Wednesday, 2 July 2014

ಬದಲಾದ ಜಿಹಾದ್ನ ಪರಿಭಾಷೆ; ಶಾಂತಿ ಆಗುವುದೇ ಮರೀಚಿಕೆ?

ಕಳೆದ ಮಾರ್ಚ್ 25ರಂದು ಸಿರಿಯಾ ದೇಶದ ಇದ್ಲಿಬ್ ಪಟ್ಟಣದ ಒಂದು ಸೈಬರ್ ಕೆಫೆಗೆ ಅಬು-ಸುಮಯ್ಯಾಹ್-ಅಲ್-ಬ್ರಿಟಾನಿ ಎಂಬ ಜಿಹಾದಿ ನಡೆದು ಬಂದ. ಅವತ್ತು ಇಂಟರ್‌ನೆಟ್‌ನಲ್ಲಿ ಸ್ಕೈಪ್ ಮೂಲಕ ಅವನ ಸಂದರ್ಶನವಿತ್ತು. ನಡೆಸುತ್ತಿದ್ದವನು ಅಮೆರಿಕದ ಜೋನಾಥನ್ ಲೀ ಕ್ರೋನ್ ಎಂಬ ಯುವ ಪತ್ರಕರ್ತ. 'ಐಎಸ್‍ಐಎಸ್‍ಶೋ’ ಎಂಬುದು ಕಾರ್ಯಕ್ರಮದ ಹೆಸರು. ಶೋ ಎಂದೊಡನೆ ನಮಗೆ ನೆನಪಾಗುವುದು ನಮ್ಮ ಚಾನೆಲ್‍ಗಳಲ್ಲಿ ಪ್ರಸಾರವಾಗುವ ಹಾಡು, ಕುಣಿತ, ಸಾಹಸದ ರಿಯಾಲಿಟಿ ಶೋಗಳು ಮಾತ್ರ ಅಲ್ಲವೇ? ಆದರೆ ಅದಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಅದನ್ನು ನೋಡಿದರೆ ನಕ್ಕು ಹಗುರಾಗುತ್ತೇವೆ, ಇದನ್ನು ಕೇಳಿದೊಡನೆ ಹುಬ್ಬು ಗಂಟಿಕ್ಕುತ್ತೇವೆ. ಸಿರಿಯಾದಲ್ಲಿ ಶುರುವಾಗಿ ಕಾಡ್ಗಿಚ್ಚಿನಂತೆ ಇರಾಕ್‍ನವರೆಗೂ ಹಬ್ಬಿರುವ ಐಸಿಸ್ (ಅಥವಾ ಐಎಸ್‍ಐಎಸ್‍ - ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ) ಎಂಬ ಜಿಹಾದಿ ಗುಂಪಿನ ಸದಸ್ಯನೊಬ್ಬನನ್ನು ಅಂದು ಜನರೆದುರು ತೆರೆದಿಡುವ ಪ್ರಯತ್ನ ಮಾಡುತ್ತಿದ್ದ ಜೋನಾಥನ್. ಫಲವಾಗಿ ಅಬು-ಸುಮಯ್ಯಾಹ್‍ನನ್ನು ಮಾತಿಗೆಳೆದು ತಂದಿದ್ದ. ಅಕ್ಕ-ಪಕ್ಕದಲ್ಲೇ ನಡೆಯುತ್ತಿದ್ದ  ಬಾಂಬ್ ದಾಳಿಗಳ ಕಿವಿಗಡಚಿಕ್ಕುವ ಸದ್ದಿನ ನಡುವೆ ಅಬು ತಣ್ಣಗೆ ಮಾತಿಗಿಳಿದ. ಮೂಲತಃ ಬ್ರಿಟನ್ನಿನವನಾದ ಅವನು ಐಸಿಸ್ ಸೇರಿ ವರ್ಷವಾಗಿತ್ತಷ್ಟೆ. ಬ್ರಿಟನ್‍ಗೆ ಹಿಂತಿರುಗುವ ಇರಾದೆ ಇದೆಯಾ ಎಂದು ಜೋನಾಥನ್ ಕೇಳಿದ್ದಕ್ಕೆ, ನನ್ನ ಪಾಸ್‍ಪೋರ್ಟ್ ಎಲ್ಲಿ ಹಾಕಿದ್ದೇನೆ ಎನ್ನುವುದೇ ನನಗೆ ನೆನಪಿಲ್ಲ, ಅದಿನ್ನು ಬೇಕಾಗಿಯೂ ಇಲ್ಲ ಎಂದ. ಹೇಗೆ ಬಿಟ್ಟು ಬಂದೆ ನಿನ್ನ ದೇಶವನ್ನು ಅಷ್ಟು ಸಲೀಸಾಗಿ ಎಂಬ ಪ್ರಶ್ನೆಗೆ ನಕ್ಕು, ಇಸ್ಲಾಂ ಅನ್ನು ಉಳಿಸುವ ಕರ್ತವ್ಯದ ಮುಂದೆ ದೇಶ ಭಾಷೆಗಳ ಅಸ್ತಿತ್ವವೇ ಇಲ್ಲ ಎಂದ. ಹೋಗಲಿ ನಿನ್ನವರು ಅಂತ ಯಾರೂ ಇರಲಿಲ್ಲವಾ ನಿನ್ನ ದೇಶದಲ್ಲಿ ಎಂದು ಕೇಳಿದ್ದಕ್ಕೆ, ಇದ್ದರು, ಹೆಂಡತಿ ಹಾಗೂ ಮೂವರು ಮಕ್ಕಳು ಎನ್ನಬೇಕೇ! ಒಂದು ಕ್ಷಣ ನಿರುತ್ತರನಾದ ಜೋನಾಥನ್. ಮುಂದುವರಿದು ಅಬು ಹೇಳಿದ ಮಾತುಗಳನ್ನು ಕೇಳಿ: ‘ಅಮೆರಿಕ ಹಾಗೂ ಬ್ರಿಟನ್ ಸರ್ಕಾರಗಳ ಮುಸ್ಲಿಂ ವಿರೋಧಿ ನೀತಿಯನ್ನು ನೋಡಿ ರೋಸಿ ಹೋಗಿ ಯಾರಿಗೂ ಹೇಳದೆ ಕೇಳದೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಬಂದೆ. ಇಲ್ಲಿಯತನಕ ಮನೆಯವರೊಡನೆ ಒಂದು ಮಾತೂ ಆಡಿಲ್ಲ.  ಬಹುಶಃ ಅವರಿಗೆ ನಾನಿಲ್ಲಿದ್ದೇನೆಂಬುದು ಗೊತ್ತೂ ಇಲ್ಲ. ನನ್ನಿಂದೇನಾದರೂ ತಪ್ಪಾಗಿದ್ದರೆ ಅವರು ನನ್ನನ್ನು ಕ್ಷಮಿಸಲಿ. ರಕ್ತ ಸಂಬಂಧ ಎಲ್ಲೂ ಹೋಗುವುದಿಲ್ಲ. ನನಗೆ ಅವರ ನೆನಪಾಗುತ್ತದೆ. ಆದರೆ ಇಸ್ಲಾಂಗೋಸ್ಕರ ನನ್ನ ಮಕ್ಕಳನ್ನು ಒಂದು ಬಾರಿ ಏನು, ನೂರು ಬಾರಿಯಾದರೂ ಬಲಿಕೊಡಬಲ್ಲೆ. ಅಲ್ಲಾಹುವಿಗೋಸ್ಕರ ಮಾಡುತ್ತಿದ್ದೇನೆ. ಈ ಪ್ರಪಂಚದಲ್ಲಿ ಮತ್ತೆ ನೋಡುವುದಾಗದಿದ್ದರೆ ಸ್ವರ್ಗದಲ್ಲಿ ಅವರನ್ನು ಖಂಡಿತ ಸೇರುತ್ತೇನೆ’! ಕೈಯಲ್ಲಿದ್ದ ಕಲಾಷ್ನಿಕೋವ್ ಬಂದೂಕನ್ನು ಸವರುತ್ತ ಅಬು ಸರಾಗವಾಗಿ ಮಾತನಾಡುತ್ತಲೇ ಇದ್ದ!ಇದು ಒಬ್ಬ ಅಬುವಿನ ಮನಸ್ಥಿತಿ ಮಾತ್ರವಲ್ಲ. ಇಂದು ಐಸಿಸ್‍ನ ಪ್ರತಿ ಜಿಹಾದಿಯ ತಲೆಯೊಳಗೂ ಸುನ್ನಿ ಮುಸ್ಲಿಂ ನೇತೃತ್ವದ ಒಂದು ಪ್ರತ್ಯೇಕ ಇಸ್ಲಾಂ ರಾಷ್ಟ್ರ ನಿರ್ಮಾಣದ ಭೂತ ಹೊಕ್ಕಿದೆ.

ಈ ಭೂತದ ಬಸಿರನ್ನು ಹೊತ್ತು ಹೆತ್ತವನು ಸುನ್ನಿ ಪಂಗಡದ ಅಬು-ಮುಸಬ್-ಅಲ್-ಜರ್ಕಾವಿ!

ನಮ್ಮ ದೇಶದ ಬಲಭುಜಕ್ಕಿರುವ ಪಾಕಿಸ್ತಾನದಿಂದಾಚೆಗೆ ಹರಡಿಕೊಂಡಿರುವ ಅಫ್‍ಘಾನಿಸ್ತಾನ,ಇರಾನ್,ಇರಾಕ್,ಸಿರಿಯ ಹಾಗೂ ಟರ್ಕಿಗಳಲ್ಲಿ ನಡೆಯುತ್ತ ಬಂದಿರುವ ಶಿಯಾ-ಸುನ್ನಿ ಕಾಳಗಕ್ಕೆ 1400 ವರ್ಷಗಳ ಇತಿಹಾಸವಿದೆ. ಸಿರಿಯಾ ಹಾಗೂ ಟರ್ಕಿಗಳಲ್ಲಿ ಶೇಕಡ 75ರಷ್ಟಿರುವ ಸುನ್ನಿಗಳು ಇರಾಕ್ ಹಾಗೂ ಇರಾನ್‍ನಲ್ಲಿರುವುದು ಕ್ರಮವಾಗಿ ಶೇಕಡ 20 ಮತ್ತು 9ರಷ್ಟು ಮಾತ್ರ. ಇವೆರಡರ ಜೊತೆ ಕುರ್ದ್ ಎಂಬ ಅಲ್ಪಸಂಖ್ಯಾತರ ವರ್ಗವೂ ವಾಸವಾಗಿದೆ. ಆದರೆ ಅದೆಂದೂ ಬರಿದೇ ಇಸ್ಲಾಂ ಧರ್ಮಕ್ಕೆ ಮೀಸಲಾಗಿಲ್ಲ. ಅವರಲ್ಲಿ ಯಹೂದಿಗಳು, ಜೊರಾಷ್ಟ್ರಿಯನ್ನರು ಮುಂತಾದವರಿದ್ದಾರೆ. ಶಿಯಾ-ಸುನ್ನಿ ಕಾಳಗಕ್ಕೆ ಸಾಕ್ಷಿಯಾಗುವುದು ಹಾಗೂ ಬಲಿಯಾಗುವುದು ಬಿಟ್ಟು ಅವರಿಗೆ ಗತ್ಯಂತರವಿಲ್ಲ.

2003ರಲ್ಲಿ ಅಮೆರಿಕ ಇರಾಕ್‍ನ ಮೇಲೆ ದಾಳಿ ನಡೆಸಿ ಸುನ್ನಿ ಪಂಗಡದ ಸದ್ದಾಂನನ್ನು ಪದಚ್ಯುತಗೊಳಿಸಿದಾಗ ಜೋರ್ಡನ್‍ನಿಂದ ಬಂದು ಬಾಗ್ದಾದ್‍ ಸೇರಿಕೊಂಡವನೇ ಈ ಜರ್ಕಾವಿ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಎಂಬ ಸಂಘಟನೆಯಡಿ ಜನರನ್ನು ಸೇರಿಸಿ ಹಲವಾರು ಆತ್ಮಹತ್ಯಾ ಹಾಗೂ ಕಾರ್ ಬಾಂಬ್ ದಾಳಿಗಳನ್ನು ಆಯೋಜಿಸಿದ. ಡಜನ್‍ಗಟ್ಟಲೆ ಶಿಯಾಗಳನ್ನು ಕೊಂದು ಅವರ ಮಸೀದಿಗಳನ್ನು ಕೆಡವಿದ. ಅಮೆರಿಕದವರನ್ನು ಅಪಹರಿಸಿ ಅವರ ತಲೆ ಕಡಿದು ಅದರ ವೀಡಿಯೋ ಮಾಡಿ ಕುಖ್ಯಾತನಾದ. ಅಷ್ಟು ಹೊತ್ತಿಗಾಗಲೇ ಅಮೆರಿಕದ ಅವಳಿ ಕಟ್ಟಡಗಳನ್ನು ಕೆಡವಿ ಜಿಹಾದಿಗಳ ಹೀರೋ ಆಗಿದ್ದ ಅಲ್-ಕೈದಾ ನಾಯಕ ಒಸಾಮಾ ಅವನ ಶೌರ್ಯ ಕಂಡು ಅವನತ್ತ ಸ್ನೇಹ ಹಸ್ತ ಚಾಚಿದರೂ ಕ್ಯಾರೇ ಅನ್ನಲಿಲ್ಲ ಜರ್ಕಾವಿ. ಇರಾಕ್‍ನಲ್ಲಿದ್ದ ಸಂಯುಕ್ತ ರಾಷ್ಟ್ರಗಳ ಕಛೇರಿಯನ್ನು ಉಡಾಯಿಸಿ ಅದರ ಮುಖ್ಯಸ್ಥ ‘ಮೆಲ್ಲೋ’ರನ್ನು ಕೊಂದಾಗ ಮಾತ್ರ ಅಮೆರಿಕ ಕೆರಳಿ ಕೆಂಡವಾಯಿತು. 2006ರ ಜೂನ್ 7ರಂದು ಅವನಿದ್ದ ಡೇರೆಯ ಮೇಲೆ ಬಾಂಬ್‍ಗಳ ಮಳೆಗರೆಯಿತು. ಅಲ್ಲೇ ಹೆಣವಾಗಿ ಹೋದ ಜರ್ಕಾವಿ. ನಂತರ  ಸುಮಾರು ಮೂರು ವರ್ಷಗಳ ಕಾಲ ಅವನ ಸಂಘಟನೆ ಮಂಕಾಗಿ ಹೋಯಿತು. ಇನ್ನೇನು ಸುನ್ನಿಗಳ ಅಟ್ಟಹಾಸಕ್ಕೆ ತೆರೆ ಬಿತ್ತು ಎಂದುಕೊಳುತ್ತಿರುವಾಗಲೇ..

2010ರಲ್ಲಿ ಅಬು-ಬಕರ್-ಅಲ್-ಬಾಗ್ದಾದಿ ಎಂಬ ಮಹಾ ಕ್ರೂರಿ ಈ ಸಂಘಟನೆಯ ಚುಕ್ಕಾಣಿ ಹಿಡಿದ!

ಆಗಿನ್ನೂ ಅಮೆರಿಕದ ಪಡೆಗಳು ಇರಾಕ್‍ನಲ್ಲೇ ಇದ್ದವಾದರೂ ನೆರೆಯ ಸಿರಿಯಾದಲ್ಲಿ ಅಧ್ಯಕ್ಷ ಬಶರ್-ಅಲ್-ಅಸ್ಸದ್‍ನ ಅರಾಜಕತೆ ಮೇರೆ ಮೀರಿತ್ತು. ಶಿಯಾ ಪಂಗಡದ ಅವನ ವಿರುದ್ಧದ ದಂಗೆ ಉಗ್ರ ಸ್ವರೂಪ ಪಡೆಯತೊಡಗಿತ್ತು. ಅದೇ ತಕ್ಕ ಸಮಯವೆಂದು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ ಬಾಗ್ದಾದಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ನ ಜೊತೆಗೆ ಸಿರಿಯಾವನ್ನೂ ಸೇರಿಸಿ ಐಎಸ್‍ಐಎಸ್‍ ಎಂಬ ಹೆಸರನ್ನಿಟ್ಟ. ಹೆಸರನ್ನಷ್ಟೇ ಬದಲಾಯಿಸಲಿಲ್ಲ ಬಾಗ್ದಾದಿ. ಜಿಹಾದಿಗಳ ಯುದ್ಧನೀತಿಯನ್ನೂ ತಿರುಚಿದ. ಬರೀ ಬಾಂಬ್ ಹಾಗೂ ಆತ್ಮಹತ್ಯಾ ದಾಳಿಗೆ ಸೀಮಿತವಾಗಿದ್ದವರಿಗೆ ಕತ್ತಿ ಹಿರಿದು ಕಾಲಾಳುಗಳಂತೆ ಕಾದಾಡುವುದನ್ನು ಕಲಿಸಿದ. ಅವರಲ್ಲೊಂದು ಪೈಶಾಚಿಕತೆ ಬಿತ್ತಿದ. ಅಂದಿನಿಂದ ಶುರುವಾಯಿತು ನೋಡಿ ಶಿಯಾಗಳ ಮಾರಣಹೋಮ! ಬಾಗ್ದಾದಿಯ ಕನಸೇನು ಗೊತ್ತೇ? ಸುನ್ನಿ ಆಡಳಿತದ ಇಸ್ಲಾಂ ರಾಷ್ಟ್ರ ಸ್ಥಾಪಿಸುವುದು! ಅದಕ್ಕಾಗಿ ಒಂದೆಡೆ ಸಿರಿಯಾದಲ್ಲಿ ರಕ್ತದೋಕುಳಿಯಾಡುತ್ತಾ ಮತ್ತೊಂದೆಡೆ ಇರಾಕ್‍ಗೂ ದಾಳಿಯಿಟ್ಟಿದ್ದಾನೆ. ಅವನು ತಯಾರು ಮಾಡಿರುವ ಕಟುಕರ ಪಡೆ ಹೇಗಿರಬಹುದು ಹೇಳಿ? ಉಹೂಂ, ನೀವು ಊಹಿಸಲಾರಿರಿ. ತಾವು ಕಡಿದ ರುಂಡಗಳನ್ನು ರಾಶಿ ಹಾಕಿ ಅವುಗಳನ್ನು ಟ್ರೋಫಿಗಳು ಎನ್ನುತ್ತ ಅದರ ಜೊತೆ ಫೋಟೋ ತೆಗೆಸಿಕೊಂಡು ಅಂತರ್ಜಾಲದ ತಾಣಗಳಲ್ಲಿ ಪ್ರದರ್ಶಿಸುತ್ತಾರೆ! ನಾವು ಬ್ಯಾಗ್‍ನಲ್ಲಿ ಬಟ್ಟೆಗಳನ್ನು ತುಂಬುವಷ್ಟೇ ಸಲೀಸಾಗಿ ರುಂಡಗಳನ್ನು ತುಂಬಿ ರಕ್ತಸಿಕ್ತ ಕೈಗಳಲ್ಲಿ ಅದನ್ನು ಹಿಡಿದು ನಿಂತು ಕೆಮರಾಗೆ ಪೋಸ್ ಕೊಡುತ್ತಾರೆ. ಕೇಳಿಯೇ ನಮಗೆ ವಾಕರಿಕೆ ಬರುತ್ತದಲ್ಲವೇ? ಕೈಯ್ಯಾರೆ ಮಾಡಿದ ಅವರು ಕೇಕೆ ಹಾಕುತ್ತಾರೆ! ಬಾಗ್ದಾದಿಯ ಇಂಥ ಕ್ರೌರ್ಯ, ನಿರ್ದಯತೆ ಹಾಗೂ ಸಂಘಟನಾ ಚಾತುರ್ಯಗಳಿಂದಾಗಿಯೇ ಟೈಮ್ಸ್ ನಿಯತಕಾಲಿಕೆ ಅವನನ್ನು ಪ್ರಸ್ತುತ ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಮನುಷ್ಯ ಎಂದು ಕರೆದಿದೆ. ಅಷ್ಟೇ ಅಲ್ಲ, ಜಿಹಾದಿ ವಲಯದಲ್ಲಿ ಅವನು ಗುರುತಿಸಲ್ಪಡುವುದು ಹೇಗೆ ಹೇಳಿ? ಹೊಸ ಬಿನ್ ಲಾಡೆನ್ ಎಂದು! ಒಸಾಮಾನನ್ನು ಅಮೆರಿಕ ಅಟ್ಟಾಡಿಸಿ ಕೊಂದಮೇಲೆ ಅಲ್-ಕೈದಾ ನಾಯಕನಾಗಿರುವ ಅಯ್‍ಮಾನ್-ಅಲ್-ಜವಾಹಿರಿ ಬಾಗ್ದಾದಿಯ ಮುಂದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾನೆ. ಅವನ ಗುಂಪಿನವರೂ ಬಾಗ್ದಾದಿಯ ಮೃಗೀಯತೆಗೆ ತಲೆಬಾಗಿದ್ದಾರೆ.

ಬಾಗ್ದಾದಿಯ ಮತ್ತೊಂದು ತಂತ್ರ ಜಿಹಾದಿನ ಜಾಗತೀಕರಣ. ನೀವು ನಂಬಲಿಕ್ಕಿಲ್ಲ. 13 ಸಾವಿರಕ್ಕೂ ಹೆಚ್ಚಿನ ಸಂಖ್ಯೆ‍ಯಲ್ಲಿರುವ ಜಿಹಾದಿಗಳ ಪೈಕಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನವರು ವಿದೇಶೀಯರು. ಸೋಫನ್ ಗ್ರೂಪ್ ಎಂಬ ಇಂಟೆಲಿಜೆನ್ಸ್ ಸಂಸ್ಥೆಯ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಷ್ಯಾ ಒಂದರಿಂದಲೇ ಸುಮಾರು 800 ಜನ ಐಸಿಸ್ ಸೇರಿದ್ದಾರೆ. ಫ್ರಾನ್ಸ್ ನಿಂದ 700, ಬ್ರಿಟನ್‍ನಿಂದ 400, ಆಸ್ಟ್ರೇಲಿಯಾ ಹಾಗೂ ಬೆಲ್ಜಿಯಂಗಳಿಂದ ತಲಾ 250 ಮತ್ತು ಇನ್ನೂ ಹಲವು ಮುಸ್ಲಿಮೇತರ ರಾಷ್ಟ್ರಗಳಿಂದ ಐಸಿಸ್ ಸೇರಿರುವವರ ಒಟ್ಟು ಸಂಖ್ಯೆ ಮೂರುಸಾವಿರವನ್ನು ಸಲೀಸಾಗಿ ದಾಟುತ್ತದೆ! ಹಾಗಂತ ಎಲ್ಲರೂ ಹುಟ್ಟಾ ಮುಸಲ್ಮಾನರೇನಲ್ಲ. ಇದಕ್ಕೋಸ್ಕರ ಮತಾಂತರಗೊಂಡವರೂ ಇದ್ದಾರೆ! ಸಾವಿರಗಟ್ಟಲೆ ಜನ ಹೀಗೆ ತಮ್ಮ ದೇಶ, ಧರ್ಮ, ಸಂಬಂಧಗಳನ್ನು ಧೂಳು ಕೊಡವಿದಷ್ಟೇ ಸಲೀಸಾಗಿ ಕೊಡವಿಕೊಂಡು ಬರುತ್ತಿರಬೇಕಾದರೆ ಬಾಗ್ದಾದಿ ಹುಟ್ಟು ಹಾಕಿರುವ ಸಮೂಹ ಸನ್ನಿ ಯಾವ ಮಟ್ಟದ್ದಿರಬೇಕು?

ಇವರು ನಡೆಸುತ್ತಿರುವ ಇರಾಕ್‍ನ ಮೇಲಿನ ದಾಳಿ ಎಷ್ಟು ವ್ಯವಸ್ಥಿತವಾಗಿದೆ ಎಂಬುದಕ್ಕೆ ಮೊಸುಲ್ ಪಟ್ಟಣದ ಉದಾಹರಣೆ ನೋಡಿ. ಜಿಹಾದಿಗಳು ಮೊಸುಲ್‍ಗೆ ಕಾಲಿಟ್ಟ ತಕ್ಷಣ ಐದು ಲಕ್ಷದಷ್ಟು ಶಿಯಾಗಳು ಅಲ್ಲಿಂದ ಓಡಿದರು. ಕೈಗೆ ಸಿಕ್ಕವರನ್ನೆಲ್ಲಾ ಟ್ರಕ್ಕುಗಳಿಗೆ ತುಂಬಿಸಿಕೊಂಡು ಬಂದು ಸಾಮೂಹಿಕವಾಗಿ ಗುಂಡಿಟ್ಟು ಕೊಂದು ಆ ಚಿತ್ರಗಳನ್ನು ಅಂತರ್ಜಾಲದಲ್ಲಿ ಹರಿಬಿಡಲಾಯಿತು. ನಂತರ ಮೊಸುಲ್‍ನ ಸೆಂಟ್ರಲ್ ಬ್ಯಾಂಕ್‍ಗೆ ಲಗ್ಗೆಯಿಟ್ಟ ಜಿಹಾದಿಗಳು ಸುಮಾರು 425 ಮಿಲಿಯನ್ ಅಮೆರಿಕನ್ ಡಾಲರ್‍ಗಳನ್ನು ಹೊತ್ತೊಯ್ದರು. ಈಗ ಅವರ ಬಳಿಯಿರುವ ದುಡ್ಡೆಷ್ಟು ಗೊತ್ತೇ? ಮಾರ್ಶಲ್ ಐಲ್ಯಾಂಡ್‍ನಂಥ ಸಣ್ಣ ದೇಶದ ಒಟ್ಟು ಸಂಪನ್ಮೂಲಕ್ಕಿಂತಲೂ ಹೆಚ್ಚು! 425 ಮಿಲಿಯನ್ ಡಾಲರ್‍ಗಳನ್ನು ಅವರು 60 ಸಾವಿರ ಜಿಹಾದಿಗಳಿಗೆ ಪ್ರತಿ ತಿಂಗಳು ತಲಾ 6೦೦ ಡಾಲರ್‍ನಂತೆ  ಕೊಟ್ಟು ಒಂದು ವರ್ಷ ಸಾಕಬಲ್ಲರು! ಒಂದೆಡೆ ಪಟ್ಟಣಗಳನ್ನು ದೋಚುತ್ತಾ ಮತ್ತೊಂದೆಡೆ ತಮ್ಮವರನ್ನೇ ಅಮಾನವೀಯವಾಗಿ ಸಾಯಿಸುತ್ತಾ ಸಾಗಿದೆ ಜಿಹಾದಿಗಳ ಮೆರವಣಿಗೆ!ಇಷ್ಟು ವರ್ಷ ಸ್ವಾರ್ಥದ ಮಧ್ಯಸ್ಥಿಕೆ ಮಾಡಿ ಈಗ ಪರಿಸ್ಥಿತಿ ಕೈಮೀರಿರುವುದರಿಂದ ಅಮೆರಿಕ ಉಭ-ಶುಭ ಎನ್ನುತ್ತಿಲ್ಲ. ದೊಡ್ಡಣ್ಣನೇ ಸುಮ್ಮನಿರುವಾಗ ತಮಗೇಕೆ ಇಲ್ಲದ ಉಸಾಬರಿ ಎಂದು ಉಳಿದವರೂ ತುಟಿ ಹೊಲಿದುಕೊಂಡಿದ್ದಾರೆ. ಹೀಗೆ ಸುಮ್ಮನಿರಲು ಕಾರಣವೂ ಇದೆ. ಇಂದು ಹಸಿದ ತೋಳಗಳಂತೆ ಶಿಯಾಗಳ ಮೇಲೆರಗಿರುವ ಐಸಿಸ್‍ ನಾಳೆ ಬೇಟೆಯಾಡಲು ಬರುವುದು ಮುಸ್ಲಿಮೇತರ ರಾಷ್ಟ್ರಗಳನ್ನೇ. ಆದ್ದರಿಂದಲೇ ಬ್ರಿಟನ್ ಹಾಗೂ ಅಮೆರಿಕದ ಇಂಟಲಿಜೆನ್ಸ್ ಸಂಸ್ಥೆಗಳು ತಮ್ಮ ದೇಶದಿಂದ ಹೋಗಿ ಜಿಹಾದ್ ಸೇರಿರುವವರ ಬಯೋಡೇಟಾಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಿವೆ. ಹಾಗೇ ತಮ್ಮ ಕೋಟೆ ಬಾಗಿಲುಗಳನ್ನೂ ಭದ್ರಪಡಿಸಿಕೊಳ್ಳುತ್ತಿವೆ. ಇನ್ನು ನಮ್ಮ ದೇಶ. ಅರ್ಧರಾತ್ರಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರಿಗೆ ಗುಂಡು ತಗುಲಿದರೆ ಹುಯಿಲೆಬ್ಬಿಸುವ ಮುಸ್ಲಿಂ ಪರ ಸಂಘಟನೆಗಳು ಈಗ ಬುರ್ಖಾ ಹೊದ್ದು ಕುಳಿತಿವೆ. ಮುಲ್ಲಾಗಳೆಲ್ಲ ‘ಮ್ಯೂಟ್’ ಆಗಿಬಿಟ್ಟಿದ್ದಾರೆ. ಸೆಕ್ಯುಲರಿಸಂ ಹೆಸರಿನಲ್ಲಿ ಮಸೀದಿಗಳಿಗೆ ಹೋಗಿ ಟೋಪಿ ಹಾಕಿಸಿಕೊಂಡು ಬಂದಿರುವ ರಾಜಕಾರಣಿಗಳದ್ದಂತೂ ಚಕಾರವೇ ಇಲ್ಲ.

ಹೋಗಲಿ, ಜಿಹಾದಿಗಳು ಅಲ್ಲಿ ಬಡಿದಾಡಿಕೊಂಡರೆ ನಮಗೇನಂತೆ ಎಂದು ಸುಮ್ಮನಿರುವುದು ಸಾಧ್ಯವಾ? ಇಲ್ಲವೇ ಇಲ್ಲ. ಇರಾಕನ್ನೇ ನೆಪವಾಗಿಟ್ಟುಕೊಂಡು ಪಾಕಿಸ್ತಾನದ ಅಲ್-ಕೈದಾ ಮುಖಂಡ ಮೌಲಾನಾ ಆಸಿಂ ಉಮರ್ ಕಾಶ್ಮೀರದ ಹುಣ್ಣನ್ನು ಮತ್ತೆ ಕೆರೆದಿದ್ದಾನೆ. ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರೆಲ್ಲ ಒಟ್ಟಾಗಿ ಕಾಶ್ಮೀರದ ವಿಮೋಚನೆಗೆ ಹೋರಾಡಲು ಸ್ಫೂರ್ತಿಯಾಗಲಿ ಎಂದು ಒಂದು ವೀಡಿಯೋ ಕೂಡ ತಯಾರಿಸಿದ್ದಾನೆ! ಒಂದೋ ನೀನಿರಬೇಕು ಇಲ್ಲಾ ನಾನು ಎಂಬ ಧೋರಣೆಯ ಪಾಕಿಸ್ತಾನ ಒಂದೆಡೆ. ನೀನು ಒಂದು ಹೆಜ್ಜೆಯಿಡು ನಾನು ಹತ್ತು ಹೆಜ್ಜೆಯಿಟ್ಟು ತೋರಿಸುತ್ತೇನೆ ಎಂದು ತೊಡೆ ತಟ್ಟಿ ನಿಂತಿರುವ ಚೀನಾ ಮತ್ತೊಂದೆಡೆ. ಇಗೋ ನೋಡು, ಜಾಗತೀಕರಣಗೊಂಡು ಹೊಸ ರೂಪದಲ್ಲಿ ಬಂದಿದ್ದೇನೆ ಎನ್ನುತ್ತಿರುವ ಜಿಹಾದ್ ಮಗದೊಂದೆಡೆ.

ಇಂದಿನ ಪರಿಸ್ಥಿತಿ ಎಂದಿಗಿಂತಲೂ ತುಸು ಹೆಚ್ಚೇ ಗಂಭೀರವಾಗಿದೆ ಎನಿಸುತ್ತಿಲ್ಲವೇ?

No comments:

Post a Comment