವಳಿಕೆ. ಮುಸ್ಲಿಮರು ನಮ್ಮನ್ನು 150 ವರ್ಷ ಆಳಿದರು, ಬ್ರಿಟಿಷರು ನಮ್ಮನ್ನು 200 ವರ್ಷ ಹಿಡಿದಿಟ್ಟುಕೊಂಡಿದ್ದರು ಎಂದು ಬೊಬ್ಬೆಹಾಕುವ ನಾವು ನಮ್ಮ ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯ ಬಗ್ಗೆ ಎಷ್ಟು ತಿಳಿದುಕೊಂಡಿದ್ದೇವೆ? ಸಾವಿರ ವರ್ಷಗಳ ಕಾಲ ಆಳಿದ ಚೋಳರ ಸಾಮ್ರಾಜ್ಯದ ಬಗ್ಗೆ ನಮಗೆಷ್ಟು ಗೊತ್ತು? ಎಷ್ಟು ದೇವಾಲಯಗಳಿದ್ದವು, ಎಷ್ಟು ಉಳಿದಿವೆ, ಯಾವ ದೇವಾಲಯದ ಪ್ರಾಮುಖ್ಯತೆ ಎಷ್ಟು ಎಂಬ ವಿಷಯಗಳಲ್ಲಿ ನಮಗೆಷ್ಟು ಆಸಕ್ತಿಯಿದೆ? ಅದನ್ನೆಲ್ಲ ಇನ್ನಾದರೂ ಬೆಳೆಸಿಕೊಳ್ಳಬೇಡವೆ?

ಮೂರನೆಯದು, ಸಂಸ್ಕೃತದ ಮಹತ್ವವನ್ನು ಅರಿಯುವುದು. ನೆಹರೂರ ಅಸಡ್ಡೆಯಿಂದಾಗಿ ಸಂಸ್ಕೃತ ದಶಕಗಳ ಹಿಂದೆಯೇ ಮೂಲೆಗುಂಪಾಯಿತು. ಅಂಬೇಡ್ಕರರ ಹೋರಾಟದ ಹೊರತಾಗಿಯೂ ಅದಕ್ಕೆ ಪ್ರಾಶಸ್ತ್ಯ ಸಿಗಲಿಲ್ಲ. ಇನ್ನಾದರೂ ಅದರ ಅಧ್ಯಯನವನ್ನು ನಡೆಸದೇ ಹೋದಲ್ಲಿ, ಅದು ವಿದೇಶಿಗರ ಸ್ವತ್ತಾಗಿ, ನಾವು ಪಶ್ಚಾತ್ತಾಪಪಡಬೇಕಾಗಿ ಬರುವುದು ಖಂಡಿತ.

ನಾಲ್ಕನೆಯದು, ನಮ್ಮೊಳಗೆ ಜಾಗೃತ ಮನಸ್ಥಿತಿ ಮೂಡಿಸಿಕೊಳ್ಳುವುದು. ನಮ್ಮ ಮನೆ-ಮಠ, ಸಂಸಾರ-ಮಕ್ಕಳೇ ನಮಗೆ ಸರ್ವಸ್ವ! ಅದರಾಚೆಗೆ ಯೋಚಿಸಲು ವ್ಯವಧಾನವೇ ಇಲ್ಲವೇನೋ ಎನ್ನುವ ಹಾಗೆ! ದೇಶದ ಆಗುಹೋಗುಗಳಿಗೂ ನಮಗೂ ಸಂಬಂಧವೇ ಇಲ್ಲವೆನ್ನುವಷ್ಟು ನಿರ್ಲಿಪ್ತತೆ. ಈ ವಿಷಯಕ್ಕೆ ತಲೆ ಕೆಡಿಸಿಕೊಂಡರೆ ನನಗಾಗುವ ಲಾಭವಾದರೂ ಏನು ಎಂಬ ಅಪ್ಪಟ ಸ್ವಾರ್ಥದ ಆಲೋಚನೆ! ಹಾಗಾದರೆ ಈ ದೇಶವೆಂಬುದು ನಮ್ಮ ವಾಸಕ್ಕೆ ಬೇಕಾದ ನೆಲದ ತುಂಡು ಮಾತ್ರವೇ? ಅದನ್ನು ಮೀರಿ ಯೋಚಿಸುವ, ದೇಶದ ಸಲುವಾಗಿ ಒಂದಷ್ಟು ಸಮಯ, ಶ್ರಮವನ್ನು ಮೀಸಲಿಡಲಾರದಷ್ಟು ಭಂಡತನ ಹೊಕ್ಕಿದೆಯೇ ನಮ್ಮೊಳಗೆ? ಹೌದಾದರೆ ನಾಳೆ ಯಾವುದಕ್ಕೂ ಯಾರನ್ನೂ ದೂರುವ ಅಥವಾ ದೂಷಿಸುವ ಹಕ್ಕಿಲ್ಲ ನಮಗೆ!

ಐದನೆಯದು - ವರ್ಣಾಶ್ರಮವನ್ನೇ ಉದಾಹರಿಸಿಕೊಂಡು ಪರಸ್ಪರ ಕತ್ತಿ ಝಳಪಿಸಿಕೊಳ್ಳುವ ಪ್ರಕ್ರಿಯೆಯನ್ನು ಕೊನೆಗಾಣಿಸುವುದು. ದಲಿತ ಎಂಬ ಪದವನ್ನೇ ಬಂಡವಾಳವನ್ನಾಗಿಸಿಕೊಂಡು ರಕ್ತಪಾತಕ್ಕಿಳಿಯುವ ಮಂದಿಗೆ ಬಹುಶ ಕೆಲ ವಿಷಯಗಳು ಗೊತ್ತಿಲ್ಲ. ವಿದೇಶದಲ್ಲಿ ಓದಿ ಡಾಕ್ಟರೇಟ್ ಸಂಪಾದಿಸಿಕೊಂಡು ಬಂದ ಅಂಬೇಡ್ಕರರಿಗೆ ಕಾಂಗ್ರೆಸ್ ಕೊಟ್ಟಿದ್ದು 'ಭೀಮರಾವ್' ಎಂಬ ಏಕವಚನದ ಸ್ಥಾನ-ಮಾನವನ್ನು ಮಾತ್ರ. ಅವರಿಗೆ ಭಾರತರತ್ನ ಪ್ರಶಸ್ತಿ ಸಿಗದ ಹಾಗೆ ನೋಡಿಕೊಂಡವರು ಖುದ್ದು ನೆಹರೂ! ಅದನ್ನು ಮರಣೋತ್ತರವಾಗಿ ಕೊಡಮಾಡಿದ್ದು 1990ರಲ್ಲಿ, ಬಿಜೆಪಿ ಬೆಂಬಲಿತ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ! ಅದೇ ಇಂಗ್ಲೆಂಡಿನಲ್ಲಿ ಓದಲು ಹೋಗಿ ಫೇಲಾಗಿ, 'ಜಂಟಲ್‍ಮ್ಯಾನ್ ಪಾಸ್' ಎಂಬ ಭಿಕ್ಷೆಯ ಸರ್ಟಿಫಿಕೇಟು ಹಿಡಿದು ಬಂದ ನೆಹರೂರನ್ನು ಕಾಂಗ್ರೆಸ್ 'ಪಂಡಿತ್‍ಜೀ' ಎಂದು ಗೌರವಿಸಿತು. ಜವಾಹರಲಾಲ್ ಎಂದು ಕರೆಸಿಕೊಳ್ಳಬೇಕಾದವರು ಪಂಡಿತರಾದರು. ಪಂಡಿತ್‍ಜೀ ಎಂದು ಕರೆಸಿಕೊಳ್ಳಬೇಕಾದವರು ಭೀಮರಾವ್ ಆದರು! ಏನು ಮಾಯೆಯೋ! ಭೀಮರಾವ್ ಮಹಾರ್ ಎಂಬ ಅತಿ ಚುರುಕು ಬುದ್ಧಿಯ ಹುಡುಗನಿಗೆ ಅಂಬೇಡ್ಕರ್ ಎಂಬ ತಮ್ಮ ಹೆಸರನ್ನೇ ಕೊಟ್ಟು ಕಾಪಾಡಿದ, ಅವನ ಏಳ್ಗೆಗೆ ಅಕ್ಷರಶಃ ಕಾರಣರಾದ ಬ್ರಾಹ್ಮಣ ಗುರುಗಳು ಅದೇಕೆ ಯಾರಿಗೂ ನೆನಪೇ ಆಗುವುದಿಲ್ಲವೋ!

ಅಧಿಕಾರಕ್ಕೆ ಬಂದು ಅದಾಗಲೇ ಎರಡು ವರ್ಷವಾಯಿತು, ಮೋದಿ ಸರ್ಕಾರ ಏನು ಮಾಡಿದೆ ಎಂದು ಕೇಳುತ್ತಿರುವವರು, ಛಲ ಬಿಡದ ತ್ರಿವಿಕ್ರಮನಂತೆ ಒಂದೊಂದೇ ಪ್ರಕರಣದ ಬೆನ್ನು ಹತ್ತಿ ನ್ಯಾಯಾಲಯದಲ್ಲಿ ಬಡಿದಾಡುತ್ತಿರುವ ಸ್ವಾಮಿಯವರನ್ನು ನೋಡಿಯೂ ನೋಡದಂತಿರುವವರು ತಮ್ಮನ್ನು ತಾವೇ ಕೇಳಿಕೊಳ್ಳಬೇಕಾದ ಬಹು ಮುಖ್ಯ, ಸಮಯೋಚಿತ ಪ್ರಶ್ನೆ, 'ಈ ಹೊತ್ತು ದೇಶದ ಸಲುವಾಗಿ ನಾವೇನು ಮಾಡುತ್ತಿದ್ದೇವೆ?' ಎಂಬುದು. ಹೆಚ್ಚೇನೂ ಬೇಡ, ಸ್ವಾಮಿಯವರ ಜೊತೆ ಕೈಜೋಡಿಸಿ, ಅವರೊಡನೆ ನಾಲ್ಕು ಹೆಜ್ಜೆಹಾಕಿದರೆ ಆ ಗಂಡೆದೆಯೊಳಗಿರುವ ನಿರ್ಭೀತಿಯಲ್ಲಿ ನಮಗೂ ಪಾಲು ಸಿಗಬಹುದು!

1 comment: