Tuesday 15 April 2014

ಅಬ್ಬಾ,ಮಾತಲ್ಲೇ ನಿಮ್ಮ ಮನೋಲೋಕ ಬಿಚ್ಚಿಟ್ಟಿರಲ್ಲ ಮುಲಾಯಂ!

ಭೇಷ್! ಮುಲಾಯಂ ಸಿಂಗ್ ಯಾದವರೇ, ಭೇಷ್! ಎಂಥ ಸತ್ಯದ ಅರಿವು ಮೂಡಿಸಿದಿರಿ. ಅತ್ಯಾಚಾರ, ಅದರಲ್ಲೂ ಸಾಮೂಹಿಕ ಅತ್ಯಾಚಾರವೆಂಬುದು ಒಂದು ಅಚಾತುರ್ಯ ಮಾತ್ರ, ಹುಡುಗರು ಎಷ್ಟೆಂದರೂ ಹುಡುಗರೇ, ಪಾಪ ಇಂಥ ಅಚಾತುರ್ಯಕ್ಕೆ ಅವರಿಗೆ ಮರಣದಂಡನೆ ಸಲ್ಲದು ಎಂಬ ನುಡಿಮುತ್ತುಗಳನ್ನುದುರಿಸಿ ನಮ್ಮ ಕಣ್ಣು ತೆರೆಸಿದಿರಿ. ನೀವು ಹೇಳುವವರೆಗೂ ನಾವು ಹೆಣ್ಣುಮಕ್ಕಳು  ಇದನ್ನೊಂದು ಅಕ್ಷಮ್ಯ ಅಪರಾಧ ಎಂದುಕೊಂಡುಬಿಟ್ಟಿದ್ದೆವು ನೋಡಿ. ಹೆಣ್ಣನ್ನು ದೈಹಿಕವಾಗಿ, ಮಾನಸಿಕವಾಗಿ ಜರ್ಝರಿತಳನ್ನಾಗಿಸಿ, ಅವಳು ಮತ್ತೆ ಜೀವನ್ಮುಖಿಯಾಗುವ, ಸಮಾಜಮುಖಿಯಾಗುವ ಎಲ್ಲ ಅವಕಾಶಗಳನ್ನೂ ಕಿತ್ತುಕೊಂಡುಬಿಡುವ ಇಂಥ ಹೀನಕೃತ್ಯಕ್ಕೆ ಎಂಥ ಶಿಕ್ಷೆ ನೀಡಿದರೂ ಕಡಿಮೆಯೇ ಎಂಬುದು ನಮ್ಮ ಇಷ್ಟುದಿನದ ಅಂಬೋಣವಾಗಿತ್ತು. ಆದರೆ ಆ ನೋವು, ಹಿಂಸೆಗಳೆಲ್ಲ ನಗಣ್ಯ, ಹೆಣ್ಣುಮಕ್ಕಳಾದ ನಾವು ಇದನ್ನು ಬಹಳ ಲಘುವಾಗಿ ಪರಿಗಣಿಸಬೇಕೆಂಬ ನಿಮಗಿರುವ ಕನಿಷ್ಠ ಮಟ್ಟದ ಅರಿವೂ ನಮಗಿರದೇ ಹೋಯಿತಲ್ಲ.

ಕಳೆದ ಶುಕ್ರವಾರ ಮೊಹಮ್ಮದ್ ಕಾಸಿಂ ಶೇಖ್, ಸಲೀಂ ಅನ್ಸಾರಿ ಹಾಗೂ ವಿಜಯ್ ಜಾಧವ್ ಎಂಬ ಮೂರು ಹುಡುಗರಿಗೆ ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳಿಗಾಗಿ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಾಗಲೇ, ಛೆ ಪಾಪ! ಈ ಅಮಾಯಕ ಹುಡುಗರದೇನು ತಪ್ಪೆಂದು ನಮಗೆ ಅನಿಸಬೇಕಿತ್ತು! ಈ ಪಾಪದ ಹುಡುಗರ ಮೇಲಿನ ಮೊದಲ ಆರೋಪ, ಕಳೆದ ವರ್ಷ ಆಗಸ್ಟ್ ನಲ್ಲಿ ಮುಂಬಯಿಯ ಶಕ್ತಿ ಮಿಲ್ಸ್ ಗೆ ಸಹೋದ್ಯೋಗಿಯೊಂದಿಗೆ ಕೆಲಸದ ನಿಮಿತ್ತ ಹೋಗಿದ್ದ ಪತ್ರಿಕೋದ್ಯಮಿಯನ್ನು ತಮ್ಮ ಕೈಲಾದಷ್ಟು ಮೃಗೀಯವಾಗಿ ಅತ್ಯಾಚಾರಕ್ಕೀಡುಮಾಡಿದ್ದು. ಎರಡನೆಯ ಆರೋಪ, ಈ ಘಟನೆ ನಡೆಯುವ ಒಂದು ತಿಂಗಳ ಹಿಂದಷ್ಟೇ ಓರ್ವ ಟೆಲಿಫೋನ್ ಆಪರೇಟರ್‍‍ಗೂ ಇದೇ ಸದ್ಗತಿ ತೋರಿಸಿದ್ದು.

ಈ ಎರಡೂ ಘಟನೆಗಳಲ್ಲಿ ಇವೇ ಮೂವರು ಹುಡುಗರಿಂದ ತಿಳಿಯದೇ ಆದ ಅಚಾತುರ್ಯಕ್ಕೆ ಇವರು ಹೊಣೆ ಹೇಗಾಗುತ್ತಾರೆ ಅಲ್ಲವೆ? ತೀರ್ಪು ಹೊರಬೀಳುತ್ತಿದ್ದಂತೆ ಆ ಮೂವರು ಹುಡುಗರಲ್ಲಿ ಒಬ್ಬನ ತಾಯಿ, ಆ ಹುಡುಗಿ ಶಕ್ತಿ ಮಿಲ್ಸ್ ಗೆ ಬರಲೇಬಾರದಿತ್ತು, ಅವಳು ಅಲ್ಲಿಗೆ ಬಂದದ್ದರಿಂದಲೇ ಇಷ್ಟೆಲ್ಲಾ ಆಗಿದ್ದು, ಅವಳನ್ನೂ ನೇಣಿಗೆ ಹಾಕಿ ಎಂದಳು. ಸರಿಯಾಗಿ ಹೇಳಿದಳು ಮಹಾತಾಯಿ! ಹೆಣ್ಣೆಂದ ಮೇಲೆ ಕಾಲ್ಬೆರಳು ಮುಚ್ಚುವ ತನಕ ಸೀರೆಯುಟ್ಟು, ತಲೆ ತುಂಬ ಸೆರಗು ಹೊದ್ದು, ಮನೆಗೆಲಸ, ಮನೆಯವರ ಸೇವೆ ಮಾಡಿಕೊಂಡು ಎಲ್ಲಕ್ಕೂ ಮೂಕಬಸವನ ಥರ ತಲೆಯಾಡಿಸಿಕೊಂಡು ನಾಲ್ಕು ಗೋಡೆಯ ಮಧ್ಯೆ ಇರಬೇಕು. ಮನೆಯ ಕಷ್ಟ ಕೋಟಲೆ ನೋಡಲಾರದೆ, ಸಂಸಾರ ನೊಗಕ್ಕೆ ಹೆಗಲು ಕೊಡಲು, ವಿದ್ಯೆ ಕಲಿಯಲೋ ಅಥವಾ ನಾಲ್ಕು ಕಾಸು ದುಡಿದು ತಂದೆಯದೋ, ಅಣ್ಣನದೋ, ಗಂಡನದೋ ಅಥವಾ ಮಗನದೋ ಹೊರೆ ಇಳಿಸಲು ಬೀದಿಗೆ ಬಂದರೆ ಅದು ಅವರ ತಪ್ಪು. ಪಾಪ ಹುಡುಗರೇನು ಮಾಡಿಯಾರು ಅಲ್ಲವೇ?

ಅಂದ ಹಾಗೆ 2012ರ ಡಿಸೆಂಬರ್ 16ರಂದು ಚಲಿಸುತ್ತಿದ್ದ ಬಸ್‍ನಲ್ಲಿ ಆರು ಜನ ಅಮಾಯಕ ಹುಡುಗರ ಗುಂಪೊಂದು ಹುಡುಗಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ, ಆ ಪೆದ್ದು ಹುಡುಗಿ ಪ್ರತಿಭಟಿಸಿದ್ದಕ್ಕೆ ಅವಳನ್ನು ಸಾಧ್ಯವಾದಷ್ಟು ಹಿಂಸಿಸಿ ಸಾಕ್ಷಾತ್ ನರಸಿಂಹಾವತಾರ ತಳೆದು ಅವಳ ಕರುಳನ್ನು ಬಗೆದು ಬಸ್‍ನಿಂದ ಹೊರಗೆಸೆಯಿತಲ್ಲ, ಆಗ ಆದ ಗಲಾಟೆ ನಿಮಗೆ ನೆನಪಿದೆಯಲ್ಲವೇ? ಆ ಹುಡುಗಿ ಸಾವು ಬದುಕಿನ ನಡುವೆ ಹೋರಾಡುವಾಗ ಏನು ಜನ, ಏನು ಜನ ಅವಳ ಬೆಂಬಲಕ್ಕೆ! ಮೂಢ ಜನ ಅವಳಿಗೆ ನಿರ್ಭಯಾ ಎಂದು ಹೆಸರಿಟ್ಟು, ಬಿಟ್ಟ ಕೆಲಸ ಬಿಟ್ಟು ಬೀದಿಗೇ ಇಳಿದುಬಿಟ್ಟರಲ್ಲ ಪ್ರತಿಭಟನೆಗೆ. ಭಾರತವಷ್ಟೇ ಅಲ್ಲ, ಇಡೀ ವಿಶ್ವದ ತುಂಬೆಲ್ಲಾ ಸುದ್ದಿ ಹರಡಿ, ಅದರೊಂದಿಗೇ ಜನಮಾನಸವೂ ಕದಡಿ, ಹೋರಾಟದ ಕಿಡಿ ಹೊತ್ತಿ, ನ ಭೂತೋ ನ ಭವಿಷ್ಯತಿ ಎಂಬಂತೆ ಅಪಾರ ಮಟ್ಟದಲ್ಲಿ ಬೆಂಬಲ ಹರಿದುಬಂದು, ಎಂಥ ದೊಡ್ಡ ಅಲ್ಲೋಲಕಲ್ಲೋಲವಾಗಿಹೋಯಿತು ನೋಡಿ ಒಂದು ಸಣ್ಣ ವಿಷಯಕ್ಕೆ. 13 ದಿನಗಳ ಹೋರಾಟದ ನಂತರ ಆ ಹುಡುಗಿ ಸಿಂಗಾಪುರದ ಆಸ್ಪತ್ರೆಯಲ್ಲಿ ಸತ್ತಾಗ, ಸರ್ಕಾರ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನಿಗೇ ತಿದ್ದುಪಡಿ ತರಬೇಕಾಯಿತಲ್ಲ. ಸುಷ್ಮಾ ಸ್ವರಾಜ್‍ರಿಂದ ಹಿಡಿದು ಜಯಾ ಬಚ್ಚನ್‍ವರೆಗೂ ಎಲ್ಲರೂ ಇದನ್ನು ನಾಚಿಕೆಗೇಡು ಎಂದೆಲ್ಲ ಖಂಡಿಸಿಬಿಟ್ಟರಲ್ಲ ಸುಮ್ಮನೆ. ಇದೊಂದು ಮಾಮೂಲು ಅಚಾತುರ್ಯ ಎಂದು ಅವರಿಗೇಕೆ ಅರ್ಥ ಆಗಲಿಲ್ಲವೋ. ಕೊನೆಗೆ ಕೇಂದ್ರ ಸರ್ಕಾರ ಜಸ್ಟಿಸ್ ವರ್ಮಾ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಸುಮಾರು 80,000ಕ್ಕೂ ಮಿಕ್ಕಿ ಬಂದ ಸಲಹೆಗಳನ್ನು ಆ ಸಮಿತಿ ಸ್ವೀಕರಿಸಿ, ಪರಾಮರ್ಶಿಸಿ, 2013ರ ಫೆಬ್ರುವರಿ 3ರಂದು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯ ತಿದ್ದುಪಡಿ ತಂದು, ಹಾಗೇ ಸಾಮೂಹಿಕ ಅತ್ಯಾಚಾರಿಗಳಿಗೆ ಕನಿಷ್ಠ 20ವರ್ಷಗಳ ಕಾರಾಗೃಹವಾಸ ಶಿಕ್ಷೆಯನ್ನೂ ಕಾಯಂ ಮಾಡಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅಂಕಿತ ಹಾಕಿಸಬೇಕಾಯಿತು. ಓರ್ವ ಆರೋಪಿ ನ್ಯಾಯಾಂಗ ಬಂಧನದಲ್ಲಿ ಸತ್ತು, ಇನ್ನೋರ್ವ ಬಾಲಪರಾಧಿಯೆಂದು ಪರಿಗಣಿಸಲ್ಪಟ್ಟು, ಉಳಿದ ನಾಲ್ವರಿಗೆ ಗಲ್ಲು ಶಿಕ್ಷೆ ಜಾರಿಯಾಗಿ, ಅಬ್ಬಬ್ಬಾ ಏನು ರಂಪ, ಎಷ್ಟು ರಾದ್ಧಾಂತ ಒಂದು ಕ್ಷುಲ್ಲಕ ಹೆಣ್ಣು ಜೀವದ ಸಲುವಾಗಿ! ಈಗ ಹೇಳಿದ ಮಾತುಗಳನ್ನೇ ನೀವು ಆಗ ಹೇಳಿದ್ದರೆ ಅನಾವಶ್ಯಕವಾಗಿ ನಡೆದ ಅಷ್ಟೂ ಗೊಂದಲ ತಪ್ಪುತ್ತಿತ್ತು. ನೀವೊಂದು ಮಾತು ಹೇಳಿದ್ದರೆ ಕಾನೂನಿಗೆ ತಿದ್ದುಪಡಿ ತರುವುದನ್ನು ತಡೆಯಬಹುದಿತ್ತು. ನಿಮ್ಮ ಮಾತುಗಳನ್ನು ಅರ್ಥಮಾಡಿಕೊಂಡು ಅನುಮೋದಿಸಲು ಮಾನವಹಕ್ಕುಕಾಯ್ದೆಗಳ ಪರವಾಗಿರುವ ಸಂಘಟನೆಗಳ ಹಿಂಡೇ ಬರುತ್ತಿತ್ತು. 

ಸದ್ಯ, ಸಮಾಧಾನಕರ ಅಂಶವೆಂದರೆ ದಿಲ್ಲಿಯೊಂದರಲ್ಲೇ 2012ರಲ್ಲಿ ಸುಮಾರು 706 ಅತ್ಯಾಚಾರ ಪ್ರಕರಣಗಳಾದರೂ ಇನ್ಯಾರಿಗೂ ಹೀಗೆ ಶಿಕ್ಷೆಯಾಗಿಲ್ಲ! ನಿರ್ಭಯಾ ಪ್ರಕರಣ ನಂತರ ಇಂಥ 64 ಅಚಾತುರ್ಯಗಳಾಗಿದ್ದರೂ ಸರಿಯಾಗಿ ವಿಚಾರಣೆಗಳೇ ನಡೆದಿಲ್ಲ!

ಏಕೆಂದರೆ ನಮ್ಮ ಹೆಣ್ಣುಮಕ್ಕಳು ಕರುಣಾಮಯಿಗಳು, ಕ್ಷಮಯಾಧರಿತ್ರಿಯರು. ಪಾಪದ ಹುಡುಗರು, ಗಂಡಸರು ಹೀಗೆಲ್ಲ ಬೇಕೆಂದು ಮಾಡುವುದಿಲ್ಲ ಎಂದು ಅವರಿಗೆ ಗೊತ್ತು. ಆದ್ದರಿಂದಲೇ ಮನೆಗಳಲ್ಲಿ, ಶಾಲೆಗಳಲ್ಲಿ, ಕಛೇರಿಗಳಲ್ಲಿ ಎಲ್ಲೆಂದರಲ್ಲಿ ನಡೆಯುವ ಸಣ್ಣ ದೊಡ್ಡ ಅಚಾತುರ್ಯಗಳನ್ನೆಲ್ಲಾ ಸುಲಭವಾಗಿ ಮನ್ನಿಸಿಬಿಡುತ್ತಾರೆ. ಅಷ್ಟೇ ಏಕೆ, ಸಾರ್ವಜನಿಕ ಸ್ಥಳಗಳಲ್ಲಿ, ಬಸ್‍ಗಳಲ್ಲಿ ಮಾರುಕಟ್ಟೆಗಳಲ್ಲಿ ಇಂಥ ಸಂದರ್ಭ ಬಂದರೆ ತಾವೇ ಜೀವವನ್ನು ಹಿಡಿಮಾಡಿಕೊಂಡು ಮುಜುಗರವನ್ನು ನುಂಗಿಕೊಳ್ಳುತ್ತಾರೆ ಹೊರತು ಬಾಯಿಬಿಡುವುದೂ ಇಲ್ಲ, ಯಾರೆಡೆಯೂ ಬೆರಳು ತೋರುವುದೂ ಇಲ್ಲ. ಮಾನ ಮರ್ಯಾದೆಗಳು ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾದ ಆಭೂಷಣಗಳೆಂದು ಸೀತೆ ಸಾವಿತ್ರಿಯರ ಉದಾಹರಣೆಗಳೊಡನೆ ನಾವು ಮೊದಲಿನಿಂದಲೂ ಪಾಠ ಮಾಡಿಕೊಂಡು ಬಂದದ್ದು ಈಗೆಷ್ಟು ಫಲಪ್ರದವಾಗುತ್ತಿದೆ ನೋಡಿ.
     .
ಈ ವಿಷಯದಲ್ಲಿ ವಿಶ್ವದ ಇತರೆ ದೇಶಗಳಿಗೂ ನಿಮಗಿರುವಷ್ಟು ಬುದ್ಧಿಯಿಲ್ಲ!  ಇರಾನ್, ಅಫ್‍ಘಾನಿಸ್ತಾನ್ ಹಾಗೂ ಸೌದಿಯಂಥ ದೇಶಗಳು ಅತ್ಯಾಚಾರಿಗಳನ್ನು ನಿರ್ದಯವಾಗಿ  ಸಾರ್ವಜನಿಕವಾಗಿ ನೇಣಿಗೆ ಹಾಕುತ್ತವೆ ಅಥವಾ ಒಂದೇ ಏಟಿಗೆ ಅವರ ತಲೆ ಕತ್ತರಿಸುತ್ತವೆ. ಚೈನಾ ಹಾಗೂ ಉತ್ತರ ಕೊರಿಯ ದೇಶಗಳು ಅತ್ಯಾಚಾರಿಗಳ ತಲೆಗೆ ಅಥವಾ ಬೆನ್ನುಹುರಿ ಮತ್ತು ಕತ್ತು ಸೇರುವ ಜಾಗಕ್ಕೆ ಸರಿಯಾಗಿ ಗುಂಡಿಟ್ಟು ಕೊಲ್ಲುತ್ತವೆ. ಇನ್ನು ಇಸ್ರೇಲ್, ಫ್ರಾನ್ಸ್, ಅಮೆರಿಕ ಮುಂತಾದ ದೇಶಗಳೆಲ್ಲ 10ರಿಂದ 30ವರ್ಷಗಳವರೆಗಿನ ಕಠಿಣ ಕಾರಾಗೃಹವಾಸವನ್ನು ದಯಪಾಲಿಸುತ್ತವೆ. ಎಷ್ಟು ತಪ್ಪು ನೋಡಿ. ನೀವಾದರೂ ಒಮ್ಮೆ ಅಲ್ಲಿಗೆಲ್ಲ ಭೇಟಿಕೊಟ್ಟು ಅವರಿಗೆ ತಿಳಿಸಿಹೇಳಬಾರದೆ? ಮಾನ ಮರ್ಯಾದೆಗಳಿಗೆ ಅಂಜಿ ಕೂರುವ ನಮ್ಮ ಹೆಣ್ಣುಮಕ್ಕಳನ್ನು ತೋರಿಸಿ, ಹೆಣ್ಣುಮಕ್ಕಳೆಂದರೆ ಹೀಗಿರಬೇಕೆಂದು ಬಿಂಬಿಸಿ, ಹುಡುಗರೆಂದರೆ ಹೀಗೆಯೆ ಎಂಬ ಸತ್ಯವನ್ನು ಮನದಟ್ಟುಮಾಡಿಸಿ ಅಲ್ಲಿಯ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿಸಬಾರದೇ?

ಹಂಚಿಕೊಳ್ಳಬೇಕಾದ ಮತ್ತೂ ಕೆಲವು ಸಂತೋಷಕಾರಿ ಅಂಶಗಳಿವೆ. ನಮ್ಮ ದೇಶದಲ್ಲಿ ಅತ್ಯಾಚಾರ ದ್ವಿಗುಣಗೊಂಡಿದ್ದು 1998ರಿಂದ 2008ರ ಅವಧಿಯಲ್ಲಿ. 2011 ಒಂದರಲ್ಲೇ 24,206 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು ಎಂದರೆ ಎಂಥ ಮಹೋನ್ನತ ಸಾಧನೆಯಲ್ಲವೇ? ಪ್ರಸ್ತುತ ಪ್ರತಿ 22ನಿಮಿಷಕ್ಕೊಂದು ಅತ್ಯಾಚಾರದ ಪ್ರಕರಣ ದಾಖಲಾಗುತ್ತಲೇ ಇದೆ!


ಮೊದಲೇ ಪುರುಷ ಪ್ರಧಾನ ಸಮಾಜ, ಅದರಲ್ಲೂ ಶತಾಯ ಗತಾಯ ಪ್ರಧಾನಿಯಾಗೇ ತೀರಲು ಈಗಾಗಲೇ ಹತ್ತು ಪಕ್ಷಗಳ ಜೊತೆ ಕೈ ಜೋಡಿಸಿರುವ ನಿಮ್ಮ ಈ ಮಾತುಗಳು ನಮ್ಮಲ್ಲಿ ಹುಟ್ಟಿಸಿರುವ ಧೈರ್ಯ, ಸಂತೋಷಗಳು ವರ್ಣಿಸಲಸದಳ. ಭಗವಂತನ ದಯೆಯಿಂದ ಒಂದೊಮ್ಮೆ ನೀವು ಅಧಿಕಾರಕ್ಕೆ ಬಂದರೆ, ನೀವೇ ಹೇಳಿರುವಂತೆ ಅತ್ಯಾಚಾರದ ಕಾನೂನಿಗೆ ತರುವ ತಿದ್ದುಪಡಿಯನ್ನು ಸ್ವಾಗತಿಸಲು ಈ ದೇಶದ ಸ್ತ್ರೀಕುಲ ತುದಿಗಾಲಲ್ಲಿ ನಿಂತಿರುತ್ತದೆ ಎಂಬುದನ್ನು ಮರೆಯಬೇಡಿ. ಮಹಿಳಾ ಸಾಕ್ಷರತೆ, ಮಹಿಳಾ ಸಬಲೀಕರಣ ಎಂದು ಯಾರು ಎಷ್ಟಾದರೂ ಶಂಖ ಊದಿಕೊಳ್ಳಲಿ, ನಾವೆಲ್ಲಾ ನಿಮ್ಮೊಂದಿಗಿದ್ದೇವೆ. ಕಳೆದ ದಶಕದಲ್ಲಿ ಮಹಿಳಾ ಸಾಕ್ಷರತೆ ಶೇಕಡ 11.8ರಷ್ಟು ಹೆಚ್ಚಿದೆಯಂತೆ! ಅಂಕಿ ಅಂಶಗಳು ಏನೇ ಇರಲಿ, ಅವು ಬರಿದೇ ತೋರಿಕೆ ಎಂಬುದು ನಮಗೆ ಗೊತ್ತಿದೆ. ನಮ್ಮ ಮನಸ್ಥಿತಿ ಬದಲಾಗಿಲ್ಲ, ನಾವು ಅದನ್ನು ಬದಲಾಗಲು ಬಿಡುವುದೂ ಇಲ್ಲ. ಹಳ್ಳಿಯವರಾಗಲೀ, ಪಟ್ಟಣದವರಾಗಲೀ, ನಾವೇ ಹಾಕಿಕೊಂಡ ಲಕ್ಷ್ಮಣರೇಖೆಯೊಳಗೇ ನಲುಗುತ್ತೇವೆ. ಪ್ರತಿ ಅಚಾತುರ್ಯಕ್ಕೂ ನಿಟ್ಟುಸಿರನ್ನೋ, ಕಣ್ಣೀರನ್ನೋ ಹಾಕಿ ನಮ್ಮ ಅಸಹಾಯಕತೆಯನ್ನು ನಾವೇ ಶಪಿಸಿಕೊಳ್ಳುತ್ತೇವೆ. ಹೆಚ್ಚೆಂದರೆ ನಿರ್ಭಯಾಳಂತೆ ಆಹುತಿಯಾಗುತ್ತೇವೆ. ನೀವು ನಮ್ಮ ಬಗ್ಗೆ ಯಾವುದೇ ಕಾಳಜಿ ಮಾಡದೆ ನಿರುಮ್ಮಳವಾಗಿ ಹೇಳಿಕೆಗಳನ್ನು ಕೊಡುತ್ತಾ ಹೋಗಿ. ಕಾನೂನುಗಳನ್ನು ಸಡಿಲಿಸುತ್ತಾ ಹೋಗಿ. ನಾವು ಹೀಗೇ ಸ್ಪಂದಿಸುತ್ತಾ, ಸಹಿಸುತ್ತಾ, ಒಗ್ಗಿಕೊಳ್ಳುತ್ತಾ ಕೊನೆಗೆ ಬಲಿಯಾಗುತ್ತಾ ಹೋಗುತ್ತೇವೆ. ಇನ್ನೇನಾಗದಿದ್ದರೂ ಸರಿಯೆ, ನಿಮ್ಮಂಥ ಪುರುಷರತ್ನರಿರುವ ನೆಲದಲ್ಲಿ ಜನ್ಮ ತಾಳಿದ ಹೆಮ್ಮೆಯಾದರೂ ಚಿರಕಾಲ ನಮ್ಮದಾಗುತ್ತದೆ!
***

1 comment: