Tuesday, 27 May 2014

ಅಪ್ಪಳಿಸಿರಲು ಮೋದಿ ಅಲೆ, ಅಪಪ್ರಚಾರಕರಿಗಿಲ್ಲ ನೆಲೆ

ಇತಿಹಾಸ ಸೃಷ್ಟಿಸುವ ಇಂಥದ್ದೊಂದು ದಿನಕ್ಕೆ ನಾವು ಸಾಕ್ಷಿಯಾಗುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ. ಯಾವ ಅಶರೀರವಾಣಿಯೂ ಮೊಳಗಿರಲಿಲ್ಲ. ಯಾರ ಕನಸಿನಲ್ಲಿಯೂ ದೇವರು ಪ್ರತ್ಯಕ್ಷನಾಗಿ ಹೇಳಿರಲಿಲ್ಲ. ಮಾಧ್ಯಮಗಳಲ್ಲಿ ಜಾತಕ ನೋಡಿ ಘಂಟಾಘೋಷವಾಗಿ ಜೋತಿಷ್ಯ ಹೇಳುವವರೂ ಇದರ ಸುಳಿವನ್ನು ನೀಡಿರಲಿಲ್ಲ. ನೂರಿಪ್ಪತ್ತೈದು ಕೋಟಿ ಭಾರತೀಯರು ಸೇರಿ ಬರೆದ ಜಾತಕವನ್ನು ಅವರು ತಾನೆ ಹೇಗೆ ಓದಿಯಾರು ಪಾಪ! ಮತ ಎಣಿಕೆ ಶುರುವಾಗುವ ಮುನ್ನವೇ ಚಡಪಡಿಸುತ್ತಾ, ಶುರುವಾಗುತ್ತಿದ್ದಂತೆ ಉಸಿರು ಬಿಗಿ ಹಿಡಿದು ಬದಲಾಗುತ್ತಿದ್ದ ಅಂಕಿ- ಅಂಶಗಳನ್ನು ನೋಡುತ್ತಿದ್ದ ನಮಗೆ ಬೆಳಗಿನ ಸರಿ ಸುಮಾರು ಹತ್ತು ಘಂಟೆಯಷ್ಟು ಹೊತ್ತಿಗೇ ನಮೋ ಅಲೆ ಎನ್.ಡಿ.ಎ ಮೈತ್ರಿಕೂಟವನ್ನು ಮುನ್ನಡೆಯಲ್ಲಿ 272ರ ಅಂಚಿಗೆ ತಲುಪಿಸಿದ್ದನ್ನು ನೋಡುತ್ತಿದ್ದಂತೆಯೇ ಆದದ್ದು ಪರಮಾನಂದ! ನಂತರ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಹೊರಬಿದ್ದಾಗ ಕಂಡದ್ದು ಪವಾಡ! ಸಂಖ್ಯಾಶಾಸ್ತ್ರಜ್ಞರ, ರಾಜಕೀಯ ವಿಶ್ಲೇಷಕರ ಮಟ್ಟಿಗೆ ಇದು ಹಲವು ಹೊಸ ದಾಖಲೆಗಳ ಅಭೂತಪೂರ್ವ ಫಲಿತಾಂಶವಾದರೆ ನಮ್ಮ ಪಾಲಿಗೆ ವಿಜಯೋತ್ಸವ, ಮನೆ-ಮನೆಯ ಹಬ್ಬ. ಅದಕ್ಕೆ ಕಾರಣವೂ ಇಲ್ಲದಿಲ್ಲ.

ಭಾರತದ ಇಲ್ಲಿಯವರೆಗಿನ ಚುನಾವಣಾ ಇತಿಹಾಸದ ಪುಟ ತಿರುವಿದರೆ ಈ ಮಾದರಿಯ, ವಿಕಾಸವಾದ ಹಾಗೂ ವ್ಯಕ್ತಿ ಆಧಾರಿತ ಚುನಾವಣೆ ನಡೆದದ್ದು ಕಾಣಸಿಗುವುದಿಲ್ಲ. ತನ್ನ ಲಾಭಕ್ಕಾಗಿ ಕಾಂಗ್ರೆಸ್ ಎಂಬ ಸ್ವಾತಂತ್ರ್ಯ ಚಳವಳಿಯನ್ನೇ ರಾಜಕೀಯ ಪಕ್ಷವಾಗಿ ರೂಪಾಂತರಿಸಿದ ನೆಹರೂ ಆ ನಾಮಬಲದ ಮೇಲೇ 1962ರ ಮೂರನೆಯ ಲೋಕಸಭಾ ಚುನಾವಣೆಯನ್ನೂ ಗೆದ್ದರು. 1967ರ ಸಾಧಾರಣ ಚುನಾವಣಾ ಫಲಿತಾಂಶದ ನಂತರ ಇಂದಿರಾಗಾಂಧಿ 1971ರಲ್ಲಿ 'ಗರೀಬಿ ಹಟಾವೋ' ಎಂಬ ಕೂಗನ್ನು ಹುಟ್ಟುಹಾಕಿ ಅದನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ನಂತರ ಅವರು ಹೇರಿದ ತುರ್ತು ಪರಿಸ್ಥಿತಿಯ ಫಲವಾಗಿ 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದು, ಒಗ್ಗಟ್ಟಿಲ್ಲದೆ, ಒಳಜಗಳಗಳಿಂದ ಅಷ್ಟೇ ಬೇಗ ಕಳಚಿಬಿದ್ದು ಭಾರತೀಯರಲ್ಲಿ ಕಾಂಗ್ರೆಸ್ ಬಿಟ್ಟರೆ ಮತ್ತ್ಯಾರೂ ಸುಭದ್ರ ಆಡಳಿತ ನೀಡುವುದು ಸಾಧ್ಯವಿಲ್ಲ ಎಂಬ ಭಾವನೆಯನ್ನು ಹುಟ್ಟು ಹಾಕಿತು. ಪರಿಣಾಮವಾಗಿ 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ 1984ರಲ್ಲಿ ಇಂದಿರೆಯ ಹತ್ಯೆಯ ನಂತರ 533 ಸ್ಥಾನಗಳ ಸಂಸತ್ತಿನಲ್ಲಿ 414 ಸ್ಥಾನಗಳನ್ನು ಕಬಳಿಸಿ ಅಸಾಧಾರಣ ಜಯ ದಾಖಲಿಸಿತು. ಅದೇ ಕೊನೆ. ಆಮೇಲೆ ನಡೆದ ಯಾವ ಚುನಾವಣೆಗಳಲ್ಲೂ ಯಾವೊಂದು ಪಕ್ಷವೂ ಸ್ಪಷ್ಟ ಬಹುಮತದ ಮುಖವನ್ನೇ ನೋಡಲಿಲ್ಲ. ಭವಿಷ್ಯವೆಲ್ಲಾ 'ಸಮ್ಮಿಶ್ರ ಸರ್ಕಾರ'ಮಯವಾಗಲಿದೆಯೆಂಬ ಭಾವನೆ ದಟ್ಟವಾಗಿದ್ದ ಈ ಹೊತ್ತಿನಲ್ಲಿ ಇಂಥದ್ದೊಂದು ಫಲಿತಾಂಶ ಬಂದಿದೆ.

ಇದನ್ನು ರಾಜಕೀಯ ವಿಶ್ಲೇಷಕರೆಲ್ಲ 1984ರ ಚುನಾವಣಾ ಫಲಿತಾಂಶಕ್ಕೆ ಹೋಲಿಸುತ್ತಿದ್ದಾರೆ. ಹೋಲಿಕೆ ಹೇಗೆ ಸಾಧ್ಯ ಹೇಳಿ? ಹಾಲಿ ಪ್ರಧಾನಿಯ ಸಾವಿನ ಪರಿಣಾಮವಾಗಿ ಸಿಕ್ಕ ಅನುಕಂಪದ ಅಲೆಯ ಅನಾಯಾಸ ಗೆಲುವನ್ನು ಕಠಿಣ ಪರಿಶ್ರಮ, ಯೋಚನೆ, ಯೋಜನೆ ಮತ್ತು ಅನುಷ್ಠಾನಗಳಿಂದ ಗಳಿಸಿಕೊಂಡ ಗೆಲುವಿಗೆ ಏಕೆ ಹೋಲಿಸಬೇಕು? ಸೂತಕದ ಛಾಯೆಯ ಆ ಗೆಲುವಿಗೂ ಇಡೀ ದೇಶವೇ ಕಳೆಗಟ್ಟಿರುವ ಈ ಗೆಲುವಿಗೂ ಎಲ್ಲಿಗೆಲ್ಲಿಯ ಸಾಮ್ಯ? ಹೇಗೆ ನೋಡಿದರೂ ಸಂದರ್ಭಕ್ಕೆ ಅಡಿಯಾಳಾಗದೇ ಸಂದರ್ಭವನ್ನೇ ತನಗೆ ಪೂರಕವಾಗಿ ಬದಲಾಯಿಸಿಕೊಂಡ ನಮೋ ತಂಡದ ಗೆಲುವೇ ಹೆಚ್ಚಿನದು ಎನಿಸುವುದಿಲ್ಲವೇ?. ಭಾರತೀಯ ಜನತಾ ಪಕ್ಷವೊಂದೇ 282 ಸ್ಥಾನಗಳನ್ನು ಗಳಿಸಿಕೊಂಡಿದೆ. ಮಿತ್ರಪಕ್ಷಗಳನ್ನೂ ಸೇರಿಸಿದರೆ ಒಟ್ಟು336. ಐದು ರಾಜ್ಯಗಳಲ್ಲಿ ಪೂರ್ಣ ಅಧಿಪತ್ಯ ಮೆರೆದು ಇನ್ನು ಕೆಲವೆಡೆ ಮೊತ್ತಮೊದಲ ಗೆಲುವು ದಾಖಲಿಸಿದೆ. ಮೂರು ದಶಕಗಳ ನಂತರ ಏಕಪಕ್ಷದ ಸಧೃಡ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.ಇಷ್ಟೇ ಆಗಿದ್ದರೆ ವಿಶೇಷ ಎನಿಸುತ್ತಿರಲಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಶೇಕಡ ಹತ್ತರಷ್ಟಾದರೂ (54) ಸ್ಥಾನಗಳಿಸಬೇಕಾಗಿದ್ದ ಕಾಂಗ್ರೆಸ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅತ್ಯಂತ ಹೀನಾಯವಾಗಿ ಸೋತು ಬರಿದೇ 44 ಸ್ಥಾನಗಳನ್ನು ಗಳಿಸಿ ಎಲ್ಲಿಯೂ ಸಲ್ಲದಾಗಿದೆ.ಆದ್ದರಿಂದ ಅದಕ್ಕೆ ಇನ್ನು ಮೇಲೆ ಸಿ.ಬಿ.ಐ, ಲೋಕಪಾಲ ಹಾಗೂ ಮಾನವ ಹಕ್ಕು ಆಯೋಗಕ್ಕೆ ಸಂಬಂಧಿಸಿದ ನೇಮಕಾತಿ ನಿರ್ಧಾರಗಳಲ್ಲಿ ತನ್ನ ಅಭಿಪ್ರಾಯಗಳನ್ನು ತಿಳಿಸುವ ಯಾವುದೇ ಹಕ್ಕಿರುವುದಿಲ್ಲ. ಅಷ್ಟೇ ಅಲ್ಲ, ಸ್ಪೀಕರ್ ಸಾಹೇಬರು ಮನಸು ಮಾಡಿ ಇದಕ್ಕೆ ವಿರೋಧ ಪಕ್ಷವೆಂಬ ಹಣೆಪಟ್ಟಿ ಅಂಟಿಸಿದರೆ ಉಂಟು ಇಲ್ಲದಿದ್ದರೆ ಆದೂ ಇಲ್ಲ. ಅಮೇಥಿಯಲ್ಲಿ ಸ್ಪರ್ಧಿಸಿದ್ದ ಸ್ಮೃತಿ ಇರಾನಿಯನ್ನು ಕುರಿತು 'ಸ್ಮೃತಿ ಯಾರು?' ಎಂದು ಪ್ರಿಯಾಂಕ ಗಾಂಧಿ ಕುಹಕದಿಂದ ಕೇಳಿದ್ದರು. ಮುಂದೊಂದು ದಿನ 'ಪ್ರಿಯಾಂಕ ಯಾರು?' ಎಂದು ಕೇಳಬೇಕಾಗಿ ಬಂದರೂ ಆಶ್ಚರ್ಯವೇನಿಲ್ಲ!

ಕುಟುಂಬ ರಾಜಕಾರಣ ಧೂಳೀಪಟವಾಗಿಹೋಗಿದೆ. ಏಳು ರಾಜ್ಯಗಳಲ್ಲಿ ಖಾತೆಯನ್ನೇ ತೆರೆಯದ ಕಾಂಗ್ರೆಸ್, ಯಾವ ರಾಜ್ಯದಲ್ಲೂ ಎರಡಂಕಿಯ ಗೆರೆ ದಾಟಿಲ್ಲ. ರಾಹುಲ್ ಅಮೇಥಿಯಲ್ಲಿ ಪಡೆದಿರುವ ಜಯವೂ ಪ್ರಯಾಸದ್ದೇ. ಸ್ಪೀಕರ್ ಮೀರಾ ಕುಮಾರ್ ದಯನೀಯವಾಗಿ ಸೋತಿದ್ದಾರೆ. 28 ಕ್ಯಾಬಿನೆಟ್ ಸಚಿವರ ಪೈಕಿ ಹಣಕಾಸು, ರಕ್ಷಣಾ ಹಾಗೂ ಕೃಷಿ ಸಚಿವರ ಸಹಿತ 12 ಸಚಿವರು ಸ್ಪರ್ಧಿಸಲೇ ಇಲ್ಲ. ಸ್ಪರ್ಧಿಸಿದ 16 ಸಚಿವರಲ್ಲಿ ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್, ಸುಶೀಲ್ ಕುಮಾರ್ ಶಿಂದೆ ಸೇರಿದಂತೆ 13 ಸಚಿವರು ಸೋತಿದ್ದಾರೆ. ರಾಜ್ಯ ಸಚಿವರ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಸ್ಪರ್ಧಿಸಿದ 9 ಸಚಿವರ ಪೈಕಿ ಸಚಿನ್ ಪೈಲಟ್, ಜಿತೇಂದ್ರ ಸಿಂಗ್ ಸೇರಿದಂತೆ 6 ಸಚಿವರು ಸೋತಿದ್ದಾರೆ.

ಬರೀ ಗಾಂಧಿಯದ್ದಲ್ಲ, ಲಾಲೂ ಕುಟುಂಬ ರಾಜಕಾರಣವೂ ಒಪ್ಪಿಗೆಯಲ್ಲ ಎಂದು ಮತದಾರ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾನೆ. ಲಾಲೂ ಪ್ರಸಾದರ ಹೆಂಡತಿ ರಾಬ್ರಿ ಹಾಗೂ ಪುತ್ರಿ ಮಿಸಾ ಭಾರತಿ ಸೋತಿದ್ದಾರೆ. ನಿತೀಶ್ ಕುಮಾರ್ ಹೇಳ ಹೆಸರಿಲ್ಲದಂತಾಗಿದ್ದಾರೆ. ಮಾಯಾವತಿಯವರ ಆನೆ ಕಾಣದಂತೆ ಮಾಯವಾಗಿದೆ. ಮುಲಾಯಂಸಿಂಗ್‍ರ ಕುಟುಂಬ ಉಳಿದುಕೊಂಡಿರುವುದು ಬಿಟ್ಟರೆ ಉತ್ತರಪ್ರದೇಶ ಕೇಸರಿಮಯವಾಗಿದೆ. ದೆಹಲಿಯ ಸರ್ಕಾರವನ್ನು ಎಡಗಾಲಲ್ಲಿ ಒದ್ದು ವಾರಣಾಸಿಗೆ ಓಡಿದ್ದ ಕೇಜ್ರಿವಾಲರನ್ನು ದೆಹಲಿಯ ಜನ ಕತ್ತು ಹಿಡಿದು ಹೊರ ದಬ್ಬಿದ್ದಾರೆ. ಪಂಜಾಬನ್ನು ಗುಡಿಸಲು ನಾಲ್ಕು ಪೊರಕೆಗಳು ಸಿಕ್ಕಿರುವುದು ಬಿಟ್ಟರೆ ಆಪ್‍ನ ಬುಟ್ಟಿ ಪೂರ್ತಿ ಖಾಲಿ! ಕರ್ನಾಟಕದಲ್ಲಿ ದೇವೇಗೌಡರ ಜೊತೆ ತೆನೆಯ ಭಾರ ಹೊರಲು ಸಿಕ್ಕಿರುವುದು ಇನ್ನೊಂದೇ ತಲೆ. ಕಾಂಗ್ರೆಸ್‍ನ ಫಲಿತಾಂಶವೂ ನಿರೀಕ್ಷೆಗಿಂತ ಕೆಳಮಟ್ಟದ್ದೇ. ಇದ್ದುದರಲ್ಲಿ ತಮಿಳುನಾಡಿನ 'ಅಮ್ಮ' ಹಾಗೊ ಪಶ್ಚಿಮ ಬಂಗಾಳದ 'ದೀದಿ'ಯರೇ ಗಟ್ಟಿ. ಆದರೆ ಅವರ ಬಾಹ್ಯ, ಆಂತರಿಕ, ಷರತ್ತು, ಬೇಷರತ್ತಿನ ಬೆಂಬಲಗಳ ಅಗತ್ಯ ಲವಲೇಷದಷ್ಟೂ ಇಲ್ಲ!

ಅತ್ತೆಗೊಂದು ಕಾಲ..ಸೊಸೆಗೊಂದು ಕಾಲ!

2012ರ ವಿಧಾನಸಭೆ ಚುನಾವಣೆಯಲ್ಲಿ ಗುಜರಾತನ್ನು ಸತತ ಮೂರನೆಯ ಬಾರಿ ಗೆಲ್ಲಿಸಿದ ಮೇಲೆ ಜನತೆಯನ್ನುದ್ದೇಶಿಸಿ. "ನನ್ನನ್ನು ದಿಲ್ಲಿಯ ನಾಯಕರು ಕರೆದಿದ್ದಾರೆ. ಒಂದು ದಿನದ ಮಟ್ಟಿಗೆ ದಿಲ್ಲಿಗೆ ಹೋಗಿ ಬರಲು ಅಪ್ಪಣೆ ಕೊಡಿ" ಎಂದಿದ್ದರು ಮೋದಿ. ಅದಕ್ಕುತ್ತರವಾಗಿ ಗುಜರಾತಿನ ಜನತೆ 'ಮೋದಿ ಭಯ್ಯಾ, ಹಮ್ ಆಪ್ಕೆ ಪೀಛೇ ಹೈ, ಆಪ್ ಆಗೇ ಬಢೋ (ನಾವು ನಿಮ್ಮ ಹಿಂದಿದ್ದೇವೆ, ನೀವು ಮುಂದಿನ ಹೆಜ್ಜೆಯಿಡಿ)" ಎಂದು ಒಕ್ಕೊರಲಿನಿಂದ ಕೂಗಿತ್ತು. ಗುಜರಾತಿನ ವಿಧಾನಸಭೆಯ ಚುನಾವಣೆಯೊಂದಕ್ಕೇ 190ಕ್ಕೂ ಮಿಕ್ಕಿ ಸಭೆಗಳನ್ನು ನಡೆಸಿದ, ಹಾಲೋಗ್ರಾಫಿಕ್ ತ್ರೀಡೈಮನ್‍ಷನಲ್ (3D) ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಪ್ರತಿ ಗುಜರಾತಿಯನ್ನೂ ತಲುಪಿದ್ದ ಮೋದಿಗೆ ತಾವು ದೆಹಲಿಗೆ ಹೋಗಿ ಮಾಡಬೇಕಾದುದೇನೆಂಬುದರ ಸಂಪೂರ್ಣ ಅರಿವಿತ್ತು. ಪ್ರಧಾನಿ ಅಭ್ಯರ್ಥಿಯೆಂಬ ಘೋಷಣೆಯಾಗುತ್ತಲೇ ಅಭಿವೃದ್ಧಿ ಹಾಗೂ ಸಮಾನತೆಯ ಮಂತ್ರ ಪಠಿಸುತ್ತ ಕಣಕ್ಕಿಳಿದೇಬಿಟ್ಟರು. ಪ್ರತ್ಯುತ್ತರವಾಗಿ, ಎಂದೋ ಸತ್ತು ಗೋರಿಯಾಗಿರುವ ಗೋಧ್ರಾ ಘಟನೆಯನ್ನು ಬಾರಿಬಾರಿಗೂ ಕೆದಕುತ್ತಿದ್ದ ಜಾತ್ಯತೀತರುಗಳಿಗೆ, ಮಾಧ್ಯಮದವರಿಗೆ, ಇಂದಿಗೂ ಗೋಧ್ರಾದ ಗಣೇಶ ಉತ್ಸವದ ಸಂಪೂರ್ಣ ಸಿದ್ಧತೆ ನಡೆಸುವವರು ಅಲ್ಲಿಯ ಮುಸ್ಲಿಮರೇ ಎಂಬ ಸತ್ಯ ಕೊನೆತನಕ ತಿಳಿಯಲೇ ಇಲ್ಲ.

ಫಲಿತಾಂಶದ ದಿನ 9 ಲಕ್ಷದ 30 ಸಾವಿರ ಮತಗಟ್ಟೆಗಳಲ್ಲಿ 14 ಲಕ್ಷ ಮತಯಂತ್ರಗಳು ತಮ್ಮ ಗರ್ಭದೊಳಗಿನ ಸತ್ಯವನ್ನು ಹೊರಹಾಕುತ್ತಿದ್ದಂತೆ ಎಲ್ಲರ ನಿರೀಕ್ಷೆಗಳು ನಿಜವಾಗತೊಡಗಿದವು. ಮೊದಲಿನಿಂದಲೇ ನಿರ್ಗಮನ ಸಮೀಕ್ಷೆಗಳೆಲ್ಲಾ ಮೋದಿ ಪರವಾಗಿಯೇ ಇದ್ದರೂ ಅದನ್ನು ಪ್ರಮಾಣಿಸಿ ನೋಡದ ಹೊರತು ನಂಬುವ ಹಾಗಿರಲಿಲ್ಲ. ಜೊತೆಗೆ ಚಿದಂಬರಂ ಬೇರೆ 'ಫಲಿತಾಂಶದ ದಿನ ಎಲ್ಲರಿಗೂ ಅಚ್ಚರಿ ಕಾದಿದೆ, ನೋಡುತ್ತಿರಿ' ಎಂದುಬಿಟ್ಟಿದ್ದರಲ್ಲ, ಯಾವ ಏರುಪೇರು ಕಾದಿದೆಯೋ ಎಂಬ ಆತಂಕ ಬೇರೆ. ಅಚ್ಚರಿ ಕಾದಿದ್ದು ಅವರಿಗೆ, ಪುತ್ರ ಕಾರ್ತಿಯ ಸೋಲಿನಿಂದ ಎಂಬುದು ತಿಳಿದು ಬಂದದ್ದು ಆಮೇಲೆ!

ಎಣಿಕೆ ಶುರುವಾಗುತ್ತಲೇ ಶುರುವಾಯಿತು ವಿದ್ಯುತ್ ಸಂಚಾರ. 'ಇಲ್ಲಿ ನೆಟ್ ಸ್ವಲ್ಪ ಸ್ಲೋ ಇದೆ. ಎಷ್ಟಾಯಿತು ನೋಡಿ ಪ್ಲೀಸ್ ಬೇಗ ' ಎನ್ನುವ, ‘ಟ್ರಾಫಿಕ್‍ನಲ್ಲಿ ಸಿಕ್ಕಿಕೊಂಡಿದ್ದೇನೆ, ಸ್ವಲ್ಪ ಟೋಟಲ್ ಕನ್‍ಫರ್ಮ್ ಮಾಡಿ’ ಎನ್ನುವ ಮನವಿಗಳು ಹರಿದಾಡತೊಡಗಿದವು. ಸಚಿನ್ ತೆಂಡೂಲ್ಕರ್‍ನ ಸ್ಕೋರ್ ತಿಳಿಯುವಾಗಿನ ಧಾವಂತ, ಕಳಕಳಿಗಿಂತ ಬಹಳ ಹೆಚ್ಚಿನ ಪಟ್ಟು ಈ ಮನವಿಗಳಲ್ಲಿತ್ತು. 'ಫೇಸ್‍ಬುಕ್'ನಂಥ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ನಿಮಿಷಕ್ಕಿಂತ ಹೆಚ್ಚಿನ ಸಮಯ ವ್ಯಯಿಸದವರೂ ತಾಸುಗಟ್ಟಲೆ ಕೂತು ಕೇಳಿದವರಿಗೆಲ್ಲಾ ಪ್ರತಿ ನಿಮಿಷದ 'ಸ್ಕೋರ್' ಹೇಳಬೇಕಾಯಿತು. ಭೂಪಟದ ಇನ್ನೊಂದು ತುದಿಯಲ್ಲಿದ್ದವರಿಗಂತೂ ಇದು ವರ್ಷದ ಎರಡನೆಯ ಶಿವರಾತ್ರಿ. ಫಲಿತಾಂಶ ಖಾತ್ರಿಯಾಗುತ್ತಿದ್ದಂತೆ ಎಲ್ಲರ ಮುಖಗಳಲ್ಲೂ ಮಂದಹಾಸ. ಮನೆಯಲ್ಲಿ ಸಿಹಿ ತಯಾರಿಸಲು ಹೇಳಿದವರಷ್ಟೋ, ಆಫೀಸುಗಳಲ್ಲಿ ಕೇಕ್ ಕತ್ತರಿಸಿ ಸಂಭ್ರಮಪಟ್ಟವರೆಷ್ಟೋ, ವಿಷಯ ಗೊತ್ತಿದ್ದರೂ ಹಂಚಿಕೊಳ್ಳುವ ನೆವದಲ್ಲಿ ಗೆಳೆಯರಿಗೆ, ಬಂಧು-ಬಾಂಧವರಿಗೆ ಫೋನಾಯಿಸಿದವರೆಷ್ಟೋ! ಗಣಿತದ ಅಂಕಿ-ಅಂಶಗಳು ಹೇಳಿದ ವಿಜಯ ವಾರ್ತೆಗಿಂತ ಭಾವನಾತ್ಮಕವಾಗಿ ಇಡೀ ದೇಶದ ಜನತೆ ಬೆಸೆದು ಹೋಗಿದ್ದ 'ಮೋದಿ ಅಲೆ' ಹುಸಿಯಲ್ಲ ಎನ್ನುವ ಸತ್ಯ ನಿರೂಪಿತವಾದುದು ಬಹಳ ತೃಪ್ತಿಕರವಾಗಿತ್ತು.

Better Late Than Never!

ಮೊತ್ತಮೊದಲ ಬಾರಿಗೆ 'ನಾನೊಬ್ಬ ವೋಟ್ ಮಾಡದಿದ್ದರೇನು ಮಹಾ ವ್ಯತ್ಯಾಸವಾಗುವುದು' ಎಂಬ ಧೋರಣೆಯನ್ನು ಬದಿಗಿಟ್ಟು ಸಾಕಷ್ಟು ಪ್ರಜ್ಞಾವಂತ ಭಾರತೀಯರು ಮತ ಹಾಕಿರುವುದರ ಪರಿಣಾಮವೇ ಈ ಐತಿಹಾಸಿಕ ಬದಲಾವಣೆ. ಇಷ್ಟು ದಿನ ನಮ್ಮ ರಾಜಕಾರಣಿಗಳು ಹೇಳಿದ್ದೇ ಮಾತು, ನಡೆಸಿದ್ದೇ ಆಡಳಿತ, ಮಾಡಿದ್ದೇ ರಾಜಕಾರಣ. ಮೋದಿಯವರನ್ನೇ ಗುರಿಯಾಗಿಸಿಕೊಂಡು ಚಲಾಯಿಸಿದ ಪ್ರತಿ ಮತವೂ ಈಗ ತಂದಿತ್ತಿದೆ ಸಂತಸದ ಸಿಹಿ ಹೂರಣ. ಇನ್ನುಳಿದಿರುವುದು ಹಂತ ಹಂತಗಳಲ್ಲಿ ಬದಲಾವಣೆಯ ಅನಾವರಣ.

ನಿಮ್ಮ ಕರೆಗೆ ಕಾಯಾ, ವಾಚಾ, ಮನಸಾ ಓಗೊಟ್ಟಿದ್ದೇವೆ ನರೇಂದ್ರ ಭಾಯ್, ಇನ್ನು ಈ ದೇಶವನ್ನು ಪೊರೆಯುವ ಹೊಣೆ ನಿಮ್ಮದು!


1 comment:

  1. ಇದು ಮೊದಿ ಅಲೆ ಅಲ್ಲ ಸುನಮಿ

    ReplyDelete