Sunday 4 May 2014

ಸಿನಿಮಾದವರಿಗೇಕೆ ಸೆಕ್ಯುಲರಿಸಂ ಉಸಾಬರಿ?

ಇಷ್ಟು ದಿನ ಸೆಕ್ಯುಲರಿಸಂ ಎಂಬ ಹಳಸಲು ಪದವನ್ನು ರಾಜಕಾರಣಿಗಳ ಬಾಯಲ್ಲಿ ಕೇಳಿಕೇಳಿ ನಮಗೆ ತಲೆ ಚಿಟ್ಟು ಹಿಡಿದು ಹೋಗಿತ್ತು. ಇದೇ ಸೆಕ್ಯುಲರಿಸಂ ಸಲುವಾಗಿ ನಮ್ಮ ರಾಜ್ಯದ ಸ್ವಘೋಷಿತ ಬುದ್ಧಿಜೀವಿಗಳು, ಮಾಜಿ ಸಾಹಿತಿಗಳು ಮೈಮೇಲೆ ಮುಕ್ಕೋಟಿ ದೇವರುಗಳನ್ನೂ ಬರಿಸಿಕೊಂಡು ಚುನಾವಣೆಯ ಪ್ರಚಾರಕ್ಕಿಳಿದಾಗ ನಮಗೆ ಸಿಕ್ಕಾಪಟ್ಟೆ ನಗೆಯೂ ಬಂದಿತ್ತು. ಪಾಪ, ಸಾಹಿತ್ಯ ಕೃಷಿಗೆ ಬೇಕಾದ ದಾಸ್ತಾನು ಖಾಲಿಯಾಗಿರುವಾಗ ಸುದ್ದಿಯಲ್ಲಿರಲು ಉದ್ಯೋಗವೇನಾದರೂ ಬೇಕೇ ಬೇಕಲ್ಲ! ಆದರೆ ಅಂಜುಂ ರಾಜಬಲಿ ಎಂಬ ಚಿತ್ರಕಥೆಗಾರ ಒಂದಷ್ಟು ಬಾಲಿವುಡ್ ಮಂದಿಯ ಗುಂಪು ಕಟ್ಟಿಕೊಂಡು ನಮಗೆಲ್ಲಾ ಸೆಕ್ಯುಲರಿಸಂನ ಪಾಠ ಮಾಡಲು ಶುರುವಿಟ್ಟುಕೊಂಡಿರುವುದು ಅದೇಕೋ ಅಸಾಧ್ಯ ಸಿಟ್ಟು ತರಿಸುತ್ತಿದೆ.

ಸೆಕ್ಯುಲರಿಸಂ ಎಂಬುದು 17ನೇ ಶತಮಾನದಷ್ಟು ಹಿಂದೆಯೇ ಐರೋಪ್ಯ ರಾಷ್ಟ್ರಗಳಲ್ಲಿ ಕ್ರೈಸ್ತ ಧರ್ಮ ಹೇರುತ್ತಿದ್ದ ಅಪಾರ ನಿಬಂಧನೆಗಳಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಆಲೋಚನಾ ಸರಣಿ. ಆಡಳಿತ, ವಿಜ್ಞಾನ-ತಂತ್ರಜ್ಞಾನ ಹಾಗೂ ಒಟ್ಟಾರೆ ಸಮಾಜದ ಅಭಿವೃದ್ಧಿ, ಎಲ್ಲವೂ ಕ್ರೈಸ್ತ ಧರ್ಮ‍ಕ್ಕನುಗುಣವಾಗಿ ನಡೆಯಬೇಕು ಹಾಗೂ ಸಂಪೂರ್ಣವಾಗಿ ಅದರ ಅಧೀನದಲ್ಲಿರಬೇಕು ಎಂದು ಬಯಸಿದ್ದ ಕೆಲ ಧರ್ಮಾಂಧರನ್ನು ವಿರೋಧಿಸುವ ಪ್ರಕ್ರಿಯೆಯಾಗಿ ಆರಂಭವಾಗಿದ್ದು. ಕ್ರಮೇಣ ಗೆಲಿಲಿಯೊನಂಥ ಹಲವು ವಿಜ್ಞಾನಿಗಳನ್ನು, ಹೊಸತನದ ಪ್ರತಿಪಾದಕರನ್ನು ಬಲಿ ಪಡೆದು ಧರ್ಮವನ್ನು ಆಡಳಿತದಿಂದ ಪೂರ್ತಿಯಾಗಿ ಬೇರ್ಪಡಿಸುವ ಒಂದು ಮಾರ್ಗವಾಗಿ ಹೊಮ್ಮಿದ್ದು. ಇದಕ್ಕೆ ಅಧಿಕೃತವಾಗಿ ಸೆಕ್ಯುಲರಿಸಂ ಎಂದು 19ನೇ ಶತಮಾನದಲ್ಲಿ ನಾಮಕರಣ ಮಾಡಿದ್ದು ಬ್ರಿಟನ್‍ನ ಬರಹಗಾರ ಜಾರ್ಜ್ ಜೇಕಬ್. ಒಟ್ಟಾರೆ ಈ ತತ್ವದ ಉದ್ದೇಶ ಧರ್ಮವನ್ನು ರಾಜಕಾರಣದಿಂದ ಪ್ರತ್ಯೇಕಿಸಿ, ಆಡಳಿತಯಂತ್ರಕ್ಕೆ ಬೇಕಾದ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟು, ಹೊಸ ಚಿಂತನೆ ಆವಿಷ್ಕಾರಗಳನ್ನು ಉತ್ತೇಜಿಸುವುದಾಗಿತ್ತು. ಒಂದೆಡೆ ಧರ್ಮ ಎಲ್ಲೂ ಕಡೆಗಣಿಸಲ್ಪಡದೆ ಮನುಕುಲದ ಏಳ್ಗೆಗೆ ಬೆಳಕು ತೋರುವ ದೀವಿಗೆ ಮಾತ್ರವಾಗಿ ತನ್ನ ಘನತೆಯನ್ನುಳಿಸಿಕೊಂಡರೆ ಮತ್ತೊಂದೆಡೆ ನಿಜವಾದ ಅರ್ಥದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಹಾಗೂ ಅಭಿವೃದ್ಧಿಯನ್ನು ಸಾಧ್ಯವಾಗಿಸುವ ಸಮಯೋಚಿತ ಕಲ್ಪನೆ ಇದಾಗಿತ್ತು.

ಇದನ್ನು ಭಾರತದಲ್ಲಿ ಮೊಟ್ಟ ಮೊದಲ ಬಾರಿ ಅಳವಡಿಸಿಕೊಂಡವನು ಪಂಜಾಬಿನ ಮಹಾರಾಜ ರಣಜೀತ್ ಸಿಂಗ್. ಅವನು ತನ್ನ ದರ್ಬಾರನ್ನು ಹಿಂದು, ಮುಸ್ಲಿಂ ಹಾಗೂ ಸಿಖ್ಖರ ನೇತೃತ್ವದಲ್ಲಿ ನಡೆಸಿ ರಾಜ್ಯವನ್ನು ಎಲ್ಲ ರೀತಿಯಿಂದಲೂ ಶ್ರೀಮಂತಗೊಳಿಸಿದನು. ಅಂಥ ಹಿನ್ನೆಲೆಯಿಂದ ಶುರುವಾದ ಈ ಸರಳ ಸೂತ್ರವನ್ನು ಈಗ ನಾವೆಷ್ಟು ಜಟಿಲಗೊಳಿಸಿದ್ದೇವೆ ನೋಡಿ. ಬಿಡಿಬಿಡಿಯಾಗಿರಬೇಕಾದ ಧರ್ಮ ಹಾಗೂ ಸೆಕ್ಯುಲರಿಸಂಗಳನ್ನು ಒಟ್ಟಿಗೆ ಸೇರಿಸಿ ಗೋಜಲು ಮಾಡಿಬಿಟ್ಟಿದ್ದೇವೆ. ಎರಡನ್ನೂ ಬಿಡಿಸಿ ಅದರದರ ಸ್ವಸ್ಥಾನಕ್ಕೆ ಸೇರಿಸುವ ಬಗೆ ಹೇಗೆಂದು ಚಿಂತಿಸಬೇಕಾದ ನಮ್ಮ ರಾಜಕೀಯ ನಾಯಕರುಗಳಿಗೆ ಜಾಣಕುರುಡಿನಿಂದಾಗಿ ಏನೂ ಕಾಣಿಸುತ್ತಿಲ್ಲ. ಇನ್ನು ಇರುವ ಬುದ್ಧಿಮತ್ತೆಯನ್ನೆಲ್ಲಾ ಸತ್ಯವನ್ನು ತಿರುಚುವುದಕ್ಕೇ ಖರ್ಚು ಮಾಡಿ ಖಾಲಿಮಾಡಿಕೊಳ್ಳುತ್ತಿರುವ ನಮ್ಮ ಬುದ್ಧಿಜೀವಿಗಳಿಗೆ ಪ್ರಾಮಾಣಿಕವಾದ ಆಸಕ್ತಿ ಲವಲೇಶವೂ ಇಲ್ಲ.

ಹಾಗಾಗಿ, ನಾವೂ ಒಂದು ಕೈ ನೋಡೇಬಿಡೋಣ ಎಂದು ಬಾಲಿವುಡ್‍ನ ಸೆಕ್ಯುಲರಿಸಂ ಪಾಠದ ಮೇಷ್ಟರಾಗಿ ಅಂಜುಂ ರಾಜಬಲಿ ರಂಗಪ್ರವೇಶ ಮಾಡಿದ್ದಾರೆ. ಅದೂ ಹೇಗೆ - ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ತಾವೇ ರಚಿಸಿದ ಲಿಖಿತ ಅಹವಾಲಿನೊಂದಿಗೆ! 20 ವರ್ಷಗಳಿಂದ ಚಿತ್ರಕಥೆಗಾರರಾಗಿ ನುರಿತಿರುವ ಇವರ ಅಹವಾಲಿನ ಸಾರಾಂಶ ಇಷ್ಟೆ: "ಒಂದು ದಶಕದಿಂದ ನಾವು ಕಂಡಿರುವ ಅಸಮರ್ಪಕ ಆಡಳಿತ, ಮಿತಿಮೀರಿದ ಭ್ರಷ್ಟಾಚಾರಗಳು ಕಾಳಜಿಯ ವಿಷಯ ಹೌದಾದರೂ ಅದ್ಯಾವುದೂ ಸೆಕ್ಯುಲರಿಸಂಗೆ ಧಕ್ಕೆ ತಂದಿಲ್ಲ. ದೇಶದ ಪ್ರಶ್ನೆ ಬಂದಾಗ ನಾವು ಯಾವುದರಲ್ಲಾದರೂ ರಾಜಿ ಮಾಡಿಕೊಂಡೇವು ಆದರೆ ಸೆಕ್ಯುಲರಿಸಂ ವಿಷಯದಲ್ಲಲ್ಲ. ಆದ್ದರಿಂದ ನಾವೆಲ್ಲರೂ ಸೆಕ್ಯುಲರ್ ಪಕ್ಷಕ್ಕೇ ಮತ ಹಾಕಬೇಕು". ಗುಜರಾತ್‍ನ ಅಭಿವೃದ್ಧಿಯೇ ಒಂದು ಕಟ್ಟು ಕಥೆ ಎನ್ನುವ ಇವರು ಮೋದಿಯನ್ನು ಬೆಂಬಲಿಸಬಾರದು ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೋಗಲಿ ಯಾವ ಪಕ್ಷ ಸೆಕ್ಯುಲರ್ ಹೇಳಿ ಅದಕ್ಕೇ ಮತ ಹಾಕುತ್ತೇವೆ ಎಂದರೆ ಇಂಥದೇ ಪಕ್ಷ ಎಂದು ಬೊಟ್ಟು ಮಾಡಿಯೂ ತೋರಿಸುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ದೇಶದ ಕಾಳಜಿಯ ಸಮಸ್ತ ಭಾರವನ್ನೂ ತಾವೇ ಹೊತ್ತಂತೆ ತಮ್ಮ ಅಹವಾಲಿಗೆ ಸಿನಿಮಾ ಮಂದಿಯ ಸಹಿ ಸಂಗ್ರಹಣೆಯಲ್ಲಿ ತೊಡಗಿದ್ದಾರೆ! ಇವರನ್ನು ಬೆಂಬಲಿಸಿ ಸಹಿ ಮಾಡಿರುವವರಲ್ಲಿ ಮಹೇಶ್ ಭಟ್, ನಂದಿತಾ ದಾಸ್, ಇಮ್ತಿಯಾಜ್ ಅಲಿ, ತೀಸ್ತಾ ಸೇತಲ್ವಾಡ್ ಮುಂತಾದ ಮಹಾರಥಿಗಳಿದ್ದಾರೆ.

ಇವರ ಚಿತ್ರಕಥೆಗಳನ್ನು ಮೆಚ್ಚಿದ ಮಾತ್ರಕ್ಕೆ ಇತರೆ ನೀತಿಕಥೆಗಳಿಗೆ ತಲೆಯಾಡಿಸಲಾಗದೆಂದು ಇವರಿಗೇಕೆ ಅರ್ಥವಾಗುವುದಿಲ್ಲ? ಇಂದು ಚಿತ್ರವೊಂದು ಫ್ಲಾಪ್ ಆದರೆ ಫಾರ್ಮುಲಾ ಬದಲಾಯಿಸಿ ನಾಳೆ ಮತ್ತೊಂದು ಹಿಟ್ ಚಿತ್ರ ಮಾಡಬಹುದು. ಆದರೆ ಭ್ರಷ್ಟಾಚಾರ, ಅಸಮರ್ಪಕ ಆಡಳಿತ ಅಡ್ಡಿಯಿಲ್ಲ ಎಂಬ ಇವರ ಮಾತನ್ನು ನಂಬಿದರೆ ನಾಳೆ ದೇಶವೇ ದುರಂತಕಥೆಯಾಗಿ ಹೋಗುತ್ತದಲ್ಲಾ, ಇವರು ಸರಿ ಮಾಡುತ್ತಾರಾ? ರಾಜಕಾರಣದಲ್ಲಿ ಸೆಕ್ಯುಲರಿಸಂ ಬಿಟ್ಟು ಉಳಿದದ್ದೆಲ್ಲಾ ಗೌಣ ಎನ್ನುವ ಇವರೇಕೆ ‘ರಾಜನೀತಿ’, ‘ಸತ್ಯಾಗ್ರಹ’ದಂಥ ಚಿತ್ರಗಳನ್ನು ಮಾಡಿದ್ದಾರೆ?

ಬಾಲಿವುಡ್‍ನಲ್ಲಂತೂ ಸೆಕ್ಯುಲರಿಸಂ ಮೊದಲಿನಿಂದಲೂ ಹಾಸುಹೊಕ್ಕಾಗಿದೆ. ನಾವೆಂದೂ ಕಲೆಯನ್ನು ಧರ್ಮದ ನೆಲೆಯಲ್ಲಿ ಪ್ರತ್ಯೇಕಿಸಿ ನೋಡಿಯೇ ಇಲ್ಲ. ದೇವಾನಂದ್‍ರನ್ನು ಆರಾಧಿಸಿದಷ್ಟೇ ದಿಲೀಪ್ ಕುಮಾರ್‍ರನ್ನೂ (ಅವರ ನಿಜನಾಮಧೇಯ ಮೊಹಮ್ಮದ್ ಯೂಸುಫ್ ಖಾನ್ ಎಂದು ಗೊತ್ತಿದ್ದೂ) ಆರಾಧಿಸಿದ್ದೇವೆ. ನೂತನ್‍‍‍ಳಿಗೆ ಸಿಕ್ಕ ಪ್ರೀತಿಯೇ ನರ್ಗೀಸ್‍ಗೂ ಸಿಕ್ಕಿದೆ. ಇಳಯರಾಜರ ಸಂಗೀತವನ್ನು ಆಸ್ವಾದಿಸುವಷ್ಟೇ ಎ.ಆರ್.ರೆಹಮಾನ್‍ರ ಸಂಗೀತವನ್ನೂ ಆಸ್ವಾದಿಸುತ್ತೇವೆ. ಹೃತಿಕ್ ರೋಷನನಷ್ಟೇ ಅಮೀರ್ ಖಾನನೂ ನಮಗೆ ಅಚ್ಚುಮೆಚ್ಚು. ಧರ್ಮವನ್ನು ನೆಪವಾಗಿಸದೆ ಪ್ರತಿಭೆಯೊಂದಕ್ಕೇ ಮಣೆ ಹಾಕುತ್ತಾ ಬಂದಿರುವ ನಮ್ಮ ಹೃದಯ, ನರನಾಡಿಗಳಲ್ಲಿ ಹರಿಯುತ್ತಿರುವುದು ಸೆಕ್ಯುಲರಿಸಂ ಅಲ್ಲದೆ ಮತ್ತೇನು? ಈಗ ಇವರಿಂದ ಹೊಸದಾಗಿ ಕಲಿಯುವಂಥದ್ದೇನಿದೆ?

ಧಿಡೀರನೆ ಬಾಲಿವುಡ್‍ನಿಂದ ಬಂಗೀಜಂಪ್ ಮಾಡಿ ಚುನಾವಣೆಯ ಸಲುವಾಗಿ ಸಹಿ ಸಂಗ್ರಹಣೆಗೆ ನಿಲ್ಲುವಂಥ ತುರ್ತು ಪರಿಸ್ಥಿತಿ ಈಗೇನು ಬಂದಿರುವುದು? ಕಳೆದ ಜುಲೈನಲ್ಲಿ ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡು ಲಕ್ಷಾಂತರ ಮಂದಿಯನ್ನು ಗತಿಗೆಡಿಸಿದ ಉತ್ತರಾಖಂಡದ ಜಲಪ್ರಳಯವಾದಾಗ 'ಹ್ಯೂಮನಿಸಂ'ನ ಪಾಠ ಮಾಡಲು ಇವರೇಕೆ ಬರಲಿಲ್ಲ? ಈಗ ಕರೆದುಕೊಂಡು ಬಂದಿರುವ ದಂಡು-ದಾಳಿಯನ್ನು ಆಗಲೇ ಕರೆದುಕೊಂಡು ಬರಬಹುದಿತ್ತಲ್ಲ! ಬರೀ ಸಹಿಯೇನು, ಸಾಕಷ್ಟು ದೇಣಿಗೆಯನ್ನೂ ಸಂಗ್ರಹಿಸಿ ಸಂತ್ರಸ್ತರಿಗೆ ನೆರವಾಗಬಹುದಿತ್ತಲ್ಲ!

ಈ ಮಹಾಚುನಾವಣೆಯಲ್ಲಿ ಇನ್ನೆಲ್ಲಿ ಜನ ದಿಕ್ಕು ತಪ್ಪುತ್ತಾರೋ ಎಂಬ ಕಳಕಳಿಯಿರುವ ಇವರಿಗೆ ಹಂತ ಹಂತವಾಗಿ ನಮ್ಮನ್ನು ದಿಕ್ಕುತಪ್ಪಿಸುತ್ತಿರುವ ಬಾಲಿವುಡ್‍ನ ಇತ್ತೀಚಿನ ಬೆಳವಣಿಗೆಗಳೇಕೆ ಕಾಣುತ್ತಿಲ್ಲ? ಬಾಲಿವುಡ್ ಇಂದು ಕಲೆಯನ್ನು ಮೀರಿದ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಒಂದು ಚಿತ್ರ ವಿಶ್ವದೆಲ್ಲೆಡೆ ಬಿಡುಗಡೆಯಾಗಿ ಸುಮಾರಾಗಿ ವೀಕ್ಷಿಸಲ್ಪಟ್ಟರೂ ಒಂದು ವಾರದೊಳಗೆ 100 ಕೋಟಿಯನ್ನು ಸಲೀಸಾಗಿ ಸಂಪಾದಿಸಿಬಿಡುತ್ತದೆ. ಪ್ರತಿ ಚಿತ್ರದಿಂದ ಬರುವ ಆದಾಯದ ಶೇಕಡ 70 ರಷ್ಟು ಹುಟ್ಟುವುದು ವಿದೇಶಗಳಲ್ಲಿ ಮಾರಾಟವಾಗುವ ಟಿಕೆಟ್‍ಗಳಿಂದಲೇ. ಹಾಗಾಗಿ ದೇಶೀಯ ಸೊಗಡು ಬಲಿಯಾಗಿ ಎಲ್ಲೆಲ್ಲೂ ಪಾಶ್ಚಾತ್ಯ ಸಂಸ್ಕೃತಿ, ಆಧುನಿಕತೆಗಳೇ ತಾಂಡವವಾಡುತ್ತಿವೆ. ಚಿತ್ರದ ಗುಣಮಟ್ಟಕ್ಕಿಂತ ಯಾರು ಯಾರ ಜೊತೆ ಯಾವಾಗ ಯಾವ ಕಲರ್ ಬಿಕಿನಿಯಲ್ಲಿ ಕಾಣಿಸಿಕೊಂಡರು ಎಂಬುದೇ ಹೆಚ್ಚು ಚರ್ಚಿತವಾಗುತ್ತಿದೆ. ಆಧುನಿಕತೆಯನ್ನು ಅಭಿನಯಿಸುತ್ತಾ, ಅನುಭವಿಸುತ್ತಾ ಅದನ್ನೇ ವಾಸ್ತವಕ್ಕೂ ಅಳವಡಿಸಿಕೊಳ್ಳುತ್ತಿರುವ ನಮ್ಮ ನಟ-ನಟಿಯರು ಹಲವಾರು ವರ್ಷಗಳ ತಮ್ಮ ದಾಂಪತ್ಯವನ್ನು ಮುರಿಯುವುದಕ್ಕೂ ಹೇಸುತ್ತಿಲ್ಲ! ಇವರದೇ ಈ ಕಥೆಯಾದರೆ ತೊಡುವ ದಿರಿಸಿನಿಂದ ಹಿಡಿದು ಕಾಣುವ ಕನಸಿನವರೆಗೂ ಇವರನ್ನೇ ಅನುಕರಿಸುವ ನಮ್ಮ ಯುವಪೀಳಿಗೆ ಏನಾಗಬೇಕು?

ಒಂದು ಕಾಲಕ್ಕೆ ‘ಸಾರಾಂಶ್‍’ನಂಥ ಅಮೋಘ ಚಿತ್ರ ನೀಡಿದ್ದ ಮಹೇಶ್ ಭಟ್ ಇಂದು ಬಿಗ್‍ಬಾಸ್‍ನ ತುಂಬಿದ ಮನೆಯಲ್ಲಿ ಸನ್ನಿ ಲಿಯೋನಿಯಂಥ 'ಬೇಬಿಡಾಲ್'ಗೆ ಅವಕಾಶ ನೀಡಲು ಹಾತೊರೆಯುತ್ತಾರಲ್ಲ, ಅಂಥ ದರಿದ್ರವೇನು ಬಂದಿರುವುದು ಬಾಲಿವುಡ್‍ಗೆ? ಅವರವರ ಕಾರ್ಯಕ್ಷೇತ್ರಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ನಮ್ಮ ಸಂಸ್ಕೃತಿ, ಮನಸ್ಥಿತಿಗೆ ಸರಿ ಹೊಂದದವರನ್ನು ನಮ್ಮ ಮೇಲೆ ಹೇರುವಾಗ ಇದರ ಪರಿಣಾಮವೇನಾಗಬಹುದೆಂಬ ಸಾಮಾಜಿಕ ಕಳಕಳಿ ಬೇಡವೇ? ಇಷ್ಟು ಪ್ರಭಾವಿ ಮಾಧ್ಯಮದ ಅಂಗವಾಗಿರುವುದರ ಕಿಂಚಿತ್ ಜವಾಬ್ದಾರಿ ಬೇಡವೇ? ತಮ್ಮ ಜಿಸ್ಮ್2 ಚಿತ್ರದಲ್ಲಿ ಸನ್ನಿಯನ್ನು ಹೆಮ್ಮೆಯಿಂದ ಪರಿಚಯಿಸಿದ ಭಟ್, ತಮ್ಮ ಮಗಳು ಆಲಿಯಾಳನ್ನು ಮಾತ್ರ ಯಾವ ಹುಡುಗನೊಂದಿಗೂ ಡೇಟಿಂಗ್‍ಗೆ ಕಳಿಸದೆ ಏಕೆ ಕಾಪಾಡುತ್ತಾರೆ?

ಜಿಸ್ಮ್2ರ ನಂತರ ಈಗ ಬೇಬಿಡಾಲ್, 'ರಾಗಿಣಿ ಎಮ್.ಎಮ್.ಎಸ್.೨' ಚಿತ್ರದಲ್ಲಿ ಕುಣಿಯುತ್ತಿದೆ. ಇನ್ನೂ ಹಲವಾರು ಚಿತ್ರಗಳಲ್ಲಿ ಕುಣಿಯಲಿದೆ. ಅನೇಕ ಸ್ಟಾರ್‍ಗಳು ಪ್ರಶಂಸೆಯ ಮಳೆ ಸುರಿಸಿ ತಾವು ಮಡಿವಂತರಲ್ಲ ಎಂದು ಸಾಬೀತುಪಡಿಸಿದ್ದಾರೆ. ಇಂಥ ಇನ್ನೂ ಹಲವಾರು ಬೇಬಿಡಾಲ್‍ಗಳ ಅಗತ್ಯ ಬಾಲಿವುಡ್‍ಗಿದೆಯೆಂದು ಅಭಯ್ ಡಿಯೋಲ್ ಮೊನ್ನೆ ತಾನೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅದೂ ಸರಿಯೇ. ಮೈತುಂಬಾ ಪ್ರತಿಭೆಯೇ ತುಂಬಿರುವ ಈ ಬೇಬಿಡಾಲ್‍ಗಳು ಎಲ್ಲ ರೀತಿಯ ಪ್ರದರ್ಶನ ಕೊಡಬಲ್ಲರಾದ್ದರಿಂದ ಜಿಯಾ ಖಾನ್‍‍ಳಂತೆ ಎಲ್ಲಿಯೂ ಸಲ್ಲದೆ ಅವಕಾಶ ವಂಚಿತರಾಗಿ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ!

ಕಾಮಿಡಿ ಟೈಮ್ಸ್ ನಂಥ ಹಾಸ್ಯ ವೇದಿಕೆಯಲ್ಲಿ ಕಪಿಲ್ ಶರ್ಮ ಬೇಬಿಡಾಲ್‍‍ಳೊಡನೆ ಮಾತಿಗಿಳಿದಾಗ ಹಾಸ್ಯವೂ ಅಸಹನೀಯವೆನಿಸಿ ನೋಡಲಾಗುವುದಿಲ್ಲ. ಇನ್ನೂ ಮೀಸೆ ಮೂಡಿರದ ಹುಡುಗರು, ಎಳೆ ವಯಸ್ಸಿನ ಹುಡುಗಿಯರು ಕಾಫಿ ಡೇಗಳಲ್ಲಿ, ಪಾರ್ಕ್‍ಗಳಲ್ಲಿ ತೋರುವ ವರ್ತನೆ ವಾಕರಿಕೆ ತರಿಸುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿಷಯಗಳನ್ನೆಲ್ಲಾ ಇಡೀ ಬ್ರಹ್ಮಾಂಡದ ಮುಂದೆ ಬಿಡಿಸಿಡಲು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬಿದ್ದಿರುವ ಬಾಲಿವುಡ್ ಮಂದಿಯ ಮೇಲೆ ವ್ಯಗ್ರತೆ ಹುಟ್ಟುತ್ತದೆ. ಹಣದ ಹೊಳೆ ಹರಿಸುವ ಹುಚ್ಚಿಗೆ ಬಿದ್ದು ಆಧುನಿಕತೆಯ ಹೆಸರಿನಲ್ಲಿ ಸ್ವೇಚ್ಛಾಚಾರವನ್ನು ಈ ಪರಿ ಬೀದಿಗೆಳೆದು ತಂದಿರುವ ಇವರಿಗೆ ಸಮಾಜದ ಸ್ವಾಸ್ಥ್ಯದ ಯಾವ ಪರಿವೆಯೂ ಇಲ್ಲದಿರಬಹುದು, ಆದರೆ ನೈತಿಕತೆ, ಸಂಸ್ಕಾರಗಳನ್ನುಳಿಸಿಕೊಳ್ಳುವ ಅಗತ್ಯ ನಮಗೆ ಖಂಡಿತ ಇದೆ. ಇವರನ್ನು ಅನುಕರಿಸಿ ನಮ್ಮ ಮೌಲ್ಯಾಧಾರಿತ ಸಂಸ್ಕೃತಿಗೆ ತರ್ಪಣ ಕೊಡಲು ನಾವು ಸಿದ್ಧರಿಲ್ಲ.
ಈಗ ಹೇಳಿ, ಸಹಿ ಸಂಗ್ರಹಿಸಬೇಕಾಗಿರುವವರು ಯಾರು? 

1 comment:

  1. ನಿಜ. ಬರುತ್ತಿರುವ ಕೆಲವೇ ಕೆಲವು ಸಿನೆಮಾಗಳನ್ನು ಹೊರತುಪಡಿಸಿದರೆ ಇವತ್ತು ಬಾಲಿವುಡ್ ಅನ್ನುವುದೊಂದು ಅಸಹ್ಯವಾಗಿದೆ. ಯಾವಾಗ ಕಲೆ ಅನ್ನುವುದು ಗ್ಲ್ಯಾಮರ್ ಆಗಿ ಉದ್ಯಮವಾಯಿತೋ ಆಗಿಂದಲೇ ಬಾಲಿವುಡ್ ಅಧಃಪತನ ಶುರುವಾಯಿತು.

    ReplyDelete