Sunday 27 July 2014

ಸ್ಮರಣೆಯೊಂದೇ ಸಾಲದು, ಹೊಣೆ ಅರಿಯುವ ಸಮಯವಿದು

“ಪ್ರೀತಿಯ ಅಪ್ಪ, ಅಮ್ಮ ಹಾಗೂ ಅಜ್ಜಿ,
ಈ ಪತ್ರ ನಿಮ್ಮ ಕೈ ಸೇರುವ ಹೊತ್ತಿಗೆ ನಾನು ನಿಮ್ಮನ್ನು ಸ್ವರ್ಗದಿಂದಲೇ ನೋಡುತ್ತಿರುತ್ತೇನೆ. ಏನೇನೂ ಖೇದವಿಲ್ಲ. ಮತ್ತೆ ಮನುಷ್ಯನಾಗಿ ಹುಟ್ಟಿದರೆ ಭಾರತೀಯ ಸೇನೆಯನ್ನು ಸೇರಿ ದೇಶಕ್ಕೋಸ್ಕರ ಹೋರಾಡುತ್ತೇನೆ. ಸಾಧ್ಯವಾದರೆ ಒಂದು ಸಲ ಬಂದು ನಿಮ್ಮ ನಾಳೆಗಳಿಗೋಸ್ಕರ ನಾವು ಹೋರಾಡಿದ ಜಾಗವೆಂಥದು ಎಂಬುದನ್ನು ನೋಡಿ. ನನ್ನ ದೇಹದ ಯಾವ್ಯಾವ ಅಂಗಗಳನ್ನು ದಾನ ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡಿಬಿಡಿ. ಅನಾಥಾಶ್ರಮಕ್ಕೆ ದುಡ್ದು ಕೊಡುವುದನ್ನು ಹಾಗೂ 'ರುಕ್ಸಾನಾ'ಳಿಗೆ ತಿಂಗಳಿಗೆ ಐವತ್ತು ರೂಪಾಯಿಗಳನ್ನು ಕಳಿಸುವುದನ್ನು ಮಾತ್ರ ಮರೆಯಬೇಡಿ. ನನ್ನಿಂದ ಯಾವುದೇ ತಪ್ಪಾಗಿದ್ದರೂ ಕ್ಷಮಿಸಿ. ನಾನಿಲ್ಲವೆಂದು ದುಃಖಿಸುವ ಬದಲು ಹೆಮ್ಮೆ ಪಡಿ. ಸರಿ, ನಾನೀಗ ಹೊರಟೆ, ಎಲ್ಲರಿಗೂ ಒಳ್ಳೆಯದಾಗಲಿ. ಭರಪೂರ ಅನುಭವಿಸಿ ನೀವೆಲ್ಲರೂ ಈ ಬದುಕನ್ನು.
ನಿಮ್ಮ ರಾಬಿನ್”

ಮೇಲಿನ ಪತ್ರವನ್ನು ಓದುತ್ತಿದ್ದಂತೆಯೇ ಥಟ್ಟನೆ ನಿಮಗೆ ಇದು ಯೋಧನೊಬ್ಬ ಬರೆದದ್ದು ಎನಿಸುತ್ತದಲ್ಲವೇ? ಹೌದು. ಕಾರ್ಗಿಲ್ ಯುದ್ಧದಲ್ಲಿ ತನ್ನ ತುಕಡಿಯನ್ನು ಮುನ್ನಡೆಸುತ್ತಿದ್ದ 22ರ ಹರೆಯದ ಕ್ಯಾಪ್ಟನ್ ವಿಜಯಂತ್ ಥಾಪರ್ ಯುದ್ಧಕ್ಕೆ ಹೊರಡುವ ಕೊನೆ ಘಳಿಗೆಯಲ್ಲಿ ತನ್ನ ಡೇರೆಯಿಂದ ಬರೆದದ್ದು. ತಾನು ಹಿಂತಿರುಗದಿದ್ದರೆ ಮನೆಯವರಿಗೆ ಇದನ್ನು ತಲುಪಿಸಿ ಎಂದು ಇಟ್ಟು ಹೋದದ್ದು. ಮನೆಯವರ ಪಾಲಿಗೆ ಪ್ರೀತಿಯ 'ರಾಬಿನ್' ಆಗಿದ್ದ ವಿಜಯಂತ್ ಹಿಂತಿರುಗಿ ಬರಲಿಲ್ಲ ಎಂದು ಬೇರೆ ಹೇಳಬೇಕಿಲ್ಲ ತಾನೆ? 1998ರ ಡಿಸೆಂಬರ್‍ನಲ್ಲಿ ಡೆಹರಾಡೂನ್‍ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ ವಿಜಯಂತ್ ಮೊದಲು ಕಳುಹಿಸಲ್ಪಟ್ಟಿದ್ದೇ ಉಗ್ರರ ಬೀಡಾಗಿದ್ದ, ಕಾಶ್ಮೀರದ ಕುಪ್ವಾರ ಎಂಬ ಜಾಗಕ್ಕೆ. ಜೀವವನ್ನೂ ಲೆಕ್ಕಿಸದೆ ಕಾದಾಡಿ ಉಗ್ರರನ್ನು ಹತ್ತಿಕ್ಕಿದ ವಿಜಯಂತ್‍ಗೆ ಅಲ್ಲಿ ಸಿಕ್ಕಿದವಳು ಆರು ವರ್ಷದ ಪುಟಾಣಿ ರುಕ್ಸಾನಾ. ಕಾದಾಟವೊಂದರಲ್ಲಿ ಕಣ್ಣೆದುರೇ ತನ್ನ ಅಪ್ಪ ಹತನಾಗಿದ್ದನ್ನು ನೋಡಿ ಘಾಸಿಗೊಂಡಿದ್ದ ಆ ಮಗುವನ್ನು ಅಕ್ಕರೆಯಿಂದ ಜೋಪಾನ ಮಾಡಿದ ವಿಜಯಂತ್, ತಾನು ಅಲ್ಲಿಂದ ಹಿಂದಿರುಗಿದ ಮೇಲೂ ಆ ಮಗುವಿಗೆ ಪ್ರತಿ ತಿಂಗಳೂ 50 ರೂಪಾಯಿಗಳನ್ನು ಕಳಿಸುತ್ತಿದ್ದ. ಸಾಯುವ ಮುನ್ನ ಬರೆದ ಪತ್ರದಲ್ಲಿ ತನ್ನ ತಂದೆ-ತಾಯಿಯರಿಗೂ ಅದನ್ನೇ ನೆನಪಿಸಿದ್ದ! ಆರು ವರ್ಷದ ಕಂದಮ್ಮನನ್ನು ಶಾಲೆಯಲ್ಲಿ ಅತ್ಯಾಚಾರ ಮಾಡುವವರ ಮುಂದೆ ವಿಜಯಂತ್ ಎಷ್ಟು ಎತ್ತರಕ್ಕೆ ಕಾಣುತ್ತಾನಲ್ಲವೇ? ಬಿಡಿ. ಮುಖ್ಯ ವಿಷಯಕ್ಕೆ ಬರೋಣ.



1999ರ ಜೂನ್ ತಿಂಗಳ ಮೊದಲನೇ ವಾರ. ಜಮ್ಮು-ಕಾಶ್ಮೀರದಲ್ಲಿರುವ ಶ್ರೀನಗರದಿಂದ 205ಕಿಮೀ ದೂರವಿರುವ ಕಾರ್ಗಿಲ್ ಎಂಬ ಪಟ್ಟಣದ ನೆತ್ತಿಯ ಬೆಟ್ಟಗಳನ್ನೆಲ್ಲ, ಹೇನು-ಸೀರುಗಳಂತೆ ಕಚ್ಚಿ ಹಿಡಿದಿದ್ದರು ಪಾಕಿಸ್ತಾನದ ಸೈನಿಕರು. ಅವರನ್ನು ಹೆಕ್ಕಿ ತೆಗೆದು, ಅವುಗಳನ್ನು ಮತ್ತೆ ಕೈವಶಮಾಡಿಕೊಳ್ಳಲು ಕಟಿಬದ್ಧವಾಗಿ ನಿಂತಿತ್ತು ಭಾರತೀಯ ಸೇನೆ. ಅಂಥ ಅತಿ ದುರ್ಗಮವಾದ ಬೆಟ್ಟಗಳಲ್ಲೊಂದು, ಟೊಲೋಲಿಂಗ್. ಅದನ್ನು ವಶಪಡಿಸಿಕೊಳ್ಳಲು ಅಲ್ಲಿಯವರೆಗೆ ನಡೆಸಿದ್ದ ಎಲ್ಲ ಯತ್ನಗಳೂ ವಿಫಲವಾಗಿದ್ದವು. ತನ್ನ ಕಮಾಂಡರ್ ಮೇಜರ್ ಪದ್ಮಪಾಣಿ ಆಚಾರ್ಯರೊಂದಿಗೆ ಅಲ್ಲಿಗೆ ಧಾವಿಸಿದ ವಿಜಯಂತ್, ತನ್ನ ತುಕಡಿಯೊಂದಿಗೆ ಸೇರಿ, ಪಾಕ್ ಸೈನಿಕರನ್ನು ಹೊಸಕಿಹಾಕಿದ. ಕಾರ್ಗಿಲ್ ಯುದ್ಧದ ಒಂದು ಮುಖ್ಯ ತಿರುವಾಗಿದ್ದೇ ವಿಜಯಂತ್ ದೊರಕಿಸಿಕೊಟ್ಟ ಟೊಲೋಲಿಂಗ್ ಗೆಲುವು! ಈ ಯಶಸ್ಸಿನ ಗುಂಗಿನಲ್ಲಿದ್ದ ವಿಜಯಂತ್ನ ತಂಡಕ್ಕೆ ಸವಾಲಾಗಿದ್ದದ್ದು ನೋಲ್ ಎಂಬ ಮತ್ತೊಂದು ಬೆಟ್ಟ. ಟೊಲೋಲಿಂಗ್ ಮತ್ತು ಟೈಗರ್ ಹಿಲ್‍ಗಳ ಮಧ್ಯೆ ಇರುವ ಇದರ ಎತ್ತರ 15೦೦೦ ಅಡಿ. ಇಲ್ಲಿಯ ಉಷ್ಣಾಂಶ -15 ಡಿಗ್ರಿ! ದುರದೃಷ್ಟವೆಂದರೆ ಕೆಳಗಿನಿಂದ ಹತ್ತುವವರಿಗೆ ರಕ್ಷಣೆಯಾಗಬಲ್ಲ ಯಾವ ನೈಸರ್ಗಿಕ ತಡೆಗೋಡೆಯೂ ಈ ಬೆಟ್ಟದಲ್ಲಿಲ್ಲ. ಆದ್ದರಿಂದಲೇ, ಇದನ್ನು ಹತ್ತಿ ಹೋಗಿ, ಸೂಕ್ತ ತಯಾರಿಯೊಂದಿಗೆ ಆಯಕಟ್ಟಿನ ಜಾಗಗಳಲ್ಲಿ ಅಡಗಿ ಕುಳಿತಿದ್ದ ಪಾಕ್ ಸೈನಿಕರನ್ನು ಸದೆಬಡಿಯುವ ಸಾಧ್ಯತೆ ಬಹಳ ಕಡಿಮೆ ಇತ್ತು. ಹಾಗೆಂದು ಶತ್ರುವನ್ನು ಸಹಿಸಿಕೊಂಡು ಕೈಕಟ್ಟಿ ಕುಳಿತುಕೊಳ್ಳುವ ಹಾಗೂ ಇರಲಿಲ್ಲ.

ಅಂದು 1999ರ ಜೂನ್ ತಿಂಗಳ 28ನೇ ತಾರೀಖು. ಅಂದಿಗೆ ವಿಜಯಂತ್ ಸೇನೆಯನ್ನು ಸೇರಿ ಆರು ತಿಂಗಳಾಗಿತ್ತಷ್ಟೆ. ಅಂದು ರಾತ್ರಿ  ಬೆಟ್ಟವನ್ನು ಹತ್ತಿಯೇ ತೀರುವುದೆಂದು ನಿರ್ಧಾರವಾಯಿತು. ಒಮ್ಮೆ ಹತ್ತತೊಡಗಿದರೆ ಹಿಂತಿರುಗುವುದು ಸುಲಭವಲ್ಲವೆಂಬುದು ಎಲ್ಲರಿಗೂ ಗೊತ್ತಿತ್ತು. ಆದ್ದರಿಂದಲೇ ಹೊರಡುವ ಮುನ್ನ ಪತ್ರ ಬರೆದಿಟ್ಟ ವಿಜಯಂತ್. ಬೆಟ್ಟ ಹತ್ತುತ್ತಿದ್ದಂತೆ ಶುರುವಾಯಿತು ನೋಡಿ ಗುಂಡಿನ ದಾಳಿ. ಇಡೀ ತುಕಡಿ ಚೆಲ್ಲಾಪಿಲ್ಲಿಯಾಯಿತು. ಹಂಚಿ ಹೋದ ಸೈನಿಕರು ಹೋರಾಡುತ್ತಲೇ, ಇಂಚಿಂಚೇ ಮೇಲೆ ಸಾಗಿದರು. ಕಡೆಗೊಂದು ಸಲ ಎಲ್ಲರೂ ಒಟ್ಟುಗೂಡಿದಾಗ ಆಘಾತ ಕಾದಿತ್ತು. ಮೇಜರ್ ಆಚಾರ್ಯ ಹೆಣವಾಗಿದ್ದರು! ಕುದ್ದು ಹೋದ ವಿಜಯಂತ್ ಶತ್ರುವನ್ನು ಕೊಂದೇ ತೀರುವ ಹಟಕ್ಕೆ ಬಿದ್ದ. ತೀರಾ ಸನಿಹಕ್ಕೆ ಹೋಗಿ ಕೆಚ್ಚಿನಿಂದ ಕಾದಾಟಕ್ಕೆ ನಿಂತ. ಮಾಡು ಇಲ್ಲವೇ ಮಡಿ ಎಂಬುದು ಅಕ್ಷರಶಃ ಅನಿವಾರ್ಯವಾಗಿತ್ತು. ಒಂದೂವರೆ ಘಂಟೆಗಳ ಘೋರ ಕದನದ ಕೊನೆಯಲ್ಲಿ ವಿಜಯಂತ್‍ನ ತಲೆಗೆ ಬಡಿದ ಗುಂಡುಗಳು ಅವನ ಜೀವ ತೆಗೆದರೆ, ನೋಲ್ ನಮ್ಮದಾಗಿತ್ತು! ಹೆಣವಾಗಿ ಬಂದ ವಿಜಯಂತ್‍ನನ್ನು ಕಳುಹಿಸಿಕೊಡಲು ಅವನ ಊರು ನೋಯ್ಡಾದಲ್ಲಿ ನೆರೆದಿದ್ದವರು ಒಂದು ಲಕ್ಷ ಜನ! 22ರ ಹರೆಯದ ಮೊಮ್ಮಗನ ಶೌರ್ಯ‍ಕ್ಕೆ ಪ್ರತಿಫಲವಾಗಿ ಸಿಕ್ಕ ವೀರ ಚಕ್ರವನ್ನು ಸ್ವೀಕರಿಸಿದ್ದು 82ರ ಹರೆಯದ ಅವನ ಪ್ರೀತಿಯ ಅಜ್ಜಿ. ಅವನೇನೋ ಗಟ್ಟಿಗ ಸರಿ, ಆ ಮುದುಕಿಯ ಗುಂಡಿಗೆ ಇನ್ನೆಂಥದ್ದಿರಬೇಕಲ್ಲವೇ?

ಇಂಥ ನೂರಾರು ವಿಜಯಂತ್‍‍ರನ್ನು ಬಲಿಕೊಟ್ಟು ಗೆದ್ದೆವು ಕಾರ್ಗಿಲ್ ಕದನವನ್ನು. ನಮ್ಮ ಗೆಲುವಿಗೆ ಈಗ ಸರಿಯಾಗಿ 15 ವರ್ಷಗಳಾಗುತ್ತವೆ! ಬಹಳಷ್ಟಿರಬೇಕು ನಮ್ಮಲ್ಲಿ ಅಭಿಮಾನ ಮತ್ತು ಹರ್ಷ. ಆದರೆ ವಿಜಯದ ದಿವಸ ಎಂದು ಸಂಭ್ರಮಿಸುವುದರಲ್ಲೂ ರಾಜಕೀಯ ಸಂಘರ್ಷ. ಕಾಂಗ್ರೆಸ್ ಸರ್ಕಾರ ಒಂದು ವರ್ಷವೂ ವಿಜಯ ದಿವಸವನ್ನು ಆಚರಿಸಲೇ ಇಲ್ಲ. ಅವರಿಗೇಕೋ ಅಸಹನೆ. ಇದೊಂದು ಯುದ್ಧವೇ ಅಲ್ಲ ಎಂಬ ಧೋರಣೆ. ಹಾಗಾದರೆ, ಭಾರತೀಯ ಸೇನೆ ಬಡಿದಾಡಿದ್ದು ವಾಜಪೇಯಿಯವರ ದಾಯಾದಿಗಳ ಜೊತೆಯೇ?

ಅಂದು ಬಾಲ ಮುದುರಿಕೊಂಡು ಹೋದ ಪಾಕಿಸ್ತಾನ ಮತ್ತೆ ನೇರ ಕದನಕ್ಕಿಳಿದಿಲ್ಲ. ಆದರೆ ತೆರೆಮರೆಯಲ್ಲೇ ಉಗ್ರರನ್ನು ತಯಾರು ಮಾಡಿ, ವಿಶ್ವದೆಲ್ಲೆಡೆ ಮೊಳಗುತ್ತಿರುವ ಜಿಹಾದ್‍ನ ಕೂಗಿಗೆ ವೇದಿಕೆಯಾಗಿ, ತಾನು ಎಂದಿಗೂ ಭಾರತದ ಶತ್ರುವೇ ಎಂದು ಸಾರಿ ಸಾರಿ ಹೇಳುತ್ತಿದೆ. ಕಳವಳಪಡಬೇಕಾದ್ದೇ. ಆದರೆ ಪಾಕಿಸ್ತಾನವನ್ನೂ ಮೀರಿಸುವ ಬುದ್ಧಿವಂತ, ಭಯಾನಕ ಶತ್ರು ವೊಂದಿದೆ. ಅದೇ ಚೀನಾ!
ಈಗಾಗಲೇ ನಮ್ಮನ್ನು ಸುಲಭವಾಗಿ ಸುತ್ತುವರಿಯಬಲ್ಲ ಭೂ, ವಾಯು ಹಾಗೂ ಜಲಮಾರ್ಗಗಳನ್ನು ಕಂಡುಕೊಂಡಿರುವ ಚೀನಾ ನಮ್ಮನ್ನು ಹತೋಟಿಯಲ್ಲಿಡುವ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. 2010ರ ಆಗಸ್ಟ್ 6ರಂದು ಹಿಮಾಲಯದ ಲೇಹ್‍ನಲ್ಲಿ ಸಂಭವಿಸಿದ ಮೇಘ-ಸ್ಫೋಟ ನೆನಪಿದೆಯೇ ನಿಮಗೆ? ಅತ್ಯಂತ ಕಡಿಮೆ ಮಳೆಯಾಗುವ ಆ ಪ್ರದೇಶದಲ್ಲಿ ಅವತ್ತು ಬೆಳಗಿನ ಜಾವ 1.30ಯಿಂದ 2.30ರವರೆಗೂ ಸುಮಾರು 250ಮಿಮೀನಷ್ಟು ಧಾರಾಕಾರ ಮಳೆ ಸುರಿದು ಪ್ರವಾಹ ಉಕ್ಕಿತು. 250ಕ್ಕೂ ಹೆಚ್ಚು ಜನ ಕೊಚ್ಚಿಕೊಂಡು ಹೋದರು. ಅದರ ಹತ್ತಿರವೇ ಇದ್ದ ವಾಯುನೆಲೆಯಲ್ಲಿ ಆಗಿದ್ದು ಬರೀ 12.8ಮಿಮೀನಷ್ಟು ಸಾಧಾರಣ ಮಳೆ. ಹಾಗಾದರೆ ಲೇಹ್‍ನಲ್ಲಿ ಮಾತ್ರ ದಿಢೀರನೆ ಅಷ್ಟೊಂದು ಮಳೆ ಏಕಾಯಿತು ಎಂದು ಪತ್ತೆಮಾಡಲು ಹೊರಟ ನಮ್ಮವರಿಗೆ ಗೋಚರಿಸಿದ ಸಾಧ್ಯತೆ - ಇದು ಚೀನಾ ಸೃಷ್ಟಿಸಿದ ಕೃತಕ ಮೇಘ-ಸ್ಫೋಟದಿಂದ ಎಂಬುದು! ಆ ಪ್ರದೇಶಗಳಲ್ಲಿ, ಹವಾಮಾನವನ್ನು ಕುರಿತ ಹಲವಾರು ಪ್ರಯೋಗಗಳನ್ನು ಸತತವಾಗಿ ನಡೆಸುತ್ತಿದೆ ಚೀನಾ. ವ್ಯತಿರಿಕ್ತ ಪರಿಣಾಮವಾಗುತ್ತಿರುವುದು ಮಾತ್ರ ನಮ್ಮ ಮೇಲೆ! ಅಷ್ಟೇ ಅಲ್ಲ. ನಮ್ಮ ಬ್ರಹ್ಮಪುತ್ರ (ಚೀನಾದಲ್ಲಿ ಸಾಂಗ್‍ ಪೋ ಎಂದು ಕರೆಯಲಾಗುತ್ತದೆ) ನದಿಗೆ ನೂರಾರು ಅಣೆಕಟ್ಟುಗಳನ್ನು ಕಟ್ಟುವ ಹುನ್ನಾರದಲ್ಲಿದೆ ಚೀನಾ. ಸದ್ಯಕ್ಕೆ 60 ಅಣೆಕಟ್ಟುಗಳಿಗೆ ಒಪ್ಪಿಗೆ ಸಿಕ್ಕಿದ್ದು ರೂಪು-ರೇಷೆಗಳು ಭರದಿಂದ ಸಿದ್ಧವಾಗುತ್ತಿವೆ. ಇದು ಎಷ್ಟು ಅಪಾಯಕಾರಿ ಗೊತ್ತೆ? ಭೂ-ಕುಸಿತ ಹೆಚ್ಚಿರುವ ಹಿಮಾಲಯದ ಈ ಪ್ರದೇಶಗಳಲ್ಲಿ ಅಪ್ಪಿ-ತಪ್ಪಿ ಒಮ್ಮೆ ಭೂಕಂಪನವಾಗಿ ಅಣೆಕಟ್ಟುಗಳು ಬಿರುಕು ಬಿಟ್ಟರೆ, ಭಾರತ, ಟಿಬೆಟ್ ಹಾಗೂ ಬಾಂಗ್ಲಾದೇಶಗಳ ಬಹಳಷ್ಟು ಭಾಗಗಳು ಕೊಚ್ಚಿ ಹೋಗಲಿವೆ. ಕಳೆದ ಜುಲೈನಲ್ಲಿ ಕೇದಾರದಲ್ಲಾದ ಪ್ರವಾಹದಿಂದ ಉಂಟಾಯಿತಲ್ಲ ಹಾನಿ, ಅದರ ಹತ್ತರಷ್ಟು, ಒಮ್ಮೆಗೇ ಆಗಲಿದೆ. ಭೂಕಂಪನದ ಹೆಸರಿನಲ್ಲಿ ತಾನೇ ಒಂದು ಅಣೆಕಟ್ಟಿಗೆ ಡೈನಮೈಟ್ ಇಡುವುದಕ್ಕೂ ಹೇಸುವುದಿಲ್ಲ ಚೀನಾ. ನಮಗೆ ಗೊತ್ತಿಲ್ಲವೇ ಅದರ ಯೋಗ್ಯತೆ? 

ಇಂಥ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡಿರುವ ನಾವು, ನಾಳೆ ಯುದ್ಧವಾದರೆ ಎದುರಿಸಲು ಎಷ್ಟರಮಟ್ಟಿಗೆ ತಯಾರಿದ್ದೇವೆ? ಕೇಳಿದರೆ ಗಾಬರಿಯಾಗುತ್ತದೆ. ನಮ್ಮ ಬಳಿಯಿರುವ ಅಸ್ತ್ರಗಳು ನಮ್ಮ ಯೋಧರ ದೇಶಪ್ರೇಮ, ಕೆಚ್ಚುಗಳು ಮಾತ್ರ. ಯಾವ ಅತ್ಯಾಧುನಿಕ ಉಪಕರಣಗಳೂ ಇಲ್ಲ. ಸಾಕಷ್ಟು ಮದ್ದು ಗುಂಡುಗಳಿಲ್ಲ. 50ರ ದಶಕದಲ್ಲಿ ಕೊಂಡ ಹೆಲಿಕಾಪ್ಟರ್‍ಗಳು, ಜಲಾಂತರ್ಗಾಮಿ ನೌಕೆಗಳು ಈಗ ಮಕಾಡೆ ಮಲಗುತ್ತಿವೆ. ಹಾಗಾಗಿಯೇ 2012ರ ಮಾರ್ಚ್‍ನಲ್ಲಿ, ಅಂದಿನ ಸೇನಾಮುಖ್ಯಸ್ಥರಾಗಿದ್ದ ಜನರಲ್ ವಿ.ಕೆ.ಸಿಂಗ್ ‘ಮೌನ’ಮೋಹನರಿಗೆ ಪತ್ರ ಬರೆದು ಸೇನೆಯ ದುಃಸ್ಥಿತಿಯ ಬಗ್ಗೆ ಅಲವತ್ತುಕೊಂಡಿದ್ದರು. ಆದ್ದರಿಂದಲೇ, ಪ್ರಧಾನಿಯಾದ ನಂತರ ಕಛೇರಿಯ ಹೊಸ್ತಿಲನ್ನು ಮೊತ್ತ ಮೊದಲ ಬಾರಿ ದಾಟಿದ ಮೋದಿಯವರು ಸೀದಾ ಹೋಗಿದ್ದು ರಕ್ಷಣಾ ಪಡೆಯ ಮುಖ್ಯಸ್ಥರನ್ನು ಭೇಟಿಯಾಗಲು. ಈ ಬಾರಿಯ ಬಜೆಟ್‍ನಲ್ಲಿ ರಕ್ಷಣಾ ಖಾತೆಗೆ ವಿದೇಶೀ ನೇರ ಬಂಡವಾಳ ಹೂಡಿಕೆಯನ್ನು ಶೇಕಡ 49ಕ್ಕೆ ಏರಿಸಿದ್ದೂ ಇದೇ ಕಾರಣಕ್ಕೆ.

ಪರಿಸ್ಥಿತಿ ಹೀಗಿರುವಾಗ, ಹುತಾತ್ಮರಾದ ಯೋಧರ ನೆನಪಿನಲ್ಲಿ ವರ್ಷಕ್ಕೊಮ್ಮೆ ಕಣ್ಣೀರಿಟ್ಟುಬಿಟ್ಟರೆ ನಮ್ಮ ಕರ್ತವ್ಯ ಮುಗಿದುಬಿಡುತ್ತದೆಯೇ? ಇಸ್ರೇಲ್‍ನಂಥ ಪುಟ್ಟ ದೇಶದಲ್ಲಿರುವವರು ಕೇವಲ 81ಲಕ್ಷ ಮಂದಿ. ದೇಶದ ರಕ್ಷಣೆಯ ಹೊಣೆಯನ್ನು ಬರೀ ಯೋಧರಿಗೆ ಮೀಸಲಾಗಿಡದ ಅವರು 18 ವರ್ಷದವರಾಗುತ್ತಿದ್ದಂತೆಯೇ ಸೇನೆಗೆ ಸೇರ್ಪಡೆಗೊಳ್ಳುತ್ತಾರೆ. ಹೆಣ್ಣು-ಗಂಡೆಂಬ ಭೇದವಿಲ್ಲದೆ ತಲಾ ಮೂರು ವರ್ಷಗಳನ್ನು ದೇಶಸೇವೆಗೆ ಮೀಸಲಿಡುತ್ತಾರೆ. ಸೇವೆಯಿಂದ ಹೊರಬಿದ್ದ ಮೇಲೂ ಗಂಡಸರು ಯುದ್ಧದ ಸಂದರ್ಭದಲ್ಲಿ ಸದಾ ಲಭ್ಯರಿರುತ್ತಾರೆ. ಇಸ್ರೇಲ್‍ನ ಮಾದರಿಯಲ್ಲೇ ನಾವೂ ಸೇನೆಯ ತರಬೇತಿ ಪಡೆಯಬಹುದಲ್ಲವೇ? ಎಲ್ಲ ಹೊಸ ವಿಚಾರಗಳಿಗೂ ಸರ್ಕಾರವೇ ನಾಂದಿ ಹಾಡಬೇಕಿಲ್ಲ. ನಿಯಮದ ರೂಪದಲ್ಲಿ ಕಡ್ಡಾಯಗೊಳಿಸಲೇಬೇಕಾದ ಅಗತ್ಯವೂ ಇಲ್ಲ. ಸ್ವಪ್ರೇರಣೆಯಿಂದ, ಕೆಲವು ಉದಾಹರಣೆಗಳನ್ನು ನಾವೂ ಹುಟ್ಟುಹಾಕಬಹುದು. ಹೆತ್ತವರ ಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸುತ್ತೇವೆ. ದೇಶದ ಋಣವನ್ನು?

No comments:

Post a Comment