Wednesday, 19 November 2014

ಬದುಕೆಂಬ ಉಡುಗೊರೆಯನ್ನು ಕೊಟ್ಟಿದ್ದೇವಾ ನಮ್ಮ ಮಕ್ಕಳಿಗೆ?

ಕಳೆದ ವಾರ ಇಬ್ಬರು ಹುಡುಗರು ಆತ್ಮಹತ್ಯೆ ಮಾಡಿಕೊಂಡರು. ಒಬ್ಬ ಸತ್ತದ್ದು, ತಂದೆ-ತಾಯಿ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ. ಮತ್ತೊಬ್ಬನಿಗಿದ್ದ ಕಾರಣ, ಓದಿಕೋ, ವೃಥಾ ಕಾಲಹರಣ ಮಾಡಬೇಡ ಎಂಬ ಮನೆಯವರ ಉಪದೇಶ! ತೀರ ಕ್ಷುಲ್ಲಕವೆನಿಸುವ ಇಂಥ ಸಬೂಬುಗಳನ್ನು ಮುಂದೊಡ್ಡಿ ಬದುಕನ್ನೇ ಕೊನಗಾಣಿಸಿಕೊಳ್ಳುವ ಮನಸ್ಥಿತಿ ಎಲ್ಲಿಂದ ಬರುತ್ತಿದೆ? 'ತೀರ್ಥ ತೆಗೆದುಕೊಂಡರೆ ಶೀತ, ಮಂಗಳಾರತಿ ತೆಗೆದುಕೊಂಡರೆ ಉಷ್ಣ' ಎನ್ನುವಷ್ಟು ಸೂಕ್ಷ್ಮವಾಗಿ ಏಕೆ ಬೆಳೆಯುತ್ತಿದ್ದಾರೆ ನಮ್ಮ ಮಕ್ಕಳು? ಅಥವಾ ಪಾಲಕರಾಗಿ ನಾವುಗಳೇ ಎಡವುತ್ತಿದ್ದೇವೆಯೇ? ಬದುಕು ಇಷ್ಟು ಕೇವಲವಲ್ಲ ಎಂಬ ಮಹತ್ತರವಾದ ವಿಷಯವನ್ನು ಹೇಳುವಲ್ಲಿ ಸೋಲುತ್ತಿದ್ದೇವೆಯೇ? ಮಕ್ಕಳಿಗೆ ಬದುಕು ಕಟ್ಟಿಕೊಡುವ ವಿಷಯ ಬಂದಾಗಲೆಲ್ಲ, ಇಟಲಿ ದೇಶದ ಚಲನಚಿತ್ರವೊಂದು ನೆನಪಿಗೆ ಬರುತ್ತದೆ. ಅದರ ಇಂಗ್ಲೀಷ್ ಅವತರಣಿಕೆಯೂ ಇದೆ. ಹೆಸರು 'ಲೈಫ್ ಈಸ್ ಬ್ಯೂಟಿಫುಲ್'. ಒಮ್ಮೆಯಾದರೂ ಖಂಡಿತ ನೋಡಿ ಅದನ್ನು.

ಚಿತ್ರದ ಕಥೆ ಎರಡನೆಯ ವಿಶ್ವಯುದ್ಧದ ಕಾಲಘಟ್ಟದಲ್ಲಿ ನಡೆದಿದ್ದು. ಇಟಲಿಯವನೇ ಆದ, ಯಹೂದಿ ಧರ್ಮಕ್ಕೆ ಸೇರಿದ ನಾಯಕ ಗ್ವೀಡೋ ಬಹಳ ಹಾಸ್ಯಪ್ರವೃತ್ತಿಯವನು. ಬದುಕಿನ ಎಲ್ಲ ಕಹಿಗಳಿಗೂ ನಗುವೆಂಬ ಸಿಹಿಯನ್ನು ಸೇರಿಸಿಯೇ ಸ್ವೀಕರಿಸುವುದು ಅವನ ಜಾಯಮಾನ. ಶ್ರೀಮಂತರ ಮನೆಯ ಹುಡುಗಿ 'ಡೋರಾ'ಳನ್ನು ಆಕಸ್ಮಿಕವಾಗಿ ಭೇಟಿಯಾಗಿ, ಪ್ರೀತಿಸಿ, ಅವಳ ಮನವೊಲಿಸಿ ಮದುವೆಯಾಗುತ್ತಾನೆ. ಅವರಿಗೆ ಜೋಶುವಾ ಎಂಬ ಗಂಡು ಮಗು ಹುಟ್ಟುತ್ತದೆ.

ಇಲ್ಲಿಯವರೆಗೂ ಎಲ್ಲ ಮಾಮೂಲಿಯೇ ಎನಿಸುವ ಚಿತ್ರ ಮುಂದೆ ಪಡೆಯುವ ತಿರುವು ವಿಭಿನ್ನ. ಅದು 1945ರ ಆಸುಪಾಸು. ಹಿಟ್ಲರನ ಕ್ರೌರ್ಯದ ಪರಮಾವಧಿಯ ಕಾಲ. ಯಹೂದಿಗಳು ಪಾತಾಳದಲ್ಲಿದ್ದರೂ ಬಿಡದೆ ಹೊರಗೆಳೆದು ಸೆರೆ ಶಿಬಿರಗಳಲ್ಲಿ ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಿದ್ದ ಹಿಟ್ಲರ್. ಆಗ ಮಗು ‘ಜೋಶುವಾ’ನಿಗೆ ಸುಮಾರು ನಾಲ್ಕೈದು ವರ್ಷಗಳಾಗಿದ್ದಿರಬಹುದು. ಅವನ ಹುಟ್ಟುಹಬ್ಬದ ಆಚರಣೆಯಲ್ಲಿ ತಾನೂ ಶಾಮೀಲಾಗಬೇಕೆಂದು ಬಯಸುವ ತನ್ನ ತಾಯಿಯನ್ನು ಕರೆದುಕೊಂಡು ಬರಲು ಹೋಗುತ್ತಾಳೆ ಡೋರಾ. ಅಷ್ಟೇ, ಇಲ್ಲಿ ಹಿಟ್ಲರನ ನಾಜಿ ಸೈನಿಕರು ಮನೆಗೆ ನುಗ್ಗಿ ಗ್ವೀಡೋ ಹಾಗೂ ಜೋಶುವಾರನ್ನು ಎಳೆದುಕೊಂಡು ಹೋಗುತ್ತಾರೆ. ಉಳಿದ ಯಹೂದಿಗಳೊಂದಿಗೆ ಅವರನ್ನೂ ಲಾರಿಯೊಂದಕ್ಕೆ ತುಂಬಿಸಿದಾಗ ಕಸಿವಿಸಿಗೊಳ್ಳುವ ಮಗು, ಎಲ್ಲಿಗೆ ಹೋಗುತ್ತಿದ್ದೇವೆಂದು ಮುಗ್ಧವಾಗಿ ಕೇಳುತ್ತದೆ. 'ಎಲ್ಲಿಯಾದರೂ ಪ್ರವಾಸ ಹೋಗಬೇಕು ಎನ್ನುತ್ತಿದ್ದೆಯಲ್ಲ ಕಂದಾ, ಈಗ ಕರೆದುಕೊಂಡು ಹೋಗುತ್ತಿದ್ದೇನೆ ನೋಡು’ ಎನ್ನುತ್ತಾನೆ ಅಪ್ಪ. ಲಾರಿಯಿಂದ ಇಳಿದು, ಸೆರೆ ಶಿಬಿರಕ್ಕೆ ಕೊಂಡೊಯ್ಯುವ ರೈಲು ಹತ್ತಲು ಸಾಲಾಗಿ ನಿಲ್ಲುತ್ತಾರೆ ಎಲ್ಲರೂ. ಉಳಿದವರೆಲ್ಲ ಜೋಲು ಮೋರೆ ಹಾಕಿಕೊಂಡು ನಡೆದರೆ ಗ್ವೀಡೋನದ್ದು ಮಾತ್ರ ಪುಟಿಯುವ ಉತ್ಸಾಹ! ಮಾಸದ ಮಂದಹಾಸ! ತನ್ನ ಆತಂಕ, ಮುಂದೆ ತಮಗೆ ಕಾದಿರುವ ವಿಪತ್ತು ಮಗುವಿಗೆ ತಿಳಿಯಬಾರದು ಎಂಬ ಒಂದೇ ಕಾರಣಕ್ಕೆ ಸಂತಸದ ಮುಖವಾಡ ಧರಿಸುತ್ತಾನೆ. ಆ ಕ್ಷಣದ ತನ್ನ ನಿರ್ಧಾರದಿಂದ ಮಗನ ಬದುಕಿನ ದಿಕ್ಕನ್ನೇ ಬದಲಾಯಿಸುತ್ತಾನೆ.

 ಅಂಥ ಅಸಹಾಯಕ ಪರಿಸ್ಥಿತಿಯಲ್ಲೂ ಗ್ವೀಡೋ ತೋರುವ ಜಾಣ್ಮೆ ಎಂಥದು ಗೊತ್ತೇ? ನಾವೆಲ್ಲರೂ ಈಗ ಹೋಗುತ್ತಿರುವುದು ಕಣ್ಣಾಮುಚ್ಚಾಲೆ ಆಟ ಆಡಲು ಎಂದು ಮಗುವಿಗೆ ಹೇಳುತ್ತಾನೆ.  ಅನುಮಾನಿಸುತ್ತಲೇ ರೈಲಿನಲ್ಲಿ ಸಾಗುತ್ತದೆ ಮಗು. ಸೆರೆ ಶಿಬಿರ ತಲುಪುತ್ತಿದ್ದಂತೆಯೇ ಒಂದು ಘಟನೆ ನಡೆಯುತ್ತದೆ. ಇಟಲಿಯ ನೂರಾರು ಜನರಿದ್ದ ಇವರ ಕೋಣೆಗೆ ಬರುವ ನಾಜಿ ಅಧಿಕಾರಿಗಳು, 'ಇಲ್ಲಿ ಯಾರಿಗೆ ಜರ್ಮನ್ ಭಾಷೆ ಬರುತ್ತದೋ ಅವರು ಮುಂದೆ ಬನ್ನಿ' ಎನ್ನುತ್ತಾರೆ. ಜರ್ಮನ್ ಭಾಷೆಯ ಗಂಧ ಗಾಳಿಯೂ ಇರದ ಗ್ವೀಡೋ ಮುಲಾಜಿಲ್ಲದೆ ಮುಂದೆ ಹೋಗಿ ನಿಂತುಬಿಡುತ್ತಾನೆ. ಮಗುವಿಗೆ ಹೇಗಾದರೂ ಮಾಡಿ ನಂಬಿಕೆ ಬರಿಸಲೇಬೇಕಲ್ಲ ಇದು ಆಟ ಎಂದು? ಸರಿ, ನಾಜಿ ಸೈನಿಕರು ಮುಖ ಸಿಂಡರಿಸಿಕೊಂಡು ದೊಡ್ಡ ದನಿಯಲ್ಲಿ ಅಬ್ಬರಿಸುತ್ತಾ ಸೂಚನೆಗಳನ್ನು ಕೊಡುತ್ತಿದ್ದರೆ ಇವನು ಅನುವಾದ ಮಾಡುವ ನೆಪದಲ್ಲಿ ಹೇಳುತ್ತಿದ್ದುದು ತಾನು ಕಟ್ಟಿದ್ದ ಕಣ್ಣಾಮುಚ್ಚಾಲೆ ಆಟದ ನಿಯಮಗಳನ್ನು! 'ಇಲ್ಲಿರುವ ಮಕ್ಕಳಿಗೆಲ್ಲಾ ಆಟದ ಸ್ಪರ್ಧೆ ನಡೆಯಲಿದೆ. ಯಾವ ಮಗುವೂ ನಾಜಿ ಕಾವಲುಗಾರರ ಕಣ್ಣಿಗೆ ಬೀಳಬಾರದು. ಹಾಗೆ ಅವಿತು ಕೂರುವ ಮಗುವಿಗೆ ದಿನಕ್ಕಿಷ್ಟು ಎಂದು ಅಂಕಗಳು ಸಿಗುತ್ತವೆ. ಅತ್ತರೆ, ಹಸಿವು ಎಂದರೆ ಅಥವಾ ಅಮ್ಮನನ್ನು ನೋಡಬೇಕು ಎಂದರೆ ಅಂಕಗಳನ್ನು ಕಳೆಯಲಾಗುವುದು. ಯಾವ ಮಗು ಸಾವಿರ ಅಂಕಗಳನ್ನು ಮೊದಲು ಪಡೆಯುತ್ತದೋ ಅದಕ್ಕೆ ಒಂದು ಯುದ್ಧದ ಟ್ಯಾಂಕರ್ ಬಹುಮಾನವಾಗಿ ದೊರೆಯಲಿದೆ' ಎಂದು ಗ್ವೀಡೋ ನಾಜಿಗಳಿಗಿಂತ ಜೋರಾಗಿ ಘರ್ಜಿಸುತ್ತಿದ್ದರೆ ಪುಟ್ಟ ಜೋಶುವಾ ಕಣ್ಣುಗಳನ್ನು ಅಗಲಿಸಿಕೊಂಡು ಕೇಳಿಸಿಕೊಳ್ಳುತ್ತಾನೆ.

ಮುಂದೆ ನಡೆಯುವುದೆಲ್ಲಾ ನಿಯಮ ಪಾಲನೆ. ಅಪ್ಪ ಗಾಣದೆತ್ತಿನಂತೆ ದುಡಿಯಲು ಹೋಗುವುದು. ತನ್ನ ಪಾಲಿನ ಬ್ರೆಡ್ಡು ಬನ್ನುಗಳನ್ನು ತಂದು ಮಗನಿಗೆ ಕೊಟ್ಟು ಅವನಿಗೆ ಹಸಿವು ಕಾಡದಂತೆ ನೋಡಿಕೊಳ್ಳುವುದು. ಮಗು ಕೋಣೆಯಲ್ಲಿ ಅವಿತು ಕೂರುವುದು. 'ಅಪ್ಪಾ ಇವತ್ತಿಗೆ ನಮ್ಮ ಅಂಕಗಳು ಎಷ್ಟಾದವು' ಎಂದು ಮಗು ಕೇಳಿದರೆ, 'ಇನ್ನೂರ ಎಪ್ಪತ್ತೈದರ ಹತ್ತಿರ ಹತ್ತಿರ. ಇನ್ನೇನು ಕೆಲ ದಿನಗಳು ಅಷ್ಟೇ. ನಾವೇ ಗೆದ್ದುಬಿಡುತ್ತೇವೆ ನೋಡುತ್ತಿರು’ ಎಂದು ಹುರುಪು ತುಂಬುವುದು. ಬೇರೆ ಮಕ್ಕಳೊಡನೆ ಮಾತನಾಡಿ ಬಂದ ಮಗು ಬೇಜಾರಿನಿಂದ 'ಇಲ್ಲಿ ಯಾವ ಆಟವನ್ನೂ ಆಡಿಸುತ್ತಿಲ್ಲವಂತೆ. ಅವರಿಗೆಲ್ಲ ಏನೂ ಗೊತ್ತೇ ಇಲ್ಲ' ಎಂದರೆ, 'ಇನ್ನೆಲ್ಲಿ ಅವರನ್ನು ಹಿಂದೆ ಹಾಕಿ ನೀನು ಗೆದ್ದುಬಿಡುತ್ತೀಯೋ ಎಂದು ಹಾಗೆ ಹೇಳುತ್ತಾರೆ ಅಷ್ಟೇ, ಅವರ ಮಾತಿಗೆ ಮರುಳಾಗಬೇಡ’ ಎನ್ನುವುದು.

ಹಿಟ್ಲರನ ಸೆರೆ ಶಿಬಿರದ ಒಂದು ಕ್ರೌರ್ಯದ ಬಗ್ಗೆ ನಿಮಗೆ ಹೇಳಲೇಬೇಕು. ದುಡಿಯಲು ಶಕ್ತರಾಗಿದ್ದ ಗಂಡಸರು ಹಾಗೂ ಹೆಂಗಸರನ್ನು ಮಾತ್ರ ಜೀವಸಹಿತ ಬಿಡುತ್ತಿದ್ದ ಹಿಟ್ಲರ್, ಮಕ್ಕಳು ಹಾಗೂ ಮುದುಕರನ್ನು ಉಳಿಸುತ್ತಿರಲಿಲ್ಲ. ಒಂದು ಕೋಣೆಯೊಳಗೆ ಅವರನ್ನೆಲ್ಲ ಕೂಡಿ ಹಾಕಿ ವಿಷಾನಿಲವನ್ನು ಹಾಯಿಸಿ ಸಾಯಿಸಿಬಿಡುತ್ತಿದ್ದ. ಹೀಗೆ ಉಳಿದೆಲ್ಲಾ ಮಕ್ಕಳು ಸತ್ತರೂ ಜೋಶುವಾ ಮಾತ್ರ ಅಪ್ಪ ಹೇಳಿಕೊಟ್ಟ ಆಟವನ್ನು ಆಡುತ್ತಲೇ ಸಾಗುತ್ತಾನೆ. ಅವನೂ ಮಗುವಲ್ಲವೇ? ನಿಯಮಗಳನ್ನು ಎಷ್ಟೆಂದು ಪಾಲಿಸಿಯಾನು? ಕೊನೆಗೊಂದು ದಿನ ಮನೆಗೆ ಹೋಗೋಣವೆಂದು ರಚ್ಚೆ ಹಿಡಿದಾಗ ತನ್ನ ಗಂಟನ್ನು ಹೊತ್ತುಕೊಂಡು ಹೊರನಡೆದೇ ಬಿಡುತ್ತಾನೆ ಗ್ವೀಡೋ. 'ಮನೆಗೆ ಹೋಗಬೇಕು ತಾನೆ? ನಡಿ. ಇಲ್ಲಿ ಯಾರೂ ನಮ್ಮನ್ನು ಬಲವಂತವಾಗಿ ಕೂಡಿ ಹಾಕಿಲ್ಲ. ಈಗಾಗಲೇ ಸಾವಿರ ಅಂಕಗಳ ಹತ್ತಿರ ಬಂದಿದ್ದೀಯ. ನೀನೇ ಮೊದಲ ಸ್ಥಾನದಲ್ಲಿದ್ದೀಯ. ಆದರೂ ಪರವಾಗಿಲ್ಲ. ಬೇರೆ ಯಾರಾದರೂ ಗೆಲ್ಲಲಿ, ಟ್ಯಾಂಕರ್ ತೆಗೆದುಕೊಂಡು ಹೋಗಲಿ. ನಮಗೇನಂತೆ, ನಡಿ ಹೋಗೋಣ' ಎನ್ನುತ್ತಾನೆ. ಬೆರಗಾದ ಮಗು ಸುಮ್ಮನಾಗುತ್ತದೆ.

ಕಡೆಗೊಂದು ರಾತ್ರಿ ಶಿಬಿರದ ಮೇಲೆ ದಾಳಿ ನಡೆಸುತ್ತದೆ ಅಮೆರಿಕದ ಸೇನೆ. ಒಳಗೆಲ್ಲ ಅಲ್ಲೋಲ ಕಲ್ಲೋಲ ಶುರುವಾಗುತ್ತಿದ್ದಂತೆಯೇ ಅಂಚೆ ಡಬ್ಬಿಯಾಕಾರದ ದೊಡ್ಡ ಪೆಟ್ಟಿಗೆಯಲ್ಲಿ ಮಗನನ್ನು ಕೂರಿಸುವ ಗ್ವೀಡೋ, ಗದ್ದಲ ಮುಗಿಯುವ ತನಕ ಯಾವುದೇ ಕಾರಣಕ್ಕೂ ಆಚೆ ಬರಬೇಡ ಎಂದು ತಾಕೀತು ಮಾಡುತ್ತಾನೆ. ಅದೇ ಶಿಬಿರದಲ್ಲಿದ್ದ ಡೋರಾಳನ್ನೊಮ್ಮೆ ನೋಡುವ ತವಕದಲ್ಲಿ ನಾಜಿ ಸೈನಿಕನ ಕೈಗೆ ಸಿಕ್ಕಿಬೀಳುತ್ತಾನೆ. ನಿಯಮ ಮುರಿದ ಅವನನ್ನು ಗುಂಡು ಹೊಡೆದು ಸಾಯಿಸಲು ಕರೆದೊಯ್ಯುತ್ತಿದ್ದಾಗ ಮಗು ಅವಿತಿದ್ದ ಪೆಟ್ಟಿಗೆಯ ಮುಂದಿನಿಂದ ಹಾದು ಹೋಗಬೇಕಾಗುತ್ತದೆ. ಕಿಂಡಿಯಿಂದ ಮಗ ತನ್ನನ್ನು ನೋಡುತ್ತಿರುತ್ತಾನೆ ಎಂದರಿತ ಅವನು ನಗುನಗುತ್ತಾ ಪಥಸಂಚಲನ ಮಾಡಿಕೊಂಡು ಹೋಗುತ್ತಾನಲ್ಲ. ಆ ದೃಶ್ಯವನ್ನು ನೋಡುವಾಗ ನಿಮ್ಮ ಹೃದಯ ಕಲಕದಿದ್ದರೆ ಕೇಳಿ! ನಂತರ ಕೆಲ ಕ್ಷಣಗಳಲ್ಲೇ ಗುಂಡೇಟಿನಿಂದ ಸತ್ತುಹೋಗುತ್ತಾನೆ. ಮರುದಿನ ಬೆಳಿಗ್ಗೆ ಎಲ್ಲ ಸದ್ದೂ ಅಡಗಿದ ಮೇಲೆ ಹೊರಬರುವ ‘ಜೋಶುವಾ’ನ ಮುಂದೆ ದೊಡ್ಡದೊಂದು ಟ್ಯಾಂಕರ್ ಬಂದು ನಿಲ್ಲುತ್ತದೆ! ತನ್ನ ಬಹುಮಾನವನ್ನು ನೋಡಿ ಹಿಗ್ಗುತ್ತಾನೆ ಅವನು. ಅಸಲಿಗೆ, ಅಲ್ಲಿ ಕಾಕತಾಳೀಯವಾಗಿ ಪ್ರತ್ಯಕ್ಷವಾಗುವ ಟ್ಯಾಂಕರ್ ಅಮೆರಿಕದ ಸೇನೆಯದ್ದಾಗಿರುತ್ತದೆ! ಗೆದ್ದ ಖುಷಿಯಲ್ಲಿ ಮಗು ಅಮ್ಮನನ್ನು ಸೇರುವಲ್ಲಿಗೆ ಚಿತ್ರ ಮುಗಿಯುತ್ತದೆ. ವಿಶೇಷವೆಂದರೆ, ಇಡೀ ಚಿತ್ರವನ್ನು ಜೋಶುವಾ ದೊಡ್ಡವನಾದ ಮೇಲೆ ಹೇಳುತ್ತಿರುವ ಕಥೆಯಂತೆ ಚಿತ್ರಿಸಲಾಗಿದೆ. ಕೊನೆಯಲ್ಲಿ ಭಾವುಕನಾಗಿ, ಈ ಬದುಕು ನನ್ನ ತಂದೆ ನನಗೆ ಕೊಟ್ಟ ಉಡುಗೊರೆ ಎನ್ನುತ್ತಾನೆ ಅವನು. ಮತ್ತೊಂದು ವಿಶೇಷವೆಂದರೆ, ಈ ಚಿತ್ರವನ್ನು ನಿರ್ದೇಶಿಸಿ, ಗ್ವೀಡೋನ ಪಾತ್ರದಲ್ಲಿ ಅಭಿನಯಿಸಿದ ರಾಬರ್ಟೊ ಬೆನಿಗ್ನಿಯವರ ತಂದೆ ಮೂರು ವರ್ಷಗಳ ಕಾಲ ಹಿಟ್ಲರನ ಸೆರೆ ಶಿಬಿರದಲ್ಲಿದ್ದರು! ಅವರ ಅನುಭವವೇ ಮಗನಿಗೆ ಈ ಚಿತ್ರವನ್ನು ಮಾಡಲು ಸ್ಫೂರ್ತಿಯಾಗಿದ್ದಂತೆ!

ಈಗ ಹೇಳಿ, ಗ್ವೀಡೋನಂತೆ, ಈ ಬದುಕೇ ಒಂದು ಸುಂದರವಾದ ಉಡುಗೊರೆ ಎಂದು ನಮ್ಮಲ್ಲೆಷ್ಟು ಮಂದಿ ಮನವರಿಕೆ ಮಾಡಿ ಕೊಟ್ಟಿದ್ದೇವೆ ನಮ್ಮ ಮಕ್ಕಳಿಗೆ? ಹಣದಿಂದ ಹುಟ್ಟುವ ಸರಕು ಮಾತ್ರವಲ್ಲ, ಅನುಭವದಿಂದ ದಕ್ಕುವುದೂ ಉಡುಗೊರೆಯೇ ಎಂಬುದನ್ನು ಹೇಳಿದ್ದೇವೆಯೇ? ನಮ್ಮ ಮಕ್ಕಳಿಗೆ ಏನು ಮಾಡಿದರೂ, ಎಷ್ಟು ಮಾಡಿದರೂ ನಮಗೆ ತೃಪ್ತಿಯೇ ಇರುವುದಿಲ್ಲ. ಎಲ್ಲ ತಂದೆ-ತಾಯಿಯರದ್ದೂ ಒಂದೇ ಘೋಷವಾಕ್ಯ. 'ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡುವುದು ಬೇಡ'. ಒಪ್ಪೋಣ. ಕಷ್ಟ ತೋರಿಸುವ ಸಲುವಾಗಿ ಅವರನ್ನು ಜೀತಕ್ಕೆ ಸೇರಿಸುವುದೇನೂ ಬೇಡ, ಆದರೆ ಬದುಕಿನಲ್ಲಿ ಬರಬಹುದಾದ ಕಾರ್ಪಣ್ಯಗಳಿಗೆ ಅವರನ್ನು ತಯಾರು ಮಾಡದಿದ್ದರೆ ಹೇಗೆ? ಅವರು ಕೇಳಿದ್ದನ್ನೆಲ್ಲ ಆ ಕ್ಷಣವೇ ತಂದು ಸುರುವಿಬಿಡುವ ಹುಮ್ಮಸ್ಸಿನಲ್ಲಿ ಅವರ ನಿರೀಕ್ಷೆಯನ್ನು ಯಾವ ಮಟ್ಟಕ್ಕೆ ಬೆಳೆಸುತ್ತೇವೆಂದರೆ, ಅಪ್ಪಿತಪ್ಪಿ ‘ಆಗುವುದಿಲ್ಲ’ ಎಂದರೆ ಅವರು ಸ್ವೀಕರಿಸಲು ಸಿದ್ಧರಿರುವುದಿಲ್ಲ! ನಮ್ಮ ಸಣ್ಣ ಸಣ್ಣ 'ಇಲ್ಲ', 'ಈಗ ಆಗುವುದಿಲ್ಲ’ ಎಂಬಂಥ ಉತ್ತರಗಳು ಅವರಿಗೆ ರೂಢಿಯಾಗದಿದ್ದರೆ ಮುಂದೆ ಬದುಕಿನ ಹಲವು ಮಜಲುಗಳಲ್ಲಿ ಬರಬಹುದಾದ ದೊಡ್ಡ 'ಇಲ್ಲ'ಗಳನ್ನು ಹೇಗೆ ಎದುರಿಸಿಯಾರು? ಹೀಗೆ ಚಿಕ್ಕ-ಪುಟ್ಟದ್ದಕ್ಕೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವಂತಿದ್ದರೆ ನಾವು ಸತ್ತು ಯಾವುದೋ ಕಾಲವಾಗಿರುತ್ತಿತ್ತು ಅಲ್ಲವೇ? ನಮ್ಮಲ್ಲಿ ಬಹುತೇಕರು ಸರಿಯಾದ ಒಂದು ಜೊತೆ ಚಪ್ಪಲಿಯನ್ನು ಕೊಂಡದ್ದು ಯಾವಾಗ? ಒಳ್ಳೆಯ ಸೈಕಲ್ ಅಥವಾ ದ್ವಿಚಕ್ರವಾಹನದ ಮುಖ ನೋಡಿದ್ದು ಯಾವಾಗ? ಹಾಗಾದರೆ ನಮ್ಮಲ್ಲಿ ಆ ಗಟ್ಟಿತನ ಬಂದದ್ದು ಹೇಗೆ? ಯೋಚಿಸಿ ನೋಡಿ. ನಾವು ಮಕ್ಕಳಿಗೆ ಪ್ರೀತಿಯ ಸಿಹಿಯನ್ನೇ ಉಣಿಸಿ ಹೆಚ್ಚಿಸುತ್ತಿರುವುದು ಅವರ ದೇಹದ ತೂಕವನ್ನು ಮಾತ್ರ. ನಮ್ಮ ನೋವುಗಳ ಕಹಿಯನ್ನೇ ಉಣಿಸದಿದ್ದರೆ ಅವರ ಮನಸ್ಸಿನ ತೂಕ ಹೆಚ್ಚುವುದು ಹೇಗೆ?


ಮಕ್ಕಳ ಜೀವನ ಪರ್ಯಂತ ಜೊತೆಗಿದ್ದು ಅವರನ್ನು ಕಾಪಾಡಲಾರೆವು ನಾವು. ಹಾಗಿರುವಾಗ,  ಬದುಕನ್ನು ಎದುರಿಸುವ ರೀತಿಯನ್ನು ಕಲಿಸುವುದು ಅವಶ್ಯವಲ್ಲವೇ? 'ಎಂಥ ಸಂದರ್ಭವೇ ಬರಲಿ, ನಾನು ಜಯಿಸಬಲ್ಲೆ’ ಎಂಬ ಸ್ಥೈರ್ಯ, ಮನೋಬಲಗಳನ್ನು ತುಂಬುವುದಕ್ಕಿಂತ ದೊಡ್ಡ ಉಡುಗೊರೆ ಯಾವುದಿರಲು ಸಾಧ್ಯ? ಗ್ವೀಡೋ ಮಾಡಿದ್ದೂ ಅದನ್ನೇ! 

4 comments:

 1. This comment has been removed by the author.

  ReplyDelete
 2. ಮನಮುಟ್ಟುವ ಬರವಣಿಗೆ ನಿಮ್ಮದು ! ಹೌದು, ಮಕ್ಕಳಿಗೆ ಬೇಕುಬೇಕಾದ್ದನ್ನೆಲ್ಲ ಕೊಡಿಸಿ ನಾವು ಮಕ್ಕಳಿಗೆ ಒಳ್ಳೆಯದನ್ನು ಮಾಡುತ್ತಿದ್ದೇವೆ ಎಂದುಕೊಳ್ಳುವ ಹೆತ್ತವರು ಮಕ್ಕಳಿಗೆ ತಿಳಿವಳಿಕೆ ಮೂಡಿಸುವುದನ್ನು ಮರೆಯುತ್ತಿದ್ದಾರೆ. ಆ ಸಿನಿಮಾ ನೋಡುವ ಮೊದಲೇ ನನ್ನನ್ನು ಕಾಡುತ್ತಿದೆ. ಅವಕಾಶವಾದಾಗ ಖಂಡಿತಾ ನೋಡಬೇಕೆನಿಸುತ್ತಿದೆ.

  ನಿಮ್ಮ ಬ್ಲಾಗ್ ಬಗ್ಗೆ ತಿಳಿದಂದಿನಿಂದ ಪ್ರತಿ ಬರಹವನ್ನೂ ತಪ್ಪದೆ ಇಷ್ಟಪಟ್ಟು ಓದುತ್ತಿದ್ದೇನೆ ಹಾಗೂ ನನ್ನ ಆಪ್ತರಿಗೆ ನಿಮ್ಮ ಬ್ಲಾಗ್ ಬಗ್ಗೆ ತಿಳಿಸುತ್ತಿದ್ದೇನೆ. ನಿಮ್ಮರಿವಿಗೆ ಬರುವ, ನಮ್ಮಂಥ ಸಾಮನ್ಯರರಿವಿಗೆ ಬರದ ಎಷ್ಟೋ ವಿಚಾರಗಳು ನಿಮ್ಮ ಮೂಲಕ ನಮಗೆ ತಲುಪುತ್ತಿವೆ. ಕೃತಜ್ಞತೆಗಳು!

  ReplyDelete
  Replies
  1. ಧನ್ಯವಾದ ಸಿಂಧೂರವರೆ

   Delete
 3. This comment has been removed by the author.

  ReplyDelete