Tuesday, 13 May 2014

ಇಂಥ ತಾಯಿಯರಿಗೆ ಮೀಸಲಾಗಿಡೋಣವೇ ಈ ದಿನವನ್ನ?

ಘಟನೆ1: 12 ಜನವರಿ 1598ರಲ್ಲಿ, ನಿಜಾಮರ ಅಡಿಯಾಳಾಗಿದ್ದ ಲಖೋಜಿರಾವ್ ಜಾಧವ್ ಎಂಬ ಮರಾಠನ ಮಗಳಾಗಿ ಹುಟ್ಟುತ್ತಾಳೆ ಜೀಜಾಬಾಯಿ. ಎಳವೆಯಲ್ಲಿಯೇ ಅವಳ ವಿವಾಹ ಮಾಲೋಜಿರಾವ್‍ನ ಮಗ ಶಹಾಜಿ ಭೋಸಲೆಯೊಂದಿಗೆ ನಡೆಯುತ್ತದೆ. ಸ್ವತಂತ್ರ ಹಿಂದು ಸಾಮ್ರಾಜ್ಯ ಕಟ್ಟಲು ಎರಡು ಬಾರಿ ಹವಣಿಸುವ ಶಹಾಜಿ ಪ್ರತಿ ಬಾರಿಯೂ ನಿಜಾಮರ ಹಾಗೂ ಮುಘಲರ ಕೈಯಲ್ಲಿ ಸೋಲುಣ್ಣುತ್ತಾನೆ. ಕೊನೆಗೆ ಆದಿಲ್‍ಶಾಹಿಯ ಸೈನ್ಯದಲ್ಲಿ ಸರದಾರನಾಗಿ ಸೇರುತ್ತಾನೆ. ಮುಘಲರು ಆದಿಲ್‍ಶಾಹಿಯ ವಸಾಹತುಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಾಗ ಶಹಾಜಿ ಕರ್ನಾಟಕದತ್ತ ಪಯಣ ಬೆಳೆಸಿದರೆ ಗರ್ಭವತಿಯಾಗಿದ್ದ ಜೀಜಾಬಾಯಿ ಶಿವನೇರಿಯನ್ನು ಸೇರುತ್ತಾಳೆ. ದಿನೇದಿನೇ ಹೆಚ್ಚುವ ಮುಘಲರ ಉಪಟಳ ತನ್ನ ತಂದೆ ಹಾಗೂ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಳ್ಳುವುದನ್ನು ನೋಡಿ ಕನಲುತ್ತಾಳೆ. ತಮ್ಮ ರಾಜ್ಯ, ದೇಶಗಳನ್ನು ಒಗ್ಗೂಡಿಸಿ ಉಳಿಸಿಕೊಳ್ಳಲಾಗದೆ ಮುಘಲರಿಗೆ ಮಣಿಯಬೇಕಾದ ಮರಾಠರ ಅಸಹಾಯಕತೆ, ತಮ್ಮ ಹೆಣ್ಣುಮಕ್ಕಳನ್ನು ಬಲಿಕೊಡಬೇಕಾದ ನಿರ್ವೀರ್ಯತೆಯನ್ನು ಕಂಡು ಸಿಡಿದೇಳುತ್ತಾಳೆ. ಎಲ್ಲ ಹೆಂಗಳೆಯರಂತೆ ತನ್ನ ಹೊಟ್ಟೆಯಲ್ಲಿರುವ ಮಗು ಹೇಗಿರುತ್ತದೋ ಎಂದು ಕನಸು ಕಾಣುವ ಬದಲು ಅದು ಹೀಗೇ ಇರಬೇಕು ಎಂದು ಕೆಚ್ಚಿನಿಂದ ನಿರ್ಧರಿಸುತ್ತಾಳೆ. ತನ್ನ ಪ್ರತಿಯೊಂದು ಆಲೋಚನೆ, ವರ್ತನೆಯ ಪ್ರಭಾವ ತನ್ನ ಮಗುವಿನ ಮೇಲಾಗುತ್ತದೆ ಎಂಬ ಅರಿವಿನಿಂದ ಅಂಥ ಪರಿಸ್ಥಿತಿಯಲ್ಲೂ ಆಡಳಿತ ಸೂಕ್ಷ್ಮಗಳನ್ನು ಅರಿತು, ಅರಗಿಸಿಕೊಂಡು, ಬೆಟ್ಟಗಳನ್ನು ಹತ್ತಿಳಿದು, ಕತ್ತಿವರಸೆ, ಕುದುರೆ ಸವಾರಿಯಂಥ ಸಾಹಸಗಳಿಗೆ ಮೈಯ್ಯೊಡ್ಡುತ್ತಾಳೆ. ತನಗೆ ಹುಟ್ಟುವ ಮಗು ಗುಲಾಮಗಿರಿಯ ಮನಸ್ಥಿತಿಯವನಾಗಿರದೆ ದೇಶವನ್ನು ಮುಘಲರ ದಾಸ್ಯದಿಂದ ಮುಕ್ತಗೊಳಿಸುವ ಶೂರನಾಗಬೇಕು ಎಂಬ ಏಕೈಕ ಸಂಕಲ್ಪವನ್ನೇ ಅಹರ್ನಿಶಿ ತಪಸ್ಸಿನಂತೆ ಆಚರಿಸುವ ಅವಳ ಮನೋದಾರ್ಢ್ಯ,ಇಚ್ಛಾಶಕ್ತಿ ಶಿವಾಜಿಯ ರೂಪದಲ್ಲಿ ಫಲಿಸುತ್ತದೆ. ಶಹಾಜಿ ಮತ್ತೊಂದು ಮದುವೆಯಾದರೂ ವಿಚಲಿತಳಾಗದೆ ತನ್ನ ಗಮನವನ್ನು ಶಿವಾಜಿಯನ್ನು ರೂಪಿಸುವಲ್ಲೇ ಕೇಂದ್ರೀಕರಿಸುತ್ತಾಳೆ. ಬಾಲ್ಯದಿಂದಲೇ ಶಿವಾಜಿಯಲ್ಲಿ 'ಹಿಂದವಿ ಸ್ವರಾಜ್ಯ'ದ ಕಲ್ಪನೆಯನ್ನು ಹುಟ್ಟುಹಾಕಿ ಅವನನ್ನು ಅಪ್ರತಿಮ ಶೂರ ಹಾಗೂ ಸಾಹಸಿಯನ್ನಾಗಿ ಮಾಡುತ್ತಾಳೆ. ಶಿವಾಜಿ ತನ್ನ 16ನೆಯ ವಯಸಿನಲ್ಲೇ ಮೊತ್ತ ಮೊದಲ ವಿಜಯವನ್ನು ದಾಖಲಿಸಿದಾಗ, ಗೆರಿಲ್ಲಾ ಯುದ್ಧತಂತ್ರದಿಂದ ತೋರಣ ಹಾಗೂ ರಾಜಗಢದ ಕೋಟೆಯನ್ನು ವಶಪಡಿಸಿಕೊಂಡಾಗ ಹೆಮ್ಮೆಯಿಂದ ಬೀಗುತ್ತಾಳೆ. ಅವನ ಪ್ರತಿ ಹೋರಾಟಕ್ಕೂ ಬರಿದೇ ಬಾಯಿಮಾತಿನ ಸ್ಫೂರ್ತಿ, ಬೆನ್ನೆಲುಬಾಗಿರದೆ ಅವನ ಅನುಪಸ್ಥಿತಿಯಲ್ಲಿ ಸೇನೆಯನ್ನು ಮುನ್ನಡೆಸಿ ಹಲವಾರು ವಿಜಯಗಳಿಗೆ ಕಾರಣಳಾಗುತ್ತಾಳೆ. ಶಿವಾಜಿ ಆಗ್ರಾದಲ್ಲಿ ಔರಂಗಜೇಬನ ಬಂದಿಯಾದಾಗಲಾಗಲೀ ಅಥವಾ ಮಿರ್ಜಾರಾಜಾ ಜೈಸಿಂಗ್‍ನ ಕೈಲಿ ಸೋತಾಗಲಾಗಲೀ ಧೃತಿಗೆಡದೆ ಅವನ ಗೆಳೆಯರಾದ ತಾನಾಜಿ ಮಾನ್ಸುರೆ ಹಾಗೂ ಬಾಜಿ ಪ್ರಭುವನ್ನು ಹುರಿದುಂಬಿಸುತ್ತಾಳೆ. ಕೊನೆಗೆ 1674ರಲ್ಲಿ ಶಿವಾಜಿ ತನ್ನನ್ನು ಸ್ವತಂತ್ರ ರಾಜನೆಂದು ಘೋಷಿಸಿಕೊಳ್ಳುವುದನ್ನು ಕಣ್ತುಂಬ ನೋಡಿ 12ದಿನಗಳ ನಂತರ ತನ್ನ ತ್ಯಾಗ ಹಾಗೂ ಹೋರಾಟದ ದಿಟ್ಟ ಬದುಕಿಗೆ ವಿದಾಯ ಹೇಳುತ್ತಾಳೆ.

ಘಟನೆ2: ಬೆಟ್ಟಿ ಎಂಬ ಅಮೆರಿಕನ್ ಮಹಿಳೆ ಅಮೆರಿಕದಲ್ಲಿ ನೆಲೆಸಿದ್ದ ಡಾ.ಸಯ್ಯದ್ ಮೆಹಮೂದಿ ಎಂಬ ಇರಾನಿ ವೈದ್ಯನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಮೆಹ್‍ತಾಬ್ ಎಂಬ ಮುದ್ದು ಮಗಳ ತಾಯಿಯಾಗುವ ಅವಳನ್ನು ಮದುವೆಯಾದ ಏಳು ವರ್ಷಗಳ ನಂತರ ಗಂಡ ಮೊದಲಬಾರಿ ಇರಾನಿಗೆ ಹೊರಡಿಸುತ್ತಾನೆ. ಎರಡು ವಾರಗಳ ಕಾಲ ಟೆಹರಾನ್‍ನಲ್ಲಿದ್ದು ತನ್ನ ಬಂಧು-ಬಳಗ, ನೆಂಟರಿಷ್ಟರನ್ನು ಭೇಟಿಯಾಗಿ ಬಂದು ಬಿಡೋಣ ಎಂದು ಹೇಳಿ ಅವಳನ್ನು ಒಪ್ಪಿಸುತ್ತಾನೆ. 1984ರ ಆಗಸ್ಟ್ 3ರಂದು ಅಮೆರಿಕದಿಂದ ಹೊರಡುವ ಅವರು ಟೆಹರಾನ್‍ ತಲುಪುತ್ತಿದ್ದಂತೆ ಅವಳ ಹಾಗೂ ಮಗಳ ಪಾಸ್‍ಪೋರ್ಟ್‍ಗಳನ್ನು ಜೋಪಾನಮಾಡುವ ಸಲುವಾಗಿ ತೆಗೆದಿರಿಸಿಕೊಳ್ಳುತ್ತಾನೆ. ಅಲ್ಲಿಯ ಜನ, ವಾತಾವರಣ, ರೀತಿ-ನೀತಿಗಳಿಗೆ ಹೊಂದಿಕೊಳ್ಳಲು ತಿಣುಕಾಡುವ ತಾಯಿ-ಮಗಳು, ಎರಡು ವಾರ ತಾನೆ ಎಂದು ಸಮಾಧಾನ ತಂದುಕೊಳ್ಳುತ್ತಾರೆ. ಆದರೆ ಎರಡು ವಾರಗಳು ಕಳೆದರೂ ಹೊರಡುವ ಸೂಚನೆಯೇ ಸಿಗದಾದಾಗ ಚಡಪಡಿಸುವ ಬೆಟ್ಟಿಗೆ, ತಾನು ಅವರನ್ನು ಕರೆತಂದಿರುವುದು ಅಲ್ಲೇ ಶಾಶ್ವತವಾಗಿ ನೆಲೆಸಲು ಎಂಬ ಸತ್ಯವನ್ನು ಅರುಹುತ್ತಾನೆ ಮೆಹಮೂದಿ. ಅಷ್ಟು ಹೊತ್ತಿಗೆ, ಬದಲಾದ ಪರಿಸರವನ್ನು, ತಂದೆಯ ಹೊಸ ರೂಪವನ್ನು ಕಂಡು ನಾಲ್ಕು ವರ್ಷದ ಮೆಹ್‍ತಾಬ್ ಮಾನಸಿಕವಾಗಿ ಕುಗ್ಗಿಹೋಗಿರುತ್ತಾಳೆ. ತನ್ನೂರಿಗೆ ಹಿಂತಿರುಗೋಣ ಎಂದು ಹಪಹಪಿಸುತ್ತಾ ತಾಯಿಯನ್ನು ಹಿಡಿದು ರೋದಿಸುತ್ತಾಳೆ. ಅಧೀರಳಾಗುವ ಬೆಟ್ಟಿ ಅಮೆರಿಕೆಗೆ ಹಿಂತಿರುಗುವ ಸಾಧ್ಯತೆಗಳನ್ನು ಪರಿಶೀಲಿಸಲಾರಂಭಿಸುತ್ತಾಳೆ. ಗಂಡನ ಕಣ್ಣುತಪ್ಪಿಸಿ ಅಲ್ಲಿಯ ಅಮೆರಿಕದ ರಾಯಭಾರಿ ಕಛೇರಿಯನ್ನು ಸಹಾಯಕ್ಕಾಗಿ ಸಂಪರ್ಕಿಸಿದಾಗ ಮಗಳನ್ನು ಬಿಟ್ಟು ಅವಳೊಬ್ಬಳೇ ಹಿಂತಿರುಗಲು ಸಿದ್ಧಳಾದರೆ ಎಲ್ಲ ಸಹಾಯವೂ ಸಿಗುವ ಆಶ್ವಾಸನೆ ದೊರಕುತ್ತದೆ. ಯಾವ ಕಾರಣಕ್ಕೂ ಮಗಳನ್ನು ಬಿಟ್ಟು ಹೋಗುವುದಿಲ್ಲ ಎಂದು ಹಟಕ್ಕೆ ಬೀಳುವ ಬೆಟ್ಟಿ, ಹೋದರೆ ಮಗಳೊಂದಿಗೆ, ಇಲ್ಲದಿದ್ದರೆ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಾಳೆ. ಮೊದಮೊದಲು ಗಂಡನನ್ನು ವಿರೋಧಿಸಿ ಗೃಹಬಂಧನಕ್ಕೀಡಾಗುವ ಅವಳು ನಂತರ ಅವನಿಗೆ ತಾನು ಅಲ್ಲಿಯೇ ಇರಲು ಸಿದ್ಧ ಎಂದು ಹೇಳುತ್ತಾಳೆ. ಕ್ರಮೇಣ ತನ್ನ ವರ್ತನೆಯನ್ನು ಬದಲಾಯಿಸಿಕೊಂಡು ತಾನು ಅಲ್ಲಿಗೆ ಒಗ್ಗಿಕೊಳ್ಳುತ್ತಿದ್ದೇನೆ ಎಂಬ ನಂಬಿಕೆ ಮೂಡಿಸುತ್ತಾಳೆ. ಮಗಳನ್ನು ಅಲ್ಲೇ ಶಾಲೆಗೆ ಸೇರಿಸಿ ಅವಳನ್ನು ಕರೆದೊಯ್ಯುವ ನೆಪದಲ್ಲಿ ಅಲ್ಲಿಂದ ಪಾರಾಗುವ ಪ್ರಯತ್ನಕ್ಕೆ ತೊಡಗುತ್ತಾಳೆ. ಕೊನೆಗೆ ಸ್ಥಳೀಯನೊಬ್ಬನ ನೆರವಿನಿಂದ ಕಳ್ಳಸಾಗಾಣಿಕೆದಾರರ ತಂಡದೊಂದಿಗೆ ಟೆಹರಾನ್‍ನಿಂದ ಕಾರಿನಲ್ಲಿ ವೇಷಮರೆಸಿಕೊಂಡು ಹೊರಟು ದುರ್ಗಮವಾದ ಹಿಮಪರ್ವತಗಳನ್ನು ಕುದುರೆಯ ಮೇಲೇರಿ ದಾಟಿ ಮಗಳೊಂದಿಗೆ ಟರ್ಕಿ ತಲುಪುತ್ತಾಳೆ. ಒಂದಿಡೀ ವಾರ ತೆಗೆದುಕೊಳ್ಳುವ ಈ ಪ್ರಯಾಣ ಅವಳನ್ನು ಹಾಗೂ ಮಗಳನ್ನು ಶಾರೀರಿಕವಾಗಿ ಜರ್ಝರಿತಗೊಳಿಸುತ್ತದೆ. ಹಲವೆಡೆ ಕುಸಿದು, ಉರುಳಿ ಬಿದ್ದು, ಪ್ರಜ್ಞೆತಪ್ಪಿದರೂ ಮನದಾಳದಲ್ಲಿ ಬೇರುಬಿಟ್ಟ ಮಗಳನ್ನು ಕ್ಷೇಮವಾಗಿ ಮನೆ ತಲುಪಿಸುವ ಹಟ ಅವಳನ್ನು ಜೀವಂತವಾಗಿರಿಸುತ್ತದೆ. ಟರ್ಕಿಯ ಅಮೆರಿಕ ರಾಯಭಾರಿ ಕಛೇರಿಯ ನೆರವಿನೊಂದಿಗೆ 1986ರ ಫೆಬ್ರುವರಿ 7ರಂದು ಕೊನೆಗೂ ಕ್ಷೇಮವಾಗಿ ಅಮೆರಿಕ ತಲುಪುತ್ತಾಳೆ.

ಮೇಲಿನ ಎರಡೂ ಘಟನೆಗಳೂ ಬೇರೆಬೇರೆ ಕಾಲಘಟ್ಟದಲ್ಲಿ ಸಂಭವಿಸಿದಂಥವು. ಇಲ್ಲಿ ಧರ್ಮ,ದೇಶ, ಭಾಷೆ, ಆಚಾರ-ವಿಚಾರ ಎಲ್ಲವೂ ವಿಭಿನ್ನ ಹಾಗೂ ಗೌಣ. ಇರುವ ಒಂದೇ ಸಮಾನ ಅಂಶವೆಂದರೆ ಈರ್ವರಲ್ಲೂ ಪ್ರವಹಿಸುವ ತಾಯಿ ಎಂಬ ಶಕ್ತಿ.  ಆ ಶಕ್ತಿಯ ಮುಂದೆ ಬೇರೆಲ್ಲಾ ಲೆಕ್ಕಾಚಾರಗಳೂ ಹೇಗೆ ತಲೆಕೆಳಗಾಗುತ್ತವೆ, ವೈಪರೀತ್ಯಗಳೆಲ್ಲಾ ಹೇಗೆ ಸೊಂಟ ಮುರಿದುಕೊಂಡು ಸೋಲುತ್ತವೆ ಎಂಬುದಕ್ಕೆ ಇವು ನಿದರ್ಶನಗಳಷ್ಟೇ.

ಅಂಥ ತಾಯಿಯರನ್ನು ನೆನೆಯುವ, ಅಭಿನಂದಿಸುವ ಸಲುವಾಗಿ ಬಹಳಷ್ಟು ರಾಷ್ಟ್ರಗಳು ಮೇ ತಿಂಗಳ ಎರಡನೆಯ ಭಾನುವಾರವನ್ನು ತಾಯಿಯರ ದಿನವನ್ನಾಗಿ ಆಚರಿಸುತ್ತವೆ.

ಈ ತಾಯಿಯರ ದಿನ ಶುರುವಾದದ್ದೂ ಒಂದು ವಿಚಿತ್ರ ಸನ್ನಿವೇಶದಿಂದಲೇ. 1861ರ ಏಪ್ರಿಲ್ 12ರಿಂದ ಹಿಡಿದು 1865ರ May 10ರ ವರೆಗೂ ನಡೆದ ಅಮೆರಿಕದ ಯುದ್ಧದಲ್ಲಿ ಸುಮಾರು 6ಲಕ್ಷ ಯೋಧರು ಮಡಿದಿದ್ದರು. ಯುದ್ಧದ ಪರಿಣಾಮ ಎಲ್ಲೆಡೆ ಟೈಫಾಯಿಡ್‍ನಂಥ ರೋಗರುಜಿನಗಳು ಹರಡತೊಡಗಿದ್ದವು. ಇದನ್ನು ಹತೋಟಿಗೆ ತಂದು ಜನರಿಗೆ ನೆರವಾಗುವ ಸಲುವಾಗಿ 1868ರಲ್ಲಿ ಆನ್ ಜಾರ್ವಿಸ್ ಎಂಬ ಮಹಿಳೆ ಯುದ್ಧದಲ್ಲಿ ಮಡಿದ ಯೋಧರ ತಾಯಂದಿರನ್ನು ಕಲೆ ಹಾಕಿ ಕಾರ್ಯಕಾರಿ ಸಮಿತಿಯೊಂದನ್ನು ಸ್ಥಾಪಿಸಿದಳು. ಕ್ರಿಯಾಶೀಲಳಾಗಿ ಸಮಾಜ ಸೇವೆ ಮಾಡಿ ನಂತರ 1905ನಲ್ಲಿ ಮರಣ ಹೊಂದಿದಳು. ಅವಳ ನೆನಪಿನಲ್ಲಿ ಮಗಳು ಅನ್ನಾ ಜಾರ್ವಿಸ್ 1908ರಲ್ಲಿ ಮೊದಲ ಬಾರಿ ತಾಯಿಯರ ದಿನವನ್ನು ಆಚರಣೆಗೆ ತಂದಳು. ಸೇವಾಮನೋಭಾವ ಪಸರಿಸಲೆಂದು ಅನ್ನಾ ಶುರುಮಾಡಿದ ಆಂದೋಲನ ನೋಡನೋಡುತ್ತಿದ್ದಂತೆ ದೊಡ್ಡ ಸಂಭ್ರಮಾಚರಣೆಯಾಗಿ ಉಡುಗೊರೆ ಹಾಗೂ ಗ್ರೀಟಿಂಗ್ ಕಾರ್ಡ್‍ಗಳ ವಿನಿಮಯಕ್ಕೆ ಸೀಮಿತವಾಗಿಹೋಯಿತು. ಬೇಸತ್ತ ಅನ್ನಾ ಅದನ್ನು ಪ್ರತಿಭಟಿಸುತ್ತಲೇ, ತಾನದನ್ನು ಆಚರಣೆಗೆ ತರಲೇಬಾರದಿತ್ತು ಎಂದು ಕೊರಗುತ್ತಲೇ 1948ರಲ್ಲಿ ಪ್ರಾಣ ಬಿಟ್ಟಳು.
ಹೀಗೆ ಅಮೆರಿಕದಲ್ಲಿ ಶುರುವಾದ ಆಚರಣೆ ಇತರೆ ರಾಷ್ಟ್ರಗಳಿಗೂ ಸೋಕಿ ಅವೂ ಇದರಲ್ಲಿ ಅರ್ಥ ಕಂಡುಕೊಂಡವು. ಅಮೆರಿಕಕ್ಕೂ ಮೊದಲೇ ಇಂಥ ಆಚರಣೆ ಹೊಂದಿದ್ದ ಬ್ರಿಟನ್ ಹಾಗೂ ಗ್ರೀಸ್ ದೇಶಗಳೂ ಕೆಲ ಮಾರ್ಪಾಡು ಮಾಡಿಕೊಂಡವು.

ಅಮೆರಿಕದಿಂದ ಫ್ರೆಂಡ್‍ಶಿಪ್ ಡೇ, ವ್ಯಾಲೆಂಟೈನ್‍‍ಡೇಗಳನ್ನು ಬಹಳ ಹಿಂದೆಯೇ ಎರವಲು ಪಡೆದಿರುವ ನಮಗೆ ಈ ದಿನದ ಬಗ್ಗೆ ಅಕ್ಕರಾಸ್ಥೆಮೂಡುತ್ತಿರುವುದು ತೀರಾ ಇತ್ತೀಚೆಗೆ. ಬೇರೆ ದೇಶಗಳಂತೆ ನಾವು ಇದನ್ನು ಓರ್ವ ತಾಯಿ ಅಥವಾ ಒಂದು ಸಂಘಟನೆಗೆ ಮೀಸಲಿಟ್ಟಿಲ್ಲ. ಉದಾಹರಣೆಗೆ ಇಸ್ರೇಲ್ ತಾಯಿಯರ ದಿನವನ್ನಾಚರಿಸುವುದು ಹೆನ್ರಿಟಾ ಜೋಲ್ಡ್ ಎಂಬ ಮಹಿಳೆಯ ನೆನಪಿನಲ್ಲಿ. ತನಗೆ ಸ್ವಂತ ಮಕ್ಕಳಿಲ್ಲದಿದ್ದರೂ ಜರ್ಮನಿಯ ನಾಜಿಗಳ ಕೈಯಿಂದ ಅನೇಕ ಯಹೂದಿ ಮಕ್ಕಳನ್ನುಳಿಸಿದ ಅವಳಿಗೆ ಈ ದಿನವನ್ನರ್ಪಿಸುವುದು ಅವರಿಗೆ ಸೂಕ್ತವಾಗಿ ಕಂಡಿತು.

ಹಾಗೆಂದು ನಮ್ಮಲ್ಲಿ ತ್ಯಾಗ,ಆದರ್ಶ,ಸ್ಫೂರ್ತಿಗಳ ಸಾಕಾರರೂಪವಾದ ತಾಯಿಯರಿಗೆ ಬರವಿಲ್ಲ! ಪತಿ ವಿಶ್ವನಾಥದತ್ತರು ಅಕಾಲ ಮರಣವನ್ನಪ್ಪಿದಾಗ ಶ್ರೀಮಂತಿಕೆಯಿಂದ ದಟ್ಟದಾರಿದ್ರ್ಯಕ್ಕೆ ಕಾಲಿಟ್ಟ ಭುವನೇಶ್ವರಿದೇವಿಯವರು ಸಂಸಾರದ ನೊಗವನ್ನು ಬಲವಂತವಾಗಿ ಹಿರಿಯ ಮಗನ ಹೆಗಲಿಗೇರಿಸಿದ್ದರೆ ನರೇಂದ್ರನಾಥದತ್ತ ಸ್ವಾಮಿ ವಿವೇಕಾನಂದರಾಗುತ್ತಿರಲಿಲ್ಲ! ಎಳವೆಯಿಂದಲೇ ಧಮನಿ-ಧಮನಿಗಳಲ್ಲಿಯೂ ದೇಶಪ್ರೇಮವನ್ನು ಹರಿಸಿಕೊಂಡು ಓಡಾಡುತ್ತಿದ್ದ ಮಗನನ್ನು ತಾಯಿ ವಿದ್ಯಾವತಿ ಆತಂಕದಿಂದ, ಪುತ್ರಮೋಹದಿಂದ ತನ್ನ ಮಡಿಲಿನಲ್ಲೇ ಕಟ್ಟಿಹಾಕಿಬಿಟ್ಟಿದ್ದರೆ ಭಗತ್‍ ಸಿಂಗ್‍ ಎಂಬ ಸಿಂಹ ತನ್ನ 23ನೆಯ ವಯಸ್ಸಿಗೇ ಬಲಿಯಾಗಿ ಎಲ್ಲರಲ್ಲೂ ಸ್ವಾತಂತ್ರ್ಯದ ಕಿಚ್ಚು ಹಚ್ಚುತ್ತಿರಲಿಲ್ಲ! ಹಾಗೆ ನೋಡಿದರೆ ಪ್ರತಿ ತಾಯಿಯೂ ಅಭಿನಂದನಾರ್ಹಳೇ. ನಿಸ್ವಾರ್ಥಿಯಾಗಿ ತನ್ನ ಮಕ್ಕಳ ಏಳಿಗೆ ಬಯಸುತ್ತ, ಬದುಕು ತನಗೆ ಕಲಿಸಿದ ಪಾಠದ ರಾಶಿಯನ್ನು ಅವರ ಮುಂದೆ ಸುರಿದು, ಸಂದರ್ಭ ಬಂದಾಗಲೆಲ್ಲಾ ಒಂದೊಂದನ್ನೇ ಹೆಕ್ಕಿಕೊಟ್ಟು ಅವರನ್ನು ಮುನ್ನಡೆಸುತ್ತಾಳೆ.

ಆದರೂ ನಮ್ಮ ಕಣ್ಣು ತೇವಗೊಳ್ಳುವುದು 1999ರ ಕಾರ್ಗಿಲ್ ಯುದ್ಧದ ಮೊದಲ ಬಲಿಯಾದ 22ರ ಹರೆಯದ ಸೌರಭ್ ಕಾಲಿಯಾನ ತಾಯಿ ವಿಜಯ್ ಕಾಲಿಯಾರನ್ನು ನೋಡಿದಾಗ. ಪಾಕಿಸ್ತಾನದವರ ಕೈಗೆ ಸಿಕ್ಕು ಬರೋಬ್ಬರಿ 22ದಿನಗಳ ಕಾಲ ಅಸಹನೀಯ ಯಾತನೆಯನ್ನನ್ನುಭವಿಸಿ ಪ್ರತಿಸಲ ಅಮ್ಮಾ ಎಂದು ಚೀರುತ್ತಿದ್ದಾಗ ಈ ತಾಯಿಯ ಕರುಳೆಷ್ಟು ಬೆಂದಿರಬೇಕು? ನಮ್ಮ ಹೃದಯ ಮಿಡುಕುವುದು ನವೆಂಬರ್ 2008ರ ಮುಂಬೈ ದಾಳಿಯಲ್ಲಿ ಮಡಿದ 31ರ ಹರೆಯದ ಮೇಜರ್ ಸಂದೀಪ್ ಉನ್ನಿಕೃಷ್ಣನ್ನ ತಾಯಿ ಧನಲಕ್ಷ್ಮಿಯವರನ್ನು ನೆನೆದಾಗ. ಗಂಟಲ ಸೆರೆಯುಬ್ಬಿಬರುವುದು ಮೊನ್ನೆ ಏಪ್ರಿಲ್ 25ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಕದನದಲ್ಲಿ ಮಡಿದ 31ರ ಹರೆಯದ ಮುಕುಂದ್ ವರದರಾಜನ್ನ ತಾಯಿ ಗೀತಾರ ಮಾತುಗಳನ್ನು ಕೇಳಿದಾಗ.

ತಮ್ಮ ಭಯವನ್ನು ಬದಿಗೊತ್ತಿ ಮಕ್ಕಳ ಆಸೆಗೆ ಅಡ್ಡಬರದೆ ಜೀವವನ್ನು ಅಂಗೈಯಲ್ಲಿ ಹಿಡಿದು ಅವರನ್ನು ದೇಶಸೇವೆಗೆ ಅರ್ಪಿಸುವ ಈ ತಾಯಿಯರ ಧೈರ್ಯವನ್ನು ಅಳೆಯಲು ಯಾವ ಅಳತೆಗೋಲಿದೆ? ಎದೆಯುದ್ದಕ್ಕೂ ಬೆಳೆದ ಮಕ್ಕಳು ಶವವಾಗಿ ಬರುವುದನ್ನು ಕಾಣುತ್ತಲೇ ಕಂಗಳಲ್ಲಿ ಶೂನ್ಯ ತುಂಬಿಕೊಳ್ಳುವ ಇವರನ್ನು ಸಮಾಧಾನಿಸಬಲ್ಲ ಯಾವ ದಿವ್ಯೌಷಧ ಲಭ್ಯವಿದೆ?  ಇವರ ತ್ಯಾಗಕ್ಕೆ ಸಾಟಿಯಾಗಬಲ್ಲ ಯಾವುದೂ ನಮ್ಮ ಬಳಿಯಿಲ್ಲ. ಕಡೇಪಕ್ಷ ಈ ದಿನವನ್ನು ಇವರಿಗೆ ಮೀಸಲಿಟ್ಟು, ಇವರ ತ್ಯಾಗ ನಮಗೆ ಅರ್ಥವಾಗಿ ನಾವೂ ಸ್ಪಂದಿಸುತ್ತಿದ್ದೇವೆಂಬ ಭಾವವನ್ನಾದರೂ ಮೂಡಿಸ ಬಹುದಲ್ಲವೇ?

No comments:

Post a Comment