Monday, 19 May 2014

ಎಂಥವರು ಬೇಕೀಗ ಭಾರತಕ್ಕೆ?

ಅಂತೂ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಚುನಾವಣೆ ಎಂಬ ಮಹಾಸಮರ ಮುಗಿದಿದೆ.  ನಾವೆಲ್ಲಾ ಉಸ್ಸಪ್ಪಾ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ದೇಶದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಯ ಚುನಾವಣೆಯೆಂಬ ಹೆಗ್ಗಳಿಕೆಯ ಇದು 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 7ರಂದು ಶುರುವಾಗಿ ಮೇ 12ರವರೆಗೂ ನಡೆಯಿತು. ಅಷ್ಟೂ ದಿನ ಬೇರೆ ವಿಷಯಗಳೆಲ್ಲಾ ಉಸಿರು ಕಳೆದುಕೊಂಡು ನಿತ್ರಾಣವಾಗಿ ನೀಲಿಗಟ್ಟಿಹೋದವು. ಗೆದ್ದೇ ತೀರುವ ಜಿದ್ದಿಗೆ ಬಿದ್ದು ಸ್ಪರ್ಧಿಸಿದ ಅಭ್ಯರ್ಥಿಗಳದು ಹಾಗಿರಲಿ, ನಮ್ಮ ಪಾಡು ಹೇಳತೀರದಾಗಿತ್ತು. ಒಂದು ಚಾನೆಲ್‍ನಲ್ಲಿ ಅರ್ಣಬ್ ಗೋಸ್ವಾಮಿಯಿಂದ ತಪ್ಪಿಸಿಕೊಂಡರೆ ಮತ್ತೊಂದರಲ್ಲಿ ಬರ್ಖಾ‍ದತ್‍ಳ ಕೈಲಿ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ. ಪ್ರತಿಯೊಂದು ಪಕ್ಷದ ವಕ್ತಾರರೂ ಒಂದೊಂದು ಘಂಟೆಗೂ ಅಕ್ಕಪಕ್ಕದ ಚಾನೆಲ್‍ಗಳಿಗೆ ಹಾರಿ ಅವೇ ಮಾತುಗಳನ್ನಾಡಿದ್ದೇ ಆಡಿದ್ದು. ಜೊತೆಗೆ ಲಂಗು ಲಗಾಮಿಲ್ಲದೆ ಪರಸ್ಪರರ ಮೇಲೆ ಹರಿಸಿದ ನಿಂದನೆಗಳ ಸುರಿಮಳೆ ಬೇರೆ. ಷಂಡ, ಭಂಡ, ಕೊಲೆಗಡುಕ ಎಂಬುದರಿಂದ ಶುರುವಾಗಿ, ಕತ್ತರಿಸಿ ತುಂಡು ಮಾಡುತ್ತೇನೆ, ಜೈಲಿಗಟ್ಟುತ್ತೇನೆ ಎಂಬಲ್ಲಿಗೆ ಬಂದು ನಿಂತ ಪದಪುಂಜಗಳ ಪ್ರಯೋಗ ನೋಡಿ ನಾವಿರುವುದು ಯಾವ ಪಾಪಿಗಳ ಲೋಕದಲ್ಲಿ ಎಂಬ ಗಾಬರಿ ನಮಗೆ. 

ಪರಿಸ್ಥಿತಿಯ ಗಾಂಭೀರ್ಯದ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದು ಎರಡೇ ವಿಷಯಗಳು. ಒಂದು, ಇತ್ತೀಚೆಗಷ್ಟೇ ಸಂದರ್ಶನಗಳ ವೇದಿಕೆಯಲ್ಲಿ ಅರಂಗೇಟ್ರಂ ಮಾಡಿದ ರಾಹುಲ್ ಗಾಂಧಿಯವರದು. ಕಂಠಪಾಠ ಮಾಡಿದ್ದ ಉತ್ತರ ಮರೆತು ಹೋಗಿ, ಬಹಳಷ್ಟು ಪ್ರಶ್ನೆಗಳಿಗೆ ಮಹಿಳಾ ಸಬಲೀಕರಣವನ್ನೇ ಉತ್ತರವಾಗಿಸಿಕೊಂಡು ತಮ್ಮ  ಕ್ಷಮತೆ, ಪ್ರತಿಭೆ ಹಾಗೂ ಆಲೋಚನಾ ವೈಖರಿಗಳ ನಿಜ ಸ್ವರೂಪವನ್ನು ನಮ್ಮೆದುರು ಹರವಿಟ್ಟರು. ತನ್ಮೂಲಕ ಫೇಸ್‍ಬುಕ್, ಟ್ವಿಟ್ಟರ್‍ ಹಾಗೂ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರವಾಗಿ, ನಗೆಹನಿಯಾಗಿ ಬಂದು ನಮ್ಮನ್ನು ಮನಸಾರೆ ನಗಿಸಿದರು.  ಎರಡನೆಯದು, ತಾನು ಆಮ್ ಆದ್ಮಿ, ತನಗೆ ಯಾವ ರಕ್ಷಣೆಯೂ ಬೇಡ ಎಂದು ಬೀದಿಗೆ ನುಗ್ಗಿ ಬಾರಿಬಾರಿಗೂ ಕಪಾಳ ಮೋಕ್ಷ ಮಾಡಿಸಿಕೊಂಡು ಬಂದ ಅರವಿಂದ ಕೇಜ್ರಿವಾಲರದ್ದು. ಏಟು ತಿಂದ ಮೇಲೆ, ಇದು ಯಾರ ಹುನ್ನಾರ, ನನ್ನನ್ನೇ ಏಕೆ ಗುರಿಯಾಗಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ ಕೇಜ್ರಿವಾಲರ ಕಳವಳವೂ ನಮ್ಮ ತುಟಿಯಂಚಿಗೆ ನಗು ತರಿಸಿತು. 49 ದಿನಗಳ ಕಾಲ ನಡೆಸಿದ ದಿಲ್ಲಿಯ ದರ್ಬಾರಿನಲ್ಲಿ ನೀರು, ವಿದ್ಯುತ್, ಭ್ರಷ್ಟಾಚಾರರಹಿತ ಆಡಳಿತ ಕೊಡುತ್ತೇನೆ ಎಂದೆಲ್ಲಾ ಹೇಳಿ ಕೊನೆಗೆ ಕೈ ಕೊಟ್ಟು ಓಡಿ ಹೋಗಿದ್ದ ಇವರಿಗೆ ರೋಸಿಹೋಗಿದ್ದ ದೆಹಲಿಯ ಆಮ್ ಆದ್ಮಿಯೇ ತನ್ನ ಕೈ ರುಚಿ ತೋರಿಸಿದ್ದ!

ಎಂದಿಗೆ ಮುಗಿಯುವುದೋ ಎನಿಸುತ್ತಿದ್ದ ಕಾಳಗ ಕೊನೆಗೂ ಮುಗಿದಿದೆ. ಈಗ ಚಾತಕಪಕ್ಷಿಗಳಂತೆ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಎಲ್ಲರೂ ಬದಲಾವಣೆಯ ನಿರೀಕ್ಷೆಯಲ್ಲಿರುವುದಂತೂ ದಿಟ. ಇಷ್ಟು ದಿನ ಸೂತ್ರದ ಗೊಂಬೆಯಾಟವಾಗಿಹೋಗಿದ್ದ ನಮ್ಮ ಆಡಳಿತಯಂತ್ರ ಹೊಸ ಹುಟ್ಟು ಪಡೆಯುವುದಾ ಎಂಬ ಕಾತರವೇ ಎಲ್ಲೆಡೆ. ಎಂಥವರು ನಮಗೆ ಹೊಸತನದ ಹರಿಕಾರರಾಗಿ, ನೇತಾರರಾಗಿ ಬೇಕು ಹಾಗೂ ಅವರು ನಿರ್ದಿಷ್ಟವಾಗಿ ಎಂಥ ಬದಲಾವಣೆಯನ್ನು ತರಬೇಕು ಎಂದು ನಮ್ಮನ್ನು ಕೇಳಿದರೆ…

  • ·        ಎಲ್ಲದಕ್ಕೂ ತುಟಿ ಹೊಲಿದುಕೊಂಡು ಕುಳಿತ ಮೌನ ಮೋಹನರು ನಮ್ಮನ್ನಾಳಿದ್ದು ಸಾಕು. ಬಹುಕೋಟಿ ಕಲ್ಲಿದ್ದಲು ಹಗರಣದ ಬಗ್ಗೆ ಇಡೀ ದೇಶವೇ ತುದಿಗಾಲಲ್ಲಿ ನಿಂತು ಪ್ರಶ್ನಿಸತೊಡಗಿದಾಗ 'ಸಾವಿರಾರು ಉತ್ತರಗಳಿಗಿಂತ ನನ್ನ ಮೌನವೇ ವಾಸಿ, ಎಷ್ಟೋ ಪ್ರಶ್ನೆಗಳ ಮರ್ಯಾದೆ ಉಳಿಸಿದೆ' ಎಂದು ಕವಿಯಂತೆ ಹೇಳಿ ನುಣುಚಿಕೊಂಡು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟಂಥವರು ನಮಗಿನ್ನು ಬೇಡ. ನಮ್ಮ ಸೈನಿಕರ ರುಂಡಗಳು ತರಿದು ಹೋದಾಗಲೂ ‘ಮಾತು ಬೆಳ್ಳಿ, ಮೌನ ಬಂಗಾರ’ ಎಂದು ಸುಮ್ಮನಿದ್ದಂಥವರು ಖಂಡಿತ ಬೇಡ.  ದೇಶದ ಆಗುಹೋಗುಗಳಿಗೆಲ್ಲ ತಲೆಕೊಡುವ, ನಾವು ಕೇಳುವ ಪ್ರಶ್ನೆಗಳಿಗೆ ಉತ್ತರವಾಗುವ ಗಟ್ಟಿತನವಿರುವವರು ಬೇಕು.

  • ·        ನಮಗೆ ರಬ್ಬರ್ ಸ್ಟ್ಯಾಂಪ್ ಆಗುವ ಪ್ರಧಾನಿ ಬೇಡ. ನಂ.7 ರೇಸ್ ಕೋರ್ಸ್ ರೋಡ್‍‍ಗೆ ಮೀಸಲಾಗಿರಬೇಕಾದ ಸಭೆ, ನಿರ್ಧಾರಗಳೆಲ್ಲ ನಂ.10 ಜನಪಥದಲ್ಲಿ ನಡೆದುಹೋಗುವುದು ನಮಗೆ ಸಮ್ಮತವಲ್ಲ. ಎರಡೆರಡು ಅಧಿಕಾರ ಕೇಂದ್ರಗಳ ಪದ್ಧತಿಗೆ ಇತಿಶ್ರೀ ಹಾಡಿ  ಸ್ವತಂತ್ರವಾಗಿ ಯೋಚಿಸುವ, ಯಾರ ಹಸ್ತಕ್ಷೇಪವೂ ಇರದೆ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವ ಮನಸ್ಥಿತಿಯವರು ಬೇಕು.

  • ·        ವಂಶಪಾರಂಪರ್ಯವಾಗಿ ಬಂದಿರುವ ಕುಟಂಬ ರಾಜಕಾರಣ ನಮಗಿನ್ನು ಬೇಡ. ‘ಗಾಂಧಿ’ ಎಂಬ ಹೆಸರು ಅಂಟಿದಾಕ್ಷಣ ಬಂದು ಬಿಡುವ ಅರ್ಹತೆ, ಸಿಕ್ಕಿಬಿಡುವ ರಿಯಾಯಿತಿ, ಸರ್ವಾಧಿಕಾರಗಳಿನ್ನು ಸಾಕು. ಬರಿದೇ ನಾಮಬಲದಿಂದ ಅಧಿಕ್ಕಾರಕ್ಕೇರಿ ದೇಶವನ್ನೇ ಬುಗುರಿಯಂತಾಡಿಸುವವರ ಕೈಗೊಂಬೆಗಳಾಗಿ ಸಲಾಮು ಹೊಡೆಯುವವರು   ನಮಗೊಪ್ಪಿಗೆಯಾಗುವುದಿಲ್ಲ. ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಓದಿ ಬಂದರೂ ನಿರರ್ಗಳವಾಗಿ ನಾಲ್ಕು ಮಾತನ್ನೂ ಆಡಲು ಬರದವರು ಈ ದೇಶದ ಚುಕ್ಕಾಣಿ ಹಿಡಿದು ಮುಗ್ಗರಿಸುವುದು ಬೇಡ. ದೇಶದ ಬಗ್ಗೆ ಅಭಿಮಾನ, ಪ್ರೇಮ, ದೂರದೃಷ್ಟಿಗಳಿರುವ, ಈ ಮಣ್ಣಿನ ಕಣಕಣದ ಪರಿಚಯವಿರುವ, ಜನರ ನಾಡಿಮಿಡಿತವನ್ನರಿಯಬಲ್ಲ ಚಹಾ ಮಾರುತ್ತಿದ್ದವರು ನಮ್ಮ ನೇತಾರರಾದರೂ ನಮಗೆ ಆದೀತು!

  • ·        ಹಿಂದು ಎಂದೊಡನೆ ಕೋಮುವಾದಿ, ಮುಸ್ಲಿಂ ಎಂದೊಡನೆ ಜಾತ್ಯಾತೀತ ಎಂಬ ಕಲ್ಪನೆಯನ್ನು ಹುಟ್ಟುಹಾಕಿ, ಅದನ್ನೇ ಅಸ್ತ್ರವನ್ನಾಗಿಸಿಕೊಂಡು ನಮ್ಮನ್ನು ಒಡೆದು ಆಳುತ್ತಾ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದವರು ಸಾಕು. ಹಿಂದುವಾಗಲೀ, ಮುಸ್ಲಿಂ ಆಗಲೀ, ಇತರೆ ಧರ್ಮದವರಾಗಲೀ, ಎಲ್ಲರೂ ಭಾರತೀಯರು ಮಾತ್ರ ಎಂಬ ಹೊಸ ಪರಿಭಾಷೆಯನ್ನು ಪರಿಣಾಮಕಾರಿಯಾಗಿ ಚಾಲ್ತಿಗೆ ತರಬಲ್ಲ ಎಂಟೆದೆಯಿರುವವರು ಬೇಕು. ಅಲ್ಪಸಂಖ್ಯಾತರ ಮೇಲೆ ಹರಿಸುತ್ತಿರುವ ಕೃತಕ ಅನುಕಂಪ, ತೋರಿಕೆಯ ಓಲೈಕೆಗಳ ಹೊಳೆಯನ್ನು ನಿಲ್ಲಿಸಿ ಅವರಿಗೆ ವಾಸ್ತವವನ್ನು ಮನದಟ್ಟು ಮಾಡಿಸಿ ಮುಖ್ಯವಾಹಿನಿಗೆ ತರುವ ನಯಗಾರಿಕೆಯಿರುವವರು ಬೇಕು.

  • ·        ಕಳೆದ ಹತ್ತು ವರ್ಷಗಳಲ್ಲಿ ಭಾರತಮಾತೆಯ ಕುತ್ತಿಗೆಗೆ ಪೋಣಿಸಿರುವ ಹಗರಣಗಳ ಮಾಲೆ ಸಾಕು. ಹತ್ತು ಲಕ್ಷ ಕೋಟಿಗೂ ಮೀರಿದ ಕಲ್ಲಿದ್ದಲು ಹಗರಣ, 1.76 ಲಕ್ಷ ಕೋಟಿಯ 2ಜಿ ತರಂಗ ಹಗರಣ, 3600 ಕೋಟಿಯ ಹೆಲಿಕಾಪ್ಟರ್ ಹಗರಣ,90 ಕೋಟಿಯ ಕಾಮನ್‍ವೆಲ್ತ್ ಹಗರಣ ಮುಂತಾದವುಗಳಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗಿಯಾಗಿದ್ದ ಸರ್ಕಾರ ತೆರಿಗೆದಾರರ ಹಣವನ್ನು ನುಂಗಿ ನೀರು ಕುಡಿದದ್ದು ಸಾಕು. ಮತ್ತೆ ಇಂಥವೇ ಹಗರಣಗಳನ್ನು ವ್ಯವಸ್ಥಿತವಾಗಿ ಹುಟ್ಟುಹಾಕುವ ಆಡಳಿತಯಂತ್ರ ನಮಗೆ ಬೇಡ. ಹಗರಣಮುಕ್ತವಾದ ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುವ ಶುಭ್ರ ಮನಸಿನ ಶುದ್ಧಹಸ್ತರು ಬೇಕು.

  • ·        ವಿದೇಶಗಳಲ್ಲಿದ್ದುಕೊಂಡೇ ತಮ್ಮ ಕಬಂಧ ಬಾಹುಗಳನ್ನು ಚಾಚಿ ನಮ್ಮ ಧರ್ಮದ ಬೇರುಗಳನ್ನು ಅಲುಗಾಡಿಸುತ್ತಿರುವ ಮತಾಂತರಿಗಳಿಗೆ ಇಷ್ಟು ವರ್ಷ ಸಿಕ್ಕಿರುವ ಪ್ರೋತ್ಸಾಹ ಸಾಕು. ಆ ಬಾಹುಗಳನ್ನು ನಿರ್ದಯವಾಗಿ ಕತ್ತರಿಸಿ, ದೇಶದ ಬೇಲಿಯನ್ನು ಗಟ್ಟಿಗೊಳಿಸಿ ನಮ್ಮ ಧರ್ಮದ ಬೇರುಗಳನ್ನು ಸಂರಕ್ಷಿಸುವ ನಿಷ್ಠುರಿ ಬೇಕು.

  • ·        ದಿನಕ್ಕೊಂದು ಉಪಟಳ ನೀಡುತ್ತಾ ಗಡಿಯಲ್ಲಿ ಅಸಂಖ್ಯ ಯೋಧರ ಪ್ರಾಣ ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಸರಿಯಾದ ಎಚ್ಚರಿಕೆ ಕೊಡದೆ, ದೇಶಕ್ಕಾಗಿ ಹುತಾತ್ಮರಾದ ಸೈನಿಕರ ತ್ಯಾಗಕ್ಕೆ ಅಪಚಾರ ಮಾಡುತ್ತಿರುವ ಅಂಜುಬುರುಕುತನ ಇನ್ನು ಬೇಡ. ಅತಿಯಾಗಿರುವ ಸಂಯಮಕ್ಕೆ ಕೊನೆ ಹಾಡಿ, ಗಡಿಯಿಂದ ನುಸುಳಿ ನಮ್ಮವರ ರಕ್ತದೋಕುಳಿಯಾಡುತ್ತಿರುವವರ ಹೆಡೆಮುರಿ ಕಟ್ಟಿ  ಸಾಮ, ದಾನ, ಭೇದದಿಂದಾಗದ್ದನ್ನು ದಂಡದಿಂದಲಾದರೂ ಅವರಿಗೆ ದಯಪಾಲಿಸುವ ಧೀರ ನೇತಾರರು ಬೇಕು.

  • ·        ಹಣದುಬ್ಬರವನ್ನು ಹೆಚ್ಚಿಸಿ, ಜಿ.ಡಿ.ಪಿಯನ್ನು ಕೆಳಗಿಳಿಸಿ, ಶ್ರೀಮಂತರನ್ನು ಆಗರ್ಭ ಶ್ರೀಮಂತರನ್ನಾಗಿಸಿ ಬಡವರನ್ನು ಹಾಗೇ ಉಳಿಸಿದ ಈಗಿನ ಸರ್ಕಾರದ ಆರ್ಥಿಕ ನೀತಿಗಳು ಸಾಕು. ಪ್ರಸಕ್ತ ಬಡತನದ ರೇಖೆಯೊಳಗಿರುವ ಶೇಕಡ 11.8ರಷ್ಟು ಭಾರತೀಯರ ಬದುಕಿನ ಸ್ತರವನ್ನು ಮೇಲೆತ್ತುವ ನಿಟ್ಟಿನಲ್ಲಿ ಹೊಸ ನೀತಿಗಳು ರೂಪುಗೊಳ್ಳಬೇಕು. ದೇಶದಲ್ಲಿ ಸರಾಸರಿ 50ರಷ್ಟಿರುವ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಕಾಯಕವಾಗಬೇಕು. ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಗಳಿಗೆ ಒತ್ತುಕೊಟ್ಟು ಹೊಸ ಉದ್ಯೋಗಗಳ ಸೃಷ್ಟಿಗೆ ಅವಕಾಶ ನೀಡಬೇಕು. ಒಟ್ಟಾರೆ ಪರಿಣಾಮಕಾರಿಯಾದ ಆರ್ಥಿಕ , ರಕ್ಷಣಾ  ಹಾಗೂ ವಿದೇಶಾಂಗ ನೀತಿಗಳ ರಚನೆಗೆ ಇಂಬು ಕೊಡುವ ಬುದ್ಧಿವಂತ ನಾಯಕ ಬೇಕು.

  • ·        ದೇಶಕ್ಕೆ ಮುಕುಟಪ್ರಾಯವಾಗಿರುವ ಕಾಶ್ಮೀರಕ್ಕೆ ದಶಕಗಳಿಂದಲೂ ಕೊಡಮಾಡಿರುವ ಸೆಕ್ಷನ್ 370 ಇನ್ನು ಮುಂದುವರೆಯುವುದು ಕೂಡದು. ನಮಗೆ ಸೇರಿಯೂ ಸೇರದಂತಿರುವ, ನಮ್ಮದೇ ಹಣದಿಂದ ಎಲ್ಲ ಸೌಲಭ್ಯಗಳನ್ನೂ ಪಡೆಯುತ್ತಿದ್ದರೂ ನಮ್ಮ ಯಾವ ಕಾನೂನಿನ ಮಿತಿಗೂ ಒಳಪಡದ, ಒಟ್ಟಿನಲ್ಲಿ ನಮಗೆ ಅಧಿಕಾರವೇ ಇರದೆ ಭಾರತದ ಸಮಗ್ರತೆಗೆ ಕಪ್ಪು ಚುಕ್ಕೆಯಾಗಿರುವ ಇಂಥ ಲಕ್ಷ್ಮಣರೇಖೆಗಳು ಇನ್ನು ತೆರವಾಗಬೇಕು. ತರಬೇಕಾದ ತಿದ್ದುಪಡಿಯನ್ನು ಶೀಘ್ರವೇ ತಂದು ಉಳಿದ ರಾಜ್ಯಗಳಂತೆಯೇ ಕಾಶ್ಮೀರವನ್ನೂ ನಮ್ಮ ಸಂವಿಧಾನದೊಳಗೆ ಅಡಕವಾಗಿಸಿ ನಮ್ಮ ದೇಶದ ನಕ್ಷೆಯನ್ನು ಈಗಿರುವಂತೆಯೇ ಶಾಶ್ವತವಾಗಿ ಉಳಿಸಿಕೊಳ್ಳಬಲ್ಲ ಉಕ್ಕಿನ ಮನುಷ್ಯ ಬೇಕು.

  • ·        ನೆರೆಯ ರಾಷ್ಟ್ರಗಳ ವಿಷಯದಲ್ಲೇ ಮುನ್ನೆಚ್ಚರಿಕೆಯಿಲ್ಲದೆ, ಸಂಸತ್ತಿನ ಅಧಿವೇಶನದ ಸಮಯದಲ್ಲೆಲ್ಲಾ ಬರೀ ದೂರ ದೇಶಗಳಿಗೆ ಪ್ರಯಾಣ ಮಾಡಿ ಸುಮಾರು 640 ಕೋಟಿಯಷ್ಟು ವಿದೇಶ ಪ್ರಯಾಣ ವೆಚ್ಚದ ಹೊರೆಯನ್ನು ಹೊರಿಸಿದಂಥ ಪ್ರಧಾನಿ ನಮಗೆ ಬೇಡ. ನಮ್ಮ ಸುತ್ತ-ಮುತ್ತ ಏನಾಗುತ್ತಿದೆ ಎಂದು ಮೊದಲು ತಿಳಿದುಕೊಂಡು ಅದಕ್ಕೆ ತಕ್ಕ ತಯಾರಿಯೊಡನೆ ಸನ್ನದ್ಧರಾಗಿರುವ ತಂತ್ರಗಾರಿಕೆಯವರು ಬೇಕು. ಕಾರಣ ಸಿಕ್ಕೊಡನೆ ಭೂ, ಜಲ ಹಾಗೂ ವಾಯುಮಾರ್ಗಗಳ ಮುಖೇನ ನಮ್ಮ ಮೇಲೆ ಆಕ್ರಮಣಕ್ಕೆ ಸಿದ್ಧವಾಗಿರುವ ಚೀನಾಕ್ಕೆ ಪ್ರತ್ಯುತ್ತರ ನೀಡಿ 1962 ಮತ್ತೆ ಮರುಕಳಿಸದಂತೆ ತಡೆಯುವ ಮುಂಜಾಗರೂಕತೆ, ಛಾತಿಯಿರುವವರು ಬೇಕು.


ಸ್ವಚ್ಛತೆಯಲ್ಲಿ ಸಿಂಗಾಪುರ, ಅಭಿವೃದ್ಧಿಯಲ್ಲಿ ದುಬೈ, ತಂತ್ರಜ್ಞಾನದಲ್ಲಿ ಅಮೆರಿಕ ಹಾಗೂ ದೇಶರಕ್ಷಣೆಯಲ್ಲಿ ಇಸ್ರೇಲ್ ಆಗಬೇಕು ನಮ್ಮ ಭಾರತ ಎಂಬುದು ನಮ್ಮ ಕನಸು. ಇಷ್ಟು ದಶಕಗಳಿಂದ ಗೆದ್ದಲು ಹಿಡಿದಿರುವ ನಮ್ಮ ವ್ಯವಸ್ಥೆಯನ್ನು ರಾತ್ರಿಕಳೆದು ಬೆಳಗಾಗುವುದರಲ್ಲಿ ಬದಲಾಯಿಸುವುದು ಸ್ವತಃ ಭಗವಂತನಿಗೇ ಸಾಧ್ಯವಾಗಲಾರದೇನೋ. ಆದರೆ ನಮ್ಮ ಕನಸುಗಳ ಜೊತೆ ಕೈಜೋಡಿಸುವ ನೇತಾರ ಸಿಕ್ಕಿದರೆ ನನಸು ಮಾಡಿಕೊಳ್ಳುವ ಮಾರ್ಗ ಸಿಕ್ಕಂತೆಯೇ ಅಲ್ಲವೆ? ಅಮೆರಿಕ, ದುಬೈ, ಯೂರೋಪ್‍ ಪ್ರಯಾಣವೆಂದರೆ ಸಂಭ್ರಮಿಸುತ್ತಾ ಹೊರಡುವ ನಮಗೆ ಅದೇ ಪಟ್ಟಿಗೆ ನಮ್ಮ ಭಾರತವೂ ಸೇರಿದರೆ ಎಷ್ಟು ಹೆಮ್ಮೆಯಾದೀತಲ್ಲವೇ? ಬದಲಾವಣೆಯ ಕನಸು ಕಂಡಷ್ಟೇ ಮುಖ್ಯ ಬದಲಾವಣೆಗೆ ಸಹಕರಿಸುವುದೂ. ಆ ಕ್ರಿಯೆಯಲ್ಲಿ ಒಂದೆರಡು ಉಳಿ ಪೆಟ್ಟು ನಮಗೂ ಬೀಳಬಹುದು. ದೇಶದ ಕಾಯಕಲ್ಪದ ಸಲುವಾಗಿ ತೀರಾ ಅಷ್ಟನ್ನೂ ತಡೆದುಕೊಳ್ಳಲಾರೆವೇ? ಮೋದಿಯಂಥ ರಾಷ್ಟ್ರಪ್ರೇಮಿ ನಮ್ಮ ನೇತಾರರಾದರೆ ಅಬ್ಬಬ್ಬಾ ಎಂದರೆ ಏನಾದೀತು? ಅನಂತಮೂರ್ತಿಯಂಥ ಬುದ್ಧಿಜೀವಿಗಳು ದೇಶ ಬಿಟ್ಟು ಹೋದಾರು. ಹೋಗಲಿ ಬಿಡಿ. ನಾವು ಬದಲಾವಣೆಯ ಮೂಲಕ ದೇಶಕಟ್ಟುವ ಕಾಯಕಕ್ಕೆ ಹೆಗಲಾಗಿ ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳೋಣ. ಏನಂತೀರಿ?

No comments:

Post a Comment